Dailyhunt Logo
  • Light mode
    Follow system
    Dark mode
    • Play Story
    • App Story
ಅನ್ನದ ಬಟ್ಟಲು: ಹಲಸಿನ ಕಾಯಿ ಹಿಟ್ಟಿನಲ್ಲಿದೆ 'ಮಧುಮೇಹ' ನಿಯಂತ್ರಣದ ಗುಟ್ಟು

ಅನ್ನದ ಬಟ್ಟಲು: ಹಲಸಿನ ಕಾಯಿ ಹಿಟ್ಟಿನಲ್ಲಿದೆ 'ಮಧುಮೇಹ' ನಿಯಂತ್ರಣದ ಗುಟ್ಟು

ಲಸಿನ ಕಾಯಿಯ ಹಿಟ್ಟು (ಹುಡಿ) ಮಧುಮೇಹಿಗಳಿಗೆ ಉತ್ತಮ ಪೂರಕ ಆಹಾರ ಎಂಬುದನ್ನು ಕೇರಳದ ಆಲಪ್ಪುಳದ ಸರ್ಕಾರಿ ವೈದ್ಯಕೀಯ ಕಾಲೇಜು ತಂಡ ಸಂಶೋಧನಾ ಅಧ್ಯಯನದ ಮೂಲಕ ಸಾಬೀತುಪಡಿಸಿದೆ. ಅಲ್ಲಿನ ಸರ್ಕಾರವೂ ಹಲಸಿನ ಕೃಷಿ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸುತ್ತಿದೆ.
ಹೆಚ್ಚು ಹಲಸು ಉತ್ಪಾದಿಸುವ ಕರ್ನಾಟಕದಲ್ಲಿ ಹಲಸಿನ ಮೌಲ್ಯವರ್ಧನೆ, ಮಾರುಕಟ್ಟೆ ಉತ್ತೇಜಿಸುವಂತಹ ಪ್ರಯತ್ನಗಳು ಇನ್ನಷ್ಟು ಹೆಚ್ಚಾಗಬೇಕಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಕರ್ನಾಟದ ಕರಾವಳಿ, ಮಲೆನಾಡು, ಭಾಗಶಃ ಮೈಸೂರು ಭಾಗದಲ್ಲಿ ಸರಣಿಯಾಗಿ ಹಲಸಿನ ಮೇಳಗಳು ನಡೆಯುತ್ತಿವೆ‌. ಈ ವಾರ ಶಿರಸಿಯಲ್ಲಿ ಆಯೋಜನೆಯಾಗಿದೆ. ಮುಂದಿನ ಹದಿನೈದು ದಿನಗಳಲ್ಲಿ ಇನ್ನೊಂದೆರಡು ಕಡೆ ಮೇಳಗಳು ನಡೆಯುವ ಸಾಧ್ಯತೆ ಇದೆ.

ಕನ್ನಡ ನಾಡಿನಲ್ಲಿ ಒಂದೂವರೆ ದಶಕದಿಂದ ಪ್ರತಿ ವರ್ಷ ಪೈಪೋಟಿಯಂತೆ ಹಲಸಿನ ಮೇಳಗಳು ನಡೆಯುತ್ತಿವೆ‌.‌ ಮೇಳಗಳ ಮೂಲಕ ಹಲಸಿನ ಮಹತ್ವ ಮತ್ತು ಅದರ ಆರ್ಥಿಕ ಮೌಲ್ಯವನ್ನು ಜನರಿಗೆ ತಲುಪಿಸುವ ಪ್ರಯತ್ನವಾಗುತ್ತಿದೆ. ತೋಟಗಾರಿಕಾ ಇಲಾಖೆ, ಸಂಘ ಸಂಸ್ಥೆಗಳು ಹಾಗೂ ಪ್ರಗತಿಪರ ರೈತ ಸಂಘಟನೆಗಳ ಸಹಯೋಗದಲ್ಲಿ ನಡೆಯುವ ಈ ಮೇಳಗಳು ನಗರ ಮತ್ತು ಗ್ರಾಮೀಣ ಜನರನ್ನು ಬೆಸೆಯುವ ಅದ್ಭುತ ಕೊಂಡಿಯಾಗಿದೆ.

ಮೇಳಗಳಲ್ಲಿ ರೈತರು ನೇರವಾಗಿ ಗ್ರಾಹಕರಿಗೆ ಹಣ್ಣುಗಳನ್ನು ಮಾರಾಟ ಮಾಡಿದ್ದಾರೆ. ಹಣ್ಣಿನಿಂದ ಹಲ್ವಾ, ಪಾಯಸ, ಕಡುಬು, ಹೋಳಿಗೆ ಮತ್ತು ಐಸ್‌ಕ್ರೀಮ್‌ನಂತಹ ಸಿಹಿ ತಿನಿಸುಗಳು, ಹಲಸಿನ ಕಾಯಿಯಿಂದ ಹಪ್ಪಳ, ಸಂಡಿಗೆ, ಬೋಂಡಾ, ಕಬಾಬ್ ಮತ್ತು ಬಿರಿಯಾನಿಯಂತಹ ತಿನಿಸುಗಳು ತಯಾರಾಗುತ್ತಿವೆ. ಈ ಎರಡೂ ಖಾದ್ಯಗಳು ಮೇಳಗಳ ಪ್ರಮುಖ ಆಕರ್ಷಣೆ. ಖಾದ್ಯಗಳ ರುಚಿ ಜತೆಗೆ, ಆಹಾರ ತಜ್ಞರು, ಹಲಸಿನ ಕಾಯಿ, ಹಣ್ಣು, ಬೀಜಗಳಲ್ಲಿರುವ ಆರೋಗ್ಯ ಪೂರಕ ಅಂಶಗಳು ಮತ್ತು ಔಷಧೀಯ ಗುಣಗಳ ಬಗ್ಗೆಯೂ ಜನರಿಗೆ ಹಂಚುತ್ತಿದ್ದಾರೆ.

ಅನ್ನದ ಬಟ್ಟಲು | ಬರದ ಭೀತಿ ಬಿಡಿ, ನೇರಳೆ ಹಣ್ಣಿನ ಮೌಲ್ಯವರ್ಧನೆಯತ್ತ ಗಮನವಿಡಿಅನ್ನದ ಬಟ್ಟಲು: ಉಣ್ಣುವ ಅನ್ನವೇ ವಿಷವಾಗುತ್ತಿರುವಾಗ…

ಒಂದು ಹೆಜ್ಜೆ ಮುಂದಿಟ್ಟ ಕೇರಳ

ಹಲಸಿನ ವಿಷಯದಲ್ಲಿ ಕರ್ನಾಟಕ ಇಷ್ಟೆಲ್ಲ ಕೆಲಸ ಮಾಡುತ್ತಾ ಹೆಜ್ಜೆ ಹಾಕುತ್ತಿರುವಾಗ, ಪಕ್ಕದ ಕೇರಳ ರಾಜ್ಯ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಹಲಸಿನ ಕಾಯಿಯ ಹಿಟ್ಟಿನಲ್ಲಿರುವ ಔಷಧೀಯ ಗುಣಗಳ ಕುರಿತು 2019ರಲ್ಲೇ ಸಂಶೋಧನಾ ಅಧ್ಯಯನವನ್ನು ಕೈಗೊಂಡಿದೆ. ಕೇರಳದ ಆಲಪ್ಪುಳದ ಸರ್ಕಾರಿ ವೈದ್ಯಕೀಯ ಕಾಲೇಜಿನ ಜನರಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ ಪದ್ಮಕುಮಾರ್ ನೇತೃತ್ವದ ತಂಡ ಟೈಪ್ 2 ಮಧುಮೇಹಿಗಳು ಸೇವಿಸುವ ಆಹಾರದಲ್ಲಿ ಅಕ್ಕಿ ಅಥವಾ ಗೋದಿಯ ಬದಲಿಗೆ ಹಲಸಿನ ಕಾಯಿಯ ಹುಡಿಯನ್ನು (ಹಿಟ್ಟು) ಬಳಸಿ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುವ ಸಾಧ್ಯತೆ ಕುರಿತು ಅಧ್ಯಯನ ನಡೆಸಿದೆ.

ಅಧ್ಯಯನ ನಡೆದಿದ್ದು ಹೀಗೆ; ಸಂಶೋಧನಾ ತಂಡ ಟೈಪ್‌ 2 ಮಧುಮೇಹವಿರುವ 18 ರಿಂದ 60 ವರ್ಷದೊಳಗಿನ 40 ರೋಗಿಗಳನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿದೆ. ಇವರನ್ನು ತಲಾ 20 ರೋಗಿಗಳಂತೆ ಎ ಮತ್ತು ಬಿ ಎಂದು ಗುಂಪುಗಳಾಗಿ ವಿಂಗಡಿಸಿದೆ. ಎ ಗುಂಪಿನ ರೋಗಿಗಳಿಗೆ ನಿತ್ಯ ಬೆಳಗಿನ ಉಪಾಹಾರ ಮತ್ತು ರಾತ್ರಿಯ ಊಟದಲ್ಲಿ ಅಕ್ಕಿ, ಗೋಧಿಯ ಬದಲಾಗಿ 30 ಗ್ರಾಂನಷ್ಟು ಹಲಸಿನ ಕಾಯಿಯ ಹಿಟ್ಟನ್ನು ಬಳಸಲಾಗಿದೆ. ಬಿ ಗುಂಪಿನ ರೋಗಿಗಳಿಗೆ ಸಾಮಾನ್ಯ ಅಕ್ಕಿ ಅಥವಾ ಗೋಧಿ ಹಿಟ್ಟಿನ ಆಹಾರ ನೀಡಿದೆ. 12 ವಾರಗಳವರೆಗೆ ಈ ಅಧ್ಯಯನ ನಡೆಸಲಾಯಿತು. ನಂತರ ಎರಡೂ ಗುಂಪಿನ ರೋಗಿಗಳ ರಕ್ತ ಪರೀಕ್ಷೆ ಮಾಡಿಸಲಾಯಿತು.

ಹಲಸಿನ ಕಾಯಿಯ ಹಿಟ್ಟನ್ನು ಸೇವಿಸಿದವರ ರಕ್ತದಲ್ಲಿ ಎಚ್‌ಬಿಎ1ಸಿ (HbA1c) ಮಟ್ಟವು ಗಮನಾರ್ಹವಾಗಿ ಕಡಿಮೆಯಾಗಿರುವುದನ್ನು ಅಧ್ಯಯನ ತಂಡ ಗುರುತಿಸಿದೆ. ಈ ಗುಂಪಿನ ರೋಗಿಗಳಲ್ಲಿ ಊಟಕ್ಕೆ ಮುನ್ನ ಹಾಗೂ ಊಟದ ನಂತರ ರಕ್ತದಲ್ಲಿ ಸಕ್ಕರೆ ಅಂಶ ಇಳಿಕೆಯಾಗಿರುವುದನ್ನು ತಂಡದವರು ಗಮನಿಸಿದ್ದಾರೆ.

ಈ ರೋಗಿಗಳನ್ನು ನಿರಂತರವಾಗಿ ‌ನಿಗಾ ಮಾಡುತ್ತಿದ್ದಾಗ ಏಳು ದಿನಗಳಲ್ಲೇ ರಕ್ತದಲ್ಲಿನ ಗ್ಲೂಕೋಸ್‌ (ಸಕ್ಕರೆ ಅಂಶ) ಪ್ರಮಾಣ ಕಡಿಮೆಯಾಗುವ ಲಕ್ಷಣಗಳು ಕಂಡು ಬಂದಿರುವುದಾಗಿ ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ. 'ಹಲಸಿನ ಕಾಯಿಯ ಹಿಟ್ಟಿನಲ್ಲಿ ಕಾರ್ಬೊಹೈಡ್ರೇಟ್ ಕಡಿಮೆ ಇದ್ದು ಮತ್ತು ಹೆಚ್ಚು ನಾರಿನಾಂಶ (ಫೈಬರ್) ಇರುವುದರಿಂದ, ರಕ್ತದಲ್ಲಿ ಸಕ್ಕರೆ ನಿಯಂತ್ರಣವಾಗಿರಬಹುದು' ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ.

ಅನ್ನದ ಬಟ್ಟಲು: ಸಮೃದ್ಧ ಹುಣಸೆ ಇಳುವರಿಗೆ ನೀರು-ಗೊಬ್ಬರವೇ ಜೀವಾಳಅನ್ನದ ಬಟ್ಟಲು: ದೇವೇಂದ್ರರ 'ದೇಸಿ ಭತ್ತದ ತಳಿ' ಲೋಕ

'ಔಷಧೋಪಚಾರದ ಜೊತೆಗೆ ಹಲಸಿನ ಕಾಯಿಯ ಹಿಟ್ಟನ್ನು ಆಹಾರದಲ್ಲಿ ಬಳಸುವುದರಿಂದ ಟೈಪ್-2 ಮಧುಮೇಹಿಗಳಲ್ಲಿ ರಕ್ತದಲ್ಲಿ ಸಕ್ಕರೆ ನಿಯಂತ್ರಣಕ್ಕೆ ಸಹಾಯಕವಾಗಬಹುದು' ಎಂಬುದು ಸಂಶೋಧಕರ ಒಟ್ಟಾರೆ ಅಭಿಪ್ರಾಯವಾಗಿದೆ. ಈ ಅಧ್ಯಯನ ಪ್ರಬಂಧವು 2021ರ 'ನ್ಯೂಟ್ರಿಷನ್‌ ಆಯಂಡ್ ಡಯಾಬಿಟಿಸ್‌' ಜರ್ನಲ್‌ನಲ್ಲಿ ಪ್ರಕಟವಾಗಿದೆ.

'ಮುಂದಿನ ದಿನಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ರೋಗಿಗಳನ್ನು ಆಯ್ಕೆ ಮಾಡಿಕೊಂಡು, ಒಂದು ವರ್ಷದ ಕಾಲ ಈ ಅಧ್ಯಯನ ನಡೆಸಲು ಯೋಜನೆ ಸಿದ್ಧಪಡಿಸಿದ್ದೇವೆ. ಸರ್ಕಾರ ಮತ್ತು ಆರ್ಥಿಕ ನೆರವು ನೀಡುವಂತಹ ಸಂಸ್ಥೆಗಳ ಸಹಾಯ ಹಸ್ತದ ನಿರೀಕ್ಷೆಯಲ್ಲಿದ್ದೇವೆ' ಎನ್ನುತ್ತಾರೆ ಡಾ. ಪದ್ಮಕುಮಾರ್.

ಹಲಸು

ವಿಚಾರ ಸಂಕಿರಣದಲ್ಲಿ ಚರ್ಚೆ

ಸಂಶೋಧನಾ ತಂಡವು, ಈ ಸಂಶೋಧನಾ ಅಧ್ಯಯನವನ್ನು ಪ್ರಕಟಣೆಗಷ್ಟೇ ಸೀಮಿತಗೊಳಿಸದೇ ಇತ್ತೀಚೆಗೆ ಸರ್ಕಾರದ ಗಮನಕ್ಕೆ ತರುವ ಪ್ರಯತ್ನವನ್ನು ಮಾಡಿದೆ. ಅದರ ಮೊದಲ ಹೆಜ್ಜೆಯಾಗಿ ಈ ವೈದ್ಯಕೀಯ ಅಧ್ಯಯನ ಕುರಿತು ಚರ್ಚಿಸಲು ತಿರುವನಂತಪುರದ ಮಿತ್ರನಿಕೇತನ್ ಕೇಂದ್ರದಲ್ಲಿ ಜಾಕ್‌ಫ್ರೂಟ್ ಪ್ರಮೋಷನ್ ಕೌನ್ಸಿಲ್‌ (ಜೆಪಿಸಿ) ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಜೂನ್ 23ರಂದು ರಾಜ್ಯಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿತ್ತು. ಅದರ ಉದ್ಘಾಟನೆಗೆ ಕೃಷಿ ಸಚಿವರನ್ನು ಆಹ್ವಾನಿಸಿತ್ತು. ಇದೇ ಸಂದರ್ಭದಲ್ಲಿ ಪದ್ಮಕುಮಾರ್ ತಂಡ ತಮ್ಮ ಅಧ್ಯಯನ ವರದಿಯನ್ನೂ ಪ್ರಸ್ತುತಪಡಿಸಿತು. ನಂತರ ವರದಿ ಕುರಿತು‌ ಚರ್ಚೆಯೂ‌ ನಡೆಯಿತು.

ಸರ್ಕಾರಕ್ಕೂ ತಲುಪಿದ ಹಲಸಿನ ಪರಿಮಳ

ಇದಾದ ನಂತರ, ಹಲಸಿನ ಬೆಳೆಗಾರರು, ಪರಿಸರ ಕಾರ್ಯಕರ್ತರು, ಪತ್ರಕರ್ತರು ಹಲಸಿನ ಕಾಯಿಯಲ್ಲಿ ಔಷಧೀಯ ಗುಣಗಳಿರುವ ವಿಷಯವನ್ನು ಶಾಸಕರು, ಸಚಿವರ ಮೂಲಕ ವಿಧಾನಸಭೆಯ ಅಂಗಳಕ್ಕೂ ತಲುಪಿಸಿದ್ದಾರೆ.

ಇತ್ತೀಚೆಗೆ ವಿಧಾನಸೌಧದ ಕ್ಯಾಂಟಿನ್‌ನಲ್ಲಿ ಹಲಸಿನ ಖಾದ್ಯಗಳನ್ನು ತಯಾರಿಸಲಾಗಿದೆ. ವಿಧಾನಸಭೆಯ ಉಪಾಧ್ಯಕ್ಷೆ ಶಾನಿಮೋಲ್ ಓಸ್ಮಾನ್ ಅವರು ಕೆಲವು ಸಚಿವರು, ಶಾಸಕರಿಗೆ ಹಲಸಿನ ಖಾದ್ಯಗಳ ಸವಿಯನ್ನು ಉಣಬಡಿಸಿದ್ದಾರೆ. ಅಂದು 'ಹಲಸಿನ ಹಣ್ಣಿನ ನೆನಪುಗಳ ಜೊತೆಗೆ, ಅದರಲ್ಲಿರುವ ಔಷಧೀಯ ಗುಣ, ಪದ್ಮಕುಮಾರ್ ತಂಡ್ ಅಧ್ಯಯನದ ಬಗ್ಗೆಯೂ ಚರ್ಚೆ ನಡೆಸಲಾಗಿದೆ.

ಇಂಥ ಹಲವು ಪ್ರಯತ್ನಗಳ ಮೂಲಕ ಹಲಸಿನ ವಿಷಯನ್ನು ಸರ್ಕಾರದ ನೀತಿ ನಿರೂಪಣೆ ಹಂತಕ್ಕೂ ಕೊಂಡೊಯ್ಯುವ ಪ್ರಯತ್ನಗಳು ಕೇರಳದಲ್ಲಿ ನಡೆಯುತ್ತಿವೆ. ಜನಪ್ರತಿನಿಧಿಗಳು ವಿಧಾನಸೌಧದ ಕ್ಯಾಂಟಿನ್‌ನಲ್ಲಿ ಹಲಸಿನ ಖಾದ್ಯಗಳನ್ನು ಸೇವಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಕೇರಳದ ಹಲವು ಮಾಧ್ಯಮಗಳಲ್ಲೂ ಸುದ್ದಿಯಾಗಿದೆ.

ಅನ್ನದ ಬಟ್ಟಲು: ಅಜೋಲಾ, ಭತ್ತದ ಗದ್ದೆಗಳ ಕವಚಅನ್ನದ ಬಟ್ಟಲು: ಅಜೋಲಾ, ಭತ್ತದ ಗದ್ದೆಗಳ ಕವಚ

ಕೇರಳದಲ್ಲಿ ಹಲಸಿನ ಕೃಷಿ ಕುರಿತು ಬೆಳೆಯುವವರಷ್ಟೇ ಅಲ್ಲ, ಬಳಸುವ ಗ್ರಾಹಕರೂ ಮಾತನಾಡುತ್ತಾರೆ. ನೀತಿ ನಿರೂಪಿಸುವ ರಾಜಕಾರಣಿಗಳು, ಅದಕ್ಕೆ ಸಲಹೆ ನೀಡುವ ವಿಜ್ಞಾನಿಗಳು, ಪರಿಸರ‌ ಕಾರ್ಯಕರ್ತರು ಚರ್ಚೆ ಮಾಡುತ್ತಾರೆ. ಒಟ್ಟಾರೆ ಸಾರ್ವಜನಿಕ ಜೀವನದ ಲ್ಲಿರುವ ಎಲ್ಲರೂ ಹಲಸಿನ ಬಗ್ಗೆ ಕಿಂಚಿತ್ತಾದರೂ ಚಿಂತಿಸುತ್ತಾರೆ, ಮಾತನಾಡುತ್ತಾರೆ ಎಂಬುದು ಅಲ್ಲಿನ ಕೃಷಿ ಆಸಕ್ತ ಮಾಧ್ಯಮಮಿತ್ರರ ಅಭಿಪ್ರಾಯ. ಹೀಗಾಗಿ ಸರ್ಕಾರ, ಹಲಸನ್ನು ಜನಪ್ರಿಯಗೊಳಿಸುವ ವಿಚಾರವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ ಎಂಬ ವಿಶ್ವಾಸ ಕೇರಳದ ಹಲಸು ಪ್ರಿಯರದ್ದು.

ಈಗ ಕರ್ನಾಟಕದಲ್ಲಿ ಏನಾಗಬೇಕಿದೆ ?

ಕರ್ನಾಟಕದಲ್ಲಿ ಮುಷ್ಟಿಯಷ್ಟು ಹಲಸಿನ ಉತ್ಪಾದನೆಯಾದರೆ, ಚಿಟಿಕೆಯಷ್ಟು ಬಳಕೆಯಾಗುತ್ತಿದೆ. 10 ವರ್ಷಗಳಿಂದ 'ಹಲಸಿನ ಮೇಳ'ಗಳು ಹೆಚ್ಚಿವೆ. ಮಾರಾಟವೂ ಹಬ್ಬಿದೆ. ಮೌಲ್ಯವರ್ಧನೆ ಪ್ರಯತ್ನಗಳು ವಿಸ್ತಾರಗೊಳ್ಳುತ್ತಿವೆ. ಆದರೂ ಹಲಸು ಬೆಳೆದ ಕೊನೆಯ ವ್ಯಕ್ತಿಗೆ ಈ ಪ್ರಯತ್ನದ ಲಾಭ ಮುಟ್ಟಿಲ್ಲ. ಪ್ರಸ್ತುತ ಕೇರಳದಲ್ಲಿನ ಹಲಸಿನ ಬಳಕೆಯ ಟ್ರೆಂಡ್ ಗಮನಿಸಿದರೆ, ಮುಂದಿನ ವರ್ಷದಿಂದಲೇ 'ಹಲಸಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಯೋಚಿಸುವುದಾದರೆ, ಕರ್ನಾಟಕದಲ್ಲಿ ಹಲಸಿನ ಕೃಷಿ ಕುರಿತು ಏನೇನು ಕಾರ್ಯಗಳು ಆಗಬೇಕಿದೆ ? - ಇದಕ್ಕೆ ಕಳೆದ ಒಂದೂವರೆ ದಶಕಗಳಿಂದ ಕರ್ನಾಟಕ-ಕೇರಳ ಭಾಗದಲ್ಲಿ ಹಲಸನ್ನು ಜನಪ್ರಿಯಗೊಳಿಸುತ್ತಿರುವ ಕೇರಳದಲ್ಲಿ ಹಲಸಿನ ರಾಯಭಾರಿ ಎಂದೇ ಗುರುತಿಸುವ 'ಅಡಿಕೆ ಪತ್ರಿಕೆ' ಸಂಪಾದಕ 'ಶ್ರೀ' ಪಡ್ರೆಯವರು ನೀಡುವ ಸಲಹೆಗಳು ಹೀಗಿವೆ;

  • ಕರ್ನಾಟಕದಲ್ಲಿ ಹಲಸಿನ ಕಾಯಿ, ಹಣ್ಣಿಗೆ ಬೇಡಿಕೆ ಇದೆ. ಆದರೆ, ಪೂರೈಕೆಯ ಸರಪಳಿ (ಸಪ್ಲೆ ಚೈನ್) ಕೊರತೆ ಇದೆ. ಇದಕ್ಕೆ ಕಾರಣ, ಹಲಸಿನ ಬೆಳೆ, ಉತ್ಪಾದನೆ, ಮಾರುಕಟ್ಟೆ ಕುರಿತು ಸೂಕ್ತವಾದ ದತ್ತಾಂಶವಿಲ್ಲದ್ದು. ಹೀಗಾಗಿ ಮೊದಲು ಸರ್ಕಾರ, ಉತ್ತಮ ಹಲಸಿನ ತಳಿಗಳು ಎಷ್ಟಿವೆ ? ಯಾರ ಬಳಿ ಸಿಗುತ್ತದೆ ? ಯಾವ ಕಾಲದಲ್ಲಿ ಸಿಗುತ್ತದೆ? ಅವರ ಸಂಪರ್ಕ ಸಂಖ್ಯೆ.. ಇಂತಹ ಮಾಹಿತಿ ಒಂದೆಡೆ ಸಂಗ್ರಹಿಸಬೇಕು. ಗ್ರಾಹಕ-ಮಾರಾಟಗಾರನಿಗಾಗಿ 'ಕೊಡು-ಕೊಳ್ಳುವಿಕೆ'ಯ ವೇದಿಕೆ ಸೃಷ್ಟಿಸಬೇಕು.

ಹಲಸಿನಿಂದ ತಿನ್ನಲು ಸಿದ್ಧ (ರೆಡಿ ಟು ಈಟ್‌) ಉತ್ಪನ್ನಗಳನ್ನು ತಯಾರಿಸುವಂತಹ ಉದ್ಯಮಗಳಿಗೆ ಉತ್ತೇಜನ ನೀಡಬೇಕು. ಬೆಂಗಳೂರಿನಲ್ಲಿರುವ 'ಫ್ರೂಟ್‌ ವ್ಯಾಲಿ' ಸಂಸ್ಥೆಯ ಜೋಬಿ ಮ್ಯಾಥ್ಯು ಪ್ರಕಾರ,

  • ಹಲಸಿನ ಹಣ್ಣನ್ನು ಪ್ಯಾಕ್‌ ಮಾಡಿ ಮಾರಾಟ ಮಾಡುವ ವ್ಯವಸ್ಥೆ ಇದ್ದರೆ ಬೆಂಗಳೂರು ಒಂದರಲ್ಲೇ ದಿನಕ್ಕೆ 1 ಕೋಟಿ ಸೊಳೆ ಪ್ಯಾಕ್ ಮಾಡಿ ಪೂರೈಸಬಹುದು. ಅಷ್ಟು ಬೇಡಿಕೆ ಇದೆ. ಇಂಥ ವ್ಯವಸ್ಥೆಗೆ ಉತ್ತೇಜನ ನೀಡುವಂತಹ ಕೆಲಸ ಸರ್ಕಾರದ ಮಟ್ಟದಲ್ಲಾಗಬೇಕು.

ಅನ್ನದ ಬಟ್ಟಲು: ಮಳೆ ಕೊರತೆಯ ಹುಲಿಕೆರೆಯಲ್ಲಿ 'ಹಣ್ಣಿನ ತೋಟ' ಅರಳಿದ್ದು ಹೇಗೆ?ಇವರು ಸಂರಕ್ಷಿಸಿದ್ದಾರೆ ಬರೋಬ್ಬರಿ 300 ಹಲಸು ತಳಿ; ಇದು ಮಲೆನಾಡ ನರೇಂದ್ರರ ಸಾಧನೆ
  • ಹಲಸಿನ ಹಣ್ಣಿಗಷ್ಟೇ ಅಲ್ಲ, ಎಳೆ ಕಾಯಿ ಅರ್ಥಾತ್ ಗುಜ್ಜೆಗೂ ಬೇಡಿಕೆ ಇದೆ. ಗುಜ್ಜೆಯಲ್ಲಿರುವ ತೇವಾಂಶ ತೆಗೆದು (ಫ್ರೋಜೊನ್ ಟೆಂಡರ್‌ ಜಾಕ್‌ಫ್ರೂಟ್‌), ಗ್ರಾಹಕರಿಗೆ ಅಗತ್ಯ ರೂಪದಲ್ಲಿ ಒದಗಿಸುವ ಪೂರೈಕೆ ಸರಪಳಿ ಇಲ್ಲ. ಕೆಎಂಎಫ್‌- 'ನಂದಿನಿ' ಬೂತ್‌ನಂತಹ ಘಟಕಗಳ ಮೂಲಕ ವರ್ಷದ 10 ತಿಂಗಳು ಕಾಲ ಹಲಸಿನ ಗುಜ್ಜೆಯ 'ರೆಡಿ ಟು ಈಟ್' ಉತ್ಪನ್ನ ಗಳನ್ನು ಗ್ರಾಹಕರಿಗೆ ತಲುಪಿಸಬಹುದು.

  • ಕರ್ನಾಟಕದ ಕರಾವಳಿಯುದ್ದಕ್ಕೂ ವರ್ಷಕ್ಕೆ 30 ಲಕ್ಷ ಹಲಸಿನ ಹಪ್ಪಳ ಮಾರಾಟವಾಗುತ್ತಿದೆ ಎಂಬ ಅಂದಾಜಿದೆ. ಇಷ್ಟು ಬೇಡಿಕೆ ಇರುವ ಹಪ್ಪಳ ತಯಾರಿಯನ್ನು ಯಾಂತ್ರೀಕರಣಗೊಳಿಸಲು ನೆರವಾದರೆ, ಹಲಸಿನ ಉದ್ಯಮಕ್ಕೆ ಇನ್ನಷ್ಟು ಸಹಾಯವಾಗುತ್ತದೆ.

  • ಹಲಸು ಬೆಳೆಗಾರನಿಗೆ ಮತ್ತು ಬಳಕೆದಾರನಿಗೆ ನ್ಯಾಯ ಸಲ್ಲಿಸುವಂತಹ ಗಂಭೀರವಾದ ಯೋಜನೆಗಳು ಕರ್ನಾಟಕದಲ್ಲಿ ಜಾರಿಯಾಗಬೇಕು. ಕೇರಳದಲ್ಲಿ ಆದ ಹಾಗೆ ಸರ್ಕಾರ, ಆಡಳಿತದ ಗಮನ ಸೆಳೆಯುವಂತಹ ಗುಂಪುಗಳು ಹುಟ್ಟಿಕೊಳ್ಳಬೇಕು.

ಈ ಸಲಹೆಗಳ ನಡುವೆ, ಇತ್ತೀಚೆಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು, ಹಲಸು, ನೇರಳೆ ಬೆಳೆಗಳ ಕುರಿತು ಧ್ವನಿ ಎತ್ತಿದ್ದು ನೆನಪಾಗುತ್ತಿದೆ. ದೇವೇಗೌಡರು, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಹಲಸಿನ ಹಣ್ಣನ್ನು ಉಡುಗೊರೆಯಾಗಿ ನೀಡಿ, ಹುಣಸೆ, ಹಲಸು ಮತ್ತು ನೇರಳೆ ಹಣ್ಣುಗಳಿಗಾಗಿ ಪ್ರತ್ಯೇಕವಾದ ರಾಷ್ಟ್ರೀಯ ಮಂಡಳಿಯನ್ನು ಸ್ಥಾಪಿಸುವಂತೆ ಮನವಿ ಮಾಡಿದ್ದಾರೆ. ಈ ಸಲಹೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಹಲಸು ಅಭಿವೃದ್ಧಿಗಾಗಿ ಮಂಡಳಿ ರಚಿಸಿ, ಇದರ ಮೂಲಕ ಈ ಎಲ್ಲ ಸಲಹೆಗಳನ್ನು ಜಾರಿಗೆ ತರಬಹುದು.

Dailyhunt
Disclaimer: This content has not been generated, created or edited by Dailyhunt. Publisher: Prajavani