ಇತ್ತೀಚೆಗೆ ಇಬ್ಬರು ನಟಿಯರ ದೇಹಾಕಾರ ಪರಿವರ್ತನೆಯ ವಿಷಯ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಚರ್ಚಿತವಾಗುತ್ತಿದೆ. ಒಬ್ಬರು-ಕೃತಿ ಸನೊನ್, ಇನ್ನೊಬ್ಬರು-ಆಲಿಯಾ ಭಟ್. ಈ ವಿಷಯಕ್ಕೆ ಆಮೇಲೆ ಬರೋಣ.
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಸಿನಿ ಸಿಪ್: ರಾಜ್ಯೋಗದಿಂದ ಆಲಿಯಾ ವ್ಯಾಯಾಮದವರೆಗೆ...
ಒಂದು ಸಾಲಿನಲ್ಲಿಸಿನಿಮಾ ನಟ-ನಟಿಯರ ಆಕರ್ಷಕ ಮೈಕಟ್ಟು ಮತ್ತು ಅದಕ್ಕಾಗಿ ಅವರು ಕೈಗೊಳ್ಳುವ ಶಿಸ್ತಿನ ವ್ಯಾಯಾಮ, ಯೋಗ ಹಾಗೂ ಜೀವನಶೈಲಿಯ ಬದಲಾವಣೆಗಳ ಕುರಿತಾದ ವಿಶ್ಲೇಷಣೆ.
ಏನು? ಏಕೆ? ಹೇಗೆ?
ಹಿರಿಯ ನಟ ರಾಜ್‌ಕುಮಾರ್ ಅವರು ಯೋಗವನ್ನು ತಮ್ಮ ಜೀವನಶೈಲಿಯಲ್ಲಿ ಹೇಗೆ ಅಳವಡಿಸಿಕೊಂಡಿದ್ದರು?
ಮಂಡಿನೋವಿನ ಚಿಕಿತ್ಸೆಗಾಗಿ ಯೋಗಾಭ್ಯಾಸ ಆರಂಭಿಸಿದ ರಾಜ್‌ಕುಮಾರ್ ಅವರು, ನಂತರ ಅದನ್ನು ತಮ್ಮ ನಿತ್ಯದ ಜೀವನದ ಭಾಗವನ್ನಾಗಿ ಮಾಡಿಕೊಂಡರು. 'ಕಾಮನಬಿಲ್ಲು' ಚಿತ್ರದಲ್ಲಿ ಅವರ ನೈಜ ಯೋಗಾಸನಗಳನ್ನು ಚಿತ್ರೀಕರಿಸಲಾಯಿತು.
ರಣಬೀರ್ ಕಪೂರ್ ಅವರು ತಮ್ಮ ಪಾತ್ರಗಳಿಗಾಗಿ ದೇಹವನ್ನು ಹೇಗೆ ಬದಲಾಯಿಸಿಕೊಳ್ಳುತ್ತಾರೆ?
ರಣಬೀರ್ ಕಪೂರ್ ಅವರು ಪಾತ್ರದ ಬೇಡಿಕೆಗೆ ತಕ್ಕಂತೆ ತೂಕ ಹೆಚ್ಚಿಸಿಕೊಳ್ಳಲು ಕಟ್ಟುನಿಟ್ಟಾದ ಆಹಾರ ಕ್ರಮ ಮತ್ತು ತರಬೇತಿಯನ್ನು ಪಾಲಿಸುತ್ತಾರೆ; ಉದಾಹರಣೆಗೆ 'ಸಂಜು' ಚಿತ್ರಕ್ಕಾಗಿ ಅವರು 13 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದರು.
ನಟ-ನಟಿಯರ ದೇಹಾಕಾರ ಬದಲಾವಣೆಗೆ ಸಾಮಾನ್ಯವಾಗಿ ಯಾವ ರೀತಿಯ ವ್ಯಾಯಾಮಗಳನ್ನು ಬಳಸಲಾಗುತ್ತದೆ?
ನಟ-ನಟಿಯರು ಪಾತ್ರದ ಅವಶ್ಯಕತೆಗೆ ಅನುಗುಣವಾಗಿ ಕಾರ್ಡಿಯೊ, ವೇಟ್ ಲಿಫ್ಟಿಂಗ್, ಜಿಮ್ ತಾಲೀಮು, ಬಾಕ್ಸಿಂಗ್, ಮತ್ತು ವಿವಿಧ ರೀತಿಯ ಯೋಗಾಸನಗಳನ್ನು ದೀರ್ಘಕಾಲದವರೆಗೆ ಶಿಸ್ತಿನಿಂದ ಅಭ್ಯಸಿಸುತ್ತಾರೆ.
ಫರ್ಹಾನ್ ಅಖ್ತರ್ ಅವರು ಮಿಲ್ಖಾ ಸಿಂಗ್ ಪಾತ್ರಕ್ಕಾಗಿ ಎಷ್ಟು ಪರಿಶ್ರಮ ಪಟ್ಟಿದ್ದರು?
ಅಥ್ಲೀಟ್‌ಗೆ ಬೇಕಾದ ದೇಹಾಕಾರ ಪಡೆಯಲು ಫರ್ಹಾನ್ ಅವರು ಹದಿಮೂರು ತಿಂಗಳ ಕಾಲ ನಿತ್ಯ ಐದಾರು ತಾಸುಗಳ ಕಠಿಣ ತರಬೇತಿ ಮತ್ತು ಓಡುವ ಅಭ್ಯಾಸವನ್ನು ನಡೆಸಿದ್ದರು.
ಇಂದಿನ ಕಾಲದ ನಟಿಯರು ಫಿಟ್‌ನೆಸ್‌ಗಾಗಿ ಯಾವ ವಿಧಾನಗಳನ್ನು ಅನುಸರಿಸುತ್ತಿದ್ದಾರೆ?
ಆಲಿಯಾ ಭಟ್ ಮತ್ತು ಕೃತಿ ಸನೊನ್ ಅಂತಹ ನಟಿಯರು ಜಿಮ್‌ನಲ್ಲಿ ತೀವ್ರವಾದ ವ್ಯಾಯಾಮ, ಬಾಕ್ಸಿಂಗ್ ಮತ್ತು ಸಾಮರ್ಥ್ಯ ವೃದ್ಧಿಸುವ ತರಬೇತಿಗಳನ್ನು ಪಡೆದು ತಮ್ಮ ದೇಹವನ್ನು ಸದೃಢವಾಗಿಟ್ಟುಕೊಳ್ಳುತ್ತಾರೆ.
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
'ಕರಾವಳಿ' ಕನ್ನಡ ಸಿನಿಮಾದಲ್ಲಿ ದೇಹಾಕಾರ ಪರಿವರ್ತನೆಯ ಕಾರಣಕ್ಕೇ ನಟ ಪ್ರಜ್ವಲ್ ದೇವರಾಜ್ ಅವರಿಗೆ ಒಂದೂಕಾಲು ಕೋಟಿ ರೂಪಾಯಿ ಸಂಭಾವನೆ ಗೊತ್ತುಪಡಿಸಿದ್ದಾಗಿಯೂ, ಆನಂತರ ನಿರೀಕ್ಷಿತ ಮಟ್ಟಕ್ಕೆ ಪ್ರಜ್ವಲ್ ದೇಹಾಕಾರ ಬದಲಿಸಲು ಆಗಲಿಲ್ಲ ಎಂದೂ ನಿರ್ದೇಶಕ ಗುರುದತ್ ಗಾಣಿಗ ಹೇಳಿದ್ದನ್ನು ಕಳೆದ ವಾರ 'ಸಿನಿ ಸಿಪ್'ನಲ್ಲಿ ಪ್ರಸ್ತಾಪಿಸಲಾಗಿತ್ತು. ದೇಹಾಕಾರ ಬದಲಿಸುವುದು ದೊಡ್ಡ ಪ್ರಕ್ರಿಯೆ ಎನ್ನುವುದು ಈ ಸಿನಿಮಾ ತಂಡದವರಿಗೆ ಕೂಡ ಗೊತ್ತಿರಲಿಕ್ಕೆ ಸಾಕು.
ಸಿನಿಮಾ ವಿಮರ್ಶೆ: ಸೇಡಿನ ಸುಳಿಯಲ್ಲೇ ಸಿಲುಕಿದ 'ಕರಾವಳಿ''ಕರಾವಳಿ' ವಿವಾದ: ಸಂಭಾವನೆ ಬಾಕಿಯಿದೆ ಎಂದ ಪ್ರಜ್ವಲ್ರಾಜ್ ಯೋಗಾಯೋಗ
ಸಿನಿಮಾ ನಟ-ನಟಿಯರಿಗೆ ದೇಹವೇ ದೇಗುಲ. ರಾಜ್‌ಕುಮಾರ್ ಅವರಿಗೂ ಈ ಸಂಗತಿ ತಿಳಿದಿತ್ತು. ಮೊದಲಿನಿಂದಲೂ ಸಪೂರವಾಗಿದ್ದ, ಅಂಗಸೌಷ್ಟವವನ್ನು ಚೆನ್ನಾಗಿ ಕಾಪಾಡಿಕೊಂಡಿದ್ದವರು ರಾಜ್‌ಕುಮಾರ್. 'ಆಪರೇಷನ್ ಡೈಮಂಡ್ ರಾಕೆಟ್' ಸಿನಿಮಾ ಚಿತ್ರೀಕರಣ ಮುಗಿದ ನಂತರ ಅವರಿಗೆ ತೀವ್ರವಾಗಿ ಮಂಡಿನೋವು ಕಾಣಿಸಿಕೊಂಡಿತು. ಸಹಜವಾಗಿಯೇ ಮೊದಲು ವೈದ್ಯರಿಂದ ಚಿಕಿತ್ಸೆ ಪಡೆದರು. ಅದು ನಿರೀಕ್ಷಿತ ಫಲ ನೀಡಲಿಲ್ಲ. ಆಗ ಯೋಗಗುರು ಹೊನ್ನಪ್ಪ ಫಕೀರಪ್ಪ ನಾಯ್ಕರ್ ಅವರಲ್ಲಿ ಯೋಗಾಭ್ಯಾಸ ಪ್ರಾರಂಭಿಸಿದರು. ಸುಮಾರು 50ನೇ ವಯಸ್ಸಿನಲ್ಲಿ ರಾಜ್‌ಕುಮಾರ್ ಇಂತಹ ಸಾಹಸಕ್ಕೆ ಕೈಹಾಕಿದ್ದು. ಅದಕ್ಕೂ ಮೊದಲು 'ಮಯೂರ' ಸಿನಿಮಾದಲ್ಲಿ ಟೈಗರ್ ಪ್ರಭಾಕರ್ ಜೊತೆ ಕುಸ್ತಿ ದೃಶ್ಯದಲ್ಲಿ ಅಭಿನಯಿಸಿದ್ದ ಅವರ ದೇಹಾಕಾರವನ್ನು ನೋಡಿದ್ದವರಿಗೆ ಆಮೇಲೆ ಕಂಡದ್ದು ಮತ್ತೊಂದು ಪರಿವರ್ತನೆ. ಯೋಗಾಭ್ಯಾಸವನ್ನು ರಾಜ್‌ಕುಮಾರ್ ಎಷ್ಟರಮಟ್ಟಿಗೆ ತಮ್ಮದಾಗಿಸಿಕೊಂಡರು ಎನ್ನುವುದರ ನಿಜದರ್ಶನವಾದದ್ದು 'ಕಾಮನಬಿಲ್ಲು' ಸಿನಿಮಾದಲ್ಲಿ.
ಸಿನಿ ಸಿಪ್: ಕನ್ನಡ ಚಿತ್ರರಂಗದ ಆರಂಭಿಕ ದಿನಗಳ ಸಂಭಾವನೆ ಹೇಗಿತ್ತು?ಸಿನಿ ಸಿಪ್: ಲೀಲಾವತಿಯ ಜಿಡ್ಡು ಚರ್ಮ; ಜಗ್ಗೇಶ್ ವಿದೇಶದಿಂದ ತಂದ ಲೋಷನ್ಆ ಸಿನಿಮಾದ ಪ್ರಾರಂಭದಲ್ಲಿ ಶೀರ್ಷಿಕೆ ಹಾಗೂ ಪಾತ್ರವರ್ಗದ ಹೆಸರುಗಳನ್ನು ತೋರಿಸುವಾಗ, ಅದರೊಟ್ಟಿಗೆ ರಾಜ್‌ಕುಮಾರ್ ಮಾಡಿದ ಕಠಿಣ ಯೋಗಾಸನಗಳನ್ನು ಪ್ರೇಕ್ಷಕರು ನೋಡಬಹುದು. ಆನಂತರ ಚಿತ್ರದ ನಾಯಕಿ ಸರಿತಾ ಕದ್ದುಮುಚ್ಚಿ ರಾಜ್‌ಕುಮಾರ್ ಯೋಗ ಮಾಡುವ ದೃಶ್ಯಗಳನ್ನು ನೋಡುವ ಸನ್ನಿವೇಶ ಆ ಸಿನಿಮಾದಲ್ಲಿದೆ.
ಚಿ. ದತ್ತರಾಜ್ ನಿರ್ದೇಶನದ 'ಕಾಮನಬಿಲ್ಲು' ಸಿನಿಮಾದಲ್ಲಿ ರಾಜ್‌ಕುಮಾರ್ ಅವರ ನಿತ್ಯದ ಯೋಗ ದೃಶ್ಯಗಳನ್ನೇ ಬಳಸಿಕೊಳ್ಳಲು ತೀರ್ಮಾನಿಸಲಾಯಿತು. ಅದಕ್ಕೆ ರಾಜ್‌ಕುಮಾರ್ ಕೂಡ ಒಪ್ಪಿದರು. ಮೇಲುಕೋಟೆಯಲ್ಲಿ ಆ ದೃಶ್ಯಗಳ ಚಿತ್ರೀಕರಣ. ಬೆಳಗಿನ ಜಾವವೇ ಎದ್ದು ಯೋಗಾಸನ ಮಾಡುವುದು ರಾಜ್‌ಕುಮಾರ್ ಅಭ್ಯಾಸವಾಗಿತ್ತು. ಸಿನಿಮಾಗೆಂದು ವಿಶೇಷವಾಗಿ ಅವರು ಏನನ್ನೂ ಮಾಡಲಿಲ್ಲ. ನಿತ್ಯವೂ ಏನು ಮಾಡುವರೋ ಅವನ್ನೇ ಚಿತ್ರೀಕರಿಸಲು ತಂಡ ನಿರ್ಧರಿಸಿತು. ಆಗ ಕೊರೆಯುವ ಚಳಿ. ಎಲ್ಲರೂ ಬೆಚ್ಚಗಿನ ಬಟ್ಟೆಗಳನ್ನು ಧರಿಸಿ ಮೇಲುಕೋಟೆಯ ಮಂಟಪದ ಬಳಿ ನಿಂತಿದ್ದರು. ಆದರೆ, ರಾಜ್‌ಕುಮಾರ್ ಕೇವಲ ಒಂದು ತುಂಡು ಕೆಳವಸ್ತ್ರವನ್ನು ಕಚ್ಚೆಯಂತೆ ಕಟ್ಟಿಕೊಂಡು ನಿಂತಿದ್ದರು. ಐವತ್ತಮೂರು ವರ್ಷ ವಯಸ್ಸಿನ ನಟ ಹಾಗೆ ನಿಂತಿದ್ದನ್ನು ನೋಡಿ ಖುದ್ದು ಸರಿತಾ ಅವರಿಗೂ ಅಚ್ಚರಿ. ಸರಿತಾ ಶಾಲು ಧರಿಸಿ, ರಾಜ್‌ಕುಮಾರ್ ಯೋಗ ಮಾಡುವುದನ್ನು ನೋಡುವ ದೃಶ್ಯ ಸಿನಿಮಾದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಸಿನಿಮಾಟೊಗ್ರಾಫರ್ ಬಿ.ಸಿ. ಗೌರಿಶಂಕರ್ ಅವರು ಯೋಗದ ದೃಶ್ಯಗಳನ್ನು ಬಹಳ ಚೆನ್ನಾಗಿ ಚಿತ್ರೀಕರಿಸಿದ್ದರು. ಈ ಗೌರಿಶಂಕರ್ ನಟಿ ರಕ್ಷಿತಾ ಅವರ ತಂದೆ. ಉದರ ಭಾಗದ ಸ್ನಾಯುಗಳನ್ನು ಒಳಕ್ಕೆ ಎಳೆದುಕೊಂಡು ಚಲಿಸುವಂತೆ ಮಾಡುವ 'ಉದ್ದಿಯಾನ ಬಂಧ'ದಂತಹ ವರಸೆಯನ್ನೂ ರಾಜ್‌ಕುಮಾರ್ ಮಾಡಿದ್ದರು. ಅದನ್ನು ಕಣ್ಣಿಗೆ ಕಟ್ಟುವಂತೆ ಕ್ಲೋಸಪ್ನಲ್ಲಿ ಗೌರಿಶಂಕರ್ ಚಿತ್ರೀಕರಿಸಿದ್ದರು.
'ಕಾಮನಬಿಲ್ಲು' ಸಿನಿಮಾ ತೆರೆಕಂಡ ಮೇಲೆ ಅನೇಕರು ಯೋಗ ತರಗತಿಗಳಿಗೆ ಸೇರಿಕೊಂಡರು. ಹೊನ್ನಪ್ಪ ಫಕೀರಪ್ಪ ನಾಯ್ಕರ್ ಅವರಲ್ಲಿ ಯೋಗ ಕಲಿತ ನಟ-ನಟಿಯರ ಸಂಖ್ಯೆಯೂ ಹೆಚ್ಚಾಯಿತು. ರಾಜ್‌ಕುಮಾರ್ ದೊಡ್ಡಮಗ ರಾಘವೇಂದ್ರ ಅವರು ಪಾರ್ಶ್ವವಾಯು ಸಮಸ್ಯೆಗೆ ಈಡಾದ ನಂತರ ನೆರವಿಗೆ ಬಂದವರೂ ಇದೇ ಯೋಗಗುರು. ಕೋವಿಡ್ ಕಾಲದಲ್ಲಿ ತಮ್ಮ ತೊಂಬತ್ತನೇ ವಯಸ್ಸಿನಲ್ಲಿ ಈ ಯೋಗಗುರು ತೀರಿಹೋದರು. ಅಷ್ಟರಲ್ಲಿ ಅವರು ರಾಜ್‌ಕುಮಾರ್ ಸ್ಫೂರ್ತಿಯಿಂದ ಅಸಂಖ್ಯ ಜನರಿಗೆ ಹಠಯೋಗ ಕಲಿಸಿದ್ದರು.
ಜಿಮ್ ಜಪ ಮಾಡುವ ಈ ಕಾಲದಲ್ಲಿ ಯೋಗದ ಮಂತ್ರ ಜಪಿಸುವ ಸೆಲೆಬ್ರಿಟಿಗಳು ನಿಮಗೆ ಗೊತ್ತಿದ್ದರೆ, ನಮಗೆ ಬರೆದು ತಿಳಿಸಿ.
ರಣಬೀರ್‌ಗೂ ಒಲಿದ ಯೋಗ-ಧ್ಯಾನ
ಹಿಂದಿಯಲ್ಲಿ 'ರಾಮಾಯಣ' ಸಿನಿಮಾ ಎರಡು ಭಾಗಗಳಲ್ಲಿ ತಯಾರಾಗುತ್ತಿದೆ. ಒಂದು ಭಾಗ ಇದೇ ವರ್ಷ ನವೆಂಬರ್ನಲ್ಲಿ ತೆರೆಕಾಣಲಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾಗಿ ಅಭಿನಯಿಸಿದ್ದಾರೆ.
ಸಾಮಾನ್ಯವಾಗಿ ಜಿಮ್ನಲ್ಲಿ ಎಲ್ಲರೂ ಬೆವರಿಳಿಸುವ ಈ ಕಾಲದಲ್ಲಿ ಅವರು ಸುವೀರ್ ಎಂಬೊಬ್ಬರು ಗುರುವಿನ ಬಳಿಗೆ ಹೋದರು. ಅವರಲ್ಲಿ ಯೋಗ-ಧ್ಯಾನದ ಪಾಠಗಳನ್ನು ಕಲಿತರು. ಎರಡು ವರ್ಷ ತಪ್ಪದೇ ನಿತ್ಯವೂ ಕಲಿತದ್ದನ್ನು ಅಭ್ಯಾಸ ಮಾಡತೊಡಗಿದರು. ರಾಮನ ಪಾತ್ರಕ್ಕೆ ಬೇಕಾದ ತೇಜಸ್ಸನ್ನು ಯೋಗ ಕೊಡುತ್ತದೆ ಎನ್ನುವುದು ರಣಬೀರ್ ನಂಬಿಕೆ.
ಯೋಗಾಭ್ಯಾಸ ಮಾಡತೊಡಗಿದ ನಂತರ ರಾಜ್‌ಕುಮಾರ್ ಮುಖದಲ್ಲಿಯೂ ತೇಜಸ್ಸು ಹೆಚ್ಚಾಯಿತು ಎಂದು ಶಿವರಾಜ್‌ಕುಮಾರ್ ಒಂದೊಮ್ಮೆ ನೆನಪಿಸಿಕೊಂಡಿದ್ದರು.
ಇದಕ್ಕೂ ಮೊದಲು ದೇಹಾಕಾರ ಬದಲಿಸಿದ್ದು...
ಎಂಟು ವರ್ಷಗಳ ಹಿಂದೆ ಇದೇ ರಣಬೀರ್ ನಟನೆಯ 'ಸಂಜು' ಹಿಂದಿ ಸಿನಿಮಾ ಬಿಡುಗಡೆಯಾಗಿತ್ತು. ಅದರಲ್ಲಿ ಸಂಜಯ್ ದತ್ ಅವರ ಪಾತ್ರದಲ್ಲಿ ಈ ನಟ ಅಭಿನಯಿಸಿದ್ದರು. ಸಂಜಯ್ ಅವರ ಹಾವ-ಭಾವವಷ್ಟೇ ಅಲ್ಲದೆ ದೇಹಾಕಾರವನ್ನೂ ರೂಢಿಸಿಕೊಂಡಿದ್ದ ಪಾತ್ರವದು. ಡಾ. ಸುರೇಶ್ ಮುರ್ಕಿ ಎಂಬ ಪ್ರಾಸ್ತೆಟಿಕ್ ಕಲಾವಿದ ಹಾಗೂ ಹೇರ್ಸ್ಟೈಲಿಸ್ಟ್ ಅಲೀಂ ಹಕೀಂ ಎಂಬಿಬ್ಬರು ಮೊದಲಿಗೆ ರಣಬೀರ್ ಮುಖದ ಅಳತೆ ತೆಗೆದುಕೊಂಡಿದ್ದರು. ಸಂಜಯ್ ದತ್ ಹೋಲುವಂತೆ ಯಾವ ರೀತಿಯಲ್ಲಿ ಪ್ರಾಸ್ತೆಟಿಕ್ ಮೇಕಪ್ ಸಿದ್ಧಪಡಿಸಬೇಕು ಎನ್ನುವ ಕಾರಣಕ್ಕೆ ಮೂಗಿನ ಉದ್ದ ಎಷ್ಟು, ಕೆನ್ನೆ ಎಷ್ಟು ದಪ್ಪವಿದೆ, ಕಣ್ಣುಗಳ ಸುತ್ತಲಿನ ಕುಳಿಗಳ ಆಳವೆಷ್ಟು ಎಂದೆಲ್ಲ ಅಳತೆ ಮಾಡಿದ್ದರು.
ತಮ್ಮ ಪಾತ್ರದಲ್ಲಿ ರಣಬೀರ್ ಕಪೂರ್ ನಟಿಸಲಿದ್ದಾರೆ ಎನ್ನುವ ವಿಷಯ ಕೇಳಿ ಮೊದಲು ಸಂಜಯ್ ದತ್ ಗಹಗಹಿಸಿ ನಕ್ಕಿದ್ದರು. ಯಾಕೆಂದರೆ, ರಣಬೀರ್ ಆಗ ಸಪೂರವಿದ್ದರು. ಸಂಜಯ್ ಅವರದ್ದು ನೀಳವೂ ದಪ್ಪವೂ ಆದ ದೇಹ. ಸಂಜಯ್ಗೆ ಆಗ ತಮ್ಮ ಪಾತ್ರದಲ್ಲಿ ಅಭಿನಯಿಸುವ ನಟ ಹೇಗೆಲ್ಲ ಬದಲಾಗಲಿದ್ದಾರೆ ಎಂಬ ಅಂದಾಜೂ ಇರಲಿಲ್ಲ.
ಸಿನಿ ಸಿಪ್: ಲೀಲಾವತಿಯ ಜಿಡ್ಡು ಚರ್ಮ; ಜಗ್ಗೇಶ್ ವಿದೇಶದಿಂದ ತಂದ ಲೋಷನ್ಸಿನಿ ಸಿಪ್: 'ಕಣ್ಣಪ್ಪ'ನ ಕಾರಣಕ್ಕೆ 'ರಾಜ್‌ಕುಮಾರ್' ಆದ ಮುತ್ತುರಾಜ್ರಣಬೀರ್ ದೇಹತೂಕ 70 ಕೆ.ಜಿಗಿಂತ ಕಡಿಮೆ ಇತ್ತು. ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಮೊದಲಿಗೆ ಫಿಟ್ನೆಸ್ ತರಬೇತುದಾರ ಕುನಾಲ್ ಗಿರ್ ಅವರನ್ನು ಕರೆಸಿದರು. ಸಂಜಯ್ ಅವರಂತೆಯೇ ಆಗಲು ಈ ನಟ ತೂಕವನ್ನು ಎಷ್ಟು ಹೆಚ್ಚಿಸಿಕೊಳ್ಳಬೇಕು ಎಂದು ಕೇಳಿದರು. 13 ಕೆ.ಜಿಯಷ್ಟಾದರೂ ಹೆಚ್ಚಿಸಿಕೊಳ್ಳಲೇಬೇಕು ಎಂದು ಕುನಾಲ್ ಹೇಳಿದರು.
ಕೊಬ್ಬು ಕಡಿಮೆ, ಪ್ರೊಟೀನ್ ಜಾಸ್ತಿ ಇರುವ ಆಹಾರ ಸೇವನೆಯ ಪ್ರಮಾಣವನ್ನು ರಣಬೀರ್ ಹೆಚ್ಚಿಸಿಕೊಂಡರು. ಬೆಳಗಿನ ಜಾವಕ್ಕೂ ಮೊದಲು, ಮೂರು ಗಂಟೆಗೆ ಎದ್ದು ಒಂದು ಲೋಟ ಪ್ರೊಟೀನ್ ಪೇಯ ಕುಡಿಯುವುದೂ ಡಯೆಟ್ನ ಭಾಗವಾಗಿತ್ತು. ಕುನಾಲ್ ಅಷ್ಟು ಹೊತ್ತಿಗೂ ತಾವೇ ಫೋನ್ ಮಾಡಿ ನಟನನ್ನು ಎಬ್ಬಿಸುತ್ತಿದ್ದರು.
ಪ್ರತಿದಿನ ಒಂದೂವರೆ ತಾಸು ವ್ಯಾಯಾಮ ಮಾಡಿ ರಣಬೀರ್ ಭುಜಗಳ ಆಕಾರ ಹಿಗ್ಗಿಸಿಕೊಂಡರು. ಸಿನಿಮಾದ ಟ್ರೈಲರ್ ನೋಡಿದ ಮೇಲೆ ಖುದ್ದು ಸಂಜಯ್ ದತ್ ದಂಗಾಗಿಹೋದರು. ಇಷ್ಟರಮಟ್ಟಿಗೆ ಇನ್ನೊಬ್ಬ ನಟನನ್ನು ತಮ್ಮನ್ನು ಹೋಲುವಂತೆ ಪರಿವರ್ತಿಸಬಹುದು ಎಂಬ ಕಲ್ಪನೆಯೇ ಅವರಿಗೆ ಇರಲಿಲ್ಲ.
ಸಂಜಯ್ ದತ್ ಪಾತ್ರದಲ್ಲಿ ರಣಬೀರ್ ಕಪೂರ್ ಅಭಿನಯ ನಿಮಗೆಷ್ಟು ಹಿಡಿಸಿತು? ನಮಗೆ ತಿಳಿಸಿ.ಮಿಲ್ಖಾ ಆದ ಕಷ್ಟದ ಪಯಣ
'ಭಾಗ್ ಮಿಲ್ಖಾ ಭಾಗ್' ಹಿಂದಿ ಸಿನಿಮಾದಲ್ಲಿ ಫರ್ಹಾನ್ ಅಖ್ತರ್ ಅಥ್ಲೀಟ್ ಮಿಲ್ಖಾ ಸಿಂಗ್ ಪಾತ್ರದಲ್ಲಿ ಅಭಿನಯಿಸಿದರು. ಅವರು ಥೇಟ್ ಅಥ್ಲೀಟ್ ಹೋಲುವ ದೇಹಾಕಾರವನ್ನೇ ಅದಕ್ಕಾಗಿ ರೂಪಿಸಲು ಹದಿಮೂರು ತಿಂಗಳು ತೆಗೆದುಕೊಂಡರು.
ಸಮೀರ್ ಜೌರಾ ಎಂಬ ದೈಹಿಕ ತರಬೇತುದಾರ ಹಾಗೂ ಮೆಲ್ವಿನ್ ಕ್ರಾಸ್ಟೊ ಎಂಬ ಅಥ್ಲೆಟಿಕ್ ತರಬೇತುದಾರ ಇಬ್ಬರ ಗರಡಿಯಲ್ಲೂ ಫರ್ಹಾನ್ ಪಳಗಬೇಕಾಯಿತು.
ನಿತ್ಯವೂ ಐದಾರು ತಾಸಿನಂತೆ ವಾರದ ಆರು ದಿನಗಳೂ ತರಬೇತಿ. ಬೆಳಿಗ್ಗೆ 6.30ಕ್ಕೆ ಎದ್ದು, ವೇಗವಾಗಿ ಓಡುವುದನ್ನು ಅಭ್ಯಾಸ ಮಾಡಿದರು. ಕಾಲಿನ ಮೀನಖಂಡಗಳನ್ನು ಗಟ್ಟಿಗೊಳಿಸಲು, ಕೈಗಳ ಚಲನೆಯನ್ನು ವೇಗಗೊಳಿಸಲು ವ್ಯಾಯಾಮ ಮಾಡುವುದು ಕಡ್ಡಾಯವಿತ್ತು. ಸಾಮರ್ಥ್ಯ ವರ್ಧನೆ, ಹೈಪೊಟ್ರೋಫಿಕ್ ವರ್ಕ್‌ಔಟ್, ಭಾರ ಎತ್ತುವುದು... ಯಾವುದಕ್ಕೂ ಫರ್ಹಾನ್ ಒಲ್ಲೆ ಎನ್ನಲಿಲ್ಲ.
ಮೊದಲಿಗೆ ಎಂಟು-ಹತ್ತು ಕೆ.ಜಿ. ದೇಹತೂಕ ಹೆಚ್ಚಿಸಿಕೊಂಡು, ಆಮೇಲೆ 10 ಕೆ.ಜಿ. ಇಳಿಸಿಕೊಂಡ ಫರ್ಹಾನ್, ತಮ್ಮ ನಿರ್ದೇಶಕ ರಾಕೇಶ್ ಓಂಪ್ರಕಾಶ್ ಮೆಹ್ರಾ ಅವರಿಗೆ ನುಡಿದಂತೆ ನಡೆದುಕೊಂಡರು. ಅದರ ಒಟ್ಟಾರೆ ಫಲಿತಾಂಶಕ್ಕೆ ಸಿನಿಮಾ ಪ್ರಚಂಡ ಯಶಸ್ಸೇ ಸಾಕ್ಷಿ.
ಅಥ್ಲೀಟ್ ರೀತಿ ದೇಹ ರೂಪಿಸಲು ಏನೆಲ್ಲ ವ್ಯಾಯಾಮ ಮಾಡಬೇಕು ಎನ್ನುವುದು ನಿಮಗೂ ತಿಳಿದಿದ್ದರೆ, ಸಂಕ್ಷಿಪ್ತವಾಗಿ ಬರೆದು ಕಳುಹಿಸಿ.
ಕೃತಿ, ಆಲಿಯಾ ವಿಷಯಕ್ಕೆ ಬರೋಣ
ಲೇಖನದ ಪ್ರಾರಂಭದಲ್ಲಿ ಕೃತಿ ಸನೊನ್ ಹಾಗೂ ಆಲಿಯಾ ವಿಷಯ ಪ್ರಸ್ತಾಪಿಸಲಾಗಿತ್ತು. ಈಗ ಕೃತಿ ಅವರ ಬಗ್ಗೆ ಮಾತನಾಡೋಣ.
'ಕಾಕ್ಟೇಲ್ 2' ಹಿಂದಿ ಸಿನಿಮಾದಲ್ಲಿ ಕೃತಿ ಸನೊನ್ ಅಥ್ಲೀಟ್ ಹೋಲುವ ದೇಹಾಕಾರದಲ್ಲಿ ಕಾಣಿಸಿಕೊಂಡರು. ಸಿನಿಮಾಗೆ ಸಿಕ್ಕ ಯಶಸ್ಸಿಗಿಂತ ಈ ನಟಿಯ ದೇಹಾಕಾರದ ಕುರಿತು ನಡೆದ ಚರ್ಚೆಯ ವಜನೇ ಜಾಸ್ತಿ ಇದೆ.
ಭಾರ ಎತ್ತುವುದು, ಟ್ರೆಡ್ಮಿಲ್ ಅನ್ನು ಇಳಿಜಾರು ಮಾಡಿಕೊಂಡು ಜಾಗ್ ಮಾಡುವುದು, ಕಾರ್ಡಿಯೊ ವ್ಯಾಯಾಮ ಇವೆಲ್ಲವುಗಳಿಂದ ಕೃತಿ ತಮ್ಮ ದೇಹವನ್ನು ಆ ರೀತಿ ರೂಪಿಸಿದರು. ಅವರಿಗೆ ತರಬೇತಿ ಕೊಟ್ಟವರು ಕರುಣ್ ಸಾಹ್ನೆ. ಕೃತಿ ಜಿಮ್ನಲ್ಲಿ ಯಾವ ರೀತಿ ಬೆವರು ಹರಿಸಿದರು ಎಂಬ ವಿಡಿಯೊಗಳು ಈಗ ವೆಬ್ಸೈಟ್ಗಳಲ್ಲಿ ಹರಿದಾಡುತ್ತಿವೆ.
'ಆಲ್ಫಾ' ಹಿಂದಿ ಸಿನಿಮಾದಲ್ಲಿ ಆಲಿಯಾ ಭಟ್ ಅವರ ದೇಹ ಸಪೂರವೂ ಸದೃಢವಾಗಿಯೂ ಇದೆ. ಒಂದು ಮಗುವಿನ ತಾಯಿಯಾಗಿರುವ ಅವರು ನಿತ್ಯವೂ ಜಿಮ್ನಲ್ಲಿ ಒಂದೂವರೆ ಎರಡು ತಾಸು ಬೆವರು ಬಸಿದಿದ್ದಕ್ಕೆ ದಕ್ಕಿದ ಫಲವಿದು.
ಆಲ್ಫಾ ಟ್ರೇಲರ್ ಬಿಡುಗಡೆ; ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡ ಆಲಿಯಾ ಭಟ್Visual Story: ಗ್ಲಾಮರಸ್ ಲುಕ್‌ನಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ಒಂದಿಡೀ ವರ್ಷ ಆಲಿಯಾ ಈ ಸಿನಿಮಾ ಪಾತ್ರಕ್ಕೆಂದೇ ವ್ಯಾಯಾಮಕ್ಕೆ ಒಡ್ಡಿಕೊಂಡರು. ಸಾಮರ್ಥ್ಯ ಹೆಚ್ಚಿಸುವ ವ್ಯಾಯಾಮ, ಬಾಕ್ಸಿಂಗ್ ತಾಲೀಮು, ರಿಂಗ್ಡಿಪ್, ಪ್ಲಯೋಮೆಟ್ರಿಕ್ ಜಂಪ್ಗಳು ಹೀಗೆ ಹೊಸಕಾಲದ ಹಲವು ಬಗೆಯ ತರಬೇತಿಗೆ ಒಳಗಾದರು.
ಹತ್ತು-ಹನ್ನೆರಡು ತಾಸು ಚಿತ್ರೀಕರಣವಿದ್ದರೂ ವ್ಯಾಯಾಮವನ್ನು ಮಾತ್ರ ತಪ್ಪಿಸುತ್ತ ಇರಲಿಲ್ಲ.
'ಚಂದು ಚಾಂಪಿಯನ್' ಹಿಂದಿ ಸಿನಿಮಾದಲ್ಲಿನ ಅಭಿನಯಕ್ಕೆ ಇತ್ತಿಚೆಗಷ್ಟೇ ರಾಷ್ಟ್ರ ಪ್ರಶಸ್ತಿಗೆ ನಟ ಕಾರ್ತಿಕ್ ಆರ್ಯನ್ ಆಯ್ಕೆಯಾದರು. ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಮುರಳೀಕಾಂತ್ ಪೆಟ್ಕರ್ ಪಾತ್ರಕ್ಕೆ ಜೀವ ತುಂಬಲು ಅವರೂ ದೇಹವನ್ನು ಸಾಕಷ್ಟು ದಂಡಿಸಿ, ಅಂಗಾಂಗಗಳನ್ನು ಹುರಿಗಟ್ಟಿಸಿಕೊಂಡಿದ್ದರು.
'ದಂಗಲ್' ಸಿನಿಮಾಗೆಂದು ಆಮಿರ್ ಖಾನ್ ದೇಹತೂಕ ಹೆಚ್ಚಿಸಿಕೊಂಡು ಆಮೇಲೆ ಇಳಿಸಿಕೊಂಡದ್ದು, 'ದಮ್ ಲಗಾಕೆ ಹೈಶಾ' ಸಿನಿಮಾದಲ್ಲಿ ಅಭಿನಯಿಸಲು ನಟಿ ಭೂಮಿ ಪೆಡ್ನೇಕರ್ 30 ಕೆ.ಜಿ. ತೂಕ ಹೆಚ್ಚಿಸಿಕೊಂಡಿದ್ದು, 'ಸುಲ್ತಾನ್' ಸಿನಿಮಾಗೆಂದು ಸಲ್ಮಾನ್ ಖಾನ್ ರೂಪಿಸಿದ್ದ ಎರಡು ರೀತಿಯ ದೇಹಾಕಾರ, 'ಅಣ್ಣಾ ಬಾಂಡ್' ಕನ್ನಡ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಕಟೆದಿದ್ದ ದೇಹ, 'ಐ' ತಮಿಳು ಸಿನಿಮಾಗೆಂದು ವಿಕ್ರಮ್ ಮಾಡಿದ್ದ ವ್ಯಾಪಕ ವ್ಯಾಯಾಮದ ಸತ್ಯಗಳು... ಹೀಗೆ ಬರೆದಷ್ಟೂ ದೇಹ ಬದಲಿಸಿದವರ ಪ್ರಸಂಗಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ.
ನಿಮಗೂ ನಟ-ನಟಿಯರ ಇಂತಹ ದೇಹಾಕಾರ ಪರಿವರ್ತನೆಯ ಸಂಗತಿಗಳು ತಿಳಿಸದಿದ್ದರೆ ಕಮೆಂಟ್ ಮೂಲಕ ನಮ್ಮೊಡನೆ ಹಂಚಿಕೊಳ್ಳಿ.
ಸಂಪಾದಕೀಯ | ಸಚಿವ ಪ್ರಧಾನ್ ರಾಜೀನಾಮೆ ನೀಡಲಿ: ಹೊಣೆಗಾರಿಕೆಗೆ ಸರ್ಕಾರ ಬದ್ಧವಾಗಲಿ
