ಇತ್ತೀಚೆಗೆ ಮೈಸೂರಿನ ಸಮೀಪದ ಬೆಳಗೊಳ ರಸ್ತೆಯಲ್ಲಿರುವ ಬೆಳವಲ ಫೌಂಡೇಷನ್‌ನ ತೋಟಕ್ಕೆ ಭೇಟಿ ನೀಡಿದ್ದೆ. ಫೌಂಡೇಷನ್ ಸಂಸ್ಥಾಪಕ ತೋಟಗಾರಿಕೆ ತಜ್ಞ ಡಾ.ಕೆ.ರಾಮಕೃಷ್ಣಪ್ಪ ಅವರು ಸುಮಾರು ಎಂಟು ಎಕರೆ ಪ್ರದೇಶದಲ್ಲಿ 14 ಸುಸ್ಥಿರ ಕೃಷಿ ಮಾದರಿ ತಾಕುಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಈ ತಾಕುಗಳನ್ನೆಲ್ಲ ಸುತ್ತು ಹಾಕುತ್ತಿದ್ದಾಗ, ಶ್ರೀಗಂಧ, ರಕ್ತಚಂದನ ಗಿಡಗಳ ಸಮೂಹವಿರುವ ಎರಡು ತಾಕುಗಳು ನನ್ನ ಗಮನ ಸೆಳೆದವು.
ಒಂದು ತಾಕಿನಲ್ಲಿ ಶ್ರೀಗಂಧ, ರಕ್ತಚಂದನದ ಮರಗಳ ಜತೆಗೆ, ಪಪಾಯ, ವಿದೇಶಿ ಹಣ್ಣಿನ ಮರಗಳಿದ್ದವು. ಅಲ್ಲಲ್ಲೇ ಸಪೋಟ ಮರಗಳು ಕಾಣುತ್ತಿದ್ದವು. ಜತೆಗೆ, ಇನ್ನೂ ಕೆಲವು ಹಣ್ಣಿನ ಗಿಡಗಳಿರುವುದನ್ನು ಗಮನಿಸಿದೆ. ಕುತೂಹಲ ತಡೆಯಲಾರದೇ, 'ಶ್ರೀಗಂಧದ ನಡುವೆ ಇಷ್ಟೆಲ್ಲ ಬೆಳೆಗಳೇಕೆ? ಈ ಬೆಳೆ ವಿನ್ಯಾಸದ ವೈಶಿಷ್ಟ್ಯವೇನು'? - ಪಕ್ಕದಲ್ಲಿದ್ದ ರಾಮಕೃಷ್ಣಪ್ಪ ಅವರನ್ನು ಅಚ್ಚರಿಯಿಂದಲೇ ಕೇಳಿದೆ.
'ನೋಡಿ, ಶ್ರೀಗಂಧ, ಅರೆ ಪರಾವಲಂಬಿ ಸಸ್ಯ (Semi- parasitic). ಇದು ತನ್ನ ಬೆಳವಣಿಗೆಗೆ ಅಗತ್ಯವಾದ ಕೆಲ ಪೋಷಕಾಂಶಗಳನ್ನು ಇತರ ಸಸ್ಯಗಳ ಬೇರುಗಳಿಂದ ಪಡೆಯುತ್ತದೆ. ಅದಕ್ಕಾಗಿಯೇ ಎರಡು ತಾಕುಗಳಲ್ಲಿ ಈ ಬೆಳೆಗಳನ್ನು ಆತಿಥೇಯ (ಸಂಗಾತಿ/Host) ಗಿಡಗಳಾಗಿ ಬೆಳೆಸಿದ್ದೇವೆ' ಎಂಬುದು ಅವರ ವಿವರಣೆ. ಹಿಂದೆ ಶ್ರೀಗಂಧದ ಕೃಷಿಗೆ ಎದುರಾಗುವ ಕಷ್ಟಗಳ ಕುರಿತು ಲೇಖನ ಮಾಡುವಾಗ, ಶ್ರೀಗಂಧದ ನಡುವೆ, ಗ್ಲಿರಿಸೀಡಿಯಾ, ಸೀಬೆಯಂತಹ ಮರಗಳನ್ನು ಆತಿಥೇಯ ಗಿಡಗಳಾಗಿ ಬೆಳೆದಿದ್ದೇವೆಂದರು ರೈತರು ಹೇಳಿದ್ದು ಈಗ ನೆನಪಾಯಿತು.
ಆ ವಿವರಣೆ ಕೇಳುತ್ತಾ ವೈವಿಧ್ಯಮಯ ಬೆಳೆಗಳೊಂದಿಗೆ ಶ್ರೀಗಂಧ ಮರಗಳನ್ನು ಬೆಳೆಸಿದ್ದ ಎರಡು ತಾಕುಗಳನ್ನು ನಿಧಾನವಾಗಿ ಸುತ್ತಾಡಲು ಶುರು ಮಾಡಿದೆ. ಅದರಲ್ಲಿ ಒಂದು ತಾಕಿನಲ್ಲಿ ಮಳೆ ಆಶ್ರಿತವಾಗಿ ಬೆಳೆದಿದ್ದರೆ, ಮತ್ತೊಂದು ತಾಕಿನಲ್ಲಿ ಅರೆ ನೀರಾವರಿ ಆಶ್ರಿತವಾಗಿ ಶ್ರೀಗಂಧವನ್ನು ಬೆಳೆದಿದ್ದಾರೆ.

ಶ್ರೀಗಂಧದ ಮರಗಳ ನಡುವೆ ಬೆಳೆಸಿರುವ ಬಳ್ಳಿ ತರಕಾರಿಗಳು ಮತ್ತು ಖಾಲಿ ಜಾಗದಲ್ಲಿ ಬೆಳೆದಿರುವ ಕ್ಯಾರೆಟ್ ಸಂಗ್ರಹಿಸುತ್ತಿರುವುದು
'ಮಳೆ ಆಶ್ರಿತ'ದ ಮಾದರಿ
18 ಗುಂಟೆ ವಿಸ್ತೀರ್ಣದ ಈ ತಾಕಿನಲ್ಲಿ ಶ್ರೀಗಂಧ ಮರಗಳು ಪ್ರಮುಖವಾಗಿ ಕಂಡವು. ಮರಗಳು ಸಾಲಿನಿಂದ ಸಾಲಿಗೆ 12 ಅಡಿ ಅಂತರ. ಮರದಿಂದ ಮರಕ್ಕೆ 15 ಅಡಿ ಅಂತರ. ಸಾಲು ಮತ್ತು ಮರಗಳ ನಡುವೆ ಶಿವನೆ, ಹೊನ್ನೆ, ಬೀಟೆಯಂತಹ ಮರಗಳನ್ನು ಬೆಳೆಸುತ್ತಿದ್ದಾರೆ. ನೆರಳು- ಬೆಳಕಿಗೆ ಅನುಗುಣವಾಗಿ ಒಂದು ಸಾಲಿನಲ್ಲಿ ಮಾವು, ಗೋಡಂಬಿ, ನಾಟಿ ಸೀತಾಫಲ, ಸೀಬೆಯಂತಹ ಹಣ್ಣಿನ ಬೆಳೆಗಳನ್ನು ಮಿಶ್ರವಾಗಿಸಿ ಅಂತರ ಬೆಳೆಗಳಾಗಿ ಬೆಳೆಸಿದ್ದಾರೆ. ಇವೆಲ್ಲಕ್ಕೂ ಮಳೆನೀರೇ ಆಧಾರ.
ಮಳೆಯ ಪ್ರಮಾಣ ಮತ್ತು ಅವಧಿಗೆ ಅನುಗುಣವಾಗಿ ಉಳಿದಿರುವ ಖಾಲಿ ಜಾಗದಲ್ಲಿ ಪ್ರತಿ ವರ್ಷ ಜೋಳ, ರಾಗಿ, ನವಣೆ, ಸಾಮೆಯಂತಹ ಸಿರಿಧಾನ್ಯಗಳು, ತೊಗರಿ, ಅವರೆ, ಹೆಸರು, ಉದ್ದು, ಅಲಸಂದೆ ಬೆಳೆಗಳನ್ನು ಬೆಳೆಯುತ್ತಾರಂತೆ. ಅಷ್ಟೇ ಅಲ್ಲ, ಹೀರೆಕಾಯಿ, ಹಾಗಲಕಾಯಿ ಹಾಗೂ ತುಪ್ಪದ ಹೀರೆಕಾಯಿಯಂತಹ ಬಳ್ಳಿ ತರಕಾರಿಗಳನ್ನು ಬೆಳೆದು ಅವುಗಳನ್ನು ಗಂಧದ ಮರಗಳ ಸುತ್ತ, ಕೋಲುಗಳನ್ನು ಕಟ್ಟಿ, ಅದರ ಮೇಲೆ ಹಬ್ಬಿಸುತ್ತಾರಂತೆ. ಈ ಮಾತಿಗೆ ಗಂಧದ ಮರದ ಸುತ್ತಾ ಉಳಿದುಕೊಂಡಿದ್ದ ತರಕಾರಿ ಬಳ್ಳಿಗಳ್ಳಿಗಳು ಸಾಕ್ಷಿಯಾಗಿದ್ದವು.
ಅನ್ನದ ಬಟ್ಟಲು: ಕೆಂಪು ಸುಂದರಿ ಈ ಬಾರ್ಬಡೋಸ್ ಚೆರ್ರಿ ! ಅನ್ನದ ಬಟ್ಟಲು: ಮಣ್ಣು - ನೀರಿನ ಆಪ್ತರಕ್ಷಕ ಲಾವಂಚಅರೆ ನೀರಾವರಿ ಆಶ್ರಿತ ಮಾದರಿ
ಇದು 18 ಗುಂಟೆ ವಿಸ್ತೀರ್ಣವಿರುವ ತಾಕು. ಇಲ್ಲಿಯೂ ಶ್ರೀಗಂಧ ಪ್ರಮುಖ ಬೆಳೆ. ಅಲ್ಲಲ್ಲಿ ರಕ್ತಚಂದನವೂ ಇವೆ. ಮಳೆಯಾಶ್ರಿತ ಮಾದರಿಯಲ್ಲಿರುವಂತೆ ಅಷ್ಟೇ ಅಂತರದಲ್ಲಿ ಶ್ರೀಗಂಧ ಮರಗಳನ್ನು ಬೆಳೆಸಿದ್ದಾರೆ. ಜತೆಗೆ ಪಪಾಯ ಮರಗಳಿವೆ. ಖಾಲಿ ಜಾಗದಲ್ಲಿ ಪೀನಟ್ ಬಟರ್, ಬೆಣ್ಣೆಹಣ್ಣು (ಅವಕಾಡೊ), ಕೆಂಪು ಸೀತಾಫಲ ಮರಗಳು ಇವೆ. ಈ ಮರಗಳ ಕೆಳಗೆ ಖಾಲಿ ಇರುವ ಜಾಗದಲ್ಲಿ ವಿವಿಧ ಸೊಪ್ಪು ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಋತುಮಾನಕ್ಕೆ ಅನುಗುಣವಾಗಿ ಹೀರೆಕಾಯಿ, ಸೋರೆಕಾಯಿ, ಬಳ್ಳಿ ಬೀನ್ಸ್, ಮೀಟರ್ ಅಲಸಂದೆಯಂತಹ ಬಳ್ಳಿ ತರಕಾರಿಗಳನ್ನು ಬೆಳೆದು ಶ್ರೀಗಂಧದ ಮರಗಳಿಗೆ ಹಬ್ಬಿಸುತ್ತಾರೆ. ಅಷ್ಟೇ ಅಲ್ಲ, ನೆಲದೊಳಗೆ ಬೆಳೆಯುವ ಅರಿಶಿಣ ಮತ್ತು ಶುಂಠಿಯಂತಹ ಗೆಡ್ಡೆ ಬೆಳೆಗಳನ್ನು ನಾಟಿ ಮಾಡಿದ್ದಾರೆ. ಈ ತಾಕಿನಲ್ಲಿರುವ ಗಿಡಗಳಿಗೆ ಅಗತ್ಯವಿರುವಾಗ ಕೊಳವೆ ಬಾವಿಯಿಂದ ನೀರು ಪೂರೈಸುತ್ತಾರೆ. ಈ ಎರಡೂ ತಾಕುಗಳಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆಯುವ ತರಕಾರಿ ಹಣ್ಣುಗಳನ್ನು ಮೈಸೂರಿನಲ್ಲಿ ವಾರಕ್ಕೊಮ್ಮೆ ನಡೆಯುವ ಸಾವಯವ ಸಂತೆಯಲ್ಲಿ ಮಾರಾಟ ಮಾಡುತ್ತಾರೆ.
ಅನ್ನದ ಬಟ್ಟಲು: 'ಪಿಎಂಡಿಎಸ್' ಕನಿಷ್ಠ ವೆಚ್ಚದಲ್ಲಿ ಗರಿಷ್ಠ ಗೊಬ್ಬರಅನ್ನದ ಬಟ್ಟಲು: ಹಲಸಿನ ಕಾಯಿ ಹಿಟ್ಟಿನಲ್ಲಿದೆ 'ಮಧುಮೇಹ' ನಿಯಂತ್ರಣದ ಗುಟ್ಟುಒಟ್ಟಾರೆ ಎರಡೂ ಪದ್ಧತಿಗಳಲ್ಲಿನ ಸಾಮಾನ್ಯ ಅಂಶ ಮತ್ತು ವಿನ್ಯಾಸ ಹೀಗಿದೆ; ಶ್ರೀಗಂಧ ಎತ್ತರವಾಗಿ ಬೆಳೆಯುತ್ತದೆ, ಇದು ಪ್ರಮುಖ ಬೆಳೆ. ಅದರ ಕೆಳಭಾಗದಲ್ಲಿ ಮಧ್ಯಮ ಎತ್ತರವಾಗಿ ಬೆಳೆಯುವ ಹಣ್ಣಿನ ಮರಗಳಾಗುವ ಗಿಡಗಳಿವೆ. ನಂತರ ಪೊದೆಗಳ ರೂಪದ ಔಷಧೀಯ ಹಾಗೂ ಸಂಬಾರ ಬೆಳೆಗಳಂತಹವನ್ನು ಬೆಳೆಯಲಾಗಿದೆ. ನೆಲಮಟ್ಟದಲ್ಲಿ ತರಕಾರಿಗಳು ಮತ್ತು ದ್ವಿದಳ ಧಾನ್ಯಗಳು, ಮರಗಳಿಗೆ ಆಸರೆಯಾಗಿ ಬಳ್ಳಿ ತರಕಾರಿಗಳಿದ್ದರೆ ನೆಲದಡಿಯಲ್ಲಿ ಗೆಡ್ಡೆ -ಗೆಣಸುಗಳನ್ನು ಬೆಳೆದಿದ್ದಾರೆ.
'ಈ ಬೆಳೆ ವಿನ್ಯಾಸದಿಂದ ಭೂಮಿ, ಸೂರ್ಯನ ಬೆಳಕು, ನೀರು ಮತ್ತು ಮಣ್ಣಿನ ಪೋಷಕಾಂಶಗಳ ಸಮರ್ಪಕ ಬಳಕೆ ಸಾಧ್ಯವಾಗುತ್ತದೆ - ಇದು ಅರಣ್ಯ ಕೃಷಿಯಲ್ಲಿ ಶ್ರೀಗಂಧ ಮರಗಳ ಬೆಳೆಸುವ ವಿನ್ಯಾಸ' ಎಂದು ವಿವರಿಸಿದರು ರಾಮಕೃಷ್ಣಪ್ಪ.
ಅಂತರ ಬೆಳೆಗಳಿಂದ ಆದಾಯ
ಹೀಗೆ ಮಾಹಿತಿ ಆಲಿಸುತ್ತಾ ಒಂದೊಂದೇ ಮರಗಳಲ್ಲಿ ಹಣ್ಣುಗಳನ್ನು ಅಚ್ಚರಿಯಿಂದ ನೋಡುತ್ತಿದ್ದೆ. ಅಲ್ಲಲ್ಲೇ ಮರಗಳಲ್ಲಿ ಬಿಟ್ಟಿದ್ದ ಮಸಾಲೆ ಸೀಬೆ ಹಣ್ಣು, ಪೀನಟ್ ಬಟರ್, ವಾಟರ್ ಆಯಪಲ್ ಹಣ್ಣುಗಳನ್ನ ರಾಮಕೃಷ್ಣಪ್ಪನವರು ಕೊಯ್ದು ಕೊಟ್ಟರು. ಶ್ರೀಗಂಧದ ಗಿಡಕ್ಕೆ ತರಕಾರಿ ಬಳ್ಳಿಗಳನ್ನು ಹಬ್ಬಿಸಲು ಮಾಡಿದ್ದ ಸಿದ್ಧತೆಯನ್ನು ತೋರಿಸಿದರು. ಆ ಕಡೆ ಪಪಾಯ ಮರಗಳಲ್ಲಿ ಹಣ್ಣುಗಳು ಮುಗಿದಿತ್ತು, ಕಾಯಿಗಳಷ್ಟೇ ಇದ್ದವು. ಪೀನಟ್ ಬಟರ್ ಗಿಡ ಕಾಯಿಗಳಿಂದ ತುಂಬಿತ್ತು. ನೆಲದಲ್ಲಿ ಇಣುಕು ನೋಡುತ್ತಿದ್ದ ಚಿಗುರನ್ನು ಗುರುತಿಸಿ ಇದೇ ಅರಿಶಿಣ, ಇದೇ ಶುಂಠಿ, ಇದೇ ಕ್ಯಾರೆಟ್ ಎಂದು ಗುರುತಿಸುತ್ತಾ, ಗೆಡ್ಡೆಗಳನ್ನು ನೆಲದಿಂದ ಬಗೆದು ತೋರಿಸುತ್ತಿದ್ದರು.
ಅರಣ್ಯ ಕೃಷಿಯ ಮಾತು - ಕತೆ ಮುಂದುವರಿಸುತ್ತಾ ಶ್ರೀಗಂಧ ಮರಗಳ ನಡುವೆ ಇಷ್ಟೆಲ್ಲ ಬೆಳೆಗಳನ್ನು ಯಾಕೆ ಬೆಳೆಯ ಬೇಕೆಂಬುದನ್ನು ಅವರು ಇನ್ನಷ್ಟು ವಿವರವಾಗಿ ಬಿಡಿಸಿ ಬಿಡಿಸಿ ಹೇಳುತ್ತಿದ್ದರು. 'ಒಂದು ಶ್ರೀಗಂಧ ಮರದಿಂದ ಆದಾಯ ಆರಂಭವಾಗಲು 18 ರಿಂದ 20 ವರ್ಷದವರೆಗೂ ಕಾಯಬೇಕು. ಆಗ ಮರ ಕಡಿದು ಮಾರಿದರೆ ಉತ್ತಮ ಆದಾಯ ಬರುತ್ತದೆ. ಆದರೆ, ಇಷ್ಟು ದೀರ್ಘಾವಧಿಯಲ್ಲಿ ರೈತರು ಮರಗಳನ್ನೇ ಬೆಳೆಸಿಕೊಂಡು ಕುಳಿತರೆ ಆದಾಯ ಪಡೆಯುವುದು ಹೇಗೆ ? ಹಾಗಾಗಿ ಹೀಗೆ ಕಾಯುವ ಬದಲು ಶ್ರೀಗಂಧ ಮರಗಳ ಮಧ್ಯೆ ದವಸ- ಧಾನ್ಯಗಳು, ಕಾಳುಬೆಳೆಗಳು, ತರಕಾರಿಗಳು, ಹಣ್ಣುಗಳು, ಔಷಧೀಯ ಸಸ್ಯಗಳು, ಸಂಬಾರ ಬೆಳೆಗಳು ಹಾಗೂ ಗೆಡ್ಡೆ-ಗೆಣಸುಗಳನ್ನು ಬಹುಅಂತಸ್ತಿನ ಬೆಳೆ ಪದ್ಧತಿ ಅನುಸರಿಸಿ ಬೆಳೆಯಬೇಕು. ಇದರಿಂದ ರೈತರಿಗೆ ಕೆಲವು ಬೆಳೆಗಳು ಅಲ್ಪಾವಧಿ ಯಲ್ಲಿ, ಇನ್ನೂ ಕೆಲವು ಮಧ್ಯಮಾವಧಿ ಮತ್ತು ದೀರ್ಘಾವಧಿಯಲ್ಲಿ ಆದಾಯ ನೀಡುತ್ತವೆ. ನೀವು ಈಗ ತಿಂದಿರಲ್ಲ, ನೋಡಿ ಖುಷಿಪಟ್ಟರಲ್ಲ, ಆ ಎಲ್ಲ ತರಕಾರಿ ಹಣ್ಣುಗಳನ್ನು ಮಾರಾಟ ಮಾಡಬಹುದು, ಆದಾಯ ಪಡೆಯಬಹುದು' ಎಂದೂ ಅವರು ವಿವರಿಸಿದರು.
ಅನ್ನದ ಬಟ್ಟಲು | ಬರದ ಭೀತಿ ಬಿಡಿ, ನೇರಳೆ ಹಣ್ಣಿನ ಮೌಲ್ಯವರ್ಧನೆಯತ್ತ ಗಮನವಿಡಿಅನ್ನದ ಬಟ್ಟಲು: ಉಣ್ಣುವ ಅನ್ನವೇ ವಿಷವಾಗುತ್ತಿರುವಾಗ…ಈ ಬೆಳೆ ವೈವಿಧ್ಯದ ಮಾದರಿಯಲ್ಲಿ ಬೆಳೆಯುವ ದ್ವಿದಳ ಧಾನ್ಯಗಳು ಭೂಮಿಗೆ ಸಾರಜನಕ ಸ್ಥಿರೀಕರಿಸುತ್ತವೆ. ಗಿಡ- ಮರಗಳು ಉದುರಿಸುವ ಎಲೆಗಳು ಮಣ್ಣಿಗೆ ಜೀವ ತುಂಬುವ ಹಸಿರೆಲೆಗೊಬ್ಬರ ವಾಗುತ್ತವೆ. ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣ ವೃದ್ಧಿಯಾಗುತ್ತದೆ. ಪಕ್ಷಿ, ಚಿಟ್ಟೆಯಂತಹ ಜೀವಿಗಳ ಪ್ರಪಂಚ ವಿಸ್ತರಿಸುತ್ತದೆ. ಹಾಗಾಗಿ ಇದೊಂದು ರೈತರ ಆಹಾರ ಮತ್ತು ಆರ್ಥಿಕ ಭದ್ರತೆಯನ್ನು ಒಟ್ಟಿಗೆ ಸಾಧಿಸುವ ಅತ್ಯುತ್ತಮ ಸುಸ್ಥಿರ ಕೃಷಿ ವ್ಯವಸ್ಥೆಯಾಗಿದೆ ಎಂಬುದು ರಾಮಕೃಷ್ಣಪ್ಪ ಅವರ ಅನುಭವದ ಮಾತು.
ಶ್ರೀಗಂಧ ರಕ್ಷಣೆಯೂ ಸಾಧ್ಯ
ಶ್ರೀಗಂಧದ ಮರಗಳ ಅಂತರ ಹೆಚ್ಚಿಸಿ, ನಡುವೆ ತರಕಾರಿ, ಹಣ್ಣಿನ ಗಿಡಗಳನ್ನು ಬೆಳೆಸಿದರೆ, ಮೇಲ್ನೋಟಕ್ಕೆ ಗಂಧದ ಮರಗಳು ಕಾಣಿಸುವುದಿಲ್ಲ. ಈಗ ನಮ್ಮ ತಾಕುಗಳನ್ನೇ ಗಮನಿಸಿ. ತರಕಾರಿ - ಹಣ್ಣಿನ ಗಿಡಗಳನಡುವೆ ಶ್ರೀಗಂಧ ಗುರುತಿಸುವುದು ನಿಮಗೆ ಕಷ್ಟವಾಗುತ್ತದೆ. ಹಾಗಾಗಿ ಮರಗಳ್ಳರಿಗೆ ಶ್ರೀಗಂಧದ ಮರ ಹುಡುಕುವುದು ಕಷ್ಟ. ಒಂದು ಪಕ್ಷ ಹುಡುಕಿದರೂ, ಬೆಳೆಗಳ ನಡುವೆ ಮರವನ್ನು ಸುಲಭ ವಾಗಿ ಕೊಯ್ದು ತೆಗೆದುಕೊಂಡು ಹೋಗುವುದಕ್ಕೆ ಸಮಯ ಹಿಡಿಯುತ್ತದೆ. ಹೀಗೆ ಮರಗಳನ್ನು ಕಳ್ಳರಿಂದ ರಕ್ಷಿಸಿಕೊಳ್ಳಲು ಇದೊಂದು ಉತ್ತಮ ಮಾದರಿ ಎನ್ನುವುದು ರಾಮಕೃಷ್ಣಪ್ಪ ಅವರ ಆಭಿಪ್ರಾಯ.
ಒಳನೋಟ: ಶ್ರೀಗಂಧ ಕೃಷಿಗೆ ನೂರು ಕಷ್ಟತುಮಕೂರು: ಶ್ರೀಗಂಧ ಮರಕ್ಕೆ 'ಸಿಮೆಂಟ್ ಕಾವಲು' ಹಾಕಿದ ರೈತಕೊನೆಯದಾಗಿ..
ಅರಣ್ಯ ಕೃಷಿ ಎಂದರೆ ಕೇವಲ ಕಾಡಿನ ಮರಗಳನ್ನು ಬೆಳೆಸುವುದಷ್ಟೇ ಅಲ್ಲ; ಮರಗಳೊಂದಿಗೆ ಆಹಾರ ಬೆಳೆಗಳು, ಹಣ್ಣಿನ ಮರಗಳು, ಮೇವು, ಔಷಧೀಯ ಸಸ್ಯಗಳು ಹಾಗೂ ಇತರ ಕೃಷಿ ಬೆಳೆಗಳನ್ನು ವೈಜ್ಞಾನಿಕವಾಗಿ ಸಮನ್ವಯಗೊಳಿಸಿ ಬೆಳೆಸುವ ಸುಸ್ಥಿರ ಕೃಷಿ ಪದ್ಧತಿ. ಈ ವ್ಯವಸ್ಥೆಯು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ, ನೀರಿನ ಸಂರಕ್ಷಣೆಗೆ ನೆರವಾಗುತ್ತದೆ, ಜೀವವೈವಿಧ್ಯವನ್ನು ವೃದ್ಧಿಸುತ್ತದೆ ಹಾಗೂ ರೈತರಿಗೆ ನಿರಂತರ ಮತ್ತು ಬಹುಮುಖ ಆದಾಯವನ್ನು ಒದಗಿಸುತ್ತದೆ. ಆದ್ದರಿಂದ ಅರಣ್ಯ ಕೃಷಿಯನ್ನು ಭವಿಷ್ಯದ ಹವಾಮಾನ-ಸ್ನೇಹಿ ಕೃಷಿ ಮಾದರಿಯೆಂದು ಪರಿಗಣಿಸಲಾಗುತ್ತಿದೆ.
ಅಂದ ಹಾಗೆ, ನೀವು ಶ್ರೀಗಂಧದ ಕೃಷಿ ಮಾಡುತ್ತಿದ್ದರೆ, ಶ್ರೀಗಂಧದ ಜತೆಗೆ ಅತಿಥೇಯ ಬೆಳೆಗಳಾಗಿ ಏನೆಲ್ಲ ಬೆಳೆಯುತ್ತಿದ್ದೀರಿ? ಆ ಬೆಳೆಗಳಿಂದ ನಿಮಗೆ ಹೇಗೆಲ್ಲ ಅನುಕೂಲವಾಗಿದೆ. ನಿಮ್ಮ ಅನುಭವವನ್ನು ಫೋಟೊ ಸಹಿತ ಹಂಚಿಕೊಳ್ಳಿ .
****
ಬೆಳವಲ ಫೌಂಡೇಷನ್‌ನಲ್ಲಿರುವ ಶ್ರೀಗಂಧ ಕೃಷಿಯ ಮಾದರಿ ತಾಕುಗಳ ಕುರಿತ ಹೆಚ್ಚಿನ ಮಾಹಿತಿಗಾಗಿ: +919620999203 ಸಂಪರ್ಕಿಸಬಹುದು.

