Dailyhunt Logo
  • Light mode
    Follow system
    Dark mode
    • Play Story
    • App Story
ಪುಣೆ ಉದ್ಯಮಿ ಹತ್ಯೆಗೆ ಎಐ ಬಳಸಿ ಸಂಚು: ಚಾರ್ಜ್‌ಶೀಟ್‌ನಲ್ಲಿ ಹಲವು ಅಂಶ ಉಲ್ಲೇಖ

ಪುಣೆ ಉದ್ಯಮಿ ಹತ್ಯೆಗೆ ಎಐ ಬಳಸಿ ಸಂಚು: ಚಾರ್ಜ್‌ಶೀಟ್‌ನಲ್ಲಿ ಹಲವು ಅಂಶ ಉಲ್ಲೇಖ

ಪುಣೆ: ಉದ್ಯಮಿ ಕೇತನ್‌ ವಿಶಾಲ್‌ ಅಗರವಾಲ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 5053 ಪುಟಗಳ ದೋಷಾರೋಪ ಪಟ್ಟಿಯನ್ನು ಪುಣೆ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಜೂನ್ 18 ರಂದು ಲೋಹಗಢ ಕೋಟೆಯಿಂದ ತಳ್ಳಿ ಕೇತನ್ ಅಗರವಾಲ್‌ ಅವರನ್ನು ಕೊಲೆ ಮಾಡಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಅವರೊಂದಿಗೆ ನಿಶ್ಚಿತಾರ್ಥವಾಗಿದ್ದ ಸಿಯಾ ಗೋಯಲ್, ಆಕೆಯ ಪ್ರಿಯಕರ ಚೇತನ್ ಚೌಧರಿ ಮತ್ತು ರಿತೇಶ್ ಹಾಂಗೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಕೇತನ್ ಅಗರ್ವಾಲ್ ಹತ್ಯೆಗೆ ಪಿತೂರಿ: ಚೇತನ್ ಚೌಧರಿ ಸ್ನೇಹಿತ ರಿತೇಶ್ ಬಂಧನ

ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿರುವ ಪ್ರಮುಖಾಂಶಗಳು

'ಮಹಿ' ಹೆಸರಿನ ನಕಲಿ ಇನ್‌ಸ್ಟಾಗ್ರಾಮ್ ಖಾತೆ: ಆರೋಪಿಗಳು ತಮ್ಮ ಪರಿಚಿತ ಹುಡುಗಿಯೊಬ್ಬಳ ಫೋಟೋ ಬಳಸಿ 'ಮಹಿ' ಎಂಬ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಮ್ ಖಾತೆ ತೆರೆದಿದ್ದರು. ಸಿಯಾ ಗೋಯಲ್‌ಗೆ ಸರ್ಪ್ರೈಸ್ ಬರ್ತ್‌ಡೇ ಪಾರ್ಟಿ ನೀಡಲು ಲೋಹಗಢ ಕೋಟೆಗೆ ಕರೆದುಕೊಂಡು ಬರುವಂತೆ ಸಿಯಾ ಗೆಳತಿಯ ಸೋಗಿನಲ್ಲಿ ಕೇತನ್‌ಗೆ ಸಂದೇಶ ಕಳುಹಿಸಲಾಗಿತ್ತು. ರಿತೇಶ್ ಹತ್ಯೆಯ ಸಂಚನ್ನು ರೂಪಿಸಿದ್ದ. ಕೊಲೆಯ ಬಳಿಕ ಆ ಖಾತೆಯನ್ನು ಡಿಲೀಟ್ ಮಾಡಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

ಯೋಜನೆಯಂತೆ ಜೂನ್ 18ರಂದು ಚೌಧರಿ ನಿರ್ಗಮನ ದಾರಿಯ ಮೂಲಕ ಕೋಟೆ ಪ್ರವೇಶಿಸಿ ದೇವಸ್ಥಾನದ ಬಳಿ ಕಾಯುತ್ತಿದ್ದ. ಸಿಯಾ ಆತನಿಗೆ ಸಿಗ್ನಲ್ (ಸನ್ನೆ) ನೀಡುತ್ತಿದ್ದಂತೆಯೇ ಆತ ಮುಂದಕ್ಕೆ ಬಂದಿದ್ದ. ಕೇತನ್ ಬೇರೆಡೆ ಗಮನಹರಿಸಿದ್ದಾಗ, ಸಿಯಾ ಹಿಂಭಾಗದಿಂದ ಆತನನ್ನು ಜೋರಾಗಿ ತಳ್ಳಿದ್ದಳು. ಅದೇ ಸಮಯದಲ್ಲಿ ಚೌಧರಿ ಕಾಲಿಗೆ ಜೋರಾಗಿ ಒದ್ದಿದ್ದಾನೆ. ಪರಿಣಾಮವಾಗಿ ಕೇತನ್ ಕೋಟೆಯ ತುದಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಚಾಟ್‌ಜಿಪಿಟಿ, ಸಿನಿಮಾ ಮತ್ತು ಪಾಡ್‌ಕಾಸ್ಟ್ ಬಳಕೆ: ಆರಂಭದಲ್ಲಿ ಹೊರರಾಜ್ಯದ ವ್ಯಕ್ತಿಯೊಬ್ಬನಿಗೆ ಸುಪಾರಿ ನೀಡಿ ಕೇತನ್‌ಗೆ ತೀವ್ರ ಗಾಯಗೊಳಿಸಲು ಸಂಚು ರೂಪಿಸಲಾಗಿತ್ತು. ಆದರೆ, ಆ ವ್ಯಕ್ತಿಯಿಂದ ತಾವು ಸಿಕ್ಕಿಬೀಳುವ ಭಯದಿಂದ ಆ ಯೋಜನೆಯನ್ನು ಕೈಬಿಟ್ಟು, ತಾವೇ ಕೊಲೆ ಮಾಡಲು ನಿರ್ಧರಿಸಿದ್ದರು.

ಇದಕ್ಕಾಗಿ ಅವರು ಕೊಲೆಗೆ ಸಂಬಂಧಿಸಿದ ಸಿನಿಮಾಗಳನ್ನು ವೀಕ್ಷಿಸಿದ್ದರು. ಅಂತರ್ಜಾಲದಲ್ಲಿ ಹುಡುಕಾಟ ನಡೆಸಿದ್ದಲ್ಲದೆ ಚಾಟ್‌ಜಿಪಿಟಿಯನ್ನೂ ಬಳಸಿಕೊಂಡಿದ್ದರು. ಅಷ್ಟೇ ಅಲ್ಲದೆ, ಕೃತ್ಯದ ನಂತರ ಪೊಲೀಸರ ತನಿಖೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯಲು ಪಾಡ್‌ಕಾಸ್ಟ್‌ಗಳನ್ನು ಆಲಿಸಿದ್ದರು.

ಸೆಲ್ಫಿ ಅವಘಡದಂತೆ ಬಿಂಬಿಸುವ ಸಂಚು: ಕಳೆದ ವರ್ಷದ ಮಾರ್ಚ್‌ನಲ್ಲಿ ಲೋಹಗಢದಲ್ಲಿ ಮಹಿಳೆಯೊಬ್ಬಳು ಬಿದ್ದು ಮೃತಪಟ್ಟ ಘಟನೆಯ ಕುರಿತು ಸಿಯಾ ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸಿದ್ದಳು. ಕೇತನ್ ಕೊಲೆಯನ್ನು 'ಸೆಲ್ಫಿ ತೆಗೆಯುವಾಗ ಆಕಸ್ಮಿಕವಾಗಿ ಕೆಳಗೆ ಬಿದ್ದು ಸಂಭವಿಸಿದ ಸಾವು' ಎಂದು ಬಿಂಬಿಸಲು ಲೋಹಗಢ ಕೋಟೆಯನ್ನೇ ಆರೋಪಿಗಳು ಕೃತ್ಯಕ್ಕೆ ಆಯ್ಕೆ ಮಾಡಿಕೊಂಡಿದ್ದರು.

ಹನಿಮೂನ್ ಹತ್ಯೆ ಪ್ರಕರಣದ ಅಧ್ಯಯನ: ಕೊಲೆ ಯೋಜನೆಯ ಭಾಗವಾಗಿ ಆರೋಪಿಗಳು 'ಸೋನಮ್ ರಘುವಂಶಿ ಪ್ರಕರಣ'ದ ಕುರಿತೂ ಆನ್‌ಲೈನ್‌ನಲ್ಲಿ ವ್ಯಾಪಕ ಹುಡುಕಾಟ ನಡೆಸಿ ಅಧ್ಯಯನ ಮಾಡಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.

2025ರ ಮೇನಲ್ಲಿ ಮೇಘಾಲಯಕ್ಕೆ ಹನಿಮೂನ್‌ಗೆ ತೆರಳಿದ್ದಾಗ ಇಂದೋರ್ ಮೂಲದ ರಾಜಾ ರಘುವಂಶಿ ಎಂಬುವವರ ಕೊಲೆಯಾಗಿತ್ತು. ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ಸೋನಮ್‌ಳನ್ನು ಪೊಲೀಸರು ಬಂಧಿಸಿದ್ದರು.

ವಿದೇಶಿ ಪ್ರವಾಸ ತಪ್ಪಿಸಲು ಪಾಸ್‌ಪೋರ್ಟ್ ಹರಿದಿದ್ದ ಸಿಯಾ: ಸಿಯಾ ಮತ್ತು ಕೇತನ್ ಬಾಲಿ ಪ್ರವಾಸ ನಿಗದಿಯಾಗಿತ್ತು. ಆದರೆ, ಆ ಪ್ರವಾಸಕ್ಕೂ ಮುನ್ನವೇ ಕೊಲೆ ಮಾಡಲು ಆರೋಪಿಗಳು ಯೋಜಿಸಿದ್ದರು. ಬಾಲಿ ಪ್ರವಾಸವನ್ನು ಹೇಗಾದರೂ ಮಾಡಿ ತಪ್ಪಿಸುವ ಉದ್ದೇಶದಿಂದ ಜೂನ್ 6ರಂದು ಪ್ರಿ-ವೆಡ್ಡಿಂಗ್ ಫೋಟೋಶೂಟ್‌ಗೆ ತೆರಳುತ್ತಿದ್ದಾಗ, ಸಿಯಾ ಖಾಲಾಪುರದ ಕೆಫೆಯೊಂದರ ವಾಶ್‌ರೂಮ್‌ನಲ್ಲಿ ಕೇತನ್ ಅವರ ಪಾಸ್‌ಪೋರ್ಟ್ ಅನ್ನು ಹರಿದು ಎಸೆದಿದ್ದಳು.

ಅವನಿಲ್ಲದ ಜಗತ್ತು ಶೂನ್ಯ..: ಪ್ರಧಾನಿ ಮೋದಿಗೆ ಕೇತನ್ ತಾಯಿ ಭಾವುಕ ಪತ್ರ

ಜೂನ್ 14ರಂದು ಸಿಯಾ ಮತ್ತು ಕೇತನ್ ಲೋಹಗಢಕ್ಕೆ ತೆರಳಿದ್ದರು. ಆ ವೇಳೆ ಹಾವಿದೆ ಎಂದು ಸುಳ್ಳು ನೆಪವೊಡ್ಡಿ ಕೇತನನ್ನು ಕೋಟೆಯಿಂದ ಕೆಳಗೆ ತಳ್ಳಲು ಯತ್ನಿಸಿದ್ದರೂ, ಆ ಮೊದಲ ಪ್ರಯತ್ನ ವಿಫಲವಾಗಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ವಡ್ಗಾಂವ್ ಮಾವಲ್ ನ್ಯಾಯಾಲಯದಲ್ಲಿ ಸಲ್ಲಿಸಲಾದ ಚಾರ್ಜ್‌ಶೀಟ್‌ನಲ್ಲಿ ಸಿಯಾ, ಚೌಧರಿ ಮತ್ತು ರಿತೇಶ್‌ನನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಮೊಬೈಲ್ ಸಂದೇಶಗಳು, ಫೋಟೊಗಳು, ಮೊಬೈಲ್ ಫೋನ್ ಡೇಟಾ, ಕರೆ ವಿವರ ದಾಖಲೆಗಳು (ಸಿಡಿಆರ್), ವಿಧಿವಿಜ್ಞಾನ ಮತ್ತು ತಾಂತ್ರಿಕ ವರದಿಗಳು, ಐವರು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಸೇರಿದಂತೆ ಹಲವಾರು ಪುರಾವೆಗಳನ್ನು ಸಾಕ್ಷಿಯಾಗಿ ಸಲ್ಲಿಸಲಾಗಿದೆ ಎಂದು ಪುಣೆ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.

ಕೇತನ್ ಕೊಲೆ ಪ್ರಕರಣ: ಹತ್ಯೆಗೆ ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದ ಭಾವಿ ಪತ್ನಿ!
Dailyhunt
Disclaimer: This content has not been generated, created or edited by Dailyhunt. Publisher: Prajavani