Dailyhunt Logo
  • Light mode
    Follow system
    Dark mode
    • Play Story
    • App Story
ಸಾಹಿತ್ಯ ಸಮ್ಮೇಳನಗಳ ಜತೆಗೆ ವಿಜ್ಞಾನ ಸಮ್ಮೇಳನಗಳೂ ನಡೆಯಲಿ; ಗೋವಿಂದ ಪೈ

ಸಾಹಿತ್ಯ ಸಮ್ಮೇಳನಗಳ ಜತೆಗೆ ವಿಜ್ಞಾನ ಸಮ್ಮೇಳನಗಳೂ ನಡೆಯಲಿ; ಗೋವಿಂದ ಪೈ

ಕನ್ನಡಿಗರು ಕರ್ನಾಟಕದಲ್ಲಿದ್ದರೆ ಮಾತ್ರ ಕನ್ನಡಿಗರೇ? ಮುಂಬೈ, ದೆಹಲಿ, ಕೋಲ್ಕತ್ತ, ಲಂಡನ್, ನ್ಯೂಯಾರ್ಕ್ ಅಥವಾ ಪ್ಯಾರಿಸ್‌ನಲ್ಲಿ ನೆಲೆಸಿದ್ದರೆ ಅವರ ಕನ್ನಡತನ ಕಡಿಮೆಯಾಗುತ್ತದೆಯೇ? ಕನ್ನಡಿಗರು ವಾಸಿಸುವ ಪ್ರತಿಯೊಂದು ಪ್ರದೇಶದಲ್ಲಿಯೂ ಕನ್ನಡದ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಸಂಘಗಳು ಇರಬಾರದೇ?

ಕನ್ನಡದ ಬೆಳವಣಿಗೆಗೆ ಕೇವಲ ಸಾಹಿತ್ಯ ಸಮ್ಮೇಳನಗಳೇ ಸಾಕೇ? ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ ಕನ್ನಡಿಗರು ಮುಂಚೂಣಿಗೆ ಬರಬೇಕಲ್ಲವೇ?

ಸುಮಾರು 75 ವರ್ಷಗಳ ಹಿಂದೆ ಇಂತಹ ಹಲವು ಮಹತ್ವದ ಪ್ರಶ್ನೆಗಳನ್ನು ಮುಂದಿಟ್ಟವರು ರಾಷ್ಟ್ರಕವಿ ಎಂ. ಗೋವಿಂದ ಪೈ ಅವರು. 1951ರಲ್ಲಿ ಮುಂಬೈನಲ್ಲಿ ನಡೆದ 34ನೇ ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣದಲ್ಲಿ ಅವರು ಮಂಡಿಸಿದ ವಿಚಾರಗಳು ಕನ್ನಡದ ಭೌಗೋಳಿಕ ಗಡಿಗಳನ್ನು ಮೀರಿ, ಜಾಗತಿಕ ಕನ್ನಡದ ಪರಿಕಲ್ಪನೆಯನ್ನು ಅಂದೇ ಕಟ್ಟಿಕೊಟ್ಟಿದ್ದವು.

ವಿಶೇಷವೆಂದರೆ, ಸಾಹಿತ್ಯ ಸಮ್ಮೇಳನಗಳ ಜತೆಗೆ ವಿಜ್ಞಾನ ಸಮ್ಮೇಳನಗಳನ್ನೂ ನಡೆಸಬೇಕು ಎಂಬ ಅವರ ಸಲಹೆ. ಕನ್ನಡಿಗರು ಸಾಹಿತ್ಯದಲ್ಲಿ ಮಾತ್ರವಲ್ಲ, ವಿಜ್ಞಾನದಲ್ಲಿಯೂ ಜಗತ್ತಿನ ಇತರ ಭಾಷಿಕರೊಂದಿಗೆ ಸಮಾನವಾಗಿ ನಿಲ್ಲಬೇಕು ಎಂಬುದು ಅವರ ದೂರದೃಷ್ಟಿಯಾಗಿತ್ತು.

ಮಂಜೇಶ್ವರದ ನೆಲದಿಂದ ರಾಷ್ಟ್ರಕವಿಯ ಎತ್ತರಕ್ಕೆ

ಎಂ.ಗೋವಿಂದ ಪೈ ಅವರು 1883ರ ಮಾರ್ಚ್ 23ರಂದು ಮಂಜೇಶ್ವರದಲ್ಲಿ ಜನಿಸಿದರು. ಸಾಹುಕಾರ ತಿಮ್ಮಪ್ಪ ಮತ್ತು ದೇವಕಿಯಮ್ಮ ದಂಪತಿಯ ಪುತ್ರರಾದ ಅವರು ಮಂಗಳೂರಿನಲ್ಲಿ ಶಾಲಾ ಶಿಕ್ಷಣ ಪಡೆದವರು. ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಬಿ.ಎ. ವ್ಯಾಸಂಗ ಮಾಡುತ್ತಿದ್ದಾಗ ತಂದೆಯ ನಿಧನದಿಂದ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಆದರೆ ಔಪಚಾರಿಕ ಶಿಕ್ಷಣ ನಿಂತರೂ ಅವರ ಜ್ಞಾನಾರ್ಜನೆಯ ಹಸಿವು ನಿಲ್ಲಲಿಲ್ಲ. ಸ್ವಂತ ಅಧ್ಯಯನದ ಮೂಲಕ ಕನ್ನಡ, ಇಂಗ್ಲಿಷ್, ಸಂಸ್ಕೃತ, ಗ್ರೀಕ್, ಫ್ರೆಂಚ್, ಜರ್ಮನ್, ಪ್ರಾಕೃತ ಸೇರಿದಂತೆ ಹಲವು ಭಾಷೆಗಳಲ್ಲಿ ಪರಿಣತಿ ಗಳಿಸಿದರು. ಇತಿಹಾಸ, ಧರ್ಮ, ತತ್ವಶಾಸ್ತ್ರ, ಶಾಸನಶಾಸ್ತ್ರ ಮತ್ತು ಭಾಷಾಶಾಸ್ತ್ರಗಳ ಅಧ್ಯಯನದಲ್ಲಿ ತೊಡಗಿಸಿಕೊಂಡರು. ಯಾವುದೇ ಸರ್ಕಾರಿ ಉದ್ಯೋಗಕ್ಕೆ ಸೇರದೆ ತಮ್ಮ ಇಡೀ ಬದುಕನ್ನು ಸಾಹಿತ್ಯ ಮತ್ತು ಸಂಶೋಧನೆಗೆ ಮೀಸಲಿಟ್ಟರು.

'ಗಿಳಿವಿಂಡು', 'ನಂದಾದೀಪ', 'ಗೊಲ್ಗೊಥಾ', 'ವೈಶಾಖಿ', 'ಹೆಬ್ಬೆರಳು', 'ಶ್ರೀಕೃಷ್ಣ ಚರಿತ್ರೆ' ಮೊದಲಾದ ಕೃತಿಗಳು ಅವರ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿವೆ. ಯೇಸುಕ್ರಿಸ್ತನ ಕೊನೆಯ ದಿನಗಳನ್ನು ಚಿತ್ರಿಸುವ 'ಗೊಲ್ಗೊಥಾ', ಬುದ್ಧನ ಜೀವನದ ಕೊನೆಯ ಘಟ್ಟವನ್ನು ಚಿತ್ರಿಸುವ 'ವೈಶಾಖಿ' ಅವರ ವಿಶ್ವಮಾನವ ದೃಷ್ಟಿಗೆ ಉದಾಹರಣೆಗಳು.

ಹಳಗನ್ನಡ ಸಾಹಿತ್ಯದ ಆಳವಾದ ಅಧ್ಯಯನದ ಜೊತೆಗೆ ತುಳುನಾಡಿನ ಇತಿಹಾಸ, ಜೈನ ಪರಂಪರೆ, ಶಾಸನಗಳು ಮತ್ತು ಪ್ರಾಚೀನ ಸಂಸ್ಕೃತಿಗಳ ಕುರಿತೂ ಅವರು ಮಹತ್ವದ ಸಂಶೋಧನೆ ನಡೆಸಿದರು.

1949ರಲ್ಲಿ ಮದ್ರಾಸ್ ಸರ್ಕಾರ ಅವರಿಗೆ 'ರಾಷ್ಟ್ರಕವಿ' ಗೌರವ ನೀಡಿತು. ಹೀಗೆ ಕನ್ನಡದ ಮೊದಲ ರಾಷ್ಟ್ರಕವಿಯಾಗಿ ಗುರುತಿಸಿಕೊಂಡಿದ್ದ ಗೋವಿಂದ ಪೈ ಅವರನ್ನು 1951ರ ಮುಂಬೈ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಕರುನಾಡೋತ್ಸವ | ಪುರುಷೋತ್ತಮ ಬಿಳಿಮಲೆ ಅವರ ಬರಹ; ಇವತ್ತಿನ ಕನ್ನಡ ಜಗತ್ತುಉತ್ತರ ಕರ್ನಾಟಕ, ಕರಾವಳಿ, ಮೈಸೂರು ಕನ್ನಡ: ಭಾಷಾ ಸೊಗಡಿನ ಉಗಮದ ಕಥೆ...

ಕನ್ನಡದ ಬೆಳವಣಿಗೆಗೆ ಹಣದ ಕೊರತೆಯೇ ಅಡ್ಡಿ?

ಗೋವಿಂದ ಪೈ ಅವರ ಅಧ್ಯಕ್ಷೀಯ ಭಾಷಣದ ಆರಂಭಿಕ ಭಾಗದಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್ತಿನ ಎರಡು ಮಹತ್ವಾಕಾಂಕ್ಷಿ ಯೋಜನೆಗಳ ಪ್ರಸ್ತಾಪ ಬರುತ್ತದೆ. ಕನ್ನಡ-ಕನ್ನಡ ನಿಘಂಟು ಮತ್ತು ಕನ್ನಡ ವಿಶ್ವಕೋಶ ನಿರ್ಮಾಣ.

ಈ ಎರಡೂ ಯೋಜನೆಗಳಿಗೆ ಲಕ್ಷಾಂತರ ರೂಪಾಯಿ ಅಗತ್ಯವಿದೆ. ಪಂಡಿತರು, ಸಂಶೋಧಕರು ಮತ್ತು ಭಾಷಾತಜ್ಞರ ತಂಡದ ಸಹಕಾರವೂ ಬೇಕು. ಇಷ್ಟು ದೊಡ್ಡ ಯೋಜನೆಗಳನ್ನು ಪರಿಷತ್ತು ತನ್ನ ಸೀಮಿತ ಸಂಪನ್ಮೂಲಗಳಿಂದ ಮಾತ್ರ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂಬುದು ಅವರ ಅಭಿಪ್ರಾಯ.

ಆದರೆ ಕನ್ನಡನಾಡಿನಲ್ಲಿ ಸಂಪತ್ತಿಗೆ ಕೊರತೆಯಿಲ್ಲ. ಅರಮನೆಯಿದೆ, ಮೂರು ವಿಶ್ವವಿದ್ಯಾಲಯಗಳಿವೆ (ಆಗ ಕರ್ನಾಟಕದಲ್ಲಿ ಮೂರೇ ವಿವಿಗಳು ಇದ್ದವು), ಲಕ್ಷಾಂತರ ರೂಪಾಯಿ ದಾನ ಮಾಡಬಲ್ಲ ಶ್ರೀಮಂತರಿದ್ದಾರೆ. ಅವರೆಲ್ಲರೂ ಮನಸ್ಸು ಮಾಡಿದರೆ ನಿಘಂಟು ಮತ್ತು ವಿಶ್ವಕೋಶ ನಿರ್ಮಾಣ ಅಸಾಧ್ಯವೇನಲ್ಲ ಎಂದು ಅವರು ಪ್ರತಿಪಾದಿಸಿದ್ದರು. ಅವರ ಮಾತಿನಲ್ಲಿದ್ದ ಹಾಸ್ಯಪ್ರಜ್ಞೆಯೂ ಗಮನಾರ್ಹ. ದಾನಿಗಳು ಒಮ್ಮೆ ಹಣ ನೀಡದಿದ್ದರೆ ಮತ್ತೊಮ್ಮೆ ಕೇಳಬೇಕು; ಮತ್ತೆ ಮತ್ತೆ ಕೇಳಬೇಕು. 'ಭವಾನ್ ಭಿಕ್ಷಾಂ ದದಾತು' ಎಂದು ಮನೆಮನೆಗೆ ಹೋಗಿಯಾದರೂ ಈ ಮಹತ್ವದ ಕಾರ್ಯಗಳಿಗೆ ಹಣ ಸಂಗ್ರಹಿಸಬೇಕು ಎಂಬ ಹಾಸ್ಯಮಿಶ್ರಿತ ಸಲಹೆ ನೀಡಿದ್ದರು.

ಅವರಾಗ ಮಾಡಿದ್ದು ಕೇವಲ ಹಣ ಸಂಗ್ರಹದ ಮನವಿಯಲ್ಲ. ಕನ್ನಡದ ಜ್ಞಾನಸಂಪತ್ತನ್ನು ನಿರ್ಮಿಸುವುದು ಇಡೀ ಸಮಾಜದ ಸಾಮೂಹಿಕ ಹೊಣೆಗಾರಿಕೆ ಎಂಬ ಸಂದೇಶವನ್ನೂ ನೀಡಿದ್ದರು ಎಂಬುದು ಗಮನಾರ್ಹ.

ಜೊತೆಗೆ ವಿಜ್ಞಾನ ಸಮ್ಮೇಳನವೂ ಬೇಕು!

ಗೋವಿಂದ ಪೈ ಅವರ ಭಾಷಣದಲ್ಲಿನ ಅತ್ಯಂತ ದೂರದೃಷ್ಟಿಯುಳ್ಳ ಸಲಹೆಗಳಲ್ಲಿ ಇದೂ ಒಂದು. ಆಗ ಜಗತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ಹೊಸ ಯುಗಕ್ಕೆ ಕಾಲಿಡುತ್ತಿತ್ತು. ಯಂತ್ರಗಳ ಬಳಕೆ, ವೈಜ್ಞಾನಿಕ ಆವಿಷ್ಕಾರಗಳು ಮತ್ತು ಯುದ್ಧ ತಂತ್ರಜ್ಞಾನದ ಬೆಳವಣಿಗೆ ಜಗತ್ತಿನ ಸ್ವರೂಪವನ್ನೇ ಬದಲಾಯಿಸುತ್ತಿದ್ದವು. ಇಂತಹ ಸಂದರ್ಭದಲ್ಲಿ ಕನ್ನಡಿಗರು ಕೇವಲ ಸಾಹಿತ್ಯದ ಚರ್ಚೆಗಳಲ್ಲಿ ಮುಳುಗಿರಬಾರದು. ಪ್ರತಿವರ್ಷ ಸಾಹಿತ್ಯ ಸಮ್ಮೇಳನ ನಡೆಯುವ ಸ್ಥಳದಲ್ಲಿಯೇ ಕನ್ನಡ ನಾಡಿನ ವೈಜ್ಞಾನಿಕ ಸಮ್ಮೇಳನವನ್ನೂ ಆಯೋಜಿಸಬೇಕು ಎಂದು ಅವರು ಸಲಹೆ ನೀಡಿದ್ದರು.

ಅವರ ದೃಷ್ಟಿಯಲ್ಲಿ ಸಾಹಿತ್ಯ ಮತ್ತು ವಿಜ್ಞಾನ ಎರಡೂ ಪ್ರತ್ಯೇಕ ಕ್ಷೇತ್ರಗಳಾದರೂ ಸಮಾಜದ ಬೆಳವಣಿಗೆಗೆ ಸಮಾನವಾಗಿ ಅಗತ್ಯ. ಸಾಹಿತ್ಯದಲ್ಲಿ ಆಸಕ್ತಿಯುಳ್ಳವರು ಸಾಹಿತ್ಯದಲ್ಲಿ ಮುಂದುವರಿಯಲಿ; ವಿಜ್ಞಾನದಲ್ಲಿ ಆಸಕ್ತಿಯುಳ್ಳವರು ವಿಜ್ಞಾನದಲ್ಲಿ ಸಾಧನೆ ಮಾಡಲಿ. ಎರಡೂ ಕ್ಷೇತ್ರಗಳ ಮೂಲಕ ಕನ್ನಡಿಗರು ಪ್ರಗತಿ ಸಾಧಿಸಬೇಕು ಎಂಬುದು ಅವರ ಆಶಯವಾಗಿತ್ತು.

ಅವರ ಕಾಲದಲ್ಲಿ ಈ ಮಾತು ಹೇಳಿದ್ದು ವಿಶೇಷ. ಏಕೆಂದರೆ ಕನ್ನಡ ಸಾಹಿತ್ಯ ಸಮ್ಮೇಳನಗಳ ಸ್ವರೂಪ ಸಾಮಾನ್ಯವಾಗಿ ಕವಿಗೋಷ್ಠಿ, ಸಾಹಿತ್ಯ ಚರ್ಚೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿತ್ತು. ಆ ವೇದಿಕೆಗೆ ವಿಜ್ಞಾನವನ್ನೂ ಸೇರಿಸಬೇಕು ಎಂಬುದು ಹೊಸ ಚಿಂತನೆಯಾಗಿತ್ತು.

ಕನ್ನಡಿಗರು ಎಲ್ಲಿದ್ದರೂ ಅದೇ ಕನ್ನಡನಾಡು!

ಗೋವಿಂದ ಪೈ ಅವರ ಭಾಷಣದ ಅತ್ಯಂತ ಮಹತ್ವದ ಭಾಗ ಕನ್ನಡಿಗರ ಭೌಗೋಳಿಕ ಅಸ್ತಿತ್ವದ ಕುರಿತದ್ದು.

ದೆಹಲಿ, ಕಾಶಿ, ಕೋಲ್ಕತ್ತ ಮೊದಲಾದ ನಗರಗಳಲ್ಲಿ ಕನ್ನಡ ಸಂಘಗಳು ಸ್ಥಾಪನೆಯಾಗುತ್ತಿರುವುದನ್ನು ಅವರು ಸ್ವಾಗತಿಸಿದ್ದರು. ಆದರೆ ಆ ಸಂಘಗಳು ಕೇವಲ ಅಲ್ಲಿರುವ ಕನ್ನಡಿಗರನ್ನು ಒಟ್ಟುಗೂಡಿಸುವ, ಕನ್ನಡದ ಮೇಲಿನ ಅಭಿಮಾನವನ್ನು ಜೀವಂತವಾಗಿಡುವ ಸಂಘಗಳಾಗಿಯೇ ಉಳಿಯಬಾರದು ಎಂಬುದು ಅವರ ಸ್ಪಷ್ಟ ನಿಲುವಾಗಿತ್ತು. ಅವು ಆಯಾ ಪ್ರದೇಶಗಳ ಜನರಿಗೆ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಕೇಂದ್ರಗಳಾಗಬೇಕು. ಅಲ್ಲಿ ನೆಲೆಸಿರುವ ಕನ್ನಡಿಗರು ಆಯಾ ಪ್ರದೇಶದ ಭಾಷೆ ಮತ್ತು ಸಾಹಿತ್ಯವನ್ನೂ ಕಲಿಯಬೇಕು. ಅದೇ ರೀತಿ ಅಲ್ಲಿನ ಜನರಿಗೆ ಕನ್ನಡವನ್ನು ಕಲಿಸಿ, ಕನ್ನಡದ ಪುಸ್ತಕಗಳನ್ನು ಓದುವಂತೆ ಮಾಡಬೇಕು ಎಂದು ಅವರು ಬಯಸಿದ್ದರು.

ಇದಕ್ಕಿಂತಲೂ ಮುಂದುವರಿದು ಲಂಡನ್, ನ್ಯೂಯಾರ್ಕ್, ಪ್ಯಾರಿಸ್, ಬರ್ಲಿನ್ ಮತ್ತು ಮಾಸ್ಕೋ ಮೊದಲಾದ ಜಗತ್ತಿನ ಪ್ರಮುಖ ನಗರಗಳಲ್ಲಿಯೂ ಕರ್ನಾಟಕ ಸಂಘಗಳು ಸ್ಥಾಪನೆಯಾಗಬೇಕು ಎಂದು ಆಶಿಸಿದ್ದರು. ಈ ಸಂಘಗಳಲ್ಲಿ ಆಯಾ ದೇಶದ ಜನರೂ ಸದಸ್ಯರಾಗಬೇಕು. ಕನ್ನಡ ಮತ್ತು ಸ್ಥಳೀಯ ಭಾಷೆಗಳಲ್ಲಿ ಉಪನ್ಯಾಸಗಳು ನಡೆಯಬೇಕು. ಎರಡೂ ಭಾಷೆಗಳಲ್ಲಿ ಲೇಖನಗಳನ್ನು ಒಳಗೊಂಡ ಪತ್ರಿಕೆಗಳು ಪ್ರಕಟವಾಗಬೇಕು ಎಂಬುದು ಅವರ ಸಲಹೆಯಾಗಿತ್ತು.

ಇಂದು ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, ಗಲ್ಫ್ ರಾಷ್ಟ್ರಗಳು ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಕನ್ನಡ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ವಿದೇಶಗಳಲ್ಲಿರುವ ಕನ್ನಡಿಗರು ಕನ್ನಡ ಹಬ್ಬ, ಸಾಹಿತ್ಯ ಕಾರ್ಯಕ್ರಮ, ಪುಸ್ತಕ ಬಿಡುಗಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇವೆಲ್ಲವನ್ನೂ ಹಲವು ದಶಕಗಳ ಹಿಂದೆಯೇ ಗೋವಿಂದ ಪೈ ಕಲ್ಪಿಸಿಕೊಂಡಿದ್ದರು ಎಂಬುದು ಗಮನಾರ್ಹ.

ಹಳ್ಳಿಹಳ್ಳಿಗಳಲ್ಲೂ ಕರ್ನಾಟಕ ಸಂಘಗಳು!

ಕೇವಲ ವಿದೇಶಗಳಲ್ಲ, ಕರ್ನಾಟಕದ ಹಳ್ಳಿಗಳಲ್ಲಿಯೂ ಕನ್ನಡ ಸಂಘಗಳು ಇರಬೇಕು ಎಂಬುದು ಅವರ ಮತ್ತೊಂದು ಕನಸಾಗಿತ್ತು. ಪ್ರತಿ ಹಳ್ಳಿಯಲ್ಲೂ ಗ್ರಾಮ ಪಂಚಾಯಿತಿಗಳಂತೆ ಕರ್ನಾಟಕ ಸಂಘಗಳನ್ನು ಸ್ಥಾಪಿಸಬೇಕು. ತಾಲ್ಲೂಕು ಮಟ್ಟದಲ್ಲಿ ಇವುಗಳನ್ನು ಬೆಳೆಸುವ ಸಂಘಟನೆಗಳಿರಬೇಕು. ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಕರ್ನಾಟಕ ಸಂಘಗಳಿರಬೇಕು. ಇವೆಲ್ಲವೂ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಸಂಪರ್ಕ ಹೊಂದಿರಬೇಕು ಎಂದು ಅವರು ಸಲಹೆ ನೀಡಿದ್ದರು.

ಇದು ಕೇವಲ ಸಂಘಟನೆಗಳ ಜಾಲ ನಿರ್ಮಿಸುವ ಯೋಜನೆಯಾಗಿರಲಿಲ್ಲ. ಕನ್ನಡದ ಓದು, ವಯಸ್ಕರ ಶಿಕ್ಷಣ ಮತ್ತು ಗ್ರಾಮೀಣ ಗ್ರಂಥಾಲಯಗಳ ಸ್ಥಾಪನೆಯ ಮೂಲಕ ಭಾಷೆಯನ್ನು ಜನರ ಬದುಕಿನ ಭಾಗವಾಗಿಸುವ ಪ್ರಯತ್ನವಾಗಿತ್ತು. ವಯಸ್ಕರ ಶಿಕ್ಷಣ, ಗ್ರಾಮ ಪುಸ್ತಕ ಭಂಡಾರಗಳ ಸ್ಥಾಪನೆ ಮತ್ತು ಗ್ರಾಮ ಕರ್ನಾಟಕ ಸಂಘಗಳ ನಿರ್ವಹಣೆ ಗ್ರಾಮ ಪಂಚಾಯಿತಿಗಳ ಕಡ್ಡಾಯವಲ್ಲದ ಸಾಹಿತ್ಯಕ ಕಾರ್ಯಗಳಾಗಬೇಕು ಎಂಬ ಅವರ ಆಶಯ ಗಮನಾರ್ಹ.

'ಅಂದು ದೇಶ ಉದ್ಧಾರವಾಗುತ್ತದೆ, ಭಾಷೆ ಉದ್ಧಾರವಾಗುತ್ತದೆ, ಜನತೆ ಉದ್ಧಾರವಾಗುತ್ತದೆ' ಎಂಬ ಆಶಯದೊಂದಿಗೆ ಅವರು ಈ ವಿಚಾರವನ್ನು ಮಂಡಿಸಿದ್ದರು.

ಕನ್ನಡ ಪುಸ್ತಕಗಳನ್ನು ಕೊಂಡು ಓದಿ; ಉಡುಗೊರೆ ಕೊಡಿ!

ಗೋವಿಂದ ಪೈ ಅವರ ಭಾಷಣದ ಅತ್ಯಂತ ಆಕರ್ಷಕ ಭಾಗ ಕನ್ನಡ ಪುಸ್ತಕಗಳ ಖರೀದಿ ಮತ್ತು ಓದಿನ ಕುರಿತದ್ದು.

ಕನ್ನಡ ಪುಸ್ತಕಗಳಿಗೆ ಓದುಗರಿಲ್ಲ, ಮಾರಾಟವಾಗುತ್ತಿಲ್ಲ, ಲೇಖಕರಿಗೆ ಪ್ರೋತ್ಸಾಹವಿಲ್ಲ ಎಂಬ ದೂರುಗಳು ಆಗಲೂ ಇದ್ದವು. ಇದಕ್ಕೆ ಪರಿಹಾರವಾಗಿ ಓದುಗರ ಜೀವನಶೈಲಿಯಲ್ಲಿಯೇ ಬದಲಾವಣೆ ತರಬೇಕು ಎಂದು ಅವರು ಸಲಹೆ ನೀಡುತ್ತಾರೆ. ಧೂಮಪಾನ, ಸೌಂದರ್ಯವರ್ಧಕಗಳು, ಕಾಫಿ ಕ್ಲಬ್‌ಗಳು, ಸಿನಿಮಾ ಮತ್ತು ನಟನಟಿಯರ ಭಾವಚಿತ್ರ ಸಂಗ್ರಹಕ್ಕೆ ಖರ್ಚು ಮಾಡುವ ಹಣದಲ್ಲಿ ಸ್ವಲ್ಪ ಭಾಗವನ್ನಾದರೂ ಕನ್ನಡ ಪುಸ್ತಕಗಳನ್ನು ಖರೀದಿಸಲು ಮೀಸಲಿಡಿ ಎನ್ನುತ್ತಾರೆ.

ವಿವಾಹ ಸಂದರ್ಭದಲ್ಲಿ ಕೈಗಡಿಯಾರ ಅಥವಾ ಇತರ ಉಡುಗೊರೆಗಳ ಬದಲಿಗೆ ನೂರು ರೂಪಾಯಿ ಮೌಲ್ಯದ ಕನ್ನಡ ಪುಸ್ತಕಗಳನ್ನು ಉಡುಗೊರೆಯಾಗಿ ಸ್ವೀಕರಿಸುವ ಅಭ್ಯಾಸ ಬೆಳೆಸಿಕೊಳ್ಳಿ ಎಂಬ ಸಲಹೆಯನ್ನೂ ನೀಡಿದ್ದರು. ಸ್ನೇಹಿತರಿಗೆ ಉಡುಗೊರೆ ನೀಡುವಾಗ ಕನ್ನಡ ಪುಸ್ತಕಗಳನ್ನು ಕೊಡಿ. ಸ್ನೇಹಿತರ ಮನೆಗಳಲ್ಲಿ ಪುಸ್ತಕಗಳನ್ನು ಕಂಡರೆ ಎರವಲು ಕೇಳುವ ಬದಲು ಸಾಧ್ಯವಾದರೆ ನೀವೇ ಅಂಗಡಿಯಿಂದ ಖರೀದಿಸಿ ಎಂಬ ಅವರ ಮಾತುಗಳಲ್ಲಿ ಓದುಗರ ಆತ್ಮಗೌರವದ ಬಗ್ಗೆಯೂ ಒಂದು ಸ್ವಾರಸ್ಯಕರ ಚಿಂತನೆಯಿದೆ.

ಅಧ್ಯಕ್ಷೀಯ ಭಾಷಣದ ಸಾರ: ಗೋವಿಂದ ಪೈ ಅವರ ಮಾತಿನಲ್ಲೇ...

ಕನ್ನಡದ ಬೆಳವಣಿಗೆ ಎಂದರೆ ಕೇವಲ ಸಾಹಿತ್ಯ ರಚನೆ ಮತ್ತು ಸಾಹಿತ್ಯ ಸಮ್ಮೇಳನಗಳ ಆಯೋಜನೆಯಲ್ಲ. ನಮ್ಮ ಭಾಷೆಯಲ್ಲಿ ನಿಘಂಟು, ವಿಶ್ವಕೋಶ ಮತ್ತು ಜ್ಞಾನವಿಜ್ಞಾನದ ಗ್ರಂಥಗಳು ನಿರ್ಮಾಣವಾಗಬೇಕು. ಅದಕ್ಕೆ ಅಗತ್ಯವಾದ ಹಣ ಮತ್ತು ವಿದ್ವಾಂಸರ ನೆರವನ್ನು ನಾಡಿನ ಜನರು ಒದಗಿಸಬೇಕು. ಸಾಹಿತ್ಯ ಸಮ್ಮೇಳನಗಳ ಜೊತೆಗೆ ವೈಜ್ಞಾನಿಕ ಸಮ್ಮೇಳನಗಳೂ ನಡೆಯಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿ ಇತರ ಜನಾಂಗಗಳೊಂದಿಗೆ ಸಮಾನವಾಗಿ ನಿಲ್ಲಬೇಕಾದರೆ ನಾವು ವಿಜ್ಞಾನದಲ್ಲಿಯೂ ಸಾಧನೆ ಮಾಡಬೇಕು.

ಕನ್ನಡಿಗರು ಎಲ್ಲೇ ನೆಲೆಸಿರಲಿ, ಅವರು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪ್ರತಿನಿಧಿಗಳಾಗಬೇಕು. ಹೊರನಾಡಿನ ಕರ್ನಾಟಕ ಸಂಘಗಳು ಕೇವಲ ಕನ್ನಡಿಗರನ್ನು ಒಗ್ಗೂಡಿಸುವ ಕೇಂದ್ರಗಳಾಗದೆ, ಕನ್ನಡ ಸಾಹಿತ್ಯವನ್ನು ಅಲ್ಲಿನ ಜನರಿಗೆ ಪರಿಚಯಿಸುವ ಸಂಸ್ಥೆಗಳಾಗಬೇಕು. ನಮ್ಮ ಹಳ್ಳಿಗಳಲ್ಲಿಯೂ ಕನ್ನಡ ಸಂಘಗಳು, ಗ್ರಂಥಾಲಯಗಳು ಮತ್ತು ವಯಸ್ಕರ ಶಿಕ್ಷಣದ ವ್ಯವಸ್ಥೆ ಬೆಳೆಯಬೇಕು. ಕನ್ನಡ ಪುಸ್ತಕಗಳನ್ನು ನಾವೇ ಕೊಂಡು ಓದಬೇಕು; ಸ್ನೇಹಿತರಿಗೆ ಉಡುಗೊರೆಯಾಗಿ ನೀಡಬೇಕು. ಕನ್ನಡದ ಬೆಳವಣಿಗೆಗೆ ಸರ್ಕಾರದ ನೆರವು ಬೇಕು ನಿಜ; ಆದರೆ ಜನರ ಪಾಲ್ಗೊಳ್ಳುವಿಕೆಯೂ ಅಷ್ಟೇ ಮುಖ್ಯ. ಈ ಎಲ್ಲ ಪ್ರಯತ್ನಗಳು ಒಟ್ಟುಗೂಡಿದಾಗ ಮಾತ್ರ ಕನ್ನಡದ ಕೀರ್ತಿ ಜಗತ್ತಿನಾದ್ಯಂತ ಹರಡಲು ಸಾಧ್ಯ.

ಇಂದಿಗೂ ನಮ್ಮ ಮುಂದಿರುವ ಸವಾಲು!

1951ರಲ್ಲಿ ಗೋವಿಂದ ಪೈ ಅವರು ಮುಂದಿಟ್ಟಿದ್ದ ಕನಸುಗಳಲ್ಲಿ ಹಲವು ಇಂದು ಸಾಕಾರಗೊಂಡಿವೆ. ಜಗತ್ತಿನ ಅನೇಕ ನಗರಗಳಲ್ಲಿ ಕನ್ನಡ ಸಂಘಗಳಿವೆ. ಕನ್ನಡ ವಿಶ್ವವಿದ್ಯಾಲಯವಿದೆ. ಕನ್ನಡದಲ್ಲಿ ನಿಘಂಟುಗಳು, ವಿಶ್ವಕೋಶಗಳು ಮತ್ತು ವಿಜ್ಞಾನ ಸಾಹಿತ್ಯವೂ ಪ್ರಕಟವಾಗಿವೆ.

ಆದರೆ ಅವರ ಕೆಲವು ಪ್ರಶ್ನೆಗಳು ಇಂದಿಗೂ ನಮ್ಮನ್ನು ಕಾಡುತ್ತವೆ.

  • ವಿದೇಶಗಳಲ್ಲಿರುವ ಕನ್ನಡ ಸಂಘಗಳು ಕನ್ನಡದ ಜೊತೆಗೆ ಅಲ್ಲಿನ ಭಾಷೆ ಮತ್ತು ಸಾಹಿತ್ಯಗಳ ನಡುವೆ ಸೇತುವೆಯಾಗಿವೆಯೇ?

  • ಕನ್ನಡದ ವಿಜ್ಞಾನ ಮತ್ತು ತಂತ್ರಜ್ಞಾನ ಸಾಹಿತ್ಯಕ್ಕೆ ನಾವು ಸಾಕಷ್ಟು ಆದ್ಯತೆ ನೀಡುತ್ತಿದ್ದೇವೆಯೇ?

  • ಗ್ರಾಮೀಣ ಪ್ರದೇಶಗಳಲ್ಲಿ ಓದುವ ಸಂಸ್ಕೃತಿ ಮತ್ತು ಸಾರ್ವಜನಿಕ ಗ್ರಂಥಾಲಯಗಳು ಎಷ್ಟು ಬಲಗೊಂಡಿವೆ?

  • ಕನ್ನಡ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವ ಅಭ್ಯಾಸ ನಮ್ಮಲ್ಲಿ ಬೆಳೆದಿದೆಯೇ?

  • ಕನ್ನಡದ ಸಾಹಿತ್ಯ ಮತ್ತು ಜ್ಞಾನಸಂಪತ್ತನ್ನು ಜಗತ್ತಿನ ಇತರ ಭಾಷೆಗಳಿಗೆ ಪರಿಚಯಿಸುವ ಕೆಲಸ ಎಷ್ಟು ಪರಿಣಾಮಕಾರಿಯಾಗಿ ನಡೆಯುತ್ತಿದೆ?

ಗೋವಿಂದ ಪೈ ಅವರ ಚಿಂತನೆಯ ವಿಶೇಷವೆಂದರೆ, ಅವರು ಕನ್ನಡವನ್ನು ಕೇವಲ ಒಂದು ಭಾಷೆಯಾಗಿ ನೋಡಲಿಲ್ಲ. ಅದು ಜ್ಞಾನ, ಸಂಶೋಧನೆ, ವಿಜ್ಞಾನ, ಸಾಹಿತ್ಯ, ಸಂಸ್ಕೃತಿ ಮತ್ತು ಜಾಗತಿಕ ಸಂಪರ್ಕದ ಮಾಧ್ಯಮವಾಗಬೇಕು ಎಂದು ಬಯಸಿದರು.

ಕನ್ನಡಿಗರು ಎಲ್ಲಿದ್ದರೂ ಕನ್ನಡದ ಪ್ರತಿನಿಧಿಗಳೇ; ಕನ್ನಡದ ಬೆಳವಣಿಗೆಗೆ ಸಾಹಿತ್ಯದಷ್ಟೇ ವಿಜ್ಞಾನವೂ ಮುಖ್ಯ; ಕನ್ನಡ ಪುಸ್ತಕಗಳನ್ನು ಓದುವುದು ಮತ್ತು ಕೊಂಡುಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂಬ ಮೂರು ಮಹತ್ವದ ಸಂದೇಶಗಳನ್ನು ಗೋವಿಂದ ಪೈ ಅವರ ಅಧ್ಯಕ್ಷೀಯ ಭಾಷಣ ನಮಗೆ ನೀಡುತ್ತದೆ.

ಸಮ್ಮೇಳನಾಧ್ಯಕ್ಷರು ಹೇಳಿದ್ದು: ಸಮ್ಮೇಳನ ಕೇವಲ ಸಾಹಿತಿಗಳ ಸಮಾವೇಶವಲ್ಲ; ಗುಂಡಪ್ಪಮುಖ್ಯ ಕಾರ್ಯದರ್ಶಿ ಕನ್ನಡಾಭಿಮಾನ: ಹಿರಿಯ IAS ಅಧಿಕಾರಿ ಶಾಲಿನಿ ರಜನೀಶ್ ಸಂದರ್ಶನ
Dailyhunt
Disclaimer: This content has not been generated, created or edited by Dailyhunt. Publisher: Prajavani