Dailyhunt Logo
  • Light mode
    Follow system
    Dark mode
    • Play Story
    • App Story
ಖಮೇನಿ ಅಂತಿಮ ದರ್ಶನಕ್ಕೆ ಜನಪ್ರವಾಹ: ಟೆಹರಾನ್‌ನಲ್ಲಿ ಬಿಗಿ ಭದ್ರತೆ

ಖಮೇನಿ ಅಂತಿಮ ದರ್ಶನಕ್ಕೆ ಜನಪ್ರವಾಹ: ಟೆಹರಾನ್‌ನಲ್ಲಿ ಬಿಗಿ ಭದ್ರತೆ

ಟೆಹರಾನ್: ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ಅಂತಿಮ ವಿಧಿ ವಿಧಾನಗಳು ನಡೆಯುತ್ತಿದ್ದು, ರಾಜಧಾನಿ ಟೆಹರಾನ್‌ನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಖಮೇನಿ ಅಂತ್ಯಕ್ರಿಯೆ: ಪ್ರಧಾನಿ ಮೋದಿ ನೇತೃತ್ವದ ನಿಯೋಗ ಭಾಗವಹಿಸದಿರಲು ಕಾರಣವೇನು?

ಗ್ರ್ಯಾಂಡ್ ಮೊಸಲ್ಲಾ ಸಂಕೀರ್ಣದ ಸುತ್ತ ಭಾರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ.

ಇಡೀ ಪ್ರದೇಶವು ಭದ್ರತಾ ಶಿಬಿರದಂತೆ ಗೋಚರವಾಗುತ್ತಿದೆ. ಅಂತಿಮ ದರ್ಶನಕ್ಕಾಗಿ ಸಾವಿರಾರು ಮಂದಿ ಹಲವು ಗಂಟೆಗಳ ಮೊದಲೇ ಸ್ಥಳಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತಿದ್ದರು.

ಖಮೇನಿ ಅವರ ಪಾರ್ಥಿವ ಶರೀರವನ್ನು ಸೋಮವಾರದವರೆಗೆ ಗ್ರ್ಯಾಂಡ್ ಮೊಸಲ್ಲಾ ಸಂಕೀರ್ಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗುತ್ತದೆ. ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿದ್ದು, ಕೆಲವರು ಶುಕ್ರವಾರ ಬೆಳಿಗ್ಗಿನಿಂದಲೇ ಬಂದಿದ್ದರು.

'ಇಂದು ರಾತ್ರಿಯೇ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸುವುದಾಗಿ ನಮಗೆ ತಿಳಿಸಲಾಗಿತ್ತು. ನಮ್ಮ ನಾಯಕರಿಗೆ ಅಂತಿಮ ವಿದಾಯ ಹೇಳಲು ಬಂದಿದ್ದೇವೆ. ಅದಕ್ಕಾಗಿ ಇಷ್ಟು ಹೊತ್ತು ಕಾಯುವುದು ನಮಗೆ ಕಷ್ಟವಾಗುತ್ತಿಲ್ಲ' ಎಂದು 44 ವರ್ಷದ ಶಿಕ್ಷಕಿ ಸೋಮಯ್ಯೆ ಹಮೇದಿ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಖಮೇನಿ ಪಾರ್ಥಿವ ಶರೀರ 125 ದಿನ ಕಾಪಿಟ್ಟ ಇರಾನ್‌ಗೆ ಅಂತ್ಯಕ್ರಿಯೆ ಹೊತ್ತಲ್ಲಿ ಆತಂಕ

ಸ್ಥಳದ ಸಮೀಪ ಸಾವಿರಾರು ಜನ ಸೇರಿದ್ದರು. ಕೆಲವರು ಕಣ್ಣೀರಿಡುತ್ತಿದ್ದರೆ, ಇನ್ನು ಕೆಲವರು ಪಾದಚಾರಿ ಮಾರ್ಗದಲ್ಲೇ ಕುಳಿತು ಶಾಂತವಾಗಿ ತಮ್ಮ ಸರದಿಗಾಗಿ ಕಾಯುತ್ತಿದ್ದರು. ಈ ವೇಳೆ ಧಾರ್ಮಿಕ ಕವನಗಳು, ಶೋಕಗೀತೆಗಳು ಮತ್ತು ಧಾರ್ಮಿಕ ಪಠಣಗಳನ್ನು ಧ್ವನಿವರ್ಧಕಗಳ ಮೂಲಕ ಪ್ರಸಾರ ಮಾಡಲಾಗುತ್ತಿತ್ತು.

'10- 12 ಗಂಟೆ ಕಾಯುವುದು ದೊಡ್ಡ ವಿಷಯವಲ್ಲ. ಖಮೇನಿ ಅವರ ನಿಧನ ಇರಾನ್‌ನ ಸಮಕಾಲೀನ ಇತಿಹಾಸದ ಮಹಾನ್ ವ್ಯಕ್ತಿಯೊಬ್ಬರನ್ನು ಕಳೆದುಕೊಂಡಂತಾಗಿದೆ' ಎಂದು 21 ವರ್ಷದ ವಿದ್ಯಾರ್ಥಿ ಮಹದಿ ಶೋಕ್ರಿ ಹೇಳಿದರು.

ಮೊಸಲ್ಲಾ ಸಂಕೀರ್ಣದ ಗೋಡೆಗಳ ಮೇಲೆ ಖಮೇನಿ ಅವರ ಬೃಹತ್ ಭಾವಚಿತ್ರಗಳನ್ನು ಅಳವಡಿಸಲಾಗಿದ್ದು, ಶೋಕದ ಸಂಕೇತವಾಗಿ ಕಪ್ಪು ಧ್ವಜಗಳು ಹಾಗೂ ಹುತಾತ್ಮತ್ವ ಮತ್ತು ಪ್ರತೀಕಾರದ ಸಂಕೇತವಾದ ಕೆಂಪು ಧ್ವಜಗಳನ್ನು ಹಾರಿಸಲಾಗಿದೆ.

ಖಮೇನಿ ಅಂತ್ಯಕ್ರಿಯೆ: ಭಾರತೀಯ ಧಾರ್ಮಿಕ ಮುಖಂಡರಿಂದ ಅಂತಿಮ ನಮನ

ಇಡೀ ಪ್ರದೇಶದಲ್ಲಿ ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಅಂತಿಮ ದರ್ಶನದ ಸ್ಥಳದ ಸಮೀಪ ಹೋಗುವ ಪ್ರತಿಯೊಬ್ಬರಿಗೂ ಕಟ್ಟುನಿಟ್ಟಿನ ಭದ್ರತಾ ತಪಾಸಣೆ ಕಡ್ಡಾಯಗೊಳಿಸಲಾಗಿದೆ. ಸ್ಥಳದ ಸುತ್ತ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಹನಗಳ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿದೆ. ನಿಗದಿತ ಸಮಯಕ್ಕಿಂತ ಹಲವು ಗಂಟೆಗಳ ಮೊದಲೇ ಸುತ್ತಮುತ್ತಲಿನ ರಸ್ತೆಗಳನ್ನು ಬಂದ್ ಮಾಡಲಾಗಿದ್ದು, ಇದರಿಂದ ಕೆಲ ವಾಹನ ಸವಾರರು ತೊಂದರೆ ಅನುಭವಿಸಿದರು.

'ಖಮೇನಿ ಅವರಿಗಾಗಿ ನಾವು ಮಾಡಬಹುದಾದ ಕೊನೆಯ ಕೆಲಸ ಇಲ್ಲಿಗೆ ಬಂದು ಸೇವೆ ಸಲ್ಲಿಸುವುದಷ್ಟೇ. ಅವರು ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಬಿಸಿಲಿನಿಂದ ಯಾರಿಗಾದರೂ ತೊಂದರೆ ಆದರೆ ಅವರಿಗೆ ನೀರು ಮತ್ತು ಆಹಾರ ನೀಡಿ ಸಹಾಯ ಮಾಡುತ್ತೇವೆ' ಎಂದು ಸ್ವಯಂ ಸೇವಕರಾಗಿರು ಉತ್ತರ ಇರಾನ್‌ನಿಂದ ಬಂದಿದ್ದ 25 ವರ್ಷದ ವಿದ್ಯಾರ್ಥಿನಿ ಫಾತಿಮೆ ನೌದೆಹಿ ಹೇಳಿದರು.

ಆಯತೊಲ್ಲಾ ಖಮೇನಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿರುವ ಜಾಗತಿಕ ನಾಯಕರಿವರು...

ಶನಿವಾರ ಟೆಹರಾನ್‌ನಲ್ಲಿ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಬಿಸಿಲಿನಿಂದ ರಕ್ಷಣೆ ಪಡೆಯುವುದು ಹಾಗೂ ಜನದಟ್ಟಣೆಯಲ್ಲಿ ಕಾಲ್ತುಳಿತವಾಗದಂತೆ ಎಚ್ಚರಿಕೆ ವಹಿಸುವ ಕುರಿತು ಸರ್ಕಾರಿ ಮಾಧ್ಯಮದಲ್ಲಿ ಸಾರ್ವಜನಿಕರಿಗೆ ನಿರಂತರವಾಗಿ ಸೂಚನೆಗಳನ್ನು ನೀಡುತ್ತಿದೆ.

2020ರಲ್ಲಿ ಜನರಲ್ ಖಾಸಿಂ ಸುಲೈಮಾನಿ ಅವರ ಅಂತ್ಯಕ್ರಿಯೆ ವೇಳೆ ಸಂಭವಿಸಿದ್ದ ಕಾಲ್ತುಳಿತದಲ್ಲಿ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಇದೇ ರೀತಿಯ ಜನಸಂದಣಿ ಈ ಬಾರಿಯೂ ನಿರೀಕ್ಷಿಸಲಾಗಿರುವುದರಿಂದ ವಿಶೇಷ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸೋಮವಾರ ಖಮೇನಿ ಅವರ ಪಾರ್ಥಿವ ಶರೀರವನ್ನು ಟೆಹರಾನ್‌ನ ಪ್ರಮುಖ ರಸ್ತೆಗಳಲ್ಲಿ ಅಂತಿಮ ಮೆರವಣಿಗೆ ಮೂಲಕ ಕೊಂಡೊಯ್ಯಲಾಗುವುದು. ಬಳಿಕ ಮಂಗಳವಾರ ಪವಿತ್ರ ನಗರ ಕೋಮ್‌ಗೆ ಕೊಂಡೊಯ್ದು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ.

ಈ ಮೆರವಣಿಗೆಗೆ ಸಿದ್ಧತೆಯಾಗಿ ಗ್ರ್ಯಾಂಡ್ ಮೊಸಲ್ಲಾ ಸಂಕೀರ್ಣದಿಂದ ಅಜಾದಿ ಚೌಕದವರೆಗೆ ಸಾಗುವ ಮಾರ್ಗದುದ್ದಕ್ಕೂ ಜನರಿಗೆ ಬಿಸಿಲಿನಿಂದ ರಕ್ಷಣೆ ನೀಡಲು ನೀರಿನ ಟ್ಯಾಂಕರ್‌ಗಳನ್ನು ಈಗಾಗಲೇ ನಿಯೋಜಿಸಲಾಗಿದೆ.

ವರದಿ: ಎಎಫ್‌ಪಿ

Dailyhunt
Disclaimer: This content has not been generated, created or edited by Dailyhunt. Publisher: Prajavani