Dailyhunt Logo
  • Light mode
    Follow system
    Dark mode
    • Play Story
    • App Story
ಬಿದಿರಿನಿಂದ ಬದುಕು ಕಟ್ಟಿಕೊಂಡ ಫಕ್ಕೀರಪ್ಪ:ಹಲವು ಕುಟುಂಬಗಳಿಗೆ ಸ್ವಾವಲಂಬನೆಯ ದಾರಿ

ಬಿದಿರಿನಿಂದ ಬದುಕು ಕಟ್ಟಿಕೊಂಡ ಫಕ್ಕೀರಪ್ಪ:ಹಲವು ಕುಟುಂಬಗಳಿಗೆ ಸ್ವಾವಲಂಬನೆಯ ದಾರಿ

ಬಡತನದ ಕಾರಣಕ್ಕೆ ಶಿಕ್ಷಣ ಮುಂದುವರಿಸಲಾಗದ ಹುಡುಗನೊಬ್ಬ, ಬದುಕಿನ ಅನಿವಾರ್ಯತೆಯಿಂದಲೇ ಹೊಸ ಕೌಶಲ ಕಲಿತು, ಅದನ್ನೇ ಉದ್ಯಮವಾಗಿಸಿಕೊಂಡು ಹತ್ತಾರು ಕುಟುಂಬಗಳಿಗೆ ಉದ್ಯೋಗದ ದಾರಿ ತೋರಿಸಿದ ಕಥೆಯಿದು.

ಬದುಕು, ನಾವು ಅಂದುಕೊಂಡ ದಾರಿಯಲ್ಲೇ ಸಾಗುವುದಿಲ್ಲ. ಕೆಲವೊಮ್ಮೆ ಅನಿವಾರ್ಯತೆಗಳು ನಮ್ಮ ಆಯ್ಕೆಗಳನ್ನು ಕಸಿದುಕೊಳ್ಳುತ್ತವೆ.

ಆದರೆ ಅದೇ ಅನಿವಾರ್ಯತೆ ಹೊಸ ದಾರಿಯೊಂದನ್ನು ಪರಿಚಯಿಸಬಹುದು ಎನ್ನುವ ಸ್ಫೂರ್ತಿದಾಯಕ ಪಯಣದ ಬರಹವಿದು.

ಬರದಲ್ಲೂ ಕೈ ಹಿಡಿದ ಬಾಳೆಕೃಷಿ: ರಾಮಪಟ್ಟಣ ಪ್ರಗತಿಪರ ರೈತ ರಾಜು ಯಶೋಗಾಥೆ

ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಗಳಗಿ ಹುಲಕೊಪ್ಪ ಗ್ರಾಮದ ಫಕ್ಕೀರಪ್ಪ ಚನ್ನಪ್ಪ ಮೇದಾರ ಬಡತನದ ನಡುವೆಯೇ ಬಾಲ್ಯ ಕಳೆದವರು. ತಂದೆ ಕೃಷಿ ಕೆಲಸ ಮಾಡುತ್ತಿದ್ದರೆ, ತಾಯಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಮನೆಯ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ಶಾಲೆಗೆ ಹೋಗುವಾಗಲೇ ಅವರು ದನಗಳನ್ನು ಕಾಯುವುದು, ಹುಲ್ಲು ತರುವುದು ಮಾಡುತ್ತಿದ್ದರು.

ಹೀಗೆಯೇ ಕಷ್ಟಗಳ ನಡುವೆ ಪಿಯುಸಿವರೆಗೆ ಓದಿದರಾದರೂ, ಮುಂದಿನ ಶಿಕ್ಷಣಕ್ಕೆ ಬಡತನ ಅಡ್ಡಿಯಾಯಿತು. ಓದನ್ನು ಮುಂದುವರಿಸುವ ಆಸೆ ಇದ್ದರೂ ಮನೆಯ ಪರಿಸ್ಥಿತಿ ಅವಕಾಶ ನೀಡಲಿಲ್ಲ. ತಂದೆ ಹೊಲದ ಕೆಲಸಕ್ಕೆ ಹೋಗುವಂತೆ ಒತ್ತಾಯಿಸಿದರು. ಆದರೆ ಫಕ್ಕೀರಪ್ಪ ಅವರಿಗೆ ಕೃಷಿ ಕೆಲಸಕ್ಕಿಂತ ಬದುಕಿನಲ್ಲಿ ಬೇರೇನಾದರೂ ಮಾಡಬೇಕೆಂಬ ಹಂಬಲವಿತ್ತು. ಕೊನೆಗೆ ಮನೆಯಲ್ಲಿ ಯಾರಿಗೂ ಹೇಳದೆ ಊರು ಬಿಟ್ಟು ಮುಂಡಗೋಡದಲ್ಲಿದ್ದ ಚಿಕ್ಕಮ್ಮನ ಮನೆಗೆ ತೆರಳಿದರು.

ಬಿದಿರಿನಿಂದ ತಯಾರಿಸಿದ ವಸ್ತು

ಮುಂಡಗೋಡದಲ್ಲಿ ಮೇದಾರ ಸಮುದಾಯದವರ ಸಂಪರ್ಕಕ್ಕೆ ಬಂದ ಫಕ್ಕೀರಪ್ಪ, ಅವರಿಂದ ಬುಟ್ಟಿ ಮತ್ತು ಚಾಪೆ ಹೆಣೆಯುವ ಕಲೆಯನ್ನು ಕಲಿತುಕೊಂಡರು. ಅವುಗಳನ್ನು ತಲೆಮೇಲೆ ಹೊತ್ತುಕೊಂಡು ಊರೂರು ತಿರುಗಿ ಮಾರಾಟ ಮಾಡುತ್ತಿದ್ದರು. ದುಡಿಮೆಯ ಮೂಲಕ ಬದುಕು ಕಟ್ಟಿಕೊಳ್ಳುವ ಪ್ರಯತ್ನಕ್ಕೆ ಕೈಹಾಕಿದ ಅವರಿಗೆ, ಕೈ-ಕಲೆಯೇ ಜೀವನಾಧಾರವಾಗತೊಡಗಿತು.

ನೀರು ಹರಿದು ಜನರ ಮುಖದಲ್ಲಿ ಸಂತಸ ಉಕ್ಕಿತು: ಊರೊಂದರ ಕೆರೆ ಸಂರಕ್ಷಣೆ ಯಶೋಗಾಥೆ

ಫಕ್ಕೀರಪ್ಪ ಚನ್ನಪ್ಪ ಮೇದಾರ

ಈ ಸಂದರ್ಭದಲ್ಲಿ ಮಳಗಿ ಗ್ರಾಮದ ವಿಕಾಸ ಗ್ರಾಮೀಣ ಸಂಸ್ಥೆ ಆಯೋಜಿಸಿದ್ದ ಬಿದಿರಿನ ಆಲಂಕಾರಿಕ ವಸ್ತುಗಳ ತಯಾರಿಕೆ ತರಬೇತಿ ಶಿಬಿರ ಅವರ ಬದುಕಿಗೆ ಮತ್ತೊಂದು ದಿಕ್ಕು ನೀಡಿತು. ಮಣಿಪುರದ ಸಂತೋನಿ ಹಾಗೂ ಕರಕುಶಲ ತರಬೇತಿ ಸಂಸ್ಥೆಯ ನಿರಂಜನ ಅವರಿಂದ ತರಬೇತಿ ಪಡೆದರು. ಬಿದಿರಿನಿಂದ ಕೇವಲ ಬುಟ್ಟಿ, ಚಾಪೆಗಳಷ್ಟೇ ಅಲ್ಲದೆ, ಹಲವು ಬಗೆಯ ಆಲಂಕಾರಿಕ ಮತ್ತು ಉಪಯುಕ್ತ ವಸ್ತುಗಳನ್ನು ತಯಾರಿಸಬಹುದು ಎಂಬುದನ್ನು ಅರಿತುಕೊಂಡರು.

ಅವರ ಆಸಕ್ತಿ ಮತ್ತು ಕಲಿಯುವ ಹಂಬಲವನ್ನು ಗುರುತಿಸಿದ ವಿಕಾಸ ಗ್ರಾಮೀಣ ಸಂಸ್ಥೆ, ಹೆಚ್ಚಿನ ತರಬೇತಿಗಾಗಿ ಅವರನ್ನು ಕುಂದಾಪುರಕ್ಕೆ ಕಳುಹಿಸಿತು. ಅಲ್ಲಿ ಹೊಸ ತಂತ್ರಗಳನ್ನು ಕಲಿತ ಫಕ್ಕೀರಪ್ಪ, ಮುಂದೆ ತರಬೇತುದಾರರಾಗಿಯೂ ಕೆಲಸ ಮಾಡಿದರು. ಏಳು ವರ್ಷ ತರಬೇತುದಾರರಾಗಿ ಕಾರ್ಯನಿರ್ವಹಿಸಿದ ಅವರು, 300ಕ್ಕೂ ಹೆಚ್ಚು ಮಂದಿಗೆ ಬಿದಿರಿನ ವಿವಿಧ ಉತ್ಪನ್ನಗಳನ್ನು ತಯಾರಿಸುವುದನ್ನು ಕಲಿಸಿದರು. ಅವರಲ್ಲಿ ಶೇ 70ರಷ್ಟು ಮಂದಿ ಇಂದು ಸ್ವಂತ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ.

ಬಿದಿರಿನಿಂದ ತಯಾರಿಸಿದ ವಸ್ತು

ತರಬೇತಿ ಮುಗಿಸಿ ಸ್ವಗ್ರಾಮಕ್ಕೆ ಮರಳಿದ ಫಕ್ಕೀರಪ್ಪ, ಬಿದಿರಿನ ಆಲಂಕಾರಿಕ ವಸ್ತುಗಳ ತಯಾರಿಕೆಯನ್ನು ಮುಂದುವರಿಸಿದರು. ಈ ಪ್ರಯತ್ನಕ್ಕೆ ಧಾರವಾಡದ ರ‍್ಯಾಪಿಡ್‌ ಸಂಸ್ಥೆ ಬೆಂಬಲವಾಗಿ ನಿಂತಿತು. ಬಳಿಕ ನಬಾರ್ಡ್‌ ಮತ್ತು ಐಡಿಎಫ್‌ ಸಂಸ್ಥೆಗಳ ಸಂಪರ್ಕವೂ ದೊರೆಯಿತು. ಹೀಗೆ ವೈಯಕ್ತಿಕವಾಗಿ ಆರಂಭಿಸಿದ್ದ ಕೆಲಸ ನಿಧಾನವಾಗಿ ಉದ್ಯಮದ ಸ್ವರೂಪ ಪಡೆದುಕೊಳ್ಳ ತೊಡಗಿತು.

ಅಡ್ಡ ಪರಿಣಾಮವಿಲ್ಲದೆ ರೋಗ ಗುಣಪಡಿಸುವ ಸಾಮರ್ಥ್ಯ ಆಯುರ್ವೇದಕ್ಕಿದೆ: ಶಂಕರ್ ರಾವ್

2010ರಲ್ಲಿ ಗಳಗಿ ಹುಲಕೊಪ್ಪ ಗ್ರಾಮದಲ್ಲಿ ಕೇತೇಶ್ವರ ಸ್ವಸಹಾಯ ಸಂಘದ ಹೆಸರಿನಲ್ಲಿ ಹತ್ತು ಮಹಿಳೆಯರನ್ನು ಒಗ್ಗೂಡಿಸಿ ಕೇತೇಶ್ವರ ಸ್ವಸಹಾಯ ಸಂಘ ರಚಿಸಿ, ಬಿದಿರಿನ ಉತ್ಪನ್ನಗಳ ತಯಾರಿಕೆಯ ಕುರಿತು ತರಬೇತಿ ನೀಡಿದರು. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿದ್ದ ಉತ್ಪಾದನೆ, ಬೇಡಿಕೆ ಹೆಚ್ಚಿದಂತೆ ವಿಸ್ತರಿಸಿತು. ಉತ್ಪನ್ನಗಳ ಮಾರಾಟವೂ ಹೆಚ್ಚಾಯಿತು. ಇದರಿಂದ ಮಹಿಳೆಯರಿಗೆ ಮನೆಯಲ್ಲಿಯೇ ಕೆಲಸ ಮಾಡಿ ಆದಾಯಗಳಿಸುವ ಅವಕಾಶ ದೊರೆಯಿತು.

ಹಳಿಯಾಳದ ರುಡ್‌ಸೆಟ್‌ನಲ್ಲಿ ಐದು ವರ್ಷಗಳ ಕಾಲ ತರಬೇತುದಾರರಾಗಿ ಕಾರ್ಯನಿರ್ವಹಿಸಿದರು. ಬಳಿಕ ಗುಜರಾತ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ಸೆಂಟರ್, ಬೆಂಗಳೂರಿನ ಕರಕುಶಲ ಅಭಿವೃದ್ಧಿ ನಿಗಮ ಹಾಗೂ ಟ್ರೈನಿಂಗ್ ಟು ಟ್ರೇನರ್ ಮತ್ತು ಮಾಸ್ಟರ್ ಕ್ರಾಫ್ಟ್‌ಪರ್ಸನ್ ತರಬೇತಿಗಳ ಮೂಲಕ ಕೌಶಲವನ್ನು ಮತ್ತಷ್ಟು ವಿಸ್ತರಿಸಿಕೊಂಡರು. ಧಾರವಾಡ ಜಿಲ್ಲಾ ಪಂಚಾಯಿತಿಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ)ನೊಂದಿಗೆ ಕೈಜೋಡಿಸಿದರು. ಈ ನಡುವೆ ಅವರ ಕೆಲಸಕ್ಕೆ 'ಬೆಸ್ಟ್ ಸ್ಟಾಲ್ ಪ್ರಶಸ್ತಿ' ಮತ್ತು 'ನವೋದ್ಯಮಿ ಪ್ರಶಸ್ತಿ'ಗಳು ಸಂದಿವೆ.

ಬಿದಿರಿನಿಂದ ತಯಾರಿಸಿದ ವಸ್ತು

ಒಂದು ಕಾಲದಲ್ಲಿ ಶಾಲೆಗೆ ಹೋಗುವ ಮೊದಲು ದನ ಕಾಯುತ್ತಿದ್ದ, ಮನೆಗೆ ಹುಲ್ಲು ಹೊರುತ್ತಿದ್ದ ಫಕ್ಕೀರಪ್ಪ, ಇಂದು ಅದೇ ಗ್ರಾಮೀಣ ಬದುಕಿನ ನಡುವೆ ಬಿದಿರಿನ ಕೌಶಲವನ್ನು ಉದ್ಯೋಗದ ಮಾರ್ಗವನ್ನಾಗಿ ರೂಪಿಸಿದ್ದಾರೆ. ಓದು ಮುಂದುವರಿಸಲಾಗದ ನೋವು ಅವರ ಬದುಕಿನಲ್ಲಿ ಉಳಿದಿದ್ದರೂ, ಕಲಿಯುವುದನ್ನು ಮಾತ್ರ ಅವರು ನಿಲ್ಲಿಸಲಿಲ್ಲ. ಒಂದು ಊರಿನಿಂದ ಮತ್ತೊಂದು ಊರಿಗೆ ತೆರಳಿ ಕಲೆ ಕಲಿತರು, ಕಲಿತದ್ದನ್ನು ಉದ್ಯೋಗವನ್ನಾಗಿಸಿಕೊಂಡರು. ಬಳಿಕ ಅದನ್ನೇ ಇತರರಿಗೂ ಹಂಚಿದರು.

ಬರಡು ಭೂಮಿಗೆ ಜೀವ ತುಂಬುವ ಬಿದಿರು, ಚೀನಾಗಿಂತ 40 ವರ್ಷ ಹಿಂದುಳಿದಿದ್ದೇವೆ: ಪಟೇಲ್

ಬಿದಿರಿನ ಒಂದೊಂದು ಎಳೆಯನ್ನೂ ಜೋಡಿಸಿ ವಸ್ತುವೊಂದನ್ನು ರೂಪಿಸುವಂತೆ, ತಮ್ಮ ಬದುಕಿನ ಅವಕಾಶಗಳನ್ನೂ ಒಂದೊಂದಾಗಿ ಜೋಡಿಸಿಕೊಂಡವರು ಫಕ್ಕೀರಪ್ಪ. ಅವರ ಪಯಣದಲ್ಲಿ ಬಡತನ ಅಡ್ಡಿಯಾಗಿದ್ದರೂ, ಅದು ಬದುಕಿನ ಅಂತಿಮ ನಿರ್ಧಾರವಾಗಲಿಲ್ಲ. ಅವರು ಕಟ್ಟಿರುವುದು ಬಿದಿರಿನ ಉತ್ಪನ್ನಗಳ ಉದ್ಯಮವಷ್ಟೇ ಅಲ್ಲ, ಗ್ರಾಮೀಣ ಜನರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಫಕ್ಕೀರಪ್ಪ ಅವರ ಕೈಯ್ಯಲ್ಲಿ ಬಿದಿರು ಕನಸಾಗಿ ಅರಳುತ್ತದೆ, ಆಲಂಕಾರವಾಗುತ್ತದೆ, ಬದುಕಿನ ಹೊಸ ವ್ಯಾಖ್ಯಾನವಾಗುತ್ತದೆ. ಹಿಂದೊಮ್ಮೆ ಮನೆ ಮನೆಗೆ ಬೇಕಾಗುತ್ತಿದ್ದ ಬಿದಿರಿನ ಬುಟ್ಟಿಗಳಿಗೆ ಈಗ ಬೇಡಿಕೆ ಕಡಿಮೆಯಾಗಿದೆ. ಪ್ಲಾಸ್ಟಿಕ್‌ ಕಾಲ ಎಲ್ಲವನ್ನೂ ಸುಲಭ ಮಾಡಿ, ಅನೇಕ ಕೈಗಳ ಉದ್ಯೋಗ ಕಸಿದುಕೊಂಡಿದೆ. ಆ ಬದಲಾವಣೆಯನ್ನು ಫಕ್ಕೀರಪ್ಪ ಬೇಗ ಅರಿತುಕೊಂಡರು.

ಅವರು ರಚಿಸಿದ 'ಶ್ರೀ ಕೇತೇಶ್ವರ ಸ್ವಸಹಾಯ ಸಂಘ'ದ ಅಡಿ ಪೆನ್‌ ಸ್ಟ್ಯಾಂಡ್‌, ಹ್ಯಾಂಗಿಂಗ್‌ ಲ್ಯಾಂಪ್‌, ಕೀ ಚೈನ್‌, ಕೀ ಹೋಲ್ಡರ್‌, ಟೀ ಟ್ರೇ, ಟೀ ಕಪ್‌, ಹೇರ್‌ ಪಿನ್‌, ಬೆಡ್‌ ಲ್ಯಾಂಪ್‌, ಲ್ಯಾಂಪ್‌ ಶೇಡ್‌, ವಾಲ್‌ ಪೀಸ್‌, ಚಕ್ಕಡಿ, ಫ್ಲವರ್‌ ಪಾಟ್‌, ಲೆಟರ್‌ ಹೋಲ್ಡರ್‌, ಬಾಚಣಿಕೆ, ಫ್ರೂಟ್‌ ಬಾಸ್ಕೆಟ್‌, ಫೋಟೊ ಪ್ರಿಂಟ್‌, ಆಕಾಶ ಬುಟ್ಟಿ... ಹೀಗೆ ಸುಮಾರು ನಲವತ್ತು ಬಗೆಯ ವಸ್ತುಗಳು ಸಿದ್ಧವಾಗುತ್ತದೆ.

ಬಿದಿರಿನಿಂದ ತಯಾರಿಸಿದ ವಸ್ತು

ಬಿದಿರಿನಿಂದ ತಯಾರಿಸಿದ ವಸ್ತು

ಬಿದಿರಿನಿಂದ ತಯಾರಿಸಿದ ವಸ್ತು

ಅವುಗಳನ್ನು ನೋಡಿದಾಗ, 'ಪ್ರಕೃತಿಯ ವಸ್ತುವಿಗೆ ಮನುಷ್ಯನ ಕಲ್ಪನೆ ಸೇರಿದಾಗ ಅದು ಕಲೆ ಆಗುತ್ತದೆ' ಎನ್ನುವ ಸಂಗತಿ ಮನಸ್ಸಿಗೆ ತಟ್ಟುತ್ತದೆ. ಆಲಂಕಾರಿಕ ವಸ್ತುಗಳ ವಿನ್ಯಾಸ, ಗಾತ್ರಕ್ಕೆ ಅನುಗುಣವಾಗಿ (₹20ರಿಂದ ₹700ರವರೆಗೆ) ದರ ನಿಗದಿಪಡಿಸಲಾಗಿದೆ. ಮುಂಬೈ, ದೆಹಲಿ, ಬೆಂಗಳೂರು ನಗರಗಳಲ್ಲಿ ಬೇಡಿಕೆ ಹೆಚ್ಚಿದೆ. ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಡೆಸುವ ಪ್ರದರ್ಶನ ಮೇಳಗಳಲ್ಲಿ ಫಕ್ಕೀರಪ್ಪ ಮತ್ತು ಅವರ ತಂಡ ನಿಯಮಿತವಾಗಿ ಭಾಗವಹಿಸುತ್ತದೆ. ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ಹೈದರಾಬಾದ್‌, ಗೋವಾ, ದೆಹಲಿ... ಹೀಗೆ ಅನೇಕ ಕಡೆಗಳಿಗೆ ಹೋಗಿರುವ ಈ ಬಿದಿರಿನ ಕಲೆಯ ಜೊತೆಗೆ, 'ಹುಲಕೊಪ್ಪ' ಎಂಬ ಪುಟ್ಟ ಹಳ್ಳಿಯ ಹೆಸರೂ ಸಾಗುತ್ತಿದೆ.

ಬನ್ನಿ, ಬಿದಿರು ಬೆಳೆಯಿರಿ, ಆದಾಯ ಪಡೆಯಿರಿ: ಇಲ್ಲಿದೆ ತರಬೇತಿ

ಈ ಕಲೆಯ ಹಿಂದೆ ಕಷ್ಟವೂ ಕಡಿಮೆಯೇನಿಲ್ಲ. ಒಳ್ಳೆಯ ಬಿದಿರು ಸುಲಭವಾಗಿ ಸಿಗುವುದಿಲ್ಲ. ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ಬಿದಿರು ತರಿಸುವ ಪ್ರಕ್ರಿಯೆಗೆ ಸಮಯ ತೆಗೆದುಕೊಳ್ಳುತ್ತದೆ. ಅರಣ್ಯ ಇಲಾಖೆಯಿಂದ ಒಂದು ಬಿದಿರು ₹50ಕ್ಕೆ ಸಿಗಬಹುದಾದರೆ, ಮಧ್ಯವರ್ತಿಗಳಿಂದ ಖರೀದಿಸಿದರೆ ₹200 ಕೊಡಬೇಕಾಗುತ್ತದೆ.

ಹೊಸತಾಗಿ ಕತ್ತರಿಸಿದ ಅಥವಾ ಒಂದು, ಎರಡು ದಿನಗಳ ಬಿದಿರು ಮಾತ್ರ ಈ ಕೆಲಸಕ್ಕೆ ಬಳಸಬಹುದು. ದಿನ ಕಳೆದಂತೆ ಅದರಲ್ಲಿರುವ ನೀರಿನ ಅಂಶ ಆವಿಯಾಗಿ ಗಟ್ಟಿಯಾಗುತ್ತದೆ. ಆಗ ಅದಕ್ಕೆ ಬೇಕಾದ ರೂಪ ಕೊಡುವುದು ಕಷ್ಟ. ಬದುಕೂ ಹಾಗೆಯೇ. ಸಮಯ ಇರುವಾಗ ಮನುಷ್ಯ ತನ್ನನ್ನು ತಾನು ರೂಪಿಸಿಕೊಳ್ಳಬೇಕು. ಗಟ್ಟಿಯಾದ ಮೇಲೆ ಬದಲಾವಣೆ ಸುಲಭವಲ್ಲ' ಎನ್ನುವ ಅವರ ಮಾತು ಎದೆಗೆ ತಾಕುತ್ತದೆ.'ಎಲ್ಲ ಬಿದಿರುಗಳಿಂದ ಕಲೆ ಹುಟ್ಟುವುದಿಲ್ಲ'

ಇದೊಂದು ಬೆರಳ ತುದಿಯ ಕಲೆ. ಬಿದಿರನ್ನು ಕತ್ತರಿಸಲು ಮಾತ್ರ ಯಂತ್ರ ಬಳಸುತ್ತಾರೆ. ಉಳಿದ ಪ್ರತಿಯೊಂದು ಕೆಲಸ ಕೈಯ್ಯಲ್ಲಿಯೇ ನಡೆಯುತ್ತದೆ. ಒಂದು ಚಿಕ್ಕ ಕೀ ಚೈನ್‌ ತಯಾರಿಸಲು ಸಹ ಒಂದು ಅಥವಾ ಎರಡು ಗಂಟೆ ಬೇಕಾಗುತ್ತದೆ. ಬಣ್ಣ ಹಚ್ಚುವಾಗಲೂ ಅತಿಯಾದ ಮೆರಗು ಕೊಡುವುದಿಲ್ಲ; ಬಿದಿರಿನ ಸ್ವಾಭಾವಿಕ ಸೌಂದರ್ಯ ಕಳೆದುಹೋಗಬಾರದು ಎಂಬ ಕಾಳಜಿ.

ಕೇತೇಶ್ವರ ಸ್ವ-ಸಹಾಯ ಸಂಘದಲ್ಲಿ ಹತ್ತು ಮಂದಿ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ಅನುಕೂಲಕ್ಕೆ ತಕ್ಕಷ್ಟು ಬಿದಿರು ಮನೆಗೆ ತೆಗೆದುಕೊಂಡು ಹೋಗಿ, ವಸ್ತುಗಳನ್ನು ತಯಾರಿಸಿ ತರುತ್ತಾರೆ. ಅವರ ಕೆಲಸಕ್ಕೆ ತಕ್ಕಂತೆ ಸಂಭಾವನೆ ನೀಡಲಾಗುತ್ತದೆ. ಇಲ್ಲಿ ಕೇವಲ ವಸ್ತುಗಳು ತಯಾರಾಗುವುದಿಲ್ಲ, ಅವರ ಸ್ವಾವಲಂಬಿ ಬದುಕಿಗೆ ಆತ್ಮವಿಶ್ವಾಸವೂ ರೂಪುಗೊಳ್ಳುತ್ತಿದೆ.

ಇಂದು ಪ್ಲಾಸ್ಟಿಕ್‌ ಜಗತ್ತು ನಮ್ಮ ಮನೆಗಳಲ್ಲಿ ತುಂಬಿಕೊಂಡಿದೆ. ಜೊತೆಗೆ, ಜನರು ಸಾವಯವ ಬದುಕಿನತ್ತಲೂ ಮುಖ ಮಾಡುತ್ತಿದ್ದಾರೆ. ಪ್ರಕೃತಿಯ ಸ್ಪರ್ಶವಿರುವ ನೈಸರ್ಗಿಕ ವಸ್ತುಗಳತ್ತ ಒಲವು ಹರಿಸುತ್ತಿದ್ದಾರೆ. ಫಕ್ಕೀರಪ್ಪ ಮತ್ತು ಅವರ ತಂಡ ಅದನ್ನೇ ಅವಕಾಶವನ್ನಾಗಿ ಮಾಡಿಕೊಂಡಿದೆ. ಅವರು ಕೇವಲ ಬಿದಿರಿಗೆ ಹೊಸ ವಿನ್ಯಾಸ ಕೊಡುತ್ತಿಲ್ಲ, ಪಾರಂಪರಿಕ ಬದುಕಿಗೂ ಹೊಸ ಅರ್ಥ ಕೊಡುತ್ತಿದ್ದಾರೆ.

ಒಮ್ಮೆ ಬದುಕಿಗಾಗಿ ಮಾಡುತ್ತಿದ್ದ ಕೆಲಸ, ಇಂದು ಕಲೆಯಾಗಿ, ಉದ್ಯಮವಾಗಿ, ಭವಿಷ್ಯದ ಕನಸಾಗಿ ಬೆಳೆಯುತ್ತಿದೆ. ಹಳ್ಳಿಯ ಚಿಕ್ಕ ಮನೆಯೊಂದರಲ್ಲಿ ಹುಟ್ಟಿದ ಕಲ್ಪನೆ, ಈಗ ನಗರಗಳ ಬೆಳಕಿನ ನಡುವೆ ಆಲಂಕಾರವಾಗಿ ನಿಂತಿದೆ. ಬಿದಿರು ಹೊರಗೆ ನೋಡಲು ಗಟ್ಟಿಯಾಗಿರಬಹುದು. ಆದರೆ, ಅದರೊಳಗೆ ಸಂಗೀತವಿದೆ. ಸರಿಯಾಗಿ ತಾಕಿದರೆ ಅದು ಮೃದುವಾಗಿ ನಾದ ಕೊಡುತ್ತದೆ. ಮನುಷ್ಯನ ಬದುಕೂ ಹಾಗೆಯೇ. ಕಾಲದ ಹೊಡೆತಕ್ಕೆ ಮುರಿಯದೆ... ಬದಲಾವಣೆಗೆ ತಕ್ಕಂತೆ ಬಾಗಿದರೆ, ಅದೇ ಬದುಕಿನ ಕಲೆ ಎಂಬುದನ್ನು ಗಳಗಿ ಹುಲಕೊಪ್ಪದ ಈ ಮೇದಾರ ಕುಟುಂಬ ಸಾಬೀತುಪಡಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani