ಜುಲೈ ತಿಂಗಳಾದರೂ ದೆಹಲಿಯಲ್ಲಿ ಸುಡುಬಿಸಿಲು. ಭಾರಿ ಜನಸಂದಣಿ. ಮಧ್ಯಾಹ್ನದ ಹೊತ್ತಿಗೆ ಜಂತರ್ ಮಂತರ್ನ ದಾರಿ ಕಾದ ಕಾವಲಿಯಂತಿತ್ತು. ಅಲ್ಲಿ ಕಂಡ ದೃಶ್ಯಗಳು ಒಂದು ಪ್ರತಿಭಟನಾ ಸ್ಥಳದಂತಿರಲಿಲ್ಲ. ಆಕ್ರೋಶ, ಭರವಸೆ ಮತ್ತು ಯಾರೋ ಅಪರಿಚಿತರಿಂದ ನಿರಂತರವಾಗಿ ಹರಿದುಬರುತ್ತಿದ್ದ ಆಹಾರದ ನೆರವಿನಿಂದ ಅದು ಒಂದು ತಾತ್ಕಾಲಿಕ ವಸಾಹತಿನಂತೆ ಕಾಣುತ್ತಿತ್ತು.
ಯಾರೋ ಆನ್ಲೈನ್ನಲ್ಲಿ ಆಹಾರವನ್ನು ಆರ್ಡರ್ ಮಾಡಿ, ಪ್ರತಿಭಟನಾ ಸ್ಥಳದಲ್ಲಿದ್ದ ಯಾರಿಗೋ ತಲುಪಿಸುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ, ಪ್ರತಿಭಟನಾ ಸ್ಥಳದಲ್ಲೂ ಒಂದೇ ಮಾತು ಕೇಳಿಬರುತ್ತಿತ್ತು. 'ಜೆನ್-ಝೀಗಳು ಪ್ರತಿಭಟನೆ ಮುಂದುವರಿಸಲಿ; ಆಹಾರದ ಹೊಣೆ ಮಿಲೇನಿಯಲ್ಸ್ ನೋಡಿಕೊಳ್ಳುತ್ತಾರೆ'.

ಮೆಲೋನಿ ಉಲ್ಲೇಖಿಸಿ ಮೀಮ್
ಫಿಲ್ಟರ್ ಇಲ್ಲದ ಮಾತು
ಟಾರ್ಪಾಲುಗಳ ಮೇಲೆ ಕುಳಿತಿದ್ದ ವಿದ್ಯಾರ್ಥಿಗಳು ನೀರಿನ ಬಾಟಲಿಗಳು ಮತ್ತು ಕೈಬರಹದ ಫಲಕಗಳನ್ನು ಹಿಡಿದಿದ್ದರು. ಸ್ವಯಂಸೇವಕರು ಬೀಸಣಿಕೆ ಮೂಲಕ ಬಿಸಿಯನ್ನು ಕಡಿಮೆ ಮಾಡಲು ಯತ್ನಿಸುತ್ತಿದ್ದರು. 'ಇಂಕ್ವಿಲಾಬ್ ಜಿಂದಾಬಾದ್', 'ಆವಾಜ್ ದೋ, ಹಮ್ ಏಕ್ ಹೈ' ಎಂಬ ಘೋಷಣೆಗಳು ನಿರಂತರವಾಗಿ ಮೊಳಗುತ್ತಿದ್ದವು.
ಇನ್ನೂ ಕೆಲವು ಘೋಷಣೆಗಳನ್ನು ಇಲ್ಲಿ ಬರೆಯಲು ಸಾಧ್ಯವಿಲ್ಲ. ಹೋರಾಟದ ಪ್ರಮುಖ ಶಕ್ತಿಯಾಗಿದ್ದ ಜೆನ್-ಝೀ ಯುವಕರ ಅಭಿವ್ಯಕ್ತಿಯ ಶೈಲಿಯೇ ಅಂತಹದ್ದು. ಹೀಗೆಯೇ ಮಾತನಾಡಬೇಕು ಎನ್ನುವ ಯಾವುದೇ ಹಿಂಜರಿಕೆ ಅವರಲ್ಲಿರಲಿಲ್ಲ. ಮನಸ್ಸಿಗೆ ಬಂದದ್ದನ್ನು ಯಾವುದೇ ಮುಲಾಜಿಲ್ಲದೆ ಹೇಳುತ್ತಿದ್ದರು. ಇನ್ಸ್ಟಾಗ್ರಾಮ್ ಅಥವಾ ಸ್ನ್ಯಾಪ್ಚಾಟ್ನಲ್ಲಿ ಫಿಲ್ಟರ್ಗಳನ್ನು ಬಳಸಬಹುದು; ಆದರೆ ತಮ್ಮ ಆಲೋಚನೆಗಳಿಗೆ ಅವರು ಯಾವುದೇ ಫಿಲ್ಟರ್ ಹಾಕಿಕೊಂಡಿರಲಿಲ್ಲ. ತೋಚಿದ್ದನ್ನು ಅವರದೇ ಶೈಲಿಯಲ್ಲಿ ಅಭಿವ್ಯಕ್ತಪಡಿಸುತ್ತಿದ್ದರು.
ಇನ್ನೊಂದೆಡೆ ಕೆಲವರು ಮೌನವಾಗಿ ವೇದಿಕೆಯತ್ತ ದೃಷ್ಟಿ ನೆಟ್ಟಿದ್ದರು. ಮುಂದಿನ ಭಾಷಣವು ತಮ್ಮ ಹೋರಾಟ ವ್ಯರ್ಥವಾಗಿಲ್ಲ ಎಂಬ ಭರವಸೆಯನ್ನು ನೀಡಬಹುದು ಎಂಬ ನಿರೀಕ್ಷೆ ಅವರ ಕಣ್ಣಲ್ಲಿ ಕಾಣಿಸುತ್ತಿತ್ತು.

ವಿದ್ಯಾರ್ಥಿಗಳ ಪ್ರತಿಭಟನೆ
ಜೆನ್-ಝೀಗಳ ಪ್ರತಿಭಟನೆಗೆ 'ಬೂಮರ್ಸ್'ಗಳ ಬೆಂಬಲವಿದ್ಯಾರ್ಥಿಗಳ ಶಿಸ್ತು
ಪ್ರತಿಭಟನೆ ಎಂದರೆ ಹೀಗಿರಬೇಕು ಎನ್ನುವ ಸಾಂಪ್ರದಾಯಿಕ ನಿಯಮಗಳನ್ನು ಕಲಿಯದ ಯುವಜನರ ಗುಂಪು ಅಲ್ಲಿದ್ದರೂ, ಅವರ ಶಿಸ್ತು ಪ್ರಶಂಸನೀಯವಾಗಿತ್ತು. ದೆಹಲಿ ನಗರ ಯುವಕರಿಂದ ಹಿಡಿದು ದೇಶದ ವಿವಿಧ ಭಾಗಗಳಿಂದ ರಾತ್ರಿ ಪೂರ್ತಿ ರೈಲುಗಳಲ್ಲಿ ಪ್ರಯಾಣಿಸಿ ಬಂದ ವಿದ್ಯಾರ್ಥಿಗಳವರೆಗೆ, ಆ ಗುಂಪಿನಲ್ಲಿ ಭಾರತದ ಬಹುತೇಕ ಎಲ್ಲ ಭಾಗಗಳ ಪ್ರಾತಿನಿಧಿತ್ವವಿತ್ತು.
ಸ್ವಯಂಸೇವಕರು ಜನರ ನಡುವೆ ಓಡಾಡುತ್ತಾ ಒಆರ್ಎಸ್, ಬಿಸ್ಕತ್, ಕುಡಿಯುವ ನೀರನ್ನು ವಿತರಿಸುತ್ತಿದ್ದರು. ಕೆಲವರು ಪ್ರಾಥಮಿಕ ಚಿಕಿತ್ಸೆಯ ವ್ಯವಸ್ಥೆಯನ್ನೂ ಮಾಡಿದ್ದರು. ಜನಸಂದಣಿ ಹೆಚ್ಚಿದ್ದ ಸಂದರ್ಭಗಳಲ್ಲೂ ಪ್ರವೇಶ ಮತ್ತು ನಿರ್ಗಮನಕ್ಕೆ ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ಸರತಿ ಸಾಲು ಪಾಲಿಸುತ್ತಿದ್ದ ದೃಶ್ಯ ಗಮನ ಸೆಳೆಯುತ್ತಿತ್ತು.
ಮನ ಮಥನ | ಮೌನ ಒಪ್ಪದ ಜೆನ್-ಝೀಗಳು: ನೀಟ್ ವಿವಾದದ ಮನೋವಿಜ್ಞಾನ
ವಿದ್ಯಾರ್ಥಿಗಳ ಪ್ರತಿಭಟನೆ
ಗಟ್ಟಿ ಮನೋಬಲ
'ನನ್ನ ಜೇಬಿನಲ್ಲಿ ₹ 600 ಮಾತ್ರ ಇತ್ತು. ಹೆಚ್ಚು ಯೋಚಿಸದೇ ಬಿಹಾರದ ನನ್ನ ಹಳ್ಳಿಯಿಂದ ಇಲ್ಲಿಗೆ ಬಂದೆ. ಇಂದು ನಾನು ಈ ಹೋರಾಟದಲ್ಲಿ ಪಾಲ್ಗೊಳ್ಳದಿದ್ದರೆ ನನ್ನ ನಾಳೆಯೇ ಕತ್ತಲೆಯಾಗುತ್ತದೆ ಎಂಬ ಭಾವನೆ ನನ್ನನ್ನು ಇಲ್ಲಿಗೆ ಕರೆತಂದಿದೆ' ಎಂದು ಬಿಹಾರದ ನೀಟ್ ಅಭ್ಯರ್ಥಿ ರಾಕೇಶ್ ರಾಜಪೂತ್ ಹೇಳಿದರು.
'ನಾನು ಕೋಟಾದಲ್ಲಿ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ನಮ್ಮ ಕುಟುಂಬ ಬೆಳೆದ ಬೆಳೆಯನ್ನು ಮಾರಾಟ ಮಾಡಿ ಬರುವ ಹಣವೇ ನನ್ನ ಶಿಕ್ಷಣಕ್ಕೆ ಖರ್ಚಾಗುತ್ತದೆ. ಪರೀಕ್ಷೆಯೇ ನ್ಯಾಯಯುತವಾಗದಿದ್ದರೆ, ನಾನು ಇಷ್ಟೆಲ್ಲ ವರ್ಷಗಳಿಂದ ಯಾವುದಕ್ಕಾಗಿ ಓದುತ್ತಿದ್ದೇನೆ?' ಎಂದು ಅವರು ಪ್ರಶ್ನಿಸಿದರು.
ರಾಷ್ಟ್ರಗೀತೆ ಹಾಡಿ, ಭದ್ರತಾ ಸಿಬ್ಬಂದಿಯೇ ಅಲುಗಾಡದಂತೆ ಮಾಡಿದ ಜೆನ್ ಝೀಗಳು!ಭಿನ್ನ ಪ್ರತಿಭಟನೆ
'ನೀಟ್ ಅಭ್ಯರ್ಥಿಗಳಿಗೆ ನ್ಯಾಯ ಬೇಕು' ಎನ್ನುವುದು ಪ್ರತಿಭಟನಾ ಸ್ಥಳದಲ್ಲಿ ಮೊಳಗುತ್ತಿದ್ದ ಸಾಮಾನ್ಯ ಘೋಷಣೆಯಾಗಿತ್ತು. ಶಿಕ್ಷಣ ಸಚಿವರ ರಾಜೀನಾಮೆಗಿಂತಲೂ ಹೆಚ್ಚಾಗಿ, ತಪ್ಪು ಮಾಡಿದವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂಬ ಬೇಡಿಕೆಯೇ ಅಲ್ಲಿದ್ದವರಲ್ಲಿ ಹೆಚ್ಚು ಕೇಳಿಬರುತ್ತಿತ್ತು.
'ನನ್ನ ಸ್ಯಾನಿಟರಿ ಪ್ಯಾಡ್ ಸೋರಿಕೆಯಾಗುವುದಿಲ್ಲ; ಆದರೆ ಈ ದೇಶದ ಪರೀಕ್ಷಾ ವ್ಯವಸ್ಥೆ ಸೋರಿಕೆಯಾಗುತ್ತಿದೆ' ಎಂದು ಬರೆಯಲಾಗಿದ್ದ ಫಲಕವೊಂದನ್ನು ವಿದ್ಯಾರ್ಥಿನಿ ಹಿಡಿದಿದ್ದು ಅನೇಕರ ಗಮನ ಸೆಳೆಯಿತು.
ಒಂದು ತುದಿಯಲ್ಲಿ ಹೋರಾಟದ ಪ್ರಮುಖ ಬೇಡಿಕೆಗಳನ್ನು ವಿವರಿಸಿದ ಬೃಹತ್ ಬ್ಯಾನರ್ ಅಳವಡಿಸಲಾಗಿತ್ತು. ಮತ್ತೊಂದು ತುದಿಯ ವೇದಿಕೆಯಲ್ಲಿ ಹೋರಾಟದ ಪ್ರಮುಖ ಮುಖಂಡರ ಜೊತೆಗೆ ಸಂಸದರು, ಶಿಕ್ಷಣ ತಜ್ಞರು, ಸಿನಿಮಾ ಕ್ಷೇತ್ರದ ಗಣ್ಯರು ಹಾಗೂ ಸಾಮಾಜಿಕ ಕಾರ್ಯಕರ್ತರು ಸರದಿಯಲ್ಲಿ ಬಂದು ಭಾಷಣ ಮಾಡುತ್ತಿದ್ದರು.
ಪ್ರತಿಭಟನೆಯ ಸಂದೇಶಗಳು ಕೇವಲ ಶಿಕ್ಷಣ ವ್ಯವಸ್ಥೆಗೆ ಸೀಮಿತವಾಗಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಉಲ್ಲೇಖಗಳೂ ಫಲಕಗಳಲ್ಲಿ ಮತ್ತು ಘೋಷಣೆಗಳಲ್ಲಿ ಕಾಣಿಸುತ್ತಿದ್ದವು.

ವಿದ್ಯಾರ್ಥಿಗಳಿಗೆ ಊಟ ವಿತರಣೆ
'ಪರೀಕ್ಷೆಯನ್ನು ಮತ್ತೊಮ್ಮೆ ನಡೆಸಬಹುದು. ಆದರೆ ಸಾರ್ವಜನಿಕ ಸಂಸ್ಥೆಗಳ ಮೇಲಿನ ವಿಶ್ವಾಸ ಕಳೆದುಹೋದರೆ ಅದನ್ನು ಮರಳಿ ಕಟ್ಟಲು ಬಹಳ ಸಮಯ ಬೇಕಾಗುತ್ತದೆ' ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯೊಬ್ಬರು ಹೇಳಿದರು. ನ್ಯಾಯಯುತ ಅವಕಾಶ ನೀಡಬೇಕಿದ್ದ ವ್ಯವಸ್ಥೆಯೇ ತಮ್ಮನ್ನು ವಂಚಿಸಿದೆ ಎಂಬ ನೋವು ಅವರ ಮಾತುಗಳಲ್ಲಿ ಸ್ಪಷ್ಟವಾಗಿತ್ತು.
ಏಕಕಂಠದ ಪ್ರತಿಜ್ಞೆ
ಸಂಜೆ ಕತ್ತಲೆ ಆವರಿಸುತ್ತಿದ್ದಂತೆ ಸಾವಿರಾರು ಮೊಬೈಲ್ ಫೋನ್ಗಳ ಬೆಳಕು ಜಂತರ್ ಮಂತರ್ ಅನ್ನು ಪುಟ್ಟ ಮೇಣದಬತ್ತಿಗಳ ಬೆಳಕಿನಂತೆ ಪ್ರಕಾಶಮಾನಗೊಳಿಸಿತು. ಯಾರೋ ಒಬ್ಬರು 'ಹಮ್ ಹೊಂಗೇ ಕಾಮ್ಯಾಬ್' ಹಾಡನ್ನು ಆರಂಭಿಸಿದರು. ಕೆಲವೇ ಕ್ಷಣಗಳಲ್ಲಿ ನೂರಾರು ಕಂಠಗಳು ಅದಕ್ಕೆ ಸಾಥ್ ನೀಡಿದವು. ಅದು ಪ್ರತಿಭಟನಾ ಗೀತೆಯಂತೆ ಅಲ್ಲ, ಒಟ್ಟಾಗಿ ಮಾಡಿಕೊಂಡ ಒಂದು ಪ್ರತಿಜ್ಞೆಯಂತೆ ಕೇಳಿಸುತ್ತಿತ್ತು.
'ನಮಗೆ ಪ್ರತಿಭಟನೆ ಮಾಡುವುದು ಇಷ್ಟ ಎಂಬ ಕಾರಣಕ್ಕೆ ನಾವು ಇಲ್ಲಿಲ್ಲ' ಎಂದು ಉತ್ತರ ಪ್ರದೇಶದ ಲಖನೌ ಮೂಲದ ವಿದ್ಯಾರ್ಥಿ ಮೊಹಮ್ಮದ್ ಇರ್ಫಾನ್ ಕೈಗೆ ಕಟ್ಟಿದ್ದ ಬ್ಯಾಂಡೇಜ್ ಸರಿಪಡಿಸಿಕೊಳ್ಳುತ್ತಾ ಹೇಳಿದರು.
'ಈ ಸಮಯದಲ್ಲಿ ಮನೆಯಲ್ಲೇ ಕುಳಿತು ಮುಂದಿನ ಪರೀಕ್ಷೆಗೆ ಓದಬಹುದು. ಆದರೆ ಈಗ ನಾವು ಹಿಂದಿರುಗಿದರೆ ವಿದ್ಯಾರ್ಥಿಗಳನ್ನು ಸುಲಭವಾಗಿ ನಿರ್ಲಕ್ಷಿಸಬಹುದು ಎಂಬ ಸಂದೇಶ ಹೋಗುತ್ತದೆ' ಎಂದರು.
'ನಾವು ಇಷ್ಟು ವರ್ಷ ಕಷ್ಟಪಟ್ಟು ಓದಿದರೆ ಭವಿಷ್ಯ ರೂಪಿಸಬಹುದು ಎಂದು ನಂಬಿದ್ದೇವೆ. ಆ ನಂಬಿಕೆ ಉಳಿಯಬೇಕು ಎಂಬ ಕಾರಣಕ್ಕಾಗಿಯೇ ಈ ಹೋರಾಟ' ಪಂಜಾಬ್ನ ಬಠಿಂಡಾದ ರಿತಿಕಾ ಕೌರ್ ಹೋರಾಟದ ಸಾರವನ್ನು ಒಂದೇ ವಾಕ್ಯದಲ್ಲಿ ಹೇಳಿಬಿಟ್ಟರು.

ಕೈಯಿಂದ ಮಾಡಲಾದ ಫಲಕಗಳು
ಎಫ್ಐಆರ್ ಹಿಂಪಡೆಯದಿದ್ದರೆ ಮತ್ತೆ ಪ್ರತಿಭಟನೆ: ಸಿಜೆಪಿ ಎಚ್ಚರಿಕೆಸಾಂಪ್ರದಾಯಿಕ ಪ್ರತಿಭಟನೆಗಳಿಂತ ಭಿನ್ನ
ಇದು ಸಾಂಪ್ರದಾಯಿಕ ಪ್ರತಿಭಟನೆಯಾಗಿರಲಿಲ್ಲ. ಗಂಭೀರ ಭಾಷಣಗಳ ನಡುವೆ ಹಾಸ್ಯವೂ ಇತ್ತು. ಆದರ್ಶವಾದದ ಮಾತುಗಳ ಜೊತೆ ಜೆನ್-ಝೀ ಶೈಲಿಯ ಮೀಮ್ಗಳೂ ಇದ್ದವು. ಶಿಕ್ಷಣ ವ್ಯವಸ್ಥೆಯನ್ನು ವ್ಯಂಗ್ಯ ಮಾಡುವ ಆ ಮೀಮ್ಗಳು ಯಾರನ್ನೂ ಬಿಡಲಿಲ್ಲ-ಪ್ರಧಾನಿ, ಶಿಕ್ಷಣ ಸಚಿವರು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಲ್ಲರೂ ಅವುಗಳ ಗುರಿಯಾಗಿದ್ದರು.
ಪ್ರತಿಭಟನಾ ಸ್ಥಳದಿಂದ ಮಾಡಲಾದ ಇನ್ಸ್ಟಾಗ್ರಾಮ್ ರೀಲ್ಸ್ ಲಕ್ಷಾಂತರ ಜನರನ್ನು ತಲುಪಿದವು. ಹೀಗಾಗಿ ಜಂತರ್ ಮಂತರ್ನಲ್ಲಿ ನಡೆದದ್ದು ದೆಹಲಿಯ ಗಡಿಯೊಳಗೆ ಸೀಮಿತವಾಗದೆ ದೇಶಾದ್ಯಂತ ಚರ್ಚೆಯ ವಿಷಯವಾಯಿತು.

ವಿದ್ಯಾರ್ಥಿಗಳ-ಪ್ರತಿಭಟನೆ
ಬಿಹಾರದ ಪಟ್ನಾ ಸೇರಿದಂತೆ ಹಲವು ನಗರಗಳಲ್ಲಿ ನಡೆದ ಪ್ರತಿಭಟನೆಗಳೂ ಇದೇ ವೇಳೆ ದೇಶದ ಗಮನ ಸೆಳೆದವು. ಅಲ್ಲಿನ ಪ್ರತಿಭಟನೆಗಳ ಸಹಜತೆ ಮತ್ತು ಸೃಜನಶೀಲತೆ ಕುರಿತು ಜಂತರ್ ಮಂತರ್ನಲ್ಲೂ ವಿದ್ಯಾರ್ಥಿಗಳು ಮಾತನಾಡುತ್ತಿದ್ದರು. ಅದರ ಬಹುಪಾಲು ದೃಶ್ಯಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯೊಂದಿಗೆ ಈ ಹೋರಾಟ ಒಂದು ಹಂತಕ್ಕೆ ಅಂತ್ಯ ಕಂಡಿರಬಹುದು. ಆದರೆ ವಿದ್ಯಾರ್ಥಿಗಳ ಮನದಲ್ಲಿರುವ ಪ್ರಶ್ನೆಗಳು ಇನ್ನೂ ಉಳಿದಿವೆ.
ರಾಜೀನಾಮೆಯಿಂದ ಒಗ್ಗಟ್ಟಿನ ಹೋರಾಟ ಬದಲಾವಣೆ ತರಬಲ್ಲದು ಎಂಬ ವಿಶ್ವಾಸ ಅವರಿಗೆ ಮೂಡಿದೆ. ಆದರೆ ಅವರಿಗೆ ಬೇಕಾಗಿರುವುದು ಕೇವಲ ಒಂದು ರಾಜೀನಾಮೆಯಲ್ಲ. ವಿಶೇಷ ಕಾರ್ಯಪಡೆಯ ಘೋಷಣೆಯೂ ಅಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಶಿಕ್ಷಣ ವ್ಯವಸ್ಥೆಯ ಮೇಲೆ ಮತ್ತೆ ನಂಬಿಕೆ ಇಡಬಹುದಾದ ಪರಿಸ್ಥಿತಿಯನ್ನು ನಿರ್ಮಿಸುವ ಉತ್ತರಗಳನ್ನು ಅವರು ಇನ್ನೂ ನಿರೀಕ್ಷಿಸುತ್ತಿದ್ದಾರೆ.
(ಲೇಖಕ: ಡೆಕ್ಕನ್ ಹೆರಾಲ್ಡ್ ಆನ್ಲೈನ್ ಸಂಪಾದಕ)
ಸಂತೋಷ ಕೂಟದ ಬಗ್ಗೆ ಬಿಜೆಪಿ ಟೀಕೆ: ಆಂಟಿ, ಅಂಕಲ್ಗಳು ಹೀಗೇ ಎಂದ ಸಿಜೆಪಿ
