Dailyhunt Logo
  • Light mode
    Follow system
    Dark mode
    • Play Story
    • App Story
ವಿಶ್ಲೇಷಣೆ | ಉದ್ಯೋಗದ ಜತೆ ಶಿಕ್ಷಣ: ಕರ್ನಾಟಕಕ್ಕೆ ಬೇಕು ಸಂಜೆ ಕಲಿಕೆಯ ಹೊಸ ಮಾದರಿ

ವಿಶ್ಲೇಷಣೆ | ಉದ್ಯೋಗದ ಜತೆ ಶಿಕ್ಷಣ: ಕರ್ನಾಟಕಕ್ಕೆ ಬೇಕು ಸಂಜೆ ಕಲಿಕೆಯ ಹೊಸ ಮಾದರಿ

ಬೆಂಗಳೂರು ಪೀಣ್ಯದಲ್ಲಿನ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಂದ ಹಿಡಿದು, ಬೆಳಗಾವಿಯ ನಿಖರ ಯಂತ್ರೋಪಕರಣ ತಯಾರಿಕಾ ಘಟಕಗಳು, ಬಿಡದಿಯ ವಾಹನೋದ್ಯಮ ಕಾರಿಡಾರ್‌ ಹಾಗೂ ಹುಬ್ಬಳ್ಳಿ-ಧಾರವಾಡ, ಮೈಸೂರು ಮತ್ತು ಮಂಗಳೂರಿನ ಬೆಳೆಯುತ್ತಿರುವ ಕೈಗಾರಿಕಾ ಕೇಂದ್ರಗಳವರೆಗೆ ಲಕ್ಷಾಂತರ ಕಾರ್ಮಿಕರು ಕರ್ನಾಟಕದ ಆರ್ಥಿಕತೆಯ ಬೆನ್ನೆಲುಬಾಗಿ ದುಡಿಯುತ್ತಿದ್ದಾರೆ.

ಪ್ರತಿದಿನ ಸಾವಿರಾರು ತಾಂತ್ರಿಕ ಸಿಬ್ಬಂದಿ, ಐಟಿಐ ಪದವೀಧರರು ಮತ್ತು ಡಿಪ್ಲೊಮಾ ಪಡೆದವರು ಉತ್ಪಾದನಾ ಘಟಕಗಳು, ಸಿಎನ್‌ಸಿ ಯಂತ್ರಗಳು ಹಾಗೂ ತಾಂತ್ರಿಕ ವ್ಯವಸ್ಥೆಗಳು ಸುಗಮವಾಗಿ ಕಾರ್ಯನಿರ್ವಹಿಸುವಂತೆ ಶ್ರಮಿಸುತ್ತಿದ್ದಾರೆ. ಆದರೆ, ವೃತ್ತಿಯಲ್ಲಿ ಇನ್ನಷ್ಟು ಬೆಳೆಯಬೇಕು ಎಂಬ ಹಂಬಲ ಹೊಂದಿರುವ ಈ ಕಾರ್ಮಿಕರಲ್ಲಿ ಬಹುತೇಕರು ತಮ್ಮ ವೃತ್ತಿಜೀವನದಲ್ಲಿ ಮುಂದೆ ಸಾಗಲು ಅಡ್ಡಿಯಾಗಿರುವ, ಕಣ್ಣಿಗೆ ಕಾಣದ ತಡೆಗೋಡೆಯೊಂದನ್ನು ಎದುರಿಸುತ್ತಿದ್ದಾರೆ.

ಸುದ್ದಿಹಾಳೆ ಬಿಕ್ಕಟ್ಟು: ಆತಂಕದಲ್ಲಿ ಪತ್ರಿಕೋದ್ಯಮದ ಭವಿಷ್ಯ, ಪರಿಹಾರವೇನು?

ಈ ಕಾರ್ಮಿಕರಲ್ಲಿ ಹಲವರು ತಮ್ಮ ಶೈಕ್ಷಣಿಕ ಅರ್ಹತೆಯನ್ನು ಹೆಚ್ಚಿಸಿಕೊಳ್ಳುವ ಬಯಕೆ ಹೊಂದಿದ್ದಾರೆ. ಕೆಲವರು ಬಿಇ ಅಥವಾ ಬಿಟೆಕ್ ಪದವಿ ಪಡೆಯುವ ಗುರಿ ಹೊಂದಿದ್ದರೆ, ಇನ್ನು ಕೆಲವರು ಕೈಗಾರಿಕಾ ರೋಬೊಟಿಕ್ಸ್‌, ಉತ್ಪಾದನೆಯಲ್ಲಿ ಕೃತಕ ಬುದ್ಧಿಮತ್ತೆ, ಅಡಿಟಿವ್ ಮ್ಯಾನುಫ್ಯಾಕ್ಚರಿಂಗ್‌ ಹಾಗೂ ಎಲೆಕ್ಟ್ರಿಕ್‌ ವಾಹನಗಳ (ಇವಿ) ಪವರ್‌ಟ್ರೇನ್‌ ವ್ಯವಸ್ಥೆಗಳಂತಹ ಸುಧಾರಿತ ಉತ್ಪಾದನಾ ತಂತ್ರಜ್ಞಾನಗಳಲ್ಲಿ ಪರಿಣತಿ ಗಳಿಸಲು ಬಯಸುತ್ತಾರೆ. ಆದರೆ, ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆ ಅವರ ಮುಂದೆ ಕಠಿಣ ಆಯ್ಕೆಯೊಂದನ್ನು ಇಡುತ್ತದೆ. ಜೀವನೋಪಾಯಕ್ಕಾಗಿ ಉದ್ಯೋಗ ಮುಂದುವರಿಸಬೇಕೋ ಅಥವಾ ಅದನ್ನು ತೊರೆದು ಪೂರ್ಣಾವಧಿ ಶಿಕ್ಷಣಕ್ಕೆ ಸೇರಬೇಕೋ ಎಂಬ ಸಂದಿಗ್ಧತೆ ಎದುರಾಗುತ್ತದೆ. ಕುಟುಂಬದ ಜವಾಬ್ದಾರಿ ಹೊತ್ತಿರುವ ಬಹುತೇಕ ಕಾರ್ಮಿಕರಿಗೆ ಉದ್ಯೋಗ ತೊರೆದು ಹಗಲಿನ ವೇಳೆಯಲ್ಲಿ ಕಾಲೇಜಿಗೆ ಸೇರಿ ಓದುವುದು ಆರ್ಥಿಕವಾಗಿ ಸಾಧ್ಯವಾಗದ ಸಂಗತಿ.

ಉದ್ಯೋಗಸ್ಥರಿಗೆ ಅನುಕೂಲವಾಗುವಂತೆ ಹೊಂದಿಕೊಳ್ಳುವ ವೇಳಾಪಟ್ಟಿಯ ಕೋರ್ಸ್‌ಗಳನ್ನು ಆರಂಭಿಸಲು ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಮಾರ್ಗಸೂಚಿಗಳನ್ನು ರೂಪಿಸಿದೆ. ಆದರೆ, ಇವುಗಳ ಅನುಷ್ಠಾನ ಕಡ್ಡಾಯವಲ್ಲದ ಕಾರಣ ರಾಜ್ಯದಾದ್ಯಂತ ಈ ವ್ಯವಸ್ಥೆ ಕೆಲವೇ ಕಡೆಗಳಲ್ಲಿ ಜಾರಿಯಲ್ಲಿದ್ದು, ಬಹುತೇಕ ಕಡೆಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇದರ ಪರಿಣಾಮವಾಗಿ, ಕರ್ನಾಟಕದ ಎಂಜಿನಿಯರಿಂಗ್‌ ಕಾಲೇಜುಗಳು ಮತ್ತು ಪಾಲಿಟೆಕ್ನಿಕ್‌ಗಳಲ್ಲಿನ ಅತ್ಯಾಧುನಿಕ ಪ್ರಯೋಗಾಲಯಗಳು, ಉನ್ನತ ಗಣಕಯಂತ್ರ ಕೇಂದ್ರಗಳು ಹಾಗೂ ಆಧುನಿಕ ತರಗತಿಗಳು ಸಂಜೆ 5 ಗಂಟೆಯ ಬಳಿಕ ಬಳಕೆಯಾಗದೆ ಉಳಿಯುತ್ತವೆ.

ಇನ್ನೊಂದೆಡೆ, ರಾಜ್ಯ ಸರ್ಕಾರವು ಟಾಟಾ ಟೆಕ್ನಾಲಜೀಸ್‌ ಸಹಯೋಗದಲ್ಲಿ 150ಕ್ಕೂ ಹೆಚ್ಚು ಸರ್ಕಾರಿ ಐಟಿಐಗಳನ್ನು ಆಧುನಿಕ ತಂತ್ರಜ್ಞಾನ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಿರುವುದು ಗಮನಾರ್ಹ. ಆದರೆ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ಸೌಲಭ್ಯಗಳೂ ಸಂಜೆ ಮತ್ತು ವಾರಾಂತ್ಯಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ. ಇದು ಸಾರ್ವಜನಿಕ ಮತ್ತು ಖಾಸಗಿ ವಲಯಗಳ ತಾಂತ್ರಿಕ ಶಿಕ್ಷಣ ಮೂಲಸೌಕರ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅವಕಾಶ ಇನ್ನೂ ಇದೆ ಎಂಬುದನ್ನು ತೋರಿಸುತ್ತದೆ.

ಕೈಗಾರಿಕೆ 4.0ರ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಕೌಶಲ ಅಂತರವನ್ನು ಕಡಿಮೆ ಮಾಡಲು ಮತ್ತು ಕರ್ನಾಟಕವನ್ನು ಒಂದು ಟ್ರಿಲಿಯನ್‌ ಡಾಲರ್‌ ಆರ್ಥಿಕತೆಯನ್ನಾಗಿಸುವ ಮಹತ್ವಾಕಾಂಕ್ಷಿ ಗುರಿ ಸಾಧಿಸಲು ಕೇವಲ ನೀತಿ ಪ್ರೋತ್ಸಾಹಗಳು ಸಾಕಾಗುವುದಿಲ್ಲ. ಇದಕ್ಕಾಗಿ ಉನ್ನತ ಶಿಕ್ಷಣ ಇಲಾಖೆ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ (ಡಿಟಿಇ) ನಿರ್ಣಾಯಕ ಹೆಜ್ಜೆ ಇಡಬೇಕಿದೆ. ರಾಜ್ಯದ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಸಂಜೆ ಮತ್ತು ವಾರಾಂತ್ಯದ ಕೋರ್ಸ್‌ಗಳನ್ನು ಕಡ್ಡಾಯವಾಗಿ ಆರಂಭಿಸುವ ಮೂಲಕ ಉದ್ಯೋಗಸ್ಥರಿಗೂ ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಕೌಶಲಗಳನ್ನು ಬೆಳೆಸಿಕೊಳ್ಳಲು ಅವಕಾಶ ಕಲ್ಪಿಸಬೇಕು.

ಬೆವರಿನ ಬೆಲೆಗೆ ಭದ್ರತೆಯ ಕವಚ: ನಿರ್ಮಾಣ ಕಾರ್ಮಿಕರ ಬದುಕಿಗೆ ಬೇಕು ಹೊಸ ವ್ಯವಸ್ಥೆ

ಬ್ರಿಟನ್‌ನ ಮಾದರಿ

ಯುನೈಟೆಡ್‌ ಕಿಂಗ್‌ಡಮ್‌ ಈ ನಿಟ್ಟಿನಲ್ಲಿ ಅನುಸರಿಸಬಹುದಾದ ಮಾದರಿಯನ್ನು ಮುಂದಿಟ್ಟಿದೆ. ಭವಿಷ್ಯದ ಉದ್ಯೋಗ ಜಗತ್ತಿಗೆ ಜೀವನಪರ್ಯಂತ ಕಲಿಕೆ ಅಗತ್ಯವೇ ಹೊರತು, 21ನೇ ವಯಸ್ಸಿನಲ್ಲಿ ಒಂದೇ ಪದವಿ ಪಡೆದರೆ ಸಾಕಾಗುವುದಿಲ್ಲ ಎಂಬುದನ್ನು ಬ್ರಿಟನ್‌ ಸರ್ಕಾರ ಗುರುತಿಸಿದೆ. ಇಂಗ್ಲೆಂಡ್‌ನ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಹಣಕಾಸು ನೆರವು ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆಯಾಗಿ 'ಲೈಫ್‌ಲಾಂಗ್‌ ಲರ್ನಿಂಗ್‌ ಎಂಟೈಟಲ್‌ಮೆಂಟ್‌' (ಎಲ್‌ಎಲ್‌ಇ) ಯೋಜನೆಯನ್ನು ಪರಿಚಯಿಸಿದೆ.

ಈ ಯೋಜನೆಯಡಿ, ಕಲಿಯುವವರು ನಾಲ್ಕು ವರ್ಷಗಳ ಪೂರ್ಣಾವಧಿ ಶಿಕ್ಷಣದ ಶುಲ್ಕಕ್ಕೆ ಸಮಾನವಾದ ಹಣಕಾಸು ನೆರವು ಪಡೆಯಬಹುದು. ಇದನ್ನು ತಮ್ಮ ಜೀವನದ ವಿವಿಧ ಹಂತಗಳಲ್ಲಿ ಪೂರ್ಣಾವಧಿ ಕೋರ್ಸ್‌ಗಳಿಗೆ ಮಾತ್ರವಲ್ಲದೆ, ಮೊದಲ ಬಾರಿಗೆ ಉನ್ನತ ತಾಂತ್ರಿಕ ಅರ್ಹತೆಗಳನ್ನು ಪಡೆಯಲು ಅಗತ್ಯವಿರುವ ಪ್ರತ್ಯೇಕ ಘಟಕಗಳ ಅಧ್ಯಯನಕ್ಕೂ ಬಳಸಿಕೊಳ್ಳಬಹುದು. ಉದ್ಯೋಗ ಮತ್ತು ಕುಟುಂಬದ ಜವಾಬ್ದಾರಿಗಳಿಗೆ ಹೊಂದಿಕೆಯಾಗುವಂತೆ ಕಲಿಕೆಯನ್ನು ಹಂತ ಹಂತವಾಗಿ ಮುಂದುವರಿಸಲು, ವಿವಿಧ ಶಿಕ್ಷಣ ಸಂಸ್ಥೆಗಳ ನಡುವೆ ಕ್ರೆಡಿಟ್‌ಗಳನ್ನು ವರ್ಗಾಯಿಸಲು ಹಾಗೂ ತಮ್ಮ ಅನುಕೂಲಕ್ಕೆ ತಕ್ಕ ವೇಗದಲ್ಲಿ ಅಧ್ಯಯನ ಮಾಡಲು ಈ ವ್ಯವಸ್ಥೆ ನೆರವಾಗುತ್ತದೆ.

ಪ್ರಸ್ತುತ ವಿದ್ಯಾರ್ಥಿ ಹಣಕಾಸು ನೆರವು ವ್ಯವಸ್ಥೆಯು ಹೆಚ್ಚು ಕಠಿಣವಾಗಿದ್ದು, ಮುಖ್ಯವಾಗಿ ಯುವ ವಯಸ್ಸಿನ ಪೂರ್ಣಾವಧಿ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಇದರಿಂದ ಅರೆಕಾಲಿಕವಾಗಿ ಕಲಿಯಲು, ತಮ್ಮ ಕೌಶಲಗಳನ್ನು ಹೆಚ್ಚಿಸಿಕೊಳ್ಳಲು ಅಥವಾ ವೃತ್ತಿಜೀವನದ ಮಧ್ಯದಲ್ಲಿ ಹೊಸ ತರಬೇತಿ ಪಡೆಯಲು ಬಯಸುವ ವಯಸ್ಕರಿಗೆ ತೊಂದರೆಯಾಗುತ್ತಿದೆ ಎಂದು ಬ್ರಿಟನ್‌ ಸರ್ಕಾರವೇ ಒಪ್ಪಿಕೊಂಡಿದೆ. ಅಲ್ಲಿನ ಒಟ್ಟು ಉದ್ಯೋಗಾವಕಾಶಗಳಲ್ಲಿ ನಾಲ್ಕನೇ ಒಂದು ಭಾಗಕ್ಕಿಂತ ಹೆಚ್ಚು ಹುದ್ದೆಗಳು ಅಗತ್ಯ ಕೌಶಲಗಳ ಕೊರತೆಯಿಂದ ಭರ್ತಿಯಾಗದೆ ಉಳಿದಿರುವುದೂ ಈ ನೀತಿ ಬದಲಾವಣೆಗೆ ಕಾರಣವಾಗಿದೆ.

ಪದವಿ ಕೋರ್ಸ್‌ನ ಪ್ರತ್ಯೇಕ ಘಟಕಗಳಂತಹ ಕಡಿಮೆ ಅವಧಿಯ ಅಧ್ಯಯನಕ್ಕೂ ಹಣಕಾಸು ನೆರವು ನೀಡುವುದು ಹಾಗೂ ಸಾಂಪ್ರದಾಯಿಕ ಶೈಕ್ಷಣಿಕ ವರ್ಷದ ಪರಿಕಲ್ಪನೆಯಿಂದ ಹೊರಬಂದು ವರ್ಷವಿಡೀ ಯಾವುದೇ ಸಮಯದಲ್ಲಿ ಕೋರ್ಸ್‌ ಆರಂಭಿಸಲು ಅವಕಾಶ ಕಲ್ಪಿಸುವುದು ಎಲ್‌ಎಲ್‌ಇ ಯೋಜನೆಯ ಉದ್ದೇಶವಾಗಿದೆ. ಕರ್ನಾಟಕಕ್ಕೂ ಇಂತಹ ವ್ಯವಸ್ಥಿತ ಸುಧಾರಣೆಯ ಅಗತ್ಯವಿದೆ.

ಈ ಯೋಜನೆಯ ಜೊತೆಗೆ, ಬ್ರಿಟನ್‌ನ ವಿದ್ಯಾರ್ಥಿಗಳ ಕಚೇರಿ (ಒಎಫ್‌ಎಸ್‌) ಮೂಲಕ ಸರ್ಕಾರವು ಕಾರ್ಯತಂತ್ರದ ಆದ್ಯತಾ ಅನುದಾನದಡಿ ಅರೆಕಾಲಿಕ ವಿದ್ಯಾರ್ಥಿಗಳಿಗಾಗಿ ವಿಶೇಷ ಅನುದಾನವನ್ನೂ ಒದಗಿಸುತ್ತದೆ. ಒಎಫ್‌ಎಸ್‌ನ ಮಾನ್ಯತೆ ಪಡೆದ ಪಟ್ಟಿಯಲ್ಲಿರುವ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಈ ಹಣ ನೀಡಲಾಗುತ್ತದೆ. ಅರೆಕಾಲಿಕ ಕೋರ್ಸ್‌ಗಳನ್ನು ನಡೆಸಲು ಅವುಗಳಿಗೆ ನೆರವು ನೀಡುವುದು ಇದರ ಉದ್ದೇಶ. ಅರೆಕಾಲಿಕ ವಿದ್ಯಾರ್ಥಿಗಳಿಗೂ ಕೈಗೆಟುಕುವ ದರದಲ್ಲಿ ಶಿಕ್ಷಣ ಒದಗಿಸಲು, ಪ್ರತಿ ವಿದ್ಯಾರ್ಥಿಗೆ ನೀಡುವ ಅನುದಾನದ ಪ್ರಮಾಣವನ್ನು ಉಳಿಸಿಕೊಳ್ಳುವಂತೆ ಶಿಕ್ಷಣ ಸಚಿವರು ಒಎಫ್‌ಎಸ್‌ಗೆ ಸೂಚಿಸಿದ್ದಾರೆ. ವಿಶೇಷವಾಗಿ ವಯಸ್ಕ ಕಲಿಕಾರ್ಥಿಗಳು ಹಾಗೂ ಶಿಕ್ಷಣದಲ್ಲಿ ಕಡಿಮೆ ಪ್ರಾತಿನಿಧ್ಯ ಹೊಂದಿರುವ ಗುಂಪುಗಳಿಗೆ ಇಂತಹ ಹೊಂದಿಕೊಳ್ಳುವ ಶಿಕ್ಷಣ ಮುಖ್ಯವೆಂದು ಸರ್ಕಾರ ಗುರುತಿಸಿದೆ. ಅಂದರೆ, ಅರೆಕಾಲಿಕ ಮತ್ತು ಹೊಂದಿಕೊಳ್ಳುವ ಕಲಿಕೆ ಕೇವಲ ಹೆಚ್ಚುವರಿ ಆಯ್ಕೆಯಲ್ಲ; ಅದಕ್ಕೆ ಮೀಸಲಾದ ಹಣಕಾಸು ನೆರವಿನೊಂದಿಗೆ ಸರ್ಕಾರದ ಕಾರ್ಯತಂತ್ರದ ಆದ್ಯತೆಯಾಗಿದೆ.

ವಿವೇಕ್ ತೋಂಟದಾರ್ಯ ವಿಶ್ಲೇಷಣೆ: ತೈಲದ ಮೇಲಿನ ಅವಲಂಬನೆ ಕಳಚಿದರೆ ಭಾರತಕ್ಕೇನು ಲಾಭ?

ಸಂಜೆ ಶಿಕ್ಷಣಕ್ಕೆ ಬ್ರಿಟನ್‌ ವಿಶ್ವವಿದ್ಯಾಲಯಗಳ ಒತ್ತು

ಬ್ರಿಟನ್‌ನ ವಿಶ್ವವಿದ್ಯಾಲಯಗಳು ಈ ನೀತಿಗೆ ಅನುಗುಣವಾಗಿ ಹಲವು ಹೊಸ ಪ್ರಯೋಗಗಳನ್ನು ಕೈಗೊಂಡಿವೆ. ಐವತ್ತು ವರ್ಷಗಳಿಗೂ ಹಿಂದೆ ಸ್ಥಾಪನೆಯಾದ ಓಪನ್‌ ಯುನಿವರ್ಸಿಟಿ, ಅರೆಕಾಲಿಕ, ದೂರಶಿಕ್ಷಣ ಮತ್ತು ಹೊಂದಿಕೊಳ್ಳುವ ಕಲಿಕೆಯನ್ನೇ ತನ್ನ ಮುಖ್ಯ ಕಾರ್ಯವಿಧಾನವನ್ನಾಗಿ ರೂಪಿಸಿಕೊಂಡಿದೆ. ಇಲ್ಲಿ ಎಂಜಿನಿಯರಿಂಗ್‌ ಪದವಿಯನ್ನು ಅರೆಕಾಲಿಕವಾಗಿ ಆರು ವರ್ಷಗಳಲ್ಲಿ ಪೂರ್ಣಗೊಳಿಸಬಹುದು. ವಿದ್ಯಾರ್ಥಿಗಳು ವಾರಕ್ಕೆ 16ರಿಂದ 18 ಗಂಟೆಗಳ ಕಾಲ ಅಧ್ಯಯನ ಮಾಡುತ್ತಾರೆ. ಸಾಂಪ್ರದಾಯಿಕ ಕಾಲೇಜುಗಳಿಗೆ ಹಾಜರಾಗಲು ಸಾಧ್ಯವಾಗದವರಿಗೂ ಹೊಂದಿಕೊಳ್ಳುವ ಕಲಿಕಾ ವಿಧಾನಗಳ ಮೂಲಕ ಉನ್ನತ ಗುಣಮಟ್ಟದ ತಾಂತ್ರಿಕ ಶಿಕ್ಷಣ ಒದಗಿಸಬಹುದು ಎಂಬುದಕ್ಕೆ ಈ ಸಂಸ್ಥೆ ಉದಾಹರಣೆಯಾಗಿದೆ.

ಲಂಡನ್‌ ವಿಶ್ವವಿದ್ಯಾಲಯದ ಬಿರ್ಕ್‌ಬೆಕ್‌ ಸಂಸ್ಥೆಯು ಸುಮಾರು ಎರಡು ಶತಮಾನಗಳಿಂದ ಸಂಜೆ ವೇಳೆಯ ಉನ್ನತ ಶಿಕ್ಷಣಕ್ಕೆ ಒತ್ತು ನೀಡಿದೆ. ಇಲ್ಲಿ ಬಹುತೇಕ ಕೋರ್ಸ್‌ಗಳು ಸಂಜೆ ನಡೆಯುತ್ತವೆ. ಸಂಜೆ 6ರಿಂದ ರಾತ್ರಿ 9ರವರೆಗೆ ತರಗತಿಗಳನ್ನು ನಡೆಸಲಾಗುತ್ತದೆ. ಇತರ ವಿಶ್ವವಿದ್ಯಾಲಯಗಳಲ್ಲಿ ಹಗಲಿನ ವೇಳೆಯಲ್ಲಿ ಓದುವ ವಿದ್ಯಾರ್ಥಿಗಳು ಪಡೆಯುವ ಅವಧಿಯಲ್ಲೇ ಪದವಿ ಪೂರ್ಣಗೊಳಿಸಲು ಅನುಕೂಲವಾಗುವಂತೆ ಕೋರ್ಸ್‌ಗಳನ್ನು ರೂಪಿಸಲಾಗಿದೆ. 200ಕ್ಕೂ ಹೆಚ್ಚು ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳನ್ನು ನೀಡುವ ಬಿರ್ಕ್‌ಬೆಕ್‌, ಉದ್ಯೋಗ ತ್ಯಜಿಸದೆ ಗುಣಮಟ್ಟದ ಉನ್ನತ ಶಿಕ್ಷಣ ಪಡೆಯಲು ಬಯಸುವವರಿಗೆ ಅವಕಾಶ ಕಲ್ಪಿಸಿದೆ. ಹೀಗಾಗಿ, ಇದನ್ನು ಲಂಡನ್‌ನ ಸಂಜೆ ವಿಶ್ವವಿದ್ಯಾಲಯ ಎಂದೇ ಪರಿಗಣಿಸಲಾಗುತ್ತದೆ.

ಬ್ರಿಟನ್‌ನ ಇತರ ವಿಶ್ವವಿದ್ಯಾಲಯಗಳೂ ಇದೇ ಮಾದರಿಯನ್ನು ಅನುಸರಿಸಿವೆ. ಲಂಡನ್‌ ಮೆಟ್ರೊಪಾಲಿಟನ್‌ ವಿಶ್ವವಿದ್ಯಾಲಯವು ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಿಗೆ ಹಗಲು, ಸಂಜೆ ಹಾಗೂ ವಾರಾಂತ್ಯದ ತರಗತಿಗಳ ಆಯ್ಕೆಯನ್ನು ಒದಗಿಸುತ್ತದೆ. ಕೆಲಸ ಮತ್ತು ವೈಯಕ್ತಿಕ ಜೀವನದೊಂದಿಗೆ ಶಿಕ್ಷಣವನ್ನು ಸಮತೋಲನಗೊಳಿಸಬೇಕಾದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ವ್ಯವಸ್ಥೆಯನ್ನು ರೂಪಿಸಲಾಗಿದೆ.

ಸ್ವಾನ್ಸೀ ವಿಶ್ವವಿದ್ಯಾಲಯವು ಕ್ಯೂಎ ಹೈಯರ್‌ ಎಜುಕೇಷನ್‌ ಸಹಭಾಗಿತ್ವದಲ್ಲಿ 2025ರ ಸೆಪ್ಟೆಂಬರ್‌ನಿಂದ ಲಂಡನ್‌ನಲ್ಲಿ ಹೊಂದಿಕೊಳ್ಳುವ ಪದವಿ ಕೋರ್ಸ್‌ಗಳನ್ನು ಆರಂಭಿಸಿದೆ. ಸಂಜೆ ಮತ್ತು ವಾರಾಂತ್ಯದ ತರಗತಿಗಳ ಜೊತೆಗೆ ಮಿಶ್ರ ಕಲಿಕಾ ವಿಧಾನವನ್ನು ಬಳಸುವ ಮೂಲಕ ಉದ್ಯೋಗದಲ್ಲಿರುವವರು ಹಾಗೂ ಇತರ ಜವಾಬ್ದಾರಿಗಳನ್ನು ಹೊಂದಿರುವವರಿಗೆ ಅವಕಾಶ ಕಲ್ಪಿಸಿದೆ. ಲಿವರ್‌ಪೂಲ್‌ ಜಾನ್‌ ಮೂರ್ಸ್‌ ವಿಶ್ವವಿದ್ಯಾಲಯವು ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್‌ ಎಂಜಿನಿಯರಿಂಗ್‌ನಲ್ಲಿ ಅರೆಕಾಲಿಕ ಬಿಇ ಪದವಿ ನೀಡುತ್ತದೆ. ಅಲ್ಸ್ಟರ್‌ ವಿಶ್ವವಿದ್ಯಾಲಯವು ಮೆಕ್ಯಾನಿಕಲ್‌ ಮತ್ತು ಮ್ಯಾನುಫ್ಯಾಕ್ಚರಿಂಗ್‌ ಎಂಜಿನಿಯರಿಂಗ್‌ನಲ್ಲಿ ಅರೆಕಾಲಿಕ ಬಿಇ ಕೋರ್ಸ್‌ ಒದಗಿಸುತ್ತದೆ. ಇಂಗ್ಲೆಂಡ್‌ನ ವಿವಿಧ ಉನ್ನತ ಶಿಕ್ಷಣೇತರ ಕಾಲೇಜುಗಳಲ್ಲಿಯೂ ವೆಲ್ಡಿಂಗ್‌, ಕಂಪ್ಯೂಟರ್‌ ನೆರವಿನ ವಿನ್ಯಾಸ ಹಾಗೂ ಸುಧಾರಿತ ಉತ್ಪಾದನೆಯಂತಹ ವಿಷಯಗಳಲ್ಲಿ ಸಂಜೆ 6ರಿಂದ ರಾತ್ರಿ 9ರವರೆಗೆ ಎಂಜಿನಿಯರಿಂಗ್‌ ತರಗತಿಗಳನ್ನು ನಡೆಸಲಾಗುತ್ತದೆ.

ವಿವೇಕ್ ತೋಂಟದಾರ್ಯ ವಿಶ್ಲೇಷಣೆ | ಶೇ 7.8 ಜಿಡಿಪಿ: ಹೊಳೆಯುವ ಸಂಖ್ಯೆಗಳಾಚೆ...

ವಿಶ್ವವಿದ್ಯಾಲಯಗಳ ಆಚೆಗೂ ಬ್ರಿಟನ್‌ ಅರೆಕಾಲಿಕ ತಾಂತ್ರಿಕ ಶಿಕ್ಷಣವನ್ನು ಪದವಿ ಮಟ್ಟದ ಅಪ್ರೆಂಟಿಸ್‌ಶಿಪ್‌ಗಳ ಮೂಲಕ ವಿಸ್ತರಿಸಿದೆ. ಈ ಕಾರ್ಯಕ್ರಮಗಳಲ್ಲಿ ತರಬೇತಿ ಪಡೆಯುವವರು ವೇತನ ಸಹಿತ ಉದ್ಯೋಗದಲ್ಲಿ ಮುಂದುವರಿಯುತ್ತಲೇ ಶಿಕ್ಷಣವನ್ನೂ ಪಡೆಯುತ್ತಾರೆ. ಅನೇಕ ಸಂದರ್ಭಗಳಲ್ಲಿ ವಾರಕ್ಕೆ ಒಂದು ದಿನ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಾರೆ.

ಉದಾಹರಣೆಗೆ, ಚಿಚೆಸ್ಟರ್‌ ವಿಶ್ವವಿದ್ಯಾಲಯವು ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್‌ ತಾಂತ್ರಿಕ ಬೆಂಬಲ ಎಂಜಿನಿಯರಿಂಗ್‌ನಲ್ಲಿ ಪದವಿ ಅಪ್ರೆಂಟಿಸ್‌ಶಿಪ್‌ ನೀಡುತ್ತದೆ. ನಾಲ್ಕು ವರ್ಷಗಳ ಈ ಕಾರ್ಯಕ್ರಮದಲ್ಲಿ ಮಿಶ್ರ ಕಲಿಕಾ ವಿಧಾನವನ್ನು ಬಳಸಲಾಗುತ್ತದೆ. ಓಪನ್‌ ಯುನಿವರ್ಸಿಟಿಯು ಡಿಜಿಟಲ್‌ ಮತ್ತು ತಂತ್ರಜ್ಞಾನ ಪರಿಹಾರಗಳ ವೃತ್ತಿಪರ ಪದವಿ ಅಪ್ರೆಂಟಿಸ್‌ಶಿಪ್‌ ಮೂಲಕ ಶೈಕ್ಷಣಿಕ ಅಧ್ಯಯನ ಮತ್ತು ಪ್ರಾಯೋಗಿಕ ತರಬೇತಿಯನ್ನು ಸಂಯೋಜಿಸುತ್ತದೆ. ವಾರ್ವಿಕ್‌ ವಿಶ್ವವಿದ್ಯಾಲಯವು ವೃತ್ತಿಪರ ಮಾನ್ಯತೆಯ ಅಗತ್ಯಗಳಿಗೆ ಹೊಂದಿಕೆಯಾಗುವ ಅರೆಕಾಲಿಕ ಅಪ್ಲೈಡ್‌ ಪ್ರೊಫೆಷನಲ್‌ ಎಂಜಿನಿಯರಿಂಗ್‌ ಬಿಇ ಕೋರ್ಸ್‌ ನೀಡುತ್ತದೆ. ಉದ್ಯೋಗದಾತರ ಹಣಕಾಸು ನೆರವಿನೊಂದಿಗೆ, ಕೆಲಸದ ಅನುಭವವನ್ನೂ ಒಳಗೊಂಡ ತಾಂತ್ರಿಕ ಶಿಕ್ಷಣವನ್ನು ದೊಡ್ಡ ಪ್ರಮಾಣದಲ್ಲಿ ಜಾರಿಗೊಳಿಸಲು ಸಾಧ್ಯ ಎಂಬುದನ್ನು ಈ ಕಾರ್ಯಕ್ರಮಗಳು ತೋರಿಸಿವೆ.

ಕರ್ನಾಟಕಕ್ಕೆ ಬೇಕು ತನ್ನದೇ ಆದ ಮಾದರಿ

ಬ್ರಿಟನ್‌ನ ಮಾದರಿಯನ್ನು ಯಥಾವತ್ತಾಗಿ ನಕಲು ಮಾಡಬೇಕೆಂಬುದು ಕರ್ನಾಟಕಕ್ಕೆ ಇರುವ ಪಾಠವಲ್ಲ. ಇಲ್ಲಿನ ಶಿಕ್ಷಣ ಸಂಸ್ಥೆಗಳ ಸ್ವರೂಪ, ನಿಯಂತ್ರಣ ವ್ಯವಸ್ಥೆ ಮತ್ತು ಕೈಗಾರಿಕಾ ಪರಿಸರ ವಿಭಿನ್ನವಾಗಿವೆ. ಆದರೆ, ಸಂಜೆ, ವಾರಾಂತ್ಯ ಹಾಗೂ ಅರೆಕಾಲಿಕ ತಾಂತ್ರಿಕ ಶಿಕ್ಷಣದಿಂದ ಶೈಕ್ಷಣಿಕ ಗುಣಮಟ್ಟಕ್ಕೆ ಧಕ್ಕೆಯಾಗುವುದಿಲ್ಲ; ಬದಲಿಗೆ ಹೆಚ್ಚಿನ ಜನರಿಗೆ ಶಿಕ್ಷಣದ ಅವಕಾಶವನ್ನು ವಿಸ್ತರಿಸಬಹುದು ಎಂಬುದನ್ನು ಬ್ರಿಟನ್‌ನ ಹಲವು ದಶಕಗಳ ಅನುಭವ ತೋರಿಸಿದೆ.

ಲೈಫ್‌ಲಾಂಗ್‌ ಲರ್ನಿಂಗ್‌ ಎಂಟೈಟಲ್‌ಮೆಂಟ್‌ ಮತ್ತು ಅರೆಕಾಲಿಕ ವಿದ್ಯಾರ್ಥಿಗಳ ವಿಶೇಷ ಅನುದಾನದಂತಹ ಹಣಕಾಸು ವ್ಯವಸ್ಥೆಗಳ ಮೂಲಕ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಹೊಂದಿಕೊಳ್ಳುವ ಕಲಿಕೆಯನ್ನು ಆರ್ಥಿಕವಾಗಿ ಸಾಧ್ಯವಾಗಿಸಬಹುದು ಎಂಬುದನ್ನೂ ಅಲ್ಲಿನ ಅನುಭವ ಸಾಬೀತುಪಡಿಸಿದೆ. ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ, ಉದ್ಯೋಗಸ್ಥರಿಗೆ ಅನುಕೂಲವಾಗುವಂತೆ ತರಗತಿಗಳ ವೇಳಾಪಟ್ಟಿ ಮತ್ತು ಬೋಧನಾ ವಿಧಾನಗಳನ್ನು ವಿಶ್ವವಿದ್ಯಾಲಯಗಳು ಮರುರೂಪಿಸಬಹುದು. ಉದ್ಯೋಗದಾತರು, ವಿಶ್ವವಿದ್ಯಾಲಯಗಳು ಮತ್ತು ಸರ್ಕಾರ ಒಟ್ಟಾಗಿ ಕಾರ್ಯನಿರ್ವಹಿಸುವ ಮೂಲಕ ಕಲಿಯುತ್ತಲೇ ದುಡಿಯುವ ನುರಿತ ತಂತ್ರಜ್ಞರ ಪಡೆಯನ್ನೂ ರೂಪಿಸಬಹುದು.

ಕರ್ನಾಟಕವು ಈ ತತ್ವಗಳನ್ನು ತನ್ನ ಪರಿಸ್ಥಿತಿಗೆ ತಕ್ಕಂತೆ ಅಳವಡಿಸಿಕೊಳ್ಳಬಹುದು. ಕಡ್ಡಾಯ ನೀತಿಯಡಿ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಒಂದು ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ಒಂದು ಪಾಲಿಟೆಕ್ನಿಕ್‌ ಹಾಗೂ ಪ್ರಮುಖ ಖಾಸಗಿ ಶಿಕ್ಷಣ ಸಂಸ್ಥೆಯು ಉದ್ಯೋಗಸ್ಥ ತಾಂತ್ರಿಕ ಸಿಬ್ಬಂದಿಗಾಗಿ ಕ್ರೆಡಿಟ್‌ ಆಧಾರಿತ ಸಂಜೆ ಮತ್ತು ವಾರಾಂತ್ಯದ ಕೋರ್ಸ್‌ಗಳನ್ನು ನಡೆಸಬೇಕು. ಉದ್ಯೋಗಕ್ಕೆ ಅಡ್ಡಿಯಾಗದಂತೆ ಹಂತ ಹಂತವಾಗಿ ಪದವಿ ಅಥವಾ ಡಿಪ್ಲೊಮಾ ಪಡೆಯಲು ಅನುಕೂಲವಾಗುವಂತೆ ಕ್ರೆಡಿಟ್‌ ಸಂಗ್ರಹ ಮತ್ತು ವರ್ಗಾವಣೆ ವ್ಯವಸ್ಥೆ (ಸಿಎಟಿಎಸ್‌) ಜಾರಿಗೊಳಿಸಬೇಕು.

ಸರ್ಕಾರಿ ಐಟಿಐ ತಂತ್ರಜ್ಞಾನ ಕೇಂದ್ರಗಳಲ್ಲಿಯೂ ಸಿಎನ್‌ಸಿ ಪ್ರೋಗ್ರಾಮಿಂಗ್‌, ಇವಿ ದೋಷ ಪತ್ತೆ ಮತ್ತು ನಿರ್ವಹಣೆ, ಪ್ರಕ್ರಿಯೆ ಸ್ವಯಂಚಾಲನೆ ಹಾಗೂ ಕೈಗಾರಿಕಾ ಇಂಟರ್ನೆಟ್‌ ಆಫ್‌ ಥಿಂಗ್ಸ್‌ (ಐಒಟಿ) ವಿಷಯಗಳಲ್ಲಿ ಅಲ್ಪಾವಧಿಯ ಸಂಜೆ ಪ್ರಮಾಣಪತ್ರ ಕೋರ್ಸ್‌ಗಳನ್ನು ಕಡ್ಡಾಯವಾಗಿ ಆರಂಭಿಸಬೇಕು. ಬ್ರಿಟನ್‌ನ ಅರೆಕಾಲಿಕ ವಿದ್ಯಾರ್ಥಿಗಳ ವಿಶೇಷ ಅನುದಾನದ ಮಾದರಿಯಲ್ಲಿ ರಾಜ್ಯಮಟ್ಟದ ಹೊಂದಿಕೊಳ್ಳುವ ಕಲಿಕಾ ನಿಧಿಯನ್ನು ಸ್ಥಾಪಿಸಬಹುದು. ಕೆಲಸದ ಅವಧಿ ಮುಗಿದ ಬಳಿಕವೂ ಶಿಕ್ಷಣ ಸಂಸ್ಥೆಗಳನ್ನು ತೆರೆದಿಟ್ಟು ಕೋರ್ಸ್‌ಗಳನ್ನು ನಡೆಸುವ ಸಂಸ್ಥೆಗಳಿಗೆ ಈ ನಿಧಿಯಿಂದ ವಿಶೇಷ ಆರ್ಥಿಕ ನೆರವು ನೀಡಬಹುದು.

ವಿವೇಕ್ ತೋಂಟದಾರ್ಯ ಲೇಖನ: ವೆಚ್ಚವೋ, ಹೂಡಿಕೆಯೋ? ಕಲ್ಯಾಣ ಯೋಜನೆಗಳ ಅರ್ಥಶಾಸ್ತ್ರ

ಈ ವ್ಯವಸ್ಥೆಯನ್ನು ಆರ್ಥಿಕವಾಗಿ ಸುಸ್ಥಿರವಾಗಿಸುವುದರ ಜೊತೆಗೆ, ಎಲ್ಲ ವರ್ಗದವರನ್ನೂ ಒಳಗೊಳ್ಳುವಂತೆ ರೂಪಿಸಲು ಎಫ್‌ಕೆಸಿಸಿಐ, ಕಾಸಿಯಾ ಮತ್ತು ಪ್ರಾದೇಶಿಕ ವಾಣಿಜ್ಯ ಮಂಡಳಿಗಳಂತಹ ಕೈಗಾರಿಕಾ ಸಂಘಟನೆಗಳು ಸರ್ಕಾರದೊಂದಿಗೆ ಕೈಜೋಡಿಸಬೇಕು. ಬ್ರಿಟನ್‌ನ ಪದವಿ ಅಪ್ರೆಂಟಿಸ್‌ಶಿಪ್‌ ಮಾದರಿಯಂತೆ, ಉತ್ಪಾದನಾ ಘಟಕಗಳು ತಮ್ಮ ಉದ್ಯೋಗಿಗಳ ಕೌಶಲವರ್ಧನೆಗಾಗಿ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿ ಅಥವಾ ಉದ್ಯೋಗಿಗಳ ತರಬೇತಿ ಬಜೆಟ್‌ನಿಂದ ಜಂಟಿಯಾಗಿ ಶುಲ್ಕ ಭರಿಸಬಹುದು.

ನಿಜವಾದ ಒಳಗೊಳ್ಳುವಿಕೆಯನ್ನು ಸಾಧಿಸಲು ತಾಂತ್ರಿಕ ಸಿಬ್ಬಂದಿ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳ ಪ್ರಾಯೋಗಿಕ ತರಬೇತಿಯಲ್ಲಿ ತಾಂತ್ರಿಕ ಇಂಗ್ಲಿಷ್‌ ಜೊತೆಗೆ ಕನ್ನಡದಲ್ಲಿಯೂ ಬೋಧನಾ ನೆರವು ನೀಡಬೇಕು. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಸ್ಥಳೀಯ ಕಾರ್ಮಿಕರು ಭಾಷೆಯ ಅಡೆತಡೆಯಿಂದಾಗಿ ಉನ್ನತ ತಂತ್ರಜ್ಞಾನ ವಿಷಯಗಳ ಕಲಿಕೆಯಲ್ಲಿ ಹಿಂದುಳಿಯದಂತೆ ಇದು ನೆರವಾಗುತ್ತದೆ.

ಸಾಮಾನ್ಯ ಕೆಲಸದ ಅವಧಿಯ ಬಳಿಕವೂ ಶಿಕ್ಷಣ ಮೂಲಸೌಕರ್ಯವನ್ನು ಬಳಕೆಗೆ ಮುಕ್ತಗೊಳಿಸುವ ಮೂಲಕ ಕರ್ನಾಟಕವು ತನ್ನ ಕಾರ್ಮಿಕರನ್ನು ಹೆಚ್ಚಿನ ಆದಾಯ ಗಳಿಸಬಲ್ಲ, ವಿಶೇಷ ತಾಂತ್ರಿಕ ಕೌಶಲ ಹೊಂದಿರುವ ವೃತ್ತಿಪರರನ್ನಾಗಿ ರೂಪಿಸಬಹುದು. ಈ ನೀತಿಯು ಸಾವಿರಾರು ಕುಟುಂಬಗಳು ಆದಾಯದ ಮಿತಿಯಿಂದ ಹೊರಬರಲು ನೆರವಾಗುವುದಷ್ಟೇ ಅಲ್ಲದೆ, ದೇಶದ ಮುಂದಿನ ಕೈಗಾರಿಕಾ ಬೆಳವಣಿಗೆಯಲ್ಲಿ ಮುಂಚೂಣಿಯಲ್ಲಿರಲು ಕರ್ನಾಟಕದ ಉತ್ಪಾದನಾ ಮತ್ತು ಎಂಜಿನಿಯರಿಂಗ್‌ ಕ್ಷೇತ್ರಗಳಿಗೆ ಅಗತ್ಯವಾದ ಸ್ಥಳೀಯ ನುರಿತ ಮಾನವ ಸಂಪನ್ಮೂಲವನ್ನೂ ಒದಗಿಸುತ್ತದೆ.

ಕರ್ನಾಟಕಕ್ಕೆ ಈ ವ್ಯವಸ್ಥೆಯನ್ನು ಜಾರಿಗೊಳಿಸುವ ಸಾಮರ್ಥ್ಯವಿದೆಯೇ ಎಂಬುದು ಪ್ರಶ್ನೆಯಲ್ಲ. ಇದನ್ನು ಜಾರಿಗೊಳಿಸದೆ ಇರಲು ಸಾಧ್ಯವೇ ಎಂಬುದೇ ಮುಖ್ಯ ಪ್ರಶ್ನೆ. ಸಂಜೆ ವೇಳೆಯಲ್ಲಿ ಬಳಕೆಯಾಗದೆ ಉಳಿಯುವ ಪ್ರತಿಯೊಂದು ಪ್ರಯೋಗಾಲಯವೂ ಕಳೆದುಹೋದ ಅವಕಾಶ. ಕೌಶಲ ಹೆಚ್ಚಿಸಿಕೊಳ್ಳಲು ಅವಕಾಶ ಸಿಗದ ಪ್ರತಿಯೊಬ್ಬ ಕಾರ್ಮಿಕನೂ ಆರ್ಥಿಕವಾಗಿ ಮೇಲೇರಬೇಕಿದ್ದ ಒಂದು ಕುಟುಂಬದ ಅವಕಾಶವನ್ನು ಕಳೆದುಕೊಂಡಂತೆ. ಅಭಿವೃದ್ಧಿಯಿಂದ ಹಿಂದೆ ಉಳಿಯುವ ಪ್ರತಿಯೊಂದು ಜಿಲ್ಲೆಯೂ ಬೆಳವಣಿಗೆಯ ವೇಗವನ್ನು ಕಳೆದುಕೊಂಡಂತೆ.

ಉದ್ಯೋಗಸ್ಥರಿಗೆ ಹೊಂದಿಕೊಳ್ಳುವ ತಾಂತ್ರಿಕ ಶಿಕ್ಷಣ ಒದಗಿಸುವುದು ಸರ್ಕಾರದ ನೀತಿ ನಿರ್ಧಾರ ಎಂಬುದನ್ನು ಬ್ರಿಟನ್‌ ತೋರಿಸಿಕೊಟ್ಟಿದೆ. ಕರ್ನಾಟಕವೂ ಈಗ ಅಂತಹ ನಿರ್ಧಾರ ಕೈಗೊಳ್ಳಬೇಕು. ರಾಜ್ಯದ ಕೈಗಾರಿಕಾ ಭವಿಷ್ಯವನ್ನು ಬೆಂಗಳೂರಿನ ಸಭಾಂಗಣಗಳಲ್ಲಿ ಮಾತ್ರ ನಿರ್ಮಿಸಲು ಸಾಧ್ಯವಿಲ್ಲ. ಪೀಣ್ಯ, ಬೆಳಗಾವಿ, ಬಿಡದಿ, ಹುಬ್ಬಳ್ಳಿ-ಧಾರವಾಡ, ಮೈಸೂರು ಮತ್ತು ಮಂಗಳೂರಿನ ಉತ್ಪಾದನಾ ಘಟಕಗಳಲ್ಲಿಯೂ ಅದನ್ನು ನಿರ್ಮಿಸಬೇಕು. ಮತ್ತೊಂದು ಅವಕಾಶದ ಏಣಿಯನ್ನು ಏರಲು ಅರ್ಹರಾಗಿರುವ ಕಾರ್ಮಿಕರ ಕೈಗಳಿಂದಲೇ ಆ ಭವಿಷ್ಯ ರೂಪುಗೊಳ್ಳಬೇಕು.

ವಿವೇಕ್ ತೋಂಟದಾರ್ಯ ವಿಶ್ಲೇಷಣೆ: ತೈಲದ ಮೇಲಿನ ಅವಲಂಬನೆ ಕಳಚಿದರೆ ಭಾರತಕ್ಕೇನು ಲಾಭ?
Dailyhunt
Disclaimer: This content has not been generated, created or edited by Dailyhunt. Publisher: Prajavani