Dailyhunt Logo
  • Light mode
    Follow system
    Dark mode
    • Play Story
    • App Story
ಎಕಾನಮಿ 360: ಕನ್ನಡಿಗರ ಉದ್ಯೋಗದ ಕೂಗಿಗೆ ಪರಿಹಾರ ಮಸೂದೆಯೊಂದೇ ಅಲ್ಲ!

ಎಕಾನಮಿ 360: ಕನ್ನಡಿಗರ ಉದ್ಯೋಗದ ಕೂಗಿಗೆ ಪರಿಹಾರ ಮಸೂದೆಯೊಂದೇ ಅಲ್ಲ!

ಪ್ರತಿ ವರ್ಷ ಇದೊಂದು ಅಭ್ಯಾಸವಾಗಿ ಹೋಗಿದೆ. ಕರ್ನಾಟಕ ರಾಜ್ಯೋತ್ಸವದ ಹೊಸ್ತಿಲಲ್ಲಿ ಭಾಷಾ ಪ್ರಜ್ಞೆ ಎಚ್ಚರಗೊಳ್ಳುವುದು; ಕನ್ನಡ, ಕನ್ನಡಿಗರು, ನೆಲ-ಜಲದ ಬಗ್ಗೆ ಚರ್ಚೆಗಳು ಗರಿಗೆದರುವುದು. ಆದರೆ, ರಾಜ್ಯೋತ್ಸವದ ಸಂಭ್ರಮ ಮುಗಿಯುತ್ತಿದ್ದಂತೆ ಈ ಆವೇಶಗಳೆಲ್ಲವೂ ನಿಧಾನಕ್ಕೆ ಮರೆಯಾಗುತ್ತವೆ.

ಈ ಬಾರಿಯೂ 'ಕನ್ನಡಿಗರಿಗೆ ಉದ್ಯೋಗ'ದ ಕೂಗೆದ್ದಿದೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬರು ಹಂಚಿಕೊಂಡ ವಿಡಿಯೋ ಇದಕ್ಕೆಲ್ಲ ಮೂಲ ಕಾರಣ. 'ರೆಸ್ಯೂಮ್‌ನಲ್ಲಿ ಕನ್ನಡವನ್ನು ಮಾತೃಭಾಷೆ ಎಂದು ನಮೂದಿಸಿದ್ದಕ್ಕೆ ಐಟಿ ಕಂಪನಿಯೊಂದು ಉದ್ಯೋಗಾವಕಾಶ ನಿರಾಕರಿಸಿದೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ' ಎಂಬುದು ಆಕೆಯ ಆರೋಪ. ಇದರ ಬೆನ್ನಲ್ಲೇ ಇಂಥಹದ್ದೇ ಮತ್ತಷ್ಟು ದೂರುಗಳು ಮುನ್ನೆಲೆಗೆ ಬಂದವು.

ಎಕಾನಮಿ 360: ಜಿಯೋ ಐಪಿಒ, ಕಾರ್ಪೊರೇಟ್ ಲಾಭದ ಸಂಭ್ರಮದಾಚೆ ಉದ್ಯೋಗದ ಸಂಕಟ

ತಕ್ಷಣ ಎಚ್ಚೆತ್ತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಐಟಿ ಕಂಪನಿಗಳಿಗೆ ಕಟು ಎಚ್ಚರಿಕೆ ನೀಡಿದರು. 'ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡಿಗರನ್ನು ಉದ್ದೇಶಪೂರ್ವಕವಾಗಿ ಉದ್ಯೋಗದಿಂದ ಕಡೆಗಣಿಸಿದ್ದರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ' ಎಂದೆಲ್ಲಾ ಗುಡುಗಿದರು. ಆದರೆ, ಈ ಎಚ್ಚರಿಕೆಯ ನಂತರ ನಿರ್ದಿಷ್ಟವಾಗಿ ಯಾವ ಕ್ರಮ ಜರುಗಿಸಲಾಯಿತು? ತನಿಖೆ ನಡೆಸಲಾಯಿತೇ? ತನಿಖೆಯಲ್ಲಿ ಏನು ಕಂಡುಬಂತು? ದೂರು ನೀಡುವವರಿಗೆ ನ್ಯಾಯ ಒದಗಿಸಲು ಸರ್ಕಾರ ಯಾವ ವ್ಯವಸ್ಥೆ ರೂಪಿಸಿತು? ಈ ಪ್ರಶ್ನೆಗಳಿಗೆ ಮಾತ್ರ ಇದುವರೆಗೆ ಸ್ಪಷ್ಟ ಉತ್ತರವಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಆರೋಪಗಳನ್ನೇ ಆಧರಿಸಿ ಎಲ್ಲಾ ಕಂಪನಿಗಳಲ್ಲೂ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ತೀರ್ಮಾನಿಸಬೇಕಿಲ್ಲ. ಹಾಗಂತ ಇವೆಲ್ಲ ಆಧಾರವಿಲ್ಲದ ಆರೋಪಗಳು ಎಂದು ತಳ್ಳಿಹಾಕುವುದೂ ಅಷ್ಟೇ ದೊಡ್ಡ ತಪ್ಪು. ಐಟಿ ಕಂಪನಿಗಳಲ್ಲಿ ಅಥವಾ ಬೆಂಗಳೂರಿನ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ನಿಜಕ್ಕೂ ತಾರತಮ್ಯವಾಗುತ್ತಿದೆಯಾ? ಇದು ಸಂಕೀರ್ಣ ಪ್ರಶ್ನೆ. ತನಿಖೆ ಅಥವಾ ಸಮೀಕ್ಷೆ ಮಾಡಿಯೇ ಇದನ್ನು ತಿಳಿದುಕೊಳ್ಳಬೇಕು. ಆದಾಗ್ಯೂ, ಇಲ್ಲಿರುವ ಬಹುಪಾಲು ಕಂಪನಿಗಳಲ್ಲಿ ಪರಭಾಷಿಕರೇ ತುಂಬಿ ತುಳುಕುತ್ತಿರುವುದು ಮಾತ್ರ ಸತ್ಯ, ಕಣ್ಣೆದುರಿನ ವಾಸ್ತವ.

ಇದಕ್ಕೆ, ʼಖಾಸಗಿ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿʼ ತರುವುದೇ ಸರಿಯಾದ ಮಾರ್ಗ ಎಂಬುದು ಒಂದಿಷ್ಟು ಜನರ ಭಾವನಾತ್ಮಕ ವಾದ. ಆದರೆ ಸರ್ಕಾರ ಈ ಮಸೂದೆ ತರಲು ಹೊರಟರೆ, ಉದ್ಯಮ ವಲಯದಿಂದ ವಿರೋಧಗಳು ಎದ್ದೆದ್ದು ಬರುತ್ತವೆ. 'ಹೀಗೆ ಮಾಡಿದರೆ ರಾಜ್ಯಕ್ಕೆ ಹೂಡಿಕೆಗಳು ಬರುವುದಿಲ್ಲ', 'ಇಲ್ಲಿ ಯಾರೂ ಹೊಸ ಕಚೇರಿ ತೆರೆಯುವುದಿಲ್ಲ', 'ಬೆಂಗಳೂರಿನ ಸ್ಪರ್ಧಾತ್ಮಕತೆಗೆ ಪೆಟ್ಟು ಬೀಳುತ್ತದೆ' ಎಂಬ ನೂರೆಂಟು ಅಪಸ್ವರಗಳು ಕೇಳಿಬರುತ್ತವೆ. ಇವು ಸ್ವಲ್ಪಮಟ್ಟಿಗೆ ನಿಜವೂ ಹೌದು. ಹೀಗಾಗಿ, 2024ರಲ್ಲಿ ರಾಜ್ಯ ಸಚಿವ ಸಂಪುಟ ಅಂಗೀಕರಿಸಿದ್ದ ಖಾಸಗಿ ವಲಯದ ಉದ್ಯೋಗ ಮೀಸಲಾತಿ ಮಸೂದೆಯನ್ನು ಐಟಿ ದಿಗ್ಗಜರ ವಿರೋಧದ ಬಳಿಕ ತಡೆಹಿಡಿಯಬೇಕಾಯಿತು.

ಹಾಗಾದರೆ, ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವುದಕ್ಕೆ ಸರ್ಕಾರದ ಬಳಿ ಬೇರೆ ದಾರಿಗಳೇ ಇಲ್ಲವೇ? ಖಂಡಿತ ಇವೆ. ಎಲ್ಲ ಕಂಪನಿಗಳಿಗೂ ಒಂದೇ ನಿಯಮವನ್ನು ಬಲವಂತವಾಗಿ ಹೇರುವ ಬದಲು, ಭಾವನಾತ್ಮಕತೆಗೆ ಮೀರಿದ ಪ್ರಾಯೋಗಿಕ ಮಾರ್ಗಗಳನ್ನು ಸರ್ಕಾರ ಪರಿಗಣಿಸಬಹುದು. ಈ ವಿಚಾರದಲ್ಲಿ ಉದ್ಯಮಗಳನ್ನು ಎರಡು ಬಗೆಯಲ್ಲಿ ವಿಂಗಡಿಸಿ ಮುಂದಡಿ ಇಡಬಹುದು.

ಮೊದಲನೆಯದು; ಸಂಪೂರ್ಣವಾಗಿ ತಮ್ಮದೇ ಬಂಡವಾಳ ಹೂಡಿ, ಮಾರುಕಟ್ಟೆ ದರದಲ್ಲಿ ಜಮೀನು ಖರೀದಿಸಿ, ಸ್ವಂತ ವೆಚ್ಚದಲ್ಲಿ ಕಚೇರಿ ಅಥವಾ ಕಾರ್ಖಾನೆ ಸ್ಥಾಪಿಸುವ ಕಂಪನಿಗಳು. ಇಂಥ ಸಂಸ್ಥೆಗಳನ್ನು ಮೀಸಲಾತಿ ಕಟ್ಟುಪಾಡುಗಳಿಂದ ಸದ್ಯಕ್ಕೆ ಹೊರಗಿಡೋಣ. ಏಕೆಂದರೆ, ಭಾರತದ ಸಂವಿಧಾನವು ದೇಶದ ನಾಗರಿಕರಿಗೆ ಎಲ್ಲಿ ಬೇಕಾದರೂ ವಾಸಿಸುವ, ಉದ್ಯೋಗ ಮಾಡುವ ಸ್ವಾತಂತ್ರ್ಯ ನೀಡಿದೆ. ಅವರ ದುಡ್ಡು, ಅವರ ನೀತಿ; ಅವರಿಗೆ ಇಲ್ಲಿ ಉದ್ಯಮ ಸ್ಥಾಪಿಸಿದರೆ ಲಾಭ ಎನಿಸಿದೆ, ನಡೆಸಲಿ. ಇಲ್ಲಿಗೆ ಬಂದು ಕೆಲಸ ಮಾಡುವ ಹೊರರಾಜ್ಯದ ಉದ್ಯೋಗಿಗಳು ಮಾಡುವ ಬಾಡಿಗೆ, ಸಾರಿಗೆ, ಖರೀದಿ ಸೇರಿದಂತೆ ಹತ್ತು ಹಲವು ಖರ್ಚುಗಳು ಹಾಗೂ ಕಂಪನಿಯು ಪಾವತಿಸುವ ತೆರಿಗೆಯ ರೂಪದಲ್ಲಿ ರಾಜ್ಯದ ಬೊಕ್ಕಸಕ್ಕೆ ಪರೋಕ್ಷ ಲಾಭ ದಕ್ಕುತ್ತಲೇ ಇರುತ್ತದೆ. ಆ ಲಾಭದ ಪಾಲು ಇಲ್ಲಿನ ಜನರಿಗೆ ಸಿಗಲಿ.

ಎಕಾನಮಿ 360: ಭರ್ಜರಿ ವ್ಯಾಪಾರದ ಹೊಳಪಿನಲ್ಲಿ ಮರೆಯಾದ ಶ್ರೀಸಾಮಾನ್ಯ

ಆದರೆ, ಎರಡನೆಯ ಬಗೆಯ ಉದ್ಯಮಗಳ ವಿಚಾರದಲ್ಲಿ ಸರ್ಕಾರ ಹೆಚ್ಚು ಕಠಿಣ ನಿಲುವು ತೆಗೆದುಕೊಳ್ಳಲೇಬೇಕು. ರೈತರ ಫಲವತ್ತಾದ ಭೂಮಿಯನ್ನು ಮಾರುಕಟ್ಟೆ ಬೆಲೆಗಿಂತ ಅತ್ಯಂತ ಕಡಿಮೆ ದರದಲ್ಲಿ ಸ್ವಾಧೀನಪಡಿಸಿಕೊಂಡು, ಜುಜುಬಿ ಬೆಲೆಗೆ ನೀಡಿ, ವಿದ್ಯುತ್‌ ಮತ್ತು ನೀರಿನ ಬಿಲ್‌ನಲ್ಲಿ ಭಾರೀ ರಿಯಾಯಿತಿ, ಹಲವು ವರ್ಷಗಳ ಕಾಲ ತೆರಿಗೆ ವಿನಾಯಿತಿ ನೀಡಿ ಸರ್ಕಾರ ಕೆಲವು ಕಂಪನಿಗಳನ್ನು ರಾಜ್ಯಕ್ಕೆ ಆಹ್ವಾನಿಸುತ್ತದೆ. ಹೀಗೆ ರಾಜ್ಯದ ಸಂಪನ್ಮೂಲಗಳನ್ನು ಮತ್ತು ಸಾರ್ವಜನಿಕ ಹಣದ ಸಬ್ಸಿಡಿ ಪ್ರಯೋಜನಗಳನ್ನು ಪಡೆದುಕೊಂಡ ಉದ್ಯಮಗಳಿಗೆ, ಅರ್ಹ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಹೊಣೆಗಾರಿಕೆಯನ್ನು ಷರತ್ತಾಗಿ ನಿಗದಿಪಡಿಸಬಹುದು.

ಆರಂಭದಲ್ಲೇ ಶೇ 75, 80ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೆ ನೀಡಬೇಕು ಎಂಬ ಅವಾಸ್ತವಿಕ ಷರತ್ತುಗಳನ್ನು ವಿಧಿಸಬೇಕಾಗಿಲ್ಲ. ಕನಿಷ್ಠ ಶೇ 30, 40 ಅಥವಾ 50 ರಿಂದ ಶುರು ಮಾಡಲಿ. ಉದ್ಯಮದ ಸ್ವರೂಪ ಮತ್ತು ಸ್ಥಳೀಯ ಅಭ್ಯರ್ಥಿಗಳ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು, ವಲಯಗಳಿಂದ ವಲಯಗಳಿಗೆ ಬೇಕಿದ್ದರೆ ಭಿನ್ನ ಪ್ರಮಾಣವನ್ನು ನಿಗದಿಪಡಿಸಲಿ. ಸಾಧಕ-ಬಾಧಕಗಳನ್ನು ನೋಡಿಕೊಂಡು ಮುಂದೆ ಬೇಕಾದರೆ ಈ ಪ್ರಮಾಣವನ್ನು ಹಂತಹಂತವಾಗಿ ಹೆಚ್ಚಿಸುತ್ತಾ ಹೋಗಲಿ. ಏಕೆಂದರೆ, ಇಂದು ಕೆಲವು ಕಂಪನಿಗಳಲ್ಲಿ ಶೇ 20-30ರಷ್ಟೂ ಕನ್ನಡಿಗರು ಇಲ್ಲದಿರುವುದು ವಿಪರ್ಯಾಸ.

ಮುಂದುವರಿದು, ಸ್ವಂತ ಖರ್ಚಿನಲ್ಲಿ ಕಾರ್ಖಾನೆ ಸ್ಥಾಪಿಸುವ, ಕಚೇರಿ ತೆರೆಯುವ ಕಂಪನಿಗಳಿಗೂ ಕನ್ನಡಿಗರಿಗೆ ಉದ್ಯೋಗ ನೀಡುವಂತೆ ಸರ್ಕಾರ ಪ್ರೋತ್ಸಾಹಿಸಬಹುದು. ಇದಕ್ಕಾಗಿ ಅಲ್ಪ ಪ್ರಮಾಣದ ರಿಯಾಯಿತಿಗಳನ್ನು ಘೋಷಿಸಬಹುದು. ಉದಾಹರಣೆಗೆ; ಶೇ 30ರಷ್ಟು ಕನ್ನಡಿಗರನ್ನು ನೇಮಿಸಿಕೊಂಡರೆ ವಿದ್ಯುತ್ ಮತ್ತು ನೀರಿನ ಬಿಲ್‌ನಲ್ಲಿ ಇಂತಿಷ್ಟು ರಿಯಾಯಿತಿ, ಅಥವಾ ಕಾನೂನುಬದ್ಧವಾಗಿ ಸಾಧ್ಯವಿರುವ ಇತರ ಪ್ರೋತ್ಸಾಹಧನಗಳನ್ನು ನೀಡಬಹುದು. ಆಗ ಕಡ್ಡಾಯ ಹೇರಿಕೆಯ ಪ್ರಶ್ನೆಯೂ ಬರುವುದಿಲ್ಲ, ವಿರೋಧಕ್ಕೂ ಹೆಚ್ಚು ಅವಕಾಶ ಉಳಿಯುವುದಿಲ್ಲ. ಇದರಿಂದ ಉದ್ಯಮಗಳಿಗೂ ಆರ್ಥಿಕ ಲಾಭವಾಗುತ್ತದೆ, ಕನ್ನಡಿಗರಿಗೂ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಕನಿಷ್ಠ ಇಷ್ಟನ್ನಾದರೂ ಸರ್ಕಾರದಿಂದ ನಿರೀಕ್ಷಿಸಬಹುದೇ?

ಇನ್ನು ಪರ-ವಿರೋಧಗಳೇನೇ ಇರಲಿ, ಡಿಕೆ ಶಿವಕುಮಾರ್‌ ಮಾತಿಗೆ ಪ್ರತಿಕ್ರಿಯೆ ನೀಡುತ್ತಾ ಉದ್ಯಮಿ ಟಿ.ವಿ. ಮೋಹನ್‌ದಾಸ್ ಪೈ ಅವರು ಹೇಳಿದ ಮಾತನ್ನೂ ನಾವು ಗಂಭೀರವಾಗಿ ಪರಿಗಣಿಸಬೇಕಿದೆ. ಉದ್ಯಮಗಳ ಬೇಡಿಕೆಗೆ ತಕ್ಕಂತೆ ಕನ್ನಡಿಗ ಯುವಜನರನ್ನು ತರಬೇತುಗೊಳಿಸುವ ಅತಿದೊಡ್ಡ ಜವಾಬ್ದಾರಿಯೂ ಸರ್ಕಾರಕ್ಕಿದೆ.

ಎಕಾನಮಿ 360 | ಎಐ ಟೈಮ್‌ಬಾಂಬ್: ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಈಗಾಗಲೇ ನಮ್ಮ ಶಿಕ್ಷಣ ವ್ಯವಸ್ಥೆ, ಪ್ರಸ್ತುತ ಕೃತಕ ಬುದ್ಧಿಮತ್ತೆ (ಎಐ) ಆಳುತ್ತಿರುವ ವೇಗದ ಜಗತ್ತಿಗೆ ಹೋಲಿಸಿದರೆ ತೀರಾ ಹಿಂದುಳಿದಿದೆ ಎನ್ನುವುದು ನಿರ್ವಿವಾದ. ಸರ್ಕಾರಿ ಕಾಲೇಜುಗಳ ಮೂಲಸೌಕರ್ಯ, ಬೋಧಕರ ಕೊರತೆ ಮತ್ತು ಶಿಕ್ಷಣದ ಗುಣಮಟ್ಟವೂ ಪಾತಾಳಕ್ಕೆ ಕುಸಿದಿದೆ.

ಉದ್ಯೋಗ ಮಾರುಕಟ್ಟೆ ಇಷ್ಟೊಂದು ವೇಗವಾಗಿ ಬದಲಾಗುತ್ತಿರುವಾಗ, ಹಳೆಯ ಪಠ್ಯಕ್ರಮ, ದುರ್ಬಲ ಬೋಧನೆಯೊಂದಿಗೆ ವಿದ್ಯಾರ್ಥಿಗಳನ್ನು ಉದ್ಯಮ ಲೋಕಕ್ಕೆ ಕಳುಹಿಸಿದರೆ ಅವರು ಸ್ಪರ್ಧಿಸುವುದಾದರೂ ಹೇಗೆ? ಪ್ರತಿಭೆ ಮತ್ತು ನೈಪುಣ್ಯತೆಯನ್ನೇ ನೆಚ್ಚಿಕೊಂಡಿರುವ ಆಧುನಿಕ ಜಗತ್ತಿನಲ್ಲಿ, ತಾರತಮ್ಯಗಳ ಆರೋಪಗಳಾಚೆಗೂ ಕೌಶಲಯುಕ್ತ ಹೊರರಾಜ್ಯದ ಉದ್ಯೋಗಿಗಳ ಜೊತೆ ನಮ್ಮವರು ಸೆಣೆಸುವುದಾದರೂ ಹೇಗೆ?

ಹಾಗಾಗಿ ಮುಖ್ಯಮಂತ್ರಿಗಳೇ, ಕನ್ನಡಿಗರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂಬ ನಿಮ್ಮ ಎಚ್ಚರಿಕೆ ಸ್ವಾಗತಾರ್ಹ. ಆದರೆ ಆ ಎಚ್ಚರಿಕೆಯ ಜೊತೆಗೆ ಮೇಲಿನಂತಹ ಪ್ರಾಯೋಗಿಕ ಆಯ್ಕೆಗಳ ಬಗ್ಗೆಯೂ ಚಿಂತನೆ ನಡೆಸುವುದು ಒಳಿತು. ಉದ್ಯಮಗಳಿಗೂ ಒಪ್ಪಿಗೆಯಾಗುವ ಮತ್ತು ಕನ್ನಡಿಗರಿಗೆ ನಿಜಕ್ಕೂ ಲಾಭ ತರುವ ಕ್ರಮಗಳನ್ನು ಜಾರಿಗೆ ತರಲು ದಯವಿಟ್ಟು ಮುಂದಾಗಿ. ಆಗ ಈ ಚರ್ಚೆಗೊಂದು ಕಳೆ ಬರುತ್ತದೆ. ಕನ್ನಡ ರಾಜ್ಯೋತ್ಸವಕ್ಕೊಂದು ಮೆರಗು ಬರುತ್ತದೆ. ಇಲ್ಲದಿದ್ದರೆ ಮತ್ತದೇ ಆಕ್ರೋಶ, ಆಗ್ರಹಗಳೆಲ್ಲ ವರ್ಷದ ಹರಕೆಗಳಾಗುತ್ತವೆ.

ಎಕಾನಮಿ 360: ಟಾಟಾದಲ್ಲಿ ಆಂತರಿಕ ಸಂಘರ್ಷ;ಭಾರತದ ಆರ್ಥಿಕತೆಯ ಮೇಲೂ ಆತಂಕದ ಕಾರ್ಮೋಡ
Dailyhunt
Disclaimer: This content has not been generated, created or edited by Dailyhunt. Publisher: Prajavani