Dailyhunt Logo
  • Light mode
    Follow system
    Dark mode
    • Play Story
    • App Story
ಸಿನಿ ಸಿಪ್‌: ತಾರಾ ವಿವಾಹದ ಕಾಡುವ ಕಥನಗಳು

ಸಿನಿ ಸಿಪ್‌: ತಾರಾ ವಿವಾಹದ ಕಾಡುವ ಕಥನಗಳು

ಳೆದ ವಾರ ನಾವು ಮೇಕಪ್‌ಗೆ ಸಂಬಂಧಿಸಿದಂತಹ ಕೆಲವು ಕುತೂಹಲಕಾರಿ ಘಟನೆಗಳನ್ನು ನೆನಪಿಸಿಕೊಂಡೆವು. ಅಮೀರ್ ಖಾನ್‌ಅವರೂ ಮೊನ್ನೆ ಮೇಕಪ್ ಹಾಕಿಸಿಕೊಂಡಿದ್ದರು. ಆದರೆ ಸಿನಿಮಾ ಅಭಿನಯಕ್ಕೆ ಅಲ್ಲ; ಮದುಮಗನಾಗಿ.

ಸಿನಿ ಸಿಪ್: ಲೀಲಾವತಿಯ ಜಿಡ್ಡು ಚರ್ಮ; ಜಗ್ಗೇಶ್ ವಿದೇಶದಿಂದ ತಂದ ಲೋಷನ್

ಜುಲೈ 5ರಂದು ಅಮೀರ್‌ಖಾನ್ ಮೂರನೇ ಮದುವೆಯಾದರು.

ಬೆಂಗಳೂರಿನ ವೆಲ್‌ನೆಸ್‌ಕೋಚ್ ಗೌರಿ ಸ್ಪ್ರಾಟ್‌ಅವರೊಟ್ಟಿಗೆ ನಡೆದ ವಿವಾಹಕ್ಕೆ ಅವರ ಮೊದಲ ಪತ್ನಿ ರೀನಾ ದತ್ತಾ, ಎರಡನೇ ಪತ್ನಿ ಕಿರಣ್ ರಾವ್ ಕೂಡ ಸಾಕ್ಷಿಯಾದರು. ಅರವತ್ತೊಂದನೇ ವಯಸ್ಸಿನಲ್ಲಿ ಮರು ಅಮೀರ್ ಖಾನ್ ಇಂತಹ ತೀರ್ಮಾನ ತೆಗೆದುಕೊಳ್ಳುವ ಮೊದಲು ಗೌರಿ ಅವರೊಟ್ಟಿಗೆ ಹಲವು ವರ್ಷಗಳ ಕಾಲ ಲಿವ್‌-ಇನ್‌ಸಂಬಂಧದಲ್ಲಿ ಅಮೀರ್-ಗೌರಿ ಇದ್ದರು. ಗೌರಿ ಅವರ ಮಗ ಹಾಗೂ ಅಮೀರ್ ಮಗ ಜುನೈದ್ ಕೂಡ ಮದುವೆ ಸಮಾರಂಭದಲ್ಲಿ ನಗುನಗುತ್ತಾ ಎಲ್ಲರೊಳಗೆ ಒಂದಾಗಿದ್ದರು.

ಈ ವಯಸ್ಸಿನಲ್ಲಿ ಅಮೀರ್ ಮೂರನೇ ಮದುವೆಯಾದದ್ದನ್ನೇ ನೆಪವಾಗಿಸಿಕೊಂಡು ಅನೇಕರು ತಮಾಷೆಯ ಮೀಮ್‌ಗಳನ್ನು ಹರಿಬಿಟ್ಟರು. ಸಿನಿಮಾರಂಗದಲ್ಲಿ ಮದುವೆ, ಮರು ಮದುವೆ ಹಾಗೂ ಗಂಡು-ಹೆಣ್ಣಿನ ಒಲವಿನ ಪ್ರಸಂಗಗಳು ಲಾಗಾಯ್ತಿನಿಂದಲೂ ಇವೆ.

ಮಕ್ಕಳ ಸಮ್ಮುಖದಲ್ಲೇ 3ನೇ ಮದುವೆಯಾದ ಅಮೀರ್: ನೆಟ್ಟಿಗರ ಗಮನ ಸೆಳೆದ ಗೌರಿ ಪುತ್ರನಟ ಅಮೀರ್ ಖಾನ್ ಮನಗೆದ್ದ ಬೆಂಗಳೂರಿನ ಗೌರಿ ಯಾರು? ಹಿನ್ನೆಲೆಯೇನು?

ಕನ್ನಡದ ಮೊದಲ ವಾಕ್ಚಿತ್ರ 'ಸತಿ ಸುಲೋಚನಾ' ಸಿನಿಮಾ ಚಿತ್ರೀಕರಣ ಡಿಸೆಂಬರ್‌ನ ಕೊರೆಯುವ ಚಳಿಯಲ್ಲಿ ಕೊಲ್ಹಾಪುರದಲ್ಲಿ ನಡೆಯಿತು. ವೈ.ವಿ. ರಾವ್ ನಿರ್ದೇಶನದ ಈ ಸಿನಿಮಾದಲ್ಲಿ ಆರ್. ನಾಗೇಂದ್ರ ರಾವ್ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದೇ ಅಲ್ಲದೆ ಹಾಡುಗಳಿಗೆ ಸ್ವರ ಸಂಯೋಜನೆಯನ್ನೂ ಮಾಡಿದರು. ಕನ್ನಡ ಚಿತ್ರರಂಗದ ಮೊದಲ ಸಂಗೀತ ನಿರ್ದೇಶಕ ಅವರೇ. ಅವರು ಮಟ್ಟು ಹಾಕಿದ 'ಭಲೇ ಭಲೇ ಪಾರ್ವತಿ ಚತುರೆ' ಎಂಬ ಹಾಡಿಗೆ ದನಿಯಾದವರು ಲಕ್ಷ್ಮೀಬಾಯಿ.

ಚಿತ್ರದ ನಾಯಕಿಯೂ ಅವರೇ. ಅವರ ತಂಗಿ ಕಮಲಾಬಾಯಿ ಅವರಿಗೂ 'ಸತಿ ಸುಲೋಚನಾ' ಚಿತ್ರದಲ್ಲಿ ಒಂದು ಪಾತ್ರ ಸಿಕ್ಕಿತ್ತು. ಕೊಲ್ಹಾಪುರಕ್ಕೆ ಹೋದ ನಂತರ ಅದು ರಾಕ್ಷಸಿಯ ಪಾತ್ರ ಎನ್ನುವುದು ಅವರಿಗೆ ಗೊತ್ತಾಯಿತು. ಸುಂದರ ವದನವಿದ್ದ ಅವರಿಗೆ ಆ ಪಾತ್ರ ಹಿಡಿಸಲಿಲ್ಲ. ಅದಕ್ಕೆ ಒಲ್ಲೆ ಎಂದರು. ಕೊಲ್ಹಾಪುರಕ್ಕೆ ರೈಲಿನಲ್ಲಿ ಪಯಣಿಸುವ ಹಾದಿಯಲ್ಲಿ ಒಂದು ಘಟನೆ ನಡೆಯಿತು. ಕಿಟಕಿಯ ಕಡೆಗೆ ಕಣ್ನೋಟ ನೆಟ್ಟಿದ್ದಾಗ ಕಲ್ಲಿದ್ದಲಿನ ಕಣ ತೂರಿಬಂತು. ಆ ಕಣವನ್ನು ಊದಿ ತೆಗೆದವರು ನಾಗೇಂದ್ರರಾಯರು. ಕಣ್ಣು ಉರಿಯದಿರಲಿ ಎಂದು ತಮ್ಮ ತಂಪು ಕನ್ನಡಕವನ್ನು ಕಮಲಾಬಾಯಿಯವರಿಗೆ ಕೊಟ್ಟರು. ಕನ್ನಡಕ ಎನ್ನುವುದು ಸಂಕೇತವಷ್ಟೆ; ಅವರು ಕೊಟ್ಟಿದ್ದು ತಮ್ಮ ಹೃದಯವನ್ನು. ಚಲಿಸುವ ರೈಲಿನಲ್ಲಿ ಅಂಕುರಿಸಿದ ಪ್ರೇಮ ಮುಂದೆ ಅವರಿಬ್ಬರ ಗಾಂಧರ್ವ ವಿವಾಹಕ್ಕೆ ಕಾರಣವಾಯಿತು.

ರಂಗಭೂಮಿಯ ವಿಸ್ತರಣೆಯಾಗಿ ಕನ್ನಡ ಚಿತ್ರರಂಗಕ್ಕೆ ಉಸಿರು ತುಂಬಿದವರು ಗುಬ್ಬಿ ವೀರಣ್ಣನವರು. ಮೂಕಿಚಿತ್ರ ತಯಾರಿಯ ಮೋಹಕ್ಕೆ ಅವರೂ ಒಳಗಾಗಿದ್ದರು. ತರೀಕೆರೆಯಲ್ಲಿ ನಾಟಕದ ತಂಡ ಕ್ಯಾಂಪ್ ಹಾಕಿದ್ದಾಗ ಮೂಕಿ ಚಿತ್ರ ತಯಾರಿಸಿದ್ದನ್ನು ಅವರ ಪತ್ನಿ ಬಿ. ಜಯಮ್ಮನವರು ತಾವೇ ಬರೆದ ಒಂದು ಲೇಖನದಲ್ಲಿ ನೆನಪಿಸಿಕೊಂಡಿದ್ದರು. ಗುಬ್ಬಿ ವೀರಣ್ಣ-ಜಯಮ್ಮನವರೇ ಕನ್ನಡದ ಮೊದಲ ತಾರಾ ದಂಪತಿ. ಅವರ ಪ್ರೇಮ ಪಲ್ಲವಿಸಿದ ಸಂದರ್ಭವೂ ಸಿನಿಮೀಯವಾಗಿದೆ.

ಸಿನಿ ಸಿಪ್: 'ಕಣ್ಣಪ್ಪ'ನ ಕಾರಣಕ್ಕೆ 'ರಾಜ್‌ಕುಮಾರ್' ಆದ ಮುತ್ತುರಾಜ್ಸಿನಿ ಸಿಪ್: ಸುದೀಪ್ 'ನೆಪೋಟಿಸಂ' ವರ್ತನೆಯ ನೆರಳಲ್ಲಿ ಕೆಲವು ಹಿತಕಥೆಗಳು...

ಶ್ರೀರಂಗಪಟ್ಟಣದಲ್ಲಿ ಮೂಕಿಚಿತ್ರವೊಂದರ ಚಿತ್ರೀಕರಣ ನಡೆಯುತ್ತಿತ್ತು. ಊಟದ ನಂತರ ವೀರಣ್ಣ ಹಾಗೂ ಜಯಮ್ಮನವರು ಕೈತೊಳೆದುಕೊಳ್ಳಲು ಕಾವೇರಿ ನದಿಗೆ ಇಳಿದರು, ಸೂರ್ಯಯ ಬೆಳಕು ಬಿದ್ದು, ಜಯಮ್ಮನವರ ಮುಖ ಫಳಫಳಿಸುತ್ತಿತ್ತು. ಇದನ್ನು ನೋಡಿದ್ದೇ ತಡ, 'ಜಯಾ, ನಾನು ನಿನ್ನನ್ನು ಪ್ರೀತಿಸುತ್ತೇನೆ. ಇಲ್ಲೇ.. ಈಗಲೇ ಮದುವೆಯಾಗೋಣವೇ?' ವೀರಣ್ಣನವರು ಪ್ರೇಮ ನಿವೇದನೆ ಮಾಡಿದರು.

'ಇಲ್ಲಿ, ನೀರಲ್ಲಿ ಮದುವೆಯೇ?' ಎಂದು ಜಯಮ್ಮನವರು ನಾಚಿಕೆ ಬೆರೆತ ದನಿಯಲ್ಲಿ ಪ್ರಶ್ನಿಸಿದರು. ತುಸುವೂ ಹಿಂಜರಿಕೆ ಇಲ್ಲದೆ ವೀರಣ್ಣನವರು ಜಯಮ್ಮನವರ ಕೈಗೆ ಮೂರು ಬೊಗಸೆ ನೀರು ಹಾಕಿದರು. 'ಜಲಸಾಕ್ಷಿಯಾಗಿ, ಈ ಕಾವೇರಿ ನದಿಯ ಸಾಕ್ಷಿಯಾಗಿ ನಾನು ನಿನ್ನನ್ನು ಮದುವೆಯಾಗುತ್ತಿದ್ದೇನೆ' ಎಂದು ವೀರಣ್ಣ ಘೋಷಿಸಿದರು. ಅಗ್ನಿಸಾಕ್ಷಿಯಾಗಿ ಮದುವೆಯಾಗುವುದು ಸಹಜ. ಜಲಸಾಕ್ಷಿಯಾಗಿ ನಡೆದ ಈ ಮದುವೆ ವಿರಳಾತಿ ವಿರಳ.

ನಟ ಲೋಕೇಶ್ ಅವರು ಗಿರಿಜಾ ಅವರನ್ನು ಮದುವೆಯಾದಾಗ ಆಗಿದ್ದ ಖರ್ಚು ಕೇವಲ ₹3000. 'ಭೂತಯ್ಯನ ಮಗ ಅಯ್ಯು' ಸಿನಿಮಾದ ಚಿತ್ರೀಕರಣ ಪೂರ್ಣಗೊಂಡ ಮರುದಿನವೇ ವಿವಾಹ. ರವಿಚಂದ್ರನ್ ತಂದೆ ವೀರಾಸ್ವಾಮಿಯವರಲ್ಲಿ ಲೋಕೇಶ್ ಆಗ ಹಣಕಾಸಿನ ನೆರವು ಪಡೆದುಕೊಂಡಿದ್ದರು. ಸಾಲ ಮಾಡಿ ಮದುವೆಯಾಗಿದ್ದ ಲೋಕೇಶ್, ಆನಂತರ ತಮ್ಮ ಕಾಲ ಮೇಲೆ ತಾವೇ ನಿಂತದ್ದು ಇತಿಹಾಸ. ಗಿರಿಜಾ ಅವರು ಈಗಲೂ ಅಭಿನಯದಲ್ಲಿ ತೊಡಗಿಕೊಂಡಿದ್ದಾರೆ.

ಸಿನಿ ಸಿಪ್: ಶಿವಾಜಿ ಒಲ್ಲದ 'ಕಸ್ತೂರಿ ನಿವಾಸ' ಗೆಲ್ಲಿಸಿದ ರಾಜ್ ಅಭಿನಯಸಿನಿ ಸಿಪ್: ನಟಿ ರಮ್ಯಾ ಆಡಿದ್ದ ಜಸ್ಟ್ ಒಂದು ಕೆಟ್ಟ ಮಾತು...

'ಮನೆ ಬೆಳಗಿದ ಸೊಸೆ' ಸಿನಿಮಾ ಚಿತ್ರೀಕರಣದ ವೇಳೆ ಪರಸ್ಪರ ಹತ್ತಿರವಾದ ವಿಷ್ಣುವರ್ಧನ್-ಭಾರತಿ 1975ರಲ್ಲಿ ಮದುವೆಯಾದರು. 1960ರ ದಶಕದಿಂದಲೇ ನಟಿಯಾಗಿ ಛಾಪು ಮೂಡಿಸಿದ್ದ ಭಾರತಿಯವರು ದೊಡ್ಡ ತಾರೆಯಾಗಿ ಬೆಳೆದಿದ್ದ ಸಂದರ್ಭದಲ್ಲಿ ವಿಷ್ಣುವರ್ಧನ್ ಚಿತ್ರರಂಗ ಪ್ರವೇಶಿಸಿದ್ದು. ಒಂದೇ ವಯಸ್ಸಿನ ಇಬ್ಬರೂ ಯಶಸ್ವಿಯಾಗಿ ಸಂಸಾರ ನಡೆಸಿದರು. ಅವರ ಅದ್ದೂರಿ ಮದುವೆ ಆ ಕಾಲದಲ್ಲಿ ಅನೇಕರ ಗಮನಸೆಳೆದಿತ್ತು.

1980ರ ದಶಕದಲ್ಲಿ 'ಆಹುತಿ', 'ನ್ಯೂಡೆಲ್ಲಿ' ಸಿನಿಮಾಗಳಲ್ಲಿ ಒಟ್ಟಾಗಿ ನಟಿಸುವ ಹಂತದಲ್ಲಿ ಮೂಡಿದ ಪ್ರೇಮ ನಿಧಾನವಾಗಿ ಹರಳುಗಟ್ಟಿತು. ಅಂಬರೀಷ್-ಸುಮಲತಾ ನಡುವಿನ ಈ ಒಲವಿನ ಪಯಣವು ಮದುವೆಯಲ್ಲಿ ಅಂತ್ಯ ಕಂಡಿತು. ವಿಷ್ಣುವರ್ಧನ್ ಅವರಿಗಿಂತ ಎರಡು ವರ್ಷವಷ್ಟೇ ಚಿಕ್ಕವರಾದ ಅಂಬರೀಷ್ ಮದುವೆಯಾದ್ದು 1991ರಲ್ಲಿ; ವಿಷ್ಣುವರ್ಧನ್-ಭಾರತಿ ಮದುವೆಯಾದ ಹದಿನಾರು ವರ್ಷಗಳ ನಂತರ.

ಎಂಟು ವರ್ಷ ಡೇಟಿಂಗ್ ಮಾಡಿದ ಜೈಜಗದೀಶ್, ವಿಜಯಲಕ್ಷ್ಮೀ ಇಬ್ಬರೂ ದೇವಸ್ಥಾನದಲ್ಲಿ ಮದುವೆಯಾಗಬೇಕೆಂದು ತೀರ್ಮಾನಿಸಿದ್ದರು. ಆದರೆ, ಅವರ ಸ್ನೇಹಿತರೆಲ್ಲ ಸೇರಿ ಮೈಸೂರಿನ ಐಷಾರಾಮಿ ಹೋಟೆಲ್‌ನಲ್ಲಿ ಮದುವೆಗೆ ಏರ್ಪಾಟು ಮಾಡಿದರು. ಅಲ್ಲಿಗೆ ಬರುವವರೆಗೆ ಜೈಜಗದೀಶ್ ಅವರಿಗೆ ತಮ್ಮದೇ ಮದುವೆ ನಡೆಯಲಿದೆ ಎಂಬ ವಿಷಯವೇ ಗೊತ್ತಿರಲಿಲ್ಲ.

ಬಾಂಬೆಯಲ್ಲಿ ರಂಗಭೂಮಿಯಲ್ಲಿ ತೊಡಗಿದ್ದ ಕಾಲದಿಂದಲೇ ಶಂಕರ್‌ನಾಗ್ ಹಾಗೂ ಅರುಂಧತಿ ನಡುವೆ ಸ್ನೇಹವಿತ್ತು. ಸ್ನೇಹವು ಪ್ರೇಮವಾಯಿತು. ಆರು ವರ್ಷ ಇಬ್ಬರೂ ಪ್ರೀತಿಸಿದರು. ಮನೆಯವರನ್ನು ಒಪ್ಪಿಸಿ, 1980ರಲ್ಲಿ ಮದುವೆಯಾದರು. ಬೆಂಗಳೂರಿಗೆ ಬಂದು, ಇಬ್ಬರೂ ಚಿತ್ರನಟನೆಯಲ್ಲಿ ತೊಡಗಿಕೊಂಡರು. 'ನೋಡಿ ಸ್ವಾಮಿ ನಾವಿರೋದು ಹೀಗೆ', 'ಆಕ್ಸಿಡೆಂಟ್' ಸಿನಿಮಾಗಳಲ್ಲಿ ಇಬ್ಬರೂ ಅಭಿನಯಿಸಿದರು. 'ಸಂಕೇತ್' ರಂಗತಂಡ ಕಟ್ಟಿದಾಗ ಇಬ್ಬರೂ ಒಟ್ಟಾಗಿ ಹೆಜ್ಜೆ ಇಟ್ಟಿದ್ದರು. ಈಗ 'ರಂಗಶಂಕರ'ದ ಮೂಲಕ ಅರುಂಧತಿ ಸತತವಾಗಿ ರಂಗ ಚಟುವಟಿಕೆಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

ಶಂಕರ್‌ನಾಗ್ ಅಣ್ಣನಾದ ಅನಂತನಾಗ್ ಮದುವೆಯಾದದ್ದು ತಡವಾಗಿ. 'ಆಟೊ ರಾಜ' ಚಿತ್ರದಲ್ಲಿ ಶಂಕರ್‌ನಾಗ್‌ಗೆ ಜೋಡಿಯಾಗಿ ಗಾಯಿತ್ರಿ ಇದ್ದರು. ವಾಸ್ತವದಲ್ಲಿ ಅದೇ ಸಂದರ್ಭದಲ್ಲಿ ಈ ನಟಿಯನ್ನು ಅನಂತನಾಗ್ ಇಷ್ಟಪಡಲು ಆರಂಭಿಸಿದ್ದರು. ಇಬ್ಬರೂ ಮದುವೆಯಾದದ್ದು 1987ರಲ್ಲಿ. ಪ್ರೀತಿ ಹುಟ್ಟಿದ ಮೇಲೆ ಗಾಯಿತ್ರಿ ಅಭಿನಯದಿಂದ ಕ್ರಮೇಣ ವಿಮುಖರಾಗಿ, ಅನಂತನಾಗ್ ವೃತ್ತಿಬದುಕನ್ನು ಪೊರೆಯಲಾರಂಭಿಸಿದರು.

ಖಳನ ಪಾತ್ರಗಳಿಂದ ದಕ್ಷಿಣ ಭಾರತದಲ್ಲೇ ಹೆಸರು ಮಾಡಿದ ನಟ ಟೈಗರ್ ಪ್ರಭಾಕರ್ ಆಲ್ಫಾನ್ಸೊ ಮೇರಿ ಅವರನ್ನು ಮದುವೆಯಾದರು. ಇಬ್ಬರಿಗೂ ಮೂರು ಮಕ್ಕಳು-ಭಾರತಿ, ಗೀತಾ ಹೆಣ್ಣುಮಕ್ಕಳು, ವಿನೋದ್ ಪುತ್ರ. ಈಗ ವಿನೋದ್‌ಪ್ರಭಾಕರ್ ನಾಯಕನಟನಾಗಿ ಅಭಿನಯಿಸುತ್ತಾ ಇದ್ದಾರೆ. ಜಯಮಾಲಾ ಅವರನ್ನು ಪ್ರಭಾಕರ್ ಎರಡನೇ ಮದುವೆಯಾದರು. ಅವರಿಗೆ ಹುಟ್ಟಿದ ಮಗಳೇ ಸೌಂದರ್ಯಾ. ಚಿತ್ರನಟನೆಯಲ್ಲಿ ತೊಡಗಿಕೊಂಡರೂ ಅವರು ಈ ಕ್ಷೇತ್ರದಲ್ಲಿ ದೀರ್ಘಾವಧಿ ಉಳಿಯಲಿಲ್ಲ. ಪ್ರಭಾಕರ್ ಮೂರನೇ ಮದುವೆ ನಡೆದದ್ದು ನಟಿ ಅಂಜು ಅವರೊಟ್ಟಿಗೆ. ಅವರಿಗೂ ಒಬ್ಬ ಮಗನಿದ್ದಾನೆ.

ನಟ ಅಂಬರೀಶ್ ಕರ್ಣ ಆದದ್ದು... ಸಿನಿ ಸಿಪ್ ಪಾಡ್‌ಕಾಸ್ಟ್‌ನಲ್ಲಿ ಕೇಳಿಸಿನಿ ಸಿಪ್: ಅಣ್ಣಾವ್ರನ್ನ ಕಳೆದುಕೊಂಡ ದಿನದ ವಿದ್ಯಮಾನ; ನಿಜಕ್ಕೂ ಆಗಿದ್ದೇನು?

ಅಮೀರ್‌ಖಾನ್ ಅವರಿಗೂ ಮೊದಲೇ ಮರು ಮದುವೆಗಳನ್ನು ಆದವರ ಸಾಲೇ ಚಿತ್ರರಂಗದಲ್ಲಿ ಇದೆ. ಹಿಂದಿ ಚಿತ್ರರಂಗದ ನಟ-ಹಾಡುಗಾರ ಕಿಶೋರ್‌ಕುಮಾರ್ ನಾಲ್ಕು ಮದುವೆಗಳನ್ನು ಆಗಿದ್ದರು. ರುಮಾ ಗುಹಾ, ನಟಿ ಮಧುಬಾಲಾ, ಯೋಗಿತಾ ಬಾಲಿ ಹಾಗೂ ಲೀನಾ ಚಂದಾವರ್ಕರ್ ಅವರ ಪತ್ನಿಯರು. ಪ್ರತಿಮಾ ಬೇಡಿ, ಸೂಸನ್ ಹಂಫ್ರೇಸ್, ನಿಕ್ಕಿ ಬೇಡಿ ಹಾಗೂ ಪರ್ವೀನ್ ದುಸಾಂಜ್ ಅವರೊಟ್ಟಿಗೆ ಸಂಸಾರ ನಡೆಸಿದವರು ನಟ ಕಬೀರ್ ಬೇಡಿ. ತಮ್ಮ ಅಸಂಖ್ಯ ಪ್ರೇಮಚೇಷ್ಟೆಗಳನ್ನು ನಿರ್ಭಿಡೆಯಿಂದ ಹೇಳಿಕೊಳ್ಳುವ ನಟ ಸಂಜಯ್ ದತ್ ಮೂರು ಬಾರಿ ಮದುವೆಯಾದರು. ರಿಚಾ ಶರ್ಮಾ, ರಿಯಾ ಪಿಳ್ಳೈ, ಮಾನ್ಯತಾ ದತ್ ಅವರ ಪತ್ನಿಯರು.

ಕಮಲ ಹಾಸನ್ ಮೊದಲ ಪತ್ನಿ, ನೃತ್ಯಗಾರ್ತಿ ವಾಣಿ ಗಣಪತಿ. ಅವರಿಗೆ ಮಕ್ಕಳಿಲ್ಲ. ಆನಂತರ ಕಮಲ ಹಾಸನ್ ನಟಿ ಸಾರಿಕಾ ಅವರನ್ನು ಮದುವೆಯಾದರು. ಅವರಿಗೆ ಹುಟ್ಟಿದವರೇ ಶ್ರುತಿ, ಅಕ್ಷರಾ ಹಾಸನ್. ಇಬ್ಬರೂ ಅಭಿನಯಲೋಕದಲ್ಲಿ ತಮ್ಮತನ ತೋರಿದವರು. ನಟಿ ಗೌತಮಿ ಅನಾರೋಗ್ಯಕ್ಕೆ ತುತ್ತಾದಾಗ ಅವರನ್ನು ಅಕ್ಕರಾಸ್ಥೆಯಿಂದ ಕಮಲ ಹಾಸನ್ ನೋಡಿಕೊಂಡರು. ಅವರಿಬ್ಬರ ಒಲವಿನ ಬದುಕಿಗೆ ಬೇರೆಯದೇ ಚೌಕಟ್ಟಿದೆ.

ಅಭಿನಯದಲ್ಲಿ ಒಂದು, ರಾಜಕೀಯದಲ್ಲಿ ಇನ್ನೊಂದು ಕಾಲಿಟ್ಟಿರುವ ತೆಲುಗಿನ ಪವನ್ ಕಲ್ಯಾಣ್ ಅವರೂ ಮೂರು ಮದುವೆಯಾಗಿದ್ದಾರೆ. ನಂದಿನಿ, ನಟಿ ರೇಣು ದಸೆರಿ ಹಾಗೂ ಅನ್ನಾ ಲೆಸ್ದೆವಾ ಅವರ ಪತ್ನಿಯರು. ನಟಿ ಸಮಂತಾ ರುತ್‌ಪ್ರಭು ಹಾಗೂ ನಾಗ ಚೈತನ್ಯ ಇಷ್ಟಪಟ್ಟು ಮದುವೆಯಾದರು. ಆದರೆ, ಐದು ವರ್ಷಗಳ ನಂತರ ವಿಚ್ಛೇದನ ಪಡೆದುಕೊಂಡರು. ಸಮಂತಾ ಚಿತ್ರನಟನೆಯಲ್ಲಿ ಎಂದಿನಂತೆ ತೊಡಗಿದ್ದರೆ, ನಾಗ ಚೈತನ್ಯ ಅವರು ಇನ್ನೊಬ್ಬ ನಟಿ ಶೋಭಿತಾ ಧುಲಿಪಿಯಾ ಅವರನ್ನು ಮದುವೆಯಾದರು. ಸಮಂತಾ ಕೂಡ ನಿರ್ದೇಶಕ ರಾಜ್ ನಿಡಿಮೋರು ಅವರನ್ನು ಮರು ಮದುವೆಯಾಗಿದ್ದಾರೆ.

ನಟ ಧರ್ಮೇಂದ್ರ ಅವರಿಗೆ ಇಬ್ಬರು ಪತ್ನಿಯರು-ಪ್ರಕಾಶ್ ಕೌರ್, ಹೇಮಾ ಮಾಲಿನಿ. ಲವಲವಿಕೆಯ ಕಂಠದಿಂದ ಕಾಡುವ ಹಾಡುಗಳನ್ನು ಕೊಟ್ಟ ಗಾಯಕಿ ಆಶಾ ಭೋಂಸ್ಲೆ ಹದಿನಾರನೇ ವಯಸ್ಸಿನಲ್ಲೇ ತಮಗಿಂತ ದುಪ್ಪಟ್ಟು ವಯಸ್ಸಿನ ಗಣಪತ್ ರಾವ್ ಅವರೊಡನೆ ಓಡಿಹೋಗಿ, ಮದುವೆಯಾಗಿದ್ದರು. 1980ರಲ್ಲಿ ಅವರು ಸಂಗೀತ ನಿರ್ದೇಶಕ ಆರ್‌.ಡಿ. ಬರ್ಮನ್ ಅವರನ್ನು ಮದುವೆಯಾದರು. ದೆಹಲಿಯ ಯುವಕನೊಬ್ಬನನ್ನು ಮದುವೆಯಾಗಿದ್ದ ನಟಿ ನೀನಾ ಗುಪ್ತಾ, ಆ ಮದುವೆ ಮುರಿದುಬಿದ್ದ ಮೇಲೆ ವಿವೇಕ್ ಮೆಹ್ರಾ ಎಂಬ ಚಾರ್ಟರ್ಡ್ ಅಕೌಂಟೆಂಟ್‌ಒಬ್ಬರನ್ನು ವಿವಾಹವಾದರು. 1980ರ ದಶಕದಲ್ಲೇ ವೆಸ್ಟ್‌ಇಂಡೀಸ್‌ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಒಟ್ಟಿಗೆ ಮುಕ್ತವಾಗಿ ಪ್ರೇಮ ಸಲ್ಲಾಪದಲ್ಲಿಯೂ ಅವರು ತೊಡಗಿದ್ದರು. ನಟರಾದ ಪಂಕಜ್ ಕಪೂರ್, ರಾಜೇಶ್ ಖಟ್ಟರ್ ಅವರನ್ನು ವಿವಾಹವಾಗಿದ್ದ ನಟಿ-ನೃತ್ಯಗಾರ್ತಿನೀಲಿಮಾ ಅಜೀಮ್ ಈಗ ರಜಾ ಅಲಿ ಖಾನ್ ಅವರೊಟ್ಟಿಗೆ ಬಾಳ್ವೆ ನಡೆಸುತ್ತಿದ್ದಾರೆ.

ಪತಿ ಯಶ್ ಜೊತೆಗಿನ ವಿಶೇಷ ಪೋಸ್ಟ್ ಹಂಚಿಕೊಂಡ ನಟಿ ರಾಧಿಕಾ ಪಂಡಿತ್ನನ್ನನ್ನೇ ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದ ಯಶ್: ರಾಧಿಕಾ ಪಂಡಿತ್ ವಿಶೇಷ ಪೋಸ್ಟ್

ಕನ್ನಡ ಚಿತ್ರರಂಗದಲ್ಲೂ ಒಂದೇ ದೋಣಿಯ ಪಯಣಿಗರು ವಿವಾಹ ಬಂಧನಕ್ಕೆ ಒಳಗಾದುದಕ್ಕೆ ಹಲವು ಉದಾಹರಣೆಗಳಿವೆ. ರಕ್ಷಿತಾ-ಪ್ರೇಮ್, ಯಶ್-ರಾಧಿಕಾ ಪಂಡಿತ್, ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್, ತರುಣ್ ಸುಧೀರ್-ಸೋನಲ್ ಮೊಂತೆರೊ ಈ ಜೋಡಿಗಳು ನಮ್ಮೆದುರಲ್ಲಿವೆ. ಕನ್ನಡದವರೇ ಆದ ರಶ್ಮಿಕಾ ಮಂದಣ್ಣ ದೀರ್ಘಾವಧಿ ಪ್ರೇಮದ ನಂತರ ನಟ ವಿಜಯ್‌ದೇವರಕೊಂಡ ಅವರೊಟ್ಟಿಗೆ ಅದ್ದೂರಿ ವಿವಾಹವಾದರು. ರಣವೀರ್ ಸಿಂಗ್-ದೀಪಿಕಾ ಪಡುಕೋಣೆ, ರಣಬೀರ್ ಕಪೂರ್-ಆಲಿಯಾ ಭಟ್, ವಿಕ್ಕಿ ಕೌಶಲ್-ಕತ್ರಿನಾ ಕೈಫ್ ಈ ಹೊತ್ತಿನ ತಾರಾಜೋಡಿಗಳು. ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಬಹುಕಾಲದ ಒಲವಿನ ಹುಡುಗಿಯಾಗಿದ್ದ ನಟಿ ಅನುಷ್ಕಾ ಶರ್ಮಾ ಅವರ ಬಾಳಸಂಗಾತಿಯಾಗಿಯೂ ಜನಪ್ರಿಯರು. ಮಲಯಾಳದ ನಟ-ನಟಿ ಫಹಾದ್ ಫಾಸಿಲ್, ನಜ್ರಿಯಾ ನಜೀಮ್ ನಿಜ ಬದುಕಿನಲ್ಲಿ ಪತಿ-ಪತ್ನಿ.

ಸಿನಿಮಾಲೋಕದ ಥಳುಕು-ಬಳುಕಿನ ಈ ಕಥನಗಳನ್ನು ನೋಡಿದ ಮೇಲೆ ಹೆಚ್ಚು ಕಾಡುವ ಪ್ರೇಮ ಪ್ರಸಂಗವೊಂದು ಹಿಂದಿ ಚಿತ್ರರಂಗದಲ್ಲಿ ಅಚ್ಚೊತ್ತಿದೆ. ಅದು, ನಿರ್ದೇಶಕ-ಸ್ವರ ಸಂಯೋಜಕ ವಿಶಾಲ್ ಭಾರದ್ವಾಜ್ ಅವರ ಅವ್ಯಾಜ ಪ್ರೇಮಕಥನ. ಕಾಲೇಜು ದಿನಗಳಲ್ಲೇ ಅವರು ರೇಖಾ ಅವರನ್ನು ಇಷ್ಟಪಟ್ಟರು. ವಿಶಾಲ್‌ಗೆ ಸಿನಿಮಾ ಕನಸು. ರೇಖಾಗೆ ಗಾಯಕಿಯಾಗುವ ಹೆಬ್ಬಯಕೆ. ಮದುವೆಯಾದ ಮೇಲೆ ವಿಶಾಲ್ ವೃತ್ತಿಬದುಕು ಬೇಗ ಟೇಕಾಫ್ ಆಯಿತು. ಆದರೆ, ರೇಖಾ ಕನಸು ಅಂದುಕೊಂಡಂತೆ ನನಸಾಗಲಿಲ್ಲ. ಅವರು ಖಿನ್ನರಾದರು. ಸೀದಾ ಹೋಗಿ ಓಶೋ ಆಶ್ರಮ ಸೇರಿದರು.

ವಿಶಾಲ್ ಅದರಿಂದ ಧ್ರುತಿಗೆಟ್ಟು, ತಮ್ಮಷ್ಟಕ್ಕೇ ತಾವು ನಡೆದುಹೋಗಲಿಲ್ಲ. ತಾಳ್ಮೆಯಿಂದ ಒಲವಿಗಗಾಗಿ ಕಾದರು. ಇದಿರುನೋಡಿದರು. ಖುದ್ದು ಅವರೇ ಓಶೋ ಆಶ್ರಮಕ್ಕೆ ಹೋಗಿ, ರೇಖಾ ಅವರೊಟ್ಟಿಗೆ ಮನಬಿಚ್ಚಿ ಮಾತನಾಡಿದರು. ಪತಿಯ ಅವ್ಯಾಜ ಪ್ರೇಮ ಎಂಥದೆನ್ನುವುದು ರೇಖಾ ಅವರಿಗೆ ಅರಿವಾಯಿತು. 'ಓಂಕಾರ' ಸಿನಿಮಾ ಮಾಡಿದಾಗ 'ನಮಕ್ ಇಷ್ಕ್‌ಕಾ' ಎಂಬ ಹಾಡನ್ನು ವಿಶಾಲ್ ತಮ್ಮ ಪತ್ನಿಯಿಂದ ಹಾಡಿಸಿದರು. ಸಿನಿಮಾ, ಹಾಡು ಎರಡೂ ಸೂಪರ್‌ಹಿಟ್‌. ಈಗ ಅವರ ಬದುಕೂ ಸೂಪರ್‌ಹಿಟ್.

PHOTOS | ಮಗಳು 'ಪರಿ'ಯೊಂದಿಗೆ ಮಿಲನಾ - ಕೃಷ್ಣಸಪ್ತಪದಿ ತುಳಿದ ನಟಿ ದೀಪಿಕಾ ಮತ್ತು ರಣವೀರ್ ಸಿಂಗ್‌ಸ್ವಿಮಿಂಗ್‌ ಪೂಲ್‌ನಲ್ಲಿ ಈಜಾಟ: ಹೊಸ ಫೋಟೊ ಹಂಚಿಕೊಂಡ ಕತ್ರಿನಾ -ವಿಕ್ಕಿ ದಂಪತಿವಿರಾಟ್ ಕೊಹ್ಲಿ ಜನ್ಮದಿನ: ಪತಿಯನ್ನು 'ಅದ್ಭುತ ವ್ಯಕ್ತಿ' ಎಂದು ಕೊಂಡಾಡಿದ ಅನುಷ್ಕಾ
Dailyhunt
Disclaimer: This content has not been generated, created or edited by Dailyhunt. Publisher: Prajavani