Dailyhunt Logo
  • Light mode
    Follow system
    Dark mode
    • Play Story
    • App Story
ಫಲಿಸದ ಒತ್ತಡ, ಉಳಿಯದ ಒಪ್ಪಂದ...ಇರಾನ್ ಎದುರು ಟ್ರಂಪ್ ಮುಂದಿನ ನಡೆ ಏನು?

ಫಲಿಸದ ಒತ್ತಡ, ಉಳಿಯದ ಒಪ್ಪಂದ...ಇರಾನ್ ಎದುರು ಟ್ರಂಪ್ ಮುಂದಿನ ನಡೆ ಏನು?

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಫಲಿಸದ ಒತ್ತಡ, ಉಳಿಯದ ಒಪ್ಪಂದ...ಇರಾನ್ ಎದುರು ಟ್ರಂಪ್ ಮುಂದಿನ ನಡೆ ಏನು?

ಒಂದು ಸಾಲಿನಲ್ಲಿಅಮೆರಿಕ ಮತ್ತು ಇರಾನ್ ನಡುವಿನ ತಿಳಿವಳಿಕಾ ಒಪ್ಪಂದ ವೈಫಲ್ಯದಿಂದ, ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಗಿದ್ದು, ಆರ್ಥಿಕ ನಿರ್ಬಂಧ ಮತ್ತು ಸೇನಾ ಕ್ರಮಗಳತ್ತ ಟ್ರಂಪ್ ಆಡಳಿತ ಮತ್ತೆ ವಾಲಿದೆ.

ಪ್ರಮುಖ ಪ್ರಶ್ನೋತ್ತರ


ಅಮೆರಿಕ ಮತ್ತು ಇರಾನ್ ನಡುವಿನ ಒಪ್ಪಂದಕ್ಕೆ ಉಂಟಾದ ತೊಡಕುಗಳೇನು?

ಹೊರ್ಮುಜ್ ಜಲಸಂಧಿಯಲ್ಲಿನ ಹಡಗುಗಳ ಸುರಕ್ಷಿತ ಸಂಚಾರದ ಬಗ್ಗೆ ಉಭಯ ದೇಶಗಳ ವ್ಯಾಖ್ಯಾನ ಮತ್ತು ನಿಲುವುಗಳಲ್ಲಿನ ಭಿನ್ನಾಭಿಪ್ರಾಯದಿಂದಾಗಿ ಈ ತಿಳಿವಳಿಕಾ ಒಪ್ಪಂದ ವಿಫಲವಾಯಿತು.


ಹೊರ್ಮುಜ್ ಜಲಸಂಧಿ ಏಕೆ ಜಾಗತಿಕವಾಗಿ ಪ್ರಮುಖವಾಗಿದೆ?

ಇದು ಪರ್ಷಿಯನ್ ಕೊಲ್ಲಿಯನ್ನು ಅರಬ್ಬಿ ಸಮುದ್ರಕ್ಕೆ ಸಂಪರ್ಕಿಸುವ ನಿರ್ಣಾಯಕ ಮಾರ್ಗವಾಗಿದ್ದು, ಜಾಗತಿಕ ತೈಲ ಪೂರೈಕೆ ಮತ್ತು ತೈಲ ಬೆಲೆಗಳ ಮೇಲೆ ಇಲ್ಲಿನ ಸ್ಥಿರತೆ ನೇರ ಪರಿಣಾಮ ಬೀರುತ್ತದೆ.


ಅಮೆರಿಕದ 'ಗರಿಷ್ಠ ಒತ್ತಡ' ನೀತಿ ಎಂದರೇನು ಮತ್ತು ಅದು ಎಷ್ಟರ ಮಟ್ಟಿಗೆ ಪರಿಣಾಮಕಾರಿ?

ಆರ್ಥಿಕ ನಿರ್ಬಂಧಗಳು ಮತ್ತು ಸೇನಾ ಕ್ರಮಗಳ ಮೂಲಕ ಇರಾನ್ ಅನ್ನು ಅಣು ಕಾರ್ಯಕ್ರಮದಿಂದ ಹಿಂದೆ ಸರಿಯುವಂತೆ ಮಾಡುವುದು ಈ ನೀತಿಯ ಗುರಿಯಾಗಿದೆ, ಆದರೆ ಇದು ದೀರ್ಘಕಾಲೀನ ಪರಿಹಾರ ನೀಡುವಲ್ಲಿ ವಿಫಲವಾಗಿದೆ.


ಇರಾನ್‌ನ ಆಂತರಿಕ ರಾಜಕೀಯ ಬಿಕ್ಕಟ್ಟಿನ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ?

ದೇಶದ ನಾಯಕತ್ವದಲ್ಲಿನ ಹೊಸ ಬದಲಾವಣೆಗಳು ಮತ್ತು ರಾಜಕೀಯ ಸಮೀಕರಣಗಳಿಂದಾಗಿ, ವಿದೇಶಾಂಗ ಒಪ್ಪಂದಗಳನ್ನು ದೇಶದೊಳಗೇ ಸಮರ್ಥಿಸಿಕೊಳ್ಳುವುದು ಇರಾನ್ ಸರ್ಕಾರಕ್ಕೆ ಕಠಿಣವಾಗಿದೆ.


ನಂತರದ ರಾಜತಾಂತ್ರಿಕ ಮಾತುಕತೆಗಳ ಭವಿಷ್ಯವೇನು?

ಸೇನಾ ಕಾರ್ಯಾಚರಣೆಗಳು ಮತ್ತು ಆರ್ಥಿಕ ನಿರ್ಬಂಧಗಳು ಪುನರಾರಂಭಗೊಂಡಿರುವುದರಿಂದ, ಸಮಗ್ರ ರಾಜಕೀಯ ಮಾತುಕತೆಗಳ ಭವಿಷ್ಯ ಅನಿಶ್ಚಿತವಾಗಿದ್ದು ಬಿಕ್ಕಟ್ಟು ಮುಂದುವರಿಯುವ ಲಕ್ಷಣಗಳಿವೆ.

ಪ್ರಮುಖ ಅಂಕಿಅಂಶಗಳು

60 ದಿನಗಳುಒಪ್ಪಂದದ ನಂತರದ ಮಾತುಕತೆಗಳ ನಿಗದಿತ ಅವಧಿ

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಒಂದು ಯಶಸ್ವಿ ರಾಜತಾಂತ್ರಿಕ ಪ್ರಯತ್ನ ಸಫಲತೆ ಅಳೆಯಲು ಕೆಲವೊಮ್ಮೆ ವರ್ಷಗಳು ಬೇಕಾಗುತ್ತವೆ. ಆದರೆ ಕೆಲವೊಮ್ಮೆ ಅದರ ಯಶಸ್ಸು ಅಥವಾ ವೈಫಲ್ಯ ಕೆಲವೇ ವಾರಗಳಲ್ಲಿ ಗೊತ್ತಾಗಿಬಿಡುತ್ತದೆ. ಅಮೆರಿಕ ಮತ್ತು ಇರಾನ್ ನಡುವೆ ಜೂನ್‌ನಲ್ಲಿ ರೂಪುಗೊಂಡಿದ್ದ ತಿಳಿವಳಿಕಾ ಒಪ್ಪಂದದ (ಎಂಒಯು) ಸ್ಥಿತಿ ಈಗ ಅದೇ ಹಂತದಲ್ಲಿದೆ.

ಅಮೆರಿಕದೊಂದಿಗಿನ ಕದನ ವಿರಾಮದ ವಿಷಯದಲ್ಲಿ ನಾವು ಮಾತು ಉಳಿಸಿಕೊಂಡಿದ್ದೇವೆ: ಇರಾನ್

ಹೊರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸುರಕ್ಷಿತ ಸಂಚಾರವನ್ನು ಖಾತರಿಪಡಿಸಲು, ತೈಲ ರಫ್ತಿನ ಮೇಲೆ ಇರಾನ್‌ಗೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಅಮೆರಿಕ ಸಡಿಲಿಕೆ ಮಾಡಿತ್ತು. ಎರಡೂ ದೇಶಗಳ ನಡುವೆ ಸಂಘರ್ಷ ಕಡಿಮೆ ಮಾಡುವ ಮಹತ್ವದ ಹೆಜ್ಜೆ ಇದು ಎಂದು ವಿಶ್ಲೇಷಿಸಲಾಗಿತ್ತು. ಆದರೆ ಒಪ್ಪಂದಕ್ಕೆ ಸಹಿ ಬಿದ್ದ ಕೆಲವೇ ವಾರಗಳಲ್ಲಿ ಹೊರ್ಮುಜ್‌ನಲ್ಲಿ ಮೂರು ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಯಿತು. ಅಮೆರಿಕ ತಕ್ಷಣ ತೈಲ ರಫ್ತಿಗೆ ನೀಡಿದ್ದ ವಿನಾಯಿತಿಯನ್ನು ಹಿಂಪಡೆಯಿತು. ಬೆನ್ನಲ್ಲೇ ಇರಾನ್‌ನ ಸೇನಾ ಮೂಲಸೌಕರ್ಯಗಳ ಮೇಲೆ ವ್ಯಾಪಕ ವಾಯುದಾಳಿ ನಡೆಯಿತು.

ಈ ಬೆಳವಣಿಗೆಗಳ ನಂತರ ಮತ್ತೆ ಅದೇ ಪ್ರಶ್ನೆ ಮುನ್ನೆಲೆಗೆ ಬಂದಿದೆ.

ಸೇನಾ ಒತ್ತಡವೂ ನಿರೀಕ್ಷಿತ ಫಲ ನೀಡದಿದ್ದಾಗ, ರಾಜತಾಂತ್ರಿಕ ಪ್ರಯತ್ನವೂ ಸ್ಥಗಿತಗೊಂಡರೆ, ಅಮೆರಿಕದ ಮುಂದಿನ ಕಾರ್ಯತಂತ್ರ ಏನಾಗಿರಬಹುದು?

ಇತ್ತೀಚಿನ ದಾಳಿಗಳನ್ನು ನೋಡಿದರೆ ಇದಕ್ಕೆ ಉತ್ತರ ಸಿಗದು. ತೈಲ ರಫ್ತು ಮಾಡಲು ಇರಾನ್‌ ಮೇಲಿದ್ದ ನಿರ್ಬಂಧ ಸಡಿಲಗೊಳಿಸಿದ ಕೆಲವೇ ದಿನಗಳಲ್ಲಿ ಮತ್ತೆ ಸ್ಥಗಿತಗೊಳಿಸಿದ್ದು, ಆ ಬಳಿಕ ಸೇನಾ ಕ್ರಮಕ್ಕೆ ಮುಂದಾಗಿದ್ದು… ಈ ಬೆಳವಣಿಗೆಗಳ ಸರಣಿಯನ್ನು ಅರ್ಥಮಾಡಿಕೊಳ್ಳಬೇಕು.

ಒಂದೇ ತಿಂಗಳಲ್ಲಿ ಮೂರು ವಿಭಿನ್ನ ಸಂದೇಶಗಳು

ಇರಾನ್ ಕುರಿತು ಟ್ರಂಪ್ ಆಡಳಿತದ ಇತ್ತೀಚಿನ ನೀತಿಯನ್ನು ಮೂರು ಹಂತಗಳಲ್ಲಿ ನೋಡಬಹುದು.

ಮೊದಲ ಹಂತದಲ್ಲಿ ಸೇನಾ ಮತ್ತು ಆರ್ಥಿಕ ಒತ್ತಡಕ್ಕೆ ಆದ್ಯತೆ ನೀಡಲಾಯಿತು. ದಾಳಿಗಳು, ನಿರ್ಬಂಧಗಳು ಮತ್ತು ರಾಜತಾಂತ್ರಿಕ ಒತ್ತಡದ ಮೂಲಕ ಇರಾನ್‌ ಅನ್ನು ಮಣಿಸುವ ಪ್ರಯತ್ನ ನಡೆಯಿತು.

ಎರಡನೇ ಹಂತದಲ್ಲಿ ಇದು ಬದಲಾಯಿತು. ಹೊರ್ಮುಜ್‌ನಲ್ಲಿ ಸ್ಥಿರತೆ ತರಲು ಮತ್ತು ಉದ್ವಿಗ್ನತೆ ಕಡಿಮೆ ಮಾಡಲು ಮಾತುಕತೆಯ ಮಾರ್ಗಕ್ಕೆ ಒತ್ತು ನೀಡಲಾಯಿತು. ತೈಲ ರಫ್ತಿನ ಮೇಲಿನ ನಿರ್ಬಂಧಗಳಲ್ಲಿ ತಾತ್ಕಾಲಿಕ ಸಡಿಲಿಕೆ ನೀಡುವ ಮೂಲಕ ಆರ್ಥಿಕ ಪ್ರೋತ್ಸಾಹವನ್ನು ಬಳಸಲಾಯಿತು.

ಮೂರನೇ ಹಂತ ಹೆಚ್ಚು ಕಾಲ ಉಳಿಯಲಿಲ್ಲ. ಹಡಗುಗಳ ಮೇಲಿನ ದಾಳಿಯ ನಂತರ ಅಮೆರಿಕ ಮತ್ತೆ ಮೊದಲಿನ ನೀತಿಗೆ ಮರಳಿತು. ನಿರ್ಬಂಧಗಳು ಮರುಜಾರಿಯಾದವು. ಸೇನಾ ಕಾರ್ಯಾಚರಣೆಗಳು ಪುನರಾರಂಭವಾದವು.

ಒಂದೇ ತಿಂಗಳಲ್ಲಿ ಒತ್ತಡ, ರಾಜತಾಂತ್ರಿಕ ಸಡಿಲಿಕೆ ಮತ್ತು ಮತ್ತೆ ಗರಿಷ್ಠ ಒತ್ತಡ -ಈ ಮೂರು ಹಂತಗಳನ್ನು ಅಮೆರಿಕ ದಾಟಿದೆ.

ಹೀಗಾಗಿ ಪ್ರಶ್ನೆ ಈಗ ಹೊರ್ಮುಜ್ ಜಲಸಂಧಿಯ ಭದ್ರತೆಗೆ ಮಾತ್ರ ಸೀಮಿತವಾಗಿಲ್ಲ. ಇರಾನ್ ವಿರುದ್ಧ ಅಮೆರಿಕ ಅನುಸರಿಸುತ್ತಿರುವ ನೀತಿ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದೇ ಈಗ ಪ್ರಮುಖ ಚರ್ಚೆಯಾಗಿದೆ.

ಖಮೇನಿ ಅಂತಿಮ ಯಾತ್ರೆ: ಯುದ್ಧದ ಪರಿಣಾಮ, ಸಾಮಾಜಿಕ ಬದುಕಿನ ವಿಭಿನ್ನ ಚಿತ್ರಣಗಳು

ಹೊರ್ಮುಜ್ ಯಾಕೆ ಜಗತ್ತಿನ ಗಮನ ಸೆಳೆಯುತ್ತದೆ?

ಪಶ್ಚಿಮ ಏಷ್ಯಾದ ಯಾವುದೇ ಬಿಕ್ಕಟ್ಟಿನಲ್ಲಿ ಹೊರ್ಮುಜ್ ಜಲಸಂಧಿ ಸುದ್ದಿಯ ಕೇಂದ್ರವಾಗುವುದು ಅದರ ಭೌಗೋಳಿಕ ಸ್ಥಾನದಿಂದ ಮಾತ್ರವಲ್ಲ. ಪರ್ಷಿಯನ್ ಕೊಲ್ಲಿಯನ್ನು ಅರಬ್ಬಿ ಸಮುದ್ರಕ್ಕೆ ಸಂಪರ್ಕಿಸುವ ಈ ಕಿರಿದಾದ ಜಲಮಾರ್ಗದ ಮೂಲಕ ಪ್ರತಿದಿನ ಭಾರಿ ಪ್ರಮಾಣದ ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಸಾಗುತ್ತದೆ. ಗಲ್ಫ್ ಪ್ರದೇಶದ ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳಿಗೆ ಇದು ಅತ್ಯಂತ ಮುಖ್ಯ ಸಾಗಣೆ ಮಾರ್ಗವಾಗಿದೆ.

ಈ ಮಾರ್ಗದಲ್ಲಿ ವ್ಯತ್ಯಯ ಉಂಟಾದರೆ ಅದರ ಪರಿಣಾಮ ಪಶ್ಚಿಮ ಏಷ್ಯಾಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಜಾಗತಿಕ ತೈಲ ಬೆಲೆ, ಸಾಗಣೆ ವೆಚ್ಚ, ಹಡಗುಗಳ ವಿಮೆ ಮತ್ತು ಇಂಧನ ಪೂರೈಕೆ ಸರಪಳಿಯ ಮೇಲೂ ಅದರ ಪರಿಣಾಮ ಬೀಳುತ್ತದೆ. ಅದಕ್ಕಾಗಿಯೇ ಹೊರ್ಮುಜ್‌ನಲ್ಲಿ ಸ್ಥಿರತೆ ಅಮೆರಿಕಕ್ಕೂ ಮುಖ್ಯ. ಅದೇ ಸಮಯದಲ್ಲಿ ಈ ಜಲಸಂಧಿಯ ಮೇಲಿನ ತನ್ನ ಪ್ರಭಾವವನ್ನು ಉಳಿಸಿಕೊಳ್ಳುವುದು ಇರಾನ್‌ಗೂ ಅಷ್ಟೇ ಮುಖ್ಯ.

ಹೀಗಾಗಿ ಇಲ್ಲಿ ನಡೆಯುವ ಪ್ರತಿಯೊಂದು ಬೆಳವಣಿಗೆಯೂ ಕೇವಲ ಭದ್ರತೆಯ ಪ್ರಶ್ನೆಯಲ್ಲ; ಅದು ಪ್ರಾದೇಶಿಕ ಪ್ರಭಾವ ಮತ್ತು ಜಾಗತಿಕ ಆರ್ಥಿಕತೆಯ ಪ್ರಶ್ನೆಯೂ ಆಗಿದೆ.

ರಾಜಮನೆತನ‌ದಿಂದ ಮಿಡ್‌ನೈಟ್ ಕಲ್ಚರ್‌ವರೆಗೆ.. 'ಹೈದರಾಬಾದಿ ಬಿರಿಯಾನಿ' ಘಮದ ಕಥೆ

ಒಪ್ಪಂದ ದುರ್ಬಲಗೊಳ್ಳಲು ಕಾರಣವೇನು?

ಯಾವುದೇ ರಾಜತಾಂತ್ರಿಕ ಒಪ್ಪಂದದ ಯಶಸ್ಸು ಅದರ ಅನುಷ್ಠಾನದ ಸ್ಪಷ್ಟತೆಯ ಮೇಲೆ ಅವಲಂಬಿತವಾಗಿರುತ್ತದೆ. ವರ್ಸೈಲ್ಸ್‌ನಲ್ಲಿ ರೂಪುಗೊಂಡ ತಿಳಿವಳಿಕಾ ಒಪ್ಪಂದದಲ್ಲಿ ಇರಾನ್ ವಾಣಿಜ್ಯ ಹಡಗುಗಳ ಸುರಕ್ಷಿತ ಸಂಚಾರಕ್ಕೆ 'ಅತ್ಯುತ್ತಮ ಪ್ರಯತ್ನ' ಮಾಡಲಿದೆ ಎಂಬ ಉಲ್ಲೇಖವಿತ್ತು. ಆದರೆ 'ಸುರಕ್ಷಿತ ಸಂಚಾರ' ಎಂಬ ಪದಕ್ಕೆ ಎರಡೂ ದೇಶಗಳು ಒಂದೇ ಅರ್ಥ ನೀಡಲಿಲ್ಲ.

ಅಮೆರಿಕದ ದೃಷ್ಟಿಯಲ್ಲಿ ಇದರ ಅರ್ಥ, ಅಂತರರಾಷ್ಟ್ರೀಯ ಸಮುದ್ರ ಮಾರ್ಗದಲ್ಲಿ ಯಾವುದೇ ಹಡಗು ಅಡ್ಡಿಯಿಲ್ಲದೆ ಸಂಚರಿಸಬೇಕು. ಅಗತ್ಯವಿದ್ದರೆ ಅಮೆರಿಕ ಅಥವಾ ಅದರ ಮಿತ್ರ ರಾಷ್ಟ್ರಗಳ ನೌಕಾಪಡೆಯೂ ಭದ್ರತೆ ಒದಗಿಸಬಹುದು. ಆದರೆ ಇರಾನ್‌ನ ನಿಲುವು ವಿಭಿನ್ನವಾಗಿತ್ತು. ತನ್ನ ಕರಾವಳಿಗೆ ಸಮೀಪದ ಸಮುದ್ರ ಪ್ರದೇಶದಲ್ಲಿ ಭದ್ರತೆ ಮತ್ತು ನಿಯಂತ್ರಣ ತನ್ನದೇ ಅಧಿಕಾರ ವ್ಯಾಪ್ತಿಯ ವಿಷಯ ಎಂದು ಅದು ಪ್ರತಿಪಾದಿಸಿತು. ಈ ಭಿನ್ನತೆಯೇ ಸಂಘರ್ಷಕ್ಕೆ ಕಾರಣವಾಯಿತು.

ಅಮೆರಿಕ ನೌಕಾಪಡೆ, ಇರಾನ್ ಕರಾವಳಿಯಿಂದ ದೂರವಿರುವ ಒಮಾನ್ ಸಮೀಪದ ಅಂತರರಾಷ್ಟ್ರೀಯ ನೌಕಾ ಮಾರ್ಗದಲ್ಲಿ ವಾಣಿಜ್ಯ ಹಡಗುಗಳಿಗೆ ಭದ್ರತೆ ಒದಗಿಸಲು ಆರಂಭಿಸಿತು. ಇದನ್ನು ಇರಾನ್ ವಿರೋಧಿಸಿತು. ನಂತರ ನಡೆದ ದಾಳಿಯೊಂದಿಗೆ ತಿಳಿವಳಿಕಾ ಒಪ್ಪಂದದ ಮೇಲಿನ ವಿಶ್ವಾಸವೂ ಕುಸಿಯಿತು.

ಸಮಸ್ಯೆ ಒಪ್ಪಂದದಲ್ಲಿತ್ತೇ, ವಿಶ್ವಾಸದಲ್ಲಿತ್ತೇ?

ರಾಜತಾಂತ್ರಿಕ ದಾಖಲೆಗಳು ಕಾಗದದ ಮೇಲಿನ ಒಪ್ಪಂದ ಮಾತ್ರವಲ್ಲ; ಅವು ಪರಸ್ಪರ ವಿಶ್ವಾಸದ ಮೇಲೂ ನಿಂತಿರುತ್ತವೆ. ಈ ಪ್ರಕರಣದಲ್ಲಿ ಎರಡೂ ದೇಶಗಳು ಒಂದೇ ಒಪ್ಪಂದವನ್ನು ವಿಭಿನ್ನ ರೀತಿಯಲ್ಲಿ ಅರ್ಥೈಸಿದ್ದವು. ಹೀಗಾಗಿ ಅನುಷ್ಠಾನದ ಮೊದಲ ಹಂತದಲ್ಲೇ ಭಿನ್ನಾಭಿಪ್ರಾಯಗಳು ಬಹಿರಂಗವಾದವು.

ಈ ಬೆಳವಣಿಗೆಗಳ ಪರಿಣಾಮವಾಗಿ, 60 ದಿನಗಳಲ್ಲಿ ಸಮಗ್ರ ಒಪ್ಪಂದದ ಕುರಿತು ಆರಂಭವಾಗಬೇಕಿದ್ದ ಮುಂದಿನ ಮಾತುಕತೆಗಳ ಭವಿಷ್ಯವೂ ಅನಿಶ್ಚಿತವಾಗಿದೆ. ರಾಜತಾಂತ್ರಿಕ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಅಮೆರಿಕ ಹೇಳಿಲ್ಲ. ಆದರೆ ಪ್ರಸ್ತುತ ಬೆಳವಣಿಗೆಗಳು ನೋಡಿದರೆ, ಮಾತುಕತೆಗಿಂತ ಸೇನಾ ಕ್ರಮ ಮತ್ತು ಆರ್ಥಿಕ ನಿರ್ಬಂಧಗಳಿಗೇ ಮತ್ತೆ ಆದ್ಯತೆ ಸಿಕ್ಕಿರುವುದು ಸ್ಪಷ್ಟವಾಗಿದೆ.

ಯುದ್ಧಭೂಮಿಯ ಹೊರಗೆ ಗುಪ್ತ ಸಂಘರ್ಷ: ಟ್ರಂಪ್-ಸಲ್ಮಾನ್ ನಡುವೆ ಬಿರುಕು ಮೂಡಿದ್ದೇಕೆ?

ಇರಾನ್‌ನ ಒಳರಾಜಕೀಯ ಮಹತ್ವ ಏಕೆ?

ಹೊರ್ಮುಜ್‌ನಲ್ಲಿ ನಡೆದ ಘಟನೆಗಳು ಮತ್ತು ಅಮೆರಿಕದ ಪ್ರತಿಕ್ರಿಯೆ ಜಾಗತಿಕ ಗಮನ ಸೆಳೆದಿದ್ದರೂ, ಈ ಬಿಕ್ಕಟ್ಟಿನ ಮತ್ತೊಂದು ಪ್ರಮುಖ ಆಯಾಮ ಇರಾನ್‌ನ ಒಳರಾಜಕೀಯ ಎನ್ನುವುದು ಬೆಳಕಿನಷ್ಟೇ ಸತ್ಯ. ಇತ್ತೀಚೆಗೆ ದೇಶದ ನಾಯಕತ್ವದಲ್ಲಿ ಬದಲಾವಣೆಗಳಾಗಿವೆ. ಹೊಸ ರಾಜಕೀಯ ಸಮೀಕರಣಗಳು ರೂಪುಗೊಳ್ಳುತ್ತಿರುವ ಈ ಹಂತದಲ್ಲಿ ವಿದೇಶಾಂಗ ನೀತಿ, ಪರಮಾಣು ಕಾರ್ಯಕ್ರಮ ಮತ್ತು ಪಾಶ್ಚಾತ್ಯ ರಾಷ್ಟ್ರಗಳೊಂದಿಗಿನ ಸಂಬಂಧಗಳ ಬಗ್ಗೆ ವಿಭಿನ್ನ ನಿಲುವುಗಳು ವ್ಯಕ್ತವಾಗುತ್ತಿವೆ.

ಮಾತುಕತೆಗೆ ಬೆಂಬಲ ವ್ಯಕ್ತಪಡಿಸಿದ್ದ ಕೆಲ ನಾಯಕರು ಸಾರ್ವಜನಿಕ ಟೀಕೆಗೂ ಗುರಿಯಾಗಿದ್ದಾರೆ. ಇದರಿಂದ ಒಂದು ಸಂಗತಿಯಂತೂ ಸ್ಪಷ್ಟ -ವಿದೇಶಾಂಗ ಒಪ್ಪಂದವೊಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ವೀಕಾರಾರ್ಹವಾಗಿರುವುದು ಮಾತ್ರ ಸಾಕಾಗುವುದಿಲ್ಲ; ಅದನ್ನು ದೇಶದೊಳಗೂ ರಾಜಕೀಯವಾಗಿ ಸಮರ್ಥಿಸಿಕೊಳ್ಳುವ ಸಾಮರ್ಥ್ಯವೂ ಅಗತ್ಯ.

ಈ ಅಂಶವೇ ಮುಂದಿನ ಮಾತುಕತೆಯನ್ನು ಇನ್ನಷ್ಟು ಸಂಕೀರ್ಣಗೊಳಿಸುವ ಸಾಧ್ಯತೆ ಹೊಂದಿದೆ.

ಹೊರ್ಮುಜ್ ಮಾತ್ರವಲ್ಲ…

ಹೊಸ ಬಿಕ್ಕಟ್ಟು ಹೊರ್ಮುಜ್ ಜಲಸಂಧಿಯ ವಿಚಾರದಲ್ಲಿ ಆರಂಭವಾದಂತೆ ಕಂಡರೂ, ಅಮೆರಿಕ-ಇರಾನ್ ಸಂಘರ್ಷದ ಮೂಲ ವಿವಾದ ಪರಮಾಣು ಕಾರ್ಯಕ್ರಮ ಎನ್ನುವುದು ಸುಳ್ಳಲ್ಲ. ತಿಳಿವಳಿಕಾ ಒಪ್ಪಂದದಲ್ಲಿ ಸಮುದ್ರ ಭದ್ರತೆಗೆ ಸಂಬಂಧಿಸಿದ ಅಂಶಗಳು ಇದ್ದರೂ, ಅಣು ಕಾರ್ಯಕ್ರಮದ ಬಗ್ಗೆ ಸ್ಪಷ್ಟ ಒಪ್ಪಂದ ಇರಲಿಲ್ಲ. ಇರಾನ್‌ನ ಯುರೇನಿಯಂ ಸಮೃದ್ಧೀಕರಣ, ಅಣು ಇಂಧನ ಸಂಗ್ರಹ, ಅಂತರರಾಷ್ಟ್ರೀಯ ಪರಿಶೀಲನೆ ಮತ್ತು ಭವಿಷ್ಯದ ನಿರ್ಬಂಧಗಳ ಕುರಿತು ಎರಡೂ ದೇಶಗಳ ನಡುವೆ ಭಿನ್ನಾಭಿಪ್ರಾಯಗಳು ಮುಂದುವರಿದಿವೆ. ಹೀಗಾಗಿ ಹೊರ್ಮುಜ್‌ನಲ್ಲಿ ಉದ್ವಿಗ್ನತೆ ಕಡಿಮೆಯಾದರೂ, ಅಣು ಕಾರ್ಯಕ್ರಮದ ಪ್ರಶ್ನೆ ಬಗೆಹರಿಯದಿದ್ದರೆ ದೀರ್ಘಕಾಲದ ರಾಜತಾಂತ್ರಿಕ ಪರಿಹಾರ ಸಾಧ್ಯವಾಗುವುದಿಲ್ಲ.

ಒಂದು ವರ್ಷದಲ್ಲಿ ಮೂರು ಪಟ್ಟು ಆದಾಯ: ಟ್ರಂಪ್ ಸಂಪತ್ತಿನ ಹಿಂದಿನ ಕ್ರಿಪ್ಟೊ ಕಥೆ

ಮತ್ತೆ ಆರಂಭವಾದ 'ಗರಿಷ್ಠ ಒತ್ತಡ' ನೀತಿ

ಹಡಗುಗಳ ಮೇಲಿನ ದಾಳಿಯ ನಂತರ ಅಮೆರಿಕ ಕೈಗೊಂಡ ಎರಡು ಪ್ರಮುಖ ಕ್ರಮಗಳು ಗಮನಾರ್ಹ. ಮೊದಲನೆಯದು, ಇರಾನ್‌ಗೆ ನೀಡಿದ್ದ ತೈಲ ರಫ್ತಿನ ವಿನಾಯಿತಿಯನ್ನು ರದ್ದುಪಡಿಸುವುದು. ಎರಡನೆಯದು, ಸೇನಾ ಕಾರ್ಯಾಚರಣೆಗಳನ್ನು ವಿಸ್ತರಿಸುವುದು.

ಈ ಎರಡೂ ಕ್ರಮಗಳು ಟ್ರಂಪ್ ಅವರು ತಮ್ಮ ಮೊದಲ ಆಡಳಿತಾವಧಿಯಲ್ಲಿ ಅನುಸರಿಸಿದ್ದ 'ಗರಿಷ್ಠ ಒತ್ತಡ' ಹೇರುವ ನೀತಿಯನ್ನು ನೆನಪಿಸುತ್ತವೆ. ಆರ್ಥಿಕ ನಿರ್ಬಂಧಗಳು ಮತ್ತು ಸೇನಾ ಒತ್ತಡದ ಮೂಲಕ ಇರಾನ್‌ ಅನ್ನು ಮಂಡಿಯೂರಿಸುವುದು ಆ ತಂತ್ರದ ಮೂಲ ಉದ್ದೇಶ.

ಆರ್ಥಿಕ ನಿರ್ಬಂಧಗಳು ಇರಾನ್‌ನ ಆರ್ಥಿಕತೆಯ ಮೇಲೆ ಸಮಸ್ಯೆ ಉಂಟು ಮಾಡಿದ್ದರೂ, ಅವುಗಳಿಂದ ಪರಮಾಣು ಕಾರ್ಯಕ್ರಮವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಅಮೆರಿಕದಿಂದ ಸಾಧ್ಯವಾಗಲಿಲ್ಲ. ಪ್ರಾದೇಶಿಕ ಭದ್ರತೆ ಮತ್ತು ಪ್ರಭಾವದ ಕುರಿತ ಅಮೆರಿಕ-ಇರಾನ್ ಭಿನ್ನಾಭಿಪ್ರಾಯಗಳೂ ಮುಗಿಯಲಿಲ್ಲ. ಈ ಕಾರಣದಿಂದಲೇ 'ಗರಿಷ್ಠ ಒತ್ತಡ' ನೀತಿಯ ಪರಿಣಾಮಕಾರಿ ಬಗ್ಗೆ ಅಮೆರಿಕದಲ್ಲಿ ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಿದೆ.

ಹೀಗಿದ್ದರೂ, ಮಧ್ಯಂತರ ಒಪ್ಪಂದ ಮುರಿದ ಬಳಿಕ ಟ್ರಂಪ್ ಆಡಳಿತ ಮತ್ತೆ ಅದೇ ನೀತಿಗೆ ಮರಳಿದೆ. ಇದರಿಂದ ತಕ್ಷಣದ ಒತ್ತಡ ಹೆಚ್ಚಿಸಬಹುದು. ಆದರೆ ದೀರ್ಘಾವಧಿಯಲ್ಲಿ ಇದು ಹೊಸ ರಾಜತಾಂತ್ರಿಕ ಅವಕಾಶವನ್ನು ಸೃಷ್ಟಿಸುತ್ತದೆಯೇ, ಅಥವಾ ಹಳೆಯ ಸಂಘರ್ಷವನ್ನೇ ಮುಂದುವರಿಸುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ.

ಅಮೆರಿಕ-ಇರಾನ್ ಒಪ್ಪಂದದ ಹಿಂದಿನ ನಾಟಕೀಯ ಕ್ಷಣಗಳು: ಕೊನೆಯವರೆಗೂ ನಡೆದ ಹಗ್ಗಜಗ್ಗಾಟ

ಜಾಗತಿಕ ಮಾರುಕಟ್ಟೆಯ ಮೇಲಿನ ಪರಿಣಾಮ

ಹೊರ್ಮುಜ್ ಜಲಸಂಧಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ತೈಲ ಉತ್ಪಾದಕ ರಾಷ್ಟ್ರಗಳು ಮಾತ್ರವಲ್ಲ, ಜಾಗತಿಕ ಮಾರುಕಟ್ಟೆಯೂ ನಿಕಟವಾಗಿ ಗಮನಿಸುತ್ತಿದೆ. ಸಮುದ್ರ ಮಾರ್ಗದಲ್ಲಿ ಭದ್ರತೆ ಬಗ್ಗೆ ಅನಿಶ್ಚಿತತೆ ಹೆಚ್ಚಾದರೆ ಹಡಗುಗಳ ವಿಮಾ ವೆಚ್ಚ ಏರಿಕೆಯಾಗಬಹುದು. ಸಾಗಣೆ ವಿಳಂಬವಾಗಬಹುದು. ಕೆಲವು ಕಂಪನಿಗಳು ಪರ್ಯಾಯ ಮಾರ್ಗಗಳನ್ನು ಬಳಸಬೇಕಾದ ಪರಿಸ್ಥಿತಿ ಎದುರಾಗಬಹುದು. ಇವುಗಳ ಪರಿಣಾಮ ಕಚ್ಚಾ ತೈಲದ ಬೆಲೆ ಮತ್ತು ಇಂಧನ ಆಮದು ಮಾಡುವ ರಾಷ್ಟ್ರಗಳ ವೆಚ್ಚದ ಮೇಲೂ ಬೀಳುವ ಸಾಧ್ಯತೆ ಇದೆ.

ಆದ್ದರಿಂದ ಹೊರ್ಮುಜ್‌ನಲ್ಲಿನ ಸ್ಥಿರತೆ ಮಧ್ಯಪ್ರಾಚ್ಯದ ರಾಜಕೀಯ ವಿಷಯ ಮಾತ್ರವಲ್ಲ, ಜಾಗತಿಕ ಆರ್ಥಿಕತೆಯ ಪ್ರಶ್ನೆಯೂ ಆಗಿದೆ.

ರಾಜತಾಂತ್ರಿಕತೆಗೆ ಇನ್ನೂ ಅವಕಾಶ ಉಳಿದಿದೆಯೇ?

ರಾಜತಾಂತ್ರಿಕ ಮಾರ್ಗ ಸಂಪೂರ್ಣ ಮುಚ್ಚಿದೆ ಎಂದು ಅಮೆರಿಕ ಹೇಳಿಲ್ಲ. ಮಾತುಕತೆಗಳು ಮುಂದುವರಿಯಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಅದನ್ನು ಸಮಗ್ರ ರಾಜಕೀಯ ಮಾತುಕತೆಯ ಸಂಕೇತವೆಂದು ಪರಿಗಣಿಸುವುದು ಸದ್ಯಕ್ಕೆ ಕಷ್ಟ. ಹೊರ್ಮುಜ್ ಜಲಸಂಧಿಯಲ್ಲಿ ನಡೆದ ಘಟನೆಗಳ ಬಗ್ಗೆ ಎರಡೂ ದೇಶಗಳ ನಿಲುವು ಭಿನ್ನವಾಗಿದೆ. ತಿಳಿವಳಿಕಾ ಒಪ್ಪಂದದ ಅನುಷ್ಠಾನದ ಕುರಿತಾಗಿಯೂ ಪರಸ್ಪರ ಆರೋಪಗಳು ಮುಂದುವರಿದಿವೆ.

ಅದೇ ವೇಳೆ, ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳು ಇನ್ನೂ ಉತ್ತರ ಸಿಕ್ಕಿಲ್ಲ. ಯುರೇನಿಯಂ ಸಮೃದ್ಧೀಕರಣ, ಅಣು ಇಂಧನ ಸಂಗ್ರಹ ಮತ್ತು ಆರ್ಥಿಕ ನಿರ್ಬಂಧಗಳ ಭವಿಷ್ಯದ ಬಗ್ಗೆ ಎರಡೂ ದೇಶಗಳ ನಡುವಿನ ರಾಜಕೀಯ ಅಂತರ ಹಾಗೆಯೇ ಉಳಿದಿದೆ.

ಹೀಗಾಗಿ, ಸಂಪರ್ಕಗಳು ಮುಂದುವರಿದರೂ ಅವುಗಳನ್ನು ಸಮಗ್ರ ಒಪ್ಪಂದದತ್ತ ಸಾಗುವ ಪ್ರಕ್ರಿಯೆ ಎಂದು ಹೇಳಲು ಇನ್ನೂ ಸಾಧ್ಯವಿಲ್ಲ. ಉದ್ವಿಗ್ನತೆಯನ್ನು ನಿಯಂತ್ರಿಸುವುದರ ಜೊತೆಗೆ ಈ ಮೂಲಭೂತ ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡುವುದೇ ಮುಂದಿನ ರಾಜತಾಂತ್ರಿಕ ಪ್ರಯತ್ನದ ಪ್ರಮುಖ ಸವಾಲಾಗಿದೆ.

ಬಾಹ್ಯಾಕಾಶದಲ್ಲಿ ಡೇಟಾ ಸೆಂಟರ್‌ಗಳು! ಏನಿದು ಮಸ್ಕ್‌ರ 'ಸ್ಟಾರ್‌ಮೈಂಡ್' ಯೋಜನೆ?

'ಪ್ಲಾನ್ ಸಿ' ಪ್ರಶ್ನೆ ಏಕೆ ಉದ್ಭವಿಸಿದೆ?

ಈ ಬೆಳವಣಿಗೆಗಳಿಂದ ಒಂದು ಸಂಗತಿಯಂತೂ ಸ್ಪಷ್ಟ. ಸೇನಾ ದಾಳಿಗಳು ನಿರೀಕ್ಷಿತ ರಾಜಕೀಯ ಫಲ ನೀಡಲಿಲ್ಲ. ಉದ್ವಿಗ್ನತೆ ತಗ್ಗಿಸುವ ಉದ್ದೇಶದಿಂದ ಮಾಡಿದ್ದ ಮಧ್ಯಂತರ ಒಪ್ಪಂದವೂ ಉಳಿಯಲಿಲ್ಲ. ಹೀಗಾಗಿ ಅಮೆರಿಕ ಈಗ ಮತ್ತೆ ನಿರ್ಬಂಧ ಮತ್ತು ಸೇನಾ ಕ್ರಮದತ್ತ ಮರಳಿದೆ. ಆದರೆ ಇದೇ ನೀತಿಯನ್ನು ಹಲವು ವರ್ಷಗಳಿಂದ ಅನುಸರಿಸಲಾಗುತ್ತಿದೆ. ಈ ಬಾರಿ ಅದರ ಗುರಿ ಏನು ಎಂಬುದೇ ಈಗ ಮೂಲ ಪ್ರಶ್ನೆಯಾಗಿದೆ.

ಮುಂದೇನು?

ಸದ್ಯಕ್ಕೆ ಅಮೆರಿಕ ಮತ್ತೆ ನಿರ್ಬಂಧಗಳು ಮತ್ತು ಸೇನಾ ಕ್ರಮಗಳಿಗೆ ಆದ್ಯತೆ ನೀಡಿದೆ. ಆದರೆ ಇತ್ತೀಚಿನ ಬೆಳವಣಿಗೆಗಳು ಒಂದು ಸಂಗತಿಯನ್ನು ಸ್ಪಷ್ಟಪಡಿಸಿವೆ. ಸೇನಾ ಕ್ರಮಗಳು ತಾತ್ಕಾಲಿಕ ಪ್ರತಿಕ್ರಿಯೆ ನೀಡಬಹುದು; ರಾಜತಾಂತ್ರಿಕ ಪ್ರಯತ್ನಗಳು ಸಂಘರ್ಷವನ್ನು ಕೆಲಕಾಲ ತಗ್ಗಿಸಬಹುದು. ಆದರೆ ಹೊರ್ಮುಜ್ ಜಲಸಂಧಿಯ ಭದ್ರತೆ, ಇರಾನ್‌ನ ಪರಮಾಣು ಕಾರ್ಯಕ್ರಮ ಮತ್ತು ಪ್ರಾದೇಶಿಕ ಪ್ರಭಾವಕ್ಕೆ ಸಂಬಂಧಿಸಿದ ಮೂಲಭೂತ ಭಿನ್ನಾಭಿಪ್ರಾಯಗಳು ಬಗೆಹರಿಯುವವರೆಗೆ ಈ ಬಿಕ್ಕಟ್ಟಿಗೆ ಶಾಶ್ವತ ರಾಜಕೀಯ ಪರಿಹಾರ ಕಂಡುಕೊಳ್ಳುವುದು ಸುಲಭವಲ್ಲ.

ಅಂತಿಮವಾಗಿ, ಈ ಬಿಕ್ಕಟ್ಟಿನ ಮುಂದಿನ ಅಧ್ಯಾಯವನ್ನು ನಿರ್ಧರಿಸುವುದು ವಾಯುದಾಳಿಗಳು ಅಥವಾ ಹೊಸ ನಿರ್ಬಂಧಗಳಲ್ಲ; ಈ ಮೂರು ಪ್ರಶ್ನೆಗಳಿಗೆ ಅಮೆರಿಕ ಮತ್ತು ಇರಾನ್ ಕಂಡುಕೊಳ್ಳುವ ರಾಜಕೀಯ ಪರಿಹಾರವೇ ಆಗಿರಲಿದೆ.

ಆಧಾರ: ದಿ ನ್ಯೂಯಾರ್ಕ್ ಟೈಮ್ಸ್, ರಾಯಿಟರ್ಸ್, ಅಸೋಸಿಯೇಟೆಟ್ ಪ್ರೆಸ್, ಶ್ವೇತಭವನ

'ತೈಲ ಕೋಟೆ' ಖಾರ್ಗ್ ದ್ವೀಪದ ಮೇಲೆ ಟ್ರಂಪ್ ಕಣ್ಣು: ಮಧ್ಯಪ್ರಾಚ್ಯದಲ್ಲಿ ಹೊಸ ಕಿಡಿ
Dailyhunt
Disclaimer: This content has not been generated, created or edited by Dailyhunt. Publisher: Prajavani