Dailyhunt Logo
  • Light mode
    Follow system
    Dark mode
    • Play Story
    • App Story
ಅನ್ನದ ಬಟ್ಟಲು | ಬರದ ಭೀತಿ ಬಿಡಿ, ನೇರಳೆ ಹಣ್ಣಿನ ಮೌಲ್ಯವರ್ಧನೆಯತ್ತ ಗಮನವಿಡಿ

ಅನ್ನದ ಬಟ್ಟಲು | ಬರದ ಭೀತಿ ಬಿಡಿ, ನೇರಳೆ ಹಣ್ಣಿನ ಮೌಲ್ಯವರ್ಧನೆಯತ್ತ ಗಮನವಿಡಿ

'ನೇರಳೆ‌ ಹಣ್ಣು ಹೆಚ್ಚಾದರೆ, ಬರ ಬರುತ್ತದೆ'‌ ಎಂಬ ವಾಟ್ಸ್ಯಾಪ್‌ ಅಂತೆ-ಕತೆಗಳಿಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು, ಮರದಿಂದ ಉದುರಿ ಮಣ್ಣಾಗುವ ಹಣ್ಣನ್ನು ಮೌಲ್ಯವರ್ಧಿಸುವ ಕುರಿತು ಚಿಂತಿಸಬೇಕಾದ ಕಾಲವಿದು. ಔಷಧೀಯ ಗುಣಗಳ ಆಗರವಾಗಿರುವ ನೇರಳೆಯನ್ನು ವಿಶಿಷ್ಟ ಉತ್ಪನ್ನಗಳನ್ನಾಗಿ ಪರಿವರ್ತಿಸಿ, ವರ್ಷಪೂರ್ತಿ ಆದಾಯ ತರುವ ಮೂಲವನ್ನಾಗಿಸುವತ್ತ ನಾವೀಗ ಗಮನ ಹರಿಸಬೇಕಿದೆ.

'ಈ ವರ್ಷ ನೇರಳೆ ಹಣ್ಣು ಮರಗಳಲ್ಲಿ ಯಥೇಚ್ಛವಾಗಿ ಬಿಟ್ಟಿದ್ದು, ನೆಲಕ್ಕೆ ಸುರಿಯುತ್ತಿದೆ. ನೇರಳೆ ಹಣ್ಣು ರಾಶಿ ರಾಶಿಯಾಗಿ ಬಿದ್ದ ವರ್ಷ, ಬರಗಾಲ ಕಟ್ಟಿಟ್ಟ ಬುತ್ತಿ ಎಂದು ನಮ್ಮ ಅಜ್ಜಿಯಂದಿರು ಹೇಳುತ್ತಿದ್ದರು…' ಇಂತಹದ್ದೊಂದು ಸಂದೇಶ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ನೆಟ್ಟಿಗರಿಂದ ಇದಕ್ಕೆ ಭಾರಿ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ. 'ಅಜ್ಜಿಯ ಪಾರಂಪರಿಕ ಜ್ಞಾನ'ವನ್ನು ಶ್ಲಾಘಿಸುವ ಭರದಲ್ಲಿ, ನೇರಳೆ ಹಣ್ಣನ್ನು ಸವಿಯುವುದಕ್ಕಿಂತ ವೇಗವಾಗಿ ಈ ಸಂದೇಶವನ್ನು ಫಾರ್ವರ್ಡ್‌ ಮಾಡಲಾಗುತ್ತಿದೆ.

ಅನ್ನದ ಬಟ್ಟಲು: ಉಣ್ಣುವ ಅನ್ನವೇ ವಿಷವಾಗುತ್ತಿರುವಾಗ…ಅನ್ನದ ಬಟ್ಟಲು: ಸಮೃದ್ಧ ಹುಣಸೆ ಇಳುವರಿಗೆ ನೀರು-ಗೊಬ್ಬರವೇ ಜೀವಾಳ

ಆದರೆ, ಜಾಗತಿಕ ತಾಪಮಾನ ಏರಿಕೆಯ ಈ ಕಾಲಘಟ್ಟದಲ್ಲಿ ಹವಾಮಾನ ವೈಪರೀತ್ಯಗಳಿಗೂ ಮರದ ಮೇಲಿನ ಹಣ್ಣಿಗೂ ತಳಕುಹಾಕಿ ಆತಂಕಪಡುವ ಬದಲು, ನಾವು ವಾಸ್ತವದತ್ತ ಮುಖ ಮಾಡಬೇಕಿದೆ. ಪ್ರಕೃತಿಯ ಕೊಡುಗೆಯಾಗಿ ಹೇರಳವಾಗಿ ದೊರೆಯುತ್ತಿರುವ ಹಣ್ಣುಗಳನ್ನು ಮೌಲ್ಯವರ್ಧಿಸುವುದು ಹೇಗೆ? ಬೇಗನೆ ಹಾಳಾಗುವ ಈ ಹಣ್ಣನ್ನು ದೀರ್ಘಕಾಲದ ಬಳಕೆಗೆ ಯೋಗ್ಯವಾಗುವಂತೆ ಸಂರಕ್ಷಿಸುವುದು ಹೇಗೆ? ಅದರಿಂದ ಲಾಭದಾಯಕ ಉತ್ಪನ್ನಗಳನ್ನು ತಯಾರಿಸಿ ಆದಾಯದ ಮೂಲವಾಗಿ ಪರಿವರ್ತಿಸುವುದು ಹೇಗೆ? ಈ ನಿಟ್ಟಿನಲ್ಲಿ ಗಂಭೀರ ಯೋಜನೆ ರೂಪಿಸುವ ಅಗತ್ಯವಿದೆ.

ನೇರಳೆ ಹಣ್ಣಿನ ಫೋಮ್

ಮೌಲ್ಯವರ್ಧನೆಯತ್ತ ಹೆಜ್ಜೆ ‌

ಕರ್ನಾಟಕದಲ್ಲಿ ನೇರಳೆ ಹಣ್ಣಿನ ಕೃಷಿ ಎಷ್ಟು ಎಕರೆಯಲ್ಲಿದೆ? ಎಷ್ಟು ಹಣ್ಣು ಉತ್ಪಾದನೆಯಾಗುತ್ತಿದೆ? ಎಷ್ಟು ನೆಲಕ್ಕೆ ಬಿದ್ದು ಹಾಳಾಗುತ್ತಿದೆ? ಇಂಥ ಯಾವ ಮಾಹಿತಿಗಳು ಸದ್ಯಕ್ಕೆ ಲಭ್ಯವಿಲ್ಲ. ಆದರೆ, ನೇರಳೆ ಗಿಡ ನೆಡುವವರ ಸಂಖ್ಯೆ ಅಧಿಕವಾಗಿದೆ. ಅದರಲ್ಲೂ, 'ನೇರಳೆ ಮಧುಮೇಹಕ್ಕೆ ಒಳ್ಳೆಯದಂತೆ' ಎನ್ನುತ್ತಾ ಈ ಹಣ್ಣನ್ನು ತಿನ್ನುವವರ ಸಂಖ್ಯೆ ಹೆಚ್ಚಾದಂತೆ, ಬದುವಿನ ಮೇಲಿದ್ದ ನೇರಳೆ ಗಿಡ ಈಗ ಅರಣ್ಯ ಕೃಷಿ, ಮರ ಆಧಾರಿತ ಕೃಷಿಯಲ್ಲಿ ಅಂತರ ಬೆಳೆಯಾಗಿದೆ. ಇನ್ನು ನಾಲ್ಕೈದು ವರ್ಷಗಳಲ್ಲಿ ಈ ಮರಗಳು ಬಿಡುವ ಹಣ್ಣನ್ನು ಹೇಗೆ ಮಾರ್ಕೆಟ್ ಮಾಡಬೇಕೆಂಬ 'ನೀಲ ನಕ್ಷೆ' ಯಾರಲ್ಲೂ ಇದ್ದಂತೆ ಕಾಣಲಿಲ್ಲ.. ಇರಲಿ, ಅದನ್ನು ಆಮೇಲೆ ಯೋಚಿಸೋಣ.

ಅನ್ನದ ಬಟ್ಟಲು: ದೇವೇಂದ್ರರ 'ದೇಸಿ ಭತ್ತದ ತಳಿ' ಲೋಕಅನ್ನದ ಬಟ್ಟಲು: ಅಜೋಲಾ, ಭತ್ತದ ಗದ್ದೆಗಳ ಕವಚ

ಈಗಿರುವ '8-10 ವರ್ಷ ವಯಸ್ಸಿನ ನೇರಳೆ ಮರ 75 ಕೆಜಿವರೆಗೂ ಹಣ್ಣು ಕೊಡುತ್ತದೆ. ಇದರಲ್ಲಿ ಬಳಕೆಯಾಗುವುದಕ್ಕಿಂತ ನೆಲಕ್ಕೆ ಬಿದ್ದು ವ್ಯರ್ಥವಾಗುವುದೇ ಹೆಚ್ಚು. ಹೀಗೆ ವರ್ಷ ವರ್ಷ ಟನ್‌ಗಟ್ಟಲೆ ಹಣ್ಣು ಮಣ್ಣು ಪಾಲಾಗುತ್ತದೆ. ಇದನ್ನು ಯಾರೂ ಲೆಕ್ಕವಿಟ್ಟಿಲ್ಲ' ಎನ್ನುತ್ತಾರೆ ತೋವಿನಕೆರೆಯ ಕೃಷಿಕ ಪದ್ಮರಾಜು. ಅಷ್ಟೇ ಅಲ್ಲ, ಕರ್ನಾಟಕದಲ್ಲಿ ನೇರಳೆ ಹಣ್ಣಿನ ಮೌಲ್ಯವರ್ಧನೆಗೆ ಸಂಬಂಧಿಸಿದಂತೆ ನಿರೀಕ್ಷಿತ ಮಟ್ಟದಲ್ಲಿ ಕೆಲಸಗಳೂ ಆಗಿಲ್ಲ. ಇದೊಂದು ವಿಪರ್ಯಾಸ. ಆದಾಗ್ಯೂ, ತೋಟಗಾರಿಕೆ ವಿಶ್ವವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರಗಳ ಕೊಯ್ಲೋತ್ತರ ತಂತ್ರಜ್ಞಾನ ವಿಭಾಗಗಳು ಆಶಾಭಾವ ಮೂಡಿಸುವಂತಹ ಕೆಲವು ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸುವ ಪ್ರಯತ್ನ ಮಾಡಿವೆ.

ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ (ಐಐಎಚ್‌ಆರ್‌) ವಿಜ್ಞಾನಿಗಳು ನೇರಳೆ ಹಣ್ಣಿನಿಂದ ಸಿದ್ಧ ಪಾನೀಯ (ರೆಡಿ ಟು ಸರ್ವ್), ಫ್ರೂಟ್ ಬಾರ್, ತಿರುಳಿನ (ಪಲ್ಪ್) ಪುಡಿ ಹಾಗೂ ಬೀಜದ ಪುಡಿಯನ್ನು ತಯಾರಿಸಿದ್ದಾರೆ. ಹಣ್ಣಿನಿಂದ ತಿರುಳು ತೆಗೆದು, ಅದನ್ನು ದೀರ್ಘಕಾಲ ಬಳಸುವಂತಹ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿವೆ.

ನೇರಳೆ ಹಣ್ಣಿನ ಚಾಕೋಲೇಟ್‌

'ಐಐಎಚ್‌ಆರ್‌ನ ಬೆಸ್ಟ್ ಹಾರ್ಟಿ ವಿಭಾಗದ ಇನ್‌ಕ್ಯುಬೇಷನ್ ಕೇಂದ್ರದಲ್ಲಿ ನೇರಳೆ ಹಣ್ಣಿನಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಿ, ಮಾರಾಟ ಮಾಡಲಾಗುತ್ತಿದೆ. ಈ ಉತ್ಪನ್ನಗಳಿಗೆ ಗ್ರಾಹಕರಿಂದ ಉತ್ತಮ ಬೇಡಿಕೆಯೂ ವ್ಯಕ್ತವಾಗಿದೆ. ಸದ್ಯ ಮಾರುಕಟ್ಟೆ ಸಮೀಕ್ಷೆ ನಡೆಯುತ್ತಿದ್ದು, ಆನಂತರ ಆಸಕ್ತರಿಗೆ ತಂತ್ರಜ್ಞಾನ ವರ್ಗಾವಣೆ ಮತ್ತು ಮೌಲ್ಯವರ್ಧನೆ ಕುರಿತು ತರಬೇತಿ ನೀಡುವ ಯೋಜನೆಯಿದೆ' ಎನ್ನುತ್ತಾರೆ ಐಐಎಚ್‌ಆರ್‌ನ ಕೊಯ್ಲೋತ್ತರ ತಂತ್ರಜ್ಞಾನ ವಿಭಾಗದ ವಿಜ್ಞಾನಿ ಪುಷ್ಪ ಚೇತನ್‌ ಕುಮಾರ್.

ಇತ್ತ, ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ಬೆಂಗಳೂರಿನ ತೋಟಗಾರಿಕೆ ಕಾಲೇಜಿನ ಕೊಯ್ಲೋತ್ತರ ನಿರ್ವಹಣಾ ವಿಭಾಗ ಕೂಡ ನೇರಳೆ ಹಣ್ಣಿನಿಂದ ಜ್ಯೂಸ್, ಜಾಮೂನ್ ಬಾರ್‌, ಜಾಮೂನ್ ಚಾಕೊಲೆಟ್‌, ಬೀಜದ ಪುಡಿ ಹಾಗೂ ಪ್ರೊಟೀನ್ ಪೌಡರ್ ಬಳಸಿ 'ಚ್ಯೂಯಿಂಗ್ ಚಾಕೊಲೇಟ್' ತಯಾರಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. 'ಫೋಮ್ ಮ್ಯಾಟ್ ಡ್ರೈಯಿಂಗ್' (Foam Mat Drying) ತಂತ್ರಜ್ಞಾನದ ಮೂಲಕ ಹಣ್ಣಿನಿಂದ ಪೌಷ್ಟಿಕಾಂಶಯುಕ್ತ ಪುಡಿಯನ್ನು ಸಿದ್ಧಪಡಿಸಿದೆ.

ಅನ್ನದ ಬಟ್ಟಲು: ಮಳೆ ಕೊರತೆಯ ಹುಲಿಕೆರೆಯಲ್ಲಿ 'ಹಣ್ಣಿನ ತೋಟ' ಅರಳಿದ್ದು ಹೇಗೆ?

'ಚಾಕೊಲೇಟ್ ತಯಾರಿಕೆಯಲ್ಲಿ ಕೊಕೊ ಪೌಡರ್‌ಗೆ ಪರ್ಯಾಯವಾಗಿ ನೇರಳೆ ಹಣ್ಣಿನ ಪುಡಿಯನ್ನು ಬಳಸಿದ್ದೇವೆ. ಯೋಗರ್ಟ್, ಲಸ್ಸಿಯಂತಹ ಖಾದ್ಯಗಳಿಗೆ ಇದನ್ನು ನೇರಳೆ ಪುಡಿಯನ್ನು ಮಿಶ್ರಮಾಡಬಹುದು" ಎಂದು ವಿವರಿಸಿದರು ಈ ಮೌಲ್ಯವರ್ಧನಾ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ತೋಟಗಾರಿಕಾ ಕಾಲೇಜಿನ ಸಹ ಪ್ರಾಧ್ಯಾಪಕ ಜಿ.ಜೆ. ಸುರೇಶ್.

ನೇರಳೆಯ ಮೌಲ್ಯವರ್ಧಿತ ಉತ್ಪನ್ನಗಳ ಕುರಿತ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು, ಆಸಕ್ತರಿಗೆ ತರಬೇತಿ ನೀಡುವುದಕ್ಕೆ ಹಾಗೂ ತಂತ್ರಜ್ಞಾನದ ನೆರವು ನೀಡಲು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸಿದ್ಧವಿದೆ. ಇದಕ್ಕೆ ಒಂದಷ್ಟು ಶಿಷ್ಟಾಚಾರಗಳೂ ಇವೆ. ಹೆಚ್ಚಿನ ಮಾಹಿತಿಗೆ ಡಾ. ಮೋಹನ್ ಕುಮಾರ್ ಪಟೇಲ್ (97904 64058) ಅವರನ್ನು ಸಂಪರ್ಕಿಸ ಬಹುದು ಎಂದು ವಿವಿಯ ಸಂಶೋಧನೆ ಅಭಿವೃದ್ಧಿ ವಿಭಾಗದ ನಿರ್ದೇಶಕ ಬಿ. ಫಕ್ರುದ್ದೀನ್ ಮಾಹಿತಿ ನೀಡಿದರು.

ನೇರಳೆ ಹಣ್ಣಿನ ತಿರುಳಿನ ಜ್ಯೂಸ್

ಮಾದರಿಯಾದ 'ಟ್ರೈಬಲ್ ವೇದ'

‌ನೇರಳೆ ಹಣ್ಣಿನ ಮೌಲ್ಯವರ್ಧನೆಗೆ ರಾಜಸ್ಥಾನದ ಉದಯಪುರ ಮೂಲದ ಜೋವಾಕಿ ಅಗ್ರಿಫುಡ್‌ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅತ್ಯುತ್ತಮ ಉದಾಹರಣೆ. ಈ ಸಂಸ್ಥೆ 'ಟ್ರೈಬಲ್‌ ವೇದ' (Tribal Veda) ಬ್ರ್ಯಾಂಡ್‌ನಡಿ ನೇರಳೆ ಹಣ್ಣಿನ ಉತ್ಪನ್ನಗಳನ್ನು ತಯಾರಿಸಿ ಯಶಸ್ವಿಯಾಗಿ ಮಾರಾಟ ಮಾಡುತ್ತಿದೆ. ಅರಾವಳಿ ಅರಣ್ಯ ಪ್ರದೇಶದಲ್ಲಿ ಬುಡಕಟ್ಟು ಮಹಿಳೆಯರು ನೈಸರ್ಗಿಕವಾಗಿ ಸಂಗ್ರಹಿಸುವ ನೇರಳೆಯನ್ನು ಬಳಸಿ ಜಾಮೂನ್ ಸೀಡ್ ಪೌಡರ್, ವಿನೆಗರ್, ಸ್ಟ್ರಿಪ್ಸ್‌, ಫ್ಲೇಕ್ಸ್‌, ಕ್ಯೂಬ್ಸ್ ಹಾಗೂ ಜಾಮ್‌ ಸೇರಿದಂತೆ ಹತ್ತು ಬಗೆಯ ವಿಭಿನ್ನ ಉತ್ಪನ್ನಗಳನ್ನು ಈ ಕಂಪನಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

'ನಮ್ಮ ಯಾವುದೇ ಉತ್ಪನ್ನಗಳಲ್ಲಿ ಹೆಚ್ಚುವರಿ ಸಕ್ಕರೆ, ರಾಸಾಯನಿಕ ಸಂರಕ್ಷಕಗಳು (ಪ್ರಿಸರ್ವೇಟಿವ್ಸ್) ಅಥವಾ ಕೃತಕ ಬಣ್ಣಗಳನ್ನು ಬಳಸುವುದಿಲ್ಲ' ಎಂಬುದು ಕಂಪನಿಯ ಸಿಇಒ ರಾಜೇಶ್ ಓಝಾ ಅವರ ಹೆಮ್ಮೆಯ ನುಡಿ. ಇವರು ಪ್ರತಿ ವರ್ಷ ಬೆಂಗಳೂರಿನಲ್ಲಿ ನಡೆಯುವ 'ಅಂತರರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯ ಮೇಳ'ದಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡುತ್ತಾರೆ.

ನೇರಳೆ ಹಣ್ಣಿನ ಪೌಡರ್

ಆರೋಗ್ಯದ ಗಣಿ ನೇರಳೆ

ನೇರಳೆ ಹಣ್ಣು ಕೇವಲ ರುಚಿಯಷ್ಟೇ ಅಲ್ಲ, ಆರೋಗ್ಯದ ದೃಷ್ಟಿಯಿಂದಲೂ ಅತ್ಯಮೂಲ್ಯ. ಇದರಲ್ಲಿ ಯಥೇಚ್ಛವಾಗಿ ಆಂಟಿ-ಆಕ್ಸಿಡೆಂಟ್‌ಗಳು ಮತ್ತು ಪಾಲಿಫೆನಾಲ್‌ಗಳಿದ್ದು, ಇವು ದೇಹದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತವೆ. 100 ಮಿಲಿ ಗ್ರಾಂ ನೇರಳೆ ಹಣ್ಣಿನಲ್ಲಿ 18 ಮಿ.ಗ್ರಾಂ ವಿಟಮಿನ್ ಸಿ, 55 ಮಿ.ಗ್ರಾಂ ಪೊಟ್ಯಾಷಿಯಂ ಹಾಗೂ ಅತ್ಯಗತ್ಯ ಪ್ರಮಾಣದ ಮೆಗ್ನೀಷಿಯಂ ಮತ್ತು ಕಬ್ಬಿಣಾಂಶ ಅಡಗಿದೆ. ಮುಖ್ಯವಾಗಿ ಇದರ ಬೀಜಗಳಲ್ಲಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುವ ಗುಣವಿರುವುದರಿಂದ, ಮಧುಮೇಹಿಗಳಿಗೆ ಇದೊಂದು ಉತ್ತಮ ಆಹಾರ- ಔಷಧ. ಇದೇ ಕಾರಣಕ್ಕೆ, ವಿಜ್ಞಾನಿಗಳು ನೇರಳೆ ಪುಡಿಗೆ ಪ್ರೊಟೀನ್ ಬೆರೆಸಿ ಮತ್ತಷ್ಟು ಪೌಷ್ಟಿಕವಾಗಿಸುವ ಪ್ರಯೋಗ ಗಳನ್ನು ಮಾಡುತ್ತಿದ್ದಾರೆ.

ನೇರಳೆ ಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭ.. ಇಲ್ಲಿದೆ ಮಾಹಿತಿ

ರೈತರ ಮಟ್ಟದಲ್ಲೇ ಆಗಲಿ ಮೌಲ್ಯವರ್ಧನೆ

ನೇರಳೆ ಹಣ್ಣಿನ ಸಂಸ್ಕರಣೆ ಹಾಗೂ ಜ್ಯೂಸ್, ಬೀಜದ ಪುಡಿಯಂತಹ ಉತ್ಪನ್ನಗಳ ತಯಾರಿಕೆಯು ಭವಿಷ್ಯದ ಅತ್ಯುತ್ತಮ ಹಾಗೂ ಲಾಭದಾಯಕ ಉದ್ಯಮವಾಗಬಲ್ಲದು ಎಂಬುದನ್ನು ಆರ್ಥಿಕ ವಿಶ್ಲೇಷಣೆಗಳು ದೃಢಪಡಿಸಿವೆ. ಸದ್ಯ ಸಂಶೋಧನಾ ಕೇಂದ್ರದ ನಾಲ್ಕು ಗೋಡೆಗಳ ನಡುವೆ ಇರುವ ಈ ತಂತ್ರಜ್ಞಾನಗಳು ರೈತರಿಗೆ ಮತ್ತು ಗ್ರಾಮೀಣ ಉದ್ಯಮಿಗಳಿಗೆ ತ್ವರಿತವಾಗಿ ವರ್ಗಾವಣೆಯಾಗಬೇಕಿದೆ.

ಬೆಳೆಗಾರರು ತಾವೇ ಸ್ವತಃ 'ರೈತ ಉತ್ಪಾದಕ ಸಂಸ್ಥೆ' (FPO) ಗಳನ್ನು ರಚಿಸಿಕೊಂಡು, ಅದರ ಮೂಲಕ ಸಣ್ಣ ಯಂತ್ರೋಪಕರಣಗಳನ್ನು ಖರೀದಿಸಿ ಮೌಲ್ಯವರ್ಧನೆಗೆ ಇಳಿಯಬಹುದು. ಸಂಬಂಧಪಟ್ಟ ಇಲಾಖೆಗಳು ಹಾಗೂ ತೋಟಗಾರಿಕೆ ವಿವಿಗಳು ಈ ನಿಟ್ಟಿನಲ್ಲಿ ಆಸಕ್ತರಿಗೆ ಸೂಕ್ತ ತರಬೇತಿ ಮತ್ತು ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಜವಾಬ್ದಾರಿ ಹೊರಬೇಕಿದೆ. ಆಗ ಮಾತ್ರ, ಪ್ರತಿ ವರ್ಷ ಮಣ್ಣಲ್ಲಿ ಮಣ್ಣಾಗುವ ಸಾವಿರಾರು ಟನ್ ನೇರಳೆ ಹಣ್ಣಿಗೆ ನೈಜ 'ಮೌಲ್ಯ' ತಂದುಕೊಡಲು ಸಾಧ್ಯ.

Dailyhunt
Disclaimer: This content has not been generated, created or edited by Dailyhunt. Publisher: Prajavani