ಕೃಷಿಕರಲ್ಲಿನ ವೈಜ್ಞಾನಿಕ ತಿಳಿವಳಿಕೆಯ ಕೊರತೆ ಹಾಗೂ ವಾಣಿಜ್ಯ ಲಾಭದ ದುರಾಸೆಗಳೆರಡರ ಪರಿಣಾಮವಾಗಿ ಭಾರತದ ಅನೇಕ ಆಹಾರ ಪದಾರ್ಥಗಳಲ್ಲಿ ಕೀಟನಾಶಕಗಳ ಶೇಷಾಂಶವು ಮಿತಿಮೀರುತ್ತಿದೆ. ಪರಿಣಾಮವಾಗಿ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಕೃಷಿ ಉತ್ಪನ್ನಗಳು ಸತತವಾಗಿ ತಿರಸ್ಕೃತಗೊಳ್ಳುತ್ತಿವೆ. ಕೃಷಿ ರಫ್ತು ವಲಯಕ್ಕೆ ಬಿದ್ದಿರುವ ಈ ಪೆಟ್ಟು ಕೇವಲ ಆರ್ಥಿಕ ನಷ್ಟವಷ್ಟೇ ಅಲ್ಲ; ಇದು ದೇಶದ ಆಂತರಿಕ ಆಹಾರ ಸುರಕ್ಷತಾ ವ್ಯವಸ್ಥೆಯ ವೈಫಲ್ಯದತ್ತಲೂ ಕನ್ನಡಿ ಹಿಡಿಯುತ್ತಿದೆ.
ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಕೀಟನಾಶಕಗಳ ಅತಿಯಾದ ಬಳಕೆ ಮತ್ತು ಸುರಕ್ಷತಾ ಮಿತಿಗಳನ್ನು ಮೀರಿದ ರಾಸಾಯನಿಕಗಳ ಪತ್ತೆಯಾದ ಹಿನ್ನೆಲೆಯಲ್ಲಿ, ನೇಪಾಳ ಸರ್ಕಾರವು ಭಾರತದ ಮಾವಿನ ಹಣ್ಣುಗಳ ಆಮದನ್ನು ತಿರಸ್ಕರಿಸಿದೆ. ದೇಶದ ಗಡಿ ಭಾಗದಲ್ಲಿ ಕ್ವಾರಂಟೈನ್ ತಪಾಸಣೆಯ ವೇಳೆ ಈ ದೋಷ ಪತ್ತೆಯಾಗಿದ್ದು, ಅಲ್ಲಿನ ಕೃಷಿ ಮತ್ತು ಪಶುಸಂಗೋಪನಾ ಸಚಿವಾಲಯವು ತಾತ್ಕಾಲಿಕ ನಿರ್ಬಂಧ ಹೇರಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಜಪಾನ್ ದೇಶ ಕೂಡ ಗುಣಮಟ್ಟದ ನಿಯಮಗಳ ಉಲ್ಲಂಘನೆಯ ಕಾರಣವೊಡ್ಡಿ ಭಾರತದ ಮಾವಿನ ಆಮದನ್ನು ಸ್ಥಗಿತಗೊಳಿಸಿತ್ತು.
ಅನ್ನದ ಬಟ್ಟಲು: ಸಮೃದ್ಧ ಹುಣಸೆ ಇಳುವರಿಗೆ ನೀರು-ಗೊಬ್ಬರವೇ ಜೀವಾಳಅನ್ನದ ಬಟ್ಟಲು: ದೇವೇಂದ್ರರ 'ದೇಸಿ ಭತ್ತದ ತಳಿ' ಲೋಕರಫ್ತು ತಿರಸ್ಕಾರದ ಸರಣಿ ಕೇವಲ ಮಾವಿಗೆ ಸೀಮಿತವಾಗಿಲ್ಲ. ಭತ್ತಕ್ಕೆ ತಗಲುವ ಬೆಂಕಿ ರೋಗದ ನಿಯಂತ್ರಣಕ್ಕಾಗಿ ಮಿತಿಮೀರಿ ಶಿಲೀಂಧ್ರನಾಶಕಗಳನ್ನು ಬಳಸಿದ ಪರಿಣಾಮ, 2017ರಲ್ಲಿ ದಕ್ಷಿಣ ಭಾರತದ ಅಕ್ಕಿಯನ್ನು ಐರೋಪ್ಯ ಒಕ್ಕೂಟ, ಇರಾನ್ ಮತ್ತು ಅಮೆರಿಕ ರಾಷ್ಟ್ರಗಳು ತಿರಸ್ಕರಿಸಿದ್ದವು. ಕರ್ನಾಟಕದ ಹೆಮ್ಮೆಯ ಬ್ಯಾಡಗಿ ಮೆಣಸಿನಕಾಯಿ ಸೇರಿದಂತೆ ಹಲವು ಸಾಂಬಾರ ಪದಾರ್ಥಗಳು ಸಾಲ್ಮೊನೆಲ್ಲಾ ಮತ್ತು ಅಫ್ಲಾಟಾಕ್ಸಿನ್‌ನಂತಹ ವಿಷಕಾರಿ ಅಂಶಗಳ ಹೆಚ್ಚಳದಿಂದಾಗಿ ಆಗಾಗ್ಗೆ ವಿದೇಶಗಳಲ್ಲಿ ತಿರಸ್ಕಾರಕ್ಕೊಳಗಾಗಿವೆ.
ಐರೋಪ್ಯ ಒಕ್ಕೂಟದ ಆಹಾರ ಸುರಕ್ಷತಾ ಪ್ರಾಧಿಕಾರದ ದತ್ತಾಂಶಗಳ ವಿಶ್ಲೇಷಣೆಯ ಪ್ರಕಾರ, 2024ರ ಮೇ ತಿಂಗಳಿನಿಂದ 2026ರ ಮೇ ವರೆಗೆ ಭಾರತದ ಬರೋಬ್ಬರಿ 450 ಕೃಷಿ ಉತ್ಪನ್ನಗಳನ್ನು ತಿರಸ್ಕರಿಸಲಾಗಿದೆ. ಇವುಗಳಲ್ಲಿ 365 ಉತ್ಪನ್ನಗಳು ಕೀಟನಾಶಕಗಳ ಉಳಿಕೆ ಮತ್ತು ಭಾರಲೋಹಗಳ ಕಾರಣಕ್ಕೆ ತಿರಸ್ಕೃತಗೊಂಡಿದ್ದರೆ, 50 ಉತ್ಪನ್ನಗಳು 'ಸಾಲ್ಮೊನೆಲ್ಲಾ', 'ಅಫ್ಲಾಟಾಕ್ಸಿನ್ ಬಿ1' ಮತ್ತು 'ಓಕ್ರಟಾಕ್ಸಿನ್-ಎ' ನಂತಹ ರೋಗಕಾರಕ ಅಂಶಗಳನ್ನು ಹೊಂದಿದ್ದವು.
ವಿಷಾದನೀಯ ಸಂಗತಿಯೆಂದರೆ, ಈ ಪಟ್ಟಿಯಲ್ಲಿ ಆರೋಗ್ಯವರ್ಧಕವೆಂದು ಪರಿಗಣಿಸಲಾಗುವ ಗಿಡಮೂಲಿಕೆಗಳು, ಸಾಂಬಾರ ಪದಾರ್ಥಗಳು, ಹಣ್ಣು-ತರಕಾರಿಗಳು, ಬೇಳೆಕಾಳುಗಳು ಹಾಗೂ ಸಿರಿಧಾನ್ಯಗಳೂ ಸೇರಿವೆ. ಜಗತ್ತಿನ 44 ದೇಶಗಳಲ್ಲಿ ನಿಷೇಧಿಸಲಾಗಿರುವ ಕ್ಯಾನ್ಸರ್‌ಕಾರಕ ಹಾಗೂ ನರಮಂಡಲಕ್ಕೆ ಹಾನಿಯುಂಟುಮಾಡುವ 'ಕ್ಲೋರೊಪೈರಿಫಾಸ್' ಕೀಟನಾಶಕದ ಅಂಶವು ಭಾರತದ 135 ಉತ್ಪನ್ನಗಳಲ್ಲಿ ಪತ್ತೆಯಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಸಾರುತ್ತಿದೆ.
ಗುಣಮಟ್ಟ ವಿಂಗಡಣೆ ಮತ್ತು ಕಟ್ಟುನಿಟ್ಟಿನ ಪರೀಕ್ಷೆಗಳಲ್ಲಿ ತೇರ್ಗಡೆಯಾದ 'ರಫ್ತು ಗುಣಮಟ್ಟದ' ಆಹಾರ ಪದಾರ್ಥಗಳ ಸ್ಥಿತಿಯೇ ಹೀಗಿರುವಾಗ, ಯಾವುದೇ ಸಮರ್ಪಕ ಪರೀಕ್ಷೆಗಳಿಲ್ಲದೆ ಸ್ಥಳೀಯ ಮಾರುಕಟ್ಟೆ ಪ್ರವೇಶಿಸಿ ನಮ್ಮ ತಟ್ಟೆ ಸೇರುತ್ತಿರುವ ದೈನಂದಿನ ಆಹಾರವೆಷ್ಟು ಕಲುಷಿತವಾಗಿರಬಹುದು ಎಂಬುದು ಆತಂಕಕಾರಿ ಪ್ರಶ್ನೆಯಾಗಿದೆ.

ಪ್ರಾತಿನಿಧಿಕ ಚಿತ್ರ
ಸಮಸ್ಯೆಯ ಬೇರು: ಗುತ್ತಿಗೆ ಕೃಷಿ ಮತ್ತು ದುರಾಸೆ
ಒಂದು ಕಾಲದಲ್ಲಿ ಜೀವನಪದ್ಧತಿಯಾಗಿದ್ದ ಕೃಷಿಯು ಸಂಪೂರ್ಣವಾಗಿ ವಾಣಿಜ್ಯೀಕರಣಗೊಂಡ ಬಳಿಕ ವ್ಯವಸಾಯವು ಗುತ್ತಿಗೆ ಕೃಷಿಯ ಸ್ವರೂಪ ಪಡೆದುಕೊಂಡಿತು. ಶುಂಠಿ, ಅರಿಸಿನ, ಮಾವು, ದಾಳಿಂಬೆಯಂತಹ ವಾಣಿಜ್ಯ ಬೆಳೆಗಳನ್ನು ಗುತ್ತಿಗೆ ಆಧಾರದಲ್ಲಿ ಬೆಳೆಯುವ ಪರಿಪಾಠ ಹೆಚ್ಚಾದಂತೆ, ಕೃಷಿ ಭೂಮಿ ಶೋಷಣೆಗೊಳಗಾಗುತ್ತಿದೆ. ಅಲ್ಪಾವಧಿಯಲ್ಲಿ ಅಧಿಕ ಲಾಭ ಗಳಿಸುವ ದುರಾಸೆಯಿಂದ, ಗುತ್ತಿಗೆ ಕೃಷಿಕರು ಮಣ್ಣಿನ ಆರೋಗ್ಯವನ್ನು ಲೆಕ್ಕಿಸದೆ ರಾಸಾಯನಿಕ ಗೊಬ್ಬರ, ಕಳೆನಾಶಕ ಹಾಗೂ ಕೀಟನಾಶಕಗಳನ್ನು ವಿವೇಚನಾರಹಿತವಾಗಿ ಸುರಿಯುತ್ತಿದ್ದಾರೆ. ಉದಾಹರಣೆಗೆ, ಕಾರ್ಮಿಕರ ವೆಚ್ಚ ಉಳಿಸಲು ಮಾವಿನ ಕಾಯಿಗಳನ್ನು ಎಳೆಯ ಹಂತದಲ್ಲೇ ಕೀಳುವುದು ಹಾಗೂ ಅವನ್ನು ಕೃತಕವಾಗಿ ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್‌ನಂತಹ ನಿಷೇಧಿತ ರಾಸಾಯನಿಕಗಳನ್ನು ಬಳಸುವ ಪ್ರವೃತ್ತಿ ವ್ಯಾಪಕವಾಗಿದೆ.
ಮತ್ತೊಂದೆಡೆ, ಉತ್ತಮ ಕೃಷಿ ಪದ್ಧತಿಗಳ ಅಳವಡಿಕೆಯಲ್ಲಿ ರೈತರು ಮತ್ತು ಇಲಾಖೆಗಳ ನಡುವೆ ಸಮನ್ವಯದ ಕೊರತೆಯಿದೆ. 'ಬೆಳೆಗಳಿಗೆ ಒಳಸುರಿಗಳನ್ನು ಯಾವ ಹಂತದಲ್ಲಿ ಎಷ್ಟು ಬಳಸಬೇಕೆಂಬ ಸಮರ್ಪಕ ಮಾರ್ಗದರ್ಶನ ಸಕಾಲದಲ್ಲಿ ಸಿಗುತ್ತಿಲ್ಲ' ಎಂದು ರೈತರು ಆರೋಪಿಸಿದರೆ, 'ಬೆಳೆ ಕಟಾವಿಗೆ ಕನಿಷ್ಠ ಇಷ್ಟು ದಿನಗಳ ಮುನ್ನ ಔಷಧ ಸಿಂಪಡಣೆ ನಿಲ್ಲಿಸಬೇಕೆಂಬ ನಿಯಮಾವಳಿಗಳಿದ್ದರೂ ರೈತರು ಅದನ್ನು ಪಾಲಿಸುತ್ತಿಲ್ಲ' ಎಂಬುದು ವಿಜ್ಞಾನಿಗಳು ಹಾಗೂ ಅಧಿಕಾರಿಗಳ ವಾದವಾಗಿದೆ.
ಅನ್ನದ ಬಟ್ಟಲು: ಅಜೋಲಾ, ಭತ್ತದ ಗದ್ದೆಗಳ ಕವಚಅನ್ನದ ಬಟ್ಟಲು: ಮಳೆ ಕೊರತೆಯ ಹುಲಿಕೆರೆಯಲ್ಲಿ 'ಹಣ್ಣಿನ ತೋಟ' ಅರಳಿದ್ದು ಹೇಗೆ?ಪರೀಕ್ಷಾ ವ್ಯವಸ್ಥೆಯ ಕೊರತೆ ಹಾಗೂ ಪರಿಹಾರ ಮಾರ್ಗಗಳು
ರಫ್ತು ಮಾಡುವ ಕೃಷಿ ಉತ್ಪನ್ನಗಳ ಗುಣಮಟ್ಟ ಪರೀಕ್ಷೆಗೆ ಕ್ವಾರಂಟೈನ್ ವ್ಯವಸ್ಥೆಗಳಿವೆ. ಆದರೆ, ಸ್ಥಳೀಯ ಮಾರುಕಟ್ಟೆಯಲ್ಲಿ ವಿತರಣೆಯಾಗುವ ಆಹಾರ ಧಾನ್ಯಗಳ, ಹಣ್ಣು-ತರಕಾರಿಗಳ ಸುರಕ್ಷತೆಯನ್ನು ಖಾತರಿಪಡಿಸುವ ಯಾವುದೇ ಕಟ್ಟುನಿಟ್ಟಿನ ವ್ಯವಸ್ಥೆ ನಮ್ಮಲ್ಲಿಲ್ಲ.
ಬೆಂಗಳೂರಿನಂತಹ ಮಹಾನಗರಗಳ ಸುತ್ತಮುತ್ತ ಬೆಳೆಯುವ ತರಕಾರಿಗಳಲ್ಲಿ ಕೀಟನಾಶಕ ಹಾಗೂ ಭಾರಲೋಹಗಳ ಉಳಿಕೆಯ ಬಗ್ಗೆ ಹಲವು ಅಧ್ಯಯನಗಳು ಎಚ್ಚರಿಸಿದ್ದರೂ, ಸರ್ಕಾರವು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಗ್ರಾಹಕ-ಸ್ನೇಹಿ ಪರೀಕ್ಷಾ ವ್ಯವಸ್ಥೆಯನ್ನು ಜಾರಿಗೆ ತರುವ ಗೋಜಿಗೆ ಹೋಗಿಲ್ಲ.
ಈ ಬಿಕ್ಕಟ್ಟನ್ನು ಶಮನಗೊಳಿಸಲು ವ್ಯವಸ್ಥಿತ ಸುಧಾರಣೆಗಳ ಅಗತ್ಯವಿದೆ. ಮೊದಲನೆಯದಾಗಿ, ಜಾಗತಿಕ ಮಟ್ಟದಲ್ಲಿ ನಿಷೇಧಕ್ಕೊಳಗಾಗಿರುವ ಅತ್ಯಂತ ಅಪಾಯಕಾರಿ ಕೀಟನಾಶಕಗಳನ್ನು ಭಾರತದಲ್ಲೂ ತಕ್ಷಣವೇ ನಿಷೇಧಿಸಬೇಕು. ಎರಡನೆಯದಾಗಿ, ಮಾರುಕಟ್ಟೆ ಪ್ರಾಧಿಕಾರಗಳು ಹಾಗೂ ಚಿಲ್ಲರೆ ಮಾರಾಟ ಕೇಂದ್ರಗಳಲ್ಲಿ ಗ್ರಾಹಕರೇ ಖುದ್ದಾಗಿ ಆಹಾರ ಪದಾರ್ಥಗಳನ್ನು ಸ್ಕ್ಯಾನ್ ಮಾಡಿ ರಾಸಾಯನಿಕ ಶೇಷಾಂಶಗಳನ್ನು ಪತ್ತೆಹಚ್ಚುವಂತಹ ಸರಳ, ತಾಂತ್ರಿಕ ಸಾಧನಗಳನ್ನು ಲಭ್ಯವಾಗುವಂತೆ ಮಾಡಬೇಕು. ಮೂರನೆಯದಾಗಿ, 'ಸಾವಯವ' ಹೆಸರಿನಲ್ಲಿ ದುಬಾರಿ ಬೆಲೆಗೆ ಮಾರಾಟವಾಗುವ ಉತ್ಪನ್ನಗಳ ಪರೀಕ್ಷೆ ಕಟ್ಟುನಿಟ್ಟಾಗಬೇಕು. ಕೇವಲ 'ಸಾವಯವ ದೃಢೀಕರಣ ಪ್ರಮಾಣಪತ್ರ'ದ ಲೇಬಲ್‌ಗಳಷ್ಟೇ ಅಲ್ಲದೆ, ವೈಜ್ಞಾನಿಕ ಪರೀಕ್ಷೆಯ ದೃಢೀಕರಣವೂ ಕಡ್ಡಾಯವಾಗಬೇಕು.
ರಫ್ತು ಮಾರುಕಟ್ಟೆಯನ್ನು ಉಳಿಸಿಕೊಳ್ಳಲು ಮಾತ್ರವಲ್ಲದೆ, ದೇಶದ ಪ್ರತಿಯೊಬ್ಬ ನಾಗರಿಕನಿಗೂ ವಿಷಮುಕ್ತ, ಶುದ್ಧ ಆಹಾರ ಒದಗಿಸುವುದು ಸರ್ಕಾರದ ಪ್ರಾಥಮಿಕ ಹೊಣೆಯಾಗಿದೆ. ಕೃಷಿ ನೀತಿಗಳು ಕೇವಲ ಇಳುವರಿ ಹೆಚ್ಚಳದತ್ತ ಗಮನಹರಿಸದೆ, ಆಹಾರದ ಸುರಕ್ಷತೆಯನ್ನೂ ಖಾತರಿಪಡಿಸುವ ದಿಕ್ಕಿನಲ್ಲಿ ಮರುರೂಪುಗೊಳ್ಳಬೇಕಾದ ತುರ್ತು ಅಗತ್ಯವಿದೆ.

