ಪಶ್ಚಿಮ ಏಷ್ಯಾ ಸಂಘರ್ಷ ಹಾಗೂ ಇನ್ನಿತರ ಕಾರಣಗಳಿಂದಾಗಿ ರೂಪಾಯಿ ಮೇಲೆ ಒತ್ತಡ ಹೆಚ್ಚುತ್ತಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿದಿದೆ. ಹೀಗಾಗಿ ವಿದೇಶಿ ಕರೆನ್ಸಿಗಳ ಹರಿವು ಹೆಚ್ಚಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ.
ಆ ಪೈಕಿ ವಿದೇಶಿ ಕರೆನ್ಸಿ ಅನಿವಾಸಿ (ಬ್ಯಾಂಕ್) ಠೇವಣಿ (Foreign Currency Non-Resident Bank) ಠೇವಣಿಗಳ ಮೇಲಿನ ಸಂಪೂರ್ಣ ಹೆಡ್ಜಿಂಗ್ ವೆಚ್ಚವನ್ನು ತಾನೇ ಭರಿಸುವುದಾಗಿ ಹೇಳಿದೆ. ಭಾರತದ ಬ್ಯಾಂಕಿಂಗ್ ವ್ಯವಸ್ಥೆಗೆ ಹೆಚ್ಚಿನ ವಿದೇಶಿ ಕರೆನ್ಸಿ ನಿಧಿಗಳನ್ನು ಆಕರ್ಷಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಂಡಿದೆ.
ಎಫ್‌ಸಿಎನ್‌ಆರ್ (ಬಿ) ಠೇವಣಿ ಎಂದರೇನು?
ಎಫ್‌ಸಿಎನ್‌ಆರ್ (ಬಿ) ಠೇವಣಿ ಎಂದರೆ ಅನಿವಾಸಿ ಭಾರತೀಯರು (ಎನ್‌ಆರ್‌ಐ) ಭಾರತೀಯ ಬ್ಯಾಂಕ್‌ಗಳಲ್ಲಿ ವಿದೇಶಿ ಕರೆನ್ಸಿಯಲ್ಲೇ ಇಡುವ ನಿಶ್ಚಿತ ಠೇವಣಿ. ಎನ್‌ಆರ್‌ಇ ಮತ್ತು ಎನ್‌ಆರ್‌ಒ ಖಾತೆಗಳಲ್ಲಿ ಈ ಹಣ ರೂಪಾಯಿಯಲ್ಲಿ ನಿರ್ವಹಿಸಲ್ಪಡುತ್ತದೆ. ಆದರೆ ಎಫ್‌ಸಿಎನ್‌ಆರ್ (ಬಿ) ಠೇವಣಿಯಲ್ಲಿ ಹಣ ಡಾಲರ್, ಪೌಂಡ್, ಯುರೊ, ಯೆನ್, ಕೆನಡಿಯನ್ ಡಾಲರ್ ಅಥವಾ ಆಸ್ಟ್ರೇಲಿಯನ್ ಡಾಲರ್‌ನಂತಹ ವಿದೇಶಿ ಕರೆನ್ಸಿಯಲ್ಲೇ ಉಳಿಯುತ್ತದೆ.
ಉದಾಹರಣೆಗೆ, ಒಬ್ಬ ಎನ್‌ಆರ್‌ಐ ಅಮೆರಿಕನ್ ಡಾಲರ್‌ನಲ್ಲಿ ಠೇವಣಿ ಮಾಡಿದರೆ, ಠೇವಣಿ ಮೊತ್ತ ಮತ್ತು ಬಡ್ಡಿ ಎರಡೂ ಡಾಲರ್‌ನಲ್ಲೇ ಲಭ್ಯವಾಗುತ್ತವೆ. ಇದರಿಂದ ರೂಪಾಯಿ ಮೌಲ್ಯ ಕುಸಿತದ ಅಪಾಯ ಠೇವಣಿದಾರನ ಮೇಲೆ ಬೀಳುವುದಿಲ್ಲ.
ತಾಯ್ನಾಡಿಗಾಗಿ ದುಡಿದರೂ, ಸೌಲಭ್ಯ ದೂರ: ಸರ್ಕಾರಕ್ಕೆ ಕೇಳುವುದೇ ಅನಿವಾಸಿಗಳ ಕೂಗು?ಆರ್‌ಬಿಐಗೆ ಈ ಠೇವಣಿಗಳಲ್ಲಿ ಆಸಕ್ತಿ ಏಕೆ?
ಎಫ್‌ಸಿಎನ್‌ಆರ್ (ಬಿ) ಠೇವಣಿಗಳು ಭಾರತದ ಬ್ಯಾಂಕಿಂಗ್ ವ್ಯವಸ್ಥೆಗೆ ವಿದೇಶಿ ಕರೆನ್ಸಿ ನಿಧಿಗಳನ್ನು ತರುತ್ತವೆ. ಅನಿವಾಸಿ ಭಾರತೀಯರು ಡಾಲರ್ ಅಥವಾ ಇತರ ವಿದೇಶಿ ಕರೆನ್ಸಿಗಳಲ್ಲಿ ಠೇವಣಿ ಇಟ್ಟಾಗ, ಬ್ಯಾಂಕ್‌ಗಳಿಗೆ ಆ ಕರೆನ್ಸಿಗಳ ಜಮೆಯಗುತ್ತದೆ. ಇದು ದೇಶದಲ್ಲಿ ವಿದೇಶಿ ಕರೆನ್ಸಿ ಲಭ್ಯತೆಯನ್ನು ಹೆಚ್ಚಿಸಲು ನೆರವಾಗುತ್ತದೆ.
ಕಚ್ಚಾ ತೈಲದ ಬೆಲೆ ಏರಿಕೆ, ವಿದೇಶಿ ಹೂಡಿಕೆದಾರರ ಹಣ ಹಿಂಪಡೆಯುವಿಕೆ ಮತ್ತು ಜಾಗತಿಕ ಅನಿಶ್ಚಿತತೆಯಂತಹ ಅಂಶಗಳು ರೂಪಾಯಿಯ ಮೇಲೆ ಒತ್ತಡ ಉಂಟು ಮಾಡಿರುವ ಈ ಸಂದರ್ಭದಲ್ಲಿ ಇಂತಹ ಹರಿವುಗಳು ಮಹತ್ವ ಪಡೆಯುತ್ತವೆ. ತೈಲ ಬೆಲೆ ಏರಿಕೆ, ವಿದೇಶಿ ಬಂಡವಾಳ ಹಿಂದೆಗೆತ ಮುಂದಾತವುಗಳಿಂದ ರೂಪಾಯಿ ಮೇಲೆ ಒತ್ತಡ ಹೆಚ್ಚಿದ್ದರಿಂದ ಆರ್‌ಬಿಐ ಈ ಕ್ರಮ ತೆಗೆದುಕೊಂಡಿದೆ ಎಂದದು 'ರಾಯಿಟರ್ಸ್' ಸುದ್ದಿ ಸಂಸ್ಥೆ ವರದಿ ಮಾಡಿದೆ.
ಯುಎಇ ಮೇಲೆ ಎಲ್ ನಿನೊ ಪ್ರಭಾವ: ಅನಿವಾಸಿಗಳು ತಿಳಿಯಬೇಕಾದ ಪ್ರಮುಖ ಸಂಗತಿಗಳುಹೆಡ್ಜಿಂಗ್ ಎಂದರೇನು?
ಆರ್‌ಬಿಐ ಈ ನಿರ್ಧಾರದವನ್ನು ಅರ್ಥ ಮಾಡಿಕೊಳ್ಳಲು ಮೊದಲು ಹೆಡ್ಜಿಂಗ್ ಎಂದರೇನು ಎನ್ನುವುದನ್ನು ತಿಳಿದುಕೊಳ್ಳಬೇಕು.
ಬ್ಯಾಂಕ್‌ಗಳು ಎನ್‌ಆರ್‌ಐಗಳಿಂದ ಡಾಲರ್ ಸಹಿತ ವಿದೇಶಿ ಕರೆನ್ಸಿಗಳನ್ನು ಠೇವಣಿಗಳನ್ನು ಸ್ವೀಕರಿಸುತ್ತವೆ. ಆದರೆ ಅವುಗಳನ್ನು ವಿವಿಧ ಕಾರಣಗಳಿಗೆ ಆರ್‌ಬಿಐ ಬಳಸುವಾಗ ರೂಪಾಯಿ ಮೂಲಕ ವಹಿವಾಟು ನಡೆಸುತ್ತದೆ.
ಠೇವಣಿ ಅವಧಿ ಮುಗಿದಾಗ ಬ್ಯಾಂಕ್‌ಗಳು ಮೂಲಧನ ಮತ್ತು ಬಡ್ಡಿಯನ್ನು ಸ್ವೀಕರಿಸಿದ ಕರೆನ್ಸಿಯಲ್ಲೇ ಮರುಪಾವತಿಸಬೇಕು. ಈ ಅವಧಿಯಲ್ಲಿ ರೂಪಾಯಿ ಹಾಗೂ ಆ ಕರೆನ್ಸಿಗಳ ವಿನಿಮಯ ದರದಲ್ಲಿ ದೊಡ್ಡ ಬದಲಾವಣೆ ಸಂಭವಿಸಿದರೆ ಬ್ಯಾಂಕ್‌ಗಳಿಗೆ ನಷ್ಟವಾಗುವ ಸಾಧ್ಯತೆ ಇರುತ್ತದೆ. ಈ ಅಪಾಯವನ್ನು ಕಡಿಮೆ ಮಾಡಲು ಬ್ಯಾಂಕ್‌ಗಳು ಹಣಕಾಸು ಮಾರುಕಟ್ಟೆಯಲ್ಲಿ ವಿಶೇಷ ಒಪ್ಪಂದಗಳನ್ನು ಮಾಡಿಕೊಳ್ಳುತ್ತವೆ. ಈ ಪ್ರಕ್ರಿಯೆಯನ್ನೇ ಹೆಡ್ಜಿಂಗ್ ಎಂದು ಕರೆಯಲಾಗುತ್ತದೆ.
ಉದಾಹರಣೆಗೆ, ಒಂದು ಬ್ಯಾಂಕ್ ಇಂದು 10,000 ಡಾಲರ್ ಠೇವಣಿ ಸ್ವೀಕರಿಸಿದೆ ಎಂದು ಭಾವಿಸೋಣ. ಮೂರು ವರ್ಷಗಳ ನಂತರ ಅದೇ ಮೊತ್ತವನ್ನು ಡಾಲರ್‌ನಲ್ಲೇ ಹಿಂತಿರುಗಿಸಬೇಕು. ಈ ಮಧ್ಯೆ ಡಾಲರ್ ಬೆಲೆ ₹85ರಿಂದ ₹95ಕ್ಕೆ ಏರಿದರೆ, ಬ್ಯಾಂಕ್‌ಗೆ ಹೆಚ್ಚುವರಿ ವೆಚ್ಚವಾಗಬಹುದು. ಈ ಅಪಾಯದಿಂದ ರಕ್ಷಿಸಿಕೊಳ್ಳಲು ಬ್ಯಾಂಕ್‌ಗಳು ಹೆಡ್ಜಿಂಗ್ ಮಾಡುತ್ತವೆ.
ಹೆಡ್ಜಿಂಗ್ ವೆಚ್ಚ ಎಂದರೇನು?
ಹೆಡ್ಜಿಂಗ್ ಉಚಿತವಾಗಿರುವುದಿಲ್ಲ. ಕರೆನ್ಸಿ ಅಪಾಯದಿಂದ ರಕ್ಷಿಸಿಕೊಳ್ಳಲು ಬ್ಯಾಂಕ್‌ಗಳು ಪಾವತಿಸುವ ಮೊತ್ತವೇ ಹೆಡ್ಜಿಂಗ್ ವೆಚ್ಚ.
ಇದನ್ನು ಒಂದು ರೀತಿಯ ವಿಮಾ ಪ್ರೀಮಿಯಂಗೆ ಹೋಲಿಸಬಹುದು. ವಾಹನಕ್ಕೆ ವಿಮೆ ತೆಗೆದುಕೊಳ್ಳುವಂತೆ, ಬ್ಯಾಂಕ್‌ಗಳು ಕರೆನ್ಸಿ ಅಪಾಯದ ವಿರುದ್ಧ ರಕ್ಷಣೆ ಪಡೆಯಲು ವೆಚ್ಚ ಮಾಡುತ್ತವೆ. ವಿದೇಶಿ ಕರೆನ್ಸಿ ಠೇವಣಿಗಳನ್ನು ಸಂಗ್ರಹಿಸುವ ಸಂದರ್ಭದಲ್ಲಿ ಈ ವೆಚ್ಚವು ಬ್ಯಾಂಕ್‌ಗಳ ಲಾಭದ ಮೇಲೆ ಪರಿಣಾಮ ಬೀರುತ್ತದೆ.
ದುಬೈನಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಭಟ್ಕಳ ಮೂಲದ ಯುವಕ ಸಾವುಆರ್ಬಿಐ ಮಾಡುತ್ತಿರುವುದೇನು?
ಸಾಮಾನ್ಯವಾಗಿ ಹೆಡ್ಜಿಂಗ್ ವೆಚ್ಚವನ್ನು ಬ್ಯಾಂಕ್‌ಗಳೇ ಭರಿಸುತ್ತವೆ. ಆದರೆ 2026ರ ಸೆಪ್ಟೆಂಬರ್ 30ರವರೆಗೆ ಸಂಗ್ರಹಿಸುವ ಎಫ್‌ಸಿಎನ್‌ಆರ್ (ಬಿ) ಠೇವಣಿಗಳ ಹೆಡ್ಜಿಂಗ್ ವೆಚ್ಚವನ್ನು ತಾನೇ ಭರಿಸುವುದಾಗಿ ಆರ್‌ಬಿಐ ಹೇಳಿದೆ. ಇದರರ್ಥ ಆರ್‌ಬಿಐ ನೇರವಾಗಿ ಎನ್‌ಆರ್‌ಐಗಳಿಗೆ ಹಣ ನೀಡುವುದಿಲ್ಲ. ಬದಲಾಗಿ, ವಿದೇಶಿ ಕರೆನ್ಸಿ ಠೇವಣಿಗಳನ್ನು ಸಂಗ್ರಹಿಸುವ ಬ್ಯಾಂಕ್‌ಗಳ ವೆಚ್ಚವನ್ನು ಕಡಿಮೆ ಮಾಡುತ್ತದೆ. ಇದರಿಂದ ಬ್ಯಾಂಕ್‌ಗಳು ಹೆಚ್ಚಿನ ಎಫ್‌ಸಿಎನ್‌ಆರ್ (ಬಿ) ಠೇವಣಿ ಸಂಗ್ರಹಿಸಬಹುದು.
ಬ್ಯಾಂಕ್‌ಗಳು ಮತ್ತು ಎನ್‌ಆರ್‌ಐಗಳ ಮೇಲೆ ಇದರ ಪರಿಣಾಮ ಏನು?
ಹೆಡ್ಜಿಂಗ್ ವೆಚ್ಚ ಕಡಿಮೆಯಾಗುವುದರಿಂದ ಬ್ಯಾಂಕ್‌ಗಳಿಗೆ ವಿದೇಶಿ ಕರೆನ್ಸಿಗಳನ್ನು ಕಡಿಮೆ ವೆಚ್ಚದಲ್ಲಿ ಸಂಗ್ರಹಿಸಲು ಅವಕಾಶ ಸಿಗಲಿದೆ. ಪರಿಣಾಮವಾಗಿ, ಕೆಲವು ಬ್ಯಾಂಕ್‌ಗಳು ಎಫ್‌ಸಿಎನ್‌ಆರ್ (ಬಿ) ಠೇವಣಿಗಳ ಮೇಲೆ ಹೆಚ್ಚು ಸ್ಪರ್ಧಾತ್ಮಕ ಬಡ್ಡಿದರಗಳನ್ನು ನೀಡುವ ಸಾಧ್ಯತೆ ಇದೆ.
ಎಫ್‌ಸಿಎನ್‌ಆರ್ (ಬಿ) ಠೇವಣಿಯ ಪ್ರಮುಖ ಪ್ರಯೋಜನವೆಂದರೆ, ಎನ್‌ಆರ್‌ಐಗಳು ತಮ್ಮ ಹಣವನ್ನು ಡಾಲರ್ ಅಥವಾ ಇತರ ವಿದೇಶಿ ಕರೆನ್ಸಿಯಲ್ಲೇ ಇಟ್ಟುಕೊಂಡು ಬಡ್ಡಿ ಗಳಿಸಬಹುದು. ರೂಪಾಯಿ ಮೌಲ್ಯ ಕುಸಿದರೂ ಅವರಿಗೆ ಹಣವನ್ನು ಅದೇ ವಿದೇಶಿ ಕರೆನ್ಸಿಯಲ್ಲಿ ಮರಳಿಸಲಾಗುತ್ತದೆ.
ಉದಾಹರಣೆಗೆ, ಒಬ್ಬ ಎನ್‌ಆರ್‌ಐ 10,000 ಡಾಲರ್‌ಗಳನ್ನು ಎಫ್‌ಸಿಎನ್‌ಆರ್ (ಬಿ) ಠೇವಣಿಯಾಗಿ ಇಟ್ಟರೆ, ಅವಧಿ ಪೂರ್ಣಗೊಂಡಾಗ ಅವರಿಗೆ ಡಾಲರ್‌ಗಳಲ್ಲೇ ಮೂಲಧನ ಮತ್ತು ಬಡ್ಡಿ ಸಿಗುತ್ತದೆ. ಈ ಅವಧಿಯಲ್ಲಿ ರೂಪಾಯಿ ದುರ್ಬಲಗೊಂಡರೂ ಅವರ ಠೇವಣಿ ಡಾಲರ್‌ನಲ್ಲಿರುವುದರಿಂದ ನಷ್ಟವಾಗುವುದಿಲ್ಲ.
ವಿವೇಕ್ ತೋಂಟದಾರ್ಯ ಲೇಖನ: ವೆಚ್ಚವೋ, ಹೂಡಿಕೆಯೋ? ಕಲ್ಯಾಣ ಯೋಜನೆಗಳ ಅರ್ಥಶಾಸ್ತ್ರಭಾರತ ಈ ಹಿಂದೆ ಇಂತಹ ಕ್ರಮ ಕೈಗೊಂಡಿದೆಯೇ?
2013ರ 'ಟೇಪರ್ ಟ್ಯಾಂಟ್ರಮ್' ಅವಧಿಯಲ್ಲಿ ರೂಪಾಯಿ ಮೇಲೆ ಒತ್ತಡ ಹೆಚ್ಚಾದಾಗ ಎಫ್‌ಸಿಎನ್‌ಆರ್ (ಬಿ) ಠೇವಣಿಗಳಿಗೆ ಸಂಬಂಧಿಸಿದ ವಿಶೇಷ ಸ್ವಾಪ್ ಸೌಲಭ್ಯವನ್ನು ಬ್ಯಾಂಕ್‌ಗಳಿಗೆ ಆರ್‌ಬಿಐ ಒದಗಿಸಿತ್ತು. ಅದರ ಉದ್ದೇಶವೂ ವಿದೇಶಿ ಕರೆನ್ಸಿ ಹರಿವನ್ನು ಹೆಚ್ಚಿಸುವುದಾಗಿತ್ತು.
ಎಫ್‌ಸಿಎನ್‌ಆರ್ (ಬಿ) ಠೇವಣಿಗಳು ಅನಿವಾಸಿ ಭಾರತೀಯರಿಂದ ವಿದೇಶಿ ಕರೆನ್ಸಿ ನಿಧಿಗಳನ್ನು ಆಕರ್ಷಿಸುವ ಪ್ರಮುಖ ಸಾಧನಗಳಲ್ಲಿ ಒಂದಾಗಿವೆ. ಈ ಠೇವಣಿಗಳ ಮೇಲಿನ ಹೆಡ್ಜಿಂಗ್ ವೆಚ್ಚವನ್ನು ತಾತ್ಕಾಲಿಕವಾಗಿ ತಾನೇ ಭರಿಸುವ ಮೂಲಕ ಎಫ್‌ಸಿಎನ್‌ಆರ್ (ಬಿ) ಬ್ಯಾಂಕ್‌ಗಳಿಗೆ ಅವುಗಳನ್ನು ಹೆಚ್ಚು ಆಕರ್ಷಕವಾಗಿಸಲು ಪ್ರಯತ್ನಿಸುತ್ತಿದೆ. ಈ ಕ್ರಮವು ರೂಪಾಯಿಯ ಮೇಲಿನ ಒತ್ತಡವನ್ನು ತಕ್ಷಣವೇ ನಿವಾರಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಹೆಚ್ಚುವರಿ ವಿದೇಶಿ ಕರೆನ್ಸಿ ಹರಿವು ತರಲು ಇದು ಒಂದು ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ.
ಆಧಾರ: ಆರ್‌ಬಿಐ ಪ್ರಕಟಣೆಗಳು ಹಾಗೂ ರಾಯಿಟರ್ಸ್
ಬ್ರಿಟನ್‌ನಲ್ಲೂ ರಾಮ ಮಂದಿರ ವಿವಾದ: 40 ವರ್ಷ ಹಳೆಯ ದೇವಾಲಯದ ಭವಿಷ್ಯ ಅತಂತ್ರ
