Dailyhunt Logo
  • Light mode
    Follow system
    Dark mode
    • Play Story
    • App Story
ಪ್ರಕೃತಿ ಮಡಿಲು: ಪ್ಲಾಸ್ಟಿಕ್‌ ವಿಷ ದೇಹ ಆವರಿಸದಿರಲಿ

ಪ್ರಕೃತಿ ಮಡಿಲು: ಪ್ಲಾಸ್ಟಿಕ್‌ ವಿಷ ದೇಹ ಆವರಿಸದಿರಲಿ

ಪ್ಲಾಸ್ಟಿಕ್‌ ಎಂಬ ಮಾಯೆ ನಿತ್ಯ ಬದುಕಿನಲ್ಲಿ ಅನಿವಾರ್ಯ ಎಂಬಂತೆ ಅಂಟಿಕೊಂಡಿರುವ ಜಾಡ್ಯ. ಅದಿಲ್ಲದಿದ್ದರೆ ಜೀವನವೇ ಇಲ್ಲ ಎಂಬಂತೆ ಆವರಿಸಿಕೊಂಡಿರುವುದೂ ಸುಳ್ಳಲ್ಲ. ಬಳಸಿ ಬಿಸಾಡುತ್ತೇವೆ, ಸರ್ಕಾರದವರು ಅದನ್ನು ವಿಲೇವಾರಿ ಮಾಡಬೇಕಪ್ಪ, ಅದು ಅವರ ಕರ್ತವ್ಯ ಎನ್ನುವ ಮಾತೂ ಇದೆ.

ಪ್ಲಾಸ್ಟಿಕ್‌ ಸಮಸ್ಯೆಯನ್ನು ಅಷ್ಟು ಸುಲಭವಾಗಿ ಇನ್ನೊಬ್ಬರ ಮೇಲೆ ಹೊರಿಸಿ, ನಿರಾಳರಾಗಲು ಸಾಧ್ಯವಿಲ್ಲ. ಏಕೆಂದರೆ, ಈ ಪ್ಲಾಸ್ಟಿಕ್‌ ಎಂಬ ವಿಷ, ನೈಸರ್ಗಿಕ ಪದ್ಧತಿಯಾದ ಆಹಾರ ಸರಪಳಿ ಮೂಲಕ ಮಾನವನ ದೇಹಕ್ಕೇ ಸೇರಿಕೊಳ್ಳುತ್ತಿದೆ. ಇದನ್ನು ಅರಿತುಕೊಂಡರಷ್ಟೇ ಜೀವನ.

ಪ್ಲಾಸ್ಟಿಕ್‌ನಲ್ಲಿರುವ ವಿಷಕಾರಿ ಅಂಶಗಳು ಪರಿಸರಕ್ಕೆ ಹಾನಿಕಾರಕವಾಗಿದ್ದು, ಭೂಮಿ, ನೀರು ಮತ್ತು ವಾಯು ಮಾಲಿನ್ಯಕ್ಕೆ ಕಾರಣವಾಗಿದೆ. ನೂರಾರು ಅಥವಾ ಸಾವಿರಾರು ವರ್ಷವಾದರೂ ಕೊಳೆಯದ ಪ್ಲಾಸ್ಟಿಕ್‌, ಅಷ್ಟೂ ದೀರ್ಘಕಾಲ ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಸಾಮರ್ಥ್ಯ ಹೊಂದಿದೆ. ಪೆಟ್ರೋಲಿಯಂನಿಂದ ಉತ್ಪಾದನೆಯಾಗುವ ಪ್ಲಾಸ್ಟಿಕ್‌, ಸಣ್ಣ ಸಣ್ಣ ಚೂರುಗಳಾಗಿ ಭೂಮಿ, ಸಮುದ್ರ, ಪ್ರಾಣಿಗಳನ್ನು ಸೇರಿಕೊಳ್ಳುತ್ತಿದೆ. ಈ ಮೂಲಕ ಆಹಾರ ಸರಪಳಿಯಲ್ಲಿ ನುಸುಳಿಕೊಂಡು ಪರಿಸರ ಹಾಗೂ ಜೀವಿಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ನಗರಗಳಲ್ಲಿ ಪ್ಲಾಸ್ಟಿಕ್‌ ಹಾಗೂ ಅದರ ಉಪ ಉತ್ಪನ್ನಗಳು ತ್ಯಾಜ್ಯವಾಗಿ ಬಿದ್ದು, ಕೆಲವೊಮ್ಮೆ ಬೆಂಕಿಯಲ್ಲಿ ಸುಟ್ಟು ವಿಷಕಾರಿ ಅಂಶಗಳಿಂದ ಮಾನವ ಹಾಗೂ ಪ್ರಾಣಿಗಳ ಆರೋಗ್ಯಕ್ಕೆ ಮಾರಕವಾಗಿದೆ.

ಪ್ರಕೃತಿ ಮಡಿಲು: ಗಂಭೀರಮಟ್ಟ ಮೀರುತ್ತಿದೆ ನದಿ ಮಾಲಿನ್ಯ!ಪ್ರಕೃತಿ ಮಡಿಲು: ಹವಾಮಾನ ಬದಲಾವಣೆಗೆ ಕಟ್ಟಡವೂ ಕಾರಣ

ಪ್ಲಾಸ್ಟಿಕ್‌ ಹುಟ್ಟು

ಬೆಲ್ಜಿಯಂನಲ್ಲಿ ಹುಟ್ಟಿದ ಅಮೆರಿಕದ ನ್ಯೂಯಾರ್ಕ್‌ನಲ್ಲಿ ನೆಲೆಸಿದ್ದ ಲಿಯೊ ಹೆನ್‌ಡ್ರಿಕ್‌ ಬೆಕಲ್ಯಾಂಡ್‌ 1907ರಲ್ಲಿ ಸಿಂಥೆಟಿಕ್‌ ಪಾಲಿಮರ್‌ ಆಧರಿತ ಪ್ರಥಮ ಪ್ಲಾಸ್ಟಿಕ್‌ ಅನ್ನು ಆವಿಷ್ಕರಿಸಿದ. ಫೀನಾಯಿಲ್‌ ಮತ್ತು ಫಾರ್ಮಡಿಹೈಡ್‌ ಮೂಲಕ ಅತ್ಯಂತ ಕಡಿಮೆ ದರದಲ್ಲಿ ಆಗ ಆತ ಉತ್ಪಾದನೆ ಮಾಡಿದ್ದ. ಈ ಸಿಂಥೆಟಿಕ್‌ ಪ್ಲಾಸ್ಟಿಕ್‌ಗೆ ಬೆಕ್‌ಲೈಟ್‌ ಎಂದೂ ಹೆಸರಿಸಲಾಗಿತ್ತು. 1950ರ ನಂತರ ದಿನ ಕಳೆದಂತೆ ಪ್ಲಾಸ್ಟಿಕ್‌ ಬಳಕೆ ಅತಿಯಾಯಿತು. ನೈಸರ್ಗಿಕ ಸಾಮಗ್ರಿಗಳಾದ ಸೆಲ್ಯುಲೋಸ್‌, ಕಲ್ಲಿದ್ದಲು, ನೈಸರ್ಗಿಕ ಅನಿಲ, ಉಪ್ಪು ಮತ್ತು ಕಚ್ಚಾ ತೈಲಕ್ರೂಡ್‌ ಆಯಿಲ್‌ನಿಂದ ಪಾಲಿಮೆರೈಸೇಷನ್‌ ಅಥವಾ ಪಾಲಿಕಂಡೆಂಸೇಷನ್‌ ಪ್ರಕ್ರಿಯೆ ಮೂಲಕ ಪ್ಲಾಸ್ಟಿಕ್‌ ತಯಾರಿಸಲಾಗುತ್ತದೆ. ಪ್ಲಾಸ್ಟಿಕ್‌ನಲ್ಲಿರುವ ರಾಸಾಯಿನಿಕ ಅಂಶಗಳನ್ನು ಮಾನವನ ದೇಹ ಹೀರಿಕೊಳ್ಳುತ್ತದೆ. ಪ್ಲಾಸ್ಟಿಕ್‌ನಲ್ಲಿನ ಕೆಲವು ಅಂಶಗಳು ಹಾರ್ಮೋನ್‌ಗಳನ್ನೇ ಬದಲಿಸುವ ಶಕ್ತಿ ಹೊಂದಿವೆ. ಈ ರಾಸಾಯನಿಕಗಳು ಜಲಚರಗಳ ಹೊಟ್ಟೆಗೆ ಸೇರಿಕೊಂಡು ವನ್ಯಜೀವಿಗಳಿಗೆ ವಿಷಕಾರಕವಾಗುತ್ತಿವೆ.

ಸಮುದ್ರದಲ್ಲಿದೆ ಲಕ್ಷಾಂತರ ಟನ್‌ ಪ್ಲಾಸ್ಟಿಕ್‌

ಪ್ಲಾಸ್ಟಿಕ್‌ ತ್ಯಾಜ್ಯ ಸಮುದ್ರ ಸೇರುತ್ತಿರುವುದರಿಂದ ಪ್ರತಿ ವರ್ಷ ಒಂದು ಕೋಟಿ ಪ್ರಾಣಿಗಳು (ಸಸ್ತನಿಗಳು, ಮೀನು, ಶಾರ್ಕ್‌, ಆಮೆ ಹಾಗೂ ಪಕ್ಷಿಗಳು) ಸಾಯುತ್ತಿವೆ. ಸುಮಾರು 100 ದಶಲಕ್ಷ ಟನ್‌ಗೂ ಮಿಗಿಲಾದ ಪ್ಲಾಸ್ಟಿಕ್‌ ಸಮುದ್ರಗಳಲ್ಲಿದೆ ಎಂದು ಅಂದಾಜಿಸಲಾಗಿದೆ. ಪಕ್ಷಿಗಳು, ಮೀನುಗಳು, ಚಿಪ್ಪು ಮೀನುಗಳು ಈ ಸಣ್ಣ ಪ್ಲಾಸ್ಟಿಕ್‌ಗಳನ್ನು ಸೇವಿಸುವುದರಿಂದ ಪ್ಲಾಸ್ಟಿಕ್‌ ಮತ್ತಷ್ಟು ಸಣ್ಣ ಚೂರುಗಳಾಗುತ್ತದೆ. ಮೂರರಲ್ಲಿ ಒಂದು ಸಮುದ್ರ ಆಮೆ ಹಾಗೂ ಶೇ 90ರಷ್ಟು ಕಡಲ ಪಕ್ಷಿಗಳು ಚೂರು ಪ್ಲಾಸ್ಟಿಕ್‌ಗಳನ್ನು ಸೇವಿಸುತ್ತಿವೆ. ಇದು ಅವುಗಳಿಗೆ ಆಹಾರವಾಗುವುದಿಲ್ಲ. ಏಕೆಂದರೆ, ಪ್ಲಾಸ್ಟಿಕ್‌ ಜೀರ್ಣವಾಗದೆ ಹಾಗೆಯೇ ಹೊಟ್ಟೆಯಲ್ಲಿ ಉಳಿಯುವುದರಿಂದ, ಅವುಗಳಿಗೆ ಅಗತ್ಯವಾದ ಆಹಾರವನ್ನೂ ಅವು ಸೇವಿಸಲು ಸಾಧ್ಯವಾಗುವುದಿಲ್ಲ. ಪ್ಲಾಸ್ಟಿಕ್‌ನ ಸಣ್ಣ ಚೂರುಗಳನ್ನು ಮೀನುಗಳು ಸೇವಿಸಿದಾಗ ಅವುಗಳ ಮೂಲಕ ಅಂದರೆ ಆಹಾರ ಸರಪಳಿಯಿಂದ ಅದು ಮಾನವನ ದೇಹ ಸೇರುತ್ತದೆ. ಈ ಪ್ಲಾಸ್ಟಿಕ್‌ ನೇರವಾಗಿ ಮಾನವನ ದೇಹ ಸೇರುವುದರಿಂದ ಇದರ ವಿಷಕಾರಿ ಹಾಗೂ ರಾಸಾಯನಿಕ ಅಂಶಗಳ ಪ್ರಭಾವ ಅತಿ ಹೆಚ್ಚಿರುತ್ತದೆ.

ಪ್ರಕೃತಿ ಮಡಿಲು: ಶ್ರೀಗಂಧ ಪಸರಿಸಲು 'ಪವರ್‌' ಬೇಕೇಬೇಕು...!ಪ್ರಕೃತಿ ಮಡಿಲು: ಕೆರೆಗಳ ಅಂಗಳದಲ್ಲಿ 'ಹಸಿರು ಸುರಂಗ'

ಕ್ಯಾನ್ಸರ್‌ಕಾರಕ

ಗ್ಲಾಸ್‌, ಅಲ್ಯುಮಿನಿಯಂ ಅಥವಾ ಪೇಪರ್‌ನಂತಹ ವಸ್ತುಗಳಿಗಿಂತ ಪ್ಲಾಸ್ಟಿಕ್‌ ಮರುಬಳಕೆ ಅತ್ಯಂತ ಕಷ್ಟಕರ. ಬಹುತೇಕ ಎಲ್ಲ ಪ್ಲಾಸ್ಟಿಕ್‌ ತ್ಯಾಜ್ಯಗುಂಡಿ ಸೇರುತ್ತದೆ ಅಥವಾ ದಹನವಾಗುತ್ತದೆ. ಸಂಶೋಧನೆಗಳ ಪ್ರಕಾರ, ಎಲ್ಲ ರೀತಿಯ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಗೀಚಿದರೆ ಅಥವಾ ಬಿಸಿ ಮಾಡಿದರೆ ಅದರಿಂದ ರಾಸಾಯಿಕ ಅಂಶಗಳು ಹೊರಬರುತ್ತವೆ. ಅಷ್ಟೇ ಅಲ್ಲ, ಇದರಲ್ಲಿರುವ ಕೆಲವು ಹಾನಿಕಾರಕ ಅಂಶಗಳಲ್ಲಿ ಬಿಸ್‌ಫೀನಾಯಿಲ್‌ (ಎ) ಕೂಡ ಇದ್ದು, ಇದರಿಂದ ಜನರಲ್ಲಿ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಪ್ಲಾಸ್ಟಿಕ್ ಹಗುರವಾಗಿದ್ದು, ಹಲವು ರೀತಿಯಲ್ಲಿ ಅದನ್ನು ಉಪಯೋಗಿಸಬಹುದಾಗಿದೆ. ಲೋಹದಂತೆ ಪ್ಲಾಸ್ಟಿಕ್‌ ತುಕ್ಕು ಹಿಡಿಯುವುದಿಲ್ಲ, ನಾಶವೂ ಆಗುವುದಿಲ್ಲ. ಬಹುತೇಕ ಎಲ್ಲ ಪ್ಲಾಸ್ಟಿಕ್‌ ಉತ್ಪನ್ನಗಳು ಕರಗುವುದಿಲ್ಲ. ನಿಧಾನಗತಿಯಲ್ಲಿ ಸಣ್ಣ ಚೂರುಗಳಾಗಿ ಒಡೆದುಕೊಂಡು, ಮೈಕ್ರೊಪ್ಲಾಸ್ಟಿಕ್‌ ಎಂದು ಕರೆದುಕೊಳ್ಳುತ್ತದೆ. ಪ್ಲಾಸ್ಟಿಕ್‌ನಿಂದ ಮೈಕ್ರೊಪ್ಲಾಸ್ಟಿಕ್‌ ಆಗಿ ಪರಿವರ್ತನೆಯಾಗುವುದು ಭೂಮಿಯಲ್ಲಿ ಅದೂ ಕಡಲತೀರಗಳಲ್ಲಿ ಅತಿ ಹೆಚ್ಚು.

ಪಾಲಿವಿನೈಲ್‌ ಕ್ಲೋರೈಡ್‌ (ಪಿವಿಸಿ)ಯಿಂದ ಉತ್ಪಾದಿಸುವ ಥರ್ಮೋಪ್ಲಾಸ್ಟಿಕ್‌ ಅನ್ನು ಕ್ಲೋರಿನೇಟೆಡ್‌ ಪಾಲಿವಿನೈಲ್‌ ಕ್ಲೋರೈಡ್‌ (ಸಿಪಿವಿಸಿ) ಎಂದು ಕರೆಯಲಾಗುತ್ತದೆ. ಕ್ಯಾರಿ ಬ್ಯಾಗ್‌, ಪೈಪ್‌, ವೈರ್‌, ಬಾಟಲ್‌ ಇವುಗಳು ಕ್ಲೋರಿನೇಟೆಡ್‌ ಪ್ಲಾಸ್ಟಿಕ್ ಉತ್ಪನ್ನಗಳು. ಇವುಗಳು ಮಣ್ಣಿಗೆ ಅತ್ಯಂತ ಹಾನಿಕರ. ಈ ಪ್ಲಾಸ್ಟಿಕ್‌ಗಳು ಮಣ್ಣಿನ ಮೂಲಕ ಅಂತರ್ಜಲ ಹಾಗೂ ಸುತ್ತಮುತ್ತಲಿನ ಜಲಮೂಲಗಳಿಗೆ ಸೇರಿಕೊಂಡು ಪರಿಸರ ವ್ಯವಸ್ಥೆಗೇ ಹಾನಿಕರವಾಗುತ್ತದೆ. ಈ ಮೂಲಕ ಕುಡಿಯುವ ನೀರಿನಲ್ಲಿ ಈ ವಿಷಕಾರಿ ಅಂಶಗಳು ಸೇರಿಕೊಂಡು ಎಲ್ಲ ಜೀವಿಗಳಿಗೂ ತಲುಪುತ್ತವೆ. ಆಹಾರ ಸಂಗ್ರಹಣೆಗಾಗಿ ಬಳಸುವ ಫೋಮ್ಡ್‌ ಪ್ಲಾಸ್ಟಿಕ್‌ ಅಥವಾ ಸ್ಟೈರೊಫೋಮ್‌ನಲ್ಲಿ ಸ್ಟೈರೀನ್‌ ಮತ್ತು ಬೆಂಜೀನ್‌ ಇರುತ್ತದೆ. ಇವು ಅತ್ಯಂತ ವಿಷಕಾರಿ ಮತ್ತು ಕಾರ್ಸಿನೋಜೆನಿಕ್. ಈ ಅಂಶಗಳು ಮನುಷ್ಯ ಶ್ವಾಸಕೋಶ, ನರಮಂಡಲ, ಸಂತಾನೋತ್ಪತ್ತಿ ಮೇಲೆ ದುಷ್ಪರಿಣಾಮ ಬೀರುತ್ತವೆ. ಕಾರ್ಸಿನೋಜೆನಿಕ್‌ನಿಂದ ಕ್ಯಾನ್ಸರ್‌ ಕೂಡ ಬರುತ್ತದೆ.

ಏಕ ಬಳಕೆ ಪ್ಲಾಸ್ಟಿಕ್‌ ದುಷ್ಪರಿಣಾಮ

ಏಕ ಬಳಕೆ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಬಿಸಾಡಬಹುದಾದ ಪ್ಲಾಸ್ಟಿಕ್‌ಗಳೆಂದು ಕರೆಯಲಾಗುತ್ತದೆ. ಇವುಗಳನ್ನು ಪ್ಯಾಕೇಜಿಂಗ್‌ನಲ್ಲಿ ಅತಿ ಹೆಚ್ಚು ಬಳಸಲಾಗುತ್ತಿದೆ. ಅಲ್ಲದೆ, ಕ್ಯಾರಿ ಬ್ಯಾಗ್‌, ಆಹಾರ ಕೊಂಡೊಯ್ಯಲು, ಬಾಟೆಲ್‌, ಸ್ಟ್ರಾ, ಬಾಕ್ಸ್‌, ಕಪ್‌, ಗ್ಲಾಸ್‌ಗಳಾಗಿಯೂ ಪ್ಲಾಸ್ಟಿಕ್‌ ಬಳಕೆಯಾಗುತ್ತಿದೆ. 1950ರಿಂದ ಬಹುಕಾಲ ಬಳಕೆಯ ಪ್ಲಾಸ್ಟಿಕ್‌ಗಿಂತ ಏಕ ಬಳಕೆ ಪ್ಲಾಸ್ಟಿಕ್‌ ಉತ್ಪಾದನೆ ಇತರೆ ಯಾವುದೇ ವಸ್ತುಗಳಿಗಿಂತ ಅತಿ ಹೆಚ್ಚಾಗಿದೆ. ಪ್ಲಾಸ್ಟಿಕ್‌ ಉತ್ಪಾದನೆ ಹೀಗೆಯೇ ಮುಂದುವರಿದರೆ 2050ರ ವೇಳೆಗೆ ಪ್ಲಾಸ್ಟಿಕ್‌ ಉದ್ಯಮ ವಿಶ್ವದಲ್ಲಿನ ಶೇ 20ರಷ್ಟು ತೈಲವನ್ನು ಬಳಸಿಕೊಳ್ಳುತ್ತದೆ. ಜಾಗತಿಕವಾಗಿರುವ ರಿಸಿನ್ಸ್‌ (ರಾಳಗಳು)ನ ನಾಲ್ಕನೇ ಒಂದರಷ್ಟು ಭಾಗವನ್ನು ಏಕ ಬಳಕೆ ಪ್ಲಾಸ್ಟಿಕ್‌ ಉತ್ಪಾದನೆಗೇ ಬಳಸಲಾಗುತ್ತದೆ. ಈ ಪ್ಲಾಸ್ಟಿಕ್‌ ಉತ್ಪಾದನೆ ಈಶಾನ್ಯ ಏಷ್ಯಾದಲ್ಲಿ ಅತಿಯಾಗಿದೆ. ಅಂದರೆ, ಚೀನಾ, ಹಾಂಗ್‌ಕಾಂಗ್‌, ಜಪಾನ್‌, ಕೊರಿಯಾ, ತೈವಾನ್‌ನಲ್ಲಿ ಅಧಿಕ ಉತ್ಪಾದನೆಯಾಗುತ್ತದೆ. ಉತ್ತರ ಅಮೆರಿಕ, ಮಧ್ಯಪ್ರಾಚ್ಯ ಹಾಗೂ ಯೂರೋಪ್‌ ನಂತರದ ಸ್ಥಾನಗಳಲ್ಲಿವೆ.

ವಿಶ್ವದಲ್ಲಿ ‍ಪ್ರತಿವರ್ಷ 400 ದಶಲಕ್ಷ ಟನ್‌ನಿಂದ 460 ದಶಲಕ್ಷ ಟನ್‌ ಪ್ಲಾಸ್ಟಿಕ್‌ ಉತ್ಪಾದನೆಯಾಗುತ್ತಿದೆ. ಇದರಲ್ಲಿ ಪ್ಯಾಕೇಜಿಂಗ್‌ ಉದ್ಯಮವೇ ಶೇ 36ರಷ್ಟು ಪ್ಲಾಸ್ಟಿಕ್‌ ಅನ್ನು ಬಳಸಿಕೊಳ್ಳುತ್ತದೆ. ಕಟ್ಟಡ ಹಾಗೂ ನಿರ್ಮಾಣ ಕ್ಷೇತ್ರ ಶೇ 16, ಜವಳಿ ಉದ್ಯಮ ಶೇ 14, ಗ್ರಾಹಕ ಮತ್ತು ಸಂಸ್ಥೆಗಳ ಉತ್ಪಾದನಾ ವಲಯ ಶೇ 10, ಸಾರಿಗೆ ಕ್ಷೇತ್ರ ಶೇ 7; ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್‌ ವಲಯ ಶೇ 4; ಕೈಗಾರಿಕಾ ಯಂತ್ರೋದ್ಯಮ ಶೇ 1ರಷ್ಟು ಪ್ಲಾಸ್ಟಿಕ್‌ ಬಳಸಿದರೆ, ಇತರೆ ಕ್ಷೇತ್ರಗಳಲ್ಲಿ ಶೇ 12ರಷ್ಟು ಪ್ಲಾಸ್ಟಿಕ್‌ ಉಪಯೋಗವಾಗುತ್ತಿದೆ. 2000ರದಲ್ಲಿ 234 ದಶಲಕ್ಷ ಟನ್‌ ಉತ್ಪಾದನೆಯಾಗುತ್ತಿದ್ದ ಪ್ಲಾಸ್ಟಿಕ್‌, 2021ರ ವೇಳೆಗೆ 460 ದಶಲಕ್ಷ ಟನ್‌ ಮೈಲುಗಲ್ಲನ್ನೂ ಮೀರಿದೆ. 2050ರ ವೇಳೆಗೆ ಈ ಪ್ರಮಾಣ 590 ದಶಲಕ್ಷ ಟನ್‌ ಮುಟ್ಟುತ್ತದೆ ಎಂದು ಅಂದಾಜಿಸಲಾಗಿದೆ. 2060ರ ವೇಳೆಗೆ ಮೂರು ಪಟ್ಟು ಹೆಚ್ಚಾಗಲಿದೆ ಎಂಬ ಆತಂಕಕಾರಿ ಊಹೆಯೂ ಇದೆ. ಪ್ಲಾಸ್ಟಿಕ್‌ ಪ್ಯಾಕೇಂಜಿಂಗ್‌ ತ್ಯಾಜ್ಯ ಶೇ 47ರಷ್ಟು ಉತ್ಪಾದನೆಯಾಗಿದ್ದು, ಇದರಲ್ಲಿ ಅರ್ಧದಷ್ಟು ಏಷ್ಯಾದಲ್ಲೇ ಕಂಡುಬಂದಿದೆ. ವಿಶ್ವದಲ್ಲಿ ಅತಿಹೆಚ್ಚು ಪ್ಲಾಸ್ಟಿಕ್‌ ಪ್ಯಾಕೇಂಜಿಗ್‌ ತ್ಯಾಜ್ಯವನ್ನು ಚೀನಾ ಉತ್ಪಾದಿಸುತ್ತಿದೆ. ತಲಾವಾರು ಲೆಕ್ಕಾಚಾರದಲ್ಲಿ ಅಮೆರಿಕ ಈ ತ್ಯಾಜ್ಯ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದ್ದು, ಜಪಾನ್‌, ಯೂರೋಪ್‌ ನಂತರದ ಸ್ಥಾನದಲ್ಲಿವೆ ಎಂದು ವಿಶ್ವಸಂಸ್ಥೆಯ ಸಮೀಕ್ಷಾ ವರದಿ ತಿಳಿಸಿದೆ. ಏಷ್ಯಾ-ಪೆಸಿಫಿಕ್‌ ವಲಯದಲ್ಲಿ 2025ರ ವರೆಗೆ ಶೇ 70ರಷ್ಟು ಪ್ಲಾಸ್ಟಿಕ್‌ ನಿರ್ವಹಣೆಯಲ್ಲಿ ನಿಯಂತ್ರಣವೇ ಇಲ್ಲ ಎಂಬುದೂ ವರದಿಯಾಗಿದೆ.

ಕಿಷ್ಕಿಂಧೆ: ಸುಂದರ ಪ್ರಕೃತಿ ಮಡಿಲು PV Web Exclusive-ಪ್ರಕೃತಿ ಮಡಿಲು| ಜಲಪಾತಗಳ ನೀರು ಕುಡಿಯದಿರಿ... ಅದು ಅಶುದ್ಧ!

ಅಂತರರಾಷ್ಟ್ರೀಯವಾಗಿ ಕಡಲತೀರದಲ್ಲಿ ಸ್ವಚ್ಛತೆ ಕೈಗೊಂಡಾಗ ಸಾಮಾನ್ಯವಾಗಿ 23 ತ್ಯಾಜ್ಯಗಳು ಅತಿ ಹೆಚ್ಚಾಗಿ ಕಂಡುಬಂದಿವೆ. ಸಿಗರೇಟ್‌ ತುಂಡು, ಪೇಯಗಳ ಪ್ಲಾಸ್ಟಿಕ್‌ ಬಾಟಲ್‌, ಪ್ಲಾಸ್ಟಿಕ್‌ ಬಾಟಲ್‌ ಮುಚ್ಚಳಗಳು, ಆಹಾರ ಸುತ್ತಳಿಕೆಗಳು, ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್ಸ್‌, ಸ್ಟ್ರಾ-ಸ್ಟಿರ್ರೆರ್ಸ್, ಪೇಯಗಳ ಗಾಜಿನ ಬಾಟಲ್‌, ಇತರೆ ಪ್ಲಾಸ್ಟಿಕ್‌ ಬ್ಯಾಗ್‌ಗಳು ಇದರಲ್ಲಿವೆ. ಇದರಲ್ಲಿ ಏಕ ಬಳಕೆಯ ಪ್ಲಾಸ್ಟಿಕ್‌ ಉತ್ಪನ್ನಗಳೇ ಅಗ್ರ ಹತ್ತು ಸ್ಥಾನ ಪಡೆದುಕೊಂಡಿವೆ ಎಂದು ವರದಿ ವಿವರಣೆ ನೀಡಿದೆ. ಒಂದರಿಂದ ಐದು ಟ್ರಿಲಿಯನ್‌ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ವಿಶ್ವದಾದ್ಯಂತ ಪ್ರತಿ ವರ್ಷ ಬಳಸಲಾಗುತ್ತಿದೆ. ಈ ಪ್ಲಾಸ್ಟಿಕ್‌ ಬ್ಯಾಗ್‌ಗಳಿಂದ ಫ್ರಾನ್ಸ್‌ಗೆ ಎರಡು ಹೊದಿಕೆಗಳನ್ನು ಮಾಡಬಹುದು. ಅಷ್ಟು ದೊಡ್ಡ ವಿಸ್ತಾರ ಇದರದ್ದು ಎಂದು ಪ್ಲಾಸ್ಟಿಕ್‌ ಆವರಿಸಿಕೊಂಡಿರುವ ಬಗೆಯನ್ನು ವಿಶ್ಲೇಷಿಸಿದೆ. ಅಭಿವೃದ್ಧಿಶೀಲ ದೇಶಗಳಲ್ಲಿ ಪ್ಲಾಸ್ಟಿಕ್‌ ಮಾಲಿನ್ಯದಿಂದ ಪರೋಕ್ಷವಾಗಿ ಸಾಮಾಜಿಕ ದುಷ್ಟಪರಿಣಾಮಗಳು ಹೆಚ್ಚಾಗುತ್ತಿವೆ. ಅಭಿವೃದ್ಧಿಶೀಲ ದೇಶಗಳಲ್ಲಿ ಘನತ್ಯಾಜ್ಯ ನಿರ್ವಹಣೆಯ ನಿಯಮಗಳು ಪರಿಣಾಮಕಾರಿಯಾಗಿಲ್ಲದ ಕಾರಣ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ.

ಆರ್ಥಿಕ ಪರಿಣಾಮ

ಏಕ ಬಳಕೆಯ ಪ್ಲಾಸ್ಟಿಕ್‌ನಿಂದ ಕಡಲ ಪ್ರವಾಸೋದ್ಯಮಕ್ಕೆ ಅತ್ಯಂತ ಮಾರಕವಾಗಿದ್ದು, ಏಷ್ಯಾ-ಪೆಸಿಫಿಕ್‌ ಎಕನಾಮಿಕ್‌ ಕಾರ್ಪೊರೇಷನ್‌ (ಎಪಿಇಸಿ) ಅಂದಾಜಿನ ಪ್ರಕಾರ ಈ ಕ್ಷೇತ್ರದಲ್ಲೇ 1.3 ಶತಕೋಟಿ ಡಾಲರ್‌ನಷ್ಟು ನಷ್ಟವಾಗಿದೆ. ಪ್ಯಾಸ್ಟಿಕ್‌ ಮಾಲಿನ್ಯವನ್ನು ಇಂದು ತಡೆಯದಿದ್ದರೆ ನಾಳೆ ಅದನ್ನು ಸ್ವಚ್ಛಗೊಳಿಸುವುದು ಅತ್ಯಂತ ದುಬಾರಿಯಾಗಲಿದೆ. ಏಕ ಬಳಕೆಯ ಪ್ಲಾಸ್ಟಿಕ್‌ ಪರಿಸರದ ಮೇಲೆ ಮಾಡುವ ದುಷ್ಪರಿಣಾಮವವನ್ನು ಇಂದು ನಾವು ಅದರ ಬಳಕೆಯನ್ನು ನಿಲ್ಲಿಸಿ, ತಡೆಯದಿದ್ದರೆ ಭವಿಷ್ಯದಲ್ಲಿ ಪ್ರತಿ ವರ್ಷ 630 ದಶಲಕ್ಷ ಯುರೊಗಳನ್ನು (ಸುಮಾರು, 4,800 ಕೋಟಿ) ಪ್ರತಿ ವರ್ಷ ವೆಚ್ಚ ಮಾಡಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಇದು ಎಲ್ಲ ದೇಶಗಳ ಆರ್ಥಿಕತೆಗೆ ದೊಡ್ಡ ಪೆಟ್ಟು.

ಕಾಯ್ದೆಯಿಂದ ಫಲಿತಾಂಶ ಶೂನ್ಯ

ಭಾರತದಲ್ಲಿ ದೇಶಮಟ್ಟದ, ರಾಜ್ಯಮಟ್ಟದ ಹಾಗೂ ನಗರ ಮಟ್ಟದಲ್ಲಿ ಕಾಯ್ದೆ ಹಾಗೂ ನಿಯಮಗಳ ಮೂಲಕ ಪ್ಲಾಸ್ಟಿಕ್‌ ಬ್ಯಾಗ್‌ ಹಾಗೂ ಇತರೆ ಉತ್ಪನ್ನಗಳನ್ನು ನಿಷೇಧಿಸಲಾಗಿದೆ. 2016ರಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆ ನಿಯಮಗಳನ್ನು ದೇಶ ಮಟ್ಟದಲ್ಲಿ ಜಾರಿಗೆ ತಂದು, ಕರಗದ ಪ್ಲಾಸ್ಟಿಕ್‌ ಬ್ಯಾಗ್‌ಗಳನ್ನು ನಿಷೇಧಿಸಲಾಯಿತು. ಆದರೆ ಇದರ ಫಲಿತಾಂಶ ಬಹುತೇಕ ಶೂನ್ಯ ಎಂದು ವಿಶ್ವಸಂಸ್ಥೆಯ ಸಮೀಕ್ಷಾ ವರದಿ ತಿಳಿಸಿದೆ. ಹಿಮಾಚಲ ಪ್ರದೇಶದಲ್ಲಿ 2004ರಲ್ಲಿ ಕರಗದ ಪ್ಲಾಸ್ಟಿಕ್‌ ಬ್ಯಾಗ್‌ಗಳ ಉತ್ಪಾದನೆ, ಸಂಗ್ರಹ, ಬಳಕೆ, ಮಾರಾಟ, ವಿತರಣೆಯನ್ನು 1995ರ ಕಾಯ್ದೆಯಂತೆ ನಿಷೇಧಿಸಲಾಯಿತು. 2011ರಲ್ಲಿ ಪ್ಲಾಸ್ಟಿಕ್‌ ಕಪ್‌, ಗ್ಲಾಸ್‌, ಪ್ಲೇಟ್‌ಗಳನ್ನು ನಿಷೇಧಿಸಲಾಯಿತು. ಇದರಿಂದ ಹಿಮಾಚಲ ಪ್ರದೇಶದಲ್ಲಿ ಪ್ಲಾಸ್ಟಿಕ್‌ ಮಾಲಿನ್ಯ ಗಣನೀಯವಾಗಿ ಕಡಿತಗೊಂಡಿದೆ. ಕರ್ನಾಟಕದಲ್ಲಿ 2016ರಲ್ಲಿ ಪ್ಲಾಸ್ಟಿಕ್‌ ನಿಷೇಧ ಜಾರಿಗೆ ಬಂದಿತು. ಆದರೆ, ಈ ರಾಜ್ಯದಲ್ಲಿ ಪ್ಲಾಸ್ಟಿಕ್‌ ಬ್ಯಾಗ್‌ಗಳ ಲಭ್ಯತೆ ಹಾಗೂ ಬಳಕೆ ಎಂದಿನಂತೆಯೇ ಮುಂದುವರಿದಿದೆ. ನವದೆಹಲಿ, ಮಹರಾಷ್ಟ್ರ, ಪಂಜಾಬ್‌, ಹರ‍್ಯಾಣ, ಕೇರಳ, ಪಶ್ಚಿಮ ಬಂಗಾಳಗಳಲ್ಲೂ ಪ್ಲಾಸ್ಟಿಕ್‌ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಆದರೆ, ಅಲ್ಲೂ ಪ್ಲಾಸ್ಟಿಕ್‌ ಬಳಕೆ ಹಾಗೂ ಉತ್ಪಾದನೆಗೆ ಅಂಕುಶ ಬಿದ್ದಿಲ್ಲ. ಸಿಕ್ಕಿಂನಲ್ಲಿ 1998ರಲ್ಲಿ ಪ್ಲಾಸ್ಟಿಕ್‌ ನಿಷೇಧ ಜಾರಿಯಾಗಿದ್ದರೂ, ಶೇ 34ರಷ್ಟು ಪ್ಲಾಸ್ಟಿಕ್‌ ಬಳಕೆ ನಿಂತಿಲ್ಲ. ಪ್ಲಾಸ್ಟಿಕ್‌ ಬಳಕೆಯಿಂದ ಪೇಪರ್‌ ಬ್ಯಾಗ್‌ ಬಳಕೆಗೆ ಶೇ 66ರಷ್ಟು ಪರಿವರ್ತನೆಯಾಗಿರುವುದು ಒಳ್ಳೆಯ ಬೆಳವಣಿಗೆ.

ಕೆಲವೇ ಕೈಗಳಿಂದ ಸಾಧ್ಯವಿಲ್ಲ

ಅತ್ಯಂತ ಅಧಿಕ ಪ್ರಮಾಣದಲ್ಲಿ ಪ್ಲಾಸ್ಟಿಕ್‌ ಬಳಕೆ, ಕಳಪೆ ಮಟ್ಟದಲ್ಲಿ ತ್ಯಾಜ್ಯ ನಿರ್ವಹಣೆಯಿಂದ ಭಾರತದಲ್ಲಿ ಪರಿಸರ ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿದೆ. ಪ್ಲಾಸ್ಟಿಕ್‌ ತ್ಯಾಜ್ಯ ಬಹುತೇಕ ಎಲ್ಲ ಪ್ರದೇಶಗಳಲ್ಲೂ ಕಾಣಸಿಗುತ್ತದೆ. ಕೆಲವು ಪ್ರದೇಶಗಳಲ್ಲಿ ಸ್ವಯಂಸೇವಕರು ಪ್ಲಾಸ್ಟಿಕ್‌ ಬಳಕೆ ಬಗ್ಗೆ ಅರಿವು ಮೂಡಿಸಿ, ತ್ಯಾಜ್ಯ ನಿರ್ವಹಣೆ ಮಾಡುತ್ತಿದ್ದಾರೆ. ದಿನಕ್ಕೊಂದು, ವಾರಕ್ಕೊಂದು, ತಿಂಗಳಿಗೊಂದು ಎಂದು ಅಭಿಯಾನ ನಡೆಸುತ್ತಿದ್ದರೂ, ಅತಿಯಾದ ಬಳಕೆಯಿಂದ ಕೆಲವೇ ಕೆಲವು ಕೈಗಳು ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಕಡಲ ತೀರವನ್ನು ಸ್ವಚ್ಛಗೊಳಿಸುವುದು ಪರಿಸರ ಮೇಲಾಗುತ್ತಿರುವ ದುಷ್ಪರಿಣಾಮವನ್ನು ಕಡಿತಗೊಳಿಸುವ ಶಕ್ತಿಯುತ ಸಾಧನ. ಸ್ವಚ್ಛತೆಯಲ್ಲಿ ಉತ್ತಮ ಫಲಿತಾಂಶವನ್ನು ಸಾಧಿಸಬೇಕೆಂದರೆ, ಮಾಲಿನ್ಯದ ಪ್ರಮುಖ ಮೂಲವನ್ನು ಗುರುತಿಸುವುದು. ಅದನ್ನು ಮೂಲದಲ್ಲೇ ಪರಿಹರಿಸಲು ಕಾರ್ಯನಿರತವಾಗಬೇಕು. ಇವೆಲ್ಲವೂ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದ್ದು, ಅದನ್ನು ಗಟ್ಟಿಗೊಳಿಸಬೇಕಿದೆ. ಅಲ್ಲದೆ, ಸ್ಥಳೀಯ ಸಮುದಾಯದಲ್ಲಿ ಪ್ಲಾಸ್ಟಿಕ್‌ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವ ಕೆಲವಾಗಬೇಕಿದೆ ಎಂದು ವಿಶ್ವಸಂಸ್ಥೆ ಅಭಿಪ್ರಾಯಪಟ್ಟಿದೆ.

ಸೆಲ್ಫಿ, ಸ್ಟೇಟಸ್‌ಗಷ್ಟೇ ಮೀಸಲಾಗದಿರಲಿ, ಪ್ಲಾಸ್ಟಿಕ್‌ ನಿಷೇಧ ಅನುಷ್ಠಾನಕ್ಕಿರಲಿ ಬದ್ಧತೆ

ಪ್ಲಾಸ್ಟಿಕ್‌ ನಿಷೇಧ; ಇನ್ನು ಮುಂದೆ ಅದನ್ನು ಬಳಸುವಂತಿಲ್ಲ, ಎಲ್ಲರೂ ಕೈಜೋಡಿಸಬೇಕು. ಇದು ಕಡ್ಡಾಯ... ಹೀಗೆಂದು ಸರ್ಕಾರಿ ಸಂಸ್ಥೆಗಳು ಬಹಳಷ್ಟು ಪ್ರಚಾರ ಕೂಡ ಮಾಡಿದವು. ಮಹಾತ್ಮ ಗಾಂಧಿ ಜಯಂತಿ, ಪರಿಸರ ದಿನದ ಸಂದರ್ಭಗಳಲ್ಲಿ ಈ ಪ್ರಚಾರ, ಘೋಷವಾಕ್ಯಗಳು ಹೆಚ್ಚಾಗಿರುತ್ತವೆ. ಆದರೂ, ಪ್ಲಾಸ್ಟಿಕ್‌ ಎಂಬುದು ಪರಿಸರವನ್ನು ಪರಿಪರಿಯಾಗಿ ಕಾಡುತ್ತಿರುವುದೂ ನಿಜ. ಅದಕ್ಕಾಗಿ ಪ್ಲಾಸ್ಟಿಕ್ ನಿಷೇಧ ಅಭಿಯಾನ ಆರಂಭವಾಗುತ್ತಿದೆ ಹಾಗೂ ಅದರ ಅಗತ್ಯವೂ ಇದೆ. ಆದರೆ ಅದು ಸೆಲ್ಫಿ, ವಾಟ್ಸ್‌ ಆಯಪ್‌ ಸ್ಟೇಟಸ್‌, ಎಫ್‌ಬಿ, ಟ್ವಿಟರ್‌ಗಳಲ್ಲಿ ಟೈಮ್‌ಲೈನ್‌ ಪೋಸ್ಟ್‌ಗಳಿಗಷ್ಟೇ ಸೀಮಿತವಾಗಬಾರದು. ಏಕೆಂದರೆ, ನಾಲ್ಕು ವರ್ಷಗಳ ಹಿಂದೆ 'ಪೊರಕೆ ಹಿಡಿದು ಕಸ ಗುಡಿಸಿದೆ' ಎಂಬ ಚಿತ್ರಗಳು ಹರಿದಾಡಿದವೇ ವಿನಹ, ದೇಶ ಮಾತ್ರ ಸ್ವಚ್ಛವಾಗಲಿಲ್ಲ.

2014ರ ಅಕ್ಟೋಬರ್‌ 2ರಂದು ಗಾಂಧಿ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದರು. 'ಸ್ವಾತಂತ್ರ್ಯಕ್ಕಿಂತ ನೈರ್ಮಲ್ಯಕ್ಕೇ ಹೆಚ್ಚಿನ ಪ್ರಾಮುಖ್ಯತೆ' ಎಂದಿದ್ದ ರಾಷ್ಟ್ರಪಿತ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಅದನ್ನೇ ಮಂತ್ರವಾಗಿಸಿಕೊಂಡ ಮೋದಿ, ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದಾಗ, ಇಡೀ ದೇಶ ಅದಕ್ಕೆ ಸ್ಪಂದಿಸಿತು. ರಾಜಕಾರಣಿಗಳಿಂದ ಹಿಡಿದು, ಗಣ್ಯಾತಿಗಣ್ಯರೆಲ್ಲ ಪೊರಕೆ ಹಿಡಿದು ಬೀದಿಗಿಳಿದು ಕಸ ಗುಡಿಸಿದರು. ಇನ್ನೇನು ಕೆಲವೇ ವರ್ಷಗಳಲ್ಲಿ ದೇಶ ಸ್ವಚ್ಛತೆಯಿಂದ ಕಂಗೊಳಿಸುತ್ತದೆ ಎಂಬುದೇ ಕನಸಗಾಗಿತ್ತು. ಆದರೆ, ಆ ಕನಸು ನಾಲ್ಕು ವರ್ಷಗಳ ನಂತರವೂ ಕನಸಾಗಿಯೇ ಉಳಿದಿದೆ. ವಾರಕ್ಕೊಂದು ಬಾರಿ ಪೊರಕೆ ಹಿಡಿದು ಕಸ ಗುಡಿಸುತ್ತೇವೆ ಎಂದ ರಾಜಕಾರಣಿಗಳು, ಗಣ್ಯರು ದಿನಕಳೆದಂತೆ ಅತ್ತ ಸುಳಿಯವುದು ಬಿಡಿ, ಆ ಬಗ್ಗೆ ಮಾತನ್ನೂ ನಿಲ್ಲಿಸಿದರು. ಪೊರಕೆಯೊಂದಿಗಿನ ಫೋಟೊಗಳೂ ಇಲ್ಲದಂತಾದವು.

ನಿಜ, ಯಾವುದೇ ಅಭಿಯಾನ ಬೆಳಗಾಗುವುದರಲ್ಲಿ ಯಶ ಸಾಧಿಸುವುದಿಲ್ಲ. ಅದರ ಬಗ್ಗೆ ಸಂದೇಹವೇ ಇಲ್ಲ. ಆದರೆ, ಸ್ವಚ್ಛ ಭಾರತ ಅಭಿಯಾನಕ್ಕೆ ನಾಲ್ಕು ವರ್ಷ ಕಳೆದಿದೆ. ಅಭಿಯಾನದ ಆರಂಭದಲ್ಲಿದ್ದ ಶೂರತ್ವ ದಿನ ಕಳೆದಂತೆ ಕರಗಿಹೋಗಿದ್ದರಿಂದ ಅದೂ ಇತರೆ ನಾಮಕಾವಸ್ತೆ ಅಭಿಯಾನಗಳಂತಾಗಿದೆ. ಪೊರಕೆ ಹಿಡಿದು ಕಸ ಗುಡಿಸಿ, ಭಾರತವನ್ನು ಸ್ವಚ್ಛಗೊಳಿಸೋಣ ಎಂದು ಸಾರಿದ್ದ ರಾಜಕಾರಣಿಗಳು, ಗಣ್ಯರೆಲ್ಲರೂ ಅವರ ಮಾತಿನಂತೆಯೇ ವಾರಕ್ಕೊಂದು ಬಾರಿ ಬೀದಿಗೆ ಇಳಿದಿದ್ದರೆ ಪರಿಸ್ಥಿತಿ ಸುಧಾರಿಸುತ್ತಿತ್ತೇನೋ? ಆದರೆ ಅವರೆಲ್ಲ ಹಾಗೆ ಮಾಡಲೇ ಇಲ್ಲ. ಬದಲಿಗೆ ಅದನ್ನು ಮರೆತೇಹೋದರು. ಇದೀಗ ಪ್ಲಾಸ್ಟಿಕ್‌ ನಿಷೇಧದ ಬಗ್ಗೆ ಮಾತನಾಡುತ್ತಿದ್ದಾರೆ. ಇನ್ನು ಸಾಮಾಜಿಕ ತಾಣಗಳಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯದ್ದೇ ಕಾರುಬಾರು!

ಅಂದಹಾಗೆ, ಪ್ಲಾಸ್ಟಿಕ್‌ ನಿಷೇಧ ಎಂಬುದು ಹೊಸದೇನೂ ಅಲ್ಲ. 1986ರಲ್ಲೇ ಪರಿಸರ ಸಂರಕ್ಷಣೆ ಕಾಯ್ದೆ ಜಾರಿಗೆ ಬಂದಿತು. 2011ರಲ್ಲಿ ಈ ಕಾಯ್ದೆಯಡಿಯೇ ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆಯ ನಿಯಮಗಳನ್ನು ಜಾರಿಗೆ ತಂದು ನಿರ್ವಹಣೆಯನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಲಾಗಿತ್ತು ಮತ್ತು ಅದಕ್ಕಾಗಿ ರಾಜ್ಯ ಮಟ್ಟದ ನಿಗಾ ಸಮಿತಿಯನ್ನೂ ನೇಮಿಸಲಾಯಿತು. ನಂತರ 2016ರಲ್ಲಿ ಈ ನಿಯಮಗಳನ್ನು ಮತ್ತಷ್ಟು ಗಟ್ಟಿಗೊಳಿಸಲಾಯಿತು. ಪ್ಲಾಸ್ಟಿಕ್‌ ಬ್ಯಾಗ್‌ನ ದಪ್ಪವನ್ನು 40 ಮೈಕ್ರೋನ್‌ನಿಂದ 50 ಮೈಕ್ರೋನ್‌ಗೆ ಹೆಚ್ಚಿಸಲಾಯಿತು. 2018ರಲ್ಲಿ ಮತ್ತೆ ತಿದ್ದುಪಡಿ ತರಲಾಯಿತು. ಪ್ಲಾಸ್ಟಿಕ್‌ ಬಳಕೆ, ಸಂಗ್ರಹದ ವಿರುದ್ಧ ಅಧಿಕಾರಿಗಳು ನೂರಾರು ದಾಳಿಗಳನ್ನೂ ನಡೆಸಿದ್ದಾರೆ. ದಂಡವನ್ನೂ ವಿಧಿಸುತ್ತಾರೆ. ಆದರೆ, ಅವೆಲ್ಲವೂ ಒಂದು ದಾಖಲೆಗಾಗಿ, 'ಫೈಲ್‌ ಬಿಲ್ಡ್‌' ಮಾಡಿ ಕೆಲಸ ಮಾಡಿದ್ದೇವೆ ಎಂದು ತೋರಿಸಲಷ್ಟೇ ಎಂಬುದು ಬಹಿರಂಗ ಸತ್ಯ. ಪ್ಲಾಸ್ಟಿಕ್‌ ಎಲ್ಲಿ ತಯಾರಿಸುತ್ತಾರೆ ಎಂಬುದು ಸ್ಥಳೀಯ ಅಧಿಕಾರಿಗಳಿಗೆ ಗೊತ್ತು. ಹೇಗೆ ಸಾಗಣೆಯಾಗುತ್ತದೆ, ಎಲ್ಲಿಂದ ಎಲ್ಲಿಗೆ ರಫ್ತು, ಆಮದಾಗುತ್ತದೆ ಎಂಬುದೂ ಗೊತ್ತು. ಇಷ್ಟಿದ್ದರೂ ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಮಾತ್ರ ಕಿಂಚಿತ್ತೂ ಕಡಿಮೆಯಾಗಲಿಲ್ಲ. ಏಕೆಂದರೆ, ಪ್ಲಾಸ್ಟಿಕ್‌ ದಂಧೆಯ ಮೇಲೆ ದಾಳಿ ನಡೆದಿದ್ದು ಕೇವಲ 'ಫೈಲ್‌ ಬಿಲ್ಡ್‌ ಅಪ್‌'ಗಾಗಿ ಮಾತ್ರ.

ದ ಎನರ್ಜಿ ಆಯಂಡ್‌ ರಿಸೋರ್ಸಸ್‌ ಇನ್‌ಸ್ಟಿಟ್ಯೂಟ್‌ (ಟೆರಿ) ಸಮೀಕ್ಷಾ ವರದಿ ಪ್ರಕಾರ, 2014-15ರಲ್ಲಿಯೇ ದೇಶದಲ್ಲಿ ಪ್ಲಾಸ್ಟಿಕ್‌ ಬಳಕೆಯ ಪ್ರಮಾಣ ಪ್ರತಿ ಮನುಷ್ಯನಿಗೆ 11 ಕೆ.ಜಿ.ರಷ್ಟಿತ್ತು. ಇತರೆ ದೇಶಗಳಿಗೆ ಹೋಲಿಸಿದರೆ ಇದು ಕಡಿಮೆ ಎನಿಸಿದರೂ, ವಿಶ್ವದ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಇದು ಅತೀ ಹೆಚ್ಚು. ಪ್ಲಾಸ್ಟಿಕ್‌ ಬಳಕೆ ಪ್ಯಾಕೇಜಿಂಗ್‌ ಕ್ಷೇತ್ರದಲ್ಲಿ ಅಧಿಕ. ಶೇ 43ರಷ್ಟು ಪ್ಲಾಸ್ಟಿಕ್‌ ಅಲ್ಲಿಯೇ ಬಳಕೆಯಾಗುತ್ತದೆ. ಮೂಲ ಸೌಕರ್ಯ ಕ್ಷೇತ್ರದ್ದು (ಶೇ 21) ಎರಡನೇ ಸ್ಥಾನ. ಇನ್ನು ಆಟೊ ಕ್ಷೇತ್ರದಲ್ಲಿ ಶೇ 16ರಷ್ಟಿರುವ ಪ್ಲಾಸ್ಟಿಕ್‌ ಬಳಕೆ, ಕೃಷಿಯಲ್ಲೂ ಶೇ 2ರಷ್ಟು ಪ್ರಭುತ್ವ ಸಾಧಿಸಿದೆ.

ಬಿಸಾಡಿದರೆ ಕಸವಾಗುವ, ಬೆಂಕಿ ಇಟ್ಟರೆ ವಿಷಗಾಳಿಯಾಗುವ ಪ್ಲಾಸ್ಟಿಕ್‌ ಭೂಮಿಗೆ ಸೇರಿ ಅಲ್ಲಿ ಕರಗದೆ ಪರಿಸರವನ್ನು ಅತಿಯಾಗಿ ಕಾಡುತ್ತಿದೆ. ಪ್ಲಾಸ್ಟಿಕ್‌ ನಿತ್ಯ ಬಳಕೆಯಲ್ಲಿ ಅತ್ಯಗತ್ಯವಾದ ಸಾಧನವಾಗಿ ಆವರಿಸಿಕೊಂಡಿರುವುದು ಕಹಿಸತ್ಯ. ಅದನ್ನು ಅಷ್ಟು ಸುಲಭವಾಗಿ ತೆಗೆದುಹಾಕಲು ಸಾಧ್ಯವಿಲ್ಲ. ಅದಕ್ಕಾಗಿ ಕ್ರಾಂತಿ ರೀತಿಯ ಅಭಿಯಾನವೇ ಆಗಬೇಕು. ಗಾಂಧಿ ಜಯಂತಿ ಸಂದರ್ಭದಲ್ಲಿ ಮಾತ್ರ ಅದಕ್ಕೊಂದು ವೇದಿಕೆ ನೀಡಿ, ಬೀದಿಗಿಳಿದರೆ ಸಾಲದು, ನಿತ್ಯದ ಬದುಕಿನಿಂದ ಅದನ್ನು ಓಡಿಸುವ ಬದ್ಧತೆಯುಳ್ಳ ಕೆಲಸವಾಗಬೇಕು. ಅದಕ್ಕೂ ಪ್ರಮುಖವಾಗಿ, ಎಲ್ಲವನ್ನೂ ಮೂಲದಿಂದಲೇ ನಿಗ್ರಹಿಸಬೇಕು ಎಂಬ ವಾಸ್ತವವನ್ನು ಅರಿತು, ಪ್ಲಾಸ್ಟಿಕ್‌ ತಯಾರಿಕೆಗೇ ಅವಕಾಶ ನೀಡಬಾರದು. ಪ್ಲಾಸ್ಟಿಕ್‌ ಸಿಗದೇ ಇದ್ದರೆ, ಬಳಕೆಗೆ ಅವಕಾಶವೇ ಇರುವುದಿಲ್ಲ ಅಲ್ಲವೇ? ಜೊತೆಗೆ, ಆರೋಗ್ಯಕರ ಪರಿಸರಕ್ಕಾಗಿ ನಾಗರಿಕರೂ ಪ್ಲಾಸ್ಟಿಕ್‌ ಬಳಕೆಗೆ ಇತಿಶ್ರೀ ಹಾಡಲೇಬೇಕಿದೆ. ಅಭಿಯಾನದಲ್ಲಿ ಕೈಜೋಡಿಸಿ, ಆದರೆ ಅದು ಸೆಲ್ಫಿಗೆ ಸೀಮಿತವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಹೆಗಲಮೇಲಿದೆ ಎಂಬುದನ್ನು ಮರೆಯಬಾರದು.

Dailyhunt
Disclaimer: This content has not been generated, created or edited by Dailyhunt. Publisher: Prajavani