Dailyhunt Logo
  • Light mode
    Follow system
    Dark mode
    • Play Story
    • App Story
ಬಾಹ್ಯಾಕಾಶದಲ್ಲಿ ಡೇಟಾ ಸೆಂಟರ್‌ಗಳು!  ಏನಿದು ಮಸ್ಕ್‌ರ 'ಸ್ಟಾರ್‌ಮೈಂಡ್' ಯೋಜನೆ?

ಬಾಹ್ಯಾಕಾಶದಲ್ಲಿ ಡೇಟಾ ಸೆಂಟರ್‌ಗಳು! ಏನಿದು ಮಸ್ಕ್‌ರ 'ಸ್ಟಾರ್‌ಮೈಂಡ್' ಯೋಜನೆ?

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಬಾಹ್ಯಾಕಾಶದಲ್ಲಿ ಡೇಟಾ ಸೆಂಟರ್‌ಗಳು! ಏನಿದು ಮಸ್ಕ್‌ರ 'ಸ್ಟಾರ್‌ಮೈಂಡ್' ಯೋಜನೆ?

ಒಂದು ಸಾಲಿನಲ್ಲಿಇಲಾನ್ ಮಸ್ಕ್ ಅವರ ಸ್ಟಾರ್‌ಮೈಂಡ್ ಯೋಜನೆಯು ಎ.ಐ ಡೇಟಾ ಸೆಂಟರ್‌ಗಳ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಬಾಹ್ಯಾಕಾಶ ಆಧಾರಿತ ಕಂಪ್ಯೂಟಿಂಗ್ ವ್ಯವಸ್ಥೆಯನ್ನು ನಿರ್ಮಿಸುವ ಮಹತ್ವಾಕಾಂಕ್ಷಿ ಕಲ್ಪನೆಯಾಗಿದೆ.

ಪ್ರಮುಖ ಪ್ರಶ್ನೋತ್ತರ


ಏನಿದು ಸ್ಟಾರ್‌ಮೈಂಡ್ ಯೋಜನೆ?

ಎ.ಐ ಸೇವೆಗಳಿಗೆ ಬೇಕಾಗುವ ಅಗಾಧ ವಿದ್ಯುತ್ ಬೇಡಿಕೆಯನ್ನು ಕಡಿಮೆ ಮಾಡಲು, ಡೇಟಾ ಸೆಂಟರ್‌ಗಳ ಒಂದು ಭಾಗವನ್ನು ಬಾಹ್ಯಾಕಾಶಕ್ಕೆ ಸ್ಥಳಾಂತರಿಸಿ ಸೌರಶಕ್ತಿಯ ಮೂಲಕ ಕಂಪ್ಯೂಟಿಂಗ್ ಕಾರ್ಯಗಳನ್ನು ನಡೆಸುವ ಯೋಜನೆಯೇ ಸ್ಟಾರ್‌ಮೈಂಡ್.


ಡೇಟಾ ಸೆಂಟರ್‌ಗಳಿಗೆ ಬಾಹ್ಯಾಕಾಶವೇ ಏಕೆ ಬೇಕು?

ಭೂಮಿಯ ಮೇಲಿನ ಡೇಟಾ ಸೆಂಟರ್‌ಗಳಿಗೆ ಹೆಚ್ಚಿನ ಪ್ರಮಾಣದ ವಿದ್ಯುತ್ ಮತ್ತು ಶೀತಲೀಕರಣದ ಅಗತ್ಯವಿದೆ. ಬಾಹ್ಯಾಕಾಶದಲ್ಲಿ ಸೂರ್ಯನ ಬೆಳಕು ನಿರಂತರವಾಗಿ ಲಭ್ಯವಿರುವುದರಿಂದ, ಅಲ್ಲಿಯೇ ವಿದ್ಯುತ್ ಉತ್ಪಾದಿಸಿ ಎ.ಐ ಪ್ರೊಸೆಸರ್‌ಗಳನ್ನು ಚಾಲನೆ ಮಾಡಬಹುದು.


ಈ ವ್ಯವಸ್ಥೆಯು ಸಮರ್ಥವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ?

ಬಾಹ್ಯಾಕಾಶದಲ್ಲಿರುವ ವಿಶೇಷ ಉಪಗ್ರಹಗಳಲ್ಲಿ ಎ.ಐ ಪ್ರೊಸೆಸರ್ ಮತ್ತು ಬೃಹತ್ ಸೌರ ಫಲಕಗಳನ್ನು ಅಳವಡಿಸಲಾಗುತ್ತದೆ. ಲೇಸರ್ ಸಂವಹನ ವ್ಯವಸ್ಥೆಯ ಮೂಲಕ ಭೂಮಿಯ ಮೇಲಿನ ದತ್ತಾಂಶಗಳನ್ನು ಪಡೆದು, ಕಕ್ಷೆಯಲ್ಲಿಯೇ ಲೆಕ್ಕಾಚಾರ ಮಾಡಿ ಉತ್ತರಗಳನ್ನು ಹಿಂತಿರುಗಿಸಲಾಗುತ್ತದೆ.


ಈ ಯೋಜನೆಯ ಮುಂದಿರುವ ಪ್ರಮುಖ ಸವಾಲುಗಳು ಯಾವುವು?

ಬಾಹ್ಯಾಕಾಶದಲ್ಲಿ ಉತ್ಪತ್ತಿಯಾಗುವ ಶಾಖವನ್ನು ಹೊರಹಾಕುವುದು, ದತ್ತಾಂಶ ವಿನಿಮಯದಲ್ಲಿನ ತಾಂತ್ರಿಕ ವಿಳಂಬ ಮತ್ತು ಹಾರ್ಡ್‌ವೇರ್ ದೋಷಗಳನ್ನು ಸರಿಪಡಿಸುವುದು ಈ ಯೋಜನೆಯ ಮುಖ್ಯ ಎಂಜಿನಿಯರಿಂಗ್ ಸವಾಲುಗಳಾಗಿವೆ.


ಈ ಯೋಜನೆ ಯಾವಾಗ ಕಾರ್ಯರೂಪಕ್ಕೆ ಬರಲಿದೆ?

ಇದು ಸದ್ಯಕ್ಕೆ ಅಭಿವೃದ್ಧಿ ಹಾಗೂ ಪರಿಕಲ್ಪನೆ ಹಂತದಲ್ಲಿದೆ. ಸ್ಪೇಸ್‌ಎಕ್ಸ್ 2027ರ ಅಂತ್ಯದ ವೇಳೆಗೆ ಸುಮಾರು ಒಂದು ಗಿಗಾವ್ಯಾಟ್ ಬಾಹ್ಯಾಕಾಶ ಆಧಾರಿತ ಕಂಪ್ಯೂಟಿಂಗ್ ಸಾಮರ್ಥ್ಯವನ್ನು ನಿರ್ಮಿಸುವ ಗುರಿ ಹೊಂದಿದೆ.

ಪ್ರಮುಖ ಅಂಕಿಅಂಶಗಳು

ಶೇ 1 ರಿಂದ 2ಡೇಟಾ ಸೆಂಟರ್‌ಗಳ ಜಾಗತಿಕ ವಿದ್ಯುತ್ ಬಳಕೆ70 ಮೀಟರ್ಸೌರ ಫಲಕಗಳ ಉದ್ದಒಂದು ಗಿಗಾವ್ಯಾಟ್ಗುರಿಯಾಗಿಟ್ಟುಕೊಂಡಿರುವ ಕಂಪ್ಯೂಟಿಂಗ್ ಸಾಮರ್ಥ್ಯ11 ಮಿಲಿಯನ್ ಚದರ ಅಡಿಉತ್ಪಾದನಾ ಘಟಕದ ವಿಸ್ತೀರ್ಣ2027ಉತ್ಪಾದನೆ ಆರಂಭಿಸುವ ಗುರಿಯ ವರ್ಷ

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ನೀವು ಚಾಟ್‌ಜಿಪಿಟಿ, ಕ್ಲಾಡ್, ಜೆಮಿನಿ, ಕೋಪೈಲಟ್ ಅಥವಾ ಪರ್‌ಪ್ಲೆಕ್ಸಿಟಿ ಮುಂತಾದ ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ಗೆ ಒಂದು ಪ್ರಶ್ನೆ ಕೇಳಿದಾಗ, ಕೆಲವೇ ಸೆಕೆಂಡುಗಳಲ್ಲಿ ಉತ್ತರ ನಿಮ್ಮ ಪರದೆಯ ಮೇಲೆ ಕಾಣಿಸುತ್ತದೆ. ಆದರೆ ಆ ಕೆಲವೇ ಸೆಕೆಂಡುಗಳಲ್ಲಿ ನಡೆಯುವ ಪ್ರಕ್ರಿಯೆ ಬಹಳ ದೊಡ್ಡದು ಮತ್ತು ಸಂಕೀರ್ಣವಾದುದು.

ಯುರೋಪ್‌ನಲ್ಲಿ ಉರಿ ಬಿಸಿಲು, ಸಾವಿರಾರು ಮಂದಿ ಸಾವು: ಏನಿದು 'ಹೀಟ್ ಡೋಮ್'?

ನೀವು ಟೈಪ್ ಮಾಡಿದ ಪ್ರಶ್ನೆ ಮೊದಲು ಇಂಟರ್ನೆಟ್ ಮೂಲಕ ಸಾವಿರಾರು ಸರ್ವರ್‌ಗಳು ಮತ್ತು ಅತ್ಯಾಧುನಿಕ ಎ.ಐ ಚಿಪ್‌ಗಳನ್ನು ಹೊಂದಿರುವ ದೊಡ್ಡ ಡೇಟಾ ಸೆಂಟರ್‌ಗೆ ತಲುಪುತ್ತದೆ. ಅಲ್ಲಿನ ಕಂಪ್ಯೂಟರ್‌ಗಳು ನಿಮ್ಮ ಪ್ರಶ್ನೆಯನ್ನು ವಿಶ್ಲೇಷಿಸಿ, ಅಗತ್ಯ ಲೆಕ್ಕಾಚಾರಗಳನ್ನು ನಡೆಸಿ, ಉತ್ತರವನ್ನು ಮತ್ತೆ ನಿಮ್ಮ ಸಾಧನಕ್ಕೆ ಕಳುಹಿಸುತ್ತವೆ. ಈ ಪ್ರಕ್ರಿಯೆ ಸಾಮಾನ್ಯವಾಗಿ ಒಂದು ಅಥವಾ ಎರಡು ಸೆಕೆಂಡುಗಳಲ್ಲಿ ಪೂರ್ಣಗೊಳ್ಳುತ್ತದೆ.

ಆದರೆ ಎ.ಐ ಸೇವೆಗಳ ಬಳಕೆ ಹೆಚ್ಚಾಗುತ್ತಿದ್ದಂತೆ, ಈ ಡೇಟಾ ಸೆಂಟರ್‌ಗಳ ಮೇಲಿನ ಒತ್ತಡವೂ ವೇಗವಾಗಿ ಹೆಚ್ಚುತ್ತಿದೆ. ಅವುಗಳಿಗೆ ಅಪಾರ ಪ್ರಮಾಣದ ವಿದ್ಯುತ್, ನೀರು, ಭೂಮಿ ಮತ್ತು ಶೀತಲೀಕರಣ ವ್ಯವಸ್ಥೆಗಳ ಅಗತ್ಯವಿದೆ.ಈ ಸಮಸ್ಯೆಗೆ ವಿಭಿನ್ನ ಪರಿಹಾರವನ್ನು ಕಂಡು ಹಿಡಿಯುವುದಾಗಿ ವಿಶ್ವದ ಅತಿ ಶ್ರೀಮಂತ ಉದ್ಯಮಿ, ಸ್ಪೇಸ್‌ಎಕ್ಸ್ ಮತ್ತು xAI ಸಂಸ್ಥೆಗಳ ಮುಖ್ಯಸ್ಥ ಇಲಾನ್ ಮಸ್ಕ್ ಹೇಳಿದ್ದಾರೆ. ಅದೇ ಸ್ಟಾರ್‌ಮೈಂಡ್! ಅದರ ಬಗ್ಗೆ ಸುಲಭವಾಗಿ ಅರ್ಥ ಮಾಡಿಕೊಳ್ಳಬೇಕಾದರೆ, ಕೆಲವೊಂದು ವಿಷಯಗಳ ಬಗ್ಗೆ ಮೊದಲು ತಿಳಿದುಕೊಳ್ಳಬೇಕು.

ಅಮೆರಿಕ-ಇರಾನ್ ಒಪ್ಪಂದದ ಹಿಂದಿನ ನಾಟಕೀಯ ಕ್ಷಣಗಳು: ಕೊನೆಯವರೆಗೂ ನಡೆದ ಹಗ್ಗಜಗ್ಗಾಟ

ಡೇಟಾ ಸೆಂಟರ್‌ಗಳು ಏಕೆ ಮುಖ್ಯ?

ಎ.ಐ ಸೇವೆಗಳ ಬೆನ್ನೆಲುಬೇ ಡೇಟಾ ಸೆಂಟರ್‌ಗಳು. ಸಾಮಾನ್ಯ ವೆಬ್‌ಸೈಟ್‌ಗಳನ್ನು ನಿರ್ವಹಿಸಲು ಬೇಕಾಗುವ ಕಂಪ್ಯೂಟಿಂಗ್ ಶಕ್ತಿಗಿಂತ, ಎ.ಐ ವ್ಯವಸ್ಥೆಗಳಿಗೆ ಹಲವು ಪಟ್ಟು ಹೆಚ್ಚಿನ ಸಾಮರ್ಥ್ಯ ಬೇಕಾಗುತ್ತದೆ. ದೊಡ್ಡ ಭಾಷಾ ಮಾದರಿಗಳ ಲಕ್ಷಾಂತರ ಪ್ರಶ್ನೆಗಳಿಗೆ ಉತ್ತರಿಸಲು ಸಾವಿರಾರು ಜಿಪಿಯು ಚಿಪ್‌ಗಳನ್ನು ಒಂದೇ ಸಮಯದಲ್ಲಿ ಬಳಸುತ್ತವೆ.

ಈ ಚಿಪ್‌ಗಳು ನಿರಂತರವಾಗಿ ಕಾರ್ಯನಿರ್ವಹಿಸುವುದರಿಂದ ಹೆಚ್ಚಿನ ವಿದ್ಯುತ್ ಬೇಕು. ಇದರಿಂದ ಅಪಾರ ಪ್ರಮಾಣದ ಶಾಖ ಉತ್ಪಾದನೆಯಾಗುತ್ತದೆ. ಆ ಶಾಖವನ್ನು ನಿಯಂತ್ರಿಸಲು ದೊಡ್ಡ ಪ್ರಮಾಣದ ಶೀತಲೀಕರಣ ವ್ಯವಸ್ಥೆ ಅಗತ್ಯ.

ಅಂತರರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) 2024ರಲ್ಲಿ ಪ್ರಕಟಿಸಿದ ವರದಿಯ ಪ್ರಕಾರ, ಡೇಟಾ ಸೆಂಟರ್‌ಗಳು ಈಗಾಗಲೇ ಜಾಗತಿಕ ವಿದ್ಯುತ್ ಬಳಕೆಯ ಸುಮಾರು ಶೇ 1 ರಿಂದ 2 ಪಾಲನ್ನು ಹೊಂದಿವೆ. ಎ.ಐ ಬಳಕೆ ಹೆಚ್ಚಾಗುತ್ತಿದ್ದಂತೆ ಈ ಬೇಡಿಕೆಯೂ ಇನ್ನಷ್ಟು ಏರಲಿದೆ ಎಂದು ಸಂಸ್ಥೆ ಅಂದಾಜಿಸಿದೆ.

ದುಬೈನಲ್ಲಿ ವಜ್ರಾಭರಣ ಯಾಕೆ ಅಗ್ಗ? ಭಾರತೀಯರು ಅಲ್ಲಿಯೇ ಖರೀದಿಸುವುದು ಏಕೆ?

ತಂತ್ರಜ್ಞಾನ ಕಂಪನಿಗಳು ಎದುರಿಸುತ್ತಿರುವ ಹೊಸ ಸವಾಲು

ಕಳೆದ ಕೆಲವು ವರ್ಷಗಳಲ್ಲಿ ಮೈಕ್ರೋಸಾಫ್ಟ್, ಗೂಗಲ್, ಅಮೆಜಾನ್, ಮೆಟಾ, ಓಪನ್‌ಎಐ ಮತ್ತು ಎಕ್ಸ್‌ ಎಐ ಸೇರಿದಂತೆ ಹಲವು ಕಂಪನಿಗಳು ಹೊಸ ಡೇಟಾ ಸೆಂಟರ್‌ಗಳ ನಿರ್ಮಾಣಕ್ಕೆ ನೂರಾರು ಬಿಲಿಯನ್ ಡಾಲರ್‌ಗಳನ್ನು ಹೂಡಿಕೆ ಮಾಡಿವೆ.

ಹೊಸ ಡೇಟಾ ಸೆಂಟರ್‌ಗಳನ್ನು ಸಾಮಾನ್ಯವಾಗಿ ಅಗ್ಗದ ಮತ್ತು ವಿಶ್ವಾಸಾರ್ಹ ವಿದ್ಯುತ್ ಲಭ್ಯವಿರುವ ಪ್ರದೇಶಗಳಲ್ಲಿ ನಿರ್ಮಿಸಲಾಗುತ್ತದೆ. ಶೀತಲೀಕರಣಕ್ಕೆ ಅನುಕೂಲವಾಗುವ ಹವಾಮಾನ ಮತ್ತು ವೇಗವಾದ ಫೈಬರ್ ಆಪ್ಟಿಕ್ ಜಾಲವೂ ಪ್ರಮುಖ ಮಾನದಂಡಗಳಾಗಿವೆ. ಆದರೆ ಎ.ಐ ವಿಸ್ತರಣೆಯೊಂದಿಗೆ ಪರಿಸ್ಥಿತಿ ಬದಲಾಗುತ್ತಿದೆ. ಕಂಪನಿಗಳಿಗೆ ಹೂಡಿಕೆಯ ಕೊರತೆಯಿಲ್ಲ. ಸೂಕ್ತ ಭೂಮಿಯನ್ನೂ ಖರೀದಿಸಬಹುದು. ಆದರೆ ಸಾವಿರಾರು ಎ.ಐ ಚಿಪ್‌ಗಳನ್ನು 24 ಗಂಟೆಯೂ ಕಾರ್ಯನಿರ್ವಹಿಸುವಂತೆ ಮಾಡಲು ಬೇಕಾದಷ್ಟು ವಿದ್ಯುತ್ ಎಲ್ಲೆಡೆ ಸುಲಭವಾಗಿ ಲಭ್ಯವಿಲ್ಲ. ಹೀಗಾಗಿ ಎ.ಐ ಉದ್ಯಮದ ಬೆಳವಣಿಗೆಯನ್ನು ಈಗ ವಿದ್ಯುತ್ ಪೂರೈಕೆಯೇ ನಿರ್ಧರಿಸುವ ಪ್ರಮುಖ ಅಂಶವಾಗಿ ಪರಿಣಮಿಸಿದೆ.

ಇಲಾನ್ ಮಸ್ಕ್ ಪರಿಹಾರ: ಸ್ಟಾರ್‌ಮೈಂಡ್

ಎ.ಐ ಡೇಟಾ ಸೆಂಟರ್‌ಗಳಿಗೆ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಕಡಿಮೆ ಮಾಡಲು ಸ್ಪೇಸ್‌ಎಕ್ಸ್ ವಿಭಿನ್ನ ಮಾರ್ಗವನ್ನು ಪ್ರಸ್ತಾಪಿಸಿದೆ. ಕಂಪ್ಯೂಟಿಂಗ್ ವ್ಯವಸ್ಥೆಯ ಒಂದು ಭಾಗವನ್ನು ಭೂಮಿಯ ಮೇಲಿಂದ ಬಾಹ್ಯಾಕಾಶಕ್ಕೆ ಸ್ಥಳಾಂತರಿಸುವುದು! ಅಲ್ಲಿ ಸೌರಶಕ್ತಿಯನ್ನು ನೇರವಾಗಿ ಬಳಸಿಕೊಂಡು ಎ.ಐ ಲೆಕ್ಕಾಚಾರಗಳನ್ನು ನಡೆಸಬಹುದು ಎಂಬುದು ಅದರ ವಾದ. ಈ ಪರಿಕಲ್ಪನೆಯನ್ನೇ 'ಸ್ಟಾರ್‌ಮೈಂಡ್' ಎಂದು ಕರೆಯಲಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಈ ಬಗ್ಗೆ ಎಕ್ಸ್‌ನಲ್ಲಿ ಅವರು ಘೋಷಣೆ ಮಾಡಿದ್ದಾರೆ. ಇದು ಇನ್ನೂ ನಿರ್ಮಾಣ ಹಂತದಲ್ಲಿರುವ ಯೋಜನೆ.

ಸ್ಟಾರ್‌ಲಿಂಕ್ ಮತ್ತು ಸ್ಟಾರ್‌ಮೈಂಡ್ ಎರಡೂ ಸ್ಪೇಸ್‌ಎಕ್ಸ್‌ನ ಉಪಗ್ರಹ ಯೋಜನೆಗಳಾದರೂ, ಅವುಗಳ ಉದ್ದೇಶಗಳು ವಿಭಿನ್ನವಾಗಿವೆ. ಸ್ಟಾರ್‌ಲಿಂಕ್ ಜಾಗತಿಕ ಬ್ರಾಡ್‌ಬ್ಯಾಂಡ್ ಸಂಪರ್ಕಕ್ಕಾಗಿ ನಿರ್ಮಿಸಲಾದ ಉಪಗ್ರಹ ಜಾಲ. ಆದರೆ ಸ್ಟಾರ್‌ಮೈಂಡ್ ಎ.ಐಗೆ ಬೇಕಾಗುವ ಕಂಪ್ಯೂಟಿಂಗ್ ಕಾರ್ಯವನ್ನು ಕಕ್ಷೆಯಲ್ಲಿಯೇ ನಡೆಸುವ ವ್ಯವಸ್ಥೆಯನ್ನು ರೂಪಿಸುವ ಗುರಿಯನ್ನು ಹೊಂದಿದೆ.

OpenAI vs Anthropic: ಎ.ಐ ದಿಗ್ಗಜರ ಸಮರಕ್ಕೆ ಭಾರತವೇ ಅಖಾಡ, ಯಾಕಿಷ್ಟು ಮುನಿಸು?

ಸ್ಟಾರ್‌ಮೈಂಡ್ ಹೇಗೆ ಕೆಲಸ ಮಾಡಲಿದೆ?

ನಿಯಂತ್ರಕ ಸಂಸ್ಥೆಗಳಿಗೆ ಸ್ಪೇಸ್‌ಎಕ್ಸ್ ಸಲ್ಲಿಸಿರುವ ದಾಖಲೆಗಳ ಪ್ರಕಾರ, ಸ್ಟಾರ್‌ಮೈಂಡ್ ಯೋಜನೆಯು 'ಎಐ1' ಎಂದು ಆಂತರಿಕವಾಗಿ ಹೆಸರಿಸಲಾದ ಹೊಸ ಮಾದರಿಯ ಉಪಗ್ರಹಗಳ ಮೇಲೆ ಆಧಾರಿತವಾಗಿದೆ. ಇವು ಸಾಮಾನ್ಯ ಸಂವಹನ ಅಥವಾ ಇಂಟರ್ನೆಟ್ ಉಪಗ್ರಹಗಳಲ್ಲ. ಭೂಮಿಯ ಮೇಲಿರುವ ಡೇಟಾ ಸೆಂಟರ್‌ಗಳಲ್ಲಿ ನಡೆಯುವ ಎ.ಐ ಕಂಪ್ಯೂಟಿಂಗ್ ಕಾರ್ಯದ ಒಂದು ಭಾಗವನ್ನು ಬಾಹ್ಯಾಕಾಶದಲ್ಲಿಯೇ ನಿರ್ವಹಿಸುವ ಉದ್ದೇಶದಿಂದ ಇವುಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ.

ಈ ಉಪಗ್ರಹಗಳಲ್ಲಿ ಎಐ ಲೆಕ್ಕಾಚಾರಗಳನ್ನು ನಡೆಸುವ ವಿಶೇಷ ಪ್ರೊಸೆಸರ್‌ಗಳನ್ನು ಅಳವಡಿಸಲಾಗುತ್ತದೆ. ಅವುಗಳಿಗೆ ವಿದ್ಯುತ್ ಒದಗಿಸಲು ಸುಮಾರು 70 ಮೀಟರ್ ಅಗಲದ ಸೌರ ಫಲಕಗಳು ಇರುತ್ತವೆ. ಭೂಮಿಯಲ್ಲಿರುವ ಕೇಂದ್ರಗಳು ಮತ್ತು ಇತರ ಉಪಗ್ರಹಗಳೊಂದಿಗೆ ವೇಗವಾಗಿ ಸಂಪರ್ಕ ಸಾಧಿಸಲು ಲೇಸರ್ ಸಂವಹನ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಎಐ ಪ್ರೊಸೆಸರ್‌ಗಳು ಕೆಲಸ ಮಾಡುವಾಗ ಹೆಚ್ಚಿನ ಶಾಖ ಉತ್ಪತ್ತಿಯಾಗುವುದರಿಂದ, ಅದನ್ನು ಬಾಹ್ಯಾಕಾಶಕ್ಕೆ ಹೊರಹಾಕಲು ವಿಶೇಷ ರೇಡಿಯೇಟರ್ ಫಲಕಗಳನ್ನು ಅಳವಡಿಸಲಾಗುತ್ತದೆ.

ಬಳಕೆದಾರನ ದೃಷ್ಟಿಯಿಂದ ಈ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಉದಾಹರಣೆಗೆ, ನೀವು ಯಾವುದೇ ಚಾಟ್‌ ಬಾಟ್‌ಗೆ ಒಂದು ಪ್ರಶ್ನೆ ಕೇಳಿದರೆ, ನಿಮ್ಮ ವಿನಂತಿ ಮೊದಲು ಭೂಮಿಯಲ್ಲಿರುವ ಗ್ರೌಂಡ್ ಸ್ಟೇಷನ್‌ಗೆ ತಲುಪುತ್ತದೆ. ಅಲ್ಲಿಂದ ಅದನ್ನು ಕಕ್ಷೆಯಲ್ಲಿರುವ ಸ್ಟಾರ್‌ಮೈಂಡ್ ಉಪಗ್ರಹಕ್ಕೆ ಕಳುಹಿಸಲಾಗುತ್ತದೆ. ಉಪಗ್ರಹದಲ್ಲಿರುವ ಎಐ ಪ್ರೊಸೆಸರ್‌ಗಳು ಅಗತ್ಯ ಲೆಕ್ಕಾಚಾರಗಳನ್ನು ನಡೆಸಿ, ಉತ್ತರವನ್ನು ಮತ್ತೆ ಗ್ರೌಂಡ್ ಸ್ಟೇಷನ್ ಮೂಲಕ ನಿಮ್ಮ ಸಾಧನಕ್ಕೆ ಕಳುಹಿಸುತ್ತವೆ. ಈ ಸಂಪೂರ್ಣ ಪ್ರಕ್ರಿಯೆ ಕೆಲವೇ ಸೆಕೆಂಡುಗಳಲ್ಲಿ ಪೂರ್ಣಗೊಳ್ಳುವಂತೆ ವಿನ್ಯಾಸಗೊಳಿಸುವ ಉದ್ದೇಶವನ್ನು ಸ್ಪೇಸ್‌ಎಕ್ಸ್ ಹೊಂದಿದೆ.

ಸದ್ಯ ಎಐ ಸೇವೆಗಳ ಬಹುತೇಕ ಕಂಪ್ಯೂಟಿಂಗ್ ಕಾರ್ಯ ಭೂಮಿಯ ಮೇಲಿರುವ ಡೇಟಾ ಸೆಂಟರ್‌ಗಳಲ್ಲಿ ನಡೆಯುತ್ತದೆ. ಸ್ಟಾರ್‌ಮೈಂಡ್ ಯೋಜನೆಯು ಅದೇ ಕಾರ್ಯದ ಒಂದು ಭಾಗವನ್ನು ಬಾಹ್ಯಾಕಾಶಕ್ಕೆ ಸ್ಥಳಾಂತರಿಸಲು ಮುಂದಾಗಿದೆ. ಅಂದರೆ, ಬಳಕೆದಾರರಿಗೆ ಸೇವೆ ನೀಡುವ ವಿಧಾನದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ; ಬದಲಾಗಿ, ಆ ಸೇವೆಯನ್ನು ಒದಗಿಸುವ ಮೂಲಸೌಕರ್ಯದ ಸ್ಥಳವೇ ಬದಲಾಗುತ್ತದೆ.

ಒಂದು ಗುರಿ, ಭಿನ್ನ ಮಾರ್ಗ: ಅಮೆರಿಕ, ಚೀನಾದ ಎ.ಐ ಓಟದಲ್ಲಿ ಗೆಲ್ಲುವವರು ಯಾರು?

ಬಾಹ್ಯಾಕಾಶದಲ್ಲಿ ಡೇಟಾ ಸೆಂಟರ್‌ಗಳನ್ನು ಏಕೆ ನಿರ್ಮಿಸಬೇಕು?

ಈ ಪ್ರಶ್ನೆಗೆ ಉತ್ತರ ವಿದ್ಯುತ್‌. ಡೇಟಾ ಸೆಂಟರ್‌ಗಳು 24 ಗಂಟೆಯೂ ಕಾರ್ಯನಿರ್ವಹಿಸಬೇಕಾಗುತ್ತದೆ. ಇದಕ್ಕಾಗಿ ಅಪಾರ ಪ್ರಮಾಣದ ವಿದ್ಯುತ್ ಅವಶ್ಯ. ಡೇಟಾ ಸೆಂಟರ್‌ಗಳ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ವಿದ್ಯುತ್ ಬೇಡಿಕೆಯೂ ವೇಗವಾಗಿ ಏರುತ್ತಿದೆ.

ಸ್ಟಾರ್‌ಮೈಂಡ್ ಯೋಜನೆ ಇದಕ್ಕೆ ವಿಭಿನ್ನ ಪರಿಹಾರವನ್ನು ಕಂಡುಹಿಡಿದಿದೆ. ಭೂಮಿಯ ಕೆಳ ಕಕ್ಷೆಯಲ್ಲಿರುವ ಉಪಗ್ರಹಗಳಿಗೆ ದೀರ್ಘ ಸಮಯ ಸೂರ್ಯನ ಬೆಳಕು ದೊರೆಯುತ್ತದೆ. ಆದ್ದರಿಂದ, ಉಪಗ್ರಹಗಳಲ್ಲಿ ಅಳವಡಿಸಿರುವ ದೊಡ್ಡ ಸೌರ ಫಲಕಗಳ ಮೂಲಕ ಅಲ್ಲಿಯೇ ವಿದ್ಯುತ್ ಉತ್ಪಾದಿಸಿ, ಅದೇ ವಿದ್ಯುತ್‌ನಿಂದ ಎ.ಐ ಪ್ರೊಸೆಸರ್‌ಗಳನ್ನು ಕಾರ್ಯನಿರ್ವಹಿಸುವಂತೆ ಮಾಡುವ ಯೋಜನೆ ಸ್ಟಾರ್‌ಮೈಂಡ್‌ನದ್ದು.

ಅಂದರೆ ಎ.ಐ ಕಂಪ್ಯೂಟಿಂಗ್‌ಗೆ ಬೇಕಾದ ವಿದ್ಯುತ್ ಅನ್ನು ಭೂಮಿಯ ವಿದ್ಯುತ್ ಜಾಲದಿಂದ ಪಡೆಯುವ ಬದಲು, ಬಾಹ್ಯಾಕಾಶದಲ್ಲೇ ಸೂರ್ಯನಿಂದ ಉತ್ಪಾದಿಸಬಹುದು ಎನ್ನುವುದು ಸ್ಟಾರ್‌ಮೈಂಡ್‌ನ ಆಲೋಚನೆ.

ಗಿಗಾಸ್ಯಾಟ್ ಕಾರ್ಖಾನೆ

ಸ್ಟಾರ್‌ಮೈಂಡ್ ಯೋಜನೆಗೆ ಅಗತ್ಯವಾದ ಉಪಗ್ರಹಗಳನ್ನು ಉತ್ಪಾದಿಸಲು ಸ್ಪೇಸ್‌ಎಕ್ಸ್ ಟೆಕ್ಸಾಸ್‌ನ ಬಾಸ್ಟ್ರೋಪ್‌ನಲ್ಲಿ ಗಿಗಾಸ್ಯಾಟ್ ಎಂಬ ಉತ್ಪಾದನಾ ಘಟಕ ತೆರೆಯುವುದಾಗಿ ಘೋಷಿಸಿದೆ. ಸುಮಾರು 11 ಮಿಲಿಯನ್ ಚದರ ಅಡಿ ವಿಸ್ತೀರ್ಣದ ಈ ಘಟಕದಲ್ಲಿ ದೊಡ್ಡ ಪ್ರಮಾಣದಲ್ಲಿ ಉಪಗ್ರಹಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. 2027ರ ಅಂತ್ಯದ ವೇಳೆಗೆ ಸುಮಾರು ಒಂದು ಗಿಗಾವ್ಯಾಟ್ ಬಾಹ್ಯಾಕಾಶ ಆಧಾರಿತ ಕಂಪ್ಯೂಟಿಂಗ್ ಸಾಮರ್ಥ್ಯ ನಿರ್ಮಿಸುವ ಗುರಿ ಹಾಕಿಕೊಂಡಿದೆ.

ಎ.ಐ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ ಆಂಥ್ರೋಪಿಕ್‌ನ ಮಿಥೋಸ್: ಚೀನಾ, ರಷ್ಯಾಗೆ ನಡುಕ

ಯೋಜನೆಯ ಮುಂದಿರುವ ಮೂರು ಪ್ರಮುಖ ಸವಾಲುಗಳು

ಸ್ಟಾರ್‌ಮೈಂಡ್ ಪರಿಕಲ್ಪನೆ ಹೊಸದಾದರೂ, ಅದನ್ನು ಕಾರ್ಯರೂಪಕ್ಕೆ ತರಲು ಹಲವು ಎಂಜಿನಿಯರಿಂಗ್ ಸವಾಲುಗಳಿವೆ.

1. ಬಾಹ್ಯಾಕಾಶದಲ್ಲಿ ಶಾಖವನ್ನು ಹೇಗೆ ಹೊರಹಾಕುವುದು?

ಬಾಹ್ಯಾಕಾಶ ತುಂಬಾ ತಂಪಾಗಿದೆ ಎನ್ನುವುದು ತುಂಬಾ ಜನರ ಭಾವನೆ. ಆದರೆ ಅದು ಸಂಪೂರ್ಣ ಸತ್ಯವಲ್ಲ. ಬಾಹ್ಯಾಕಾಶದಲ್ಲಿ ಗಾಳಿಯಿಲ್ಲ. ಆದ್ದರಿಂದ ಕಂಪ್ಯೂಟರ್‌ನಿಂದ ಉತ್ಪತ್ತಿಯಾಗುವ ಶಾಖವನ್ನು ಫ್ಯಾನ್ ಅಥವಾ ಗಾಳಿಯ ಮೂಲಕ ಹೊರಹಾಕಲು ಸಾಧ್ಯವಿಲ್ಲ. ಅದಕ್ಕಾಗಿ ವಿಶೇಷ ರೇಡಿಯೇಟರ್ ಫಲಕಗಳನ್ನು ಬಳಸಬೇಕಾಗುತ್ತದೆ. ಆದರೆ ಎ.ಐ ಚಿಪ್‌ಗಳು ಉತ್ಪಾದಿಸುವ ದೊಡ್ಡ ಪ್ರಮಾಣದ ಶಾಖವನ್ನು ಹೊರಹಾಕುವುದು ದೊಡ್ಡ ತಾಂತ್ರಿಕ ಸವಾಲಾಗಿದೆ. ಸ್ಪೇಸ್‌ಎಕ್ಸ್ ತನ್ನ ದಾಖಲೆಗಳಲ್ಲಿ ರೇಡಿಯೇಟರ್ ಫಲಕಗಳ ಬಗ್ಗೆ ಉಲ್ಲೇಖಿಸಿದೆಯಾದರೂ, ಅವು ಎಷ್ಟು ಶಾಖವನ್ನು ನಿರ್ವಹಿಸಬಲ್ಲವು ಎಂಬ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ.

2. ಉತ್ತರ ಬರಲು ಹೆಚ್ಚು ಸಮಯ ಹಿಡಿಯುತ್ತದೆಯೇ?

ಭೂಮಿಯ ಕೆಳ ಕಕ್ಷೆಯ ಉಪಗ್ರಹಗಳು ಸಾಮಾನ್ಯವಾಗಿ 300ರಿಂದ 1,200 ಕಿಲೋಮೀಟರ್ ಎತ್ತರದಲ್ಲಿ ಸಂಚರಿಸುತ್ತವೆ. ಚಾಟ್‌ಬಾಟ್‌ನಲ್ಲಿ ಕೇಳಲಾಗುವ ಪ್ರಶ್ನೆ ಭೂಮಿಯಿಂದ ಉಪಗ್ರಹಕ್ಕೆ ಹೋಗಿ, ಅಲ್ಲಿ ಲೆಕ್ಕಾಚಾರ ನಡೆದು ಮತ್ತೆ ಭೂಮಿಗೆ ಬರಬೇಕಾಗುತ್ತದೆ. ಈ ಹೆಚ್ಚುವರಿ ಹಂತದಿಂದ ಎಷ್ಟು ವಿಳಂಬವಾಗಲಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

3. ಉಪಗ್ರಹದಲ್ಲಿ ದೋಷ ಉಂಟಾದರೆ?

ಭೂಮಿಯ ಮೇಲಿರುವ ಡೇಟಾ ಸೆಂಟರ್‌ನಲ್ಲಿ ಸರ್ವರ್ ಕೆಟ್ಟರೆ ಕೆಲವೇ ನಿಮಿಷಗಳಲ್ಲಿ ಬದಲಾಯಿಸಬಹುದು.ಆದರೆ ಬಾಹ್ಯಾಕಾಶದಲ್ಲಿರುವ ಉಪಗ್ರಹದಲ್ಲಿ ಹಾರ್ಡ್‌ವೇರ್ ದೋಷ ಉಂಟಾದರೆ ಅದನ್ನು ಸರಿಪಡಿಸುವುದು ಬಹಳ ಕಷ್ಟ. ಹೀಗಾಗಿ ಉಪಗ್ರಹಗಳು ಹಲವು ವರ್ಷಗಳ ಕಾಲ ಯಾವುದೇ ಪ್ರಮುಖ ದೋಷವಿಲ್ಲದೆ ಕಾರ್ಯನಿರ್ವಹಿಸುವಷ್ಟು ವಿಶ್ವಾಸಾರ್ಹವಾಗಿರಬೇಕು.

ವಿದೇಶಿ ನಾಗರಿಕರಿಗೆ ಆಂಥ್ರೋಪಿಕ್‌ನ ಮೀಥೋಸ್, ಫೇಬಲ್ ಬಳಕೆಗೆ ಅಮೆರಿಕ ನಿರ್ಬಂಧ

ಇದು ಆರ್ಥಿಕವಾಗಿ ಲಾಭದಾಯಕವೇ?

ಈ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಸ್ಪೇಸ್‌ಎಕ್ಸ್‌ನ ಮರುಬಳಕೆ ಮಾಡಬಹುದಾದ ರಾಕೆಟ್‌ಗಳಿಂದ ಉಡಾವಣಾ ವೆಚ್ಚ ಕಡಿಮೆಯಾಗಿದೆ. ಆದರೂ ಉಪಗ್ರಹಗಳನ್ನು ನಿರ್ಮಿಸುವುದು, ಕಕ್ಷೆಗೆ ಕಳುಹಿಸುವುದು ಮತ್ತು ವಿಕಿರಣ-ನಿರೋಧಕ ಕಂಪ್ಯೂಟಿಂಗ್ ಹಾರ್ಡ್‌ವೇರ್ ಬಳಸುವುದು ಇನ್ನೂ ದುಬಾರಿಯೇ ಆಗಿದೆ.

ಒಂದೆಡೆ ಭೂಮಿಯ ವಿದ್ಯುತ್ ವೆಚ್ಚವನ್ನು ಉಳಿಸಬಹುದು. ಮತ್ತೊಂದೆಡೆ ಉಪಗ್ರಹಗಳ ನಿರ್ಮಾಣ ಮತ್ತು ಉಡಾವಣೆಯ ವೆಚ್ಚ ಹೆಚ್ಚಾಗುತ್ತದೆ. ಈ ಎರಡರಲ್ಲಿ ಯಾವುದು ಹೆಚ್ಚು ಲಾಭದಾಯಕ ಎಂಬುದಕ್ಕೆ ಇನ್ನೂ ಸ್ಪಷ್ಟ ಉತ್ತರ ಲಭ್ಯವಿಲ್ಲ.

ಕಾನೂನು ಸವಾಲುಗಳು

ಸ್ಟಾರ್‌ಮೈಂಡ್‌ನಂತಹ ಬೃಹತ್ ಉಪಗ್ರಹ ಸಮೂಹವನ್ನು ಕಾರ್ಯರೂಪಕ್ಕೆ ತರಲು ಕೇವಲ ತಂತ್ರಜ್ಞಾನ ಸಾಕಾಗುವುದಿಲ್ಲ. ಹಲವು ಕಾನೂನು ಮತ್ತು ನಿಯಂತ್ರಣ ಸವಾಲುಗಳನ್ನೂ ಎದುರಿಸಬೇಕಾಗುತ್ತದೆ. ಮೊದಲನೆಯದಾಗಿ, ಉಪಗ್ರಹಗಳ ಉಡಾವಣೆ ಮತ್ತು ಕಾರ್ಯಾಚರಣೆಗೆ ಸಂಬಂಧಿತ ದೇಶಗಳ ನಿಯಂತ್ರಕ ಸಂಸ್ಥೆಗಳ ಅನುಮೋದನೆ ಅಗತ್ಯ. ಜೊತೆಗೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ರೇಡಿಯೊ ಸ್ಪೆಕ್ಟ್ರಮ್ ಹಂಚಿಕೆ ಹಾಗೂ ಕಕ್ಷೆಯ ಬಳಕೆ ಕುರಿತ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಇದಲ್ಲದೆ, ಲಕ್ಷಾಂತರ ಉಪಗ್ರಹಗಳು ಕಕ್ಷೆಗೆ ಸೇರ್ಪಡೆಯಾದರೆ ಉಪಗ್ರಹಗಳ ನಡುವೆ ಡಿಕ್ಕಿ ತಪ್ಪಿಸುವುದು ದೊಡ್ಡ ಸವಾಲಾಗಬಹುದು. ಕಾರ್ಯನಿರ್ವಹಿಸದ ಉಪಗ್ರಹಗಳು ಮತ್ತು ಇತರ ಬಾಹ್ಯಾಕಾಶ ತ್ಯಾಜ್ಯ ಹೊಸ ಅಪಾಯಗಳನ್ನು ಉಂಟುಮಾಡುವ ಸಾಧ್ಯತೆಯೂ ಇದೆ.

ಖಗೋಳ ವಿಜ್ಞಾನಿಗಳೂ ಇಂತಹ ಬೃಹತ್ ಉಪಗ್ರಹ ಸಮೂಹಗಳಿಂದ ಆಕಾಶ ವೀಕ್ಷಣೆ ಮತ್ತು ಖಗೋಳ ಸಂಶೋಧನೆಗೆ ತೊಂದರೆಯಾಗಬಹುದು ಎಂಬ ಆತಂಕವನ್ನು ಹಿಂದೆ ಹಲವು ಬಾರಿ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ, ಸ್ಟಾರ್‌ಲಿಂಕ್ ಉಪಗ್ರಹಗಳ ಹೊಳಪಿನಿಂದ ದೂರದರ್ಶಕಗಳ ವೀಕ್ಷಣೆಗೆ ಅಡಚಣೆ ಉಂಟಾಗುತ್ತಿದೆ ಎಂದು ಕೆಲವು ಖಗೋಳ ಸಂಸ್ಥೆಗಳು ಹೇಳಿವೆ.

ಹೀಗಾಗಿ, ಸ್ಟಾರ್‌ಮೈಂಡ್ ಯೋಜನೆಯ ಯಶಸ್ಸು ಕೇವಲ ತಾಂತ್ರಿಕ ಸಾಮರ್ಥ್ಯದ ಮೇಲೆ ಮಾತ್ರವಲ್ಲ; ಸರ್ಕಾರಿ ಅನುಮೋದನೆಗಳು, ಅಂತರರಾಷ್ಟ್ರೀಯ ಸಹಕಾರ, ಕಕ್ಷೆಯ ಸುರಕ್ಷತೆ ಮತ್ತು ಪರಿಸರದ ಜವಾಬ್ದಾರಿಯುತ ನಿರ್ವಹಣೆ ಮೇಲೂ ಅವಲಂಬಿತವಾಗಿರುತ್ತದೆ.

ಬ್ರಿಟನ್‌ನಲ್ಲೂ ರಾಮ ಮಂದಿರ ವಿವಾದ: 40 ವರ್ಷ ಹಳೆಯ ದೇವಾಲಯದ ಭವಿಷ್ಯ ಅತಂತ್ರ

ಈಗ ಯೋಜನೆ ಯಾವ ಹಂತದಲ್ಲಿದೆ?

2026ರ ಜೂನ್ ಅಂತ್ಯದ ವೇಳೆಗೆ ಸ್ಟಾರ್‌ಮೈಂಡ್ ಇನ್ನೂ ಪರಿಕಲ್ಪನೆ ಮತ್ತು ಅಭಿವೃದ್ಧಿ ಹಂತದಲ್ಲಿರುವ ಯೋಜನೆಯಾಗಿದೆ. ಇದು ಇನ್ನೂ ಕಾರ್ಯನಿರ್ವಹಿಸುತ್ತಿರುವ ಉಪಗ್ರಹ ಜಾಲವಲ್ಲ.

ಇಲ್ಲಿಯವರೆಗೆ ನಡೆದಿರುವ ಪ್ರಮುಖ ಬೆಳವಣಿಗೆಗಳು:

  • 'ಸ್ಟಾರ್‌ಮೈಂಡ್' ಎನ್ನುವ ಹೆಸರನ್ನು ಇಲಾನ್ ಮಸ್ಕ್ ಸಾರ್ವಜನಿಕವಾಗಿ ದೃಢಪಡಿಸಿದ್ದಾರೆ.

  • ಸ್ಪೇಸ್‌ಎಕ್ಸ್ ಎ.ಐ ಉಪಗ್ರಹಗಳ ಪರಿಕಲ್ಪನೆ ಮತ್ತು ತಾಂತ್ರಿಕ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಂಡಿದೆ.

  • ಅಮೆರಿಕದ ನಿಯಂತ್ರಕ ಸಂಸ್ಥೆಗಳಿಗೆ (FCC) ಸಂಬಂಧಿತ ಅರ್ಜಿಗಳು ಮತ್ತು ದಾಖಲೆಗಳನ್ನು ಸಲ್ಲಿಸಿದೆ.

  • ಟೆಕ್ಸಾಸ್‌ನ ಬ್ಯಾಸ್ಟ್ರೋಪ್‌ನಲ್ಲಿ ಗಿಗಾಸ್ಯಾಟ್ ಎಂಬ ಬೃಹತ್ ಉಪಗ್ರಹ ಉತ್ಪಾದನಾ ಘಟಕವನ್ನು ಘೋಷಿಸಿದ್ದು, ಅದರ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಕಂಪನಿಯು 2027ರಿಂದ ಎ.ಐ ಉಪಗ್ರಹಗಳ ಉತ್ಪಾದನೆ ಆರಂಭಿಸುವ ಗುರಿ ಹೊಂದಿದೆ. ಸ್ಟಾರ್‌ಮೈಂಡ್ ಯೋಜನೆಯಡಿ ಇದುವರೆಗೆ ಯಾವುದೇ ಉಪಗ್ರಹವನ್ನು ಉಡಾವಣೆ ಮಾಡಿಲ್ಲ. ಹೀಗಾಗಿ, ಈ ಯೋಜನೆಯ ವಾಣಿಜ್ಯ ಕಾರ್ಯಾಚರಣೆಯೂ ಇನ್ನೂ ಆರಂಭವಾಗಿಲ್ಲ

ಏನಿದರ ಮಹತ್ವ?

ಸ್ಟಾರ್‌ಮೈಂಡ್ ಯಶಸ್ವಿಯಾಗುತ್ತದೆಯೇ ಎಂಬುದು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ಈ ಯೋಜನೆಯು ಎಐ ಕ್ಷೇತ್ರದಲ್ಲಿನ ಒಂದು ಮಹತ್ವದ ಬದಲಾವಣೆ ಮಾಡುವ ಉದ್ದೇಶ ಹೊಂದಿದೆ.

ಇದುವರೆಗೆ ಎಐ ಅಭಿವೃದ್ಧಿಯ ಸ್ಪರ್ಧೆ ಉತ್ತಮ ಅಲ್ಗಾರಿದಮ್‌ಗಳು ಮತ್ತು ಹೆಚ್ಚು ಸಾಮರ್ಥ್ಯದ ಮಾದರಿಗಳನ್ನು ನಿರ್ಮಿಸುವುದರ ಮೇಲೆ ಕೇಂದ್ರೀಕೃತವಾಗಿತ್ತು. ಆದರೆ ಈಗ ಚಿತ್ರಣ ಬದಲಾಗುತ್ತಿದೆ. ಅಪಾರ ಪ್ರಮಾಣದ ವಿದ್ಯುತ್, ಶೀತಲೀಕರಣ ವ್ಯವಸ್ಥೆ, ಭೂಮಿ, ಕಂಪ್ಯೂಟಿಂಗ್ ಚಿಪ್‌ಗಳು ಮತ್ತು ಮೂಲಸೌಕರ್ಯಗಳ ಲಭ್ಯತೆಯೂ ಎಐ ಅಭಿವೃದ್ಧಿಯಲ್ಲಿ ನಿರ್ಣಾಯಕ ಅಂಶಗಳಾಗಿ ಹೊರಹೊಮ್ಮಿವೆ.

ಸ್ಟಾರ್‌ಮೈಂಡ್ ಯೋಜನೆಯು ಈ ಸವಾಲುಗಳಿಗೆ ಬಾಹ್ಯಾಕಾಶದಲ್ಲಿ ಪರಿಹಾರ ಹುಡುಕುವ ಪ್ರಯತ್ನವಾಗಿದೆ. ಅದು ಯಶಸ್ವಿಯಾಗುತ್ತದೆಯೇ ಎಂಬುದನ್ನು ಕಾಲವೇ ನಿರ್ಧರಿಸಲಿದೆ. ಆದರೆ ಎಐಯ ಭವಿಷ್ಯದ ಮೂಲಸೌಕರ್ಯದ ಕುರಿತು ಜಾಗತಿಕ ಚರ್ಚೆಯನ್ನು ಈ ಯೋಜನೆ ಈಗಾಗಲೇ ಆರಂಭಿಸಿದೆ.

ಆಧಾರ: ರಾಯಿಟರ್ಸ್, ಎಎಫ್‌ಪಿ, ಸ್ಪೇಸ್ ಎಕ್ಸ್‌ ಸಲ್ಲಿಸಿದ ದಾಖಲೆಗಳು

1,569 ದಿನಗಳ ರಕ್ತಪಾತ: ಮೊದಲ ವಿಶ್ವಯುದ್ಧವನ್ನೂ ಮೀರಿಸಿದ ಉಕ್ರೇನ್-ರಷ್ಯಾ ಸಂಘರ್ಷ
Dailyhunt
Disclaimer: This content has not been generated, created or edited by Dailyhunt. Publisher: Prajavani