ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಆಗಿರುವವರು, ಮರು ಸೇರ್ಪಡೆಗಾಗಿ ಫಾರ್ಮ್-6 ಬಳಸಬಹುದು ಎಂದು ಚುನಾವಣಾ ಆಯೋಗ ಮಂಗಳವಾರ ಹೇಳಿದೆ.
ಅವರು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ ಎಂಬ ಕಾರಣಕ್ಕೆ ಫಾರ್ಮ್-6 ಸಲ್ಲಿಸುವುದನ್ನು 'ಸುಳ್ಳು ಘೋಷಣೆ' ಎನ್ನಲಾಗದು.
ಈ ನಮೂನೆ ಬಳಸುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಿದೆ.
ಸದ್ಯ ಫಾರ್ಮ್-6 ಸಲ್ಲಿಸುವವರು ಮೊದಲ ಬಾರಿಗೆ ಪಟ್ಟಿಗೆ ಹೆಸರು ನೋಂದಾಯಿಸಲು ಅರ್ಜಿ ಸಲ್ಲಿಸುತ್ತಿರುವುದಾಗಿ ಘೋಷಣೆ ಮಾಡಬೇಕಿದೆ. ಪಟ್ಟಿಯಿಂದ ಹೆಸರು ಕೈಬಿಡಲಾಗಿರುವ ಮತದಾರರು ಮರು ಸೇರ್ಪಡೆಯ ಉದ್ದೇಶಕ್ಕೆ ಫಾರ್ಮ್ ಬಳಸುವಾಗ ಈ ರೀತಿ 'ಸುಳ್ಳು ಘೋಷಣೆ' ಮಾಡುವಂತೆ ಒತ್ತಾಯಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಅದು, ವಿವಾದಕ್ಕೂ ಕಾರಣವಾಗಿತ್ತು. ಇದೀಗ, ಆಯೋಗ ಸ್ಪಷ್ಟನೆ ನೀಡಿದೆ.
'ಫಾರ್ಮ್-6' ವಿಚಾರವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ ವ್ಯಕ್ತಿಯೊಬ್ಬರು, ಮೊದಲ ಬಾರಿಯ ಮತದಾರರಲ್ಲದ ವ್ಯಕ್ತಿಯೊಬ್ಬರು ಒತ್ತಾಯಪೂರ್ವಕವಾಗಿ ಈ ಅರ್ಜಿ ಸಲ್ಲಿಸಿದರೆ ಸುಳ್ಳು ಘೋಷಣೆ ಮಾಡಿದಂತಾಗುತ್ತದೆ ಎಂದು ವಾದಿಸಿದ್ದರು. ಆದರೆ, ಈ ವಾದವು ಸಮಂಜಸವಲ್ಲ. ಅರ್ಜಿದಾರರು 'ಫಾರ್ಮ್-6' ಸಲ್ಲಿಸಬಹುದು ಎಂದು ಕೋರ್ಟ್ ಆದೇಶಿಸಿರುವುದನ್ನು ಆಯೋಗ ಉಲ್ಲೇಖಿಸಿದೆ.
ಎಸ್‌ಐಆರ್ ಕುರಿತ ಅರ್ಜಿಯೊಂದರ ವಿಚಾರಣೆಯನ್ನು ಅಕ್ಟೋಬರ್ 28ರಂದು ನಡೆಸಿದ್ದ ಸುಪ್ರೀಂ ಕೋರ್ಟ್, ಅಳಿಸಲಾಗಿರುವ ಮತದಾರರನ್ನು ಪುನಃ ಸೇರಿಸಿಕೊಳ್ಳುವುದಕ್ಕಾಗಿ ಫಾರ್ಮ್-6 ಬಳಸುವಂತೆ ಹೇಳುತ್ತಿರುವುದು ಏಕೆ? ಅವರು ಫಾರ್ಮ್-8 ಅನ್ನು ಏಕೆ ಬಳಸಬಾರದು? ಎಂದು ಚುನಾವಣಾ ಆಯೋಗವನ್ನು ಪ್ರಶ್ನಿಸಿತ್ತು.
ಫಾರ್ಮ್-6ಗೆ ಚುನಾವಣಾ ಆಯೋಗ ನೀಡಿರುವ ಸಮರ್ಥನೆಯನ್ನು ಟೀಕಿಸಿರುವ ಕಾಂಗ್ರೆಸ್, 'ಎಸ್‌ಐಆರ್ ವೇಳೆ ನಡೆದಿರುವ ಅಕ್ರಮಗಳನ್ನು ಮುಚ್ಚಿಕೊಳ್ಳಲು ಮತ್ತೊಂದು ತಂತ್ರ ನಡೆಸುತ್ತಿದೆ. ಮತದಾರರು ಸುಳ್ಳು ಘೋಷಣೆಗೆ ಸಹಿ ಹಾಕುವಂತೆ ಮಾಡಲಾಗುತ್ತಿದೆ' ಎಂದು ಆರೋಪಿಸಿದೆ.
ಹಾನಿ ತಡೆಯಲು ನೀವು ಎಷ್ಟೇ ಪ್ರಯತ್ನಗಳನ್ನು ಮಾಡಿದರೂ, ಪ್ರಕ್ರಿಯೆಯಲ್ಲಿ ಆಗಿರುವ ಅಕ್ರಮಗಳನ್ನು ಸರಿಪಡಿಸಲು ಸಾಧ್ಯವೇ ಇಲ್ಲ. ಎಸ್‌ಐಆರ್ ಅನ್ನು ಕೂಡಲೇ ನಿಲ್ಲಿಸಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಒತ್ತಾಯಿಸಿದ್ದಾರೆ. ಹಾಗೆಯೇ, 'ಹಾನಿ ತಪ್ಪಿಸಲು ನೀವು ಮಾಡುತ್ತಿರುವ ಪ್ರತಿಯೊಂದು ಪ್ರಯತ್ನವೂ, ಎಸ್‌ಐಆರ್ ಪ್ರಕ್ರಿಯೆಯನ್ನು ಎಷ್ಟು ಕೆಟ್ಟದಾಗಿ ವಿನ್ಯಾಸಗೊಳಿಸಲಾಗಿದೆ ಎಂಬುದನ್ನು ತೋರಿಸುತ್ತದೆ' ಎಂದು ಗುಡುಗಿದ್ದಾರೆ.
'ಮತದಾರರಿಗೆ ಸುಳ್ಳು ಘೋಷಣೆಗೆ ಸಹಿ ಹಾಕುವಂತೆ ಕೇಳಿರುವ ಚುನಾವಣಾ ಆಯೋಗ, ಇದೀಗ ಕಾನೂನಾತ್ಮಕ ರಕ್ಷಣೆ ನೀಡುವುದಾಗಿ ಹೇಳುತ್ತಿದೆ' ಎಂದಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಐಆರ್ ವಿರುದ್ಧ ಅರ್ಜಿ ಸಲ್ಲಿಸಿರುವ ಅಂಜಲಿ ಭಾರದ್ವಾಜ್ ಹಾಗೂ ಅಮೃತಾ ಜೋಹ್ರಿ ಎಂಬವರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಮಂಗಳವಾರ ಪತ್ರ ಬರೆದಿದ್ದಾರೆ. 'ಗೈರು, ಶಾಶ್ವತ ಸ್ಥಳಾಂತರ, ಸಾವು ಅಥವಾ ಒಂದಕ್ಕಿಂತ ಹೆಚ್ಚುಕಡೆ ನೋಂದಣಿ'ಯಾಗಿವೆ (ಎಎಸ್‌ಡಿಡಿ) ಎಂಬ ಕಾರಣ ನೀಡಿ ಅಳಿಸಲ್ಪಟ್ಟ ಮತದಾರರಿಗೆ, ಪುನಃ ಪಟ್ಟಿಗೆ ಸೇರಲು ಗಣತಿ ನಮೂನೆ ಅಥವಾ ಫಾರ್ಮ್-8 ಅನ್ನು ಬಳಸಲು ಅವಕಾಶ ನೀಡಬೇಕು ಎಂಬ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಪಾಲಿಸಿ ಎಂದು ಒತ್ತಾಯಿಸಿದ್ದಾರೆ. ಅದೇ ದಿನ, 'ಫಾರ್ಮ್-6'ಗೆ ಸಮರ್ಥನೆ ಬಂದಿದೆ.
ನಮೂನೆ 6 | 'ಸುಪ್ರೀಂ' ತಕರಾರು: ಯಾವುದೇ ಬದಲಾವಣೆಗೆ ಅನುಮೋದನೆ ನೀಡಿಲ್ಲ ಎಂದ CJIಆಳ- ಅಗಲ| ಸರ್ಕಾರದ 'ಸಿಂಧುತ್ವ'ದ ಮುದ್ರೆ ಅಸಿಂಧು ಎಂದ 'ಸುಪ್ರೀಂ''ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಅನುಷ್ಠಾನಗೊಳಿಸಲು ಸೂಕ್ತ, ಸರಳವಾದ ವ್ಯವಸ್ಥೆಯನ್ನು ರೂಪಿಸಿ. ಅದರ ಬಗ್ಗೆ ಚುನಾವಣಾ ಆಯೋಗ ಮತ್ತು ದೆಹಲಿಯ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ಪ್ರಚಾರ ಮಾಡಬೇಕು ಎಂದು ಒತ್ತಾಯಿಸುತ್ತೇವೆ. ಎಎಸ್‌ಡಿಡಿ ಪಟ್ಟಿಯಲ್ಲಿರುವ ಮತದಾರರಿಂದ ಫಾರ್ಮ್-8 ಸ್ವೀಕರಿಸುವಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಬೇಕು' ಎಂದು ಅಂಜಲಿ, ಜೋಹ್ರಿ ಆಗ್ರಹಿಸಿದ್ದಾರೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ನೀಡಿರುವ ನಿರ್ದೇಶನದಲ್ಲಿ, ಫಾರ್ಮ್-6ನಲ್ಲಿರುವ ಘೋಷಣೆಯು 2022ರ ಆಗಸ್ಟ್ 1ರಿಂದಲೇ ಜಾರಿಯಲ್ಲಿರಲಿದೆ. ಹಾಗಾಗಿ, ಎಸ್‌ಐಆರ್ ಪ್ರಕ್ರಿಯೆ ವೇಳೆ ಸಿದ್ಧಪಡಿಸಲಾಗಿರುವ ಕರಡು ಪಟ್ಟಿಯಲ್ಲಿ ಹೆಸರಿಲ್ಲದ ಮತದಾರರು ಅದನ್ನು ಸಲ್ಲಿಸಬೇಕು. ಕರಡು ಪಟ್ಟಿಯಲ್ಲಿ ಹೆಸರಿಲ್ಲದ ಮತದಾರರು, ಈ ಹಿಂದೆ ನೋಂದಣಿ ಮಾಡಿಕೊಂಡಿದ್ದರೂ ಎಸ್‌ಐಆರ್ ವೇಳೆ ಅಥವಾ ನಂತರ ಮತದಾರರ ಪಟ್ಟಿಗೆ ಹೊಸದಾಗಿಯೇ ಸೇರಲು ಅನುಮತಿ ಕೋರಬೇಕು ಎಂದು ಸ್ಪಷ್ಟಪಡಿಸಿದೆ.
ಅದೇ ಕಾರಣಕ್ಕೆ, ಫಾರ್ಮ್-6 ಸಲ್ಲಿಸುವುದರಿಂದ 'ಸುಳ್ಳು ಘೋಷಣೆ' ಮಾಡಿದಂತಾಗುವುದಿಲ್ಲ ಎಂಬುದು ಆಯೋಗದ ಸಮರ್ಥನೆ.
ಆಳ-ಅಗಲ| ಒಡೆದ ಮನೆಯಾಯಿತೇ ಚುನಾವಣಾ ಆಯೋಗ? ಸಂಚಲನ ಸೃಷ್ಟಿಸಿದ ವರದಿಅರ್ಹ ಮತದಾರರ ಹೆಸರು ಕೈತಪ್ಪದಂತೆ ಮುನ್ನೆಚ್ಚರಿಕೆ ವಹಿಸಿ: ಆಯೋಗಕ್ಕೆ ಡಿಕೆಶಿ ಪತ್ರ
