Dailyhunt Logo
  • Light mode
    Follow system
    Dark mode
    • Play Story
    • App Story
ಯುಎಇಯಲ್ಲಿ ಭಾರತೀಯರಿಗೆ ಪಾಸ್‌ಪೋರ್ಟ್, ವೀಸಾ ಸೇವೆ ಸಮಸ್ಯೆ: ಕಾರಣ ಏನು?

ಯುಎಇಯಲ್ಲಿ ಭಾರತೀಯರಿಗೆ ಪಾಸ್‌ಪೋರ್ಟ್, ವೀಸಾ ಸೇವೆ ಸಮಸ್ಯೆ: ಕಾರಣ ಏನು?

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಯುಎಇಯಲ್ಲಿ ಭಾರತೀಯರಿಗೆ ಪಾಸ್‌ಪೋರ್ಟ್, ವೀಸಾ ಸೇವೆ ಸಮಸ್ಯೆ: ಕಾರಣ ಏನು?

ಒಂದು ಸಾಲಿನಲ್ಲಿಯುಎಇಯಲ್ಲಿ ನ್ಯಾಯಾಲಯದ ಟೆಂಡರ್ ವಿವಾದದಿಂದಾಗಿ ಭಾರತೀಯರ ಪಾಸ್‌ಪೋರ್ಟ್ ಮತ್ತು ವೀಸಾ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದು, ಸದ್ಯ ರಾಯಭಾರ ಕಚೇರಿ ಮೂಲಕವೇ ನೇರ ಸೇವೆಗಳನ್ನು ಒದಗಿಸಲಾಗುತ್ತಿದೆ.

ಪ್ರಮುಖ ಪ್ರಶ್ನೋತ್ತರ


ಯುಎಇಯಲ್ಲಿ ಪಾಸ್‌ಪೋರ್ಟ್ ಸೇವೆಗಳು ಏಕೆ ಸ್ಥಗಿತಗೊಂಡಿವೆ?

ಹೊಸ ಸೇವಾ ಸಂಸ್ಥೆಯ ಆಯ್ಕೆಯ ಟೆಂಡರ್ ಪ್ರಕ್ರಿಯೆಯು ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ವಿವಾದಕ್ಕೆ ಸಿಲುಕಿದ ಕಾರಣ ಹಳೆಯ ಸಂಸ್ಥೆಗಳ ಒಪ್ಪಂದ ಮುಗಿದರೂ ಹೊಸ ವ್ಯವಸ್ಥೆ ಜಾರಿಗೆ ಬರಲು ಸಾಧ್ಯವಾಗಿಲ್ಲ.


ಈಗ ಭಾರತೀಯರು ಪಾಸ್‌ಪೋರ್ಟ್ ಸೇವೆಗಳನ್ನು ಎಲ್ಲಿ ಪಡೆಯಬೇಕು?

ಹೊಸ ಸಂಸ್ಥೆ ಕಾರ್ಯಾರಂಭ ಮಾಡುವವರೆಗೆ ಅಬುಧಾಬಿಯ ಭಾರತೀಯ ರಾಯಭಾರ ಕಚೇರಿ ಮತ್ತು ದುಬೈನ ಭಾರತೀಯ ಕಾನ್ಸುಲೇಟ್ ನೇರವಾಗಿ ಪಾಸ್‌ಪೋರ್ಟ್, ವೀಸಾ ಮತ್ತು ಅಟೆಸ್ಟೇಷನ್ ಸೇವೆಗಳನ್ನು ಒದಗಿಸುತ್ತಿವೆ.


ರಾಯಭಾರ ಕಚೇರಿಯಲ್ಲಿ ಸೇವೆ ಪಡೆಯಲು ಅನುಸರಿಸಬೇಕಾದ ಕ್ರಮಗಳೇನು?

ಅರ್ಜಿದಾರರು ಮುಂಚಿತವಾಗಿ ಅಪಾಯಿಂಟ್‌ಮೆಂಟ್ ಪಡೆಯುವ ಅಗತ್ಯವಿಲ್ಲ, ನೇರವಾಗಿ ಕಚೇರಿಗೆ ತೆರಳಿ 'ವಾಕ್-ಇನ್' ಮೂಲಕ ಬೆಳಿಗ್ಗೆ 9ರಿಂದ ಮಧ್ಯಾಹ್ನ 12.30ರೊಳಗೆ ಅರ್ಜಿ ಸಲ್ಲಿಸಬಹುದು.


ಅರ್ಜಿದಾರರು ಗಮನಿಸಬೇಕಾದ ಪ್ರಮುಖ ನಿಯಮಗಳು ಯಾವುವು?

ಅರ್ಜಿದಾರರು ಅಗತ್ಯ ದಾಖಲೆಗಳೊಂದಿಗೆ ಖುದ್ದಾಗಿ ಹಾಜರಿರಬೇಕು, ಸೇವಾ ಶುಲ್ಕವನ್ನು ನಗದು ರೂಪದಲ್ಲಿ ಮಾತ್ರ ಪಾವತಿಸಬೇಕು ಮತ್ತು ಅಪ್ರಾಪ್ತ ವಯಸ್ಕರನ್ನು ಹೊರತುಪಡಿಸಿ ಉಳಿದವರಿಗೆ ಮಾತ್ರ ಪ್ರವೇಶವಿರುತ್ತದೆ.


ಮುಂದಿನ ವ್ಯವಸ್ಥೆ ಯಾವಾಗ ಸಹಜ ಸ್ಥಿತಿಗೆ ಬರಲಿದೆ?

ನ್ಯಾಯಾಲಯದಲ್ಲಿರುವ ಪ್ರಕರಣ ಇತ್ಯರ್ಥವಾಗಿ ಅಂತಿಮ ತೀರ್ಪು ಬರುವವರೆಗೆ ಈ ತಾತ್ಕಾಲಿಕ ವ್ಯವಸ್ಥೆ ಮುಂದುವರಿಯಲಿದ್ದು, ಆ ನಂತರವೇ ಹೊಸ ಸಂಸ್ಥೆಯು ಕಾರ್ಯಾರಂಭ ಮಾಡಲಿದೆ.

ಪ್ರಮುಖ ಅಂಕಿಅಂಶಗಳು

45 ಲಕ್ಷಯುಎಇಯಲ್ಲಿ ವಾಸಿಸುವ ಭಾರತೀಯರ ಸಂಖ್ಯೆಜೂನ್ 30, 2026ಹಳೇ ಒಪ್ಪಂದ ಕೊನೆಗೊಂಡ ದಿನಾಂಕಜುಲೈ 2ನೇರ ಸೇವೆ ಆರಂಭವಾದ ದಿನಾಂಕ

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಯುಎಇಯಲ್ಲಿ ವಾಸಿಸುವ ಸುಮಾರು 45 ಲಕ್ಷ ಭಾರತೀಯರು ಕಳೆದ ಕೆಲ ದಿನಗಳಿಂದ ಪಾಸ್‌ಪೋರ್ಟ್, ವೀಸಾ ಮತ್ತು ದೃಢೀಕರಣ (ಅಟೆಸ್ಟೇಷನ್) ಸೇವೆಗಳಿಗಾಗಿ ನೇರವಾಗಿ ಭಾರತೀಯ ರಾಯಭಾರ ಕಚೇರಿ ಹಾಗೂ ದುಬೈ ಕಾನ್ಸುಲೇಟ್‌ಗೆ ತೆರಳಬೇಕಾದ ಪರಿಸ್ಥಿತಿ ಎದುರಾಗಿದೆ.

ಇದುವರೆಗೆ ಈ ಸೇವೆಗಳನ್ನು ನಿರ್ವಹಿಸುತ್ತಿದ್ದ ಸಂಸ್ಥೆಗಳು ಹೊಸ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ. ಮತ್ತೊಂದೆಡೆ, ಹೊಸದಾಗಿ ಆಯ್ಕೆಯಾದ ಸಂಸ್ಥೆಯೂ ಇನ್ನೂ ಕಾರ್ಯಾರಂಭ ಮಾಡದಿರುವುದರಿಂದ ವೀಸಾ ಸೇವೆಗಳನ್ನು ಪಡೆಯುವುದು ಕಷ್ಟವಾಗಿದೆ.

ಈ ಗೊಂದಲಕ್ಕೆ ಮುಖ್ಯ ಕಾರಣ ನ್ಯಾಯಾಲಯದಲ್ಲಿ ನಡೆಯುತ್ತಿರುವ ಟೆಂಡರ್ ವಿವಾದ. ಅದರ ಪರಿಣಾಮ ಯುಎಇಯಲ್ಲಿರುವ ಭಾರತೀಯರ ಪಾಸ್‌ಪೋರ್ಟ್, ವೀಸಾ ಮತ್ತು ಇತರ ಕಾನ್ಸುಲರ್ ಸೇವೆಗಳ ಮೇಲೂ ಬಿದ್ದಿದೆ.

ಹಾಗಾದರೆ ಈ ಗೊಂದಲ ಹೇಗೆ ಆರಂಭವಾಯಿತು? ಬಿಎಲ್‌ಎಸ್ ಇಂಟರ್‌ನ್ಯಾಷನಲ್ ಸರ್ವೀಸಸ್ ಲಿಮಿಟೆಡ್? ಹೊಸದಾಗಿ ಆಯ್ಕೆಯಾದ ಅಲ್‌ಹಿಂದ್ ಯಾವಾಗ ಕಾರ್ಯಾರಂಭ ಮಾಡಲಿದೆ? ಅಲ್ಲಿಯವರೆಗೆ ಭಾರತೀಯರು ಪಾಸ್‌ಪೋರ್ಟ್ ಮತ್ತು ಇತರ ಕಾನ್ಸುಲರ್ ಸೇವೆಗಳನ್ನು ಹೇಗೆ ಪಡೆಯಬೇಕು?

ಯುಎಇಯಲ್ಲಿ ಭಾರತೀಯ ಪಾಸ್‌ಪೋರ್ಟ್ ಸೇವೆಗಳನ್ನು ನಿರ್ವಹಿಸುತ್ತಿದ್ದುದ್ದು ಯಾರು?

ಯುಎಇಯಲ್ಲಿ ಭಾರತೀಯ ಪಾಸ್‌ಪೋರ್ಟ್ ಸೇವೆಗಳನ್ನು ಹಲವು ವರ್ಷಗಳಿಂದ ಬಿಎಲ್‌ಎಸ್ ಇಂಟರ್‌ನ್ಯಾಷನಲ್ ನಿರ್ವಹಿಸುತ್ತಿತ್ತು. ದಾಖಲೆಗಳ ದೃಢೀಕರಣ ಸೇರಿದಂತೆ ಕೆಲವು ಕಾನ್ಸುಲರ್ ಸೇವೆಗಳನ್ನು ಎಸ್‌ಜಿಐವಿಎಸ್ ಗ್ಲೋಬಲ್ ಸರ್ವೀಸಸ್ ನೋಡಿಕೊಳ್ಳುತ್ತಿತ್ತು.

ಬಿಎಲ್‌ಎಸ್ ಸ್ವತಃ ಪಾಸ್‌ಪೋರ್ಟ್ ನೀಡುವ ಸಂಸ್ಥೆಯಲ್ಲ. ಅದರ ಕೆಲಸವೆಂದರೆ ಪಾಸ್‌ಪೋರ್ಟ್ ನವೀಕರಣ, ಹೊಸ ಪಾಸ್‌ಪೋರ್ಟ್, ಪೊಲೀಸ್ ನಿರಾಪೇಕ್ಷಣ ಪತ್ರ (PCC), ವೀಸಾ ಹಾಗೂ ಇತರ ಕಾನ್ಸುಲರ್ ಸೇವೆಗಳ ಅರ್ಜಿಗಳನ್ನು ಸ್ವೀಕರಿಸುವುದು, ಅಗತ್ಯ ದಾಖಲೆಗಳನ್ನು ಪರಿಶೀಲಿಸುವುದು, ಶುಲ್ಕ ಸಂಗ್ರಹಿಸುವುದು ಮತ್ತು ಅರ್ಜಿಗಳನ್ನು ಭಾರತೀಯ ರಾಯಭಾರ ಕಚೇರಿ ಅಥವಾ ದುಬೈ ಕಾನ್ಸುಲೇಟ್‌ಗೆ ಕಳುಹಿಸುವುದು. ಅಂತಿಮವಾಗಿ ಪಾಸ್‌ಪೋರ್ಟ್ ನೀಡುವ ಅಥವಾ ಅರ್ಜಿಯನ್ನು ಅನುಮೋದಿಸುವ ಅಧಿಕಾರ ಮಾತ್ರ ಭಾರತೀಯ ಸರ್ಕಾರದದ್ದೇ ಆಗಿರುತ್ತದೆ.

ಭಾರತ ಸರ್ಕಾರ ಅನೇಕ ದೇಶಗಳಲ್ಲಿ ಪಾಸ್‌ಪೋರ್ಟ್ ಮತ್ತು ಕಾನ್ಸುಲರ್ ಅರ್ಜಿಗಳನ್ನು ನೇರವಾಗಿ ಸ್ವೀಕರಿಸುವ ಬದಲು, ಖಾಸಗಿ ಸೇವಾ ಸಂಸ್ಥೆಗಳ ಮೂಲಕ ಅರ್ಜಿಗಳನ್ನು ಸಂಗ್ರಹಿಸಿ ಪ್ರಕ್ರಿಯೆ ನಡೆಸುವ ವ್ಯವಸ್ಥೆಯನ್ನು ಅನುಸರಿಸುತ್ತದೆ. ಯುಎಇಯಲ್ಲಿಯೂ ಇದೇ ಮಾದರಿ ಜಾರಿಯಲ್ಲಿತ್ತು.

ಯುಎಇಯಲ್ಲಿಯೂ ಇದೇ ವ್ಯವಸ್ಥೆ ಹಲವು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ಹಳೆಯ ಒಪ್ಪಂದ ಮುಕ್ತಾಯಗೊಂಡು, ಹೊಸ ಸಂಸ್ಥೆ ಅಧಿಕಾರ ವಹಿಸಿಕೊಳ್ಳುವ ಪ್ರಕ್ರಿಯೆ ನ್ಯಾಯಾಲಯದ ವಿವಾದದಲ್ಲಿ ಸಿಲುಕಿದ ಕಾರಣ, ಸದ್ಯ ಈ ಸೇವೆಗಳಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಿದೆ.

ವೀಸಾ | ವಲಸೆ, ವಿದೇಶಿಗರ ನಿಯಮಗಳ ಬದಲಾವಣೆ

ಒಪ್ಪಂದ ಮುಕ್ತಾಯ

ಈ ಎರಡೂ ಸಂಸ್ಥೆಗಳ ಒಪ್ಪಂದ 2026ರ ಜೂನ್ 30 ಮುಕ್ತಾಯವಾಗಿದೆ. ಹೊಸ ಟೆಂಡರ್ ಪ್ರಕ್ರಿಯೆಯಲ್ಲಿ ಅಲ್‌ಹಿಂದ್ ಟೂರ್ಸ್ ಅಂಡ್ ಟ್ರಾವೆಲ್ ಎಲ್‌ಎಲ್‌ಸಿ ಆಯ್ಕೆಯಾಯಿತು. ಜುಲೈ 1ರಿಂದ ಯುಎಇಯಾದ್ಯಂತ ಭಾರತೀಯ ಕಾನ್ಸುಲರ್ ಅಪ್ಲಿಕೇಶನ್ ಸೆಂಟರ್‌ಗಳ ನಿರ್ವಹಣೆಯನ್ನು ಅಲ್‌ಹಿಂದ್ ವಹಿಸಿಕೊಳ್ಳಬೇಕಿತ್ತು.

ಆದರೆ, ಕೊನೆಯ ಕ್ಷಣದಲ್ಲಿ ಎಲ್ಲವೂ ಬದಲಾಗಿದೆ.

ಸಮಸ್ಯೆ ಆರಂಭವಾಗಿದ್ದು ಎಲ್ಲಿಂದ?

ಯುಎಇಯಲ್ಲಿ ಭಾರತೀಯ ಕಾನ್ಸುಲರ್ ಸೇವೆಗಳಿಗಾಗಿ ಹೊಸ ಸಂಸ್ಥೆಯನ್ನು ಆಯ್ಕೆ ಮಾಡಲು ಭಾರತೀಯ ರಾಯಭಾರ ಕಚೇರಿ ಟೆಂಡರ್ ಆಹ್ವಾನಿಸಿತ್ತು. ಈ ಟೆಂಡರ್‌ನಲ್ಲಿ ಹಲವು ಕಂಪನಿಗಳು ಭಾಗವಹಿಸಿದ್ದವು. ಅಂತಿಮವಾಗಿ ಅಲ್‌ಹಿಂದ್ ಟೂರ್ಸ್ ಅಂಡ್ ಟ್ರಾವೆಲ್ ಎಲ್‌ಎಲ್‌ಸಿ ಆಯ್ಕೆಯಾಯಿತು.

ಆದರೆ, ಟೆಂಡರ್ ಫಲಿತಾಂಶವನ್ನು ಪ್ರಶ್ನಿಸಿ ಇ-ಟ್ರಾವ್ ಟೆಕ್ ಮತ್ತು ವೆರಾಸಿಸ್ ಎಂಬ ಎರಡು ಕಂಪನಿಗಳು ದೆಹಲಿ ಹೈಕೋರ್ಟ್‌ಗೆ ಮೊರೆ ಹೋದವು.

ಟೆಂಡರ್ ಮೌಲ್ಯಮಾಪನವನ್ನು ಯಾವ ಮಾನದಂಡಗಳ ಆಧಾರದ ಮೇಲೆ ನಡೆಸಲಾಗಿದೆ ಎಂಬುದನ್ನು ರಾಯಭಾರ ಕಚೇರಿ ಸ್ಪಷ್ಟಪಡಿಸಿರಲಿಲ್ಲ. ತಮ್ಮ ಅರ್ಜಿಗೆ ಎಷ್ಟು ಅಂಕ ನೀಡಲಾಗಿದೆ, ತಮ್ಮನ್ನು ಏಕೆ ಅನರ್ಹಗೊಳಿಸಲಾಗಿದೆ ಎಂಬ ಮಾಹಿತಿಯನ್ನೂ ನೀಡಲಾಗಿಲ್ಲ. ಹೀಗಾಗಿ ಟೆಂಡರ್ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಸಾಕಷ್ಟು ಪಾರದರ್ಶಕತೆ ಇರಲಿಲ್ಲ ಎನ್ನುವುದು ಅವರ ವಾದ.

ಈ ಕಾರಣಗಳಿಂದ ಟೆಂಡರ್ ಪ್ರಕ್ರಿಯೆಯನ್ನು ಮರುಪರಿಶೀಲಿಸಬೇಕು ಎಂದು ಅವರು ನ್ಯಾಯಾಲಯವನ್ನು ಕೋರಿದ್ದರು. ಇದೇ ಯುಎಇಯಲ್ಲಿ ಭಾರತೀಯ ಪಾಸ್‌ಪೋರ್ಟ್ ಮತ್ತು ಇತರ ಕಾನ್ಸುಲರ್ ಸೇವೆಗಳಲ್ಲಿ ಉಂಟಾದ ಗೊಂದಲಕ್ಕೆ ಪ್ರಮುಖ ಕಾರಣವಾಗಿದೆ.

ಸಾಗರೋತ್ತರ ಪೌರತ್ವ ಹೊಂದಿರುವವರಿಗೆ ಕೇಂದ್ರದ ಹೊಸ ಸೌಲಭ್ಯ: ಇ-ಒಸಿಐಗೆ ಚಾಲನೆ

ದೆಹಲಿ ಹೈಕೋರ್ಟ್ ಹೇಳಿದ್ದೇನು?

ಯಾವ ಕಂಪನಿಗೆ ಗುತ್ತಿಗೆ ನೀಡಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳಿಗೇ ಸೇರಿದೆ. ಈ ಪ್ರಕ್ರಿಯೆಯಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿ ಹೈಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತು.

ಟೆಂಡರ್‌ನಲ್ಲಿ ಆಯ್ಕೆಯಾಗದ ಕಂಪನಿಗಳಿಗೆ ತಮ್ಮ ಅರ್ಜಿಯನ್ನು ಏಕೆ ತಿರಸ್ಕರಿಸಲಾಗಿದೆ ಎಂಬುದನ್ನು ತಿಳಿಸಬೇಕು ಎಂದೂ ಕೋರ್ಟ್ ಹೇಳಿತು. ದೆಹಲಿ ಹೈಕೋರ್ಟ್‌ನ ಈ ಆದೇಶ ಪ್ರಶ್ನಿಸಿ ಇ-ಟ್ರಾವ್ ಟೆಕ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು.

ಸುಪ್ರೀಂ ಕೋರ್ಟ್ ಹೇಳಿದ್ದೇನು?

ಇ-ಟ್ರಾವ್ ಟೆಕ್ ಅರ್ಜಿಯನ್ನು ವಿಚಾರಣೆ ನಡೆಸಲು ಒಪ್ಪಿಕೊಂಡ ಸುಪ್ರೀಂ ಕೋರ್ಟ್, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿತು.ಪ್ರಕರಣದ ಕುರಿತು ಅಂತಿಮ ನಿರ್ಧಾರವಾಗುವವರೆಗೆ ಹೊಸ ಟೆಂಡರ್ ಪ್ರಕ್ರಿಯೆಯನ್ನು ಮುಂದುವರಿಸಬಾರದು ಎಂದ ಸುಪ್ರೀಂ ಕೋರ್ಟ್‌ ಪ್ರಕರಣವನ್ನು ಸಾಧ್ಯವಾದಷ್ಟು ಬೇಗ ವಿಚಾರಣೆ ನಡೆಸಿ ಎಂದು ದೆಹಲಿ ಹೈಕೋರ್ಟ್‌ಗೆ ನಿರ್ದೇಶನ ನೀಡಿತು.

ಹೀಗಾಗಿ ಹೊಸದಾಗಿ ಆಯ್ಕೆಯಾದ ಅಲ್‌ಹಿಂದ್ ಟೂರ್ಸ್ ಅಂಡ್ ಟ್ರಾವೆಲ್ ಯುಎಇಯಲ್ಲಿ ಭಾರತೀಯ ಕಾನ್ಸುಲರ್ ಸೇವೆಗಳನ್ನು ಇನ್ನೂ ಅಧಿಕೃತವಾಗಿ ಆರಂಭಿಸಲು ಸಾಧ್ಯವಾಗಿಲ್ಲ. ಇದರಿಂದ ಹಳೆಯ ಸಂಸ್ಥೆಗಳ ಒಪ್ಪಂದ ಮುಕ್ತಾಯಗೊಂಡ ನಂತರವೂ ಹೊಸ ವ್ಯವಸ್ಥೆ ಜಾರಿಗೆ ಬರದೆ, ತಾತ್ಕಾಲಿಕ ಸೇವಾ ವ್ಯತ್ಯಯ ಉಂಟಾಗಿದೆ.

ಈಗ ಏನಾಗಿದೆ?

ಒಂದೆಡೆ, ಜೂನ್ 30ಕ್ಕೆ ಒಪ್ಪಂದದ ಅವಧಿ ಮುಗಿದಿರುವುದರಿಂದ ಬಿಎಲ್‌ಎಸ್ ಇಂಟರ್‌ನ್ಯಾಷನಲ್ ಮತ್ತು ಎಸ್‌ಜಿಐವಿಎಸ್ ಗ್ಲೋಬಲ್ ಸರ್ವೀಸಸ್ ಹೊಸ ಅರ್ಜಿಗಳನ್ನು ಸ್ವೀಕರಿಸುವುದನ್ನು ಸ್ಥಗಿತಗೊಳಿಸಿವೆ. ಮತ್ತೊಂದೆಡೆ, ನ್ಯಾಯಾಲಯದ ವಿಚಾರಣೆ ಇನ್ನೂ ಪೂರ್ಣಗೊಳ್ಳದ ಕಾರಣ, ಹೊಸ ಟೆಂಡರ್‌ನಲ್ಲಿ ಆಯ್ಕೆಯಾದ ಅಲ್‌ಹಿಂದ್ ಟೂರ್ಸ್ ಅಂಡ್ ಟ್ರಾವೆಲ್ ಕೂಡ ಅಧಿಕೃತವಾಗಿ ಕಾರ್ಯಾರಂಭ ಮಾಡಲು ಸಾಧ್ಯವಾಗಿಲ್ಲ.

ಇದರಿಂದ ಯುಎಇಯಲ್ಲಿ ಭಾರತೀಯ ಕಾನ್ಸುಲರ್ ಸೇವೆಗಳನ್ನು ನಿರ್ವಹಿಸುವ ಯಾವುದೇ ಹೊರಗುತ್ತಿಗೆ ಸಂಸ್ಥೆ ಸದ್ಯ ಕಾರ್ಯನಿರ್ವಹಿಸುತ್ತಿಲ್ಲ.

ಈ ಪರಿಸ್ಥಿತಿಯಲ್ಲಿ ಭಾರತೀಯ ರಾಯಭಾರ ಕಚೇರಿ (ಅಬುಧಾಬಿ) ಮತ್ತು ದುಬೈಯ ಭಾರತೀಯ ಕಾನ್ಸುಲೇಟ್ ಮಧ್ಯಂತರ ವ್ಯವಸ್ಥೆಯಾಗಿ ಸ್ವತಃ ಪಾಸ್‌ಪೋರ್ಟ್, ವೀಸಾ, ದೃಢೀಕರಣ ಮತ್ತು ಇತರ ಕಾನ್ಸುಲರ್ ಸೇವೆಗಳನ್ನು ಒದಗಿಸುತ್ತಿವೆ. ಆದರೆ ಈ ಸೇವೆಗಳು ಸೀಮಿತ ಪ್ರಮಾಣದಲ್ಲಿದ್ದು, ನ್ಯಾಯಾಲಯದ ಪ್ರಕರಣ ಇತ್ಯರ್ಥವಾಗುವವರೆಗೆ ಇದೇ ವ್ಯವಸ್ಥೆ ಮುಂದುವರಿಯುವ ಸಾಧ್ಯತೆ ಇದೆ.

ಯುಎಇ | ಇತ್ತಿಹಾದ್ ರೈಲು ಸೇವೆ ಆರಂಭ: ಮೊದಲ ದಿನವೇ ಭಾರಿ ಪ್ರತಿಕ್ರಿಯೆ

ಇದರಿಂದ ಭಾರತೀಯರಿಗೆ ಏನು ಸಮಸ್ಯೆ?

ಈ ಸೇವಾ ವ್ಯತ್ಯಯದ ಪರಿಣಾಮ ಕೇವಲ ಪಾಸ್‌ಪೋರ್ಟ್ ನವೀಕರಣಕ್ಕೆ ಮಾತ್ರ ಸೀಮಿತವಾಗಿಲ್ಲ. ಯುಎಇಯಲ್ಲಿ ವಾಸಿಸುವ, ಉದ್ಯೋಗ ಮಾಡುತ್ತಿರುವ ಮತ್ತು ಹೊಸದಾಗಿ ಅಲ್ಲಿಗೆ ತೆರಳಲು ಸಿದ್ಧರಾಗಿರುವ ಸಾವಿರಾರು ಭಾರತೀಯರ ದೈನಂದಿನ ಅಗತ್ಯಗಳ ಮೇಲೂ ಇದರ ಪರಿಣಾಮ ಬೀರಲಿದೆ.

ಸದ್ಯ ಈ ಕೆಳಗಿನ ಸೇವೆಗಳನ್ನು ಪಡೆಯಲು ಹೆಚ್ಚು ಸಮಯ ಹಿಡಿಯಬಹುದು ಅಥವಾ ಅರ್ಜಿದಾರರು ನೇರವಾಗಿ ರಾಯಭಾರ ಕಚೇರಿ ಅಥವಾ ಕಾನ್ಸುಲೇಟ್‌ಗೆ ತೆರಳಬೇಕಾದ ಪರಿಸ್ಥಿತಿ ಎದುರಾಗಬಹುದು.

ಪಾಸ್‌ಪೋರ್ಟ್ ನವೀಕರಣ, ಹೊಸ ಪಾಸ್‌ಪೋರ್ಟ್ ಪಡೆಯುವುದು, ಪೊಲೀಸ್ ನಿರಾಪೇಕ್ಷಣ ಪತ್ರ, ಶೈಕ್ಷಣಿಕ, ವೈಯಕ್ತಿಕ ಮತ್ತು ವಾಣಿಜ್ಯ ದಾಖಲೆಗಳ ದೃಢೀಕರಣ, ಜನನ, ವಿವಾಹ ಸೇರಿದಂತೆ ಇತರ ಕಾನ್ಸುಲರ್ ನೋಂದಣಿಗಳು, ವೀಸಾ ಹಾಗೂ ಇತರ ಕಾನ್ಸುಲರ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ.

ಈ ಸೇವೆಗಳು ಉದ್ಯೋಗ ಬದಲಾವಣೆ, ನಿವಾಸ ವೀಸಾ ನವೀಕರಣ, ಕುಟುಂಬವನ್ನು ಯುಎಇಗೆ ಕರೆಸಿಕೊಳ್ಳುವುದು, ಮಕ್ಕಳ ಶಾಲಾ ಪ್ರವೇಶ, ಉನ್ನತ ಶಿಕ್ಷಣ, ದಾಖಲೆಗಳ ದೃಢೀಕರಣ ಸೇರಿದಂತೆ ಅನೇಕ ಅಗತ್ಯಗಳಿಗೆ ನೇರವಾಗಿ ಸಂಬಂಧಿಸಿವೆ. ಹೀಗಾಗಿ ಸೇವೆಗಳಲ್ಲಿ ಉಂಟಾಗಿರುವ ತಾತ್ಕಾಲಿಕ ವ್ಯತ್ಯಯವು ಸಾವಿರಾರು ಭಾರತೀಯರ ವೈಯಕ್ತಿಕ ಮತ್ತು ವೃತ್ತಿಪರ ಯೋಜನೆಗಳ ಮೇಲೂ ಪರಿಣಾಮ ಬೀರಿದೆ.

ಈಗ ಪಾಸ್‌ಪೋರ್ಟ್ ಮತ್ತು ಇತರ ಕಾನ್ಸುಲರ್ ಸೇವೆಗಳನ್ನು ಹೇಗೆ ಪಡೆಯಬಹುದು?

ಹೊಸ ಸೇವಾ ಸಂಸ್ಥೆ ಇನ್ನೂ ಕಾರ್ಯಾರಂಭ ಮಾಡದಿರುವುದರಿಂದ, ಭಾರತೀಯ ರಾಯಭಾರ ಕಚೇರಿ (ಅಬುಧಾಬಿ) ಮತ್ತು ದುಬೈಯ ಭಾರತೀಯ ಕಾನ್ಸುಲೇಟ್ ತಾತ್ಕಾಲಿಕವಾಗಿ ತಮ್ಮ ಕಚೇರಿಗಳಲ್ಲೇ ನೇರವಾಗಿ ಸೇವೆಗಳನ್ನು ನೀಡುತ್ತಿವೆ.

ಜುಲೈ 2ರಿಂದ ಪಾಸ್‌ಪೋರ್ಟ್, ವೀಸಾ, ದೃಢೀಕರಣ ಹಾಗೂ ಇತರ ಕಾನ್ಸುಲರ್ ಸೇವೆಗಳ ಅರ್ಜಿಗಳನ್ನು 'ವಾಕ್-ಇನ್' ವ್ಯವಸ್ಥೆಯಲ್ಲಿ ಸ್ವೀಕರಿಸಲಾಗುತ್ತಿದೆ. ಅಂದರೆ ಮುಂಚಿತವಾಗಿ ಅಪಾಯಿಂಟ್‌ಮೆಂಟ್ ಪಡೆಯುವ ಅಗತ್ಯವಿಲ್ಲ.

ಯುಎಇ: ಶಾರ್ಜಾ ಇಸ್ಲಾಮಿಕ್ ಬ್ಯಾಂಕ್ ಡ್ರಾದಲ್ಲಿ ₹4.6 ಕೋಟಿ ಬಹುಮಾನ ಗೆದ್ದ ಭಾರತೀಯ

ಅರ್ಜಿದಾರರು ಗಮನಿಸಬೇಕಾದ ಪ್ರಮುಖ ಅಂಶಗಳು:

  • ಸೇವೆಗಳು ಬೆಳಿಗ್ಗೆ 9ರಿಂದ ಮಧ್ಯಾಹ್ನ 12.30ರವರೆಗೆ ಮಾತ್ರ ಲಭ್ಯ.

  • 'ಮೊದಲು ಬಂದವರಿಗೆ ಮೊದಲ ಆದ್ಯತೆ' ಆಧಾರದ ಮೇಲೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ.

  • ಅಗತ್ಯ ದಾಖಲೆಗಳು ಹಾಗೂ ಭರ್ತಿ ಮಾಡಿದ ಅರ್ಜಿಯೊಂದಿಗೆ ನೇರವಾಗಿ ಕಚೇರಿಗೆ ಹೋಗಬೇಕು.

  • ಅಪ್ರಾಪ್ತ ವಯಸ್ಕರ ಅರ್ಜಿಯನ್ನು ಹೊರತುಪಡಿಸಿ, ಅರ್ಜಿದಾರರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ.

  • ಸೇವಾ ಶುಲ್ಕವನ್ನು ನಗದು ರೂಪದಲ್ಲಿ ಮಾತ್ರ ಪಾವತಿಸಬೇಕು.

ಸೇವೆಗಳು ಸೀಮಿತ ಪ್ರಮಾಣದಲ್ಲಿ ಲಭ್ಯವಿರುವುದರಿಂದ, ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿದಾರರು ಆಗಮಿಸುವ ಸಾಧ್ಯತೆ ಇದೆ. ಆದ್ದರಿಂದ, ಅಗತ್ಯ ದಾಖಲೆಗಳನ್ನು ಮುಂಚಿತವಾಗಿ ಸಿದ್ಧಪಡಿಸಿಕೊಂಡು ಸಾಧ್ಯವಾದಷ್ಟು ಬೇಗ ಕಚೇರಿಗೆ ತೆರಳುವುದು ಉತ್ತಮ. ಇದು ನ್ಯಾಯಾಲಯದ ಪ್ರಕರಣ ಇತ್ಯರ್ಥವಾಗಿ ಹೊಸ ಸೇವಾ ಸಂಸ್ಥೆ ಕಾರ್ಯಾರಂಭ ಮಾಡುವವರೆಗಿನ ತಾತ್ಕಾಲಿಕ ವ್ಯವಸ್ಥೆಯಾಗಿದೆ.‌

ಅಕ್ಕ ವಿಶ್ವ ಕನ್ನಡ ಸಮ್ಮೇಳನ-2026: ಕವನ, ಸಣ್ಣಕಥೆ ಸ್ಪರ್ಧೆಗೆ ಆಹ್ವಾನ

ಮುಂದೆ ಏನಾಗಬಹುದು?

ಸದ್ಯ ಎಲ್ಲರ ಗಮನ ದೆಹಲಿ ಹೈಕೋರ್ಟ್‌ನಲ್ಲಿ ನಡೆಯಲಿರುವ ಮುಂದಿನ ವಿಚಾರಣೆಯತ್ತ ನೆಟ್ಟಿದೆ. ಪ್ರಕರಣದ ವಿಚಾರಣೆ ಪೂರ್ಣಗೊಂಡು ನ್ಯಾಯಾಲಯದ ಅಂತಿಮ ಆದೇಶ ಹೊರಬಂದ ನಂತರವೇ ಯುಎಇಯಲ್ಲಿ ಭಾರತೀಯ ಕಾನ್ಸುಲರ್ ಸೇವೆಗಳ ಹೊಸ ವ್ಯವಸ್ಥೆ ಯಾವಾಗ ಜಾರಿಗೆ ಬರಲಿದೆ ಎಂಬುದು ಸ್ಪಷ್ಟವಾಗಲಿದೆ.

ನ್ಯಾಯಾಲಯದ ತೀರ್ಪಿನ ಬಳಿಕ ಯಾವುದೇ ಕಾನೂನು ಅಡ್ಡಿ ಇಲ್ಲದಿದ್ದರೆ, ಹೊಸ ಟೆಂಡರ್‌ನಲ್ಲಿ ಆಯ್ಕೆಯಾದ ಅಲ್‌ಹಿಂದ್ ಟೂರ್ಸ್ ಅಂಡ್ ಟ್ರಾವೆಲ್ ಯುಎಇಯಾದ್ಯಂತ ಭಾರತೀಯ ಕಾನ್ಸುಲರ್ ಅಪ್ಲಿಕೇಶನ್ ಸೆಂಟರ್‌ಗಳ ನಿರ್ವಹಣೆಯನ್ನು ವಹಿಸಿಕೊಳ್ಳುವ ಸಾಧ್ಯತೆಯಿದೆ.

ಅಲ್ಲಿಯವರೆಗೆ ಭಾರತೀಯ ರಾಯಭಾರ ಕಚೇರಿ (ಅಬುಧಾಬಿ) ಮತ್ತು ದುಬೈಯ ಭಾರತೀಯ ಕಾನ್ಸುಲೇಟ್ ತಾತ್ಕಾಲಿಕವಾಗಿ ನೀಡುತ್ತಿರುವ ಸೀಮಿತ 'ವಾಕ್-ಇನ್' ಸೇವೆಗಳನ್ನೇ ಅವಲಂಬಿಸಬೇಕಾಗುತ್ತದೆ. ಹೀಗಾಗಿ ಪಾಸ್‌ಪೋರ್ಟ್, ವೀಸಾ, ದೃಢೀಕರಣ ಮತ್ತು ಇತರ ಕಾನ್ಸುಲರ್ ಸೇವೆಗಳ ಅಗತ್ಯವಿರುವ ಯುಎಇಯಲ್ಲಿನ ಸುಮಾರು 45 ಲಕ್ಷ ಭಾರತೀಯರು ಅಧಿಕೃತ ಪ್ರಕಟಣೆಗಳನ್ನು ಗಮನಿಸುತ್ತಾ, ಅಗತ್ಯವಿದ್ದಾಗ ಮಾತ್ರ ರಾಯಭಾರ ಕಚೇರಿ ಅಥವಾ ಕಾನ್ಸುಲೇಟ್‌ಗೆ ಭೇಟಿ ನೀಡುವುದು ಸೂಕ್ತ.

(ವೀಸಾ ಮತ್ತು ಪಾಸ್‌ಪೋರ್ಟ್ ಸೇವೆಗಳ ಇತ್ತೀಚಿನ ಮಾಹಿತಿಗಾಗಿ ಭಾರತೀಯ ರಾಯಭಾರ ಕಚೇರಿ ಅಥವಾ ದುಬೈಯ ಭಾರತೀಯ ಕಾನ್ಸುಲೇಟ್‌ನ ಅಧಿಕೃತ ಪ್ರಕಟಣೆಗಳನ್ನು ಪರಿಶೀಲಿಸಿ)

ಆಧಾರ: ಗಲ್ಫ್ ನ್ಯೂಸ್, ಖಲೀಜ್ ಟೈಮ್ಸ್ ಹಾಗೂ ಪಿಟಿಐ

ಶ್ರಮಿಕ ವರ್ಗದ ಹಿತಾಸಕ್ತಿಗೆ ಆದ್ಯತೆ: ಅನಿವಾಸಿ ಕನ್ನಡಿಗರ ಸಚಿವಾಲಯಕ್ಕೆ ರೂಪುರೇಷೆ
Dailyhunt
Disclaimer: This content has not been generated, created or edited by Dailyhunt. Publisher: Prajavani