ವರ್ಷ ವರ್ಷ ಮಳೆಯ ಅನಿಶ್ಚಿತತೆ ಹೆಚ್ಚಾಗುತ್ತಲೇ ಇದೆ. ಈ ವರ್ಷವಂತೂ ಮಳೆ ಪ್ರಮಾಣ ತೀರಾ ಕಡಿಮೆ. ಬೆಳೆಗಳು ಒಣಗುತ್ತಿವೆ. ಅಂತರ್ಜಲ ಕೊರತೆಯೂ ಬಾಧಿಸುತ್ತಿದೆ. ಇಂಥ ಹವಾಮಾನ ಏರುಪೇರಾಗುತ್ತಿರುವ ಸನ್ನಿವೇಶದಲ್ಲಿ ರೈತರು ಯಾವ ಬೆಳೆಯ ಮೇಲೆ ನಂಬಿಕೆ ಇಟ್ಟು ಬೆಳೆಯಬೇಕು.. ?
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಅನ್ನದ ಬಟ್ಟಲು: ಕೆಂಪು ಸುಂದರಿ ಈ ಬಾರ್ಬಡೋಸ್ ಚೆರ್ರಿ !
ಒಂದು ಸಾಲಿನಲ್ಲಿಬಾರ್ಬಡೋಸ್ ಚೆರ್ರಿ ಹಣ್ಣಿನ ಕೃಷಿಯು ಕಡಿಮೆ ನಿರ್ವಹಣೆಯಲ್ಲಿ ರೈತರಿಗೆ ಉತ್ತಮ ಆದಾಯ ಮತ್ತು ಪೌಷ್ಟಿಕಾಂಶವನ್ನು ಒದಗಿಸುವ ಭರವಸೆಯ ಬೆಳೆಯಾಗಿದೆ.
ಪ್ರಮುಖ ಪ್ರಶ್ನೋತ್ತರ
ಬಾರ್ಬಡೋಸ್ ಚೆರ್ರಿ ಎಂದರೇನು?
ಇದು ಉಷ್ಣವಲಯದಲ್ಲಿ ಬೆಳೆಯುವ ಅಸಿರೋಲಾ ಅಥವಾ ವೆಸ್ಟ್ ಇಂಡಿಯನ್ ಚೆರ್ರಿ ಎಂದೇ ಕರೆಯಲ್ಪಡುವ ಪೌಷ್ಟಿಕಾಂಶ ಭರಿತ ಹಣ್ಣಿನ ಬೆಳೆಯಾಗಿದೆ.
ಇದನ್ನು ಬೆಳೆಯಲು ಯಾವ ರೀತಿಯ ಹವಾಮಾನ ಸೂಕ್ತ?
ಹವಾಮಾನ ಏರುಪೇರಾದರೂ ಈ ಗಿಡಗಳು ಸೊಗಸಾಗಿ ಬೆಳೆಯುತ್ತವೆ. ಕೆಂಪು ಮಣ್ಣು, ಮರಳು ಮಿಶ್ರಿತ ಗೋಡು ಮಣ್ಣು ಮತ್ತು ನೀರು ಬಸಿದು ಹೋಗುವ ಭೂಮಿ ಈ ಬೆಳೆಗೆ ಅತ್ಯಂತ ಸೂಕ್ತವಾಗಿದೆ.
ಈ ಹಣ್ಣಿನ ಕೃಷಿಯಿಂದ ಎಷ್ಟು ಇಳುವರಿ ಸಿಗುತ್ತದೆ?
ಆರು ಅಥವಾ ಏಳು ವರ್ಷದ ಒಂದು ಗಿಡವು ವರ್ಷಕ್ಕೆ ಮೂರು ಸೀಸನ್‌ಗಳಲ್ಲಿ ಒಟ್ಟು 40 ರಿಂದ 60 ಕೆ.ಜಿಯಷ್ಟು ಹಣ್ಣನ್ನು ನೀಡಬಲ್ಲದು.
ಈ ಹಣ್ಣಿನ ಮೌಲ್ಯವರ್ಧನೆ ಹೇಗೆ ಸಾಧ್ಯ?
ಈ ಹಣ್ಣಿನಿಂದ ಜ್ಯೂಸ್, ಜ್ಯಾಮ್ ಮತ್ತು ಹಣ್ಣಿನ ಪುಡಿ ತಯಾರಿಸಿ ಮಾರಾಟ ಮಾಡುವುದರಿಂದ ರೈತರು ಉತ್ತಮ ಆದಾಯ ಪಡೆಯಬಹುದು.
ಇದರಲ್ಲಿರುವ ಆರೋಗ್ಯದ ಲಾಭಗಳೇನು?
ಈ ಹಣ್ಣು ಕಿತ್ತಳೆ ಮತ್ತು ನೆಲ್ಲಿಕಾಯಿಗಿಂತಲೂ ಹೆಚ್ಚು ವಿಟಮಿನ್-ಸಿ ಹೊಂದಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
ಇಂಥದ್ದೊಂದು ಪ್ರಶ್ನೆ ನನ್ನನ್ನು ತೀವ್ರವಾಗಿ ಕಾಡುತ್ತಿರುವಾಗ, ಸಾವಯವ ಕೃಷಿಕ ವಿಶ್ವೇಶ್ವರ ಸಜ್ಜನರು ಹಿಂದೊಮ್ಮೆ ಹೇಳಿದ ಮಾತು ನೆನಪಾಯಿತು; 'ಪ್ರಕೃತಿ, ಹವಾಮಾನ ನಮ್ಮ ಕೈಯಲ್ಲಿಲ್ಲ. ಹಾಗಾಗಿ, ಬದಲಾಗುವ ಹವಾಮಾನಕ್ಕೆ ತಕ್ಕಂತೆ ಬೆಳೆ ಬೆಳೆಯಬೇಕು, ಬದುಕಬೇಕು'. ಅಂದು ಹೇಳಿದ ಈ ಮಾತಿಗೆ ಸಜ್ಜನರು ತಮ್ಮ ತೋಟದಲ್ಲಿ ಬೆಳೆಸಿದ್ದ ಬಾರ್ಬಡೋಸ್ ಚೆರ್ರಿ ಹಣ್ಣಿನ ಮರಗಳನ್ನು ಮತ್ತು ಆ ಮರಗಳ ಹಣ್ಣಿನಿಂದ ಪಡೆದ ಉಪ ಆದಾಯವನ್ನು ಉದಾಹರಣೆ ನೀಡಿ ವಿವರಿಸಿದ್ದರು.
ಅನ್ನದ ಬಟ್ಟಲು: ಮಣ್ಣು - ನೀರಿನ ಆಪ್ತರಕ್ಷಕ ಲಾವಂಚಅನ್ನದ ಬಟ್ಟಲು: ಹಲಸಿನ ಕಾಯಿ ಹಿಟ್ಟಿನಲ್ಲಿದೆ 'ಮಧುಮೇಹ' ನಿಯಂತ್ರಣದ ಗುಟ್ಟುಉಷ್ಣವಲಯದ ಹಣ್ಣು
ಇದು ಕೇಕ್, ಐಸ್.ಕ್ರೀಂ ಮೇಲೆ ಸಿಕ್ಕಿಸುವ ಚೆರ್‍ರಿ ಹಣ್ಣಲ್ಲ. ಉಷ್ಣವಲಯದಲ್ಲಿ ಬೆಳೆಯುವ ಹಣ್ಣು ಬಾರ್ಬಡೋಸ್ ಚೆರ್‍ರಿ. ಇದನ್ನು ವೆಸ್ಟ್ ಇಂಡಿಯನ್ ಚೆರ‍್ರಿ, ಅಸಿರೋಲಾ ಎಂಬ ಹೆಸರಿನಿಂದ ಗುರುತಿಸುತ್ತಾರೆ. ಈ ಹಣ್ಣಿನ ಮೂಲ ಮಧ್ಯ ಮತ್ತು ದಕ್ಷಿಣ ಅಮೆರಿಕ. ಈಗ ಏಷ್ಯಾ, ಆಫ್ರಿಕಾ ಖಂಡದ ರಾಷ್ಟ್ರಗಳಲ್ಲೂ ಬೆಳೆಯುತ್ತಾರೆ. ಇದು ಭಾರತಕ್ಕೆ ಪರಿಚಯವಾಗಿ ಬಹಳ ಕಾಲವಾಯಿತು. ಕನ್ನಡ ನಾಡಿನ ತೋಟಗಳಲ್ಲಿ ನೆಲೆಯೂರಿ ದಶಕಗಳೇ ಕಳೆದಿವೆ.
ಬಾರೆ ಹಣ್ಣಿನ ಗಾತ್ರದ ಆಕರ್ಷಕವಾಗಿರುವ ಕೆಂಪು ಬಣ್ಣದ ಹಣ್ಣಿನ ರುಚಿ ಸ್ವಲ್ಪ ಹುಳಿ. ವಿಟಮಿನ್ ಸಿ ಅಂಶವಿರುವ ಕಾರಣದಿಂದ ಈ ರುಚಿ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಅರಭಾವಿಯ ತೋಟಗಾರಿಕಾ ಕಾಲೇಜಿನ ನರ್ಸರಿಯಲ್ಲಿ ಗೂಟಿ ಕಸಿ ಕಟ್ಟಿ ಗಿಡ ಮಾಡಿ ರೈತರಿಗೆ ಕೊಡುತ್ತಿದ್ದಾರೆ. ಕರ್ನಾಟಕದ ಕೆಲವು ರೈತರಿಗೆ ಈ ಚೆರ್‍ರಿ ಹಣ್ಣಿನ ಗಿಡ ಬೆಳೆಸಲು ಪ್ರೇರಣೆಯಾಗಿದ್ದು ಇದೇ ಕಾಲೇಜು.
ಕಡಿಮೆ ನೀರು, ನಿರ್ವಹಣೆಯೂ…
ಈ ಚೆರ್‍ರಿ ಹಣ್ಣಿನ ಗಿಡ ಬೆಳೆಸಲು ಕೆಂಪು ಮಣ್ಣು, ಮರಳು ಮಿಶ್ರಿತ ಗೋಡು ಮಣ್ಣು ಹಾಗೂ ನೀರು ಬಸಿದು ಹೋಗುವಂತಹ ಭೂಮಿ ಸೂಕ್ತ ಎಂದು ತಜ್ಞರು ಹೇಳುತ್ತಾರೆ. 'ವಾರ್ಷಿಕ 450 ಮಿ.ಮೀ ಮಳೆ ಬೀಳುವ ಕೂಡ್ಲಿಗಿಯಂತಹ ಪ್ರದೇಶದಲ್ಲೂ ಈ ಹಣ್ಣಿನ ಗಿಡಗಳು ಸೊಗಸಾಗಿ ಬೆಳೆದು ಹಣ್ಣು ಕೊಡುತ್ತಿವೆ. ಇದಕ್ಕೆ ಇದೇ ತಾಲ್ಲೂಕಿನಲ್ಲಿರುವ ಹೂಲಿಕೆರೆಯ ನನ್ನ ತೋಟದಲ್ಲಿ ಈ ಚೆರ್‍ರಿ ಗಿಡಗಳು ಸೊಂಪಾಗಿ ಬೆಳೆದಿರು ವುದೇ ಸಾಕ್ಷಿ' ಎನ್ನುತ್ತಾರೆ ಸಾವಯವ ಕೃಷಿಕ ವಿಶ್ವೇಶ್ವರ ಸಜ್ಜನ್.
ಅಂದ ಹಾಗೆ, 'ಅನ್ನದ ಬಟ್ಟಲು' ಸರಣಿಯ ಮೊದಲ ಲೇಖನದಲ್ಲಿ ಸಜ್ಜನ್ ಅವರ 'ಅರಣ್ಯ ಕೃಷಿ' ಪರಿಚಯಿಸುವಾಗ, ಅವರು ಬಾರ್ಬಡೋಸ್ ಚೆರ್ರಿ ಹಣ್ಣಿನ ಗಿಡ ಬೆಳೆಸಿರುವುದನ್ನು ಉಲ್ಲೇಖಿಸಿದ್ದೆ, ನಿಮಗೆ ನೆನಪಿರಬಹುದು.
ಅನ್ನದ ಬಟ್ಟಲು: ಮಳೆ ಕೊರತೆಯ ಹುಲಿಕೆರೆಯಲ್ಲಿ 'ಹಣ್ಣಿನ ತೋಟ' ಅರಳಿದ್ದು ಹೇಗೆ?ಅಂತರ ಬೆಳೆಯಲ್ಲಿ 12 ಮರಗಳು
ಸಜ್ಜನ್ ಅವರು ಆರೇಳು ವರ್ಷಗಳ ಹಿಂದೆ ಅರಭಾವಿ ತೋಟಗಾರಿಕೆ ಕಾಲೇಜಿನ ನರ್ಸರಿಯಿಂದ 12 ಬಾರ್ಬಡೋಸ್ ಚೆರ್ರಿ ಹಣ್ಣಿನ ಗಿಡಗಳನ್ನು ತಂದು ತೋಟದಲ್ಲಿ ನಾಟಿ ಮಾಡಿದ್ದಾರೆ. ಹಣ್ಣಿನ ಗಿಡಗಳ ನಡುವೆ 15 ಅಡಿ ಅಂತರದಲ್ಲಿ ಇವುಗಳನ್ನು ಬೆಳೆದಿದ್ದಾರೆ. 'ಆಗ ಮಳೆಗಾಲದಲ್ಲಿ ನಾಟಿ ಮಾಡಿದ್ದೆ. ನಾಟಿ ಮಾಡಿದ ಎರಡು ವರ್ಷಕ್ಕೆ ಫಸಲು ಶುರುವಾಯಿತು. ವರ್ಷದ ಮೂರು ಕಾಲದಲ್ಲಿ ಹಣ್ಣು ಬಿಡುತ್ತದೆ. ವರ್ಷ ಹೆಚ್ಚಾದಂತೆ ಹಣ್ಣಿನ ಇಳುವರಿಯೂ ಹೆಚ್ಚಾಗುತ್ತದೆ' ಎಂಬುದು ವಿಶ್ವೇಶ್ವರ ಅವರ ಅನುಭವದ ನುಡಿ.
ಸಾಮಾನ್ಯವಾಗಿ ಹಣ್ಣಿನ ಗಿಡಗಳನ್ನು ಬೆಳೆಸುವಂತೆ ಚೆರ್‍ರಿ ಹಣ್ಣಿನ ಗಿಡಗಳನ್ನು ಗೊಬ್ಬರ ಗೋಡು ಕೊಟ್ಟು ನಾಟಿ ಮಾಡಿದರೆ ಸಾಕು. ಆರಂಭದಲ್ಲಿ ಆಗಾಗ್ಗೆ ನೀರು ಕೊಡಬೇಕು. ಹನಿ ನೀರಾವರಿ ಇದ್ದರೆ ಒಳ್ಳೆಯದು. ಬೇಸಿಗೆಯಲ್ಲಿ ನೀರು ಕೊಡುವುದು ಅಗತ್ಯ. ಬೆಳವಣಿಗೆ ಹಂತದಲ್ಲಿ ಕೊಂಬೆಗಳನ್ನು ಸವರಿದರೆ ( ಪ್ರೂನಿಂಗ್), ಐದಾರು ಅಡಿ ಎತ್ತರದವರೆಗೆ ಬೆಳೆದು ಹರಡಿಕೊಳ್ಳುತ್ತದೆ. ಇದರಿಂದ ಹಣ್ಣು ಕೊಯ್ಯುವುದಕ್ಕೆ ಸುಲಭವಾಗುತ್ತದೆ ಎನ್ನುತ್ತಾರೆ ಸಜ್ಜನ್.
ಹಣ್ಣಿನ ಬೆಳೆಗೆ ರೋಗ ರುಜಿನ, ಕೀಟಬಾಧೆ ವಿರಳ. ಹಣ್ಣಿನ ನೊಣ, ಎಲೆ ಕಲೆ ರೋಗ, ಬೇರು ಕೊಳೆ ಹಾಗೂ ಕೆಲವು ಶಿಲೀಂಧ್ರ ರೋಗಗಳು ಬರಬಹುದು. ತೋಟದಲ್ಲಿ ಸ್ವಚ್ಛತೆ, ಉತ್ತಮ ಗಾಳಿಯಾಡುವಿಕೆ ಹಾಗೂ ನೀರು ನಿಲ್ಲದಂತೆ ನೋಡಿಕೊಂಡರೆ, ಈ ಸಮಸ್ಯೆಗಳೂ ಕಡಿಮೆಯಾಗುತ್ತವೆ. ಸಮಗ್ರ ಕೀಟ ನಿರ್ವಹಣಾ ಕ್ರಮಗಳನ್ನು ಅನುಸರಿಸುವುದು ಉತ್ತಮ ಎನ್ನುವುದು ವಿಜ್ಞಾನಿಗಳ ಸಲಹೆ.

ವಿಶ್ವೇಶ್ವರ ಸಜ್ಜನ್ ತೋಟದಲ್ಲಿ ಅಂತರ ಬೆಳೆಯಾಗಿರುವ ಬಾರ್ಬಡೋಸ್ ಚೆರ್ರಿ ಹಣ್ಣಿನ ಮರ
ಇಳುವರಿ, ಉತ್ಪಾದನೆ
6 ರಿಂದ 7 ವರ್ಷ ವಯಸ್ಸಿನ ಬಾರ್ಬಡೋಸ್ ಚೆರ್ರಿ ಹಣ್ಣಿನ ಗಿಡ ಒಂದು ಸೀಸನ್‌ಗೆ ಕನಿಷ್ಠ 15 ಕೆ.ಜಿ ಹಣ್ಣು ಕೊಡುತ್ತದೆ. ಮೂರು ಸೀಸನ್‌ಗೆ ಕನಿಷ್ಠ 40 ಕೆ.ಜಿ, ಗರಿಷ್ಠ 60 ಕೆ.ಜಿ ಯಷ್ಟು ಹಣ್ಣು ಕೊಡುತ್ತದೆ. '12 ಗಿಡಗಳಿಂದ ವರ್ಷಕ್ಕೆ 400 ಕೆ.ಜಿವರೆಗೂ ಹಣ್ಣು ಸಿಕ್ಕಿದೆ. ಈ ಹಣ್ಣುಗಳನ್ನು ಜ್ಯೂಸ್, ಜ್ಯಾಮ್ ಮಾಡಿ ಮನೆಗೆ ಬಳಸುತ್ತಿದ್ದೇವೆ. ಬಹಳ ಚೆನ್ನಾಗಿದೆ. ಈಗ ಬೆಂಗಳೂರಿನ ಆರ್‌ಆರ್ ನಗರದಲ್ಲಿ ನಡೆಯುವ ರೈತ ಸಂತೆಯಲ್ಲಿ ಪರಿಚಯಿಸುತ್ತಿದ್ದೇನೆ'- ವಿವರಿಸಿದರು ಸಜ್ಜನ್
ಕೆಂಪು ಬಣ್ಣ ಬಂದಾಗ ಹಣ್ಣು ತಿನ್ನಲು ಯೋಗ್ಯ. ಹಣ್ಣು ಕೊಯ್ಲಾದ ಎರಡು ದಿನದೊಳಗೆ ಮಾರಾಟ ವಾಗಬೇಕು. ಇಲ್ಲವೇ ಮೌಲ್ಯವರ್ಧನೆಯಾಗಬೇಕು. ಹಣ್ಣಾದ ಮೇಲೆ ಮರದಿಂದ ಉದುರಿ ನೆಲಕ್ಕೆ ಬಿದ್ದು ಹಾಳಾಗುತ್ತವೆ. ಇವೆಲ್ಲ ಸಮಸ್ಯೆ ಇದೆ. 'ನಾನು ಮರದ ಕೆಳಗೆ ತಾಡಪಾಲು ಹಾಸಿ, ಹಣ್ಣು ಕೊಯ್ಯುತ್ತೇನೆ. ಹಣ್ಣು ಹಾಳಾಗುವಂತಹ ಸಂದರ್ಭ ಬಂದಿಲ್ಲ' - ಸಜ್ಜನ್ ತನ್ನ ಉಪಕ್ರಮದ ಬಗ್ಗೆ ಮಾಹಿತಿ ಹಂಚಿಕೊಂಡರು.
ಅನ್ನದ ಬಟ್ಟಲು | ಬರದ ಭೀತಿ ಬಿಡಿ, ನೇರಳೆ ಹಣ್ಣಿನ ಮೌಲ್ಯವರ್ಧನೆಯತ್ತ ಗಮನವಿಡಿಅನ್ನದ ಬಟ್ಟಲು: ಸಮೃದ್ಧ ಹುಣಸೆ ಇಳುವರಿಗೆ ನೀರು-ಗೊಬ್ಬರವೇ ಜೀವಾಳವಿಟಮಿನ್ ಸಿ ಅಧಿಕ
ಅತ್ಯಧಿಕ ವಿಟಮಿನ್ -ಸಿ ಹೊಂದಿರುವ ನೈಸರ್ಗಿಕ ಹಣ್ಣುಗಳಲ್ಲಿ ಬಾರ್ಬಡೋಸ್ ಚೆರ‍್ರಿ ಅಗ್ರಸ್ಥಾನದಲ್ಲಿದೆ. ಅರಭಾವಿ ತೊಟಗಾರಿಕೆ ಕಾಲೇಜಿನ ಸಂಶೋಧನಾ ವಿದ್ಯಾರ್ಥಿಯೊಬ್ಬರು ಹಣ್ಣಿನಲ್ಲಿರುವ ಪೋಷಕಾಂಶಗಳ ಅಧ್ಯಯನ ನಡೆಸಿ ದಾಖಲಿಸಿರುವ ಪ್ರಕಾರ, 100 ಗ್ರಾಂ ತಾಜಾ ಹಣ್ಣಿನಲ್ಲಿ 1,600-1,700 ಮಿ.ಗ್ರಾಂ ವಿಟಮಿನ್-ಸಿ ಇರುತ್ತದೆ. ಇದು ಕಿತ್ತಳೆ ಹಣ್ಣಿಗಿಂತ ಸುಮಾರು 30-40 ಪಟ್ಟು ಹೆಚ್ಚು. ಜೊತೆಗೆ ವಿಟಮಿನ್-ಎ, ಥಯಾಮಿನ್ (ವಿಟಮಿನ್ ಬಿ1), ರೈಬೋಫ್ಲೇವಿನ್ (ವಿಟಮಿನ್ ಬಿ2) ಮತ್ತು ನಿಯಾಸಿನ್ (ವಿಟಮಿನ್ ಬಿ3) ಕೂಡ ಸ್ವಲ್ಪ ಪ್ರಮಾಣದಲ್ಲಿವೆ. ಇವು ರೋಗನಿರೋಧಕ ಶಕ್ತಿ ಹೆಚ್ಚಿಸಲು, ಚರ್ಮದ ಆರೋಗ್ಯ ಕಾಪಾಡಲು ಹಾಗೂ ದೇಹದ ಜೀವಕೋಶಗಳನ್ನು ಹಾನಿಯಿಂದ ರಕ್ಷಿಸಲು ಸಹಕಾರಿಯಾಗುತ್ತವೆ.
ಈ ಹಣ್ಣು ಕಡಿಮೆ ಕ್ಯಾಲೊರಿ (100 ಗ್ರಾಂಗೆ ಸುಮಾರು 32 ಕ್ಯಾಲೊರಿ) ಮತ್ತು ಕಡಿಮೆ ಕೊಬ್ಬಿನಂಶ ಹೊಂದಿದೆ. ಇದರಲ್ಲಿರುವ 90%ಕ್ಕಿಂತ ಹೆಚ್ಚು ನೀರಿನಂಶ ದೇಹಕ್ಕೆ ತಂಪು ಮತ್ತು ಉತ್ತಮ ನೀರಿನ ಪೂರೈಕೆಯನ್ನು ಒದಗಿಸುತ್ತದೆ. ಜೊತೆಗೆ ಕ್ಯಾಲ್ಸಿಯಂ, ಪೊಟ್ಯಾಷಿಯಂ, ಮೆಗ್ನೀಷಿಯಂ ಮತ್ತು ಕಬ್ಬಿಣ ಮೊದಲಾದ ಅಗತ್ಯ ಖನಿಜಾಂಶಗಳನ್ನು ಪೂರೈಸುತ್ತದೆ.
ವಿಟಮಿನ್ ಸಿ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣವಿರುವ ಕಾರಣ, ಈ ಹಣ್ಣನ್ನು ಹೆಲ್ತ್ ಡ್ರಿಂಕ್ (ಆರೋಗ್ಯ ಪಾನೀಯ ಗಳು) ಮತ್ತು ನ್ಯೂಟ್ರಾಸ್ಯೂಟಿಕಲ್ ಉತ್ಪನ್ನಗಳಲ್ಲಿ ಬಳಸುತ್ತಿದ್ದಾರೆ. ನೈಸರ್ಗಿಕ ವಿಟಮಿನ್-ಸಿ ಮೂಲವಾಗಿ ಆಹಾರ ಸಂಸ್ಕರಣಾ ಉದ್ಯಮವೂ ಇದನ್ನು ಬಳಸುತ್ತಿದೆ ಎನ್ನುತ್ತಾರೆ ಪೌಷ್ಟಿಕಾಂಶ ತಜ್ಞರು.
'ವಿಟಮಿನ್ ಸಿ ಹೆಚ್ವಿರುವ ಈ ಕಾರಣಕ್ಕೇ ಕೋವಿಡ್ ಸಮಯದಲ್ಲಿ ಬಾರ್ಬಡೋಸ್ ಚೆರ‍್ರಿ ಹಣ್ಣು ಮತ್ತು ಹಣ್ಣಿನ ಉತ್ಪನ್ನಗಳಿಗೆ ಭಾರಿ ಬೇಡಿಕೆ ಇತ್ತು. ಮಂಗಳೂರಿನಲ್ಲೇ ಈ ಹಣ್ಣಿಗೆ ಮತ್ತು ಉತ್ಪನ್ನಗಳಿಗೆ ಹೆಚ್ಚಿನ ಗ್ರಾಹಕರಿದ್ದರು' ಎಂದು ನೆನಪಿಸಿಕೊಳ್ಳುತ್ತಾರೆ ಹಗರಿಬೊಮ್ಮನಹಳ್ಳಿಯ ಮ್ಯಾನೋರ್ ಫಾರ್ಮ್‌ನ ಮುಖ್ಯಸ್ಥ ವಸಂತ ಮಾಲವಿ.
ವಸಂತ ಮಾಲವಿ ಅವರು ಒಂಬತ್ತು ವರ್ಷಗಳ ಹಿಂದೆ ಅರಭಾವಿ ತೋಟಗಾರಿಕೆ ಕಾಲೇಜಿನ ನರ್ಸರಿ ಯಿಂದಲೇ ಐದು ಬಾರ್ಬಡೋಸ್ ಚೆರ್ರಿ ಹಣ್ಣಿನ ಗಿಡಗಳನ್ನು ತಂದು ತಮ್ಮ ತೋಟದಲ್ಲಿ ನಾಟಿ ಮಾಡಿದ್ದಾರೆ. ಆರು ವರ್ಷಗಳಿಂದ ಫಸಲು ಪಡೆಯುತ್ತಿದ್ದಾರೆ. 'ವರ್ಷಕ್ಕೆ ಮೂರು ಬಾರಿ ಹಣ್ಣು ಬಿಡುತ್ತದೆ. ಪ್ರತಿ ಗಿಡದಿಂದ ಒಂದು ಸೀಸನ್‌ಗೆ 8 ರಿಂದ 10 ಕೆ.ಜಿವರೆಗೂ ಇಳುವರಿ ಸಿಕ್ಕಿದೆ.

ಬಾರ್ಬಡೋಸ್ ಚೆರ್‍ರಿ ಉಪ್ಪಿನ ಕಾಯಿ
'ಕೋವಿಡ್‌ಗೆ ಮುಂಚೆ ಮಂಗಳೂರಿನ ಗ್ರಾಹಕರಿಗೆ ಕೆ.ಜಿಗೆ ₹1200 ನಂತೆ 8 ರಿಂದ 10 ಕೆಜಿ ಕಳಿಸುತ್ತಿದ್ದೆ. ಊರಲ್ಲಿದ್ದ ನಮ್ಮದೇ ನೇಸರ ಆರ್ಗಾನಿಕ್ಸ್ ಮಳಿಗೆ ಯಲ್ಲಿ ಚೆರ‍್ರಿ ಹಣ್ಣಿನಿಂದ ಜ್ಯೂಸ್ ಮಾಡಿ ಮಾರಾಟ ಮಾಡುತ್ತಿದ್ದೆವು. 50 ಗ್ರಾಂ ಹಣ್ಣಿಗೆ 250 ಎಂಎಲ್ ಜ್ಯೂಸ್ ರೆಡಿಯಾಗುತ್ತಿತ್ತು. ಮೌಲ್ಯವರ್ಧನೆ ಮಾಡುತ್ತಿದ್ದರಿಂದ ಒಂದು ಕೆ.ಜಿ ಹಣ್ಣಿಗೆ ₹1600ವರೆಗೂ ಸಿಗುತ್ತಿತ್ತು. ಕೊರನಾ ನಂತರ ಮಳಿಗೆ ಬಂದ್ ಆಯಿತು. ಈಗ ಮರಗಳು ಹಣ್ಣು ಬಿಡುತ್ತಿವೆ. ಮೌಲ್ಯವರ್ಧನೆಯೂ ಮುಂದುವರಿದಿದೆ' ಎಂದು ಚೆರ‍್ರಿ ಹಣ್ಣಿನ ಮಾರುಕಟ್ಟೆ ಮೌಲ್ಯವರ್ಧನೆ ಕಥನವನ್ನು ಬಿಡಿಸಿಟ್ಟರು ವಸಂತ .
ಹಣ್ಣಿನ ಮಾರುಕಟ್ಟೆ ಕಂಡುಕೊಂಡಿರುವ ವಸಂತ ಈಗ ಚೆರ್‍ರಿ ವೈನ್ ಅನ್ನು ವಾಣಿಜ್ಯಿಕ ವಾಗಿ ಮಾರುವ ಯೋಚನೆಯಲ್ಲಿದ್ದಾರೆ. ಅಷ್ಟೇ ಅಲ್ಲ, ಹಣ್ಣನ್ನು ಡ್ರೈ ಮಾಡಿ ಪೌಡರ್ ಮಾಡಿ ರೆಡಿ ಟು ಸರ್ವ್ (ಆರ್‌ಟಿಎಸ್) ರೀತಿಯಲ್ಲಿ ಮಾರುವ ಹಾಗೂ ಬಾರ್ ತಯಾರಿಸಿ (ಚಾಕೊ ಬಾರ್ ತರಹ) ಮಾರಾಟ ಮಾಡುವ ಯೋಜನೆ ರೂಪಿಸಿದ್ದಾರೆ. ಅದಕ್ಕೆ ಬೇಕಾದ ಮಾರುಕಟ್ಟೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
ಟೇಸ್ಟ್ ಆಫ್ ಚೆರ‍್ರಿಚೆನ್ನಾಗಿ ನಿದ್ದೆ ಬರಬೇಕೆಂದರೆ ಈ ಆಹಾರಗಳ ಸೇವನೆ ಒಳ್ಳೆಯದು...ನರ್ಸರಿಗಳಲ್ಲೂ ಬೇಡಿಕೆ ಇದೆ
ಬಾರ್ಬಡೋಸ್ ಚೆರ್ರಿ ಹಣ್ಣಿನ ಗಿಡಗಳಿಗೆ ನರ್ಸರಿಗಳಲ್ಲೂ ಬೇಡಿಕೆ ಇದೆಯಂತೆ. ಅರಭಾವಿ ತೋಟಗಾರಿಕೆ ಕಾಲೇಜಿನ ನರ್ಸರಿಯಲ್ಲೂ ಜನರು ಗಿಡಗಳನ್ನು ಖರೀದಿಸುತ್ತಿದ್ದಾರೆ.ಈ ನರ್ಸರಿಯವರು ಶಾಲೆಗಳ ಕೈತೋಟದ ಬೇಲಿಗೆ ಚೆರ್ರಿ ಹಣ್ಣಿನ ಗಿಡ ಹಾಕಲು ಉತ್ತೇಜಿಸುತ್ತಿದ್ದಾರೆ. ಇದರ ಹಿಂದೆ ಪೋಷಕಾಂಶವಿರುವ ಈ ಹಣ್ಣನ್ನು ಮಕ್ಕಳು ತಿನ್ನಲಿ ಎಂಬ ಉದ್ದೇಶವಿದೆ ಎಂಬುದು ಅಲ್ಲಿನ ನರ್ಸರಿ ಸಿಬ್ಬಂದಿಯ ಮಾತುಗಳಿಂದ ತಿಳಿಯುತ್ತದೆ.
'ನಮ್ಮ ನರ್ಸರಿಯಲ್ಲಿ ವಾರಕ್ಕೆ ನಾಲ್ಕೈದು ಗಿಡಗಳಾದರೂ ಖರ್ಚಾಗುತ್ತೆ' ಎನ್ನುತ್ತಾರೆ ದೇವನಹಳ್ಳಿ ಸಮೀಪದ ತೇಜ ನರ್ಸರಿಯ ಶಿವನಾಪುರ ರಮೇಶ್. 'ಮನೆಗೊಂದು ಗಿಡ ಹಾಕಿ, ಹೆಚ್ಚು ವಿಟಮಿನ್ ಸಿ ಇರುವ ಈ ಹಣ್ಣನ್ನು ಮಕ್ಕಳಿಗೆ ತಿನ್ನಿಸಿ, ನೀವು ತಿನ್ನಿ ಎಂದು ನಾನೇ ಹೇಳುತ್ತಿರುತ್ತೇನೆ. ಆದರೆ, ಯಾರಿಗೂ ವಾಣಿಜ್ಯ ಕೃಷಿಯಾಗಿ ಬೆಳೆಸಿ ಎಂದು ಸಲಹೆ ನೀಡುವುದಿಲ್ಲ' ಎನ್ನುತ್ತಾರೆ ಅವರು.
'ಈ ಹಣ್ಣಿನ ಬಗ್ಗೆ ಜನರಲ್ಲಿ ಅರಿವು ಕಡಿಮೆ. ಮಾರುಕಟ್ಟೆ ಅಷ್ಟಾಗಿಲ್ಲ. ಇಂಥ ಪರಿಸ್ಥಿತಿಯಲ್ಲಿ ಹಣ್ಣನ್ನು ಹೆಚ್ಚಾಗಿ ಬೆಳೆದರೆ ಎಲ್ಲಿ ಮಾರಬೇಕು ? ಜತೆಗೆ ಎಲ್ಲರಿಗೂ ಮೌಲ್ಯ ವರ್ಧನೆ ಮಾಡುವ ಕೌಶಲ ಗೊತ್ತಿರಬೇಕಲ್ಲ. ಹಾಗಾಗಿ ಸದ್ಯಕ್ಕೆ ಇದನ್ನು ದೊಡ್ಡದಾಗಿ ಬೆಳೆಯುವುದು ಸೂಕ್ತವಲ್ಲ ಎಂಬುದು ರಮೇಶ್ ಅಭಿಪ್ರಾಯ.
ತಾಳ್ಮೆ, ಕೌಶಲ ಇದ್ದರೆ ಸಾಧ್ಯ
ವಸಂತ ಮಾಲವಿ ಪ್ರಕಾರ, ಈ ಹಣ್ಣನ್ನು ವಾಣಿಜ್ಯಿಕವಾಗಿ ಬೆಳೆಯಬಹುದು. ಆದರೆ, ಬೆಳೆಯುವವರಿಗೆ ಮೌಲ್ಯವರ್ಧಿಸುವ ಕೌಶಲವಿರಬೇಕು, ಮುಖ್ಯವಾಗಿ ತಾಳ್ಮೆ ಇರಬೇಕು. 'ಅದೇನೆ ಇರಲಿ, 'ಮಳೆಯಾಶ್ರಿತ ರೈತರ ತೋಟದಲ್ಲಿ ಚೆರ್‍ರಿಯಂತಹ ನಾಲ್ಕೈದು ಹಣ್ಣಿನ ಗಿಡಗಳಾದರೂ ಇರಬೇಕು' ಎನ್ನುವುದು ವಿಶ್ವೇಶ್ವರ ಸಜ್ಜನ್ ಅಭಿಪ್ರಾಯ. ಬದಲಾಗುತ್ತಿರುವ ಹವಾಮಾನ ವೈಪರೀತ್ಯವನ್ನು ಎದರಿಸಲು ಸುಲಭ ನಿರ್ವಣೆಯಲ್ಲಿ ಬೆಳೆಯುವ ಹಾಗೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವ ಬಾರ್ಬಡೋಸ್ ಚೆರ್‍ರಿಯಂತಹ ಹಣ್ಣಿನ ಗಿಡಗಳನ್ನು ತೋಟದಲ್ಲಿ, ನೇರಳೆ, ಬೇಲದಂತಹ ಹಣ್ಣಿನ ಮರಗಳ ಜೊತಗೆ ಸಂಗಾತಿ ಬೆಳೆಯಾಗಿ ಬೆಳೆಸಿ ಮೌಲ್ಯವರ್ಧಿಸುವುದನ್ನು ಕಲಿಯಬೇಕು' ಎನ್ನುತ್ತಾ ಅವರು ತಮ್ಮದೇ ಕೃಷಿಯನ್ನು ಉದಾಹರಿಸುತ್ತಾರೆ.
ರೈತ ಉತ್ಪಾದಕ ಸಂಸ್ಥೆಗಳು, ಮಹಿಳಾ ಸ್ವಸಹಾಯ ಸಂಘಗಳು ಚೆರ್‍ರಿ ಹಣ್ಣನ್ನು ಮೌಲ್ಯವರ್ಧಿಸಿ ಬ್ರ್ಯಾಂಡ್ ಮಾಡಿ ಮಾರಾಟ ಮಾಡುವುದಾದರೆ, ರೈತರು ಹಣ್ಣು ಬೆಳೆದುಕೊಡುತ್ತಾರೆ. ಇದು ರೈತರಿಗೆ ಉಪ ಆದಾಯವೂ ಆಗುತ್ತದೆ ಎನ್ನುವುದು ಸಜ್ಜನ್ ಆಶಯ.

ಬಾರ್ಬಡೋಸ್ ಚೆರ್‍ರಿ ಜ್ಯೂಸ್
ಕೊನೆಯದಾಗಿ…
ಪ್ರಸ್ತುತ ಈ ಹಣ್ಣಿನ ಬೆಳೆ ಹಾಗೂ ಹಣ್ಣಿನ ಬಗ್ಗೆ ಸೂಕ್ತವಾದ ಮಾಹಿತಿ ಇಲ್ಲದ ಕಾರಣ, ನಿಗದಿತವಾದ ಬೇಸಾಯದ ಕ್ರಮಗಳು ಇನ್ನೂ ಸಂಶೋಧನೆ ಯಾಗಬೇಕಿದೆ. ಮಾರುಕಟ್ಟೆ ಕುರಿತೂ ಇನ್ನಷ್ಟು ಅಧ್ಯಯನಗಳು ನಡೆಯಬೇಕಿವೆ.
ಇಂದು ಭಾರತದಲ್ಲಿ ಸಾಂಪ್ರದಾಯಿಕ ಬೆಳೆಗಳ ಜೊತೆಗೆ ಹೆಚ್ಚು ಮೌಲ್ಯ ಹೊಂದಿರುವ ತೋಟಗಾರಿಕಾ ಬೆಳೆಗಳು ರೈತರ ಗಮನ ಸೆಳೆಯುತ್ತಿವೆ. ಇನ್ನೊಂದೆಡೆ ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚುತ್ತಿದ್ದು, ಇಂಥ ಸಂದರ್ಭದಲ್ಲಿ ಪೌಷ್ಟಿಕ ಹಣ್ಣುಗಳ ಬೇಡಿಕೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಹಾಗಾಗಿ ಸಣ್ಣ ಪ್ರಮಾಣದಲ್ಲಿ ಪ್ರಾಯೋಗಿಕವಾಗಿ ಚೆರ್ರಿಯಂತಹ ಹೊಸ ಹಣ್ಣಿನ ಬೆಳೆ ಬೆಳೆಯುವುದನ್ನು ಆರಂಭಿಸಬೇಕಿದೆ. ಜತೆ ಜತೆಗೆ ಮಾರುಕಟ್ಟೆ ಮತ್ತು ಸಂಸ್ಕರಣಾ ಘಟಕಗಳೊಂದಿಗೆ ಸಂಪರ್ಕ ಬೆಳೆಸಿಕೊಂಡರೆ ಬಾರ್ಬಡೋಸ್ ಚೆರ್‍ರಿ ಉತ್ತಮ ಪರ್ಯಾಯ ಆದಾಯದ ಬೆಳೆಯಾಗಿ ಬೆಳೆಯಬಹುದು.
ಅಂದ ಹಾಗೆ, ನೀವು ಎಂಥ ಚೆರ್‍ರಿ ಹಣ್ಣುಗಳನ್ನು ನೋಡಿದ್ದೀರಿ, ಬೆಳೆದಿದ್ದೀರಿ, ರುಚಿ ನೋಡಿದ್ದೀರಿ. ನಿಮ್ಮ ಮನೆಯಲ್ಲಿ /ತೋಟದಲ್ಲಿ ಬಾರ್ಬಡೋಸ್ ಚೆರ್ರಿ ಗಿಡಗಳಿವೆಯೇ? ಈ ಹಣ್ಣಿನ ಗಿಡಗಳ ಬಗ್ಗೆ ಮಾಹಿತಿ ಇದ್ದರೆ ನಿಮ್ಮ ಅನುಭವವನ್ನೂ ಹಣ್ಣಿನ ಚಿತ್ರ ಸಹಿತ ಹಂಚಿಕೊಳ್ಳಿ.
ಬಾರ್ಬಡೋಸ್ ಚೆರ್ರಿ ಮೌಲ್ಯವರ್ಧಿತ ಉತ್ಪನ್ನಗಳ ಕುರಿತ ಹೆಚ್ಚಿನ ಮಾಹಿತಿಗಾಗಿ ವಸಂತ ಮಾಲವಿ ಸಂಪರ್ಕ ಸಂಖ್ಯೆ: 9448261916
ಹಣ್ಣಿನ ಕೃಷಿ ನಿರ್ವಹಣೆ ಕುರಿತ ಹೆಚ್ಚಿನ ಮಾಹಿತಿಗಾಗಿ ವಿಶ್ವೇಶ್ವರ ಸಜ್ಜನ್ ಸಂಪರ್ಕ ಸಂಖ್ಯೆ: +91 99026 61597
ಅನ್ನದ ಬಟ್ಟಲು: ದೇವೇಂದ್ರರ 'ದೇಸಿ ಭತ್ತದ ತಳಿ' ಲೋಕಅನ್ನದ ಬಟ್ಟಲು: ಅಜೋಲಾ, ಭತ್ತದ ಗದ್ದೆಗಳ ಕವಚ
