ಫೆಬ್ರುವರಿ 28ರಂದು ಅಮೆರಿಕ ಹಾಗೂ ಇಸ್ರೇಲ್ ಸೇರಿ ಇರಾನ್ ಮೇಲೆ ದಾಳಿ ನಡೆಸಿದಾಗ, ಜಾಗತಿಕ ರಾಷ್ಟ್ರಗಳಿಗೆ ತೈಲ ಪೂರೈಕೆಯಲ್ಲಾಗುವ ಅಡಚಣೆಯೇ ದೊಡ್ಡ ತಲೆನೋವಾಗಿತ್ತು. ಯುದ್ಧ ಸ್ಫೋಟಗೊಳ್ಳುತ್ತಿದ್ದಂತೆಯೇ ಕಚ್ಚಾ ತೈಲ ಬೆಲೆ ಏರಿಕೆಯಾಯಿತು. ತೈಲ ಹೊತ್ತ ಹತ್ತಾರು ಹಡಗುಗಳು ಹೊರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡವು.
ಇಡೀ ವಿಶ್ವದ ತೈಲ ಪೂರೈಕೆ ವ್ಯವಸ್ಥೆಯೇ ಅಸ್ತವ್ಯಸ್ತಗೊಂಡಿತು. ಇದರ ನಡುವೆ ಹೆಚ್ಚು ಗಮನ ಸೆಳೆಯದ, ಆದರೆ ಗಂಭೀರವಾದ ಪರಿಣಾಮ ಬೀರುವ ವಿಷಯವೆಂದರೆ ಹೀಲಿಯಂ ಪೂರೈಕೆಯಲ್ಲಿನ ವ್ಯತ್ಯಯ. ಪಶ್ಚಿಮ ಏಷ್ಯಾ ಸಂಘರ್ಷವು ನೈಸರ್ಗಿಕ ಅನಿಲ ಮೂಲಸೌಕರ್ಯ ಮತ್ತು ಹಡಗು ಮಾರ್ಗಗಳಿಗೆ ಅಡ್ಡಿಪಡಿಸುತ್ತಿರುವುದರಿಂದ, ಇದರ ಪ್ರಭಾವವು ಉನ್ನತ ತಂತ್ರಜ್ಞಾನ ವಲಯಗಳಿಗೆ ಅದರಲ್ಲೂ ವಿಶೇಷವಾಗಿ ಸೆಮಿಕಂಡಕ್ಟರ್ ತಯಾರಿಕೆ ಮತ್ತು ಕೃತಕ ಬುದ್ಧಿಮತ್ತೆ (ಎ.ಐ) ಕ್ಷೇತ್ರಕ್ಕೆ ವಿಸ್ತರಿಸಲು ಪ್ರಾರಂಭಿಸಿದೆ. ಡೇಟಾ ಸೆಂಟರ್, ಸ್ಮಾರ್ಟ್‌ಫೋನ್ ಮತ್ತು ಎಂ.ಆರ್.ಐ ಯಂತ್ರಗಳ ತಯಾರಿಕೆಗೆ ಇದರ ಬಿಸಿ ಮುಟ್ಟಿದೆ.
ಹೆದ್ದಾರಿ ಸುರಕ್ಷತೆ, ನಿರ್ವಹಣೆ: ಎ.ಐ ನಿಗಾಹೀಲಿಯಂ ಸ್ವತಂತ್ರವಾಗಿ ಉತ್ಪತ್ತಿಯಾಗುವುದಿಲ್ಲ. ಅದು ನೈಸರ್ಗಿಕ ಅನಿಲ ಸಂಸ್ಕರಣೆಯ ಉಪ-ಉತ್ಪನ್ನ. ಕ್ರಯೋಜೆನಿಕ್ ಡಿಸ್ಟಿಲೇಶನ್ ಪ್ರಕ್ರಿಯೆ ಮೂಲಕ ಹೀಲಿಯಂ ಅನ್ನು ಹೊರತೆಗೆಯಲಾಗುತ್ತದೆ. ಎಲ್‌ಎನ್‌ಜಿ ಉತ್ಪಾದನೆ ನಿಂತಾಗ, ಹೀಲಿಯಂ ಉತ್ಪಾದನೆಯೂ ಅದರೊಂದಿಗೆ ಸ್ಥಗಿತವಾಗುತ್ತದೆ. ಜಗತ್ತಿಗೆ ಪೂರೈಕೆಗಾಗುವ ಹೀಲಿಯಂನ ಬಹುಭಾಗ ಉತ್ಪತ್ತಿಯಾಗುವುದು ಇರಾನ್ ಹಾಗೂ ಕತಾರ್‌ನಲ್ಲಿ. ಈ ದೇಶಗಳ ಜಂಟಿ ಹಿಡಿತದಲ್ಲಿರುವ ಸೌತ್ ಪಾರ್ಸ್/ನಾರ್ತ್ ಡೋಮ್ ಇದು ವಿಶ್ವದ ಅತಿ ದೊಡ್ಡ ಅನಿಲ ನಿಕ್ಷೇಪಗಳಲ್ಲಿ ಒಂದು. ಜಾಗತಿಕ ಹೀಲಿಯಂ ರಫ್ತಿನಲ್ಲಿ ಕತಾರ್ ಮಾತ್ರವೇ ಸುಮಾರು ಶೇ 30-33 ರಷ್ಟು ಪಾಲನ್ನು ಹೊಂದಿದೆ. ಹೀಗಾಗಿ ಕೊಲ್ಲಿ ಪ್ರದೇಶವು ಜಾಗತಿಕ ಹೀಲಿಯಂ ಪೂರೈಕೆ ಸರಪಳಿಗೆ ಅನಿವಾರ್ಯವಾಗಿದೆ. ಮೂಲಸೌಕರ್ಯ ಸ್ಥಗಿತ, ನಿರ್ಬಂಧಗಳು ಅಥವಾ ಸಾಗಣೆ ಅಡೆತಡೆಗಳ ಮೂಲಕ ವ್ಯತ್ಯಯ ಉಂಟಾದರೆ ಹೀಲಿಯಂ ಕೊರತೆ ಉಂಟಾಗಲಿದೆ.
ಯು.ಎಸ್. ಜಿಯೋಲಾಜಿಕಲ್ ಸಮೀಕ್ಷೆ ಪ್ರಕಾರ, 2025ರಲ್ಲಿ ಕತಾರ್ ಸುಮಾರು 63 ಮಿಲಿಯನ್ ಕ್ಯೂಬಿಕ್ ಮೀಟರ್ ಹೀಲಿಯಂ ಅನ್ನು ಉತ್ಪಾದಿಸಿದೆ. ಇದು ಜಾಗತಿಕವಾಗಿ ಉತ್ಪಾದನೆಯಾಗುವ ಹೀಲಿಯಂನ ಮೂರನೇ ಒಂದಕ್ಕೆ ಸಮ. ವಿಶ್ವದ ಹೀಲಿಯಂ ಉತ್ಪಾದನಾ ಸಾಮರ್ಥ್ಯ ಸುಮಾರು 190 ಮಿಲಿಯನ್ ಕ್ಯೂಬಿಕ್ ಮೀಟರ್.
ಕೊಲ್ಲಿ ಯುದ್ಧ ಪರಿಣಾಮ: ಪರ್ಯಾಯ ಇಂಧನ ಮೂಲ ಹುಡುಕಾಟದಲ್ಲಿ ರಾಷ್ಟ್ರಗಳುಮಾರ್ಚ್ 18ರ ಸಂಜೆ ಕತಾರ್‌ನ ಉತ್ತರ ಕರಾವಳಿಯಲ್ಲಿರುವ ವಿಶ್ವದ ಅತಿದೊಡ್ಡ ಕೈಗಾರಿಕಾ ನಗರಗಳಲ್ಲಿ ಒಂದಾಗಿರುವ ರಾಸ್ ಲಫಾನ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೂಲಕ ಇರಾನ್ ಎರಡನೇ ಬಾರಿಗೆ ದಾಳಿ ನಡೆಸಿತು. ಈ ದಾಳಿಯಿಂದಾಗಿ 'ಪರ್ಲ್ ಜಿಟಿಎಲ್' ಸೌಲಭ್ಯಕ್ಕೆ ವ್ಯಾಪಕ ಹಾನಿಯಾಗಿದೆ ಎಂದು 'ಕತಾರ್ ಎನರ್ಜಿ' ಹೇಳಿದೆ. ಮಾರ್ಚ್ 19ರ ಮುಂಜಾನೆ ಹಲವಾರು ಹೆಚ್ಚುವರಿ ಎಲ್‌ಎನ್‌ಜಿ ಸೌಲಭ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದ್ದು, ಹೆಚ್ಚಿನ ಹಾನಿ ಸಂಭವಿಸಿದೆ. ಸಂಘರ್ಷ ಕೊನೆಗೊಳ್ಳುವವರೆಗೆ ಉತ್ಪಾದನೆಯು ಪುನರಾರಂಭವಾಗುವುದಿಲ್ಲ. ಸಂಘರ್ಷ ನಿಂತರೂ ಅದರ ಕಾರ್ಯಾಚರಣೆ ಸಹಜ ಸ್ಥಿತಿಗೆ ಮರಳಬೇಕಾದರೆ ಹಲವು ತಿಂಗಳುಗಳೇ ಬೇಕಾಗುತ್ತದೆ ಎಂದು ಕತಾರ್ ಎನರ್ಜಿಯ ಸಿಇಒ ಹೇಳಿದ್ದಾರೆ. ಕತಾರ್‌ನ ಸರ್ಕಾರಿ ಸ್ವಾಮ್ಯದ ಇಂಧನ ಸಂಸ್ಥೆಯು ಮಾರ್ಚ್ 4 ರಂದು ಯುದ್ಧದಿಂದ ದಾಳಿಗೊಳಗಾದ ಸ್ಥಾವರಗಳ ಬಗ್ಗೆ ಮಾಡಿಕೊಂಡ ಒಪ್ಪಂದಗಳ ಮೇಲೆ 'ಫೋರ್ಸ್ ಮೆಜೂರ್' (ತುರ್ತು ಪರಿಸ್ಥಿತಿ) ಘೋಷಿಸಿತ್ತು.
ಲಾಜಿಸ್ಟಿಕ್ಸ್ ಸಮಸ್ಯೆಯು ಹೀಲಿಯಂ ಉತ್ಪಾದನಾ ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಲಿದೆ. ಕತಾರ್‌ನ ಬಹುತೇಕ ಹೀಲಿಯಂ ರಫ್ತು ಹೊರ್ಮುಜ್ ಜಲಸಂಧಿಯ ಮೂಲಕವೇ ನಡೆಯುತ್ತದೆ. ಪರ್ಯಾಯ ಕಡಲ ಮಾರ್ಗಗಳಿಲ್ಲ. ಇರಾನ್ ಈಗ ಜಲಸಂಧಿಯನ್ನು ಮುಚ್ಚಿದೆ. ವಿಶ್ವದ ಕ್ರಯೋಜೆನಿಕ್ ಹೀಲಿಯಂ ಐಎಸ್‌ಒ ಕಂಟೈನರ್‌ನ ಸುಮಾರು ಮೂರನೇ ಒಂದು ಭಾಗ ಕತಾರ್‌ನಲ್ಲಿ ಅಥವಾ ಸುತ್ತಮುತ್ತ ಸಿಲುಕಿಕೊಂಡಿವೆ. ಆದರೆ ಹೀಲಿಯಂ ಅನ್ನು ತೈಲದಂತೆ ಸುಮಾರು ದಿನ ಇಡಲು ಸಾಧ್ಯವಿಲ್ಲ. ದ್ರವೀಕೃತ ಹೀಲಿಯಂ 35-48 ದಿನಗಳಲ್ಲಿ ಆವಿಯಾಗುತ್ತದೆ. ಹೀಗಾಗಿ ಹೀಲಿಯಂ ತುಂಬಿಕೊಂಡಿರುವ ನೂರಾರು ಕಂಟೈನರ್‌ಗಳು ಕಾಲಮಿತಿಯೊಳಗೆ ಗಮ್ಯ ತಲುಪಬೇಕಾಗುತ್ತದೆ.
'ಕತಾರ್‌ನಲ್ಲಿ ಉತ್ಪಾದನೆ ಸ್ಥಗಿತಗೊಂಡಿರುವುದರಿಂದ ಮಾರುಕಟ್ಟೆಯಲ್ಲಿ ಪ್ರತಿ ತಿಂಗಳು ಸುಮಾರು 5.2 ಮಿಲಿಯನ್ ಕ್ಯೂಬಿಕ್ ಮೀಟರ್ ಹೀಲಿಯಂ ಕೊರತೆಯುಂಟಾಗುತ್ತಿದೆ. ಇದು ಜಾಗತಿಕ ಮಾರುಕಟ್ಟೆಯನ್ನು ಅತ್ಯಂತ ವೇಗವಾಗಿ ಕುಸಿಯುವಂತೆ ಮಾಡುವಷ್ಟು ದೊಡ್ಡ ವ್ಯತ್ಯಯವಾಗಿದೆ' ಎಂದು ಇಂಡೆಕ್ಸ್ ಬಾಕ್ಸ್ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಲೆಕ್ಸಾಂಡರ್ ರೊಮಾನೆಂಕೊ ಅವರು ಹೇಳಿದ್ದಾರೆ.
ಕೊಲ್ಲಿ ಸಂಘರ್ಷ ಶಮನಕ್ಕೆ ಪಾಕಿಸ್ತಾನದ ಪ್ರಯತ್ನ ಶ್ಲಾಘಿಸಿದ ಕತಾರ್ಚಿಪ್ಗಳಿಗೆ ಹೀಲಿಯಂ ಏಕೆ ಅನಿವಾರ್ಯ?
ತಂತ್ರಜ್ಞಾನಕ್ಕೆ ಹೀಲಿಯಂ ಏಕೆ ಮುಖ್ಯ ಎಂಬುದನ್ನು ಅರ್ಥಮಾಡಿಕೊಳ್ಳಲು, ಸೆಮಿಕಂಡಕ್ಟರ್ ತಯಾರಿಕಾ ಘಟಕದೊಳಗೆ ಹೀಲಿಯಂ ಏನು ಮಾಡುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಚಿಪ್ ತಯಾರಕರು ವೇಫರ್‌ಗಳನ್ನು (ಸಣ್ಣ ಎಲೆಕ್ಟ್ರಾನಿಕ್ ಸರ್ಕ್ಯೂಟ್‌ಗಳೊಂದಿಗೆ ಮುದ್ರಿಸಲಾದ ಸಿಲಿಕಾನ್ ಡಿಸ್ಕ್‌ಗಳು) ತಂಪಾಗಿಸಲು ಹೀಲಿಯಂ ಬಳಸುತ್ತಾರೆ. ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ಸೆಕ್ಯುರಿಟಿ ಅಂಡ್ ಎಮರ್ಜಿಂಗ್ ಟೆಕ್ನಾಲಜಿ ಕೇಂದ್ರದ ವಿಶ್ಲೇಷಕ ಜೇಕಬ್ ಫೆಲ್ಡ್‌ಗೋಯಿಸ್ ಪ್ರಕಾರ, ಎಚ್ಚಿಂಗ್ ಪ್ರಕ್ರಿಯೆಯಲ್ಲಿ ಕೂಡ ಇದನ್ನು ಬಳಸಲಾಗುತ್ತದೆ.
ಹೀಲಿಯಂನ ವಿಶಿಷ್ಟ ಗುಣಲಕ್ಷಣಗಳೇ ಅದನ್ನು ತಂತ್ರಜ್ಞಾನದಲ್ಲಿ ಬಳಸುವಂತೆ ಮಾಡಿದೆ. ಯಾವುದೇ ವಸ್ತುವನ್ನು ಅಬ್ಸಲ್ಯೂಟ್ ಝೀರೋ (ಪರಮ ಶೂನ್ಯ) ಗಿಂತ ಸ್ವಲ್ಪ ಕಡಿಮೆ ತಾಪಮಾನಕ್ಕೆ ತಂಪಾಗಿಸಲು ಹೀಲಿಯಂನಂತೆ ಬೇರೆ ಯಾವ ಅನಿಲಕ್ಕೂ ಸಾಧ್ಯವಿಲ್ಲ. ಹೀಲಿಯಂ ರಾಸಾಯನಿಕವಾಗಿ ಜಡವಾಗಿದ್ದು, ಇತರ ರಾಸಾಯನಿಕಗಳೊಂದಿಗೆ ಪ್ರತಿಕ್ರಿಯಿಸುವುದಿಲ್ಲ. ಇದು ಚಿಪ್‌ಗಳು ಅಥವಾ ಇತರ ವಸ್ತುಗಳನ್ನು ಹಾಳುಮಾಡದ ಕಾರಣ, ಇದನ್ನು ತಂಪಾಗಿಸುವ ಸಾಧನವಾಗಿ ಬಳಸಲು ಯೋಗ್ಯವಾಗಿದೆ. ಹೀಲಿಯಂ ಪೂರೈಕೆಗೆ ಅಡ್ಡಿಯಾದರೆ ಜಾಗತಿಕ ಸೆಮಿಕಂಡಕ್ಟರ್ ತಯಾರಿಕೆಗೆ ಸಮಸ್ಯೆ ಉಂಟಾಗುತ್ತದೆ ಎಂದು 2023ರಲ್ಲಿ ಸೆಮಿಕಂಡಕ್ಟರ್ ಇಂಡಸ್ಟ್ರಿ ಅಸೋಸಿಯೇಷನ್ ವರದಿ ಹೇಳಿತ್ತು. ಇದೀಗ ಆ ಎಚ್ಚರಿಕೆ ಈಗ ನಿಜವಾಗಿದೆ.
ಸೆಮಿಕಂಡಕ್ಟರ್ ಉದ್ಯಮದಲ್ಲಿ ಹೀಲಿಯಂನ ಬಳಕೆ ಯಥೇಚ್ಛವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಎಂಆರ್‌ಐ ಸ್ಕ್ಯಾನರ್‌ಗಳನ್ನು ಹಿಂದಿಕ್ಕಿ ಸೆಮಿಕಂಡಕ್ಟರ್ ಹೀಲಿಯಂನ ಅತಿದೊಡ್ಡ ಬಳೆಕೆದಾರ ಕ್ಷೇತ್ರವಾಗಿ ಬೆಳೆದಿದೆ.
ಅಪಾಯದಲ್ಲಿರುವ ಎ.ಐ ಪೂರೈಕೆ ಸರಪಳಿ
ಹೀಲಿಯಂ ಕೊರತೆಯ ತಕ್ಷಣದ ಪರಿಣಾಮ ಪೂರ್ವ ಏಷ್ಯಾದ ಸೆಮಿಕಂಡಕ್ಟರ್ ಕೇಂದ್ರಗಳ ಮೇಲೆ ಬೀಳುತ್ತದೆ. 2025ರಲ್ಲಿ ದಕ್ಷಿಣ ಕೊರಿಯಾದ ಸೆಮಿಕಂಡಕ್ಟರ್ ತಯಾರಕರು ತಮಗೆ ಬೇಕಾದ ಹೀಲಿಯಂನ ಶೇ 55 ರಷ್ಟನ್ನು ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ದೇಶಗಳಿಂದ ಖರೀದಿಸಿದ್ದಾರೆ. 2024ರಲ್ಲಿ ತೈವಾನ್ ತನ್ನ ಅಗತ್ಯದ ಶೇ 69 ಹೀಲಿಯಂ ಅನ್ನು ಜಿಸಿಸಿಯಿಂದ ಖರೀದಿಸಿದೆ ಎಂದು ಬಾರ್ಕ್ಲೇಸ್ ವಿಶ್ಲೇಷಕರು ತಿಳಿಸಿದ್ದಾರೆ. ತೈವಾನ್ ಮತ್ತು ದಕ್ಷಿಣ ಕೊರಿಯಾ ಜಂಟಿಯಾಗಿ TSMC, ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಮತ್ತು SK ಹೈನಿಕ್ಸ್ ಸೇರಿದಂತೆ ವಿಶ್ವದ ಅತ್ಯಂತ ಸುಧಾರಿತ ಚಿಪ್ ತಯಾರಿಕಾ ಸೌಲಭ್ಯಗಳನ್ನು ಹೊಂದಿವೆ.
ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಮತ್ತು SK ಹೈನಿಕ್ಸ್ ಬಹುಶಃ ಕೆಲವು ತಿಂಗಳುಗಳ ದಾಸ್ತಾನು ಹೊಂದಿರಬಹುದು. ಆದರೆ ಯುದ್ಧ ಇನ್ನಷ್ಟು ದಿನ ಸಾಗುವ ಸಾಧ್ಯತೆ ಇರುವುದರಿಂದ ಮತ್ತು ಹೀಲಿಯಂ ಸೇರಿ ಇನ್ನಿತರ ಅಗತ್ಯ ವಸ್ತುಗಳ ಪೂರೈಕೆಗೆ ಅಡ್ಡಿಯಾಗಬಹುದಾದ್ದರಿಂದ ಅವರು ಪರ್ಯಾಯ ಮೂಲಗಳನ್ನು ಪಡೆಯುವ ಪ್ರಯತ್ನಗಳನ್ನು ಚುರುಕುಗೊಳಿಸುವುದು ಬಹಳ ಮುಖ್ಯ ಎಂದು ದಕ್ಷಿಣ ಕೊರಿಯಾದ ಸಾಂಗ್‌ಮ್ಯುಂಗ್ ವಿಶ್ವವಿದ್ಯಾಲಯದ ಪ್ರೊಫೆಸರ್ ಜೊಂಗ್-ಹ್ವಾನ್ ಲೀ ಹೇಳಿದ್ದಾರೆ. ಯುದ್ಧದಿಂದಾಗಿ ದಕ್ಷಿಣ ಕೊರಿಯಾ ಸರ್ಕಾರವು ಮೇಲ್ವಿಚಾರಣೆಗಾಗಿ 14 ಸೆಮಿಕಂಡಕ್ಟರ್ ಸಾಮಗ್ರಿಗಳನ್ನು ಪಟ್ಟಿ ಮಾಡಿದ್ದು ಅದರಲ್ಲಿ ಹೀಲಿಯಂ ಕೂಡ ಒಂದು.
ಕೊಲ್ಲಿ ಸಮರದಿಂದ ಭಾರತ-ಅರಬ್ ಸಂಬಂಧಕ್ಕೆ ಅಡ್ಡಿ: ದೇಶದ ಆರ್ಥಿಕತೆಗೆ 'ಹೊಸ ಆಘಾತ'ಯುದ್ಧ ಮುಂದುವರಿದು ಪೂರೈಕೆ ಸರಪಳಿಯಲ್ಲಿ ಏರುಪೇರಾದರೆ., ಸೆಮಿಕಂಡಕ್ಟರ್‌ಗಳನ್ನು ಉತ್ಪಾದನಾ ಕೇಂದ್ರಗಳು ಕಾರ್ಯಾಚರಣೆ ನಿರ್ಬಂಧಗಳು ಅಥವಾ ವೆಚ್ಚ ಹೆಚ್ಚಳ ಸಮಸ್ಯೆಯನ್ನು ಎದುರಿಸಬಹುದು ಎಂದು ಪೂರೈಕೆ ಸರಪಳಿ ವಿಶ್ಲೇಷಕರ ಸಂಶೋಧನೆ ತಿಳಿಸಿದೆ. ಕೊರತೆ ಹೀಗೆ ಮುಂದುವರಿದರೆ ಎ.ಐ ಡೇಟಾ ಸೆಂಟರ್‌ಗಳನ್ನು ನಿರ್ಮಿಸುವ ಯೋಜನೆಗಳಿಗೆ ಅಡ್ಡಿಯಾಗಬಹುದು ಎಂದು ಆಕ್ಸ್‌ಫರ್ಡ್ ಎಕನಾಮಿಕ್ಸ್ ಎಚ್ಚರಿಸಿದೆ. ಬ್ಯಾಂಕ್ ಆಫ್ ಅಮೇರಿಕಾ ಅಂದಾಜಿನ ಪ್ರಕಾರ, ಹೀಲಿಯಂನ ದರ ಶೇ 40 ರಷ್ಟು ಏರಿಕೆಯಾಗಿದೆ. ಒಂದು ವಾರದಲ್ಲಿ ಕೆಲವು ಸಂದರ್ಭಗಳಲ್ಲಿ ಬೆಲೆ ಶೇ 70 ರಿಂದ ಶೇ 100 ರಷ್ಟು ಏರಿಕೆಯಾಗಿದೆ ಎಂದು ಕಾರ್ನ್‌ಬ್ಲೂತ್ ಹೀಲಿಯಂ ಕನ್ಸಲ್ಟಿಂಗ್ ಅಧ್ಯಕ್ಷ ಫಿಲ್ ಕಾರ್ನ್‌ಬ್ಲೂತ್ 'ಸಿಎನ್‌ಬಿಸಿ'ಗೆ ತಿಳಿಸಿದ್ದಾರೆ. ಪ್ರಮುಖ ಹೀಲಿಯಂ ವಿತರಕ ಸಂಸ್ಥೆ 'ಏರ್ ಲಿಕ್ವಿಡ್' ತುರ್ತು ಪರಿಸ್ಥಿತಿ ಘೋಷಿಸಿ, ಹೀಲಿಯಂ ಸಾಗಣೆಯನ್ನು ಅರ್ಧದಷ್ಟು ಕಡಿತಗೊಳಿಸಿದೆ. ಸುಧಾರಿತ ಚಿಪ್ ತಯಾರಿಕೆಯಲ್ಲಿ ಪ್ರಾಬಲ್ಯ ಹೊಂದಿರುವ ತೈವಾನ್ ಮತ್ತು ದಕ್ಷಿಣ ಕೊರಿಯಾದಂತಹ ಉದ್ಯಮ ಕೇಂದ್ರಗಳಿಗೆ ಹೆಚ್ಚಿನ ಅಡಚಣೆ ಉಂಟಾಗಲಿದೆ.
ಹೀಲಿಯಂಗೆ ಪರ್ಯಾಯಗಳು ಇಲ್ಲದಿರುವುದು ಬಹು ದೊಡ್ಡ ತಲೆಬೇನೆಯಾಗಿದೆ. ಇತರ ಕೈಗಾರಿಕಾ ಸಾಮಗ್ರಿಗಳಿಗೆ ಹೋಲಿಸಿದರೆ, ವಿಶೇಷವಾಗಿ ಸೆಮಿಕಂಡಕ್ಟರ್ ಮತ್ತು ಕ್ರಯೋಜೆನಿಕ್ ಉತ್ಪಾದನೆಗೆ ದೊಡ್ಡ ಪ್ರಮಾಣದಲ್ಲಿ ಬಳಸಲು ಹೀಲಿಯಂಗೆ ಪರ್ಯಾಯ ಇಲ್ಲ.
ವಿಶ್ವದ ಬೇರೆ ಭಾಗಗಳಲ್ಲಿಯೂ ಹೀಲಿಯಂ ಲಭ್ಯವಿದೆ. ಅಮೆರಿಕ ಬೃಹತ್ ಹೀಲಿಯಂ ಮೀಸಲು ಹೊಂದಿದೆ. ರಷ್ಯಾದ ಅಮುರ್ ಸಂಸ್ಕರಣಾ ಘಟಕವು ಮೂರನೇ ಅತಿದೊಡ್ಡ ಜಾಗತಿಕ ಪೂರೈಕೆದಾರ ಸಂಸ್ಥೆಯಾಗಿದೆ. ರಷ್ಯಾದ ಅಮುರ್ ಸೌಲಭ್ಯ, ಜರ್ಮನಿಯ ಸಂಗ್ರಹಣೆ ಮತ್ತು ಅಮೆರಿಕದಲ್ಲಿ ಉತ್ಪಾದನೆಯಾಗುವ ಹೀಲಿಯಂ, ಸದ್ಯ ಉಂಟಾಗಿರುವ ಕೊರತೆಯ ಅರ್ಧದಷ್ಟು ಪ್ರಮಾಣವನ್ನು ಮಾತ್ರ ಸರಿದೂಗಿಸಬಹುದು. ಇದರಿಂದಾಗಿ ಯುರೋಪ್ ಮತ್ತು ಏಷ್ಯಾದ ಕೆಲವು ಭಾಗಗಳು ಸಂಕಷ್ಟಕ್ಕೀಡಾಗುತ್ತವೆ. ರಷ್ಯಾ ಉತ್ಪಾದಿಸುವ ಹೀಲಿಯಂ ಅತ್ಯಂತ ಕಟ್ಟುನಿಟ್ಟಾದ ವೇಫರ್ ತಯಾರಿಕೆಯಲ್ಲಿ ಬಳಸಲು ಇನ್ನೂ ಅರ್ಹತೆ ಪಡೆದಿಲ್ಲ.
ಕತಾರ್ ಮೇಳಿನ ಇರಾನ್ ದಾಳಿಯು ಅದರ ಎಲ್‌ಎನ್‌ಜಿ ರಫ್ತು ಸಾಮರ್ಥ್ಯದ ಶೇ 17 ಅನ್ನು ನಾಶಪಡಿಸಿವೆ. ಅದರ ದುರಸ್ತಿಗೆ ಮೂರರಿಂದ ಐದು ವರ್ಷಗಳು ಬೇಕಾಗಬಹುದು ಎಂದು ಕತಾರ್ ಎನರ್ಜಿ ರಾಯಿಟರ್ಸ್‌ಗೆ ತಿಳಿಸಿದೆ. ಇದರ ಅರ್ಥವೇನೆಂದರೆ, ಸಂಘರ್ಷ ಮುಗಿದ ನಂತರವೂ ಪೂರೈಕೆ ಸಹಜ ಸ್ಥಿತಿಗೆ ಬರಲು ಸಮಯ ತೆಗೆದುಕೊಳ್ಳುತ್ತದೆ.
ಹೀಲಿಯಂ ಪೂರೈಕೆ ಅಡೆತಡೆಗಳು ತಕ್ಷಣವೇ ವೆಚ್ಚ ಏರಿಕೆಯಾಗಲು ಕಾರಣವಾಗಲಿದೆ. ತಂತ್ರಜ್ಞಾನ ಉತ್ಪಾದನೆಗಳು ನಿಧಾನಗತಿಯಾಗಲಿದೆ. ಸುಧಾರಿತ ಕಂಪ್ಯೂಟಿಂಗ್ ಅವಲಂಬಿಸಿರುವ ಉದ್ಯಮಗಳಾದ್ಯಂತ ಇದರ ಪರಿಣಾಮ ಕಾಣಿಸಿಕೊಳ್ಳಲಿದೆ. ಹೆಚ್ಚುತ್ತಿರುವ ಉತ್ಪಾದನಾ ವೆಚ್ಚದಿಂದಾಗಿ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ತಯಾರಿಕೆಯು ದುಬಾರಿಯಾಗುತ್ತದೆ. ಹೂಡಿಕೆಯ ಅನಿಶ್ಚಿತತೆಯಿಂದ ಪೂರೈಕೆ ಸರಪಳಿಯ ಅಸ್ಥಿರತೆಯು ಎ.ಐ ಮೂಲಸೌಕರ್ಯ ವಿಸ್ತರಣೆಯ ಯೋಜನೆಗಳ ಮೇಲೆ ಪರಿಣಾಮ ಬೀರಲಿದೆ.
'ಸುರಕ್ಷಿತ ತಾಣ' ದುಬೈ ರಿಯಲ್ ಎಸ್ಟೇಟ್‌ಗೆ ಇರಾನ್ ಪ್ರಹಾರ: ಭಾರತೀಯರಿಗೂ ಆಘಾತಭಾರತದ ಮೇಲಿನ ಪ್ರಭಾವ
ಸೆಮಿಕಂಡಕ್ಟರ್ ತಯಾರಿಕೆ ಮತ್ತು ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ಉತ್ಪಾದನೆಯನ್ನು ಹೆಚ್ಚಿಸಲು ಭಾರತ ಪ್ರಯತ್ನಿಸುತ್ತದೆ. ಆದರೆ ಈಗ ಎದುರಾಗಿರುವ ಹೀಲಿಯಂ ಪೂರೈಕೆ ಅಡಚಣೆಯು ಭಾರತದ ಈ ಪ್ರಯತ್ನಕ್ಕೆ ಅಡ್ಡಿಯುಂಟುಮಾಡಲಿದೆ. ಹೆಚ್ಚುತ್ತಿರುವ ವೆಚ್ಚಗಳು ಮತ್ತು ಹೀಲಿಯಂ ಅಲಭ್ಯತೆಯು ಯೋಜನೆಯ ಸಮಯವನ್ನು ವಿಳಂಬಗೊಳಿಸಬಹುದು. ಇದು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಘಟಕಗಳ ಮೇಲೆ ಆರ್ಥಿಕ ಒತ್ತಡ ಸೃಜಿಸಬಹುದು ಎಂದು ಉದ್ಯಮದ ಪಾಲುದಾರರು ಎಚ್ಚರಿಸಿದ್ದಾರೆ.
ಸೆಮಿಕಂಡಕ್ಟರ್ ತಯಾರಿಕೆಗೆ ಭಾರತವು ಆಮದಿನ ಮೇಲೆ ಅತಿಯಾಗಿ ಅವಲಂಬಿತವಾಗಿದೆ. ದೇಶೀಯ ಸೆಮಿಕಂಡಕ್ಟರ್ ತಯಾರಿಕಾ ವ್ಯವಸ್ಥೆಯು ಇನ್ನೂ ಆರಂಭಿಕ ಹಂತದಲ್ಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆಯಾದರೆ ಚಿಪ್ ತಯಾರಿಕಾ ಹೂಡಿಕೆಯನ್ನು ಆಕರ್ಷಿಸಲು ಕೆಲಸ ಮಾಡುತ್ತಿರುವ 'ಸೆಮಿಕಾನ್ ಇಂಡಿಯಾ' ಕಾರ್ಯಕ್ರಮ ಗಡುವಿನೊಳಗೆ ಪೂರ್ತಿಗೊಳ್ಳದೇ ಇರಬಹುದು. ಚಿಪ್ ಉತ್ಪಾದನೆಯು ಕಡಿಮೆಯಾದರೆ ಭಾರತದ ಕ್ಲೌಡ್ ಮತ್ತು ಎ.ಐ ಸ್ಟಾರ್ಟ್‌ಅಪ್ ಮೇಲೆ ಪರೋಕ್ಷ ಪರಿಣಾಮ ಬೀರಲಿದೆ.
ಆರೋಗ್ಯ ರಕ್ಷಣೆಯ ಮೇಲೂ ಹೀಲಿಯಂ ಗಂಭೀರ ಪ್ರಭಾವ ಬೀರಿದೆ. ಆಸ್ಪತ್ರೆಗಳಲ್ಲಿ ಬಳಸಲಾಗುವ ಎಂಆರ್‌ಐ ಯಂತ್ರಗಳಿಗೆ ಶಕ್ತಿ ನೀಡುವ ಸೂಪರ್ ಕಂಡಕ್ಟಿಂಗ್ ಮ್ಯಾಗ್ನೆಟ್‌ಗಳನ್ನು ತಂಪಾಗಿಸಲು ಹೀಲಿಯಂ ಅಗತ್ಯ. ಈ ಬಿಕ್ಕಟ್ಟು ಸುದೀರ್ಘವಾಗಿ ಮುಂದುವರಿದರೆ ಆರೋಗ್ಯ ರಕ್ಷಣಾ ಸಾಧನ್ಳ ಖರೀದಿ ವೆಚ್ಚಗಳು ಹೆಚ್ಚಾಗಬಹದು.
ಈ ಸಂಘರ್ಷವು ತಕ್ಷಣಕ್ಕೆ ಚಿಪ್ ಕೊರತೆಯನ್ನು ಉಂಟುಮಾಡಿಲ್ಲ. ಈಗಿರುವ ದಾಸ್ತಾನುಗಳು, ದೀರ್ಘಕಾಲೀನ ಒಪ್ಪಂದಗಳು ಮತ್ತು ಪೂರೈಕೆ ಆದ್ಯತೆಗಳು ಸುರಕ್ಷಾ ಕವಚವನ್ನು ಒದಗಿಸಿವೆ. ಆದರೆ ಆ ಸುರಕ್ಷಾ ಕವಚದ ಕಾಲಾವಧಿ ಕೆಲವು ವಾರಗಳಷ್ಟೇ. ಹೀಲಿಯಂ ಪೂರೈಕೆ ಸರಪಳಿ ಸ್ಥಿರವಾಗಿರಬಹುದು ಎನ್ನವ ಊಹೆಯ ಮೇಲೆ ಎ.ಐ ಮೂಲಸೌಕರ್ಯ ನಿರ್ಮಾಣವಾಗುತ್ತಿದೆ. ಇದೀಗ ಉದ್ಭವಿಸಿರುವ ಬಿಕ್ಕಟ್ಟು ಎ.ಐ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಿದೆ.
(ಆಧಾರ: ಅಸೋಸಿಯೇಟೆಡ್ ಪ್ರೆಸ್, ರಾಯಿಟರ್ಸ, ಫಾರ್ಚೂನ್, ಸಿಎನ್‌ಬಿಸಿ, ಅಲ್ ಜಜೀರಾ, ಫೈನಾನ್ಷಿಯಲ್ ಟೈಮ್ಸ್, ಎಸ್ ಅಂಡ್ ಪಿ ಗ್ಲೋಬಲ್, ಫಿಚ್ ರೇಟಿಂಗ್ಸ್)
ಹೊರ್ಮುಜ್: ವಿಶ್ವವನ್ನೇ ತಲ್ಲಣಗೊಳಿಸಿದ 'ಕಷ್ಟ ಸಂಧಿ', ಇರಾನ್‌ಗೆ ವರದಾನವೇಕೆ?
