Dailyhunt Logo
  • Light mode
    Follow system
    Dark mode
    • Play Story
    • App Story
ಸಿನಿ ಸಿಪ್: ಸುದೀಪ್ 'ನೆಪೋಟಿಸಂ' ವರ್ತನೆಯ ನೆರಳಲ್ಲಿ ಕೆಲವು ಹಿತಕಥೆಗಳು...

ಸಿನಿ ಸಿಪ್: ಸುದೀಪ್ 'ನೆಪೋಟಿಸಂ' ವರ್ತನೆಯ ನೆರಳಲ್ಲಿ ಕೆಲವು ಹಿತಕಥೆಗಳು...

ಳೆದ ವಾರ ನಾವು 'ಕಸ್ತೂರಿ ನಿವಾಸ' ಸಿನಿಮಾದ ಕೆಲವು ಆಸಕ್ತಿಕರ ವಿವರಗಳನ್ನು ಮೆಲುಕುಹಾಕಿದ್ದೆವು. ಅದೇ ಸಂದರ್ಭದಲ್ಲಿ ನಟ ಸುದೀಪ್ ಗಮನಸೆಳೆಯುವ ವಿದ್ಯಮಾನವೊಂದರ ಕೇಂದ್ರವಾದರು. ಅವರ ಸೋದರಳಿಯ ಸಂಚಿತ್ ಸಂಜೀವ್ ಅಭಿನಯದ 'ಮ್ಯಾಂಗೊ ಪಚ್ಚ' ಸಿನಿಮಾ ಬಿಡುಗಡೆಗೆ ಮೊದಲು ಸುದ್ದಿಮಿತ್ರರಿಗೆ ಸುದೀಪ್ ಮುಖಾಮುಖಿಯಾದರು.

ಪತ್ರಕರ್ತರೊಬ್ಬರು ಆಗ, ನೆಪೋಟಿಸಂ ಅಥವಾ ಸ್ವಜನಪಕ್ಷಪಾತದ ಬಗ್ಗೆ ಪ್ರಶ್ನೆ ಎತ್ತಿದರು. ಕುಟುಂಬದವರನ್ನೇ ಹಾಕಿಕೊಂಡು ಸಿನಿಮಾ ಮಾಡುವ ಪ್ರವೃತ್ತಿ ನೋಡಿದರೆ ಏನನ್ನಿಸುತ್ತದೆ ಎಂಬ ಪ್ರಶ್ನೆ ಅದು. ಆ ಪ್ರಶ್ನೆ ಸಹಜವಾಗಿಯೇ ಸುದೀಪ್ ಅವರಿಗೆ ಅಪಥ್ಯವಾಯಿತು. ಅವರು ಅದಕ್ಕೆ ಇನ್ನೊಂದು ಪ್ರತಿಪ್ರಶ್ನೆ ಹಾಕಿದರು. 'ದೊಡ್ಡಮನೆಯವರನ್ನು ಇದೇ ಪ್ರಶ್ನೆ ಕೇಳುತ್ತೇವಾ?' ಎಂದರು. ಶಿವಣ್ಣ, ಅಪ್ಪು ಇಬ್ಬರೂ ಅಷ್ಟೊಂದು ಅಭಿಮಾನಿ ಬಳಗವನ್ನು ಗಳಿಸಲಿಲ್ಲವೇ ಎಂದು ಮಾತು ಸೇರಿಸಿದರು. ಅಷ್ಟಕ್ಕೇ ನಿಲ್ಲಲಿಲ್ಲ. 'ಮ್ಯಾಂಗೊ ಪಚ್ಚ' ಸಿನಿಮಾ ನೋಡಲು ಶಿವರಾಜ್​ಕುಮಾರ್ ಬಂದಾರು. ಆಗ ಅವರ ಎದುರಲ್ಲೇ, ಪ್ರಶ್ನೆ ಕೇಳಿದ್ದ ಪತ್ರಕರ್ತರನ್ನು ಹತ್ತಿರಕ್ಕೆ ಕರೆದರು. ಈಗ ನೆಪೋಟಿಸಂ ಪ್ರಶ್ನೆ ಕೇಳಿ ಎನ್ನುವಂತೆ ವಿಷಯವನ್ನು ಲಂಬಿಸಿದರು. ಪ್ರಶ್ನೆ ಕೇಳಿದ ಆ ಪತ್ರಕರ್ತರನ್ನು ಎಷ್ಟು ಸಾಧ್ಯವೋ ಅಷ್ಟೂ ಹಿಂಡಿಹಾಕಲಾಯಿತು.

ಸುದೀಪ್ ಅವರಿಗೆ ಹೇಳಲು ಕನ್ನಡ ಚಿತ್ರರಂಗದಲ್ಲಿ 'ನೆಪೋಟಿಸಂ'ಗೆ ದೊಡ್ಡಮನೆಯವರ ಉದಾಹರಣೆಯೊಂದೇ ಸಾಕಿರಲಿಲ್ಲ. ಅವರಿಗೆ ಇತಿಹಾಸದ ಪುಟಗಳು ಥಟ್ಟನೆ ನೆನಪಾಗಿದ್ದಿದ್ದರೆ, ಆರ್. ನಾಗೇಂದ್ರರಾಯರ ಹೆಸರನ್ನು ತೆಗೆದುಕೊಳ್ಳುತ್ತಿದ್ದರು. ಸುಬ್ಬಯ್ಯನಾಯ್ಡು ಅವರ ಸ್ಮರಣೆ ಮಾಡುತ್ತಿದ್ದರು. ಎನ್​.ವೀರಾಸ್ವಾಮಿ ಜೊತೆಜೊತೆಗೇ ರವಿಚಂದ್ರನ್ ಅವರನ್ನೂ ನೆನಪಿಸಿಕೊಳ್ಳುತ್ತಿದ್ದರು. ಗುಬ್ಬಿ ವೀರಣ್ಣನವರ ವಂಶವೃಕ್ಷದ ಬಿಳಲುಗಳನ್ನು ತಡಕುತ್ತಿದ್ದರು. ಮೈಸೂರಿನ ಡಿ.ಶಂಕರ್ ಸಿಂಗ್ ಹಾಗೂ ಅವರ ಪುತ್ರ ಡಿ. ರಾಜೇಂದ್ರ ಸಿಂಗ್ ಬಾಬು ಚಿತ್ರರಂಗಕ್ಕೆ ಎಷ್ಟರ ಮಟ್ಟಿಗೆ ಕಾಣಿಕೆ ನೀಡಿದರೆನ್ನುವುದನ್ನೂ ಜ್ಞಾಪಿಸಿಕೊಳ್ಳುತ್ತಿದ್ದರು.

ಸುದೀಪ್ ಅವರಿಗೆ ತಕ್ಷಣಕ್ಕೆ ಬಾಣವನ್ನು ದೊಡ್ಡಮನೆಯತ್ತ ತಿರುಗಿಸುವುದು ಬೇಕಿತ್ತು. ಅದು ಅಂತರಾಳದ ಆಲಾಪ ತಕ್ಷಣ ಹೊರಹೊಮ್ಮುವ ವಿದ್ಯಮಾನವಂತೂ ಹೌದು.

ಸಿನಿ ಸಿಪ್: ಶಿವಾಜಿ ಒಲ್ಲದ 'ಕಸ್ತೂರಿ ನಿವಾಸ' ಗೆಲ್ಲಿಸಿದ ರಾಜ್ ಅಭಿನಯಸಿನಿ ಸಿಪ್ ಪಾಡ್‌ಕಾಸ್ಟ್ ಕೇಳಿ: 'ಕಸ್ತೂರಿ ನಿವಾಸ'ದ ಮೂಲ ಕಥೆ ಬರೆದಿದ್ದು...

ಈ ಪ್ರಕರಣದ ನೆವದಲ್ಲೇ ಕನ್ನಡ ಚಿತ್ರರಂಗದ 'ನೆಪೋಟಿಸಂ'ನ ಹಿತಕರವಾದ ಕೆಲವು ವಾಸ್ತವಗಳನ್ನು ಮತ್ತೆ ನೆನೆಯೋಣ.

ಆರ್​.ನಾಗೇಂದ್ರರಾಯರು ಹಾಗೂ ಎಂ.ವಿ. ಸುಬ್ಬಯ್ಯನಾಯ್ಡು ಪಾಲುದಾರಿಕೆಯಲ್ಲಿ ನಾಟಕದ ಕಂಪನಿಯೊಂದನ್ನು ಹುಟ್ಟುಹಾಕಿದ್ದ ಕಾಲಘಟ್ಟ ಅದು. ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಪಾತ್ರೆಗಳ ವ್ಯಾಪಾರ ಶುರುಮಾಡಿದ್ದ ಷಾ ಚಮನ್​ಲಾಲ್ ಡುಂಗಾಜಿ ಹಾಗೂ ಷಾ ಭೂರ್​ಮಲ್ ಚಮನ್​ಲಾಲ್​ಡುಂಗಾಜಿ ಎಂಬ ಇಬ್ಬರು ಕನ್ನಡ ಸಿನಿಮಾ ನಿರ್ಮಿಸಲು ಮುಂದಾದರು. ರಾಜಸ್ಥಾನದಿಂದ ವಲಸೆ ಬಂದಿದ್ದ ಅವರಿಗೆ ಕನ್ನಡದ ನೆಲದಲ್ಲಿ ಅದೇ ಭಾಷೆಯಲ್ಲಿ ಸಿನಿಮಾ ಮಾಡುವ ಹೆಬ್ಬಯಕೆ. ಅವರು ನಾಗೇಂದ್ರರಾಯರನ್ನು ಭೇಟಿ ಮಾಡಿದರು. ಸುಬ್ಬಯ್ಯನಾಯ್ಡು ಅವರಿಗೂ ಸಿನಿಮಾದಲ್ಲಿ ಒಂದು ಪಾತ್ರ ಸಿಗುವಂತೆ ಮಾಡಿದ್ದು, ನಾಗೇಂದ್ರರಾಯರಿಗೆ ಆ ಸ್ನೇಹಿತನ ಮೇಲೆ ಇದ್ದ ಪ್ರೀತಿ. ಕನ್ನಡದ ಮೊದಲ ವಾಕ್ಚಿತ್ರ 'ಸತಿ ಸುಲೋಚನ' 1934ರಲ್ಲಿ ತೆರೆಕಂಡದ್ದು ಹಾಗೆ. ಈಗ ನಾವು 'ನೆಪೋಟಿಸಂ' ಎನ್ನುತ್ತೇವಲ್ಲ, ಅದರ ಹಲವು ಕವಲುಗಳು ಬೆಳೆಯಲು ಕಾರಣವಾದ ಚಿತ್ರ ಇದು.

ಕನ್ನಡದ ಮೊದಲ ವಾಕ್ಚಿತ್ರದ ಮೂವರು ಹಿರಿಯರ ಮಕ್ಕಳು, ಮೊಮ್ಮಕ್ಕಳು ಮುಂದೆ ಕನ್ನಡ ಚಿತ್ರರಂಗದಲ್ಲೇ ದೊಡ್ಡ ಹೆಸರು ಮಾಡಿದರು. ನಿರ್ದೇಶಕ-ನಟ ವೈ.ವಿ. ರಾವ್ ಅವರ ಮಗಳು ಜೂಲಿ ಲಕ್ಷ್ಮೀ ಅವರನ್ನು ಅನಂತನಾಗ್​ಜೋಡಿಯಾಗಿ ಅದೆಷ್ಟು ಸಿನಿಮಾಗಳಲ್ಲಿ ನಾವು ಕಣ್ತುಂಬಿಕೊಂಡೆವು. ಲಕ್ಷ್ಮಿ ಅವರ ಪುತ್ರಿ ಐಶ್ವರ್ಯಾ ಕೂಡ ದಕ್ಷಿಣ ಭಾರತದ ಕೆಲವು ಭಾಷೆಗಳ ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದಾರೆ.

ಎಂ.ವಿ. ಸುಬ್ಬಯ್ಯನಾಯ್ಡು 1950ರ ದಶಕದವರೆಗೆ ಪ್ರಮುಖ ಪಾತ್ರಗಳಲ್ಲಿ ನಟಿಸಿದರು. 1947ರಲ್ಲಿ ಅವರ ಮಗ ಲೋಕೇಶ್ ಹುಟ್ಟಿದರು. ಬಾಲನಟನಾಗಿ ಅಭಿನಯದ ಸಾಣೆಗೆ ಒಡ್ಡಿಕೊಂಡ ಲೋಕೇಶ್ ಆಮೇಲೆ ದೊಡ್ಡ ನಟರಾಗಿ ಬೆಳೆದದ್ದನ್ನು ನಾವು ಕಂಡಿದ್ದೇವೆ. 'ಭುಜಂಗಯ್ಯನ ದಶಾವತಾರ' ಸಿನಿಮಾವನ್ನು ತಾವೇ ನಿರ್ದೇಶಿಸಿ, ನಟಿಸಿದ ಅವರಿಗೆ ಮೂರು ಸಲ ರಾಜ್ಯ ಪ್ರಶಸ್ತಿಗಳು ಸಂದವು.

ತಂದೆ ಸುಬ್ಬಯ್ಯನಾಯ್ಡು ನಿಧನರಾದಾಗ ಹತ್ತು ಸಾವಿರ ರೂಪಾಯಿ ಸಾಲ ಬಾಕಿ ಇತ್ತು. ಅದನ್ನು ತೀರಿಸುವ ಏಕೈಕ ಉದ್ದೇಶದಿಂದ ಮೊದಲು ಸಿನಿಮಾ ಅವಕಾಶವನ್ನು ಕಣ್ಣಿಗೆ ಒತ್ತಿಕೊಂಡಿದ್ದಾಗಿ ಲೋಕೇಶ್ ಹೇಳಿದ್ದರು. ರವಿಚಂದ್ರನ್ ಅವರ ತಂದೆ ವೀರಾಸ್ವಾಮಿ ಒಂದೇ ಸಲಕ್ಕೆ ಹತ್ತು ಸಾವಿರ ರೂಪಾಯಿಯನ್ನು ಲೋಕೇಶ್ ಕೈಗಿತ್ತರು. 'ಬೂತಯ್ಯನ ಮಗ ಅಯ್ಯು' ಸಿನಿಮಾದ ಪರಭಾಷಾ ಆವೃತ್ತಿಗಳಲ್ಲಿನ ಅಭಿನಯಕ್ಕೆ ಸಿಕ್ಕ ಮುಂಗಡ ಹಣದಿಂದ ಆ ಸಾಲವನ್ನು ಲೋಕೇಶ್ ತೀರಿಸಿದ್ದು ಆಸಕ್ತಿಕರ ಘಟನೆ.

ಲೋಕೇಶ್ ಅವರ ಪತ್ನಿ ಗಿರಿಜಾ ಲೋಕೇಶ್ ಇವತ್ತಿಗೂ ಸಿನಿಮಾ-ಧಾರಾವಾಹಿಗಳಲ್ಲಿ ನಟಿಸುತ್ತಾರೆ. ಅವರ ಮಕ್ಕಳಾದ ಪೂಜಾ, ಸೃಜನ್ ಲೋಕೇಶ್ ಇಬ್ಬರಿಗೂ ತೆರೆಯ ನಂಟು ಹಾಗೇ ಉಳಿದಿದೆ. ರೀಲ್ಸ್​ವರೆಗೆ ಈ ಕುಟುಂಬದ ಮನರಂಜನೆಯ ಹರಿವು ಮುಂದುವರಿದುಕೊಂಡು ಬಂದಿದೆ. ಸುದೀಪ್ ಅವರಿಗೆ ಅದ್ಯಾಕೋ ಈ ಕುಟುಂಬದ ಸಿನಿಮಾ ಪ್ರೀತಿ ಮೊನ್ನೆ ನೆನಪಾಗಲಿಲ್ಲ.

ಸಿನಿ ಸಿಪ್: ಸುದೀಪ್ 'ನೆಪೋಟಿಸಂ' ವರ್ತನೆಯ ನೆರಳಲ್ಲಿ ಕೆಲವು ಹಿತಕಥೆಗಳು...ಸಿನಿ ಸಿಪ್: ನಟಿ ರಮ್ಯಾ ಆಡಿದ್ದ ಜಸ್ಟ್ ಒಂದು ಕೆಟ್ಟ ಮಾತು...

ಆರ್​.ನಾಗೇಂದ್ರರಾಯರು ನಟರಾಗಿ ಅಷ್ಟೇ ಉಳಿಯದೆ ನಿರ್ಮಾಣ, ನಿರ್ದೇಶನದಲ್ಲೂ ಕೈಪಳಗಿಸಕೊಂಡರು. ಅವರ ಮಕ್ಕಳು ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಸಣ್ಣದಲ್ಲ. ಹಿರಿಯ ಮಗ ಆರ್​.ಎನ್​.ಕೆ. ಪ್ರಸಾದ್ ಛಾಯಾಚಿತ್ರಗ್ರಾಹಕರಾಗಿ ಪ್ರಯೋಗಮುಖಿಯಾಗಿದ್ದವರು. ಇನ್ನೊಬ್ಬ ಮಗ ಆರ್​.ಎನ್. ಜಯಗೋಪಾಲ್ ಹಲವಾರು ಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳನ್ನು ಬರೆದರು. ಮತ್ತೊಬ್ಬ ಮಗ ಆರ್​.ಎನ್. ಸುದರ್ಶನ್ 'ವಿಜಯನಗರದ ವೀರಪುತ್ರ' ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದೇ ಅಲ್ಲದೆ, ಹಲವು ಚಿತ್ರಗಳಲ್ಲಿ ನಟಿಸಿದರು. ನಿರ್ದೇಶನಕ್ಕೂ ಕೈಹಾಕಿದರು.

ಬೆಳಿಗ್ಗೆ ಮೂಕಿ ಸಿನಿಮಾ ಚಿತ್ರೀಕರಣ, ಸಂಜೆ ನಾಟಕ ಎಂದು ಶಿಫ್ಟ್​ಗಳಲ್ಲಿ ತೊಡಗಿಕೊಂಡಿದ್ದ ಗುಬ್ಬಿ ವೀರಣ್ಣನವರದ್ದು 'ಮ್ಯಾಜಿಕಲ್ ರಿಯಾಲಿಸಂ' ಎನ್ನಬಹುದಾದ ಬದುಕು. ಅವರು ಹಾಗೂ ಅವರ ಪತ್ನಿ ಬಿ.ಜಯಮ್ಮ ಕನ್ನಡ ಚಿತ್ರರಂಗದ ಮೊದಲ ತಾರಾಜೋಡಿ. ಅವರ ಕುಟುಂಬದ ಕುಡಿಯೇ ಆಗಿರುವ ಬಿ.ಜಯಶ್ರೀ ಈಗಲೂ ರಂಗಭೂಮಿ-ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ.

1947ರಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಮಹಾತ್ಮ ಗಾಂಧೀಜಿ ಅವರ ಸ್ಮರಣೆಯಲ್ಲಿಯೇ 'ಮಹಾತ್ಮ ಪಿಕ್ಚರ್ಸ್' ಕಟ್ಟಿದವರು ಡಿ.ಶಂಕರ್​ಸಿಂಗ್. ಅರಸೀಕೆರೆಯಲ್ಲಿ ಆ ಕಾಲದಲ್ಲಿ ನಡೆಸುತ್ತಿದ್ದ ಎರಡು ಚಿತ್ರಮಂದಿರಗಳಿಗೆ ಅವರು 'ಮಹಾತ್ಮ' ಹಾಗೂ 'ಜವಾಹರ್' ಎಂದು ಹೆಸರಿಟ್ಟಿದ್ದರು. ಮೈಸೂರಿನ ನವಜ್ಯೋತಿ ಸ್ಟುಡಿಯೊದಲ್ಲಿ 'ಶ್ರೀಕೃಷ್ಣಲೀಲಾ' ಎಂಬ ಮೊದಲ ಸಿನಿಮಾವನ್ನು ಚಿತ್ರೀಕರಿಸಿದ ಸಾಧಕ ಶಂಕರ್ ಸಿಂಗ್. ಆಗ ಸಂಸ್ಕರಣಾಲಯ ಸುಸ್ಥಿತಿಯಲ್ಲಿ ಇಲ್ಲದ್ದರಿಂದ ಕಂತು ಕಂತಾಗಿ ಸಿನಿಮಾ ಬಿಡುಗಡೆ ಮಾಡಿದರು. ಮೊದಲ ದಿನ ಹನ್ನೊಂದು ರೀಲುಗಳನ್ನು ತೋರಿಸಿದರು. ಮರುದಿನ ಇನ್ನೊಂದು ರೀಲು. ಹೀಗೆಯೇ ರೀಲುಗಳನ್ನು ಸೇರಿಸುತ್ತಾ ಸಿನಿಮಾ ತೋರಿಸಲು ಅವರು ಪಡಿಪಾಡಲು ಪಟ್ಟರು. ಟಾಂಗಾ ಗಾಡಿ ಮೇಲೆ ಕುಳಿತು, 'ಎಂಟಾಣೆಗೆ ಸಿನಿಮಾ ತೋರಿಸುತ್ತೇವೆ... ಬನ್ನಿ' ಎಂದು ಉದ್ಗೋಷಿಸುತ್ತಾ ಪ್ರೇಕ್ಷಕರನ್ನು ಆಹ್ವಾನಿಸಿದರು. ತಾವೇ ಡಬ್ಬಗಳನ್ನು ಹೊತ್ತುಕೊಂಡು ಊರೂರು ಸುತ್ತಿ ಸಿನಿಮಾ ಪ್ರದರ್ಶನ ಮಾಡಿದರು. ಅವರ ಮಗ ರಾಜೇಂದ್ರ ಸಿಂಗ್​ಬಾಬು ಈಗ ಕನ್ನಡದ ಪ್ರಮುಖ ನಿರ್ದೇಶಕರಲ್ಲಿ ಒಬ್ಬರು. 'ಬಂಧನ', 'ಮುತ್ತಿನಹಾರ'ದಂಥ ಅಪರೂಪದ ಸಿನಿಮಾಗಳನ್ನು ಕೊಟ್ಟರು. ಅವರ ಸಹೋದರಿ ವಿಜಯಲಕ್ಷ್ಮಿ ಸಿಂಗ್ ಅವರೂ ಅಭಿನಯ-ನಿರ್ದೇಶನದಲ್ಲಿ ಛಾಪು ಮೂಡಿಸಿದವರು. ವಿಜಯಲಕ್ಷ್ಮಿ ಅವರ ಪತಿ ಜೈಜಗದೀಶ್ ಅವರೂ ದೊಡ್ಡ ನಟ ಎನ್ನುವುದು ನಮಗೆಲ್ಲ ಗೊತ್ತೇ ಇದೆ. ಅವರ ಪುತ್ರಿಯರೂ ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು. ರಾಜೇಂದ್ರ ಸಿಂಗ್ ಬಾಬು ಅವರ ಮಗ ಆದಿ ನಾಯಕನಟರಾಗಿ ಕೆಲವು ಸಿನಿಮಾಗಳಲ್ಲಿ ನಟಿಸಿದರು. ಈಗಲೂ ಇವರೆಲ್ಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

ಮಹಾತ್ಮ ಸಿನಿಮಾ ಸಂಸ್ಥೆಯಿಂದಲೇ ಪರಿಚಿತರಾದ ನಟಿ ಹರಿಣಿ ಮುಂದೆ ನಿರ್ಮಾಪಕಿಯಾದರು. ಅವರ ಸಹೋದರ ವಾದಿರಾಜ್ 'ನಾಂದಿ'ಯಂಥ ಮೈಲುಗಲ್ಲು ಚಿತ್ರದ ಭಾಗವಾದರು.

ಪುಟ್ಟಣ್ಣ ಕಣಗಾಲರು ದೊಡ್ಡ ನಿರ್ದೇಶಕ. ಅವರ ಸಹೋದರ ಕಣಗಾಲ್ ಪ್ರಭಾಕರ ಶಾಸ್ತ್ರಿ ಚಿತ್ರ ಬರಹಗಾರರಾಗಿ ಜನಪ್ರಿಯರಾಗಿದ್ದರು. ಹುಣಸೂರು ಕೃಷ್ಣಮೂರ್ತಿ ಚಿತ್ರಸಾಹಿತಿ ಹಾಗೂ ನಿರ್ದೇಶಕ. ಅವರ ಸಂಬಂಧಿ ದ್ವಾರಕೀಶ್ ಮುಂದೆ ನಟರಾಗಿ, ನಿರ್ಮಾಪಕ-ನಿರ್ದೇಶಕರಾಗಿಯೂ ಹೆಸರು ಮಾಡಿದರು. ದ್ವಾರಕೀಶ್ ಮಕ್ಕಳು ಕೂಡ ಚಿತ್ರರಂಗದ ನಿಕಷಕ್ಕೆ ಒಡ್ಡಿಕೊಂಡರು.

ಈಗ 'ನೆನಪಿರಲಿ' ಪ್ರೇಮ್ ಪುತ್ರಿ ನಟಿಯಾಗಿದ್ದಾರೆ. ಖಳನಟ ದೇವರಾಜ್ ಅವರ ಪುತ್ರ ಪ್ರಜ್ವಲ್ ಅನೇಕ ಸಿನಿಮಾಗಳ ನಾಯಕರಾಗಿ ಅಭಿನಯಿಸಿದ್ದಾರೆ. ಜಯಮಾಲಾ ಅವರ ಪುತ್ರಿ ಸೌಂದರ್ಯಾ ಕೂಡ ಬಣ್ಣದ ಲೋಕದ ಪರೀಕ್ಷೆಗೆ ಒಡ್ಡಿಕೊಂಡು, ಆಮೇಲೆ ಅದರಿಂದ ದೂರ ಉಳಿದರು. ಲೀಲಾವತಿ ಪುತ್ರ ವಿನೋದ್​ರಾಜ್ ಅಭಿನಯದ ಗುಂಗಿನಿಂದ ಹೊರಬಂದು ಈಗ ಕೃಷಿಕರಾಗಿದ್ದಾರೆ.

ಸಿನಿ ಸಿಪ್: ನಟ ಅಂಬರೀಶ್ ಕರ್ಣ ಆದದ್ದು ಹೀಗೆ...ಸಿನಿ ಸಿಪ್: ಎಲ್ಲರಂತಲ್ಲದ ಚಿರಸ್ಥಾಯಿ ಶಂಕರ್ ನಾಗ್

ರಾಜ್​ಕುಮಾರ್ ​ಕುಟುಂಬವೊಂದರತ್ತಲೇ ಬೊಟ್ಟು ಮಾಡಿ 'ನೆಪೋಟಿಸಂ' ಎನ್ನುವುದರಲ್ಲಿ ಈಗ ಯಾವ ಅರ್ಥವೂ ಇಲ್ಲ. ಕನ್ನಡ ಚಿತ್ರರಂಗದ ಒಂದೇ ಕುಟುಂಬದ ಕುಡಿಗಳು ಚಿತ್ರರಂಗದ ಪ್ರಯೋಗಕ್ಕೆ ಒಡ್ಡಿಕೊಂಡ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಎಲ್ಲರೂ ಇಲ್ಲಿ ಗೆಲ್ಲುತ್ತಾರೆ ಎಂದೇನೂ ಅಲ್ಲ. ಗಟ್ಟಿಕಾಳುಗಳಿಗೆ ಆಕರ್ಷಣೆಯ ಜಾಯಮಾನ ತಂತಾನೇ ಇರುತ್ತದೆ. ರಾಜ್​ಕುಟುಂಬದ ಕುಡಿಗಳು ಅಂತಹ ಗಟ್ಟಿಕಾಳುಗಳೇ ಆಗಿವೆ. ಹಾಗೆಂದು, 'ಮ್ಯಾಂಗೊ ಪಚ್ಚ' ಸಿನಿಮಾದ ಫಲಿತಾಂಶ ಏನಾಯಿತು ಎಂದು ಗಮನಿಸಿ. ಉತ್ಸಾಹ ಹೊತ್ತ ಹೊಸ ನಟ ಸಂಚಿತ್ ಸಂಜೀವ್ ಅವರನ್ನು ತಕ್ಷಣಕ್ಕೆ ಟೀಕಿಸುವುದೂ ಸರಿಯಲ್ಲ. ಕಲಾಮಾಧ್ಯಮಕ್ಕೆ ಹೊಸಬರೂ ಬರುತ್ತಾರೆ, ಚಿತ್ರರಂಗದ ನಂಟು ಇರುವವರೂ ಸೇರುತ್ತಾರೆ. ಎಲ್ಲರೊಳಗೆ ಒಂದಾದಾಗ ಮಾತ್ರ ಒಟ್ಟಾರೆ ಚಿತ್ರಕಥೆಗೆ ಅರ್ಥ.

ಕನ್ನಡ ಚಿತ್ರರಂಗದಲ್ಲೇ ಕುಟುಂಬ ಕುಡಿಗಳ ಇಷ್ಟೊಂದು ಕಥನಗಳು ಇರುವಾಗ, ತೆಲುಗು, ತಮಿಳು, ಹಿಂದಿ, ಮಲಯಾಳ ಸಿನಿಮಾಗಳಲ್ಲಿ ಇನ್ನೆಷ್ಟು ಇರಬೇಡ? ಅಲ್ಲಿಯೂ ಇಂತಹ ಉದಾಹರಣೆಗಳು ದಟ್ಟವಾಗಿವೆ.

ಇವುಗಳಲ್ಲಿ ಕೆಲವನ್ನಾದರೂ ಸುದೀಪ್ ಆ ದಿನ ಸುದ್ದಿಮಿತ್ರರಿಗೆ ಹೇಳಿದ್ದಿದ್ದರೆ, ಅವರ ಉತ್ತರಕ್ಕೆ ಘನತೆ ಪ್ರಾಪ್ತಿಯಾಗುತ್ತಿತ್ತು.

ಸಿನಿ ಸಿಪ್: ಅಣ್ಣಾವ್ರನ್ನ ಕಳೆದುಕೊಂಡ ದಿನದ ವಿದ್ಯಮಾನ; ನಿಜಕ್ಕೂ ಆಗಿದ್ದೇನು?
Dailyhunt
Disclaimer: This content has not been generated, created or edited by Dailyhunt. Publisher: Prajavani