Dailyhunt Logo
  • Light mode
    Follow system
    Dark mode
    • Play Story
    • App Story
ಇರಾನ್ ಮೇಲೆ ಯುದ್ಧ ಸಾರಿ ಚಕ್ರವ್ಯೂಹದಲ್ಲಿ ಸಿಲುಕಿದ ಅಮೆರಿಕ ಅಧ್ಯಕ್ಷ ಟ್ರಂಪ್

ಇರಾನ್ ಮೇಲೆ ಯುದ್ಧ ಸಾರಿ ಚಕ್ರವ್ಯೂಹದಲ್ಲಿ ಸಿಲುಕಿದ ಅಮೆರಿಕ ಅಧ್ಯಕ್ಷ ಟ್ರಂಪ್

ಫೆಬ್ರುವರಿ 28ರಂದು ಅಮೆರಿಕ ಹಾಗೂ ಇಸ್ರೇಲ್ ಸೇರಿ ಇರಾನ್ ಮೇಲೆ 'ಆಪರೇಷನ್ ಎಪಿಕ್ ಫ್ಯೂರಿ' ಎನ್ನುವ ಹೆಸರಿನಲ್ಲಿ ದಾಳಿ ನಡೆಸಿತು. ಇದೊಂದು ಕ್ಷಿಪ್ರ ಹಾಗೂ ನಿರ್ಣಾಯಕ ಕಾರ್ಯಾಚರಣೆಯಾಗಿದ್ದು ಒಂದು ವಾರದೊಳಗೆ ಮುಕ್ತಾಯಗೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು.

ಆದರೆ ಈಗ ಯುದ್ಧ ಐದನೇ ವಾರಕ್ಕೆ ಕಾಲಿಟ್ಟಿದ್ದೆ. ಸಾಕಷ್ಟು ನಾಶ ನಷ್ಟಗಳು ಸಂಭವಿಸಿವೆ. ಹೊರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ. ಜಾಗತಿಕ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 126 ಡಾಲರ್‌ ತಲುಪಿದೆ. ನ್ಯಾಟೊ ಒಕ್ಕೂಟವು ದಶಕಗಳಲ್ಲೇ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಅಮೆರಿಕದ ಮಿತ್ರ ರಾಷ್ಟ್ರಗಳಿಂದಲೇ ಯುದ್ಧಕ್ಕೆ ಬೆಂಬಲ ಸಿಗುತ್ತಿಲ್ಲ. ಟ್ರಂಪ್‌ ಮನವಿಗೂ ಸೊಪ್ಪು ಹಾಕುತ್ತಿಲ್ಲ. ನಿರ್ದಿಷ್ಟ ಗುರಿಗಳೊಂದಿಗೆ ಪ್ರಾರಂಭವಾದ ಈ ಕಾರ್ಯಾಚರಣೆ ಈಗ, ಅಮೆರಿಕದ ಕಾರ್ಯತಂತ್ರದಲ್ಲಿ ಆಳವಾದ ವೈರುಧ್ಯಗಳನ್ನು ಬಯಲು ಮಾಡಿದೆ.‌ ಇದು ಯುದ್ಧಭೂಮಿಯಿಂದ ಬಹಳ ದೂರದಲ್ಲಿರುವ ದೇಶಗಳ ಮೇಲೆ ಭಾರಿ ಆರ್ಥಿಕ ಹೊರೆಗಳನ್ನು ಹೇರುತ್ತಿದೆ.

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ


ಇರಾನ್ ಮೇಲೆ ಯುದ್ಧ ಸಾರಿ ಚಕ್ರವ್ಯೂಹದಲ್ಲಿ ಸಿಲುಕಿದ ಅಮೆರಿಕ ಅಧ್ಯಕ್ಷ ಟ್ರಂಪ್

ಒಂದು ಸಾಲಿನಲ್ಲಿಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯು ಅಸ್ಪಷ್ಟ ಗುರಿಗಳು ಮತ್ತು ರಾಜಕೀಯ ತಂತ್ರದ ಕೊರತೆಯಿಂದಾಗಿ ಅಮೆರಿಕವನ್ನು ದೊಡ್ಡ ಭೌಗೋಳಿಕ-ರಾಜಕೀಯ ಸಂಕಷ್ಟಕ್ಕೆ ಸಿಲುಕಿಸಿದೆ.ಪ್ರಮುಖ ಅಂಶಗಳು• ಅಸ್ಪಷ್ಟ ಮಿಲಿಟರಿ ಉದ್ದೇಶಗಳುಟ್ರಂಪ್ ಆಡಳಿತವು ಆಡಳಿತ ಬದಲಾವಣೆ, ನಿಶಸ್ತ್ರೀಕರಣ ಮತ್ತು ಮೂಲಸೌಕರ್ಯ ನಾಶ ಹೀಗೆ ಹಲವು ವೈರುಧ್ಯದ ಗುರಿಗಳನ್ನು ಇಟ್ಟುಕೊಂಡಿದ್ದರಿಂದ ಯುದ್ಧವು ಅಂದುಕೊಂಡಿದ್ದಕ್ಕಿಂತ ಕಠಿಣವಾಗಿದೆ.• ಹೊರ್ಮುಜ್ ಜಲಸಂಧಿ ಬಿಕ್ಕಟ್ಟುಇರಾನ್ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿರುವುದರಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತೀವ್ರ ಏರುಪೇರಾಗಿದ್ದು, ತೈಲ ಬೆಲೆ ಗರಿಷ್ಠ ಮಟ್ಟಕ್ಕೆ ಏರಿದೆ.• ಕುಸಿಯುತ್ತಿರುವ ಮಿತ್ರರಾಷ್ಟ್ರಗಳ ಬೆಂಬಲಅಮೆರಿಕದ ಮಿಲಿಟರಿ ಕ್ರಮಕ್ಕೆ ಸಂಸತ್ತು ಅಥವಾ ವಿಶ್ವಸಂಸ್ಥೆಯ ಅನುಮತಿ ಇಲ್ಲದಿರುವುದು ನ್ಯಾಟೊ ಒಕ್ಕೂಟದಲ್ಲಿ ಭಿನ್ನಮತ ಉಂಟುಮಾಡಿದ್ದು, ಸ್ಪೇನ್ ಮತ್ತು ಇಟಲಿಯಂತಹ ದೇಶಗಳು ಸಹಕಾರ ನಿರಾಕರಿಸಿವೆ.• ಭಾರಿ ಆರ್ಥಿಕ ಮತ್ತು ಭೌಗೋಳಿಕ ಪರಿಣಾಮಯುದ್ಧದ ಪರಿಣಾಮವಾಗಿ ಜಾಗತಿಕ ರಸಗೊಬ್ಬರ ಬೆಲೆ ಏರಿಕೆ, ತೈಲ ಪೂರೈಕೆ ಸ್ಥಗಿತ ಮತ್ತು ಹೂಡಿಕೆಗಳ ಹಿಂತೆಗೆತವು ಜಾಗತಿಕ ಜಿಡಿಪಿ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.• ರಾಜತಾಂತ್ರಿಕ ವಿಫಲತೆದಾಳಿಗೂ ಮುನ್ನವೇ ಮಾತುಕತೆ ನಡೆಸುತ್ತಿದ್ದ ಅಮೆರಿಕ, ದಿಢೀರ್ ದಾಳಿ ಮೂಲಕ ಆ ಅವಕಾಶವನ್ನು ಹಾಳುಮಾಡಿಕೊಂಡಿದ್ದು, ಈ ಸಂಘರ್ಷಕ್ಕೆ ನಿರ್ಗಮನದ ಹಾದಿಯೇ ಇಲ್ಲದಂತಾಗಿದೆ.ಪ್ರಮುಖ ಅಂಕಿಅಂಶಗಳು126 ಡಾಲರ್ತೈಲ ಬೆಲೆ ಏರಿಕೆಶೇ 2.9ಜಾಗತಿಕ ಜಿಡಿಪಿ ಕುಸಿತದ ಅಂದಾಜುಶೇ 20ಜಾಗತಿಕ ತೈಲ ವ್ಯಾಪಾರದಲ್ಲಿ ಹೊರ್ಮುಜ್ ಪಾಲು₹ 1.14 ಲಕ್ಷ ಕೋಟಿಮಾರ್ಚ್‌ನಲ್ಲಿ ವಿದೇಶಿ ಹೂಡಿಕೆ ಹಿಂತೆಗೆತಫೆಬ್ರುವರಿ 28ಅಮೆರಿಕ-ಇರಾನ್ ದಾಳಿಯ ಆರಂಭಿಕ ದಿನಾಂಕಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಎ.ಐ ವಲಯದಲ್ಲಿ ತಲ್ಲಣ ಸೃಷ್ಟಿಸಿದ ಕೊಲ್ಲಿ ಸಂಘರ್ಷ

ಯುದ್ಧ ಆರಂಭವಾದಾಗಿನಿಂದಲೂ, ಟ್ರಂಪ್ ಯುದ್ಧದ ಉದ್ದೇಶದ ಬಗ್ಗೆ ವಿರೋಧಾಭಾಸದ ಮಾತುಗಳನ್ನೇ ಆಡುತ್ತಾ ಬಂದಿದ್ದಾರೆ. ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಕುಂಠಿತಗೊಳಿಸುವುದು, ಅದರ ಕ್ಷಿಪಣಿ ಮತ್ತು ಡ್ರೋನ್ ಮೂಲಸೌಕರ್ಯಗಳನ್ನು ನಾಶಪಡಿಸುವುದು, ಹಮಾಸ್ ಮತ್ತು ಹುತಿಗಳಂತಹ ಬಂಡುಕೋರ ಸಂಘಟನೆಗಳಿಗೆ ನೀಡುವ ಬೆಂಬಲ ಕೊನೆಗೊಳಿಸುವುದು ಯುದ್ಧದ ಉದ್ದೇಶ ಎಂದು ಟ್ರಂಪ್ ಹೇಳಿದ್ದರು. ಅಲ್ಲದೆ 'ನಿಮ್ಮ ಸರ್ಕಾರವನ್ನು ನೀವೇ ರಚಿಸಿ' ಎಂದು ಇರಾನ್ ಜನತೆಗೆ ಕರೆ ನೀಡಿದ್ದರು. ಇರಾನ್‌ನಲ್ಲಿ ಆಡಳಿತ ಬದಲಾವಣೆಗಾಗಿಯೇ ಈ ಯುದ್ಧ ಸಾರಿದಂತಿತ್ತು.

ಆದರೆ ಹೇಳಿಕೊಂಡ ಉದ್ದೇಶಕ್ಕೆ ವಿರುದ್ಧವಾದ ಕಾರ್ಯಾಚರಣೆ ನಡೆಯುತ್ತಿದೆ ಎನ್ನುವುದು ತಕ್ಷಣವೇ ಗೊತ್ತಾಯಿತು. ಪರಮಾಣು ಸೌಲಭ್ಯವನ್ನು ನಾಶಪಡಿಸಬೇಕು ಎನ್ನುವ ಸ್ಪಷ್ಟ ಗುರಿಯೊಂದಿಗೆ ಕಾರ್ಯಾಚರಣೆ ನಡೆಸಿದ್ದರೆ, ಸೀಮಿತ ಅವಧಿಯಲ್ಲಿ ಅದನ್ನು ಮುಗಿಸಬಹುದಿತ್ತು. ಆದರೆ ಆಡಳಿತ ಬದಲಾವಣೆ, ಕ್ಷಿಪಣಿ ನಿಶಸ್ತ್ರೀಕರಣ ಮತ್ತು ಇರಾನ್‌ನ ಪ್ರಾದೇಶಿಕ ಸೈನವನ್ನು ನಾಶ ಮಾಡುವಂತಹ ಹಲವು ಗುರಿಗಳನ್ನು ಏಕಕಾಲದಲ್ಲಿ ಇಟ್ಟುಕೊಂಡು ನಡೆಸಿದ ದಾಳಿಯು, ಯಾವುದೇ ಎದುರಾಳಿಯು ಒಪ್ಪಿಕೊಳ್ಳದಂತಹ ಪರಿಸ್ಥಿತಿಯನ್ನು ನಿರ್ಮಿಸಿತು. ಹೀಗಾಗಿಯೇ ಯುದ್ಧ ಅಮೆರಿಕ ಅಂದುಕೊಂಡದ್ದಕ್ಕಿಂತ ಕ್ಲಿಷ್ಟಕರವಾಗಿ ಮಾರ್ಪಟ್ಟಿದೆ. 'ಹಲವಾರು ಗುರಿಗಳನ್ನು ಹೊಂದಿರುವ ಕಾರ್ಯಾಚರಣೆಯು ಹೆಚ್ಚಿನ ಅಪಾಯವನ್ನು ಹೊಂದಿರುತ್ತದೆ. ಇವೆಲ್ಲವನ್ನೂ ನಿಜವಾಗಿಯೂ ಬೆನ್ನಟ್ಟಿದರೆ, ಅಮೆರಿಕ ಮತ್ತು ಇಸ್ರೇಲ್ ಕ್ರಮಗಳು ನಿಗದಿಪಡಿಸಿದ ಸಮಯದೊಳಗೆ ಕಾರ್ಯಾಚರಣೆ ಮುಕ್ತಾಯಗೊಳ್ಳುವ ಸಾಧ್ಯತೆ ಭಾರಿ ಕಡಿಮೆ' ಎಂದು ಷಿಕಾಗೋ ಕೌನ್ಸಿಲ್ ಆನ್ ಗ್ಲೋಬಲ್ ಅಫೇರ್ಸ್‌ನ ವಿಶ್ಲೇಷಕರು ಹೇಳಿದ್ದಾರೆ.

ಏಪ್ರಿಲ್ ಆರಂಭದ ವೇಳೆಗೆ, 'ಎಲ್ಲಾ ಮಿಲಿಟರಿ ಗುರಿಗಳನ್ನು ಸಾಧಿಸಲಾಗಿದೆ' ಎಂದು ಟ್ರಂಪ್ ಅವರು ಪ್ರತಿಪಾದಿಸಿದ್ದಾರೆ. ಮತ್ತೊಂದೆಡೆ ಇರಾನ್ ಮೇಲೆ ಇನ್ನು ಎರಡ್ಮೂರು ವಾರಗಳು ತೀವ್ರವಾಗಿ ದಾಳಿ ನಡೆಸಲಾಗುವುದು ಎಂದು ಘೋಷಿಸಿದ್ದಾರೆ. ಈ ಎರಡು ಹೇಳಿಕೆಗಳನ್ನು ಪರಸ್ಪರ ವೈರುಧ್ಯವಾಗಿದ್ದು, ಸಮರ್ಥಿಸಿಕೊಳ್ಳುವುದಕ್ಕೂ ಆಗುತ್ತಿಲ್ಲ.

ಕೊಲ್ಲಿ ಯುದ್ಧ ಪರಿಣಾಮ: ಪರ್ಯಾಯ ಇಂಧನ ಮೂಲ ಹುಡುಕಾಟದಲ್ಲಿ ರಾಷ್ಟ್ರಗಳು

‍ಪರಮಾಣು ಆಯುಧವನ್ನು ಅಭಿವೃದ್ಧಿ ಪಡಿಸುವ ಇರಾರ್‌ನ ಪ್ರಯತ್ನವೇ ಯುದ್ಧ ಸಾರಲು ಮುಖ್ಯ ಕಾರಣ ಎಂದು ಟ್ರಂಪ್ ಪ್ರತಿಪಾದಿಸಿದ್ದರು. ಯುರೇನಿಯಂ ಅಭಿವೃದ್ಧಿ ‍ಪಡಿಸುವ ಇರಾನ್‌ನ ಪ್ರಯತ್ನ ಜಗತ್ತಿಗೆ ಅಪಾಯಕಾರಿ ಎಂದು ಟ್ರಂಪ್ ವಾದಿಸಿದ್ದರು. ಅಣ್ವಸ್ತ್ರ ತಯಾರಿಸಲು ಶೇ 60 ಶುದ್ಧತೆಯ ಯುರೇನಿಯಂ ಅನ್ನು ಇರಾನ್ ದಾಸ್ತಾನು ಮಾಡಿಕೊಂಡಿದೆ ಹೀಗಾಗಿ ದಾಳಿ ನಡೆಸಲಾಯಿತು ಎಂದೂ ಟ್ರಂಪ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡರು. ಆದರೆ ಏಪ್ರಿಲ್ 1ರಂದು ರಾಯಿಟರ್ಸ್‌ಗೆ ನೀಡಿದ ಸಂದರ್ಶನದಲ್ಲಿ, 'ಅವರ ಯುರೇನಿಯಂ ದಾಸ್ತಾನು ಭೂಮಿಯ ಆಳದಲ್ಲಿದೆ. ಆದ್ದರಿಂದ ಅದರ ಬಗ್ಗೆ ಹೆಚ್ಚಿನ ಚಿಂತೆಯಿಲ್ಲ. ನಾವು ಯಾವಾಗಲೂ ಅದನ್ನು ಸ್ಯಾಟಲೈಟ್ ಮೂಲಕ ಗಮನಿಸುತ್ತಿರುತ್ತೇವೆ' ಎಂದು ಹೇಳಿದರು. ಅವರ ಈ ಹೇಳಿಕೆಯು ಭಾರಿ ಟೀಕೆಗೆ ಗುರಿಯಾಯಿತು. ಅಣ್ವಸ್ತ್ರ ತಯಾರಿಕೆಯ ಯಾವುದೇ ನಿಖರ ಮಾಹಿತಿ ಇಲ್ಲದೆ, ಇಸ್ರೇಲ್ ಜೊತೆ ಸೇರಿ ಅಮೆರಿಕ ದಾಳಿ ಸಂಘಟಿಸಿತ್ತು. 2003ರಲ್ಲಿ ಜಾರ್ಜ್ ಬುಷ್ ಆಡಳಿತವು ಇರಾಕ್‌ ಮೇಲೆ ಆಕ್ರಮಣ ಮಾಡಿದಾಗಲೂ ಇಂತಹದೇ ಸಮರ್ಥನೆ ನೀಡಿತ್ತು. ಇರಾಕ್‌ನಲ್ಲಿ ಇಲ್ಲದೇ ಇರುವ ಆಯುಧಗಳು ಇದೆ ಎಂದು ಹೇಳಿ ಅಂದು ದಾಳಿ ನಡೆಸಲಾಗಿತ್ತು.

ನಿರ್ಗಮನದ ಹಾದಿಯಿಲ್ಲ

ಸೇನಾ ಕಾರ್ಯಾಚರಣೆ ಜೊತೆಗೆ ರಾಜಕೀಯ ಕಾರ್ಯತಂತ್ರದ ಕೊರತೆಯು ಅಮೆರಿಕದ ಪ್ರಮುಖ ರಚನಾತ್ಮಕ ದೌರ್ಬಲ್ಯ. ದಾಳಿಗೂ ಮೊದಲು ಟ್ರಂಪ್ ಆಡಳಿತವು ಇರಾನ್‌ನೊಂದಿಗೆ ಹಲವಾರು ಸುತ್ತಿನ ಪರೋಕ್ಷ ಪರಮಾಣು ಮಾತುಕತೆಗಳಲ್ಲಿ ತೊಡಗಿತ್ತು. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು ಫೆಬ್ರುವರಿ 25 ರಂದು ಐತಿಹಾಸಿಕ ಒಪ್ಪಂದವು ಹತ್ತಿರದಲ್ಲಿದೆ ಎಂದು ಹೇಳಿದ್ದರು. ಆದರೆ ಮೂರೇ ದಿನಗಳಲ್ಲಿ ದಾಳಿ ನಡೆದು ಈ ಮಾತುಕತೆಗಳು ಅರ್ಥಹೀನವಾದವು.

ಸಂಘರ್ಷ ಆರಂಭವಾದ ಬಳಿಕ ಕದನ ವಿರಾಮಕ್ಕೆ ಅಮೆರಿಕ ನೀಡಿದ ಹದಿನೈದು ಅಂಶಗಳ ಯೋಜನೆಯನ್ನು ಇರಾನ್ ಸರಾಸಗಟವಾಗಿ ತಿರಸ್ಕರಿಸಿತು. ಅಮೆರಿಕದ ಬೇಡಿಕೆಯಂತೆ ಯುರೇನಿಯಂ ಸಂಸ್ಕರಣೆಯನ್ನು ಸ್ಥಗಿತಗೊಳಿಸುವುದು, ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಮಿತಿಗೊಳಿಸುವುದು ಹಾಗೂ ಬಂಡುಕೋರ ಸಂಘಟನೆಗಳಿಗೆ ನೀಡಿದ ಬೆಂಬಲವನ್ನು ನಿಲ್ಲಿಸುವುದು ಎಂದರೆ ಪ್ರಾದೇಶಿಕ ರಕ್ಷಣಾ ವ್ಯವಸ್ಥೆಯ ಮುಖ್ಯ ಸ್ತಂಭಗಳನ್ನು ಶರಣಾಗತಿ ಮಾಡಿದಂತಾಗುತ್ತದೆ. ಅರ್ಥಾತ್ ಯುದ್ಧವನ್ನು ಸೋತಂತೆ. ಈ ಷರತ್ತುಗಳನ್ನು ಇರಾನ್ ಒಪ್ಪಿಕೊಳ್ಳುವುದು ಎಂದರೆ, ಬಂದೂಕಿನ ಮೊನೆಯಲ್ಲಿ ತನ್ನ ವೈಫಲ್ಯವನ್ನು ಒಪ್ಪಿಕೊಂಡಂತೆ ಎಂದು 'ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್' ಹೇಳಿದೆ.

ಯುದ್ಧದ ಅನಿವಾರ್ಯತೆಯನ್ನು ಅಮೆರಿಕನ್ನರಿಗೆ ತಿಳಿಸಲು ಹಾಗೂ ಜಾಗತಿಕ ಮಾರುಕಟ್ಟೆಗೆ ಹೊಸ ಭರವಸೆ ನೀಡಲು ಟ್ರಂಪ್ ಮಾಡಿದ್ದ ಭಾಷಣದಲ್ಲಿ ಕೆಲವು ಪ್ರಮುಖ ವಿಷಯಗಳೇ ನಾಪತ್ತೆಯಾಗಿದ್ದವು. ರಾಜತಾಂತ್ರಿಕ ಮಾತುಕತೆ ಬಗ್ಗೆ ಅಥವಾ ಆರ್ಥಿಕ ಪ್ರೋತ್ಸಾಹಗಳ ಬಗ್ಗೆ ಯಾವುದೇ ಪ್ರಸ್ತಾಪವಿರಲಿಲ್ಲ. ನಿರ್ಬಂಧಗಳ ಸಡಿಲಿಕೆ, ಇರಾನ್‌ನ ತೈಲ ವಲಯದಲ್ಲಿ ಪಾಶ್ಚಿಮಾತ್ಯ ಹೂಡಿಕೆಯ ನಿರೀಕ್ಷೆ ಅಥವಾ ಯುದ್ಧದ ನಂತರದ ಇರಾನ್ ರಾಜಕೀಯವಾಗಿ ಅಥವಾ ಆರ್ಥಿಕವಾಗಿ ಹೇಗೆ ಇರಬಹುದು ಎಂಬ ಬಗ್ಗೆ ಉಲ್ಲೇಖ ಇರಲಿಲ್ಲ. ಇರಾನ್ ಅಧಿಕಾರಿಗಳೊಂದಿಗೆ ನೇರವಾಗಿ ಮಾತುಕತೆ ನಡೆಸಲು ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಅವರನ್ನು ಕಳುಹಿಸುವ ಸಾಧ್ಯತೆಯ ಬಗ್ಗೆ ಒಂದು ವಾರದಿಂದ ಕೆಲಸ ಮಾಡುತ್ತಿದೆ ಎಂದು 'ದಿ ನ್ಯೂಯಾರ್ಕ್ ಟೈಮ್ಸ್ ವರದಿ' ಮಾಡಿತ್ತು. ಆದರೆ ಭಾಷಣದಲ್ಲಿ ಅದರ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ.

ಕೊಲ್ಲಿ ಯುದ್ಧ: ಮಾರ್ಚ್‌ನಲ್ಲಿ ₹ 1.14 ಲಕ್ಷ ಕೋಟಿ ಹಿಂಪಡೆದ ವಿದೇಶಿ ಹೂಡಿಕೆದಾರರು

ಅವರ ಭಾಷಣದಲ್ಲಿ ಶಿಕ್ಷೆಯ ಬಗ್ಗೆ ಪ್ರಸ್ತಾಪಗಳಿದ್ದವೇ ಹೊರತು, ಯಾವುದೇ ಪ್ರೋತ್ಸಾಹದ ಮಾತಿರಲಿಲ್ಲ. ಹೀಗಾಗಿ ಭಾಷಣದ ನಂತರದ ಕೆಲವೇ ಗಂಟೆಗಳಲ್ಲಿ ತೈಲ ಬೆಲೆ ಶೇ 8 ರಷ್ಟು ಏರಿಕೆಯಾದವು. ಹೊರ್ಮುಜ್ ಜಲಸಂಧಿಯನ್ನು ಮುಕ್ತವಾಗಿಸಲು ಯಾವುದೇ ಗಟ್ಟಿ ಯೋಜನೆ ಇಲ್ಲ ಎನ್ನುವುದನ್ನು ಹೂಡಿಕೆದಾರರು ಗಮನಿಸಿದರು ಎಂದು 'ಟೈಮ್ಸ್' ಪತ್ರಿಕೆ ಅಭಿಪ್ರಾಯಪಟ್ಟಿದೆ.

ಇರಾನ್ ತನ್ನ ಸುಮಾರು ಶೇ 90 ತೈಲ ರಫ್ತು ಮಾಡುವ ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುವ ಬಗ್ಗೆಯೂ ಟ್ರಂಪ್ ಸಾರ್ವಜನಿಕವಾಗಿ ಮಾತನಾಡಿದ್ದಾರೆ. 'ಅವರ ಬಳಿ ಯಾವುದೇ ರಕ್ಷಣೆ ಇದೆ ಎಂದು ನಾನು ಭಾವಿಸುವುದಿಲ್ಲ. ನಾವು ಅದನ್ನು ಬಹಳ ಸುಲಭವಾಗಿ ವಶಪಡಿಸಿಕೊಳ್ಳಬಹುದು' ಎಂದು :ಫೈನಾನ್ಷಿಯಲ್ ಟೈಮ್ಸ್‌'ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಹೇಳಿದ್ದರು. ಆದರೆ ಈವರೆಗೂ ಆ ಬಗ್ಗೆ ಯಾವುದೇ ಪ್ರಗತಿ ಉಂಟಾಗಿಲ್ಲ. ಈ ದ್ವೀಪವು ಇರಾನ್ ಕರಾವಳಿಯಿಂದ ಕೇವಲ 16 ಮೈಲಿ ದೂರದಲ್ಲಿದೆ. ಅದರ ಅದರ ತೈಲ ಪೈಪ್‌ಲೈನ್‌ಗಳ ಮೇಲೆ ನಿರಂತರ ದಾಳಿ ನಡೆಯುವ ಸಾಧ್ಯತೆ ಇದೆ. ಖಾರ್ಗ್‌ ಮೇಲೆ ಆಕ್ರಮಣಕ್ಕೆ ದೀರ್ಘಾವಧಿಯ ಮಿಲಿಟರಿ ಉಪಸ್ಥಿತಿಯ ಅಗತ್ಯವಿದೆಯೇ ಹೊರತು, ಕ್ಷಿಪ್ರ ಕಾರ್ಯಾಚರಣೆಯಲ್ಲ ಎನ್ನುವುದು ತಜ್ಞರ ಅಭಿಪ್ರಾಯ.

ಈ ನಡುವೆ ಅಮೆರಿಕಕ್ಕೆ ಹಿನ್ನಡೆಯಾದ ಮತ್ತೊಂದು ಅಂಶವೇನೆಂದರೆ, ಇರಾನ್‌ ಮೇಲಿದ್ದ ತೈಲ ನಿರ್ಬಂಧವನ್ನು ಸಡಿಲಗೊಳಿಸಿದ್ದು. ಹೊರ್ಮುಜ್ ಜಲಸಂಧಿ ಮುಚ್ಚಿದ್ದರಿಂದ ಅಮೆರಿಕವೇ ಆರ್ಥಿಕ ಸಂಕಷ್ಟಕ್ಕೀಡಾಗಿದೆ, ಇರಾನ್ ಬಳಿ ಹೆಚ್ಚಿನ ಪ್ರಭಾವ ಇದೆ ಎನ್ನುವುದನ್ನು ಇದು ತೋರಿಸಿತು.

ಕೊಲ್ಲಿ ಸಮರದಿಂದ ಭಾರತ-ಅರಬ್ ಸಂಬಂಧಕ್ಕೆ ಅಡ್ಡಿ: ದೇಶದ ಆರ್ಥಿಕತೆಗೆ 'ಹೊಸ ಆಘಾತ'

ಇರಾನ್‌ನ ಕಾರ್ಯತಂತ್ರ

ಸಂಘರ್ಷದ ಆರಂಭದಲ್ಲಿ ಇರಾನ್ ದುರ್ಬಲವಾದಂತೆ ಕಂಡಿತು. 2025ರ ಜೂನ್‌ನಲ್ಲಿಯೂ ಇಸ್ರೇಲ್‌ ಮತ್ತು ಅಮೆರಿಕ ದಾಳಿ ನಡೆಸಿ ಅದರ ಪರಮಾಣು ಕೇಂದ್ರಗಳಿಗೆ ಭಾರಿ ಹಾನಿ ಮಾಡಿದ್ದವು. ಬೆಂಬಲಿತ ಬಂಡುಕೋರ ಸಂಘಟನೆಗಳಾದ ಗಾಜಾದ ಹಮಾಸ್, ಲೆಬನಾನ್‌ ಹಿಜ್ಬುಲ್ಲಾ ಮತ್ತು ಸಿರಿಯಾದ ಅಸ್ಸಾದ್ ಕಳೆದ ಎರಡು ವರ್ಷಗಳಲ್ಲಿ ತೀವ್ರವಾಗಿ ಕುಸಿದಿದ್ದವು. ಎಪಿಕ್ ಫ್ಯೂರಿಯ ಮೊದಲ ವಾರಗಳಲ್ಲಿ ಇರಾನ್‌ನ ಸುಮಾರು ಮೂರನೇ ಎರಡರಷ್ಟು ಕ್ಷಿಪಣಿಗಳು ಮತ್ತು ಡ್ರೋನ್‌ಗಳು ನಾಶವಾಗಿವೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಅಂದಾಜಿಸಿದ್ದವು.

ಆದರೂ ಇರಾನ್ ತನ್ನ ಪ್ರಮುಖ ಕಾರ್ಯತಂತ್ರದ ಅಸ್ತ್ರವನ್ನು ಉಳಿಸಿಕೊಂಡಿದೆ. ಅದುವೇ ಹೊರ್ಮುಜ್ ಜಲಸಂಧಿ. ಅಮೆರಿಕ, ಇಸ್ರೇಲ್ ಮತ್ತು ಅವುಗಳ ಮಿತ್ರರಾಷ್ಟ್ರಗಳಿಗೆ ಸಂಚರಿಸುವ ಹಡಗುಗಳಿಗೆ ಈ ಜಲಮಾರ್ಗವನ್ನು ಮುಚ್ಚಲಾಗಿದೆ ಎಂದು ಇರಾನ್ ಮಾರ್ಚ್ 2 ರಂದು ಘೋಷಿಸಿತು. ದಾಳಿಯಿಂದ ದೇಶವನ್ನು ರಕ್ಷಣೆ ಮಾಡಲು ಈ ಕ್ರಮ ಅನಿವಾರ್ಯ ಎಂದು ಇರಾನ್ ಹೇಳಿತು. ಅಲ್ಲದೆ ಇರಾನ್‌ ಅಭಿವೃದ್ಧಿ ಪಡಿಸಿರುವ ಕ್ರೂಸ್ ಕ್ಷಿಪಣಿಯು ನಿರ್ದಿಷ್ಟವಾಗಿ ಮೂಲಸೌಕರ್ಯಗಳನ್ನು ಗುರಿಯಾಗಿಸುವ ಸಾಮರ್ಥ್ಯ ಹೊಂದಿದೆ. ಇದು ಜಲಸಂಧಿಯನ್ನು ದೀರ್ಘಕಾಲ ಮುಚ್ಚಿಡಲು ಸಹಕಾರಿಯಾಗಿದೆ.

'ಅಲ್ ಜಜೀರಾ'ದ ಅಧ್ಯಯನ ಕೇಂದ್ರವು ಇರಾನ್‌ ಮತ್ತೊಂದು ಕಾರ್ಯತಂತ್ರದ ಆಯಾಮವನ್ನು ಗಮನಿಸಿದೆ. ಅಮೆರಿಕದ ಕ್ಷಿಪಣಿ ರಕ್ಷಣಾ ದಾಸ್ತಾನುಗಳನ್ನು ಖಾಲಿಯಾಗುವಂತೆ ಇರಾನ್ ಯೋಜನೆ ಹಾಕಿಕೊಂಡಿದೆ. ಮಧ್ಯಪ್ರಾಚ್ಯದಲ್ಲಿ ಅಮೆರಿಕದಿಂದ ಹಾರಿಸಲಾಗುವ ಪ್ರತಿಯೊಂದು ಇಂಟರ್ಸೆಪ್ಟರ್ ಕ್ಷಿಪಣಿಯು ಪಶ್ಚಿಮ ಪೆಸಿಫಿಕ್‌ನಲ್ಲಿ ಚೀನಾದ ವಿರುದ್ಧದ ರಕ್ಷಣೆಗಾಗಿ ಲಭ್ಯವಿರುವ ಶಸ್ತ್ರಾಸ್ತ್ರಗಳನ್ನು ಕಡಿಮೆ ಮಾಡುತ್ತದೆ. ಅಮೆರಿಕದ 'ಥಾಡ್' ( ಅಮೆರಿಕದ ಕ್ಷಿಪಣಿ ನಿರೋಧಕ ವ್ಯವಸ್ಥೆ) ದಾಸ್ತಾನುಗಳ ಕೊರತೆಯು 2027ರವರೆಗೆ ಸರಿಹೋಗುವುದಿಲ್ಲ ಎಂಬುದು ಇರಾನ್‌ಗೆ ಚೆನ್ನಾಗಿ ತಿಳಿದಿದೆ.

ಹೊರ್ಮುಜ್ ಜಲಸಂಧಿ: ಬಿಕ್ಕಟ್ಟಿನಲ್ಲಿರುವ ಜಾಗತಿಕ ಜಲಮಾರ್ಗ

ಹೊರ್ಮುಜ್ ಜಲಸಂಧಿಯು ಪರ್ಷಿಯನ್ ಕೊಲ್ಲಿಯನ್ನು ಅರೇಬಿಯನ್ ಸಮುದ್ರಕ್ಕೆ ಸಂಪರ್ಕಿಸುವ ಕೇವಲ 34 ಕಿಲೋಮೀಟರ್ ಅಗಲದ ಕಿರಿದಾದ ಜಲಮಾರ್ಗ. ಇದರ ಮೂಲಕ ಪ್ರತಿದಿನ ಸುಮಾರು 2 ಕೋಟಿ ಬ್ಯಾರೆಲ್ ತೈಲ ಸಾಗುತ್ತದೆ. ಇದು ಜಾಗತಿಕ ಸಮುದ್ರ ತೈಲ ವ್ಯಾಪಾರದ ಶೇ 20ಕ್ಕೆ ಸಮ. 2024 ರಲ್ಲಿ, ಈ ಜಲಸಂಧಿಯ ಮೂಲಕ ಸಾಗುವ ಕಚ್ಚಾ ತೈಲದ ಶೇ 84 ರಷ್ಟು ಏಷ್ಯಾದ ಮಾರುಕಟ್ಟೆಗಳಿಗೆ ಹೋಗುತ್ತಿತ್ತು. ವಿಶ್ವದ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ವ್ಯಾಪಾರದ ಐದನೇ ಒಂದು ಭಾಗವೂ ಇದರ ಮೂಲಕವೇ ಹಾದುಹೋಗುತ್ತದೆ.

ಸದ್ಯ ಹೊರ್ಮುಜ್ ಮುಚ್ಚಿರುವುದು 1970 ರ ದಶಕದ ನಂತರ ಜಾಗತಿಕ ತೈಲ ಪೂರೈಕೆಗೆ ಉಂಟಾದ ದೊಡ್ಡ ಅಡ್ಡಿ ಎಂದು ಇಂಧನ ವಿಶ್ಲೇಷಕರು ಎಂದು ಬಣ್ಣಿಸಿದ್ದಾರೆ. ಬ್ರೆಂಟ್ ಕಚ್ಚಾ ತೈಲ ಬೆಲೆ ಮಾರ್ಚ್ 8 ರಂದು ಪ್ರತಿ ಬ್ಯಾರೆಲ್‌ಗೆ 100 ಡಾಲರ್ ದಾಟಿ, ಗರಿಷ್ಠ 126 ಡಾಲರ್ ಮುಟ್ಟಿತು. ಅಂತರರಾಷ್ಟ್ರೀಯ ಇಂಧನ ಸಂಸ್ಥೆಯು (ಐಇಎ) ತನ್ನ ಮೀಸಲು ಸಂಗ್ರಹದಿಂದ 40 ಕೋಟಿ ಬ್ಯಾರೆಲ್‌ಗಳನ್ನು ಬಿಡುಗಡೆ ಮಾಡಿತು. ಆದರೂ, ಹೊರ್ಮುಜ್ ಮೂಲಕ ಹಡಗುಗಳ ಮುಕ್ತ ಸಂಚಾರದ ಮೂಲಭೂತ ಸಮಸ್ಯೆ ಬಗೆಹರಿಯುವವರೆಗೆ ಇಂತಹ ಕ್ರಮಗಳ ಪರಿಣಾಮ ಸೀಮಿತವಾಗಿರುತ್ತದೆ.

ಇದರ ಆರ್ಥಿಕ ಪರಿಣಾಮ ತೈಲವನ್ನೂ ಮೀರಿ ವಿಸ್ತರಿಸಿದೆ. ಪರ್ಷಿಯನ್ ಕೊಲ್ಲಿಯು ಜಾಗತಿಕ ಯೂರಿಯಾ ರಫ್ತಿನ ಸುಮಾರು ಶೇ 30-35 ಮತ್ತು ಅಮೋನಿಯದ ಶೇ 20-30 ಪಾಲನ್ನು ಹೊಂದಿದೆ. ಅಂದರೆ ಉತ್ತರ ಗೋಳಾರ್ಧದಲ್ಲಿ ಕೃಷಿ ಬಿತ್ತನೆಯ ಸಮಯದಲ್ಲಿ ಜಗತ್ತಿನಾದ್ಯಂತ ರಸಗೊಬ್ಬರ ಬೆಲೆ ಏರಿಕೆಯಾಗಿವೆ. ದೊಡ್ಡ ಸಾಗಣೆ ಕಂಪನಿಗಳಾದ ಮಾರ್ಸ್ಕ್ (Maersk) ಮತ್ತು ಹಪಾಗ್-ಲಾಯ್ಡ್ (Hapag-Lloyd) ಮಧ್ಯಪ್ರಾಚ್ಯ ಮಾರ್ಗಗಳನ್ನು ಸ್ಥಗಿತಗೊಳಿಸಿವೆ. ಹೊರ್ಮುಜ್ ಜಲಸಂಧಿ ಕಾಲು ಭಾಗದಷ್ಟು ಮುಚ್ಚಿದರೂ, ಜಾಗತಿಕ ಜಿಡಿಪಿ ಬೆಳವಣಿಗೆಯನ್ನು ಶೇ 2.9 ಕಡಿಮೆ ಮಾಡುತ್ತದೆ ಎಂದು 'ಫೆಡರಲ್ ರಿಸರ್ವ್ ಬ್ಯಾಂಕ್ ಆಫ್ ಡಲ್ಲಾಸ್' ಅಂದಾಜಿಸಿದೆ

ಪಶ್ಚಿಮ ಏಷ್ಯಾದ ಸಂಘರ್ಷ: ತಾಯ್ನಾಡಿಗೆ ಮರಳುತ್ತಿರುವ 1,171 ಭಾರತೀಯರು

ನ್ಯಾಟೊದಲ್ಲಿ ಬಿರುಕು

ಈ ಯುದ್ಧದ ರಾಜತಾಂತ್ರಿಕ ಪರಿಣಾಮಗಳು ತೀವ್ರವಾಗಿವೆ. ನ್ಯಾಟೊ ಮಿತ್ರರಾಷ್ಟ್ರಗಳನ್ನು ಸಂಪರ್ಕಿಸದೆ, ವಿಶ್ವಸಂಸ್ಥೆಯ ಅನುಮತಿ ಪಡೆಯದೆ, ಮತ್ತು ಸಂಸತ್ತಿನ ಅನುಮೋದನೆಯಿಲ್ಲದೆ ಅಮೆರಿಕ 'ಆಪರೇಷನ್ ಎಪಿಕ್ ಫ್ಯೂರಿ'ಯನ್ನು ಪ್ರಾರಂಭಿಸಿತು. ಇದರಿಂದ ಆಶ್ಚರ್ಯಚಕಿತರಾದ ಯುರೋಪಿಯನ್ ದೇಶಗಳು ಈ ಯುದ್ಧದಲ್ಲಿ ಭಾಗಿಯಾಗಲು ಹಿಂಜರಿಯುತ್ತಿವೆ.

ಸ್ಪೇನ್ ತನ್ನ ವಾಯುಪ್ರದೇಶವನ್ನು ಅಮೆರಿಕದ ಮಿಲಿಟರಿ ವಿಮಾನಗಳಿಗೆ ಮುಚ್ಚಿದೆ. ಇಟಲಿ ತನ್ನ ಸಿಸಿಲಿ ನೆಲೆಯಲ್ಲಿ ಅಮೆರಿಕದ ವಿಮಾನಗಳ ಇಳಿಯಲು ಅನುಮತಿ ನಿರಾಕರಿಸಿದೆ. ಪೋಲೆಂಡ್ ತನ್ನ ಪ್ಯಾಟ್ರಿಯಾಟ್ ಬ್ಯಾಟರಿಗಳನ್ನು ಮಧ್ಯಪ್ರಾಚ್ಯಕ್ಕೆ ಕಳುಹಿಸಲು ನಿರಾಕರಿಸಿದೆ. ಅಂತರರಾಷ್ಟ್ರೀಯ ಕಾನೂನನ್ನು ಧಿಕ್ಕರಿಸಿದದ ಮಿಲಿಟರಿ ಕ್ರಮವು ಜಾಗತಿಕ ಸ್ಥಿರತೆಗೆ ಧಕ್ಕೆ ತರುತ್ತದೆ ಎಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಎಚ್ಚರಿಸಿದ್ದಾರೆ.

ನ್ಯಾಟೊದೊಂದಿಗಿನ ಸಂಬಂಧವನ್ನು ಅಮೆರಿಕ ಪುನರ್‌ಪರಿಶೀಲನೆ ನಡೆಸಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಮಾರ್ಕ್ ರೂಬಿಯೊ ಹೇಳಿದ್ದಾರೆ. ಈ ಒಕ್ಕೂಟವನ್ನು 'ಕಾಗದದ ಹುಲಿ' ಎಂದು ಟ್ರಂಪ್ ಕರೆದಿದ್ದಾರೆ.

ಐತಿಹಾಸಿಕ ಹಿನ್ನೆಲೆ

ಮಧ್ಯಪ್ರಾಚ್ಯದಲ್ಲಿ ಸ್ಪಷ್ಟವಾದ ರಾಜಕೀಯ ಗುರಿಗಳಿಲ್ಲದೆ ಸೇನಾ ಕಾರ್ಯಾಚರಣೆಗಳನ್ನು ನಡೆಸಿದ ಇತಿಹಾಸ ಅಮೆರಿಕಕ್ಕೆ ಇದೆ. 2003ರ ಇರಾಕ್ ಆಕ್ರಮಣವು ಯಾವುದೇ ರಾಜಕೀಯ ಯೋಜನೆಯಿಲ್ಲದೆ ಕೇವಲ ಮಿಲಿಟರಿ ಯಶಸ್ಸಿನ ಮೇಲೆ ಮಾತ್ರ ಕೇಂದ್ರೀಕೃತವಾಗಿತ್ತು. ಇದು ಸುಮಾರು ಎರಡು ದಶಕ ಅಮೆರಿಕ ಅಲ್ಲಿ ಸಿಲುಕಿಕೊಳ್ಳಲು ಕಾರಣವಾಯಿತು. ಅಫ್ಗಾನಿಸ್ತಾನದಲ್ಲೂ ಇದೇ ರೀತಿಯ ಪರಿಸ್ಥಿತಿ ಉಂಟಾಗಿತ್ತು.

ಈಗಿನ ಸಂಘರ್ಷವು ಈ ಹಿಂದೆ ಅಮೆರಿಕ ನಿರ್ಮಿಸಿದ್ದ ರಾಜತಾಂತ್ರಿಕ ಚೌಕಟ್ಟಿನಿಂದ ಸಂಪೂರ್ಣವಾಗಿ ಹೊರಬಂದಿದೆ. 2015 ರಲ್ಲಿ ಒಬಾಮಾ ಮಾಡಿಕೊಂದ್ದ ಪರಮಾಣು ಒಪ್ಪಂದದಿಂದ (JCPOA) 2018ರಲ್ಲಿ ಟ್ರಂಪ್ ಹೊರಬಂದಿದ್ದರು. 2025ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ನಂತರ ಟ್ರಂಪ್ ಹೊಸ ಒಪ್ಪಂದಕ್ಕಾಗಿ ಪ್ರಯತ್ನಿಸಿದರು. ಅದು ವಿಫಲವಾದಾಗ ಮಿಲಿಟರಿ ಬಲವನ್ನು ಬಳಸಿದ್ದಾರೆ. ಇದು ಅಮೆರಿಕದೊಂದಿಗೆ ಮಾಡಿಕೊಳ್ಳುವ ಒಪ್ಪಂದದ ವಿಶ್ವಾಸಾರ್ಹತೆಯ ಬಗ್ಗೆ ಇತರ ದೇಶಗಳಲ್ಲಿ ಅನುಮಾನ ಮೂಡುವಂತೆ ಮಾಡಿದೆ.

'ಸುರಕ್ಷಿತ ತಾಣ' ದುಬೈ ರಿಯಲ್‌ ಎಸ್ಟೇಟ್‌ಗೆ ಇರಾನ್‌ ಪ್ರಹಾರ: ಭಾರತೀಯರಿಗೂ ಆಘಾತ

ಮುಂದಿರುವ ಅಪಾಯಗಳು

ಈ ಸಂಘರ್ಷವು ಈಗ ಯಾವುದೇ ದೇಶಕ್ಕೂ ಸುಲಭವಾದ ಪರಿಹಾರವಿಲ್ಲದ ಹಂತವನ್ನು ತಲುಪಿದೆ. ಹೊರ್ಮುಜ್ ಜಲಸಂಧಿಯು ಮುಚ್ಚಿರುವವರೆಗೆ ಟ್ರಂಪ್ ಗೆಲುವು ಸಾಧಿಸಿದ್ದೇವೆ ಎಂದು ಹೇಳಲೂ ಸಾಧ್ಯವಿಲ್ಲ. ಹದಿನೈದು ಅಂಶಗಳ ಯೋಜನೆಯನ್ನು ಇರಾನ್ ಸಂಪೂರ್ಣವಾಗಿ ತಿರಸ್ಕರಿಸಿದೆ. ಚೀನಾಕ್ಕೆ ತೈಲವನ್ನು ರಫ್ತು ಮಾಡುವ ಮೂಲಕ ಆರ್ಥಿಕವಾಗಿ ಇರಾನ್ ಬದುಕುಳಿದಿದೆ. ಯೂರೋಪಿನ ಮಿತ್ರರಾಷ್ಟ್ರಗಳು ಅಮೆರಿಕಕ್ಕೆ ಮಿಲಿಟರಿ ಬೆಂಬಲ ನೀಡಲು ಮುಂದೆ ಬರುತ್ತಿಲ್ಲ.

ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 170 ಡಾಲರ್ ತಲುಪಿದರೆ, ಅದು ಜಾಗತಿಕ ಹಣದುಬ್ಬರ ಮತ್ತು ಬೆಳವಣಿಗೆಯ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು 'ಬ್ಲೂಮ್‌ಬರ್ಗ್ ಎಕನಾಮಿಕ್ಸ್' ಎಚ್ಚರಿಸಿದೆ. ಒಂದು ವೇಳೆ ಈ ಬಿಕ್ಕಟ್ಟು ಮುಂದುವರಿದರೆ ತೈಲ ಬೆಲೆ 200 ಡಾಲರ್ ತಲುಪುವ ಸಾಧ್ಯತೆಯೂ ಇದೆ.

ಈ ಯುದ್ಧವು ಈಗ ಇರಾನ್‌ಗೆ ಮಾತ್ರ ಸೀಮಿತವಾಗಿಲ್ಲ. ಇಂಧನ ಮಾರುಕಟ್ಟೆಗಳನ್ನು ಮರುರೂಪಿಸುತ್ತಿದೆ, ಮಿತ್ರರಾಷ್ಟ್ರಗಳ ನಡುವೆ ಬಿರುಕು ಮೂಡಿಸುತ್ತಿದೆ. ಅಲ್ಲದೆ ಭಾರತದಿಂದ ಜಪಾನ್‌ವರೆಗಿನ ದೇಶಗಳ ಪೂರೈಕೆ ಸರಪಳಿಯಲ್ಲಿನ ದೌರ್ಬಲ್ಯಗಳನ್ನು ಬಯಲು ಮಾಡುತ್ತಿದೆ. ಆರ್ಥಿಕ ವೆಚ್ಚಗಳು ಅತಿಯಾಗುವ ಮುನ್ನ ರಾಜತಾಂತ್ರಿಕ ಮಾತುಕತೆಗಳು ಫಲ ನೀಡುತ್ತವೆಯೇ ಎಂಬುದು ಈ ಸಂಘರ್ಷದ ಫಲಿತಾಂಶವನ್ನು ಮಾತ್ರವಲ್ಲದೆ, ಅಮೆರಿಕದ ವಿದೇಶಾಂಗ ನೀತಿಯ ವಿಶ್ವಾಸಾರ್ಹತೆಯನ್ನು ನಿರ್ಧರಿಸಲಿದೆ.

ಆಧಾರ: ದಿ ನ್ಯೂಯಾರ್ಕ್ ಟೈಮ್ಸ್, ಅಲ್ ಜಜೀರಾ, ಸಿಎನ್‌ಬಿಸಿ, ಬ್ಲೂಮ್‌ಬರ್ಗ್ ಎಕನಾಮಿಕ್ಸ್, ರಾಯಿಟರ್ಸ್, ಸಿಎನ್‌ಎನ್

ಹೊರ್ಮುಜ್: ವಿಶ್ವವನ್ನೇ ತಲ್ಲಣಗೊಳಿಸಿದ 'ಕಷ್ಟ ಸಂಧಿ', ಇರಾನ್‌ಗೆ ವರದಾನವೇಕೆ?
Dailyhunt
Disclaimer: This content has not been generated, created or edited by Dailyhunt. Publisher: Prajavani