Dailyhunt Logo
  • Light mode
    Follow system
    Dark mode
    • Play Story
    • App Story
'ಸುರಕ್ಷಿತ ತಾಣ' ದುಬೈ ರಿಯಲ್‌ ಎಸ್ಟೇಟ್‌ಗೆ ಇರಾನ್‌ ಪ್ರಹಾರ: ಭಾರತೀಯರಿಗೂ ಆಘಾತ

'ಸುರಕ್ಷಿತ ತಾಣ' ದುಬೈ ರಿಯಲ್‌ ಎಸ್ಟೇಟ್‌ಗೆ ಇರಾನ್‌ ಪ್ರಹಾರ: ಭಾರತೀಯರಿಗೂ ಆಘಾತ

ಸ್ರೇಲ್ ಮತ್ತು ಅಮೆರಿಕ ಸೇರಿಕೊಂಡು ಇರಾನ್ ಮೇಲೆ ಸಾರಿರುವ ಯುದ್ಧ ಎರಡನೇ ತಿಂಗಳಿಗೆ ಕಾಲಿಟ್ಟಿದ್ದು, ಪಶ್ಚಿಮ ಏಷ್ಯಾದಲ್ಲಿ ಅಸ್ಥಿರತೆ ಸೃಷ್ಟಿಸಿದೆ. ಈ ಸಂಘರ್ಷವು ಗಲ್ಫ್ ರಾಷ್ಟ್ರಗಳ ಆರ್ಥಿಕತೆಯ ಮೇಲೆ, ವಿಶೇಷವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮೇಲೆ ಗಂಭೀರ ಪರಿಣಾಮ ಬೀರಿದೆ.

ಹೂಡಿಕೆದಾರರ ವಿಶ್ವಾಸ ಮತ್ತು ಬಂಡವಾಳ ಹರಿವಿನೊಂದಿಗೆ ನಿಕಟ ಸಂಬಂಧ ಹೊಂದಿರುವ ದುಬೈನ ರಿಯಲ್ ಎಸ್ಟೇಟ್ ಮಾರುಕಟ್ಟೆಯು ಈಗ ಭೀತಿಗೆ ಒಳಗಾಗಿದೆ. ಪಶ್ಚಿಮ ಏಷ್ಯಾದ 'ಸುರಕ್ಷಿತ ಹೂಡಿಕೆ ತಾಣ' ಎಂದು ದಶಕಗಳಿಂದ ಗುರುತಿಸಿಕೊಂಡಿದ್ದ ದುಬೈನ ರಿಯಲ್ ಎಸ್ಟೇಟ್ ವಲಯದಲ್ಲಿ ಹೂಡಿಕೆ ಮಾಡಲು ಉದ್ಯಮಿಗಳು ಹಿಂದೇಟು ಹಾಕುತ್ತಿದ್ದಾರೆ.

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ


'ಸುರಕ್ಷಿತ ತಾಣ' ದುಬೈ ರಿಯಲ್‌ ಎಸ್ಟೇಟ್‌ಗೆ ಇರಾನ್‌ ಪ್ರಹಾರ: ಭಾರತೀಯರಿಗೂ ಆಘಾತ

ಒಂದು ಸಾಲಿನಲ್ಲಿಪಶ್ಚಿಮ ಏಷ್ಯಾದ ಯುದ್ಧದ ಪರಿಣಾಮವಾಗಿ ದುಬೈನ ರಿಯಲ್ ಎಸ್ಟೇಟ್ ಮಾರುಕಟ್ಟೆ ಕುಸಿದಿದ್ದು, ಭಾರತೀಯ ಹೂಡಿಕೆದಾರರು ಮತ್ತು ಆರ್ಥಿಕತೆಯ ಮೇಲೆ ಗಂಭೀರ ಆತಂಕ ಸೃಷ್ಟಿಯಾಗಿದೆ.ಪ್ರಮುಖ ಅಂಶಗಳು• ದುಬೈ ರಿಯಲ್ ಎಸ್ಟೇಟ್ ಕುಸಿತಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ದುಬೈನ ರಿಯಲ್ ಎಸ್ಟೇಟ್ ಮಾರುಕಟ್ಟೆ ಅಸ್ಥಿರಗೊಂಡಿದ್ದು, ಹೂಡಿಕೆದಾರರು ಬಂಡವಾಳ ಹೂಡಲು ಹಿಂದೇಟು ಹಾಕುತ್ತಿದ್ದಾರೆ.• ಭಾರತೀಯ ಹೂಡಿಕೆದಾರರ ಮೇಲೆ ಬಿಸಿದುಬೈ ಆಸ್ತಿ ಮಾರುಕಟ್ಟೆಯಲ್ಲಿ ಗರಿಷ್ಠ ಹೂಡಿಕೆ ಮಾಡಿರುವ ಭಾರತೀಯರಿಗೆ ಮೌಲ್ಯ ಕುಸಿತದಿಂದಾಗಿ ದೊಡ್ಡ ಆರ್ಥಿಕ ನಷ್ಟದ ಭೀತಿ ಎದುರಾಗಿದೆ.• ರೆಮಿಟೆನ್ಸ್ ಮತ್ತು ಆರ್ಥಿಕತೆಗಲ್ಫ್ ದೇಶಗಳಿಂದ ಬರುವ ಹಣದ ಹರಿವಿನಲ್ಲಿ ಅನಿಶ್ಚಿತತೆ ಮೂಡಿದ್ದು, ಇದು ಭಾರತದ ವಿದೇಶಿ ವಿನಿಮಯ ಮತ್ತು ಪಾವತಿ ಸಮತೋಲನದ ಮೇಲೆ ಪರಿಣಾಮ ಬೀರಿದೆ.• ಕಚ್ಚಾ ತೈಲ ಬೆಲೆ ಏರಿಕೆಹೊರ್ಮುಜ್ ಜಲಸಂಧಿಯಲ್ಲಿನ ಸಂಘರ್ಷದಿಂದಾಗಿ ತೈಲ ಪೂರೈಕೆಗೆ ಅಡ್ಡಿಯಾಗಿ ಬೆಲೆಗಳು ಗಗನಕ್ಕೇರಿವೆ, ಇದರಿಂದ ಭಾರತದ ಕೈಗಾರಿಕೆಗಳಿಗೆ ಪೆಟ್ಟು ಬಿದ್ದಿದೆ.• ಸ್ವದೇಶಕ್ಕೆ ಮರಳುತ್ತಿರುವ ಉದ್ಯೋಗಿಗಳುಯುದ್ಧದ ಭೀತಿಯಿಂದ ಸುಮಾರು 2.2 ಲಕ್ಷ ಭಾರತೀಯರು ತಾಯ್ನಾಡಿಗೆ ಮರಳಿದ್ದು, ಇದು ಭಾರತದ ಸ್ಥಳೀಯ ರಿಯಲ್ ಎಸ್ಟೇಟ್ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದೆ.ಪ್ರಮುಖ ಅಂಕಿಅಂಶಗಳುಶೇ 4.65ದುಬೈ ಮಾರುಕಟ್ಟೆ ಸೂಚ್ಯಂಕ ಕುಸಿತ₹85,000 ಕೋಟಿಯಿಂದ ₹95,000 ಕೋಟಿಭಾರತೀಯರ ದುಬೈ ಹೂಡಿಕೆ ಮೌಲ್ಯಶೇ 55.32ಕಚ್ಚಾ ತೈಲ ಬೆಲೆ ಏರಿಕೆ2.2 ಲಕ್ಷಗಲ್ಫ್‌ನಿಂದ ತಾಯ್ನಾಡಿಗೆ ಮರಳಿದವರುಶೇ 21ರಿಯಲ್ ಎಸ್ಟೇಟ್ ಸೂಚ್ಯಂಕ ಪತನಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಕೊಲ್ಲಿ ಯುದ್ಧ ಪರಿಣಾಮ: ಪರ್ಯಾಯ ಇಂಧನ ಮೂಲ ಹುಡುಕಾಟದಲ್ಲಿ ರಾಷ್ಟ್ರಗಳು

ದುಬೈನ ರಿಯಲ್ ಎಸ್ಟೇಟ್, ಭಾರತೀಯ ಪ್ರಮುಖ ಬಂಡವಾಳ ವಲಯವೂ ಹೌದು. ಈಗಿನ ಸಂಘರ್ಷದಿಂದ ಎದುರಾಗಿರುವ ಆರ್ಥಿಕ ಅಘಾತವು ಆಸ್ತಿ ಹೂಡಿಕೆಗೆ ಸೀಮಿತವಾಗದೆ ವಿದೇಶಿ ವಿನಿಮಯ, ಇಂಧನ ವೆಚ್ಚ, ರೂಪಾಯಿ ಮೌಲ್ಯ ಕುಸಿತ ಮತ್ತು ಸ್ಥೂಲ ಆರ್ಥಿಕ ಸ್ಥಿರತೆಯ ಮೇಲೆಯೂ ಹರಡಿಕೊಂಡಿವೆ. ಗಲ್ಫ್‌ನಲ್ಲಿರುವ ಬೃಹತ್ ಅನಿವಾಸಿ ಸಮುದಾಯವೂ ಇದರ ಬಿಸಿ ಎದುರಿಸುತ್ತಿದೆ.

ಫೆಬ್ರುವರಿ 28ರ ಈ ಸಂಘರ್ಷವು ಏಕಾಏಕಿ ಸಂಭವಿಸಿದ್ದಲ್ಲ. ಅಮೆರಿಕ-ಇರಾನ್ ಪರಮಾಣು ಮಾತುಕತೆಗ ಬಿದ್ದು ಹೋಗಿತ್ತು. ಅಲ್ಲದೆ, 2023ರಿಂದ ಇಸ್ರೇಲ್ ನಡೆಸಿದ ಸರಣಿ ದಾಳಿಗಳಿಂದ ಇರಾನ್‌ನ ಪ್ರಾದೇಶಿಕ ಮಿತ್ರರು ದುರ್ಬಲಗೊಂಡಿದ್ದರು. ಈ ವೇಳೆ ಈ ದಾಳಿ ಸಂಭವಿಸಿದೆ. ಇದಕ್ಕೆ ಪ್ರತ್ಯುತ್ತರವಾಗಿ ಅಮೆರಿಕದ ಪ್ರಾದೇಶಿಕ ಪಾಲುದಾರ ರಾಷ್ಟ್ರಗಳ ಮೇಲೆ ಗರಿಷ್ಠ ಆರ್ಥಿಕ ಹೊರೆ ಹೇರುವ ಕೆಲಸ ಇರಾನ್ ಮಾಡಿತು. ಇತಿಹಾಸದಲ್ಲೇ ಮೊದಲ ಬಾರಿಗೆ ಇರಾನ್ ಗಲ್ಫ್ ರಾಷ್ಟ್ರಗಳಾದ ಬಹರೇನ್, ಕುವೈತ್, ಒಮಾನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ಮೇಲೆ ದಾಳಿ ನಡೆಸಿತು. ಗಲ್ಫ್‌ನ ರಾಜಪ್ರಭುತ್ವದ ರಾಷ್ಟ್ರಗಳು ಇಂತಹ ತೀವ್ರ ದಾಳಿಯನ್ನು ನಿರೀಕ್ಷಿಸಿರಲಿಲ್ಲ.

ಕೊಲ್ಲಿ ಸಮರದಿಂದ ಭಾರತ-ಅರಬ್ ಸಂಬಂಧಕ್ಕೆ ಅಡ್ಡಿ: ದೇಶದ ಆರ್ಥಿಕತೆಗೆ 'ಹೊಸ ಆಘಾತ'

ಒತ್ತಡದಲ್ಲಿರುವ ಸುರಕ್ಷಿತ ತಾಣ

ಕಳೆದ ಎರಡು ದಶಕಗಳಿಂದ ಎಚ್ಚರಿಕೆಯಿಂದ ನಿರ್ಮಿಸಿಕೊಂಡಿದ್ದ ದುಬೈನ 'ಸಂಘರ್ಷ-ಮುಕ್ತ ಸಂಪತ್ತಿನ ಆಶ್ರಯತಾಣ' ಎಂಬ ಖ್ಯಾತಿಗೆ ಈ ಯುದ್ಧದಿಂದಾಗಿ ಭಾರಿ ಹೊಡೆತ ಬಿದ್ದಿದೆ. ಜಾಗತಿಕ ಸಂಪತ್ತಿನ ಕೇಂದ್ರ ಎಂಬ ದುಬೈನ ಸ್ಥಾನಮಾನವನ್ನು ಇರಾನ್ ಅಲುಗಾಡಿಸಿದೆ. ವಿದೇಶಿಗರು ಹೊರಹೋಗಲು ಹಾತೊರೆಯುತ್ತಿದ್ದರೆ, ಸಂಪತ್ತು ನಿರ್ವಹಣಾ ಸಂಸ್ಥೆಗಳಿಗೆ ಮಧ್ಯಪ್ರಾಚ್ಯದಲ್ಲಿ

ತಮ್ಮ ಅಸ್ತಿತ್ವದ ಬಗ್ಗೆ ಭಯ ಮೂಡಿದೆ. 'ಹೆನ್ಲಿ ಅಂಡ್ ಪಾರ್ಟ್‌ನರ್ಸ್' ಪ್ರಕಾರ, ದುಬೈನ ಮಿಲಿಯನೇರ್‌ಗಳ ಸಂಖ್ಯೆ 2014ರಿಂದ ದ್ವಿಗುಣಗೊಂಡು 81,000ಕ್ಕೆ ಏರಿತ್ತು. ದುಬೈನ ಐಷಾರಾಮಿ ರಿಯಲ್ ಎಸ್ಟೇಟ್ ಮಾರುಕಟ್ಟೆಯು ಐದು ವರ್ಷಗಳಿಂದ ಸತತವಾಗಿ ಬೆಳವಣಿಗೆ ಕಂಡು ಬಂದಿತ್ತು. 2025ರಲ್ಲಿ 10 ಮಿಲಿಯನ್ ಡಾಲರ್‌ಗಿಂತ ಹೆಚ್ಚಿನ ಮೌಲ್ಯದ 500 ಆಸ್ತಿಗಳು ಬಿಕರಿಯಾಗಿದ್ದವು.

ಯುದ್ಧದ ‍ಪರಿಣಾಮ ದುಬೈನ ಹಣಕಾಸು ಮಾರುಕಟ್ಟೆ ಮೇಲೆ ತಕ್ಷಣವೇ ಕಂಡು ಬಂತು. 2026ರ ಮಾರ್ಚ್ 4ರಂದು ಮಾರುಕಟ್ಟೆ ಆರಂಭವಾದಾಗ ದುಬೈ ಹಣಕಾಸು ಮಾರುಕಟ್ಟೆಯ (ಡಿಎಫ್‌ಎಂ) ಸೂಚ್ಯಂಕ ಶೇ 4.65ರಷ್ಟು ಕುಸಿಯಿತು. ಆಬಳಿಕ ಮಾರುಕಟ್ಟೆಯನ್ನು ಸತತ ಎರಡು ದಿನ ಮುಚ್ಚಲಾಗಿತ್ತು, ಇದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ. ರಿಯಲ್ ಎಸ್ಟೇಟ್ ಸೂಚ್ಯಂಕವು ಸಂಘರ್ಷ ಆರಂಭವಾದ ನಂತರ ಸುಮಾರು ಶೇ 21ರಷ್ಟು ಪತನಗೊಂಡು 13,353 ಅಂಕಗಳಿಗೆ ಕುಸಿಯಿತು.

ಅರ್ಥಾತ್‌: ಕೊಲ್ಲಿ ಯುದ್ಧದಿಂದ ಜಗತ್ತಿಗೆ ಏಕೆ ಆರ್ಥಿಕ ಹೊರೆ?

ಆಸ್ತಿ ವಹಿವಾಟಿನ ಪ್ರಮಾಣವೂ ಕುಂಠಿತಗೊಂಡಿದೆ. 2026ರ ಜನವರಿ ಮತ್ತು ಫೆಬ್ರುವರಿ ನಡುವೆ ದುಬೈ 133.3 ಬಿಲಿಯನ್ ದಿರ್ಹಮ್ ಮೌಲ್ಯದ ವಹಿವಾಟು ದಾಖಲಿಸಿತ್ತು. ಆದರೆ ಈಗ ಆ ವೇಗಕ್ಕೆ ಬ್ರೇಕ್ ಬಿದ್ದಿದೆ. ಸ್ಥಳ ಭೇಟಿಗಳು ರದ್ದಾಗುತ್ತಿವೆ, ಪರಿಸ್ಥಿತಿ ತಿಳಿಯಾಗುವವರೆಗೆ ಖರೀದಿದಾರರು ಕಾಯುತ್ತಿದ್ದಾರೆ. ಫೆಬ್ರುವರಿ ಅಂತ್ಯದಿಂದ ಮಾರ್ಚ್ 22ರ ಅವಧಿಯಲ್ಲಿ ಕೇವಲ 8,059 ಆಸ್ತಿಗಳು ಮಾರಾಟವಾಗಿವೆ. ಇದು ಸರಾಸರಿಗಿಂತ ಭಾರಿ ಕಡಿಮೆ.

ದುಬೈ ಸ್ಥಿರ ಮತ್ತು ಸಂಘರ್ಷಮುಕ್ತ ಎಂಬ ನಂಬಿಕೆ ಈಗ ಹುಸಿಯಾಗಿದೆ. ನಗರ ಪ್ರದೇಶಗಳಲ್ಲಿ ಕ್ಷಿಪಣಿ ಅವಶೇಷಗಳು ಮತ್ತು ಡ್ರೋನ್‌ಗಳು ಬಿದ್ದಿರುವುದು ಅಂತರರಾಷ್ಟ್ರೀಯ ಹೂಡಿಕೆದಾರರಲ್ಲಿ ಭೀತಿ ಮೂಡಿಸಿದೆ. 'ಫಿಚ್' ರೇಟಿಂಗ್ಸ್ ಪ್ರಕಾರ, ವಿದೇಶಿಗರು ದುಬೈ ತೊರೆಯುತ್ತಿದ್ದು, ಇದು ವಸತಿ ಮಾರುಕಟ್ಟೆ ಮೇಲೆ ಒತ್ತಡ ಹೇರಲಿದೆ. ಇರಾನ್ ಯುದ್ಧದ ನಂತರದ ಕೇವಲ ಒಂದು ವಾರದಲ್ಲಿ ದುಬೈ ರಿಯಲ್ ಎಸ್ಟೇಟ್ ಸೂಚ್ಯಂಕವು ಶೇ 15ರಷ್ಟು ಇಳಿಕೆಯಾಗಿದೆ.

ಭಾರತೀಯರ ಮೇಲೆ ಪರಿಣಾಮ

ದುಬೈನಲ್ಲಿ ಆಸ್ತಿ ಖರೀದಿಸುವ ವಿದೇಶಿಗರಲ್ಲಿ ಭಾರತೀಯರೇ ಮೊದಲ ಸ್ಥಾನದಲ್ಲಿದ್ದಾರೆ. 2024ರ ಅಂಕಿಅಂಶಗಳ ಪ್ರಕಾರ, ದುಬೈನ ಒಟ್ಟು ವಹಿವಾಟಿನ ಶೇ 23ರಷ್ಟು ಪಾಲು ಭಾರತೀಯರದ್ದೇ. 2024ರಲ್ಲಿ ಭಾರತೀಯರು ಸುಮಾರು 30 ಬಿಲಿಯನ್ ದಿರ್ಹಮ್ (8.2 ಬಿಲಿಯನ್ ಡಾಲರ್) ಹೂಡಿಕೆ ಮಾಡಿದ್ದಾರೆ.

2025ರಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚಾಗಿತ್ತು. ಭಾರತೀಯ ಹೂಡಿಕೆದಾರರು ಸುಮಾರು ₹85,000 ಕೋಟಿಯಿಂದ ₹95,000 ಕೋಟಿ ಮೌಲ್ಯದ ಮನೆಗಳನ್ನು ಖರೀದಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ಈಗ ಮಾರುಕಟ್ಟೆ ಶೇ 20ಕ್ಕಿಂತ ಹೆಚ್ಚು ಕುಸಿದಿರುವುದರಿಂದ, ಭಾರತೀಯ ಹೂಡಿಕೆದಾರರು ತಮ್ಮ ಹೂಡಿಕೆಯ ಲಾಭ ಮತ್ತು ಮೌಲ್ಯದ ಬಗ್ಗೆ ತೀವ್ರ ಆತಂಕದಲ್ಲಿದ್ದಾರೆ. ದುಬೈ ಮಾರುಕಟ್ಟೆಯ ಏರಿಳಿತಗಳು ನೇರವಾಗಿ ಭಾರತೀಯರ ಆಸ್ತಿ ಮೌಲ್ಯದ ಮೇಲೆ ಪರಿಣಾಮ ಬೀರುತ್ತವೆ.

ಪಶ್ಚಿಮ ಏಷ್ಯಾ ಸಂಘರ್ಷ; ವಿವಿಧ ಘಟನೆಗಳಲ್ಲಿ 8 ಭಾರತೀಯರ ಸಾವು

ರೆಮಿಟೆನ್ಸ್ (ಹಣದ ಹರಿವು)

ಭಾರತ ಮತ್ತು ಗಲ್ಫ್ ನಡುವಿನ ಅತ್ಯಂತ ಪ್ರಮುಖ ಕೊಂಡಿಯೆಂದರೆ ವಿದೇಶಿ ವಿನಿಮಯ ಹಣ. 2024-25ರ ಸಾಲಿನಲ್ಲಿ ಭಾರತವು ದಾಖಲೆಯ 135.46 ಬಿಲಿಯನ್ ಡಾಲರ್ ರೆಮಿಟೆನ್ಸ್ ಪಡೆದಿದೆ. ಇದರಲ್ಲಿ ಗಲ್ಫ್ ರಾಷ್ಟ್ರಗಳ ಪಾಲು ಶೇ 38ರಷ್ಟಿದ್ದು, ಅದರಲ್ಲಿ ಅರ್ಧದಷ್ಟು ಭಾಗ ಯುಎಇನಿಂದಲೇ ಬರುತ್ತದೆ.

ಗಲ್ಫ್‌ನಲ್ಲಿರುವ ಭಾರತೀಯ ಕಾರ್ಮಿಕರು ಹೆಚ್ಚಾಗಿ ತೈಲ ಸೇವೆ, ನಿರ್ಮಾಣ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ದುಡಿಯುತ್ತಿದ್ದಾರೆ. ಈ ವಲಯಗಳೇ ಯುದ್ಧದಿಂದಾಗಿ ಹೆಚ್ಚು ಬಾಧಿತಗೊಂಡಿವೆ. ದೀರ್ಘಕಾಲದ ಸಂಘರ್ಷವು ಅನಿವಾಸಿ ಭಾರತೀಯರ ಆದಾಯವನ್ನು ಕುಂಠಿತಗೊಳಿಸಲಿದ್ದು, ಭಾರತಕ್ಕೆ ಬರುವ ಹಣದ ಹರಿವು ಇಳಿಕೆಯಾಗಲಿದೆ ಎಂದು ಸಿಟಿ ಬ್ಯಾಂಕ್ ಎಚ್ಚರಿಸಿದೆ. ಆತಂಕದ ಸಂಗತಿಯೆಂದರೆ, ಮಾರ್ಚ್ ತಿಂಗಳಲ್ಲಿ ಭಾರತಕ್ಕೆ ಹರಿಯುವ ಹಣದ ಪ್ರಮಾಣ ಶೇ 20-30ರಷ್ಟು ಹೆಚ್ಚಾಗಿದೆ. ಇದು ಸಮೃದ್ಧಿಯ ಸಂಕೇತವಲ್ಲ, ಅನಿಶ್ಚಿತತೆಯಿಂದಾಗಿ ಅನಿವಾಸಿಗಳು ತಮ್ಮ ಹಣವನ್ನು ಮುನ್ನೆಚ್ಚರಿಕೆಯಾಗಿ ತಾಯ್ನಾಡಿಗೆ ಕಳುಹಿಸುತ್ತಿರುವುದರ ಲಕ್ಷಣವಾಗಿದೆ.

ಪಶ್ಚಿಮ ಏಷ್ಯಾ ಸಂಘರ್ಷ | ಭಾರತದಲ್ಲಿ ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ಕೊರತೆ: ಸಿಐಐ

ತೈಲ: ಭಾರತಕ್ಕೆ ನೇರ ಪೆಟ್ಟು

ಭಾರತವು ತನ್ನ ಪೆಟ್ರೋಲಿಯಂ ಆಮದಿನ ಶೇ 60ರಷ್ಟು ಮತ್ತು ರಸಗೊಬ್ಬರಕ್ಕೆ ಬೇಕಾದ ಶೇ 40ರಷ್ಟು ಯೂರಿಯಾವನ್ನು ಗಲ್ಫ್‌ನಿಂದಲೇ ಪಡೆಯುತ್ತದೆ. ಹೊರ್ಮುಜ್ ಜಲಸಂಧಿ ಮುಚ್ಚಿರುವುದರಿಂದ ಕಚ್ಚಾ ತೈಲ ಬೆಲೆ ಶೇ 55.32ರಷ್ಟು ಏರಿಕೆಯಾಗಿದೆ. ತೈಲ ಬೆಲೆಯಲ್ಲಿ ಪ್ರತಿ 10 ಡಾಲರ್ ಏರಿಕೆಯಾದಾಗಲೂ ಭಾರತದ ಚಾಲ್ತಿ ಖಾತೆ ಕೊರತೆಯು ಜಿಡಿಪಿಯ ಶೇ 0.4-0.5ರಷ್ಟು ಹೆಚ್ಚಾಗುತ್ತದೆ.

ಇದರಿಂದಾಗಿ ರೂಪಾಯಿ ಮೌಲ್ಯವು ಮಾರ್ಚ್ 27ರಂದು ದಾಖಲೆಯ 94.85 ಕ್ಕೆ ಕುಸಿಯಿತು. ಭಾರತದ ಕೈಗಾರಿಕಾ ವಲಯದಲ್ಲೂ ಇದರ ಪರಿಣಾಮ ಎದ್ದುಕಾಣುತ್ತಿದೆ. ಗುಜರಾತ್‌ನ ಮೊರ್ಬಿಯಲ್ಲಿರುವ 400ಕ್ಕೂ ಹೆಚ್ಚು ಸೆರಾಮಿಕ್ ಘಟಕಗಳು ಅನಿಲ ಕೊರತೆಯಿಂದಾಗಿ ಮುಚ್ಚಲ್ಪಟ್ಟಿವೆ.

ಸಾವಿರಾರು ವರ್ಷಗಳವರೆಗೆ ದತ್ತಾಂಶ ಸಂಗ್ರಹ: ಗಾಜಿನಲ್ಲೇ ಮೈಕ್ರೊಸಾಫ್ಟ್ ಮ್ಯಾಜಿಕ್

ತಿರುಗು ವಲಸೆ ಮತ್ತು ದೇಶೀಯ ರಿಯಲ್ ಎಸ್ಟೇಟ್

ಯುದ್ಧ ‍ಪ್ರಾರಂಭವಾದಾಗಿನಿಂದ ಈವರೆಗೆ ಸುಮಾರು 2.2 ಲಕ್ಷ ಭಾರತೀಯರು ಗಲ್ಫ್ ಮತ್ತು ಇರಾನ್‌ನಿಂದ ತಾಯ್ನಾಡಿಗೆ ಮರಳಿದ್ದಾರೆ. ಈ ಜನರು ಮೆಟ್ರೊ ನಗರಗಳ ಬದಲಿಗೆ ಸಣ್ಣ ನಗರಗಳಲ್ಲಿ ಹೂಡಿಕೆ ಮಾಡುತ್ತಿರುವುದರಿಂದ ಭಾರತದ ದೇಶೀಯ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಶೇ 14ರಷ್ಟು ಬೆಳವಣಿಗೆ ಕಂಡುಬಂದಿದೆ. ಇದನ್ನು 'ರಿಟರ್ನೀ ಕ್ಯಾಪಿಟಲ್' (ಹಿಂತಿರುಗಿದವರ ಬಂಡವಾಳ) ಎಂದು ಕರೆಯಲಾಗುತ್ತಿದೆ.

ಈ ಯುದ್ಧವು 'ಸುರಕ್ಷಿತ ತಾಣ' ಎನ್ನುವ ದುಬೈನ ಮಿತಿಗಳನ್ನು ಎತ್ತಿ ತೋರಿಸಿದೆ. ಯುದ್ಧವು ಎಷ್ಟು ದಿನಗಳ ಮುಂದುವರಿಯುತ್ತದೆ ಎಂಬುದರ ಮೇಲೆ ದುಬೈ ಮತ್ತು ಭಾರತದ ಆರ್ಥಿಕ ಭವಿಷ್ಯ ನಿರ್ಧಾರವಾಗಲಿದೆ. ಸಂಘರ್ಷವು ದೀರ್ಘ ಕಾಲದ ವರೆಗೆ ಮುಂದುವರಿದರೆ, ಗಲ್ಫ್‌ನ ಸ್ಥಿರತೆಯ ಮೇಲೆ ತಮ್ಮ ಆರ್ಥಿಕ ಭವಿಷ್ಯವನ್ನು ಕಟ್ಟಿಕೊಂಡಿರುವ ದುಬೈ ಆಸ್ತಿ ಮಾರುಕಟ್ಟೆ ಮತ್ತು ಭಾರತೀಯ ಕುಟುಂಬಗಳ ಮೇಲೆ ಇದು ಗಂಭೀರ ಪರಿಣಾಮ ಬೀರಲಿದೆ.

ಆಧಾರ: ರಾಯಿಟರ್ಸ್, ಬ್ಲೂಮ್‌ಬರ್ಗ್, ಸಿಎನ್‌ಬಿಸಿ, ದಿ ನ್ಯಾಷನಲ್ (ಯುಎಇ), ಬಿಸಿನೆಸ್ ಸ್ಟ್ಯಾಂಡರ್ಡ್, ಆರ್‌ಬಿಐ ದತ್ತಾಂಶ, ದುಬೈ ಲ್ಯಾಂಡ್ ಡಿಪಾರ್ಟ್‌ಮೆಂಟ್, ಅನರಾಕ್, ಸಿಟಿ ರಿಸರ್ಚ್

ಕದನ ವಿರಾಮ: ಅಮೆರಿಕದೊಂದಿಗೆ ಯಾವುದೇ ನೇರ ಮಾತುಕತೆ ನಡೆದಿಲ್ಲ ಎಂದ ಇರಾನ್
Dailyhunt
Disclaimer: This content has not been generated, created or edited by Dailyhunt. Publisher: Prajavani