Dailyhunt Logo
  • Light mode
    Follow system
    Dark mode
    • Play Story
    • App Story
ಟ್ರಂಪ್‌ಗೆ ಮಾತ್ರವಲ್ಲ... ಐದು ದಶಕಗಳಿಂದ ಅಮೆರಿಕಕ್ಕೆ ಅರ್ಥವಾಗದ ಇರಾನ್!

ಟ್ರಂಪ್‌ಗೆ ಮಾತ್ರವಲ್ಲ... ಐದು ದಶಕಗಳಿಂದ ಅಮೆರಿಕಕ್ಕೆ ಅರ್ಥವಾಗದ ಇರಾನ್!

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಟ್ರಂಪ್‌ಗೆ ಮಾತ್ರವಲ್ಲ... ಐದು ದಶಕಗಳಿಂದ ಅಮೆರಿಕಕ್ಕೆ ಅರ್ಥವಾಗದ ಇರಾನ್!

ಒಂದು ಸಾಲಿನಲ್ಲಿಅಮೆರಿಕದ ಅಧ್ಯಕ್ಷರು ದಶಕಗಳಿಂದ ಇರಾನ್‌ನ ರಾಜಕೀಯ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ವಿಫಲರಾಗುತ್ತಿರುವುದು ಮತ್ತು ಅಲ್ಲಿನ ಸರ್ವೋಚ್ಚ ನಾಯಕತ್ವದ ಸಂಕೀರ್ಣತೆಯನ್ನು ಈ ಲೇಖನ ವಿವರಿಸುತ್ತದೆ.

ಪ್ರಮುಖ ಪ್ರಶ್ನೋತ್ತರ


ಅಮೆರಿಕಕ್ಕೆ ಇರಾನ್ ಅರ್ಥವಾಗದಿರಲು ಕಾರಣವೇನು?

ಇರಾನ್‌ನ ರಾಜಕೀಯ ನಿರ್ಧಾರಗಳು ಕೇವಲ ಚುನಾಯಿತ ಸರ್ಕಾರದ ಕೈಯಲ್ಲಿಲ್ಲದೆ, ಸರ್ವೋಚ್ಚ ಧಾರ್ಮಿಕ ನಾಯಕನ ನೇತೃತ್ವದಲ್ಲಿ ನಡೆಯುವುದೇ ಅಮೆರಿಕದ ಗೊಂದಲಕ್ಕೆ ಮುಖ್ಯ ಕಾರಣ.


ಟ್ರಂಪ್ ಇರಾನ್ ವಿರುದ್ಧ ಯಾವ ತಂತ್ರ ಬಳಸಿದರು?

ಟ್ರಂಪ್ ಆಡಳಿತವು ಗರಿಷ್ಠ ಆರ್ಥಿಕ ಒತ್ತಡ ಮತ್ತು ಬಲಪ್ರಯೋಗದ ತಂತ್ರಗಳನ್ನು ಬಳಸಿದರೂ, ಇರಾನ್ ತನ್ನ ಅಣು ಕಾರ್ಯಕ್ರಮವನ್ನು ಮುಂದುವರಿಸಿದ್ದರಿಂದ ನಿರೀಕ್ಷಿತ ಫಲ ಸಿಗಲಿಲ್ಲ.


ಹೊರ್ಮುಜ್ ಜಲಸಂಧಿಯ ವಿವಾದದ ಹಿನ್ನೆಲೆ ಏನು?

ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹೊರ್ಮುಜ್ ಜಲಸಂಧಿಯ ಮೇಲೆ ಅಧಿಕಾರ ಸಾಧಿಸಲು ಇರಾನ್ ಪ್ರಯತ್ನಿಸುತ್ತಿದ್ದು, ಇದು ಅಮೆರಿಕ ಮತ್ತು ಇರಾನ್ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ.


ಇರಾನ್‌ನ ವಿದೇಶಾಂಗ ನೀತಿ ಏಕೆ ಬದಲಾಗುವುದಿಲ್ಲ?

ಇರಾನ್‌ನಲ್ಲಿ ಅಧ್ಯಕ್ಷರು ಬದಲಾದರೂ, ದೇಶದ ಭದ್ರತೆ ಮತ್ತು ವಿದೇಶಾಂಗ ನೀತಿಯಂತಹ ಪ್ರಮುಖ ನಿರ್ಧಾರಗಳನ್ನು ಸರ್ವೋಚ್ಚ ನಾಯಕರೇ ತೆಗೆದುಕೊಳ್ಳುವುದರಿಂದ ನೀತಿಗಳಲ್ಲಿ ಸ್ಥಿರತೆ ಇರುತ್ತದೆ.


ಅಮೆರಿಕದ ಹಳೆಯ ಪ್ರಯತ್ನಗಳು ವಿಫಲವಾಗಿದ್ದು ಏಕೆ?

ಜಿಮ್ಮಿ ಕಾರ್ಟರ್‌ನಿಂದ ಹಿಡಿದು ಒಬಾಮಾವರೆಗಿನ ಅಧ್ಯಕ್ಷರು ಮಾತುಕತೆ ಅಥವಾ ಒಪ್ಪಂದಗಳ ಮೂಲಕ ಸ್ನೇಹ ಬೆಳೆಸಲು ಪ್ರಯತ್ನಿಸಿದರೂ, ಇರಾನ್‌ನ ಸೈದ್ಧಾಂತಿಕ ನಿಲುವು ಬದಲಾಗಲಿಲ್ಲ.

ಪ್ರಮುಖ ಅಂಕಿಅಂಶಗಳು

1979ಇರಾನ್ ಇಸ್ಲಾಮಿಕ್ ಕ್ರಾಂತಿ ನಡೆದ ವರ್ಷ52ಒತ್ತೆಯಾಳುಗಳಾಗಿ ಇರಿಸಲ್ಪಟ್ಟ ಅಮೆರಿಕನ್ನರ ಸಂಖ್ಯೆಐದನೇ ಒಂದು ಭಾಗಹೊರ್ಮುಜ್ ಜಲಸಂಧಿಯ ಮೂಲಕ ಸಾಗುವ ಜಾಗತಿಕ ತೈಲದ ಪಾಲು

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

'ಅವರು ನನ್ನನ್ನು ಕೆರಳಿಸುತ್ತಾರೆ… ಅವರು ಹೇಳುವುದೊಂದು, ಮಾಡುವುದೊಂದು…'

ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಬಗ್ಗೆ ವ್ಯಕ್ತಪಡಿಸಿದ ಈ ಅಸಹನೆಯ ಮಾತುಗಳಿವು. ಇದು ಕೇವಲ ಟ್ರಂಪ್ ಅವರ ವೈಯಕ್ತಿಕ ಬೇಸರ ಮಾತ್ರವಲ್ಲ. ಕಳೆದ ಐದು ದಶಕಗಳಿಂದ ಅಮೆರಿಕದ ವಿದೇಶಾಂಗ ನೀತಿಯನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆಯೇ ಇದು.

ದಯವಿಟ್ಟು ನಿಲ್ಲಿಸಿ.. ಇರಾನ್ ಮನವಿ ಮೇರೆಗೆ ಸೇನಾ ಕಾರ್ಯಾಚರಣೆ ಸ್ಥಗಿತ: ಟ್ರಂಪ್

ಇರಾನ್‌ನೊಂದಿಗೆ ಸಂಬಂಧ ಸುಧಾರಿಸಲು ಹೋಗಿ ಮಾಜಿ ಅಧ್ಯಕ್ಷರಾದ ಜಿಮ್ಮಿ ಕಾರ್ಟರ್ ನಿರಾಸೆ ಅನುಭವಿಸಿದರು. ರೊನಾಲ್ಡ್ ರೇಗನ್ ಕೂಡ ಬೆಲೆ ತೆತ್ತರು. ಬಿಲ್ ಕ್ಲಿಂಟನ್ ಚಾಚಿದ ಸ್ನೇಹದ ಹಸ್ತ ಮುರಿದು ಬಿತ್ತು. ಬರಾಕ್ ಒಬಾಮಾ ಐತಿಹಾಸಿಕ ಅಣು ಒಪ್ಪಂದ ಸಾಧಿಸಿದರೂ ವಿಶ್ವಾಸ ಕಟ್ಟಲಾಗಲಿಲ್ಲ. ಈಗ ಟ್ರಂಪ್‌ ಕೂಡ ಅದೇ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಗರಿಷ್ಠ ಒತ್ತಡ ಹೇರಿ ಹೇರಿದರೂ, ಒಪ್ಪಂದಕ್ಕೆ ಮುಂದಾದರೂ ಇರಾನ್‌ನಿಂದ ನಿರೀಕ್ಷಿತ ಫಲ ಪಡೆಯಲು ವಿಫಲರಾಗಿದ್ದಾರೆ.

ಹಾಗಾದರೆ ಇರಾನ್ ಅನ್ನು ಅರ್ಥ ಮಾಡಿಕೊಳ್ಳುವುದು ಅಮೆರಿಕಕ್ಕೆ ಏಕೆ ಕಷ್ಟ?

ಉತ್ತರ ಹುಡುಕಲು ಇತಿಹಾಸದ ಪುಟಗಳನ್ನು ತೆರೆಯಬೇಕು. ಇರಾನ್‌ನ ರಾಜಕೀಯ ವ್ಯವಸ್ಥೆ, ಅದರ ಕರ್ಮಠ ಸಿದ್ಧಾಂತ, ಅಧಿಕಾರದ ರಚನೆ ಮತ್ತು ಐದು ದಶಕಗಳ ಇತಿಹಾಸವನ್ನು ಒಟ್ಟಾಗಿ ನೋಡಬೇಕು. ಏಕೆಂದರೆ ಇರಾನ್‌ನೊಂದಿಗೆ ಅಮೆರಿಕದ ಸಂಘರ್ಷವು ಕೇವಲ ಎರಡು ರಾಷ್ಟ್ರಗಳ ನಡುವಿನ ವಿವಾದ ಮಾತ್ರವಲ್ಲ, ಅದು ಎರಡು ವಿಭಿನ್ನ ರಾಜಕೀಯ ಮನೋಭಾವದ ಸಂಘರ್ಷಗಳು.

ಬೆದರಿಕೆಯೇ ರಣನೀತಿ... ಮ್ಯಾಡ್‌ಮ್ಯಾನ್ ಸಿದ್ಧಾಂತ ಪ್ರಯೋಗಿಸಿದರೇ ಟ್ರಂಪ್?

ಹಳೆ ಸಮಸ್ಯೆ, ಹೊಸ ನಾಯಕ

ಈಚಿನ ಬೆಳವಣಿಗೆಗಳಲ್ಲಿ ಟ್ರಂಪ್‌ಗೆ ಹೆಚ್ಚು ನಿರಾಸೆ ತರಿಸಿರುವುದು ಹೊರ್ಮುಜ್ ಜಲಸಂಧಿ ಕುರಿತ ಮಾತುಕತೆ. ಜಗತ್ತಿನಾದ್ಯಂತ ಸಮುದ್ರಮಾರ್ಗದಲ್ಲಿ ಸಾಗಣೆಯಾಗುವ ಒಟ್ಟು ತೈಲದ ಸುಮಾರು ಐದನೇ ಒಂದು ಭಾಗ ಆ ಕಿರಿದಾದ ಜಲಮಾರ್ಗದ ಮೂಲಕವೇ ಹೋಗುತ್ತದೆ. ಹೀಗಾಗಿ ಅಲ್ಲಿ ಉಂಟಾಗುವ ಯಾವುದೇ ಅಡಚಣೆ ಇಡೀ ಜಗತ್ತಿನಾದ್ಯಂತ ತೈಲ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ.‌ ಹೊರ್ಮುಜ್ ಬಗ್ಗೆ ಹಲವು ಮಾತುಕತೆಗಳು ನಡೆದರೂ, ಅದ್ಯಾವುದೂ ದೀರ್ಘ ಕಾಲ ನಿಂತಿಲ್ಲ. ಇದೀಗ ಹೊಸ ಒಪ್ಪಂದ ನಡೆಯುವ ಸಾಧ್ಯತೆ ಇದೆ ಎಂದು ಅಮೆರಿಕ ಅಧಿಕಾರಿಗಳು ಹೇಳಿದ್ದಾರೆ. ಆದರೆ ಅಲ್ಲಿ ಸಂಚರಿಸುವ ಹಡಗುಗಳ ಮೇಲೆ ಶುಲ್ಕ ವಿಧಿಸುವುದಾಗಿ ಇರಾನ್ ಪಟ್ಟು ಹಿಡಿದೆ. ಅದು ತನ್ನ ಅಧಿಕಾರ, ಅದನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳಿದೆ. ಆದರೆ ಟ್ರಂಪ್ ಅಡಳಿತ ಅದನ್ನು ಒಪ್ಪಿಕೊಳ್ಳಲು ನಿರಾಕರಿಸಿದೆ. ಹೀಗಾಗಿ ಮಾತುಕತೆ ಮುಂದುವರಿದರೂ, ವಿಶ್ವಾಸ ಮಾತ್ರ ಮೂಡಿಲ್ಲ.

ಕಳೆದ ಐದಾರು ತಿಂಗಳಿನಿಂದ ಅಂತ್ಯಕಾಣದ ಈ ಸಂಘರ್ಷವು ಟ್ರಂಪ್ ಅವರ ರಾಜಕೀಯದ ಮೇಲೂ ಪರಿಣಾಮ ಬೀರಿದೆ. ಶೀಘ್ರವೇ ಯುದ್ಧ ಅಂತ್ಯಗೊಳಿಸುವುದಾಗಿ ಅಮೆರಿಕ ಜನರಿಗೆ ಟ್ರಂಪ್ ಭರವಸೆ ನೀಡಿದ್ದರೂ, ಸಂಘರ್ಷ ಕೊನೆಯಾಗಿಲ್ಲ. ಇದು ಅವರ ಮೇಲೆ ರಾಜಕೀಯ ಒತ್ತಡ ತಂದಿದೆ. ಮತ್ತೊಂದೆಡೆ ತೈಲ ಬೆಲೆ ಏರಿಕೆಯು ಅಮೆರಿಕದ ಗ್ರಾಹಕರಿಂದ ಹಿಡಿದು ಜಾಗತಿಕ ಆರ್ಥಿಕತೆಯವರೆಗೆ ಪರಿಣಾಮ ಬೀರುತ್ತಿದೆ.

ಇರಾನ್ ಸಿದ್ಧಾಂತವೇ ದೊಡ್ಡ ಸಮಸ್ಯೆ

ಈಗಿನ ಅಥವಾ ಈ ಹಿಂದಿನ ಸಮಸ್ಯೆಗೆ ಮೂಲ ಹೊರ್ಮುಜ್ ಜಲಸಂಧಿ ಮಾತ್ರವಲ್ಲ. ಇರಾನ್‌ನ ಕರ್ಮಠ ಸಿದ್ಧಾಂತವೇ ಅಮೆರಿಕಕ್ಕೆ ದೊಡ್ಡ ತಲೆನೋವಾಗಿದೆ. ಬೇರೆ ರಾಷ್ಟ್ರಗಳಂತೆ ಇರಾನ್‌ ಕೂಡ ಎಂದು ತಿಳಿದುಕೊಂಡಿದ್ದೇ ಅಮೆರಿಕ ಮಾಡಿದ ದೊಡ್ಡ ತಪ್ಪು.

1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್ 'ಇಸ್ಲಾಮಿಕ್ ಗಣರಾಜ್ಯ'ವಾಗಿ ಬದಲಾಯಿತು. ಅಲ್ಲಿನ ಆಡಳಿತ ಕೇವಲ ಚುನಾಯಿತ ಸರ್ಕಾರದ ಮೇಲೆ ನಿಂತಿಲ್ಲ. ಅದರ ಅಂತಿಮ ಅಧಿಕಾರ ಸರ್ವೋಚ್ಚ ಧಾರ್ಮಿಕ ನಾಯಕನ ಕೈಯಲ್ಲಿದೆ. ರಾಷ್ಟ್ರಪತಿ, ಸಂಸತ್ತು, ಸಚಿವ ಸಂಪುಟ-ಇವೆಲ್ಲವೂ ಇದ್ದರೂ, ದೇಶದ ಭದ್ರತೆ, ವಿದೇಶಾಂಗ ನೀತಿ, ಅಣು ಕಾರ್ಯಕ್ರಮ ಹಾಗೂ ಪ್ರಮುಖ ಕಾರ್ಯತಂತ್ರದ ನಿರ್ಧಾರಗಳಲ್ಲಿ ಅಂತಿಮ ಸರ್ವೋಚ್ಚ ನಾಯಕರದ್ದೇ.

ಹೀಗಾಗಿ ಅಧ್ಯಕ್ಷರು ಬದಲಾದರೂ ವಿದೇಶಾಂಗ ನೀತಿ ಬದಲಾಗುತ್ತದೆ ಎಂಬ ಲೆಕ್ಕಾಚಾರ ಇರಾನ್‌ನಲ್ಲಿ ನಡೆಯುವುದಿಲ್ಲ. ಹೊಸ ಅಧ್ಯಕ್ಷರು ಅಧಿಕಾರಕ್ಕೆ ಬಂದಾಗಲೆಲ್ಲ ಸಂಬಂಧ ಸುಧಾರಿಸಬಹುದು ಎಂದು ಅಮೆರಿಕ ಭಾವಿಸಿತ್ತು. ಆದರೆ ಅಧ್ಯಕ್ಷರು ಬದಲಾದರೂ, ಇರಾನ್‌ನ ಅಧಿಕಾರದ ಕೇಂದ್ರ ಮತ್ತು ಕಾರ್ಯತಂತ್ರ ಬದಲಾಗಲೇ ಇಲ್ಲ.

ಇರಾನ್‌ನ್ನು ಅರ್ಥಮಾಡಿಕೊಳ್ಳುವಲ್ಲಿ ಅಮೆರಿಕದ ವಿಫಲವಾಗಲು ಮತ್ತೊಂದು ಪ್ರಮುಖ ಕಾರಣ, ಇರಾನ್‌ನ ಆಡಳಿತದೊಂದಿಗೆ ನೇರ ಸಂಪರ್ಕ ಇರದಿರುವುದು. 'ಬ್ರೂಕಿಂಗ್ಸ್ ಇನ್‌ಸ್ಟಿಟ್ಯೂಷನ್‌'ನ ವಿದೇಶಾಂಗ ತಜ್ಞೆ ಸುಜಾನ್ ಮಲೋನಿ ಅವರ ಪ್ರಕಾರ, 'ಮೊದಲ ಸರ್ವೋಚ್ಚ ನಾಯಕ ಆಯತೊಲ್ಲಾ ರುಹೊಲ್ಲಾ ಖೊಮೇನಿ, ನಂತರ ಅಲಿ ಖಮೇನಿ ಅಥವಾ ಈಗಿನ ನಾಯಕತ್ವ-ಯಾರೊಂದಿಗೂ ಅಮೆರಿಕದ ಉನ್ನತ ಅಧಿಕಾರಿಗಳಿಗೆ ನೇರ ರಾಜತಾಂತ್ರಿಕ ಸಂಪರ್ಕ ಬೆಳೆಸುವ ಅವಕಾಶ ದೊರೆತಿಲ್ಲ. ಪರಿಣಾಮವಾಗಿ, ಇರಾನ್‌ನಲ್ಲಿ ನಿರ್ಧಾರಗಳು ಹೇಗೆ ರೂಪುಗೊಳ್ಳುತ್ತವೆ, ಅಧಿಕಾರದ ಚಲಾವಣೆ ಹೇಗೆ ನಡೆಯುತ್ತದೆ ಎನ್ನುವುದನ್ನು ಅಮೆರಿಕ ದೂರದಿಂದಲೇ ಅರ್ಥಮಾಡಿಕೊಳ್ಳಬೇಕಾಗಿದೆ' ಎಂದು ಹೇಳುತ್ತಾರೆ.

ಈಗ ಯುದ್ಧದ ನಂತರ ಧಾರ್ಮಿಕ ಮತ್ತು ಸೇನಾ ನಾಯಕತ್ವದ ಹಿಡಿತ ಮತ್ತಷ್ಟು ಬಲಗೊಂಡಿದ್ದು, ಪರ್ಯಾಯ ಅಧಿಕಾರ ಕೇಂದ್ರದ ಸಾಧ್ಯತೆ ಮತ್ತಷ್ಟು ಕ್ಷೀಣಿಸಿದೆ ಎನ್ನುವುದು ಅವರ ವಿಶ್ಲೇಷಣೆ.

ಇರಾನ್-ಅಮೆರಿಕ ಕದನ ವಿರಾಮ: ಒಪ್ಪಂದಕ್ಕೆ ಬರಲು ತೊಡಕಾಗಿರುವ 5 ಅಂಶಗಳಿವು

ನಡೆಯದ ಬಲ ಪ್ರಯೋಗ

ಬಲಪ್ರಯೋಗ ಅಥವಾ ಒತ್ತಡ ಹೇರಿ ಎದುರಾಳಿಯನ್ನು ಬಗ್ಗಿಸುವುದು ಟ್ರಂಪ್ ಅವರ ವಿದೇಶಾಂಗ ನೀತಿ. ಇರಾನ್ ವಿರುದ್ಧವೂ ಇದೇ ತಂತ್ರ ಅನುಸರಿಸಲಾಯಿತು. ಯುದ್ಧ ಆರಂಭವಾದ ನಂತರ ನಡೆದ ವೈಮಾನಿಕ ದಾಳಿಗಳು, ಹಿರಿಯ ನಾಯಕರ ಹತ್ಯೆ, ಕಠಿಣ ಎಚ್ಚರಿಕೆಗಳು… ಇವೆಲ್ಲವೂ ಇರಾನ್‌ನ ರಾಜಕೀಯ ವ್ಯವಸ್ಥೆಯನ್ನು ಅಲುಗಾಡಿಸಬಹುದು ಎಂದು ಅಮೆರಿಕ ನಿರೀಕ್ಷಿಸಿತ್ತು. ಅಷ್ಟೇ ಆಡಳಿತದ ವಿರುದ್ಧ ಬಂಡಾಯ ಏಳುವಂತೆ ಇರಾನ್‌ ಜನತೆಯನ್ನೂ ಟ್ರಂಪ್ ಉದ್ದೀಪಿಸಿದರು. ಆದರೆ ಎಲ್ಲವೂ ವ್ಯತಿರಿಕ್ತವಾಗಿಯೇ ನಡೆಯಿತು.

ಅಮೆರಿಕದಿಂದ ಪದೇ ಪದೇ ತಪ್ಪು ಅಂದಾಜು

'ಇರಾನ್ ಜೊತೆ ಒಪ್ಪಂದ ಮಾಡಿಕೊಳ್ಳಲು ಅತ್ಯಂತ ಉತ್ಸುಕರಾಗಿದ್ದ ಅಮೆರಿಕ ಅಧ್ಯಕ್ಷರಲ್ಲಿ ಟ್ರಂಪ್ ಒಬ್ಬರು. ಅದೇ ಸಮಯದಲ್ಲಿ, ಇರಾನ್ ವಿರುದ್ಧ ಅತ್ಯಂತ ಕಠಿಣ ಒತ್ತಡ ಮತ್ತು ಬಲಪ್ರಯೋಗದ ಮಾರ್ಗವನ್ನೂ ಅನುಸರಿಸಿದರು. ಆದರೆ ಈ ಎರಡೂ ತಂತ್ರಗಳು ಅವರು ನಿರೀಕ್ಷಿಸಿದ್ದ ಫಲ ನೀಡಲಿಲ್ಲ' ಎಂದು ಮಾಜಿ ಸಿಐಎ ವಿಶ್ಲೇಷಕ ಹಾಗೂ ರಾಷ್ಟ್ರೀಯ ಭದ್ರತಾ ಮಂಡಳಿಯ ಮಾಜಿ ಅಧಿಕಾರಿ ಕೆನ್ನೆತ್ ಪೊಲಾಕ್ ಹೇಳುತ್ತಾರೆ. ಅಂದರೆ ಅವರ ಪ್ರಕಾರ ಇದು ಟ್ರಂಪ್ ಅವರೊಬ್ಬರ ವೈಫಲ್ಯವಲ್ಲ. ಹಲವು ದಶಕಗಳಿಂದ ಅಮೆರಿಕ ಎದುರಿಸುತ್ತಿರುವ ರಾಜತಾಂತ್ರಿಕ ಸವಾಲಿನ ಮತ್ತೊಂದು ಅಧ್ಯಾಯ.

'ಇರಾನ್‌ಗೆ ಅಮೆರಿಕ ಚೆನ್ನಾಗಿ ಅರ್ಥವಾಗುತ್ತದೆ; ಆದರೆ ಅಮೆರಿಕಕ್ಕೆ ಇರಾನ್ ಇನ್ನೂ ಸಂಪೂರ್ಣವಾಗಿ ಅರ್ಥವಾಗಿಲ್ಲ' ಇದು ಪಶ್ಚಿಮ ಏಷ್ಯಾ ರಾಜತಾಂತ್ರಿಕ ತಜ್ಞ ಡೆನ್ನಿಸ್ ರಾಸ್ ಇದನ್ನು ಒಂದೇ ವಾಕ್ಯದಲ್ಲಿ ವಿವರಿಸಿದ್ದು ಹೀಗೆ. ಅವರ ಈ ಮಾತಿನಲ್ಲಿ ಐದು ದಶಕಗಳ ಇತಿಹಾಸ ಅಡಗಿದೆ. ಅಮೆರಿಕವು ಸಾಮಾನ್ಯವಾಗಿ ಶೀಘ್ರ ಫಲಿತಾಂಶ ಕಾಣ ಬಯಸುತ್ತದೆ. ಚುನಾವಣೆಗಳು, ಸಾರ್ವಜನಿಕ ಅಭಿಪ್ರಾಯ ಮತ್ತು ರಾಜಕೀಯ ಒತ್ತಡಗಳ ನಡುವೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವುದು ಅದರ ಆದ್ಯತೆ.

ಆದರೆ ಇರಾನ್‌ನ ಲೆಕ್ಕಾಚಾರ ಬೇರೆ. ಅದು ಆತುರಪಡುವುದಿಲ್ಲ. ಕಾಯುತ್ತದೆ. ಸಮಯವನ್ನೇ ಅಸ್ತ್ರವನ್ನಾಗಿ ಬಳಸುತ್ತದೆ. ದೀರ್ಘಕಾಲದ ಒತ್ತಡವನ್ನೂ ಸಹಿಸಿಕೊಳ್ಳುತ್ತದೆ. ಮಾತುಕತೆಯಲ್ಲಿ ಎದುರಾಳಿಯ ಆತುರವನ್ನೇ ತನ್ನ ಬಲವನ್ನಾಗಿ ಮಾಡಿಕೊಳ್ಳುತ್ತದೆ. ಅದಕ್ಕಾಗಿಯೇ, 'ಈ ಬಾರಿ ಇರಾನ್ ತನ್ನ ನಿಲುವು ಬದಲಾಯಿಸಬಹುದು' ಎಂಬ ನಿರೀಕ್ಷೆ ಅಮೆರಿಕದಲ್ಲಿ ಪದೇ ಪದೇ ಮೂಡಿದರೂ ಇರಾನ್ ತನ್ನ ಮೂಲ ಕಾರ್ಯತಂತ್ರವನ್ನು ಬದಲಾಯಿಸಲಿಲ್ಲ.

ಈ ವ್ಯತ್ಯಾಸವೇ ಅಮೆರಿಕ ಮತ್ತು ಇರಾನ್ ನಡುವಿನ ಸಂಬಂಧವನ್ನು ಇಂದಿಗೂ ಸಂಕೀರ್ಣವಾಗಿಯೇ ಉಳಿಸಿದೆ.

ಮಳೆ ಕೊರತೆ ದಕ್ಷಿಣ ಭಾರತದಲ್ಲಿ ಅಕ್ಕಿ ಬೆಲೆ ಏರಿಕೆ: ಗೃಹ ಬಜೆಟ್‌ಗೆ ಹೊರೆ

ಐವರು ಅಧ್ಯಕ್ಷರು... ಐದು ಪ್ರಯತ್ನಗಳು... ಒಂದು ಪಾಠ

ಡೊನಾಲ್ಡ್ ಟ್ರಂಪ್ ಈಗ ಎದುರಿಸುತ್ತಿರುವ ಸವಾಲು ಹೊಸದೇನಲ್ಲ. ಅಮೆರಿಕದ ಇತ್ತೀಚಿನ ಇತಿಹಾಸವನ್ನು ಹಿಂದಿರುಗಿ ನೋಡಿದರೆ, ಪ್ರತಿಯೊಬ್ಬ ಅಧ್ಯಕ್ಷರೂ ಒಂದಲ್ಲ ಒಂದು ಹಂತದಲ್ಲಿ ಇರಾನ್‌ನೊಂದಿಗೆ 'ಹೊಸ ಆರಂಭ'ಕ್ಕೆ ಮುಂದಾಗಿದ್ದಾರೆ. ಕೆಲವರು ಮಾತುಕತೆಯ ಮೂಲಕ, ಕೆಲವರು ಒತ್ತಡದ ಮೂಲಕ, ಮತ್ತೆ ಕೆಲವರು ಎರಡನ್ನೂ ಒಟ್ಟಿಗೆ ಬಳಸುವ ಮೂಲಕ. ಆದರೆ ಬಹುತೇಕ ಸಂದರ್ಭಗಳಲ್ಲಿ ಅಮೆರಿಕದ ಲೆಕ್ಕಾಚಾರ ತಪ್ಪಿದೆ. ಕಾರಣ ಅಮೆರಿಕ ನೋಡಿದ್ದು ಚುನಾಯಿತ ಸರ್ಕಾರದ ಮುಖ್ಯಸ್ಥರನ್ನೇ ಹೊರತು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸರ್ವೋಚ್ಚ ನಾಯಕನನ್ನು ಅರ್ಥ ಮಾಡಿಕೊಳ್ಳಲೇ ಇಲ್ಲ.

ಮೊದಲ ಪಾಠ: ರಾಷ್ಟ್ರಪತಿ ಎಲ್ಲವನ್ನೂ ನಿರ್ಧರಿಸುವುದಿಲ್ಲ

1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಅಮೆರಿಕ ಮತ್ತು ಇರಾನ್ ನಡುವಿನ ಸಂಬಂಧದಲ್ಲಿ ದೊಡ್ಡ ತಿರುವು ಸಿಕ್ಕಿತು. ಅದೇ ವರ್ಷ ಟೆಹರಾನ್‌ನ ಅಮೆರಿಕ ರಾಯಭಾರ ಕಚೇರಿಯನ್ನು ವಶಪಡಿಸಿಕೊಂಡ ಪ್ರತಿಭಟನಾಕಾರರು 52 ಅಮೆರಿಕನ್ನರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡರು.

ಈ ಬಿಕ್ಕಟ್ಟನ್ನು ಬಗೆಹರಿಸಲು ಅಧ್ಯಕ್ಷ ಜಿಮ್ಮಿ ಕಾರ್ಟರ್ ಆಡಳಿತ ರಹಸ್ಯ ಮಾತುಕತೆ ಆರಂಭಿಸಿತು. ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದ ಇರಾನ್‌ನ ಆಸ್ತಿಯನ್ನು ಬಿಡುಗಡೆ ಮಾಡುವುದು, ಅದರ ಆಂತರಿಕ ವ್ಯವಹಾರಗಳಲ್ಲಿ ಅಮೆರಿಕ ಹಸ್ತಕ್ಷೇಪ ಮಾಡದಿರುವುದು ಸೇರಿದಂತೆ ಹಲವು ವಿಷಯಗಳಲ್ಲಿ ಒಪ್ಪಂದ ಸಾಧ್ಯವಾಗಬಹುದು ಎಂದು ಕಾರ್ಟರ್ ಭಾವಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಇಸ್ಲಾಮಿಕ್ ಕ್ರಾಂತಿಯ ನಾಯಕ ಆಯತೊಲ್ಲಾ ರುಹೊಲ್ಲಾ ಖೊಮೇನಿ ಆ ಪ್ರಸ್ತಾವನೆಯನ್ನು ತಿರಸ್ಕರಿಸಿದರು. ಕಾರ್ಟರ್ ಅವರ ನಿರೀಕ್ಷೆ ಕ್ಷಣಾರ್ಧದಲ್ಲಿ ಭಗ್ನವಾಯಿತು.

ಈ ಘಟನೆ ಅಮೆರಿಕಕ್ಕೆ ಒಂದು ಮಹತ್ವದ ಪಾಠ ಕಲಿಸಿತು. ಇರಾನ್‌ನಲ್ಲಿ ಮಾತುಕತೆ ನಡೆಸುವವರು ಮತ್ತು ಅಂತಿಮ ನಿರ್ಧಾರ ತೆಗೆದುಕೊಳ್ಳುವವರು ಯಾವಾಗಲೂ ಒಬ್ಬರೇ ಆಗಿರುವುದಿಲ್ಲ. ಅಂತಿಮ ತೀರ್ಮಾನ ಸರ್ವೋಚ್ಚ ನಾಯಕರಿಂದಲೇ ಬರುತ್ತದೆ.

ಎರಡನೇ ಪಾಠ: 'ಸುಧಾರಣಾವಾದಿಗಳ' ಮೇಲಿನ ಅತಿಯಾದ ನಂಬಿಕೆ

1980ರ ದಶಕದಲ್ಲಿ ಅಮೆರಿಕ ಮತ್ತೊಂದು ಪ್ರಯತ್ನ ಮಾಡಿತು. ಇರಾನ್‌ನಲ್ಲಿ ಸುಧಾರಣಾವಾದಿ ನಾಯಕರು ಅಧಿಕಾರಕ್ಕೆ ಬಂದರೆ, ಎರಡು ದೇಶಗಳ ನಡುವಿನ ಸಂಬಂಧ ದಾರಿಗೆ ಬರಬಬಹುದು ಎಂದು ಅದು ಭಾವಿಸಿತು. ಈ ನಂಬಿಕೆಯಲ್ಲೇ ರೊನಾಲ್ಡ್ ರೇಗನ್ ಆಡಳಿತ ರಹಸ್ಯವಾಗಿ ಇರಾನ್‌ಗೆ ಶಸ್ತ್ರಾಸ್ತ್ರ ಮಾರಾಟಕ್ಕೆ ಒಪ್ಪಿಕೊಂಡಿತು. ಅದರ ಪ್ರತಿಯಾಗಿ ಲೆಬನಾನ್‌ನಲ್ಲಿ ಬಂಧಿಯಾಗಿದ್ದ ಅಮೆರಿಕನ್ನರನ್ನು ಬಿಡುಗಡೆ ಮಾಡಲಾಗುತ್ತದೆ ಎಂಬ ನಿರೀಕ್ಷೆಯಿತ್ತು.

ಆದರೆ ಈ ರಹಸ್ಯ ವ್ಯವಹಾರವೇ ನಂತರ 'ಇರಾನ್-ಕಾಂಟ್ರಾ' ಹಗರಣವಾಗಿ ಬಯಲಾಯಿತು. ಶಸ್ತ್ರಾಸ್ತ್ರ ಮಾರಾಟದಿಂದ ಬಂದ ಹಣವನ್ನು ಸಂಸತ್‌ನ ಅನುಮತಿಯಿಲ್ಲದೆ ನಿಕರಾಗುವಾದ ಕಾಂಟ್ರಾ ಬಂಡುಕೋರರಿಗೆ ವರ್ಗಾಯಿಸಿದ್ದ ಪ್ರಕರಣ ರೇಗನ್ ಆಡಳಿತಕ್ಕೆ ದೊಡ್ಡ ರಾಜಕೀಯ ಹೊಡೆತ ನೀಡಿತು.

ಇದರೊಂದಿಗೆ ಮತ್ತೊಂದು ಸಂಗತಿಯೂ ಸ್ಪಷ್ಟವಾಯಿತು. ಅಮೆರಿಕ ಭಾವಿಸಿದ್ದಂತೆ ಇರಾನ್‌ನಲ್ಲಿದ್ದ 'ಸುಧಾರಣಾವಾದಿ' ನಾಯಕರು ಅಧಿಕಾರದ ಕೇಂದ್ರವಲ್ಲ. ಮತ್ತೊಮ್ಮೆ ಅಮೆರಿಕದ ಲೆಕ್ಕಾಚಾರ ತಪ್ಪಿತ್ತು.

ಮೂರನೇ ಪಾಠ: ಸ್ನೇಹದ ಮಾತು ಮಾತ್ರ ಸಾಕಾಗುವುದಿಲ್ಲ

1997ರಲ್ಲಿ ಸುಧಾರಣಾವಾದಿ ನಾಯಕ ಮೊಹಮ್ಮದ್ ಖಾತಮಿ ಇರಾನ್ ಅಧ್ಯಕ್ಷರಾದರು. ಅವರು ಅಮೆರಿಕದೊಂದಿಗೆ ಉತ್ತಮ ಸಂಬಂಧ ಬೆಳೆಸುವ ಇಚ್ಛೆ ವ್ಯಕ್ತಪಡಿಸಿದರು. ಇದರಿಂದ ಹೊಸ ಆಶಾಭಾವನೆ ಮೂಡಿತು. ಬಿಲ್ ಕ್ಲಿಂಟನ್ ಆಡಳಿತವೂ ಸೌಹಾರ್ದದ ಹೆಜ್ಜೆ ಇಟ್ಟಿತು. ಇರಾನ್‌ನ ಕೆಲವು ಉತ್ಪನ್ನಗಳ ಮೇಲಿನ ನಿರ್ಬಂಧಗಳನ್ನು ಸಡಿಲಿಸಿತು. 1953ರಲ್ಲಿ ಇರಾನ್ ಸರ್ಕಾರವನ್ನು ಉರುಳಿಸುವಲ್ಲಿ ಸಿಐಎ ಪಾತ್ರವಹಿಸಿದ್ದಕ್ಕಾಗಿ ಅಮೆರಿಕ ವಿಷಾದವನ್ನೂ ವ್ಯಕ್ತಪಡಿಸಿತು.

ಆದರೆ ಈ ಪ್ರಯತ್ನಗಳು ಫಲ ನೀಡಲಿಲ್ಲ. ಸರ್ವೋಚ್ಚ ನಾಯಕ ಅಲಿ ಖಮೇನಿ ಅಮೆರಿಕದೊಂದಿಗೆ ದೀರ್ಘಕಾಲದ ರಾಜಕೀಯ ಸ್ನೇಹಕ್ಕೆ ಅವರು ಒಪ್ಪಲಿಲ್ಲ. ಇದರಿಂದ ಮತ್ತೊಮ್ಮೆ ಒಂದು ಸಂಗತಿ ಸ್ಪಷ್ಟವಾಯಿತು. ಇರಾನ್‌ನಲ್ಲಿ ಅಧ್ಯಕ್ಷರ ನಿಲುವು ಬದಲಾಗಬಹುದು, ಆದರೆ ಅಧಿಕಾರದ ಕೇಂದ್ರ ಬದಲಾಗದಿದ್ದರೆ ಏನೂ ಆಗದು.

ನಾಲ್ಕನೇ ಪಾಠ: ಒಪ್ಪಂದವಾದರೆ ಸ್ನೇಹ ಆಗುವುದಿಲ್ಲ

2015ರಲ್ಲಿ ಅಧ್ಯಕ್ಷ ಬರಾಕ್ ಒಬಾಮಾ ನೇತೃತ್ವದಲ್ಲಿ ಇರಾನ್ ಜೊತೆ ಐತಿಹಾಸಿಕ ಅಣು ಒಪ್ಪಂದ ನಡೆಯಿತು. ಇರಾನ್ ತನ್ನ ಅಣು ಕಾರ್ಯಕ್ರಮಗಳನ್ನು ಮಿತಿಗೊಳಿಸುವುದಾಗಿ ಹೇಳಿತು. ಇರಾನ್ ಮೇಲಿನ ಆರ್ಥಿಕ ನಿರ್ಬಂಧಗಳನ್ನು ಸಡಿಲಿಸಲು ಅಮೆರಿಕ ಸಮ್ಮತಿಸಿತು. ಅಣು ಒಪ್ಪಂದ ಯಶಸ್ವಿಯಾದರೂ, ಎರಡೂ ದೇಶಗಳ ನಡುವೆ ರಾಜಕೀಯ ವಿಶ್ವಾಸ ಬೆಳೆಯಲಿಲ್ಲ. ಅಂದರೆ, ಒಪ್ಪಂದ ಸಾಧ್ಯ. ಆದರೆ ಅದೇ ಶಾಶ್ವತ ಸ್ನೇಹದ ಆರಂಭವಾಗುತ್ತದೆ ಎನ್ನಲು ಸಾಧ್ಯವಿಲ್ಲ ಎನ್ನುವುದನ್ನು ಇದು ತೋರಿಸಿತು.

ಕ್ಷೇತ್ರ ಮರುವಿಂಗಡನೆ ಮಸೂದೆ: ಸಂಖ್ಯಾಬಲದ ಆಟದಲ್ಲಿ ಡಿಎಂಕೆಯ ನಿರ್ಧಾರವೇ ನಿರ್ಣಾಯಕ

ಟ್ರಂಪ್‌ನ ಲೆಕ್ಕಾಚಾರವೂ ಫಲಿಸಲಿಲ್ಲ

ಒಬಾಮಾ ಸರ್ಕಾರ ಮಾಡಿಕೊಂಡಿದ್ದ ಅಣು ಒಪ್ಪಂದದವನ್ನು 2018ರಲ್ಲಿ ಟ್ರಂಪ್ ರದ್ದು ಮಾಡಿದ್ದರು. ಕಠಿಣ ಆರ್ಥಿಕ ನಿರ್ಬಂಧಗಳು ಮತ್ತು ಗರಿಷ್ಠ ಒತ್ತಡ ಹೇರಿದರೆ ಇರಾನ್ ತನ್ನ ನಿಲುವು ಬದಲಾಯಿಸುತ್ತದೆ ಎಂದು ನಂಬಿದರು. ಆದರೆ ಅದು ನಡೆಯಲಿಲ್ಲ. ಬದಲಿಗೆ, ಇರಾನ್ ತನ್ನ ಅಣು ಕಾರ್ಯಕ್ರಮವನ್ನು ಮತ್ತಷ್ಟು ವೇಗಗೊಳಿಸಿತು. ಎರಡೂ ದೇಶಗಳು ನೇರ ಸಂಘರ್ಷದ ಹಾದಿಗೆ ಬಂದವು.

ಇಂದು ಟ್ರಂಪ್ ಮತ್ತೆ ಮಾತುಕತೆಯತ್ತ ಮುಖ ಮಾಡಿದ್ದಾರೆ. ಆದರೆ ಅವರು ಎದುರಿಸುತ್ತಿರುವುದು ಹೊಸ ಸಮಸ್ಯೆಯಲ್ಲ; ಅಮೆರಿಕದ ಹಲವು ಅಧ್ಯಕ್ಷರಿಗೆ ಸವಾಲಾಗಿದ್ದ ಅದೇ ಇರಾನ್‌ನ ರಾಜಕೀಯ ವ್ಯವಸ್ಥೆ

ಯುರೋಪ್ ಪ್ರವೇಶಕ್ಕೆ 50 ಸಾವಿರ ಮಂದಿಯಿಂದ ಜೀವಪಣ: ಸ್ಯೂಟದಲ್ಲಿ ಮಾನವೀಯ ಬಿಕ್ಕಟ್ಟು

ಅಮೆರಿಕದ ತಪ್ಪು ಲೆಕ್ಕಾಚಾರಗಳು

ಐದು ದಶಕಗಳ ಅನುಭವ ಅಮೆರಿಕಕ್ಕೆ ಐದು ಪಾಠಗಳನ್ನು ಕಲಿಸಿದೆ. ಆರ್ಥಿಕ ನಿರ್ಬಂಧಗಳಿಂದ ಆಡಳಿತ ಕುಸಿಯುತ್ತದೆ, ಅಧ್ಯಕ್ಷರು ಬದಲಾದರೆ ವಿದೇಶಾಂಗ ನೀತಿಯೂ ಬದಲಾಗುತ್ತದೆ, ಸೈನಿಕ ಒತ್ತಡ ರಾಜಕೀಯ ಶರಣಾಗತಿಗೆ ದಾರಿ ಮಾಡಿಕೊಡುತ್ತದೆ, ಸುಧಾರಣಾವಾದಿ ನಾಯಕರು ಬಂದರೆ ಸಂಬಂಧ ಸುಧಾರಿಸುತ್ತದೆ ಮತ್ತು ಅಮೆರಿಕದ ತುರ್ತು ಅಗತ್ಯಗಳನ್ನು ಇರಾನ್ ಕೂಡ ಅದೇ ರೀತಿಯಲ್ಲಿ ನೋಡುತ್ತದೆ ಎಂಬ ನಿರೀಕ್ಷೆಗಳು ಮತ್ತೆ ಮತ್ತೆ ಹುಸಿಯಾಗಿವೆ.

ಏಕೆಂದರೆ ಇರಾನ್‌ನ ನಿರ್ಧಾರಗಳು ಚುನಾವಣಾ ರಾಜಕೀಯಕ್ಕಿಂತ ಹೆಚ್ಚಾಗಿ ಅದರ ಕ್ರಾಂತಿಕಾರಿ ಸಿದ್ಧಾಂತ, ಭದ್ರತಾ ದೃಷ್ಟಿಕೋನ ಮತ್ತು ಸರ್ವೋಚ್ಚ ನಾಯಕತ್ವದ ದೀರ್ಘಕಾಲದ ಕಾರ್ಯತಂತ್ರದಿಂದ ರೂಪುಗೊಳ್ಳುತ್ತವೆ.

ಯುದ್ಧದ ಬಳಿಕ ಏನು ಬದಲಾಯಿತು?

ವಿದೇಶಾಂಗ ತಜ್ಞರ ಪ್ರಕಾರ, ಯುದ್ಧವು ಇರಾನ್‌ನ ಆಡಳಿತವನ್ನು ದುರ್ಬಲಗೊಳಿಸಲಿಲ್ಲ. ಬದಲಾಗಿ ಧಾರ್ಮಿಕ ಮತ್ತು ಸೇನಾ ನಾಯಕತ್ವದ ಹಿಡಿತವನ್ನು ಇನ್ನಷ್ಟು ಬಲಪಡಿಸಿತು. ಇದರಿಂದ ಆಂತರಿಕ ರಾಜಕೀಯ ಬದಲಾವಣೆ ಸಂಭವಿಸಬಹುದು ಎಂಬ ಅಮೆರಿಕದ ನಿರೀಕ್ಷೆಯೂ ಮತ್ತಷ್ಟು ಕ್ಷೀಣಿಸಿದೆ.

ಟ್ರಂಪ್‌ಗೆ ಏಕೆ ಗೊಂದಲ?

ಒಂದು ಹಂತದಲ್ಲಿ ಟ್ರಂಪ್ ಇರಾನ್ ನಾಯಕರನ್ನು 'ಹುಚ್ಚರು' ಎಂದರು. ಮತ್ತೊಂದು ಸಂದರ್ಭದಲ್ಲಿ 'ತುಂಬಾ ಬುದ್ಧಿವಂತರು' ಎಂದರು. ಈ ಬದಲಾಗುತ್ತಿರುವ ಅಭಿಪ್ರಾಯಗಳು ಟ್ರಂಪ್ ಅವರ ಮನಸ್ಥಿತಿಗಿಂತ ಹೆಚ್ಚಾಗಿ, ಇರಾನ್‌ನ ರಾಜಕೀಯ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳುವುದು ಎಷ್ಟು ಸಂಕೀರ್ಣ ಎಂಬುದನ್ನು ತೋರಿಸುತ್ತವೆ.

ಜಿಮ್ಮಿ ಕಾರ್ಟರ್‌ನಿಂದ ಡೊನಾಲ್ಡ್ ಟ್ರಂಪ್‌ವರೆಗೆ ಅಮೆರಿಕದ ಪ್ರತಿಯೊಬ್ಬ ಅಧ್ಯಕ್ಷರೂ ವಿಭಿನ್ನ ಮಾರ್ಗಗಳನ್ನು ಅನುಸರಿಸಿದರು. ಮಾತುಕತೆ, ಸ್ನೇಹ, ಆರ್ಥಿಕ ನಿರ್ಬಂಧ ಮತ್ತು ಸೈನಿಕ ಒತ್ತಡದ ಇದ್ಯಾವುದರಿಂದಲೂ ಇರಾನ್‌ನ ಅಧಿಕಾರದ ಕೇಂದ್ರ ಮತ್ತು ಅದರ ಮೂಲ ಕಾರ್ಯತಂತ್ರ ಬದಲಾಗಲಿಲ್ಲ.

ಇರಾನ್ ಜೊತೆ ಒಪ್ಪಂದ ಮಾಡುವುದು ಕಷ್ಟ ಎಂಬುದಲ್ಲ; ಮೊದಲು ಅದರ ಅಧಿಕಾರದ ಸ್ವರೂಪ ಮತ್ತು ರಾಜಕೀಯ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದೇ ಅಮೆರಿಕಕ್ಕೆ ದೊಡ್ಡ ಸವಾಲಾಗಿದೆ. ಐದು ದಶಕಗಳ ಇತಿಹಾಸ ಹೇಳುತ್ತಿರುವುದು ಇದನ್ನೇ.

ಆಧಾರ: ದಿ ನ್ಯೂಯಾರ್ಕ್ ಟೈಮ್ಸ್ ಹಾಗೂ ರಾಯಿಟರ್ಸ್

ಇರಾನ್ ಸಂಘರ್ಷಕ್ಕೂ ಭಾರತದ ಸಮೋಸಾಕ್ಕೂ ನಂಟು: ಯುದ್ಧದ ಹೊರೆ ಯಾರಿಗೆ?
Dailyhunt
Disclaimer: This content has not been generated, created or edited by Dailyhunt. Publisher: Prajavani