Dailyhunt Logo
  • Light mode
    Follow system
    Dark mode
    • Play Story
    • App Story
ವಿವೇಕ್ ತೋಂಟದಾರ್ಯ ವಿಶ್ಲೇಷಣೆ: ತೈಲದ ಮೇಲಿನ ಅವಲಂಬನೆ ಕಳಚಿದರೆ ಭಾರತಕ್ಕೇನು ಲಾಭ?

ವಿವೇಕ್ ತೋಂಟದಾರ್ಯ ವಿಶ್ಲೇಷಣೆ: ತೈಲದ ಮೇಲಿನ ಅವಲಂಬನೆ ಕಳಚಿದರೆ ಭಾರತಕ್ಕೇನು ಲಾಭ?

ಭಾರತ ಇಂದು ಎರಡು ದೊಡ್ಡ ಸವಾಲುಗಳನ್ನು ಎದುರಿಸುತ್ತಿದೆ. ಒಂದು; ವಿದೇಶಿ ಕಚ್ಚಾ ತೈಲದ ಮೇಲಿನ ಅತಿಯಾದ ಅವಲಂಬನೆ. ಇದು ನಮ್ಮ ವಿದೇಶಿ ವಿನಿಮಯ ನಿಧಿಯನ್ನು ನಿರಂತರವಾಗಿ ಬಸಿದುಕೊಳ್ಳುತ್ತಿದೆ. ಎರಡನೆಯದು ಪೆಟ್ರೋಲ್ ಮತ್ತು ಡೀಸೆಲ್ ಸುಡುವ ವಾಹನಗಳಿಂದ ಹೊರಹೊಮ್ಮುವ ಹಸಿರು ಮನೆ ಅನಿಲಗಳು.

ಇವುಗಳು ನಮ್ಮ ನಗರಗಳನ್ನ ನಾಶಪಡಿಸುತಿವೆ.

ಈ ಎರಡೂ ಸಮಸ್ಯೆಗಳಿಗೆ ಒಂದೇ ಪರಿಹಾರವಿದೆ: ರಸ್ತೆ ಸಾರಿಗೆಯನ್ನು ತೈಲದಿಂದ ವಿದ್ಯುತ್ ಶಕ್ತಿಗೆ ಪರಿವರ್ತಿಸುವುದು.

ವಿಶ್ಲೇಷಣೆ | ಇ20 ಪೆಟ್ರೋಲ್: ಭಾರತದ ಹಸಿರು ಗುರಿ ಮತ್ತು ಗ್ರಾಹಕರ ಆತಂಕದ ನಡುವೆ…

ಭಾರತದ ತೈಲ ಬಿಕ್ಕಟ್ಟಿನ ನೈಜ ಚಿತ್ರಣ

ಭಾರತದ ಕಚ್ಚಾ ತೈಲ ಆಮದು ಅವಲಂಬನೆಯು ಈಗ ಶೇ 90 ಮೀರಿದೆ. 1998-99ರಲ್ಲಿ ಇದು ಶೇ 55 ಆಗಿತ್ತು. ದೇಶೀಯ ಉತ್ಪಾದನೆಯು 2025-26ರಲ್ಲಿ 25.98 ಮಿಲಿಯನ್ ಮೆಟ್ರಿಕ್ ಟನ್‌ಗಳಿಗೆ ಇಳಿದಿದೆ. ಇದು ನಮ್ಮ ಅಗತ್ಯದ ಕೇವಲ ಶೇ 10 ರಷ್ಟನ್ನು ಮಾತ್ರ ಪೂರೈಸುತ್ತದೆ. ಇದರರ್ಥ, ನಮ್ಮ ಪ್ರತಿ ಲೀಟರ್ ಪೆಟ್ರೋಲ್‌ನಲ್ಲಿ ಶೇ 90 ವಿದೇಶಿ ತೈಲವೇ ಆಗಿದೆ.

ಈ ಅವಲಂಬನೆಯು ನಮ್ಮನ್ನು ಎಷ್ಟು ದುರ್ಬಲಗೊಳಿಸಿದೆ ಎಂಬುದಕ್ಕೆ ಇತ್ತೀಚಿನ ಉದಾಹರಣೆಯನ್ನು ನೋಡಿ. 2026-27ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ, ಭಾರತದ ಕಚ್ಚಾ ತೈಲ ಆಮದು ವೆಚ್ಚವು ಶೇ 26 ರಷ್ಟು ಏರಿಕೆಯಾಗಿ 39 ಶತಕೋಟಿ ಡಾಲರ್‌ನಿಂದ 49 ಶತಕೋಟಿ ಡಾಲರ್‌ಗೆ ತಲುಪಿತು. ಕೆಲವು ವರದಿಗಳ ಪ್ರಕಾರ ಇದು 49.8 ಶತಕೋಟಿ ಡಾಲರ್‌ಗೂ ಏರಿದೆ. ಆಮದು ಪ್ರಮಾಣವು ಶೇ 18 ರಷ್ಟು ಕಡಿಮೆಯಾಗಿದ್ದರೂ ಇದು ಸಂಭವಿಸಿದೆ. ಗಲ್ಫ್ ಸಂಘರ್ಷ, ಹೊರ್ಮುಜ್ ಜಲಸಂಧಿಯ ಅಡಚಣೆಗಳು, ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಪೂರೈಕೆ ವ್ಯತ್ಯಯದಿಂದ ಉಂಟಾದ ಬೆಲೆ ಏರಿಕೆಯ ಪರಿಣಾಮ ಇದು. ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 94 ಡಾಲರ್ ರಷ್ಟಕ್ಕೆ ಏರಿತು.

ನಾವು ಸಮಸ್ಯೆಯನ್ನು ಸರಳ ಭಾಷೆಯಲ್ಲಿ ವಿವರಿಸಬಹುದು. ಭಾರತವು ವಾರ್ಷಿಕವಾಗಿ ಸುಮಾರು 1.8 ರಿಂದ 2 ಶತಕೋಟಿ ಬ್ಯಾರೆಲ್‌ಗಳಷ್ಟು ಕಚ್ಚಾ ತೈಲವನ್ನು ಖರೀದಿಸುತ್ತದೆ. ಪ್ರತಿ ಬ್ಯಾರೆಲ್ ಬೆಲೆಯಲ್ಲಿ 1 ಡಾಲರ್ ರಷ್ಟು ಏರಿಕೆಯಾದರೂ, ವಾರ್ಷಿಕ ಆಮದು ವೆಚ್ಚವು ಸುಮಾರು 2 ಶತಕೋಟಿ ಡಾಲರ್‌ನಷ್ಟು ಹೆಚ್ಚಾಗುತ್ತದೆ. ನಮ್ಮ ಕಾರ್ಯತಂತ್ರದ ಪೆಟ್ರೋಲಿಯಂ ಮೀಸಲು ಕೇವಲ 5.33 ಮಿಲಿಯನ್ ಮೆಟ್ರಿಕ್ ಟನ್‌ (ಸುಮಾರು 39 ಮಿಲಿಯನ್ ಬ್ಯಾರೆಲ್) ಮಾತ್ರವಾಗಿದೆ. ಇದು ಕೇವಲ 9-10 ದಿನಗಳ ಆಮದಿಗೆ ಸಮನಾಗಿದೆ. ಅಂತರರಾಷ್ಟ್ರೀಯ ಶಿಫಾರಸು 90 ದಿನಗಳ ಮೀಸಲು ಆಗಿದ್ದು, ನಾವು ಅದಕ್ಕಿಂತ ತೀರಾ ಕಡಿಮೆಯಲ್ಲಿದ್ದೇವೆ.

ಅಖಿಲೇಶ್ ಚಿಪ್ಪಳಿ ಅವರ ವಿಶ್ಲೇಷಣೆ: 'ನಿವ್ವಳ ಶೂನ್ಯ' ಸಾಧಿಸಬಹುದೆ?

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ


ವಿವೇಕ್ ತೋಂಟದಾರ್ಯ ವಿಶ್ಲೇಷಣೆ: ತೈಲದ ಮೇಲಿನ ಅವಲಂಬನೆ ಕಳಚಿದರೆ ಭಾರತಕ್ಕೇನು ಲಾಭ?

ಒಂದು ಸಾಲಿನಲ್ಲಿಭಾರತದ ಆರ್ಥಿಕತೆ ಮತ್ತು ಪರಿಸರದ ಹಿತದೃಷ್ಟಿಯಿಂದ ಪೆಟ್ರೋಲ್-ಡೀಸೆಲ್ ವಾಹನಗಳಿಂದ ವಿದ್ಯುತ್ ವಾಹನಗಳಿಗೆ ಬದಲಾಗುವುದು ಅತ್ಯಗತ್ಯವಾಗಿದೆ.

ಪ್ರಮುಖ ಪ್ರಶ್ನೋತ್ತರ


ತೈಲ ಅವಲಂಬನೆಯಿಂದ ಭಾರತಕ್ಕೆ ಆಗುವ ಆರ್ಥಿಕ ನಷ್ಟವೇನು?

ಭಾರತವು ತನ್ನ ಕಚ್ಚಾ ತೈಲ ಅಗತ್ಯದ ಶೇ 90ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆ ಏರಿಕೆ ನಮ್ಮ ವಿದೇಶಿ ವಿನಿಮಯ ನಿಧಿಯನ್ನು ಬರಿದು ಮಾಡುತ್ತಿದೆ.


ವಾಹನಗಳಿಂದ ಉಂಟಾಗುವ ಮಾಲಿನ್ಯವನ್ನು ತಡೆಯುವುದು ಹೇಗೆ?

ಸಾರಿಗೆ ವಲಯವು ಒಟ್ಟು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯಲ್ಲಿ ಶೇ 12ರಷ್ಟು ಪಾಲನ್ನು ಹೊಂದಿದೆ. ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ವಿದ್ಯುತ್ ಚಾಲಿತ ವಾಹನಗಳಾಗಿ ಪರಿವರ್ತಿಸುವುದರಿಂದ ಇದನ್ನು ಗಣನೀಯವಾಗಿ ಕಡಿಮೆ ಮಾಡಬಹುದು.


ವಿದ್ಯುತ್ ವಾಹನಗಳಿಗೆ ಬದಲಾಗುವುದು ಚಾಲಕರಿಗೆ ಲಾಭದಾಯಕವೇ?

ಹೌದು, ಇಂಧನ ವೆಚ್ಚದಲ್ಲಿನ ಉಳಿತಾಯದಿಂದ ವಾಹನದ ಮಾಸಿಕ ಸಾಲದ ಕಂತನ್ನು ಪಾವತಿಸಿದ ಬಳಿಕವೂ ಚಾಲಕರಿಗೆ ಹೆಚ್ಚುವರಿ ಹಣ ಉಳಿಯುತ್ತದೆ, ಇದು ದೀರ್ಘಾವಧಿಯಲ್ಲಿ ಆರ್ಥಿಕ ಲಾಭ ತರುತ್ತದೆ.


ಸರ್ಕಾರವು ಈ ಬದಲಾವಣೆಗಾಗಿ ಯಾವ ಕ್ರಮಗಳನ್ನು ಕೈಗೊಳ್ಳಬೇಕು?

ಸರ್ಕಾರವು ವಾಹನಗಳ ಗುಜರಿ ನೀತಿಯನ್ನು ಕಠಿಣಗೊಳಿಸುವುದು, ಸಾರ್ವಜನಿಕ ಸಾರಿಗೆ ಬಸ್‌ಗಳನ್ನು ವಿದ್ಯುತ್ ಚಾಲಿತವಾಗಿ ಪರಿವರ್ತಿಸುವುದು ಮತ್ತು ವಿದ್ಯುತ್ ವಾಹನಗಳ ಉತ್ಪಾದನೆಗೆ ಉತ್ತೇಜನ ನೀಡುವ ನೀತಿಗಳನ್ನು ರೂಪಿಸಬೇಕು.


ಅಂತರರಾಷ್ಟ್ರೀಯ ಮಟ್ಟದಲ್ಲಿ ಇತರ ದೇಶಗಳು ಏನು ಮಾಡುತ್ತಿವೆ?

ನಾರ್ವೇ, ಐಸ್ಲ್ಯಾಂಡ್, ಮತ್ತು ಯುಕೆ ಸೇರಿದಂತೆ ಹಲವು ದೇಶಗಳು ನಿರ್ದಿಷ್ಟ ವರ್ಷದೊಳಗೆ ಹೊಸ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟವನ್ನು ನಿಷೇಧಿಸುವ ಸ್ಪಷ್ಟ ಗುರಿಗಳನ್ನು ಹೊಂದಿವೆ.

ಪ್ರಮುಖ ಅಂಕಿಅಂಶಗಳು

ಶೇ 90ಕಚ್ಚಾ ತೈಲ ಆಮದು ಅವಲಂಬನೆ23 ಕೋಟಿಒಟ್ಟು ಪೆಟ್ರೋಲ್-ಡೀಸೆಲ್ ವಾಹನಗಳು$24.60 ಶತಕೋಟಿವಾರ್ಷಿಕ ವಿದೇಶಿ ವಿನಿಮಯ ಉಳಿತಾಯಶೇ 63ವಿದ್ಯುತ್ ವಾಹನಗಳ ಮಾರಾಟ ಏರಿಕೆ

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಹಸಿರುಮನೆ ಅನಿಲ ಹೊರಸೂಸುವಿಕೆ: ಒಂದು ಗಂಭೀರ ಸವಾಲು

ಭಾರತವು ವಿಶ್ವದ ಮೂರನೇ ಅತಿದೊಡ್ಡ ಪರಿಸರ ಮಾಲಿನ್ಯ ಮಾಡುವ ಹಾಗೂ ವಿಷಕಾರಿ ಅನಿಲ ಹೊರಸೂಸುವ ದೇಶವಾಗಿದೆ. 2025-26ರಲ್ಲಿ, ಭಾರತದ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯು 2.8 ಬಿಲಿಯನ್ ಟನ್‌ಗೆ ತಲುಪುವ ನಿರೀಕ್ಷೆಯಿದೆ. ಇದರಲ್ಲಿ ಸಾರಿಗೆ ವಲಯದ ಪಾಲು ಸುಮಾರು ಶೇ 12. ಅದು ವೇಗವಾಗಿ ಬೆಳೆಯುತ್ತಿದೆ ಕೂಡ. ರಸ್ತೆ ಸಾರಿಗೆಯು ಈ ಹೊರಸೂಸುವಿಕೆಯ ಬಹುಪಾಲು ಭಾಗಕ್ಕೆ ಕಾರಣವಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಸುಟ್ಟಾಗ, ಸುಮಾರು 2.3 ಕೆಜಿ ಇಂಗಾಲದ ಡೈಆಕ್ಸೈಡ್ ಹೊರಹೊಮ್ಮುತ್ತದೆ. ಪ್ರತಿ ಲೀಟರ್ ಡೀಸೆಲ್ ಸುಟ್ಟಾಗ, ಸುಮಾರು 2.7 ಕೆಜಿ ಇಂಗಾಲದ ಡೈಆಕ್ಸೈಡ್ ಹೊರಹೊಮ್ಮುತ್ತದೆ.

ಭಾರತದಲ್ಲಿ ಸುಮಾರು 23 ಕೋಟಿ (230 ಮಿಲಿಯನ್) ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿವೆ. ಪ್ರತಿ ವಾಹನವು ವಾರ್ಷಿಕವಾಗಿ ಸರಾಸರಿ 2.5 ಟನ್ ಇಂಗಾಲದ ಡೈಆಕ್ಸೈಡ್ ಅನ್ನು ಹೊರಸೂಸುತ್ತದೆ ಎಂದು ಅಂದಾಜಿಸಿದರೆ, ಒಟ್ಟು ಹೊರಸೂಸುವಿಕೆಯು ಸುಮಾರು 57.5 ಕೋಟಿ ಟನ್‌ಗಳು (575 ಮಿಲಿಯನ್ ಟನ್‌ಗಳು) ಆಗುತ್ತದೆ. ಇದು ಜಾಗತಿಕ ತಾಪಮಾನ ಏರಿಕೆಗೆ ನೇರ ಕೊಡುಗೆ ನೀಡುತ್ತಿದೆ. ಈ ವಾಹನಗಳನ್ನು ವಿದ್ಯುತ್ ಶಕ್ತಿಗೆ ಪರಿವರ್ತಿಸುವುದರಿಂದ ಈ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು.

ವಿಶ್ಲೇಷಣೆ: 'ಸತ್ಯದ ವ್ಯಾಪಾರಿ'ಗಳ ಸಂತೆ

ಸಮಸ್ಯೆಗೆ ಕಾರಣವೇನು?

ಭಾರತದ ಸಾರಿಗೆ ವ್ಯವಸ್ಥೆಯಲ್ಲಿ ಇಂಧನ ಬಳಕೆಯಲ್ಲಿ ರಸ್ತೆ ಸಾರಿಗೆಯ ಪಾಲು ಶೇ 80 ಕ್ಕಿಂತ ಹೆಚ್ಚಿದೆ. ಇದೇ ನಮ್ಮ ವಿದೇಶಿ ವಿನಿಮಯ ನಷ್ಟಕ್ಕೆ ಮತ್ತು ವಿಷ ಅನಿಲ ಹೊರಸೂಸುವಿಕೆಗೆ ಪ್ರಮುಖ ಕಾರಣವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಅನ್ನು ದೇಶೀಯ ವಿದ್ಯುತ್ ಶಕ್ತಿಯೊಂದಿಗೆ ಬದಲಾಯಿಸಲು, ಸರ್ಕಾರವು ಎರಡು ಕಾರ್ಯತಂತ್ರಗಳನ್ನು ಕಾರ್ಯಗತಗೊಳಿಸಬೇಕು:

1. ಹೆಚ್ಚಿನ ಮೈಲೇಜ್ ವಾಹನಗಳಿಗೆ ತಕ್ಷಣದ ವಿದ್ಯುತ್ ಮರು-ಅಳವಡಿಕೆ (retrofitting): ದೆಹಲಿ ಸರ್ಕಾರವು ಈಗಾಗಲೇ ₹ 50,000 ರಷ್ಟು ಮರು-ಅಳವಡಿಕೆ ಅನುದಾನವನ್ನು ಘೋಷಿಸಿದೆ.ಇದನ್ನ ರಾಷ್ಟ್ರಾದ್ಯಂತ ಅನ್ವಯಗೊಳಿಸುವುದು ಬಹಳ ಮುಖ್ಯ.

2. ಹೊಸ ಪೆಟ್ರೋಲ್/ಡೀಸೆಲ್ ವಾಹನಗಳ ಉತ್ಪಾದನೆಗೆ 2033ರೊಳಗೆ ಕಠಿಣ ಶಾಸನಬದ್ಧ ಅಂತಿಮ ದಿನಾಂಕವಾಗಿ ಘೋಷಿಸುವುದು.

₹22,006 ಕೋಟಿ ಸಾಲ, ₹6.5 ಕೋಟಿಗೆ ಇತ್ಯರ್ಥ: ಸುಭಾಷ್ ಚಂದ್ರ ಪ್ರಕರಣದ ಅಸಲಿ ಲೆಕ್ಕ

ಅಂತರರಾಷ್ಟ್ರೀಯ ಅನುಭವದಿಂದ ಏನು ಕಲಿಯಬಹುದು?

ಹಲವು ದೇಶಗಳು ಹೊಸ ಆಂತರಿಕ ದಹನ ಎಂಜಿನ್‌ (ಐಸಿಇ) ವಾಹನಗಳನ್ನು ಹಂತಹಂತವಾಗಿ ನಿಷೇಧಿಸುವುದಾಗಿ ಹೇಳಿದೆ. ನಾರ್ವೇ 2025 ರೊಳಗೆ ಶೇ 100 ಶೂನ್ಯ-ಹೊರಸೂಸುವಿಕೆ ಮಾರಾಟದ ಗುರಿಯೊಂದಿಗೆ ಮುನ್ನಡೆಯುತ್ತಿದೆ. ಐಸ್ಲ್ಯಾಂಡ್, ಸ್ವೀಡನ್ ಮತ್ತು ನೆದರ್ಲ್ಯಾಂಡ್ 2030 ಗುರಿಯನ್ನು ಹಾಕಿಕೊಂಡಿವೆ. ಕೆನಡಾ ಮತ್ತು ಫ್ರಾನ್ಸ್ 2040 ಅನ್ನು ಗುರಿಯಾಗಿ ಇಟ್ಟುಕೊಂಡಿವೆ.

ಪ್ರಮುಖ ಮಾರುಕಟ್ಟೆಗಳು ಪ್ರಾಯೋಗಿಕ ನಿಲುವು ತಳೆಯುತ್ತಿವೆ. ಜಪಾನ್‌ನ 2035ರ ಗುರಿಯಲ್ಲೂ ಹೈಬ್ರಿಡ್ ವಾಹನಗಳಿಗೆ ಅವಕಾಶ ನೀಡಲಾಗಿದೆ. ಐರೋಪ್ಯ ಒಕ್ಕೂಟವೂ 2035ರ ನಿಯಮವನ್ನು ಸಡಿಲಿಸುವ ಮೂಲಕ ಹೊಸ ಕಾರುಗಳ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯನ್ನು ಶೇ 90ರಷ್ಟು ಕಡಿತಗೊಳಿಸುವ ಗುರಿ ಹೊಂದಿದೆ. ಉಳಿದ ಶೇ 10ರಷ್ಟು ಮಾರಾಟದಲ್ಲಿ ಹೈಬ್ರಿಡ್ ವಾಹನಗಳಿಗೆ ಅವಕಾಶ ನೀಡಲಾಗಿದೆ.

ಯುನೈಟೆಡ್ ಕಿಂಗ್ಡಮ್ 2030ರೊಳಗೆ ಹೊಸ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳನ್ನು ಹಂತಹಂತವಾಗಿ ನಿಷೇಧಿಸಲು ಕಠಿಣ ಶೂನ್ಯ ಹೊರಸೂಸುವ ವಾಹನ (ಜೆಡ್‌ಇವಿ) ನಿಯಮವನ್ನು ಸ್ಥಾಪಿಸಿದೆ. ಈ ಎರಡು-ಹಂತದ ಯೋಜನೆ ದೊಡ್ಡ ಮಾರುಕಟ್ಟೆಗಳು ಮಧ್ಯಂತರ ಮೈಲಿಗಲ್ಲುಗಳನ್ನು ಹೇಗೆ ಬಳಸಬಹುದು ಎಂದು ತೋರಿಸುತ್ತದೆ. ಭಾರತವು ಈ ನಿಲುವನ್ನು ತಾಳಬೇಕು. ಮಹತ್ವಾಕಾಂಕ್ಷೀಯ ಗುರಿಗಳನ್ನು ವಾಸ್ತವಿಕ ವಿನಾಯಿತಿಗಳೊಂದಿಗೆ ಸಮತೋಲನಗೊಳಿಸಬೇಕು.

ಬಿಸಿಯಾಗುತ್ತಿರುವ ಹಿಮಾಲಯವೇ ನೇಪಾಳದ ಪರ್ವತಗಳಲ್ಲಿ ಸ್ಫೋಟಗೊಂಡ ಪ್ರವಾಹಕ್ಕೆ ಕಾರಣ?

ಇಂಧನ ಉಳಿತಾಯವೇ ಸಾಲದ ಪಾವತಿ

ಸರ್ಕಾರವು ವಾರ್ಷಿಕ ಶೇ 7.5ರ ಬಡ್ಡಿದರದಲ್ಲಿ 40 ತಿಂಗಳ ಅವಧಿಯ ಹಣಕಾಸು ಚೌಕಟ್ಟನ್ನು ಜಾರಿಗೊಳಿಸಬೇಕು. ನಗರದ ಆಟೊರಿಕ್ಷಾ ಚಾಲಕನ ಉದಾಹರಣೆಯನ್ನು ತೆಗೆದುಕೊಳ್ಳಿ. ಅವರಿಗೆ ₹1.5 ಲಕ್ಷ ಸಾಲದ ಅಗತ್ಯವಿದೆ. ಇದಕ್ಕೆ ಮಾಸಿಕ ಕಂತು ₹4,250 ಆಗುತ್ತದೆ. ಆದರೆ ಇಂಧನ ಉಳಿತಾಯದಿಂದ ತಿಂಗಳಿಗೆ ₹5,500 ಉಳಿಯುತ್ತದೆ. ಅಂದರೆ, ಸಾಲದ ಮಾಸಿಕ ಕಂತು ಪಾವತಿಸಿದ ಬಳಿಕವೂ ₹1,250 ಹೆಚ್ಚುವರಿ ಹಣ ಉಳಿಯುತ್ತದೆ. ಹೀಗಾಗಿ, ಸಾಲ ತೀರಿಸುವ ಅವಧಿಯಲ್ಲಿಯೇ ವಾಹನ ಬದಲಾವಣೆಯಿಂದ ಅವರಿಗೆ ನೇರ ಆರ್ಥಿಕ ಲಾಭ ದೊರೆಯುತ್ತದೆ. ಇದರ ಜೊತೆಗೆ, ಪ್ರತಿ ವಾಹನದಿಂದ ಸುಮಾರು 4 ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ತಪ್ಪಿಸಬಹುದು.

ವಾಣಿಜ್ಯ ಟ್ಯಾಕ್ಸಿ ವಾಹನಗಳ ನಿರ್ವಾಹಕರ ಉದಾಹರಣೆ ನೋಡುವುದಾದರೆ, ಅವರಿಗೆ ₹4.5 ಲಕ್ಷ ಸಾಲದ ಅಗತ್ಯವಿದೆ. ಇದಕ್ಕೆ ಮಾಸಿಕ ಕಂತು ₹12,750 ಆಗುತ್ತದೆ. ಆದರೆ ಇಂಧನ ಉಳಿತಾಯದಿಂದ ತಿಂಗಳಿಗೆ ₹16,000 ಉಳಿಯುತ್ತದೆ. ಅಂದರೆ, ಮಾಸಿಕ ಕಂತು ಪಾವತಿಸಿದ ಬಳಿಕವೂ ₹3,250 ಹೆಚ್ಚುವರಿ ಹಣ ಉಳಿಯುತ್ತದೆ. ಹೀಗಾಗಿ, ವಾಹನ ಬದಲಾವಣೆಯಿಂದ ಸಾಲದ ಅವಧಿಯಲ್ಲಿಯೇ ಅವರಿಗೆ ನೇರ ಆರ್ಥಿಕ ಲಾಭ ದೊರೆಯುತ್ತದೆ.

ಓಲಾ, ಉಬರ್, ನಮ್ಮ ಯಾತ್ರಿ ಮುಂತಾದ ಡಿಜಿಟಲ್ ಪಾವತಿ ವ್ಯವಸ್ಥೆಗಳಿಂದ ಸಾಲದ ಮಾಸಿಕ ಕಂತುಗಳನ್ನು ಸ್ವಯಂಚಾಲಿತವಾಗಿ ಕಡಿತಗೊಳಿಸುವ ವ್ಯವಸ್ಥೆ ಮಾಡಿದರೆ, ಸಾಲ ಮರುಪಾವತಿಯಲ್ಲಿ ವಿಫಲವಾಗುವ ಪ್ರಮಾಣವನ್ನು ಶೇ. 0.5ಕ್ಕಿಂತ ಕಡಿಮೆ ಮಟ್ಟದಲ್ಲಿ ಇರಿಸಬಹುದು.

ಈರುಳ್ಳಿ ಬೆಲೆ ಏರಿಕೆಯ ಒಳನೋಟ: ಉತ್ಪಾದನೆ, ಪೂರೈಕೆ ಮತ್ತು ಮಾರುಕಟ್ಟೆಯ ಲೆಕ್ಕ

ಸಾರ್ವಜನಿಕ ಸಾರಿಗೆಯನ್ನು ಲಾಭಕ್ಕೆ ತರುವುದು

ರಾಜ್ಯ ಸಾರಿಗೆ ಸಂಸ್ಥೆಗಳು ತಮ್ಮ ಕೇಂದ್ರ ಕಾರ್ಯಾಗಾರಗಳನ್ನು ವಿದ್ಯುತ್‌ ವಾಹನಗಳಾಗಿ ಮರುರೂಪಿಸುವ ಘಟಕಗಳಾಗಿ ಪರಿವರ್ತಿಸಬೇಕು. ಈಗಿರುವ 12 ಮೀಟರ್ ಉದ್ದದ ಸಾರ್ವಜನಿಕ ಬಸ್‌ಗಳನ್ನು ಸುಮಾರು ₹65 ಲಕ್ಷ ವೆಚ್ಚದಲ್ಲಿ ವಿದ್ಯುತ್‌ ಚಾಲಿತವಾಗುವಂತೆ ಮರುರೂಪಿಸಬಹುದು. ಇದು ಹೊಸ ವಿದ್ಯುತ್‌ ಬಸ್‌ ಖರೀದಿಸುವ ವೆಚ್ಚದ ಅರ್ಧದಷ್ಟಾಗುತ್ತದೆ.

ಡೀಸೆಲ್‌ ಬಸ್‌ಗೆ ಹೋಲಿಸಿದರೆ ವಿದ್ಯುತ್‌ ಬಸ್‌ನಿಂದ ತಿಂಗಳಿಗೆ ಸುಮಾರು ₹1.80 ಲಕ್ಷ ಇಂಧನ ವೆಚ್ಚ ಉಳಿತಾಯವಾಗುತ್ತದೆ. ಇದು ಮಾಸಿಕ ಸಾಲದ ಕಂತಾದ ₹1,69,996ಕ್ಕಿಂತಲೂ ಹೆಚ್ಚಾಗಿದೆ. ಅಂದರೆ, ಸಾಲದ ಕಂತು ಪಾವತಿಸಿದ ನಂತರವೂ ತಿಂಗಳಿಗೆ ಸುಮಾರು ₹10,004 ಉಳಿತಾಯ ಉಳಿಯುತ್ತದೆ.

40 ತಿಂಗಳ ಸಾಲದ ಅವಧಿ ಮುಗಿದ ಬಳಿಕ, 41ನೇ ತಿಂಗಳಿಂದ ತಿಂಗಳಿಗೆ ₹1.80 ಲಕ್ಷದ ಉಳಿತಾಯವೇ ಸಾರಿಗೆ ಸಂಸ್ಥೆಯ ಹೆಚ್ಚುವರಿ ಆದಾಯವಾಗಿ ಸಾರ್ವಜನಿಕ ಖಜಾನೆಗೆ ಸೇರುತ್ತದೆ. ಇದರ ಜೊತೆಗೆ, ಪ್ರತಿಯೊಂದು ಬಸ್‌ ವರ್ಷಕ್ಕೆ ಸುಮಾರು 100 ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ತಪ್ಪಿಸಬಹುದು.

ಉದ್ಯಾನ ಭೂಮಿಯ ಶೇ 5ರಷ್ಟು ಬಳಕೆಗೆ ಅವಕಾಶ: ಸುರಂಗ ರಸ್ತೆ ಯೋಜನೆಗೆ ದಾರಿ?

ಕಡ್ಡಾಯ ವಾಹನ ಬಳಕೆ ಅವಧಿ

ಹಳೆಯ ಮತ್ತು ಹೆಚ್ಚು ಇಂಧನ ಬಳಸುವ ಎಂಜಿನ್‌ಗಳ ವಾಹನಗಳು ರಸ್ತೆಗಳಲ್ಲಿ ಮುಂದುವರಿಯದಂತೆ ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ಹಂತವಾರು ಗುಜರಿ ನಿಯಮಗಳು ಅಗತ್ಯ.

ವಾಣಿಜ್ಯ ಸರಕು ಸಾಗಣೆ ವಾಹನಗಳು ಮತ್ತು ಸಾರ್ವಜನಿಕ ಬಸ್‌ಗಳಿಗೆ ಗರಿಷ್ಠ 10 ವರ್ಷ, ವಾಣಿಜ್ಯ ಟ್ಯಾಕ್ಸಿಗಳು ಮತ್ತು ಆಟೊರಿಕ್ಷಾಗಳಿಗೆ 12 ವರ್ಷ, ಖಾಸಗಿ ಕಾರುಗಳು ಮತ್ತು ದ್ವಿಚಕ್ರ ವಾಹನಗಳಿಗೆ 15 ವರ್ಷಗಳ ಗರಿಷ್ಠ ಬಳಕೆ ಅವಧಿಯನ್ನು ನಿಗದಿಪಡಿಸಬಹುದು.

ಈ ಅವಧಿ ಪೂರ್ಣಗೊಂಡ ವಾಹನಗಳನ್ನು ಪ್ರಮಾಣೀಕೃತ ಸ್ವಯಂಚಾಲಿತ ಗುಜರಿ ಕೇಂದ್ರಗಳಿಗೆ ಕಳುಹಿಸಬೇಕು. ಅಲ್ಲಿ ವಾಹನಗಳಿಂದ ಉಕ್ಕು, ರಬ್ಬರ್ ಮತ್ತು ಅಲ್ಯೂಮಿನಿಯಂನಂತಹ ವಸ್ತುಗಳನ್ನು ಮರುಪಡೆಯಬೇಕು. ಈ ಮರುಬಳಕೆ ಮಾಡಬಹುದಾದ ಕಚ್ಚಾ ವಸ್ತುಗಳನ್ನು ಸ್ಥಳೀಯ ವಿದ್ಯುತ್‌ ವಾಹನ ತಯಾರಿಕಾ ಘಟಕಗಳಿಗೆ ಪೂರೈಸುವ ವ್ಯವಸ್ಥೆ ರೂಪಿಸಬಹುದು.

ಹ್ಯಾರಿ-ಮೇಘನ್‌ ಮತ್ತೆ ಬ್ರಿಟನ್‌ಗೆ: ಹಳೆಯ ಬಿರುಕುಗಳ ನಡುವೆ ಹೊಸ ಅಧ್ಯಾಯವೇ?

ಡೀಸೆಲ್ ವಾಹನಗಳ ತಯಾರಿಕೆಗೆ ಅಂತ್ಯ ಮತ್ತು ಇಂಗಾಲದ ದಂಡ

2023 ಜನವರಿ 1ರಿಂದ ಹೊಸ ಪೆಟ್ರೋಲ್ ಅಥವಾ ಡೀಸೆಲ್ ವಾಹನಗಳ ತಯಾರಿಕೆ, ಮಾರಾಟ ಮತ್ತು ನೋಂದಣಿಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಈ ನಿಯಮ ಉಲ್ಲಂಘಿಸುವ ತಯಾರಕರಿಗೆ ಪ್ರತಿ ವಾಹನಕ್ಕೆ ಗರಿಷ್ಠ ₹5 ಲಕ್ಷದವರೆಗೆ ದಂಡ ವಿಧಿಸುವುದರ ಜೊತೆಗೆ, ನಿಯಮ ಉಲ್ಲಂಘನೆ ಗಂಭೀರವಾಗಿದ್ದರೆ ಕಾರ್ಖಾನೆ ಮುಚ್ಚುವ ಕಾನೂನು ಕ್ರಮವನ್ನೂ ಜಾರಿಗೊಳಿಸಬೇಕು.

ವಿದ್ಯುತ್‌ ಜಾಲ ಮತ್ತು ಹಸಿರು ಹೈಡ್ರೋಜನ್ ಮೂಲಸೌಕರ್ಯ

ಈ ಪರಿವರ್ತನೆಗೆ ಅಗತ್ಯವಾದ ವಿದ್ಯುತ್‌ ಪೂರೈಕೆಯನ್ನು ಖಚಿತಪಡಿಸಲು 400 ಗಿಗಾವಾಟ್‌ ಸೌರ ವಿದ್ಯುತ್‌ ಸಾಮರ್ಥ್ಯ ಹಾಗೂ ಸ್ಥಳೀಯವಾಗಿ ಹಸಿರು ಹೈಡ್ರೋಜನ್‌ ಉತ್ಪಾದಿಸುವ ಘಟಕಗಳನ್ನು ಅಭಿವೃದ್ಧಿಪಡಿಸುವುದನ್ನು ಕಡ್ಡಾಯಗೊಳಿಸಬೇಕು.

ಶೇ 5 ಜಿಎಸ್‌ಟಿ

ಸ್ಥಳೀಯವಾಗಿ ತಯಾರಿಸಲಾದ ವಿದ್ಯುತ್‌ ವಾಹನಗಳು ಮತ್ತು ಅವುಗಳ ವಿದ್ಯುತ್‌ ಘಟಕಗಳ ಮೇಲೆ ಶೇ 5ರ ಜಿಎಸ್‌ಟಿ ಮುಂದುವರಿಸಬೇಕು. ಆದರೆ, ಈ ತೆರಿಗೆ ಪ್ರಯೋಜನ ಪಡೆಯಲು ಉತ್ಪನ್ನಗಳಲ್ಲಿ ಕನಿಷ್ಠ ಶೇ 60ರಷ್ಟು ದೇಶೀಯ ಮೌಲ್ಯವರ್ಧನೆ ಕಡ್ಡಾಯವಾಗಿರಬೇಕು. ಇದರಿಂದ ದೇಶೀಯ ಉತ್ಪಾದನೆಗೆ ಉತ್ತೇಜನ ನೀಡುವುದರ ಜೊತೆಗೆ, ಮೊದಲ ವರ್ಷದಲ್ಲೇ ಸುಮಾರು 135 ಕೋಟಿ ಡಾಲರ್‌ (ಅಂದಾಜು ₹11,250 ಕೋಟಿ) ನಿವ್ವಳ ವಾರ್ಷಿಕ ಹೆಚ್ಚುವರಿ ಆದಾಯ ಸೃಷ್ಟಿಯಾಗಲಿದೆ.

ದಲಿತ ಸಮುದಾಯದ ಬಸವಂತಪ್ಪಗೆ ಮುಜರಾಯಿ ಖಾತೆ: ದೇವಸ್ಥಾನ ಆಡಳಿತದಲ್ಲಿ ಹೊಸ ಹೆಜ್ಜೆ

ವಿದೇಶಿ ತೈಲ ಅವಲಂಬನೆಯ ಅಂತ್ಯ, ಹಸಿರು ಭವಿಷ್ಯದ ಆರಂಭ

ಈ ತೈಲ ಮುಕ್ತ ಮಾದರಿಯು ಭಾರತಕ್ಕೆ ಎರಡು ಪ್ರಮುಖ ಲಾಭಗಳನ್ನು ನೀಡುತ್ತದೆ. ಮೊದಲನೆಯದಾಗಿ, ವಿದೇಶಿ ಕಚ್ಚಾ ತೈಲ ಆಮದನ್ನು ಕಡಿಮೆ ಮಾಡುವುದರಿಂದ ವಾರ್ಷಿಕ $24.60 ಶತಕೋಟಿ (ಸುಮಾರು ₹2 ಲಕ್ಷ ಕೋಟಿ) ವಿದೇಶಿ ವಿನಿಮಯ ಉಳಿತಾಯವಾಗುತ್ತದೆ. ಇದು ನಮ್ಮ ರೂಪಾಯಿಯನ್ನು ಬಲಪಡಿಸುತ್ತದೆ ಮತ್ತು ದೇಶೀಯ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹಣವನ್ನು ಉಳಿಸುತ್ತದೆ. ಎರಡನೆಯದಾಗಿ, 23 ಕೋಟಿ ವಾಹನಗಳನ್ನು ವಿದ್ಯುತ್ ಶಕ್ತಿಗೆ ಪರಿವರ್ತಿಸುವುದರಿಂದ ವಾರ್ಷಿಕ 57.5 ಕೋಟಿ ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡಬಹುದು. ಇದು ನಮ್ಮ ನಗರಗಳ ಗಾಳಿಯನ್ನು ಶುದ್ಧಗೊಳಿಸುತ್ತದೆ. ಜಾಗತಿಕ ತಾಪಮಾನ ಏರಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಇಂದು ಭಾರತ ವಿದ್ಯುತ್‌ ವಾಹನಗಳ ಕ್ರಾಂತಿಯ ನಿರ್ಣಾಯಕ ಘಟ್ಟದಲ್ಲಿದೆ. 2026ರ ಜೂನ್‌ನಲ್ಲಿ ದೇಶದಲ್ಲಿ ವಿದ್ಯುತ್‌ ವಾಹನಗಳ ಮಾರಾಟ ಶೇ 63ರಷ್ಟು ಏರಿಕೆಯಾಗಿ 3.06 ಲಕ್ಷ ಘಟಕಗಳಿಗೆ ತಲುಪಿದೆ. ಒಟ್ಟಾರೆ ವಾಹನ ಮಾರಾಟದಲ್ಲಿ ವಿದ್ಯುತ್‌ ವಾಹನಗಳ ಪಾಲು ಇದೇ ಮೊದಲ ಬಾರಿಗೆ ಶೇ 12ರ ಗಡಿ ದಾಟಿದೆ. ಸೂಕ್ತ ನೀತಿ ಬೆಂಬಲ ದೊರೆತರೆ, ಈ ಬೆಳವಣಿಗೆಯ ವೇಗವನ್ನು ಇನ್ನಷ್ಟು ಹೆಚ್ಚಿಸಬಹುದು.

ದಶಕಗಳಿಂದ ವಿದೇಶಿ ತೈಲಕ್ಕಾಗಿ ದೇಶದ ಸಂಪತ್ತಿನ ದೊಡ್ಡ ಭಾಗ ಹೊರಹರಿಯುವುದನ್ನು ಅನಿವಾರ್ಯ ವೆಚ್ಚವೆಂದು ನಾವು ಪರಿಗಣಿಸಿಕೊಂಡಿದ್ದೇವೆ. ಆದರೆ, ಇಂಧನ ಉಳಿತಾಯವನ್ನು ದೇಶೀಯ ಸಂಪತ್ತಾಗಿ ಪರಿವರ್ತಿಸುವ ಮತ್ತು ಅದೇ ವೇಳೆ ಪರಿಸರವನ್ನು ಸ್ವಚ್ಛಗೊಳಿಸುವ ಸ್ವಯಂ-ನಿಧಿಯ ಆರ್ಥಿಕ ವ್ಯವಸ್ಥೆಯನ್ನು ನಿರ್ಮಿಸಲು ಸಾಧ್ಯವಾದರೆ, ಭಾರತವು ಇಂಧನ ಸ್ವಾವಲಂಬನೆಯತ್ತ ಸಾಗುವುದರ ಜೊತೆಗೆ ಹಸಿರು ಭವಿಷ್ಯವನ್ನೂ ಕಟ್ಟಿಕೊಳ್ಳಬಹುದು.

ತೈಲದ ಮೇಲಿನ ಜಾಗತಿಕ ಅವಲಂಬನೆಯ ಯುಗ ಶಾಶ್ವತವಲ್ಲ. ಪ್ರತಿಯೊಂದು ವಿದ್ಯುತ್‌ ಚಾಲಿತ ವಾಹನದೊಂದಿಗೆ ಆ ಅವಲಂಬನೆಯನ್ನು ಕಡಿಮೆ ಮಾಡುತ್ತಾ ಹೋಗಬಹುದು. ಅದರ ಲಾಭ ಕೇವಲ ಆರ್ಥಿಕತೆಯದ್ದಾಗಿರುವುದಿಲ್ಲ; ನಮ್ಮ ಮುಂದಿನ ಪೀಳಿಗೆಗೆ ಶುದ್ಧ ಗಾಳಿ ಮತ್ತು ಸ್ವಚ್ಛ ಪರಿಸರವನ್ನೂ ಉಳಿಸಿಕೊಡಬಹುದು.

ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಹೊಸತನದ ಕೊರತೆ: ಹಳೆಯ ವಿಚಾರಗಳಿಗೆ ಹೊಸ ರೂಪ
Dailyhunt
Disclaimer: This content has not been generated, created or edited by Dailyhunt. Publisher: Prajavani