ಹೊರ್ಮುಜ್ ಜಲಸಂಧಿ ಮೂಲಕ ಸಾಗುವ ಹಡಗುಗಳಿಗೆ ಶೇ 20 ಶುಲ್ಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವುದು ಜಾಗತಿಕ ಸಾಗಾಣೆ ಮತ್ತು ಇಂಧನ ಮಾರುಕಟ್ಟೆಯಲ್ಲಿ ಹೊಸ ಆತಂಕಕ್ಕೆ ಕಾರಣವಾಗಿದೆ.
ಒಪ್ಪಂದದ ಭಾಷೆಯಲ್ಲೇ ಹೊಸ ಬಿಕ್ಕಟ್ಟು: ಹೊರ್ಮುಜ್ ಈಗ ಜಾಗತಿಕ ಪೈಪೋಟಿಯ ಅಖಾಡವಿಶ್ವದ ಅತ್ಯಂತ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ಒಂದಾಗಿರುವ ಈ ಜಲಸಂಧಿಯಲ್ಲಿ ಶುಲ್ಕ ಜಾರಿಯಾದರೆ, ತೈಲ ಸಾಗಾಟದ ವೆಚ್ಚ ಮಾತ್ರವಲ್ಲದೆ ಜಾಗತಿಕ ಸರಕು ಸಾಗಣೆ ವೆಚ್ಚವೂ ಭಾರಿ ಹೆಚ್ಚಳವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಹೊರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ಎಲ್ಲ ಸರಕು ಹಡಗುಗಳಿಗೆ ಶೇ 20 ಶುಲ್ಕ ವಿಧಿಸುತ್ತೇವೆ ಎಂದು ಸೋಮವಾರ ಟ್ರಂಪ್ ಘೋಷಿಸಿದ್ದಾರೆ. ಈ ಮಾರ್ಗದಲ್ಲಿ ಹಡಗುಗಳಿಗೆ ಭದ್ರತೆ ಒದಗಿಸಲು ಅಮೆರಿಕ ಸೇನೆ ವೆಚ್ಚ ಮಾಡುತ್ತಿದ್ದು, ಅದರ ಖರ್ಚನ್ನು ವಸೂಲು ಮಾಡುವ ಉದ್ದೇಶದಿಂದ ಶುಲ್ಕ ಜಾರಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಆದರೆ ಈ ಶುಲ್ಕವನ್ನು ಯಾವ ಆಧಾರದ ಮೇಲೆ ಲೆಕ್ಕ ಹಾಕಲಾಗುವುದು ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ. ಸರಕುಗಳ ಒಟ್ಟು ಮೌಲ್ಯದ ಆಧಾರದ ಮೇಲೆ ಶುಲ್ಕ ವಿಧಿಸಿದರೆ ಅದರ ಪರಿಣಾಮ ದೊಡ್ಡದಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಟ್ರಂಪ್ ಸೇರಿದಂತೆ ಹಲವು ನಾಯಕರ ಮೇಲೆ ಪ್ರತೀಕಾರ:ಪಟ್ಟಿ ಪ್ರಕಟಿಸಿದ ಇರಾನ್ ಪತ್ರಿಕೆಸಾಗಣೆ ವೆಚ್ಚ ದ್ವಿಗುಣ?
ಪರ್ಷಿಯನ್ ಕೊಲ್ಲಿಯಿಂದ ಯುರೋಪ್‌ಗೆ ಒಂದು ಬ್ಯಾರೆಲ್ ತೈಲ ಸಾಗಿಸಲು ಈಗಾಗಲೇ ಸುಮಾರು 10 ಅಮೆರಿಕನ್ ಡಾಲರ್ ವೆಚ್ಚವಾಗುತ್ತದೆ. ಒಂದು ಬ್ಯಾರೆಲ್ ತೈಲದ ಬೆಲೆ ಸುಮಾರು 80 ಡಾಲರ್ ಆಗಿರುವುದರಿಂದ, ಶೇ 20 ಶುಲ್ಕ ಜಾರಿಯಾದರೆ ಪ್ರತಿ ಬ್ಯಾರೆಲ್‌ಗೆ ಇನ್ನೂ 16 ಡಾಲರ್ ಹೆಚ್ಚುವರಿ ವೆಚ್ಚ ಸೇರುತ್ತದೆ. ಹೀಗಾಗಿ ಒಟ್ಟು ಸಾಗಾಟ ವೆಚ್ಚವು ಸುಮಾರು 26 ಡಾಲರ್‌ಗೆ ಏರಬಹುದು ಎಂದು 'ಐಎನ್‌ಜಿ ರಿಸರ್ಚ್'ನ ಲಾಜಿಸ್ಟಿಕ್ಸ್ ತಜ್ಞ ರಿಕೋ ಲುಮನ್ ಹೇಳಿದ್ದಾರೆ.
ಸುಮಾರು 20 ಲಕ್ಷ ಬ್ಯಾರೆಲ್ ತೈಲ ಸಾಗಿಸುವ ದೊಡ್ಡ ಟ್ಯಾಂಕರ್‌ಗೆ ಈ ಶುಲ್ಕದಿಂದ 3 ಕೋಟಿ ಡಾಲರ್‌ಗಿಂತ ಹೆಚ್ಚು ಹೆಚ್ಚುವರಿ ವೆಚ್ಚ ಬೀಳುವ ಸಾಧ್ಯತೆ ಇದೆ. ಈ ಹೆಚ್ಚುವರಿ ವೆಚ್ಚದ ಒಂದು ಭಾಗವನ್ನು ತೈಲ ಆಮದುದಾರರು ಅಂತಿಮವಾಗಿ ಗ್ರಾಹಕರ ಮೇಲೆಯೇ ವರ್ಗಾಯಿಸುವ ಸಾಧ್ಯತೆಯಿದೆ.
ಕೇವಲ ಶುಲ್ಕ ಮಾತ್ರವಲ್ಲ…
ಈ ಘೋಷಣೆಯ ಬಗ್ಗೆ ಕೆಲವು ವಿಶ್ಲೇಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಇಷ್ಟೊಂದು ದೊಡ್ಡ ಆರ್ಥಿಕ ಹೊರೆ ಇರುವ ಕಾರಣ ಈ ಯೋಜನೆ ಕಾರ್ಯರೂಪಕ್ಕೆ ಬರದೇ ಇರಬಹುದು ಎನ್ನುವುದು ಅವರ ಅಭಿಪ್ರಾಯ. ಆದರೆ ಪಶ್ಚಿಮ ಏಷ್ಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಡಗು ಸಂಸ್ಥೆಗಳ ದೃಷ್ಟಿಯಲ್ಲಿ ಈಗಿನ ದೊಡ್ಡ ಚಿಂತೆ ಶುಲ್ಕವಲ್ಲ. ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವುದೇ ಅವರ ಆತಂಕ.
ಇತ್ತೀಚಿನ ಬೆಳವಣಿಗೆಗಳಲ್ಲಿ ಅಮೆರಿಕ ತನ್ನ ನೌಕಾಪಡೆಯ ಮೂಲಕ ಹಡಗುಗಳನ್ನು ಒಮಾನ್ ಕರಾವಳಿಗೆ ಸಮೀಪದ ಮಾರ್ಗದಲ್ಲಿ ಸಾಗಿಸುತ್ತಿದೆ. ಈ ಕ್ರಮಕ್ಕೆ ಇರಾನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಜಲಸಂಧಿಯಲ್ಲಿನ ಹಡಗು ಸಂಚಾರವನ್ನು ನಿಯಂತ್ರಿಸುವ ಹಕ್ಕು ತನ್ನದೇ ಎಂದು ಹೇಳುತ್ತಿದೆ. ಒಮಾನ್ ಮಾರ್ಗ ಬಳಸಿದ ಕೆಲವು ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದ್ದು, ಅದಕ್ಕೆ ಪ್ರತಿಯಾಗಿ ಅಮೆರಿಕವೂ ಇರಾನ್ ವಿರುದ್ಧ ಕ್ರಮ ಕೈಗೊಂಡಿದೆ.
ಯುದ್ಧಭೂಮಿಯ ಹೊರಗೆ ಗುಪ್ತ ಸಂಘರ್ಷ: ಟ್ರಂಪ್-ಸಲ್ಮಾನ್ ನಡುವೆ ಬಿರುಕು ಮೂಡಿದ್ದೇಕೆ?ಇದೇ ವೇಳೆ, ಇರಾನ್ ಅನುಮತಿ ಪಡೆದು ಅದರ ಕರಾವಳಿಯ ಸಮೀಪದ ಮಾರ್ಗದಲ್ಲಿ ಹಲವು ಹಡಗುಗಳು ಸಂಚರಿಸುತ್ತಿವೆ. ಮತ್ತೊಂದೆಡೆ, ಇರಾನ್ ಬಂದರುಗಳನ್ನು ಬಳಸುವ ಹಡಗುಗಳ ವಿರುದ್ಧ ಅಮೆರಿಕದ ನೌಕಾ ನಿರ್ಬಂಧ ಮತ್ತೆ ಜಾರಿಗೆ ಬರುತ್ತಿದೆ ಎಂದು ಟ್ರಂಪ್ ಘೋಷಿಸಿದ್ದಾರೆ.
ಹಡಗು ಸಂಸ್ಥೆಗಳ ಮುಂದೆ ಗೊಂದಲ
ಈ ಶುಲ್ಕ ಜಾರಿಯಾಗುತ್ತದೆಯೇ ಎಂಬುದರ ಬಗ್ಗೆ ಅನುಮಾನವಿದ್ದರೂ, ಜಾರಿಯಾದರೆ ಹಡಗು ಸಂಸ್ಥೆಗಳಿಗೆ ಕಠಿಣ ಪರಿಸ್ಥಿತಿ ಎದುರಾಗಲಿದೆ ಎಂದು ಇಂಧನ ಮಾರುಕಟ್ಟೆ ವಿಶ್ಲೇಷಣಾ ಸಂಸ್ಥೆ 'ಸ್ಪಾರ್ಟಾ'ದ ತೈಲ ಸಂಶೋಧನಾ ವಿಭಾಗದ ಮುಖ್ಯಸ್ಥ ನೀಲ್ ಕ್ರಾಸ್ಬಿ ಅಭಿಪ್ರಾಯಪಡುತ್ತಾರೆ.
ಒಂದೆಡೆ ಅಮೆರಿಕಕ್ಕೆ ಶುಲ್ಕ ಪಾವತಿಸಿ ಇರಾನ್ ದಾಳಿಯ ಅಪಾಯ ಎದುರಿಸಬೇಕಾಗಬಹುದು; ಮತ್ತೊಂದೆಡೆ, ಅಮೆರಿಕದ ನಿಯಮವನ್ನು ಪಾಲಿಸದೆ ಇರಾನ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪರಿಸ್ಥಿತಿಯೂ ಎದುರಾಗಬಹುದು. ಇತ್ತೀಚಿನ ದಾಳಿಗಳ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸಲು ಹಡಗು ಮಾಲೀಕರು ಇನ್ನಷ್ಟು ಹಿಂಜರಿಯುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಟ್ರಂಪ್ ಪ್ರಸ್ತಾಪಿಸಿರುವ ಶುಲ್ಕವು ಅತಿಯಾದದ್ದು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಇಬ್ಬರು ಹಡಗು ನಿರ್ವಾಹಕರು ಅಭಿಪ್ರಾಯಪಟ್ಟಿದ್ದಾರೆ. ಈ ಮೊತ್ತವು ಸಾಮಾನ್ಯವಾಗಿ ಹಡಗು ಸಾಗಾಟಕ್ಕಾಗಿ ಪಡೆಯುವ ಶುಲ್ಕವನ್ನೇ ಮೀರಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಕಾನೂನು
'ಶೇ 20 ಶುಲ್ಕವು ಜಾಗತಿಕ ವ್ಯಾಪಾರಕ್ಕೆ ದೊಡ್ಡ ಆರ್ಥಿಕ ಹೊರೆ ಆಗಲಿದೆ. ಆಗ್ನೇಯ ಏಷ್ಯಾದ ಮಲಕ್ಕಾ ಜಲಸಂಧಿಯಲ್ಲಿ ಹಡಗುಗಳಿಂದ ಪಡೆಯುವ ಸ್ವಯಂಪ್ರೇರಿತ ಶುಲ್ಕವು ಸರಕು ಮೌಲ್ಯದ ಶೇ 0.5 ಕ್ಕಿಂತಲೂ ಕಡಿಮೆ ಇದೆ' ಎಂದು ಅಮೆರಿಕದ ವರ್ಜೀನಿಯಾ ವಿಶ್ವವಿದ್ಯಾಲಯದ ಸರಕು ಸರಪಳಿ ತಜ್ಞೆ ವಿದ್ಯಾ ಮಣಿ ಹೇಳಿದ್ದಾರೆ.
ಈ ಹಿಂದೆ ಹೊರ್ಮುಜ್ ಜಲಸಂಧಿ ಮೂಲಕ ಸಾಗುವ ಹಡಗುಗಳಿಂದ ಶುಲ್ಕ ವಸೂಲು ಮಾಡಲು ಇರಾನ್ ಕೂಡ ಪ್ರಯತ್ನಿಸಿತ್ತು. ಆದರೆ ಎಷ್ಟು ಹಡಗುಗಳು ಅದನ್ನು ಪಾವತಿಸಿವೆ ಅಥವಾ ಎಷ್ಟು ಮೊತ್ತ ವಸೂಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.
ಶುಲ್ಕ ವಿಧಿಸುವ ಟ್ರಂಪ್ ಘೋಷಣೆಗೆ ಪ್ರತಿಕ್ರಿಯಿಸಿದ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ , 'ಶೇ20 ಶುಲ್ಕ ತುಂಬಾ ಹೆಚ್ಚಾಗಿದೆ. ನಾವು ನ್ಯಾಯಸಮ್ಮತವಾಗಿರುತ್ತೇವೆ' ಎಂದು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಗುರಿ ಬದಲಿಸುವ ಟ್ರಂಪ್, ನಿಲುವು ಸಡಿಲಿಸದ ಪುಟಿನ್: ಯುದ್ಧ ಸಾರಿ ಗೆಲ್ಲದ ನಾಯಕರುಗಮನಾರ್ಹ ಸಂಗತಿ ಏನೆಂದರೆ, ಈ ಹಿಂದೆ ಇರಾನ್ ಶುಲ್ಕ ವಿಧಿಸಲು ಮುಂದಾದಾಗ ಅದನ್ನು ಅಮೆರಿಕವೇ ವಿರೋಧಿಸಿತ್ತು. ಯುದ್ಧ ಆರಂಭವಾಗುವ ಮೊದಲು ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳಿಗೆ ಯಾವುದೇ ಶುಲ್ಕ ಇರಲಿಲ್ಲ ಹಾಗೂ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಯಾವುದೇ ದೇಶ ಟೋಲ್ ಅಥವಾ ಶುಲ್ಕ ವಿಧಿಸಲು ಅವಕಾಶವಿಲ್ಲ ಎಂಬುದು ಅಸ್ತಿತ್ವದಲ್ಲಿರುವ ಅಂತರರಾಷ್ಟ್ರೀಯ ಕಾನೂನು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಜೂನ್‌ನಲ್ಲಿ ಹೇಳಿದ್ದರು.
ಅದೇ ಅಮೆರಿಕ ಈಗ ಭದ್ರತೆಯ ಹೆಸರಿನಲ್ಲಿ ಶುಲ್ಕ ವಿಧಿಸುವ ಪ್ರಸ್ತಾಪ ಮಾಡಿರುವುದು ಜಾಗತಿಕ ಸಮುದ್ರ ಕಾನೂನು ಮತ್ತು ಮುಕ್ತ ನೌಕಾಯಾನ ತತ್ವಗಳ ಕುರಿತ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಆಧಾರ: ಎಪಿ, ರಾಯಿಟರ್ಸ್ ಹಾಗೂ ದಿ ನ್ಯೂಯಾರ್ಕ್ ಟೈಮ್ಸ್
ಶ್ರೀಲಂಕಾದ ಆರ್ಥಿಕತೆ ಚೇತರಿಸಿಕೊಂಡಿದ್ದು ಹೇಗೆ? ಭಾರತದ ಸ್ಥಿತಿ ಏನು?
