ನಟ ಪ್ರಜ್ವಲ್ ದೇವರಾಜ್ ತಮಗೆ ಬರಬೇಕಾದ ಅಷ್ಟೂ ಸಂಭಾವನೆ ಇನ್ನೂ ಬಂದಿಲ್ಲವೆಂದು 'ಕರಾವಳಿ' ಸಿನಿಮಾಗೆ ಡಬ್ ಮಾಡಲಿಲ್ಲ. ಈಗ ಬೇರೆಯವರಿಂದ ಡಬ್ ಮಾಡಿಸಿ, 'ನಾಯಕನಟರಿಗೂ ಬುದ್ಧಿ ಕಲಿಸುತ್ತೇವೆ' ಎಂಬಂತೆ ನಿರ್ದೇಶಕ ಗುರುದತ್ ಗಾಣಿಗ ತೊಡೆ ತಟ್ಟಿದ್ದಾರೆ. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಆರಂಭಿಕ ದಿನಗಳ ಸಂಭಾವನೆ ಹಾಗೂ ಸದ್ಭಾವನೆಯ ನೆನಕೆಗಳು...
ಹೋದ ವಾರ ನಾವು ಚಿತ್ರರಂಗದ ಮದುವೆ, ಮರು ಮದುವೆಗಳ ಪ್ರಸ್ತಾಪ ಮಾಡುತ್ತಿದ್ದ ಸಂದರ್ಭದಲ್ಲೇ ಪ್ರಜ್ವಲ್ ದೇವರಾಜ್ ಸುದ್ದಿಕೇಂದ್ರವಾದರು. 'ಕರಾವಳಿ' ಸಿನಿಮಾದ ನಾಯಕ ನಟ ಅವರು. ಗುರುದತ್ ಗಾಣಿಗ ನಿರ್ದೇಶಕರು. ಪ್ರಜ್ವಲ್ ಅವರಿಗೆ ಒಂದೂಕಾಲು ಕೋಟಿ ರೂಪಾಯಿ ಸಂಭಾವನೆ ಕೊಡುವ ಮಾತಾಗಿತ್ತು. 'ಒಂದು ಕೋಟಿ ಸಂದಾಯವಾಗಿದೆ, ಉಳಿದದ್ದು ಬಾಕಿ ಇದೆ' ಎಂದು ಸಿನಿಮಾ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಗುರುದತ್ ಹೇಳಿದರು. ಆ ಕಾರ್ಯಕ್ರಮಕ್ಕೆ ಪ್ರಜ್ವಲ್ ಗೈರುಹಾಜರಾಗಿದ್ದರು. ಟ್ರೈಲರ್ನಲ್ಲಿ ಪ್ರಜ್ವಲ್ ಪಾತ್ರಕ್ಕೆ ಬೇರೆಯವರಿಂದ ಡಬ್ ಮಾಡಿಸಿದ್ದು ಗೊತ್ತಾಯಿತು. ಹೀಗೆ ಬೇರೆಯವರಿಂದ ಡಬ್ ಮಾಡಿಸಿದ ಸಂಗತಿ ಪ್ರಜ್ವಲ್ ಅವರಿಗೆ ತಿಳಿದದ್ದೇ ಟ್ರೇಲರ್ ಬಿಡುಗಡೆಯ ಹಿಂದಿನ ರಾತ್ರಿ. ಇದೇ ಕಾರಣಕ್ಕೆ ಪ್ರಜ್ವಲ್ ಅವರ ಸಹಾಯಕರು ಟ್ರೇಲರ್ ಬಿಡುಗಡೆಯ ದಿನ, 'ಬೇರೆಯವರಿಂದ ಡಬ್ ಮಾಡಿಸಿದ್ದು ಯಾಕೆ' ಎಂದು ಪ್ರಶ್ನಿಸಿ, ಗಲಾಟೆ ಮಾಡಿದರು. ಅವಿನಾಶ್, ದಿಲೀಪ್ ಹಾಗೂ ನಂದಕುಮಾರ್ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಚಿತ್ರದ ನಿರ್ಮಾಪಕ-ನಿರ್ದೇಶಕರು ಹಾಗೂ ಚಿತ್ರಮಂದಿರದ ಸಿಬ್ಬಂದಿ ದೂರು ದಾಖಲಿಸಿದರು. ದೂರಿನಲ್ಲಿ ಹೆಸರಿಸಲಾದ ಈ ಮೂವರೂ ಪ್ರಜ್ವಲ್ ಸಹಾಯಕರೆಂದೂ, ತಮಗೆ ಅವರ ಪರಿಚಯ ಚೆನ್ನಾಗಿ ಇದೆಯೆಂದೂ, ಅವರೂ ತಮ್ಮ ಹುಡುಗರೇ ಎಂದು ನಿರ್ದೇಶಕ ಗುರುದತ್ ಗಾಣಿಗ ಕಾರ್ಯಕ್ರಮದ ವೇದಿಕೆಯಲ್ಲೇ ಹೇಳಿದ್ದರು. ಹಾಗಿದ್ದೂ ಅವರು ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನಲ್ಲಿ ಗಲಾಟೆ ಮಾಡಿದವರು ಪ್ರಜ್ವಲ್ ಅಭಿಮಾನಿಗಳು ಎಂದು ಹೆಸರಿಸಿದರು.
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಸಿನಿ ಸಿಪ್: ಕನ್ನಡ ಚಿತ್ರರಂಗದ ಆರಂಭಿಕ ದಿನಗಳ ಸಂಭಾವನೆ ಹೇಗಿತ್ತು?
ಒಂದು ಸಾಲಿನಲ್ಲಿಕನ್ನಡ ಚಿತ್ರರಂಗದ ಆರಂಭಿಕ ದಿನಗಳಿಂದ ಇಂದಿನವರೆಗೆ ನಟ-ನಿರ್ಮಾಪಕರ ನಡುವಿನ ಸಂಭಾವನೆ ವಿವಾದಗಳು ಮತ್ತು ಅದರ ಐತಿಹಾಸಿಕ ಹಿನ್ನೆಲೆಯನ್ನು ಈ ಲೇಖನ ವಿಶ್ಲೇಷಿಸುತ್ತದೆ.
ಪ್ರಮುಖ ಪ್ರಶ್ನೋತ್ತರ
ಪ್ರಜ್ವಲ್ ದೇವರಾಜ್ ಮತ್ತು 'ಕರಾವಳಿ' ಸಿನಿಮಾ ವಿವಾದವೇನು?
ಒಪ್ಪಂದದಂತೆ ಪೂರ್ಣ ಸಂಭಾವನೆ ನೀಡದ ಕಾರಣ ಪ್ರಜ್ವಲ್ ದೇವರಾಜ್ ಡಬ್ಬಿಂಗ್ ಮಾಡಿರಲಿಲ್ಲ, ಅದರಿಂದ ನಿರ್ದೇಶಕರು ಬೇರೆಯವರಿಂದ ಡಬ್ ಮಾಡಿಸಿ ವಿವಾದಕ್ಕೆ ಕಾರಣರಾದರು.
ಕನ್ನಡ ಚಿತ್ರರಂಗದ ಆರಂಭಿಕ ದಿನಗಳಲ್ಲಿ ಸಂಭಾವನೆ ಹೇಗಿತ್ತು?
1930ರ ದಶಕದ 'ಸತಿ ಸುಲೋಚನಾ' ಸಿನಿಮಾದ ಕಾಲದಿಂದಲೂ ಸಂಭಾವನೆಗಾಗಿ ಕಲಾವಿದರು ಮತ್ತು ತಂತ್ರಜ್ಞರು ಪ್ರತಿಭಟನೆ ನಡೆಸಿದ ಉದಾಹರಣೆಗಳಿವೆ.
ಡಾ. ರಾಜ್‌ಕುಮಾರ್ ಅವರ ಸಂಭಾವನೆ ಪಡೆಯುವ ಪದ್ಧತಿ ಹೇಗಿತ್ತು?
ರಾಜ್‌ಕುಮಾರ್ ಅವರು ಮುಂಗಡ ಹಣ ಕೇಳುತ್ತಿರಲಿಲ್ಲ, ಸಿನಿಮಾ ಬಿಡುಗಡೆಯಾಗಿ ಲಾಭ ಬಂದ ನಂತರವೇ ತಮ್ಮ ಸಂಭಾವನೆ ಪಡೆಯುವ ಉದಾರ ಗುಣ ಹೊಂದಿದ್ದರು.
ಬಿ. ಜಯಮ್ಮನವರು ಪಂಡರಿಬಾಯಿ ಅವರಿಗೆ ನೀಡಿದ ಗೌರವವೇನು?
ಗುಣಸಾಗರಿ ಚಿತ್ರದಲ್ಲಿ ನಟಿಸಿದ ಪಂಡರಿಬಾಯಿ ಅವರಿಗೆ ಬಿ. ಜಯಮ್ಮ ಅವರು ಎರಡೂವರೆ ಸಾವಿರ ರೂಪಾಯಿಗಳನ್ನು ಫಲ-ತಾಂಬೂಲದೊಂದಿಗೆ ನೀಡಿ ಪ್ರೋತ್ಸಾಹಿಸಿದ್ದರು.
ಇಂದಿನ ಚಿತ್ರರಂಗದಲ್ಲಿ ಸಂಭಾವನೆಯಲ್ಲಿನ ಬದಲಾವಣೆಗಳೇನು?
ಹಿಂದಿನ ಸಹಕಾರ ತತ್ತ್ವದ ಬದಲಿಗೆ ಈಗ ದೊಡ್ಡ ಮೊತ್ತದ ಒಪ್ಪಂದಗಳು ನಡೆಯುತ್ತಿವೆ ಮತ್ತು ಲಿಂಗ ತಾರತಮ್ಯದಂತಹ ಸಮಸ್ಯೆಗಳು ಮುನ್ನೆಲೆಗೆ ಬರುತ್ತಿವೆ.
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಇದು ಸಾಮಾಜಿಕ ಮಾಧ್ಯಮದ ಕಾಲ. ಪ್ರಜ್ವಲ್ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಅಭಿಪ್ರಾಯವನ್ನು ವಿಡಿಯೊ ಮೂಲಕ ಹಂಚಿಕೊಂಡರು. ಒಪ್ಪಿಕೊಂಡಿದ್ದ ಸಂಭಾವನೆ ಬಾಕಿ ಇತ್ತು. ಅದು ಕೊಟ್ಟಮೇಲೆ ಡಬ್ಬಿಂಗ್ ಮಾಡುವುದಾಗಿ ಹೇಳಿದ್ದಾಗಿಯೂ, ಅದಕ್ಕೆ ಸ್ಪಂದಿಸದೆ ನಿರ್ದೇಶಕರು ಬೇರೆಯವರಿಂದ ಡಬ್ ಮಾಡಿಸಿದ್ದಾರೆಂದೂ ಅವರು ಸ್ಪಷ್ಟನೆ ಕೊಟ್ಟರು. ಚಿತ್ರಕ್ಕೆ ಗುರುದತ್ ಗಾಣಿಗ ಬಂಡವಾಳವನ್ನೂ ತೊಡಗಿಸಿದ್ದಾರೆ. 'ನಾಯಕನ ಪಾತ್ರಕ್ಕೆ ದೇಹಾಕಾರವನ್ನು ಬದಲಿಸಿಕೊಳ್ಳುವುದು ಅಗತ್ಯವಿತ್ತು. ಹೀಗಾಗಿ ಹೆಚ್ಚು ಸಂಭಾವನೆ ಕೊಡಲು ಒಪ್ಪಿದ್ದೆವು. ಆದರೆ, ಪ್ರಜ್ವಲ್ ನಿರೀಕ್ಷಿತ ರೀತಿಯಲ್ಲಿ ದೇಹಾಕಾರ ಬದಲಿಸಿಕೊಳ್ಳಲಿಲ್ಲ. ಹೀಗಾಗಿ ಅಷ್ಟೂ ಸಂಭಾವನೆ ಕೊಡಲಿಲ್ಲ' ಎಂದು ನಿರ್ದೇಶಕರು ಕಾರ್ಯಕ್ರಮದ ನಂತರ ಮಾತು ಸೇರಿಸಿದರು. ಅದಕ್ಕೂ ಮೊದಲು, 'ಕರಾವಳಿ ಭಾಗದ ಆಡುಭಾಷೆಯಲ್ಲಿ ಪ್ರಜ್ವಲ್ ಡಬ್ ಮಾಡಿದರೆ ಪಾತ್ರಕ್ಕೆ ಹೊಂದುವುದಿಲ್ಲ ಎಂಬ ಕಾರಣಕ್ಕೆ ಬೇರೆಯವರಿಂದ ಡಬ್ ಮಾಡಿಸಲಾಯಿತು' ಎಂದು ಸಮಜಾಯಿಷಿಯನ್ನೂ ಕೊಟ್ಟಿದ್ದರು.
ಸಿನಿ ಸಿಪ್: ನಟ ಅಂಬರೀಶ್ ಕರ್ಣ ಆದದ್ದು ಹೀಗೆ...ಸಿನಿ ಸಿಪ್: ಎಲ್ಲರಂತಲ್ಲದ ಚಿರಸ್ಥಾಯಿ ಶಂಕರ್ ನಾಗ್ ಸಿನಿ ಸಿಪ್: ಅಣ್ಣಾವ್ರನ್ನ ಕಳೆದುಕೊಂಡ ದಿನದ ವಿದ್ಯಮಾನ; ನಿಜಕ್ಕೂ ಆಗಿದ್ದೇನು?ಪ್ರಜ್ವಲ್ ನಾಯಕನಟ. ಮೊದಲೇ ಒಂದು ಸಂಭಾವನೆ ಕೇಳಿದ್ದಾರೆ. ಅದನ್ನು ಕೊಡಲು ನಿರ್ಮಾಪಕರು ಒಪ್ಪಿದ್ದಾರೆ. ಸಿನಿಮಾ ಚಿತ್ರೀಕರಣವೂ ಮುಗಿದಿದೆ. ಅಂದಮೇಲೆ, ವ್ಯಾವಹಾರಿಕವಾಗಿ ಪ್ರಜ್ವಲ್ ಹಿಡಿದ ಹಟ ಸರಿ. ಒಂದು ವೇಳೆ ಪಾತ್ರಕ್ಕೆ ನಟನ ಕಂಠ ಹೊಂದುತ್ತಿಲ್ಲ ಎಂದಾದರೆ, ಬೇರೆಯವರಿಂದ ಡಬ್ ಮಾಡಿಸುವುದಾಗಿ ಆ ನಟನನ್ನು ಒಪ್ಪಿಸುವುದು ಕೂಡ ಅದೇ ನಿರ್ಮಾಪಕ-ನಿರ್ದೇಶಕರ ಹೊಣೆಯಾಗುತ್ತದೆ. ಜುಲೈ 24ರಂದು ಸಿನಿಮಾ ತೆರೆಕಾಣಲಿದ್ದು, 19ರಿಂದ ಪ್ರೀಮಿಯರ್ ಷೋಗಳನ್ನು ಆಯೋಜಿಸಲಾಗಿದೆ. ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಿರುವ ರಾಜ್ ಬಿ.ಶೆಟ್ಟಿ ಕೆಲವೇ ಗಂಟೆಗಳ ಮೊದಲು ಇನ್ನೊಂದು ವಿಡಿಯೊವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. 'ತಪ್ಪು ಯಾರದು ಎನ್ನುವುದು ಮುಖ್ಯವಲ್ಲ' ಎಂದು ಅವರು ಈಗ ಹೊಸಸಾಲನ್ನು ಸೇರಿಸಿದ್ದಾರೆ. ಕಾರ್ಯಕ್ರಮ ನಡೆದ ದಿನ ತಪ್ಪು ಯಾರದ್ದು ಎಂಬ ಜಿಜ್ಞಾಸೆ ಎದುರಾದಾಗ ಅವರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದರು. ನಕಾರಾತ್ಮಕ ಪ್ರಚಾರವೂ ಒಂದು ತಂತ್ರವಾಗಿಬಿಟ್ಟಿರುವ ಈ ಕಾಲದಲ್ಲಿ ಪ್ರೇಕ್ಷಕ ಈ ಇಡೀ ವಿದ್ಯಮಾನವನ್ನು ತನ್ನದೇ ನಿಕಷಕ್ಕೆ ಒಡ್ಡಿಕೊಂಡು ಗಮನಿಸುತ್ತಿರುವುದರಲ್ಲಿ ಅನುಮಾನವಿಲ್ಲ. ಒಂದು ಉತ್ಪನ್ನವಾದ ಸಿನಿಮಾದಲ್ಲಿನ ಎಲ್ಲ ಕುಶಲಕರ್ಮಿಗಳು ಸಂಘಟಿತರಾಗಿ ಇಲ್ಲದ ಕಾಲವಿದು ಎನ್ನುವ ಸತ್ಯವನ್ನೂ ಈ ಪ್ರಕರಣ ಅನಾವರಣಗೊಳಿಸಿದೆ.
'ಸತಿ ಸುಲೋಚನಾ' ಕಾಲದಲ್ಲೇ ಪ್ರತಿಭಟನೆ
ಸಂಭಾವನೆ ವಿಷಯದ ಅಸಮಾಧಾನ ಈ ಕಾಲದ ಸಮಸ್ಯೆಯಷ್ಟೇ ಅಲ್ಲ. ಕನ್ನಡದ ಮೊದಲ ವಾಕ್ಚಿತ್ರ 'ಸತಿ ಸುಲೋಚನಾ' ಕಾಲದಿಂದಲೂ ನಡೆದುಕೊಂಡು ಬಂದಿದೆ. 1930ರ ದಶಕದಲ್ಲಿ ಬಾಂಬೆ (ಈಗಿನ ಮುಂಬೈ) ಹಾಗೂ ಕೋಲ್ಕತ್ತದ ಸ್ಟುಡಿಯೊಗಳಲ್ಲಿ ಹೆಚ್ಚಾಗಿ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಆದರೆ, ನಿರ್ಮಾಪಕರಾದ ಚಮನ್ಲಾಲ್ ಡುಂಗಾಜಿ ಹಾಗೂ ಷಾ ಭೂರ್ಮಲ್ ಚಮನ್ಲಾಲ್ ಡುಂಗಾಜಿ ಬಜೆಟ್ ಕಡಿಮೆಯಾಗಬಹುದು ಎಂಬ ಕಾರಣಕ್ಕೆ ಕೊಲ್ಹಾಪುರದ ಸ್ಟುಡಿಯೊದಲ್ಲಿ ಚಿತ್ರೀಕರಣ ನಡೆಸಲು ನಿರ್ಧರಿಸಿದರು.
ಅಲ್ಲಿ ಚಿತ್ರೀಕರಣ ಮುಗಿಯಿತು. ಆದರೆ, ತಮಗೆ ಬರಬೇಕಾದ ಸಂಭಾವನೆ ಬರಲಿಲ್ಲವೆಂದು ಕೆಲಸ ಮಾಡಿದ ತಂತ್ರಜ್ಞರು, ಕಾರ್ಮಿಕರೆಲ್ಲ ಸ್ಟುಡಿಯೊದಲ್ಲಿ ಮುಷ್ಕರ ಹೂಡಿದರು. ಅವರ ಪಟ್ಟಿಗೆ ಮಣಿದು, ನಿರ್ಮಾಪಕರು ಸಂಭಾವನೆ ಕೊಡಬೇಕಾಗಿ ಬಂತು.
ಲೀಲಾವತಿಗೂ ಇತ್ತು ಅಸಮಾಧಾನ
1960ರಲ್ಲಿ ಎನ್.ಸಿ. ರಾಜನ್ ಅವರು 'ರಣಧೀರ ಕಂಠೀರವ' ಸಿನಿಮಾ ನಿರ್ದೇಶಿಸಿದರು. ಕಥೆ-ಚಿತ್ರಕಥೆ ಬರೆದಿದ್ದವರು ಜಿ.ವಿ. ಅಯ್ಯರ್. ರಾಜ್ಕುಮಾರ್, ಅಯ್ಯರ್, ನರಸಿಂಹರಾಜು, ಬಾಲಕೃಷ್ಣ ಎಲ್ಲರೂ ಸೇರಿ ಈ ಸಿನಿಮಾ ನಿರ್ಮಾಣ ಮಾಡಿದ್ದರು. 'ಕನ್ನಡ ಚಲನಚಿತ್ರ ಕಲಾವಿದರ ಸಂಘ' ಎಂದು ಅವರೆಲ್ಲ ಸ್ಥಾಪಿಸಿ, ಸಹಕಾರ ತತ್ತ್ವದಡಿ ಈ ಚಿತ್ರ ನಿರ್ಮಾಣಕ್ಕೆ ಕೈಹಾಕಿದರು. ಚಿತ್ರ ತಯಾರಿಕೆ ಮುಗಿದ ಮೇಲೆ ಯಾವ ವಿತರಕರೂ ಬಿಡುಗಡೆಯ ಹಕ್ಕು ಖರೀದಿಸಲು ಮುಂದೆ ಬರಲಿಲ್ಲ. ಕೊನೆಗೆ ಭಾರತ್ ಚಿತ್ರಮಂದಿರಲ್ಲಿ ಮಾತ್ರ ನಿರ್ಮಾಪಕರೇ ಬಿಡುಗಡೆ ಮಾಡಿದರು. ಜಿ.ಕೆ. ವೆಂಕಟೇಶ್ ಸ್ವರ ಸಂಯೋಜನೆ ಮಾಡಿದ್ದ ಹಾಡುಗಳಲ್ಲಿ ಒಂದನ್ನು ಇತ್ತೀಚೆಗೆ ಅಗಲಿದ ಎಸ್. ಜಾನಕಿ ಅವರು ಹಾಡಿದ್ದರು. 'ಸಂಚಾರಿ ಮನಸೋತೆ/ಎನ್ನ ಮರೆಯದೆ ಬಾ ಇನಿಯ' ಎಂಬ ಆ ಹಾಡು ಲೀಲಾವತಿ ಅವರಿಗೂ ಅಚ್ಚುಮೆಚ್ಚಾಗಿತ್ತು. ಆ ಸಿನಿಮಾಗೆ ಹೇಳಿದಷ್ಟು ಸಂಭಾವನೆಯನ್ನು ಕೊಡಲಿಲ್ಲ. ಕಷ್ಟದ ಪರಿಸ್ಥಿತಿಯಲ್ಲಿ ಆ ಸಿನಿಮಾ ಮಾಡಿ ಮುಗಿಸಿದ್ದೇ ದೊಡ್ಡ ವಿಷಯವಾಗಿತ್ತು. ಹೀಗಾಗಿ ತಾವೂ ಹಟ ಮಾಡಲಿಲ್ಲ ಎಂದು ಲೀಲಾವತಿ ಅನುಭವ ಬುತ್ತಿ ಬಿಚ್ಚಿಟ್ಟಿದ್ದರು. ಸಹಕಾರ ತತ್ತ್ವದಡಿಯಲ್ಲಿ ನಿರ್ಮಿತವಾದ ಆ ಸಿನಿಮಾ ಸಂಕಷ್ಟದಲ್ಲಿದ್ದ ಕನ್ನಡ ಚಿತ್ರರಂಗದ ಪಾಲಿಗೆ ಆಗ ಇಂಧನವಾಯಿತು. ಐತಿಹಾಸಿಕ ಕಥನಗಳ ಸಿನಿಮಾ ಮಾಡುವ ಪ್ರವೃತ್ತಿಗೂ ಇಂಬುಗೊಟ್ಟಿತು.
ಸಿನಿ ಸಿಪ್: ಲೀಲಾವತಿಯ ಜಿಡ್ಡು ಚರ್ಮ; ಜಗ್ಗೇಶ್ ವಿದೇಶದಿಂದ ತಂದ ಲೋಷನ್ರಾಜ್ಕುಮಾರ್ ಸಂಭಾವನೆಯ ಅನ್ಯ ಪರಂಪರೆ
ಸಾಂಸ್ಕೃತಿಕ ಮೇರು ವ್ಯಕ್ತಿತ್ವವಾಗಿ ರಾಜ್‌ಕುಮಾರ್ ನೆಲಸಿದ್ದಕ್ಕೆ ಅವರ ಹಲವು ಸದ್ಗುಣಗಳೇ ಕಾರಣ. 'ಬೇಡರ ಕಣ್ಣಪ್ಪ' ಸಿನಿಮಾ ದೊಡ್ಡಮಟ್ಟದ ಯಶಸ್ಸು ಕಂಡಿತಲ್ಲ; ಆನಂತರ ಅವರು ಮನಸ್ಸು ಮಾಡಿದ್ದರೆ ಈಗಿನ ತಾರಾನಟರಂತೆ ಇಷ್ಟೇ ಹಣ ನೀಡುವಂತೆ ದುಂಬಾಲು ಬೀಳಬಹುದಾಗಿತ್ತು. ಅವರು ಹಾಗೆ ಮಾಡಲಿಲ್ಲ. ಆ ದಿನಗಳಲ್ಲಿ ಚಿತ್ರ ತಯಾರಿಸಲು ಮುಂದೆ ಬಂದವರಿಂದ ಅವರು ಮುಂಗಡ ಹಣ ಪಡೆದದ್ದೇ ವಿರಳ. ಕಷ್ಟಪಟ್ಟು ಹಣ ಹೊಂದಿಸಿಕೊಂಡು ಸಿನಿಮಾ ಮಾಡುವವರಿಂದಲಂತೂ ಚಿತ್ರ ಬಿಡುಗಡೆಯಾಗಿ ಲಾಭ ಕಂಡಮೇಲೆ ತಮ್ಮ ಸಂಭಾವನೆಯನ್ನು ಪಡೆಯುತ್ತಿದ್ದರು. ಮೇರುನಟನ ಈ ಸಹಾಯಹಸ್ತ ಚಾಚುವ ಗುಣದಿಂದಲೇ ಕನ್ನಡ ಚಿತ್ರರಂಗಕ್ಕೆ ಅನೇಕ ನಿರ್ಮಾಪಕರು, ತಂತ್ರಜ್ಞರ ಪ್ರವೇಶವಾಯಿತು.
ವ್ಯಂಗ್ಯ ನೋಡಿ, ಇದೇ ರಾಜ್‌ಕುಮಾರ್ ಅವರು ಸಹಕಾರ ತತ್ತ್ವದಡಿ ಸಿನಿಮಾ ನಿರ್ಮಿಸಿದಾಗ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲು ವಿತರಕರೇ ಬರಲಿಲ್ಲ.
ಸಿನಿ ಸಿಪ್: 'ಕಣ್ಣಪ್ಪ'ನ ಕಾರಣಕ್ಕೆ 'ರಾಜ್‌ಕುಮಾರ್' ಆದ ಮುತ್ತುರಾಜ್ಹೊಸ ಉದ್ಯಮ ಆರಂಭಿಸಿದ ಪುನೀತ್ ರಾಜ್‌ಕುಮಾರ್ ಕಿರಿ ಮಗಳು ವಂದಿತಾಪಂಡರಿಬಾಯಿ ಮೊದಲ ಸಂಭಾವನೆಯ ಸುಖ
'ಬೇಡರ ಕಣ್ಣಪ್ಪ' ಸಿನಿಮಾ ತೆರೆಕಾಣುವ ಒಂದು ವರ್ಷ ಮೊದಲು ಗುಬ್ಬಿ ಕರ್ನಾಟಕ ಫಿಲ್ಮ್ಸ್ನಿರ್ಮಾಣ ಸಂಸ್ಥೆಯು 'ಗುಣಸಾಗರಿ' ಚಿತ್ರವನ್ನು ತಯಾರಿಸಿತು. ಎ.ವಿ.ಎಂ.ನ ಮೇಯಪ್ಪನ್ ಅವರ ಸಹಕಾರ ಚಿತ್ರ ತಯಾರಿಗೆ ಇತ್ತು. ಗುಬ್ಬಿ ವೀರಣ್ಣನವರಿಗೆ ತಮ್ಮ ಪತ್ನಿ ಬಿ. ಜಯಮ್ಮನವರು ನಾಯಕಿಯಾಗಬೇಕು ಎಂಬ ಬಯಕೆ. ಹೀಗಾಗಿ ಅವರು ಅವರನ್ನೇ ಮುಖ್ಯ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳುವಂತೆ ನಿರ್ದೇಶಕ ಎಚ್.ಎಲ್.ಎನ್. ಸಿಂಹ ಅವರಿಗೆ ತಾಕೀತು ಮಾಡಿದ್ದರು. ನಿರ್ಮಾಪಕರ ಮಾತನ್ನು ಕಣ್ಣಿಗೊತ್ತಿಕೊಂಡು ಸಿಂಹ ಸುಮ್ಮನಾಗಿದ್ದರು. ಜಯಮ್ಮನವರನ್ನು ನೋಡಿದ ಮೇಯಪ್ಪನ್, 'ಈ ನಾಯಕಿಯ ವಯಸ್ಸು ಜಾಸ್ತಿ ಎನಿಸುತ್ತದೆ. ಈ ಪಾತ್ರಕ್ಕೆ ಅವರು ಬೇಡ, ಬದಲಿಸಿ' ಎಂದು ಸೂಚಿಸಿದರು. ಎಚ್.ಎಲ್.ಎನ್. ಸಿಂಹ ಹೆದರಿದರು. ಗುಬ್ಬಿ ವೀರಣ್ಣನವರ ಮಾತಿಗೆ ಒಲ್ಲೆ ಎನ್ನಲಾಗದು, ಮೇಯಪ್ಪನ್ ಅವರ ಮಾತನ್ನು ತೆಗೆದುಹಾಕಲಾಗದು. ಈ ದ್ವಂದ್ವದಲ್ಲಿ ಅವರು ಪೇಚಾಡುತ್ತಿದ್ದರು. ಇಡೀ ಸಂದರ್ಭವನ್ನು ಗಮನಿಸಿದ ಬಿ. ಜಯಮ್ಮನವರು ತಾವಾಗಿಯೇ ಆ ಪಾತ್ರದಿಂದ ಹಿಂದೆ ಸರಿದರು. ಅಷ್ಟೇ ಅಲ್ಲ, ಪಂಡರಿಬಾಯಿ ಅವರನ್ನು 'ಗುಣಸಾಗರಿ' ಚಿತ್ರಕ್ಕೆ ಆಯ್ಕೆ ಮಾಡಿದರು. ಅವಕಾಶ ಸಿಕ್ಕ ಖುಷಿಯಲ್ಲಿ ಹಿಗ್ಗಿಹೋಗಿದ್ದ ಪಂಡರಿಬಾಯಿ, ಸಂಭಾವನೆಯ ಮಾತನ್ನೇ ಆಡಿರಲಿಲ್ಲ. ಚಿತ್ರೀಕರಣ ಮುಗಿದು, ತಾಂತ್ರಿಕ ಕೆಲಸಗಳೂ ಒಂದು ಹಂತಕ್ಕೆ ಬಂದಮೇಲೆ ಒಂದು ತಟ್ಟೆಯಲ್ಲಿ ಫಲ-ತಾಂಬೂಲವನ್ನು ಇಟ್ಟು ಜಯಮ್ಮನವರು ಪಂಡರಿಬಾಯಿ ಅವರಿಗೆ ಕೊಟ್ಟರು. ಆ ತಟ್ಟೆಯಲ್ಲಿ ಎರಡೂವರೆ ಸಾವಿರ ರೂಪಾಯಿ ಇತ್ತು. ಪಂಡರಿಬಾಯಿ ಅವರಿಗೆ ಆದ ಆನಂದ ಅಷ್ಟಿಷ್ಟಲ್ಲ. ಆ ಹಣದಿಂದಲೇ ತಮ್ಮ ಬದುಕಿನ ಮೊದಲ ಬಂಗಾರದ ಬಳೆಗಳನ್ನು ಮಾಡಿಸಿಕೊಂಡಿದ್ದು ಎಂದು ಪಂಡರಿಬಾಯಿ ಒಮ್ಮೆ ನೆನಪಿಸಿಕೊಂಡಿದ್ದರು. 'ಜಯಮ್ಮನವರಂಥ ಉದಾರ ಮನಸ್ಸಿನವರನ್ನು ತಾವು ಕಂಡೇ ಇಲ್ಲ' ಎಂದೂ ಶ್ಲಾಘಿಸಿದ್ದರು.
ಸಿನಿ ಸಿಪ್: ತಾರಾ ವಿವಾಹದ ಕಾಡುವ ಕಥನಗಳು ಸಿನಿ ಸಿಪ್: ಶಿವಾಜಿ ಒಲ್ಲದ 'ಕಸ್ತೂರಿ ನಿವಾಸ' ಗೆಲ್ಲಿಸಿದ ರಾಜ್ ಅಭಿನಯಕೆಲವು ನಿರ್ಮಾಪಕರು ಸಂಭಾವನೆಯ ವಿಷಯದಲ್ಲಿ ತಕರಾರು ಇರದಿರಲಿ ಎಂದು ಪ್ರತಿ ತಿಂಗಳು ವೇತನ ನಿಗದಿಪಡಿಸಿ, ಕಲಾವಿದರಿಂದ ಕೆಲಸ ತೆಗೆಸುವ ಪರಿಪಾಟ ಆರಂಭಿಸಿದರು. 'ಬೇಡರ ಕಣ್ಣಪ್ಪ' ಸಿನಿಮಾದಲ್ಲಿ ರಾಜ್ಕುಮಾರ್ ಅವರಿಗೆ ಹೀಗೆಯೇ ಸಂಭಾವನೆ ಸಂದದ್ದು. ಮುಂದೆ ರಾಜ್ಕುಮಾರ್ ಪತ್ನಿ ಪಾರ್ವತಮ್ಮನವರು ನಿರ್ಮಾಣ ಸಂಸ್ಥೆಯ ಚುಕ್ಕಾಣಿ ಹಿಡಿದಾಗ, ಎಲ್ಲರಿಗೂ ನಿಯಮಿತವಾಗಿ ಚಿತ್ರೀಕರಣದ ದಿನಗಳ ನಡುವೆಯೇ ಸಂಭಾವನೆ ಸಂದಾಯವಾಗುವುದನ್ನು ವ್ಯವಸ್ಥಿತವಾಗಿ ನೋಡಿಕೊಂಡರು.
ಚಿತ್ರರಂಗವನ್ನು ಕಟ್ಟುವ ಕಾಲದಲ್ಲಿ ಸಹಕಾರ, ಹೊಂದಾಣಿಕೆ ಇವೆಲ್ಲ ಅನಿವಾರ್ಯವಿತ್ತು. ಈಗ ಚಿತ್ರರಂಗ ವ್ಯಾಪಕವಾಗಿ ಬೆಳೆದಿದೆ. ಒಂದು ಕಾಲಕ್ಕೆ ನಾಯಕಿ ಪ್ರಣೀತವಾಗಿದ್ದ ಕ್ಷೇತ್ರವು ಈಗ ತಾರಾನಟರ ಕಾಲ್ಷೀಟ್ಸಿಗುವುದೇ ಮುಖ್ಯ ಎಂಬಂಥ ಸ್ಥಿತಿ ತಲುಪಿದೆ. ಸಂಭಾವನೆಯ ವಿಷಯದಲ್ಲಿ ದೊಡ್ಡ ಒಪ್ಪಂದಗಳೇ ಆಗುತ್ತಿವೆ. ಚಿತ್ರಕಥೆ ಅಂತಿಮಗೊಳಿಸಲು ತಂಗಿದ್ದ ಹೋಟೆಲ್ರೂಮ್ನ ಬಾಡಿಗೆ ಕೊಡದೆ ನಿರ್ಮಾಪಕರು ಸತಾಯಿಸಿದ್ದ ದಿನಗಳನ್ನು ನಟ ಜಗ್ಗೇಶ್ ಅವರಂಥವರೂ ಎಷ್ಟೋ ಬಾರಿ ನೆನಪಿಸಿಕೊಂಡಿದ್ದಾರೆ. ಸಂಭಾವನೆಯಲ್ಲಿ ಲಿಂಗ ತಾರತಮ್ಯ ಇರುವುದನ್ನು ಜಯಮಾಲಾ, ಐಂದ್ರಿತಾ ರೈ, ಶ್ರುತಿ ಹರಿಹರನ್ ಸೇರಿದಂತೆ ಅನೇಕ ನಟಿಯರು ಮುಕ್ತವಾಗಿ ಹೇಳಿಕೊಂಡಿದ್ದಾರೆ. 'ಪುಷ್ಪಾ 2' ತೆಲುಗು ಸಿನಿಮಾದ 'ಕಿಸಕ್' ಐಟಂ ಹಾಡಿಗೆ ಕನ್ನಡ ಮೂಲದವರೇ ಆದ ನಟಿ ಶ್ರೀಲೀಲಾ ಅವರಿಗೆ ಬರೋಬ್ಬರಿ ಎರಡು ಕೋಟಿ ರೂಪಾಯಿ ಸಂಭಾವನೆ ಸಂದಾಯವಾಯಿತು. ಇದೇ ಹಾಡಿಗೆ ಹಿಂದಿ ನಟಿ ಶ್ರದ್ಧಾ ಕಪೂರ್ ಐದು ಕೋಟಿ ರೂಪಾಯಿ ಕೇಳಿದ್ದರಿಂದ ಅವಕಾಶ ದಕ್ಷಿಣದ ನಟಿಯತ್ತ ತಿರುಗಿತ್ತು. ಆ ಮೊತ್ತಕ್ಕೆ ಹೋಲಿಸಿದರೆ ಪ್ರಜ್ವಲ್ ದೇವರಾಜ್ ಸಂಭಾವನೆ ಏನೇನೂ ಅಲ್ಲ ಎಂದು ಅನೇಕರು ಹೇಳಬಹುದು.
ಸಿನಿಮಾ ಪ್ರೇಕ್ಷಕರಾದ ನಿಮಗೂ ಪ್ರಜ್ವಲ್ ಸಂಭಾವನೆ ವಿವಾದದ ಕುರಿತು ಯಾವುದಾದರೂ ಸ್ಪಷ್ಟ ಅಭಿಪ್ರಾಯ ಇರಬಹುದು. ಅದನ್ನು ಪ್ರತಿಕ್ರಿಯೆಯ ರೂಪದಲ್ಲಿ ಬರೆದು ಕಳುಹಿಸಿ.
ಬರೆಹ ಮುಗಿಸುವ ಮುನ್ನ ಓದುಗಮಿತ್ರರಿಗೆ ಒಂದೆರಡು ಪ್ರಶ್ನೆಗಳು1. ಲೀಲಾವತಿ ಅವರು ಯಾವ ಚಿತ್ರಕ್ಕೆ ತಮಗೆ ಹೇಳಿದಷ್ಟು ಸಂಭಾವನೆ ಕೊಡಲಿಲ್ಲವೆಂದರು?
2. ಪಂಡರಿಬಾಯಿ ಅವರನ್ನು ತಾವು ನಟಿಸಬೇಕಿದ್ದ ಪಾತ್ರಕ್ಕೆ ಆಯ್ಕೆ ಮಾಡಿದ ಪ್ರಾಂಜಲ ಮನಸ್ಸಿನ ನಟಿ ಯಾರು?
ನಿಮ್ಮ ಉತ್ತರಗಳಿಗೆ ಪ್ರೀತಿಯಿಂದ ಕಾಯುತ್ತೇವೆ. ಚಿತ್ರರಂಗದ ಸಂಭಾವನೆ ಸಿಕ್ಕುಗಳಿಗೆ ಸಂಬಂಧಿಸಿದ ಮಾಹಿತಿ ನಿಮಗೂ ತಿಳಿದಿದ್ದರೆ ಅದನ್ನೂ ಹಂಚಿಕೊಳ್ಳಿ. ಆಯ್ದ ಪ್ರತಿಕ್ರಿಯೆಗಳುprajavani.netವೆಬ್ಸೈಟ್‌ನಲ್ಲಿ ಪ್ರಕಟಗೊಳ್ಳಲಿವೆ.

