Dailyhunt Logo
  • Light mode
    Follow system
    Dark mode
    • Play Story
    • App Story
ಫಿಫಾ ವಿಶ್ವಕಪ್‌ ಫೈನಲ್‌: ಅರ್ಜೆಂಟೀನಾ vs ಸ್ಪೇನ್ ಆಸಕ್ತಿದಾಯಕ ಅಂಶಗಳು

ಫಿಫಾ ವಿಶ್ವಕಪ್‌ ಫೈನಲ್‌: ಅರ್ಜೆಂಟೀನಾ vs ಸ್ಪೇನ್ ಆಸಕ್ತಿದಾಯಕ ಅಂಶಗಳು

2026ರ ಫಿಫಾ ವಿಶ್ವಕಪ್ ಟೂರ್ನಿಯು ರೋಚಕ ಹಂತವನ್ನು ತಲುಪಿದೆ. ಇಡೀ ಜಗತ್ತಿನ ಕ್ರೀಡಾಭಿಮಾನಿಗಳ ಗಮನ ಈಗ ಅರ್ಜೆಂಟೀನಾ ಹಾಗೂ ಸ್ಪೇನ್ ಮೇಲೆ ನೆಟ್ಟಿದೆ. ಈ ತಂಡಗಳ ಪೈಕಿ ಯಾರಾಗಲಿದ್ದಾರೆ ಚಾಂಪಿಯನ್ ಎಂಬುದು ಹೆಚ್ಚಿನ ಕುತೂಹಲ ಮೂಡಿಸಿದೆ. ಈ ವಿಶ್ವಕಪ್ ಫೈನಲ್ ಕುರಿತಾಗಿನ ಆಸಕ್ತಿದಾಯಕ ಅಂಶಗಳು ಇಲ್ಲಿವೆ…

'ಪಾಸ್ ಮಾಂತ್ರಿಕ' ರೊಡ್ರಿ (648 ಪಾಸ್‌ಗಳು)

ಸ್ಪೇನ್ ತಂಡದ ಮಿಡ್ ಫೀಲ್ಡರ್ ರೊಡ್ರಿ ಪ್ರಸ್ತುತ ಟೂರ್ನಿಯಲ್ಲಿ ದಾಖಲೆಯ 648 ಪಾಸ್‌ಗಳನ್ನು ನೀಡಿದ್ದಾರೆ. ಇದು ವಿಶ್ವಕಪ್ ಇತಿಹಾಸದಲ್ಲೇ ಆಟಗಾರನೊಬ್ಬ ಮಾಡಿದ ಅತ್ಯಧಿಕ ಪಾಸ್‌ಗಳಾಗಿವೆ. ಕುತೂಹಲದ ಸಂಗತಿಯೆಂದರೆ, 2022ರ ಕತಾರ್ ವಿಶ್ವಕಪ್‌ನಲ್ಲಿ ತಾವೇ ಬರೆದಿದ್ದ (638 ಪಾಸ್) ದಾಖಲೆಯನ್ನು ರೊಡ್ರಿ ಈಗ ಮುರಿದಿದ್ದಾರೆ. ಈ ಪಟ್ಟಿಯಲ್ಲಿ ಸ್ಪೇನ್‌ನ ಮತ್ತೊಬ್ಬ ದಿಗ್ಗಜ ಕ್ಸಾವಿ (2010ರಲ್ಲಿ 599 ಪಾಸ್) ಮೂರನೇ ಸ್ಥಾನದಲ್ಲಿದ್ದಾರೆ.

ಸ್ಪೇನ್ ಅಜೇಯ ಓಟ (37 ಪಂದ್ಯಗಳು)

ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಸ್ಪೇನ್ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದು, ಸತತ 37 ಪಂದ್ಯಗಳಲ್ಲಿ ಸೋಲನ್ನೇ ಕಂಡಿಲ್ಲ. 2024ರ ಮಾರ್ಚ್‌ನಲ್ಲಿ ಕೊಲಂಬಿಯಾ ವಿರುದ್ಧ ಕೊನೆಯ ಸೋಲು ಎದುರಾಗಿತ್ತು. ಅದಾದ ಬಳಿಕದ 27 ಪಂದ್ಯಗಳನ್ನು ಗೆದ್ದಿದ್ದರೆ, 10 ಪಂದ್ಯಗಳಲ್ಲಿ ಡ್ರಾ ಫಲಿತಾಂಶ ಕಂಡಿದೆ. ಆ ಮೂಲಕ ಇಟಲಿ (2018-21) ಮತ್ತು ಅರ್ಜೆಂಟೀನಾ (2019-22) ಮಾಡಿದ್ದ ಸತತ 37 ಪಂದ್ಯಗಳ ದಾಖಲೆಯನ್ನು ಸ್ಪೇನ್ ಸರಿಗಟ್ಟಿದೆ.

ಎಂಬಾಪೆ ಮೀರಿಸಿದ ಸಕಾ 'ಹ್ಯಾಟ್ರಿಕ್‌': ಫ್ರಾನ್ಸ್‌ ಮಣಿಸಿದ ಇಂಗ್ಲೆಂಡ್‌ಗೆ ಕಂಚುವಿಶ್ವಕಪ್‌ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು: ಮೆಸ್ಸಿ ದಾಖಲೆ ಮುರಿದ ಎಂಬಾಪೆ

ಯಮಾಲ್ vs ಮೆಸ್ಸಿ 'ಡ್ರಿಬ್ಲಿಂಗ್' ಮ್ಯಾಜಿಕ್

ಸ್ಪೇನ್‌ನ 19 ವರ್ಷದ ಉದಯೋನ್ಮುಖ ತಾರೆ ಲಮಿನ್‌ ಯಮಾಲ್ ಈ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಅಂದರೆ 30 ಬಾರಿ ಚೆಂಡನ್ನು ಡ್ರಿಬ್ಲಿಂಗ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪಟ್ಟಿಯಲ್ಲಿ ಅರ್ಜೆಂಟೀನಾದ ನಾಯಕ ಲಯೊನೆಲ್ ಮೆಸ್ಸಿ (22 ಡ್ರಿಬಲ್ಸ್) ನಾಲ್ಕನೇ ಸ್ಥಾನದಲ್ಲಿದ್ದಾರೆ. 1986ರಲ್ಲಿ ಡೀಗೊ ಮರಡೋನಾ (53 ಡ್ರಿಬಲ್ಸ್) ಸಾರ್ವಕಾಲಿಕ ದಾಖಲೆ ಹೊಂದಿದ್ದಾರೆ. 2014ರಲ್ಲಿ ಮೆಸ್ಸಿ 46 ಸಲ ಡ್ರಿಬ್ಲಿಂಗ್ ಮಾಡಿದ್ದರು.

ಅರ್ಜೆಂಟೀನಾ ಗೋಲುಗಳ ಸುರಿಮಳೆ (19 ಗೋಲುಗಳು)

ಹಾಲಿ ಚಾಂಪಿಯನ್ ಅರ್ಜೆಂಟೀನಾ ಈ ಟೂರ್ನಿಯಲ್ಲಿ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ್ದು, ಒಟ್ಟು 19 ಗೋಲುಗಳನ್ನು ಗಳಿಸಿದೆ. (ಸರಾಸರಿ 2.71 ಗೋಲು). 1970ರಲ್ಲಿ ಬ್ರೆಜಿಲ್ (19 ಗೋಲು) ಬಳಿಕ ವಿಶ್ವಕಪ್‌ನಲ್ಲಿ ಗರಿಷ್ಠ ಗೋಲುಗಳ ಸಾಧನೆ ಮಾಡಿದ ತಂಡೆನಿಸಿದೆ. ಇತ್ತ ಸ್ಪೇನ್ 13 ಗೋಲುಗಳನ್ನು ಗಳಿಸಿದ್ದು, ಅದರ ಇತಿಹಾಸದ ಅತ್ಯುತ್ತಮ ಪ್ರದರ್ಶನವಾಗಿದೆ (2010ರಲ್ಲಿ ಪ್ರಶಸ್ತಿ ಗೆದ್ದಾಗ ಸ್ಪೇನ್ ಕೇವಲ 8 ಗೋಲು ಗಳಿಸಿತ್ತು). ಇನ್ನು 1954ರ ಆವೃತ್ತಿಯಲ್ಲಿ ಹಂಗೇರಿ 27 ಗೋಲುಗಳನ್ನು ಗಳಿಸಿತ್ತು.

ಅರ್ಜೆಂಟೀನಾ ಸತತ ಗೋಲುಗಳ ದಾಖಲೆ (13 ಪಂದ್ಯಗಳು)

ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟೀನಾ ಸತತ 13 ಪಂದ್ಯಗಳಲ್ಲಿ ಕನಿಷ್ಠ 2 ಗೋಲುಗಳನ್ನು ಗಳಿಸಿ ಹೊಸ ದಾಖಲೆ ಬರೆದಿದೆ. 2022ರ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ 2-1 ರಿಂದ ಸೋತ ನಂತರ, ಅರ್ಜೆಂಟೀನಾ ಆಡಿದ ಪ್ರತಿಯೊಂದು ವಿಶ್ವಕಪ್ ಪಂದ್ಯದಲ್ಲೂ ಎರಡಕ್ಕಿಂತ ಹೆಚ್ಚು ಗೋಲು ಗಳಿಸಿದೆ.

ಗೋಲ್ಡನ್ ಬೂಟ್ ರೇಸ್‌ನಲ್ಲಿ ಮೆಸ್ಸಿ (8 ಗೋಲುಗಳು)

ಅರ್ಜೆಂಟೀನಾದ ನಾಯಕ ಲಯೊನೆಲ್ ಮೆಸ್ಸಿ ಈ ಬಾರಿಯ ವಿಶ್ವಕಪ್‌ನಲ್ಲಿ 8 ಗೋಲುಗಳನ್ನು ಗಳಿಸಿ ಗೋಲ್ಡನ್ ಬೂಟ್ ರೇಸ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇದರ ಜೊತೆಗೆ 4 ಗೋಲುಗಳನ್ನು ಗಳಿಸಲು ನೆರವಾಗಿದ್ದಾರೆ (ಅಸಿಸ್ಟ್‌). ಒಟ್ಟಾರೆ 12 ಗೋಲುಗಳಲ್ಲಿ ನೇರ ಪಾತ್ರ ವಹಿಸಿದ್ದಾರೆ. ಗೋಲ್ಡನ್ ಬೂಟ್ ರೇಸ್‌ನಲ್ಲಿ 10 ಗೋಲುಗಳನ್ನು ಗಳಿಸಿರುವ ಫ್ರಾನ್ಸ್‌ನ ಕೈಲಿಯನ್ ಎಂಬಾಪೆ ಮುಂಚೂಣಿಯಲ್ಲಿದ್ದಾರೆ.

ಉನೈ ಸಿಮೋನ್ ಭದ್ರಕೋಟೆ

ಸ್ಪೇನ್‌ನ ಗೋಲ್‌ಕೀಪರ್ ಉನೈ ಸಿಮೋನ್ ಈ ವಿಶ್ವಕಪ್‌ನ 7 ಪಂದ್ಯಗಳಲ್ಲಿ 6 ಪಂದ್ಯಗಳಲ್ಲಿ ಎದುರಾಳಿಗಳಿಗೆ ಒಂದೂ ಗೋಲು ಬಿಟ್ಟುಕೊಡದೆ (ಕ್ಲೀನ್ ಶೀಟ್‌) ದಾಖಲೆ ಬರೆದಿದ್ದಾರೆ. ಅಷ್ಟೇ ಅಲ್ಲದೆ ಅವರು 650 ನಿಮಿಷ ಗೋಲು ಬಿಟ್ಟುಕೊಡದೆ ವಾಲ್ಟರ್ ಝೆಂಗಾ (517 ನಿಮಿಷ) ಅವರ ದಾಖಲೆಯನ್ನು ಮುರಿದಿದ್ದಾರೆ. ಈ ಬಾರಿ ಸ್ಪೇನ್ ಕೇವಲ 1 ಗೋಲು ಮಾತ್ರ ಬಿಟ್ಟುಕೊಟ್ಟಿದೆ.

ಪೆನಾಲ್ಟಿ ಬಾಕ್ಸ್ ಹೊರಗಿನಿಂದಲೇ ಗೋಲು ಸಾಧನೆ (5 ಗೋಲು)

ಅರ್ಜೆಂಟೀನಾ ತಂಡ ಪೆನಾಲ್ಟಿ ಬಾಕ್ಸ್‌ನ ಹೊರಗಿನಿಂದಲೇ 5 ಗೋಲುಗಳನ್ನು ಬಾರಿಸಿದೆ. ಇದರಲ್ಲಿ ಎರಡು ಗೋಲುಗಳು ಮೆಸ್ಸಿ ಅವರದ್ದಾಗಿದ್ದರೆ, ಲೋ ಸೆಲ್ಸೊ, ಅಲ್ವಾರೆಜ್ ಮತ್ತು ಎಂಜೊ ಫೆರ್ನಾಂಡಿಸ್ ತಲಾ ಒಂದು ಗೋಲು ಗಳಿಸಿದ್ದಾರೆ. ಮೆಸ್ಸಿ ಈಗ ವಿಶ್ವಕಪ್ ಇತಿಹಾಸದಲ್ಲೇ ಬಾಕ್ಸ್ ಹೊರಗಿನಿಂದ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬ್ರೆಜಿಲ್ ದಾಖಲೆ ಸಮಗಟ್ಟಿದ ಅರ್ಜೆಂಟೀನಾ

ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಸತತ 7 ಪಂದ್ಯಗಳನ್ನು ಗೆದ್ದ ಜಗತ್ತಿನ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಅರ್ಜೆಂಟೀನಾ ಪಾತ್ರವಾಗಿದೆ. ಇದಕ್ಕೂ ಮುನ್ನ 2002ರ ವಿಶ್ವಕಪ್‌ನಲ್ಲಿ ರೊನಾಲ್ಡೊ ನಜಾರಿಯೋ ನೇತೃತ್ವದ ಬ್ರೆಜಿಲ್ ತಂಡ ಈ ಸಾಧನೆ ಮಾಡಿತ್ತು. ಈಗ 24 ವರ್ಷಗಳ ಬಳಿಕ ಅರ್ಜೆಂಟೀನಾ ಆ ದಾಖಲೆಯನ್ನು ಸರಿಗಟ್ಟಿದೆ.

ಸತತ ಎರಡನೇ ಸಲ ವಿಶ್ವಕಪ್ ಗೆಲ್ಲುವ ಅವಕಾಶ

ಈ ಸಲವೂ ಟ್ರೋಫಿ ಗೆದ್ದರೆ ಸತತ ಎರಡು ಬಾರಿ ವಿಶ್ವಕಪ್ ಗೆದ್ದ ಜಗತ್ತಿನ 3ನೇ ತಂಡ ಎಂಬ ಹೆಗ್ಗಳಿಕೆಗೆ ಅರ್ಜೆಂಟೀನಾ ಭಾಜನವಾಗಲಿದೆ. 1934 ಮತ್ತು 1938ರಲ್ಲಿ ಇಟಲಿ ಮತ್ತು 1958 ಮತ್ತು 1962ರಲ್ಲಿ ಬ್ರೆಜಿಲ್ ಈ ಸಾಧನೆ ಮಾಡಿತ್ತು. ಇದೀಗ ಸುಮಾರು ಆರು ದಶಕಗಳ ಬಳಿಕವೀಗ ಅರ್ಜೆಂಟೀನಾಕ್ಕೆ ದಾಖಲೆ ಪುಟ ಸೇರುವ ಅವಕಾಶವಿದೆ.

4ನೇ ವಿಶ್ವಕಪ್ ಗೆಲ್ಲವು ಅವಕಾಶ…

ಈ ಬಾರಿ ಗೆದ್ದರೆ ಅರ್ಜೆಂಟೀನಾ ನಾಲ್ಕನೇ ಸಲ ವಿಶ್ವಕಪ್ ಗೆದ್ದ ಸಾಧನೆ ಮಾಡಲಿದೆ. ಆ ಮೂಲಕ ವಿಶ್ವಕಪ್‌ನಲ್ಲಿ ಬ್ರೆಜಿಲ್ ಬಳಿಕದ (5 ಸಲ) ಯಶಸ್ವಿ ತಂಡವೆನಿಸಲಿದೆ. ಅಲ್ಲದೆ ತಲಾ ನಾಲ್ಕು ಟ್ರೋಫಿ ಗೆದ್ದಿರುವ ಜರ್ಮನಿ ಹಾಗೂ ಇಟಲಿ ದಾಖಲೆಯನ್ನು ಸರಿಗಟ್ಟಲಿದೆ. 1978, 1986 ಹಾಗೂ 2022ರಲ್ಲಿ ಅರ್ಜೆಂಟೀನಾ ಪ್ರಶಸ್ತಿ ಜಯಿಸಿತ್ತು.

ಮತ್ತೊಂದೆಡೆ ಸ್ಪೇನ್ ಕೊನೆಯದಾಗಿ 2010ರಲ್ಲಿ ಟ್ರೋಫಿ ಗೆದ್ದಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Prajavani