Dailyhunt Logo
  • Light mode
    Follow system
    Dark mode
    • Play Story
    • App Story
ಐದು ತಿಂಗಳಾದರೂ ಅಂತ್ಯ ಕಾಣದ ಯುದ್ಧ: ಟ್ರಂಪ್‌ಗೆ ಇರಾನ್ ಕಲಿಸಿದ ಪಾಠ

ಐದು ತಿಂಗಳಾದರೂ ಅಂತ್ಯ ಕಾಣದ ಯುದ್ಧ: ಟ್ರಂಪ್‌ಗೆ ಇರಾನ್ ಕಲಿಸಿದ ಪಾಠ

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಐದು ತಿಂಗಳಾದರೂ ಅಂತ್ಯ ಕಾಣದ ಯುದ್ಧ: ಟ್ರಂಪ್‌ಗೆ ಇರಾನ್ ಕಲಿಸಿದ ಪಾಠ

ಒಂದು ಸಾಲಿನಲ್ಲಿಇರಾನ್ ವಿರುದ್ಧದ ಮಿಲಿಟರಿ ದಾಳಿಯಲ್ಲಿ ಅಮೆರಿಕದ ಗುರಿಗಳು ವಿಫಲವಾಗಿದ್ದು, ಟ್ರಂಪ್ ಆಡಳಿತವು ಕ್ಲಿಷ್ಟಕರ ರಾಜಕೀಯ ಮತ್ತು ರಾಜತಾಂತ್ರಿಕ ಸವಾಲುಗಳನ್ನು ಎದುರಿಸುತ್ತಿದೆ.

ಪ್ರಮುಖ ಪ್ರಶ್ನೋತ್ತರ


ಇರಾನ್ ವಿರುದ್ಧದ ಯುದ್ಧದ ಉದ್ದೇಶಗಳೇನು?

ಇರಾನ್‌ನ ಅಣು ಕಾರ್ಯಕ್ರಮವನ್ನು ಸ್ಥಗಿತಗೊಳಿಸುವುದು ಮತ್ತು ಅಲ್ಲಿನ ಆಡಳಿತ ಬದಲಾವಣೆಯನ್ನು ತರುವುದು ಈ ಮಿಲಿಟರಿ ಕಾರ್ಯಾಚರಣೆಯ ಪ್ರಮುಖ ಗುರಿಯಾಗಿತ್ತು.


ಯುದ್ಧ ಆರಂಭವಾಗಿ ಎಷ್ಟು ಸಮಯ ಕಳೆದಿದೆ?

ಫೆಬ್ರುವರಿ 28ರಂದು ಆರಂಭವಾದ ಈ ಯುದ್ಧವು ಐದು ತಿಂಗಳು ಕಳೆದರೂ ಅಮೆರಿಕ ಅಂದುಕೊಂಡ ಗುರಿಗಳನ್ನು ಸಾಧಿಸಲು ವಿಫಲವಾಗಿದೆ.


ಯುದ್ಧದಿಂದ ಜಾಗತಿಕ ಆರ್ಥಿಕತೆಯ ಮೇಲೆ ಆದ ಪರಿಣಾಮವೇನು?

ಯುದ್ಧದಿಂದಾಗಿ ತೈಲ ಬೆಲೆ ಏರಿಕೆ, ಷೇರು ಮಾರುಕಟ್ಟೆ ಕುಸಿತ ಮತ್ತು ಹೊರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರಕ್ಕೆ ಅಡಚಣೆಗಳಂತಹ ಗಂಭೀರ ಸಮಸ್ಯೆಗಳು ಉದ್ಭವಿಸಿವೆ.


ಯುದ್ಧದ ಬಗ್ಗೆ ಅಮೆರಿಕದ ಜನರಿಗಿರುವ ಅಭಿಪ್ರಾಯವೇನು?

ವಾಷಿಂಗ್ಟನ್ ಪೋಸ್ಟ್ ಸಮೀಕ್ಷೆಯ ಪ್ರಕಾರ, ಟ್ರಂಪ್ ಅವರ ಇರಾನ್ ನೀತಿಯನ್ನು ಕೇವಲ 29% ಅಮೆರಿಕನ್ನರು ಮಾತ್ರ ಬೆಂಬಲಿಸುತ್ತಿದ್ದಾರೆ.


ಯುದ್ಧದಿಂದ ಹೊರಬರಲು ಟ್ರಂಪ್ ಮುಂದಿರುವ ಆಯ್ಕೆಗಳೇನು?

ದಾಳಿಯನ್ನು ತೀವ್ರಗೊಳಿಸುವುದು, ಆರ್ಥಿಕ ನಿರ್ಬಂಧಗಳನ್ನು ಕಠಿಣಗೊಳಿಸುವುದು ಅಥವಾ ವಿಜಯ ಘೋಷಿಸಿ ಹಿಂದೆ ಸರಿಯುವುದು ಇವು ಟ್ರಂಪ್ ಅವರ ಮುಂದಿರುವ ಮೂರು ಸವಾಲಿನ ದಾರಿಗಳಾಗಿವೆ.

ಪ್ರಮುಖ ಅಂಕಿಅಂಶಗಳು

ಫೆಬ್ರುವರಿ 28ಯುದ್ಧ ಆರಂಭವಾದ ದಿನಾಂಕ29%ಟ್ರಂಪ್ ಇರಾನ್ ನೀತಿಯನ್ನು ಬೆಂಬಲಿಸುವ ಅಮೆರಿಕನ್ನರ ಪ್ರಮಾಣ14ಕದನ ವಿರಾಮ ಒಪ್ಪಂದದಲ್ಲಿರುವ ಅಂಶಗಳು

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

'ಯಾರೂ ಊಹಿಸಿದ್ದನ್ನು ಮಾಡುವುದೇ ನನ್ನ ರಾಜಕೀಯದ ದೊಡ್ಡ ಆಯುಧ' ಈ ಮಾತನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವು ಬಾರಿ ಹೇಳಿಕೊಂಡಿದ್ದಾರೆ. ಮಿತ್ರ ರಾಷ್ಟ್ರಗಳಾಗಲಿ, ಎದುರಾಳಿಗಳಾಗಲಿ-ತಾವು ಮುಂದೇನು ಮಾಡುತ್ತಾರೆ ಎಂಬುದು ಯಾರಿಗೂ ಗೊತ್ತಿರಬಾರದು ಎಂಬುದು ಅವರ ಶೈಲಿ. ಅವರ ಮಾತಿನಲ್ಲೇ ಹೇಳುವುದಾದರೆ, 'ನನ್ನ ಮಿತಿಯನ್ನು ನಿರ್ಧರಿಸುವುದು ನಾನೇ'.

ಇರಾನ್‌ನ ಅಣು ಕೇಂದ್ರಗಳ ಮೇಲೆ ನಡೆಸಿದ ದಾಳಿ ಹಾಗೂ ವೆನಿಜುವೆಲಾದ ಅಧ್ಯಕ್ಷ ನಿಕೊಲಾಸ್ ಮಡುರೊ ಅವರನ್ನು ಬಂಧಿಸಿದ ಪ್ರಕರಣಗಳನ್ನು ಉಲ್ಲೇಖಿಸಿ, ಅಮೆರಿಕ ಹಿಂದಿನ ಅಧ್ಯಕ್ಷರು ಕೈಗೊಳ್ಳದ ಕ್ರಮಗಳನ್ನು ತಾವು ತೆಗೆದುಕೊಂಡಿದ್ದೇವೆ ಎಂದು ಟ್ರಂಪ್ ಹೆಮ್ಮೆಯಿಂದ ಹೇಳಿದ್ದರು. ಆದರೆ, ಇತ್ತೀಚಿನ ಬೆಳವಣಿಗೆಗಳು ಬೇರೆ ಚಿತ್ರವನ್ನು ತೋರಿಸುತ್ತಿವೆ. ವಿಶ್ವದಲ್ಲೇ ಅತಿ ದೊಡ್ಡ ಸೈನಿಕ ಶಕ್ತಿಯನ್ನು ಹೊಂದಿದ್ದರೂ, ಇರಾನ್ ಯುದ್ಧದಿಂದ ಸುಲಭವಾಗಿ ಹೊರಬರಲಾಗದ ಪರಿಸ್ಥಿತಿಯಲ್ಲಿ ಟ್ರಂಪ್ ಸಿಲುಕಿದ್ದಾರೆ.

'ಅಮೆರಿಕದ ರಕ್ಷಕ ನಾನೇ': ಎಐ ಚಿತ್ರ ಹಂಚಿಕೊಂಡು ಸೇನಾ ಸಾಮರ್ಥ್ಯ ಸಾರಿದ ಟ್ರಂಪ್!

‌ಫಲಿಸದ ಕ್ಷಿಪ್ರ ಗೆಲುವಿನ ಲೆಕ್ಕಾಚಾರ

ಇರಾನ್‌ ಅಣು ಕಾರ್ಯಕ್ರಮ ಸ್ಥಗಿತಗೊಳಿಸಬೇಕು, ಅಲ್ಲಿನ ಆಡಳಿತ ಬದಲಾವಣೆ ಮಾಡಬೇಕು ಎನ್ನುವ ಸ್ಪಷ್ಟ ಗುರಿಯೊಂದಿಗೆ ಫೆಬ್ರುವರಿ 28ರಂದು ಇಸ್ರೇಲ್‌ನೊಂದಿಗೆ ಸೇರಿ ಅಮೆರಿಕ ಪೂರ್ಣ ಪ್ರಮಾಣದ ದಾಳಿ ನಡೆಸಿತು. ಯುದ್ಧ ಆರಂಭವಾಗಿ ಐದು ತಿಂಗಳಾದರೂ ಈ ಎರಡೂ ಗುರಿಗಳನ್ನು ಸಾಧಿಸಲು ಆಗಲಿಲ್ಲ.

ವೆನಿಜುವೆಲಾದಂತೆ ಸೈನ್ಯ ಹಾಗೂ ರಾಜತಾಂತ್ರಿಕ ಒತ್ತಡದ ಮೂಲಕ ತಮಗೆ ಅನುಕೂಲವಾದ ಆಡಳಿತವನ್ನು ಇರಾನ್‌ನಲ್ಲಿ ತರಬಹುದು ಎನ್ನುವ ವಿಶ್ವಾಸದಲ್ಲೂ ಟ್ರಂಪ್ ಒಂದು ಹಂತದಲ್ಲಿ ಇದ್ದರು. ಇರಾನ್‌ನಲ್ಲಿ ಅಂತಹ ತಂತ್ರ ಫಲಿಸುವುದು ಕಷ್ಟ ಸಾಧ್ಯ ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಹೇಳಿದ್ದವು. ಟ್ರಂಪ್ ಅಂದುಕೊಂಡಿದ್ದ 'ವೆನಿಜುವೆಲಾ' ಮಾದರಿ ಇರಾನ್ ಎದುರು ಫಲಕೊಡಲಿಲ್ಲ.

ಅಗತ್ಯಕ್ಕಿಂತ ಹೆಚ್ಚೇ ಇವೆ: ಯುದ್ಧ ಸಾಮಗ್ರಿ ಕೊರತೆ ವರದಿ ತಳ್ಳಿ ಹಾಕಿದ ಟ್ರಂಪ್

ಯುದ್ಧದ ಬಿಸಿ

ಇರಾನ್ ಮೇಲೆ ಅಮೆರಿಕ ನಡೆಸಿದ ದಾಳಿಯ ಪರಿಣಾಮ ಯುದ್ಧಭೂಮಿಗೆ ಮಾತ್ರ ಸೀಮಿತವಾಗಲಿಲ್ಲ. ದಾಳಿಯ ಪರಿಣಾಮ ಜಾಗತಿಕ ಆರ್ಥಿಕತೆಗಳ ಮೇಲೆ ಬಿತ್ತು. ತೈಲ ಬೆಲೆ ಏರಿತು. ಷೇರು ಮಾರುಕಟ್ಟೆ ಕುಸಿಯಿತು. ಜಾಗತಿಕ ತೈಲ ಸಾಗಣೆಗೆ ಅತ್ಯಂತ ಪ್ರಮುಖವಾದ ಹೊರ್ಮುಜ್ ಜಲಸಂಧಿ ಮತ್ತೆ ಅಸ್ಥಿರವಾಯಿತು. ಕೆಲ ವಾರಗಳು ಸುಧಾರಿಸಿದ್ದ ಹಡಗು ಸಂಚಾರ ಮತ್ತೆ ವ್ಯತ್ಯಯವಾಯಿತು. ಈಗ ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯನ್ನು ಸಂಪರ್ಕಿಸುವ ಮತ್ತೊಂದು ಪ್ರಮುಖ ಸಾಗಣೆ ಮಾರ್ಗದ ಮೇಲೂ ಅಪಾಯದ ಕಾರ್ಮೋಡ ಕವಿಯತೊಡಗಿದೆ.

ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರವಾದ ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುವುದು ಅಥವಾ ಭೂಗತ ಯುರೇನಿಯಂ ಸಂಗ್ರಹವನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆಯೂ ಟ್ರಂಪ್ ಪ್ರಸ್ತಾಪಿಸಿದ್ದರು. ಇದು ಆಗಬೇಕಾದರೆ ಭೂಸೇನೆಯನ್ನು ಕಳುಹಿಸಬೇಕು. ಆದರೆ ಭೂಸೇನೆಯನ್ನು ಕಳುಹಿಸುವುದಕ್ಕೆ ‌ಅಮೆರಿಕದ ಒಳಗೇ ವಿರೋಧ ಇತ್ತು. ಹೀಗಾಗಿ ಭೂಸೇನೆಯನ್ನು ಕಳುಹಿಸಲಿಲ್ಲ ಎನ್ನುವುದನ್ನು ಟ್ರಂಪ್ ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ.

ಹೊರ್ಮುಜ್ ವಿಚಾರದಲ್ಲಿ ಟ್ರಂಪ್ ಯೂ-ಟರ್ನ್: ಮತ್ತೆ ಆತಂಕದಲ್ಲಿ ಜಾಗತಿಕ ಉದ್ಯಮ

ಮಿತ್ರರೊಂದಿಗೂ ಭಿನ್ನಾಭಿಪ್ರಾಯ

ಇರಾನ್ ಮೇಲಿನ ಈ ಯುದ್ಧದ ಅಮೆರಿಕದ ವಿದೇಶಾಂಗ ನೀತಿಯ ಮೇಲೂ ಪರಿಣಾಮ ಬೀರಿದೆ. ಪರಿಣಾಮ, ಕೆಲವು ಮಿತ್ರ ರಾಷ್ಟ್ರಗಳೊಂದಿಗೂ ಭಿನ್ನಾಭಿಪ್ರಾಯ ಮೂಡಿತು. ಸೌದಿ ಅರೇಬಿಯಾದೊಂದಿಗೆ ಅಮೆರಿಕದ ಇಂಧನ ಕಾರ್ಯದರ್ಶಿ ನಾಗರಿಕ ಅಣುಶಕ್ತಿ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದು ನಡೆದ ಕೆಲವೇ ಗಂಟೆಗಳಲ್ಲಿ ಟ್ರಂಪ್ ಅದಕ್ಕೆ ಹೊಸ ಷರತ್ತು ವಿಧಿಸಿದರು. ಇಸ್ರೇಲ್‌ನೊಂದಿಗೆ ಸಂಬಂಧ ಸುಧಾರಿಸಲು ಉದ್ದೇಶಿಸಿರುವ 'ಅಬ್ರಹಾಂ ಒಪ್ಪಂದ'ಕ್ಕೆ ಸೌದಿ ಅರೇಬಿಯಾ ಸೇರ್ಪಡೆಗೊಂಡು, ಇಸ್ರೇಲ್‌ಗೆ ಅಧಿಕೃತ ಮಾನ್ಯತೆ ನೀಡದಿದ್ದರೆ ಆ ಒಪ್ಪಂದಕ್ಕೆ ಅವಕಾಶವೇ ಇಲ್ಲ ಎಂದು ಟ್ರಂಪ್ ಹೇಳಿದರು.

'ಷರತ್ತು ಹಾಕುವ ಮೂಲಕ ಸೌದಿ ಅರೇಬಿಯಾವನ್ನು ಟ್ರಂಪ್ ಮತ್ತೆ ದೂರ ಮಾಡಿದರು. ಬೆಂಜಮಿನ್ ನೆತನ್ಯಾಹು ಅವರನ್ನು ಸಂತೋಷಪಡಿಸಿದರು. ಟ್ರಂಪ್ ಈ ನಿಲುವು ಅಮೆರಿಕ ಜೊತೆಗೆ ಒಪ್ಪಂದ ಮಾಡಿಕೊಳ್ಳುವುದು ಮೂರ್ಖತನ ಎಂಬುದಕ್ಕೆ ಇರಾನ್‌ಗೆ ಬಲವಾದ ಸಾಕ್ಷ್ಯ ನೀಡಿತು' ಎಂದು ಮಧ್ಯಪ್ರಾಚ್ಯ ವಿಷಯಗಳ ಪರಿಣಿತ ಹಾಗೂ ಮಾಜಿ ಅಮೆರಿಕ ರಾಜತಾಂತ್ರಿಕ ಆರನ್ ಡೇವಿಡ್ ಮಿಲ್ಲರ್ ಹೇಳಿದ್ದಾರೆ.

ಹೊರ್ಮುಜ್ ಮೂಲಕ ಸಾಗುವ ಸರಕು ಸಾಗಣೆ ಹಡಗುಗಳಿಗೆ ಶುಲ್ಕ: ನಿರ್ಧಾರ ಹಿಂಪಡೆದ ಟ್ರಂಪ್

ಹೆಚ್ಚು ದಿನ ಉಳಿಯದ ಕದನ ವಿರಾಮ

ಒಂದು ಹಂತದಲ್ಲಿ ರಾಜತಾಂತ್ರಿಕ ಮಾತುಕತೆಯ ಮೂಲಕ ಯುದ್ಧಕ್ಕೆ ತೆರೆ ಬೀಳಲಿದೆ ಎಂಬ ವಿಶ್ವಾಸವೂ ಟ್ರಂಪ್ ಅವರಲ್ಲಿತ್ತು. ಅದರ ಭಾಗವಾಗಿ ಜೂನ್‌ 17ರಂದು ಫ್ರಾನ್ಸ್‌ನ ವರ್ಸೈಲ್ಸ್ ಅರಮನೆಯಲ್ಲಿ 14 ಅಂಶಗಳ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇರಾನ್ ಮೇಲೆ ದೊಡ್ಡ ಮಟ್ಟದ ದಾಳಿ ನಡೆಸುವ ಸಾಧ್ಯತೆಯ ಎಚ್ಚರಿಕೆಯೇ ಇರಾನ್ ಅನ್ನು ಮಾತುಕತೆ ಉದ್ದೀಪಿಸಿದೆ ಎಂದು ಆಗ ಟ್ರಂಪ್ ಹೇಳಿಕೊಂಡಿದ್ದರು.

'ನಾವು ದೊಡ್ಡ ದಾಳಿಗೆ ಮುಂದಾಗುತ್ತಿದ್ದೆವು. ಆಗ ಅವರು, ದಯವಿಟ್ಟು ಹಾಗೆ ಮಾಡಬೇಡಿ, ನಾವು ಒಪ್ಪಂದ ಮಾಡಿಕೊಳ್ಳುತ್ತೇವೆ ಎಂದರು. ಅದರ ಬಳಿಕವೇ ಒಪ್ಪಂದವಾಯಿತು' ಎಂದು ಟ್ರಂಪ್ ಹೇಳಿದ್ದರು. ಆದರೆ ಆ ಕದನ ವಿರಾಮ ಆಯಸ್ಸು ಕೇವಲ ಎರಡು ವಾರ ಮಾತ್ರ ಉಳಿಯಿತು.

ಯುದ್ಧಭೂಮಿಯ ಹೊರಗೆ ಗುಪ್ತ ಸಂಘರ್ಷ: ಟ್ರಂಪ್-ಸಲ್ಮಾನ್ ನಡುವೆ ಬಿರುಕು ಮೂಡಿದ್ದೇಕೆ?

ಇರಾನ್‌ನೊಳಗಿನ ಭಿನ್ನಮತವೂ ಸವಾಲು

ಇರಾನ್‌ನೊಂದಿಗೆ ಕದನ ವಿರಾಮ ವಿಫಲವಾಗಲು ಮತ್ತೊಂದು ಕಾರಣವನ್ನು ಅಮೆರಿಕದ ಅಧಿಕಾರಿಗಳು ಉಲ್ಲೇಖಿಸುತ್ತಾರೆ. ಮಾತುಕತೆಗೆ ಬಂದ ಇರಾನ್ ಅಧಿಕಾರಿಗಳಿಗಿಂತ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ (ಐಆರ್‌ಜಿಸಿ) ಹೆಚ್ಚು ಪ್ರಭಾವಶಾಲಿಯಾಗಿ ನಡೆದುಕೊಂಡಿತು ಎನ್ನಲಾಗಿದೆ. ಹೋರ್ಮುಜ್ ಜಲಸಂಧಿಯಲ್ಲಿ ಇರಾನ್‌ನ ನಿಯಂತ್ರಣ ಸೂಚನೆಗಳನ್ನು ಪಾಲಿಸಲು ನಿರಾಕರಿಸಿದ ಹಡಗುಗಳ ಮೇಲೆ ರೆವಲ್ಯೂಷನರಿ ಗಾರ್ಡ್ ಪಡೆಗಳು ದಾಳಿ ನಡೆಸಿದವು. ಇದರಿಂದ ಮಾತುಕತೆ ನಡೆಸಿದ ನಾಯಕತ್ವ ಮತ್ತು ಭದ್ರತಾ ವ್ಯವಸ್ಥೆಯ ನಡುವೆ ಏಕರೂಪದ ನಿಲುವು ಇರಲಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.

ದೇಶದೊಳಗೂ ಅಸಮಾಧಾನ

ಯುದ್ಧದ ಪರಿಣಾಮ ಟ್ರಂಪ್ ಅವರ ವಿದೇಶಾಂಗ ನೀತಿಗೆ ಮಾತ್ರ ಸೀಮಿತವಾಗಲಿಲ್ಲ. ಅವರ ನಿರ್ಧಾರಗಳಲ್ಲಿ ಕಂಡುಬಂದ ಅನಿಶ್ಚಿತತೆ ದೇಶೀಯ ರಾಜಕೀಯದಲ್ಲಿಯೂ ಪ್ರತಿಫಲಿಸತೊಡಗಿತು. ಅಮೆರಿಕದಲ್ಲಿ ಎರಡೂ ಪ್ರಮುಖ ಪಕ್ಷಗಳ ಬೆಂಬಲ ಪಡೆದಿದ್ದ ವಸತಿ ಮಸೂದೆಗೆ ಸಹಿ ಹಾಕುವ ಸಮಾರಂಭವನ್ನೂ ಟ್ರಂಪ್ ಕೊನೆಯ ಕ್ಷಣದಲ್ಲಿ ರದ್ದುಗೊಳಿಸಿದರು. ತಮ್ಮ ಆದ್ಯತೆ 'SAVE America Act' ಮಾತ್ರ ಎಂದು ಘೋಷಿಸಿದ ಅವರು, ಆ ಮಸೂದೆಗೆ ಸಹಿ ಹಾಕಲು ನಿರಾಕರಿಸಿದರು. ಪರಿಣಾಮ, ಟ್ರಂಪ್ ಸಹಿ ಹಾಕದಿದ್ದರೂ ವೀಟೊ ವಿಧಿಸದ ಕಾರಣ, ನಿಗದಿತ ಅವಧಿ ಪೂರ್ಣಗೊಂಡ ಬಳಿಕ ಆ ಮಸೂದೆ ಸ್ವಯಂಚಾಲಿತವಾಗಿ ಕಾನೂನಾಯಿತು.

ಇದಕ್ಕೂ ಮುನ್ನ, ಕೆನಡಾ ಜೊತೆಗಿನ ಗೋರ್ಡಿ ಹೋ ಅಂತರರಾಷ್ಟ್ರೀಯ ಸೇತುವೆ ಯೋಜನೆಗೆ ಸಂಬಂಧಿಸಿದ ಹಳೆಯ ಒಪ್ಪಂದವನ್ನು ರದ್ದುಗೊಳಿಸುವುದಾಗಿ ಘೋಷಿಸಿದ ಟ್ರಂಪ್, ಕೆನಡಾದ ಕೆಲವು ಉತ್ಪನ್ನಗಳಿಗೆ ಶೇ 50 ಸುಂಕ ವಿಧಿಸಿದರು. ಇದರಿಂದ ಸೇತುವೆ ಉದ್ಘಾಟನಾ ಸಮಾರಂಭದಿಂದ ಅಮೆರಿಕದ ಪ್ರತಿನಿಧಿಗಳನ್ನು ಕೆನಡಾ ದೂರವಿಟ್ಟಿತು.

ಕೊಲ್ಲಿ ಸಂಘರ್ಷ: ಅಮೆರಿಕ-ಇರಾನ್ ಮಧ್ಯೆ ಸಿಲುಕಿ ನಲುಗಿದ 'ಗುಬ್ಬಚ್ಚಿ' ಕತಾರ್

ಯುದ್ಧಕ್ಕೆ ಜನಮನ್ನಣೆ ಕುಸಿತ

ಅಮೆರಿಕದೊಳಗೆಯೂ ಯುದ್ಧದ ವಿರುದ್ಧದ ಅಸಮಾಧಾನ ಹೆಚ್ಚಾಗುತ್ತಿದೆ. ವಾಷಿಂಗ್ಟನ್ ಪೋಸ್ಟ್-ಐಪಿಎಸ್‌ಒಎಸ್ ಸಮೀಕ್ಷೆಯ ಪ್ರಕಾರ, ಟ್ರಂಪ್ ಅವರ ಇರಾನ್ ನೀತಿಯನ್ನು ಕೇವಲ ಶೇ 29ರಷ್ಟು ಅಮೆರಿಕನ್ನರು ಮಾತ್ರ ಬೆಂಬಲಿಸಿದ್ದಾರೆ. ಯುದ್ಧವನ್ನು ಶೀಘ್ರವೇ ಅಂತ್ಯಗೊಳಿಸಬೇಕು ಎಂಬ ಒತ್ತಾಯ ಆಡಳಿತ ಪಕ್ಷದೊಳಗೆಯೇ ಕೇಳಿಬರುತ್ತಿದೆ. ಪ್ರತಿನಿಧಿಗಳ ಸಭೆಯ ಸ್ಪೀಕರ್ ಮೈಕ್ ಜಾನ್ಸನ್ ಕೂಡ, 'ಇದನ್ನು ಮುಗಿಸಬೇಕು' ಎಂದು ಬಹಿರಂಗವಾಗಿ ಹೇಳಿದ್ದಾರೆ. ಇದೇ ಅಭಿಪ್ರಾಯ ಟ್ರಂಪ್ ಅವರ ಬೆಂಬಲಿಗರಲ್ಲೂ ಬಲಗೊಳ್ಳುತ್ತಿದೆ.

ಮೂರು ದಾರಿಗಳು... ಆದರೆ ಯಾವುದು ಸುಲಭವಲ್ಲ

ಯುದ್ಧದಿಂದ ಹೊರಬರಲು ಟ್ರಂಪ್ ಮುಂದೆ ಮೂರು ಆಯ್ಕೆಗಳಿವೆ-ದಾಳಿಯನ್ನು ಮತ್ತಷ್ಟು ತೀವ್ರಗೊಳಿಸುವುದು, ಆರ್ಥಿಕ ನಿರ್ಬಂಧಗಳನ್ನು ಕಠಿಣಗೊಳಿಸುವುದು ಅಥವಾ ವಿಜಯ ಘೋಷಿಸಿ ಹಿಂದೆ ಸರಿಯುವುದು.

ಮೊದಲನೆಯ ಆಯ್ಕೆ ಬಗ್ಗೆ ಅಧಿಕಾರಿಗಳೇ ಅನುಮಾನ ವ್ಯಕ್ತಪಡಿಸಿದ್ದಾರೆ. ಇರಾನ್‌ನ ವಿದ್ಯುತ್ ಮೂಲಸೌಕರ್ಯ, ಸೇತುವೆಗಳು ಹಾಗೂ ಕ್ಷಿಪಣಿ ವ್ಯವಸ್ಥೆಗಳ ಮೇಲೆ ದಾಳಿ ನಡೆಸಿದರೂ, ಅದು ಮಾತುಕತೆಗೆ ಬರಲಿದೆ ಎನ್ನುವುದಕ್ಕೆ ಯಾವುದೇ ಖಾತರಿ ಇಲ್ಲ. ಇದಲ್ಲದೆ ಇಂತಹ ದಾಳಿಯಿಂದ ಸಾವಿರಾರು ನಾಗರಿಕರು ಬಲಿಯಾಗುವ ಮತ್ತು ಆಹಾರ ಕೊರತೆಯಂತಹ ಮಾನವೀಯ ದುರಂತ ಉಂಟಾಗುವ ಸಾಧ್ಯತೆಯಿದೆ ಎಂಬ ಎಚ್ಚರಿಕೆಯನ್ನೂ ಅಧಿಕಾರಿಗಳು ನೀಡಿದ್ದಾರೆ.

ಇನ್ನೊಂದು ದೊಡ್ಡ ಸಮಸ್ಯೆ ಅಮೆರಿಕದ ಕ್ಷಿಪಣಿ ತಡೆ ವ್ಯವಸ್ಥೆಯ ಸಂಗ್ರಹ. ವ್ಯೂಹಾತ್ಮಕ ಮತ್ತು ಅಂತರರಾಷ್ಟ್ರೀಯ ಅಧ್ಯಯನಗಳ ಕೇಂದ್ರ (ಸಿಎಸ್‌ಐೆಸ್‌) ಸಂಸ್ಥೆಯ ಅಂದಾಜಿನಂತೆ, ಅಮೆರಿಕ ತನ್ನ ಪ್ರಮುಖ ಇಂಟರ್‌ಸೆಪ್ಟರ್ ಕ್ಷಿಪಣಿಗಳ ಅರ್ಧದಷ್ಟು ಸಂಗ್ರಹವನ್ನು ಈಗಾಗಲೇ ಬಳಸಿದೆ. ನಿರಂತರ ದಾಳಿಗಳ ಬಳಿಕ ಈ ಸಂಗ್ರಹವು ಅಪಾಯಕರ ಮಟ್ಟಕ್ಕೆ ಇಳಿದಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ. ಇದರಿಂದ ರಷ್ಯಾ ಮತ್ತು ಚೀನಾ ಕೂಡ ಅಮೆರಿಕದ ಸಾಮರ್ಥ್ಯವನ್ನು ಗಮನಿಸಿ ತಮ್ಮ ಮುಂದಿನ ಹೆಜ್ಜೆಗಳನ್ನು ಲೆಕ್ಕ ಹಾಕುತ್ತಿರಬಹುದೆಂಬ ಆತಂಕವೂ ವ್ಯಕ್ತವಾಗಿದೆ.

ಮೊಜ್ತಬಾ ಖಮೇನಿ ಬದುಕಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಟ್ರಂಪ್

ಆರ್ಥಿಕ ಒತ್ತಡದ ತಂತ್ರವೂ ನಿಧಾನ

ಎರಡನೇ ಆಯ್ಕೆಯೆಂದರೆ ಇರಾನ್ ಮೇಲಿನ ಆರ್ಥಿಕ ನಿರ್ಬಂಧಗಳನ್ನು ಇನ್ನಷ್ಟು ಕಠಿಣಗೊಳಿಸುವುದು. ತೈಲ ರಫ್ತಿಗೆ ಕಡಿವಾಣ ಹಾಕುವ ಮೂಲಕ ಅದರ ಆರ್ಥಿಕತೆಯನ್ನು ಮತ್ತಷ್ಟು ದುರ್ಬಲಗೊಳಿಸುವ ಪ್ರಯತ್ನವನ್ನು ಅಮೆರಿಕ ಮುಂದುವರಿಸಬಹುದು. ಆದರೆ ಈ ತಂತ್ರ ತಕ್ಷಣದ ಫಲಿತಾಂಶ ನೀಡುವುದಿಲ್ಲ. 2018ರಲ್ಲಿ ಅಣು ಒಪ್ಪಂದದಿಂದ ಹೊರಬಂದ ಟ್ರಂಪ್ ಇರಾನ್ ವಿರುದ್ಧ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಿದ್ದರೂ, ಎಂಟು ವರ್ಷಗಳ ಬಳಿಕವೂ ಅಲ್ಲಿನ ಆಡಳಿತ ಅಸ್ತಿತ್ವದಲ್ಲೇ ಇದೆ.

ವಿಜಯಿ ಘೋಷಿಸಿ ಹೊರಬರುವುದು ಸಾಧ್ಯವೇ?

ಒಂದು ಹಂತದಲ್ಲಿ ಟ್ರಂಪ್ ಕೂಡ ಯುದ್ಧವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶ ತನಗಿಲ್ಲ ಎಂದು ಹೇಳಿದ್ದರು. ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಜಾಗತಿಕ ಆರ್ಥಿಕತೆಗೆ ಮತ್ತೊಂದು ದೊಡ್ಡ ಹೊಡೆತ ಬೀಳಬಾರದು ಎಂಬುದು ಅವರ ವಾದವಾಗಿತ್ತು. ಮತ್ತೊಂದು ಆರ್ಥಿಕ ಕುಸಿತಕ್ಕೆ ತಮ್ಮ ಆಡಳಿತವೇ ಹೊಣೆ ಎಂಬ ಟೀಕೆ ಎದುರಾಗಬಾರದು ಎಂಬ ಆತಂಕವೂ ಅವರ ಹೇಳಿಕೆಗಳಲ್ಲಿ ವ್ಯಕ್ತವಾಗಿತ್ತು.

ಆದರೆ ಈ ನಿಲುವಿಗೂ ರಾಜಕೀಯ ಬೆಲೆ ತೆರಬೇಕಿದೆ. ಇರಾನ್ ಇನ್ನೂ ಅಣ್ವಸ್ತ್ರ ನಿರ್ಮಾಣಕ್ಕೆ ಅಗತ್ಯವಾದ ಮಟ್ಟದ ಯುರೇನಿಯಂ ಸಂಗ್ರಹವನ್ನು ಉಳಿಸಿಕೊಂಡಿದ್ದರೆ ಮತ್ತು ಹೊರ್ಮುಜ್ ಜಲಸಂಧಿಯ ಮೇಲಿನ ತನ್ನ ಪ್ರಭಾವವನ್ನು ಮುಂದುವರಿಸಿದರೆ, ಯುದ್ಧ ಆರಂಭಿಸಿದ ಮೂಲ ಉದ್ದೇಶವೇ ಅಪೂರ್ಣವಾಗಿ ಉಳಿಯುತ್ತದೆ.

ಒಪ್ಪಂದದ ಭಾಷೆಯಲ್ಲೇ ಹೊಸ ಬಿಕ್ಕಟ್ಟು: ಹೊರ್ಮುಜ್ ಈಗ ಜಾಗತಿಕ ಪೈಪೋಟಿಯ ಅಖಾಡ

ಯುದ್ಧ ಕಲಿಸಿದ ಪಾಠ

ಇರಾನ್ ಯುದ್ಧವು ಟ್ರಂಪ್ ಅವರ ಮುಂದೆ ಒಂದು ಕಠಿಣ ರಾಜಕೀಯ ಸತ್ಯವನ್ನು ಅನಾವರಣಗೊಳಿಸಿದೆ. ವಿಶ್ವದ ಅತ್ಯಂತ ಪ್ರಬಲ ಸೇನೆ ಹೊಂದಿರುವ ಅಮೆರಿಕಕ್ಕೂ ಪ್ರತಿಯೊಂದು ಸಮಸ್ಯೆಗೆ ಸೈನಿಕ ಶಕ್ತಿಯೇ ಪರಿಹಾರವಾಗುವುದಿಲ್ಲ. ಯುದ್ಧವನ್ನು ಆರಂಭಿಸುವುದು ಸುಲಭವಾಗಬಹುದು. ಆದರೆ ಅದನ್ನು ರಾಜಕೀಯವಾಗಿ ಯಶಸ್ವಿಯಾಗಿ ಅಂತ್ಯಗೊಳಿಸುವುದು ಬಹಳ ಕಠಿಣ.

ಅದಕ್ಕಾಗಿಯೇ ಈ ಯುದ್ಧವು ಕೇವಲ ಎರಡು ರಾಷ್ಟ್ರಗಳ ನಡುವಿನ ಸಂಘರ್ಷವಾಗಿ ಉಳಿದಿಲ್ಲ. ವಿಶ್ವದ ಅತಿದೊಡ್ಡ ಮಿಲಿಟರಿ ಶಕ್ತಿಯನ್ನೂ ರಾಜಕೀಯ, ಆರ್ಥಿಕ ಮತ್ತು ರಾಜತಾಂತ್ರಿಕ ವಾಸ್ತವಗಳು ಹೇಗೆ ಮಿತಿಗೊಳಿಸುತ್ತವೆ ಎಂಬುದಕ್ಕೆ ಇದು ಮಹತ್ವದ ಉದಾಹರಣೆಯಾಗಿ ಪರಿಣಮಿಸಿದೆ. ಎಲ್ಲವನ್ನೂ ತಮ್ಮ ಇಚ್ಛೆಯಂತೆ ನಿರ್ಧರಿಸಬಹುದು ಎಂಬ ವಿಶ್ವಾಸದಲ್ಲಿದ್ದ ಟ್ರಂಪ್, ಈಗ ಯುದ್ಧದಿಂದ ರಾಜಕೀಯ ಹಿನ್ನಡೆಯಿಲ್ಲದೆ ಹೊರಬರುವ ದಾರಿಯನ್ನು ಹುಡುಕುವ ಪರಿಸ್ಥಿತಿಗೆ ತಲುಪಿದ್ದಾರೆ.

ಆಧಾರ: ದಿ ನ್ಯೂಯಾರ್ಕ್ ಟೈಮ್ಸ್ ಹಾಗೂ ರಾಯಿಟರ್ಸ್

H1B ವೀಸಾಗೆ 1 ಲಕ್ಷ ಡಾಲರ್: ಟ್ರಂಪ್ ಆಡಳಿತದ ಆದೇಶ ರದ್ದು ಎತ್ತಿಹಿಡಿದ ನ್ಯಾಯಾಲಯ
Dailyhunt
Disclaimer: This content has not been generated, created or edited by Dailyhunt. Publisher: Prajavani