Dailyhunt Logo
  • Light mode
    Follow system
    Dark mode
    • Play Story
    • App Story
ಸಿನಿ ಸಿಪ್: 'ಕಣ್ಣಪ್ಪ'ನ ಕಾರಣಕ್ಕೆ 'ರಾಜ್‌ಕುಮಾರ್' ಆದ ಮುತ್ತುರಾಜ್

ಸಿನಿ ಸಿಪ್: 'ಕಣ್ಣಪ್ಪ'ನ ಕಾರಣಕ್ಕೆ 'ರಾಜ್‌ಕುಮಾರ್' ಆದ ಮುತ್ತುರಾಜ್

ನ್ನಡದ ಮೊದಲ ವಾಕ್ಚಿತ್ರ 'ಸತಿ ಸುಲೋಚನ' ಮೂರು ಕುಟುಂಬಗಳನ್ನು ಹೇಗೆ ಕನ್ನಡ ಚಿತ್ರರಂಗಕ್ಕೆ ಕಾಣಿಕೆಯಾಗಿ ಕೊಟ್ಟಿತು ಎನ್ನುವುದನ್ನು ವಿವರಗಳೊಂದಿಗೆ ಕಳೆದ ಕಂತಿನಲ್ಲಿ ನಾವು ಗಮನಿಸಿದೆವು. ಮೊದಲ ವಾಕ್ಚಿತ್ರ ಬಂದ ನಂತರದ ಎರಡು ದಶಕ ಸಿನಿಮಾಗಳು ಬಹುತೇಕ ನಾಯಕಿ ಕೇಂದ್ರಿತವಾಗಿರುತ್ತಿದ್ದುದು ವಿಶೇಷ.

ಈಗ ಪರಿಸ್ಥಿತಿ ಅದಕ್ಕೆ ತದ್ವಿರುದ್ಧವಾಗಿ ಬೆಳೆದುಬಿಟ್ಟಿದೆಯೆನ್ನಿ.

ರಂಗಭೂಮಿಯ ವಿಸ್ತರಣೆಯಾಗಿ ಬೆಳೆದ ಚಿತ್ರರಂಗಕ್ಕೆ ಮಹತ್ವದ ತಿರುವು ಸಿಕ್ಕ ವರ್ಷ 1954. 'ಬೇಡರ ಕಣ್ಣಪ್ಪ' ಸಿನಿಮಾ ತೆರೆಕಂಡ ವರ್ಷ ಅದು. 1952ರಲ್ಲಿ 'ಶ್ರೀನಿವಾಸ ಕಲ್ಯಾಣ' ಸಿನಿಮಾದಲ್ಲಿ ಸಪ್ತರ್ಷಿಗಳಲ್ಲಿ ಒಬ್ಬರಾಗಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮುತ್ತುರಾಜ್, ಪೂರ್ಣಪ್ರಮಾಣದ ನಾಯಕರಾಗಿ ಅಭಿನಯಿಸಿದ ಮೊದಲ ಚಿತ್ರ 'ಬೇಡರ ಕಣ್ಣಪ್ಪ'. ಅದರ ರಚನಾ ಪ್ರಕ್ರಿಯೆ ಆಸಕ್ತಿಕರವಾಗಿದೆ.

ಸಿನಿ ಸಿಪ್: ಸುದೀಪ್ 'ನೆಪೋಟಿಸಂ' ವರ್ತನೆಯ ನೆರಳಲ್ಲಿ ಕೆಲವು ಹಿತಕಥೆಗಳು...ಸಿನಿ ಸಿಪ್: ಶಿವಾಜಿ ಒಲ್ಲದ 'ಕಸ್ತೂರಿ ನಿವಾಸ' ಗೆಲ್ಲಿಸಿದ ರಾಜ್ ಅಭಿನಯ

1932ರಲ್ಲಿ ಎಂ.ವಿ. ಸುಬ್ಬಯ್ಯನಾಯ್ಡು ಹಾಗೂ ಕೆಲವು ಸಮಾನ ಮನಸ್ಕರು ಸೇರಿ 'ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ'ಯನ್ನು ಸ್ಥಾಪಿಸಿದರು. ಅಭಿನಯ ಸೂಕ್ಷ್ಮಗಳಿಗೆ ಒತ್ತು ನೀಡುತ್ತಿದ್ದ ಈ ನಾಟಕ ಕಂಪನಿಗೆ ಮುತ್ತುರಾಜ್ ಕೂಡ ಸೇರಿದರು. ಅದಕ್ಕೂ ಮೊದಲು ಗುಬ್ಬಿ ವೀರಣ್ಣನವರ ಕಂಪನಿ ನಾಟಕಗಳು ಕಟ್ಟಿಕೊಟ್ಟ ಅನುಭವ ಬೆನ್ನಿಗಿತ್ತು.

'ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ'ಯಲ್ಲಿ ಮುತ್ತುರಾಜ್ ಅವರಿಗೆ ಒಳ್ಳೆಯ ಸಂಬಳವನ್ನೇ ಕೊಡುತ್ತಿದ್ದರು. 'ಅಂಬರೀಷ', 'ಭೂಕೈಲಾಸ', 'ಎಚ್ಚೆಮನಾಯಕ' ನಾಟಕಗಳ ಪ್ರಮುಖ ಪಾತ್ರಗಳಲ್ಲಿ ಮುತ್ತುರಾಜ್ ಅಭಿನಯಿಸಿದರು. ಕ್ರಮೇಣ ಜನಪ್ರಿಯರಾದರು. ನಾಯ್ಡು ಅವರಿಗಂತೂ ಈ ನಟನ ಮೇಲೆ ಅಪಾರ ವಿಶ್ವಾಸ ಮೂಡಿತು. 'ಭೂಕೈಲಾಸ' ನಾಟಕದಲ್ಲಿ ರಾವಣ, ರಾಮ, ಆಂಜನೇಯ ಎಲ್ಲ ಪಾತ್ರಗಳಿಗೂ ಮುತ್ತುರಾಜ್ ಬಣ್ಣ ಹಚ್ಚಿದರು. 'ಜಗಜ್ಯೋತಿ ಬಸವೇಶ್ವರ' ನಾಟಕದಲ್ಲಿ ಬಸವಣ್ಣನ ಪಾತ್ರಕ್ಕೆ ಜೀವ ತುಂಬಿದವರೂ ಅವರೇ. ಹಿರಿಯರು ಬೆನ್ನುತಟ್ಟುತ್ತಿದ್ದ ಆ ಸಂದರ್ಭದಲ್ಲೇ ವಿವಾಹ ನಿಶ್ಚಯವಾಯಿತು. ಹಾಗೆ ನೋಡಿದರೆ, ಆ ವಿವಾಹವನ್ನು ಮುತ್ತುರಾಜ್ ಅವರ ತಂದೆ ತಾವು ಬದುಕಿದ್ದಾಗಲೇ ನಿಶ್ಚಯ ಮಾಡಿಬಿಟ್ಟಿದ್ದರು. ಪಾರ್ವತಮ್ಮನವರನ್ನು 1953ರಲ್ಲಿ ಮುತ್ತುರಾಜ್ ವರಿಸಿದರು. ಮದುವೆಗಾಗಿ ಸ್ವಲ್ಪ ಸಾಲವನ್ನೂ ಮಾಡಬೇಕಾಯಿತು.

ಸಿನಿ ಸಿಪ್: ಎಲ್ಲರಂತಲ್ಲದ ಚಿರಸ್ಥಾಯಿ ಶಂಕರ್ ನಾಗ್ ಸಿನಿ ಸಿಪ್: ನಟಿ ರಮ್ಯಾ ಆಡಿದ್ದ ಜಸ್ಟ್ ಒಂದು ಕೆಟ್ಟ ಮಾತು...

ಅದುವರೆಗೆ ರಂಗಭೂಮಿ ಪ್ರಯೋಗಗಳಲ್ಲೇ ತೃಪ್ತಿಪಟ್ಟಿದ್ದ ನಟನ ಹೆಗಲ ಮೇಲೆ ಸಂಸಾರದ ನೊಗ. 'ಎಂದಾದರೊಂದು ದಿನ ನೀನು ಕನ್ನಡನಾಡಿನ ಶ್ರೇಷ್ಠ ನಟನಾಗುವಿ...' ಎಂದು ಮುತ್ತುರಾಜ್ ತಂದೆ ಒಮ್ಮೆ ಆಡಿದ್ದ ಮಾತು ಕಷ್ಟ ಕಾಲದಲ್ಲೆಲ್ಲ ಮನದಲ್ಲಿ ಮೂಡುತ್ತಿತ್ತು. ಆಗ ಆಶಾವಾದವೊಂದು ಹುಟ್ಟಿ, ಭವಿಷ್ಯದ ಬಗ್ಗೆ ನಂಬಿಕೆ ಬರುತ್ತಿತ್ತು. ಈ ಮಾತೇ ತಮಗೆ ಅಮೃತ ಸೇಚನ ಮಾಡುತ್ತಿತ್ತು ಎಂದು ಖುದ್ದು ಅಣ್ಣಾವ್ರು ತಮ್ಮ ಆತ್ಮಕಥಾ ಬರವಣಿಗೆಯಲ್ಲಿ ನಮೂದಿಸಿದ್ದಾರೆ. 'ಪ್ರಜಾವಾಣಿ' ಪತ್ರಿಕೆಯಲ್ಲೇ ಈ ಆತ್ಮಕಥೆಯನ್ನು ಪಿ.ಜಿ. ಶ್ರೀನಿವಾಸಮೂರ್ತಿಯವರು ಕಂತುಗಳಲ್ಲಿ ನಿರೂಪಣೆ ಮಾಡಿದ್ದರು.

ಸುಬ್ಬಯ್ಯನಾಯ್ಡು ಅವರ ಕಂಪನಿ ಹೊಸಪೇಟೆಯಲ್ಲಿ ಕ್ಯಾಂಪ್ ಹಾಕಿತ್ತು. ಆ ಸಂದರ್ಭದಲ್ಲಿ ಮದ್ರಾಸಿನ ಕರ್ನಾಟಕ ಫಿಲ್ಮ್ಸ್ ಸಂಸ್ಥೆಯಿಂದ ಪತ್ರವೊಂದು ಮುತ್ತುರಾಜ್ ಅವರಿಗೆ ಬಂತು.

'ಬೇಡರ ಕಣ್ಣಪ್ಪ' ಭಕ್ತಿ ಪ್ರಧಾನ ಚಿತ್ರವನ್ನು ಸಂಸ್ಥೆಯು ತಯಾರಿಸುತ್ತಿದ್ದು, ಕಣ್ಣಪ್ಪನ ಪಾತ್ರಕ್ಕೆ ತಮ್ಮನ್ನು ಪರಿಗಣಿಸಲಾಗಿದೆ. ಮೇಕಪ್ ಟೆಸ್ಟ್ನಲ್ಲಿ ಪಾಸಾಗಿ, ನಿರ್ದೇಶಕರು ಒಪ್ಪಿದರೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಪತ್ರದಲ್ಲಿ ತಿಳಿಸಿದ್ದರು.

ಆ ಪತ್ರ ಓದಿದಾಕ್ಷಣ ತಂದೆ ಮಾಡಿದ್ದ ಆಶೀರ್ವಾದ, ಹೆಂಡತಿ ಬಂದ ಗಳಿಗೆ ಎರಡೂ ಮನಸ್ಸಿನಲ್ಲಿ ಮೂಡಿ, ಸಹಜವಾಗಿಯೇ ಸಂತೋಷವಾಯಿತು. ಮದ್ರಾಸ್ಗೆ ಹೋಗಿ, ಸಂಸ್ಥೆಯವರನ್ನು ಭೇಟಿ ಮಾಡಿದ್ದಾಯಿತು.

ಕನ್ನಡ ಚಿತ್ರರಂಗದ ಹಿರಿಯರಾದ ಎಚ್.ಎಲ್.ಎನ್. ಸಿಂಹ 'ಬೇಡರ ಕಣ್ಣಪ್ಪ' ನಿರ್ದೇಶಕರಾಗುವುದು ಅದಾಗಲೇ ನಿಕ್ಕಿಯಾಗಿತ್ತು. ಎ.ವಿ. ಮೇಯಪ್ಪನ್ ಹಾಗೂ ಗುಬ್ಬಿ ವೀರಣ್ಣ ನಿರ್ಮಾಣಕ್ಕೆ ಮುಂದಾಗಿದ್ದರು. ಗುಬ್ಬಿ ಕಂಪನಿಯಲ್ಲಿ ನಾಟಕವಾಗಿ ಜನಪ್ರಿಯವಾಗಿದ್ದ ಜನಪದ ಕಥೆಯನ್ನೇ ಸಿನಿಮಾ ಆಗಿಸಲು ತೀರ್ಮಾನ ಮಾಡಲಾಗಿತ್ತು. ಅದೊಂದು ಬಗೆಯಲ್ಲಿ ತಮಿಳು ಹಾಗೂ ಕನ್ನಡ ಚಿತ್ರರಂಗದ ನಿರ್ಮಾಣ ಸಂಸ್ಥೆಗಳ ಜಂಟಿ ಸಾಹಸವಾಗಿತ್ತು.

ಸಿನಿ ಸಿಪ್: ನಟ ಅಂಬರೀಶ್ ಕರ್ಣ ಆದದ್ದು ಹೀಗೆ...ಸಿನಿ ಸಿಪ್: ಅಣ್ಣಾವ್ರನ್ನ ಕಳೆದುಕೊಂಡ ದಿನದ ವಿದ್ಯಮಾನ; ನಿಜಕ್ಕೂ ಆಗಿದ್ದೇನು?

ಎಚ್.ಎಲ್.ಎನ್. ಸಿಂಹ ಅವರು ಮುತ್ತುರಾಜ್ ಅಭಿನಯಿಸಿದ ನಾಟಕಗಳನ್ನು ನೋಡಿದ್ದರು. ಬಸ್ನಲ್ಲಿ ಒಮ್ಮೆ ಪ್ರಯಾಣಿಸುವಾಗ ಹತ್ತಿರದಿಂದ ಗಮನಿಸಿದ್ದರು. ಅವರಿಗೆ ಈ ನಟನ ಉತ್ಕಟತೆ, ಅಂಗಸೌಷ್ಟವ ಎರಡೂ ಹಿಡಿಸಿದ್ದವು. ಹೀಗಾಗಿಯೇ ಕಣ್ಣಪ್ಪನ ಪಾತ್ರಕ್ಕೆ ಸೂಕ್ತ ಎಂದೆನಿಸಿದ್ದು.

ಮೇಕಪ್ ಟೆಸ್ಟ್ ಕೊಟ್ಟು, ವಾಪಸ್ ತವರಿಗೆ ಮರಳಿದ್ದಾಯಿತು. ಪತ್ರದ ಮೂಲಕ ಆಯ್ಕೆಯ ವಿಷಯ ತಿಳಿಸುವುದಾಗಿ ನಿರ್ಮಾಣ ಸಂಸ್ಥೆಯವರು ಹೇಳಿ ಕಳುಹಿಸಿದ್ದರು.

ಪತ್ರ ಬರುವುದೇ ಎಂದು ದಿನವೂ ಅಂಚೆ ಅಣ್ಣನಿಗಾಗಿ ಕಾದಿದ್ದೇ ಕಾದಿದ್ದು. ಎರಡು ವಾರಗಳು ಹೀಗೆಯೇ ಕಳೆದುಹೋದವು. ಆದರೆ, ಪತ್ರ ಮಾತ್ರ ಬರಲಿಲ್ಲ.

ಮದ್ರಾಸಿನಿಂದ ಯಾವ ಸಮಾಚಾರವೂ ಬರದೇ ಇದ್ದ ಆ ಸಂದರ್ಭದಲ್ಲಿ ಒಂದು ದಿನ ಮುತ್ತುರಾಜ್ ಎಣ್ಣೆನೀರು ಹಾಕಿಕೊಳ್ಳುತ್ತಿದ್ದರು. ತಲೆ ಮೇಲೆ ನೀರು ಸುರಿದುಕೊಳ್ಳುತ್ತಿರುವಾಗಲೇ ಮನಸ್ಸು ದುಃಖಭರಿತವಾಗಿತ್ತು. ಚಿತ್ರರಂಗಕ್ಕೆ ತಾವು ಹೋಗುವ ಸಂಗತಿ ಅಲ್ಲೆಲ್ಲಾ ಪ್ರಚಾರವಾಗಿಹೋಗಿತ್ತು. ಆದರೆ, ಅಲ್ಲಿಂದ ಯಾವ ಸುದ್ದಿಯೂ ಇಲ್ಲ ಎಂಬ ಕಾರಣಕ್ಕೆ ಮನಸ್ಸಿನಲ್ಲಿ ಚಡಪಡಿಕೆ. ಮದುವೆಗೆ ಮಾಡಿದ್ದ ಸಾಲ, ಸಂಸಾರದ ಹೊಣೆಗಾರಿಕೆ ಹೆಚ್ಚಿಸಿದ್ದ ಖರ್ಚು ಎಲ್ಲವೂ ಸಂಕಟದ ಬೆಂಕಿಗೆ ತುಪ್ಪ ಸುರಿದವು. ತಲೆ ಮೇಲೆ ಬಿದ್ದ ನೀರಿನ ಜೊತೆಗೇ ಧಾರಾಕಾರವಾಗಿ ಕಣ್ಣೀರು ಕೂಡ ಸುರಿಯುತ್ತಿತ್ತು. ಆ ಸಮಯದಲ್ಲಿಯೇ ಹೊರಗಿನಿಂದ 'ರಿಜಿಸ್ಟರ್ಡ್ ಪೋಸ್ಟ್' ಎಂಬ ಕರೆಯೊಂದು ಕೇಳಿಸಿತು. ಒಮ್ಮೆಗೇ ಒಳ್ಳೆಯ ಸಮಾಚಾರ ಇರಬಹುದು ಎಂಬ ನಿರೀಕ್ಷೆ, ಏನಾಯಿತೋ ಎಂಬ ಆತಂಕ ಎರಡೂ ಬೆರೆತ ಭಾವದಲ್ಲಿ ಪತ್ರ ಇಸಿದುಕೊಂಡರು.

ಪತ್ರದೂತ ಆಗ ಸಂತಸದ ಸುದ್ದಿಯನ್ನೇ ತಂದಿದ್ದ. 'ಬೇಡರ ಕಣ್ಣಪ್ಪ' ಸಿನಿಮಾಗೆ ಆಯ್ಕೆಯಾಗಿರುವುದಾಗಿಯೂ, ತಕ್ಷಣವೇ ಹೊರಟು ಬರಬೇಕೆಂದೂ ಪತ್ರದಲ್ಲಿ ಬರೆದಿದ್ದರು. ಒಪ್ಪಂದದ ಪತ್ರವನ್ನೂ ಜೊತೆಯಲ್ಲಿಟ್ಟು ಕಳುಹಿಸಿದ್ದರು.

ಆ ಪತ್ರ ಬಂದಾಗ ಸುಬ್ಬಯ್ಯನಾಯ್ಡು ಅವರ ನಾಟಕ ಕಂಪನಿಯು ಹುಬ್ಬಳ್ಳಿಯಲ್ಲಿತ್ತು. ಅಲ್ಲಿಗೆ ಹೋಗಿ, ಅವರನ್ನು ಭೇಟಿ ಮಾಡಿ, ಸಿನಿಮಾಗೆ ಆಯ್ಕೆಯಾಗಿರುವ ಸಂಗತಿಯನ್ನು ಮುತ್ತುರಾಜ್ ತಿಳಿಸಿದರು. ಆಶೀರ್ವಾದ ಮಾಡಿ ಕಳುಹಿಸಿಕೊಡುವಂತೆ ಪ್ರಾರ್ಥಿಸಿದರು. ಒಳ್ಳೆಯದಾಗುವುದಾದರೆ ಹೋಗಿ ಬರುವಂತೆ ಆಶೀರ್ವಾದ ಮಾಡಿದ ಸುಬ್ಬಯ್ಯನಾಯ್ಡು ಅವರು, ತಮ್ಮ ಕಂಪನಿಯ ಬಾಗಿಲು ಮುಂದೆಯೂ ಸದಾ ತೆರೆದಿರುತ್ತದೆ ಎಂದೂ ಬೆನ್ನುತಟ್ಟಿದರು. ಹುಬ್ಬಳ್ಳಿಯ ಕ್ಯಾಂಪ್ ಮುಗಿಸಿಕೊಂಡು ಹೋಗುವಂತೆ ವಿನಂತಿಸಿಕೊಂಡರು. ಹೀಗಾಗಿ ಅಷ್ಟು ಕಾಲಾವಕಾಶ ನೀಡುವಂತೆ ಕರ್ನಾಟಕ ಫಿಲ್ಮ್ಸ್ಸಂಸ್ಥೆಗೆ ಮುತ್ತುರಾಜ್ ಇನ್ನೊಂದು ಪತ್ರ ಬರೆದರು. ಚಿತ್ರ ನಿರ್ಮಾಣಕ್ಕೆ ಎಲ್ಲ ಏರ್ಪಾಟುಗಳೂ ಆಗಿರುವುದರಿಂದ ಅಷ್ಟು ದಿನ ಕಾಯಲಾಗದು ಎಂಬ ಉತ್ತರ ಬಂತು. ಆಗ, 'ನಾಟಕ ಕಂಪನಿಯ ಯಜಮಾನರಿಗೆ ಮಾತು ಕೊಟ್ಟಾಗಿದೆ. ನಿಮಗೆ ಅಲ್ಲಿಯವರೆಗೆ ಕಾಯಲಾಗದೇ ಇದ್ದರೆ ನನ್ನ ತಡೆ ಏನಿಲ್ಲವೆಂದುಕೊಳ್ಳುತ್ತೇನೆ' ಎಂದು ಸ್ವಾಭಿಮಾನದಿಂದಲೇ ಇನ್ನೊಂದು ಪತ್ರವನ್ನು ರಂಗನಟ ಬರೆದರು.

'ಹಾಗೆಯೇ ಮಾಡಿ, ಕ್ಯಾಂಪ್‌ಆದ ಕೂಡಲೇ ಹೊರಟು ಬನ್ನಿ' ಎಂಬ ಉತ್ತರ ಅತ್ತಕಡೆಯಿಂದ ಬಂದಮೇಲೆ ಸಮಾಧಾನವಾಯಿತು.

ಹದಿನೈದು ದಿನಗಳು ಹದಿನೈದು ನಿಮಿಷಗಳಂತೆ ಉರುಳಿದವು. ಹಿತೈಷಿಗಳು ಬೀಳ್ಕೊಟ್ಟರು. ತಾಯಿ, ತಮ್ಮಂದಿರೊಡನೆ ಮದ್ರಾಸ್ನತ್ತ ಮುತ್ತುರಾಜ್ ಬದುಕಿನ ಹೊಸ ಪಯಣ ಸಾಗಿತು.

ಮಳವಳ್ಳಿ ಸಮೀಪದ ಮಾರೇಹಳ್ಳಿಯ ಎಚ್‌ಎಲ್‌ಎನ್ ಸಿಂಹ ಅವರು ಡಾ.ರಾಜ್ ಕುಮಾರ್ ಅವರ ಮೊದಲ ಚಿತ್ರ `ಬೇಡರ ಕಣ್ಣಪ್ಪ' ಚಿತ್ರವನ್ನು ನಿರ್ದೇಶಿಸಿದ್ದರು

ಮದ್ರಾಸ್‌ನಲ್ಲಿ ಈಗ ಇದ್ದಿದ್ದು ಸಿನಿಮಾ 'ಹೀರೊ'. ಮುತ್ತುರಾಜ್ ಎಂಬ ಹೆಸರು ಅಷ್ಟು ಸರಿ ಹೊಂದುವುದಿಲ್ಲ ಎಂದು ನಿರ್ಮಾಪಕರು ಅಭಿಪ್ರಾಯಪಟ್ಟರು. ಮನೆಯಲ್ಲಿ ಎಲ್ಲರ ಹೆಸರುಗಳಲ್ಲಿ 'ರಾಜ್' ಇತ್ತು. ಅದು ತಮ್ಮ ತಂದೆಯವರ ರುಜುವಾಗಿತ್ತೆನ್ನುವುದನ್ನು ನಿರ್ಮಾಪಕರಿಗೆ ಮುತ್ತುರಾಜ್ ಮನದಟ್ಟು ಮಾಡಿಸಿದರು. ಆಗ ಎಚ್.ಎಲ್.ಎನ್. ಸಿಂಹ ಅವರೇ 'ರಾಜ್ಕುಮಾರ್' ಎಂದು ಮರುನಾಮಕರಣ ಮಾಡಿದರು. ರಂಗಭೂಮಿಯ 'ಮುತ್ತುರಾಜ್' ಹೀಗೆ 'ರಾಜ್ಕುಮಾರ್' ಆಗಿಬಿಟ್ಟರು.

'ಬೇಡರ ಕಣ್ಣಪ್ಪ' ಸಿನಿಮಾ ತಯಾರಾದದ್ದು ₹90 ಸಾವಿರ ಬಜೆಟ್ನಲ್ಲಿ ಎಂದು ಕೆಲವರು ಹೇಳುತ್ತಾರೆ. ಅದಕ್ಕೆ ನಿರ್ದಿಷ್ಟ ದಾಖಲೆಗಳು ಇಲ್ಲವಾದರೂ ಒಂದು ಅಂದಾಜಿನಿಂದ ಅಷ್ಟು ವೆಚ್ಚವಾಗಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು. ನಟರಿಗೆ ಆಗ ತಿಂಗಳಿಗಿಷ್ಟು ಎಂದು ಸಿನಿಮಾ ಸಂಸ್ಥೆಗಳು ಸಂಬಳ ಕೊಡುತ್ತಿದ್ದವು. ರಾಜ್ಕುಮಾರ್ ಅವರಿಗೆ ಆಗ ತಿಂಗಳಿಗೆ ₹300 ಸಂಬಳ ನಿಗದಿಯಾಗಿತ್ತು. ಅಲ್ಲಿಯವರೆಗೆ ಚಿತ್ರ ನಿರ್ಮಾಣ ಸಂಸ್ಥೆಗಳು ಮುಖ್ಯವೆನಿಸಿಕೊಂಡಿದ್ದವು. ಕ್ರಮೇಣ ಸಂಸ್ಥೆಗಳಿಗಿಂತ ಕಲಾವಿದರು ಮುಖ್ಯವಾಗತೊಡಗಿದರು. ನರಸಿಂಹರಾಜು ಅವರಿಗೂ 'ಬೇಡರ ಕಣ್ಣಪ್ಪ' ಮೊದಲ ಸಿನಿಮಾ ಆಗಿತ್ತು. ರಾಜ್ಕುಮಾರ್ ಅವರನ್ನು ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳುವ ಮುನ್ನವೇ ನರಸಿಂಹರಾಜು ಆಯ್ಕೆಯಾಗಿತ್ತು. ಮುಂದೆ ಎಷ್ಟೋ ಸಿನಿಮಾಗಳಿಗೆ ನರಸಿಂಹರಾಜು ಅವರ ಕಾಲ್ಷೀಟನ್ನೇ ಮೊದಲು ಪಡೆದುಕೊಳ್ಳುವುದು ವಾಡಿಕೆಯಂತಾಗಿಬಿಟ್ಟಿತು.

ಕೇಂದ್ರ ಸರ್ಕಾರದ ರಾಷ್ಟ್ರ ಪ್ರಶಸ್ತಿಗೆ ಭಾಜನವಾದ ಕನ್ನಡದ ಮೊದಲ ಸಿನಿಮಾ ಎಂಬ ಹೆಗ್ಗಳಿಗೆ 'ಬೇಡರ ಕಣ್ಣಪ್ಪ'ನದ್ದಾಯಿತು. ನಿರೀಕ್ಷೆಗೂ ಮೀರಿ ಸಿನಿಮಾ ಶತದಿನ ಪೂರೈಸಿತು. ನಂತರ 'ಕಾಳಹಸ್ತಿ ಮಹಾತ್ಮೆ' ಎಂಬ ಹೆಸರಿನಲ್ಲಿ ತೆಲುಗಿಗೆ ಡಬ್‌ಆಯಿತು. ಹಿಂದಿಗೂ ಡಬ್ ಆಯಿತು.

'ಬೇಡರ ಕಣ್ಣಪ್ಪ' ಕೂಡ ರಂಗಭೂಮಿಯ ವಿಸ್ತರಣೆಯೇ. ಈ ಸಿನಿಮಾದ ಹಾಡುಗಳಿಗೆ ತಮಿಳಿನ ಆರ್.ಸುದರ್ಶನಂ ಸ್ವರ ಸಂಯೋಜನೆ ಮಾಡಿದರು. ಸಾಲು ಸಾಲು ಗೀತೆಗಳು ಸಿನಿಮಾವನ್ನು ಹದವರಿತಂತೆ ಅಲಂಕರಿಸಿದವು. 'ಶಿವಪ್ಪ ಕಾಯೋ ತಂದೆ' ಹಾಡನ್ನು ಸಿ.ಎಸ್. ಜಯರಾಮನ್ ಹಾಡಿದರು. ಅವರ ಕಾಡುವ ಕಂಠದ ಈ ಹಾಡು ಇಂದಿಗೂ ಜನಮಾನಸದಲ್ಲಿ ಉಳಿದಿದೆ.

'ಬೇಡರ ಕಣ್ಣಪ್ಪ' ಜನಪ್ರಿಯವಾದ ನಂತರ ರಾಜ್ಕುಮಾರ್ ಅವರತ್ತ ನಿರ್ಮಾಪಕರು ಒಂದರ ಮೇಲೊಂದರಂತೆ ಅವಕಾಶಗಳನ್ನು ಮುಂದಿಟ್ಟರು. ನಿರ್ಮಾಪಕರನ್ನು ಅನ್ನದಾತರು ಎಂದೇ ಭಾವಿಸಿದ ರಾಜ್ಕುಮಾರ್, ಆಗ ಮುಂಗಡ ಹಣ ಕೂಡ ಪಡೆದುಕೊಳ್ಳದೆ ಕಾಲ್ಷೀಟ್ಗಳನ್ನು ಕೊಟ್ಟರು. ಶಿಸ್ತಿನಿಂದ ಅಭಿನಯದ ಸಾಣೆಗೆ ಒಡ್ಡಿಕೊಂಡರು. ದಶಕಗಳ ಕಾಲ ಅವರ ಛಾಪು ಚಿತ್ರರಂಗದಲ್ಲಿ ಮೂಡಿತು. ಅಷ್ಟೇ ಅಲ್ಲದೆ, ಅನುಕರಣೀಯ ವ್ಯಕ್ತಿತ್ವವಾಗಿ, ಕನ್ನಡದ ಸಾಂಸ್ಕೃತಿಕ ರಾಯಭಾರಿಯಾಗಿ ಅವರು ಗುರುತಾದರು.

Dailyhunt
Disclaimer: This content has not been generated, created or edited by Dailyhunt. Publisher: Prajavani