Dailyhunt Logo
  • Light mode
    Follow system
    Dark mode
    • Play Story
    • App Story
ಬೆದರಿಕೆಯೇ ರಣನೀತಿ... ಮ್ಯಾಡ್‌ಮ್ಯಾನ್ ಸಿದ್ಧಾಂತ ಪ್ರಯೋಗಿಸಿದರೇ ಟ್ರಂಪ್?

ಬೆದರಿಕೆಯೇ ರಣನೀತಿ... ಮ್ಯಾಡ್‌ಮ್ಯಾನ್ ಸಿದ್ಧಾಂತ ಪ್ರಯೋಗಿಸಿದರೇ ಟ್ರಂಪ್?

1969ರಲ್ಲಿ ವಿಯೆಟ್ನಾಂ ಯುದ್ಧ ತೀವ್ರಗೊಂಡು ಅಮೆರಿಕದ ಹಲವು ಸೈನಿಕರು ಮೃತಪಟ್ಟರು. ಅಮೆರಿಕ ಗೆಲ್ಲಲಾಗದ ಪರಿಸ್ಥಿತಿಗೆ ತಲುಪಿತ್ತು. ಅಂದಿನ ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ಓವಲ್ ಕಚೇರಿಯಲ್ಲಿ ಕುಳಿತು ಒಂದು ಲೆಕ್ಕಾಚಾರ ಹಾಕಿದರು. ತಾನು ಏನನ್ನೂ ಮಾಡಲು ಅಂಜುವುದಿಲ್ಲ ಎನ್ನುವುದನ್ನು ಶತ್ರುಗಳಿಗೆ ಮನವರಿಕೆ ಮಾಡಿಕೊಡಬೇಕೆಂದು ನಿರ್ಧರಿಸಿದರು.

ಅಣುಬಾಂಬ್ ದಾಳಿ ನಡೆಸುವುದು, ಕಾಂಬೋಡಿಯಾ ಅಥವಾ ಲಾವೋಸ್‌ಗೆ ಯುದ್ಧವನ್ನು ವಿಸ್ತರಿಸುವುದು ಸೇರಿದಂತೆ ಯಾವುದೇ ಹಂತಕ್ಕೆ ತಾನು ಹೋಗಬಲ್ಲೆ ಎಂದು ಬಿಂಬಿಸಿದರು. ಗೆಲುವಿಗಾಗಿ ತಾನು ಯಾವ ಮಟ್ಟಕ್ಕೂ ಇಳಿಯಬಲ್ಲರು ಎಂದು ವಿಯೆಟ್ನಾಂ ಅಂದುಕೊಂಡದ್ದೇ ಆದಲ್ಲಿ, ಅವರು ಮೊದಲು ಶರಣಾಗುತ್ತಾರೆ ಎಂಬುದು ನಿಕ್ಸನ್ ಆಲೋಚನೆ.

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ


ಬೆದರಿಕೆಯೇ ರಣನೀತಿ... ಮ್ಯಾಡ್‌ಮ್ಯಾನ್ ಸಿದ್ಧಾಂತ ಪ್ರಯೋಗಿಸಿದರೇ ಟ್ರಂಪ್?

ಒಂದು ಸಾಲಿನಲ್ಲಿಟ್ರಂಪ್ ಅಮೆರಿಕದ ಅಧ್ಯಕ್ಷೀಯ ಕಾರ್ಯತಂತ್ರವಾಗಿ 'ಮ್ಯಾಡ್‌ಮ್ಯಾನ್ ಸಿದ್ಧಾಂತ'ವನ್ನು ಬಳಸುತ್ತಿದ್ದು, ಇದು ಜಾಗತಿಕ ರಾಜಕೀಯದಲ್ಲಿ ಅನಿಶ್ಚಿತತೆ ಮತ್ತು ಆರ್ಥಿಕ ಒತ್ತಡಗಳನ್ನು ಸೃಷ್ಟಿಸುತ್ತಿದೆ.ಪ್ರಮುಖ ಅಂಶಗಳು• ಮ್ಯಾಡ್‌ಮ್ಯಾನ್ ಸಿದ್ಧಾಂತದ ಮೂಲಎದುರಾಳಿಗಳಲ್ಲಿ ಭಯ ಹುಟ್ಟಿಸಲು ಮತ್ತು ತರ್ಕಬದ್ಧವಲ್ಲದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ತಮ್ಮ ಇಚ್ಛೆಯಂತೆ ಅವರನ್ನು ನಿಯಂತ್ರಿಸುವುದೇ ಈ ಸಿದ್ಧಾಂತದ ಪ್ರಮುಖ ಉದ್ದೇಶವಾಗಿದೆ.• ನಿಕ್ಸನ್ ಮತ್ತು ಟ್ರಂಪ್ ಹೋಲಿಕೆ1969ರಲ್ಲಿ ರಿಚರ್ಡ್ ನಿಕ್ಸನ್ ಈ ತಂತ್ರವನ್ನು ಬಳಸಿದ್ದರು. ಆದರೆ ಟ್ರಂಪ್ ಇದನ್ನು ಕೇವಲ ನಟನೆಯಾಗಿ ಬಳಸದೆ, ತಮ್ಮನ್ನು ತಾವು 'ಮ್ಯಾಡ್‌ಮ್ಯಾನ್' ಎಂದು ಘೋಷಿಸಿಕೊಳ್ಳುವ ಮೂಲಕ ಭಿನ್ನ ವ್ಯಕ್ತಿತ್ವ ಪ್ರದರ್ಶಿಸುತ್ತಿದ್ದಾರೆ.• ಅನಿರೀಕ್ಷಿತ ರಾಜತಾಂತ್ರಿಕ ಧೋರಣೆಇರಾನ್ ವಿರುದ್ಧದ ಉಗ್ರ ಭಾಷೆ, ಪೋಪ್ ಲಿಯೊ ಟೀಕೆ ಮತ್ತು ವಿವಿಧ ರಾಷ್ಟ್ರಗಳ ಮೇಲೆ ಏಕಾಏಕಿ ಸುಂಕ ಹೇರಿಕೆಯು ಟ್ರಂಪ್ ಅವರ ಅನಿಶ್ಚಿತ ರಾಜಕೀಯ ನಡೆಗಳನ್ನು ಎತ್ತಿ ತೋರಿಸುತ್ತದೆ.• ಸಿದ್ಧಾಂತದ ಪ್ರಾಯೋಗಿಕ ವೈಫಲ್ಯಇತಿಹಾಸದ ಹಲವು ಉದಾಹರಣೆಗಳು ಮತ್ತು ವಿವಿಧ ಸಂಸ್ಥೆಗಳ ಸಂಶೋಧನೆಗಳ ಪ್ರಕಾರ, 'ಮ್ಯಾಡ್‌ಮ್ಯಾನ್ ಸಿದ್ಧಾಂತ'ವನ್ನು ಬಳಸುವ ನಾಯಕರು ಅಂತಿಮವಾಗಿ ಸೋಲುವ ಅಥವಾ ದುರ್ಬಲರಾಗುವ ಸಾಧ್ಯತೆಯೇ ಹೆಚ್ಚು.• ಭಾರತದ ಮೇಲೆ ಪ್ರಭಾವಭಾರತ-ಪಾಕಿಸ್ತಾನ ಮಧ್ಯಸ್ಥಿಕೆ ಪ್ರಸ್ತಾಪ ತಿರಸ್ಕೃತವಾದ ಹಿನ್ನೆಲೆಯಲ್ಲಿ, 2025ರ ಆಗಸ್ಟ್‌ನಲ್ಲಿ ಟ್ರಂಪ್ ಆಡಳಿತವು ಭಾರತದ ಮೇಲೆ ಶೇ 50ರಷ್ಟು ಸುಂಕ ಹೇರಿರುವುದು ಅವರ ಹತಾಶೆಯನ್ನು ಸೂಚಿಸುತ್ತದೆ.• ಜಾಗತಿಕ ಪ್ರತಿಕ್ರಿಯೆ ಮತ್ತು ಪರಿಣಾಮಟ್ರಂಪ್ ಅವರ ಬೆದರಿಕೆಗಳಿಗೆ ಬಗ್ಗದೆ, ಜಗತ್ತಿನ ರಾಷ್ಟ್ರಗಳು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿವೆ ಮತ್ತು ಹೆಚ್ಚು ಸ್ವತಂತ್ರ ಹಾಗೂ ಜಾಗರೂಕತೆಯಿಂದ ಕಾರ್ಯನಿರ್ವಹಿಸಲು ಮುಂದಾಗಿವೆ.ಪ್ರಮುಖ ಅಂಕಿಅಂಶಗಳು1969ನಿಕ್ಸನ್ 'ಮ್ಯಾಡ್‌ಮ್ಯಾನ್ ಸಿದ್ಧಾಂತ' ಜಾರಿಗೆ ಪ್ರಯತ್ನಿಸಿದ ವರ್ಷ2011ಲಿಬಿಯಾದ ಮುಅಮ್ಮರ್ ಗಡಾಫಿ ಮೃತದೇಹ ಸಿಕ್ಕ ವರ್ಷಶೇ 50ಟ್ರಂಪ್ ಭಾರತದ ಮೇಲೆ ಹೇರಿದ ಸುಂಕದ ಪ್ರಮಾಣ2025ಟ್ರಂಪ್ ಭಾರತದ ಮೇಲೆ ಸುಂಕ ಹೇರಿದ ವರ್ಷಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಲು ಬಿಡುವುದಿಲ್ಲ: ಪುನರುಚ್ಚರಿಸಿದ ಟ್ರಂಪ್

ಅವರ ಈ ನಿಲುವು ಹುಚ್ಚುತನದಿಂದ ಕೂಡಿರಲಿಲ್ಲ. ಇದೊಂದು ಕಾರ್ಯತಂತ್ರ ಭಾಗ ಎಂದು ಅಂದಿನ ಸೇನಾ ಪಡೆಗಳ ಮುಖ್ಯಸ್ಥ ಎಚ್.ಆರ್. ಹಾಲ್ಡೆಮನ್ ಹೇಳಿದ್ದರು. ನಿಕ್ಸನ್ ಇದನ್ನು 'ಮ್ಯಾಡ್‌ಮ್ಯಾನ್ ಥಿಯರಿ' (Madman Theory) ಎಂದು ಕರೆದಿದ್ದರು.

ಐವತ್ತಾರು ವರ್ಷಗಳ ನಂತರ, ಡೊನಾಲ್ಡ್ ಟ್ರಂಪ್ ಅದೇ ಕಚೇರಿಯಲ್ಲಿ ನಿಂತು, ಇರಾನ್ ನಾಗರಿಕತೆಯನ್ನು ನಿರ್ನಾಮ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಕ್ರೈಸ್ತರ ಧರ್ಮಗುರು ಪೋಪ್ ಲಿಯೊ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತ ಸೇರಿ ಹಲವು ರಾಷ್ಟ್ರಗಳ ಮೇಲೆ ಏಕಾಏಕಿ ಭಾರಿ ಪ್ರಮಾಣದ ಸುಂಕ ಹೇರಿಕೆ ಮಾಡಿದ್ದಾರೆ. ಅನಿರೀಕ್ಷಿತ ನಿರ್ಧಾರಗಳ ಮೂಲಕ ಜಗತ್ತನ್ನು ತಬ್ಬಿಬ್ಬುಗೊಳಿಸುತ್ತಿದ್ದಾರೆ. ಸುಂಕ ಹಾಗೂ ದಿಗ್ಭಂಧನ ಬೆದರಿಕೆಗಳ ಮೂಲಕ ಬೇರೆ ರಾಷ್ಟ್ರಗಳನ್ನು ತಮ್ಮ ಮುಂದೆ ಮಂಡಿಯೂರುವಂತೆ ಮಾಡುತ್ತಿದ್ದಾರೆ. ಟ್ರಂಪ್ ಅವರ ಈ ಎಲ್ಲಾ ನಡವಳಿಕೆಗಳು 'ಮ್ಯಾಡ್‌ಮ್ಯಾನ್ ಥಿಯರಿ'ಯನ್ನೇ ಹೋಲುತ್ತದೆ.

ವಿಚಿತ್ರ ವರ್ತನೆ: ಟ್ರಂಪ್ ಮಾನಸಿಕ ಆರೋಗ್ಯದ ಬಗ್ಗೆ ಹತ್ತಾರು ಪ್ರಶ್ನೆಗಳು

ಏನಿದು ಮ್ಯಾಡ್‌ಮ್ಯಾನ್ ಸಿದ್ಧಾಂತ?

ಯಾವುದೇ ತರ್ಕವಿಲ್ಲದೆ ನೀವು ಏನೂ ಬೇಕಾದರೂ ಮಾಡಬಹುದು, ಅದು ಎಷ್ಟು ದೊಡ್ಡ ವಿನಾಶಕ್ಕೆ ಕಾರಣವಾದರೂ ನೀವು ಅಂಜುವುದಿಲ್ಲ, ನಿಮ್ಮನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲ ಎನ್ನುವುದನ್ನು ಎದುರಾಳಿ ನಂಬುವಂತೆ ಮಾಡಿ ಅವರಲ್ಲಿ ಹೆದರಿಕೆ ಹುಟ್ಟಿಸುವುದೇ ಈ ಸಿದ್ಧಾಂತ. ಅವರು ಭವಿಷ್ಯದಲ್ಲಿ ಎದುರಾಗಬಹುದಾದ ದುರಂತಕ್ಕೆ ಹೆದರಿ ನೀವು ಕೇಳಿದ್ದಕ್ಕೆ ಒಪ್ಪಿಕೊಳ್ಳುತ್ತಾರೆ. ಟ್ರಂಪ್ ಕೂಡ ಇದೇ ಸಿದ್ಧಾಂತವನ್ನು ಅನುಸರಿಸಿದವರಂತೆ ಕಾಣುತ್ತಾರೆ.

1869ರಲ್ಲಿ ಶೀತಲ ಸಮರದ ವೇಳೆ ಇದೇ ತಂತ್ರವನ್ನು ನಿಕ್ಸನ್ ಜಾರಿ ಮಾಡಲು ಪ್ರಯತ್ನಿಸಿದರು. ಆದರೆ ಸೋವಿಯತ್ ಕೂಡ ಅಷ್ಟೇ ಪ್ರಬಲವಾಗಿತ್ತು. ಯುದ್ಧ ಮುಂದುವರಿಯಿತು. ನಿಕ್ಸನ್ ಅಮೆರಿಕದ ಪಡೆಗಳನ್ನು ಹಿಂತೆಗೆದುಕೊಂಡರು. ವಿಯೆಟ್ನಾಂ ಪತನವಾಯಿತು. ಮ್ಯಾಡ್‌ಮ್ಯಾನ್ ಸಿದ್ಧಾಂತ ಪ್ರಾಯೋಗಿಕವಲ್ಲ ಎಂದು ಸಾಬೀತಾಯಿತು.

ಆದರೂ ಈ ಸಿದ್ಧಾಂತವನ್ನು ಹಲವು ನಾಯಕರು ಪಾಲಿಸಿಕೊಂಡು ಬಂದರು. ಸೋವಿಯತ್ ಒಕ್ಕೂಟದ ನಿಕಿತಾ ಕ್ರುಶ್ಚೇವ್ ಇದೇ ರೀತಿ ವರ್ತಿಸುತ್ತಿದ್ದರು. ವಿಶ್ವಸಂಸ್ಥೆ ಸಭೆಯಲ್ಲಿ ಮೇಜಿಗೆ ಶೂನಿಂದ ಬಡಿದಿದ್ದರು. ವಿದೇಶಿ ಅಧಿಕಾರಿಗಳ ಸಭೆಯಲ್ಲಿ ಸಂಯಮ ಕಳೆದುಕೊಂಡು ಕೂಗಾಡುತ್ತಿದ್ದರು. ಕೊನೆಗೆ 1964ರ ದಂಗೆಯಲ್ಲಿ ಅಧಿಕಾರ ಕಳೆದುಕೊಳ್ಳಬೇಕಾಗಿ ಬಂತು. ಇದೇ ಮನಸ್ಥಿತಿ ಹೊಂದಿದ್ದ ಇರಾಕ್‌ನ ಸದ್ದಾಂ ಹುಸೇನ್ ಗಲ್ಲಿಗೇರಬೇಕಾಯಿತು. ಲಿಬಿಯಾದ ಮುಅಮ್ಮರ್ ಗಡಾಫಿಯವರ ಮೃತದೇಹ 2011ರಲ್ಲಿ ಚರಂಡಿಯೊಂದರಲ್ಲಿ ಸಿಕ್ಕಿತು. 'ಮ್ಯಾಡ್‌ಮ್ಯಾನ್ ಸಿದ್ಧಾಂತವನ್ನು ಪ್ರಾಥಮಿಕ ತಂತ್ರವಾಗಿ ಬಳಸುವ ನಾಯಕರು ಸೋಲುವ ಸಾಧ್ಯತೆಯೇ ಹೆಚ್ಚು' ಬ್ರೂಕಿಂಗ್ಸ್ ಇನ್ಸ್ಟಿಟ್ಯೂಷನ್ ಮತ್ತು ಎಂಐಟಿಯ ಸಂಶೋಧನೆಗಳು ಹೇಳಿವೆ

ಪಶ್ಚಿಮ ಏಷ್ಯಾ ಸಂಘರ್ಷ: ಟ್ರಂಪ್ -ಪೋಪ್ ಲಿಯೊ ಜಟಾಪಟಿ ತೀವ್ರ

ತನ್ನನ್ನು 'ಮ್ಯಾಡ್‌ಮ್ಯಾನ್' ಎಂದಿದ್ದ ಟ್ರಂಪ್

ಟ್ರಂಪ್ ವಿಧಾನವು ನಿಕ್ಸನ್‌ಗಿಂತ ಭಿನ್ನ. ಸಂದರ್ಭೋಚಿತ ಒತ್ತಡದಿಂದಾಗಿ ತಾನು ತರ್ಕ ಮೀರಿ ಹೋಗಿದ್ದೇನೆ ಎಂದು ನಿಕ್ಸನ್ ಬೆಂಬಿಸಿಕೊಳ್ಳುತ್ತಿದ್ದರು. ಅದು ಬಹಳ ಎಚ್ಚರಿಕೆಯಿಂದ ಮಾಡಿದ ನಟನೆಯಾಗಿತ್ತು. ಆದರೆ ಟ್ರಂಪ್ ಹುಚ್ಚರಂತೆ ನಟಿಸುತ್ತಿಲ್ಲ, ತಾನೇ ಹುಚ್ಚ ಎಂದು ಘೋಷಿಸಿಕೊಂಡಿದ್ದಾರೆ.

ಟ್ರಂಪ್ ಮಾತ್ರ ಹುಚ್ಚುತನವನ್ನು ನಟಿಸುವುದಿಲ್ಲ, ಬದಲಾಗಿ ಅದನ್ನು ಘೋಷಿಸುತ್ತಾರೆ. ತಾನು ಅನಿರೀಕ್ಷಿತ ಎಂದು ಅವರು ಜಗತ್ತಿಗೆ ಮೊದಲೇ ಹೇಳುತ್ತಾರೆ. 2024ರ ಪ್ರಚಾರದ ಸಮಯದಲ್ಲಿ ವಾಲ್ ಸ್ಟ್ರೀಟ್ ಜರ್ನಲ್‌ಗೆ ನೀಡಿದ ಸಂದರ್ಶನದಲ್ಲಿ, ತೈವಾನ್ ಅನ್ನು ಚೀನಾ ವಶಪಡಿಸಿಕೊಂಡರೆ ನೀವೇನು ಮಾಡುತ್ತೀರಿ ಎನ್ನುವ ‍ಪ್ರಶ್ನೆಗೆ, 'ಷಿ ಜಿನ್‌ಪಿಂಗ್ ಅಂತಹ ಪ್ರಯತ್ನ ಮಾಡಲಾರರು. ಯಾಕೆಂದರೆ ನಾನು ಎಷ್ಟು ದೊಡ್ಡ ಹುಚ್ಚ (ಕ್ರೇಜಿ) ಎಂದು ಅವರಿಗೆ ತಿಳಿದಿದೆ' ಎಂದಿದ್ದರು. 2018ರ ಖಾಸಗಿ ಔತಣಕೂಟವೊಂದರಲ್ಲಿ ಉತ್ತರ ಕೊರಿಯಾದ ಬಗ್ಗೆ ಮಾತನಾಡುತ್ತಾ ಟ್ರಂಪ್ ತಮ್ಮನ್ನು ತಾವೇ 'ಮ್ಯಾಡ್‌ಮ್ಯಾನ್' ಎಂದು ಕರೆದುಕೊಂಡಿದ್ದರು. ಒಬ್ಬ ಹುಚ್ಚ ತಾನು ಹುಚ್ಚ ಎಂದು ಹೇಳಿಕೊಂಡಾಗ, ಅವನನ್ನು ನಂಬುವುದು ಕಷ್ಟವಾಗುತ್ತದೆ

ಎ.ಐ ವಲಯದಲ್ಲಿ ತಲ್ಲಣ ಸೃಷ್ಟಿಸಿದ ಕೊಲ್ಲಿ ಸಂಘರ್ಷ

ಇರಾನ್ ಬಗ್ಗೆ ಟ್ರಂಪ್ ಬಳಿಸಿದ ಭಾಷೆ

ಇರಾನ್ ನಾಗರಿಕತೆಯನ್ನೇ ನಾಶ ಮಾಡುತ್ತೇನೆ ಎಂದು ಟ್ರಂಪ್ ಗುಡುಗಿದ್ದರು. ಅವರ ಟ್ರುಥ್ ಸೋಶಿಯಲ್‌ನಲ್ಲಿ ಬಳಸಿದ ಭಾಷೆ ಎಷ್ಟು ಉಗ್ರವಾಗಿತ್ತೆಂದರೆ, ಅವರ ನಿಜವಾದ ಉದ್ದೇಶ ಏನು ಎನ್ನುವುದನ್ನು ಸ್ಪಷ್ಟಪಡಿಸಲು ಹಿರಿಯ ಅಧಿಕಾರಿಗಳು ಹರಸಾಹಸ ಪಡಬೇಕಾಯಿತು. ಅದಾದ ಬಳಿಕ ಎರಡು ವಾರಗಳ ಕದನ ವಿರಾಮ ಘೋಷಣೆಯಾಯಿತು. ಇದು ಮ್ಯಾಡ್‌ಮ್ಯಾನ್ ಸಿದ್ಧಾಂತದ ಯಶಸ್ಸು ಎಂದು ಟ್ರಂಪ್ ಬೆಂಬಲಿಗರು ಸಂಭ್ರಮಿಸಿದರು.

ಆದರೆ ಸೂಕ್ಷ್ಮ ವಿಶ್ಲೇಷಣೆ ಬೇರೆಯದೇ ಕಥೆಯನ್ನು ಹೇಳುತ್ತದೆ. ಟ್ರಂಪ್ ಅವರ ವರ್ತನೆ ದೃಢ ನಿರ್ಧಾರಕ್ಕಿಂತ ಹತಾಶೆಯನ್ನು ಪ್ರತಿಬಿಂಬಿಸುತ್ತಿತ್ತು. ಇರಾನ್‌ಗಿಂತ ಹೆಚ್ಚಾಗಿ ಟ್ರಂಪ್ ಅವರಿಗೇ ಈ ಒಪ್ಪಂದದ ಅಗತ್ಯವಿದೆ ಎಂಬುದು ಸ್ಪಷ್ಟಪಡಿಸಿತು. ನಾಶ ಮಾಡುವ ಬೆದರಿಕೆ ಹಾಕಿದ ಮರುದಿನವೇ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದು ನೋಡಿದರೆ, ಟ್ರಂಪ್ ಅತಾರ್ಕಿಕ ವ್ಯಕ್ತಿ ಅಲ್ಲ. ಬದಲಾಗಿ ಅವರು ದುರ್ಬಲರಾಗಿದ್ದಾರೆ, ಆತಂಕದಲ್ಲಿದ್ದಾರೆ ಎಂಬುದನ್ನು ತೋರಿಸಿಕೊಟ್ಟಿತು. ನಿಜವಾದ 'ಮ್ಯಾಡ್‌ಮ್ಯಾನ್' ಇಷ್ಟು ಬೇಗ ನಿರ್ಧಾರ ಬದಲಿಸುವುದಿಲ್ಲ. ಒಬ್ಬ ದುರ್ಬಲ ಸಂಧಾನಕಾರ ಮಾತ್ರ ಹೀಗೆ ಮಾಡುತ್ತಾನೆ ಎಂದು ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್ ವಿಶ್ಲೇಷಣೆ ಮಾಡಿದೆ.

ಕೊಲ್ಲಿ ಯುದ್ಧ ಪರಿಣಾಮ: ಪರ್ಯಾಯ ಇಂಧನ ಮೂಲ ಹುಡುಕಾಟದಲ್ಲಿ ರಾಷ್ಟ್ರಗಳು

ಭಾರತದ ಮೇಲೂ ಟ್ರಂಪ್ ಪ್ರಹಾರ

2025ರ ಆಗಸ್ಟ್‌ನಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ಭಾರತದ ಮೇಲೆ ಟ್ರಂಪ್ ಆಡಳಿತವು ಶೇ 50ರಷ್ಟು ಸುಂಕ ಹೇರಿತು. ವರದಿಗಳ ಪ್ರಕಾರ, ಇದು ಟ್ರಂಪ್ ಅವರ ವೈಯಕ್ತಿಕ ಹತಾಶೆಯ ಪ್ರತೀಕ. ಪಹಲ್ಗಾಮ್ ದಾಳಿಯ ನಂತರ ಭಾರತ-ಪಾಕಿಸ್ತಾನ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸುವ ತಮ್ಮ ಪ್ರಸ್ತಾಪವನ್ನು ಭಾರತ ತಿರಸ್ಕರಿಸಿದ್ದಕ್ಕಾಗಿ ಟ್ರಂಪ್ ಕೋಪಗೊಂಡಿದ್ದರು ಹೀಗೆ ಮಾಡಿದ್ದರು. ಶಾಂತಿ ಸ್ಥಾಪಿಸಿದ ಕೀರ್ತಿಯನ್ನು ಪಡೆಯಲು ಟ್ರಂಪ್ ಬಯಸಿದ್ದರು. ಭಾರತ ಅದನ್ನು ತಿರಸ್ಕರಿಸಿದಾಗ ಸುಂಕಗಳ ಹೇರಿಕೆ ಪ್ರಾರಂಭವಾಯಿತು.

ಕೊಲ್ಲಿ ಸಮರದಿಂದ ಭಾರತ-ಅರಬ್ ಸಂಬಂಧಕ್ಕೆ ಅಡ್ಡಿ: ದೇಶದ ಆರ್ಥಿಕತೆಗೆ 'ಹೊಸ ಆಘಾತ'

ಸಿಗದ ಫಲಿತಾಂಶ

ಟ್ರಂಪ್ ಅವರ ಮ್ಯಾಡ್‌ಮ್ಯಾನ್ ಸಿದ್ಧಾಂತ ಅವರು ಉದ್ದೇಶಿಸಿದ ಫಲಿತಾಂಶಗಳನ್ನು ನೀಡುತ್ತಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ವಿಶ್ವಾಸ ಬೆಳೆಯಲು ದಶಕಗಳು ಬೇಕು, ಆದರೆ ಅದನ್ನು ನಾಶಮಾಡಲು ಕ್ಷಣ ಸಾಕು. ಟ್ರಂಪ್ ಬೆದರಿಕೆಗೆ ಬಗ್ಗದ ವಿಶ್ವರಾಷ್ಟ್ರಗಳು ಪರ್ಯಾಯ ಮಾರ್ಗಗಳ ಹುಡುಕಾಟದಲ್ಲಿವೆ. ಸುರಕ್ಷತೆಯ ದೃಷ್ಟಿಯಿಂದ ಪರ್ಯಾಯಗಳನ್ನು ಸಿದ್ಧಪಡಿಸಿಕೊಳ್ಳುತ್ತಿದೆ. ಒಮ್ಮೆ ಇಂತಹ ಪರ್ಯಾಯ ಮಾರ್ಗಗಳು ಸೃಷ್ಟಿಯಾದರೆ ಅವುಗಳನ್ನು ಬದಲಿಸುವುದು ಕಷ್ಟ.

ಮ್ಯಾಡ್‌ಮ್ಯಾನ್ ಥಿಯರಿ ಕೇಳಲು ಪ್ರಬಲವಾಗಿ ಕಂಡರೂ, ಅದು ಅಪರೂಪವಾಗಿ ಕೆಲಸ ಮಾಡುತ್ತದೆ ಎನ್ನುವುದನ್ನು ಇತಿಹಾಸ ತೋರಿಸುತ್ತದೆ. ಅದರ ಹೊಸ ಆವೃತ್ತಿಯು ಪ್ರಯೋಜನಕ್ಕಿಂತ ಹೆಚ್ಚು ಅನಿಶ್ಚಿತತೆಯನ್ನು ಸೃಷ್ಟಿಸುತ್ತಿದೆ. ದೇಶಗಳು ಬಾಗುವ ಬದಲು, ಹೆಚ್ಚು ಜಾಗರೂಕ ಮತ್ತು ಸ್ವತಂತ್ರವಾಗುತ್ತಿವೆ. ಜಗತ್ತು ಈ ಬದಲಾವಣೆಗೆ ಹೊಂದಿಕೊಳ್ಳುತ್ತಿದೆ.

(ಆಧಾರ: ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್, ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್, ದಿ ವಾಷಿಂಗ್ಟನ್ ಪೋಸ್ಟ್, ದಿ ನ್ಯೂಯಾರ್ಕ್ ಟೈಮ್ಸ್, ದಿ ಡಿಪ್ಲೊಮ್ಯಾಟ್ ಮತ್ತು ನ್ಯೂಸ್‌ವೀಕ್‌)

ಇರಾನ್ ಮೇಲೆ ಯುದ್ಧ ಸಾರಿ ಚಕ್ರವ್ಯೂಹದಲ್ಲಿ ಸಿಲುಕಿದ ಅಮೆರಿಕ ಅಧ್ಯಕ್ಷ ಟ್ರಂಪ್
Dailyhunt
Disclaimer: This content has not been generated, created or edited by Dailyhunt. Publisher: Prajavani