Dailyhunt Logo
  • Light mode
    Follow system
    Dark mode
    • Play Story
    • App Story
'ರಾಮಾಯಣ' ಚಿತ್ರದ ಟ್ರೇಲರ್ ಬಿಡುಗಡೆ ಮುಂದೂಡಿಕೆ: ನಿರ್ಮಾಪಕ ನಮಿತ್ ಹೇಳಿದ್ದಿಷ್ಟು

'ರಾಮಾಯಣ' ಚಿತ್ರದ ಟ್ರೇಲರ್ ಬಿಡುಗಡೆ ಮುಂದೂಡಿಕೆ: ನಿರ್ಮಾಪಕ ನಮಿತ್ ಹೇಳಿದ್ದಿಷ್ಟು

ಬಾಲಿವುಡ್‌ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಅವರ 'ರಾಮಾಯಣ' ಸಿನಿಮಾ ಟ್ರೇಲರ್ ವೀಕ್ಷಿಸಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇಂದು (ಜುಲೈ 24) ಬಿಡುಗಡೆಯಾಗಬೇಕಿದ್ದ ಟ್ರೇಲರ್‌ ಕೊನೆಯ ಕ್ಷಣದಲ್ಲಿ ಮುಂದೂಡಲಾಗಿದ್ದು, ಈ ಕುರಿತು ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಕಳೆದ ವಾರವಷ್ಟೇ ದೆಹಲಿಯಲ್ಲಿ ಚಿತ್ರದ ಪ್ರಮುಖ ತಾರಾಗಣರ ಸಮ್ಮುಖದಲ್ಲಿ ಟ್ರೇಲರ್‌ನ ಖಾಸಗಿ ಪ್ರದರ್ಶನ ನಡೆದಿತ್ತು. ಆದರೆ, ದಿಢೀರ್ ಆಗಿ ಟ್ರೇಲರ್‌ ಅನ್ನು ಮುಂದೂಡಿಕೆ ಮಾಡಿದ್ದು ಅಭಿಮಾನಿಗಳಿಗೆ ಬೇಸರ ತಂದಿದೆ.

ದೀಪಾವಳಿಗೆ 'ರಾಮಾಯಣ'; ಶ್ರೀರಾಮನ ಕಥೆ ವಿಶ್ವ ವೇದಿಕೆಗೆ: ಯಶ್‌PHOTO: ಕಾಂಜೀವರಂ ಸೀರೆಯಲ್ಲಿ ‌ಕಣ್ಮನ ಸೆಳೆದ 'ರಾಮಾಯಣ' ನಟಿ ಸಾಯಿ ಪಲ್ಲವಿ

ನಿರ್ಮಾಪಕ ನಮಿತ್ ಮಲ್ಹೋತ್ರಾ ಪೋಸ್ಟ್‌ನಲ್ಲಿ ಹೇಳಿದ್ದೇನು?

'ನಮ್ಮ 'ರಾಮಾಯಣ' ಚಿತ್ರಕ್ಕೆ ಇಂದು ಅತ್ಯಂತ ವಿಶೇಷವಾದ ಕ್ಷಣ. 'ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್' ಜೊತೆಗಿನ ನಮ್ಮ ಪಾಲುದಾರಿಕೆಯ ಮೂಲಕ, ರಾಮಾಯಣವನ್ನು ಇಡೀ ಜಗತ್ತಿಗೆ ಪರಿಚಯಿಸಬೇಕೆಂಬ ನನ್ನ ಕನಸು ಈಗ ನನಸಾಗಿದೆ. ಈ ಮೇಲಿನ ಮಹತ್ವದ ಬೆಳವಣಿಗೆಯ ಹಿನ್ನೆಲೆಯಲ್ಲಿ, ನಾವು ನಮ್ಮ ಚಿತ್ರದ ಟ್ರೇಲರ್ ಅನ್ನು ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡಲಿದ್ದೇವೆ' ಎಂದಿದ್ದಾರೆ.

'100ಕ್ಕೂ ಹೆಚ್ಚು ವರ್ಷಗಳ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಇದು ಅತ್ಯಂತ ಹೆಮ್ಮೆಯ ಕ್ಷಣವಾಗಲಿದೆ. ಹಾಲಿವುಡ್ ಸಿನಿಮಾದಂತೆಯೇ ನಮ್ಮ ರಾಮಾಯಣವೂ ಇಡೀ ವಿಶ್ವದಾದ್ಯಂತ ಪ್ರದರ್ಶನಗೊಳ್ಳಲಿದೆ. ಇದು ಅತ್ಯಂತ ವಿಶೇಷವಾದದ್ದು, ಏಕೆಂದರೆ ಇದು ವಿಶ್ವದ ಜನತೆಗೆ ನಮ್ಮ ಸಂಸ್ಕೃತಿಯ ಶ್ರೀಮಂತಿಕೆ ಮತ್ತು ನಮ್ಮ ಕಥೆಗಳನ್ನು ನವೀಕರಿಸಿದ ಹೆಮ್ಮೆ ಹಾಗೂ ಉತ್ಸಾಹದಿಂದ ಕಂಡುಕೊಳ್ಳಲು ಹೊಸ ಬಾಗಿಲನ್ನು ತೆರೆಯುತ್ತದೆ. ಇದನ್ನು ಸಾಕಾರಗೊಳಿಸಲು ನೆರವಾದ 'ರಾಮಾಯಣ'ದ ಎಲ್ಲಾ ಅಭಿಮಾನಿಗಳಿಗೆ ಮತ್ತು ಹಿತೈಷಿಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಮ್ಮ ದೇಶದ ಯುವಜನತೆಯೇ ನಮ್ಮ ಭವಿಷ್ಯ. ನಮ್ಮ ಭವಿಷ್ಯವನ್ನು ರಕ್ಷಿಸಲು ನಾವೆಲ್ಲರೂ ನಮ್ಮಿಂದಾದ ಅತ್ಯುತ್ತಮ ಪ್ರಯತ್ನ ಮಾಡೋಣ' ಎಂದು ಬರೆದುಕೊಂಡಿದ್ದಾರೆ.

 ದೆಹಲಿಯಲ್ಲಿ ರಾಮಾಯಣ ಟ್ರೈಲರ್ ವಿಶೇಷ ಪ್ರದರ್ಶನದ ವೇಳೆ ಚಿತ್ರತಂಡದೊಂದಿಗೆ ಯಶ್, ಸಾಯಿ ಪಲ್ಲವಿ, ರಣಬೀರ್‌ ಕಪೂರ್.

ದೊಡ್ಡ ತಾರಾಗಣದ ಸಿನಿಮಾ

ನಿತೇಶ್ ತಿವಾರಿ ಅವರ 'ರಾಮಾಯಣ' ಸಿನಿಮಾದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ನಟಿಸುತ್ತಿದ್ದರೆ, ಸಾಯಿ ಪಲ್ಲವಿ ಸೀತಾ ದೇವಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಾವಣನ ಪಾತ್ರದಲ್ಲಿ ಯಶ್ ಹಾಗೂ ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ನಟಿಸುತ್ತಿದ್ದಾರೆ. ಉಳಿದಂತೆ ಲಕ್ಷ್ಮಣನಾಗಿ ರವಿ ದುಬೆ, ಕೈಕೇಯಿಯಾಗಿ ಲಾರಾ ದತ್ತಾ, ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್, ಮಂಡೋದರಿಯಾಗಿ ಕಾಜಲ್ ಅಗರ್ವಾಲ್ ಮತ್ತು ದಶರಥ ಮಹಾರಾಜನಾಗಿ ಅರುಣ್ ಗೋವಿಲ್ ನಟಿಸುತ್ತಿದ್ದಾರೆ. ವಿವೇಕ್ ಒಬೆರಾಯ್, ಕುನಾಲ್ ಕಪೂರ್, ಆದಿನಾಥ್ ಕೊಠಾರೆ ಮತ್ತು ಮೋಹಿತ್ ರೈನಾ ಕೂಡ ಚಿತ್ರದ ಭಾಗವಾಗಿದ್ದಾರೆ.

ಬರೋಬ್ಬರಿ ₹4,000 ಕೋಟಿ ಬಜೆಟ್!

'ರಾಮಾಯಣ' ಚಿತ್ರವು ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆಯುತ್ತಿದ್ದು, ಬರೋಬ್ಬರಿ ₹4,000 ಕೋಟಿ ಬೃಹತ್ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಈ ಕುರಿತು ಮಾತನಾಡಿರುವ ನಮಿತ್ ಮಲ್ಹೋತ್ರಾ, 'ನಾವು 6-7 ವರ್ಷಗಳ ಹಿಂದೆ ಈ ಯೋಜನೆಗೆ ಚಾಲನೆ ನೀಡಿದಾಗ ಜನ ನನ್ನನ್ನು ಹುಚ್ಚ ಅಂದುಕೊಂಡಿದ್ದರು. ಏಕೆಂದರೆ ಭಾರತದಲ್ಲಿ ಈ ಮಟ್ಟದ ಬಜೆಟ್‌ನ ಸಿನಿಮಾ ಯಾರೂ ಮಾಡಲು ಸಾಧ್ಯವಿಲ್ಲ. ಚಿತ್ರದ ಎರಡೂ ಭಾಗಗಳಿಗೆ ಸೇರಿ ಸುಮಾರು 500 ಮಿಲಿಯನ್ ಡಾಲರ್ ಅಂದರೆ ₹4,000 ಕೋಟಿಗೂ ಹೆಚ್ಚು ವೆಚ್ಚವಾಗುತ್ತಿದೆ. ನಾವು ಹಾಲಿವುಡ್‌ಗಿಂತಲೂ ಅತ್ಯಂತ ಪರಿಣಾಮಕಾರಿಯಾಗಿ, ಜವಾಬ್ದಾರಿಯುತವಾಗಿ ಜಗತ್ತಿನ ಅತಿ ದೊಡ್ಡ ಮಹಾಕಾವ್ಯವನ್ನು ಬೆಳ್ಳಿತೆರೆಯ ಮೇಲೆ ತರುತ್ತಿದ್ದೇವೆ' ಎಂದಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani