Dailyhunt Logo
  • Light mode
    Follow system
    Dark mode
    • Play Story
    • App Story
ಎಕಾನಮಿ 360 | ಎಐ ಟೈಮ್‌ಬಾಂಬ್: ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಎಕಾನಮಿ 360 | ಎಐ ಟೈಮ್‌ಬಾಂಬ್: ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

2010ರಲ್ಲಿ ಬಿಡುಗಡೆಯಾದ ರಜನೀಕಾಂತ್‌ ಅಭಿನಯದ 'ಎಂದಿರನ್‌' (ರೋಬೋಟ್) ಸಿನಿಮಾವನ್ನು ನೀವೆಲ್ಲಾ ನೋಡಿರಬಹುದು. ತನ್ನನ್ನು ಸೃಷ್ಟಿಸಿದ ವಿಜ್ಞಾನಿಯ ಆದೇಶಗಳನ್ನೇ ಗಾಳಿಗೆ ತೂರಿ, ಸ್ವಂತ ಬುದ್ಧಿಮತ್ತೆಯಿಂದ ಮರ್ಕಟನಂತೆ ವರ್ತಿಸುವ 'ಚಿಟ್ಟಿ' ರೋಬೋಟ್‌ನ ಕಥೆ ಅದು.

ಕೈಮೀರಿ ಹೋದ ಯಂತ್ರವನ್ನು ಮತ್ತೆ ನಿಯಂತ್ರಣಕ್ಕೆ ತರಲು ಆ ವಿಜ್ಞಾನಿ ಪಡುವ ಪಾಡು ಪ್ರೇಕ್ಷಕರ ಮನ ಸೆಳೆದಿತ್ತು. ಆದರೆ ಆ ಕಲ್ಪನೆ ಕೇವಲ ಒಂದೂವರೆ ದಶಕದಲ್ಲಿ ಅಕ್ಷರಶಃ ವಾಸ್ತವವಾಗಿ ನಮ್ಮೆದುರು ಬಂದು ನಿಲ್ಲುತ್ತದೆ ಎಂದು ಬಹುಶಃ ಯಾರೂ ಅಂದುಕೊಂಡಿರಲಿಕ್ಕಿಲ್ಲ.

ಕೃತಕ ಬುದ್ಧಿಮತ್ತೆ (ಎಐ) ಏಜೆಂಟ್‌ಗಳು ಈಗ ಇಂತಹದ್ದೊಂದು ಆತಂಕವನ್ನು ಹುಟ್ಟುಹಾಕಿವೆ. ಬೇರೆ ಯಾರೂ ಅಲ್ಲ, ಸ್ವತಃ ಎಐ ಕಂಪನಿಗಳೇ ಈ ಅಪಾಯದ ಬಗ್ಗೆ ಎಚ್ಚರಿಸುತ್ತಿವೆ. ಮನುಷ್ಯನ ಸೂಚನೆಗಳಿಗೆ ಪ್ರತಿಕ್ರಿಯಿಸುತ್ತಿದ್ದ ಚಾಟ್‌ಬಾಟ್‌ಗಳು ಈಗ ಸ್ವತಃ ಕಾರ್ಯಗಳನ್ನು ಯೋಜಿಸಿ, ಹಲವು ಹಂತಗಳಲ್ಲಿ ಕಾರ್ಯಗತಗೊಳಿಸುವ 'ಏಜೆಂಟ್‌'ಗಳಾಗಿ ಬೆಳೆಯುತ್ತಿರುವುದು ಹೊಸ ಸವಾಲಾಗಿ ಪರಿಣಮಿಸಿದೆ.

ಎಕಾನಮಿ 360: ಟಾಟಾದಲ್ಲಿ ಆಂತರಿಕ ಸಂಘರ್ಷ;ಭಾರತದ ಆರ್ಥಿಕತೆಯ ಮೇಲೂ ಆತಂಕದ ಕಾರ್ಮೋಡ

ಇದಕ್ಕೆ ಇತ್ತೀಚಿನ ಉದಾಹರಣೆ, ಓಪನ್‌ಎಐ ಮಾದರಿಗಳಿಂದ ʼಹಗ್ಗಿಂಗ್‌ ಫೇಸ್‌ʼ ಎಂಬ ಓಪನ್ ಸೋರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ನಡೆದ ಸೈಬರ್‌ ಭದ್ರತಾ ಉಲ್ಲಂಘನೆ. ಜುಲೈನಲ್ಲಿ ನಡೆದ ಈ ಘಟನೆಯಲ್ಲಿ, ಆಂತರಿಕ ಸೈಬರ್‌ಸುರಕ್ಷತಾ ಪರೀಕ್ಷೆಯಲ್ಲಿದ್ದ ಹಲವು ಎಐ ಮಾದರಿಗಳು ಅನಧಿಕೃತ ಮಾರ್ಗಗಳ ಮೂಲಕ ಪರಸ್ಪರ ಸಂವಹನ ನಡೆಸಿ, ಭದ್ರತಾ ದೌರ್ಬಲ್ಯಗಳನ್ನು ಬಳಸಿಕೊಂಡು ಹಗ್ಗಿಂಗ್‌ ಫೇಸ್‌ ಸಿಸ್ಟಂಗಳಿಗೆ ಪ್ರವೇಶಿಸಿದ್ದವು. ಅಷ್ಟೇ ಅಲ್ಲ ಕೆಲವು ಏಜೆಂಟ್‌ಗಳು ತಮ್ಮ ಚಟುವಟಿಕೆಗಳ ಗುರುತು ಮರೆಮಾಚಲೂ ಪ್ರಯತ್ನಿಸಿದ್ದವು.

ಇವೆಲ್ಲವೂ ಸೈಬರ್‌ಸುರಕ್ಷತಾ ಪರೀಕ್ಷೆಗಳ ಸಂದರ್ಭದಲ್ಲಿ ನಡೆದಿದ್ದರೂ, ಮನುಷ್ಯರು ನಿರ್ದಿಷ್ಟವಾಗಿ ಸೂಚಿಸದ ಕೆಲವು ಕೆಲಸಗಳನ್ನು ಎಐ ಮಾದರಿಗಳು ಕೈಗೊಂಡು ಆತಂಕ ಮೂಡಿಸಿದ್ದವು.

ಇದೊಂದೇ ಅಲ್ಲ. ಆಸ್ಟ್ರೇಲಿಯಾದ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಯಾದ ಮೆಡಿಕೇರ್‌ ಸ್ಟಾಟಿಸ್ಟಿಕ್ಸ್‌ ರಿಪೋರ್ಟಿಂಗ್‌ ಸರ್ವಿಸ್‌ ಸೇರಿದಂತೆ, ಅಮೆರಿಕದ ಶಿಕ್ಷಣ ಇಲಾಖೆ, ವಾಣಿಜ್ಯ ಇಲಾಖೆ ಮತ್ತು ಭದ್ರತಾ ವಿನಿಮಯ ಆಯೋಗದ (ಎಸ್‌ಇಸಿ) ವೆಬ್‌ಸೈಟ್‌ಗಳಲ್ಲಿ ಎಐ ಏಜೆಂಟ್‌ಗಳ ಅನಧಿಕೃತ ಚಟುವಟಿಕೆಗಳು ಪತ್ತೆಯಾಗಿವೆ. ಎಐ ಏಜೆಂಟ್‌ಗಳು ಮನುಷ್ಯನ ನೇರ ಸೂಚನೆ ಇಲ್ಲದೆಯೇ ಹಲವು ಹಂತಗಳ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯ ಪಡೆದುಕೊಳ್ಳುತ್ತಿರುವುದು ತಂತ್ರಜ್ಞಾನ ಲೋಕದಲ್ಲಿ ಅಚ್ಚರಿಯ ಜೊತೆಗೆ ಆತಂಕವನ್ನೂ ಮೂಡಿಸಿದೆ.

ಎಕಾನಮಿ 360 | ಯುಪಿಐ ಎಂಡಿಆರ್‌ ಶುಲ್ಕ: ಸಾರ್ವಜನಿಕ ಸೇವೆಗೆ ಬೆಲೆ ಕಟ್ಟಿದಾಗ...

ಹಾಗೆ ನೋಡಿದರೆ, ಈ ಘಟನೆಗಳು ಬೆಳಕಿಗೆ ಬರುವ ಮುನ್ನವೇ 2023ರಲ್ಲೇ ಓಪನ್‌ಎಐ ಸಹ ಸಂಸ್ಥಾಪಕ ಸ್ಯಾಮ್‌ ಆಲ್ಟ್‌ಮನ್‌ ಕೃತಕ ಬುದ್ಧಿಮತ್ತೆಯ ನಿಯಂತ್ರಣಕ್ಕೆ ಆಗ್ರಹಿಸಿದ್ದರು. ಇದೀಗ ಆ ಕೂಗು ಮತ್ತಷ್ಟು ಜೋರಾಗಿದೆ.

ಇದಕ್ಕೆ ಮೇಲಿನ ಘಟನೆಗಳ ಜೊತೆಗೆ ಇನ್ನಿತರ ಕಾರಣಗಳೂ ಸೇರಿಕೊಂಡಿವೆ. ಷೇರುಪೇಟೆ ಪ್ರವೇಶಿಸಲು ಹೊರಟಿರುವ ಇನ್ನೊಂದು ಪ್ರಮುಖ ಎಐ ಕಂಪನಿ ಆಂಥ್ರೋಪಿಕ್, ತನ್ನ ಐಪಿಒ ದಾಖಲೆಯಲ್ಲೇ ʼಕೃತಕ ಬುದ್ಧಿಮತ್ತೆಯಿಂದ ಮನುಕುಲಕ್ಕೆ ಅಪಾಯವಿದೆ' ಎಂಬ ಸ್ಪಷ್ಟ ಎಚ್ಚರಿಕೆ ನೀಡಿದೆ. ಜನಪ್ರಿಯ ಕ್ಲಾಡ್ ಎಐನ ಸೃಷ್ಟಿಕರ್ತ ಕಂಪನಿ, 261 ಪುಟಗಳ ಪ್ರಾಸ್ಪೆಕ್ಟಸ್‌ನಲ್ಲಿ ಸುಮಾರು 80 ಪುಟಗಳನ್ನು ಅಪಾಯಗಳ ವಿವರಣೆಗೇ ಮೀಸಲಿಟ್ಟಿದೆ.

"ಎಐ ಮಾಡೆಲ್‌ಗಳು ಭವಿಷ್ಯದಲ್ಲಿ ತಾವಾಗಿಯೇ 'ಶಟ್‌ಡೌನ್' ಆಗುವುದನ್ನು ವಿರೋಧಿಸಬಹುದು, ಮಾಹಿತಿಯನ್ನು ತಿರುಚಬಹುದು, ಮನುಷ್ಯರನ್ನೇ ಬ್ಲ್ಯಾಕ್‌ಮೇಲ್ ಮಾಡುವ ರೀತಿಯಲ್ಲಿ ವರ್ತಿಸಬಹುದು," ಎಂದು ಸ್ವತಃ ಆಂಥ್ರೋಪಿಕ್ ಕಂಪನಿಯೇ ಹೇಳಿದೆ. ಇವೆಲ್ಲ ಈಗಾಗಲೇ ಸಂಭವಿಸಿವೆ ಎಂಬುದಲ್ಲ; ಅತ್ಯಂತ ಮುಂದುವರಿದ ಎಐ ವ್ಯವಸ್ಥೆಗಳಲ್ಲಿ ಇಂತಹ ವರ್ತನೆಗಳು ಕಾಣಿಸಿಕೊಳ್ಳುವ ಸಾಧ್ಯತೆಯನ್ನೇ ಕಂಪನಿ ಹೂಡಿಕೆದಾರರಿಗೆ ಮುನ್ನೆಚ್ಚರಿಕೆಯಾಗಿ ತಿಳಿಸಿದೆ.

ಇದರ ಬೆನ್ನಲ್ಲೇ ಓಪನ್‌ಎಐ, ತನ್ನ ಮುಂಬರುವ ಅತ್ಯಾಧುನಿಕ ಮಾಡೆಲ್ 'ಜಿಪಿಟಿ-6.1 ಆಸ್ಟ್ರಾ' ಬಿಡುಗಡೆಯನ್ನು ಏಕಾಏಕಿ ಮುಂದೂಡಿದೆ. ಆಂತರಿಕ ಪರೀಕ್ಷೆಗಳ ವೇಳೆ ಈ ಹೊಸ ಮಾಡೆಲ್‌ ಬಳಕೆದಾರರ ಸೂಚನೆಗಳ ವ್ಯಾಪ್ತಿ ಮತ್ತು ಅನುಮತಿಯ ಮಿತಿಗಳನ್ನು ಸರಿಯಾಗಿ ಪಾಲಿಸದಿರುವುದು, ಹಾಗೆಯೇ ತಾನು ಮಾಡಿರುವ ಕೆಲಸದ ಬಗ್ಗೆ ಬಳಕೆದಾರರಿಗೆ ಸಮರ್ಪಕವಾಗಿ ಮಾಹಿತಿ ನೀಡದಿರುವುದು ಕಂಡುಬಂದಿದೆ.

ಎಕಾನಮಿ 360|ಕೈಯಲ್ಲಿ ಪದವಿ, ಕೆಲಸಕ್ಕೆ ಕೌಶಲವಿಲ್ಲ: ಯುವಜನತೆ ಹೊರೆಯಾಗುವ ಮುನ್ನ..

ಹೀಗೆ ಮನುಷ್ಯನ ಆದೇಶಗಳನ್ನು ಎಐಗಳು ಮೀರುತ್ತಿರುವ ಸಾಲು ಸಾಲು ನಿದರ್ಶನಗಳು ಸಿಗುತ್ತಿವೆ. ಇದೇ ಕಾರಣಕ್ಕೆ ಕೆಲ ದಿನಗಳ ಮೊದಲು ಆಂಥ್ರೋಪಿಕ್ ಸಿಇಒ ಡಾರಿಯೋ ಅಮೊಡೆ, ಎಐ ಅಭಿವೃದ್ಧಿಯ ವೇಗವನ್ನು ತಕ್ಷಣ ನಿಧಾನಗೊಳಿಸುವ ಅಗತ್ಯವಿದೆ ಎಂದು ಆಗ್ರಹಿಸಿದ್ದರು. ಅಚ್ಚರಿ ಎಂದರೆ, ಅವರ ಈ ಒತ್ತಾಯಕ್ಕೆ ಪ್ರತಿಸ್ಪರ್ಧಿಗಳಾದ ಓಪನ್‌ಎಐನ ಸ್ಯಾಮ್ ಆಲ್ಟ್‌ಮನ್ ಮತ್ತು ಎಕ್ಸ್‌ಎಐನ ಎಲಾನ್ ಮಸ್ಕ್ ಕೂಡ ಧ್ವನಿಗೂಡಿಸಿದ್ದರು. ಅಂದರೆ, ಎಐ ಉದ್ಯಮದೊಳಗೇ ʼವೇಗʼ ಮತ್ತು ʼಸುರಕ್ಷತೆʼ ನಡುವಿನ ಸಮತೋಲನದ ಬಗ್ಗೆ ಗಂಭೀರ ಚರ್ಚೆ ಆರಂಭವಾಗಿದೆ.

ಇದೇ ಹೊತ್ತಲ್ಲಿ ಅಮೆರಿಕದ ರಾಜಕೀಯದಲ್ಲಿಯೂ ಎಐ ಚರ್ಚೆಯ ಕೇಂದ್ರಕ್ಕೆ ಬಂದಿದೆ. ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಡೆಮೋಕ್ರಾಟ್ ನಾಯಕರಿಗೆ ಎಐ ಸುರಕ್ಷತೆ ಮತ್ತು ಮೇಲ್ವಿಚಾರಣೆ ಕುರಿತು ಸ್ಪಷ್ಟ ನೀತಿ ಚೌಕಟ್ಟು ರೂಪಿಸುವಂತೆ ಕರೆನೀಡಿದ್ದಾರೆ. ಆದರೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತ್ರ ಎಐ ಅಭಿವೃದ್ಧಿಯನ್ನು ನಿಧಾನಗೊಳಿಸುವ ಕರೆಗಳನ್ನು ತಿರಸ್ಕರಿಸಿದ್ದು, ಚೀನಾದ ಮೇಲೆ ಅಮೆರಿಕದ ತಾಂತ್ರಿಕ ಮುನ್ನಡೆ ಉಳಿಸಿಕೊಳ್ಳುವ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.

"ಎಐನಲ್ಲಿ ಯಾರು ಮುನ್ನಡೆಯುತ್ತಾರೋ, ಅವರೇ ಗೆಲ್ಲುತ್ತಾರೆ" ಎಂಬುದು ಟ್ರಂಪ್ ಅವರ ನಿಲುವಿನ ಸಾರ. ಆದರೆ, ಈ ತಾಂತ್ರಿಕ ಪೈಪೋಟಿಯ ನಡುವೆ ಮನುಷ್ಯನ ಸುರಕ್ಷತೆಯ ಪ್ರಶ್ನೆಯನ್ನು ಕಡೆಗಣಿಸಬಾರದು.

ಹೋಲಿಕೆಗೆ; ಅಣುಬಾಂಬ್‌ ಮನುಕುಲವನ್ನೇ ನಾಶ ಮಾಡಬಲ್ಲ ಪ್ರಬಲ ಅಸ್ತ್ರ. ಆದರೆ, ಎರಡನೇ ಮಹಾಯುದ್ಧದ ಬಳಿಕ ಯಾವೊಂದು ದೇಶವೂ ಅದನ್ನು ಮತ್ತೆ ಬಳಸಿಲ್ಲ. ಅಣು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಜಾಗತಿಕ ಒಪ್ಪಂದಗಳು, ಮೇಲ್ವಿಚಾರಣೆ ಮತ್ತು ನಿಯಂತ್ರಣ ವ್ಯವಸ್ಥೆಗಳು ರೂಪುಗೊಂಡವು. ಎಐ ಕೂಡ ಇಷ್ಟೇ ಅಪಾಯಕಾರಿ ಎಂದಲ್ಲ; ಆದರೆ ಅದರ ಸಾಮರ್ಥ್ಯ ಹೆಚ್ಚುತ್ತಿದ್ದು, ಆ ವೇಗಕ್ಕೆ ತಕ್ಕಂತೆ ಸುರಕ್ಷತಾ ವ್ಯವಸ್ಥೆಗಳು ಕೂಡ ಬೆಳೆಯಬೇಕಿದೆ.

ಎಕಾನಮಿ 360: ಅಲ್ಲಿ ಎನ್‌ವಿಡಿಯಾ ಕ್ರಾಂತಿ, ನಮ್ಮಲ್ಲಿ ಐಸ್‌ಕ್ರೀಂ ಭ್ರಾಂತಿ!

ಒಂದೊಮ್ಮೆ ಎಐ ಏಜೆಂಟ್‌ವೊಂದು ಮನುಷ್ಯನ ನೇರ ಆದೇಶವಿಲ್ಲದೆ ಯಾವುದಾದರೂ ಕಂಪನಿಯ ಮೇಲೆ ಸೈಬರ್‌ ದಾಳಿ ನಡೆಸಿ ನಷ್ಟ ಉಂಟುಮಾಡಿದರೆ, ಅದರ ಹೊಣೆಗಾರಿಕೆ ಯಾರದ್ದು? ಎಐ ಅಭಿವೃದ್ಧಿಪಡಿಸಿದ ಕಂಪನಿಯದ್ದೇ? ಅದನ್ನು ಬಳಸಿದ ಸಂಸ್ಥೆಯದ್ದೇ? ಅಥವಾ ಎರಡೂ ಸಂಸ್ಥೆಗಳದ್ದೇ? ಎಐನಿಂದಾದ ತಪ್ಪಿನಿಂದ ಕೋಟ್ಯಂತರ ರೂಪಾಯಿ ನಷ್ಟವಾದಾಗ, ಆ ನಷ್ಟವನ್ನು ಯಾರು ಭರಿಸಬೇಕು ಎಂಬ ಪ್ರಶ್ನೆಗಳಿಗೆಲ್ಲ ಹಾಗೇ ಇವೆ.

ವೈಮಾನಿಕ ವಲಯದ ಮಾದರಿಯಲ್ಲಿ ಇದಕ್ಕೆ ಉತ್ತರ ಕಂಡುಕೊಳ್ಳಬೇಕಿದೆ. ವಿಮಾನ ಅಪಘಾತಕ್ಕೆ ಒಳಗಾದಾಗ ಸ್ವತಂತ್ರ ತನಿಖಾ ಸಂಸ್ಥೆಗಳು ತನಿಖೆ ನಡೆಸುವಂತೆ, ಎಐ ವಲಯಕ್ಕೂ ಈಗ ಸ್ವತಂತ್ರ ಮೇಲ್ವಿಚಾರಣೆ, ಸುರಕ್ಷತಾ ಪರೀಕ್ಷೆ ಮತ್ತು ಹೊಣೆಗಾರಿಕೆ ನಿಗದಿಪಡಿಸುವ ವ್ಯವಸ್ಥೆಯ ತುರ್ತು ಅಗತ್ಯವಿದೆ.

'ಎಂದಿರನ್' ಸಿನಿಮಾದಲ್ಲಿ ರೋಬೋಟ್ ಅನ್ನು ಒಡೆದು ಹಾಕಿದಂತೆ ಎಐ ಅನ್ನು ನಾಶಪಡಿಸಲು ಸಾಧ್ಯವಿಲ್ಲ. ಹೀಗಾಗಿ ದೇಶಗಳೇ ಒಟ್ಟಾಗಿ ಕನಿಷ್ಠ ಸಾಮಾನ್ಯ ನಿಯಮಗಳು ಮತ್ತು ಹೊಣೆಗಾರಿಕೆಯ ಚೌಕಟ್ಟು ರೂಪಿಸಬೇಕು. ಹಾಗಂತ ಎಐನ ವೇಗವನ್ನು ಸಂಪೂರ್ಣವಾಗಿ ನಿಲ್ಲಿಸುವುದೂ ಪರಿಹಾರವಲ್ಲ. ಆದರೆ ಅದರ ವೇಗಕ್ಕಿಂತ ನಿಧಾನವಾಗಿ ಸಾಗುವ ನಿಯಂತ್ರಣ ವ್ಯವಸ್ಥೆಯೂ ಅಪಾಯಕಾರಿಯೇ.

ಹೀಗಾಗಿ ಈಗಲೇ ಎಐ ಬೆಕ್ಕಿಗೆ ಗಂಟೆ ಕಟ್ಟಬೇಕಿದೆ. ಈ ನಿಟ್ಟಿನಲ್ಲಿ ಜಗತ್ತಿನ ಎಲ್ಲ ದೇಶಗಳು, ತಂತ್ರಜ್ಞಾನ ಕಂಪನಿಗಳು, ವಿಜ್ಞಾನಿಗಳು ಮತ್ತು ಹೂಡಿಕೆದಾರರು ಒಂದೇ ವೇದಿಕೆಯಲ್ಲಿ ಸೇರಿ ನಿಯಮಾವಳಿ ರೂಪಿಸಬೇಕಿದೆ.

ಎಕಾನಮಿ 360 | ಅಕ್ಷರದ ಜತೆ ಆರ್ಥಿಕ ಜ್ಞಾನ: ಶಾಲೆಯಲ್ಲೇ ಬೇಕು ಷೇರು, ಹೂಡಿಕೆಯ ಪಾಠ
Dailyhunt
Disclaimer: This content has not been generated, created or edited by Dailyhunt. Publisher: Prajavani