1942. ಅಮೆರಿಕನ್ ಡ್ರಾಮಾ ಸಿನಿಮಾ 'ನೌ, ವಾಯೇಜರ್' ತೆರೆಕಂಡಿತು. ನಟ ಪಾಲ್ ಹೆನ್ರೀಡ್ ತನ್ನ ಎದುರಲ್ಲಿ ನಿಂತ ನಟಿ ಬೆಟ್ ಡೇವಿಸ್ ಕುರಿತು, 'ಸಿಗರೇಟು ಸೇದೋಣವೇ' ಎಂದು ಪ್ರಶ್ನಿಸುತ್ತಾನೆ. ಬೆಟ್ ಕಣ್ಣ ಇಶಾರೆಯೇ ಸಮ್ಮತಿ ಎಂಬಂತೆ ಭಾವಿಸಿ, ಎರಡು ಸಿಗರೇಟುಗಳನ್ನು ಬಾಯಿಗಿಟ್ಟು ಅವಕ್ಕೆ ಬೆಂಕಿ ಕೊಡುತ್ತಾನೆ.
ಒಂದು ಸಿಗರೇಟನ್ನು ತೆಗೆದು ಬೆಟ್ಗೆ ಕೊಟ್ಟವನೇ, ಇನ್ನೊಂದನ್ನು ತನ್ನ ಬಾಯಿಯಲ್ಲೇ ಉಳಿಸಿಕೊಳ್ಳುತ್ತಾನೆ. ಇಬ್ಬರೂ ಹೊಗೆ ಬಿಡುತ್ತಾರೆ. ಒದಕ್ಕೊಂದು ಡಿಕ್ಕಿ ಹೊಡೆಯುವ ಆ ಹೊಗೆಯೇ ಇಬ್ಬರ ರೊಮ್ಯಾಂಟಿಕ್ ಸಂಬಂಧದ ಸಂಕೇತ. ಭೌತಿಕವಾಗಿ ಸೇರಲು ಇಬ್ಬರೂ ನಿರಾಕರಿಸಿರುತ್ತಾರೆ. ಸಾಂಕೇತಿಕವಾಗಿ ಎರಡೂ ಸಿಗರೇಟುಗಳು ಇಬ್ಬರನ್ನೂ ಒಗ್ಗೂಡಿಸಿಬಿಡುತ್ತವೆ.
'ಟಾಕ್ಸಿಕ್' ಕನ್ನಡ ಸಿನಿಮಾದಲ್ಲಿ ಯಶ್ ಸದಾ ಕಾಲ ಬಾಯಿಗಿಟ್ಟ ಸಿಗರೇಟಿನ ಕಮಟು ಈಗ ಸುದ್ದಿ ಕವಲುಗಳಲ್ಲಿ ಒಂದು. ಕಳೆದ ವಾರದ 'ಸಿನಿ ಸಿಪ್'ನಲ್ಲಿ ಈ ಸಿನಿಮಾ ಉಜ್ಜಲು ಯಾಕೆ ನಾಲ್ಕು ವರ್ಷ ಬೇಕಾಯಿತು ಎಂಬ ಪ್ರಶ್ನೆ ಇಟ್ಟುಕೊಂಡು ಕ್ರಿಸ್ಟೋಫರ್ ನೋಲನ್ ಸಿನಿಮಾ ಕಟ್ಟುವಿಕೆಯ ಕನವರಿಕೆಯ ಆಳ-ಅಗಲವನ್ನು ಗಮನಿಸಿದ್ದೆವು.
ಸಿನಿ ಸಿಪ್: ರವಿಯ ಕ್ರಾಂತಿಯೂ ಭ್ರಾಂತಿಯೂ ಕಾಂತಿಯೂಸಿನಿ ಸಿಪ್: ಬೆಳ್ಳಿಪರದೆಯ ತುಂಬೆಲ್ಲ ಎಷ್ಟೊಂದು ರಾವಣರುಈ ಸಲ ಸಿಗರೇಟು ಹೊಗೆಯ ಘಾಟನ್ನು ಆಘ್ರಾಣಿಸೋಣ. 'ಬಿಡಲಾರೆ ನಾ ಸಿಗರೇಟು ಹುಡುಗಿ ನಿನ್ನಂತೆಯೇ ಅದು ಥೇಟು/ಬಿಡಬಲ್ಲೇ ನಾ ನಿನ್ನಾ ಚಿನ್ನ ಹಾಗೇ ಸಿಗರೇಟನ್ನಾ' ಎಂದು ಕವಿ ಬಿ.ಆರ್. ಲಕ್ಷ್ಮಣರಾಯರು ಧೂಮಪಾನಿಗಳಿಗೆಲ್ಲ ಕಚಗುಳಿ ಇಡುವಂಥ ಹಾಡನ್ನು ಕೊಟ್ಟು ದಶಕಗಳೇ ಆಗಿವೆ. 1991ರಲ್ಲಿ ತೆರೆಕಂಡ 'ಹಾಲು ಸಕ್ಕರೆ' ಸಿನಿಮಾದಲ್ಲಿಯೂ ಈ ಹಾಡನ್ನು ಬಳಸಿಕೊಂಡಿದ್ದರು. ಅದಕ್ಕೂ ಹಲವು ದಶಕಗಳ ಮೊದಲೇ ಸಿನಿಮಾ ತೆರೆಮೇಲೆ ಸಿಗರೇಟಿನ ಹೊಗೆ ಆವರಿಸಿಕೊಳ್ಳತೊಡಗಿತ್ತು. ಅದಕ್ಕೆ 'ನೌ, ವಾಯೇಜ್' ಸಿನಿಮಾದ ದೃಶ್ಯ ಮುನ್ನುಡಿಯಷ್ಟೆ.
ಆ ಸಿನಿಮಾ ತೆರೆಕಂಡ ವರ್ಷವೇ 'ಕ್ಯಾಸಾಬ್ಲಾಂಕಾ' ಹಾಲಿವುಡ್ ಚಿತ್ರದಲ್ಲಿ ಹಂಫ್ರಿ ಬೊಗಾರ್ಟ್ ಸಿಗರೇಟನ್ನು ಸ್ಟೈಲಿಷ್ ಆಗಿ ಸೇದುವ ಸನ್ನಿವೇಶ ಗಮನಸೆಳೆಯಿತು. ಹಂಫ್ರಿ ಬಿಟ್ಟ ಹೊಗೆಯು ಸಿನಿಮಾ ನಾಯಕಿಯನ್ನಷ್ಟೇ ಸೆಳೆಯಲಿಲ್ಲ; ಅಸಂಖ್ಯ ಅಭಿಮಾನಿಗಳಲ್ಲೂ ಅಮಲು ತುಂಬಿತು. ಪುರುಷ ಅಹಂಕಾರ ಅಥವಾ ತಾನೇ ಸಮರ್ಥ ಎಂದು ಆತನ ಭಾವವನ್ನು ಅಭಿವ್ಯಕ್ತಿಸುವ ಸಂಕೇತದಂತೆ ಸಿಗರೇಟು ಸೇವನೆ ಸಿನಿಮಾಗಳ ಭಾಗವಾದದ್ದು ಹೀಗೆ.
ಕೈಯಲ್ಲಿ ಗನ್ನು, ಬಾಯಿಯಲ್ಲಿ ಸಿಗರೇಟು ತುಂಡು ಎನ್ನುವುದು ಥ್ರಿಲ್ಲರ್ಗಳ ಪಾಲಿಗಷ್ಟೇ ಮೊದಮೊದಲು ಸೀಮಿತಗೊಂಡಿತ್ತು. ಕ್ರಮೇಣ ಅದು ನಾಯಕನ 'ಸ್ಟೈಲ್ ಸ್ಟೇಟ್ಮೆಂಟ್' ಎಂಬಂತೆ ಬಿಂಬಿತವಾಗತೊಡಗಿತು.
ಸಿಗರೇಟ್ ಸೇವನೆಯು ಈಗಲೂ ಸ್ಟೈಲ್ ಸ್ಟೇಟ್ಮೆಂಟ್ ಎಂಬ ಭಾವನೆಯನ್ನು ನೀವು ಒಪ್ಪಿವಿರೇ? ಯಾವುದಕ್ಕೂ ಪ್ರತಿಕ್ರಿಯಿಸಿ. vishakan@prajavani.co.inಸಿಗರೇಟ್ನ 'ಕಿಸ್ಮತ್'
ಭಾರತೀಯ ಚಿತ್ರರಂಗಕ್ಕೆ ಸಿಗರೇಟ್ ಪ್ರವೇಶಿಸಲು ಹೆಚ್ಚು ಕಾಲ ಬೇಕಾಗಲಿಲ್ಲ. 1943ರಲ್ಲಿ ಅಶೋಕ್ ಕುಮಾರ್ 'ಕಿಸ್ಮತ್' ಹಿಂದಿ ಸಿನಿಮಾದಲ್ಲಿ ಸಿಗರೇಟು ಬಾಯಿಗಿಟ್ಟರು. ಚಿತ್ರದಲ್ಲಿ ಅವರು ಪ್ರತಿನಾಯಕ. ಅಪರಾಧ ಹಾಗೂ ಅಪರಾಧಿಗಳನ್ನು ಮುಚ್ಚಟೆ ಮಾಡಿದ ಕಥಾವಸ್ತುವಿನ ಸಿನಿಮಾ ಎಂದು ವಿಮರ್ಶಕರು ಟೀಕಿಸಿದರೂ ಅದು ದೊಡ್ಡ ಹಿಟ್ ಆಯಿತು. ಪಾಶ್ಚಿಮಾತ್ಯ ಶೈಲಿಯ ದಿರಿಸು ತೊಟ್ಟ ನಟರ ಬಾಯಲ್ಲಿ ಸಿಗರೇಟು ಇದ್ದರೆ ಅದು ಪ್ರೇಕ್ಷಕರನ್ನು ಹಿಡಿದಿಡುತ್ತದೆ ಎಂಬ ನಂಬಿಕೆಯನ್ನು ನಿರ್ದೇಶಕರಲ್ಲಿ ಬಿತ್ತಿದ್ದು 'ಕಿಸ್ಮತ್' ಯಶಸ್ಸು.
ಅದರ ಮುಂದಿನ ದಶಕದ ಹಿಂದಿ ಸಿನಿಮಾಗಳನ್ನು ಗಮನಿಸೋಣ. 1950ರ ದಶಕದಲ್ಲಿ ಬಂದ 'ಹೌರಾ ಬ್ರಿಜ್', 'ನೈಟ್ ಕ್ಲಬ್', 'ಇನ್ಸ್ಪೆಕ್ಟರ್', 'ಸಿಐಡಿ' ಎಲ್ಲವೂ ಹಾಲಿವುಡ್ ಥ್ರಿಲ್ಲರ್ ಸಿನಿಮಾಗಳ ಆತ್ಮವನ್ನೇ ಒಳಗೊಂಡಿದ್ದವು. ಅವುಗಳಲ್ಲೆಲ್ಲ ಧೂಮಲೀಲೆ ಇತ್ತು.
ಸಿನಿ ಸಿಪ್: ರಾಜ್‌ಕುಮಾರ್ ಯೋಗದಿಂದ ಆಲಿಯಾ ವ್ಯಾಯಾಮದವರೆಗೆ...ಸಿನಿ ಸಿಪ್: ಕನ್ನಡ ಚಿತ್ರರಂಗದ ಆರಂಭಿಕ ದಿನಗಳ ಸಂಭಾವನೆ ಹೇಗಿತ್ತು?ದೇವಾನಂದ್ ಬ್ರ್ಯಾಂಡ್ ಅಂಬಾಸಿಡರ್
ಈ ಸಿನಿಮಾಗಳು ತೆರೆ ಕಾಣುವುದಕ್ಕೂ ಮೊದಲು ದೇವಾನಂದ್ ಅಭಿನಯದ 'ಟ್ಯಾಕ್ಸಿ ಡ್ರೈವರ್' ಸಿನಿಮಾದಲ್ಲಿ ಸಿಗರೇಟಿಗೆ ಹೊಸ ಪಾತ್ರಪೋಷಣೆ ಸಿಕ್ಕಿತೆನ್ನಬೇಕು. ಟ್ಯಾಕ್ಸಿ ಚಾಲಕನೊಬ್ಬ ಸಿಗರೇಟನ್ನು ಸದಾ ಸೇದುವ ವರಸೆ ಈ ಸಿನಿಮಾದಲ್ಲಿ ಕಂಡಿತು. ಹೊಗೆ ಬಿಡುವುದು ಪುರುಷರ ಹೆಮ್ಮೆ ಎಂಬಂತೆ ಆ ಸಿನಿಮಾದಲ್ಲಿ ಸಿಗರೇಟು ಪ್ರಮುಖ ಪಾತ್ರದಂತೆಯೇ ಕಂಡಿತು. ರಾಜ್ಕಪೂರ್ ಆಗಲೀ, ದಿಲೀಪ್ ಕುಮಾರ್ ಆಗಲೀ ದೇವಾನಂದ್ ಅವರಂತೆ ಸಿಗರೇಟನ್ನು 'ಸ್ಟೈಲ್ ಸ್ಟೇಟ್ಮೆಂಟ್' ಆಗಿ ತೆರೆಮೇಲೆ ತರುವ ಆಲೋಚನೆಯನ್ನೇ ಅದುವರೆಗೆ ಮಾಡಿರಲಿಲ್ಲ.
'ಕೂಲಿ' ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಬಾಯಲ್ಲಿ ಬೀಡಿ. 'ದೀವಾರ್', 'ಶೋಲೆ'ಯಲ್ಲೂ ಘಾಟು. 'ಬಾಜಿಗರ್' ಚಿತ್ರದ ನಾಯಕ-ಪ್ರತಿ ನಾಯಕ ಎರಡೂ ಆಗಿದ್ದ ಶಾರುಕ್ ಖಾನ್ ಕೂಡ ಕಡಿಮೆ ಹೊಗೆ ಬಿಡಲಿಲ್ಲ. 'ಖಳ್ನಾಯಕ್' ಸಿನಿಮಾದಲ್ಲಿ ಸಂಜಯ್ ದತ್ ಧಾಡಸೀತನಕ್ಕೆ ಸಿಗರೇಟ್ ಸಾಥ್ ನೀಡಿತು.
ಹಿಂದಿ ಚಿತ್ರರಂಗದ ಯಾವ ನಟ-ನಟಿ ಸಿಗರೇಟ್ ಸೇದುವುದು ನಿಮಗೆ ಹಿಡಿಸಿತ್ತು ಅಥವಾ ಹಿಡಿಸಿರಲಿಲ್ಲ. ಬರೆದು ಕಳುಹಿಸಿ.
ಸಿನಿ ಸಿಪ್: ಲೀಲಾವತಿಯ ಜಿಡ್ಡು ಚರ್ಮ; ಜಗ್ಗೇಶ್ ವಿದೇಶದಿಂದ ತಂದ ಲೋಷನ್ಸಿನಿ ಸಿಪ್: 'ಕಣ್ಣಪ್ಪ'ನ ಕಾರಣಕ್ಕೆ 'ರಾಜ್‌ಕುಮಾರ್' ಆದ ಮುತ್ತುರಾಜ್'ಬುಲ್ಬುಲ್ ಮಾತಾಡಕ್ಕಿಲ್ವಾ'
ರಜನಿಕಾಂತ್ ಅವರಂತೂ ಸಿಗರೇಟನ್ನು ಕೈಯಿಂದ ಬಾಯಿಗೆ ಎಸೆದುಕೊಳ್ಳುವ ತಮ್ಮ ಶೈಲಿಯಿಂದಲೇ ಮನೆ ಮಾತಾದರು. 'ನಾಗರಹಾವು' ಸಿನಿಮಾದಲ್ಲಿ ಅಂಬರೀಷ್ ಪ್ರವೇಶವಾದದ್ದೇ ಬೈಸಿಕಲ್ ಏರಿ, 'ಬುಲ್ಬುಲ್ ಮಾತಾಡಕ್ಕಿಲ್ವಾ' ಎನ್ನುತ್ತಾ ಬಾಯಿಗೆ ಸಿಗರೇಟ್ ಎಸೆದುಕೊಳ್ಳುವ ಮೂಲಕ. 'ಅಂತ' ಸಿನಿಮಾದಲ್ಲಿ ಕನ್ವರ್ಲಾಲ್ ಆದಾಗಲೂ ಸಿಗರೇಟ್ ಸೇದುವ ಅವರ ಖಡಕ್ ಮುಖವನ್ನು ನೋಡಿ ಪ್ರೇಕ್ಷಕರು ಶಿಳ್ಳೆ ಹೊಡೆದಿದ್ದರು.
'ಪ್ರತಿಧ್ವನಿ' ಸಿನಿಮಾದಲ್ಲಿ ಪಾತ್ರಕ್ಕೆ ಅಗತ್ಯವಿತ್ತು ಎಂಬ ಕಾರಣಕ್ಕೆ ಸಿಗರೇಟ್ ಸೇದಿದ್ದ ರಾಜ್‌ಕುಮಾರ್, ಆಮೇಲೆ ತೆರೆಮೇಲೆ ಧೂಮಪಾನ ಮಾಡಲೇಬಾರದು ಎಂಬ ಸಂಕಲ್ಪ ಮಾಡಿದ ಸಂಗತಿ ನಮಗೆ ಗೊತ್ತೇ ಇದೆ. ಆದರೆ, ಅವರ ಪುತ್ರ ಶಿವರಾಜ್ಕುಮಾರ್ ಅವರು 'ಓಂ' ಸಿನಿಮಾದಲ್ಲಿ ಪ್ರೇಕ್ಷಕರ ಶಿಳ್ಳೆ ಗಿಟ್ಟಿಸಿದ ದೃಶ್ಯ ನೆನಪಿದೆಯಲ್ಲವೇ? ಮಾವನ ಮಗ ನಾಯಕಿಗೆ ಕೊಟ್ಟ ಉಡುಗೊರೆ ಸೀರೆಯನ್ನು ಲೈಟರ್ನಿಂದ ಸುಡುತ್ತಾರೆ. ಅದೇ ಲೈಟರ್ನಿಂದ ಸಿಗರೇಟ್ಗೆ ಅವರು ಬೆಂಕಿ ಹೊತ್ತಿಸಿದ್ದೇ, 'ಐ ಲವ್ ಯೂ ಯೂ ಮಸ್ಟ್ ಲವ್ ಮಿ' ಎಂಬ ಕೋರಸ್ ಮೊಳಗುತ್ತದೆ. ನಾಯಕಿ ಪ್ರೇಮಾ ಆತಂಕದಲ್ಲಿ ನಿಂತಿರುವಾಗ ನಾಯಕನ ಉಘೇಗಾಗಿಯೇ ಸಿಗರೇಟಿನ ಹೊಗೆ ಮೂಡುತ್ತದೆ. ಪುರುಷಾಹಂಕಾರದ ಸಂಕೇತ ಈ ಸಿಗರೇಟ್ ಎನ್ನುವುದಕ್ಕೆ ಇದು ಇನ್ನೊಂದು ನಿದರ್ಶನ.
ರಜನಿಕಾಂತ್ ಒಂದೊಮ್ಮೆ ತಾವು ಹಚ್ಚಿದ ಸಿಗರೇಟನ್ನು ವಿಷ್ಣುವರ್ಧನ್ ಬಾಯಿಗೆ ಇಡುತ್ತಾರೆ. ಅದನ್ನು ವಿಷ್ಣು ಸ್ಟೈಲ್ ಆಗಿ ಸೇದಿ, ಹೊಗೆ ಬಿಡುತ್ತಾರೆ. ಸಿನಿಮಾಗೆ ಹೊರತೇ ಆದ ಈ ದೃಶ್ಯವನ್ನು ಯಾರೋ ಚಿತ್ರೀಕರಿಸಿದ್ದರು. ಅದು ವರ್ಷಗಳ ನಂತರ ಸಾಮಾಜಿಕ ಮಾಧ್ಯಮದಲ್ಲೂ ಹರಿದಾಡಿತ್ತು.
ಸಿನಿ ಸಿಪ್: ಸುದೀಪ್ 'ನೆಪೋಟಿಸಂ' ವರ್ತನೆಯ ನೆರಳಲ್ಲಿ ಕೆಲವು ಹಿತಕಥೆಗಳು...ಸಿನಿ ಸಿಪ್: ನಟಿ ರಮ್ಯಾ ಆಡಿದ್ದ ಜಸ್ಟ್ ಒಂದು ಕೆಟ್ಟ ಮಾತು...ಸಿನಿ ಸಿಪ್: ಶಿವಾಜಿ ಒಲ್ಲದ 'ಕಸ್ತೂರಿ ನಿವಾಸ' ಗೆಲ್ಲಿಸಿದ ರಾಜ್ ಅಭಿನಯನಟ ಅಂಬರೀಶ್ ಕರ್ಣ ಆದದ್ದು... ಸಿನಿ ಸಿಪ್ ಪಾಡ್‌ಕಾಸ್ಟ್‌ನಲ್ಲಿ ಕೇಳಿಭಂಗಿಯ ಸೇದಬೇಕಣ್ಣ
'ಬೂತಯ್ಯನ ಮಗ ಅಯ್ಯು' ಸಿನಿಮಾದಲ್ಲಿ ಹಾಸ್ಯ ದೃಶ್ಯವೊಂದು ಇದೆ. ಅದರಲ್ಲಿ ನಟ ದಿನೇಶ್, 'ಭಂಗಿಯ ಸೇದಬೇಕಣ್ಣ... ಅದರ ಗುಂಗಲ್ಲಿ ಮೈಯನ್ನ ಮರೆಯಬೇಕಣ್ಣ' ಎನ್ನುತ್ತಾರೆ. ಸಹನಟ, 'ಅಂಗವೆಂಬುದೆ ಒಂದು ಚಿಲುಮೆಯ ಕೊಳವೆ, ಇಂಗದ ಆಸೆ ತುಂಬಿದೆ ಒಳಗೆ... ಭಂಗಿಯ ಸೇದಬೇಕಣ್ಣ' ಎಂದು ಇನ್ನೊಂದು ಸಾಲನ್ನು ಹೇಳುತ್ತಾರೆ. 'ರಂಗಿಂದ ಅದಕೆ ಬೆಂಕಿಯ ಹಚ್ಚಿ ಪುಕಪುಕ್ಕ ಪುಕಪುಕ್ಕ ಎಳೆದಾಡೋ ನೆಚ್ಚಿ... ಭಂಗಿಯ ಸೇದಬೇಕಣ್ಣ' ಎಂದು ಇನ್ನೊಬ್ಬ ಪಾತ್ರಧಾರಿ ಅದನ್ನು ನಟ ಬಾಲಕೃಷ್ಣ ಅವರಿಗೆ ದಾಟಿಸುತ್ತಾರೆ. 'ಬೂತಯ್ಯನೆಂಬೊ ಭಂಗಿಯ ಸೊಪ್ಪ ಭಸ್ಮವ ಮಾಡಕೆ ಬೆಂಕಿ ಹಚ್ಚಪ್ಪ/ಒಗ್ಗಟ್ಟಿನಿಂದ ಎಲ್ಲರೂ ಕೂಡಿ... ಮಗ್ಗಲು ಮುರಿಬೇಕು ಸಮಯವಾ ನೋಡಿ...' ಎಂದು ಬಾಲಕೃಷ್ಣ ಒಂದು ಸಂಚನ್ನು ಇಡೀ ತಂಡಕ್ಕೆ ದಾಟಿಸುತ್ತಾರೆ. ಸಿಂಗಳಯ್ಯನ ಪಿತೂರಿ ಸನ್ನಿವೇಶಕ್ಕೆ ಧೂಮಲೀಲೆಯು ಒಂದು ಬಗೆಯಲ್ಲಿ ರೂಪಕವಾಗಿ ಇಲ್ಲಿ ಬಳಕೆಯಾಗಿದೆ. ಸಂಚು ಹೂಡುವವರು ಸೇದುವ ಭಂಗಿಗೆ ಇಲ್ಲಿ ನಾಯಕನ ಪುರುಷಾಹಂಕಾರಕ್ಕೆ ಹೊರತೇ ಆದ ಅರ್ಥವಿದೆ.
'ಹೆಣ್ಣೇ ನಿನಗೇನು ಬಂಧನ' ಎಂಬ ಇನ್ನೊಂದು ಕನ್ನಡ ಸಿನಿಮಾ ಇದೆ. ಅದರಲ್ಲಿ ಸೀಕಲು ರೊಟ್ಟಿ ಮಾಡಿಕೊಟ್ಟ ಉಮಾಶ್ರೀ ಪಕ್ಕ ಕುಳಿತ ಎನ್,ಎಸ್. ರಾವ್, 'ಒಂದು ದಿನವಾದರೂ ಅನ್ನ ಮಾಡಿ ಹಾಕೋಕೆ ಆಗಲ್ವಾ?' ಎಂದು ಕೇಳುತ್ತಾರೆ. ಕುಡಿತದ ಅಮಲಿನಲ್ಲಿ ಅದಾಗಲೇ ಇರುವ ಅವರಿಗೆ ಉಮಾಶ್ರೀ ಉತ್ತರ ಕೊಡುತ್ತಾರೆ; ಅದೂ ಸಿಗರೇಟು ಸೇದುತ್ತಾ. ಅದಾಗಲೇ ಉಮಾಶ್ರೀ ಕೂಡ ಪಾನಮತ್ತರಾಗಿರುತ್ತಾರೆ. ಪುರುಷಾಹಂಕಾರಕ್ಕೆ ಹೆಣ್ಣಿನ ಕಿಡಿ ತಾಕಿಸುವ ಈ ದೃಶ್ಯವನ್ನು ತಮಾಷೆಗೆ ಎಂದು ಬರೆದಿದ್ದರೂ ಒಂದು ರೀತಿ ಮಜವಾಗಿದೆ.
'ಅಂಜದ ಗಂಡು' ಸಿನಿಮಾದಲ್ಲಿ ಸಪ್ಲಯರ್ ಮೇಲೆ ಹಲ್ಲೆ ನಡೆಸುವ ಗೂಂಡಾಗಳಿಗೆ ಬಡಿಯುವ ಮೊದಲು ರವಿಚಂದ್ರನ್ ಬಾಯಲ್ಲಿ ಸಿಗರೇಟು ಇರುತ್ತದೆ. 'ಸಿಪಾಯಿ' ಸಿನಿಮಾದಲ್ಲೂ ಅವರ ಪುರುಷಾಹಂಕಾರದ ಪ್ರತೀಕವಾಗಿ ಬೀಡಿ ತುಂಡು ಕಾಣುತ್ತದೆ.
ಶಂಕರ್ ನಾಗ್ 'ನೋಡಿ ಸ್ವಾಮಿ ನಾವಿರೋದು ಹೀಗೆ' ಎಂದು ಸಿಗರೇಟ್ಗೆ ಬೆಂಕಿ ಕೊಟ್ಟಿದ್ದವರೇ. 'ಡೆವಿಲ್... ಸೂರ್ಯಂಗೆ ತುಂಬ ಹೊತ್ತು ಗ್ರಹಣ ಹಿಡಿಯಲ್ಲ... ನಾನು ಬರ್ತಿದೀನಿ ಚಿನ್ನ' ಎಂದು ದರ್ಶನ್ ಸಿಗರೇಟ್ಗೆ ಬೆಂಕಿ ಕೊಡುತ್ತಲೇ ಡೈಲಾಗ್ ಹೊಡೆದಿದ್ದರು. ಇವತ್ತು ಅವರು ಜೈಲಿನಲ್ಲಿ ತಮ್ಮ ಪುರುಷಾಹಂಕಾರದ ಸ್ಮರಣೆ ಮಾಡುತ್ತಿರಬೇಕು.
2012ರಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಸಚಿವರು ಸಿನಿಮಾಗಳಲ್ಲಿ ಸಿಗರೇಟ್ ಸೇದುವ ದೃಶ್ಯಗಳು ಕಡಿಮೆಯಾಗಬೇಕು ಎಂದಾಗ, ದೃಶ್ಯ ಮಾಧ್ಯಮದ ಸೃಜನಶೀಲತೆ ಮುಕ್ಕಾಗುವ ಕುರಿತು ಅನೇಕರು ತಂತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಕುಡಿತದ ಅಥವಾ ಧೂಮಪಾನದ ದೃಶ್ಯ ಬಂದಾಗಲೆಲ್ಲ ಎಚ್ಚರಿಕೆಯ ಒಕ್ಕಣೆ ಹಾಕುವುದನ್ನು ಕಡ್ಡಾಯಗೊಳಿಸಿದ ಮೇಲಂತೂ ಈ ಸಂಕಟ ಇನ್ನೂ ಹೆಚ್ಚಾಯಿತು. ನಿರ್ಮಾಪಕ ಕೆ. ಮಂಜು ಅವರು ಅದಕ್ಕೆ ನಿರ್ಮಾಪಕರ ಜೇಬಿನಿಂದ ಇನ್ನಷ್ಟು ಹಣ ಖರ್ಚಾಗುತ್ತದೆ ಎಂದು ಅಲವತ್ತುಕೊಂಡಿದ್ದರು.
'ಹುಚ್ಚ' ಸಿನಿಮಾದಲ್ಲಿ ನಟ ಸುದೀಪ್ ತಮ್ಮ ನೋವನ್ನೆಲ್ಲ ಸಿಗರೇಟ್ ಹೊಗೆ ಬಿಡುವ ಮೂಲಕವೇ ಹೊರಹಾಕಿದ್ದರು. ಕೆಂಪಾದ ಅವರ ಹನಿಗಣ್ಣಿಗೆ, ಯಾವುದೋ ಸೇತುವೆಯ ಕೆಳಗೆ ಅಂಗಾತ ಮಲಗಿ ಅವರು ತೋರಿಸಿದ್ದ ಧೂಮಲೀಲೆಗೆ ಹುಡುಗಿಯರೂ ಫಿದಾ ಆಗಿದ್ದರು.
'ಕೆಜಿಎಫ್ 2' ಸಿನಿಮಾದಲ್ಲಿ ಬ್ಯಾರಲ್ನಿಂದ ಸಿಗರೇಟ್ಗೆ ಯಶ್ ಬೆಂಕಿ ಹಚ್ಚುವ ಸನ್ನಿವೇಶವಿದೆ. ಕರ್ನಾಟಕ ಆರೋಗ್ಯ ಇಲಾಖೆಯು ಈ ದೃಶ್ಯಕ್ಕೆ ತಕರಾರು ತೆಗೆದಿತ್ತು. ಕ್ಯಾನ್ಸರ್ ರೋಗಿಗಳಿಗೆ ನೆರವು ನೀಡುವ ಸಂಸ್ಥೆಯು ಧೂಮಪಾನವನ್ನು ಸ್ಟೈಲ್ ಎಂಬಂತೆ ಯಶ್ ತೋರಿಸಿದ್ದಾರೆ, ಅದಕ್ಕೆ ತಡೆ ನೀಡಬೇಕು ಎಂದು ತಕರಾರು ತೆಗೆದು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ಅದಾಗಲೇ ಸಿನಿಮಾ ಬಿಡುಗಡೆಯಾಗಿ ಹಲವು ದಿನಗಳು ಉರುಳಿದ್ದರಿಂದ ಅರ್ಜಿಯ ವಿಚಾರಣೆ ನಡೆಸಲು ಹೈಕೋರ್ಟ್ ಒಪ್ಪಲಿಲ್ಲ.
ಗುಡು ಗುಡಿಯಾ ಸೇದಿ ನೋಡು
'ಶಿಶುನಾಳ ಷರೀಫ' ಸಿನಿಮಾದಲ್ಲಿ ಗುರು ಗೋವಿಂದರು ಷರೀಫರಿಗೆ 'ನಾರಾಯಣಿ ಸೇದಬೇಕು' ಎಂದು ಉಪದೇಶ ಮಾಡುತ್ತಾರೆ. ಇದರ ಗೂಢಾರ್ಥ ಬೇರೆಯದೇ ಇದೆ. ಭಗವಂತನ ಧ್ಯಾನದ ಅಮಲಿಗೆ ಅವರು ಸೇದುವುದನ್ನು ಸಮೀಕರಿಸುತ್ತಾರೆ. 'ಗುಡು ಗುಡಿಯಾ ಸೇದಿ ನೋಡು/ ಮನಸೆಂಬ ಸಂಚಿಯ ಬಿಚ್ಚಿ ದಿನ ದಿನವೂ ಮೋಹ ಅಂಬೋ ಭಂಗಿಯ ಕೊಚ್ಚಿ/ನೆಲವೆಂಬ ಚಿಲುಮೆ ಹಚ್ಚಿ/ ಬುದ್ಧಿ ಎನುವಂಥ ಕೆಂಡವ ಮೇಲಲಿ ಮುಚ್ಚಿ' ಎಂಬ ತತ್ತ್ವಪದವನ್ನೇ ಷರೀಫರು ಆಮೇಲೆ ಬರೆದರು.
ಸಿನಿಮಾ ಮಾಧ್ಯಮವನ್ನು ತಮ್ಮ ವ್ಯಾಕರಣದ ಅಭಿವ್ಯಕ್ತಿಗೆ ಸಶಕ್ತವಾಗಿ ಬಳಸಿದ್ದ ಸತ್ಯಜಿತ್ ರೇ ಅವರು 'ನಾಯಕ್' ಸಿನಿಮಾದಲ್ಲಿ ಉತ್ತಮ್ ಕುಮಾರ್ ಅವರಿಂದ ಸಿಗರೇಟ್ ಸೇದಿಸಿದ್ದರು. ಅದು ಸಿನಿಮಾದೊಳಗಿನ ಚಿತ್ರವೊಂದರ ದೃಶ್ಯದ 'ರೊಮ್ಯಾಂಟಿಕ್ ಹೀರೊ' ಅರಿಂಧಮ್ನನ್ನು ಬಿಂಬಿಸುವ ಪ್ರಯೋಗವಾಗಿತ್ತು. ಶ್ರೀಮಂತನ ಬಾಯಿಗೆ ಚುಟ್ಟಾ ಕೊಟ್ಟು, ಮಾಮೂಲಿ ಬ್ಯಾಂಕರ್ ಬಾಯಿಗೆ ಸಾಮಾನ್ಯ ಸಿಗರೇಟನ್ನು ಇಟ್ಟು, ಅಲ್ಲಿಯೂ ಸಾಮಾಜಿಕ ಸ್ತರಗಳ ಸಂಕೇತವನ್ನು ದಾಟಿಸಿದವರು ರೇ.
'ಚಮೇಲಿ' ಹಿಂದಿ ಸಿನಿಮಾದಲ್ಲಿ ಫಳಫಳ ಹೊಳೆಯುವ ಕರೀನಾ ಕಪೂರ್ ಸೇದಿದ ಸಿಗರೇಟ್ ಮರೆಯಲು ಸಾಧ್ಯವೇ. ಸಿಗರೇಟ್ ಹೊಗೆಯ ಅಮಲಿಗಿಂತ ಕರೀನಾ ನೋಟದ ಅಮಲೇ ಆಗ ಆವರಿಸಿಕೊಂಡಿತ್ತು.
'ಓಂಕಾರ' ಹಿಂದಿ ಚಿತ್ರದಲ್ಲಿ 'ಬೀಡಿ ಜಲೈಲೇ ಜಿಗರೇ ಸೇ ಪಿಯಾ' ಎಂಬ ಗೀತೆಗೆ ಬಿಪಾಶಾ ಬಸು ಮಾಡಿರುವ ನೃತ್ಯದ ಅಮಲು ಇನ್ನೊಂದು ಬಗೆಯಲ್ಲಿ ಪುರುಷನ ಧೂಮಲೀಲೆಯನ್ನು ಅರುಹುತ್ತದೆ.
'ಅರ್ಜುನ್ ರೆಡ್ಡಿ' ತೆಲುಗು ಚಿತ್ರದಲ್ಲಿ ವಿಜಯ್ ದೇವರಕೊಂಡ ಸೇದುವ ಸಿಗರೇಟ್ಗಳಿಗೆ ಲೆಕ್ಕವಿಲ್ಲ. ಹಾಕುವ ಪೆಗ್ಗಳೂ ಅಗಣಿತ. ಅಂತಹುದರಲ್ಲಿ ಯಶ್ ಕೈಲಿ ಇರುವ ಸಿಗರೇಟ್ ಯಾವ ಮಹಾ ಎಂದು ಅವರ ಅಭಿಮಾನಿಗಳು ಸಮಾಧಾನ ಪಟ್ಟುಕೊಳ್ಳಬಹುದು.
ನಿಮ್ಮಿಷ್ಟದ ಸಿನಿಮಾ ಧೂಮಲೀಲೆ ಯಾವುದು? ಬರೆದು ತಿಳಿಸಿ. vishakan@prajavani.co.in
