Dailyhunt Logo
  • Light mode
    Follow system
    Dark mode
    • Play Story
    • App Story
ಎರಡು ದಶಕಗಳ ಕಾರ್ಯತಂತ್ರ: ಚೀನಾಗೆ ತಟ್ಟದ ಕೊಲ್ಲಿ ಯುದ್ಧದ 'ಇಂಧನ ಬಿಸಿ'

ಎರಡು ದಶಕಗಳ ಕಾರ್ಯತಂತ್ರ: ಚೀನಾಗೆ ತಟ್ಟದ ಕೊಲ್ಲಿ ಯುದ್ಧದ 'ಇಂಧನ ಬಿಸಿ'

ಶ್ಚಿಮ ಏಷ್ಯಾ ಸಂಘರ್ಷದಿಂದ ಉದ್ಭವವಾದ ಇಂಧನ ಸಮಸ್ಯೆಯು ಜಾಗತಿಕ ಮಾರುಕಟ್ಟೆಗಳನ್ನು ಬೆಚ್ಚಿಬೀಳಿಸಿದೆ. ತೈಲ ಆಮದು ಮೇಲೆಯೇ ಅವಲಂಬಿತವಾಗಿರುವ ದೇಶಗಳಂತೂ ಅಕ್ಷರಶಃ ನಡುಗಿವೆ. ಆದರೆ ವಿಶ್ವದ ಅತಿದೊಡ್ಡ ಕಚ್ಚಾ ತೈಲ ಖರೀದಿ ಮಾಡುವ ರಾಷ್ಟ್ರವಾದ ಚೀನಾಕ್ಕೆ ಈ ಸಂಘರ್ಷದ ಬಿಸಿ ಅಷ್ಟಾಗಿ ತಟ್ಟಿಲ್ಲ.

ಇಂತಹ ಬಿಕ್ಕಟ್ಟು ಭವಿಷ್ಯದಲ್ಲಿ ಉಂಟಾಗಬಹುದೆಂಬ ಮುನ್ನೆಚ್ಚರಿಕೆಯಿಂದಲೇ ಚೀನಾ ಇದಕ್ಕೆ ತಯಾರಾಗಿತ್ತು. ಇಂತರ ಸಮಸ್ಯೆಗಳನ್ನು ಎದುರಿಸಲು ಮುಂಜಾಗೃತ ಕ್ರಮಗಳನ್ನು ಚೀನಾ ಸದ್ದಿಲ್ಲದೇ ರೂಪಿಸುತ್ತಾ ಬಂದಿದೆ.

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ


ಚೀನಾಗೆ ತಾಕದ ಕೊಲ್ಲಿ ಸಂಘರ್ಷದ ಬಿಸಿ: ಹೇಗಿದೆ ಡ್ರ್ಯಾಗನ್ ರಚಿಸಿದ 'ಇಂಧನ ವ್ಯೂಹ'?

ಒಂದು ಸಾಲಿನಲ್ಲಿಪಶ್ಚಿಮ ಏಷ್ಯಾದ ಸಂಘರ್ಷದ ನಡುವೆಯೂ, ಚೀನಾ ತನ್ನ ದೂರದೃಷ್ಟಿಯ ಇಂಧನ ಸಂಗ್ರಹ ಮತ್ತು ಪರ್ಯಾಯ ಕಲ್ಲಿದ್ದಲು ತಂತ್ರಜ್ಞಾನಗಳ ಮೂಲಕ ಜಾಗತಿಕ ಇಂಧನ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸುತ್ತಿದೆ.ಪ್ರಮುಖ ಅಂಶಗಳು• ದೂರದೃಷ್ಟಿಯ ಇಂಧನ ಸಂಗ್ರಹ2004ರಿಂದಲೇ ಚೀನಾ ತನ್ನ ವ್ಯೂಹಾತ್ಮಕ ಪೆಟ್ರೋಲಿಯಂ ಮೀಸಲು ವ್ಯವಸ್ಥೆಯನ್ನು ಬಲಪಡಿಸಿದ್ದು, ಇದು ವಿದೇಶಿ ಇಂಧನ ಪೂರೈಕೆಯ ಅಡಚಣೆಯನ್ನು ಎದುರಿಸಲು ಸಹಕಾರಿಯಾಗಿದೆ.• ತೈಲೇತರ ತಂತ್ರಜ್ಞಾನ ಬಳಕೆಕೈಗಾರಿಕಾ ಪ್ರಕ್ರಿಯೆಗಳಲ್ಲಿ ತೈಲದ ಬದಲಾಗಿ ಕಲ್ಲಿದ್ದಲನ್ನು ಮೆಥನಾಲ್ ಮತ್ತು ಅಮೋನಿಯಾದಂತಹ ರಾಸಾಯನಿಕಗಳಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ಚೀನಾ ಯಶಸ್ವಿಯಾಗಿ ಅಳವಡಿಸಿಕೊಂಡಿದೆ.• ಎಲೆಕ್ಟ್ರಿಕ್ ವಾಹನಗಳ ಕ್ರಾಂತಿಸರ್ಕಾರಿ ಸಬ್ಸಿಡಿ ಮತ್ತು ನಿರ್ಧಾರಿತ ನೀತಿಗಳಿಂದಾಗಿ, ಚೀನಾ ಇಂದು ಇಂಧನ ಚಾಲಿತ ವಾಹನಗಳ ಮಾರುಕಟ್ಟೆಯಿಂದ ಎಲೆಕ್ಟ್ರಿಕ್ ವಾಹನಗಳ ಅತಿದೊಡ್ಡ ಮಾರುಕಟ್ಟೆಯಾಗಿ ಬದಲಾಗಿದೆ.• ನವೀಕರಿಸಬಹುದಾದ ಇಂಧನ ಹೂಡಿಕೆಸೌರ ಮತ್ತು ಪವನ ಶಕ್ತಿ ಸ್ಥಾವರಗಳನ್ನು ಭಾರಿ ಪ್ರಮಾಣದಲ್ಲಿ ಸ್ಥಾಪಿಸುವ ಮೂಲಕ, ಚೀನಾ ನವೀಕರಿಸಲಾಗದ ಇಂಧನಗಳ ಮೇಲಿನ ಅವಲಂಬನೆಯ ಸ್ವರೂಪವನ್ನು ಬದಲಿಸಿದೆ.• ಸ್ವಾವಲಂಬನೆಯೇ ಮೂಲ ಮಂತ್ರಕೋವಿಡ್-19 ನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಇಂಧನ ಮತ್ತು ಅನಿವಾರ್ಯ ಕೈಗಾರಿಕಾ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸುವುದು ರಾಷ್ಟ್ರೀಯ ಭದ್ರತೆಗೆ ಅಗತ್ಯವೆಂದು ಚೀನಾ ಭಾವಿಸಿದೆ.ಪ್ರಮುಖ ಅಂಕಿಅಂಶಗಳು155 ಮಿಲಿಯನ್ ಟನ್ಕಲ್ಲಿದ್ದಲು ಆಧಾರಿತ ರಾಸಾಯನಿಕ ಬಳಕೆ (2020)276 ಮಿಲಿಯನ್ ಟನ್ಕಲ್ಲಿದ್ದಲು ಆಧಾರಿತ ರಾಸಾಯನಿಕ ಬಳಕೆ (2024)ಐದನೇ ಒಂದರಷ್ಟುಜಾಗತಿಕ ತೈಲ ಬಳಕೆಯಲ್ಲಿ ಚೀನಾದ ಪಾಲುಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಎ.ಐ ವಲಯದಲ್ಲಿ ತಲ್ಲಣ ಸೃಷ್ಟಿಸಿದ ಕೊಲ್ಲಿ ಸಂಘರ್ಷ

ಪ್ರಾಥಮಿಕವಾಗಿ ಚೀನಾ ಮಾಡಿದ ಕೆಲಸ ಕಚ್ಚಾ ತೈಲ ಸಂಗ್ರವನ್ನು ಹೆಚ್ಚಿಸುವುದು. ಎರಡನೆಯದು ನವೀಕರಿಸಬಹುದಾದ ಇಂಧನ ಮತ್ತು ಎಲೆಕ್ಟ್ರಿಕ್ ವಾಹನಗಳಲ್ಲಿ ಭಾರಿ ಹೂಡಿಕೆ. ಪ್ರಮುಖ ವಲಯಗಳಲ್ಲಿ ತೈಲದ ಬದಲಿಗೆ ಕಲ್ಲಿದ್ದಲು ಬಳಸುವ ಕೈಗಾರಿಕಾ ಪ್ರಕ್ರಿಯೆಗಳನ್ನು ಚೀನಾ ಅಭಿವೃದ್ಧಿಪಡಿಸಿದೆ. ಈ ಪ್ರಯತ್ನಗಳಿಂದಾಗಿ ಜಾಗತಿಕ ತೈಲ ಪೂರೈಕೆಯಲ್ಲಿ ಅಡಚಣೆಯುಂಟಾದರೂ, ಅದರ ಪರಿಣಾಮ ಚೀನಾದ ಮೇಲೆ ಅಷ್ಟೇನು ದೊಡ್ಡ ಪ್ರಮಾಣದಲ್ಲಿ ಬೀರಿಲ್ಲ. ಆದರೂ ಬೃಹತ್ ಪ್ರಮಾಣದ ಆಮದು ಮುಂದುವರಿದಿದೆ.

ಜಾಗತಿಕ ತೈಲ ಬಳಕೆಯ ಸುಮಾರು ಐದನೇ ಒಂದರಷ್ಟು ಚೀನಾವೇ ಬಳಸುತ್ತಿದೆ. ಅದರ ಕಚ್ಚಾ ತೈಲದ ಸುಮಾರು ಮುಕ್ಕಾಲು ಭಾಗ ವಿದೇಶಗಳಿಂದಲೇ ಬರುತ್ತದೆ. ಬಹುಪಾಲು ತೈಲ ಹೊರ್ಮುಜ್ ಮತ್ತು ಮಲಕ್ಕಾ ಜಲಸಂಧಿಯಂತಹ ಆಯಕಟ್ಟಿನ ಪ್ರದೇಶಗಳ ಮೂಲಕವೇ ಆಮದಾಗುತ್ತದೆ. ಇದು ರಾಷ್ಟ್ರೀಯ ಭದ್ರತೆಗೆ ದೀರ್ಘಕಾಲೀನವಾಗಿ ಅಪಾಯ ತರುತ್ತದೆ ಎಂದು ಈಗಾಗಲೇ ಚೀನಾ ಅಂದಾಜಿಸಿ, ಪರ್ಯಾಯ ಮಾರ್ಗಗಳನ್ನೂ ಕಂಡುಕೊಂಡಿದೆ.

2000ರ ದಶಕದ ಆರಂಭದಲ್ಲೇ 'ಮಲಕ್ಕಾ ಸಂದಿಗ್ಧತೆ'ಯ ಅಪಾಯವನ್ನು ಕಂಡುಕೊಂಡ ಚೀನಾ, ಭವಿಷ್ಯದ ಪೂರೈಕೆ ಅಡಚಣೆಯನ್ನು ಎದುರಿಸಲು 2004ರಿಂದಲೇ ವ್ಯೂಹಾತ್ಮಕ ಪೆಟ್ರೋಲಿಯಂ ಮೀಸಲು ವ್ಯವಸ್ಥೆಯನ್ನು ಸ್ಥಾಪಿಸಲು ಪ್ರಾರಂಭಿಸಿತು. ಇತ್ತೀಚಿನ ವರ್ಷಗಳಲ್ಲಿ, ಆ ಮೀಸಲುಗಳನ್ನು ವಿಸ್ತರಿಸುವ ಪ್ರಯತ್ನಗಳನ್ನು ಮತ್ತಷ್ಟು ವೇಗಗೊಳಿಸಿದೆ. ಸದ್ಯ ಚೀನಾದಲ್ಲಿ ಮೀಸಲು ಇರುವ ತೈಲದ ಪ್ರಮಾಣದ ಅಂಕಿಅಂಶ ಲಭ್ಯವಿಲ್ಲ. ಆದರೆ ಅಮೆರಿಕ ಹೊರೆತು‍ಪಡಿಸಿ ಅತಿದೊಡ್ಡ ಸಂಗ್ರಹಗಳಲ್ಲಿ ಒಂದೆಂದು ವಿಶ್ಲೇಷಕರು ಅಂದಾಜಿಸಿದ್ದಾರೆ. ಇದೇ ವೇಳೆಯಲ್ಲಿ ತನ್ನ ಆರ್ಥಿಕತೆಯಲ್ಲಿ ತೈಲದ ಪಾತ್ರವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಲೇ ಬಂದಿದೆ.

ಕೊಲ್ಲಿ ಯುದ್ಧ: ಪಾತಾಳಕ್ಕೆ ಕುಸಿದ ಕಲ್ಲಂಗಡಿ ಬೆಲೆ

ಒಂದು ದಶಕದ ಹಿಂದೆ, ಚೀನಾವು ಆಂತರಿಕ ದಹನ ಇಂಜಿನ್ (Internal Combustion Engines) ಚಾಲಿತ ಕಾರುಗಳ (ಪೆಟ್ರೋಲ್, ಡೀಸೆಲ್, ಸಿಎನ್ ಜಿ ಇತ್ಯಾದಿ) ವಿಶ್ವದ ಅತಿದೊಡ್ಡ ಮಾರುಕಟ್ಟೆಯಾಗಿತ್ತು. ಆದರೆ ಇಂದು ಎಲೆಕ್ಟ್ರಿಕ್ ವಾಹನಗಳ ಅತಿದೊಡ್ಡ ಮಾರುಕಟ್ಟೆಯಾಗಿ ಬದಲಾಗಿದೆ. ಸರ್ಕಾರ ನೀಡಿದ ಸಬ್ಸಿಡಿಗಳು, ಮೂಲಸೌಕರ್ಯ ಹೂಡಿಕೆ ಮತ್ತು ಹೊಸ ಕೈಗಾರಿಕಾ ನೀತಿಯೇ ಇದಕ್ಕೆ ಪ್ರಮುಖ ಕಾರಣ. ಸದ್ಯ ಗ್ಯಾಸೋಲಿನ್ ಮತ್ತು ಡೀಸೆಲ್ ಬಳಕೆ ಇಳಿಕೆಯಾಗಿದೆ. ಒಟ್ಟಾರೆ ಇಂಧನ ಬಳಕೆ ಬೆಳೆಯುತ್ತಲೇ ಇದ್ದರೂ, ಬೇಡಿಕೆ ಸತತ ಎರಡು ವರ್ಷಗಳಿಂದ ಕುಸಿಯುತ್ತಾ ಬಂದಿದೆ.

ಚೀನಾ ವಿಶ್ವದ ಅತಿದೊಡ್ಡ ಸೌರ ಮತ್ತು ಪವನ ಶಕ್ತಿ ಸ್ಥಾವರಗಳನ್ನು ನಿರ್ಮಿಸಿದೆ. ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ನವೀಕರಿಸಬಹುದಾದ ಇಂಧನದ ಮೇಲೆ ಚೀನಾ ಭಾರಿ ಹೂಡಿಕೆ ಮಾಡುತ್ತಿದೆ. ಇದು ಪರ್ಯಾಯ ಇಂಧನ ಬಳಕೆಗೆ ಒಗ್ಗಿಕೊಳ್ಳುವ ವೇಗವನ್ನೂ ಸೂಚಿಸುತ್ತದೆ. ಈ ಬದಲಾವಣೆಗಳು ನವೀಕರಿಸಲಾಗದ ಇಂಧನಗಳ ಮೇಲಿನ ಅವಲಂಬನೆಯನ್ನು ಸಂಪೂರ್ಣವಾಗಿ ತೊಡೆದುಹಾಕಿಲ್ಲ, ಆದರೆ ಅವಲಂಬನೆಯ ಸ್ವರೂಪವನ್ನು ಬದಲಿಸಿವೆ. ಇಷ್ಟೆಲ್ಲಾ ಬದಲಾವಣೆಗಳಾದರೂ ಕಲ್ಲಿದ್ದಲನ್ನು ಚೀನಾ ಯಥೇಚ್ಛವಾಗಿ ಬಳಕೆ ಮಾಡುತ್ತಿದೆ. ಇಂದಿಗೂ ಕಲ್ಲಿದ್ದಲು ಚೀನಾದ ಇಂಧನ ವ್ಯವಸ್ಥೆಯ ಬೆನ್ನೆಲುಬಾಗಿ ಉಳಿದಿದೆ. ಕಲ್ಲಿದ್ದಲಿನ ಮೂಲಕವೇ ಚೀನಾದ ಬಳಕೆಗಿಂತ ಅರ್ಧಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದನೆಯಾಗುತ್ತದೆ. ಕೈಗಾರಿಕೆಗೂ ಕಲ್ಲಿದ್ದಲೇ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ.

ಕೊಲ್ಲಿ ಯುದ್ಧ ಪರಿಣಾಮ: ಪರ್ಯಾಯ ಇಂಧನ ಮೂಲ ಹುಡುಕಾಟದಲ್ಲಿ ರಾಷ್ಟ್ರಗಳು

ಚೀನಾದ ಕೈಗಾರಿಕಾ ನೀತಿಯಲ್ಲಿ ಇಂಧನ ಪ್ರಮುಖ ಪಾತ್ರ ಪಡೆದುಕೊಂಡಿದೆ. ಇಂಧನ ಹಾಗೂ ರಾಸಾಯನಿಕ ಲಭ್ಯತೆಯನ್ನು ರಾಷ್ಟ್ರೀಯ ಭದ್ರತೆಯ ವಿಚಾರವನ್ನಾಗಿ ಚೀನಾ ಪರಿಗಣಿಸುತ್ತದೆ. ಡೊನಾಲ್ಡ್ ಟ್ರಂಪ್ ಅವರು ಮೊದಲ ಬಾರಿಗೆ ಅಧ್ಯಕ್ಷರಾಗಿದ್ದಾಗ ಅಮೆರಿಕ ಹಾಗೂ ಚೀನಾ ನಡುವೆ ನಡೆದಿದ್ದ ಸುಂಕ ಸಮರವು, ಚೀನಾದ ವ್ಯಾಪಾರಕ್ಕೆ ಭಾರಿ ದೊಡ್ದ ಹೊಡೆತ ನೀಡಿತ್ತು. ಇಂತಹ ಬಾಹ್ಯ ಅಡಚಣೆಗಳಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಚೀನಾ ಇಂಧನ ಲಭ್ಯತೆ ಬಗ್ಗೆ ಹೆಚ್ಚಿನ ಗಮನ ನೀಡಿತು.

ಚೀನಾದ ಈ ನೀತಿಗಳು ಕೈಗಾರಿಕೆಗಳನ್ನೇ ಮರುರೂಪಿಸಿವೆ. 1990 ರ ದಶಕದ ಕೊನೆಯಲ್ಲಿ ಮತ್ತು 2000ರ ದಶಕದ ಆರಂಭದಲ್ಲಿ, ಚೀನಾ ತನ್ನ ಉತ್ಪಾದನಾ ವಲಯಕ್ಕೆ ಅಗತ್ಯವಿರುವ ಪೆಟ್ರೋಕೆಮಿಕಲ್‌ಗಳನ್ನು ಪೂರೈಸಲು ಡ್ಯುಪಾಂಟ್, ಶೆಲ್ ಮತ್ತು ಬಿಎಎಸ್‌ಎಫ್‌ನಂತಹ ವಿದೇಶಿ ಕಂಪನಿಗಳ ಮೇಲೆ ಹೆಚ್ಚು ಅವಲಂಬಿತವಾಗಿತ್ತು. ಕಾಲಾನಂತರದಲ್ಲಿ, ಸರ್ಕಾರಿ ಹಣಕಾಸು ನೆರವು, ಸರ್ಕಾರದ ಪ್ರೋತ್ಸಾಹದಿಂದ ದೇಶೀಯ ಸಂಸ್ಥೆಗಳು ವೇಗವಾಗಿ ವಿಸ್ತರಿಸಿದವು. ಇಂದು, ಚೀನಾ ಅನೇಕ ಕೈಗಾರಿಕಾ ವಸ್ತುಗಳ ಉತ್ಪಾದನೆಯಲ್ಲಿ ದೊಡ್ಡ ಪಾಲನ್ನು ಹೊಂದಿದೆ. ಜಗತ್ತಿನ ಸುಮಾರು ಮುಕ್ಕಾಲು ಭಾಗದಷ್ಟು ಪಾಲಿಸ್ಟರ್ ಮತ್ತು ನೈಲಾನ್ ಅಲ್ಲಿಯೇ ತಯಾರಾಗುತ್ತವೆ. ಜೊತೆಗೆ ರಸಗೊಬ್ಬರಗಳು ಮತ್ತು ರಾಸಾಯನಿಕಗಳ ಬಹುದೊಡ್ಡ ಪಾಲೂ ಅಲ್ಲಿಯೇ ಉತ್ಪಾದನೆಯಾಗುತ್ತದೆ.

ಕೊಲ್ಲಿ ಯುದ್ಧ: ಮಾರ್ಚ್‌ನಲ್ಲಿ ₹ 1.14 ಲಕ್ಷ ಕೋಟಿ ಹಿಂಪಡೆದ ವಿದೇಶಿ ಹೂಡಿಕೆದಾರರು

ಈ ಇಡೀ ರೂಪಾಂತರಕ್ಕೆ ಪ್ರಮುಖ ಕಾರಣ ಕೈಗಾರಿಕೆಗಳಲ್ಲಿ ತೈಲದ ಬದಲು ಕಲ್ಲಿದ್ದನ್ನು ಕಚ್ಚಾವಸ್ತುವಾಗಿ ಬಳಸುವ ತಂತ್ರಜ್ಞಾನಗಳ ಅಭಿವೃದ್ಧಿ. ಈ ಪ್ರಕ್ರಿಯೆಗಳ ಮೂಲಕ, ಕಲ್ಲಿದ್ದಲನ್ನು ಮೆಥನಾಲ್ ಮತ್ತು ಅಮೋನಿಯಾದಂತಹ ರಾಸಾಯನಿಕಗಳಾಗಿ ಪರಿವರ್ತಿಸಬಹುದು, ಇವು ಪ್ಲಾಸ್ಟಿಕ್, ರಸಗೊಬ್ಬರ ಮತ್ತು ಇತರ ಉತ್ಪನ್ನಗಳ ತಯಾರಿಕೆಗೆ ಅಗತ್ಯವಾದ ವಸ್ತುಗಳಾಗಿವೆ. ಅಂದಹಾಗೆ ಈ ತಂತ್ರಜ್ಞಾನವೇನೂ ಹೊಸದಲ್ಲ. ಎರಡನೇ ಮಹಾಯುದ್ಧದ ವೇಳೆಯಲ್ಲಿ ತೈಲದ ಕೊರತೆ ಎದುರಾದಾಗ ಕೈಗಾರಿಕಾ ಉತ್ಪಾದನೆಯನ್ನು ಕಾಯ್ದುಕೊಳ್ಳಲು ಜರ್ಮನಿಯಲ್ಲಿ ಇದನ್ನು ಬಳಸಲಾಗಿತ್ತು. ಆರ್ಥಿಕತೆಯನ್ನು ಬಾಹ್ಯ ಅಡಚಣೆಗಳಿಂದ ರಕ್ಷಿಸಲು ಕಳೆದ ದಶಕದಲ್ಲಿ ಚೀನಾದಲ್ಲಿ ಇದನ್ನು ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತಿದೆ.

2020ರಲ್ಲಿ, ಚೀನಾ ರಾಸಾಯನಿಕಗಳ ತಯಾರಿಕೆಗೆ 155 ಮಿಲಿಯನ್ ಟನ್ ಗುಣಮಟ್ಟದ ಕಲ್ಲಿದ್ದಲು ಬಳಸಿದೆ. 2024ರ ಹೊತ್ತಿಗೆ, ಅದು 276 ಮಿಲಿಯನ್ ಟನ್‌ಗಳಿಗೆ ಏರಿಕೆಯಾಗಿದೆ. ಇದು ಅಮೆರಿಕದ ಸಂಪೂರ್ಣ ಕಲ್ಲಿದ್ದಲು ಬಳಕೆಗಿಂತಲೂ ಹೆಚ್ಚು.

ಚೀನಾದ ಅಧಿಕಾರಿಗಳು ಕಲ್ಲಿದ್ದಲು ಆಧಾರಿತ ಉತ್ಪಾದನೆಯನ್ನು ಒಂದು ಪರಿವರ್ತನಾ ಕ್ರಮ ಎಂದು ಬಣ್ಣಿಸಿದ್ದಾರೆ, ಇದು ಹೆಚ್ಚು ನವೀಕರಿಸಬಹುದಾದ ಇಂಧನ ವ್ಯವಸ್ಥೆಯತ್ತ ಸಾಗುವ ನಡುವಿನ ಅಂತರವನ್ನು ತುಂಬುವ ಉದ್ದೇಶ ಹೊಂದಿದೆ. ಆದರೆ ಅಲ್ಪಾವಧಿಯಲ್ಲಿ, ಜಾಗತಿಕ ತೈಲ ಮತ್ತು ಅನಿಲ ಬೆಲೆಗಳ ಏರಿಕೆಯ ವಿರುದ್ಧ ಸುರಕ್ಷಾ ಕವಚವಾಗಿ ಇದು ಕಾರ್ಯನಿರ್ವಹಿಸಿದೆ. ಇದರ ಲಾಭ ಇತ್ತೀಚಿನ ಯುದ್ಧದ ದಿನಗಳಲ್ಲಿ ಸ್ಪಷ್ಟವಾಗಿ ಗೋಚರಿಸಿದೆ.

ಕೊಲ್ಲಿ ಸಮರದಿಂದ ಭಾರತ-ಅರಬ್ ಸಂಬಂಧಕ್ಕೆ ಅಡ್ಡಿ: ದೇಶದ ಆರ್ಥಿಕತೆಗೆ 'ಹೊಸ ಆಘಾತ'

ಮಧ್ಯಪ್ರಾಚ್ಯದ ಸಂಘರ್ಷದಿಂದ ಅಂತರರಾಷ್ಟ್ರೀಯ ಇಂಧನ ಬೆಲೆಗಳು ಏರಿಕೆಯಾದಾಗ, ವಿಯೆಟ್ನಾಂ ಮತ್ತು ಫಿಲಿಪೈನ್ಸ್ ಸೇರಿದಂತೆ ಆಗ್ನೇಯ ಏಷ್ಯಾದ ಕೆಲವು ದೇಶಗಳಲ್ಲಿ ತೈಲ ಕೊರತೆ ಉಂಟಾಯಿತು. ಅವು ಮೊದಲು ಸಹಾಯಕ್ಕಾಗಿ ಮೊರೆ ಇಟ್ಟಿದ್ದು ಚೀನಾಕ್ಕೆ. ಇದು ಚೀನಾದ ಸಾಮರ್ಥ್ಯದ ಪ್ರತೀಕ. ಇತ್ತೀಚಿನ ವಾರಗಳಲ್ಲಿ, ಚೀನಾ ತನ್ನಲ್ಲಿರುವ ಹೆಚ್ಚುವರಿ ದ್ರವೀಕೃತ ನೈಸರ್ಗಿಕ ಅನಿಲವನ್ನು (LNG) ಏಷ್ಯಾದ ಖರೀದಿದಾರರಿಗೆ ಮಾರಾಟ ಮಾಡಿದೆ. ಚೀನಾದಲ್ಲಿರುವ ಎಷ್ಟರ ಮಟ್ಟಿಗೆ ಇಂಧನ ಸಂಗ್ರಹವಿದೆ ಎನ್ನುವುದನ್ನು ಪ್ರತಿಬಿಂಬಿಸುತ್ತದೆ.

ಕೆಲವು ವಲಯಗಳಲ್ಲಿ ದೇಶಿಯವಾಗಿ ಸ್ಥಿರ ಬೆಲೆ ಕಾಯ್ದುಕೊಳ್ಳುವ ಚೀನಾದ ಸಾಮರ್ಥ್ಯವೂ ಗಮನ ಸೆಳೆದಿದೆ. ಉದಾಹರಣೆಗೆ, ಸಂಘರ್ಷ ಪ್ರಾರಂಭವಾದಾಗಿನಿಂದ ಜಾಗತಿಕ ಯೂರಿಯಾ ಬೆಲೆ ತೀವ್ರವಾಗಿ ಏರಿವೆ. ಜಗತ್ತಿನ ಸುಮಾರು ಮೂರನೇ ಒಂದು ಭಾಗದಷ್ಟು ಯೂರಿಯಾ ಉತ್ಪಾದಿಸುವ ಚೀನಾದ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಏರಿಕೆ ಕಂಡು ಬಂದಿಲ್ಲ. ಇದಕ್ಕೆ ಕಾರಣ ಉತ್ಪಾದನೆಯಲ್ಲಿ ಕಲ್ಲಿದ್ದಲು ಬಳಕೆ. ಈ ಬೆಲೆ ಸ್ಥಿರತೆ ಚೀನಾದ ಕೃಷಿಯನ್ನು ಅನಿಶ್ಚಿತತೆಯಿಂದ ರಕ್ಷಿಸಿದೆ.

ಚೀನಾಗೂ ಇದೆ ಸಮಸ್ಯೆ

ಚೀನಾ ಇಂದಿಗೂ ವಿಶ್ವದ ಅತಿ ದೊಡ್ಡ ತೈಲ ಮತ್ತು ಅನಿಲ ಆಮದುದಾರ ದೇಶ. ಅದರ ಕೈಗಾರಿಕಾ ಬೆಳವಣಿಗೆಯ ತಳಹದಿ ಜಾಗತಿಕ ವ್ಯಾಪಾರದ ಮೇಲೆ ಅವಲಂಬಿತವಾಗಿದೆ. ಸಂಸ್ಕರಿಸಿದ ಇಂಧನಗಳ ಬಳಕೆ ಕಡಿಮೆಯಾದರೂ, ಪೆಟ್ರೋಕೆಮಿಕಲ್ಸ್ ಮತ್ತು ಭಾರಿ ಕೈಗಾರಿಕೆಗಳಲ್ಲಿ ತೈಲ ಬಳಕೆ ಇನ್ನೂ ಹೆಚ್ಚಾಗುತ್ತಿದೆ. ಚೀನಾ ಮಾಡಿಕೊಂಡಿರುವ ಬದಲಾವಣೆಗಳು ಅವಲಂಬನೆಯಿಂದ ಮುಕ್ತಿ ಎಂದು ತಿಳಿಯುವ ಬದಲು, ಮರು ಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅರ್ಥಮಾಡಿಕೊಳ್ಳುವುದು ಉತ್ತಮ ಎಂದು ವಿಶ್ಲೇಷಕರು ಹೇಳುತ್ತಾರೆ.

ಭಾರತ ಸೇರಿದಂತೆ ಏಷ್ಯಾದ ಅನೇಕ ದೊಡ್ಡ ಆರ್ಥಿಕತೆಗಳು ಕೊಲ್ಲಿ ಯುದ್ಧದದಿಂದ ಉಂಟಾಗಿರುವ ಆಘಾತಕ್ಕೆ ತುತ್ತಾಗಿವೆ. ಈ ದೇಶಗಳಲ್ಲಿ ದೊಡ್ಡ ಪ್ರಮಾಣ ದೇಶೀಯ ಪರ್ಯಾಯಗಳು ಕಡಿಮೆ ಇವೆ. ಇಂತಹ ಸಂದರ್ಭದಲ್ಲಿ ಚೀನಾದ ಪ್ರಯತ್ನವನ್ನೂ ಭಾರತವೂ ಮಾದರಿಯಾಗಿ ತೆಗೆದುಕೊಳ್ಳಬಹುದು.

OpenAI vs Anthropic: ಎ.ಐ ದಿಗ್ಗಜರ ಸಮರಕ್ಕೆ ಭಾರತವೇ ಅಖಾಡ, ಯಾಕಿಷ್ಟು ಮುನಿಸು?

ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ, ಹಡಗು ಮತ್ತು ವ್ಯಾಪಾರಕ್ಕೆ ಉಂಟಾದ ಅಡಚಣೆಗಳು ಪೂರೈಕೆ ಸರಪಳಿಯ ಬಗ್ಗೆ ಆತಂಕ ಹೆಚ್ಚಿಸಿದವು. ಹೀಗಾಗಿ 2020ರಲ್ಲಿ, ಚೀನಾವು ಇಂಧನ ಮತ್ತು ಕೈಗಾರಿಕೆಗಳು ಸೇರಿದಂತೆ ಪ್ರಮುಖ ವಲಯಗಳಲ್ಲಿ ಸ್ವಾವಲಂಬನೆಗೆ ಒತ್ತು ನೀಡುವ ಕಾರ್ಯತಂತ್ರ ರೂಪಿಸಿತು. ದೇಶೀಯ ತಂತ್ರಜ್ಞಾನಗಳನ್ನು ವೇಗವಾಗಿ ಅಭಿವೃದ್ಧಿ ಪಡಿಸುವುದು ಹಾಗೂ ವಿದೇಶಿ ನಿರ್ಬಂಧಗಳಿಂದಾಗಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಮುಂದಡಿಯಿಟ್ಟಿತು. ಇಂಧನ ವೈವಿಧ್ಯೀಕರಣ ರಾಷ್ಟ್ರೀಯ ಭದ್ರತೆಗೆ ಪ್ರಮುಖ ಎಂದು ಚೀನಾ ನಂಬಿದೆ. ಸಾಂಪ್ರದಾಯಿಕ ಮತ್ತು ಕಡಿಮೆ ಇಂಗಾಲ ಹೊರಸೂಸುವ ಇಂಧನ ಮೂಲಗಳಲ್ಲಿ ಚೀನಾ ಭಾರಿ ಹೂಡಿಕೆ ಮಾಡುತ್ತಿದೆ.

ಪಶ್ಚಿಮ ಏಷ್ಯಾದ ಈಗಿನ ಸಂಘರ್ಷಕ್ಕೂ ಮುನ್ನವೇ, ಇಂಧನ ಮತ್ತು ಕೈಗಾರಿಕಾ ಸರಬರಾಜು ಸರಪಳಿಗಳನ್ನು ಚೀನಾ ಬಲಪಡಿಸಿತ್ತು. ಹೀಗಾಗಿ ಪ್ರಸ್ತುತ ಬಿಕ್ಕಟ್ಟು ಅದರ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದೆ. ಇಂಧನ ಸ್ವಾವಲಂಬನೆಯ ಹೆಜ್ಜೆ ಎಂದು ಇದನ್ನು ಪರಿಗಣಿಸಬಹುದು. ಈ ಯುದ್ಧದಲ್ಲಿ ಚೀನಾ ಭಾಗಿಯಾಗಿಲ್ಲ. ಆದರೆ ಯುದ್ಧದ ಪರಿಣಾಮಗಳು ಹಲವು ವರ್ಷಗಳಿಂದ ಚೀನಾ ನಿರ್ಮಿಸುತ್ತಿರುವ ವ್ಯವಸ್ಥೆಯನ್ನು ಪರೀಕ್ಷಿಸುತ್ತಿವೆ.

ಆಧಾರ: ದಿ ನ್ಯೂಯಾರ್ಕ್ ಟೈಮ್ಸ್, ಚೀನಾದ ಕಚ್ಚಾ ತೈಲ ಆಮದು ಮತ್ತು ಕಲ್ಲಿದ್ದಲು ಬಳಕೆಯ ಕುರಿತಾದ ಸರ್ಕಾರದ ಹೇಳಿಕೆಗಳು (2020-2025), ಚೀನಾದ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಮತ್ತು ಎಲೆಕ್ಟ್ರಿಕ್ ವಾಹನಗಳ ಅಳವಡಿಕೆ ಕುರಿತಾದ ಅಂತರರಾಷ್ಟ್ರೀಯ ಇಂಧನ ಸಂಸ್ಥೆಯ ವರದಿಗಳು, ಚೀನಾ ಸರ್ಕಾರದ ಇಂಧನ ಮತ್ತು ರಾಸಾಯನಿಕ ಉದ್ಯಮದ ಅಂಕಿಅಂಶಗಳು (2020-2025)

ಸಾವಿರಾರು ವರ್ಷಗಳವರೆಗೆ ದತ್ತಾಂಶ ಸಂಗ್ರಹ: ಗಾಜಿನಲ್ಲೇ ಮೈಕ್ರೊಸಾಫ್ಟ್ ಮ್ಯಾಜಿಕ್
Dailyhunt
Disclaimer: This content has not been generated, created or edited by Dailyhunt. Publisher: Prajavani