Dailyhunt Logo
  • Light mode
    Follow system
    Dark mode
    • Play Story
    • App Story
ಫುಟ್‌ಬಾಲ್‌ನಲ್ಲಿ ಹಳದಿ-ರೆಡ್ ಕಾರ್ಡ್:ಟ್ರಾಫಿಕ್ ಸಿಗ್ನಲ್‌ನಿಂದ ಹುಟ್ಟಿದ ಕಲ್ಪನೆ!

ಫುಟ್‌ಬಾಲ್‌ನಲ್ಲಿ ಹಳದಿ-ರೆಡ್ ಕಾರ್ಡ್:ಟ್ರಾಫಿಕ್ ಸಿಗ್ನಲ್‌ನಿಂದ ಹುಟ್ಟಿದ ಕಲ್ಪನೆ!

ಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆಯಾದ ಫುಟ್‌ಬಾಲ್‌ನಲ್ಲಿ ಆಟಗಾರರ ಶಿಸ್ತು ಮತ್ತು ನಿಯಂತ್ರಣಕ್ಕಾಗಿ ರೆಫರಿಗಳು 'ಹಳದಿ ಕಾರ್ಡ್' ಮತ್ತು 'ಕೆಂಪು ಕಾರ್ಡ್' ಬಳಕೆ ಮಾಡುವುದು ಸಾಮಾನ್ಯವಾಗಿದೆ. ಪ್ರಸಕ್ತ ಸಾಗುತ್ತಿರುವ 2026ರ ಫಿಫಾ ವಿಶ್ವಕಪ್ ಟೂರ್ನಿಯಲ್ಲೂ ಈ ಕುರಿತು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

ಪಂದ್ಯದ ಗತಿಯನ್ನೇ ಬದಲಿಸಬಹುದಾದ ಹಳದಿ ಹಾಗೂ ಕೆಂಪು ಕಾರ್ಡ್‌ಗಳ ಹಿಂದಿನ ನಿಯಮಗಳು, ಅಮಾನತು ಪ್ರಕ್ರಿಯೆ ಮತ್ತು ಅವುಗಳ ಇತಿಹಾಸದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಳದಿ-ಕೆಂಪು ಕಾರ್ಡ್‌ಗಳ ಇತಿಹಾಸ:

1960ರ ದಶಕದವರೆಗೂ ಫುಟ್‌ಬಾಲ್‌ನಲ್ಲಿ ಇಂತಹ ಕಾರ್ಡ್‌ಗಳ ಬಳಕೆ ಇರಲಿಲ್ಲ. ರೆಫರಿಗಳು ಆಟಗಾರರಿಗೆ ಮೌಖಿಕವಾಗಿ (ಮಾತಿನ ಮೂಲಕ) ಎಚ್ಚರಿಕೆ ನೀಡುತ್ತಿದ್ದರು. ಇಲ್ಲವೇ ಮೈದಾನದಿಂದ ಹೊರಹಾಕುತ್ತಿದ್ದರು. ಆದರೆ, 1962ರ ವಿಶ್ವಕಪ್‌ನ ಚಿಲಿ ಮತ್ತು ಇಟಲಿ ನಡುವಿನ ಪಂದ್ಯದಲ್ಲಿ ಭಾಷಾ ಸಮಸ್ಯೆಯಿಂದಾಗಿ ರೆಫರಿಗಳ ನಿರ್ಧಾರ ಆಟಗಾರರಿಗೆ ಅರ್ಥವಾಗದೆ ಭಾರಿ ಗೊಂದಲ ಸೃಷ್ಟಿಯಾಗಿತ್ತು.

ಇದಕ್ಕೆ ಪರಿಹಾರವಾಗಿ ಬ್ರಿಟಿಷ್ ರೆಫರಿ ಕೆನ್ ಆಸ್ಟನ್ ಅವರು ರಸ್ತೆಯ ಟ್ರಾಫಿಕ್ ಸಿಗ್ನಲ್‌ಗಳಿಂದ ಪ್ರೇರಿತರಾಗಿ ಹಳದಿ ಮತ್ತು ಕೆಂಪು ಕಾರ್ಡ್‌ಗಳ ಕಲ್ಪನೆಯನ್ನು ತಂದರು. ಫಿಫಾ ಇದನ್ನು ಮೊದಲ ಬಾರಿಗೆ 1970ರ ಮೆಕ್ಸಿಕೊ ವಿಶ್ವಕಪ್‌ನಲ್ಲಿ ಜಾರಿಗೆ ತಂದಿತು.

ಗೋಲ್ಡನ್ ಬೂಟ್ ರೇಸ್: ಮೆಸ್ಸಿ-ಎಂಬಾಪೆ ನಡುವೆ ಮುಂದುವರಿದ ಪೈಪೋಟಿಎಂಬಾಪೆ ಮಿಂಚು: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಫ್ರಾನ್ಸ್, ಮೊರಾಕ್ಕೊ ನಿರ್ಗಮನ

ಕಾರ್ಡ್‌ಗಳ ಆವಿಷ್ಕಾರಕ್ಕೆ ಕಾರಣವಾದ ಎರಡು ಮಹತ್ತರ ಘಟನೆಗಳು:

ಕ್ರೀಡಾಲೋಕದಲ್ಲೇ ಅತ್ಯಂತ ಕ್ರಾಂತಿಕಾರಕ ಎನಿಸಿದ ಈ ನಿಯಮವನ್ನು ಇಂಗ್ಲೆಂಡ್‌ನ ಖ್ಯಾತ ರೆಫರಿ ಕೆನ್ ಆಸ್ಟನ್ ಅವರು ಪರಿಚಯಿಸಿದರು. ಕೆನ್ ಆಸ್ಟನ್ ಅವರಿಗೆ ಈ ಆಲೋಚನೆ ಬರಲು ಮುಖ್ಯವಾಗಿ 1962 ಮತ್ತು 1966ರ ವಿಶ್ವಕಪ್‌ನಲ್ಲಿ ನಡೆದ ಎರಡು ಜಾಗತಿಕ ಮಟ್ಟದ ವಿವಾದಗಳು ಕಾರಣವಾದವು.

1. ಬ್ಯಾಟಲ್ ಆಫ್ ಸ್ಯಾಂಟಿಯಾಗೊ (1962)

ಚಿಲಿ ಮತ್ತು ಇಟಲಿ ನಡುವಿನ ಹಿಂಸಾತ್ಮಕ ಪಂದ್ಯವನ್ನು ನಿಯಂತ್ರಿಸುವ ಜವಾಬ್ದಾರಿ ಕೆನ್ ಆಸ್ಟನ್ ಅವರ ಮೇಲಿತ್ತು. ಇಟಲಿಯ ಜಾರ್ಜಿಯೊ ಫೆರಿನಿ ಎಂಬ ಆಟಗಾರನಿಗೆ ಆಸ್ಟನ್ ಅವರು ಮೈದಾನದಿಂದ ಹೊರಹೋಗುವಂತೆ ಇಂಗ್ಲಿಷ್‌ನಲ್ಲಿ ಆದೇಶಿಸಿದರು. ಆದರೆ ಇಟಲಿಯ ಆಟಗಾರ ತನಗೆ ಇಂಗ್ಲಿಷ್ ಅರ್ಥವಾಗುವುದಿಲ್ಲ ಎಂಬಂತೆ ನಟಿಸಿ ಮೈದಾನದಲ್ಲೇ ಹಠ ಹಿಡಿದು ನಿಂತರು. ಕೊನೆಗೆ ಪೊಲೀಸರು ಬಂದು ಆತನನ್ನು ಎಳೆದುಕೊಂಡು ಹೋಗಬೇಕಾಯಿತು. ಮೈದಾನದಲ್ಲಿ ರೆಫರಿಯ ನಿರ್ಧಾರಗಳು ಎಲ್ಲ ಭಾಷೆಯ ಆಟಗಾರರಿಗೂ ತಕ್ಷಣ ಅರ್ಥವಾಗುವಂತಹ ಒಂದು ಸಾರ್ವತ್ರಿಕ ಸಂಕೇತ ಇರಬೇಕು ಎಂಬುದನ್ನು ಆಸ್ಟನ್ ಮನಗಂಡರು.

2. ಇಂಗ್ಲೆಂಡ್ ಮತ್ತು ಅರ್ಜೆಂಟೀನಾ ವಿವಾದ (1966)

1966ರ ವಿಶ್ವಕಪ್ ಕ್ವಾರ್ಟರ್‌ಫೈನಲ್‌ನಲ್ಲಿ ಅರ್ಜೆಂಟೀನಾದ ನಾಯಕ ಆಂಟೋನಿಯೊ ರಟ್ಟಿನ್ ಅವರನ್ನು ಜರ್ಮನ್ ರೆಫರಿ ಮೈದಾನದಿಂದ ಹೊರಹಾಕಿದರು. ಆದರೆ ಭಾಷೆಯ ಗೊಂದಲದಿಂದಾಗಿ ರಟ್ಟಿನ್ ತನಗೆ ಏನು ಶಿಕ್ಷೆಯಾಗಿದೆ ಎಂದೇ ತಿಳಿಯದೆ ಸುಮಾರು 9 ನಿಮಿಷಗಳ ಕಾಲ ಮೈದಾನದಲ್ಲೇ ವಾದಕ್ಕಿಳಿದರು. ಅದೇ ಪಂದ್ಯದಲ್ಲಿ ಇಂಗ್ಲೆಂಡ್‌ನ ಸ್ಟಾರ್ ಆಟಗಾರರಾದ ಬಾಬಿ ಚಾರ್ಲ್ಟನ್ ಮತ್ತು ಜಾಕ್ ಚಾರ್ಲ್ಟನ್ ಅವರಿಗೂ ರೆಫರಿ ಅಧಿಕೃತ ಎಚ್ಚರಿಕೆ ನೀಡಿದ್ದರು. ಆದರೆ ಆ ವಿಷಯ ಆಟಗಾರರಿಗಾಗಲಿ, ಮಾಧ್ಯಮಗಳಿಗಾಗಲಿ ಪಂದ್ಯ ಮುಗಿಯುವವರೆಗೂ ತಿಳಿದಿರಲಿಲ್ಲ. ಪಂದ್ಯದ ನಂತರ ಇಂಗ್ಲೆಂಡ್ ತಂಡದ ಮ್ಯಾನೇಜರ್ ಆಲ್ಫ್ ರಾಮ್ಸೆ ಅವರು ಫಿಫಾ ಸಮಿತಿಯಲ್ಲಿದ್ದ ಕೆನ್ ಆಸ್ಟನ್ ಅವರ ಬಳಿ ಈ ಗೊಂದಲದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಟ್ರಾಫಿಕ್ ಸಿಗ್ನಲ್‌ನಿಂದ ಸಿಕ್ಕ ಕಲ್ಪನೆ!

1966ರ ಆ ವಿವಾದಾತ್ಮಕ ಪಂದ್ಯದ ನಂತರ ಕೆನ್ ಆಸ್ಟನ್ ಅವರು ಗಾಢ ಆಲೋಚನೆಯಲ್ಲಿ ಮುಳುಗಿ ತಮ್ಮ ಕಾರಿನಲ್ಲಿ ಲಂಡನ್‌ನ ರಸ್ತೆಯೊಂದರಲ್ಲಿ ಮನೆಗೆ ಮರಳುತ್ತಿದ್ದರು. ಆಗ ಅವರು ಕೆನ್ಸಿಂಗ್ಟನ್ ಹೈ ಸ್ಟ್ರೀಟ್‌ನ ಟ್ರಾಫಿಕ್ ಸಿಗ್ನಲ್ ಒಂದರ ಬಳಿ ಕಾರನ್ನು ನಿಲ್ಲಿಸಿದರು.

'ನಾನು ಕಾರು ಚಲಾಯಿಸುತ್ತಾ ಟ್ರಾಫಿಕ್ ಸಿಗ್ನಲ್‌ನ ಕೆಂಪು ಮತ್ತು ಹಳದಿ ದೀಪಗಳನ್ನು ನೋಡುತ್ತಿದ್ದಾಗ ನನಗೆ ಆ ಯೋಚನೆ ಹೊಳೆಯಿತು. ಹಳದಿ ದೀಪ ಎಂದರೆ 'ನಿಧಾನವಾಗಿ, ಎಚ್ಚರಿಕೆಯಿಂದ ಇರಿ' ಮತ್ತು ಕೆಂಪು ದೀಪ ಎಂದರೆ 'ತಕ್ಷಣ ನಿಲ್ಲಿಸಿ, ನೀವು ಹೋಗುವಂತಿಲ್ಲ' ಎಂಬುದನ್ನು ಸೂಚಿಸುತ್ತದೆ. ಇದನ್ನೇ ಫುಟ್‌ಬಾಲ್‌ನಲ್ಲೂ ಬಳಸಿದರೆ ಜಗತ್ತಿನ ಯಾವುದೇ ಮೂಲೆಯ ಆಟಗಾರನಿಗಾದರೂ ಭಾಷೆಯ ಹಂಗಿಲ್ಲದೆ ರೆಫರಿಯ ನಿರ್ಧಾರ ತಕ್ಷಣ ಅರ್ಥವಾಗುತ್ತದೆ ಅಂದುಕೊಂಡೆ' ಎಂದು ಕೆನ್ ಆಸ್ಟನ್ ಸಂದರ್ಶನವೊಂದರಲ್ಲಿ ಹೇಳಿರುವುದು ದಾಖಲಾಗಿದೆ.

ಮನೆಗೆ ಬಂದ ತಕ್ಷಣ ಆಸ್ಟನ್ ಅವರು ತಮ್ಮ ಪತ್ನಿ ಇಲ್ಬೆ ಅವರ ಸಹಾಯದಿಂದ ಜೇಬಿನಲ್ಲಿ ಸುಲಭವಾಗಿ ಇಟ್ಟುಕೊಳ್ಳಬಹುದಾದ ಸಣ್ಣ ಗಾತ್ರದ ಹಳದಿ ಮತ್ತು ಕೆಂಪು ಬಣ್ಣದ ಕಾರ್ಡ್‌ಗಳನ್ನು ಸಿದ್ಧಪಡಿಸಿದರು.

ಜಾರಿಗೆ ಬಂದಿದ್ದು ಯಾವಾಗ?

ಕೆನ್ ಆಸ್ಟನ್ ಅವರು ಈ ಪ್ರಸ್ತಾಪವನ್ನು ಫಿಫಾ ಶಿಸ್ತು ಸಮಿತಿಯ ಮುಂದೆ ಇಟ್ಟಾಗ ಅದಕ್ಕೆ ತಕ್ಷಣ ಒಪ್ಪಿಗೆ ಸಿಕ್ಕಿತು.

1970ರ ಮೆಕ್ಸಿಕೊ ವಿಶ್ವಕಪ್: ಇತಿಹಾಸದಲ್ಲೇ ಮೊದಲ ಬಾರಿಗೆ ಫಿಫಾ ವಿಶ್ವಕಪ್‌ನಲ್ಲಿ ಹಳದಿ ಮತ್ತು ಕೆಂಪು ಕಾರ್ಡ್‌ಗಳ ವ್ಯವಸ್ಥೆಯನ್ನು ಅಧಿಕೃತವಾಗಿ ಜಾರಿಗೆ ತರಲಾಯಿತು.

ಮೊದಲ ಹಳದಿ ಕಾರ್ಡ್: ವಿಶ್ವಕಪ್ ಇತಿಹಾಸದ ಅತ್ಯಂತ ಮೊದಲ ಹಳದಿ ಕಾರ್ಡ್ ಅನ್ನು ಸೋವಿಯತ್ ಯೂನಿಯನ್ (USSR) ತಂಡದ ಕಾಖಿ ಅಸಟಿಯಾನಿ ಪಡೆದರು.

ಬದಲಾದ ಕ್ರೀಡಾಲೋಕ: ಈ ಕ್ರಾಂತಿಕಾರಕ ನಿಯಮವು ರೆಫರಿಗಳ ಕೆಲಸವನ್ನು ಸುಲಭಗೊಳಿಸಿದ್ದಲ್ಲದೆ, ಕ್ರೀಡೆಯಲ್ಲಿ ಅಶಿಸ್ತಿನ ವರ್ತನೆ ತೋರುವ ಆಟಗಾರರ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಿತು. ಮುಂದೆ ಇದನ್ನು ಫುಟ್‌ಬಾಲ್ ಮಾತ್ರವಲ್ಲದೆ ಹಾಕಿ, ರಗ್ಬಿ ಸೇರಿದಂತೆ ಹಲವು ಕ್ರೀಡೆಗಳೂ ಅಳವಡಿಸಿಕೊಂಡವು.

ಹಳದಿ ಕಾರ್ಡ್ ಎಂದರೇನು?

ಇದು ಆಟಗಾರನಿಗೆ ನೀಡಲಾಗುವ ಅಧಿಕೃತ 'ಎಚ್ಚರಿಕೆ' . ಮೈದಾನದಲ್ಲಿ ಸಣ್ಣಪುಟ್ಟ ತಪ್ಪುಗಳನ್ನು ಮಾಡಿದಾಗ ರೆಫರಿ ಇದನ್ನು ಪ್ರದರ್ಶಿಸುತ್ತಾರೆ.

ಯಾವಾಗ ನೀಡಲಾಗುತ್ತದೆ?: ಬೇಜವಾಬ್ದಾರಿಯ ಟ್ಯಾಕಲ್ ಮಾಡುವುದು, ಸಮಯ ವ್ಯರ್ಥ ಮಾಡುವುದು, ರೆಫರಿ ನಿರ್ಧಾರಕ್ಕೆ ಅಸಮ್ಮತಿ ಸೂಚಿಸುವುದು, ಕ್ರೀಡಾ ವಿರೋಧಿ ವರ್ತನೆ ಮತ್ತು ನಿಯಮಗಳನ್ನು ಪದೇ ಪದೇ ಉಲ್ಲಂಘಿಸುವುದಕ್ಕೆ ಹಳದಿ ಕಾರ್ಡ್ ನೀಡಲಾಗುತ್ತದೆ.

ಪರಿಣಾಮ: ಹಳದಿ ಕಾರ್ಡ್ ಪಡೆದ ಆಟಗಾರ ಮೈದಾನದಲ್ಲೇ ಉಳಿದು ಆಟ ಮುಂದುವರಿಸಬಹುದು. ಆದರೆ, ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ.

ಕೆಂಪು ಕಾರ್ಡ್ ಎಂದರೇನು?

ಇದು ಆಟಗಾರನಿಗೆ ನೀಡಲಾಗುವ ಕಠಿಣ ಶಿಕ್ಷೆ ಅಂದರೆ ಮೈದಾನದಿಂದ ಹೊರಹಾಕುವುದು.

ಯಾವಾಗ ನೀಡಲಾಗುತ್ತದೆ?: ಎದುರಾಳಿ ಆಟಗಾರನಿಗೆ ಗಂಭೀರ ಗಾಯ ಉಂಟುಮಾಡುವಂತಹ ಅಪಾಯಕಾರಿ ಫೌಲ್ ಮಾಡುವುದು, ಮೈದಾನದಲ್ಲಿ ದೈಹಿಕ ದೌರ್ಜನ್ಯ ಎಸಗುವುದು, ನಿಂದನಾತ್ಮಕ ಅಥವಾ ಅಶ್ಲೀಲ ಪದ ಬಳಸುವುದು ಮತ್ತು ಎದುರಾಳಿ ತಂಡ ಗೋಲು ಗಳಿಸುವ ಸ್ಪಷ್ಟ ಅವಕಾಶವನ್ನು ನಿಯಮಬಾಹಿರವಾಗಿ ತಡೆಯುವುದಕ್ಕೆ ನೇರ ಕೆಂಪು ಕಾರ್ಡ್ ನೀಡಲಾಗುತ್ತದೆ.

ಎರಡನೇ ಹಳದಿ ಕಾರ್ಡ್ ನಿಯಮ: ಒಂದೇ ಪಂದ್ಯದಲ್ಲಿ ಒಬ್ಬನೇ ಆಟಗಾರ ಎರಡನೇ ಬಾರಿ ಹಳದಿ ಕಾರ್ಡ್‌ಗೆ ಅರ್ಹವಾದ ತಪ್ಪು ಮಾಡಿದರೆ, ರೆಫರಿ ತಕ್ಷಣವೇ ಕೆಂಪು ಕಾರ್ಡ್ ತೋರಿಸಿ ಆತನನ್ನು ಮೈದಾನದಿಂದ ಹೊರಹಾಕುತ್ತಾರೆ.

ತಂಡದ ಮೇಲಾಗುವ ಪರಿಣಾಮಗಳು:

ಒಬ್ಬ ಆಟಗಾರ ಕೆಂಪು ಕಾರ್ಡ್ ಪಡೆದು ಹೊರನಡೆದರೆ, ಆತನ ಜಾಗಕ್ಕೆ ಮತ್ತೊಬ್ಬ ಬದಲಿ ಆಟಗಾರನನ್ನು ಮೈದಾನಕ್ಕೆ ಇಳಿಸಲು ಅವಕಾಶವಿರುವುದಿಲ್ಲ. ಪರಿಣಾಮವಾಗಿ, ಆ ತಂಡವು ಪಂದ್ಯದ ಉಳಿದ ಅವಧಿಯನ್ನು ಒಬ್ಬ ಆಟಗಾರನ ಕೊರತೆಯೊಂದಿಗೆ 10 ಆಟಗಾರರೊಂದಿಗೆ ಆಡಬೇಕಾಗುತ್ತದೆ. ಇದು ಪಂದ್ಯದ ಫಲಿತಾಂಶದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಕೇವಲ ಆಟಗಾರರಷ್ಟೇ ಅಲ್ಲದೆ, ಗ್ಯಾಲರಿಯಲ್ಲಿರುವ ತರಬೇತುದಾರರು ಮತ್ತು ಮ್ಯಾನೇಜರ್‌ಗಳಿಗೂ ರೆಫರಿ ಕಾರ್ಡ್ ತೋರಿಸಿ ಹೊರಹಾಕಬಹುದು.

ಅಮಾನತು ನಿಯಮಗಳು ಹೇಗೆ ಕೆಲಸ ಮಾಡುತ್ತವೆ?

ವಿವಿಧ ಲೀಗ್‌ಗಳು ಮತ್ತು ಟೂರ್ನಿಗಳಲ್ಲಿ ಕಾರ್ಡ್‌ಗಳನ್ನು ಪಡೆದಿರುವುದಕ್ಕೆ ತಕ್ಕಂತೆ ಅಮಾನತು ನಿಯಮಗಳು ಬದಲಾಗುತ್ತವೆ:

ನೇರ ಕೆಂಪು ಕಾರ್ಡ್ ಅಥವಾ ಎರಡು ಹಳದಿ ಕಾರ್ಡ್: ಪಂದ್ಯವೊಂದರಲ್ಲಿ ಕೆಂಪು ಕಾರ್ಡ್ ಪಡೆದ ಆಟಗಾರ ಸ್ವಯಂಚಾಲಿತವಾಗಿ ಮುಂದಿನ ಕನಿಷ್ಠ ಒಂದು ಪಂದ್ಯದಿಂದ ಅಮಾನತುಗೊಳ್ಳುತ್ತಾನೆ. ತಪ್ಪಿನ ತೀವ್ರತೆ ಹೆಚ್ಚಿದ್ದರೆ (ಉದಾಹರಣೆಗೆ ಹೊಡೆದಾಟ) ನಿಷೇಧದ ಅವಧಿಯನ್ನು ಮೂರು ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳಿಗೆ ವಿಸ್ತರಿಸಲಾಗುತ್ತದೆ.

ಕಾರ್ಡ್‌ಗಳ ಸಂಗ್ರಹ: ಬೇರೆ ಬೇರೆ ಪಂದ್ಯಗಳಲ್ಲಿ ಹಳದಿ ಕಾರ್ಡ್‌ಗಳನ್ನು ಸಂಗ್ರಹಿಸುತ್ತಾ ಹೋದರೆ ಆಟಗಾರರು ಅಮಾನತು ಎದುರಿಸಬೇಕಾಗುತ್ತದೆ.

ವಿಶ್ವಕಪ್ ಮತ್ತು ಯುರೋ ಕಪ್: ಟೂರ್ನಿಯ ಬೇರೆ ಬೇರೆ ಪಂದ್ಯಗಳಲ್ಲಿ ಒಟ್ಟು 2 ಹಳದಿ ಕಾರ್ಡ್ ಪಡೆದರೆ ಮುಂದಿನ ಒಂದು ಪಂದ್ಯಕ್ಕೆ ನಿಷೇಧ ವಿಧಿಸಲಾಗುತ್ತದೆ.

ಕ್ಲಬ್ ಫುಟ್‌ಬಾಲ್ (ಇಪಿಎಲ್, ಲಾ ಲಿಗಾ ಇತ್ಯಾದಿ): ಸಾಮಾನ್ಯವಾಗಿ ಸೀಸನ್‌ನ ಮೊದಲಾರ್ಧದಲ್ಲಿ ಒಟ್ಟು 5 ಹಳದಿ ಕಾರ್ಡ್‌ಗಳನ್ನು ಸಂಗ್ರಹಿಸಿದರೆ ಆಟಗಾರನಿಗೆ ಒಂದು ಪಂದ್ಯದ ಅಮಾನತು ಶಿಕ್ಷೆಯಾಗುತ್ತದೆ.

ಕಾರ್ಡ್‌ಗಳ ಮರುಹೊಂದಿಕೆ:

ಪ್ರಮುಖ ಆಟಗಾರರು ಕೇವಲ ಹಳದಿ ಕಾರ್ಡ್‌ಗಳ ಕಾರಣದಿಂದಾಗಿ ಫೈನಲ್‌ನಂತಹ ಮಹತ್ವದ ಪಂದ್ಯಗಳನ್ನು ತಪ್ಪಿಸಿಕೊಳ್ಳಬಾರದು ಎಂಬ ಕಾರಣಕ್ಕೆ 'ಕಾರ್ಡ್ ರಿಸೆಟ್' ನಿಯಮವಿದೆ. ಫಿಫಾ ವಿಶ್ವಕಪ್‌ನಲ್ಲಿ ಕ್ವಾರ್ಟರ್ ಫೈನಲ್ ಪಂದ್ಯಗಳು ಮುಗಿದ ನಂತರ ಹಳದಿ ಕಾರ್ಡ್‌ಗಳನ್ನು ರಿಸೆಟ್ (ಶೂನ್ಯಕ್ಕೆ) ಮಾಡಲಾಗುತ್ತದೆ. ಇದರಿಂದಾಗಿ ಸೆಮಿಫೈನಲ್‌ನಲ್ಲಿ ಆಟಗಾರ ಸಿಂಗಲ್ ಹಳದಿ ಕಾರ್ಡ್ ಪಡೆದರೂ ಆತ ಫೈನಲ್ ಪಂದ್ಯ ಆಡಲು ಯಾವುದೇ ಅಡ್ಡಿಯಿರುವುದಿಲ್ಲ. ಆದರೆ ಸೆಮಿಫೈನಲ್‌ಗೂ ಮುನ್ನವೇ ಎರಡು ಹಳದಿ ಕಾರ್ಡ್ ಪಡೆದು ಅಮಾನತುಗೊಂಡಿದ್ದರೆ ಈ ರಿಸೆಟ್ ನಿಯಮ ಅನ್ವಯಿಸುವುದಿಲ್ಲ.

ಇತ್ತೀಚಿನ ಹೊಸ ನಿಯಮಗಳು:

ಕ್ರೀಡೆಯಲ್ಲಿ ಶಿಸ್ತು ಕಾಪಾಡಲು ಇತ್ತೀಚಿನ ದಿನಗಳಲ್ಲಿ ಫಿಫಾ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. 2026ರ ವಿಶ್ವಕಪ್‌ನಿಂದ ಅನ್ವಯವಾಗುವಂತೆ, ರೆಫರಿಯ ನಿರ್ಧಾರವನ್ನು ಪ್ರತಿಭಟಿಸಿ ಮೈದಾನದಿಂದ ಹೊರಹೋಗುವ ಆಟಗಾರರಿಗೆ ನೇರ ಕೆಂಪು ಕಾರ್ಡ್ ನೀಡಲಾಗುತ್ತದೆ. ಅಲ್ಲದೆ, ಮೈದಾನದಲ್ಲಿ ಗಲಾಟೆಯ ಸಂದರ್ಭದಲ್ಲಿ ರೆಫರಿಗೆ ಕೇಳಿಸದಂತೆ ಬಾಯಿ ಮುಚ್ಚಿಕೊಂಡು (ಮುಖ ಮರೆಮಾಚಿ) ನಿಂದನಾತ್ಮಕ ಪದಗಳನ್ನು ಬಳಸುವ ಆಟಗಾರರಿಗೂ ಕೆಂಪು ಕಾರ್ಡ್ ನೀಡುವ ನಿಯಮ ತರಲಾಗಿದೆ.

(ಆಧಾರ: ಫಿಫಾ ಮ್ಯೂಸಿಯಂ ದಾಖಲೆಗಳು, ದಿ ಗಾರ್ಡಿಯನ್ ಕ್ರೀಡಾ ಇತಿಹಾಸ ವರದಿ ಮತ್ತು ಇಎಸ್‌ಪಿಎನ್ ಫುಟ್‌ಬಾಲ್)

ಫಿಫಾ ವಿಶ್ವಕಪ್ 2026: ಏನಿದು 'ಸಡನ್ ಡೆತ್' ನಿಯಮ?ಕ್ರೀಡೆಗೆ ಕಪ್ಪು ಚುಕ್ಕೆಯಾದ ಫುಟ್‌ಬಾಲ್ ಜಗತ್ತಿನ ಐದು ಪ್ರಮುಖ ವಿವಾದಗಳು
Dailyhunt
Disclaimer: This content has not been generated, created or edited by Dailyhunt. Publisher: Prajavani