Dailyhunt Logo
  • Light mode
    Follow system
    Dark mode
    • Play Story
    • App Story
ಒಂದು ವರ್ಷದಲ್ಲಿ ಮೂರು ಪಟ್ಟು ಆದಾಯ: ಟ್ರಂಪ್ ಸಂಪತ್ತಿನ ಹಿಂದಿನ ಕ್ರಿಪ್ಟೊ ಕಥೆ

ಒಂದು ವರ್ಷದಲ್ಲಿ ಮೂರು ಪಟ್ಟು ಆದಾಯ: ಟ್ರಂಪ್ ಸಂಪತ್ತಿನ ಹಿಂದಿನ ಕ್ರಿಪ್ಟೊ ಕಥೆ

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಒಂದು ವರ್ಷದಲ್ಲಿ ಮೂರು ಪಟ್ಟು ಆದಾಯ: ಟ್ರಂಪ್ ಸಂಪತ್ತಿನ ಹಿಂದಿನ ಕ್ರಿಪ್ಟೊ ಕಥೆ

ಒಂದು ಸಾಲಿನಲ್ಲಿಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಒಂದೇ ವರ್ಷದಲ್ಲಿ ಡೊನಾಲ್ಡ್ ಟ್ರಂಪ್ ಅವರ ಆದಾಯವು ಕ್ರಿಪ್ಟೊ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರಗಳಿಂದ ಮೂರೂವರೆ ಪಟ್ಟು ಹೆಚ್ಚಾಗಿದೆ.

ಪ್ರಮುಖ ಪ್ರಶ್ನೋತ್ತರ


ಟ್ರಂಪ್ ಅವರ ಆದಾಯದಲ್ಲಿ ಭಾರಿ ಏರಿಕೆ ಕಂಡಿದ್ದೇಕೆ?

2024ರಲ್ಲಿ 622 ಮಿಲಿಯನ್ ಡಾಲರ್ ಇದ್ದ ಆದಾಯವು 2025ರಲ್ಲಿ 2.2 ಬಿಲಿಯನ್ ಡಾಲರ್‌ಗೆ ಏರಿದೆ. ಇದಕ್ಕೆ ಕ್ರಿಪ್ಟೊಕರೆನ್ಸಿ ಉದ್ಯಮ ಮತ್ತು 'ವರ್ಲ್ಡ್ ಲಿಬರ್ಟಿ ಫಿನಾನ್ಷಿಯಲ್' ಕಂಪನಿಯ ಯಶಸ್ಸು ಪ್ರಮುಖ ಕಾರಣವಾಗಿದೆ.


ಮೆಮ್‌ಕಾಯಿನ್ ವ್ಯವಹಾರದಿಂದ ಟ್ರಂಪ್ ಎಷ್ಟು ಗಳಿಸಿದ್ದಾರೆ?

ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ ಬಿಡುಗಡೆ ಮಾಡಿದ '$TRUMP' ಎಂಬ ಮೆಮ್‌ಕಾಯಿನ್‌ನಿಂದ ಟ್ರಂಪ್ ಅವರಿಗೆ ಸುಮಾರು 636 ಮಿಲಿಯನ್ ಡಾಲರ್ ಆದಾಯ ಲಭಿಸಿದೆ.


ಪದವಿಯ ಅಧಿಕಾರ ಮತ್ತು ವ್ಯವಹಾರದ ನಡುವೆ ಹಿತಾಸಕ್ತಿ ಸಂಘರ್ಷವಿದೆಯೇ?

ಅಧ್ಯಕ್ಷರಾಗಿ ಟ್ರಂಪ್ ಕೈಗೊಂಡ ಕ್ರಿಪ್ಟೊ ಸ್ನೇಹಿ ನೀತಿಗಳು ಹಾಗೂ ಅವರ ಕುಟುಂಬದ ಕಂಪನಿಗಳ ಲಾಭದ ನಡುವೆ ಸಂಬಂಧವಿರಬಹುದು ಎಂಬ ಅನುಮಾನವನ್ನು ಟೀಕಾಕಾರರು ವ್ಯಕ್ತಪಡಿಸಿದ್ದಾರೆ.


ಟ್ರಂಪ್ ಅವರ ರಿಯಲ್ ಎಸ್ಟೇಟ್ ವ್ಯವಹಾರದ ಮಾದರಿ ಏನು?

ಟ್ರಂಪ್ ಸಂಸ್ಥೆಯು ನೇರವಾಗಿ ಕಟ್ಟಡಗಳನ್ನು ನಿರ್ಮಿಸುವುದಕ್ಕಿಂತ, ತನ್ನ ಬ್ರಾಂಡ್ ಹೆಸರನ್ನು ಬಳಸಲು ಇತರ ಕಂಪನಿಗಳಿಗೆ ಪರವಾನಗಿ ನೀಡಿ, ಅದರ ಮೂಲಕ ಶುಲ್ಕ ಪಡೆಯುವ ಮಾದರಿಯನ್ನು ಅನುಸರಿಸುತ್ತಿದೆ.


ಹಿಂದಿನ ಅಧ್ಯಕ್ಷರು ಆಸ್ತಿ ನಿರ್ವಹಣೆಯನ್ನು ಹೇಗೆ ಮಾಡುತ್ತಿದ್ದರು?

ಅಮೆರಿಕದ ಹಿಂದಿನ ಅಧ್ಯಕ್ಷರು ಅಧಿಕಾರದಲ್ಲಿದ್ದಾಗ ತಮ್ಮ ಖಾಸಗಿ ವ್ಯವಹಾರಗಳಿಂದ ದೂರ ಉಳಿಯಲು ಅಥವಾ ಆಸ್ತಿಗಳನ್ನು ಸ್ವತಂತ್ರ ಟ್ರಸ್ಟ್‌ಗಳಿಗೆ ವಹಿಸಲು ಸಂಪ್ರದಾಯಬದ್ಧ ಕ್ರಮಗಳನ್ನು ಕೈಗೊಳ್ಳುತ್ತಿದ್ದರು.

ಪ್ರಮುಖ ಅಂಕಿಅಂಶಗಳು

2.2 ಬಿಲಿಯನ್ ಡಾಲರ್2025ರ ಒಟ್ಟು ಆದಾಯ622 ಮಿಲಿಯನ್ ಡಾಲರ್2024ರ ಆದಾಯ799 ಮಿಲಿಯನ್ ಡಾಲರ್ವರ್ಲ್ಡ್ ಲಿಬರ್ಟಿ ಫಿನಾನ್ಷಿಯಲ್ ಆದಾಯ636 ಮಿಲಿಯನ್ ಡಾಲರ್ಮೆಮ್‌ಕಾಯಿನ್‌ನಿಂದ ಗಳಿಸಿದ ಆದಾಯ

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಅಧಿಕಾರಕ್ಕೆ ಬಂದು ಒಂದೇ ವರ್ಷದಲ್ಲಿ ಖಾಸಗಿ ವ್ಯವಹಾರಗಳಿಂದ ದಾಖಲೆ ಪ್ರಮಾಣದ ಆದಾಯ ಗಳಿಸಿದ್ದಾರೆ. 2025ರಲ್ಲಿ ಅವರು ಕನಿಷ್ಠ 2.2 ಬಿಲಿಯನ್ ಡಾಲರ್ (ಸುಮಾರು ₹1.89 ಲಕ್ಷ ಕೋಟಿ) ಆದಾಯ ಗಳಿಸಿದ್ದಾರೆ ಎಂದು ಬಹಿರಂಗಗೊಂಡಿರುವ ಹಣಕಾಸು ವರದಿ ಅಮೆರಿಕದಲ್ಲಿ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಎರಡನೇ ಬಾರಿ ಅಧ್ಯಕ್ಷರಾದ ಬಳಿಕ ₹1.89 ಲಕ್ಷ ಕೋಟಿ ಆದಾಯ ಗಳಿಸಿದ ಡೊನಾಲ್ಡ್ ಟ್ರಂಪ್

ಅಮೆರಿಕದ ಇತಿಹಾಸದಲ್ಲಿ ಅಧ್ಯಕ್ಷರು ಅಧಿಕಾರಕ್ಕೆ ಬಂದ ಬಳಿಕ ಅವರ ಆಸ್ತಿ-ಪಾಸ್ತಿ ಕುರಿತು ಪ್ರಶ್ನೆಗಳು ಉದ್ಭವಿಸಿರುವುದು ಇದು ಮೊದಲೇನಲ್ಲ. ಮಾಜಿ ಅಧ್ಯಕ್ಷ ಲಿಂಡನ್ ಬಿ. ಜಾನ್ಸನ್ ಅವರ ಪತ್ನಿಗೆ ರೇಡಿಯೊ ಕೇಂದ್ರವಿತ್ತು. ಜಾರ್ಜ್ ಡಬ್ಲ್ಯು ಬುಷ್ ಅಧ್ಯಕ್ಷರಾಗುವ ಮೊದಲು ತೈಲ ಕಂಪನಿಯ ನಿರ್ದೇಶಕರಾಗಿದ್ದರು. ಮಾಜಿ ಅಧ್ಯಕ್ಷ ಜೋ ಬೈಡನ್ ಅವರ ಪುತ್ರ ಹಂಟರ್ ಬೈಡನ್ ಅವರು ಉಕ್ರೇನ್‌ನ ಅನಿಲ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದ ವಿಚಾರವೂ ದೊಡ್ಡ ರಾಜಕೀಯ ಚರ್ಚೆಯಾಗಿತ್ತು.

ಆದರೆ, ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲೇ ಖಾಸಗಿ ವ್ಯವಹಾರಗಳಿಂದ ಇಷ್ಟು ದೊಡ್ಡ ಪ್ರಮಾಣದ ಆದಾಯ ಗಳಿಸಿದ ಅಮೆರಿಕದ ಮೊದಲ ಅಧ್ಯಕ್ಷ ಎಂದು ಇತಿಹಾಸಕಾರರು ಹೇಳಿದ್ದಾರೆ.

ಅತ್ಯಂತ ಕೆಟ್ಟ ಸಂಗತಿ:ಜನ್ಮಸಿದ್ಧ ಪೌರತ್ವ ಕುರಿತ ಕೋರ್ಟ್ ತೀರ್ಪು ಖಂಡಿಸಿದ ಟ್ರಂಪ್

ಒಂದು ವರ್ಷದಲ್ಲಿ ಮೂರುವರೆ ಪಟ್ಟು ಆದಾಯ

ವರದಿ ಪ್ರಕಾರ, 2025ರಲ್ಲಿ ಟ್ರಂಪ್ ಕನಿಷ್ಠ 2.2 ಬಿಲಿಯನ್ ಡಾಲರ್ (ಸುಮಾರು ₹1.89 ಲಕ್ಷ ಕೋಟಿ) ಆದಾಯ ಗಳಿಸಿದ್ದಾರೆ. 2024ರಲ್ಲಿ ಅವರ ಆದಾಯ 622 ಮಿಲಿಯನ್ ಡಾಲರ್ (ಸುಮಾರು ₹5,350 ಕೋಟಿ) ಇತ್ತು. ಅಂದರೆ, ಒಂದೇ ವರ್ಷದಲ್ಲಿ ಅವರ ಆದಾಯ ಮೂರುವರೆ ಪಟ್ಟು ಹೆಚ್ಚಾಗಿದೆ. ಈ ಏರಿಕೆಗೆ ಪ್ರಮುಖ ಕಾರಣ ಕ್ರಿಪ್ಟೊಕರೆನ್ಸಿ ಉದ್ಯಮ. ಕ್ರಿಪ್ಟೊ ಟ್ರಂಪ್‌ ಅವರ ಅತಿದೊಡ್ಡ ಆದಾಯ ಮೂಲ.

2024ರ ಅಂತ್ಯದಲ್ಲಿ ಟ್ರಂಪ್ ಕುಟುಂಬ ಆರಂಭಿಸಿದ 'ವರ್ಲ್ಡ್ ಲಿಬರ್ಟಿ ಫಿನಾನ್ಷಿಯಲ್' ಅವರಿಗೆ ಭಾರಿ ಆದಾಯ ತಂದುಕೊಟ್ಟಿದೆ. ಹಣಕಾಸು ವರದಿ ಪ್ರಕಾರ, ಈ ಕಂಪನಿಯಿಂದ ಟ್ರಂಪ್ ಅವರಿಗೆ 799 ಮಿಲಿಯನ್ ಡಾಲರ್ (ಸುಮಾರು ₹6,870 ಕೋಟಿ) ಆದಾಯ ಬಂದಿದೆ.

'ವರ್ಡ್ ಲಿಬರ್ಟಿ ಫಿನಾನ್ಷಿಯಲ್' ಕಂಪನಿಯಲ್ಲಿ ಯುಎಇ ಸರ್ಕಾರದ ಬೆಂಬಲ ಹೊಂದಿರುವ ಹೂಡಿಕೆ ಸಂಸ್ಥೆಯೊಂದು ಹೂಡಿಕೆ ಮಾಡಿದ್ದರಿಂದ, ಕಂಪನಿಯ ವ್ಯವಹಾರ ಮತ್ತು ಮೌಲ್ಯ ವೇಗವಾಗಿ ಹೆಚ್ಚಿತು. ಅದರ ಪರಿಣಾಮವಾಗಿ ಟ್ರಂಪ್‌ಗೆ ನೂರಾರು ಮಿಲಿಯನ್ ಡಾಲರ್ ಆದಾಯ ಹರಿದು ಬಂದಿದೆ.

ಇದೇ ವ್ಯವಹಾರವು ಅಮೆರಿಕದಲ್ಲಿ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಏಕೆಂದರೆ, ವಿದೇಶಿ ಸರ್ಕಾರವೊಂದರ ಬೆಂಬಲ ಇರುವ ಕಂಪನಿಯೊಂದು ಅಮೆರಿಕದ ಹಾಲಿ ಅಧ್ಯಕ್ಷರ ಕುಟುಂಬದ ಕಂಪನಿಯಲ್ಲಿ ಹೂಡಿಕೆ ಮಾಡಿರುವುದು ಅಪರೂಪದ ಸಂಗತಿ.

ಡಿಜಿಟಲ್ ತೆರಿಗೆ ಹಾಕುವ ದೇಶಗಳ ಮೇಲೆ 'ಟ್ರಂಪ್' ಸುಂಕ: ಭಾರತದ ಮೇಲೆ ಏನು ಪರಿಣಾಮ?

ಅಧಿಕಾರ ಸ್ವೀಕಾರಕ್ಕೂ ಮುನ್ನ ಹೊಸ ಮೆಮ್‌ಕಾಯಿನ್ ಬಿಡುಗಡೆ

ಎರಡನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿ, ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುವುದಕ್ಕೂ ಕೇವಲ ಮೂರು ದಿನಗಳ ಮೊದಲು '$TRUMP' ಹೆಸರಿನ ಮೆಮ್‌ಕಾಯಿನ್ ಬಿಡುಗಡೆ ಮಾಡಿದರು. ಈ ಮೆಮ್‌ಕಾಯಿನ್‌ನಿಂದಲೇ 636 ಮಿಲಿಯನ್ ಡಾಲರ್ (ಸುಮಾರು ₹5,470 ಕೋಟಿ) ಆದಾಯ ಬಂದಿದೆ ಎಂದು ವರದಿ ಹೇಳಿದೆ. 2024ರಲ್ಲಿ ಟ್ರಂಪ್ ಅವರ ಎಲ್ಲ ವ್ಯವಹಾರಗಳಿಂದ ಒಟ್ಟು 622 ಮಿಲಿಯನ್ ಡಾಲರ್ ಆದಾಯ ಬಂದಿತ್ತು. ಆದರೆ, ಈ ಒಂದೇ ಕ್ರಿಪ್ಟೊ ಕಂಪನಿಯಿಂದ ಅವರಿಗೆ ಸುಮಾರು 799 ಮಿಲಿಯನ್ ಡಾಲರ್ ಆದಾಯ ಲಭಿಸಿದೆ.

ಅಧಿಕಾರಕ್ಕೆ ಬಂದ ಬಳಿಕ ನಡೆದಿದ್ದೇನು?

ಟ್ರಂಪ್ ಎರಡನೇ ಬಾರಿ ಅಧ್ಯಕ್ಷರಾದ ಬಳಿಕ ಅಮೆರಿಕದ ಕ್ರಿಪ್ಟೊಕರೆನ್ಸಿ ಕ್ಷೇತ್ರದಲ್ಲಿ ಒಂದರ ಹಿಂದೆ ಒಂದರಂತೆ ಹಲವು ಪ್ರಮುಖ ಬೆಳವಣಿಗೆಗಳು ನಡೆದವು. ಕ್ರಿಪ್ಟೊ ಉದ್ಯಮದ ಮೇಲೆ ಬದಲಾಗುತ್ತಿರುವ ಸರ್ಕಾರದ ನಿಲುವು ಎಂದು ಇದನ್ನು ತಜ್ಞರು ವಿಶ್ಲೇಷಿಸಿದ್ದಾರೆ.

ಮೊದಲಿಗೆ, ವಿಶ್ವದ ಅತಿದೊಡ್ಡ ಕ್ರಿಪ್ಟೊ ವಿನಿಮಯ ಸಂಸ್ಥೆ ಬೈನಾನ್ಸ್‌ ಸ್ಥಾಪಕ ಚಾಂಗ್‌ಪೆಂಗ್ ಝಾವೋ ಅವರಿಗೆ ಟ್ರಂಪ್ ಕ್ಷಮಾದಾನ ನೀಡಿದರು. ಹಣ ಅಕ್ರಮ ವರ್ಗಾವಣೆ ತಡೆ ನಿಯಮಗಳ ಉಲ್ಲಂಘನೆ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡಿದ್ದ ಝಾವೋ ಅವರಿಗೆ 2024ರಲ್ಲಿ ನಾಲ್ಕು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಟ್ರಂಪ್ ಅವರ ಕ್ಷಮಾದಾನದಿಂದ ಝಾವೋ ಮೇಲಿದ್ದ ಕಾನೂನು ಆಡ್ಡಿ ಇಲ್ಲವಾಯಿತು.

ಬಳಿಕ, ಅಮೆರಿಕದಲ್ಲಿ ಸ್ಟೇಬಲ್‌ಕಾಯಿನ್‌ಗಳ ಬಳಕೆ ಮತ್ತು ನಿಯಂತ್ರಣಕ್ಕೆ ಸ್ಪಷ್ಟ ಕಾನೂನು ಚೌಕಟ್ಟು ಕಲ್ಪಿಸುವ ಜೀನಿಯಸ್ ಕಾಯ್ದೆಗೆ ಟ್ರಂಪ್ ಸಹಿ ಹಾಕಿದರು. ಅಮೆರಿಕದಲ್ಲಿ ಕ್ರಿಪ್ಟೊ ಉದ್ಯಮಕ್ಕೆ ದೊರೆತ ಮಹತ್ವದ ಬೆಂಬಲ ಇದು. ಇದೇ ಅವಧಿಯಲ್ಲಿ ಟ್ರಂಪ್ ಕುಟುಂಬದ ವರ್ಲ್ಡ್ ಲಿಬರ್ಟಿ ಫಿನಾನ್ಷಿಯಲ್ ಕಂಪನಿಯೂ ತನ್ನದೇ 'USD1' ಸ್ಟೇಬಲ್‌ಕಾಯಿನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿತು.

ಈ ನಡುವೆ ಮೆಮ್‌ಕಾಯಿನ್‌ಗಳು ಸಾಮಾನ್ಯವಾಗಿ ಷೇರುಗಳಂತೆ ತನ್ನ ನಿಯಂತ್ರಣ ವ್ಯಾಪ್ತಿಗೆ ಬರುವುದಿಲ್ಲ ಎಂದು ಅಮೆರಿಕದ 'ಯು.ಎಸ್. ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಕಮಿಷನ್' ಹೇಳಿತು. ಈ ನಿರ್ಧಾರದಿಂದ '$TRUMP' ಸೇರಿದಂತೆ ಮೆಮ್‌ಕಾಯಿನ್‌ಗಳ ವಹಿವಾಟಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಯಿತು.

ಹೈದರಾಬಾದ್‌ನ ರಸ್ತೆಗೆ ಟ್ರಂಪ್ ಹೆಸರು: ಧನ್ಯವಾದ ತಿಳಿಸಿದ ಅಮೆರಿಕ ಅಧ್ಯಕ್ಷ

ಕ್ರಿಪ್ಟೊ ಮಾತ್ರವಲ್ಲ…

ಟ್ರಂಪ್ ಅವರ ಆದಾಯ ಕೇವಲ ಕ್ರಿಪ್ಟೊಕರೆನ್ಸಿ ವ್ಯವಹಾರಗಳಿಂದ ಮಾತ್ರ ಬಂದಿಲ್ಲ. ಅವರ ಕುಟುಂಬದ ದಿ ಟ್ರಂಪ್ ಆರ್ಗನೈಸೇಶನ್ ಮೂಲಕ ವಿಶ್ವದ ಹಲವು ದೇಶಗಳಲ್ಲಿ ನಡೆಯುತ್ತಿರುವ ರಿಯಲ್ ಎಸ್ಟೇಟ್ ಯೋಜನೆಗಳಿಂದಲೂ ಭಾರಿ ಆದಾಯ ಹರಿದು ಬಂದಿದೆ. ಈ ಸಂಸ್ಥೆ ಅಮೆರಿಕ ಮಾತ್ರವಲ್ಲದೆ ಸೌದಿ ಅರೇಬಿಯಾ, ವಿಯೆಟ್ನಾಂ, ರೊಮೇನಿಯಾ ಸೇರಿದಂತೆ ಹಲವು ದೇಶಗಳಲ್ಲಿ ಐಷಾರಾಮಿ ಹೋಟೆಲ್‌ಗಳು, ಗಾಲ್ಫ್‌ ಕೋರ್ಸ್‌ಗಳು, ವಸತಿ ಸಮುಚ್ಚಯಗಳು ಮತ್ತು ವಾಣಿಜ್ಯ ಕಟ್ಟಡಗಳ ನಿರ್ಮಾಣ ಯೋಜನೆಗಳಲ್ಲಿ ತೊಡಗಿಸಿಕೊಂಡಿದೆ.

ಆದರೆ, ಈ ಕಟ್ಟಡಗಳನ್ನು ಟ್ರಂಪ್ ಅವರ ಸಂಸ್ಥೆಯೇ ನಿರ್ಮಿಸುವುದಿಲ್ಲ. ಸಾಮಾನ್ಯವಾಗಿ ಸ್ಥಳೀಯ ರಿಯಲ್ ಎಸ್ಟೇಟ್ ಕಂಪನಿಗಳು ಹಣ ಹೂಡಿ ಹೋಟೆಲ್‌, ಗಾಲ್ಫ್‌ ಕೋರ್ಸ್‌, ವಸತಿ ಅಥವಾ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸುತ್ತವೆ. ಬಳಿಕ ಅವುಗಳಿಗೆ 'ಟ್ರಂಪ್' ಎಂಬ ಬ್ರಾಂಡ್ ಹೆಸರನ್ನು ಬಳಸಲು ಟ್ರಂಪ್ ಸಂಸ್ಥೆಯಿಂದ ಅನುಮತಿ ಪಡೆಯುತ್ತವೆ. ಇದಕ್ಕಾಗಿ ಪರವಾನಗಿ ಶುಲ್ಕ ಪಾವತಿಸುತ್ತವೆ. 'ಟ್ರಂಪ್' ಬ್ರಾಂಡ್ ಇದ್ದರೆ ಯೋಜನೆಗೆ ಹೆಚ್ಚು ಖ್ಯಾತಿ, ಮಾರುಕಟ್ಟೆ ಮೌಲ್ಯ ಮತ್ತು ಗ್ರಾಹಕರ ಆಕರ್ಷಣೆ ಸಿಗುತ್ತದೆ ಎಂಬ ಕಾರಣಕ್ಕೆ ಡೆವಲಪರ್‌ಗಳು ಈ ಶುಲ್ಕವನ್ನು ಪಾವತಿಸುತ್ತಾರೆ.

ಇದರ ಜೊತೆಗೆ, ಕೆಲವು ಯೋಜನೆಗಳಲ್ಲಿ ಟ್ರಂಪ್ ಸಂಸ್ಥೆಯೇ ಹೋಟೆಲ್‌, ಗಾಲ್ಫ್‌ ಕೋರ್ಸ್‌ ಅಥವಾ ರೆಸಾರ್ಟ್‌ನ ನಿರ್ವಹಣೆಯ ಹೊಣೆ ವಹಿಸುತ್ತದೆ. ಇದಕ್ಕಾಗಿ ಪ್ರತಿವರ್ಷ ನಿರ್ವಹಣಾ ಶುಲ್ಕ ಪಡೆಯುತ್ತದೆ. ಕೆಲವು ಯೋಜನೆಗಳಲ್ಲಿ ವಾಣಿಜ್ಯ ಪಾಲುದಾರಿಕೆ, ಸಲಹಾ ಸೇವೆಗಳು ಮತ್ತು ಇತರ ವ್ಯವಹಾರಿಕ ಒಪ್ಪಂದಗಳ ಮೂಲಕವೂ ಆದಾಯ ಗಳಿಸುತ್ತದೆ.

ಹೀಗಾಗಿ, ಟ್ರಂಪ್ ಸಂಸ್ಥೆಯು ಎಲ್ಲೆಡೆ ಕಟ್ಟಡಗಳನ್ನು ನಿರ್ಮಿಸಿ ಮಾರಾಟ ಮಾಡುವುದಕ್ಕಿಂತ, ತನ್ನ ಜಾಗತಿಕ ಬ್ರಾಂಡ್ ಹೆಸರನ್ನೇ ಒಂದು ವ್ಯಾಪಾರ ಮಾದರಿಯಾಗಿ ಬಳಸಿಕೊಂಡು ಆದಾಯ ಗಳಿಸುತ್ತಿದೆ. ಹಣಕಾಸು ವರದಿಯ ಪ್ರಕಾರ, 2025ರಲ್ಲಿ ಈ ವಿದೇಶಿ ಯೋಜನೆಗಳಿಂದಲೂ ಟ್ರಂಪ್ ಅವರಿಗೆ ಗಮನಾರ್ಹ ಆದಾಯ ಬಂದಿದೆ.

ಒಂದು ಗುರಿ, ಭಿನ್ನ ಮಾರ್ಗ: ಅಮೆರಿಕ, ಚೀನಾದ ಎ.ಐ ಓಟದಲ್ಲಿ ಗೆಲ್ಲುವವರು ಯಾರು?

ಟ್ರಂಪ್ ಕುಟುಂಬ ಹೇಳುವುದೇನು?

ಟ್ರಂಪ್ ಅಧ್ಯಕ್ಷರಾಗಿರುವ ಅವಧಿಯಲ್ಲಿ ಅವರ ಖಾಸಗಿ ವ್ಯವಹಾರಗಳನ್ನು ಪುತ್ರರಾದ ಎರಿಕ್ ಟ್ರಂಪ್ ಮತ್ತು ಡೊನಾಲ್ಡ್ ಟ್ರಂಪ್ ಜೂನಿಯರ್ ನಿರ್ವಹಿಸುತ್ತಿದ್ದಾರೆ ಎಂದು ಶ್ವೇತಭವನ ಹೇಳಿದೆ. ಅಧ್ಯಕ್ಷರಾಗಿ ತೆಗೆದುಕೊಳ್ಳುವ ನಿರ್ಧಾರಗಳು ಮತ್ತು ಕುಟುಂಬದ ವ್ಯವಹಾರಗಳ ನಡುವೆ ಯಾವುದೇ ಸಂಬಂಧ ಇಲ್ಲ ಎಂದು ಟ್ರಂಪ್ ಆಡಳಿತ ಸ್ಪಷ್ಟಪಡಿಸಿದೆ.

'ಟ್ರಂಪ್ ಅವರು ಅಮೆರಿಕದ ಜನರ ಹಿತಾಸಕ್ತಿಯನ್ನೇ ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಯಾವುದೇ ಹಿತಾಸಕ್ತಿ ಸಂಘರ್ಷ ಇಲ್ಲ' ಎಂದು ಶ್ವೇತಭವನದ ವಕ್ತಾರೆ ಅನ್ನಾ ಕೆಲ್ಲಿ ಹೇಳಿದ್ದಾರೆ.

ಆದರೆ, ಹಣಕಾಸು ವರದಿಯ ಪ್ರಕಾರ, ಟ್ರಂಪ್ ಅವರ ವ್ಯವಹಾರಗಳಿಂದ ಬರುವ ಆದಾಯವನ್ನು ನಿರ್ವಹಿಸಲು ಟ್ರಸ್ಟ್‌ಗಳು ಇದ್ದರೂ, ಅವುಗಳ ಅಂತಿಮ ಫಲಾನುಭವಿ ಟ್ರಂಪ್ ಅವರೇ. ಅಂದರೆ, ದೈನಂದಿನ ವ್ಯವಹಾರಗಳನ್ನು ಪುತ್ರರು ನೋಡಿಕೊಂಡರೂ, ಅದರಿಂದ ಉಂಟಾಗುವ ಆರ್ಥಿಕ ಲಾಭವು ಅಂತಿಮವಾಗಿ ಟ್ರಂಪ್ ಅವರಿಗೇ ಸೇರಲಿದೆ. ಇದೇ ಕಾರಣದಿಂದ ಟ್ರಂಪ್ ಅವರ ಸರ್ಕಾರಿ ನಿರ್ಧಾರಗಳು ಮತ್ತು ಕುಟುಂಬದ ವ್ಯವಹಾರಗಳ ನಡುವೆ ಹಿತಾಸಕ್ತಿ ಸಂಘರ್ಷದ ಪ್ರಶ್ನೆಯನ್ನು ಟೀಕಾಕಾರರು ಎತ್ತಿದ್ದಾರೆ.

ತಜ್ಞರು ಹೇಳುವುದೇನು?

ಟ್ರಂಪ್ ಅವರ ಆದಾಯ ಮತ್ತು ವ್ಯವಹಾರಗಳ ಪ್ರಮಾಣವು ಅಮೆರಿಕದ ಅಧ್ಯಕ್ಷೀಯ ಇತಿಹಾಸದಲ್ಲೇ ಅಪರೂಪದ ಬೆಳವಣಿಗೆಯಾಗಿದೆ ಎಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‌'ಕಳೆದ 250 ವರ್ಷಗಳ ಅಮೆರಿಕದ ಅಧ್ಯಕ್ಷೀಯ ಇತಿಹಾಸದಲ್ಲಿ ಅಧಿಕಾರದಲ್ಲಿರುವ ಅಧ್ಯಕ್ಷರೊಬ್ಬರು ತಮ್ಮ ಖಾಸಗಿ ವ್ಯವಹಾರಗಳಿಂದ ಇಷ್ಟು ದೊಡ್ಡ ಪ್ರಮಾಣದ ಆದಾಯ ಗಳಿಸಿರುವ ಉದಾಹರಣೆ ಇಲ್ಲ' ಎಂದು ಅಧ್ಯಕ್ಷರ ಸಂಪತ್ತು ಮತ್ತು ತೆರಿಗೆ ಇತಿಹಾಸವನ್ನು ಅಧ್ಯಯನ ಮಾಡಿದ ತಜ್ಞೆ ಮೆಗನ್ ಗೋರ್ಮನ್ ಹೇಳಿದ್ದಾರೆ.

‌'ಈ ಹಿಂದೆ ಅಧ್ಯಕ್ಷರು ತಮ್ಮ ವೈಯಕ್ತಿಕ ವ್ಯವಹಾರಗಳು ಮತ್ತು ಅಧ್ಯಕ್ಷೀಯ ಹುದ್ದೆಯ ನಡುವೆ ಸ್ಪಷ್ಟ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಅಧಿಕಾರದಲ್ಲಿರುವಾಗ ಖಾಸಗಿ ವ್ಯವಹಾರಗಳಿಂದ ದೂರ ಉಳಿಯುವುದು ಅಥವಾ ಅವುಗಳ ನಿರ್ವಹಣೆಯನ್ನು ಸಂಪೂರ್ಣವಾಗಿ ಇತರರಿಗೆ ವಹಿಸುವುದು ಸಾಮಾನ್ಯ ಪದ್ಧತಿಯಾಗಿತ್ತು ಎಂದು' ಅಮೆರಿಕ ಅಧ್ಯಕ್ಷರ ಇತಿಹಾಸವನ್ನು ತಿಳಿದಿರುವ ಲಿಂಡ್ಸೆ ಚೆರ್‌ವಿನ್‌ಸ್ಕಿ ಹೇಳಿದ್ದಾರೆ.

ಇದೇ ಅಭಿಪ್ರಾಯವನ್ನು ಅಧ್ಯಕ್ಷೀಯ ಇತಿಹಾಸಕಾರ ಜೆಫ್ರಿ ಎಂಗೆಲ್ ಕೂಡ ವ್ಯಕ್ತಪಡಿಸಿದ್ದಾರೆ. 'ಅಧ್ಯಕ್ಷರು ತೆಗೆದುಕೊಳ್ಳುವ ನಿರ್ಧಾರಗಳು ಸಾರ್ವಜನಿಕ ಹಿತಾಸಕ್ತಿಯಿಂದಲೇ ಪ್ರೇರಿತವಾಗಿವೆ ಎಂಬ ವಿಶ್ವಾಸ ಜನರಲ್ಲಿ ಉಳಿಯಬೇಕು. ಅವರ ಖಾಸಗಿ ವ್ಯವಹಾರಗಳಿಗೆ ಅನುಕೂಲವಾಗುವಂತೆ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂಬ ಅನುಮಾನಕ್ಕೂ ಅವಕಾಶ ನೀಡದಿರುವುದು ಅಮೆರಿಕದ ರಾಜಕೀಯ ಸಂಪ್ರದಾಯವಾಗಿತ್ತು' ಎಂದು ಹೇಳಿದ್ದಾರೆ.

OpenAI vs Anthropic: ಎ.ಐ ದಿಗ್ಗಜರ ಸಮರಕ್ಕೆ ಭಾರತವೇ ಅಖಾಡ, ಯಾಕಿಷ್ಟು ಮುನಿಸು?

ಹಿಂದಿನ ಅಧ್ಯಕ್ಷರು ಏನು ಮಾಡಿದ್ದರು?

ಅಮೆರಿಕದಲ್ಲಿ ಅಧ್ಯಕ್ಷರಾಗುವವರು ತಮ್ಮ ಖಾಸಗಿ ವ್ಯವಹಾರಗಳು ಮತ್ತು ಸಾರ್ವಜನಿಕ ಹುದ್ದೆಯ ನಡುವೆ ಸ್ಪಷ್ಟ ಅಂತರ ಕಾಯ್ದುಕೊಳ್ಳುವುದು ಹಲವು ದಶಕಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಹಿತಾಸಕ್ತಿ ಸಂಘರ್ಷದ ಆರೋಪಗಳು ಬರದಂತೆ ಹಲವು ಅಧ್ಯಕ್ಷರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರು.

ಉದಾಹರಣೆಗೆ, ಜಿಮ್ಮಿ ಕಾರ್ಟರ್ ಅಧ್ಯಕ್ಷರಾದ ಬಳಿಕ ತಮ್ಮ ಕುಟುಂಬದ ಕಡಲೆಕಾಯಿ ತೋಟದ ನಿರ್ವಹಣೆಯನ್ನು ಸ್ವತಂತ್ರ ಟ್ರಸ್ಟ್‌ಗೆ ವಹಿಸಿದ್ದರು. ವ್ಯವಹಾರದ ನಿರ್ಧಾರಗಳಲ್ಲಿ ತಾವು ಯಾವುದೇ ಪಾತ್ರ ವಹಿಸುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಂಡಿದ್ದರು.

ಜಾರ್ಜ್ ಡಬ್ಲ್ಯು ಬುಷ್ ಅಧ್ಯಕ್ಷರಾಗುವ ಮೊದಲು ಟೆಕ್ಸಾಸ್ ರೇಂಜರ್ಸ್ ಬೇಸ್‌ಬಾಲ್ ತಂಡದಲ್ಲಿದ್ದ ತಮ್ಮ ಪಾಲನ್ನು ಮಾರಾಟ ಮಾಡಿದ್ದರು. ಇದರಿಂದ ಅಧ್ಯಕ್ಷೀಯ ನಿರ್ಧಾರಗಳು ತಮ್ಮ ಖಾಸಗಿ ಹೂಡಿಕೆಗೆ ಅನುಕೂಲವಾಗುತ್ತಿವೆ ಎಂಬ ಅನುಮಾನಕ್ಕೆ ಅವಕಾಶವಿರಲಿಲ್ಲ.

ಮಾಜಿ ಅಧ್ಯಕ್ಷ ವಾರನ್ ಜಿ. ಹಾರ್ಡಿಂಗ್ ಅವರ ಕುಟುಂಬದ ಒಡೆತನದ ಪತ್ರಿಕೆ ಕುರಿತು ಪ್ರಶ್ನೆಗಳು ಎದ್ದಾಗ, ಅದನ್ನು ಮಾರಾಟ ಮಾಡಲು ನಿರ್ಧರಿಸಿದ್ದರು.

ಚರ್ಚೆ ಏಕೆ?

ಟ್ರಂಪ್ ಅವರ ಹಣಕಾಸು ವರದಿಯಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿದೆ ಎಂದು ಹೇಳಲಾಗಿಲ್ಲ. ಅಧ್ಯಕ್ಷರು ತಮ್ಮ ಆಸ್ತಿ ಮತ್ತು ಆದಾಯದ ವಿವರಗಳನ್ನು ಬಹಿರಂಗಪಡಿಸುವುದು ಅಮೆರಿಕದ ಕಾನೂನು ಪ್ರಕಾರ ಕಡ್ಡಾಯವಾಗಿದೆ. ಈ ವರದಿಯೂ ಅದೇ ಪ್ರಕ್ರಿಯೆಯ ಭಾಗವಾಗಿದೆ.

ಆದರೆ, ಅಧ್ಯಕ್ಷರಾಗಿ ಅಧಿಕಾರದಲ್ಲಿದ್ದ ಅವಧಿಯಲ್ಲೇ ಟ್ರಂಪ್ ಅವರ ಕ್ರಿಪ್ಟೊ, ರಿಯಲ್ ಎಸ್ಟೇಟ್ ಮತ್ತು ಇತರ ಖಾಸಗಿ ವ್ಯವಹಾರಗಳಿಂದ ಆದಾಯ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂಬುದನ್ನು ಈ ವರದಿ ತೋರಿಸಿದೆ.

ಅದೇ ಸಮಯದಲ್ಲಿ ಕ್ರಿಪ್ಟೊ ಕ್ಷೇತ್ರಕ್ಕೆ ಅನುಕೂಲವಾಗುವ ಹಲವು ಸರ್ಕಾರಿ ಕ್ರಮಗಳನ್ನು ಟ್ರಂಪ್ ಆಡಳಿತ ಕೈಗೊಂಡಿರುವುದು ಚರ್ಚೆಗೆ ಕಾರಣವಾಗಿದೆ. ಈ ನೀತಿಗಳು ಕೇವಲ ಸಾರ್ವಜನಿಕ ಹಿತಾಸಕ್ತಿಗಾಗಿ ಕೈಗೊಳ್ಳಲಾಗಿತ್ತೇ ಅಥವಾ ಟ್ರಂಪ್ ಕುಟುಂಬದ ವ್ಯವಹಾರಗಳಿಗೂ ಪರೋಕ್ಷವಾಗಿ ಲಾಭವಾಗಿದೆಯೇ ಎಂಬ ಪ್ರಶ್ನೆಯನ್ನು ಪ್ರತಿಪಕ್ಷಗಳು, ಟೀಕಾಕಾರರು ಎತ್ತಿದ್ದಾರೆ.

ಇನ್ನೊಂದೆಡೆ, ಯಾವುದೇ ಹಿತಾಸಕ್ತಿ ಸಂಘರ್ಷ ಇಲ್ಲ ಎಂದು ಟ್ರಂಪ್ ಆಡಳಿತ ಸ್ಪಷ್ಟವಾಗಿ ಹೇಳಿದೆ. ಅಧ್ಯಕ್ಷರ ನಿರ್ಧಾರಗಳು ಸಂಪೂರ್ಣವಾಗಿ ಅಮೆರಿಕದ ಜನರ ಹಿತಾಸಕ್ತಿಯನ್ನೇ ಗಮನದಲ್ಲಿಟ್ಟುಕೊಂಡು ತೆಗೆದುಕೊಳ್ಳಲಾಗಿದೆ ಎಂದು ಶ್ವೇತಭವನ ಹೇಳಿದೆ.

ಹೀಗಾಗಿ, ಟ್ರಂಪ್ ಎಷ್ಟು ಹಣ ಗಳಿಸಿದರು ಎಂಬುದಕ್ಕಿಂತ, ಅಧ್ಯಕ್ಷರಾಗಿ ತೆಗೆದುಕೊಂಡ ನಿರ್ಧಾರಗಳಿಂದ ಅವರ ಕುಟುಂಬದ ವ್ಯವಹಾರಗಳಿಗೆ ಲಾಭವಾಗಿದೆಯೇ ಎಂಬ ಪ್ರಶ್ನೆಯೇ ಈಗ ಅಮೆರಿಕದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ.

ಆಧಾರ: ಅಮೆರಿಕ ಸರ್ಕಾರದ ಹಣಕಾಸು ಬಹಿರಂಗ ವರದಿ, ದಿ ನ್ಯೂಯಾರ್ಕ್ ಟೈಮ್ಸ್, ರಾಯಿಟರ್ಸ್, ಬ್ಲೂಮ್‌ಬರ್ಗ್, ಬಿಬಿಸಿ ನ್ಯೂಸ್, ಸಿಎನ್‌ಬಿಸಿ ಹಾಗೂ ಶ್ವೇತಭವನ

ಬಾಹ್ಯಾಕಾಶದಲ್ಲಿ ಡೇಟಾ ಸೆಂಟರ್‌ಗಳು! ಏನಿದು ಮಸ್ಕ್‌ರ 'ಸ್ಟಾರ್‌ಮೈಂಡ್' ಯೋಜನೆ?ಯುರೋಪ್‌ನಲ್ಲಿ ಉರಿ ಬಿಸಿಲು, ಸಾವಿರಾರು ಮಂದಿ ಸಾವು: ಏನಿದು 'ಹೀಟ್ ಡೋಮ್'?
Dailyhunt
Disclaimer: This content has not been generated, created or edited by Dailyhunt. Publisher: Prajavani