ಲಾವಂಚ ಸಸ್ಯವು, ಟೊಪ್ಪಿ, ಚಪ್ಪಲಿ, ಮನೆ ಅಲಂಕಾರಿಕ ಗೊಂಬೆಗಳು, ಹಾರಗಳು, ನೀರನ್ನು ಶುದ್ಧೀಕರಿಸುವ ಬೇರು, ಸುಗಂಧ ತೈಲದಂತಹ ವಸ್ತುಗಳಿಂದಲೇ ಜನಪ್ರಿಯ. ಇದೇ ಲಾವಂಚ ಸಸ್ಯದ ಬೇರು ಮಣ್ಣು ನೀರನ್ನು ಸಂರಕ್ಷಿಸುವಲ್ಲಿ, ಮಣ್ಣಿನಲ್ಲಿ ಸಾವಯವ ಇಂಗಾಲ ಹೆಚ್ಚಿಸಿ, ಬೆಳೆ ಇಳುವರಿ ವೃದ್ಧಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎನ್ನುವ ವಿಚಾರ ಜನರಿಗೆ ಅಷ್ಟಾಗಿ ತಲುಪಲೇ ಇಲ್ಲ.
ಪ್ರತಿ ಬಾರಿ ಮಳೆಗಾಲದಲ್ಲಿ ಹೊಲ-ಗದ್ದೆಗಳಲ್ಲಿ ಮಣ್ಣು ಕೊಚ್ಚಿ ಹೋಗುವಾಗ, ನನಗೆ ನೇಪಾಳದಂತಹ ರಾಷ್ಟ್ರಗಳಲ್ಲಿ ಮಣ್ಣಿನ ಸವಕಳಿ ತಡೆಗೆ ಲಾವಂಚ ಬಳಸುತ್ತಿರುವುದು ನೆನಪಾಗುತ್ತದೆ. ಮಲೆನಾಡ ಭಾಗದ ತೋಟಗಳ ಬದಿಯಲ್ಲಿ ಮಣ್ಣು ಕುಸಿಯುತ್ತಿದೆ ಎಂಬ ಸುದ್ದಿ ಕೇಳಿದಾಗಲೆಲ್ಲ, ಕೊಂಕಣ ರೈಲ್ವೆ ಇಲಾಖೆ ಹಳಿಗಳ ಬದಿಯ ಗೋಡೆ ರಕ್ಷಣೆಗೆ ಗೋಡೆ ಮೇಲೆ ಲಾವಂಚ ಬೆಳೆಸಿದ ಸುದ್ದಿ ಓದಿದ್ದು ಜ್ಞಾಪಕಕ್ಕೆ ಬರುತ್ತದೆ.
ಅನ್ನದ ಬಟ್ಟಲು: 'ಪಿಎಂಡಿಎಸ್' ಕನಿಷ್ಠ ವೆಚ್ಚದಲ್ಲಿ ಗರಿಷ್ಠ ಗೊಬ್ಬರಅನ್ನದ ಬಟ್ಟಲು: ಹಲಸಿನ ಕಾಯಿ ಹಿಟ್ಟಿನಲ್ಲಿದೆ 'ಮಧುಮೇಹ' ನಿಯಂತ್ರಣದ ಗುಟ್ಟುನಿಜ, ಲಾವಂಚ, ರಭಸವಾಗಿ ಹರಿಯುವ ನೀರನ್ನು ಹಿಡಿದು ನಿಲ್ಲಿಸಿ ಇಂಗಿಸುವ ಮತ್ತು ನೀರಿನ ಜತೆ ಕೊಚ್ಚಿ ಹೋಗುವ ಮಣ್ಣನ್ನು ತಡೆದು ನಿಲ್ಲಿಸುವ ಕಾವಲುಗಾರ. ಇದು ಮಣ್ಣು-ನೀರಿನ ಸಂರಕ್ಷಣೆಗೆ ನಿಸರ್ಗವೇ ಕೊಡುಗೆಯಾಗಿ ನೀಡಿರುವ ಅದ್ಭುತ ಜೈವಿಕ ತಡೆಗೋಡೆ. ಒಂದು ಕಾಲದಲ್ಲಿ ಸುಗಂಧ ತೈಲಕ್ಕಾಗಿ ಮಾತ್ರ ಪರಿಚಿತವಾಗಿದ್ದ ಲಾವಂಚ, ಇಂದು ವಿಶ್ವದ 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ 'ವೆಟಿವರ್ ಸಿಸ್ಟಮ್' ಎಂಬ ಹೆಸರಿನಲ್ಲಿ ಮಣ್ಣು-ನೀರಿನ ಸಂರಕ್ಷಣೆಯ ಪರಿಣಾಮಕಾರಿ ಸಾಧನವಾಗಿ ಬಳಸಲಾಗುತ್ತಿದೆ.
ಜಲಾನಯನ ಪ್ರದೇಶ, ಇಳಿಜಾರಿನ ಕೃಷಿ ಜಮೀನುಗಳಲ್ಲಿ ಮಣ್ಣಿನ ಕೊಚ್ಚಣೆಯನ್ನು ತಡೆಯಲು ಚೆಕ್‌ಡ್ಯಾಮ್, ಬ್ಯಾರೇಜ್‌ನಂತಹ 'ಎಂಜಿನಿಯರಿಂಗ್' ರಚನೆಗಳಿಗಿಂತ ಕಡಿಮೆ ವೆಚ್ಚದ, ಪರಿಸರ ಸ್ನೇಹಿ ಮತ್ತು ದೀರ್ಘ ಕಾಲಿಕ ಜೀವಂತ ತಂತ್ರಜ್ಞಾನ ಎಂದರೆ ಅದು ಲಾವಂಚ ಗಿಡಗಳನ್ನು ಬೆಳೆಸುವುದು.
ಬೇರಿನ ಜಾಲ 'ರಕ್ಷಣೆ'ಯ ಬಲ
ಲಾವಂಚದ ಅತ್ಯಂತ ದೊಡ್ಡ ಶಕ್ತಿ ಅದರ ಬೇರಿನ ವ್ಯವಸ್ಥೆ. ಈ ಸಸ್ಯದ ಬೇರುಗಳು 15 ರಿಂದ 20 ಅಡಿಯಷ್ಟು ಭೂಮಿಯ ಆಳದವರೆಗೆ ಇಳಿಯುತ್ತವೆ. ಇದರ ಬೇರುಗಳು ಸಾಮಾನ್ಯ ಹುಲ್ಲುಗಳಂತೆ ಅಡ್ಡಲಾಗಿ ಹರಡಿಕೊಳ್ಳುವ ಬದಲು, ನೇರವಾಗಿ ಆಳಕ್ಕೆ ಇಳಿಯುತ್ತವೆ.
ಲಾವಂಚದ ಸಸಿಗಳನ್ನು ಜಲಾನಯನ ಪ್ರದೇಶದಲ್ಲಿ ಇಳಿಜಾರಿಗೆ ಅಡ್ಡಲಾಗಿ ನಿರ್ಮಿಸುವ ಕಾಂಟೂರ್ ಬದುಗಳ ಮೇಲೆ ಒತ್ತೊತ್ತಾಗಿ ಸಾಲಾಗಿ ನಾಟಿ ಮಾಡಬೇಕು. ಕೃಷಿ ಜಮೀನಿನಲ್ಲೂ ಇಳಿಜಾರಿಗೆ ಅಡ್ಡಲಾಗಿ ಬೆಳೆಸಬಹುದು. ಜಮೀನಿನ ಸುತ್ತಲೂ ಬೆಳೆಸಬಹುದು. ಹೀಗೆ ಬೆಳೆಸಿದ ಲಾವಂಚದ ಸಸ್ಯಗಳು ಆಳವಾಗಿ ಬೇರು ಬಿಡುತ್ತವೆ. ಹರಿವಯುವ ಮಳೆ ನೀರಿನ ವೇಗವನ್ನು ಕಡಿಮೆ ಮಾಡುತ್ತವೆ. ಮಣ್ಣಿನ ಕೊಚ್ಚಣೆಯನ್ನು ತಡೆದು ನಿಲ್ಲಿಸುತ್ತದೆ. ಮಾತ್ರವಲ್ಲ, ನೀರು ನಿಧಾನವಾಗಿ ಮಣ್ಣಿನೊಳಗೆ ಇಳಿಯುತ್ತದೆ, ಅಂತರ್ಜಲ ಮರುಪೂರಣವೂ ಹೆಚ್ಚಾಗುತ್ತದೆ. ಬೆಳೆಗಳಿಗೆ ಹೆಚ್ಚು ದಿನ ತೇವಾಂಶ ಲಭ್ಯವಾಗುತ್ತದೆ ಎನ್ನುತ್ತಾರೆ ಔಷಧೀಯ ಮತ್ತು ಸುಗಂಧ ದ್ರವ್ಯ ಸಸ್ಯಗಳ ಕೇಂದ್ರ (ಸಿಮ್ಯಾಪ್) ಸಂಸ್ಥೆಯ ನಿವೃತ್ತ ಮಣ್ಣು ವಿಜ್ಞಾನಿ ಇ.ವಿ.ಎಸ್.ಪ್ರಕಾಶ್ ರಾವ್.
ಹವಾಮಾನ ಬದಲಾವಣೆಯಾಗುತ್ತಿರುವ (Climate change) ಇವತ್ತಿನ ಸಂದರ್ಭದಲ್ಲಿ ಪ್ರತಿಯೊಂದು ಜಲಾನಯನ ಪ್ರದೇಶ ಹಾಗೂ ಇಳಿಜಾರಿನ ಜಮೀನುಗಳ ಕಾಂಟೂರ್ ಬದುಗಳಲ್ಲಿ ಲಾವಂಚವನ್ನು ಬೆಳೆಸಬೇಕು, ಜೊತೆಗೆ ಸಮರ್ಪಕವಾಗಿ ನಿರ್ವಹಣೆಯನ್ನೂ ಮಾಡಬೇಕು ಎಂಬುದು ತಜ್ಞರ ಸಲಹೆ.

80-90ರ ದಶಕದಲ್ಲಿ ಹಾಸನ ಜಿಲ್ಲೆಯ ಹಳ್ಳಿಯೊಂದರಲ್ಲಿ ಹೊಲದ ಬದುವಿನಲ್ಲಿ ಲಾವಂಚ ಬೆಳೆಸಿರುವುದು
ರೈತರಿಗೆ ಹಲವು ರೀತಿಯ ಲಾಭ
ಲಾವಂಚದಿಂದ ಕೇವಲ ಮಣ್ಣು-ನೀರಿನ ಸಂರಕ್ಷಣೆ ಮಾತ್ರವಲ್ಲ, ಇದರಿಂದ ಕೃಷಿಕರಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಲಾಭಗಳೂ ಇವೆ. ಮೊದಲೇ ಹೇಳಿದಂತೆ ಲಾವಂಚ ಭೂಮಿಯ ಆಳದಲ್ಲಿ 15 ಅಡಿಯಿಂದ 20 ಅಡಿವರೆಗೂ ಬೇರುಗಳನ್ನು ಬಿಡುತ್ತದೆ. ನೆಲದಾಳದಲ್ಲಿ ಚಾಪೆಯಂತಾಗುತ್ತದೆ. ಮಣ್ಣಿನ ಸವಕಳಿ ತಡೆಯುವ ಜತೆಗೆ, ವಾತಾವರಣದಲ್ಲಿ ಇರುವ ಇಂಗಾಲದ ಡೈ ಆಕ್ಸೈಡ್ ರಾಸಾಯನಿಕ ಅಂಶವನ್ನು ಹೀರಿ ಕೊಂಡು ಬೇರುಗಳ ಮೂಲಕ ನೆಲದಾಳದ ಮಣ್ಣಿನಲ್ಲಿ ಸಾವಯವ ಇಂಗಾಲವಾಗಿ ಸ್ಥಿರೀಕರಿಸುತ್ತದೆ. ಸಾವಯವ ಇಂಗಾಲ ಹೆಚ್ಚಾದ ಮೇಲೆ, ಮಣ್ಣಿನಲ್ಲಿ ರಾಸಾಯನಿಕ, ಜೈವಿಕ ಹಾಗೂ ಭೌತಿಕ ಪ್ರಕ್ರಿಯೆ ವೃದ್ಧಿಸುತ್ತದೆ. ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳ ಚಟುವಟಿಕೆ ಹೆಚ್ಚಾಗುತ್ತದೆ. ಮಣ್ಣಿನ ರಚನೆ ಸುಧಾರಣೆಯಾಗುತ್ತದೆ. ಸಾವಯವ ವಸ್ತುಗಳು ನಿಧಾನವಾಗಿ ಕರಗುತ್ತವೆ. ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ. ಹೀಗೆ ಕೃಷಿ ಜಮೀನಿನಲ್ಲಿ ಲಾವಂಚ ಬೆಳೆಸುವುದರಿಂದ, ಮಣ್ಣಿನಲ್ಲಿರುವ ಸಾವಯವ ಇಂಗಾಲ ಹೇಗೆ ಸುಧಾರಣೆಯಾಗುತ್ತದೆ ಎಂಬುದರ ಕುರಿತು ವಿಜ್ಞಾನಿ ಪ್ರಕಾಶ್ ರಾವ್ ಮತ್ತು ತಂಡದವರು ಸಿಮ್ಯಾಪ್‌ನಲ್ಲಿ ಐದು ವರ್ಷ ಅಧ್ಯಯನ ನಡೆಸಿದ್ದಾರೆ. ಫಲಿತಾಂಶಗಳನ್ನೂ ದಾಖಲಿಸಿದ್ದಾರೆ.
ಈ ಅಧ್ಯಯನಕ್ಕೆ ಎರಡು ತಾಕುಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಒಂದರಲ್ಲಿ ಲಾವಂಚ ಬೆಳೆಸಿದ್ದಾರೆ. ಇನ್ನೊಂದು ತಾಕನ್ನು ಹಾಗೇ ಬಿಟ್ಟಿದ್ದಾರೆ. ಐದು ವರ್ಷಗಳಲ್ಲಿ ನಡೆಸಿರುವ ಅಧ್ಯಯನದ ಪ್ರಕಾರ ಲಾವಂಚ ಬೆಳೆಸಿರುವ ತಾಕಿನ ಮಣ್ಣಿನ ಮೇಲ್ಪದರ (0 -15 ಸೆಂ.ಮೀ)ದಲ್ಲಿ ಹಾಗೂ 15ಸೆ.ಮೀ -30 ಸೆಂ.ಮೀ ವರೆಗಿನ ಮಣ್ಣಿನಲ್ಲೂ ಸಾವಯವ ಇಂಗಾಲ ಉತ್ಕೃಷ್ಟವಾಗಿತ್ತು. ಲಾವಂಚ ಬೆಳೆಸದ ತಾಕಿನ ಮಣ್ಣಿನಲ್ಲಿ ಸಾವಯವ ಇಂಗಾಲ ಕುಸಿತ ಕಂಡಿದೆ ಎಂದು ಅವರು ಅಧ್ಯಯನದ ಫಲಿತಾಂಶವನ್ನು ವಿವರಿಸಿದರು.
ಲಾವಂಚ ಬೆಳೆಸುವುದರಿಂದ ಬೇರೆ ಬೇರೆ ರೀತಿಯ ಉಪಯೋಗಗಳಿವೆ. ಆದರೆ, ತಕ್ಷಣಕ್ಕೆ ಫಲಿತಾಂಶ ಬಾರದಿದ್ದರೂ, ದೀರ್ಘಾವಧಿಯಲ್ಲಿ ಇದರ ಪ್ರಯೋಜನವನ್ನು ಕಾಣಬಹುದು ಎಂಬುದು ಪ್ರಕಾಶ್ ಅವರ ಅನುಭವದ ನುಡಿ.

ದಕ್ಷಿಣ ಭಾರತದ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಗುಡ್ಡಗಾಡು ಪ್ರದೇಶದ ಹಳ್ಳಿಯ ಭತ್ತದ ಗದ್ದೆಯಲ್ಲಿ ಲಾವಂಚ ಬೆಳೆಸಿರುವುದು.
ಎಲ್ಲೆಲ್ಲಿ ಬೆಳೆಸಬಹುದು?
ಲಾವಂಚವನ್ನು ಕೃಷಿ ಜಮೀನುಗಳಲ್ಲಿ ಮಾತ್ರವಲ್ಲದೆ ರಸ್ತೆ ಬದಿಗಳು, ರೈಲು ಮಾರ್ಗಗಳು, ಕೆರೆ ದಂಡೆಗಳು, ನದಿತೀರಗಳು, ಗಣಿಗಾರಿಕೆ ಪ್ರದೇಶಗಳು, ತೋಟಗಳು ಹಾಗೂ ನಗರ ಪ್ರದೇಶಗಳ ಇಳಿಜಾರುಗ ಳಲ್ಲಿ ಸಹ ಬಳಸಬಹುದು. ಮಳೆನೀರು ಹರಿಯುವ ಪ್ರದೇಶಗಳಲ್ಲಿ ಜೀವಂತ ತಡೆಗೋಡೆಯಾಗಿ ಇದು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಇಪ್ಪತ್ತು ವರ್ಷಗಳ ಹಿಂದೆ, ಪ್ರತಿಷ್ಠಿತ ಟೀ ಉದ್ಯಮಗಳಲ್ಲಿ ಒಂದಾದ ಕಣ್ಣನ್ ದೇವನ್ ಹಿಲ್ಸ್ ಪ್ಲಾಂಟೇಷನ್ ಕಂಪನಿ (ಕೆಡಿಎಚ್‌ಪಿ), ತಮ್ಮ ಚಹಾ ತೋಟದಲ್ಲಿ ಮಣ್ಣು ಸವಕಳಿ ತಡೆ ಹಾಗೂ ತೇವಾಂಶ ರಕ್ಷಣೆಗಾಗಿ ತೋಟದ ಗಡಿ ಭಾಗದಲ್ಲಿನ ತಡೆ ಗೋಡೆಯಲ್ಲಿ ಕಲ್ಲಿನ ಬದಲಾಗಿ ಲಾವಂಚವನ್ನು ಬೆಳೆಸಿದ್ದಾರೆ. ಇದರಿಂದ ಮಣ್ಣು ಮತ್ತು ನೀರಿನ ಸಂರಕ್ಷಣಾ ಕಾರ್ಯಗಳ ವೆಚ್ಚವನ್ನು ಶೇಕಡಾ 70 ರಷ್ಟು ಕಡಿತಗೊಳಿಸಿದೆ ಎಂದು 'ಅಡಿಕೆ ಪತ್ರಿಕೆ' ಸಂಪಾದಕ 'ಶ್ರೀ' ಪಡ್ರೆಯವರು ಲಾವಂಚ ಕುರಿತು ಬರೆದ ಲೇಖನವೊಂದರಲ್ಲಿ ಉಲ್ಲೇಖಿಸಿದ್ದಾರೆ.
ಚಹಾ ಬೆಳೆಯುವ ಬೆಟ್ಟ ಪ್ರದೇಶಗಳಲ್ಲಿ ಮಣ್ಣಿನ ಸವೆತ ಎನ್ನುವುದು ದೊಡ್ಡ ಸಮಸ್ಯೆ. ಕಲ್ಲಿನ ಗೋಡೆಗ ಳನ್ನು ನಿರ್ಮಿಸಿ, ಶಾಶ್ವತವಾಗಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡುವುದಕ್ಕೆ ಸಾಕಷ್ಟು ಖರ್ಚಾಗುತ್ತದೆ. ಈ ಖರ್ಚು ವೆಚ್ಚ ಲೆಕ್ಕ ಹಾಕಿದರೆ ಲಾವಂಚ ಬಳಸುವುದರಿಂದ ಶೇ 70ರಷ್ಟು ಉಳಿತಾಯವಾಗುತ್ತದೆ ಎಂಬ ಅಂಶವನ್ನು ಉಲ್ಲೇಖಿಸಿದ್ದಾರೆ. ಎರಡು ದಶಕಗಳ ಹಿಂದೆ ಹಾಸನ ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ಹೊಲದ ಬದುಗಳಲ್ಲಿ ಲಾವಂಚ ಬೆಳೆಸಿದ್ದನ್ನೂ ಅವರು ದಾಖಲಿಸಿದ್ದಾರೆ. ಇಷ್ಟನ್ನು ಹೊರತುಪಡಿಸಿದರೆ ಕರ್ನಾಟಕದಲ್ಲಿ ಲಾವಂಚ ಕುರಿತು ಬೇರಿನಿಂದ ತೈಲ ತೆಗೆದು ಮಾರಾಟ ಮಾಡುವ ಉದ್ಯಮ ಹೆಚ್ಚಾಗಿರುವ ಮಾಹಿತಿ ಸಿಗುತ್ತದೆಯೇ ವಿನಾ, ಮಣ್ಣು ಮತ್ತು ನೀರಿನ ಸಂರಕ್ಷಣೆಗಾಗಿ ಲಾವಂಚ ಬೆಳೆಸಿದ ಉದಾಹರಣೆಗಳು ಸಿಗುವುದು ತೀರಾ ವಿರಳ.
ಅನ್ನದ ಬಟ್ಟಲು | ಬರದ ಭೀತಿ ಬಿಡಿ, ನೇರಳೆ ಹಣ್ಣಿನ ಮೌಲ್ಯವರ್ಧನೆಯತ್ತ ಗಮನವಿಡಿಅನ್ನದ ಬಟ್ಟಲು: ಉಣ್ಣುವ ಅನ್ನವೇ ವಿಷವಾಗುತ್ತಿರುವಾಗ…ಆದರೆ, ಚೀನಾ, ನೇಪಾಳ, ಭೂತಾನ್ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಲಾವಂಚದ ಬಳಕೆ ವ್ಯಾಪಕವಾಗಿದೆ. ಗುಡ್ಡ ಪ್ರದೇಶಗಳಲ್ಲಿ ಹೆಚ್ಚಾಗಿ ಕೃಷಿ ಚಟುವಟಿಕೆ ನಡೆಯುವ ದೇಶಗಳಲ್ಲಿ ಲಾವಂಚ ಬಳಕೆ ಹೆಚ್ಚಿದೆ. ಚೀನಾದಲ್ಲಿ ನೀರಿನ ಶುದ್ಧೀಕರಣಕ್ಕಾಗಿ ಲಾವಂಚವನ್ನು ಯಥೇಚ್ಛವಾಗಿ ಬಳಸಲಾಗುತ್ತಿದೆ. ಅಲ್ಲಿನ ಜಲಾನಯನ ಪ್ರದೇಶಗಳಲ್ಲೂ ಮಣ್ಣಿನ ಸವಕಳಿ ತಡೆಗೆ ಈ ಸಸ್ಯವನ್ನು ಬಳಸುತ್ತಿದ್ದಾರೆಂಬ ವರದಿಗಳಿವೆ. ತಮಿಳುನಾಡು ಸೇರಿದಂತೆ ಭಾರತದ ಕೆಲವು ರಾಜ್ಯಗಳಲ್ಲಿ ಲಾವಂಚ ಕೃಷಿ ಚಾಲ್ತಿಯಲ್ಲಿದ್ದು, ಲಾವಂಚ ಬಳಕೆದಾರರ ಸಂಘಟನೆಯ ಜಾಲಗಳು ಕ್ರಿಯಾಶೀಲವಾಗಿವೆ ಎಂಬ ಮಾಹಿತಿ ಇದೆ.
ಕೊನೆಯದಾಗಿ…
ಮಣ್ಣಿನಲ್ಲಿ ಸಾವಯವ ಇಂಗಾಲ ಕೊರತೆ, ಮಣ್ಣಿನ ಸವಕಳಿ ಎಂಬುದು ಪ್ರಸ್ತುತ ಜಾಗತಿಕ ಸಮಸ್ಯೆಯಾಗಿದೆ. ಹೆಚ್ಚುತ್ತಿರುವ ಅತಿವೃಷ್ಟಿ, ಅನಾವೃಷ್ಟಿ ಮತ್ತು ಭೂ ಸವಕಳಿಯಂತಹ ಸಮಸ್ಯೆಗಳ ನಡುವೆ ಲಾವಂಚವು ರೈತರಿಗೆ ಕಡಿಮೆ ವೆಚ್ಚದ, ಪರಿಸರ ಸ್ನೇಹಿ ಹಾಗೂ ವೈಜ್ಞಾನಿಕ ಪರಿಹಾರವಾಗಿದೆ ಎನ್ನುವುದು ತಜ್ಞರ ಅಭಿಮತ.
ಜಲಾನಯನ ಅಭಿವೃದ್ಧಿ, ಮಣ್ಣು-ನೀರಿನ ಸಂರಕ್ಷಣೆ ಮತ್ತು ಸುಸ್ಥಿರ ಕೃಷಿ ಎಂಬ ಮೂರು ಕ್ಷೇತ್ರಗಳನ್ನು ಒಂದೇ ಸಮಯದಲ್ಲಿ ಬೆಂಬಲಿಸುವ ಅಪರೂಪದ ಸಸ್ಯ ಲಾವಂಚವನ್ನು ಬೆಳೆಸುವ ಕುರಿತು ಹೆಚ್ಚು ಹೆಚ್ಚು ಪ್ರಚಾರವಾಗಬೇಕಿದೆ. ಇಂಥದ್ದೊಂದು ಪ್ರಯತ್ನ ಇತ್ತೀಚೆಗೆ ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ(ಐಎಟಿ) ನಡೆಯಿತು. ಐಎಟಿ ಸಂಸ್ಥೆಯೇ 'ಲಾವಂಚ' ಕುರಿತು ಒಂದು ದಿನದ ವಿಚಾರ ಸಂಕಿರಣ ಆಯೋಜಿಸಿತ್ತು. ಲಾವಂಚದ ಮಹತ್ವ ಸಾರುವ ಈ ಪ್ರಯತ್ನದಲ್ಲಿ ತಜ್ಞರು, ಲಾವಂಚ ಬೆಳೆಸುವುದು, ಬಳಸುವುದು ಸೇರಿದಂತೆ ಹಲವು ಆಯಾಮಗಳ ಕುರಿತು ಮಾಹಿತಿ ನೀಡಿದರು. ಲಾವಂಚವನ್ನು ಬೆಳೆಸಿ, ಬಳಸುತ್ತಿರುವ ಸಾಧಕರನ್ನು ಸನ್ಮಾನಿಸಲಾಯಿತು. ಇಂಥ ಪ್ರಯತ್ನಗಳ ಸಂತತಿ ಹೆಚ್ಚಾಗಬೇಕಿದೆ.
ಮಣ್ಣು ಉಳಿದರೆ ನೀರು ಉಳಿಯುತ್ತದೆ; ನೀರು ಉಳಿದರೆ ಕೃಷಿ ಉಳಿಯುತ್ತದೆ. ಆ ದಿಕ್ಕಿನಲ್ಲಿ ಲಾವಂಚವು ಕೇವಲ ಒಂದು ಹುಲ್ಲಲ್ಲ, ಭವಿಷ್ಯದ ಕೃಷಿಗೆ ಭದ್ರ ಬುನಾದಿ ಹಾಕುವ ಜೀವಂತ ಹಸಿರು ಕವಚವಾಗಿದೆ.
ಲಾವಂಚ ಸಸ್ಯ ಜಗತ್ತಿನ ಗಮನ ಸೆಳೆದಿದ್ದು 80ರ ದಶಕಾಂತ್ಯದಲ್ಲಿ. 1987ರಲ್ಲಿ ಮಣ್ಣಿನ ಸವಕಳಿ ಎನ್ನುವುದು ವಿಶ್ವದ ಅತ್ಯಂತ ಗಂಭೀರ ಕೃಷಿ ಸಮಸ್ಯೆಯಾಗಿತ್ತು. ಇದನ್ನು ಗಮನಿಸಿದ ಅಂದಿನ ವಿಶ್ವ ಬ್ಯಾಂಕ್‌ನ ಇಬ್ಬರು ಕೃಷಿ ವಿಜ್ಞಾನಿಗಳಾದ ರಿಚರ್ಡ್ ಗ್ರಿಮ್‌ಶಾ ಮತ್ತು ಜಾನ್ ಗ್ರೀನ್‌ಫೀಲ್ಡ್, ಈ ಸಮಸ್ಯೆ ಯನ್ನು ಸಮರೋಪಾದಿಯಲ್ಲಿ ಪರಿಹರಿಸಲು ನಿರ್ಧರಿಸಿದರು. ಈ ಪ್ರಯತ್ನದ ಭಾಗವಾಗಿ ಇಬ್ಬರೂ ಭಾರತದ ವಿವಿಧ ರಾಜ್ಯಗಳಿಗೆ ಭೇಟಿ ನೀಡಿದಾಗ, ತಮಿಳುನಾಡಿನ ಗುಡಲೂರು ಹಳ್ಳಿಯಲ್ಲಿ(ಗುಂಡ್ಲುಪೇಟೆಯಿಂದ 59 ಕಿ.ಮೀ ದೂರವಿದೆ) ರೈತರು ಮಣ್ಣಿನ ಸವೆತ ತಡೆಯಲು ಬಹಳ ಹಿಂದಿನಿಂದ ಲಾವಂಚ ಬೆಳೆಸುತ್ತಿರುವುದನ್ನು ಗಮನಿಸಿದರು. ಲಾವಂಚ ಬೆಳೆಸುವುದರಿಂದ ಮಳೆ ನೀರಿನ ಹರಿವನ್ನು ಶೇ 70ರಷ್ಟು ಕಡಿಮೆ ಮಾಡುತ್ತಿತ್ತು. ಜತೆಗೆ, ಆ ಊರಿನ ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಿಗೆ ಆಗಿದ್ದನ್ನು ಗ್ರಾಮಸ್ಥರು ಇವರ ಗಮನಕ್ಕೆ ತಂದರು. ಈ ಮಾಹಿತಿ ರಿಚರ್ಡ್ ಮತ್ತು ಜಾನ್ ಅವರಿಗೆ ಅಚ್ಚರಿ ಮೂಡಿಸಿದ್ದಷ್ಟೇ ಅಲ್ಲದೇ 'ದಿ ವೆಟಿವರಲ್ ನೆಟ್‌ವರ್ಕ್' ಎಂಬ ಜಾಗತಿಕ ಮಟ್ಟದ ಸಂಘಟನೆ ಆರಂಭಿಸಲು ಕಾರಣವಾಯಿತು. ಈ ಸಂಘಟನೆಯ ಜಾಲ ಲಾವಂಚದ ತಂತ್ರಜ್ಞಾನವನ್ನು ಜಗತ್ತಿನಾದ್ಯಂತ ಪ್ರಸಾರ ಮಾಡುತ್ತಿದೆ. ಇಪ್ಪತ್ತು ವರ್ಷಗಳ ಹಿಂದೆ, ಜಗತ್ತಿನಾದ್ಯಂತ 20ಕ್ಕೂ ಹೆಚ್ಚು ವೆಟಿವರ್ ನೆಟ್‌ವರ್ಕ್‌ಗಳಿದ್ದವು. ನಂತರ ಪ್ರತಿ ವರ್ಷವೂ ಹೊಸ ಸಂಘಟನೆ ರಚನೆಯಾಗುತ್ತಿದೆ. ಈಗ ಅವುಗಳ ಸಂಖ್ಯೆ ಇನ್ನೂ ಹೆಚ್ಚಾಗಿರಬಹುದು. ಚೀನಾ, ಭಾರತದಲ್ಲೂ ವೆಟಿವರ್ ನೆಟ್‌ವರ್ಕ್‌ಗಳಿವೆ. ಇತ್ತೀಚೆಗೆ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ನಡೆದ 'ಲಾವಂಚ'ದ ವಿಚಾರ ಸಂಕಿರಣಕ್ಕೆ ಟಿವಿಎನ್‌ಐ ಅಧ್ಯಕ್ಷ ಗ್ರಿಮ್‌ಶಾ ಶುಭಾಶಯ ಕೋರಿದ್ದನ್ನು ಆಯೋಜಕರು ಕಾರ್ಯಕ್ರಮದಲ್ಲಿ ನೆನಪಿಸಿಕೊಂಡರು. ಲಾವಂಚದ ಈ ಜಾಲ ನಾಡಿನೆಲ್ಲಡೆ ಆ ಸಸ್ಯದ ಬೇರುಗಳಷ್ಟೇ ವ್ಯಾಪಕವಾಗಿ ಬೇರು ಬಿಡಬೇಕಿದೆ.80ರ ದಶಕದಲ್ಲಿ ಲಾವಂಚ ಸದ್ದು..!
ದಿ ವೆಟಿವರ್ ನೆಟ್‌ವರ್ಕ್ ಇಂಟರ್‌ನ್ಯಾಷನಲ್ ಅಧ್ಯಕ್ಷ ಗ್ರಿಮ್ ಶಾ
ಅನ್ನದ ಬಟ್ಟಲು: ಸಮೃದ್ಧ ಹುಣಸೆ ಇಳುವರಿಗೆ ನೀರು-ಗೊಬ್ಬರವೇ ಜೀವಾಳಅನ್ನದ ಬಟ್ಟಲು: ದೇವೇಂದ್ರರ 'ದೇಸಿ ಭತ್ತದ ತಳಿ' ಲೋಕಅನ್ನದ ಬಟ್ಟಲು: ಅಜೋಲಾ, ಭತ್ತದ ಗದ್ದೆಗಳ ಕವಚಅನ್ನದ ಬಟ್ಟಲು: ಮಳೆ ಕೊರತೆಯ ಹುಲಿಕೆರೆಯಲ್ಲಿ 'ಹಣ್ಣಿನ ತೋಟ' ಅರಳಿದ್ದು ಹೇಗೆ?
