Dailyhunt Logo
  • Light mode
    Follow system
    Dark mode
    • Play Story
    • App Story
ಸಿನಿ ಸಿಪ್: ರವಿಯ ಕ್ರಾಂತಿಯೂ ಭ್ರಾಂತಿಯೂ ಕಾಂತಿಯೂ

ಸಿನಿ ಸಿಪ್: ರವಿಯ ಕ್ರಾಂತಿಯೂ ಭ್ರಾಂತಿಯೂ ಕಾಂತಿಯೂ

ಗ ಸಾಮಾಜಿಕ ಮಾಧ್ಯಮದ ತುಂಬೆಲ್ಲ 'ಶಾಂತಿ ಕ್ರಾಂತಿ' ಸಿನಿಮಾ ಮರುಬಿಡುಗಡೆಯಾಗಬೇಕು ಎಂಬ ಆಗ್ರಹ. ಹಳತಿನ ಬಗ್ಗೆ ಆಗೀಗ ಇಂತಹ ಕಕ್ಕುಲತೆ ವ್ಯಕ್ತವಾಗಲು ದೊಡ್ಡ ಕಾರಣವೇನೂ ಬೇಕಾಗಿಲ್ಲ. ರವಿಚಂದ್ರನ್ ಮಗ ಆ ಸಿನಿಮಾ ಮರು ಬಿಡುಗಡೆ ಮಾಡಬೇಕು ಎಂಬ ಬಯಕೆ ವ್ಯಕ್ತಪಡಿಸಿದ್ದೇ ಅಂತಹುದೊಂದು ಆಗ್ರಹ ದೊಡ್ಡದೆನ್ನುವಂತೆ ಹರಡಲು ನೆಪವಾಗಿದೆಯಷ್ಟೆ.

ಖುದ್ದು ರವಿಚಂದ್ರನ್ ಈ ವಿಷಯ ಪ್ರಸ್ತಾಪ ಮಾಡುತ್ತಿಲ್ಲ. ಯಾಕೆಂದರೆ, ಆ ಸಿನಿಮಾ ಅವರಿಗೆ ಮಾಡಿದ್ದ ಗಾಯಗಳು ಒಂದೆರಡಲ್ಲ. ಆ ಸಿನಿಮಾದಿಂದ ಮಾಡಿದ್ದ ಅಷ್ಟೂ ಸಾಲ ತೀರಿಸಲು ಹದಿನೈದು ವರ್ಷಗಳು ಬೇಕಾದವು ಎಂದು ಅವರೇ ಹೇಳಿಕೊಂಡಿದ್ದರು.

ರವಿಚಂದ್ರನ್ ತಂದೆ ಎನ್. ವೀರಾಸ್ವಾಮಿ ಅವರು ದಶಕಗಳ ಹಿಂದೆ ನಟ ಲೋಕೇಶ್ ಅವರಿಗೆ ಸಾಲ ನೀಡಿದ್ದ ವಿಷಯವನ್ನು ಈ ಹಿಂದೆ ಇದೇ ಅಂಕಣದಲ್ಲಿ ಪ್ರಸ್ತಾಪಿಸಲಾಗಿತ್ತು. ತಂದೆ ಮಾಡಿದ್ದ ಸಾಲವನ್ನು ತೀರಿಸಲು ಲೋಕೇಶ್ ಅವರಿಗೆ ವೀರಾಸ್ವಾಮಿಯವರು ನೆರವಾಗಿದ್ದರು. ಆದರೆ, ಅವರ ಮಗನೇ ದೊಡ್ಡದೊಂದು ಯೋಜನೆಗೆ ಕೈಹಾಕಿ ಪಾತಾಳಕ್ಕೆ ಇಳಿಯುತ್ತಾ ಹೋದ ಸಂಗತಿಯೇ ಅವರಿಗೆ ಪೂರ್ಣಪ್ರಮಾಣದಲ್ಲಿ ತಿಳಿದಿರಲಿಲ್ಲ ಎನ್ನುವುದು ಸಿನಿಮಾ ಮಾಯೆ ಎನ್ನುವುದಕ್ಕೆ ಸಾಕ್ಷಿ.

'ಶಾಂತಿ ಕ್ರಾಂತಿ' ಸಿನಿಮಾ ಮುಹೂರ್ತ ನಡೆದದ್ದು 1988ರಲ್ಲಿ. ಕನ್ನಡ, ತೆಲುಗು, ತಮಿಳು, ಹಿಂದಿ ನಾಲ್ಕೂ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣ ಶುರುವಾಯಿತು. ನಿರ್ಮಾಣ, ನಿರ್ದೇಶನ, ಚಿತ್ರಕಥಾ ಬರವಣಿಗೆ ಎಲ್ಲವೂ ರವಿಚಂದ್ರನ್ ಹೆಗಲ ಮೇಲೆ ಹೊತ್ತರು. ಸಂಗೀತ ನಿರ್ದೇಶಕ ಹಂಸಲೇಖ ಸೃಜನಶೀಲ ಆತ್ಮವಿಶ್ವಾಸದೊಟ್ಟಿಗೆ ಜತೆಗೆ ನಿಂತರು. ಕನ್ನಡದಲ್ಲಿ ರವಿ ಮಾಡಿದ ಪಾತ್ರವನ್ನು ತೆಲುಗಿನಲ್ಲಿ ನಾಗಾರ್ಜುನ, ತಮಿಳು ಹಾಗೂ ಹಿಂದಿಯಲ್ಲಿ ರಜನಿಕಾಂತ್ ನಿರ್ವಹಿಸಲು ಒಪ್ಪಿದರು. ಏಕಕಾಲದಲ್ಲಿ ಎರಡು ಭಾಷೆಗಳಲ್ಲಿ ಅಭಿನಯಿಸಲು ರಜನಿ ಒಪ್ಪಿದ್ದು ಅದೇ ಮೊದಲು. ಒಂದೇ ಕಥೆಯಾದರೂ, ಅಷ್ಟೊಂದು ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಿಸುವುದು ದೊಡ್ಡ ಸವಾಲು. ಪ್ರತಿ ಭಾಷೆಗೂ ಪಾತ್ರವರ್ಗ ಬೇರೆ. ಬಳಸುವ ಭಾಷೆ ಬೇರೆ. ನಾಯಕ ನಟರ ಮ್ಯಾನರಿಸಂ ಕೂಡ ಬೇರೆ. ಹೀಗಿರುವಾಗ ರವಿಚಂದ್ರನ್ ಒಂದೇ ಏಟಿಗೆ ಹಲವು ಹಕ್ಕಿಗಳನ್ನು ಹೊಡೆಯಬೇಕಾದ ಸವಾಲನ್ನು ಮೈಮೇಲೆ ಎಳೆದುಕೊಂಡರು.

ಸಿನಿ ಸಿಪ್: ಬೆಳ್ಳಿಪರದೆಯ ತುಂಬೆಲ್ಲ ಎಷ್ಟೊಂದು ರಾವಣರು ಸಿನಿ ಸಿಪ್: ರಾಜ್‌ಕುಮಾರ್ ಯೋಗದಿಂದ ಆಲಿಯಾ ವ್ಯಾಯಾಮದವರೆಗೆ...

ಕನ್ನಡದಲ್ಲಿ ರವಿಚಂದ್ರನ್ ಅವರು ಕ್ರಾಂತಿಯ ಪಾತ್ರ ಮಾಡಿದರೆ, ರಮೇಶ್ ಅರವಿಂದ್ ಅವರು ಶಾಂತಿಯ ಪಾತ್ರಕ್ಕೆ ಬಣ್ಣಹಚ್ಚಿದರು. ರಜನಿ ಹಾಗೂ ನಾಗಾರ್ಜುನ ಇಬ್ಬರೂ ಕ್ರಾಂತಿಯ ಪಾತ್ರ ವಹಿಸಿದ ಆವೃತ್ತಿಗಳಲ್ಲಿ ಶಾಂತಿಯ ಪಾತ್ರದಲ್ಲಿ ರವಿಚಂದ್ರನ್ ನಟಿಸಿದರು.

ಅದು ಬೇರೆಯದೇ ಪ್ಯಾನ್-ಇಂಡಿಯಾ

ಈಗ ಪ್ಯಾನ್-ಇಂಡಿಯಾ ಸಿನಿಮಾ ಎಂಬ ಪರಿಕಲ್ಪನೆಗಿಂತ ಸಂಪೂರ್ಣ ಭಿನ್ನವೇ ಆದಂತಹ ಮ್ಯಾಜಿಕ್ ಮಾಡಲು ರವಿಚಂದ್ರನ್ ಆಗ ಹೊರಟಿದ್ದರು. ದೇಶದ ವಿವಿಧ ರಾಜ್ಯಗಳ ಸಿನಿಮಾ ಪತ್ರಕರ್ತರನ್ನು ಮುಹೂರ್ತಕ್ಕೆ ಕರೆಸಿದರು. ತಾರಾ ಹೋಟೆಲ್ಗಳಲ್ಲಿ ಅವರನ್ನು ಮೂರ್ನಾಲ್ಕು ದಿನ ಉಳಿಸಿದರು. ಒಂದು ದಿನ ಎಂಟಿಆರ್ನಲ್ಲಿ ತಿಂಡಿ ಕೊಡಿಸಿದರೆ, ಇನ್ನೊಂದು ದಿನ ಮತ್ತೊಂದು ಜನಪ್ರಿಯ ಹೋಟೆಲ್ನ ತಿನಿಸುಗಳ ರುಚಿ ಮಾಧ್ಯಮಮಿತ್ರರ ನಾಲಗೆಯಲ್ಲಿ ನೀರೂರಿಸಿತು.

ಇತ್ತ ಸೆಟ್ನಲ್ಲಿ ಆಹಾರ ಬಡಿಸುವ ಶೆಡ್ಗಳನ್ನು ನೋಡಿದರೆ, ಯಾವುದೋ ದೊಡ್ಡ ದಾಸೋಹದ ವಾತಾವರಣ. '123 123... ವಿ ಆರ್ದಿ ಚಿಲ್ಡ್ರನ್' ಎಂಬ ಹಾಡಿನ ಚಿತ್ರೀಕರಣಕ್ಕಾಗಿ ವಿವಿಧ ಶಾಲೆಗಳ ಸುಮಾರು ಮೂರು ಸಾವಿರ ಮಕ್ಕಳನ್ನು ಕರೆಸಿದ್ದರು. ಆ ಮಕ್ಕಳಿಗೆ ಹಾಲು ಪೂರೈಸಲು ಹಾಲಿನ ಟ್ಯಾಂಕರ್ ಆ ಸ್ಥಳದಲ್ಲಿ ನಿಂತದ್ದನ್ನು ನಟ ದೊಡ್ಡಣ್ಣ ನೆನಪಿಸಿಕೊಂಡಿದ್ದರು. ಬೇರೆ ಭಾಷೆಗಳ ಪಳಗಿದ ನಟರೊಟ್ಟಿಗೆ ಸಂವಾದ ನಡೆಸುತ್ತಾ, ಯಾವುದೋ ಬೃಹತ್ ಯೋಜನೆಯೊಂದರ ಭಾಗವಾದ ಅನುಭವವನ್ನು ಆ ಸಿನಿಮಾ ಅವರಿಗೆ ಕೊಟ್ಟಿತ್ತು.

ಒಂದು ಭಾಷೆಯ ದೃಶ್ಯ ಓಕೆ ಆದ ನಂತರ ರವಿಚಂದ್ರನ್ ಇನ್ನೊಂದು ಭಾಷೆಯ ಅದೇ ದೃಶ್ಯವನ್ನು ಚಿತ್ರೀಕರಿಸಲು ಸಜ್ಜಾಗುತ್ತಿದ್ದರು.

ಸಾಕಪ್ಪಾ ಸಾಕು

ಇದು ಹುಚ್ಚು ಸಾಹಸ ಎಂದು ರವಿಚಂದ್ರನ್ ಅವರಿಗೆ ಮನವರಿಕೆಯಾಗಲು ತಡವಾಗಲಿಲ್ಲ. ಒಂದು ಕಡೆ ದುಡ್ಡು ನೀರಿನಂತೆ ಖರ್ಚಾಗುತ್ತಿತ್ತು. ಇನ್ನೊಂದು ಕಡೆ ಅಂದುಕೊಂಡ ಮಟ್ಟಕ್ಕೆ ದೃಶ್ಯಗಳು ಮೂಡಿಬರುತ್ತಿರಲಿಲ್ಲ. ಅದೇ ಹೊತ್ತಿನಲ್ಲಿ ರವಿಚಂದ್ರನ್ ತಂದೆ ವೀರಾಸ್ವಾಮಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಹೋದರಿ ಯಾರನ್ನೋ ಪ್ರೀತಿಸಿ ವಿವಾದವೊಂದಕ್ಕೆ ಕಾರಣರಾಗಿದ್ದರು. ಒಟ್ಟಿನಲ್ಲಿ ಮನೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬಂಥ ವಾತಾವರಣ. ಒಂದು ಹಂತದಲ್ಲಿ ಎಲ್ಲವನ್ನೂ ನುಂಗಿಕೊಂಡ ವಿಷಕಂಠನಂತೆ ರವಿಚಂದ್ರನ್ ಪರಿಸ್ಥಿತಿ ಆಯಿತು.

ಸಿನಿ ಸಿಪ್: ಕನ್ನಡ ಚಿತ್ರರಂಗದ ಆರಂಭಿಕ ದಿನಗಳ ಸಂಭಾವನೆ ಹೇಗಿತ್ತು?ಸಿನಿ ಸಿಪ್: ಲೀಲಾವತಿಯ ಜಿಡ್ಡು ಚರ್ಮ; ಜಗ್ಗೇಶ್ ವಿದೇಶದಿಂದ ತಂದ ಲೋಷನ್

ಇನ್ನು ಸಾಧ್ಯವಿಲ್ಲ ಅನ್ನಿಸಿ ಅವರು ತಂದೆಯ ಬಳಿಗೆ ಹೋಗಿ, 'ಈ ಸಿನಿಮಾ ಅಂದುಕೊಂಡ ರೀತಿ ಬರುತ್ತಿಲ್ಲ. ನಿಲ್ಲಿಸಿಬಿಡೋಣ ಎಂದುಕೊಂಡಿರುವೆ' ಎಂದು ನೇರವಾಗಿ ಹೇಳಿದರು. ಎಂತೆಂಥ ಕಷ್ಟಗಳನ್ನೂ ಮೀರಿ ಅದಾಗಲೇ ಹಲವಾರು ಸಿನಿಮಾಗಳನ್ನು ತೆಗೆದಿದ್ದವರು ವೀರಾಸ್ವಾಮಿ. 'ನಿರ್ಮಾಪಕರಾದವರು ಹೀಗೆ ಅರ್ಧಕ್ಕೆ ಸಿನಿಮಾ ನಿಲ್ಲಿಸಬಾರದು. ರಜನಿಕಾಂತ್, ನಾಗಾರ್ಜುನ ಬೇರೆ ಭಾಷೆಗಳ ಸ್ಟಾರ್ಗಳು. ಅವರು ಕಾಲ್ಷೀಟ್ಕೊಟ್ಟಿದ್ದಾರೆ ಎಂದಮೇಲೆ ಅದಕ್ಕೆ ಬೆಲೆ ಕೊಡಬೇಕು. ಯಾವುದೇ ಕಾರಣಕ್ಕೂ ಸಿನಿಮಾ ಮಾಡುವುದನ್ನು ಬಿಡಬೇಡ' ಎಂದು ವೀರಾಸ್ವಾಮಿ ಕಟ್ಟಪ್ಪಣೆ ಮಾಡಿದರು.

ಸಿನಿಮಾ ಹುಚ್ಚಿನ ಮಗನಿಗೆ ಅಂಥದೇ ಹುಚ್ಚಿನ ತಂದೆ ಹೀಗೆ ಹೇಳಿದ್ದು ನಿಮ್ಮ ಪ್ರಕಾರ ಸರಿಯೋ ತಪ್ಪೋ? ಬರೆದು ತಿಳಿಸಿ.

ಹಣ ಹೊಂದಿಸಲು ರವಿಚಂದ್ರನ್ ಬೇರೆ ಸಿನಿಮಾಗಳಲ್ಲಿಯೂ ಅಭಿನಯಿಸಲು ಮನಸ್ಸು ಮಾಡದೇ ವಿಧಿಯಿರಲಿಲ್ಲ. ಅನುರಾಧಾ ಸಿಂಗ್, ದುಷ್ಯಂತ್ ಸಿಂಗ್ ಹಾಗೂ ಅಮೃತಾ ಸಿಂಗ್ ನಿರ್ಮಾಣದ 'ಯುಗಪುರುಷ' ಸಿನಿಮಾದಲ್ಲಿ ನಟಿಸಲು ಕಾಲ್ಷೀಟ್ ಕಟೊಟರು. ಡಿ.ರಾಜೇಂದ್ರ ಬಾಬು ನಿರ್ದೇಶನದ ಈ ಸಿನಿಮಾ ಹಿಂದಿಯ 'ಕರ್ಜ್' ಚಿತ್ರದ ರೀಮೇಕ್. ರವಿ ಹಾಗೂ ಖುಷ್ಬೂ ಜೋಡಿ, ಹಂಸಲೇಖ ಹಾಕಿದ ಜನಪ್ರಿಯ ಮಟ್ಟುಗಳು ಸಿನಿಮಾವನ್ನು ಗೆಲ್ಲಿಸಿದವು.

ಈ ಗೆಲುವಿನಿಂದ ರವಿ ಮತ್ತೆ ತಮ್ಮ ತಂದೆಯದೇ ಆದ ಈಶ್ವರಿ ಫಿಲ್ಮ್ಸ್ಮೂಲಕ 'ಕಿಂದರಿಜೋಗಿ' ಸಿನಿಮಾ ಚಿತ್ರೀಕರಿಸಿದರು. ಜೂಹಿ ಚಾವ್ಲಾ ಜೋಡಿಯಾಗಿ ಇನ್ನೊಮ್ಮೆ 'ಪ್ರೇಮಲೋಕ'ದ ರೀತಿಯ ಮೋಡಿ ಮಾಡುವ ಅವರ ಉಮೇದಿಗೆ ಮತ್ತೆ ಹಂಸಲೇಖ ಸಾಥ್ ನೀಡಿದರು. ಸೊಗಸಾದ ಜನಪದೀಯ ಸ್ವರೂಪದ ಸಾಹಿತ್ಯದ ಹಾಡುಗಳು ಅದರಲ್ಲಿದ್ದವು. ಅಷ್ಟೆಲ್ಲ ಇದ್ದರೂ ಆ ಸಿನಿಮಾ ಮಕಾಡೆಯಾಯಿತು. ಗಾಯದ ಮೇಲೆ ಇನ್ನೊಂದು ಬರೆ.

ಇಷ್ಟೆಲ್ಲ ಕಷ್ಟಗಳ ಮಳೆ ಸುರಿದರೂ 'ಶಾಂತಿ ಕ್ರಾಂತಿ' ಚಿತ್ರೀಕರಣವನ್ನು ಮುಗಿಸಿದರು. ಕೇಕ್ನಲ್ಲಿ ಮಾಡಿಸಿದ ಮಂಚದ ಮೇಲೆ ಜೂಹಿ ಚಾವ್ಲಾ ಉರುಳಿದರು. ರಮೇಶ್ ಅರವಿಂದ್ ಹಾಗೂ ಖುಷ್ಬೂ ರೊಮ್ಯಾನ್ಸ್ಕಂಡು ಅಭಿಮಾನಿಗಳು ಬಾಯರಳಿಸಿದರು. 'ಮಧ್ಯರಾತ್ರೀಲಿ ಹೈವೆ ರಸ್ತೇಲಿ ಮಳೆಯು ನಿಂತಿದೆ ಒಂಟಿ ಹೆಣ್ಣು ಬರ್ತಿದೆ' ಹಾಡಿನಲ್ಲಿ ಜೂಹಿ ಹಾಗೂ ಪೊಲೀಸ್ ಪಾತ್ರಧಾರಿಗಳ ನಡುವಿನ ಚಕಮಕಿಯ ದೃಶ್ಯಗಳೂ ಪದೇ ಪದೇ ನೆನಪಾದವು. ಆದರೆ, ಸಿನಿಮಾ ಮಾತ್ರ ಠುಸ್.

ಎಲ್ಲ ಲೆಕ್ಕಗಳೂ ಮುಗಿದ ನಂತರ ಸುಮಾರು ₹10 ಕೋಟಿಯಷ್ಟು ಸಾಲ ರವಿಚಂದ್ರನ್ ತಲೆಮೇಲೆ ಇತ್ತು.

ಸಿನಿ ಸಿಪ್: 'ಕಣ್ಣಪ್ಪ'ನ ಕಾರಣಕ್ಕೆ 'ರಾಜ್‌ಕುಮಾರ್' ಆದ ಮುತ್ತುರಾಜ್ಸಿನಿ ಸಿಪ್: ಸುದೀಪ್ 'ನೆಪೋಟಿಸಂ' ವರ್ತನೆಯ ನೆರಳಲ್ಲಿ ಕೆಲವು ಹಿತಕಥೆಗಳು...

ಕಾಪಾಡಿದ 'ರಾಮಾಚಾರಿ'

ಸರಿಸುಮಾರು ಅದೇ ಹೊತ್ತಿಗೆ ತಂದೆಯ ನಿರ್ಮಾಣ ಸಂಸ್ಥೆಯಿಂದ 'ರಾಮಾಚಾರಿ' ಚಿತ್ರವನ್ನು ಮಾಡಿದರು. ಡಿ. ರಾಜೇಂದ್ರ ಬಾಬು ನಿರ್ದೇಶನದ ಈ ಸಿನಿಮಾದ ಹಾಡುಗಳಿಗೂ ಹಂಸಲೇಖ ಮಟ್ಟಗಳ ಇಂಧನ. ಮಾಲಾಶ್ರೀ ಎಂಬ ದೊಡ್ಡ ತಾರೆಯನ್ನು ಚಿತ್ರರಂಗಕ್ಕೆ ನೀಡುವುದರ ಜತೆಗೆ ಸಿನಿಮಾ ದೊಡ್ಡ ಹಿಟ್‌ಆಯಿತು. ಪಿ. ವಾಸು ತಮಿಳಿನಲ್ಲಿ ನಿರ್ದೇಶಿಸಿದ್ದ 'ಚಿನ್ನ ತಂಬಿ' ಸಿನಿಮಾದ ರೀಮೇಕ್ ಇದು. ಇದನ್ನು ರೀಮೇಕ್ ಮಾಡುವಂತೆ ಸಲಹೆ ನೀಡಿದ್ದು ನಟಿ ಖುಷ್ಬೂ.

ಸಿನಿಮಾದಲ್ಲಿನ ರವಿಚಂದ್ರನ್ ಮುಗ್ಧ ಪಾತ್ರ ಹಾಗೂ 'ಎಲ್ಲಾರ ಬುರುಡೇಲೂ ಒಂದೇ ಮೆದುಳಂತೆ ಬುದ್ಧಿ ಒಂದಿಲ್ಲ' ಎಂಬ ಹಂಸಲೇಖ ತತ್ತ್ವಜ್ಞಾನದ ಸೊಗಸಾದ ಹಾಡು ಈಗಲೂ ಕಾಡುತ್ತವೆ. ಒಂದು ವೇಳೆ 'ರಾಮಾಚಾರಿ' ಗೆಲ್ಲದೇ ಇದ್ದರೆ 'ಶಾಂತಿ ಕ್ರಾಂತಿ'ಯ ಸಾಲದ ಭಾರ ಇನ್ನೂ ಹೆಚ್ಚಾಗಿಬಿಡುತ್ತಿತ್ತು.

ಅಲ್ಲಿಂದಾಚೆಗೆ ರವಿಚಂದ್ರನ್ ಪುಂಖಾನುಪುಂಕವಾಗಿ ರೀಮೇಕ್ ಸಿನಿಮಾಗಳನ್ನು ಮಾಡಿದರು. ಹಂಸಲೇಖ ರಸವತ್ತಾದ ಹಾಡುಗಳನ್ನು ಬರೆದರು. ಆಮದು ನಾಯಕಿಯರ ಒನಪು-ವಯ್ಯಾರ ಕನ್ನಡ ಚಿತ್ರರಂಗದಲ್ಲಿ ರಂಗೋಲಿ ಮೂಡಿಸುತ್ತಾ ಹೋಯಿತು. ರವಿಯ ರೊಮ್ಯಾಂಟಿಕ್ ಸ್ಪರ್ಶ ಹಾಗೂ ತಾಂತ್ರಿಕ ಜಾಣತನಕ್ಕೆ ದಂಡಿ ಉದಾಹರಣೆಗಳು ಜಮೆಯಾಗತೊಡಗಿದವು.

ಈಗಲೂ ರವಿಚಂದ್ರನ್ ಸಿನಿಮಾ ಧ್ಯಾನವನ್ನ ಬಿಟ್ಟಿಲ್ಲ. 'ನಾನು ಆಗ ಎಲ್ಲರಿಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಾಯಕನಾಗಿದ್ದೆ. ಕೊಟ್ಟ ಸಂಭಾವನೆಯನ್ನು ಅಪ್ಪನಿಗೆ ಕೊಡುತ್ತಿದ್ದೆ. ಮೊದಲಿನಿಂದಲೂ ನನಗೆ ಎಷ್ಟು ಹಣ ಬೇಕೋ ಅಷ್ಟನ್ನು ಅಪ್ಪನೇ ಕೊಡುತ್ತಿದ್ದರು. ನಾನು ನಟನಾದ ಮೇಲೆಯೂ ನನ್ನ ಸಂಭಾವನೆಯ ಹಣವನ್ನು ಅವರೇ ನನಗೆ ಖರ್ಚಿಗೆ ಬೇಕಾದಾಗ ಕೊಡುತ್ತಿದ್ದರು. ಸಿನಿಮಾದಿಂದ ಬಂದದ್ದನ್ನು ಸಿನಿಮಾಗೇ ಕೊಟ್ಟೆವು' ಎಂಬ ರವಿಚಂದ್ರನ್ ಮಾತನ್ನು ಎಂಥವರೂ ಒಪ್ಪಲೇಬೇಕು.

'ಶಾಂತಿ ಕ್ರಾಂತಿ' ಗೆದ್ದಿದ್ದಿದ್ದರೆ ಕನ್ನಡ ಚಿತ್ರರಂಗ ಎಂದೋ ಉತ್ತುಂಗಕ್ಕೆ ಏರುತ್ತಿತ್ತು ಎಂಬ ಎಸ್. ನಾರಾಯಣ್ ಅಭಿಪ್ರಾಯವೂ ಒಪ್ಪತಕ್ಕದ್ದೇ. ಒಂದು ವೇಳೆ ಆ ಸಿನಿಮಾ ಸಾಲ ಹೊರಿಸದೇ ಇದ್ದರೆ, ಈಗಿನ ರವಿಚಂದ್ರನ್ ಕೂಡ ಸಿಗುತ್ತಿರಲಿಲ್ಲವೇನೊ?

ರವಿಯ ಬದುಕಿನ ಈ ಪಥದಲ್ಲಿನ ಪ್ರಮುಖ ತಿರುವುಗಳು ಯಾವುವು?ಸಿನಿ ಸಿಪ್: ಶಿವಾಜಿ ಒಲ್ಲದ 'ಕಸ್ತೂರಿ ನಿವಾಸ' ಗೆಲ್ಲಿಸಿದ ರಾಜ್ ಅಭಿನಯಸಿನಿ ಸಿಪ್: ನಟಿ ರಮ್ಯಾ ಆಡಿದ್ದ ಜಸ್ಟ್ ಒಂದು ಕೆಟ್ಟ ಮಾತು...ನಟ ಅಂಬರೀಶ್ ಕರ್ಣ ಆದದ್ದು... ಸಿನಿ ಸಿಪ್ ಪಾಡ್‌ಕಾಸ್ಟ್‌ನಲ್ಲಿ ಕೇಳಿಸಿನಿ ಸಿಪ್: ನಟ ಅಂಬರೀಶ್ ಕರ್ಣ ಆದದ್ದು ಹೀಗೆ...
Dailyhunt
Disclaimer: This content has not been generated, created or edited by Dailyhunt. Publisher: Prajavani