ಕಳೆದ ವಾರ 'ಸಿನಿ ಸಿಪ್'ನಲ್ಲಿ 'ಬೇಡರ ಕಣ್ಣಪ್ಪ' ಚಿತ್ರಕ್ಕೆ ರಾಜ್ಕುಮಾರ್ ಆಯ್ಕೆಯಾದದ್ದು ಹೇಗೆ ಎನ್ನುವುದನ್ನು ಮೆಲುಕುಹಾಕಿದ್ದೆವು. ಆಗ ರಾಜ್‌ಕುಮಾರ್ ಮೇಕಪ್ ಟೆಸ್ಟ್ ಕೊಟ್ಟುಬಂದಿದ್ದ ಸಂಗತಿಯನ್ನು ಪ್ರಸ್ತಾಪಿಸಲಾಗಿತ್ತು. ಸುಭಾಷ್ ಚಂದ್ರ ಬೋಸ್ ಅವರ ಬದುಕಿನ ಮಹತ್ವದ ಘಟ್ಟಗಳ ಕುರಿತು ಸಂಶೋಧನೆ ನಡೆಸಿರುವ ಚೂಡಿ ಶಿವರಾಂ ಅವರು ಆ ಬರಹಕ್ಕೆ ಪ್ರತಿಕ್ರಿಯಿಸಿ, ಮೇಕಪ್ ಎನ್ನುವುದೇ ಎಂತಹ ಸೂಕ್ಷ್ಮ ವಿದ್ಯಮಾನವಲ್ಲವೇ ಎಂದು ಗಮನಸೆಳೆದರು.
ರಾಜ್‌ಕುಮಾರ್ ಅವರು ಕೊಟ್ಟುಬಂದಿದ್ದ ಮೇಕಪ್ ಟೆಸ್ಟ್ 'ಬೇಡರ ಕಣ್ಣಪ್ಪ'ನ ಪಾತ್ರಕ್ಕೆ ಸಂಬಂಧಿಸಿದ್ದು. ಕಣ್ಣಪ್ಪನ ವಸ್ತ್ರ ಧರಿಸಿ, ಅದಕ್ಕೆ ತಕ್ಕಂತೆ ಮೇಕಪ್ ಕಲಾವಿದರ ಕೈಚಳಕದಿಂದ ರೂಪಾಂತರಗೊಂಡ ನಂತರ ಹೇಗೆ ಕಾಣುತ್ತಾರೆ ಎನ್ನುವುದನ್ನು ಒರೆಗೆಹಚ್ಚಿ ನೋಡುವುದು ಅಂತಹ ಟೆಸ್ಟ್‌ನ ಮೂಲ ಉದ್ದೇಶವಾಗಿತ್ತು. ಚೂಡಿ ಶಿವರಾಂ ಅವರ ಕುತೂಹಲಕ್ಕೆ ಇಂಬುಗೊಡುವ ಮೇಕಪ್‌ಗೆ ಸಂಬಂಧಿಸಿದ ಹಲವಾರು ಪ್ರಸಂಗಗಳು ಚಿತ್ರರಂಗದಲ್ಲಿ ಸಿಗುತ್ತವೆ.
ನಟಿ ಲೀಲಾವತಿ ಅವರಿಗೆ ಜಿಡ್ಡಿನ ತ್ವಚೆ ಇತ್ತು. ಚಿತ್ರೀಕರಣಕ್ಕೆ ಬರುವ ಮೊದಲು ತಾವೇ ಒಂದು ಸುತ್ತು ಮೇಕಪ್ ಮಾಡಿಕೊಂಡು ಬರುತ್ತಿದ್ದರು. ಆನಂತರ ಚಿತ್ರೀಕರಣದ ಸ್ಥಳದಲ್ಲಿ ಮೇಕಪ್ ಕಲಾವಿದರು ಪಾತ್ರಕ್ಕೆ ತಕ್ಕಂತೆ ಪ್ರಸಾಧನ ಸಾಮಗ್ರಿ ಬಳಸಿ ಅಲಂಕಾರ ಮಾಡುತ್ತಿದ್ದರು. ಮೇಕಪ್ ಹಚ್ಚಿಕೊಂಡು, ಚಿತ್ರೀಕರಣ ಶುರುವಾಗುವ ಹೊತ್ತಿಗೆ ಮುಖದ ಮೇಲೆ ಜಿಡ್ಡಿನ ಪದರವೊಂದು ಮೂಡಿರುತ್ತಿತ್ತು. ಅದನ್ನು ಆಗಾಗ ಒರೆಸುತ್ತಲೇ ಇರಬೇಕಿತ್ತು. ಈ ಸಮಸ್ಯೆ ಲೀಲಾವತಿ ಅವರನ್ನು ಕಾಡಲಾರಂಭಿಸಿತು. ಅವರು ಕನ್ನಡಿ ಎದುರು ನಿಂತು ಎಷ್ಟೋ ಸಲ ಬಿಕ್ಕಿ ಬಿಕ್ಕಿ ಅತ್ತುಬಿಟ್ಟಿದ್ದರು. ಚರ್ಮದ ಜಿಡ್ಡು ಕಡಿಮೆಯಾಗಲು ಯಾರು ಏನು ಸಲಹೆ ಕೊಟ್ಟರೂ ಅದನ್ನು ಜಾರಿಗೆ ತರುತ್ತಿದ್ದರು. ಮೇಕಪ್ ಹಚ್ಚುವ ತಾಸಿನ ಮೊದಲು, ನೀರನ್ನು ಚೆನ್ನಾಗಿ ಕುದಿಸಿ ಹಬೆ ತೆಗೆದುಕೊಂಡರೆ ಮುಖದ ಮೇಲೆ ಜಿಡ್ಡು ಮೂಡುವುದಿಲ್ಲ ಎಂದು ಒಬ್ಬರು ಸಲಹೆ ಕೊಟ್ಟರು. ನೀರನ್ನು ಕೊತಕೊತ ಕುದಿಸಿ, ಲೀಲಾವತಿ ಹಬೆ ತೆಗೆದುಕೊಂಡರು. ಮುಖ ಪಾತ್ರೆಗೆ ತುಂಬಾ ಹತ್ತಿರವಿಟ್ಟಿದ್ದರಿಂದ ಉರಿ ಶುರುವಾಯಿತು. ಚಿತ್ರೀಕರಣದ ಸ್ಥಳಕ್ಕೆ ಹೋಗಿ ಎಂದಿನಂತೆ ಮೇಕಪ್ ಹಾಕಿಸಿಕೊಂಡರು. ಕೆಲವೇ ನಿಮಿಷಗಳಲ್ಲಿ ಮುಖ ಊದಿಕೊಂಡಂತೆ ಭಾಸವಾಯಿತು. ಆ ದಿನದ ಚಿತ್ರೀಕರಣವನ್ನು ಉರಿಯ ಸಂಕಟ ಅನುಭವಿಸಿಯೇ ಪೂರೈಸಿದ್ದಾಯಿತು. ಅಂದು ರಾತ್ರಿ ಪದೇ ಪದೇ ಕನ್ನಡಿ ನೋಡಿಕೊಂಡಿದ್ದೇ ಬಂತು. ಸರಿಯಾಗಿ ನಿದ್ದೆ ಕೂಡ ಬರಲಿಲ್ಲ. ಮರುದಿನ ಹಬೆ ತೆಗೆದುಕೊಳ್ಳದೆ ಚಿತ್ರೀಕರಣ ನಡೆಯುವ ಸ್ಥಳಕ್ಕೆ ಹೋದರು. ಮೇಕಪ್ ಹಚ್ಚಿದ ಮೇಲೆ ಆ ದಿನ ಮುಖ ಉರಿಯಲಿಲ್ಲ. ಹೀಗಾಗಿ ತುಸು ಸಮಾಧಾನವಾಯಿತು.
ಸಿನಿ ಸಿಪ್: 'ಕಣ್ಣಪ್ಪ'ನ ಕಾರಣಕ್ಕೆ 'ರಾಜ್‌ಕುಮಾರ್' ಆದ ಮುತ್ತುರಾಜ್ಸಿನಿ ಸಿಪ್: ಸುದೀಪ್ 'ನೆಪೋಟಿಸಂ' ವರ್ತನೆಯ ನೆರಳಲ್ಲಿ ಕೆಲವು ಹಿತಕಥೆಗಳು...ಜೋಸಪಿನ್ ಎಂಬ ಹೇರ್ ಸ್ಟೈಲಿಸ್ಟ್ ಲೀಲಾವತಿ ಅವರಿಗೆ ಪಾತ್ರಕ್ಕೆ ತಕ್ಕಂತೆ ಕೇಶವಿನ್ಯಾಸ ಮಾಡುತ್ತಿದ್ದರು. ಸುಬ್ಬಣ್ಣ ಹಾಗೂ ದೊರೆಸ್ವಾಮಿ ಎಂಬಿಬ್ಬರು ಮೇಕಪ್‌ಮನ್‌ಗಳಿದ್ದರು. ತಮ್ಮ ಜಿಡ್ಡಿನ ಚರ್ಮಕ್ಕೆ ತಕ್ಕಂತೆ ಅವರು ಮೇಕಪ್ ಮಾಡುವುದಿಲ್ಲ ಎಂಬ ಅಳುಕು ಮೂಡಿದ್ದರಿಂದ, ಹಲವು ಸಂದರ್ಭಗಳಲ್ಲಿ ಲೀಲಾವತಿ ಖುದ್ದು ತಾವೇ ಮೇಕಪ್ ಮಾಡಿಕೊಳ್ಳುತ್ತಿದ್ದರು. ಮೇಕಪ್ ಕಲಾವಿದರಿಗೆ ಗೊತ್ತುಪಡಿಸಿದ್ದ ಸಂಭಾವನೆಯನ್ನು ಮಾತ್ರ ಅವರಿಗೇ ಕೊಡುತ್ತಿದ್ದರು. ಬೆಂಕಿಕಡ್ಡಿಯ ತುದಿಯನ್ನು ಬ್ರಶ್ ಬದಲು ಪರಿಕರವಾಗಿ ಬಳಸಿದ್ದು ತಮ್ಮದೇ ಶೋಧ ಎಂದು ಲೀಲಾವತಿ ಚಟಾಕಿ ಹಾರಿಸಿದ್ದರು.
ನಟ ಜಗ್ಗೇಶ್ ತಮ್ಮ ಮನೆಯ ಆಲ್ಮೆರಾದ ಲಾಕರ್‌ನಲ್ಲಿ ಇರಿಸಿದ್ದ ಒಂದು ಮೇಕಪ್ ಕಿಟ್ ಹೊರತೆಗೆದರು. ಅದರಲ್ಲಿ ಒಂದು ಲೋಷನ್ ಇತ್ತು. ಅದನ್ನು ಕೈಗೆ ಹಚ್ಚಿಕೊಂಡು, ಉಜ್ಜಿದರು. ಆಗ ಚರ್ಮಕ್ಕೆ ಒಂದು ಬಗೆಯ ಹೊಳಪು ಬಂದಿತು. ಕ್ಯಾಮೆರಾ ಎದುರಿಸುವಾಗ, ತಮ್ಮ ರೀತಿಯ ಚರ್ಮದ ಬಣ್ಣ ಇರುವವರಿಗೆ ಮೇಕಪ್ ಎಷ್ಟು ಮುಖ್ಯ ಎನ್ನುವುದನ್ನು ಅವರು ವಿವರವಾಗಿ ಹೇಳಿಕೊಂಡಿದ್ದರು. ಅವರು ವರ್ಷಗಳ ಕಾಲ ಚರ್ಮದ ಬಣ್ಣವನ್ನು ತುಸು ಹೆಚ್ಚಿಸುವಂತಹ ಒಂದು ಲೋಷನ್ ಬಳಸುತ್ತಿದ್ದರು. ಅದನ್ನು ತಯಾರಿಸುತ್ತಿದ್ದ ಕಂಪನಿ ಮುಚ್ಚಿಕೊಂಡು ಹೋಯಿತು. ಇನ್ನು ಆ ಲೋಷನ್ ಸಿಗುವುದಿಲ್ಲ ಎಂದು ಗೊತ್ತಾದಾಗ, ಸಂಗ್ರಹದಲ್ಲಿ ಇನ್ನೂ ಮೂರ್ನಾಲ್ಕು ಟ್ಯೂಬ್ ಲೋಷನ್‌ಗಳು ಇದ್ದವು. ಅವು ಮುಗಿಯುವಷ್ಟರಲ್ಲಿ ಪರ್ಯಾಯವಾಗಿ ಬೇರೆ ಲೋಷನ್ ಹುಡುಕಬೇಕಾಗಿ ಬಂತು. ಆಗ ಅವರು ವಿದೇಶಗಳಿಗೆ ಹೋದಾಗಲೆಲ್ಲ ಆ ಲೋಷನ್‌ನ ಟ್ಯೂಬನ್ನು ಜೊತೆಯಲ್ಲಿ ಒಯ್ಯುತ್ತಿದ್ದರು.
ಸಿನಿ ಸಿಪ್: ಶಿವಾಜಿ ಒಲ್ಲದ 'ಕಸ್ತೂರಿ ನಿವಾಸ' ಗೆಲ್ಲಿಸಿದ ರಾಜ್ ಅಭಿನಯಸಿನಿ ಸಿಪ್: ನಟಿ ರಮ್ಯಾ ಆಡಿದ್ದ ಜಸ್ಟ್ ಒಂದು ಕೆಟ್ಟ ಮಾತು...ಸಿನಿಮಾದವರ ಮೇಕಪ್‌ಗೆ ಅಗತ್ಯವಿರುವ ಪ್ರಸಾಧನಗಳನ್ನು ಮಾರಾಟ ಮಾಡುವ ಮಳಿಗೆಗಳಿಗೆ ಎಡತಾಕಿ, ಅಂಥದ್ದೇ ಬೇರೆ ಲೋಷನ್ ಸಿಗುವುದೋ ಎಂದು ಹುಡುಕುತ್ತಿದ್ದರು. ಲೋಷನ್ ಖರೀದಿಸುವ ಮೊದಲು ತಮ್ಮ ಚರ್ಮಕ್ಕೆ ಅದರಿಂದ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ ಎಂದು ಖಾತರಿಪಡಿಸಿಕೊಳ್ಳಬೇಕಾಗುತ್ತದೆ. ಹೋದಕಡೆಯೆಲ್ಲ ಒಮ್ಮೆ ಹಚ್ಚಿಸಿಕೊಂಡು, ಚರ್ಮಕ್ಕೆ ಹೊಂದುವುದೋ ಇಲ್ಲವೋ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿದರು. ಕೊನೆಗೂ ಒಂದು ದೇಶದಲ್ಲಿ ಪರ್ಯಾಯವಾದ ಲೋಷನ್ ಸಿಕ್ಕಿತು. ಐದಾರು ಟ್ಯೂಬ್‌ಗಳನ್ನು ತೆಗೆದುಕೊಂಡು ಬಂದರು. ಪುನೀತ್ ರಾಜ್‌ಕುಮಾರ್ ಹಾಗೂ ಶಿವರಾಜ್ ಕುಮಾರ್ ಅವರಿಗೂ ಅದನ್ನು ತೋರಿಸಿ, ಅವರ 'ಸ್ಕಿನ್ಟೋನ್'ಗೂ ಹೊಂದುವಂತಹ ಲೋಷನ್ ಅದು ಎಂದು ಮನವರಿಕೆ ಮಾಡಿಕೊಟ್ಟಿದ್ದರು. ಮುಂದೆ ಜಗ್ಗೇಶ್ 'ಮೇಕಪ್' ಎಂಬ ಸಿನಿಮಾದಲ್ಲಿ ವಯಸ್ಸಾದ ಅಜ್ಜಿಯ ಪಾತ್ರದಲ್ಲಿ ಅಭಿನಯಿಸಿದರು. ಅದಕ್ಕಾಗಿ ತಾಸುಗಟ್ಟಲೆ ಪ್ರಾಸ್ತೆಟಿಕ್ ಮೇಕಪ್ ಹಾಕಿಸಿಕೊಂಡರು. 'ಕಲಾವಿದರಿಗೆ ಅನ್ನ ಕೊಡುವುದೇ ಈ ಮೇಕಪ್ ಸಾಧನಗಳು' ಎಂದು ಅವರು ನಗುನಗುತ್ತಲೇ ಹೇಳಿದ್ದರು.
ಈಗ ನಟ-ನಟಿಯರಿಗೆ ನಿತ್ಯವೂ ಅಗತ್ಯವಿರುವ ಕ್ರೀಮ್ ಅಥವಾ ಲೋಷನ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಸುಸಜ್ಜಿತ ವೈದ್ಯಕೀಯ ವ್ಯವಸ್ಥೆಯೇ ನೆರವು ನೀಡುತ್ತಿದೆ. ಹೀಗಿರುವಾಗಲೂ ಹಿಂದಿ ನಟಿ ಆಲಿಯಾ ಭಟ್ ತಾವು ಗರ್ಭಿಣಿಯಾಗಿದ್ದಾಗ ಚರ್ಮವು ಅತಿ ಸೂಕ್ಷ್ಮವಾಗಿ ಪಟ್ಟ ಪಡಿಪಾಟಲುಗಳು ಎಂಥವು ಎಂದು ಬಣ್ಣಿಸಿ ಯೂಟ್ಯೂಬ್ ವಿಡಿಯೊ ಮಾಡಿದ್ದಾರೆ. 'ಧುರಂಧರ್' ಸಿನಿಮಾ ನಿರ್ದೇಶಕ ಆದಿತ್ಯ ಧರ್ ಪತ್ನಿಯೂ ಆಗಿರುವ ನಟಿ ಯಾಮಿ ಗೌತಮ್ ಅವರು ಯೌವನದ ದಿನಗಳಿಂದಲೂ ತಾವು 'ಕೆರಟೋಸಿಸ್ ಪಿಲಾರಿಸ್' ಎಂಬ ಚರ್ಮ ಸಂಬಂಧಿ ಸಮಸ್ಯೆ ಎದುರಿಸಿದ್ದನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ. ಚರ್ಮದ ಮೇಲೆ ಒರಟಾದ ಕೆಂಪು ಬಣ್ಣದ ಸಣ್ಣ ಸಣ್ಣ ಗುಳ್ಳೆಗಳು ಮೂಡುವ ಸಮಸ್ಯೆಯನ್ನು 'ಕೆರಟೋಸಿಸ್ ಪಿಲಾರಿಸ್' ಎನ್ನುತ್ತಾರೆ.
ಸಿನಿ ಸಿಪ್: ನಟ ಅಂಬರೀಶ್ ಕರ್ಣ ಆದದ್ದು ಹೀಗೆ...ಸಿನಿ ಸಿಪ್: ಎಲ್ಲರಂತಲ್ಲದ ಚಿರಸ್ಥಾಯಿ ಶಂಕರ್ ನಾಗ್ನಟಿ ಸೋನಂ ಕಪೂರ್ ಒಮ್ಮೆ ತಮ್ಮ ಮುಖಕ್ಕೆ ಮೇಕಪ್ ಹಚ್ಚಿದ ಸೆಲ್ಫಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಹಣೆಯ ಮೇಲಿನದೊಂದು ಬಣ್ಣ, ಕಣ್ಣ ಸುತ್ತಲ ವೃತ್ತಗಳಿಗೆ ಇನ್ನೊಂದು ಬಣ್ಣ. ಕೆನ್ನೆಗಳ ಮೇಲಿನ ಗುಲಾಬಿ ಬಣ್ಣ ಮುಕ್ಕಾಗಿ ಬೇರೆಯದೇ ಬಣ್ಣ ತಾಳಿತ್ತು. 'ನನ್ನ ಚರ್ಮಕ್ಕೂ ಕಲರ್ ಕರೆಕ್ಷನ್ ಅಗತ್ಯವಿದೆ' ಎಂಬ ಅರ್ಥದ ಚಿತ್ರಶೀರ್ಷಿಕೆಯನ್ನು ಅವರು ಆ ಪೋಸ್ಟ್ಗೆ ನೀಡಿದ್ದರು.ಅವರ ಈ ಆತ್ಮವಿಮರ್ಶೆಯ ಪೋಸ್ಟ್‌ಗೆ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು.
ಕನ್ನಡದ ನಟಿಯರಾದ ರಕ್ಷಿತಾ, ರಾಧಿಕಾ ಪಂಡಿತ್, ಯಜ್ಞಾ ಶೆಟ್ಟಿ ಕೂಡ ಮೇಕಪ್ ಸಮಸ್ಯೆಯಿಂದ ಅನೇಕ ತೊಂದರೆಗಳನ್ನು ಅನುಭವಿಸಿದ ಪ್ರಸಂಗಗಳಿವೆ.
ಈಗ ಕಾಲ ಬದಲಾಗಿದೆ. ನಟ-ನಟಿಯರಿಗೆ ಮೇಕಪ್ ಪಕ್ಕಾ ಇರಬೇಕು. ಅದನ್ನು ನೋಡಿಕೊಳ್ಳಲು ಸುಸಜ್ಜಿತವಾದ ತಂಡವೇ ಸಜ್ಜಾಗಿದೆ. ಒಬ್ಬ ತಾರಾನಟ ಅಥವಾ ನಟಿಯ ಕಾಲ್ಷೀಟ್ ಪಡೆದುಕೊಂಡರೆ, ಅವರ ಮೇಕಪ್ ನೋಡಿಕೊಳ್ಳುವ ತಂಡದ ಎಲ್ಲ ಸದಸ್ಯರಿಗೂ ಸೇರಿಸಿ ಸಂಭಾವನೆ ಗೊತ್ತುಪಡಿಸಬೇಕಾಗುತ್ತದೆ. ಉದಾಹರಣೆಗೆ, ದೀಪಿಕಾ ಪಡುಕೋಣೆ ಅವರನ್ನೇ ಗಮನಿಸೋಣ.
ದೀಪಿಕಾ ಅವರ ಮೇಕಪ್ ಕಲಾವಿದರು ಸಂಧ್ಯಾ ಶೇಖರ್. ಆಸ್ಟ್ರೇಲಿಯಾದ ಗೇಬ್ರಿಯೆಲ್ ಜರೀಜು ಅವರ ಕೇಶವಿನ್ಯಾಸಕರು. ಶಲೀನಾ ನಥಾನಿ ಎಂಬ ಸ್ಟೈಲಿಸ್ಟ್ ದೀಪಿಕಾ ಅವರ ಒಟ್ಟಾರೆ ಅಲಂಕಾರದ ಉಸ್ತುವಾರಿ ವಹಿಸುತ್ತಾರೆ. ಕೆಂಪುಹಾಸಿನ ಸ್ಥಳಗಳ ಮೇಲೆ ದೀಪಿಕಾ ನಡೆದು ಸಾಗಿದಾಗಲೆಲ್ಲ ಫ್ಯಾಷನ್ ಲೋಕದವರು ಸಂಧ್ಯಾ ಶೇಖರ್ ಅವರ ಹೆಸರನ್ನು ನೆನಪಿಸಿಕೊಳ್ಳುತ್ತಾರೆ. ಮೇಕಪ್ ಮಾಡದ ರೀತಿಯಲ್ಲಿ ಸಹಜವಾಗಿ ಕಾಣಿಸುವಂತಹ, ಆದರೆ ಸಂಕೀರ್ಣವಾದ ಮೇಕಪ್ ಮಾಡಿಸುವುದರಲ್ಲಿ ಸಂಧ್ಯಾ ಸಿದ್ಧಹಸ್ತರು. ಇದಕ್ಕೆ 'ನಾನ್ಮೇಕಪ್ ಲುಕ್' ಎನ್ನುತ್ತಾರೆ. ಸಹಜವಾಗಿ ಕಾಣಲು ಕೂಡ ಮೇಕಪ್ ಬೇಕೆ ಎಂಬ ಪ್ರಶ್ನೆ ಮೂಡುತ್ತದಾದರೂ, ಆಧುನಿಕ ಕಾಲದ ತಾರಾಮಣಿಯರಿಗೆ ಅನಿವಾರ್ಯ ಎಂಬ ಸ್ವರೂಪದ ಮೇಕಪ್ ಇದಾಗಿದೆ. ಚರ್ಮದ ಬಣ್ಣವನ್ನು ವರ್ಧಿಸಿದ ನಂತರವೂ ಅದು ಅಸಹಜವಾಗಿ ಕಾಣಿಸಕೂಡದು ಎನ್ನುವ ಎಚ್ಚರಿಕೆ ಇಟ್ಟುಕೊಂಡು ಹಾಕುವ ಮೇಕಪ್ ಇದು.
ಸಿನಿ ಸಿಪ್ 38: ಅಣ್ಣಾವ್ರು, ಶಿವಣ್ಣ ಒಟ್ಟಾಗಿ ನಟಿಸಬೇಕಿದ್ದ ಆ ಚಿತ್ರ...ಸಿನಿ ಸಿಪ್: ಅಣ್ಣಾವ್ರನ್ನ ಕಳೆದುಕೊಂಡ ದಿನದ ವಿದ್ಯಮಾನ; ನಿಜಕ್ಕೂ ಆಗಿದ್ದೇನು?ದಿನನಿತ್ಯದ ಮೇಕಪ್ ಪ್ರಸಂಗಗಳು ಇವಾದರೆ, ಪಾತ್ರಗಳಿಗೆ ತಕ್ಕಂತೆ ಪ್ರಾಸ್ತೆಟಿಕ್ ಮೇಕಪ್ ಹಾಕಿಸುವ ವಿದ್ಯಮಾನಗಳ ಮಾಹಿತಿ ಇನ್ನೂ ಆಸಕ್ತಿಕರ. 'ಪಾ' ಹಿಂದಿ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಅವರು ಪೊಜೇರಿಯಾ ಎಂಬ ಕಾಯಿಲೆಗೆ ತುತ್ತಾದ ಪಾತ್ರದಲ್ಲಿ ಅಭಿನಯಿಸಿದ್ದರು. ಹಾಲಿವುಡ್‌ನ ಕ್ರಿಸ್ಟಿಯನ್ ಟಿನ್ಸ್ಲೆ ಆಗ ಅಮಿತಾಭ್ ಅವರಿಗೆ ಮಾಡಿದ್ದ ಮೇಕಪ್ ಗಮನಸೆಳೆದಿತ್ತು. 'ಫ್ಯಾನ್' ಸಿನಿಮಾದಲ್ಲಿ ಶಾರುಖ್ ಖಾನ್‌ಗೆ ಹಾಕಿದ್ದ ಮೇಕಪ್, ತಮಿಳಿನ 'ಐ' ಸಿನಿಮಾದಲ್ಲಿ ನಟ ವಿಕ್ರಮ್ ಅವರಿಗೆ ಮುಖದ ತುಂಬಾ ದಪ್ಪ ದಪ್ಪ ಗುಳ್ಳೆಗಳು ಮೂಡುವಂತೆ ಮಾಡಿದ್ದ ಮೇಕಪ್, 'ಛಪಕ್' ಹಿಂದಿ ಸಿನಿಮಾದಲ್ಲಿ ಆಸಿಡ್ ದಾಳಿಗೆ ಒಳಗಾದ ಸಂತ್ರಸ್ತೆಯ ಪಾತ್ರಕ್ಕೆ ತಕ್ಕಂತೆ ದೀಪಿಕಾ ಪಡುಕೋಣೆ ಅವರ ಮುಖವನ್ನು ಬದಲಿಸಿದ್ದು, '83' ಸಿನಿಮಾದಲ್ಲಿ ಕಪಿಲ್‌ದೇವ್ ಅವರನ್ನೇ ಹೋಲುವ ರೀತಿಯಲ್ಲಿ ರಣವೀರ್ ಸಿಂಗ್ ಅವರ ಚಹರೆ ಬದಲಿಸಿದ್ದು, 'ಚಾಚಿ 420' ತಮಿಳು ಸಿನಿಮಾದಲ್ಲಿ ಕಮಲ ಹಾಸನ್ಮಹಿಳೆಯ ಪಾತ್ರಕ್ಕೆ ಮಾಡಿದ್ದ ಮೇಕಪ್, 'ತಲೈವಿ' ಸಿನಿಮಾದಲ್ಲಿ ಕಂಗನಾ ರನೌತ್ ಅವರನ್ನು ಜಯಲಲಿತಾ ಪಾತ್ರಕ್ಕೆ ತಕ್ಕಂತೆ ರೂಪಾಂತರಿಸಿದ್ದು... ಇವೆಲ್ಲವೂ ಉಲ್ಲೇಖಿಸಬಹುದಾದ ಪ್ರಾಸ್ತೆಟಿಕ್ ಮೇಕಪ್‌ಗಳು.
ಮೇಕಪ್ ಹಾಕುವುದು ಒಂದು ಸವಾಲಾದರೆ, ಅದನ್ನು ತೆಗೆಯುವುದು ಇನ್ನೂ ನಾಜೂಕಾದ ಕೆಲಸ. ನಟಿ ಸಾಯಿ ಪಲ್ಲವಿ ಮೇಕಪ್‌ನ ಸಹವಾಸವೇ ಬೇಡ ಎಂದು ನಿಲುವು ತಾಳಿರುವುದು ಅದೇ ಕಾರಣಕ್ಕೋ ಏನೋ?.

