Dailyhunt Logo
  • Light mode
    Follow system
    Dark mode
    • Play Story
    • App Story
ಮಲ-ಮೂತ್ರ ತಡೆಯುವ ಅಭ್ಯಾಸ ಇದೆಯೇ? ಈ ಆರೋಗ್ಯ ಸಮಸ್ಯೆ ತಪ್ಪಿದ್ದಲ್ಲ!

ಮಲ-ಮೂತ್ರ ತಡೆಯುವ ಅಭ್ಯಾಸ ಇದೆಯೇ? ಈ ಆರೋಗ್ಯ ಸಮಸ್ಯೆ ತಪ್ಪಿದ್ದಲ್ಲ!

ಕೆಲಸದ ಒತ್ತಡ, ದೀರ್ಘ ಪ್ರಯಾಣದ ಆಯಾಸ ಅಥವಾ ಸಾರ್ವಜನಿಕ ಶೌಚಾಲಯಗಳ ನೈರ್ಮಲ್ಯದ ಕೊರತೆಯಿಂದಾಗಿ ಹಲವರು ಮಲ-ಮೂತ್ರ ವಿಸರ್ಜನೆಯನ್ನು ಬಲವಂತವಾಗಿ ತಡೆಹಿಡಿಯುತ್ತಾರೆ. ಒಮ್ಮೊಮ್ಮೆ ಹೀಗೆ ಮಾಡುವುದರಿಂದ ತಕ್ಷಣಕ್ಕೆ ಯಾವುದೇ ಗಂಭೀರ ಅನಾರೋಗ್ಯ ಕಾಣಿಸದಿರಬಹುದು. ಆದರೆ, ದೈನಂದಿನ ಜೀವನದಲ್ಲಿ ಈ ರೀತಿ ದೇಹ ನೀಡುವ ಸ್ವಾಭಾವಿಕ ಮುನ್ಸೂಚನೆಗಳನ್ನು ಪದೇಪದೇ ನಿರ್ಲಕ್ಷಿಸುವುದು ಮತ್ತು ಮುಂದೂಡುವುದು ಕಾಲಕ್ರಮೇಣ ನರಮಂಡಲ, ಜೀರ್ಣಾಂಗ ಹಾಗೂ ವಿಸರ್ಜನಾ ಅಂಗಗಳ ಮೇಲೆ ಅತ್ಯಂತ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಕ್ಷೇಮ ಕುಶಲ: ಮೂಲವ್ಯಾಧಿ ದೇಹಕ್ಕೆ ಮುಳ್ಳು!ಕ್ಷೇಮ-ಕುಶಲ: ನಿದ್ದೆ ಆರೋಗ್ಯದ ಸಹಜಸೂತ್ರ

ಇದು ಕೇವಲ ಆಧುನಿಕ ವೈದ್ಯಕೀಯ ವಿಜ್ಞಾನದ ಎಚ್ಚರಿಕೆಯಷ್ಟೇ ಅಲ್ಲ; ದೇಹದ ನೈಸರ್ಗಿಕ ಪ್ರೇರಣೆ ಅಥವಾ ಸಹಜ ವೇಗಗಳನ್ನು ತಡೆಹಿಡಿಯಬಾರದು ಎಂಬುದನ್ನು ನಮ್ಮ ಪ್ರಾಚೀನ ಆಯುರ್ವೇದ ಗ್ರಂಥಗಳಲ್ಲಿಯೂ ಸ್ಪಷ್ಟವಾಗಿ ವಿವರಿಸಲಾಗಿದೆ. ಈ ಅಭ್ಯಾಸವು ಮಲಬದ್ಧತೆ, ಮೂತ್ರನಾಳದ ಸೋಂಕು ಹಾಗೂ ಇತರ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ನೇರ ಕಾರಣವಾಗುತ್ತದೆ. ಆದ್ದರಿಂದ ದೇಹದ ನೈಸರ್ಗಿಕ ಅಗತ್ಯಗಳಿಗೆ ಸಮಯಕ್ಕೆ ಸರಿಯಾಗಿ ಸ್ಪಂದಿಸುವುದು ಅಗತ್ಯ.

ಸಹಜ ವೇಗಗಳನ್ನು ತಡೆಯಬಾರದು ಏಕೆ?

ಚರಕ ಸಂಹಿತೆಯ ಸೂತ್ರಸ್ಥಾನದ ಏಳನೇ ಅಧ್ಯಾಯವನ್ನು 'ನವೇಗಾನ್ಧಾರಣೀಯ ಅಧ್ಯಾಯ' ಎಂದು ಕರೆಯಲಾಗುತ್ತದೆ. ದೇಹದಲ್ಲಿ ಸಹಜವಾಗಿ ಉಂಟಾಗುವ ಕೆಲವು ವೇಗಗಳನ್ನು ಉದ್ದೇಶಪೂರ್ವಕವಾಗಿ ತಡೆಹಿಡಿಯಬಾರದು ಎಂಬುದು ಈ ಅಧ್ಯಾಯದ ಮುಖ್ಯ ಆಶಯ.

ಮಲ, ಮೂತ್ರ ಮತ್ತು ವಾಯು ವಿಸರ್ಜನೆಯ ಜೊತೆಗೆ ಸೀನು, ಆಕಳಿಕೆ, ಹಸಿವು, ಬಾಯಾರಿಕೆ, ನಿದ್ರೆ ಮುಂತಾದ ಸಹಜ ಪ್ರಕ್ರಿಯೆಗಳ ಬಗ್ಗೆಯೂ ಇಲ್ಲಿ ವಿವರಿಸಲಾಗಿದೆ. ಸುಶ್ರುತ ಸಂಹಿತೆ ಮತ್ತು ವಾಗ್ಭಟರ ಅಷ್ಟಾಂಗ ಹೃದಯದಲ್ಲಿಯೂ ಸಹಜ ವೇಗಗಳನ್ನು ತಡೆಹಿಡಿಯುವುದರಿಂದ ಉಂಟಾಗಬಹುದಾದ ತೊಂದರೆಗಳ ಕುರಿತು ಉಲ್ಲೇಖಗಳಿವೆ.

ಕ್ಷೇಮ-ಕುಶಲ: ಹೃದಯದ ಆರೋಗ್ಯಕ್ಕೆ ಜೀವನದ ಲಯಕ್ಷೇಮ ಕುಶಲ: ದಕ್ಷಿಣಾಯನದ ಆಹಾರ-ಆಚಾರಗಳು

ಈ ತತ್ವದ ಪ್ರಕಾರ, ದೇಹವು ನೀಡುವ ಸಹಜ ಸೂಚನೆಗಳನ್ನು ಗಮನಿಸುವುದು ಮುಖ್ಯ. ಕೆಲಸ ಅಥವಾ ಇತರ ಚಟುವಟಿಕೆಗಳ ಕಾರಣದಿಂದ ಪದೇಪದೇ ಅವುಗಳನ್ನು ಮುಂದೂಡುವ ಅಭ್ಯಾಸವನ್ನು ರೂಢಿಸಿಕೊಳ್ಳಬಾರದು.

ಮೂತ್ರ ತಡೆಯುವುದರಿಂದ ಏನಾಗಬಹುದು?

ಮೂತ್ರ ವಿಸರ್ಜನೆಯ ಬಯಕೆಯಾದಾಗ ಅದನ್ನು ಪದೇಪದೇ ಮುಂದೂಡುವುದು ಸೂಕ್ತವಲ್ಲ. ಮೂತ್ರದ ವೇಗವನ್ನು ತಡೆಹಿಡಿಯುವುದರಿಂದ ಮೂತ್ರಕೋಶದ ಸುತ್ತ ನೋವು, ಮೂತ್ರ ವಿಸರ್ಜಿಸುವಾಗ ತೊಂದರೆ ಮತ್ತು ಹೊಟ್ಟೆಯ ಕೆಳಭಾಗದಲ್ಲಿ ಅಸ್ವಸ್ಥತೆಯಂತಹ ಲಕ್ಷಣಗಳು ಉಂಟಾಗುತ್ತದೆ.

ಆಧುನಿಕ ವೈದ್ಯಕೀಯದ ದೃಷ್ಟಿಯಿಂದಲೂ ಮೂತ್ರ ವಿಸರ್ಜನೆಯ ಅಗತ್ಯವನ್ನು ನಿರಂತರವಾಗಿ ನಿರ್ಲಕ್ಷಿಸುವುದು ಒಳ್ಳೆಯ ಅಭ್ಯಾಸವಲ್ಲ. ಮೂತ್ರ ವಿಸರ್ಜಿಸುವಾಗ ಉರಿ, ನೋವು, ಪದೇಪದೇ ಮೂತ್ರಕ್ಕೆ ಹೋಗಬೇಕೆನಿಸುವುದು ಅಥವಾ ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಬೇಕು.

ಕ್ಷೇಮ ಕುಶಲ| ಕ್ಯಾನ್ಸರ್‌; ಬೇಡ ಭೀತಿ ಇರಲಿ ಜಾಗೃತಿಆಹಾರ-ವಿಹಾರವೇ ಆಯುರ್ವೇದದ ಆಧಾರ

ಮಲವಿಸರ್ಜನೆಯ ಬಯಕೆಯನ್ನು ನಿರ್ಲಕ್ಷಿಸಬೇಡಿ

ಮಲವಿಸರ್ಜನೆಯ ಅಗತ್ಯವಾದಾಗ ಅದನ್ನು ಮುಂದೂಡುವ ಅಭ್ಯಾಸವೂ ಸಮಸ್ಯೆಗಳಿಗೆ ಕಾರಣವಾಗಬಹುದು. ಮಲವು ಕರುಳಿನಲ್ಲಿ ಹೆಚ್ಚು ಸಮಯ ಉಳಿದಾಗ ಅದರಿಂದ ನೀರು ಹೆಚ್ಚು ಹೀರಲ್ಪಟ್ಟು ಮಲ ಗಟ್ಟಿಯಾಗಬಹುದು. ಇದರಿಂದ ಮಲಬದ್ಧತೆ, ಮಲ ವಿಸರ್ಜಿಸುವಾಗ ನೋವು ಮತ್ತು ಅತಿಯಾದ ಒತ್ತಡ ಹಾಕಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಮಲ ವಿಸರ್ಜನೆಯ ಬಯಕೆಯನ್ನು ಪದೇಪದೇ ನಿರ್ಲಕ್ಷಿಸುವುದರಿಂದ ಕೆಲವರಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು.

ಪ್ರತಿದಿನ ಶೌಚಕ್ಕೆ ಹೋಗಲು ನಿರ್ದಿಷ್ಟ ಸಮಯವನ್ನು ಮೀಸಲಿಡುವುದು, ಮಲವಿಸರ್ಜನೆಯ ಬಯಕೆಯಾದಾಗ ಅದಕ್ಕೆ ಸಮಯ ನೀಡುವುದು ಮತ್ತು ಶೌಚಾಲಯದಲ್ಲಿ ಅನಗತ್ಯವಾಗಿ ಹೆಚ್ಚು ಹೊತ್ತು ಕಳೆಯದಿರುವುದು ಉತ್ತಮ ಅಭ್ಯಾಸಗಳು.

ಹಾಗೆಯೆ, ಮಲವಿಸರ್ಜನೆಯ ಸಹಜ ವೇಗವನ್ನು ಪದೇಪದೇ ತಡೆಹಿಡಿಯುವುದರಿಂದ ವಾತ ದೋಷದ ಚಲನೆಗೆ ಅಡ್ಡಿಯಾಗಬಹುದು. ವಿಶೇಷವಾಗಿ, ಮಲವಿಸರ್ಜನೆ ಮತ್ತು ವಾಯು ವಿಸರ್ಜನೆಯ ಕಾರ್ಯಗಳನ್ನು ನಿಯಂತ್ರಿಸುವ ಅಪಾನ ವಾಯುವಿನ ಸಹಜ ಚಲನೆ ವ್ಯತ್ಯಯಗೊಳ್ಳಬಹುದು. ಇದರಿಂದ ಮಲಬದ್ಧತೆ, ಹೊಟ್ಟೆ ಉಬ್ಬರ, ಹೊಟ್ಟೆನೋವು, ಗ್ಯಾಸ್ ಸಮಸ್ಯೆ ಮತ್ತು ಮಲವಿಸರ್ಜನೆಗೆ ಕಷ್ಟವಾಗುವಂತಹ ತೊಂದರೆಗಳು ಕಾಣಿಸಿಕೊಳ್ಳಬಹುದು. ಮಲ ಗಟ್ಟಿಯಾಗಿ, ವಿಸರ್ಜನೆಯ ಸಮಯದಲ್ಲಿ ಹೆಚ್ಚು ಒತ್ತಡ ಹಾಕಬೇಕಾದರೆ ಮೂಲವ್ಯಾಧಿ ಮತ್ತು ಗುದದ್ವಾರದಲ್ಲಿ ಬಿರುಕು ಉಂಟಾಗುವ ಅಪಾಯವೂ ಇರುತ್ತದೆ.

ದೈನಂದಿನ ಜೀವನದಲ್ಲಿ ಏನು ಮಾಡಬೇಕು?

ದಿನವಿಡೀ ಸಾಕಷ್ಟು ನೀರು ಕುಡಿಯುವುದು, ನಾರಿನಂಶವಿರುವ ತರಕಾರಿ, ಹಣ್ಣು ಮತ್ತು ಧಾನ್ಯಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಹಾಗೂ ನಿಯಮಿತವಾಗಿ ನಡೆಯುವುದು ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಪ್ರಯಾಣದ ಸಂದರ್ಭದಲ್ಲಿ ಶೌಚಕ್ಕೆ ಹೋಗುವ ಅಗತ್ಯವನ್ನು ನಿರ್ಲಕ್ಷಿಸಬಾರದು. ಕೆಲಸದ ಸ್ಥಳದಲ್ಲಿಯೂ ಈ ಸಹಜ ಅಗತ್ಯಗಳಿಗೆ ಸೂಕ್ತ ಸಮಯ ನೀಡಬೇಕು.

Dailyhunt
Disclaimer: This content has not been generated, created or edited by Dailyhunt. Publisher: Prajavani