'ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ'ದ ಜುಲೈ ತಿಂಗಳ ವರದಿಯಲ್ಲಿ ಭಾರತದ ಪಾಸ್‌ಪೋರ್ಟ್ 80ನೇ ಸ್ಥಾನಕ್ಕೆ ಕುಸಿದಿದೆ. ಮೇ ತಿಂಗಳಲ್ಲಿ 78ನೇ ಸ್ಥಾನದಲ್ಲಿತ್ತು. ಇದೇ ವರ್ಷ ಫೆಬ್ರುವರಿಯಲ್ಲಿ ಭಾರತದ ಪಾಸ್‌ಪೋರ್ಟ್ 75ನೇ ಹಾಗೂ 2025ರಲ್ಲಿ 85ನೇ ಸ್ಥಾನದಲ್ಲಿತ್ತು.
ರ‍್ಯಾಂಕಿಂಗ್ ಕುಸಿದಿದ್ದರೂ ಭಾರತದ ಪಾಸ್‌ಪೋರ್ಟ್ ಹೊಂದಿರುವವರು 56 ದೇಶಗಳಿಗೆ ಮುಂಗಡ ವೀಸಾ ಪಡೆಯದೇ ಪ್ರಯಾಣಿಸಬಹುದು. ಇದರಲ್ಲಿ ವೀಸಾ-ಮುಕ್ತ ಪ್ರವೇಶ, ಆಗಮನದ ವೇಳೆ ವೀಸಾ (Visa on Arrival) ಮತ್ತು ಎಲೆಕ್ಟ್ರಾನಿಕ್ ಟ್ರಾವೆಲ್ ಅಥೋರೈಸೇಶನ್ (ಇಟಿಎ) ಸೌಲಭ್ಯಗಳು ಸೇರಿವೆ.
ಭಾರತದ ಪಾಸ್‌ಪೋರ್ಟ್ ಏಕೆ ಸುದ್ದಿಯಲ್ಲಿದೆ?
ವಿವಿಧ ಕಾರಣಗಳಿಂದ ಭಾರತದ ಪಾಸ್‌ಪೋರ್ಟ್ ಕೆಲ ದಿನಗಳಿಂದ ಸುದ್ದಿಯಲ್ಲಿದೆ. ಪಾಸ್‌ಪೋರ್ಟ್ ಒಂದು ಪ್ರಯಾಣ ದಾಖಲೆಯಾಗಿದ್ದು ನಾಗರಿಕತ್ವದ ಪುರಾವೆಯಲ್ಲ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಇದು ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇದರ ಜೊತೆಗೆ, ಕೇಂದ್ರ ಸರ್ಕಾರ ಜುಲೈ 1ರಿಂದ 14 ವರ್ಷಗಳ ಬಳಿಕ ಪಾಸ್‌ಪೋರ್ಟ್ ಶುಲ್ಕವನ್ನು ಪರಿಷ್ಕರಿಸಿದೆ.
ಈ ಬೆಳವಣಿಗೆಗಳಿಂದ ಭಾರತದ ಪಾಸ್‌ಪೋರ್ಟ್ ಹೊಂದಿರುವವರಿಗೆ ವಿದೇಶ ಪ್ರಯಾಣದ ಅವಕಾಶಗಳ ಬಗ್ಗೆ ಚರ್ಚೆ ಆರಂಭವಾಗಿದೆ.
ಆಳ-ಅಗಲ | ಭಾರತದ ಆಹಾರ ಉತ್ಪನ್ನ: ವಿದೇಶಗಳಲ್ಲೇಕೆ ನಿಷೇಧ?ಈ ರ‍್ಯಾಂಕಿಂಗ್ ಏಕೆ ಮುಖ್ಯ?
ವಿಶ್ವದ 199 ದೇಶಗಳ ಪಾಸ್‌ಪೋರ್ಟ್‌ಗಳಿಗೆ ಸಿಗುವ ಪ್ರಯಾಣ ಸ್ವಾತಂತ್ರ್ಯದ ಆಧಾರದ ಮೇಲೆ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ ಪ್ರಕಟಿಸಲಾಗುತ್ತದೆ. ಇದಕ್ಕಾಗಿ ಅಂತರರಾಷ್ಟ್ರೀಯ ವಾಯುಯಾನ ಸಂಘ (International Air Transport Association-ಐಎಟಿಎ) ದತ್ತಾಂಶವನ್ನು ಬಳಸಲಾಗುತ್ತದೆ.
ಇದರಲ್ಲಿ ಭಾರತದಲ್ಲಿ ಮೊಬಿಲಿಟಿ ಸ್ಕೋರ್ 56. ಅಂದರೆ, ಭಾರತದ ಪಾಸ್‌ಪೋರ್ಟ್ ಹೊಂದಿರುವವರು 56 ದೇಶಗಳಿಗೆ ಮುಂಗಡ ವೀಸಾ ಪಡೆಯದೆ ಅಥವಾ ಸರಳ ಪ್ರವೇಶ ವ್ಯವಸ್ಥೆಯ ಮೂಲಕ ಪ್ರಯಾಣಿಸಬಹುದಾಗಿದೆ.
ಇದರಲ್ಲಿ ವೀಸಾ-ಮುಕ್ತ ಪ್ರವೇಶ (Visa-Free), ಆಗಮನದ ವೇಳೆ ವೀಸಾ (Visa on Arrival), ಎಲೆಕ್ಟ್ರಾನಿಕ್ ಟ್ರಾವೆಲ್ ಅಥೋರೈಸೇಶನ್ (ETA) ಎನ್ನುವ ಈ ಮೂರು ರೀತಿಯ ಪ್ರವೇಶ ವ್ಯವಸ್ಥೆಗಳಿವೆ.
ಆದರೆ ಅಮೆರಿಕ, ಬ್ರಿಟನ್ ಹಾಗೂ ಯುರೋಪಿನ ಬಹುತೇಕ ದೇಶಗಳಿಗೆ ಪ್ರಯಾಣಿಸಲು ಭಾರತೀಯರು ಇನ್ನೂ ಮುಂಗಡ ವೀಸಾ ಪಡೆಯಲೇಬೇಕು.
ರ‍್ಯಾಂಕಿಂಗ್ ಏಕೆ ಬದಲಾಗುತ್ತದೆ?
ಪಾಸ್‌ಪೋರ್ಟ್ ರ‍್ಯಾಂಕಿಂಗ್ ದೇಶಗಳ ವೀಸಾ ನೀತಿಗಳ ಬದಲಾವಣೆಯನ್ನು ಅವಲಂಬಿಸಿರುತ್ತದೆ. ಒಂದು ದೇಶದ ವೀಸಾ-ಮುಕ್ತ ಪ್ರವೇಶದಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ, ಇತರ ರಾಷ್ಟ್ರಗಳು ಹೆಚ್ಚು ವೀಸಾ ಒಪ್ಪಂದಗಳನ್ನು ಮಾಡಿಕೊಂಡರೆ ಅದರ ಸ್ಥಾನ ಕುಸಿಯಬಹುದು.
ತಜ್ಞರ ಪ್ರಕಾರ ಪಾಸ್‌ಪೋರ್ಟ್‌ನ ಬಲವು ರಾಜತಾಂತ್ರಿಕ ಸಂಬಂಧಗಳು, ವೀಸಾ ಒಪ್ಪಂದಗಳು, ಗಡಿ ಭದ್ರತೆ ಹಾಗೂ ಪ್ರಯಾಣ ದಾಖಲೆಗಳ ಮೇಲಿನ ಜಾಗತಿಕ ವಿಶ್ವಾಸದ ಮೇಲೆ ಅವಲಂಬಿತವಾಗಿರುತ್ತದೆ.
ಯುದ್ಧಭೂಮಿಯ ಹೊರಗೆ ಗುಪ್ತ ಸಂಘರ್ಷ: ಟ್ರಂಪ್-ಸಲ್ಮಾನ್ ನಡುವೆ ಬಿರುಕು ಮೂಡಿದ್ದೇಕೆ?14 ವರ್ಷಗಳ ಬಳಿಕ ಪಾಸ್‌ಪೋರ್ಟ್ ಶುಲ್ಕ ಪರಿಷ್ಕರಣೆ
ಜುಲೈ 1ರಿಂದ ಭಾರತದಲ್ಲಿ ಪಾಸ್‌ಪೋರ್ಟ್ ಶುಲ್ಕವನ್ನು ಪರಿಷ್ಕರಿಸಲಾಗಿದೆ.
ಸಾಮಾನ್ಯ 36 ಪುಟಗಳ ಪಾಸ್‌ಪೋರ್ಟ್ ಶುಲ್ಕ ₹1,500ರಿಂದ ₹2,500ಕ್ಕೆ ಏರಿಕೆಯಾಗಿದೆ. ತತ್ಕಾಲ್ ಪಾಸ್‌ಪೋರ್ಟ್, 60 ಪುಟಗಳ ಪಾಸ್‌ಪೋರ್ಟ್ ಹಾಗೂ ಪೊಲೀಸ್ ನಿರಾಕ್ಷೇಪಣ ಪತ್ರ ಶುಲ್ಕಗಳಲ್ಲೂ ಹೆಚ್ಚಳವಾಗಿದೆ.
ಈ ಪರಿಷ್ಕೃತ ಶುಲ್ಕಗಳು ವಿದೇಶದಲ್ಲಿರುವ ಭಾರತೀಯರಿಗೂ ಅನ್ವಯಿಸುತ್ತವೆ. ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ದುಬೈನಲ್ಲಿರುವ ಭಾರತೀಯ ಕಾನ್ಸುಲೇಟ್ ಕೂಡ ಜುಲೈ 1ರಿಂದ ಹೊಸ ಶುಲ್ಕ ಜಾರಿಗೆ ತಂದಿವೆ.
ಅಲ್ಲಿ ಸಾಮಾನ್ಯ 36 ಪುಟಗಳ ಪಾಸ್‌ಪೋರ್ಟ್‌ಗೆ 450 ದಿರ್ಹಂ ಹಾಗೂ ತತ್ಕಾಲ್ ಸೇವೆಗೆ 900 ದಿರ್ಹಂ ನಿಗದಿಯಾಗಿದೆ. ಇದರ ಜೊತೆಗೆ ಸೇವಾ ಪೂರೈಕೆದಾರರ ಶುಲ್ಕ ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ.
ಭಾರತದ ಪ್ರಯಾಣ ಸ್ವಾತಂತ್ರ್ಯಕ್ಕೆ ಸವಾಲು
ಇತ್ತೀಚಿನ ವರ್ಷಗಳಲ್ಲಿ ಭಾರತಕ್ಕೆ ವೀಸಾ-ಮುಕ್ತ ಪ್ರವೇಶ ನೀಡುವ ದೇಶಗಳ ಸಂಖ್ಯೆ ಹೆಚ್ಚಾದರೂ, ಪ್ರಯಾಣ ಸ್ವಾತಂತ್ರ್ಯದ ದೃಷ್ಟಿಯಿಂದ ಭಾರತ ಇನ್ನೂ ಪ್ರಮುಖ ರಾಷ್ಟ್ರಗಳಿಗಿಂತ ಹಿಂದೆ ಇದೆ. ಜಾಗತಿಕ ಪಾಸ್‌ಪೋರ್ಟ್ ಸೂಚ್ಯಂಕ ಪ್ರಕಾರ ಮೊಬಿಲಿಟಿ ರ‍್ಯಾಂಕಿಂಗ್‌ನಲ್ಲಿ ಭಾರತ 136ನೇ ಸ್ಥಾನದಲ್ಲಿದೆ. ದ್ವಿಪಕ್ಷೀಯ ವೀಸಾ ವಿನಾಯಿತಿ ಒಪ್ಪಂದಗಳು, ಪಾಸ್‌ಪೋರ್ಟ್ ಭದ್ರತೆ, ಡಿಜಿಟಲ್ ಗುರುತಿನ ವ್ಯವಸ್ಥೆ ಹಾಗೂ ನಿರಂತರ ರಾಜತಾಂತ್ರಿಕ ಸಹಕಾರದ ಮೂಲಕ ಭಾರತ ತನ್ನ ಪಾಸ್‌ಪೋರ್ಟ್‌ನ ಜಾಗತಿಕ ಸ್ಥಾನವನ್ನು ಇನ್ನಷ್ಟು ಬಲಪಡಿಸಬಹುದು.
ಸಾಗರೋತ್ತರ ಪೌರತ್ವ ಹೊಂದಿರುವವರಿಗೆ ಕೇಂದ್ರದ ಹೊಸ ಸೌಲಭ್ಯ: ಇ-ಒಸಿಐಗೆ ಚಾಲನೆಜಗತ್ತಿನ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳು
ಸಿಂಗಪುರದ ಪಾಸ್‌ಪೋರ್ಟ್ ವಿಶ್ವದ ಅತ್ಯಂತ ಶಕ್ತಿಶಾಲಿಯಾಗಿ ಮುಂದುವರಿದಿದೆ. 192 ದೇಶಗಳಿಗೆ ವೀಸಾ-ಮುಕ್ತ ಅಥವಾ ವೀಸಾ-ಆನ್-ಅರೈವಲ್ ಪ್ರವೇಶ ಹೊಂದಿದೆ. ಜಪಾನ್, ದಕ್ಷಿಣ ಕೊರಿಯಾ ಹಾಗೂ ಯುಎಇ ಪಾಸ್‌ಪೋರ್ಟ್ ಹೊಂದಿರುವರಿಗೆ 188 ದೇಶಗಳಿಗೆ ಸುಲಭ ಪ್ರವೇಶ ಪ್ರವೇಶ ಪಡೆಯಬಹುದಾಗಿದೆ. ಜರ್ಮನಿ, ಫ್ರಾನ್ಸ್ ಹಾಗೂ ಸ್ಪೇನ್ ಸೇರಿದಂತೆ ಯುರೋಪಿನ ಹಲವು ರಾಷ್ಟ್ರಗಳ ಪಾಸ್‌ಪೋರ್ಟ್ ಇರುವವರು 185ಕ್ಕೂ ಹೆಚ್ಚು ದೇಶಗಳಿಗೆ ಸುಲಭ ಪ್ರವೇಶ ಪಡೆಯಬಹುದು.
ಭಾರತೀಯರು ಮುಂಗಡ ವೀಸಾ ಇಲ್ಲದೆ ಎಲ್ಲಿ ಪ್ರಯಾಣಿಸಬಹುದು?
ವೀಸಾ-ಮುಕ್ತ ದೇಶಗಳು
ಅಂಗೋಲಾ, ಬಾರ್ಬಡೋಸ್, ಭೂತಾನ್, ಬ್ರಿಟಿಷ್ ವರ್ಜಿನ್ ದ್ವೀಪಗಳು, ಕುಕ್ ದ್ವೀಪಗಳು, ಡೊಮಿನಿಕಾ, ಫಿಜಿ, ಗ್ರೆನಡಾ, ಹೈಟಿ, ಜಮೈಕಾ, ಕಜಕಿಸ್ತಾನ್, ಕಿರಿಬಾಟಿ, ಮಕಾವೊ (SAR ಚೀನಾ), ಮಲೇಷ್ಯಾ, ಮಾರಿಷಸ್, ಮೈಕ್ರೋನೇಷ್ಯಾ, ಮಾಂಟ್ಸೆರಾಟ್, ನೇಪಾಳ, ನಿಯು, ಫಿಲಿಪ್ಪೀನ್ಸ್, ರುವಾಂಡಾ, ಸೆನೆಗಲ್, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್, ಥೈಲೆಂಡ್, ಗ್ಯಾಂಬಿಯಾ, ಟ್ರಿನಿಡಾಡ್ ಮತ್ತು ಟೊಬಾಗೊ, ವನುವಾಟು.
ಆಗಮನದ ವೇಳೆ ವೀಸಾ (VOA) ನೀಡುವ ದೇಶಗಳು
ಬುರುಂಡಿ, ಕಾಂಬೋಡಿಯಾ, ಕೇಪ್ ವರ್ಡೆ ದ್ವೀಪಗಳು, ಕೊಮೊರೊಸ್, ಜಿಬೂಟಿ, ಇಥಿಯೋಪಿಯಾ, ಗಿನಿ-ಬಿಸ್ಸೌ, ಇಂಡೋನೇಷ್ಯಾ, ಜೋರ್ಡನ್, ಲಾವೋಸ್, ಮಡಗಾಸ್ಕರ್, ಮಾಲ್ಡೀವ್ಸ್, ಮಾರ್ಷಲ್ ದ್ವೀಪಗಳು, ಮಂಗೋಲಿಯಾ, ಮೊಜಾಂಬಿಕ್, ಮ್ಯಾನ್ಮಾರ್, ಪಲಾವ್, ಕತಾರ್, ಸಿಯೆರಾ ಲಿಯೋನ್, ಶ್ರೀಲಂಕಾ, ಸೇಂಟ್ ಲೂಸಿಯಾ, ಟಾಂಜಾನಿಯಾ, ತಿಮೋರ್-ಲೆಸ್ಟೆ, ತುವಾಲು, ಜಿಂಬಾಬ್ವೆ.
ಇಟಿಎ ಮೂಲಕ ಪ್ರವೇಶ
ಕೀನ್ಯಾ, ಸೀಶೆಲ್ಸ್ ಮತ್ತು ಸೇಂಟ್ ಕಿಟ್ಸ್ ಮತ್ತು ನೆವಿಸ್.
ಅಮೆರಿಕ, ಕೆನಡಾಕ್ಕೂ ಬಿಸಿಗಾಳಿ ಭೀತಿ: ಫಿಫಾ ವಿಶ್ವಕಪ್ ಮೇಲೆ ಪರಿಣಾಮ?ರ‍್ಯಾಂಕಿಂಗ್ ಹೇಗೆ ನಿರ್ಧಾರವಾಗುತ್ತದೆ?
ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕವು ಐಎಟಿಎ ದತ್ತಾಂಶದ ಆಧಾರದ ಮೇಲೆ ವಿಶ್ವದ 199 ದೇಶಗಳ ಪಾಸ್‌ಪೋರ್ಟ್‌ಗಳಿಗೆ 227 ಪ್ರವಾಸಿ ತಾಣಗಳಲ್ಲಿ ದೊರೆಯುವ ಪ್ರವೇಶವನ್ನು ಪರಿಗಣಿಸಿ ರ‍್ಯಾಂಕಿಂಗ್ ಪ್ರಕಟಿಸುತ್ತದೆ. ದೇಶಗಳ ವೀಸಾ ನೀತಿಗಳಲ್ಲಿ ಆಗುವ ಬದಲಾವಣೆಗಳಿಗೆ ಅನುಗುಣವಾಗಿ ಈ ರ‍್ಯಾಂಕಿಂಗ್ ಕೂಡ ಬದಲಾಗುತ್ತಿರುತ್ತದೆ.
(ಈ ಲೇಖನವನ್ನು 'ಗಲ್ಫ್ ನ್ಯೂಸ್' ಪ್ರಕಟಿಸಿದ ವರದಿ ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿ ಸಿದ್ಧಪಡಿಸಲಾಗಿದೆ. ವೀಸಾ ನಿಯಮಗಳು ಮತ್ತು ಪ್ರವೇಶ ಷರತ್ತುಗಳು ಕಾಲಾನುಸಾರ ಬದಲಾಗಬಹುದು. ಪ್ರಯಾಣಕ್ಕೂ ಮುನ್ನ ಸಂಬಂಧಿತ ದೇಶದ ಅಧಿಕೃತ ವೆಬ್‌ಸೈಟ್ ಅಥವಾ ರಾಯಭಾರ ಕಚೇರಿಯ ಮಾಹಿತಿಯನ್ನು ಪರಿಶೀಲಿಸಿ.)
ಆಧಾರ: ಗಲ್ಫ್ ನ್ಯೂಸ್, ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ
ಯುಎಇ | ಇತ್ತಿಹಾದ್ ರೈಲು ಸೇವೆ ಆರಂಭ: ಮೊದಲ ದಿನವೇ ಭಾರಿ ಪ್ರತಿಕ್ರಿಯೆ
