Dailyhunt Logo
  • Light mode
    Follow system
    Dark mode
    • Play Story
    • App Story
ಕಥೆ, ಹಾಡು, ಅನಿಮೇಷನ್ ಮೂಲಕ ಕನ್ನಡ ಕಲಿಕೆ: ಅಮೆರಿಕದ ದಂಪತಿ ಕಟ್ಟಿದ 'ಶಾಲೆ'

ಕಥೆ, ಹಾಡು, ಅನಿಮೇಷನ್ ಮೂಲಕ ಕನ್ನಡ ಕಲಿಕೆ: ಅಮೆರಿಕದ ದಂಪತಿ ಕಟ್ಟಿದ 'ಶಾಲೆ'

'ಮಗನಿಗೆ ಕನ್ನಡ ಕಲಿಸಬೇಕು. ಆದರೆ ಅಮೆರಿಕದಲ್ಲಿ ಹುಟ್ಟಿ ಬೆಳೆದ ಮಗುವಿಗೆ ಕನ್ನಡ ಕಲಿಸುವುದು ಹೇಗೆ?'

ಸದ್ಯ ಅಮೆರಿಕದ ಹ್ಯೂಸ್ಟನ್‌ನಲ್ಲಿ ನೆಲಸಿರುವ ಬೆಂಗಳೂರಿನ ಕುಮಾರ್ ಮತ್ತು ಲಾವಣ್ಯ ದಂಪತಿಗೆ ಹೀಗೊಂದು ಪ್ರಶ್ನೆ ಎದುರಾಗಿತ್ತು. ಕನ್ನಡ ಮಾಧ್ಯಮದಲ್ಲಿ ಓದಿ, ಕನ್ನಡದೊಂದಿಗೆ ನಂಟು ಹೊಂದಿದ್ದ ಅವರಿಗೆ, ತಮ್ಮ ಮಗನಿಗೆ ಭಾಷೆಯನ್ನು ಕಲಿಸುವುದು ನಿರೀಕ್ಷಿಸಿದಷ್ಟು ಸುಲಭವಾಗಿರಲಿಲ್ಲ.

ಹೀಗಾಗಿ ಭಾಷೆಯನ್ನು ಕಲಿಸುವ ವಿಧಾನವೇ ಬದಲಾಗಬೇಕು ಎಂಬ ಆಲೋಚನೆ ಅವರಲ್ಲಿ ಹುಟ್ಟಿತು.

'ಅಕ್ಕ' ಸಮ್ಮೇಳನದಲ್ಲಿ ಕರ್ನಾಟಕದ ಸಿರಿಪೇಟೆ: ಪರಂಪರೆ, ಉದ್ಯಮ, ಅವಕಾಶಗಳ ಸಂಗಮ

ವೃತ್ತಿಯಿಂದ ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿದ್ದ ಇಬ್ಬರಿಗೂ ಕನ್ನಡದಲ್ಲಿ ಕಿರುಚಿತ್ರಗಳನ್ನು ನಿರ್ಮಿಸಿದ್ದರು. ಅನಾಥಾಶ್ರಮದ ಮಕ್ಕಳಿಗೆ ನಾಟಕಗಳನ್ನು ಹೇಳಿಕೊಟ್ಟಿದ್ದರು. ಲಾವಣ್ಯ ಕಥೆ, ಕವನಗಳನ್ನು ಬರೆಯುತ್ತಿದ್ದರು. ಹೀಗಾಗಿ ಮಗನಿಗೆ ಕನ್ನಡ ಕಲಿಸುವ ವೈಯಕ್ತಿಕ ಸವಾಲು, ತಂತ್ರಜ್ಞಾನವನ್ನು ಬಳಸಿಕೊಂಡು ಕನ್ನಡ ಕಲಿಕೆಯ ವೇದಿಕೆಯೊಂದನ್ನು ರೂಪಿಸುವ ಆಲೋಚನೆಗೆ ದಾರಿ ಮಾಡಿಕೊಟ್ಟಿತು.

ಅದೇ ಪ್ರಯತ್ನದ ಫಲವಾಗಿ ಕನ್ನಡ ಕಲಿಸುವ ಆಯಪ್ 'ಶಾಲೆ' ಹುಟ್ಟಿಕೊಂಡಿತು.

ಅನಿಮೇಷನ್‌ಗಳ ಮೂಲಕ ಕನ್ನಡ ಕಲಿಕೆ

ಕನ್ನಡ ಕಲಿಕೆಯನ್ನು ಮಕ್ಕಳಿಗೆ ಪಾಠದಂತೆ ಮಾತ್ರ ನೀಡದೆ, ಆಟ, ಹಾಡು, ನೃತ್ಯ, ಅನಿಮೇಷನ್ ಮತ್ತು ದೃಶ್ಯಗಳ ಮೂಲಕ ಪರಿಚಯಿಸುವುದು 'ಶಾಲೆ'ಯ ವಿಧಾನ. ಕನ್ನಡ ಭಾಷೆಯ ಜತೆಗೆ ಸಂಸ್ಕೃತಿ ಮತ್ತು ಹಬ್ಬಗಳ ಮಹತ್ವವನ್ನೂ ಮಕ್ಕಳಿಗೆ ತಿಳಿಸುವ ಪ್ರಯತ್ನವೂ ಅರದಲ್ಲಿದೆ.

ಕನ್ನಡದ 49 ಅಕ್ಷರಗಳಿಗೂ ಒಂದೊಂದು ಕಥೆಯನ್ನು ರೂಪಿಸಲಾಗಿದೆ. ಕಥೆಯ ಮೂಲಕ ಅಕ್ಷರವನ್ನು ಪರಿಚಯಿಸಿ, ನಂತರ ಪಾಠ ಮತ್ತು ಪ್ರಶ್ನೆಗಳ ಮೂಲಕ ಮಕ್ಕಳನ್ನು ಮುಂದಿನ ಹಂತಕ್ಕೆ ಕರೆದೊಯ್ಯಲಾಗುತ್ತದೆ. ಅಮೆರಿಕನ್ ರ‍್ಯಾಪ್, ಹಿಪ್‌ಹಾಪ್ ಸೇರಿದಂತೆ ವಿಭಿನ್ನ ಸಂಗೀತ ಶೈಲಿಗಳನ್ನು ಬಳಸಿಕೊಂಡು ಕನ್ನಡದ ಹಾಡುಗಳನ್ನು ಅನಿಮೇಷನ್ ರೂಪದಲ್ಲಿ ನೀಡಲಾಗಿದೆ.

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ


ಕಥೆ, ಹಾಡು, ಅನಿಮೇಷನ್ ಮೂಲಕ ಕನ್ನಡ ಕಲಿಕೆ: ಅಮೆರಿಕದ ದಂಪತಿ ಕಟ್ಟಿದ 'ಶಾಲೆ'

ಒಂದು ಸಾಲಿನಲ್ಲಿಅಮೆರಿಕದ ಅನಿವಾಸಿ ದಂಪತಿ ತಮ್ಮ ಮಗನಿಗೆ ಕನ್ನಡ ಕಲಿಸಲು ಆಟ, ಹಾಡು ಮತ್ತು ಅನಿಮೇಷನ್ ಮೂಲಕ ರೂಪಿಸಿದ 'ಶಾಲೆ' ಆಯಪ್ ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗಿದೆ.

ಪ್ರಮುಖ ಪ್ರಶ್ನೋತ್ತರ


'ಶಾಲೆ' ಆಯಪ್ ಆರಂಭಕ್ಕೆ ಕಾರಣವೇನು?

ಅಮೆರಿಕದಲ್ಲಿ ಬೆಳೆಯುತ್ತಿರುವ ತಮ್ಮ ಮಗನಿಗೆ ಕನ್ನಡ ಭಾಷೆಯನ್ನು ಆಸಕ್ತಿದಾಯಕವಾಗಿ ಕಲಿಸಲು ಬೆಂಗಳೂರಿನ ಕುಮಾರ್ ಮತ್ತು ಲಾವಣ್ಯ ದಂಪತಿ ಈ ಡಿಜಿಟಲ್ ವೇದಿಕೆಯನ್ನು ರೂಪಿಸಿದರು.


ಕನ್ನಡ ಕಲಿಕೆಯ ವಿಧಾನ ಹೇಗಿದೆ?

ಮಕ್ಕಳಿಗೆ ಪಾಠದ ಹೊರತಾಗಿ ಆಟ, ಹಾಡು, ನೃತ್ಯ, ಅನಿಮೇಷನ್ ಮತ್ತು ಕಥೆಗಳ ಮೂಲಕ ಕನ್ನಡ ಅಕ್ಷರಮಾಲೆ, ಕಾಗುಣಿತ ಹಾಗೂ ಸಂಸ್ಕೃತಿಯನ್ನು ಪರಿಚಯಿಸಲಾಗುತ್ತದೆ.


'ಓ ಬ ಮಾ' ವಿಧಾನದ ವಿಶೇಷತೆಯೇನು?

ಓದುವುದು, ಬರೆಯುವುದು ಮತ್ತು ಮಾತನಾಡುವುದು - ಈ ಮೂರನ್ನೂ ಒಟ್ಟಿಗೆ ಬೆಳೆಸುವ ಮೂಲಕ ಮಕ್ಕಳು ಕನ್ನಡದಲ್ಲೇ ಯೋಚಿಸಿ ಬರೆಯುವ ಸಾಮರ್ಥ್ಯ ಗಳಿಸುವುದೇ ಈ ವಿಧಾನದ ಮುಖ್ಯ ಉದ್ದೇಶ.


ಈ ಆಯಪ್‌ನ ವ್ಯಾಪ್ತಿ ಎಷ್ಟಿದೆ?

ಪ್ರಸ್ತುತ ಅಮೆರಿಕ, ಸ್ವೀಡನ್, ಜರ್ಮನಿ, ಕೆನಡಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಪ್ರಪಂಚದಾದ್ಯಂತ 2 ಸಾವಿರಕ್ಕೂ ಹೆಚ್ಚು ಬಳಕೆದಾರರು ಈ ಆಯಪ್ ಬಳಸುತ್ತಿದ್ದಾರೆ.


ಮುಂದಿನ ಯೋಜನೆಗಳೇನು?

ದಂಪತಿ ಈಗ ಕನ್ನಡಕ್ಕಾಗಿ ವಿಶೇಷವಾಗಿ 'ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್' (LLM) ಅಭಿವೃದ್ಧಿಪಡಿಸುವ ಹಾಗೂ ಹೊಸ ಪಠ್ಯಪುಸ್ತಕಗಳನ್ನು ಸಿದ್ಧಪಡಿಸುವ ಸಂಶೋಧನೆಯಲ್ಲಿ ತೊಡಗಿದ್ದಾರೆ.

ಪ್ರಮುಖ ಅಂಕಿಅಂಶಗಳು

49ಕನ್ನಡ ಅಕ್ಷರಮಾಲೆಯ ಸಂಖ್ಯೆ20ಆಯಪ್‌ನಲ್ಲಿರುವ ಕಲಿಕಾ ವಿಭಾಗಗಳು2000ಪ್ರಪಂಚದಾದ್ಯಂತ ಇರುವ ಬಳಕೆದಾರರು

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

'ಒಬಾಮಾ' ಮಾದರಿ!

ಆದರೆ 'ಶಾಲೆ'ಯ ಕಲಿಕೆಯ ಉದ್ದೇಶ ಕೇವಲ ಮಕ್ಕಳಿಗೆ ಅಕ್ಷರ ಪರಿಚಯಿಸುವುದಲ್ಲ. ಓದುವುದು, ಬರೆಯುವುದು ಮತ್ತು ಮಾತನಾಡುವುದು-ಈ ಮೂರನ್ನೂ ಒಟ್ಟಿಗೆ ಬೆಳೆಸುವುದು ಇದರ ಪ್ರಮುಖ ವಿಧಾನ. ಇದಕ್ಕೆ 'ಓ ಬ ಮಾ' ಎಂದು ಹೆಸರಿಟ್ಟಿದ್ದಾರೆ.

'ಮಕ್ಕಳು ಕನ್ನಡವನ್ನು ಓದಿ ಅರ್ಥಮಾಡಿಕೊಳ್ಳುವುದರ ಜತೆಗೆ, ಕನ್ನಡದಲ್ಲೇ ಯೋಚಿಸಿ ತಮ್ಮ ಅನಿಸಿಕೆಗಳನ್ನು ಬರೆಯುವ ಹಂತಕ್ಕೆ ಬರಬೇಕು ಎಂಬುದು ಈ ವಿಧಾನದ ಹಿಂದಿರುವ ಉದ್ದೇಶ. ಭಾಷೆಯ ಮೇಲಿನ ಹಿಡಿತ ಕೇವಲ ಪಾಠ ನೆನಪಿಟ್ಟುಕೊಳ್ಳುವುದರಿಂದ ಬರುವುದಿಲ್ಲ; ಅದನ್ನು ಬಳಸುವ ಮೂಲಕ ಬೆಳೆಯುತ್ತದೆ' ಎನ್ನುತ್ತಾರೆ ದಂಪತಿ.

ಆಯಪ್‌ನಲ್ಲಿ ಅಕ್ಷರಮಾಲೆ, ಕಾಗುಣಿತ, ವ್ಯಾಕರಣ, ಕನ್ನಡ ಪದ್ಯಗಳು ಮತ್ತು ಕಥೆಗಳು ಸೇರಿ 20 ವಿಭಾಗಗಳಿವೆ. ಮಕ್ಕಳಿಗಾಗಿ ವಿವಿಧ ಆಟಗಳು ಮತ್ತು ಸಾವಿರಾರು ಚಟುವಟಿಕೆಗಳನ್ನು ರೂಪಿಸಲಾಗಿದೆ.

ವಿಶ್ಲೇಷಣೆ | ಇ20 ಪೆಟ್ರೋಲ್: ಭಾರತದ ಹಸಿರು ಗುರಿ ಮತ್ತು ಗ್ರಾಹಕರ ಆತಂಕದ ನಡುವೆ…

ಪ್ರಪಂಚದಾದ್ಯಂತ ಬಳಕೆದಾರರು

ಮಗನಿಗೆ ಕನ್ನಡ ಕಲಿಸುವ ಸಲುವಾಗಿ ಆರಂಭವಾದ ಈ ವೇದಿಕೆ ಈಗ ಮನೆಯೊಳಗಿನ ಪ್ರಯೋಗವಾಗಿ ಉಳಿದಿಲ್ಲ. ಪ್ರಪಂಚದಾದ್ಯಂತ 2 ಸಾವಿರಕ್ಕೂ ಹೆಚ್ಚು ಜನರು ಇದನ್ನು ಬಳಸುತ್ತಿದ್ದಾರೆ. ಅಮೆರಿಕ, ಸ್ವೀಡನ್, ಜರ್ಮನಿ, ಕೆನಡಾ, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಲ್ಲಿ 'ಶಾಲೆ' ಬಳಕೆಯಲ್ಲಿದೆ. ವೆಬ್‌ಸೈಟ್, ಆಂಡ್ರಾಯ್ಡ್ ಆಪ್ ಮತ್ತು ಐಫೋನ್ ಆಪ್ ಮೂಲಕವೂ ಇದು ಲಭ್ಯವಿದೆ.

ಕನ್ನಡ ಕಲಿಕೆಯನ್ನು ಡಿಜಿಟಲ್ ರೂಪಕ್ಕೆ ತರುವ ಈ ಪ್ರಯತ್ನಕ್ಕೆ ವಿವಿಧ ವೇದಿಕೆಗಳಲ್ಲೂ ಗಮನ ಸಿಕ್ಕಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಳೆ ಮತ್ತು ತಂಡಕ್ಕೆ 'ಶಾಲೆ'ಯನ್ನು ಪರಿಚಯಿಸಲಾಗಿದ್ದು, ಕನ್ನಡಕ್ಕಾಗಿ ನಡೆಯುತ್ತಿರುವ ಈ ಕೆಲಸಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಮೆರಿಕದ 'ಅಕ್ಕ', 'ನಾವಿಕ' ಮತ್ತು ಕನ್ನಡ ಸಾಹಿತ್ಯರಂಗ ಸೇರಿದಂತೆ ಹಲವು ವೇದಿಕೆಗಳಲ್ಲಿ 'ಶಾಲೆ'ಯನ್ನು ಗುರುತಿಸಿ ಪ್ರಶಂಸಿಸಲಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ 'ಶಾಲೆ'ಯ ಹಾಡುಗಳನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.

'ಕನ್ನಡದ ಪುರಾತನ ಪಠ್ಯಪುಸ್ತಕಗಳನ್ನು ಅಧ್ಯಯನ ಮಾಡಿ, ಇಂದಿನ ಮಕ್ಕಳಿಗೆ ಸರಳವಾಗಿ ಕನ್ನಡ ಕಲಿಸುವ ರೀತಿಯಲ್ಲಿ ಹೊಸ ಪುಸ್ತಕವೊಂದನ್ನು ಸಿದ್ಧಪಡಿಸುವ ಕೆಲಸ ನಡೆಯುತ್ತಿದೆ' ಎಂದರು ಲಾವಣ್ಯ.

ಹ್ಯಾರಿ-ಮೇಘನ್‌ ಮತ್ತೆ ಬ್ರಿಟನ್‌ಗೆ: ಹಳೆಯ ಬಿರುಕುಗಳ ನಡುವೆ ಹೊಸ ಅಧ್ಯಾಯವೇ?

ಭಾಷಾ ಮಾದರಿಗೆ ಸಂಶೋಧನೆ

ಇದರ ಜತೆಗೆ ಕೃತಕ ಬುದ್ಧಿಮತ್ತೆಯಲ್ಲೂ ಕನ್ನಡಕ್ಕೆ ಸಂಬಂಧಿಸಿದ ಕೆಲಸ ಮಾಡುವ ಉದ್ದೇಶ ಸಂಸ್ಥೆಗಿದೆ. 'ಈಗ ಎಐ ವ್ಯವಸ್ಥೆಗೆ ಕನ್ನಡದ ಕೆಲವು ಅಕ್ಷರಗಳ ಪರಿಚಯದ ಕೊರತೆ ಇದೆ, ಕೆಲವೊಮ್ಮೆ ತಪ್ಪಾದ ಉತ್ತರಗಳೂ ಬರುತ್ತವೆ. ಹೀಗಾಗಿ ಕನ್ನಡದ ಲಾರ್ಜ್ ಭಾಷಾ ಮಾದರಿ ಮಾಡೆಲ್ ಅಭಿವೃದ್ಧಿಪಡಿಸುವ ಕುರಿತು ಸಂಶೋಧನೆ ನಡೆಸುವ ಯೋಜನೆಯೂ' ಇದೆ ಎಂದರು ದಂಪತಿ.

ಮಗನಿಗೆ ಕನ್ನಡ ಕಲಿಸಬೇಕು ಎಂಬ ಒಂದು ಮನೆಯ ಸಣ್ಣ ಪ್ರಯತ್ನದಿಂದ ಆರಂಭವಾದ ಪಯಣ ಈಗ ಹಲವು ದೇಶಗಳ ಕನ್ನಡ ಕಲಿಯುವವರನ್ನು ತಲುಪಿದೆ. ಭಾಷೆಯನ್ನು ಮಕ್ಕಳಿಗೆ ಸುಲಭವಾಗಿ, ಆಸಕ್ತಿಯಿಂದ ಕಲಿಸುವ ಹುಡುಕಾಟ ಮುಂದುವರಿದಿದೆ. ನೀವೂ ಒಮ್ಮೆ 'ಶಾಲೆ'ಗೆ ಭೇಟಿ ನೀಡಿ. www.shaale.ai

ಗಯಾನಾದಲ್ಲಿ ಕನ್ನಡಿಗನ ಕೃಷಿ ಸಾಧನೆ: ನಿಪ್ಪಾಣಿಯ ಅಭಿಲಾಷ್ ಯಶೋಗಾಥೆ
Dailyhunt
Disclaimer: This content has not been generated, created or edited by Dailyhunt. Publisher: Prajavani