Dailyhunt Logo
  • Light mode
    Follow system
    Dark mode
    • Play Story
    • App Story
ಕರುನಾಡೋತ್ಸವ | ರಾಜ್ಯದ ಆನೆಗಳಿಗೆ ಹೆಚ್ಚು ಬೇಡಿಕೆ: ಸೆರೆ, ಪಳಗಿಸುವ ಕಲೆಯ ಹಿರಿಮೆ

ಕರುನಾಡೋತ್ಸವ | ರಾಜ್ಯದ ಆನೆಗಳಿಗೆ ಹೆಚ್ಚು ಬೇಡಿಕೆ: ಸೆರೆ, ಪಳಗಿಸುವ ಕಲೆಯ ಹಿರಿಮೆ

ಕಾಡಾನೆಗಳ ಆವಾಸ ಮತ್ತು ಕಾರಿಡಾರ್‌ಗಳ ಸಂರಕ್ಷಣೆ, ಗ್ರಾಮಸ್ಥರಿಗೆ ಬೆಳೆ ಹಾನಿ ಪರಿಹಾರ ಮತ್ತು ಮುನ್ನೆಚ್ಚರಿಕೆ ವ್ಯವಸ್ಥೆಗಳು ಇವೆಲ್ಲವೂ ಕುಮ್ಕಿ ಆನೆಗಳ ಜೊತೆ ಜೊತೆಗೆ ಸಾಗಬೇಕು. ಏಕೆಂದರೆ ಕುಮ್ಕಿ ಆನೆ ಸಂಘರ್ಷವನ್ನು ತಾತ್ಕಾಲಿಕವಾಗಿ ತಗ್ಗಿಸಬಹುದು, ಆದರೆ ಶಾಶ್ವತ ಪರಿಹಾರ ಕಾಡು ಮತ್ತು ಜನರ ನಡುವಿನ ಸಮತೋಲನದಲ್ಲಿದೆ.

ಮೈಸೂರು ದಸರಾದಲ್ಲಿ ಚಿನ್ನದ ಅಂಬಾರಿ ಹೊತ್ತು ಗಾಂಭೀರ್ಯದಿಂದ ಸಾಗುವ ಆನೆಯನ್ನು ನೋಡಿದವರಿಗೆ ಒಂದು ಪ್ರಶ್ನೆ ಸಹಜವಾಗಿ ಮೂಡುತ್ತದೆ. ಕಾಡಿನ ಈ ಬೃಹತ್ ಜೀವಿ ಮನುಷ್ಯನ ಮಾತಿಗೆ ಹೇಗೆ ಹೊಂದಿಕೊಂಡಿತು? ಇದರ ಹಿಂದೆ ಶತಮಾನಗಳ ಅನುಭವ, ತಾಳ್ಮೆ ಮತ್ತು ನಂಬಿಕೆಯ ಪರಂಪರೆ ಇದೆ. ಅದೇ ಕಾರಣಕ್ಕೆ ಇಂದು ಕರ್ನಾಟಕದ ಆನೆಗಳು ಮತ್ತು ಅವುಗಳನ್ನು ನಿರ್ವಹಿಸುವ ಕೌಶಲ್ಯ ಹೊರರಾಜ್ಯಗಳಲ್ಲೂ ಬೇಡಿಕೆ ಪಡೆದಿವೆ.

ಆನೆ ಸಂರಕ್ಷಣೆಯಲ್ಲಿ ಕರ್ನಾಟಕದ ಸ್ಥಾನ

ದೇಶದಲ್ಲೇ ಅತಿ ಹೆಚ್ಚು ಕಾಡಾನೆಗಳಿರುವ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. 6 ಸಾವಿರಕ್ಕೂ ಹೆಚ್ಚು ಆನೆಗಳು ನಮ್ಮ ಕಾಡುಗಳಲ್ಲಿವೆ ಎಂದು ಗಣತಿಗಳು ತೋರಿಸಿವೆ. ನಾಗರಹೊಳೆ, ಬಂಡೀಪುರ, ಭದ್ರಾ ಮತ್ತು ಬಿಳಿಗಿರಿರಂಗನ ಬೆಟ್ಟದ ಕಾಡುಗಳು ಇವುಗಳ ಪ್ರಮುಖ ನೆಲೆಗಳು. ಪಶ್ಚಿಮ ಘಟ್ಟದಿಂದ ಪೂರ್ವ ಘಟ್ಟದವರೆಗೆ ಹರಡಿರುವ ಈ ಕಾಡುಗಳು ಆನೆಗಳ ಸಂಚಾರಕ್ಕೆ ನಿರಂತರ ಕಾರಿಡಾರ್‌ಗಳನ್ನು ಒದಗಿಸಿವೆ.

ಸಾಕಾನೆಗಳ ಪರಂಪರೆಯೂ ಇಲ್ಲಿ ಹಳೆಯದು. ದುಬಾರೆ, ಮತ್ತಿಗೋಡು, ಸಕ್ರೆಬೈಲು, ಬಳ್ಳೆ ಮುಂತಾದ ಆನೆ ಶಿಬಿರಗಳು ಇದರ ಜೀವಂತ ಸಾಕ್ಷಿ. ಮೈಸೂರು ಅರಸರ ಕಾಲದಿಂದಲೂ ದಸರಾ ಮತ್ತು ಇತರ ಉತ್ಸವಗಳಿಗಾಗಿ ಆನೆಗಳನ್ನು ಪೋಷಿಸಿ, ತರಬೇತಿ ನೀಡಿ, ತಲೆಮಾರಿನಿಂದ ತಲೆಮಾರಿಗೆ ಜ್ಞಾನ ವರ್ಗಾಯಿಸಿದ ಇತಿಹಾಸ ನಮ್ಮದು. ಒಂದು ಕಾಲದಲ್ಲಿ ಖೆಡ್ಡಾ ಕಾರ್ಯಾಚರಣೆಯ ಮೂಲಕ ಕಾಡಾನೆಗಳನ್ನು ಹಿಡಿಯಲಾಗುತ್ತಿತ್ತು. ಈಗ ಆ ಪದ್ಧತಿ ನಿಂತಿದೆ. ಶಿಬಿರಗಳಲ್ಲಿ ಹುಟ್ಟಿ ಬೆಳೆದ ಆನೆಗಳು ಮತ್ತು ಸಂಘರ್ಷದ ಸಂದರ್ಭಗಳಲ್ಲಿ ರಕ್ಷಿಸಲಾದ ಆನೆಗಳೇ ಈಗ ಈ ವ್ಯವಸ್ಥೆಯ ಆಧಾರ.

ಬೇಡಿಕೆ ಏಕೆ?

ಇಂದು ಹೊರರಾಜ್ಯಗಳು ಕರ್ನಾಟಕದ ಕಡೆ ನೋಡಲು ಮುಖ್ಯ ಕಾರಣ ಮಾನವ-ಆನೆ ಸಂಘರ್ಷ. ಹೊಲಗಳಿಗೆ ನುಗ್ಗುವ, ಊರುಗಳಿಗೆ ಬರುವ ಕಾಡಾನೆಗಳನ್ನು ಸುರಕ್ಷಿತವಾಗಿ ನಿಯಂತ್ರಿಸಲು ತರಬೇತಿ ಪಡೆದ ಕುಮ್ಕಿ ಆನೆಗಳು ಬೇಕು. ಇವು ಕಾಡಾನೆಗಳನ್ನು ಕಾಡಿಗೆ ಮರಳಿ ಓಡಿಸಲು, ಗಾಯಗೊಂಡ ಅಥವಾ ಸಂಘರ್ಷಕ್ಕೆ ಕಾರಣವಾದ ಆನೆಗಳನ್ನು ಹಿಡಿದು ಚಿಕಿತ್ಸೆ ನೀಡಲು, ರೇಡಿಯೋ ಕಾಲರ್ ಅಳವಡಿಸಲು ಹಾಗೂ ಗಸ್ತು ಕಾರ್ಯಕ್ಕೆ ನೆರವಾಗುತ್ತವೆ.

ಇಂತಹ ಕೆಲಸಕ್ಕೆ ಸಾಮರ್ಥ್ಯ ಮಾತ್ರ ಸಾಲದು. ಶಾಂತ ಸ್ವಭಾವ, ಮಾವುತನ ಆದೇಶಕ್ಕೆ ತಕ್ಷಣ ಸ್ಪಂದಿಸುವ ಗುಣ, ಜನರ ಗದ್ದಲ ಮತ್ತು ಪಟಾಕಿ, ವಾಹನಗಳ ಶಬ್ದಗಳ ನಡುವೆಯೂ ಕದಲದ ಮನೋಭಾವ ಬೇಕು. ಕಾಡಾನೆಯ ಎದುರು ನಿಂತಾಗ ಹೆದರಿ ಓಡದ ಧೈರ್ಯವೂ ಅಷ್ಟೇ ಮುಖ್ಯ. ಕರ್ನಾಟಕದ ಶಿಬಿರಗಳಲ್ಲಿ ಬೆಳೆದ ಆನೆಗಳಲ್ಲಿ ಈ ಗುಣಗಳು ಕಂಡುಬರುತ್ತವೆ. ಹೀಗಾಗಿ ನೆರೆಯ ಮತ್ತು ಇತರ ರಾಜ್ಯಗಳು ಕುಮ್ಕಿ ಆನೆಗಳಿಗಾಗಿ ಮತ್ತು ಮಾವುತರ ತರಬೇತಿಗಾಗಿ ನಮ್ಮ ಅರಣ್ಯ ಇಲಾಖೆಯ ನೆರವನ್ನು ಕೋರುತ್ತಿವೆ. ಹಲವು ರಾಜ್ಯಗಳಲ್ಲಿ ಆನೆ ಸಂಘರ್ಷ ಹೆಚ್ಚುತ್ತಿರುವಾಗ, ಕರ್ನಾಟಕ ದಶಕಗಳಿಂದ ಈ ಕೆಲಸದಲ್ಲಿ ಗಳಿಸಿರುವ ಅನುಭವಕ್ಕೆ ಮೌಲ್ಯ ಹೆಚ್ಚಿದೆ.

ಪಳಗಿಸುವ ವಿಶೇಷತೆ

ಆನೆ ಪಳಗಿಸುವುದು ಬಲಪ್ರಯೋಗದ ಕೆಲಸವಲ್ಲ. ಅದೊಂದು ಸಂಬಂಧ ಕಟ್ಟುವ ಕಲೆ. ಸಾಂಪ್ರದಾಯಿಕವಾಗಿ ಕಾಡಿನಿಂದ ಹಿಡಿದ ಆನೆಯನ್ನು 'ಕ್ರಾಲ್' ಎಂಬ ಮರದ ಆವರಣದಲ್ಲಿ ಇರಿಸಿ ಹಂತಹಂತವಾಗಿ ಮಾನವ ಸಾಮೀಪ್ಯಕ್ಕೆ ಒಗ್ಗಿಸಲಾಗುತ್ತಿತ್ತು. ಈ ಹಾದಿಯಲ್ಲಿ ಜೇನುಕುರುಬ, ಸೋಲಿಗ, ಯರವ ಸಮುದಾಯಗಳ ಮಾವುತರು ಮತ್ತು ಕಾವಾಡಿಗರ ಪಾತ್ರ ಅಪಾರ. ಕಾಡಿನೊಂದಿಗೆ ಬದುಕಿದ ಈ ಸಮುದಾಯಗಳಿಗೆ ಆನೆಯ ನಡವಳಿಕೆ ಹುಟ್ಟಿನಿಂದಲೇ ಪರಿಚಿತ. ಆನೆಯ ಕಿವಿಯ ಚಲನೆ, ಸೊಂಡಿಲಿನ ಭಂಗಿ, ಉಸಿರಾಟದ ಲಯ ಓದಿ ಅದರ ಮನಸ್ಥಿತಿ ಅರಿಯುವ ಅವರ ಅನುಭವವೇ ನಿಜವಾದ ಸಂಪತ್ತು. ಒಬ್ಬ ಮಾವುತ ಮತ್ತು ಒಂದು ಆನೆಯ ನಡುವಿನ ವರ್ಷಗಳ ಬಾಂಧವ್ಯ ಈ ವ್ಯವಸ್ಥೆಯ ಬೆನ್ನೆಲುಬು. ಮಾವುತ ಬದಲಾದರೆ ಆನೆಯ ವರ್ತನೆಯೂ ಬದಲಾಗಬಹುದು. ಅದಕ್ಕಾಗಿಯೇ ಮಾವುತನ ಮಗ ಕಾವಾಡಿಯಾಗಿ ಅದೇ ಆನೆಯೊಂದಿಗೆ ಬೆಳೆಯುವ ಪದ್ಧತಿ ಇಲ್ಲಿ ಬೆಳೆದುಬಂದಿದೆ.

ಇಂದು ಈ ಪರಂಪರೆಗೆ ವೈಜ್ಞಾನಿಕ ಆಯಾಮವೂ ಸೇರಿದೆ. ಬಲವಂತದ ವಿಧಾನಗಳ ಬದಲು ಧನಾತ್ಮಕ ಬಲವರ್ಧನೆ, ಅಂದರೆ ಸರಿಯಾದ ವರ್ತನೆಗೆ ಬಹುಮಾನ ನೀಡುವ ರೀತಿ ಹೆಚ್ಚು ಬಳಕೆಯಾಗುತ್ತಿದೆ. ನಿಯಮಿತ ಆರೋಗ್ಯ ತಪಾಸಣೆ, ಸಮತೋಲಿತ ಆಹಾರ, ಪಾದಗಳ ಆರೈಕೆ, ಕ್ಷಯರೋಗ ಮತ್ತು ಇತರ ರೋಗಗಳ ಪರೀಕ್ಷೆ, ಪರಾವಲಂಬಿ ನಿಯಂತ್ರಣ ಹಾಗೂ ಪಶುವೈದ್ಯರ ನಿರಂತರ ಮೇಲ್ವಿಚಾರಣೆ ಶಿಬಿರಗಳ ಭಾಗವಾಗಿವೆ. ಮರಿಯಾನೆಗಳನ್ನು ಕಾಡುವ ಎಲಿಫೆಂಟ್ ಎಂಡೋಥೀಲಿಯೋಟ್ರಾಪಿಕ್ ಹರ್ಪಿಸ್ ವೈರಸ್ ಕುರಿತ ಜಾಗೃತಿ ಮತ್ತು ಸಂಶೋಧನೆಯೂ ಮುಖ್ಯವಾಗಿದೆ. ಸಾಕಾನೆಗಳ ಕಲ್ಯಾಣವೇ ಅವುಗಳ ಕಾರ್ಯಕ್ಷಮತೆಯ ತಳಹದಿ ಎಂಬುದನ್ನು ಅನುಭವ ತೋರಿಸಿದೆ. ಆರೋಗ್ಯವಿಲ್ಲದ, ಒತ್ತಡದಲ್ಲಿರುವ ಆನೆ ಸಂಘರ್ಷದ ಕೆಲಸಕ್ಕೆ ಯೋಗ್ಯವಲ್ಲ.

ಕಾನೂನು ಮತ್ತು ಜವಾಬ್ದಾರಿ

ಆನೆಗಳು ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972ರ ಅನುಸೂಚಿ-1ರಲ್ಲಿ ರಕ್ಷಿತ ಜೀವಿಗಳು. ಆದ್ದರಿಂದ ಅವುಗಳ ವರ್ಗಾವಣೆ ಸಂಬಂಧಿತ ಅಧಿಕಾರಿಗಳ ಅನುಮತಿ, ಆರೋಗ್ಯ ಪ್ರಮಾಣಪತ್ರ ಮತ್ತು ಸ್ವೀಕರಿಸುವ ರಾಜ್ಯದ ಸೂಕ್ತ ವ್ಯವಸ್ಥೆಯ ಭರವಸೆಯೊಂದಿಗೆ ಮಾತ್ರ ನಡೆಯಬೇಕು. ಆನೆ ಕೇವಲ ಒಂದು ಸಂಪನ್ಮೂಲವಲ್ಲ, ಸಂವೇದನಾಶೀಲ ಜೀವಿ ಎಂಬ ಅರಿವು ಇದಕ್ಕೆ ಆಧಾರವಾಗಬೇಕು.

ಆನೆಯೊಂದಿಗೆ ತರಬೇತಿ ಪಡೆದ ಮಾವುತ ಮತ್ತು ಕಾವಾಡಿಗಳೂ ಹೋಗುವುದು ಅಗತ್ಯ. ಏಕೆಂದರೆ ಅವರಿಲ್ಲದೆ ಆನೆ ಹೊಸ ಪರಿಸರದಲ್ಲಿ ಹೊಂದಿಕೊಳ್ಳುವುದು ಕಷ್ಟ. ಹೊಸ ಭಾಷೆ, ಹೊಸ ಹವಾಮಾನ, ಹೊಸ ಆಹಾರಕ್ಕೆ ಒಗ್ಗಿಕೊಳ್ಳಲು ಪರಿಚಿತ ಮಾವುತನ ಸಾನ್ನಿಧ್ಯವೇ ಆನೆಗೆ ಭರವಸೆ. ಸ್ವೀಕರಿಸುವ ರಾಜ್ಯಗಳು ಮಾವುತರಿಗೆ ವಸತಿ, ನ್ಯಾಯಯುತ ವೇತನ ಮತ್ತು ಗೌರವ ಒದಗಿಸುವುದನ್ನೂ ಖಚಿತಪಡಿಸಬೇಕು.

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ


ಕರುನಾಡೋತ್ಸವ: ಕರ್ನಾಟಕದ ಆನೆಗಳಿಗೆ ಹೆಚ್ಚು ಬೇಡಿಕೆ: ಸೆರೆ, ಪಳಗಿಸುವ ಕಲೆ ಹಿರಿಮೆ

ಒಂದು ಸಾಲಿನಲ್ಲಿಕರ್ನಾಟಕದ ಆನೆಗಳನ್ನು ಪಳಗಿಸುವ ವಿಶಿಷ್ಟ ಕಲೆ ಮತ್ತು ಅವುಗಳ ಸಂರಕ್ಷಣಾ ಅನುಭವವು ಇಂದು ದೇಶಾದ್ಯಂತ ಮಾನವ-ಆನೆ ಸಂಘರ್ಷ ತಗ್ಗಿಸಲು ಮಾದರಿಯಾಗಿದೆ.

ಏನು? ಏಕೆ? ಹೇಗೆ?


ಕರ್ನಾಟಕದ ಆನೆಗಳಿಗೆ ಹೊರರಾಜ್ಯಗಳಲ್ಲಿ ಏಕೆ ಬೇಡಿಕೆ ಇದೆ?

ಮಾನವ-ಆನೆ ಸಂಘರ್ಷವನ್ನು ನಿಯಂತ್ರಿಸಲು ಮತ್ತು ಕಾಡಾನೆಗಳನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಮರಳಿ ಕಳುಹಿಸಲು ತರಬೇತಿ ಪಡೆದ ಕುಮ್ಕಿ ಆನೆಗಳು ಮತ್ತು ನುರಿತ ಮಾವುತರ ಅಗತ್ಯವಿರುವುದರಿಂದ ಬೇಡಿಕೆ ಇದೆ.


ಆನೆಗಳನ್ನು ಪಳಗಿಸುವ ಸಂಪ್ರದಾಯ ಹೇಗಿದೆ?

ಇದು ಬಲಪ್ರಯೋಗವಲ್ಲ, ಬದಲಾಗಿ ಜೇನುಕುರುಬ, ಸೋಲಿಗ ಮತ್ತು ಯರವ ಸಮುದಾಯಗಳ ಸಾಂಪ್ರದಾಯಿಕ ಜ್ಞಾನದೊಂದಿಗೆ ಆನೆಯ ಮನಸ್ಥಿತಿ ಅರಿತು ಸಂಬಂಧ ಬೆಳೆಸುವ ಒಂದು ಕಲೆಯಾಗಿದೆ.


ಕುಮ್ಕಿ ಆನೆಗಳ ಪಾತ್ರವೇನು?

ಇವು ಹೊಲಗಳಿಗೆ ನುಗ್ಗುವ ಕಾಡಾನೆಗಳನ್ನು ನಿಯಂತ್ರಿಸಲು, ಸಂಘರ್ಷದ ಸ್ಥಳದಲ್ಲಿ ಗಸ್ತು ತಿರುಗಲು, ರೇಡಿಯೋ ಕಾಲರ್ ಅಳವಡಿಸಲು ಮತ್ತು ಗಾಯಗೊಂಡ ಆನೆಗಳಿಗೆ ಚಿಕಿತ್ಸೆ ನೀಡಲು ನೆರವಾಗುತ್ತವೆ.


ಆನೆಗಳ ನಿರ್ವಹಣೆಯಲ್ಲಿ ಈಗಿನ ಬದಲಾವಣೆಗಳೇನು?

ಹಿಂದಿನ ಖೆಡ್ಡಾ ಪದ್ಧತಿ ಸ್ಥಗಿತಗೊಂಡಿದ್ದು, ಈಗ ಧನಾತ್ಮಕ ಬಲವರ್ಧನೆ (ಪಾಸಿಟಿವ್ ರಿಇನ್ಫೋರ್ಸ್‌ಮೆಂಟ್), ನಿಯಮಿತ ಆರೋಗ್ಯ ತಪಾಸಣೆ ಮತ್ತು ವೈಜ್ಞಾನಿಕ ಆರೈಕೆಗೆ ಆದ್ಯತೆ ನೀಡಲಾಗುತ್ತಿದೆ.


ಆನೆಗಳ ಸಂರಕ್ಷಣೆಗೆ ಮುಂದಿನ ಹಾದಿ ಏನು?

ಮಾವುತ ಮತ್ತು ಕಾವಾಡಿಗರ ಜೀವನ ಭದ್ರತೆ, ಹಿರಿಯರ ಜ್ಞಾನವನ್ನು ದಾಖಲೀಕರಿಸುವುದು ಮತ್ತು ಇತರ ರಾಜ್ಯಗಳ ಸಿಬ್ಬಂದಿಗೆ ತರಬೇತಿ ನೀಡುವುದರ ಮೂಲಕ ಈ ಪರಂಪರೆಯನ್ನು ಮುಂದುವರಿಸಬೇಕು.

ಪ್ರಮುಖ ಅಂಕಿಅಂಶಗಳು

6 ಸಾವಿರಕ್ಕೂ ಹೆಚ್ಚುಕರ್ನಾಟಕದ ಕಾಡುಗಳಲ್ಲಿರುವ ಅಂದಾಜು ಆನೆಗಳ ಸಂಖ್ಯೆ1972ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಯಾದ ವರ್ಷ

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಮುಂದಿನ ಹಾದಿ ಹೇಗಿರಬೇಕು

ಕರ್ನಾಟಕದ ಈ ಹೆಗ್ಗಳಿಕೆ ಕೇವಲ ಹೆಮ್ಮೆಯ ವಿಷಯವಲ್ಲ, ಹೊಣೆಗಾರಿಕೆಯೂ ಹೌದು. ಮೊದಲನೆಯದಾಗಿ, ಮಾವುತ ಮತ್ತು ಕಾವಾಡಿಗರ ತರಬೇತಿ, ಆರೋಗ್ಯ ಮತ್ತು ಕಲ್ಯಾಣಕ್ಕೆ ಒತ್ತು ನೀಡಬೇಕು. ಅವರ ಮಕ್ಕಳ ಶಿಕ್ಷಣ, ಉತ್ತಮ ವಸತಿ ಮತ್ತು ಜೀವನ ಭದ್ರತೆ ಈ ಪರಂಪರೆ ಉಳಿಯಲು ಅತ್ಯಗತ್ಯ.

ಎರಡನೆಯದಾಗಿ, ಹಿರಿಯ ಮಾವುತರ ಮೌಖಿಕ ಜ್ಞಾನವನ್ನು ವೈಜ್ಞಾನಿಕವಾಗಿ ದಾಖಲಿಸಬೇಕು. ಆನೆಯ ವರ್ತನೆ, ಆಜ್ಞೆಗಳು, ಸಾಂಪ್ರದಾಯಿಕ ಚಿಕಿತ್ಸೆಗಳು ಮತ್ತು ಕಾಡಿನ ಸಸ್ಯ ಜ್ಞಾನ ಕನ್ನಡದಲ್ಲಿ ಹಾಗೂ ಇಂಗ್ಲಿಷ್‌ನಲ್ಲಿ ಕಾಗದದ ಮೇಲೆ ಮೂಡಬೇಕು. ಇಲ್ಲದಿದ್ದರೆ ಹಿರಿಯರೊಂದಿಗೆ ಈ ಜ್ಞಾನವೂ ಮರೆಯಾಗುತ್ತದೆ. ಮೂರನೆಯದಾಗಿ, ಇತರ ರಾಜ್ಯಗಳ ಸಿಬ್ಬಂದಿಗೆ ನಮ್ಮ ಶಿಬಿರಗಳಲ್ಲಿ ತರಬೇತಿ ನೀಡುವ ವ್ಯವಸ್ಥೆ ರೂಪಿಸಿದರೆ, ಆನೆಗಳ ವರ್ಗಾವಣೆಗಿಂತ ಜ್ಞಾನದ ವರ್ಗಾವಣೆಯೇ ದೀರ್ಘಕಾಲದಲ್ಲಿ ಹೆಚ್ಚು ಪರಿಣಾಮಕಾರಿಯಾಗಬಲ್ಲದು.

ಕಾಡಾನೆಗಳ ಆವಾಸ ಮತ್ತು ಕಾರಿಡಾರ್‌ಗಳ ಸಂರಕ್ಷಣೆ, ಗ್ರಾಮಸ್ಥರಿಗೆ ಬೆಳೆ ಹಾನಿ ಪರಿಹಾರ ಮತ್ತು ಮುನ್ನೆಚ್ಚರಿಕೆ ವ್ಯವಸ್ಥೆಗಳು ಇವೆಲ್ಲವೂ ಕುಮ್ಕಿ ಆನೆಗಳ ಜೊತೆ ಜೊತೆಗೆ ಸಾಗಬೇಕು. ಏಕೆಂದರೆ ಕುಮ್ಕಿ ಆನೆ ಸಂಘರ್ಷವನ್ನು ತಾತ್ಕಾಲಿಕವಾಗಿ ತಗ್ಗಿಸಬಹುದು, ಆದರೆ ಶಾಶ್ವತ ಪರಿಹಾರ ಕಾಡು ಮತ್ತು ಜನರ ನಡುವಿನ ಸಮತೋಲನದಲ್ಲಿದೆ.

ಆನೆ ಮತ್ತು ಮನುಷ್ಯ ಸಹಬಾಳ್ವೆ ನಡೆಸುವ ಕಲೆಯನ್ನು ಕನ್ನಡ ನೆಲ ಶತಮಾನಗಳಿಂದ ಕಲಿಸುತ್ತ ಬಂದಿದೆ. ಆ ಕಲೆಯನ್ನು ಕಾಪಾಡಿ, ಬೆಳೆಸಿ, ದೇಶದ ಇತರ ಭಾಗಗಳೊಂದಿಗೆ ಹಂಚಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ.

(ಲೇಖಕರು: ಉಪ ನಿರ್ದೇಶಕರು (ಪಶುಪಾಲನೆ ಮತ್ತು ಪಶುವೈದ್ಯಕೀಯ), ಬನ್ನೇರುಘಟ್ಟ ಜೈವಿಕಉದ್ಯಾನ)

ಕುಮ್ಕಿ ಆನೆಗಳ ಬಳಕೆ ಹೆಚ್ಚಾದಂತೆ ಹೊಸ ಪ್ರಶ್ನೆಗಳೂ ಎದುರಾಗುತ್ತವೆ. ಎಲ್ಲ ಆನೆಗಳೂ ಈ ಕೆಲಸಕ್ಕೆ ಹೊಂದುವುದಿಲ್ಲ. ವಯಸ್ಸು, ಸ್ವಭಾವ, ಆರೋಗ್ಯ ಮತ್ತು ಹಿಂದಿನ ತರಬೇತಿಯ ಆಧಾರದ ಮೇಲೆ ಆಯ್ಕೆ ಮಾಡಬೇಕು. ಸಂಘರ್ಷದ ಕಾರ್ಯಾಚರಣೆಗಳು ಆನೆಗೂ ಮಾವುತನಿಗೂ ಅಪಾಯಕಾರಿ. ಕಾಡಾನೆಯ ದಾಳಿಯಲ್ಲಿ ಸಾಕಾನೆ ಅಥವಾ ಮಾವುತ ಗಾಯಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಕಾರ್ಯಾಚರಣೆಗೆ ಪೂರ್ವ ಯೋಜನೆ, ಪಶುವೈದ್ಯರ ಉಪಸ್ಥಿತಿ, ವಿಶ್ರಾಂತಿ ಮತ್ತು ಸೂಕ್ತ ವಿಮಾ ಸೌಲಭ್ಯಗಳು ಅಗತ್ಯ.ಹೊಸ ಸವಾಲುಗಳುಕರುನಾಡೋತ್ಸವ ಇಂದಿನ ವಿಶೇಷ ಲೇಖನಗಳು: ಸೋಮವಾರ, 02 ನವೆಂಬರ್ 2026ಪ್ರಜಾವಾಣಿ ಕರುನಾಡೋತ್ಸವ | ಸಾಹಿತಿಗಳ ಊರು-ಮನೆಯ ಈಗಿನ ಸ್ಥಿತಿಗತಿ: ಶಿವರಾಮ ಕಾರಂತಕರುನಾಡೋತ್ಸವ | ಮೊಮ್ಮಕ್ಕಳ ಮೂಲಕ ಕನ್ನಡಾಭಿಮಾನ ಮೆರೆದ ಛಾಯಾಗ್ರಾಹಕ!ಕರುನಾಡೋತ್ಸವ | ಡಾ.ಬಿ.ಎಲ್‌.ವೇಣು ಸರ್ಕಲ್‌; ಕನ್ನಡಾಭಿಮಾನದ ತಾಣಕರುನಾಡೋತ್ಸವ 'ಪದ ಕಟ್ಟು' ಭಾಗ-2: ಇಂದಿನ ಸವಾಲುಕರುನಾಡೋತ್ಸವ: 'ನನಗೆ ಕನ್ನಡವೇ ದೇವರು' ವಾಟಾಳ್ ನಾಗರಾಜ್ ಮನದಾಳದ ಮಾತುಕರುನಾಡೋತ್ಸವ | ಪುರುಷೋತ್ತಮ ಬಿಳಿಮಲೆ ಅವರ ಬರಹ; ಇವತ್ತಿನ ಕನ್ನಡ ಜಗತ್ತು
Dailyhunt
Disclaimer: This content has not been generated, created or edited by Dailyhunt. Publisher: Prajavani