Dailyhunt Logo
  • Light mode
    Follow system
    Dark mode
    • Play Story
    • App Story
ಯುದ್ಧಭೂಮಿಯ ಹೊರಗೆ ಗುಪ್ತ ಸಂಘರ್ಷ: ಟ್ರಂಪ್-ಸಲ್ಮಾನ್ ನಡುವೆ ಬಿರುಕು ಮೂಡಿದ್ದೇಕೆ?

ಯುದ್ಧಭೂಮಿಯ ಹೊರಗೆ ಗುಪ್ತ ಸಂಘರ್ಷ: ಟ್ರಂಪ್-ಸಲ್ಮಾನ್ ನಡುವೆ ಬಿರುಕು ಮೂಡಿದ್ದೇಕೆ?

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಯುದ್ಧಭೂಮಿಯ ಹೊರಗೆ ಗುಪ್ತ ಸಂಘರ್ಷ: ಟ್ರಂಪ್-ಸಲ್ಮಾನ್ ನಡುವೆ ಬಿರುಕು ಮೂಡಿದ್ದೇಕೆ?

ಒಂದು ಸಾಲಿನಲ್ಲಿಅಮೆರಿಕದ ಮಿಲಿಟರಿ ಕಾರ್ಯಾಚರಣೆಯ ವಿಷಯದಲ್ಲಿ ಸೌದಿ ಅರೇಬಿಯಾ ಮತ್ತು ಅಮೆರಿಕದ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಇದು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಹಾಗೂ ಭದ್ರತಾ ಸಂಬಂಧದಲ್ಲಿನ ಬಿರುಕನ್ನು ಸಾಬೀತಪಡಿಸಿದೆ.

ಪ್ರಮುಖ ಪ್ರಶ್ನೋತ್ತರ


ಅಮೆರಿಕದ 'ಪ್ರಾಜೆಕ್ಟ್ ಫ್ರೀಡಂ' ಕಾರ್ಯಾಚರಣೆಗೆ ಸೌದಿ ಅರೇಬಿಯಾ ಅಡ್ಡಿಪಡಿಸಿದ್ದೇಕೆ?

ಈ ಕಾರ್ಯಾಚರಣೆಯ ಬಗ್ಗೆ ಸೌದಿಗೆ ಮೊದಲೇ ಮಾಹಿತಿ ನೀಡದಿದ್ದರಿಂದ ಮತ್ತು ತನ್ನ ವಾಯುಪ್ರದೇಶವನ್ನು ಬಳಸಿದರೆ ಇರಾನ್‌ನ ಪ್ರತೀಕಾರದ ದಾಳಿಗೆ ತಾನು ಗುರಿಯಾಗಬಹುದು ಎಂಬ ಆತಂಕದಿಂದ ಸೌದಿ ಅನುಮತಿ ನೀಡಲಿಲ್ಲ.


ಸೌದಿ ಅರೇಬಿಯಾ ಮತ್ತು ಅಮೆರಿಕದ ನಡುವೆ ಭಿನ್ನಾಭಿಪ್ರಾಯ ಉಂಟಾಗಲು ಮುಖ್ಯ ಕಾರಣವೇನು?

ಮಧ್ಯಪ್ರಾಚ್ಯದ ಭದ್ರತಾ ವಿಷಯಗಳಲ್ಲಿ, ವಿಶೇಷವಾಗಿ ಇರಾನ್‌ನೊಂದಿಗಿನ ಸಂಘರ್ಷದಲ್ಲಿ ಅಮೆರಿಕದ ಮೇಲೆ ಸಂಪೂರ್ಣ ಅವಲಂಬಿತವಾಗುವ ಬದಲು ತನ್ನದೇ ಆದ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಲು ಸೌದಿ ಅರೇಬಿಯಾ ಬಯಸಿದೆ.


2019ರ ಘಟನೆಯು ಸೌದಿ ಅರೇಬಿಯಾದ ಅನುಮಾನಕ್ಕೆ ಹೇಗೆ ಕಾರಣವಾಯಿತು?

2019ರಲ್ಲಿ ಸೌದಿಯ ತೈಲ ಘಟಕಗಳ ಮೇಲೆ ದಾಳಿ ನಡೆದಾಗ ಅಮೆರಿಕ ಸೂಕ್ತ ಸೇನಾ ಪ್ರತಿದಾಳಿ ನಡೆಸಲಿಲ್ಲ. ಇದರಿಂದಾಗಿ ಸಂಕಷ್ಟದ ಸಮಯದಲ್ಲಿ ಅಮೆರಿಕ ತನ್ನ ಬೆಂಬಲಕ್ಕೆ ಬರುವುದಿಲ್ಲ ಎಂಬ ಸಂಶಯ ಸೌದಿ ನಾಯಕತ್ವದಲ್ಲಿ ಮೂಡಿದೆ.


ಅಮೆರಿಕ ಮತ್ತು ಸೌದಿ ಅರೇಬಿಯಾ ನಡುವಿನ ಸಂಬಂಧ ಪ್ರಸ್ತುತ ಯಾವ ಸ್ಥಿತಿಯಲ್ಲಿದೆ?

ಯುದ್ಧದ ಸಂದರ್ಭದಲ್ಲಿ ಭಿನ್ನಾಭಿಪ್ರಾಯಗಳು ಜಗಜ್ಜಾಹೀರಾದರೂ, ನಾಗರಿಕ ಅಣುಶಕ್ತಿ ಯೋಜನೆ ಮತ್ತು ಶಸ್ತ್ರಾಸ್ತ್ರಗಳ ಮಾರಾಟದಂತಹ ಕ್ಷೇತ್ರಗಳಲ್ಲಿ ಎರಡೂ ದೇಶಗಳ ಪಾಲುದಾರಿಕೆ ಇನ್ನೂ ಮುಂದುವರಿದಿದೆ.


ಇರಾನ್‌ನೊಂದಿಗೆ ಹೊಸ ಒಪ್ಪಂದಕ್ಕೆ ಅಮೆರಿಕ ಮುಂದಾಗಿರುವುದನ್ನು ಸೌದಿ ಹೇಗೆ ನೋಡುತ್ತಿದೆ?

ಸೌದಿ ಅರೇಬಿಯಾ ಇರಾನ್‌ನೊಂದಿಗೆ ರಾಜತಾಂತ್ರಿಕ ಒಪ್ಪಂದವನ್ನು ಸ್ವಾಗತಿಸಿದರೂ, ಒಪ್ಪಂದದ ಫಲಿತಾಂಶದ ಬಗ್ಗೆ ಯಾವುದೇ ಹೆಚ್ಚಿನ ಭರವಸೆ ಹೊಂದಿಲ್ಲದೆ ಕಾದು ನೋಡುವ ಧೋರಣೆಯನ್ನು ತಾಳಿದೆ.

ಪ್ರಮುಖ ಅಂಕಿಅಂಶಗಳು

48 ಗಂಟೆಅಮೆರಿಕದ ಕಾರ್ಯಾಚರಣೆ ಸ್ಥಗಿತಗೊಂಡ ಸಮಯ2 ಬಿಲಿಯನ್ ಡಾಲರ್ಕುಶ್ನರ್ ಸಂಸ್ಥೆಯಲ್ಲಿ ಸೌದಿ ಹೂಡಿಕೆ₹1.89 ಲಕ್ಷ ಕೋಟಿಟ್ರಂಪ್ ಗಳಿಸಿದ ಆದಾಯಜೂನ್ 14ಕದನ ವಿರಾಮ ಘೋಷಣೆಯಾದ ದಿನಾಂಕ

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಇರಾನ್ ಯುದ್ಧಭೂಮಿಯಲ್ಲಿ ಕ್ಷಿಪಣಿಗಳು ಸಿಡಿಯುತ್ತಿದ್ದವು. ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳು ಸಿಲುಕಿದ್ದವು. ಆದರೆ ಇದೇ ಸಮಯದಲ್ಲಿ, ಯುದ್ಧಭೂಮಿಯಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿ ಮತ್ತೊಂದು ಸಂಘರ್ಷ ಶುರುವಾಗಿತ್ತು. ಅದು ಬಂದೂಕುಗಳದ್ದಲ್ಲ; ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ನಡುವಿನ ರಾಜತಾಂತ್ರಿಕ ಸಂಘರ್ಷವಾಗಿತ್ತು.

ಕತಾರ್‌ ಉಡುಗೊರೆ ನೀಡಿದ್ದ ವಿಮಾನದಲ್ಲಿ ಚೊಚ್ಚಲ ಹಾರಾಟ ನಡೆಸಿದ ಟ್ರಂಪ್

ಯುದ್ಧದ ಆರಂಭಿಕ ಹಂತದಲ್ಲೇ, ಇರಾನ್ ಪರಿಣಾಮಕಾರಿಯಾಗಿ ಮುಚ್ಚಿದ್ದ ಹೊರ್ಮುಜ್ ಜಲಸಂಧಿಯ ಮೂಲಕ ವಾಣಿಜ್ಯ ಹಡಗುಗಳ ಸಂಚಾರವನ್ನು ಪುನರಾರಂಭಿಸಲು ಅಮೆರಿಕ ಸೇನಾ ಕಾರ್ಯಾಚರಣೆಗೆ ಮುಂದಾಯಿತು. ತಾತ್ಕಾಲಿಕ ಕದನ ವಿರಾಮದ ಅವಧಿಯಲ್ಲಿ ಹಡಗುಗಳಿಗೆ ಅಮೆರಿಕದ ನೌಕಾಪಡೆ ಹಾಗೂ ವಾಯುಪಡೆ ಭದ್ರತೆ ಒದಗಿಸಲಿದ್ದು, ಇರಾನ್‌ನ ದಾಳಿಯನ್ನು ತಡೆಯುತ್ತೇವೆ ಎಂದು ಅಮೆರಿಕ ಹೇಳಿತ್ತು. ಆದರೆ ಕಾರ್ಯಾಚರಣೆ ಘೋಷಣೆಯಾದ ಕೆಲವೇ ಹೊತ್ತಿನಲ್ಲಿ ಅಮೆರಿಕದ ಯೋಜನೆಗೆ ಅನಿರೀಕ್ಷಿತ ಅಡ್ಡಿಯೊಂದು ಎದುರಾಯಿತು.

'ಪ್ರಾಜೆಕ್ಟ್ ಫ್ರೀಡಂ' ಎನ್ನುವ ಆ ಕಾರ್ಯಾಚರಣೆಗೆ, ತನ್ನ ವಾಯುಪ್ರದೇಶ ಬಳಸಕೂಡದು ಎಂದು ಸೌದಿ ಅರೇಬಿಯಾ ಹೇಳಿತು. ಈ ಕಾರ್ಯಾಚರಣೆ ಬಗ್ಗೆ ಮೊದಲೇ ತಿಳಿಸಿಲ್ಲ ಎನ್ನುವುದು ಸೌದಿಯ ಅಸಮಾಧಾನಕ್ಕೆ ಕಾರಣ. ಇದು ಟ್ರಂಪ್ ಆಡಳಿತಕ್ಕೆ ದೊಡ್ಡ ಹಿನ್ನಡೆಯಾಯಿತು.

ಆಯಾತೊಲ್ಲಾ ಖಮೇನಿ ಅಂತ್ಯ ಸಂಸ್ಕಾರದ ಬಳಿಕ ಇರಾನ್-ಅಮೆರಿಕ ನಡುವೆ ಮುಂದಿನ ಮಾತುಕತೆ

ಸಲ್ಮಾನ್ ಮನವೊಲಿಸಲು ಅಮೆರಿಕ ಯತ್ನ

ಕಾರ್ಯಾಚರಣೆ ಆರಂಭವಾದ ಮೊದಲ ದಿನವೇ (ಮೇ 4) ಕೋಪೋದ್ರಿಕ್ತರಾಗಿದ್ದ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಟ್ರಂಪ್‌ಗೆ ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದರು. ನಂತರದ ಎರಡು ದಿನಗಳಲ್ಲಿಯೂ ಅವರ ಮಾತುಕತೆಯಲ್ಲಿ ಅಸಮಾಧಾನವಿತ್ತು ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ಇದರ ಬೆನಲ್ಲೇ, ಶ್ವೇತಭವನದ ಬಹುತೇಕ ಹಿರಿಯ ಅಧಿಕಾರಿಗಳು ಸೌದಿ ನಾಯಕನನ್ನು ಮನವೊಲಿಸಲು ಮುಂದಾದರು. ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಪ್ರತ್ಯೇಕವಾಗಿ ಯುವರಾಜರೊಂದಿಗೆ ಮಾತನಾಡಿದರು. ಮಧ್ಯಪ್ರಾಚ್ಯದ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್‌ಕಾಫ್ ಹಾಗೂ ಟ್ರಂಪ್ ಅವರ ಅಳಿಯ ಜರೆದ್ ಕುಶ್ನರ್ ಸಹ ಸಂಪರ್ಕಿಸಿದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಮಾರ್ಕೊ ರೂಬಿಯೊ ತಮ್ಮ ಸೌದಿಯ ಭದ್ರತಾ ಸಲಹೆಗಾರರೊಂದಿಗೆ ಮಾತುಕತೆ ನಡೆಸಿದರು.

ಆದರೆ ಎಲ್ಲ ಪ್ರಯತ್ನಗಳೂ ವಿಫಲವಾದವು.

ಅಮೆರಿಕದ ಕಾರ್ಯಾಚರಣೆಯಿಂದ ಯುದ್ಧ ಮತ್ತಷ್ಟು ವಿಸ್ತರಿಸಬಹುದು ಎಂಬ ಆತಂಕದಲ್ಲಿದ್ದ ಸಲ್ಮಾನ್ ತಮ್ಮ ನಿಲುವಿನಲ್ಲಿ ಗಟ್ಟಿಯಾಗಿ ನಿಂತಿದ್ದರು. ಪರಿಣಾಮ ಕಾರ್ಯಾಚರಣೆ ಆರಂಭವಾಗಿ ಕೇವಲ 48 ಗಂಟೆಗಳಲ್ಲೇ ಅಮೆರಿಕ 'ಪ್ರಾಜೆಕ್ಟ್ ಫ್ರೀಡಂ' ಅನ್ನು ಸ್ಥಗಿತಗೊಳಿಸಬೇಕಾಯಿತು.

ಎರಡನೇ ಬಾರಿ ಅಧ್ಯಕ್ಷರಾದ ಬಳಿಕ ₹1.89 ಲಕ್ಷ ಕೋಟಿ ಆದಾಯ ಗಳಿಸಿದ ಡೊನಾಲ್ಡ್ ಟ್ರಂಪ್

ಸೌದಿ ಹಿಂದೆ ಸರಿದಿದ್ದೇಕೆ?

ಇದು ಕೇವಲ ವಾಯುಪ್ರದೇಶ ಬಳಸುವ ಪ್ರಶ್ನೆಯಾಗಿರಲಿಲ್ಲ. ಅಮೆರಿಕದ ಯೋಜನೆಗೆ ಅನುಮತಿ ನೀಡಿದರೆ, ಇರಾನ್‌ನ ಪ್ರತೀಕಾರದ ದಾಳಿಗೆ ನಾವೇ ಗುರಿಯಾಗಬಹುದು ಎನ್ನುವ ಆತಂಕ ಸೌದಿಗೆ ಇತ್ತು.

'ಅಮೆರಿಕದ ಆಡಳಿತದ ಮೇಲಿನ ವಿಶ್ವಾಸವನ್ನು ಸಲ್ಮಾನ್ ಕಳೆದುಕೊಂಡಿದ್ದರು. ತಮ್ಮ ವಾಯುಪ್ರದೇಶವನ್ನು ಅಮೆರಿಕ ಬಳಸಲು ಅವಕಾಶ ನೀಡಿದರೆ, ಇರಾನ್‌ನಿಂದ ಇನ್ನೂ ಭಾರೀ ದಾಳಿಗೆ ಗುರಿಯಾಗುತ್ತೇವೆ ಎಂಬ ಭಯ ಅವರಲ್ಲಿತ್ತು' ಎಂದು ವಾಷಿಂಗ್ಟನ್‌ನ ಅರಬ್ ಗಲ್ಫ್ ಸ್ಟೇಟ್ಸ್ ಇನ್‌ಸ್ಟಿಟ್ಯೂಟ್‌ನ ಹಿರಿಯ ಸಂಶೋಧಕ ಹುಸೇನ್ ಇಬಿಶ್ ಹೇಳಿದ್ದಾರೆ.

ಈ ಘಟನೆ ಅಮೆರಿಕ ಮತ್ತು ಸೌದಿ ಅರೇಬಿಯಾದ ನಡುವಿನ ಭಿನ್ನಾಭಿಪ್ರಾಯವನ್ನು ಬಹಿರಂಗಪಡಿಸಿತು. ವಿಶೇಷವಾಗಿ ಇರಾನ್ ಮತ್ತು ಇಸ್ರೇಲ್‌ಗೆ ಸಂಬಂಧಿಸಿದ ಭದ್ರತಾ ವಿಷಯಗಳಲ್ಲಿ ಎರಡೂ ದೇಶಗಳ ಅಭಿಪ್ರಾಯ ಒಂದೇ ಅಲ್ಲ ಎನ್ನುವುದನ್ನೂ ಸ್ಪಷ್ಟಪಡಿಸಿತು.

ಮಧ್ಯಪ್ರಾಚ್ಯದ ಭದ್ರತೆಗೆ ಅಮೆರಿಕದ ಮೇಲಷ್ಟೇ ಅವಲಂಬಿತವಾಗಿರುವುದಕ್ಕಿಂತ, ತನ್ನದೇ ಲೆಕ್ಕಾಚಾರದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುವ ನಿಲುವು ನಮ್ಮದು ಎನ್ನುವ ಸಂದೇಶವನ್ನೂ ಸೌದಿ ಅರೇಬಿಯಾ ನೀಡಿತು.

ಟ್ರಂಪ್ ಮತ್ತು ಸಲ್ಮಾನ್ ಭಿನ್ನ ದಾರಿ

ಫೆಬ್ರುವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಆರಂಭಿಸಿದ ಬಳಿಕ, ಸೌದಿ ಅರೇಬಿಯಾ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸಿತು. ಅಮೆರಿಕಕ್ಕೆ ರಾಜತಾಂತ್ರಿಕ ಮತ್ತು ಸೇನಾ ಬೆಂಬಲ ನೀಡಿ, ಇರಾನ್‌ನ ದಾಳಿಗೆ ಗುರಿಯಾಯಿತು. ಆದರೆ ಯುದ್ಧ ಮತ್ತಷ್ಟು ವಿಸ್ತರಿಸಬಹುದು ಎಂದು ಕಂಡಾಗ, ಟ್ರಂಪ್ ಆಡಳಿತದ ಪ್ರತಿಯೊಂದು ನಿರ್ಧಾರವನ್ನೂ ಬೆಂಬಲಿಸುವ ಬದಲು ತನ್ನದೇ ನಿಲುವು ತೆಗೆದುಕೊಳ್ಳಲು ಆರಂಭಿಸಿತು.

ಇರಾನ್‌ನ ಅಣು ಕಾರ್ಯಕ್ರಮವನ್ನು ಕೇಂದ್ರವಾಗಿಟ್ಟುಕೊಂಡು ಹೊಸ ರಾಜತಾಂತ್ರಿಕ ಒಪ್ಪಂದಗಳತ್ತ ಗಮನ ಹರಿಸುತ್ತಿದ್ದರೆ, ಸೌದಿ ಅರೇಬಿಯಾಕ್ಕೆ ಹೊರ್ಮುಜ್ ಜಲಸಂಧಿಯ ಮೇಲಿನ ಇರಾನ್‌ನ ನಿಯಂತ್ರಣ, ಅದರ ಕ್ಷಿಪಣಿ ಸಾಮರ್ಥ್ಯ ಮತ್ತು ಬಂಡುಕೋರ ಗುಂಪುಗಳಿಗೆ ನೀಡುತ್ತಿರುವ ಬೆಂಬಲವೇ ದೊಡ್ಡ ಭದ್ರತಾ ಸವಾಲುಗಳಾಗಿದ್ದವು.

2023ರಲ್ಲಿ ಚೀನಾದ ಮಧ್ಯಸ್ಥಿಕೆಯಲ್ಲಿ ಸೌದಿ ಅರೇಬಿಯಾ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಸಂಬಂಧ ಮರುಸ್ಥಾಪನೆಯಾದ ಬಳಿಕ, ಎರಡೂ ದೇಶಗಳ ನಡುವೆ ನೇರ ಮಾತುಕತೆಗೆ ದಾರಿ ತೆರೆಯಿತು. ಯುದ್ಧದ ಸಂದರ್ಭದಲ್ಲೂ ಸೌದಿ ಅರೇಬಿಯಾ ಹೊರ್ಮುಜ್ ಜಲಸಂಧಿ, ಇರಾನ್‌ನ ಕ್ಷಿಪಣಿ ಕಾರ್ಯಕ್ರಮ ಮತ್ತು ಬಂಡುಕೋರ ಗುಂಪುಗಳ ಕುರಿತು ನೇರವಾಗಿ ಇರಾನ್‌ನೊಂದಿಗೆ ಚರ್ಚೆ ನಡೆಸಿತು. ಇದೇ ವೇಳೆ ಚೀನಾ ಮತ್ತು ಪಾಕಿಸ್ತಾನದೊಂದಿಗಿನ ತನ್ನ ಸಂಬಂಧವನ್ನೂ ಮತ್ತಷ್ಟು ಬಲಪಡಿಸಿತು.

ಸೀಮೋಲ್ಲಂಘನ ಅಂಕಣ | ಪಶ್ಚಿಮ ಏಷ್ಯಾ: ಶಾಂತಿ ಮರೀಚಿಕೆ?

ಸೌದಿಯ ರಾಜತಾಂತ್ರಿಕ ಆಟ

ಇರಾನ್ ಯುದ್ಧದ ಅವಧಿಯಲ್ಲಿ ಸಲ್ಮಾನ್ ಒಂದೇ ನಿಲುವು ತಾಳಲಿಲ್ಲ. ಯುದ್ಧ ಆರಂಭವಾಗುವ ಮೊದಲೇ ಸಂಘರ್ಷದ ಅಪಾಯಗಳ ಬಗ್ಗೆ ಟ್ರಂಪ್ ಅವರಿಗೆ ಎಚ್ಚರಿಕೆ ನೀಡಿದ್ದರು. ಇರಾನ್ ಸರ್ಕಾರವನ್ನು ಉರುಳಿಸುವ ಗುರಿಯೊಂದಿಗೆ ಯುದ್ಧ ಮುಂದುವರಿಸಬೇಕು ಎಂದು ಸಲ್ಮಾನ್ ಟ್ರಂಪ್ ಅವರಿಗೆ ಸಲಹೆ ನೀಡಿದ್ದರು ಎಂದು ಅಮೆರಿಕ ಅಧಿಕಾರಿಗಳು ಹೇಳಿದ್ದಾರೆ. ಆದರೆ ಇದನ್ನು ಸೌದಿ ಅರೇಬಿಯಾ ತಳ್ಳಿಹಾಕಿದೆ.

ಯುದ್ಧ ಮುಂದುವರಿದಂತೆ ಇರಾನ್‌ನ ಸಾಮರ್ಥ್ಯ ನಿರೀಕ್ಷಿಸಿದಷ್ಟು ಬೇಗ ಕುಂದಲಿಲ್ಲ. ಆಗ ಸಲ್ಮಾನ್, ಯುದ್ಧವನ್ನು ಮುಂದುವರಿಸುವ ಬದಲು ರಾಜತಾಂತ್ರಿಕ ಪರಿಹಾರದತ್ತ ಒಲವು ತೋರಿದರು. ಯುದ್ಧದ ಒಂದು ಹಂತದಲ್ಲಿ ಸೌದಿ ಅರೇಬಿಯಾ ಮತ್ತು ಯುಎಇ ಸೇರಿ ಇರಾನ್ ವಿರುದ್ಧ ರಹಸ್ಯ ಪ್ರತಿದಾಳಿಗಳನ್ನು ನಡೆಸಿದವು. ಯುಎಇಗೆ ಯುದ್ಧ ಮುಂದುವರಿಸುವ ಉತ್ಸಾಹ ಇದ್ದರೂ, ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಅದು ಬೇಕಿರಲಿಲ್ಲ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ಅದೇ ವೇಳೆ, ಅಮೆರಿಕ-ಇರಾನ್ ನಡುವೆ ಮಧ್ಯಸ್ಥಿಕೆ ವಹಿಸುತ್ತಿದ್ದ ಕತಾರ್ ಮತ್ತು ಓಮಾನ್‌ಗಿಂತ ಸೌದಿಯ ನಿಲುವು ಹೆಚ್ಚು ದೃಢವಾಗಿತ್ತು. ಸೌದಿ ಅರೇಬಿಯಾ ಯುದ್ಧವನ್ನು ವಿಸ್ತರಿಸಲು ಬಯಸಲಿಲ್ಲ. ಆದರೆ ತನ್ನ ಭದ್ರತಾ ಹಿತಾಸಕ್ತಿಗಳಲ್ಲಿ ರಾಜಿ ಮಾಡಿಕೊಳ್ಳುವ ರಾಜತಾಂತ್ರಿಕ ನಿಲುವನ್ನೂ ತಾಳಲಿಲ್ಲ.

ಕದನ ವಿರಾಮದ ನಂತರವೂ ಗಲ್ಫ್ ರಾಷ್ಟ್ರಗಳ ಆತಂಕ

ಜೂನ್ 14ರಂದು ನಡೆದ ಮೊದಲ ಕದನ ವಿರಾಮ ಘೋಷಣೆ ಬಳಿಕ, ಟ್ರಂಪ್ ಆಡಳಿತವು ಇರಾನ್‌ನೊಂದಿಗೆ ಹೊಸ ಒಪ್ಪಂದಕ್ಕೆ ಪ್ರಯತ್ನಿಸುತ್ತಿದೆ. ಆದರೆ ಸೌದಿ ಅರೇಬಿಯಾ ಮತ್ತು ಇತರ ಗಲ್ಫ್ ರಾಷ್ಟ್ರಗಳ ಚಿಂತೆ ಬೇರೆ. ಭವಿಷ್ಯದಲ್ಲಿ ಮತ್ತೆ ಯುದ್ಧ ನಡೆದರೆ ಅದರ ಪರಿಣಾಮದಿಂದ ತಮ್ಮನ್ನು ಹೇಗೆ ರಕ್ಷಿಸಿಕೊಳ್ಳುವುದು ಹೇಗೆ ಎನ್ನುವುದು ಅವುಗಳ ಚಿಂತೆ. ಇದಕ್ಕೆ ಕಾರಣವೂ ಇದೆ. ಇದಕ್ಕೆ ಕಾರಣ, ಯುದ್ಧದ ವೇಳೆ ಟ್ರಂಪ್ ಅವರ ನಿಲುವು ಹಲವು ಬಾರಿ ಬದಲಾಗಿತ್ತು. ಆದ್ದರಿಂದ ಮುಂದೆ ಮತ್ತೊಮ್ಮೆ ಸಂಘರ್ಷ ನಡೆದರೆ ಅಮೆರಿಕ ಕೊನೆಯವರೆಗೂ ತಮ್ಮ ಬೆಂಬಲಕ್ಕೆ ನಿಲ್ಲುತ್ತದೆಯೇ ಎಂಬ ಅನುಮಾನ ಸೌದಿ ನಾಯಕತ್ವದಲ್ಲಿ ಮೂಡಿದೆ.

2019ರ ಆ ಅನುಭವ

ಸೌದಿ ಅರೇಬಿಯಾಗೆ ಈ ಅನುಮಾನ ಬರಲು ಈ ಹಿಂದಿನ ಅನುಭವವೇ ಕಾರಣ. 2019ರಲ್ಲಿ ಸೌದಿ ಅರೇಬಿಯಾದ ತೈಲ ಘಟಕಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆದಾಗ, ಅದರ ಹಿಂದೆ ಇರಾನ್‌ನ ಕೈವಾಡವಿದೆ ಎಂದು ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಆರೋಪಿಸಿದ್ದವು. ಆದರೆ ಟ್ರಂಪ್ ಆಡಳಿತವು ಯಾವುದೇ ಸೇನಾ ಪ್ರತಿದಾಳಿ ನಡೆಸಲಿಲ್ಲ. ಅಂದಿನಿಂದಲೇ, ಸಂಕಷ್ಟದ ಸಮಯದಲ್ಲಿ ಅಮೆರಿಕ ಕೊನೆಯವರೆಗೂ ತಮ್ಮ ಬೆಂಬಲಕ್ಕೆ ನಿಲ್ಲುತ್ತದೆಯೇ ಎಂಬ ಅನುಮಾನ ಸೌದಿ ನಾಯಕತ್ವದಲ್ಲಿ ಮೂಡಿತ್ತು.

ಈ ಅನುಮಾನವನ್ನು ವಿಶ್ಲೇಷಕ ಹುಸೇನ್ ಇಬಿಶ್ ಒಂದು ಉದಾಹರಣೆಯ ಮೂಲಕ ವಿವರಿಸುತ್ತಾರೆ.

'ನಾವು ಮೊದಲು ದೊಡ್ಡ ಯುದ್ಧವನ್ನು ಆರಂಭಿಸುತ್ತೇವೆ. ನಂತರ ಅದರಲ್ಲಿ ಆಸಕ್ತಿ ಕಳೆದುಕೊಂಡು ಹೊರಟುಬಿಡುತ್ತೇವೆ. ಇದು 'ಲೂಸಿ ಮತ್ತು ಫುಟ್‌ಬಾಲ್' ಕಥೆಯಂತಿದೆ. ಈಗ ಸೌದಿಯವರು ನೆಲದ ಮೇಲೆ ಬಿದ್ದಿರುವ ಚಾರ್ಲಿ ಬ್ರೌನ್‌ನ ಸ್ಥಿತಿಯಲ್ಲಿದ್ದಾರೆ'

ಅಂದರೆ, ಸಂಕಷ್ಟದ ಸಮಯದಲ್ಲಿ ಅಮೆರಿಕ ಕೊನೆಯವರೆಗೂ ತನ್ನ ಮಿತ್ರರಾಷ್ಟ್ರಗಳ ಬೆಂಬಲಕ್ಕೆ ನಿಲ್ಲುತ್ತದೆಯೇ ಎಂಬ ವಿಶ್ವಾಸ ಸೌದಿ ಅರೇಬಿಯಾಗೆ ಇಲ್ಲ ಎನ್ನುವುದು ಅವರ ಅಭಿಪ್ರಾಯ.

ಯುಎಇಯಲ್ಲಿ ಭಾರತೀಯರಿಗೆ ಪಾಸ್‌ಪೋರ್ಟ್, ವೀಸಾ ಸೇವೆ ಸಮಸ್ಯೆ: ಕಾರಣ ಏನು?

ಸಂಬಂಧ ಗಟ್ಟಿಯಾಗಿದೆ ಎನ್ನುತ್ತಿರುವ ಶ್ವೇತಭವನ

ಇಷ್ಟೆಲ್ಲಾ ಬೆಳವಣಿಗೆಗಳ ನಡುವೆಯೂ ಸೌದಿ ಆರೇಬಿಯಾ ಜೊತೆ ಸಂಬಂಧ ಹದಗೆಟ್ಟಿಲ್ಲ ಎಂಬ ಸಂದೇಶ ನೀಡಲು ಶ್ವೇತಭವನ ಪ್ರಯತ್ನಿಸುತ್ತಿದೆ.

'ಅಧ್ಯಕ್ಷ ಟ್ರಂಪ್ ಅವರಿಗೆ ಸೌದಿ ಅರೇಬಿಯಾದೊಂದಿಗೆ ಅತ್ಯುತ್ತಮ ಸಂಬಂಧವಿದೆ. ವಿವಿಧ ಅಭಿಪ್ರಾಯಗಳನ್ನು ಅವರು ಆಲಿಸುತ್ತಾರೆ. ಪ್ರಾದೇಶಿಕ ಪಾಲುದಾರ ರಾಷ್ಟ್ರಗಳ ಸಲಹೆಗಳಿಗೂ ಮಹತ್ವ ನೀಡುತ್ತಾರೆ. ಆದರೆ ಅಂತಿಮವಾಗಿ ಅಮೆರಿಕದ ಜನರ ಹಿತಾಸಕ್ತಿ ಮತ್ತು ರಾಷ್ಟ್ರೀಯ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ' ಎಂದು ಶ್ವೇತಭವನದ ವಕ್ತಾರೆ ಅನ್ನಾ ಕೆಲ್ಲಿ ಹೇಳಿದ್ದಾರೆ.

ಭಿನ್ನಾಭಿಪ್ರಾಯಗಳ ನಡುವೆಯೂ ಪಾಲುದಾರಿಕೆ

ಯುದ್ಧದ ವೇಳೆ ಭಿನ್ನಾಭಿಪ್ರಾಯಗಳು ಬಹಿರಂಗವಾದರೂ, ಅಮೆರಿಕ-ಸೌದಿ ಸಂಬಂಧ ದುರ್ಬಲಗೊಂಡಿದೆ ಎನ್ನಲು ಸಾಧ್ಯವಿಲ್ಲ. ಕಳೆದ ವರ್ಷ ಎರಡೂ ದೇಶಗಳು ಸೌದಿ ಅರೇಬಿಯಾದಲ್ಲಿ ನಾಗರಿಕ ಬಳಕೆಯ ಅಣುಶಕ್ತಿ ಯೋಜನೆ ಆರಂಭಿಸಲು ಒಪ್ಪಿಕೊಂಡಿವೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅದರ ಅನುಷ್ಠಾನದ ಕುರಿತು ಹಲವು ತಿಂಗಳುಗಳಿಂದ ಮಾತುಕತೆ ನಡೆಯುತ್ತಿದ್ದು, ಟ್ರಂಪ್ ಆಡಳಿತ ಶೀಘ್ರದಲ್ಲೇ ಈ ಪ್ರಸ್ತಾವನೆಯನ್ನು ಅಮೆರಿಕ ಸಂಸತ್‌ಗೆ ಸಲ್ಲಿಸುವ ಸಾಧ್ಯತೆಯಿದೆ.

ಆದರೆ ಈ ಯೋಜನೆಯ ಮೂಲಕ ಸೌದಿ ಅರೇಬಿಯಾ ಮುಂದಿನ ದಿನಗಳಲ್ಲಿ ಅಣ್ವಸ್ತ್ರ ಅಭಿವೃದ್ಧಿಪಡಿಸುವ ಪ್ರಯತ್ನ ನಡೆಸಬಹುದೇ ಎಂಬ ಆತಂಕವನ್ನು ಕೆಲವು ಅಮೆರಿಕದ ಸಂಸದರು ಮತ್ತು ಇಸ್ರೇಲ್ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಇದರ ಜೊತೆಗೆ, ಹೊರ್ಮುಜ್ ಜಲಸಂಧಿಗೆ ಪರ್ಯಾಯವಾಗುವ ಭೂಮಾರ್ಗ ಸಾರಿಗೆ ಜಾಲದ ಅಭಿವೃದ್ಧಿ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಸೌದಿ ಅರೇಬಿಯಾ ಇನ್ನೂ ಅಮೆರಿಕದ ಶಸ್ತ್ರಾಸ್ತ್ರಗಳ ಅತಿದೊಡ್ಡ ಖರೀದಿದಾರ ರಾಷ್ಟ್ರಗಳಲ್ಲಿ ಒಂದಾಗಿದೆ.

ಒಂದು ವರ್ಷದಲ್ಲಿ ಮೂರು ಪಟ್ಟು ಆದಾಯ: ಟ್ರಂಪ್ ಸಂಪತ್ತಿನ ಹಿಂದಿನ ಕ್ರಿಪ್ಟೊ ಕಥೆ

ಕುಶ್ನರ್- ಸಲ್ಮಾನ್ ಸ್ನೇಹ, ಟ್ರಂಪ್ ವ್ಯಂಗ್ಯ

ಟ್ರಂಪ್ ಅವರ ಎರಡೂ ಅಧ್ಯಕ್ಷೀಯ ಅವಧಿಗಳಲ್ಲೂ ಮೊದಲ ಪ್ರಮುಖ ವಿದೇಶ ಪ್ರವಾಸ ಸೌದಿ ಅರೇಬಿಯಾಗಿತ್ತು. ಅಧಿಕೃತ ಹುದ್ದೆಯಲ್ಲಿ ಇಲ್ಲದಿದ್ದರೂ, ತಜರೆದ್ ಕುಶ್ನರ್ ಇಂದಿಗೂ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಆಪ್ತ ಸಂಬಂಧ ಉಳಿಸಿಕೊಂಡಿದ್ದಾರೆ. ಅವರು ಆಗಾಗ ರಿಯಾದ್‌ಗೆ ಭೇಟಿ ನೀಡುತ್ತಿರುತ್ತಾರೆ.

ನಾಲ್ಕು ವರ್ಷಗಳ ಹಿಂದೆ, ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ನೇತೃತ್ವದ ಹೂಡಿಕೆ ನಿಧಿಯು, ಜರೆದ್ ಕುಶ್ನರ್ ಅವರ ಹೂಡಿಕೆ ಸಂಸ್ಥೆಯಲ್ಲಿ 2 ಬಿಲಿಯನ್ ಡಾಲರ್ ಹೂಡಿಕೆ ಮಾಡಿತ್ತು. ಇದರಿಂದ ಇಬ್ಬರ ನಡುವಿನ ವೈಯಕ್ತಿಕ ಸಂಬಂಧವೂ ಆತ್ಮೀಯವಾಗಿತ್ತು. ಆದರೆ ವೈಯಕ್ತಿಕ ಆತ್ಮೀಯತೆ ಇದ್ದರೂ, ಯುದ್ಧದ ಸಂದರ್ಭದಲ್ಲಿ ಎರಡೂ ನಾಯಕರು ಹಲವು ವಿಷಯಗಳಲ್ಲಿ ಸಾರ್ವಜನಿಕವಾಗಿ ಭಿನ್ನ ನಿಲುವು ತಾಳಿದರು. ಮಾರ್ಚ್‌ನಲ್ಲಿ ಮಿಯಾಮಿಯಲ್ಲಿ ನಡೆದ ಸೌದಿ ಹೂಡಿಕೆ ಸಮಾವೇಶದಲ್ಲಿ ಮಾತನಾಡಿದ ಟ್ರಂಪ್, ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ತಮ್ಮನ್ನೂ ತಮ್ಮ ಆಡಳಿತವನ್ನೂ ಕಡಿಮೆ ಅಂದಾಜಿಸಿದ್ದರು ಎಂದು ಟ್ರಂಪ್ ವ್ಯಂಗ್ಯವಾಡಿದ್ದರು.

ರೂಬಿಯೊ ಪ್ರವಾಸ ಹುಟ್ಟುಹಾಕಿದ ಪ್ರಶ್ನೆಗಳು

ಇತ್ತೀಚಿನ ಬೆಳವಣಿಗೆಗಳು ಎರಡೂ ರಾಷ್ಟ್ರಗಳ ನಡುವಿನ ಸೂಕ್ಷ್ಮ ಅಂತರವನ್ನು ಮತ್ತಷ್ಟು ಸ್ಪಷ್ಟಪಡಿಸಿವೆ. ಕಳೆದ ವಾರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಗಲ್ಫ್ ಪ್ರವಾಸ ಕೈಗೊಂಡಾಗ ಬಹರೇನ್, ಕುವೈತ್ ಹಾಗೂ ಯುಎಇಗೆ ಭೇಟಿ ನೀಡಿದರು. ಆದರೆ ಸೌದಿ ಅರೇಬಿಯಾ ಅವರ ಪ್ರವಾಸ ಪಟ್ಟಿಯಲ್ಲಿ ಇರಲಿಲ್ಲ.

ನಂತರ ಬಹರೇನ್‌ನಲ್ಲಿ ಗಲ್ಫ್ ರಾಷ್ಟ್ರಗಳ ವಿದೇಶಾಂಗ ಸಚಿವರೊಂದಿಗೆ ನಡೆದ ಸಭೆಯಲ್ಲಿ ಸೌದಿ ವಿದೇಶಾಂಗ ಸಚಿವ ಫೈಸಲ್ ಬಿನ್ ಫರ್ಹಾನ್ ಪ್ರತ್ಯೇಕವಾಗಿ ರೂಬಿಯೊ ಅವರನ್ನು ಭೇಟಿಯಾಗಿ ಪ್ರಾದೇಶಿಕ ಭದ್ರತೆ ಕುರಿತ ಆತಂಕಗಳನ್ನು ಪ್ರಸ್ತಾಪಿಸಿದರು.

ಸಭೆಯಲ್ಲಿ ಮಾತನಾಡಿದ ರೂಬಿಯೊ, 'ಇತ್ತೀಚಿನ ಘಟನೆಗಳ ಹಿನ್ನೆಲೆಯಲ್ಲಿ ನಮ್ಮ ಮೈತ್ರಿಕೂಟಕ್ಕೆ ದೊಡ್ಡ ಪರೀಕ್ಷೆ ಎದುರಾಯಿತು. ಆದರೆ ಅದು ಯಶಸ್ವಿಯಾಗಿ ಆ ಪರೀಕ್ಷೆಯನ್ನು ಎದುರಿಸಿದೆ. ಈ ಸಂಕಷ್ಟದ ಅವಧಿಯಲ್ಲಿ ನಮ್ಮ ನಡುವಿನ ಸಹಕಾರ, ಪರಸ್ಪರ ಸಂಪರ್ಕ ಮತ್ತು ಸ್ನೇಹದ ಬಲ ಮತ್ತೊಮ್ಮೆ ಸಾಬೀತಾಗಿದೆ' ಎಂದು ಹೇಳಿದ್ದರು.

ಬಾಹ್ಯಾಕಾಶದಲ್ಲಿ ಡೇಟಾ ಸೆಂಟರ್‌ಗಳು! ಏನಿದು ಮಸ್ಕ್‌ರ 'ಸ್ಟಾರ್‌ಮೈಂಡ್' ಯೋಜನೆ?

ಬಗೆಹರಿಯದ ಹೊರ್ಮುಜ್ ವಿವಾದ

ಜೂನ್‌ನಲ್ಲಿ ಕದನ ವಿರಾಮ ಒಪ್ಪಂದ ನಡೆದ ಬಳಿಕ ಕೊಲ್ಲಿಯಲ್ಲಿ ತಾತ್ಕಾಲಿಕ ನೆಮ್ಮದಿಯೇನೋ ಮೂಡಿತು. ಆದರೆ ಯುದ್ಧದಿಂದ ಉದ್ಭವಿಸಿದ ಹಲವು ಪ್ರಮುಖ ಪ್ರಶ್ನೆಗಳು ಹಾಗೇ ಉಳಿಯಿತು.

ಇದು ಕೇವಲ ಆಡಳಿತಾತ್ಮಕ ಬದಲಾವಣೆಯಲ್ಲ. ಗಲ್ಫ್ ಪ್ರದೇಶದ ಭದ್ರತೆ, ವ್ಯಾಪಾರ ಮತ್ತು ಶಕ್ತಿ ಸಮತೋಲನದ ಮೇಲೆಯೇ ಪರಿಣಾಮ ಬೀರುವ ಮಹತ್ವದ ಬೆಳವಣಿಗೆಯಾಗಿದೆ.

'ಇರಾನ್ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿದ ಕ್ಷಣದಿಂದಲೇ ಗಲ್ಫ್ ಪ್ರದೇಶದ ಮನೋಭಾವ ಸಂಪೂರ್ಣವಾಗಿ ಬದಲಾಗಿದೆ. ಈಗ ಇರಾನ್, ಗಲ್ಫ್ ಆರ್ಥಿಕತೆಯ ಮೇಲಷ್ಟೇ ಅಲ್ಲ, ಜಾಗತಿಕ ಆರ್ಥಿಕತೆಯ ಮೇಲೂ ಒತ್ತಡ ಹೇರುವ 'ಡಮೊಕ್ಲೀಸ್‌ನ ಕತ್ತಿ'ಯನ್ನು ತನ್ನ ಕೈಯಲ್ಲಿ ಹಿಡಿದಂತಾಗಿದೆ' ಎಂದುಸೌದಿ ಅರೇಬಿಯಾದಲ್ಲಿ ಅಮೆರಿಕದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದ ನಿವೃತ್ತ ರಾಜತಾಂತ್ರಿಕ ಮೈಕಲ್ ರಾಟ್ನಿ ಈ ಬೆಳವಣಿಗೆಯನ್ನು ವಿಶ್ಲೇಷಿಸಿದ್ದಾರೆ.

ಅಂದರೆ, ಯುದ್ಧ ಮುಗಿದರೂ ಜಾಗತಿಕ ತೈಲ ಮತ್ತು ವ್ಯಾಪಾರದ ಮೇಲೆ ಒತ್ತಡ ಹೇರುವ ತನ್ನ ಪ್ರಮುಖ ಶಕ್ತಿಯನ್ನು ಇರಾನ್ ಇನ್ನೂ ಉಳಿಸಿಕೊಂಡಿದೆ ಎಂಬುದು ಅವರ ಅಭಿಪ್ರಾಯ.

ಉತ್ತರ ಸಿಗದ ಮೂರು ಪ್ರಶ್ನೆಗಳು

ಕದನ ವಿರಾಮ ಒಪ್ಪಂದವು ಹಲವು ಸೂಕ್ಷ್ಮ ವಿಷಯಗಳನ್ನು ಸ್ಪರ್ಶಿಸಿಯೇ ಇಲ್ಲ.

ಮೊದಲನೆಯದಾಗಿ, ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮದ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ಎರಡನೆಯದಾಗಿ, ಬಂಡುಕೋರ ಸಂಘಟನೆಗಳಿಗೆ ಇರಾನ್ ನೀಡುತ್ತಿರುವ ಬೆಂಬಲದ ಬಗ್ಗೆ ಯಾವುದೇ ಸ್ಪಷ್ಟ ಒಪ್ಪಂದವಿಲ್ಲ. ಮೂರನೆಯದಾಗಿ, ಟ್ರಂಪ್ ಆಡಳಿತ ಇರಾನ್‌ನೊಂದಿಗೆ ಹೊಸ ಅಣು ಒಪ್ಪಂದವನ್ನು ಸಾಧಿಸಬಹುದೇ ಎಂಬ ಪ್ರಶ್ನೆಯೂ ಇನ್ನೂ ಹಾಗೇ ಉಳಿದಿದೆ.

ಈ ಮೂರು ವಿಷಯಗಳೇ ಮಧ್ಯಪ್ರಾಚ್ಯದ ಭದ್ರತಾ ಭವಿಷ್ಯವನ್ನು ನಿರ್ಧರಿಸುವ ಪ್ರಮುಖ ಅಂಶಗಳಾಗಿವೆ.

ಯುರೋಪ್‌ನಲ್ಲಿ ಉರಿ ಬಿಸಿಲು, ಸಾವಿರಾರು ಮಂದಿ ಸಾವು: ಏನಿದು 'ಹೀಟ್ ಡೋಮ್'?

2018ರ ನಿರ್ಧಾರ

ಇರಾನ್ ಅಣು ಕಾರ್ಯಕ್ರಮದ ಕುರಿತು ನಡೆಯುತ್ತಿರುವ ಇಂದಿನ ಮಾತುಕತೆಯನ್ನು ಅರ್ಥಮಾಡಿಕೊಳ್ಳಲು ಎಂಟು ವರ್ಷ ಹಿಂದಕ್ಕೆ ಹೋಗಬೇಕು. ಬರಾಕ್ ಒಬಾಮಾ ಅವಧಿಯಲ್ಲಿ ಇರಾನ್ ಜೊತೆ ಮಾಡಿಕೊಂಡಿದ್ದ ಅಣು ಒಪ್ಪಂದವನ್ನು 2018ರಲ್ಲಿ ಟ್ರಂಪ್ ರದ್ದು ಮಾಡಿದ್ದರು. ಆದರೆ ಅಮೆರಿಕ ಒಪ್ಪಂದ ಮುರಿದ ಬಳಿಕ ಇರಾನ್, ತನ್ನ ಯುರೇನಿಯಂ ಸಮೃದ್ಧೀಕರಣವನ್ನು ಇನ್ನಷ್ಟು ಹೆಚ್ಚಿನ ಮಟ್ಟಕ್ಕೆ ಏರಿಸಿತು. ಈಗ ಟ್ರಂಪ್ ಆಡಳಿತ ಮತ್ತೊಮ್ಮೆ ಹೊಸ ಒಪ್ಪಂದಕ್ಕೆ ಪ್ರಯತ್ನಿಸುತ್ತಿದೆ. ಆದರೆ ಈ ಬಾರಿ ಪರಿಸ್ಥಿತಿ 2018ಕ್ಕಿಂತ ಹೆಚ್ಚು ಸಂಕೀರ್ಣವಾಗಿದೆ.

ಸೌದಿ ಬೆಂಬಲ: ಆದರೆ..

ಅಮೆರಿಕ ಮತ್ತು ಇರಾನ್ ನಡುವಿನ ತಿಳುವಳಿಕೆ ಒಪ್ಪಂದವನ್ನು ಸೌದಿ ಅರೇಬಿಯಾ ಸ್ವಾಗತಿಸಿದೆ. ಈ ಒಪ್ಪಂದವೇ ಶಾಶತ್ವ ಕದನ ವಿರಾಮಕ್ಕೆ ಅಡಿಪಾಯವಾಗಿದೆ ಎಂದು ಅದು ಹೇಳಿದೆ.

'ಈ ಒಪ್ಪಂದ ಅತ್ಯಂತ ಮಹತ್ವದ್ದಾಗಿದೆ. ಇದು ಈ ಸಂಘರ್ಷಕ್ಕೆ ಅಂತ್ಯ ಹಾಡುವುದರ ಜೊತೆಗೆ, ಇನ್ನೂ ಬಗೆಹರಿಯಬೇಕಿರುವ ಅನೇಕ ಪ್ರಶ್ನೆಗಳಿಗೆ ಪರಿಹಾರ ಕಂಡುಕೊಳ್ಳುವ ದಾರಿಯನ್ನು ತೆರೆಯಲಿದೆ ಎಂಬ ವಿಶ್ವಾಸವಿದೆ. ಅವುಗಳಲ್ಲಿ ಮೊದಲನೆಯದು, ಸಹಜವಾಗಿಯೇ, ಅಣು ಸಮಸ್ಯೆ' ಎಂದು ಜೂನ್ 18ರಂದು ವಿಯೆನ್ನಾದಲ್ಲಿ ಸೌದಿ ವಿದೇಶಾಂಗ ಸಚಿವ ಫೈಸಲ್ ಬಿನ್ ಫರ್ಹಾನ್ ಹೇಳಿದ್ದರು.

ಆದರೆ, ಸೌದಿ ಅರೇಬಿಯಾ ಇನ್ನೂ ಎಚ್ಚರಿಕೆಯ ನಿಲುವು ಕಾಯ್ದುಕೊಂಡಿದೆ. ಇರಾನ್‌ನೊಂದಿಗಿನ ಒಪ್ಪಂದದ ಅಂತಿಮ ಫಲಿತಾಂಶದ ಬಗ್ಗೆ ಯಾವುದೇ ನಿರೀಕ್ಷೆ ವ್ಯಕ್ತಪಡಿಸದೆ, 'ಕಾದು ನೋಡೋಣ' ಎಂಬ ಧೋರಣೆಯನ್ನೇ ಅನುಸರಿಸುತ್ತಿದೆ. ಇದಕ್ಕೆ ಉದಾಹರಣೆಯಾಗಿ, ಒಪ್ಪಂದದಲ್ಲಿ ಇರಾನ್ ಪುನರ್‌ನಿರ್ಮಾಣಕ್ಕೆ ನೆರವು ನೀಡುವ ಪ್ರಸ್ತಾಪ ಇದ್ದರೂ, ಸೌದಿ ಅರೇಬಿಯಾ ಇನ್ನೂ ಯಾವುದೇ ಆರ್ಥಿಕ ನೆರವು ಘೋಷಿಸಿಲ್ಲ.

ಅಮೆರಿಕ-ಇರಾನ್ ಒಪ್ಪಂದದ ಹಿಂದಿನ ನಾಟಕೀಯ ಕ್ಷಣಗಳು: ಕೊನೆಯವರೆಗೂ ನಡೆದ ಹಗ್ಗಜಗ್ಗಾಟ

ಯುದ್ಧ ಮುಗಿದರೂ ಮುಗಿಯದ ಪ್ರಶ್ನೆಗಳು

ಇರಾನ್ ಯುದ್ಧವು ಕೇವಲ ಯುದ್ಧಭೂಮಿಯಲ್ಲಿನ ಸಂಘರ್ಷವಾಗಿರಲಿಲ್ಲ. ಅದು ಪಶ್ಚಿಮ ಏಷ್ಯಾದ ರಾಜಕೀಯ, ಭದ್ರತೆ ಮತ್ತು ಮೈತ್ರಿಗಳ ಸ್ವರೂಪವನ್ನೇ ಮರುಪರಿಶೀಲಿಸುವ ಪರಿಸ್ಥಿತಿಯನ್ನು ಸೃಷ್ಟಿಸಿತು. ಹೊರ್ಮುಜ್ ಜಲಸಂಧಿಯ ಭವಿಷ್ಯ, ಇರಾನ್‌ನ ಕ್ಷಿಪಣಿ ಮತ್ತು ಅಣು ಕಾರ್ಯಕ್ರಮ, ಗಲ್ಫ್ ರಾಷ್ಟ್ರಗಳ ಭದ್ರತೆ ಹಾಗೂ ಅಮೆರಿಕದ ಪಾತ್ರ-ಈ ಎಲ್ಲ ಪ್ರಶ್ನೆಗಳು ಇನ್ನೂ ಬಗೆಹರಿದಿಲ್ಲ. ಅಮೆರಿಕ ಮತ್ತು ಸೌದಿ ಅರೇಬಿಯಾದ ಪಾಲುದಾರಿಕೆ ಮುಂದುವರಿದಿದ್ದರೂ, ಯುದ್ಧವು ಅವರ ನಡುವಿನ ಭಿನ್ನಾಭಿಪ್ರಾಯ ಮತ್ತು ವಿಶ್ವಾಸದ ಬಿರುಕುಗಳನ್ನು ಬಹಿರಂಗಪಡಿಸಿದೆ.

ಇರಾನ್-ಅಮೆರಿಕ ಯುದ್ಧಕ್ಕೆ ಸದ್ಯ ವಿರಾಮ ಸಿಕ್ಕಿರಬಹುದು. ಆದರೆ ಯುದ್ಧ ಹುಟ್ಟುಹಾಕಿದ ಪ್ರಶ್ನೆಗಳು ಇನ್ನೂ ಬಗೆಹರಿದಿಲ್ಲ. ಹೊರ್ಮುಜ್ ಜಲಸಂಧಿಯ ಭವಿಷ್ಯ, ಇರಾನ್‌ನ ಅಣು ಕಾರ್ಯಕ್ರಮ, ಗಲ್ಫ್ ರಾಷ್ಟ್ರಗಳ ಭದ್ರತೆ ಮತ್ತು ಅಮೆರಿಕದ ಪಾತ್ರ-ಈ ಎಲ್ಲ ಪ್ರಶ್ನೆಗಳಿಗೆ ಸಿಗುವ ಉತ್ತರಗಳೇ ಮುಂದಿನ ದಿನಗಳಲ್ಲಿ ಮಧ್ಯಪ್ರಾಚ್ಯದ ಹೊಸ ರಾಜಕೀಯ ಸಮೀಕರಣವನ್ನು ರೂಪಿಸಲಿವೆ.

(ಈ ಲೇಖನವನ್ನು 'ದಿ ನ್ಯೂಯಾರ್ಕ್ ಟೈಮ್ಸ್' ಪ್ರಕಟಿಸಿದ ವರದಿ ಸೇರಿದಂತೆ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ, ಅಧಿಕೃತ ಹೇಳಿಕೆಗಳು ಮತ್ತು ತಜ್ಞರ ವಿಶ್ಲೇಷಣೆಗಳನ್ನು ಆಧರಿಸಿ ಬರೆಯಲಾಗಿದೆ.)

ಬ್ರಿಟನ್‌ನಲ್ಲೂ ರಾಮ ಮಂದಿರ ವಿವಾದ: 40 ವರ್ಷ ಹಳೆಯ ದೇವಾಲಯದ ಭವಿಷ್ಯ ಅತಂತ್ರ
Dailyhunt
Disclaimer: This content has not been generated, created or edited by Dailyhunt. Publisher: Prajavani