Dailyhunt Logo
  • Light mode
    Follow system
    Dark mode
    • Play Story
    • App Story
ಶಿಕ್ಷಣ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳು: ವಿದ್ಯಾರ್ಥಿಗಳಿಗೆ ಬೇಕು ಸಮಾನ ಅವಕಾಶ

ಶಿಕ್ಷಣ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳು: ವಿದ್ಯಾರ್ಥಿಗಳಿಗೆ ಬೇಕು ಸಮಾನ ಅವಕಾಶ

ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ನಿತ್ಯ ಹೊಸ ಬದಲಾವಣೆ ಕಾಣಿಸುತ್ತಿದೆ. ಹೊಸ ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗುತ್ತಿವೆ. ವಿಶ್ವವಿದ್ಯಾಲಯಗಳು ಪಠ್ಯಕ್ರಮ ಮತ್ತು ಕಲಿಕಾ ವಿಧಾನಗಳಲ್ಲಿ ಹೆಚ್ಚಿನ ಆಯ್ಕೆಗಳಿಗೆ ಅವಕಾಶ ನೀಡುತ್ತಿವೆ. ಭಾರತದ ಭಾಷಾ ಮತ್ತು ಬೌದ್ಧಿಕ ಪರಂಪರೆಗೂ ಮತ್ತೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಇವೆಲ್ಲ ಸ್ವಾಗತಾರ್ಹ ಬೆಳವಣಿಗೆಗಳು. ಆದರೆ, ಈ ಸುಧಾರಣೆಗಳು ನೆಲೆಗೊಳ್ಳಲು ಅಗತ್ಯವಾದ ಮೂಲಭೂತ ಅಗತ್ಯಗಳನ್ನು ನಾವು ಬಲಪಡಿಸುತ್ತಿದ್ದೇವೆಯೇ ಎಂಬ ಪ್ರಶ್ನೆ ಮುಖ್ಯವಾಗಿದೆ.

ಶಾಲಾ ಪೂರ್ವ ಶಿಕ್ಷಣ ಅನುಷ್ಠಾನ: ಕೊಪ್ಪಳ ಜಿಲ್ಲೆಗೆ ಮತ್ತೊಂದು ನೆಕ್ಸೆಸ್ ಪ್ರಶಸ್ತಿ

ಅಸ್ಸಾಮಿ, ಬಂಗಾಳಿ, ಮರಾಠಿ, ಪಾಲಿ ಮತ್ತು ಪ್ರಾಕೃತ ಭಾಷೆಗಳ ಅಧ್ಯಯನಕ್ಕಾಗಿ ಐದು ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಕೇಂದ್ರ ಶಿಕ್ಷಣ ಸಚಿವಾಲಯದ ಇತ್ತೀಚಿನ ಹೇಳಿದೆ. ಇದು ಭಾರತದ ಭಾಷಾ ಮತ್ತು ವಿದ್ವತ್‌ ಪರಂಪರೆಯಲ್ಲಿ ಮಾಡಲಾಗುತ್ತಿರುವ ಮಹತ್ವದ ಹೂಡಿಕೆ. ತೇಜ್‌ಪುರ ವಿಶ್ವವಿದ್ಯಾಲಯ, ವಿಶ್ವಭಾರತಿ, ಗುಜರಾತ್‌ ಕೇಂದ್ರೀಯ ವಿಶ್ವವಿದ್ಯಾಲಯ, ಒಡಿಶಾ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಡೆಕ್ಕನ್‌ ಕಾಲೇಜಿನಲ್ಲಿ ಈ ಕೇಂದ್ರಗಳು ಸ್ಥಾಪನೆಯಾಗಲಿವೆ. ಸಾಹಿತ್ಯ, ಹಸ್ತಪ್ರತಿಗಳು, ಅನುವಾದ, ತತ್ವಶಾಸ್ತ್ರ ಮತ್ತು ಪ್ರಾದೇಶಿಕ ಬೌದ್ಧಿಕ ಇತಿಹಾಸಗಳ ಅಧ್ಯಯನಕ್ಕೆ ಇವು ಹೊಸ ಅವಕಾಶಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ.

ಆದರೆ, ವಿಶ್ವವಿದ್ಯಾಲಯದ ಹೊರಗೆ ನಡೆಯುವ ಕೆಲಸಗಳ ಮೇಲೆ ಈ ಕೇಂದ್ರಗಳ ನೈಜ ಮಹತ್ವ ನಿರ್ಧಾರವಾಗಲಿದೆ. ಡಿಜಿಟಲ್‌ ದಾಖಲೆ ಸಂಗ್ರಹ, ಫೆಲೋಶಿಪ್‌ಗಳು, ಬೋಧನಾ ಸಂಪನ್ಮೂಲಗಳು ಹಾಗೂ ಶಾಲೆಗಳು ಮತ್ತು ಶಿಕ್ಷಕರ ತರಬೇತಿ ಸಂಸ್ಥೆಗಳೊಂದಿಗೆ ಅರ್ಥಪೂರ್ಣ ಸಹಭಾಗಿತ್ವಕ್ಕೆ ಈ ಕೇಂದ್ರಗಳು ಮುಂದಾದರೆ, ಭಾರತದ ಭಾಷಾ ಪರಂಪರೆಯನ್ನು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ಮುಟ್ಟಿಸಬಹುದು.

ಭಾಷೆ ಎಂಬುದು ಪಠ್ಯಕ್ರಮದ ವಿಷಯವಷ್ಟೇ ಅಲ್ಲ. ಅದು ನೆನಪು, ಸಂಸ್ಕೃತಿ ಮತ್ತು ಜಗತ್ತನ್ನು ಅರ್ಥಮಾಡಿಕೊಳ್ಳುವ ದೃಷ್ಟಿಕೋನ. ಶೈಕ್ಷಣಿಕ ಚರ್ಚೆಗಳು ತಂತ್ರಜ್ಞಾನ, ಉದ್ಯೋಗಾವಕಾಶ ಮತ್ತು ಕೌಶಲಗಳ ಸುತ್ತ ಕೇಂದ್ರೀಕೃತವಾಗುತ್ತಿರುವ ಈ ಹೊತ್ತಿನಲ್ಲಿ ಶಿಕ್ಷಣಕ್ಕೆ ಸಾಂಸ್ಕೃತಿಕ ಮತ್ತು ಬೌದ್ಧಿಕ ಉದ್ದೇಶವೂ ಇದೆ ಎಂಬುದನ್ನು ಇಂತಹ ಉಪಕ್ರಮ ಉತ್ತಮ ಉದಾಹರಣೆ.

ಎಲ್ಲರಿಗೂ ಸಮಾನ ಅವಕಾಶ ಸಿಗುವುದಕ್ಕೆ ಆದ್ಯತೆ ನೀಡಬೇಕು. ಗ್ರಾಮೀಣ ವಿದ್ಯಾರ್ಥಿಗಳು, ಕುಟುಂಬದಲ್ಲಿ ಮೊದಲ ಬಾರಿಗೆ ಉನ್ನತ ಶಿಕ್ಷಣ ಪಡೆಯುತ್ತಿರುವವರು ಹಾಗೂ ಸೌಲಭ್ಯಗಳ ಕೊರತೆಯಿರುವ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಈ ಹೊಸ ಕೇಂದ್ರಗಳು ತಮ್ಮ ಶೈಕ್ಷಣಿಕ ಭವಿಷ್ಯದ ಭಾಗವೆಂಬ ಭಾವನೆ ಮೂಡಬೇಕು. ಅವು ಕೇವಲ ತಜ್ಞರಿಗೆ ಮೀಸಲಾದ ಕೈಗೆಟುಕದ ಸಂಸ್ಥೆಗಳಾಗಿ ಉಳಿಯಬಾರದು.

ಉನ್ನತ ಶಿಕ್ಷಣದಲ್ಲಿನ ಇತ್ತೀಚಿನ ಬದಲಾವಣೆಗಳಲ್ಲೂ ಇದೇ ಅಂಶವನ್ನು ಗಮನಿಸಬಹುದು. ನಿಗದಿತ ಕನಿಷ್ಠ ಕ್ರೆಡಿಟ್‌ ಅಂಕಗಳನ್ನು ಪಡೆಯುವ ಕಡ್ಡಾಯ ನಿಯಮವನ್ನು ಸಡಿಲಿಸುವ ದೆಹಲಿ ವಿಶ್ವವಿದ್ಯಾಲಯದ ನಿರ್ಧಾರವನ್ನು, ಕಠಿಣ ಶೈಕ್ಷಣಿಕ ನಿಯಮಗಳಿಂದ ತೊಂದರೆ ಅನುಭವಿಸುತ್ತಿದ್ದ ವಿದ್ಯಾರ್ಥಿಗಳು ಸ್ವಾಗತಿಸಿದ್ದಾರೆ. ಶಿಕ್ಷಣದಲ್ಲಿ ಹೆಚ್ಚಿನ ಸ್ವಾತಂತ್ರ್ಯ ಮತ್ತು ಆಯ್ಕೆಗಳಿಗೆ ಅವಕಾಶ ಇರಬೇಕು. ಆದರೆ, ಈ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ಅಗತ್ಯವಾದ ಶೈಕ್ಷಣಿಕ ಬೆಂಬಲಕ್ಕೆ ಪರ್ಯಾಯವಾಗಬಾರದು.

ವಿವಿಧ ಕಾರಣಗಳಿಂದ ವಿದ್ಯಾರ್ಥಿಗಳು ಅಗತ್ಯ ಕ್ರೆಡಿಟ್‌ಗಳನ್ನು ಗಳಿಸಲು ವಿಫಲರಾಗಬಹುದು. ಬೋಧನೆಯಲ್ಲಿನ ಕೊರತೆ, ಆರ್ಥಿಕ ಸಂಕಷ್ಟ, ಶೈಕ್ಷಣಿಕ ಮಾರ್ಗದರ್ಶನದ ಅಭಾವ ಅಥವಾ ವೈಯಕ್ತಿಕ ಸಮಸ್ಯೆಗಳು ಇದಕ್ಕೆ ಕಾರಣವಾಗಿರಬಹುದು. ಕೇವಲ ನಿಯಮ ಬದಲಿಸುವುದರಿಂದ ತಾತ್ಕಾಲಿಕ ಪರಿಹಾರ ಸಿಗಬಹುದು. ಆದರೆ, ಮೂಲ ಸಮಸ್ಯೆಗಳು ಬಗೆಹರಿಯುವುದಿಲ್ಲ. ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡುವುದರ ಜೊತೆಗೆ, ಅಗತ್ಯ ಮಾರ್ಗದರ್ಶನ, ಹೆಚ್ಚುವರಿ ತರಗತಿಗಳು, ಸಮಾಲೋಚನೆ ಮತ್ತು ಮುಂದಿನ ಶೈಕ್ಷಣಿಕ ಹಂತಗಳ ಬಗ್ಗೆ ಸ್ಪಷ್ಟ ಮಾಹಿತಿಯನ್ನೂ ಒದಗಿಸಬೇಕು.

ಉನ್ನತ ಶಿಕ್ಷಣದಲ್ಲಿನ ಈ ಬೆಳವಣಿಗೆಗಳನ್ನು ಶಾಲಾ ಶಿಕ್ಷಣದ ವಾಸ್ತವಾಂಶಗಳ ಹಿನ್ನೆಲೆಯಲ್ಲಿ ನೋಡಬೇಕು.

ಕಲ್ಯಾಣ ಕರ್ನಾಟಕದ ಶಿಕ್ಷಣ ಪರಿಸ್ಥಿತಿಯ ಕುರಿತು ಇತ್ತೀಚೆಗೆ 'ಡೆಕ್ಕನ್‌ ಹೆರಾಲ್ಡ್‌' ಪ್ರಕಟಿಸಿದ ವರದಿಯು, ಆ ಪ್ರದೇಶದಲ್ಲಿ ಗಂಭೀರ ಶೈಕ್ಷಣಿಕ ಬಿಕ್ಕಟ್ಟು ಇರುವುದನ್ನು ವಿವರಿಸಿದೆ. ಐತಿಹಾಸಿಕ ನಿರ್ಲಕ್ಷ್ಯ, ವ್ಯವಸ್ಥೆಯಲ್ಲಿನ ಕೊರತೆಗಳು ಮತ್ತು ಆಡಳಿತಾತ್ಮಕ ಸವಾಲುಗಳು ಕಲಿಕೆಯ ಮೇಲೆ ಪರಿಣಾಮ ಬೀರುತ್ತಿವೆ. ಪ್ರಾಥಮಿಕ ಹಂತದಲ್ಲೇ ಬೋಧನಾ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದು ಕೇವಲ ಒಂದು ಪ್ರದೇಶಕ್ಕೆ ಸೀಮಿತವಾದ ಸಮಸ್ಯೆಯಲ್ಲ. ಇಡೀ ದೇಶಕ್ಕೆ ಸಂಬಂಧಿಸಿದುದು.

ಶಾಲೆ ಮತ್ತು ವಿಶ್ವವಿದ್ಯಾಲಯಗಳು ಎರಡು ಪ್ರತ್ಯೇಕ ವ್ಯವಸ್ಥೆಗಳೆಂಬಂತೆ ನಾವು ಶಿಕ್ಷಣದ ಬಗ್ಗೆ ಚರ್ಚಿಸುತ್ತೇವೆ. ಆದರೆ, ಅವು ಒಂದಕ್ಕೊಂದು ಸಂಬಂಧ ಹೊಂದಿವೆ. ಶಾಲೆಗಳು ವಿದ್ಯಾರ್ಥಿಗಳಲ್ಲಿ ಬೆಳೆಸುವ ಜ್ಞಾನ, ಆತ್ಮವಿಶ್ವಾಸ ಮತ್ತು ಕಲಿಕೆಯ ಅಭ್ಯಾಸಗಳೇ ವಿಶ್ವವಿದ್ಯಾಲಯದ ಶಿಕ್ಷಣಕ್ಕೆ ಅಡಿಪಾಯವಾಗುತ್ತವೆ. ಒಂದು ಮಗು ಅರ್ಥಮಾಡಿಕೊಂಡು ಓದುವ ಸಾಮರ್ಥ್ಯವಿಲ್ಲದೆ ಪ್ರೌಢಶಾಲೆ ತಲುಪಿದರೆ, ಉನ್ನತ ಶಿಕ್ಷಣದಲ್ಲಿನ ಸುಧಾರಣೆಗಳು, ಡಿಜಿಟಲ್‌ ಕಲಿಕೆ ಅಥವಾ ಉದ್ಯೋಗ ಕೌಶಲಗಳು ಆ ಕೊರತೆಯನ್ನು ಸಂಪೂರ್ಣವಾಗಿ ನೀಗಿಸಲಾರವು. ಹೀಗಾಗಿಯೇ, ಶಿಕ್ಷಣ ಸುಧಾರಣೆಯ ಕೇಂದ್ರಬಿಂದುವಿನಲ್ಲಿ ಶಿಕ್ಷಕರು ಇರಬೇಕು.

ಶಿಕ್ಷಕರ ತರಬೇತಿಯನ್ನು ವೃತ್ತಿಗೆ ಸೇರುವ ಮುನ್ನ ಪೂರ್ಣಗೊಳಿಸಬೇಕಾದ ಸಾಮಾನ್ಯ ಪ್ರಕ್ರಿಯೆಯೆಂದು ಪರಿಗಣಿಸಬಾರದು. ಶಿಕ್ಷಕರಿಗೆ ನಿರಂತರ ವೃತ್ತಿಪರ ತರಬೇತಿ, ಮಾರ್ಗದರ್ಶನ, ನಿರ್ವಹಿಸಬಹುದಾದ ಕೆಲಸದ ಹೊರೆ ಮತ್ತು ಪರಸ್ಪರ ಅನುಭವ ಹಂಚಿಕೊಳ್ಳುವ ಅವಕಾಶಗಳು ಬೇಕು. ತಾವು ಬೋಧಿಸುವ ತರಗತಿಯ ಅಗತ್ಯಗಳಿಗೆ ತಕ್ಕಂತೆ ಬೋಧನೆ ರೂಪಿಸಿಕೊಳ್ಳುವ ಸ್ವಾತಂತ್ರ್ಯವೂ ಇರಬೇಕು.

ಪಂಜಾಬ್‌ನ ಬಹುಭಾಷಾ ತರಗತಿ, ಮಧ್ಯ ಭಾರತದ ಬುಡಕಟ್ಟು ಸಮುದಾಯಗಳೇ ಹೆಚ್ಚಿರುವ ಶಾಲೆ ಮತ್ತು ಬೆಂಗಳೂರಿನ ನಗರ ಪ್ರದೇಶದ ಸರ್ಕಾರಿ ಶಾಲೆ ಇವುಗಳ ಕಲಿಕೆಯ ಅಗತ್ಯಗಳು ವಿಭಿನ್ನವಾಗಿರಬಹುದು. ಈ ವ್ಯತ್ಯಾಸಗಳಿಗೆ ತಕ್ಕಂತೆ ಬೋಧಿಸಲು ಶಿಕ್ಷಕರಿಗೆ ಅಗತ್ಯ ತರಬೇತಿ ಮತ್ತು ಸ್ವಾತಂತ್ರ್ಯ ದೊರೆತಾಗ ಮಾತ್ರ ಶಿಕ್ಷಣ ಸುಧಾರಣೆಗಳು ಯಶಸ್ವಿಯಾಗುತ್ತವೆ.

ಹೊಸದಾಗಿ ಸ್ಥಾಪನೆಯಾಗಲಿರುವ ಶಾಸ್ತ್ರೀಯ ಭಾಷೆಗಳ ಅಧ್ಯಯನ ಕೇಂದ್ರಗಳೂ ಈ ದೊಡ್ಡ ಪ್ರಯತ್ನಕ್ಕೆ ಕೊಡುಗೆ ನೀಡಬಹುದು. ಅವುಗಳ ಕೆಲಸ ವಿಶ್ವವಿದ್ಯಾಲಯಗಳ ಸಂಶೋಧನೆಗೆ ಮಾತ್ರ ಸೀಮಿತವಾಗಬೇಕಿಲ್ಲ. ಶಿಕ್ಷಕರ ತರಬೇತಿ ಸಂಸ್ಥೆಗಳು ಮತ್ತು ಶಾಲೆಗಳೊಂದಿಗೆ ಕೈಜೋಡಿಸಿ, ವಿದ್ಯಾರ್ಥಿಗಳ ವಯಸ್ಸಿಗೆ ತಕ್ಕ ಕಲಿಕಾ ಸಂಪನ್ಮೂಲಗಳು, ಅನುವಾದಗಳು ಹಾಗೂ ಭಾರತದ ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಅರ್ಥಪೂರ್ಣವಾಗಿ ಪರಿಚಯಿಸುವ ಪಠ್ಯಸಾಮಗ್ರಿಗಳನ್ನು ರೂಪಿಸಬಹುದು.

ಶಿಕ್ಷಣ ಕ್ಷೇತ್ರದಲ್ಲಿ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ರೂಪಿಸುವಲ್ಲಿ ಭಾರತ ಹಿಂದೆ ಬಿದ್ದಿಲ್ಲ. ಆದರೆ, ರೂಪಿಸಿದ ನೀತಿಗಳು ತರಗತಿಯ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗುವಂತೆ ನೋಡಿಕೊಳ್ಳುವುದು ಈಗಿನ ಅಗತ್ಯವಾಗಿದೆ.

ಶ್ರೇಷ್ಠತಾ ಕೇಂದ್ರಗಳು, ಕ್ರೆಡಿಟ್‌ ವ್ಯವಸ್ಥೆಯಲ್ಲಿನ ನಮ್ಯತೆ ಮತ್ತು ಉನ್ನತ ಶಿಕ್ಷಣದ ಹೊಸ ಉಪಕ್ರಮಗಳು ಮುಖ್ಯವೇ. ಆದರೆ, ಸ್ಥಾಪನೆಯಾದ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಅಥವಾ ಬದಲಾದ ನಿಯಮಗಳ ಆಧಾರದ ಮೇಲೆ ಮಾತ್ರ ಸುಧಾರಣೆಗಳ ಯಶಸ್ಸನ್ನು ಅಳೆಯಬಾರದು. ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟ ಸುಧಾರಿಸಿದೆಯೇ? ಶಿಕ್ಷಕರಿಗೆ ಉತ್ತಮವಾಗಿ ಬೋಧಿಸಲು ಅಗತ್ಯ ಸಿದ್ಧತೆ ಮತ್ತು ನೆರವು ಸಿಕ್ಕಿದೆಯೇ? ದೀರ್ಘಕಾಲದಿಂದ ನಿರ್ಲಕ್ಷ್ಯಕ್ಕೆ ಒಳಗಾದ ಪ್ರದೇಶಗಳಿಗೆ ನಿರಂತರ ಗಮನ ನೀಡಲಾಗುತ್ತಿದೆಯೇ ಎಂಬುದನ್ನೂ ಪರಿಶೀಲಿಸಬೇಕು.

ಬಿದಿರಿನಿಂದ ಬದುಕು ಕಟ್ಟಿಕೊಂಡ ಫಕ್ಕೀರಪ್ಪ:ಹಲವು ಕುಟುಂಬಗಳಿಗೆ ಸ್ವಾವಲಂಬನೆಯ ದಾರಿ

ಶಿಕ್ಷಣ ಸುಧಾರಣೆಗಳ ನಿಜವಾದ ಪರೀಕ್ಷೆ ನಡೆಯುವುದು ನೆಲಮಟ್ಟದಲ್ಲಿ. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದಲು ಕಲಿಯುತ್ತಿರುವ ಮಗು, ವಿಶ್ವವಿದ್ಯಾಲಯದ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ಮೊದಲ ತಲೆಮಾರಿನ ವಿದ್ಯಾರ್ಥಿ ಮತ್ತು ಶಾಸ್ತ್ರೀಯ ಭಾಷಾ ವಿಭಾಗಕ್ಕೆ ಪ್ರವೇಶ ಪಡೆಯುತ್ತಿರುವ ಯುವ ಸಂಶೋಧಕ ಇವರೆಲ್ಲರ ಬದುಕಿನಲ್ಲಿ ಬದಲಾವಣೆ ತಂದಾಗ ಮಾತ್ರ ಸುಧಾರಣೆಗಳಿಗೆ ಅರ್ಥ ಬರುತ್ತದೆ.

ಸುಧಾರಣೆಗಳು ಇವರನ್ನು ತಲುಪಿದರೆ ಮಾತ್ರ ಅವು ಸಾರ್ಥಕವಾಗುತ್ತವೆ. ಅವು ವಿಶ್ವವಿದ್ಯಾಲಯಗಳ ಆವರಣ, ಸುತ್ತೋಲೆಗಳು ಮತ್ತು ಸಮಿತಿಗಳ ಸಭೆಗಳಿಗೆ ಸೀಮಿತವಾದರೆ, ಕಲಿಕೆಯಲ್ಲಿ ಬದಲಾವಣೆ ತರದೆ ವ್ಯವಸ್ಥೆಯನ್ನು ಮಾತ್ರ ಬದಲಿಸಿದಂತಾಗುತ್ತದೆ. ಭಾರತ ಈಗ ನೀತಿಯಿಂದ ತರಗತಿಯತ್ತ ಸಾಗಬೇಕಿದೆ.

ಲೇಖಕಿ: ರಿಚಾ ಪಾಂಡೆ ಅವರು ಶಿಕ್ಷಣ ಕ್ಷೇತ್ರದಲ್ಲಿ ಡಾಕ್ಟರೇಟ್‌ ಪದವಿ ಪಡೆದಿದ್ದು, ಅಹಮದಾಬಾದ್‌ನ ಭಾರತೀಯ ವ್ಯವಸ್ಥಾಪನಾ ಸಂಸ್ಥೆಯ (ಐಐಎಂ) ರವಿ ಜೆ. ಮಾಥೈ ಶಿಕ್ಷಣ ನಾವೀನ್ಯ ಕೇಂದ್ರದಲ್ಲಿ ಸಂಶೋಧಕರಾಗಿದ್ದಾರೆ.

ಸೂಚನೆ: ಲೇಖನದಲ್ಲಿ ವ್ಯಕ್ತಪಡಿಸಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯವೇ ಹೊರತು ಪ್ರಜಾವಾಣಿಯದ್ದಲ್ಲ.

ವಿಶ್ಲೇಷಣೆ: ಕೌಶಲ ಅಭಿವೃದ್ಧಿಗೆ ಸಮಾವೇಶ ಅಲ್ಲ, ಶಾಸನಬದ್ಧ ಸುಧಾರಣೆ ಬೇಕು
Dailyhunt
Disclaimer: This content has not been generated, created or edited by Dailyhunt. Publisher: Prajavani