Dailyhunt Logo
  • Light mode
    Follow system
    Dark mode
    • Play Story
    • App Story
'ತೈಲ ಕೋಟೆ' ಖಾರ್ಗ್ ದ್ವೀಪದ ಮೇಲೆ ಟ್ರಂಪ್ ಕಣ್ಣು: ಮಧ್ಯಪ್ರಾಚ್ಯದಲ್ಲಿ ಹೊಸ ಕಿಡಿ

'ತೈಲ ಕೋಟೆ' ಖಾರ್ಗ್ ದ್ವೀಪದ ಮೇಲೆ ಟ್ರಂಪ್ ಕಣ್ಣು: ಮಧ್ಯಪ್ರಾಚ್ಯದಲ್ಲಿ ಹೊಸ ಕಿಡಿ

ರಾನ್‌ನ ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಇದು ಪಶ್ಚಿಮ ಏಷ್ಯಾ ಸಂಘರ್ಷದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ.

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿ ಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

'ತೈಲ ಕೋಟೆ' ಖಾರ್ಗ್ ದ್ವೀಪದ ಮೇಲೆ ಟ್ರಂಪ್ ಕಣ್ಣು: ಮಧ್ಯಪ್ರಾಚ್ಯದಲ್ಲಿ ಹೊಸ ಕಿಡಿ

ಒಂದು ಸಾಲಿನಲ್ಲಿಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನ ಪ್ರಮುಖ 'ಖಾರ್ಗ್' ತೈಲ ದ್ವೀಪವನ್ನು ವಶಪಡಿಸಿಕೊಳ್ಳುವ ಬೆದರಿಕೆ ಹಾಕಿದ್ದು, ಇದು ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಸಂಘರ್ಷದ ಭೀತಿ ಹುಟ್ಟುಹಾಕಿದೆ.

ಪ್ರಮುಖ ಪ್ರಶ್ನೋತ್ತರ


ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುವ ಉದ್ದೇಶವೇನು?

ಇರಾನ್‌ನ ತೈಲ ಮತ್ತು ಅನಿಲ ಮಾರುಕಟ್ಟೆಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವುದು ಮತ್ತು ದೇಶದ ಆರ್ಥಿಕ ಮೂಲವನ್ನು ದುರ್ಬಲಗೊಳಿಸುವುದು ಟ್ರಂಪ್ ಅವರ ಪ್ರಮುಖ ಉದ್ದೇಶವಾಗಿದೆ.


ಇರಾನ್‌ನ ಆರ್ಥಿಕತೆಯಲ್ಲಿ ಖಾರ್ಗ್ ದ್ವೀಪದ ಪಾತ್ರವೇನು?

ಇರಾನ್‌ನ ಕಚ್ಚಾ ತೈಲ ರಫ್ತಿನ ಶೇ 90ರಷ್ಟು ಭಾಗ ಇದೇ ದ್ವೀಪದ ಮೂಲಕ ಸಾಗುತ್ತದೆ, ಹಾಗಾಗಿ ಇದು ಆ ದೇಶದ ಆರ್ಥಿಕ ಜೀವನಾಡಿಯಾಗಿದೆ.


ಈ ದ್ವೀಪವನ್ನು ವಶಪಡಿಸಿಕೊಳ್ಳುವುದು ಅಮೆರಿಕಕ್ಕೆ ಏಕೆ ಕಷ್ಟ?

ಇದಕ್ಕೆ ಭಾರೀ ಪ್ರಮಾಣದ ಭೂಸೇನೆಯ ಅಗತ್ಯವಿದೆ ಮತ್ತು ಇರಾನ್ ತನ್ನ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿರುವುದರಿಂದ ಅಮೆರಿಕದ ಪಡೆಗಳು ದಾಳಿಗೆ ತುತ್ತಾಗುವ ಅಪಾಯವಿದೆ.


ಖಾರ್ಗ್ ದ್ವೀಪದ ವಶದಿಂದಾಗುವ ಜಾಗತಿಕ ಪರಿಣಾಮಗಳೇನು?

ಈ ಕ್ರಮದಿಂದ ಜಾಗತಿಕವಾಗಿ ತೈಲ ಬೆಲೆಗಳು ತೀವ್ರವಾಗಿ ಏರಿಕೆಯಾಗಬಹುದು ಮತ್ತು ಇರಾನ್ ಪ್ರತೀಕಾರವಾಗಿ ಪರ್ಷಿಯನ್ ಕೊಲ್ಲಿಯಲ್ಲಿ ತೈಲ ಪೂರೈಕೆಯನ್ನು ಅಸ್ತವ್ಯಸ್ತಗೊಳಿಸಬಹುದು.


ಇರಾನ್ ಅಮೆರಿಕದ ದಾಳಿಗೆ ಪ್ರತಿಕ್ರಿಯಿಸಿದ್ದು ಹೇಗೆ?

ಇರಾನ್ ತನ್ನ ಮಿಲಿಟರಿ ನೆಲೆಗಳನ್ನು ಬಲಪಡಿಸಿಕೊಂಡಿದ್ದು, ಅಮೆರಿಕದ ದಾಳಿಯ ಹೊರತಾಗಿಯೂ ಹೊರ್ಮುಜ್ ಜಲಸಂಧಿಯ ಮೇಲೆ ತನ್ನ ಪ್ರಭಾವವನ್ನು ಉಳಿಸಿಕೊಂಡಿದೆ.

ಪ್ರಮುಖ ಅಂಕಿಅಂಶಗಳು

ಶೇ 90ಖಾರ್ಗ್ ದ್ವೀಪದ ಮೂಲಕ ನಡೆಯುವ ಇರಾನ್ ತೈಲ ರಫ್ತುಶೇ 30ಅಮೆರಿಕದ ದಾಳಿಯಿಂದ ತೈಲ ಬೆಲೆಯಲ್ಲಿನ ಹೆಚ್ಚಳಶೇ 50ತೈಲ ರಫ್ತಿನಿಂದ ಇರಾನ್ ಸರ್ಕಾರಕ್ಕೆ ಬರುವ ಆದಾಯದ ಪಾಲುಶೇ 6ಇರಾನ್‌ನ ಒಟ್ಟಾರೆ ಆರ್ಥಿಕ ಆದಾಯದಲ್ಲಿ ತೈಲದ ಪಾಲು2,500ಮಾರ್ಚ್‌ನಲ್ಲಿ ನಿಯೋಜಿತರಾದ ಅಮೆರಿಕ ನೌಕಾ ಸೈನಿಕರು

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಇರಾನ್‌ನ ಖಾರ್ಗ್ ದ್ವೀಪದತ್ತ ಹೊರಟಿದ್ದ ತೈಲ ಟ್ಯಾಂಕರ್‌ ಮೇಲೆ ಅಮೆರಿಕ ದಾಳಿ

'ಸದ್ಯದಲ್ಲೇ ನಾವು ಖಾರ್ಗ್ ದ್ವೀಪ ಮತ್ತು ಇತರ ತೈಲ ಮೂಲಸೌಕರ್ಯ ಕೇಂದ್ರಗಳನ್ನು ನಮ್ಮ ವಶಕ್ಕೆ ಪಡೆಯಲಿದ್ದೇವೆ. ಅವರ ತೈಲ ಮತ್ತು ಅನಿಲ ಮಾರುಕಟ್ಟೆಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲಿದ್ದೇವೆ' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

ಮಾರ್ಚ್‌ ತಿಂಗಳಿನಲ್ಲಿ ದ್ವೀಪದಲ್ಲಿದ್ದ ಸೇನಾ ನೆಲೆಗಳ ಮೇಲೆ ಅಮೆರಿಕ ದಾಳಿ ನಡೆಸಿತ್ತಾದರೂ, ತೈಲ ರಫ್ತು ಸೌಲಭ್ಯಗಳಿಗೆ ಯಾವುದೇ ಹಾನಿ ಮಾಡಿರಲಿಲ್ಲ.

ಫೆಬ್ರುವರಿಯಲ್ಲಿ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಸೇರಿ ದಾಳಿ ಆರಂಭಿಸಿದಾಗಿನಿಂದಲೂ ಖಾರ್ಗ್ ದ್ವೀಪವನ್ನು ಪಶಪಡಿಸಿಕೊಳ್ಳುತ್ತೇವೆ ಎಂದು ಟ್ರಂಪ್ ಪದೇ ಪದೇ ಬೆದರಿಕೆ ಹಾಕುತ್ತಾ ಬಂದಿದ್ದಾರೆ. ಇತ್ತೀಚೆಗೆ ತನ್ನ ಅಪಾಚೆ ಹೆಲಿಕಾಪ್ಟರ್ ಅನ್ನು ಇರಾನ್ ಹೊಡೆದುರುಳಿಸಿದ ಬಳಿಕ ಅಮೆರಿಕ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ಅಮೆರಿಕ ಮಿತ್ರರಾಷ್ಟ್ರಗಳ ಮೇಲೆ ದಾಳಿ ನಡೆಸುವ ಮೂಲಕ ಇರಾನ್ ಪ್ರತೀಕಾರ ತೀರಿಸಿಕೊಂಡಿದೆ.

ಇರಾನ್‌ನ ಖಾರ್ಗ್ ದ್ವೀಪದ ಮೇಲೆ ದಾಳಿ: ಟೆಹರಾನ್‌ನಲ್ಲೂ ಸ್ಫೋಟದ ಸದ್ದು

ಖಾರ್ಗ್ ದ್ವೀಪಕ್ಕೆ ಪ್ರಾಮುಖ್ಯತೆ ಏಕೆ?

'ಖಾರ್ಗ್' ಪರ್ಷಿಯನ್ ಕೊಲ್ಲಿಯ ಉತ್ತರ ಭಾಗದಲ್ಲಿರುವ ಒಂದು ಹವಳದ ದ್ವೀಪವಾಗಿದ್ದು, ಇದು ಕೇವಲ 8 ಕಿ.ಮೀನಷ್ಟು ಉದ್ದವಿದೆ. ಆದರೆ ಇರಾನ್‌ನ ಆರ್ಥಿಕತೆಯಲ್ಲಿ ಇದು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಯುದ್ಧದ ಮೊದಲು, ಇರಾನ್‌ ಕಚ್ಚಾ ತೈಲ ರಫ್ತಿನ ಸುಮಾರು ಶೇ 90 ರಷ್ಟು ಭಾಗ ಇದೇ ಮಾರ್ಗದ ಮೂಲಕ ಸಾಗುತ್ತಿತ್ತು ಇದು ಇರಾನ್ ಕರಾವಳಿಯಿಂದ ಸರಿಸುಮಾರು 32 ಕಿ.ಮೀ ದೂರದಲ್ಲಿದೆ.

ಈ ದ್ವೀಪದ ಸುತ್ತಲಿನ ನೀರು ಇರಾನ್‌ನ ಪರ್ಷಿಯನ್ ಕೊಲ್ಲಿಯ ಉಳಿದ ಕರಾವಳಿ ಪ್ರದೇಶಗಳಿಗಿಂತ ಹೆಚ್ಚು ಆಳವಾಗಿದೆ. ಇದರಿಂದಾಗಿ ದೊಡ್ಡ ತೈಲ ಟ್ಯಾಂಕರ್‌ಗಳು ಅಲ್ಲಿ ಸುಲಭವಾಗಿ ಲಂಗರು ಹಾಕಬಹುದು. ದ್ವೀಪದಲ್ಲಿರುವ ಸಂಗ್ರಹಣಾ ಸೌಲಭ್ಯಗಳು ಮತ್ತು ಪೈಪ್‌ಲೈನ್‌ಗಳು ಇರಾನ್‌ನ ಕೆಲವು ಅತಿ ದೊಡ್ಡ ತೈಲ ಮತ್ತು ಅನಿಲ ಕ್ಷೇತ್ರಗಳೊಂದಿಗೆ ಸಂಪರ್ಕ ಹೊಂದಿವೆ. ದೇಶದಲ್ಲೇ ಅತಿ ದೊಡ್ಡದು ಎಂದು ಪರಿಗಣಿಸಲಾದ ಫಲತ್ ಇರಾನ್ ಆಯಿಲ್ ಕಂಪನಿ ಸೇರಿದಂತೆ ಮೂರು ಪ್ರಮುಖ ಇಂಧನ ಮೂಲಸೌಕರ್ಯ ಕೇಂದ್ರಗಳು ಈ ದ್ವೀಪದಲ್ಲಿ ಕಾರ್ಯನಿರ್ವಹಿಸುತ್ತವೆ.

ಇಲ್ಲಿಂದ ಬಹುಪಾಲು ತೈಲ ಚೀನಾಗೆ ರಫ್ತಾಗುತ್ತದೆ. ಇರಾನ್‌ನ ಒಟ್ಟಾರೆ ಆರ್ಥಿಕತೆಯ ಸುಮಾರು ಶೇ 6 ರಷ್ಟು ಆದಾಯ ಚೀನಾಗೆ ಮಾರಾಟ ಮಾಡುವ ತೈಲದಿಂದಲೇ ಬರುತ್ತದೆ. ಇದು ದೇಶದ ಒಟ್ಟು ಸರ್ಕಾರಿ ವೆಚ್ಚದ ಸುಮಾರು ಶೇ 50ಕ್ಕೆ ಸಮ.

ಜಗತ್ತಿಗೆ ಸವಾಲಾಗುತ್ತಿದೆ ಎ.ಐ ಡೇಟಾ ಸೆಂಟರ್‌ಗಳ ವಿದ್ಯುತ್ ‍ದಾಹ

ಖಾರ್ಗ್ ವಶಪಡಿಸಿಕೊಳ್ಳುವುದು ಏಕೆ ಕಷ್ಟ?

ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುವುದು ಸುಲಭದ ಮಾತಲ್ಲ. ಅದು ದೊಡ್ಡ ಸವಾಲಿನ ಕೆಲಸ. ಅದನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆ ಯಶಸ್ವಿಯಾಗಲು ಬಹುಮಟ್ಟಿಗೆ ಭೂಸೇನೆಯ ಸೈನಿಕರು ಅಗತ್ಯ ಎಂದು ವಿಶ್ಲೇಷಕರು ಹೇಳಿದ್ದಾರೆ. ಖಾರ್ಗ್ ಅನ್ನು ವಶಪಡಿಸಿಕೊಳ್ಳುವ ಪ್ರಯತ್ನ ಮಾಡಿದರೆ ತೈಲ ಬೆಲೆಗಳು ಮತ್ತಷ್ಟು ಏರಿಕೆಯಾಗಬಹುದು. ಈಗಾಗಲೇ ಶೇ 30ರಷ್ಟು ಹೆಚ್ಚಳವಾಗಿದೆ. ಪರ್ಷಿಯನ್ ಕೊಲ್ಲಿಯಲ್ಲಿನ ತೈಲ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವ ಮೂಲಕ ಇರಾನ್ ಪ್ರತೀಕಾರ ತೀರಿಸಿಕೊಂಡರೆ ಇದರ ತೈಲ ಬೆಲೆ ಗಗನಕ್ಕೇರಲಿದೆ.

ಇಡೀ ಪ್ರಪಂಚ ತೈಲ ಮತ್ತು ನೈಸರ್ಗಿಕ ಅನಿಲದ ಮೇಲೆ ಅವಲಂಬಿತವಾಗಿರುವುದು ಯುದ್ಧದಲ್ಲಿ ಇರಾನ್‌ಗೆ ಬಲ ನೀಡಿದೆ. ಅಲ್ಲದೆ ತೈಲ ಮತ್ತು ಅನಿಲ ಪೂರೈಕೆಯ ಪ್ರಮುಖ ಮಾರ್ಗವಾದ ಹೊರ್ಮುಜ್ ಜಲಸಂಧಿಯ ಮೇಲೆ ದಿಗ್ಬಂಧನ ವಿಧಿಸಿದೆ. ಇದು ಜಾಗತಿಕ ಆರ್ಥಿಕತೆಗೆ ಪೆಟ್ಟು ನೀಡಿದೆ.

ಕೋವಿಡ್ ಕೊಟ್ಟ ಅವಕಾಶ, ಪುಟಿನ್ ಬೆಂಬಲ: ಕಿಮ್‌ ಜಾಂಗ್‌ ಉನ್‌ರ 'ನವ ಉತ್ತರ ಕೊರಿಯಾ'

ತನ್ನ ಬೇಡಿಕೆಗLನ್ನು ಒಪ್ಪಲು ಅಮೆರಿಕ ವಾಯುದಾಳಿ ನಡೆಸಿದರೂ ಇರಾನ್ ಶರಣಾಗಿಲ್ಲ. ಖಾರ್ಗ್ ದ್ವೀಪವನ್ನು ವಶಪಡಿಸಿಕೊಂಡರೂ ಇರಾನ್ ತಣ್ಣಗಾಗದು ಎನ್ನುತ್ತಾರೆ ವಿಶ್ಲೇಷಕರು. ಕಾರಣ, ಖಾರ್ಗ್ ದ್ವೀಪವು ಹೊರ್ಮುಜ್ ಜಲಸಂಧಿಯಿಂದ ಸುಮಾರು 645 ಕಿ.ಮೀ ದೂರದಲ್ಲಿದೆ. ಆದ್ದರಿಂದ ಖಾರ್ಗ್ ದ್ವೀಪವನ್ನು ಅಮೆರಿಕ ಸಂಪೂರ್ಣವಾಗಿ ನಿಯಂತ್ರಣಕ್ಕೆ ಪಡೆದರೂ, ಪರ್ಷಿಯನ್ ಕೊಲ್ಲಿಯಿಂದ ಇಂಧನ ಸಾಗಣೆಯನ್ನು ತಡೆಯುವ ಇರಾನ್‌ನ ಸಾಮರ್ಥ್ಯವನ್ನು ಕುಂದಿಸಲು ಆಗದು.

ಇನ್ನು ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುವುದು ಸೇನಾ ದೃಷ್ಟಿಯಿಂದಲೂ ಕಷ್ಟಕರ ಎಂದು ವಿಶ್ಲೇಷಕರು ಹೇಳುತ್ತಾರೆ. ಇದಕ್ಕೆ ಭಾರಿ ಪ್ರಮಾಣದ ಭೂಸೇನೆಯ ಸೈನಿಕರ ಅಗತ್ಯವಿದೆ.

ಮಾರ್ಚ್‌ನಲ್ಲಿ ಸುಮಾರು 2,500 ನೌಕಾ ಸೇನೆಯ ಸೈನಿಕರನ್ನು ಪಶ್ಚಿಮ ಏಷ್ಯದಲ್ಲಿ ಅಮೆರಿಕ ನಿಯೋಜಿಸಿತ್ತು. ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುವ ಯೋಜನೆಯಿಂದ ಟ್ರಂಪ್ ಸೇನೆಯನ್ನು ನಿಯೋಜಿಸಿದ್ದಾರೆ ಎನ್ನುವ ಊಹಾಪೋಹಗಳು ಕೇಳಿ ಬಂದಿತ್ತು.

ಅಮೆರಿಕ ನಡೆಸಿದ ದಾಳಿಯಿಂದಾಗಿ ದ್ವೀಪದಲ್ಲಿನ ವಾಯುನೆಲೆಗಳು ಹಾನಿಯಾಗಿದ್ದವು. ಹೀಗಾಗಿ ಅಮೆರಿಕ ಒಂದು ವೇಳೆ ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುವುದೇ ಆಗಿದ್ದಲ್ಲಿ, ವಿಮಾನ ನಿಲ್ದಾಣದ ಮೂಲಸೌಕರ್ಯಗಳನ್ನು ತ್ವರಿತವಾಗಿ ದುರಸ್ತಿ ಮಾಡಬಲ್ಲ ಎಂಜಿನಿಯರ್‌ಗಳನ್ನು ಹೊಂದಿರುವ ನೌಕಾ ಸೈನಿಕರನ್ನು ಮೊದಲು ಕಳುಹಿಸುವ ಸಾಧ್ಯತೆಯಿದೆ. ವಾಯುನೆಲೆಯನ್ನು ದುರಸ್ತಿ ಮಾಡಿದ ನಂತರ, ಅಗತ್ಯವಿದ್ದರೆ ಸಿ-130 ಸರಕು ಸಾಗಣೆ ವಿಮಾನಗಳ ಮೂಲಕ ವಾಯುಪಡೆಯು ಯುದ್ಧ ಸಾಮಗ್ರಿಗಳು ಮತ್ತು ಸೈನಿಕರನ್ನು ಕಳುಹಿಸಲು ಪ್ರಾರಂಭಿಸಬಹುದು ಎಂದು ಅಮೆರಿಕದ ಮಾಜಿ ಕಮಾಂಡರ್‌ಗಳು ಹೇಳಿದ್ದಾರೆ.

ಆದರೆ ಭೂಸೇನೆಯ ಸೈನಿಕರನ್ನು ನಿಯೋಜಿಸುವುದಿಲ್ಲ ಎಂದು ಟ್ರಂಪ್ ಅವರು ಗುರುವಾರ ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಅಲ್ಲದೆ ಇಂತಹ ಕಾರ್ಯಾಚರಣೆಯನ್ನು ಅಮೆರಿಕದ ಜನ ಬೆಂಬಲಿಸುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ.

ಇದರ ಜೊತೆಗೆ ದ್ವೀಪದಲ್ಲಿ ತನ್ನ ರಕ್ಷಣಾ ವ್ಯವಸ್ಥೆಯನ್ನು ಇರಾನ್ ಬಲಪಡಿಸಿದೆ ಎಂದು ನಂಬಲಾಗಿದೆ. ಅಲ್ಲದೆ ಇರಾನ್‌ನ ಭೂಭಾಗಕ್ಕೆ ಈ ದ್ವೀಪ ಸಮೀಪ ಇದ್ದು, ಸಮುದ್ರ ಮಾರ್ಗವಾಗಿ ದ್ವೀಪವನ್ನು ತಲುಪಲು ಪ್ರಯತ್ನಿಸುವ ಅಮೆರಿಕದ ಪಡೆಗಳು ಇರಾನ್‌ನ ದಾಳಿಗೆ ತುತ್ತಾಗುವ ಅಪಾಯವಿರುತ್ತದೆ. ಅಮೆರಿಕ ಮತ್ತು ಇಸ್ರೇಲ್ ಅನೇಕ ಮಿಲಿಟರಿ ಸೌಲಭ್ಯಗಳನ್ನು ನಾಶಪಡಿಸಿದ ನಂತರವೂ, ತನಗೆ ಇನ್ನು ಹೋರಾಡುವ ಸಾಮರ್ಥ್ಯವಿದೆ ಎಂಬುದನ್ನು ಇರಾನ್ ತೋರಿಸಿಕೊಟ್ಟಿದೆ.

ಸಾವಿರ ಮೈಲಿ ದೂರವಿದ್ದರೂ ಏಷ್ಯಾದ ಕರೆನ್ಸಿಗಳ ಮೇಲೆ ಯುದ್ಧಭೂಮಿಯ ಬಿಸಿ

ದಾಳಿಯಿಂದಾಗುವ ಪರಿಣಾಮಗಳು ಏನೆಲ್ಲಾ?

ಯುದ್ಧ ಆರಂಭವಾದ ಬಳಿಕ ಮೊದಲ ಬಾರಿಗೆ ಖಾರ್ಗ್ ದ್ವೀಪದ ಮೇಲೆ ಅಮೆರಿಕ ದಾಳಿ ಮಾಡಿದಾಗ ಇದ್ದ ಅದೇ ಅನೇಕ ಅಪಾಯಗಳು ಮತ್ತು ಸವಾಲುಗಳು ಈಗಲೂ ಇದೆ.

ಖಾರ್ಗ್ ದ್ವೀಪದ ತೈಲ ಮೂಲಸೌಕರ್ಯಗಳ ಮೇಲೆ ಅಥವಾ, ಅದಕ್ಕೆ ನೆರವಾಗುವ ವಿದ್ಯುತ್ ಸ್ಥಾವರದ ಮೇಲೆ ದಾಳಿ ಮಾಡಿದರೆ ಇರಾನ್ ಸರ್ಕಾರವನ್ನು ಮತ್ತಷ್ಟು ದುರ್ಬಲಗೊಳಿಸುವ ಒಂದು ಮಾರ್ಗ ಎಂದು ಆ ಸಮಯದಲ್ಲಿ ತಜ್ಞರು ಹೇಳಿದ್ದರು.

ಖಾರ್ಗ್ ದ್ವೀಪವನ್ನು ಅಮೆರಿಕ ವಶಪಡಿಸಿಕೊಂಡರೆ ಇರಾನ್ ಮೇಲೆ ತೀವ್ರ ಒತ್ತಡ ಬೀಳುತ್ತದೆ ಎಂದು ನೀಡುತ್ತದೆ ಎಂದು ವಿಲನೋವಾ ವಿಶ್ವವಿದ್ಯಾಲಯದ ಮಿಲಿಟರಿ ಭೂಗೋಳ ಶಾಸ್ತ್ರದ ತಜ್ಞ ಫ್ರಾನ್ಸಿಸ್ ಗಲ್ಗಾನೊ ಈ ಹಿಂದೆ ಹೇಳಿದ್ದರು.

ಹೊರ್ಮುಜ್‌ ಜಲಸಂಧಿಯಲ್ಲಿ ಅಮೆರಿಕದ ನಿದ್ದೆಗೆಡಿಸಿದ ಇರಾನ್‌ನ 'ಸೊಳ್ಳೆ ಪಡೆ'!

ಆದರೆ ಇದಕ್ಕೆ ‍‍ಪ್ರತಿಯಾಗಿ ಕೊಲ್ಲಿಯಲ್ಲಿರುವ ಇಂಧನ ಸ್ಥಾವರಗಳ ಮೇಲೆ ಇರಾನ್ ದಾಳಿ ನಡೆಸಬಹುದು ಎಂದು ವಾಷಿಂಗ್ಟನ್ ಮೂಲದ ಚಿಂತಕರ ಚಾವಡಿಯಾದ ಸೆಂಟರ್ ಫಾರ್ ಸ್ಟ್ರಾಟೆಜಿಕ್ ಅಂಡ್ ಇಂಟರ್ನ್ಯಾಷನಲ್ ಸ್ಟಡೀಸ್‌ನ ಇಂಧನ ತಜ್ಞ ಕ್ಲೇಟನ್ ಸೀಗಲ್ ಹೇಳಿದ್ದಾರೆ.

'ಇರಾನ್ ಈಗಾಗಲೇ ಇಡೀ ಪ್ರಪಂಚದ ಇಂಧನ ಪೂರೈಕೆಯನ್ನು ತನ್ನ ಹತೋಟಿಯಲ್ಲಿಟ್ಟುಕೊಂಡಿದೆ. ಖಾರ್ಗ್ ದ್ವೀಪವನ್ನು ಅಮೆರಿಕ ವಶಪಡಿಸಿಕೊಂಡರೆ, ಇರಾನಿಯನ್ನರು ಹಡಗುಗಳ ಮೇಲೆ ಗುಂಡು ಹಾರಿಸುವುದನ್ನು, ಪ್ರಮುಖ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದನ್ನು ಮತ್ತು ಆ ಮೂಲಕ ಈ ವಲಯದಲ್ಲಿನ ಇಂಧನ ರಫ್ತಿನ ಮೇಲಿನ ನಿಯಂತ್ರಣವನ್ನು ಮುಂದುವರಿಸುವುದನ್ನು ತಡೆಯುವುದು ಹೇಗೆ?' ಎಂದು ಅವರು ಪ್ರಶ್ನಿಸಿದ್ದಾರೆ.

ಯುದ್ಧದ ಆರಂಭದಲ್ಲಿ ದ್ವೀಪದ ಮೇಲೆ ಅಮೆರಿಕದ ದಾಳಿ ಹೇಗಿತ್ತು?

ಮಾರ್ಚ್ 13 ರಂದು ಖಾರ್ಗ್ ದ್ವೀಪದ ಮೇಲೆ ಅಮೆರಿಕ ಭಾರಿ ಬಾಂಬ್ ದಾಳಿ ನಡೆಸಿತ್ತು. ಅದು ವಿನಾಶಕಾರಿ ದಾಳಿ ಎಂದು ಇರಾನ್‌ನ ತೈಲ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದರು. 'ಸುಮಾರು ಎರಡು ಗಂಟೆ ದಾಳಿ ನಡೆದಿತ್ತು. ಆ ದಾಳಿಯಿಂದಾಗಿ ಇಡೀ ದ್ವೀಪವು ಭೂಕಂಪನಕ್ಕೆ ಸಿಲುಕಿದಂತೆ ನಡುಗಿತ್ತು' ಎಂದು ತೈಲ ಸಂಸ್ಕರಣಾಗಾರಗಳ ಉದ್ಯೋಗಿಗಳು ಅನುಭವ ಹಂಚಿಕೊಂಡಿದ್ದರು.

ಅಮೆರಿಕ ನಡೆಸಿದ್ದ ಭಾರಿ ಪ್ರಮಾಣದ ದಾಳಿಯಿಂದಾಗಿ ನೌಕಾ ಸ್ಫೋಟಕ ಸಂಗ್ರಹಣಾ ಸೌಲಭ್ಯಗಳು, ಕ್ಷಿಪಣಿ ಸಂಗ್ರಹಣಾ ಬಂಕರ್‌ಗಳು ಮತ್ತು ಇತರ ಹಲವಾರು ಮಿಲಿಟರಿ ನೆಲೆಗಳು ನಾಶವಾಗಿತ್ತು. ಶೇ 90 ಕ್ಕೂ ಹೆಚ್ಚು ಮಿಲಿಟರಿ ಗುರಿಗಳ ಮೇಲೆ ದಾಳಿ ಮಾಡಲಾಗಿದ್ದರೂ, ದ್ವೀಪದ ತೈಲ ಮೂಲಸೌಕರ್ಯವನ್ನು ಸಂರಕ್ಷಿಸಲಾಗಿದೆ ಎಂದು ಇರಾನ್‌ ಹೇಳಿತ್ತು.

ಅಲ್ಲದೆ ಕೊಲ್ಲಿಯ ಇನ್ನೊಂದು ತುದಿಯಲ್ಲಿರುವ ಹೊರ್ಮುಜ್ ಜಲಸಂಧಿಯಲ್ಲಿ ಅಂತರರಾಷ್ಟ್ರೀಯ ಹಡಗು ಸಂಚಾರ ತಡೆಯಲು ಬಳಸಲಾಗುತ್ತಿದ್ದ ಆಸ್ತಿಗಳ ಮೇಲೆಯೂ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಈ ಹಿಂದೆ ಹೇಳಿತ್ತು.

ಈ ದ್ವೀಪದ ಮೇಲೆ ಕೊನೆಯ ಬಾರಿ ದಾಳಿ ನಡೆದಿದ್ದು, 1980 ರ ದಶಕದ ಇರಾನ್-ಇರಾಕ್ ಯುದ್ಧದ ಸಮಯದಲ್ಲಿ. ಸದ್ದಾಂ ಹುಸೇನ್ ನೇತೃತ್ವದ ಇರಾಕ್ ಸೇನೆ ದ್ವೀಪದ ತೈಲ ಮೂಲಸೌಕರ್ಯಗಳ ಮೇಲೆ ಭಾರಿ ಬಾಂಬ್ ದಾಳಿಗಳನ್ನು ನಡೆಸಿ, ವ್ಯಾಪಕ ಹಾನಿಯನ್ನುಂಟುಮಾಡಿತ್ತು. ಆದರೆ ಇರಾನ್ ಆ ಸೌಲಭ್ಯಗಳನ್ನು ಪುನರ್ನಿರ್ಮಿಸಲು ಯಶಸ್ವಿಯಾಗಿತ್ತು.

ಖಾರ್ಗ್ ದ್ವೀಪ ಕೇವಲ ಒಂದು ಸಣ್ಣ ದ್ವೀಪವಲ್ಲ; ಅದು ಇರಾನ್‌ನ ತೈಲ ಆರ್ಥಿಕತೆಯ ಜೀವನಾಡಿಯಾಗಿದೆ. ಅದನ್ನು ಗುರಿಯಾಗಿಸುವುದು ಅಥವಾ ವಶಪಡಿಸಿಕೊಳ್ಳುವುದು ಇರಾನ್‌ಗೆ ಮಾತ್ರವಲ್ಲ, ಜಾಗತಿಕ ಇಂಧನ ಮಾರುಕಟ್ಟೆಗೂ ದೊಡ್ಡ ಆಘಾತ ನೀಡುವ ಸಾಧ್ಯತೆಯಿದೆ.

ಆಧಾರ: ದಿ ನ್ಯೂಯಾರ್ಕ್ ಟೈಮ್ಸ್, ಎಎಫ್‌ಪಿ, ಎಪಿ ಹಾಗೂ ರಾಯಿಟರ್ಸ್

ಸೀಮೋಲ್ಲಂಘನ ಅಂಕಣ: ಇಸ್ರೇಲ್-ಇರಾನ್ ಯುದ್ಧ ವಿನಾಶವಷ್ಟೇ ಅಲ್ಲ, ಅವಕಾಶವೂ...
Dailyhunt
Disclaimer: This content has not been generated, created or edited by Dailyhunt. Publisher: Prajavani