'ಭಾಷೆ'ಎನ್ನುವುದು ಕೇವಲ ಸಂವಹನದ ಸಾಧನವಲ್ಲ; ಅದು ಒಂದು ಸಮುದಾಯದ ಇತಿಹಾಸ, ಸಂಸ್ಕೃತಿ, ಜೀವನಾನುಭವ, ಸಾಮಾಜಿಕ ಸಂಬಂಧ, ವೃತ್ತಿ, ಭಾವನೆ ಮತ್ತು ಅಸ್ಮಿತೆಯನ್ನು ಅಭಿವ್ಯಕ್ತಿಸುವ ಜೀವಂತ ಮಾಧ್ಯಮ. ಭಾಷೆಯು ಜನರ ಬದುಕಿನೊಂದಿಗೆ ಬೆರೆತು ಬೆಳೆಯುವಾಗ ಅನೇಕ ಪ್ರಾದೇಶಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ರೂಪಗಳನ್ನು ಪಡೆದುಕೊಳ್ಳುತ್ತದೆ.
ಇವುಗಳನ್ನೇ ಸಾಮಾನ್ಯವಾಗಿ 'ಉಪಭಾಷೆಗಳು' ಎಂದು ಕರೆಯುತ್ತೇವೆ. ಕನ್ನಡ ಭಾಷೆಯೂ ಇದಕ್ಕೆ ಹೊರತಲ್ಲ. ಕರ್ನಾಟಕದ ಭೌಗೋಳಿಕ ವಿಸ್ತಾರ, ಐತಿಹಾಸಿಕ ಬೆಳವಣಿಗೆ, ಜನಸಮುದಾಯಗಳ ವೈವಿಧ್ಯ, ವೃತ್ತಿಪರ ಪರಿಸರ, ಧಾರ್ಮಿಕ ನಂಬಿಕೆಗಳು ಹಾಗೂ ಸಾಂಸ್ಕೃತಿಕ ಪರಂಪರೆಗಳು ಕನ್ನಡದ ವಿವಿಧ ಉಪಭಾಷೆಗಳ ರೂಪುಗೊಳ್ಳುವಿಕೆಗೆ ಕಾರಣವಾಗಿವೆ.
ಧಾರವಾಡದ ಕನ್ನಡ, ಮೈಸೂರು ಭಾಗದ ಕನ್ನಡ, ಉತ್ತರ ಕರ್ನಾಟಕದ ಕನ್ನಡ, ಕರಾವಳಿಯ ಕನ್ನಡ, ಹೈದರಾಬಾದ್ ಕರ್ನಾಟಕದ ಕನ್ನಡ, ಮಧ್ಯ ಕರ್ನಾಟಕದ ಕನ್ನಡ, ಮಲೆನಾಡಿನ ಕನ್ನಡ ಮುಂತಾದ ಪ್ರಾದೇಶಿಕ ಭಾಷಾರೂಪಗಳು ಕನ್ನಡದ ಆಂತರಿಕ ವೈವಿಧ್ಯವನ್ನು ಪ್ರತಿನಿಧಿಸುತ್ತವೆ. ಹಾಗೆಯೇ ಕುಂಬಾರರು, ಕಮ್ಮಾರರು, ನೇಕಾರರು, ಕೃಷಿಕರು, ಕುರುಬರು, ಲಂಬಾಣಿಗಳು, ದಲಿತ ಸಮುದಾಯಗಳು ಮತ್ತು ವಿವಿಧ ಜಾನಪದ ಕಲಾವಿದರ ಮಾತಿನ ಬಳಕೆಯಲ್ಲಿಯೂ ಅವರ ಸಾಮಾಜಿಕ ಅನುಭವಗಳಿಗೆ ಸಂಬಂಧಿಸಿದ ವಿಶಿಷ್ಟ ಪದಸಂಪತ್ತು ಹಾಗೂ ಅಭಿವ್ಯಕ್ತಿ ವಿಧಾನಗಳು ಕಂಡುಬರುತ್ತವೆ. ಈ ವೈವಿಧ್ಯವನ್ನು ಭಾಷೆಯ ದೌರ್ಬಲ್ಯ,ಸಂಕೀರ್ಣವೆಂದು ಪರಿಗಣಿಸುವ ಬದಲು ಕನ್ನಡ ಬಹುತ್ವದ ಜೀವಂತಿಕೆಯ ಸಂಕೇತವಾಗಿ ಅರ್ಥೈಸಬೇಕು.
ಕನ್ನಡದ ಉಪಭಾಷೆಗಳ ಅಧ್ಯಯನವು ಕೇವಲ ಧ್ವನಿ, ಪದ, ವಾಕ್ಯರಚನೆಗಳ ಅಧ್ಯಯನವಲ್ಲ ಎನ್ನುವುದನ್ನು ನಾವು ತಿಳಿದಿದ್ದೇವೆ. ಅದು ಜನಸಮುದಾಯಗಳ ಬದುಕು, ಸಾಮಾಜಿಕ ಸ್ಥಾನಮಾನ, ಸಾಂಸ್ಕೃತಿಕ ಸ್ಮೃತಿ ಮತ್ತು ಸ್ಥಳೀಯ ಜ್ಞಾನಪರಂಪರೆಗಳನ್ನು ಅರಿಯುವ ಮಹತ್ವದ ಮಾರ್ಗವೂ ಆಗಿದೆ. ಈ ಹಿನ್ನೆಲೆಯಲ್ಲಿ ಕನ್ನಡದ ಉಪಭಾಷೆಗಳ ಬದುಕನ್ನು ಸಾಮಾಜಿಕ-ಸಾಂಸ್ಕೃತಿಕ ನೆಲೆಯಲ್ಲಿ ವಿಶ್ಲೇಷಿಸುವುದು ಪ್ರಸ್ತುತ ಕಾಲದ ಅಗತ್ಯಗಳಲ್ಲೊಂದು.
ಕನ್ನಡ ಭಾಷೆ ತಮಿಳಿನಿಂದ ಬಂದದ್ದೇ: ಭಾಷಾ ವಿದ್ವಾಂಸ ಆಯಂಡ್ರಿವ್ ಒಲೆಟ್ ಹೇಳೋದೇನು?ಅಕ್ಷರ ಲೋಕದ ಆದಿಬೆಳಕು: ಕನ್ನಡದ ಪ್ರಾಚೀನತೆಯ ಅಮರ ಶಿಲಾಸಾಕ್ಷಿ 'ಹಲ್ಮಿಡಿ ಶಾಸನ'ಕನ್ನಡದ ಮೊದಲ ಪತ್ರಿಕೆ: 'ಕಂನಡ' ಸಮಾಚಾರವಾಯಿತು ಮಂಗಳೂರ ಸಮಾಚಾರ...ಕನ್ನಡದ ಪೋಷಾಕು,ಕನ್ನಡತನವೇ ಅಸ್ಮಿತೆ: ಎಲ್ಲರನ್ನೂ ಥಟ್ಟನೆ ಸೆಳೆಯುವ ಮಲ್ಲಿಕಾರ್ಜುನಉಪಭಾಷೆಯ ಪರಿಕಲ್ಪನೆ ಮತ್ತು ಸ್ವರೂಪ
ಒಂದು ಭಾಷೆಯನ್ನು ಮಾತನಾಡುವ ಎಲ್ಲ ಜನರೂ ಒಂದೇ ರೀತಿಯಲ್ಲಿ ಮಾತನಾಡುವುದಿಲ್ಲ. ಪ್ರದೇಶ, ಸಮುದಾಯ, ವಯಸ್ಸು, ಶಿಕ್ಷಣ, ವೃತ್ತಿ, ಸಾಮಾಜಿಕ ಪರಿಸರ ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಭಾಷೆಯ ಬಳಕೆಯಲ್ಲಿ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ. ಒಂದೇ ಅರ್ಥವನ್ನು ಸೂಚಿಸುವ ಪದಗಳು ಬೇರೆಬೇರೆ ಪ್ರದೇಶಗಳಲ್ಲಿ ವಿಭಿನ್ನವಾಗಿ ಬಳಕೆಯಾಗಬಹುದು. ಉಚ್ಚಾರಣೆ, ಸ್ವರಭಾರ, ಪದಗಳ ಆಯ್ಕೆ, ವಾಕ್ಯರಚನೆ ಮತ್ತು ಸಂಬೋಧನಾ ವಿಧಾನಗಳಲ್ಲಿಯೂ ಭಿನ್ನತೆಗಳು ಕಂಡುಬರುತ್ತವೆ. ಇಂತಹ ವ್ಯವಸ್ಥಿತ ಭಾಷಾ ವ್ಯತ್ಯಾಸಗಳನ್ನು ಉಪಭಾಷಾ ಅಧ್ಯಯನವು ಗುರುತಿಸುತ್ತದೆ.
ಉದಾಹರಣೆಗೆ; ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಕಂಡುಬರುವ "ಏನ್ರೀ?", "ಹ್ಯಾಂಗ್ ಅದೀರಿ?", "ಬರ್ತೀನ್ರಿ" ಮೊದಲಾದ ಪ್ರಯೋಗಗಳು ಸ್ಥಳೀಯ ಭಾಷಾ ಪರಿಸರವನ್ನು ಸೂಚಿಸುತ್ತವೆ. ಮೈಸೂರು-ಬೆಂಗಳೂರು ಭಾಗಗಳಲ್ಲಿ "ಹೇಗಿದ್ದೀರಾ?", "ಏನು ಮಾಡುತ್ತಿದ್ದೀರಿ?" ಎಂಬ ಪ್ರಯೋಗಗಳು ಹೆಚ್ಚು ಪರಿಚಿತವಾಗಿರಬಹುದು. ಇವುಗಳನ್ನು ಶುದ್ಧ-ಅಶುದ್ಧ ಎಂಬ ದ್ವಂದ್ವದಲ್ಲಿ ನೋಡುವುದಕ್ಕಿಂತ, ವಿಭಿನ್ನ ಭಾಷಿಕ ಸಂದರ್ಭಗಳಲ್ಲಿ ರೂಪುಗೊಂಡ ಬಳಕೆಗಳೆಂದು ಪರಿಗಣಿಸುವುದು ಸೂಕ್ತ.
ಇಲ್ಲಿ ಒಂದು ಮುಖ್ಯವಾದ ಸಂಗತಿಯನ್ನು ಗಮನಿಸಬೇಕು. ಉಪಭಾಷೆ ಎಂದರೆ ಕೇವಲ ಗ್ರಾಮೀಣ ಅಥವಾ ಅನಕ್ಷರಸ್ಥ ಜನರ ಮಾತಿನ ರೂಪವಲ್ಲ. ಪ್ರತಿಯೊಂದು ಭಾಷಿಕ ಸಮುದಾಯಕ್ಕೂ ತನ್ನದೇ ಆದ ಭಾಷಾ ನಿಯಮಗಳು, ಅಭಿವ್ಯಕ್ತಿಯ ಕ್ರಮಗಳು ಮತ್ತು ಸಂವಹನದ ಸಾಂಸ್ಕೃತಿಕ ಸಂಕೇತಗಳಿರುತ್ತವೆ. ಪ್ರಮಾಣ ಕನ್ನಡಕ್ಕೆ ಶಿಕ್ಷಣ, ಆಡಳಿತ, ಮಾಧ್ಯಮ ಮತ್ತು ಅಧಿಕೃತ ಸಂವಹನಗಳಲ್ಲಿ ವಿಶಿಷ್ಟ ಸ್ಥಾನವಿದ್ದರೂ, ಉಪಭಾಷೆಗಳು ಜನಜೀವನದ ಅನುಭವಗಳನ್ನು ಹೆಚ್ಚು ಸಹಜವಾಗಿ ಮತ್ತು ನೇರವಾಗಿ ವ್ಯಕ್ತಪಡಿಸುವ ಸಾಮರ್ಥ್ಯವನ್ನು ಹೊಂದಿವೆ.
ಕರುನಾಡೋತ್ಸವ: 'ನನಗೆ ಕನ್ನಡವೇ ದೇವರು' ವಾಟಾಳ್ ನಾಗರಾಜ್ ಮನದಾಳದ ಮಾತುಕರುನಾಡೋತ್ಸವ | ಪುರುಷೋತ್ತಮ ಬಿಳಿಮಲೆ ಅವರ ಬರಹ; ಇವತ್ತಿನ ಕನ್ನಡ ಜಗತ್ತುಪ್ರಜಾವಾಣಿ ಕರುನಾಡೋತ್ಸವ| ಸಾಹಿತಿಗಳ ಊರು-ಮನೆಯ ಈಗಿನ ಸ್ಥಿತಿಗತಿ: 'ಚದುರಂಗ'ಕರುನಾಡೋತ್ಸವ: ಕನ್ನಡಿಗರ ಒಗ್ಗಟ್ಟಿನ ಪ್ರತೀಕ 'ಏಕೀಕರಣ ಚಳವಳಿ'ಕನ್ನಡದ ಉಪಭಾಷೆಗಳು: ಭೌಗೋಳಿಕ ಮತ್ತು ಐತಿಹಾಸಿಕ ಹಿನ್ನೆಲೆ
ಕರ್ನಾಟಕದ ಭೌಗೋಳಿಕ ವೈವಿಧ್ಯವು ಕನ್ನಡದ ಪ್ರಾದೇಶಿಕ ಭಾಷಾರೂಪಗಳ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಉತ್ತರ ಕರ್ನಾಟಕದ ಬಯಲುಸೀಮೆ, ದಕ್ಷಿಣ ಕರ್ನಾಟಕದ ಕಾವೇರಿ ಕಣಿವೆ, ಪಶ್ಚಿಮ ಘಟ್ಟಗಳ ಮಲೆನಾಡು, ಅರಬ್ಬೀ ಸಮುದ್ರ ತೀರದ ಕರಾವಳಿ ಮತ್ತು ಕಲ್ಯಾಣ ಕರ್ನಾಟಕದ ವಿಶಿಷ್ಟ ಐತಿಹಾಸಿಕ ಪರಿಸರಗಳು ಭಾಷೆಯ ಬಳಕೆಯ ಮೇಲೆ ಪ್ರಭಾವ ಬೀರಿವೆ. ಉತ್ತರ ಕರ್ನಾಟಕದ ಭಾಷಾರೂಪಗಳಲ್ಲಿ ಮಹಾರಾಷ್ಟ್ರದ ಮರಾಠಿ, ದಖ್ಖನಿ ಉರ್ದು ಮತ್ತು ಗಡಿಭಾಗದ ಇತರ ಭಾಷೆಗಳೊಂದಿಗೆ ನಡೆದ ದೀರ್ಘಕಾಲದ ಸಂಪರ್ಕದ ಗುರುತುಗಳನ್ನು ಕಾಣಬಹುದು. ಕಲ್ಯಾಣ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಕನ್ನಡದೊಂದಿಗೆ ತೆಲುಗು, ಉರ್ದು ಮತ್ತು ಮರಾಠಿ ಭಾಷೆಗಳ ಸಂಪರ್ಕವೂ ಇದೆ. ಕರಾವಳಿಯ ಭಾಷಾ ಪರಿಸರದಲ್ಲಿ ತುಳು, ಕೊಂಕಣಿ, ಬ್ಯಾರಿ ಮೊದಲಾದ ಭಾಷೆಗಳ ಸಹವಾಸವು ಪದಬಳಕೆ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಗಳ ಮೇಲೆ ಪ್ರಭಾವ ಬೀರಿದೆ.ಆದರೆ ಈ ಪ್ರಭಾವಗಳನ್ನು ಕೇವಲ ಹೊರಗಿನ ಭಾಷೆಗಳ ಹಸ್ತಕ್ಷೇಪವೆಂದು ಅರ್ಥೈಸಬಾರದು. ಭಾಷೆಗಳ ನಡುವಿನ ಸಂಪರ್ಕವು ಸಹಜವಾದ ಸಾಮಾಜಿಕ ಪ್ರಕ್ರಿಯೆ. ವ್ಯಾಪಾರ, ವಲಸೆ, ವಿವಾಹ ಸಂಬಂಧಗಳು, ಧಾರ್ಮಿಕ ಆಚರಣೆಗಳು, ಆಡಳಿತ ಮತ್ತು ಶಿಕ್ಷಣದ ಮೂಲಕ ಭಾಷೆಗಳು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತವೆ. ಕನ್ನಡದ ಉಪಭಾಷೆಗಳು ಈ ವಿನಿಮಯಗಳ ಐತಿಹಾಸಿಕ ದಾಖಲೆಗಳಾಗಿವೆ.
ಉದಾಹರಣೆಗೆ, ಗಡಿಭಾಗದ ಜನರ ಮಾತಿನಲ್ಲಿ ಬೇರೆ ಭಾಷೆಗಳಿಂದ ಬಂದ ಪದಗಳು ಬಳಕೆಯಾಗುವುದು ಅವರ ಬಹುಭಾಷಿಕ ಬದುಕಿನ ಸಂಕೇತವಾಗಿದೆ. ಭಾಷಾಶುದ್ಧತೆಯ ಹೆಸರಿನಲ್ಲಿ ಇಂತಹ ಪದಗಳನ್ನು ತಿರಸ್ಕರಿಸಿದರೆ, ಜನರ ನೈಜ ಜೀವನಾನುಭವ ಮತ್ತು ಸಾಂಸ್ಕೃತಿಕ ಸಂಪರ್ಕಗಳ ಒಂದು ಭಾಗವನ್ನು ನಿರ್ಲಕ್ಷಿಸಿದಂತಾಗುತ್ತದೆ ಎನ್ನುವ ಎಚ್ಚರವೂ ನಮಗಿರಬೇಕು.
ಸಾಮಾಜಿಕ ರಚನೆ ಮತ್ತು ಉಪಭಾಷೆಗಳ ಸಂಬಂಧ
ಭಾಷೆಯು ಸಮಾಜದಿಂದ ಪ್ರತ್ಯೇಕವಾಗಿ ಬದುಕುವುದಿಲ್ಲ. ಸಮಾಜದಲ್ಲಿರುವ ಜಾತಿ, ವರ್ಗ, ವೃತ್ತಿ, ಲಿಂಗ, ಶಿಕ್ಷಣ ಮತ್ತು ಅಧಿಕಾರ ಸಂಬಂಧಗಳು ಭಾಷೆಯ ಬಳಕೆಯಲ್ಲಿಯೂ ಪ್ರತಿಫಲಿಸುತ್ತವೆ. ಹೀಗಾಗಿ ಕನ್ನಡದ ಉಪಭಾಷೆಗಳನ್ನು ಅಧ್ಯಯನ ಮಾಡುವಾಗ ಪ್ರಾದೇಶಿಕ ವ್ಯತ್ಯಾಸಗಳ ಜೊತೆಗೆ ಸಾಮಾಜಿಕ ಉಪಭಾಷೆಗಳನ್ನೂ ಪರಿಗಣಿಸಬೇಕಾಗುತ್ತದೆ. ಕನ್ನಡದ ಪ್ರಾದೇಶಿಕ ಮತ್ತು ಸಾಮಾಜಿಕ ಉಪಭಾಷೆಗಳ ಅಧ್ಯಯನವನ್ನು ಕನ್ನಡ ಭಾಷಾಶಾಸ್ತ್ರದ ಪ್ರಮುಖ ಕ್ಷೇತ್ರವೆಂದು ಕನ್ನಡ ವಿಶ್ವವಿದ್ಯಾಲಯದ ಭಾಷಾ ಅಧ್ಯಯನ ವಿಭಾಗವೂ ಗುರುತಿಸಿದೆ.
ಉದಾಹರಣೆಗೆ, ಕೃಷಿಕರ ಮಾತಿನಲ್ಲಿ ಭೂಮಿ, ಬಿತ್ತನೆ, ನಾಟಿ, ಕಳೆ ತೆಗೆಯುವುದು, ಕೊಯ್ಲು, ಕಣ, ರಾಶಿ, ಸುಗ್ಗಿ ಮೊದಲಾದ ಪದಗಳು ಕೇವಲ ವಸ್ತು ಅಥವಾ ಕ್ರಿಯೆಗಳನ್ನು ಸೂಚಿಸುವುದಿಲ್ಲ; ಅವು ಕೃಷಿಕರ ಋತುಜ್ಞಾನ, ಶ್ರಮ ಮತ್ತು ಬದುಕಿನ ಅನುಭವಗಳನ್ನು ಪ್ರತಿನಿಧಿಸುತ್ತವೆ. ಅದೇ ರೀತಿ ನೇಕಾರರ ಭಾಷೆಯಲ್ಲಿ ಮಗ್ಗ, ನೇಯ್ಗೆ, ನೂಲು, ಮಗ್ಗದ ಕಡ್ಡಿ ಮತ್ತು ಬಟ್ಟೆಯ ವಿನ್ಯಾಸಕ್ಕೆ ಸಂಬಂಧಿಸಿದ ಪದಗಳಿಗೆ ವಿಶೇಷ ಅರ್ಥವಿದೆ. ಕುಂಬಾರರ ಬದುಕಿನಲ್ಲಿ ಮಣ್ಣು, ಹದ, ಚಕ್ರ, ಹಂಚು, ಮಡಕೆ ಮತ್ತು ಸುಡುವ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಪದಸಂಪತ್ತು ಅವರ ವೃತ್ತಿಪರ ಜ್ಞಾನವನ್ನು ದಾಖಲಿಸುತ್ತದೆ.
ಈ ರೀತಿಯ ವೃತ್ತಿಪರ ಪದಸಂಪತ್ತು ಪ್ರಮಾಣ ಕನ್ನಡದ ಸಾಮಾನ್ಯ ಶಬ್ದಕೋಶದಲ್ಲಿ ಸಂಪೂರ್ಣವಾಗಿ ದಾಖಲಾಗಿರಬೇಕೆಂದಿಲ್ಲ. ಆದ್ದರಿಂದ ಉಪಭಾಷೆಗಳ ಅಧ್ಯಯನವು ಜನರ ಅನುಭವಜ್ಞಾನವನ್ನು ಸಂಗ್ರಹಿಸುವ ಕಾರ್ಯದ ಭಾಗವೂ ಆಗುತ್ತದೆ.
ಇನ್ನೊಂದು ಮುಖ್ಯವಾದ ಅಂಶವೆಂದರೆ ಭಾಷೆ ಮತ್ತು ಸಾಮಾಜಿಕ ಪ್ರತಿಷ್ಠೆಯ ನಡುವಿನ ಸಂಬಂಧ. ಕೆಲವು ಭಾಷಾರೂಪಗಳನ್ನು ವಿದ್ಯಾವಂತಿಕೆ, ಅಧಿಕಾರ ಅಥವಾ ನಗರ ಜೀವನದ ಸಂಕೇತವೆಂದು ಪರಿಗಣಿಸಿದರೆ, ಇತರ ಭಾಷಾರೂಪಗಳನ್ನು ಗ್ರಾಮೀಣತನ ಅಥವಾ ಹಿಂದುಳಿದಿರುವಿಕೆಯೊಂದಿಗೆ ತಪ್ಪಾಗಿ ಜೋಡಿಸುವ ಪ್ರವೃತ್ತಿ ಕಂಡುಬರುತ್ತದೆ. ಇದರಿಂದ ಉಪಭಾಷೆ ಮಾತನಾಡುವವರು ತಮ್ಮ ಸಹಜ ಮಾತಿನ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳಬಹುದು. ಭಾಷೆಯಲ್ಲಿನ ವ್ಯತ್ಯಾಸವನ್ನು ವ್ಯಕ್ತಿಯ ಬುದ್ಧಿಮತ್ತೆ, ಶಿಕ್ಷಣದ ಸಾಮರ್ಥ್ಯ ಅಥವಾ ಸಾಮಾಜಿಕ ಮೌಲ್ಯವನ್ನು ನಿರ್ಧರಿಸುವ ಮಾನದಂಡವನ್ನಾಗಿ ಬಳಸುವುದು ಸರಿಯಲ್ಲ.
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಉತ್ತರ ಕರ್ನಾಟ, ಕರಾವಳಿ, ಮೈಸೂರು ಕನ್ನಡ: ಭಾಷಾ ಸೊಗಡಿನ ಉಗಮದ ಕಥೆ...
ಒಂದು ಸಾಲಿನಲ್ಲಿಕನ್ನಡದ ಉಪಭಾಷೆಗಳು ಕೇವಲ ಭಾಷಾ ವ್ಯತ್ಯಾಸಗಳಲ್ಲ, ಅವು ಸಮುದಾಯದ ಇತಿಹಾಸ, ಸಂಸ್ಕೃತಿ ಮತ್ತು ಬದುಕಿನ ಅನುಭವಗಳನ್ನು ಪ್ರತಿಬಿಂಬಿಸುವ ಜೀವಂತ ಅಸ್ಮಿತೆಯ ಸಂಕೇತಗಳಾಗಿವೆ.
ಏನು? ಏಕೆ? ಹೇಗೆ?
ಉಪಭಾಷೆಗಳು ಎಂದರೇನು?
ಪ್ರದೇಶ, ವೃತ್ತಿ, ಸಾಮಾಜಿಕ ಪರಿಸರ ಮತ್ತು ಸಮುದಾಯಕ್ಕೆ ಅನುಗುಣವಾಗಿ ಭಾಷೆಯಲ್ಲಿ ಉಂಟಾಗುವ ಉಚ್ಚಾರಣೆ, ಪದಬಳಕೆ ಮತ್ತು ವಾಕ್ಯರಚನೆಯ ವ್ಯತ್ಯಾಸಗಳೇ ಉಪಭಾಷೆಗಳು.
ಪ್ರಾದೇಶಿಕ ವ್ಯತ್ಯಾಸಗಳಿಗೆ ಕಾರಣವೇನು?
ಭೌಗೋಳಿಕ ವೈವಿಧ್ಯತೆ, ಐತಿಹಾಸಿಕ ಸಂಪರ್ಕಗಳು, ವಲಸೆ, ವ್ಯಾಪಾರ ಮತ್ತು ನೆರೆಯ ಭಾಷೆಗಳೊಂದಿಗೆ ಸಾಗುವ ಸಹಜ ಸಾಮಾಜಿಕ ವಿನಿಮಯವು ಉಪಭಾಷೆಗಳ ರೂಪಗೊಳ್ಳುವಿಕೆಗೆ ಕಾರಣವಾಗಿದೆ.
ಸಾಮಾಜಿಕ ರಚನೆಯ ಪ್ರಭಾವವೇನು?
ಜಾತಿ, ವರ್ಗ, ಲಿಂಗ ಮತ್ತು ವೃತ್ತಿಪರ ಅನುಭವಗಳು ಭಾಷೆಯಲ್ಲಿ ಪ್ರತಿಫಲಿಸುತ್ತವೆ; ಕೃಷಿಕರು, ನೇಕಾರರು ಮೊದಲಾದ ಸಮುದಾಯಗಳ ಭಾಷೆಯಲ್ಲಿ ಅವರ ವಿಶೇಷ ಜ್ಞಾನ ಮತ್ತು ಬದುಕಿನ ಶ್ರಮ ದಾಖಲಾಗಿರುತ್ತದೆ.
ಉಪಭಾಷೆಗಳ ಸಂರಕ್ಷಣೆ ಏಕೆ ಮುಖ್ಯ?
ಉಪಭಾಷೆಗಳು ಕೇವಲ ಭಾಷಾ ರೂಪಗಳಲ್ಲ, ಅವು ಸಮುದಾಯದ ಸಾಂಸ್ಕೃತಿಕ ಸ್ಮೃತಿ ಮತ್ತು ಜ್ಞಾನದ ಮೂಲಗಳಾಗಿವೆ; ಇವುಗಳನ್ನು ದಾಖಲಿಸುವುದು ಸಾಮಾಜಿಕ ನ್ಯಾಯ ಮತ್ತು ಭಾಷಿಕ ಪ್ರಜಾಪ್ರಭುತ್ವದ ಭಾಗವಾಗಿದೆ.
ಸಾಹಿತ್ಯದಲ್ಲಿ ಉಪಭಾಷೆಯ ಪಾತ್ರವೇನು?
ಕಥೆ, ಕಾದಂಬರಿಗಳಲ್ಲಿ ಉಪಭಾಷೆ ಬಳಸುವುದರಿಂದ ಪಾತ್ರಗಳ ಹಿನ್ನೆಲೆ, ಮನೋಭಾವ ಮತ್ತು ಸಂಸ್ಕೃತಿಯನ್ನು ಓದುಗರಿಗೆ ಆಪ್ತವಾಗಿ ಮತ್ತು ಸಹಜವಾಗಿ ತಲುಪಿಸಲು ಸಾಧ್ಯವಾಗುತ್ತದೆ.
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಉಪಭಾಷೆಗಳು ಮತ್ತು ಜಾನಪದ ಸಂಸ್ಕೃತಿ
ಕನ್ನಡದ ಉಪಭಾಷೆಗಳ ಜೀವಂತಿಕೆ ಜಾನಪದ ಸಂಸ್ಕೃತಿಯೊಂದಿಗೆ ಅತ್ಯಂತ ನಿಕಟ ಸಂಬಂಧ ಹೊಂದಿದೆ. ಜನಪದ ಗೀತೆಗಳು, ಲಾವಣಿಗಳು, ತತ್ವಪದಗಳು, ಗಾದೆಗಳು, ಒಗಟುಗಳು, ಕಥೆಗಳು, ಪುರಾಣಗಳು, ಜನರ ಬಯಲಾಟಗಳು ಮತ್ತು ವಿವಿಧ ಆಚರಣೆಗಳ ಭಾಷೆಯಲ್ಲಿ ಸ್ಥಳೀಯ ಬದುಕಿನ ಸೊಗಡು ,ಭಾಷಾ ಅನನ್ಯತೆಗಳು ಸ್ಪಷ್ಟವಾಗಿ ಕಾಣಿಸುತ್ತವೆ.
ಉದಾಹರಣೆಗೆ, ಉತ್ತರ ಕರ್ನಾಟಕದ ಜಾನಪದ ಗೀತೆಗಳಲ್ಲಿ ಹೊಲ, ಎತ್ತು, ಮಳೆ, ಬರ, ತವರುಮನೆ, ಅತ್ತೆಮನೆ, ದುಡಿಮೆ ಮತ್ತು ಕೌಟುಂಬಿಕ ಸಂಬಂಧಗಳ ಅನುಭವಗಳು ಪ್ರಾದೇಶಿಕ ಭಾಷಾರೂಪಗಳ ಮೂಲಕ ಅಭಿವ್ಯಕ್ತಿಯಾಗುತ್ತಿರುವುದು ಸಹಜ. ಲಾವಣಿ ಮತ್ತು ಗೀಗೀಪದಗಳಂತಹ ಗಾಯನ ಪ್ರಕಾರಗಳಲ್ಲಿಯೂ ಸ್ಥಳೀಯ ಉಚ್ಚಾರಣೆ, ಲಯ, ಸಂಬೋಧನೆ ಮತ್ತು ಪದಪ್ರಯೋಗಗಳು ಹಾಡಿನ ಪರಿಣಾಮವನ್ನು ಹೆಚ್ಚಿಸಿವೆ. ಇವುಗಳನ್ನು ಪ್ರಮಾಣ ಕನ್ನಡಕ್ಕೆ ಸಂಪೂರ್ಣವಾಗಿ ಪರಿವರ್ತಿಸಿದರೆ ಮೂಲ ಭಾಷೆಯ ಲಯ ಮತ್ತು ಸಾಂಸ್ಕೃತಿಕ ಸೊಗಡಿನ ಕೆಲವು ಅಂಶಗಳು ಕಳೆದುಹೋಗುವ ಸಾಧ್ಯತೆಯಿದೆ.
ಮಂಟೇಸ್ವಾಮಿ ಕಾವ್ಯ, ಮಲೆಮಹದೇಶ್ವರ ಕಾವ್ಯ ಮತ್ತು ತುಳುನಾಡಿನ ಸಿರಿ ಪರಂಪರೆಯಂತಹ ಮೌಖಿಕ ಕಥನಗಳು ಸಮುದಾಯಗಳ ಇತಿಹಾಸ, ನಂಬಿಕೆ, ಸಾಮಾಜಿಕ ಸಂಘರ್ಷ ಮತ್ತು ಸಾಮೂಹಿಕ ಸ್ಮೃತಿಗಳನ್ನು ಅರಿಯಲು ಸಹಕಾರಿಯಾಗಿವೆ.ಮೌಖಿಕ ಪರಂಪರೆಯನ್ನು ಐತಿಹಾಸಿಕ ಅಧ್ಯಯನದ ಮೂಲ ಆಕರವಾಗಿ ಬಳಸುವಾಗ ಅದರ ಕಥನಭೇದ, ಕಾಲನಿರ್ಣಯದ ಮಿತಿಗಳು ಮತ್ತು ಸಮುದಾಯದ ದೃಷ್ಟಿಕೋನಗಳನ್ನು ವಿಮರ್ಶಾತ್ಮಕವಾಗಿ ಪರಿಗಣಿಸುವುದು ಅಗತ್ಯ.
ಗಾದೆಗಳನ್ನು ಗಮನಿಸಿದರೂ ಜನಜೀವನದ ಅನುಭವ ಮತ್ತು ಭಾಷೆಯ ಸಂಬಂಧ ತಿಳಿಯುತ್ತದೆ. "ಕೈ ಕೆಸರಾದರೆ ಬಾಯಿ ಮೊಸರು" ಎಂಬ ಗಾದೆ ದುಡಿಮೆ ಮತ್ತು ಅದರ ಫಲದ ಸಂಬಂಧವನ್ನು ಸೂಚಿಸುತ್ತದೆ. ಇದು ಕೇವಲ ನುಡಿಗಟ್ಟಲ್ಲ; ಶ್ರಮಕ್ಕೆ ಗೌರವ ನೀಡುವ ಜೀವನದೃಷ್ಟಿಯ ಅಭಿವ್ಯಕ್ತಿಯ ಸಾಕ್ಷಿಪ್ರಜ್ಞೆ. ಇಂತಹ ಗಾದೆಗಳು ವಿವಿಧ ಪ್ರದೇಶಗಳಲ್ಲಿ ವಿಭಿನ್ನ ಪದರೂಪಗಳಲ್ಲಿ ಬಳಕೆಯಾಗಿರಬಹುದು. ಅಂಥವುಗಳ ಸ್ಥಳೀಯ ರೂಪಗಳನ್ನು ದಾಖಲಿಸುವುದರಿಂದ ಭಾಷೆಯ ಜೊತೆಗೆ ಜನರ ಚಿಂತನೆಯ ಕ್ರಮವನ್ನೂ ಅರ್ಥಮಾಡಿಕೊಳ್ಳಬಹುದು.
ಆದ್ದರಿಂದ ಜಾನಪದವನ್ನು ಅಧ್ಯಯನ ಮಾಡುವಾಗ ಅದರ ವಿಷಯವಸ್ತುವಿನ ಜೊತೆಗೆ ಭಾಷೆಯ ಸ್ಥಳೀಯ ರೂಪ, ಧ್ವನಿಸೊಗಡು, ಸಂದರ್ಭ ಮತ್ತು ಪ್ರದರ್ಶನದ ಪರಿಸರವನ್ನೂ ಗಮನಿಸಬೇಕು.
ಸಾಹಿತ್ಯದಲ್ಲಿ ಉಪಭಾಷೆಗಳ ಸ್ಥಾನ
ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪ್ರಾದೇಶಿಕ ಭಾಷಾರೂಪಗಳು ಮಹತ್ವದ ಪಾತ್ರ ವಹಿಸಿವೆ. ಸಾಹಿತ್ಯವು ಕೇವಲ ಪ್ರಮಾಣ ಭಾಷೆಯ ಮೂಲಕವೇ ಸಮೃದ್ಧವಾಗುತ್ತದೆ ಎಂಬ ಕಲ್ಪನೆ ಸರಿಯಲ್ಲ. ಜನರ ಬದುಕನ್ನು ಆಪ್ತವಾಗಿ ಚಿತ್ರಿಸುವ ಸಾಹಿತ್ಯಕ್ಕೆ ಅವರ ಮಾತಿನ ಸಹಜತೆ, ಸ್ಥಳೀಯ ಪದಸಂಪತ್ತು ಮತ್ತು ಅನುಭವದ ಭಾಷೆ ಬಹಳ ಅಗತ್ಯ.ಕನ್ನಡ ಆಧುನಿಕ ಸಾಹಿತ್ಯದಲ್ಲಿ ಗ್ರಾಮೀಣ ಬದುಕು, ಶ್ರಮಜೀವಿಗಳ ಅನುಭವ, ಜಾತಿ ವ್ಯವಸ್ಥೆ, ಮಹಿಳೆಯರ ಸಂಕಷ್ಟ, ರೈತರ ಬದುಕು ಮತ್ತು ಅಂಚಿನ ಸಮುದಾಯಗಳ ಅಸ್ಮಿತೆಯನ್ನು ಚಿತ್ರಿಸುವ ಸಂದರ್ಭದಲ್ಲಿ ಉಪಭಾಷೆಗಳ ಬಳಕೆ ವಿಶಿಷ್ಟ ಪರಿಣಾಮವನ್ನು ಉಂಟುಮಾಡಿದೆ. ಕಥೆ ಅಥವಾ ಕಾದಂಬರಿಯ ಪಾತ್ರವು ತನ್ನ ಪ್ರದೇಶಕ್ಕೆ ಸಹಜವಾದ ಭಾಷೆಯಲ್ಲಿ ಮಾತನಾಡಿದಾಗ ಅದರ ಸಾಮಾಜಿಕ ಹಿನ್ನೆಲೆ ಮತ್ತು ವ್ಯಕ್ತಿತ್ವ ಹೆಚ್ಚು ಸ್ಪಷ್ಟವಾಗುತ್ತದೆ.ದೇವನೂರು ಮಹಾದೇವ ಅವರ ಕುಸುಮಬಾಲೆ ಕಾದಂಬರಿ ಈ ಮಾತಿಗೊಂದು ಕೈಗನ್ನಡಿ.
ಇನ್ನು ಉತ್ತರ ಕರ್ನಾಟಕದ ಗ್ರಾಮೀಣ ಬದುಕನ್ನು ಆಧರಿಸಿದ ಹಲವು ಕಥೆಗಳಲ್ಲಿ ಸ್ಥಳೀಯ ಸಂಬೋಧನೆಗಳು, ಮಾತಿನ ಲಯ, ಗಾದೆಗಳು ಮತ್ತು ವೃತ್ತಿಗೆ ಸಂಬಂಧಿಸಿದ ಪದಗಳು ಸಹಜವಾಗಿ ಬಂದರೆ ಆ ಪ್ರದೇಶದ ಸಾಂಸ್ಕೃತಿಕ ವಾತಾವರಣವೇ ಓದುಗರಿಗೆ ಅನುಭವವಾಗುತ್ತದೆ. ಅದೇ ಪಾತ್ರಗಳೆಲ್ಲ ಒಂದೇ ಬಗೆಯ ಪುಸ್ತಕದ ಕನ್ನಡದಲ್ಲಿ ಅಂದರೆ ಶಿಷ್ಟಲಿಖಿತ ಕನ್ನಡದಲ್ಲಿ ಮಾತನಾಡಿದರೆ ಅವರ ಸಾಮಾಜಿಕ ಹಿನ್ನೆಲೆಯ ನಡುವಿನ ವ್ಯತ್ಯಾಸಗಳು ಮಸುಕಾಗಿ, ಏಕತಾನತೆಯಿಂದ ನರಳುವಂತಾಗುತ್ತದೆ.
ಆದರೆ ಸಾಹಿತ್ಯದಲ್ಲಿ ಉಪಭಾಷೆಯ ಬಳಕೆ ಎಂದರೆ ಕೇವಲ ವಿಭಿನ್ನ ಉಚ್ಚಾರಣೆಯನ್ನು ಅನುಕರಿಸುವುದಲ್ಲ. ಅದು ಪಾತ್ರಗಳ ಮನೋಭಾವ, ಸಾಮಾಜಿಕ ಸ್ಥಾನಮಾನ, ಅನುಭವ ಮತ್ತು ಪರಿಸರವನ್ನು ಅರ್ಥಪೂರ್ಣವಾಗಿ ಅಭಿವ್ಯಕ್ತಿಸುವ ಕಲಾತ್ಮಕ ವಿಧಾನವಾಗಿದೆ. ಉಪಭಾಷೆಯನ್ನು ಹಾಸ್ಯಕ್ಕಾಗಿ ಅಥವಾ ನಿರ್ದಿಷ್ಟ ಸಮುದಾಯವನ್ನು ಕೀಳಾಗಿ ತೋರುವುದಕ್ಕೆ ಮಾತ್ರ ಬಳಸಿದರೆ ಅದು ಭಾಷಿಕ ಪೂರ್ವಗ್ರಹಗಳನ್ನು ಬಲಪಡಿಸಬಹುದು. ಹೀಗಾಗಿ ಸಾಹಿತ್ಯಿಕ ಬಳಕೆಯಲ್ಲಿ ಭಾಷೆಯ ಸೌಂದರ್ಯದ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯೂ ಅಗತ್ಯ.
೬. ಉಪಭಾಷೆಗಳು, ಜಾತಿ ವ್ಯವಸ್ಥೆ ಮತ್ತು ಅಂಚಿನ ಸಮುದಾಯಗಳ ಅಸ್ಮಿತೆ:
ಕನ್ನಡದ ಉಪಭಾಷೆಗಳ ಬದುಕನ್ನು ಅರ್ಥಮಾಡಿಕೊಳ್ಳುವಾಗ ಜಾತಿ ವ್ಯವಸ್ಥೆ, ಸಾಮಾಜಿಕ ಅಸಮಾನತೆ ಮತ್ತು ಅಧಿಕಾರದ ಸಂಬಂಧಗಳನ್ನು ನಿರ್ಲಕ್ಷಿಸುವಂತಿಲ್ಲ. ಸಮಾಜದಲ್ಲಿ ಕೆಲವು ಭಾಷಾರೂಪಗಳಿಗೆ ಗೌರವದ ಸ್ಥಾನ ದೊರೆತರೆ, ಇತರ ಭಾಷಾರೂಪಗಳನ್ನು ಕೀಳಾಗಿ ಕಾಣುವ ಪ್ರವೃತ್ತಿಯೂ ಬೆಳೆಯುತ್ತಿದೆ. ಈ ಪ್ರಕ್ರಿಯೆಯಲ್ಲಿ ಭಾಷೆಯು ಸಾಮಾಜಿಕ ಶ್ರೇಣೀಕರಣದ ಸಾಧನವಾಗುವ ಅಪಾಯವಿದೆ.ನಾವು ಬಾಲ್ಯದ ಹಳ್ಳಿಗಾಡಿನ ಪರಿಸರದಲ್ಲಿ ಗೌಡ,ಪಟೇಲ,ಶ್ಯಾನಭೋಗರು ಬಳಸುವ ಕನ್ನಡದಲ್ಲಿ ಈ ಜಾತಿ ವರ್ಗ ಶ್ರೇಣೀಕರಣದ ಫ್ಯೂಡಲ್ ರೂಪಗಳನ್ನು ಕಂಡಿದ್ದೇವೆ.ಅಂದರಿಲ್ಲಿ ಬಳಸುವ ಉಪಭಾಷೆಯ ಮುಖವಾಡದ ರೂಪದಲ್ಲಿರುವ ಕನ್ನಡ ಬೇರೆ, ಸಹಜ ಜೀವನಾಭಿವ್ಯಕ್ತಿಯ ಆಡುಮಾತಿನ ಕನ್ನಡ ಬೇರೆ.
ಕರಾವಳಿ ಕರ್ನಾಟಕದಲ್ಲಿ ಕನ್ನಡ ಮತ್ತು ತುಳು ಭಾಷೆಗಳ ಬಳಕೆಯ ಸ್ಥಾನಮಾನವು ಜಾತಿ, ಸಂಸ್ಕೃತಿ ಮತ್ತು ಸಾಮಾಜಿಕ ಅಧಿಕಾರದ ಸಂಬಂಧಗಳೊಂದಿಗೆ ಹೇಗೆ ಬೆಸೆದುಕೊಂಡಿತ್ತು ಎಂಬುದನ್ನು ಶಶಿಕಾಂತ ಕೌದೂರು ಅವರು ತಮ್ಮದೊಂದು ಅಧ್ಯಯನದಲ್ಲಿ ಚರ್ಚಿಸಿದ್ದಾರೆ.ಇದರಿಂದ ಭಾಷೆಯ ಸ್ಥಾನಮಾನವು ಕೇವಲ ವ್ಯಾಕರಣ ಅಥವಾ ಪದಸಂಪತ್ತಿನ ಆಧಾರದ ಮೇಲೆ ನಿರ್ಧಾರವಾಗುವುದಿಲ್ಲ; ಅದನ್ನು ಬಳಸುವ ಎನ್ನುವುದಕ್ಕಿಂತ ಸಹಜ ಜೀವನದ ಅನುಭವಗಳ ಮೂಲಕ ಅಭಿವ್ಯಕ್ತಿಸುವ ಜನಸಮುದಾಯದ ಸಾಮಾಜಿಕ ಸ್ಥಾನವೂ ಪ್ರಭಾವ ಬೀರುತ್ತದೆ ಎಂಬುದು ಸ್ಪಷ್ಟವಾಗುತ್ತದೆ.ದಲಿತರು, ಆದಿವಾಸಿಗಳು, ಅಲೆಮಾರಿ ಸಮುದಾಯಗಳು ಮತ್ತು ಇತರ ಅಂಚಿನ ಸಮುದಾಯಗಳ ಮಾತಿನ ರೂಪಗಳಲ್ಲಿ ಅವರ ಇತಿಹಾಸ, ಶ್ರಮ, ಪ್ರತಿರೋಧ, ನಂಬಿಕೆ ಮತ್ತು ಜೀವನಾನುಭವಗಳ ಗುರುತುಗಳಿವೆ. ಇವುಗಳನ್ನು ದಾಖಲಿಸುವುದು ಭಾಷಾ ಸಂರಕ್ಷಣೆಯಷ್ಟೇ ಅಲ್ಲ, ಸಾಮಾಜಿಕ ನ್ಯಾಯದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ.
ಉದಾಹರಣೆಗೆ, ಒಂದು ಸಮುದಾಯದ ಆಚರಣೆಯಲ್ಲಿ ಬಳಕೆಯಾಗುವ ವಿಶಿಷ್ಟ ಪದ, ಹಾಡು ಅಥವಾ ಸಂಬೋಧನೆಯನ್ನು ಕೇವಲ ಸ್ಥಳೀಯ ಭಾಷೆಯ ರೂಪವೆಂದು ನೋಡುವುದಕ್ಕಿಂತ, ಅದರ ಹಿಂದಿರುವ ಸಮುದಾಯದ ಸ್ಮೃತಿ ಮತ್ತು ಸಾಂಸ್ಕೃತಿಕ ಅರ್ಥವನ್ನೂ ತಿಳಿಯಬೇಕು. ಹೀಗೆ ಉಪಭಾಷಾ ಅಧ್ಯಯನವು ಅಂಚಿನ ಸಮುದಾಯಗಳ ಜ್ಞಾನವನ್ನು ಗುರುತಿಸುವ ಮತ್ತು ಅವರ ಸಾಂಸ್ಕೃತಿಕ ಅಸ್ಮಿತೆಗೆ ಗೌರವ ನೀಡುವ ಕಾರ್ಯವಾಗುತ್ತದೆ.
ಮಹಿಳೆಯರ ಬದುಕು ಮತ್ತು ಉಪಭಾಷೆಗಳ ಅಭಿವ್ಯಕ್ತಿ
ಮಹಿಳೆಯರ ದೈನಂದಿನ ಮಾತು, ಗೃಹಗೀತೆ, ಬೀಸುವ ಕಲ್ಲಿನ ಪದ, ಸೋಬಾನೆ ಹಾಡು, ಮದುವೆಯ ಹಾಡು, ತಾಯ್ತನದ ಲಾಲಿ ಮತ್ತು ಶ್ರಮದ ಹಾಡುಗಳಲ್ಲಿ ಮಹಿಳಾ ಅನುಭವಗಳ ವಿಶಿಷ್ಟ ಭಾಷೆಯ ರೂಪುಗಳಿವೆ. ಈ ಭಾಷಿಕ ಅಭಿವ್ಯಕ್ತಿಗಳು ಅಧಿಕೃತ ಇತಿಹಾಸದಲ್ಲಿ ದಾಖಲಾಗದ ಅನೇಕ ಅನುಭವಗಳನ್ನು ಸಂರಕ್ಷಿಸಿವೆ. ಮಹಿಳೆಯರು ಹಾಡುವ ಮದುವೆಯ ಹಾಡುಗಳಲ್ಲಿ ತವರುಮನೆಯ ನೆನಪು, ವೈವಾಹಿಕ ಬದುಕಿನ ನಿರೀಕ್ಷೆ, ಕುಟುಂಬದ ಸಂಬಂಧಗಳು ಮತ್ತು ಕೆಲವೊಮ್ಮೆ ಪಿತೃಪ್ರಧಾನ ವ್ಯವಸ್ಥೆಯ ಮೇಲಿನ ಅಸಮಾಧಾನವೂ ವ್ಯಕ್ತವಾಗಿರುವುದುಂಟು.ಹಾಡಲ್ಲಿರುವ ಪದಗಳು, ಸ್ಥಳೀಯ ಸಂಬೋಧನೆಗಳು ಮತ್ತು ರೂಪಕಗಳು ಆ ಪ್ರದೇಶದ ಸಾಮಾಜಿಕ ಸಂಬಂಧಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ.
ಅದೇ ರೀತಿ ಮಹಿಳೆಯರ ದೈನಂದಿನ ಮಾತಿನಲ್ಲಿರುವ ಗಾದೆಗಳು, ನುಡಿಗಟ್ಟುಗಳು ಮತ್ತು ಅನುಭವದ ಅಭಿವ್ಯಕ್ತಿಗಳು ತಲೆಮಾರುಗಳಿಂದ ಹರಿದುಬಂದ ಜೀವನಜ್ಞಾನವನ್ನು ಒಳಗೊಂಡಿವೆ. ಆದರೆ ಮಹಿಳೆಯರ ಭಾಷಿಕ ಅನುಭವಗಳನ್ನು ದಾಖಲಿಸುವಾಗ ಅವುಗಳನ್ನು ಕೇವಲ ಕೌಟುಂಬಿಕ ಬದುಕಿಗೆ ಸೀಮಿತಗೊಳಿಸದೆ, ಕೃಷಿ, ಮಾರುಕಟ್ಟೆ, ಉದ್ಯೋಗ, ರಾಜಕೀಯ ಮತ್ತು ಸಾಮಾಜಿಕ ಹೋರಾಟಗಳಲ್ಲಿ ಮಹಿಳೆಯರು ಬಳಸುವ ಭಾಷೆಯನ್ನೂ ಅಧ್ಯಯನ ಮಾಡಬೇಕು.
ಹೀಗಾಗಿ ಉಪಭಾಷೆಗಳ ಅಧ್ಯಯನವು ಲಿಂಗಸಂಬಂಧಿ ಅಧಿಕಾರ, ಮಹಿಳಾಭಿವ್ಯಕ್ತಿ ಮತ್ತು ಅವರ ಸಾಂಸ್ಕೃತಿಕ ಕೊಡುಗೆಗಳನ್ನು ಅರಿಯುವ ಸಾಧ್ಯತೆಯನ್ನು ನಮಗೆ ವಿಶಿಷ್ಟವಾಗಿ ಒದಗಿಸುತ್ತದೆ.
ಆಧುನಿಕತೆ, ಶಿಕ್ಷಣ ಮತ್ತು ಉಪಭಾಷೆಗಳ ಮುಂದಿರುವ ಸವಾಲುಗಳು
ಜಾಗತೀಕರಣ, ನಗರೀಕರಣ, ವಲಸೆ, ಆಧುನಿಕ ಶಿಕ್ಷಣ, ದೂರದರ್ಶನ, ಚಲನಚಿತ್ರ ಮತ್ತು ಸಾಮಾಜಿಕ ಮಾಧ್ಯಮಗಳು ಭಾಷೆಯ ಬಳಕೆಯಲ್ಲಿ ಹೊಸ ಬದಲಾವಣೆಗಳನ್ನು ಉಂಟುಮಾಡಿವೆ. ವಿವಿಧ ಪ್ರದೇಶಗಳ ಜನರು ಪರಸ್ಪರ ಸಂಪರ್ಕಕ್ಕೆ ಬರುವುದರಿಂದ ಪದಗಳ ವಿನಿಮಯ ಹೆಚ್ಚಾಗಿದೆ. ಇದು ಭಾಷೆಯ ಬೆಳವಣಿಗೆಯ ಸಹಜ ಪ್ರಕ್ರಿಯೆಯಾದರೂ, ಕೆಲವು ಸ್ಥಳೀಯ ಭಾಷಾರೂಪಗಳ ಬಳಕೆ ಕಡಿಮೆಯಾಗುವ ಸಾಧ್ಯತೆಯೂ ಇದೆ.
ವಿಶೇಷವಾಗಿ ಮಕ್ಕಳು ಶಾಲೆಗಳಲ್ಲಿ ಪ್ರಮಾಣ ಕನ್ನಡ ಅಥವಾ ಇಂಗ್ಲಿಷ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಪರಿಸರದಲ್ಲಿ ಬೆಳೆದಾಗ, ಮನೆಯ ಉಪಭಾಷೆಯನ್ನು ಸಾರ್ವಜನಿಕವಾಗಿ ಅಭಿವ್ಯಕ್ತಿಸಲು ಹಿಂಜರಿಯಬಹುದು. ಶಿಕ್ಷಕರು ಅಥವಾ ಸಹಪಾಠಿಗಳು ಅವರ ಮಾತನ್ನು ತಪ್ಪು ಎಂದು ಗ್ರಹಿಸಿದರೆ ಮಕ್ಕಳಲ್ಲಿ ಭಾಷಿಕ ಕೀಳರಿಮೆ ಬೆಳೆಯಬಹುದು. ಇದರಿಂದ ತಲೆಮಾರುಗಳ ನಡುವಿನ ಭಾಷಾ ವರ್ಗಾವಣೆ ದುರ್ಬಲವಾಗುವ ಸಾಧ್ಯತೆ ಇದೆ.
ಇದಕ್ಕೆ ಪರಿಹಾರವಾಗಿ ಪ್ರಮಾಣ ಕನ್ನಡದ ಕಲಿಕೆಯನ್ನು ವಿರೋಧಿಸುವ ಅಗತ್ಯವಿಲ್ಲ. ಬದಲಾಗಿ, ಮಕ್ಕಳ ಮನೆಯ ಮಾತೃ ಭಾಷೆಯನ್ನು ಗೌರವಿಸುತ್ತಲೇ ಪ್ರಮಾಣ ಕನ್ನಡವನ್ನು ಕಲಿಸುವ ಬಹುಭಾಷಾ ಸ್ನೇಹಿ ಶಿಕ್ಷಣದ ವಿಧಾನವನ್ನು ಅನುಸರಿಸಬೇಕು. ವಿದ್ಯಾರ್ಥಿಗಳು ತಮ್ಮ ಪ್ರದೇಶದ ಪದಗಳು, ಗಾದೆಗಳು, ಜನಪದ ಹಾಡು ಮತ್ತು ಕಥೆಗಳನ್ನು ತರಗತಿಯಲ್ಲಿ ಹಂಚಿಕೊಳ್ಳಲು ಅವಕಾಶ ನೀಡಬೇಕು.ಇದರಿಂದ
ಸಾಮಾಜಿಕ ಮಾಧ್ಯಮಗಳಲ್ಲಿಯೂ ಉಪಭಾಷೆಗಳ ಬಳಕೆಯನ್ನು ಉತ್ತೇಜಿಸಬಹುದು. ಸ್ಥಳೀಯ ಕಥನಗಳು, ಧ್ವನಿಮುದ್ರಣಗಳು, ಜನಪದ ಹಾಡುಗಳು, ಡಿಜಿಟಲ್ ಶಬ್ದಕೋಶಗಳು ಮತ್ತು ಪ್ರಾದೇಶಿಕ ಪದಸಂಗ್ರಹಗಳನ್ನು ರೂಪಿಸುವ ಮೂಲಕ ಭಾಷಿಕ ಪರಂಪರೆಯನ್ನು ಮುಂದಿನ ತಲೆಮಾರಿಗೆ ದಾಟಿಸಬಹುದು.
ಕನ್ನಡ ವಿಶ್ವವಿದ್ಯಾಲಯದ ಭಾಷಾ ಅಧ್ಯಯನ ವಿಭಾಗವು ಪ್ರಾದೇಶಿಕ ಮತ್ತು ಸಾಮಾಜಿಕ ಉಪಭಾಷೆಗಳ ಗುರುತಿಸುವಿಕೆ, ದಾಖಲೀಕರಣ ಮತ್ತು ವಿಶ್ಲೇಷಣೆಯನ್ನು ತನ್ನ ಪ್ರಮುಖ ಸಂಶೋಧನಾ ಕಾರ್ಯಗಳಲ್ಲಿ ಒಂದಾಗಿ ಪರಿಗಣಿಸಿರುವುದು ಈ ನಿಟ್ಟಿನಲ್ಲಿ ಗಮನಾರ್ಹವಾಗಿದೆ. ಭಾಷೆ,ಸಾಹಿತ್ಯ, ಸಂಸ್ಕೃತಿಯನ್ನು ತನ್ನ ಶೈಕ್ಷಣಿಕ ಕಾಳಜಿಯಾಗಿ ಇಟ್ಟುಕೊಂಡಿರುವ ಎಲ್ಲಾ ವಿಶ್ವವಿದ್ಯಾಲಯಗಳೂ ಈ ಕಾರ್ಯಯೋಜನೆಗಳನ್ನು ಕೈಗೊಳ್ಳಬಹುದು.
ಉಪಭಾಷೆಗಳ ಸಂರಕ್ಷಣೆ ಮತ್ತು ಅಧ್ಯಯನದ ಸಾಧ್ಯತೆಗಳು
ಕನ್ನಡದ ಉಪಭಾಷೆಗಳನ್ನು ಸಂರಕ್ಷಿಸುವುದು ಎಂದರೆ ಅವುಗಳನ್ನು ಕೇವಲ ಸಂಗ್ರಹಾಲಯದ ವಸ್ತುಗಳಂತೆ ಉಳಿಸುವುದಲ್ಲ; ಅವುಗಳ ಸಹಜ ಅಭಿವ್ಯಕ್ತಿ ಮತ್ತು ತಲೆಮಾರುಗಳ ನಡುವಿನ ವರ್ಗಾವಣೆಗೆ ಅನುಕೂಲಕರ ವಾತಾವರಣ ಸೃಷ್ಟಿಸುವುದಾಗಿದೆ.ಈ ನಿಟ್ಟಿನಲ್ಲಿ ಕೆಳಗಿನ ಕಾರ್ಯಗಳು ಮುಖ್ಯವೆನಿಸುತ್ತವೆ;
ಕ್ಷೇತ್ರಕಾರ್ಯ ಮತ್ತು ದಾಖಲೀಕರಣ: ವಿವಿಧ ಪ್ರದೇಶಗಳ ಹಿರಿಯರು, ಜಾನಪದ ಕಲಾವಿದರು, ಕೃಷಿಕರು, ಕುಶಲಕರ್ಮಿಗಳು ಮತ್ತು ಸಮುದಾಯದ ಸದಸ್ಯರ ಮಾತುಗಳನ್ನು ಧ್ವನಿ ಹಾಗೂ ವಿಡಿಯೊ ರೂಪದಲ್ಲಿ ದಾಖಲಿಸಬೇಕು.
ಪ್ರಾದೇಶಿಕ ಶಬ್ದಕೋಶಗಳ ರಚನೆ: ಕೃಷಿ, ಕಲೆ, ಆಹಾರ, ಆಚರಣೆ, ಸಂಬಂಧಗಳು ಮತ್ತು ವೃತ್ತಿಗಳಿಗೆ ಸಂಬಂಧಿಸಿದ ಪದಗಳನ್ನು ಅರ್ಥ ಹಾಗೂ ಸಂದರ್ಭಗಳೊಂದಿಗೆ ಸಂಗ್ರಹಿಸಬೇಕು.
ಶೈಕ್ಷಣಿಕ ಬಳಕೆ: ಶಾಲೆ ಮತ್ತು ಕಾಲೇಜುಗಳಲ್ಲಿ ಸ್ಥಳೀಯ ಭಾಷಾರೂಪಗಳ ಕುರಿತು ಯೋಜನೆಗಳು, ಪ್ರಬಂಧಗಳು ಮತ್ತು ಕ್ಷೇತ್ರಕಾರ್ಯಗಳನ್ನು ಉತ್ತೇಜಿಸಬೇಕು.
ಸಾಹಿತ್ಯಿಕ ಪ್ರೋತ್ಸಾಹ: ಉಪಭಾಷೆಗಳಲ್ಲಿ ರಚನೆಯಾಗುವ ಕವನ, ಕಥೆ, ನಾಟಕ ಮತ್ತು ಜಾನಪದ ಕೃತಿಗಳಿಗೆ ಪ್ರಕಟಣೆ ಹಾಗೂ ಸಂಶೋಧನೆಯ ಅವಕಾಶಗಳನ್ನು ಕಲ್ಪಿಸಬೇಕು.
ಡಿಜಿಟಲ್ ಸಂಗ್ರಹ: ಸ್ಥಳೀಯ ಹಾಡುಗಳು, ಕಥೆಗಳು, ಗಾದೆಗಳು ಮತ್ತು ಪದಸಂಪತ್ತನ್ನು ಹುಡುಕಲು ಸಾಧ್ಯವಾಗುವ ಮುಕ್ತ ಡಿಜಿಟಲ್ ಭಂಡಾರಗಳನ್ನು ರೂಪಿಸಬೇಕು.
ಸಮುದಾಯದ ಸಹಭಾಗಿತ್ವ: ಉಪಭಾಷೆಯನ್ನು ಮಾತನಾಡುವ ಜನರನ್ನೇ ಸಂಶೋಧನೆಯ ಪಾಲುದಾರರನ್ನಾಗಿ ಮಾಡಬೇಕು. ಅವರ ಅನುಮತಿ, ಸಾಂಸ್ಕೃತಿಕ ಹಕ್ಕು ಮತ್ತು ಜ್ಞಾನಕ್ಕೆ ಸೂಕ್ತ ಗೌರವ ನೀಡಬೇಕು.
ಈ ಹಲವು ಕ್ರಮಗಳಿಂದ ಇಂದಿನ ಮತ್ತು ಭವಿಷ್ಯದ ಉಪಭಾಷೆಗಳ ದಾಖಲೀಕರಣವು ಕೇವಲ ಶೈಕ್ಷಣಿಕ ಚಟುವಟಿಕೆಯಾಗಿರದೆ, ಸಮುದಾಯದ ಸಾಂಸ್ಕೃತಿಕ ಹಕ್ಕು ಮತ್ತು ಭಾಷಿಕ ಪ್ರಜಾಪ್ರಭುತ್ವದ ಭಾಗವಾಗುತ್ತದೆ ಎನ್ನುವುದನ್ನು ನಾವು ಮನಗಾಣಬೇಕು.
ಕೊನೆಯದಾಗಿ ಹೇಳುವುದಾದರೆ,ಕನ್ನಡದ ಉಪಭಾಷೆಗಳು ಕನ್ನಡ ಭಾಷೆಯ ಅಂಚಿನ ರೂಪಗಳಲ್ಲ; ಅವು ಕನ್ನಡದ ಬದುಕಿನ ಬಹುಮುಖ ಅಭಿವ್ಯಕ್ತಿಗಳಾಗಿವೆ. ಪ್ರಾದೇಶಿಕ ಪರಿಸರ, ಸಾಮಾಜಿಕ ರಚನೆ, ವೃತ್ತಿ, ಜಾತಿ, ಲಿಂಗ, ಜನಪದ ಪರಂಪರೆ ಮತ್ತು ಐತಿಹಾಸಿಕ ಸಂಪರ್ಕಗಳು ಅವುಗಳ ಸ್ವರೂಪವನ್ನು ರೂಪಿಸಿವೆ. ಪ್ರತಿಯೊಂದು ಉಪಭಾಷೆಯೂ ತನ್ನದೇ ಆದ ಅನುಭವಜ್ಞಾನ, ಸಾಂಸ್ಕೃತಿಕ ಸ್ಮೃತಿ ಮತ್ತು ಭಾಷಿಕ ಸೌಂದರ್ಯವನ್ನು ಒಳಗೊಂಡಿದೆ.ಇದನ್ನರಿತೇ ಕವಿರಾಜಮಾರ್ಗಕಾರ ಶ್ರೀವಿಜಯ 'ಹಲವು ಕನ್ನಡಂಗಳ್'ಎಂದಿದ್ದು.'ಕನ್ನಡ ಭಾಷೆಯೋಳ್ ಕನ್ನಡ ತಿರುಳಿದೆ' ಎಂದದ್ದು.
ಪ್ರಮಾಣ ಕನ್ನಡವು ಆಡಳಿತ, ಶಿಕ್ಷಣ ಮತ್ತು ವ್ಯಾಪಕ ಸಂವಹನಕ್ಕೆ ಅಗತ್ಯವಾದ ಸಾಮಾನ್ಯ ಭಾಷಿಕ ವೇದಿಕೆಯನ್ನು ಒದಗಿಸುತ್ತದೆ. ಆದರೆ ಅದರ ಮಹತ್ವವನ್ನು ಒಪ್ಪಿಕೊಳ್ಳುವುದೆಂದರೆ ಉಳಿದ ಭಾಷಾರೂಪಗಳನ್ನು ಕೀಳಾಗಿ ಕಾಣುವುದಲ್ಲ. ಪ್ರಮಾಣ ಕನ್ನಡ ಮತ್ತು ಉಪಭಾಷೆಗಳು ಪರಸ್ಪರ ವಿರೋಧಿಗಳಲ್ಲ; ಅವು ಕನ್ನಡ ಭಾಷೆಯ ವಿಶಾಲ ಪರಂಪರೆಯ ಪರಸ್ಪರ ಪೂರಕ ಅಂಗಗಳಾಗಿವೆ.
ಉಪಭಾಷೆಯೊಂದಿಗಿನ ಸಂಬಂಧವನ್ನು ಕಳೆದುಕೊಳ್ಳುವುದು ಕೇವಲ ಕೆಲವು ಪದಗಳನ್ನು ಕಳೆದುಕೊಳ್ಳುವುದಲ್ಲ; ಒಂದು ಸಮುದಾಯದ ನೆನಪು, ಅನುಭವ, ಜ್ಞಾನ ಮತ್ತು ಸಾಂಸ್ಕೃತಿಕ ಸ್ವರವನ್ನು ಕಳೆದುಕೊಳ್ಳುವುದೂ ಆಗಿದೆ. ಆದ್ದರಿಂದ ಕನ್ನಡದ ಉಪಭಾಷೆಗಳ ಅಧ್ಯಯನವು ಭಾಷಾಶಾಸ್ತ್ರದ ಅಗತ್ಯ ಮಾತ್ರವಲ್ಲ, ಸಾಂಸ್ಕೃತಿಕ ವೈವಿಧ್ಯವನ್ನು ಬಹುತ್ವಪೂರ್ಣವಾಗಿ ಗೌರವಿಸುವ ಸಾಮಾಜಿಕ ಹೊಣೆಗಾರಿಕೆಯೂ ಆಗಿದೆ.
ಕನ್ನಡದ ನಿಜವಾದ ಸಮೃದ್ಧಿ ಎಂಬುದು ಒಂದೇ ರೀತಿಯ ಮಾತಿನಲ್ಲಿಲ್ಲ; ವಿಭಿನ್ನ ರೀತಿಯಲ್ಲಿ ಮಾತನಾಡುವ ಜನರೆಲ್ಲರೂ ಕನ್ನಡದ ಸಾಂಸ್ಕೃತಿಕ ಬದುಕಿಗೆ ನೀಡುವ ಕೊಡುಗೆಯಲ್ಲಿದೆ. ಉಪಭಾಷೆಗಳನ್ನು ಗೌರವಿಸುವುದು ಎಂದರೆ ಜನರ ಬದುಕನ್ನು ಗೌರವಿಸುವುದು. ಅವುಗಳನ್ನು ಉಳಿಸುವುದು ಎಂದರೆ ಇದುವರೆಗೆ ನಾವು ಕಾಪಿಟ್ಟುಕೊಂಡುಬಂದಿರುವ ಕನ್ನಡದ ವಿವೇಕವನ್ನು ಮತ್ತು ಅದರ ಭವಿಷ್ಯವನ್ನು ಇನ್ನಷ್ಟು ಸಮೃದ್ಧಗೊಳಿಸುವುದು ಎಂದರ್ಥ.
ಲೇಖಕರು:ಸಹಾಯಕ ಪ್ರಾಧ್ಯಾಪಕರು, ಡಾ.ಆರ್ ಸಿ ಹಿರೇಮಠ ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

