ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಇರಾನ್ ಆಡಳಿತ ಬದಲಾವಣೆಗೆ ಮುಂದಾಗಿತ್ತೇ ಇಸ್ರೇಲ್? ಮೊಸಾದ್ ರಹಸ್ಯ ಸಂಚು ಬಯಲು
ಒಂದು ಸಾಲಿನಲ್ಲಿಇರಾನ್‌ನ ಮಾಜಿ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಅವರನ್ನು ಬಳಸಿಕೊಂಡು ಇರಾನ್‌ನಲ್ಲಿ ಆಡಳಿತ ಬದಲಾವಣೆಗೆ ಇಸ್ರೇಲ್‌ನ ಗುಪ್ತಚರ ಸಂಸ್ಥೆ 'ಮೊಸಾದ್' ರಹಸ್ಯ ಸಂಚು ನಡೆಸಿತೇ ಎಂಬ ಅನುಮಾನ ವ್ಯಕ್ತವಾಗಿದೆ.
ಪ್ರಮುಖ ಪ್ರಶ್ನೋತ್ತರ
ಇರಾನ್ ಮಾಜಿ ಅಧ್ಯಕ್ಷ ಅಹ್ಮದಿನೆಜಾದ್ ಇಸ್ರೇಲ್‌ನೊಂದಿಗೆ ಸಂಪರ್ಕ ಹೊಂದಿದ್ದರೇ?
ದಿ ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಮೊಸಾದ್ ಹಲವು ವರ್ಷಗಳಿಂದ ಅಹ್ಮದಿನೆಜಾದ್ ಅವರೊಂದಿಗೆ ಹಂಗೇರಿ ಸೇರಿದಂತೆ ವಿವಿಧ ದೇಶಗಳಲ್ಲಿ ರಹಸ್ಯ ಸಂಪರ್ಕ ಮತ್ತು ಸಭೆಗಳನ್ನು ನಡೆಸುತ್ತಿತ್ತು.
ಬುಡಾಪೆಸ್ಟ್‌ನಲ್ಲಿ ನಡೆದ ಸಮ್ಮೇಳನದ ನಿಜವಾದ ಉದ್ದೇಶವೇನು?
ಹಂಗೇರಿಯ ಸಮ್ಮೇಳನವೊಂದು ಕೇವಲ ನೆಪವಾಗಿತ್ತು; ಇದರ ಮುಖ್ಯ ಉದ್ದೇಶ ಅಹ್ಮದಿನೆಜಾದ್ ಮತ್ತು ಮೊಸಾದ್ ಅಧಿಕಾರಿಗಳ ನಡುವೆ ರಹಸ್ಯವಾಗಿ ಮಾತುಕತೆ ನಡೆಸುವುದಾಗಿತ್ತು.
ಇಸ್ರೇಲ್ ಇರಾನ್ ಆಡಳಿತವನ್ನು ಬದಲಾಯಿಸಲು ಯಾಕೆ ಮುಂದಾಗಿತ್ತು?
ಅಹ್ಮದಿನೆಜಾದ್ ಅವರ ಅಸ್ತಿತ್ವದ ಜನಪ್ರಿಯತೆಯನ್ನು ಬಳಸಿಕೊಂಡು ಇರಾನ್‌ನಲ್ಲಿ ರಾಜಕೀಯ ಅಸ್ಥಿರತೆ ಉಂಟುಮಾಡಿ, ತಮ್ಮ ಪರವಾಗಿ ಆಡಳಿತವನ್ನು ಬದಲಾಯಿಸುವುದು ಇಸ್ರೇಲ್‌ನ ಗುಪ್ತ ಯೋಜನೆಯಾಗಿತ್ತು.
ಅಹ್ಮದಿನೆಜಾದ್ ಸಂಚಿನ ಭಾಗವಾಗಿದ್ದನ್ನು ಕಂಡುಹಿಡಿದಿದ್ದು ಯಾರು?
ಅಹ್ಮದಿನೆಜಾದ್ ವಿದೇಶ ಪ್ರವಾಸಗಳಲ್ಲಿ ತಮ್ಮ ಭದ್ರತಾ ಸಿಬ್ಬಂದಿಗೆ ಸುಳಿವು ನೀಡದೆ ಕಣ್ತಪ್ಪಿಸಿ ಹೋಗುತ್ತಿದ್ದುದನ್ನು ಗಮನಿಸಿದ ಇರಾನ್‌ನ ಗುಪ್ತಚರ ಪಾಳಯವು ಈ ವಿಷಯವನ್ನು ಪತ್ತೆ ಹಚ್ಚಿತು.
ಅಹ್ಮದಿನೆಜಾದ್ ಅವರ ಪ್ರಸ್ತುತ ಸ್ಥಿತಿ ಏನು?
ವರದಿಗಳ ಪ್ರಕಾರ, ಈ ರಹಸ್ಯ ಸಂಪರ್ಕದ ಹಿನ್ನೆಲೆಯಲ್ಲಿ ಅಹ್ಮದಿನೆಜಾದ್ ಅವರು ಈಗ ಇರಾನ್‌ನ ರೆವಲ್ಯೂಷನರಿ ಗಾರ್ಡ್‌ಗಳ ನಿಗಾದಲ್ಲಿದ್ದು, ಗೃಹಬಂಧನದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಮುಖ ಅಂಕಿಅಂಶಗಳು
3 ಬಾರಿಅಹ್ಮದಿನೆಜಾದ್ ಮರು ಪ್ರಯತ್ನ2005ರಿಂದ 2013ಅವರು ಅಧ್ಯಕ್ಷರಾಗಿದ್ದ ಅವಧಿಫೆಬ್ರುವರಿ 28ಇಸ್ರೇಲ್‌ನ ವಾಯುದಾಳಿ ನಡೆದ ದಿನಜುಲೈ 6ಅಹ್ಮದಿನೆಜಾದ್ ಸಾರ್ವಜನಿಕವಾಗಿ ಕಾಣಿಸಿಕೊಂಡ ದಿನ
ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
2024ರ ಒಂದು ದಿನ..
ಹಂಗೇರಿಯ ರಾಜಧಾನಿ ಬುಡಾಪೆಸ್ಟ್‌ನಲ್ಲಿರುವ 'ಲುಡೋವಿಕಾ ಯೂನಿವರ್ಸಿಟಿ ಆಫ್ ಪಬ್ಲಿಕ್ ಸರ್ವಿಸ್'ನ ಕುಲಪತಿ ಪ್ರೊ. ಗೆರ್ಗೆಲಿ ಡೆಲಿ ಅವರಿಗೆ ಸರ್ಕಾರದ ಹಿರಿಯ ಅಧಿಕಾರಿಯಿಂದ ಅನಿರೀಕ್ಷಿತ ಸಂದೇಶವೊಂದು ಬರುತ್ತದೆ.
'ಹವಾಮಾನ ಬದಲಾವಣೆ ಕುರಿತು ಅಂತರರಾಷ್ಟ್ರೀಯ ಸಮ್ಮೇಳನ ಆಯೋಜಿಸಿ. ಅದಕ್ಕೆ ಇರಾನ್‌ನ ಮಾಜಿ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಅವರನ್ನು ಆಹ್ವಾನಿಸಿ' ಎನ್ನುವುದು ಆ ಸಂದೇಶ.
ಅಮೆರಿಕ-ಇರಾನ್ ಸಂಘರ್ಷ: ಭಾರತೀಯ ಹಡಗು ಸಿಬ್ಬಂದಿಗೆ ಮೃತ್ಯುಕೂಪವಾದ 'ಹೊರ್ಮುಜ್'ಸಾಮಾನ್ಯವಾಗಿ ವಿಶ್ವವಿದ್ಯಾಲಯಗಳಿಗೆ ಇಂತಹ ಸೂಚನೆಗಳು ಹೊಸದೇನಲ್ಲ. ವಿದೇಶಿ ಗಣ್ಯರನ್ನು ಆಹ್ವಾನಿಸುವುದು, ವಿಚಾರ ಸಂಕಿರಣ ನಡೆಸುವುದು, ಜಾಗತಿಕ ಸಮಸ್ಯೆಗಳ ಕುರಿತು ಚರ್ಚಿಸುವುದು ಶೈಕ್ಷಣಿಕ ಸಂಸ್ಥೆಗಳ ದೈನಂದಿನ ಕೆಲಸದ ಭಾಗವೇ. ಆದರೆ ಅಹ್ಮದಿನೆಜಾದ್ ಎಂಬ ಹೆಸರು ಕೇಳಿದ ಕ್ಷಣವೇ ಡೆಲಿ ಅಚ್ಚರಿಗೊಂಡರು.
ಒಂದು ಕಾಲದಲ್ಲಿ ಇಸ್ರೇಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ, ಯಹೂದಿಗಳ ಮೇಲಿನ ನಾಜಿ ನರಮೇಧವನ್ನು (ಹೋಲೋಕಾಸ್ಟ್) ಕಾಲ್ಪನಿಕ ಎಂದಿದ್ದ ಮಹಮೂದ್ ಅಹ್ಮದಿನೆಜಾದ್ ಅವರನ್ನೇ ಹವಾಮಾನ ಸಮ್ಮೇಳನಕ್ಕೆ ಆಹ್ವಾನಿಸುವುದೇ?
ಅದಕ್ಕೆ ಉತ್ತರವಾಗಿ ಬಂದ ಮಾಹಿತಿ ಇನ್ನೂ ಅಚ್ಚರಿಯದ್ದಾಗಿತ್ತು. ಸಮ್ಮೇಳನವೇ ಮುಖ್ಯ ಉದ್ದೇಶವಲ್ಲ. ಅದರ ನೆಪದಲ್ಲಿ ಅಹ್ಮದಿನೆಜಾದ್ ಅವರು ಇಸ್ರೇಲ್‌ನ ಗುಪ್ತಚರ ಸಂಸ್ಥೆ 'ಮೊಸಾದ್' ಅಧಿಕಾರಿಗಳನ್ನು ರಹಸ್ಯವಾಗಿ ಭೇಟಿ ಮಾಡಬೇಕಿತ್ತು ಎಂದು ಅಮೆರಿಕದ 'ದಿ ನ್ಯೂಯಾರ್ಕ್ ಟೈಮ್ಸ್' ತನ್ನ ತನಿಖಾ ವರದಿಯಲ್ಲಿ ಹೇಳಿದೆ. ಈ ಮಾಹಿತಿಯನ್ನು ಅಮೆರಿಕ ಮತ್ತು ಇರಾನ್‌ನ ಅಧಿಕಾರಿಗಳನ್ನು ಉಲ್ಲೇಖಿಸಿ ಪತ್ರಿಕೆ ಪ್ರಕಟಿಸಿದೆ.
ಇದು ಸತ್ಯವಾಗಿದ್ದರೆ, ಮಧ್ಯಪ್ರಾಚ್ಯದ ಗುಪ್ತಚರ ಇತಿಹಾಸದಲ್ಲೇ ಅತ್ಯಂತ ಅಚ್ಚರಿಯ ತಿರುವುಗಳಲ್ಲಿ ಒಂದು. ಏಕೆಂದರೆ ಇದು ಎರಡು ದೇಶಗಳ ಕಥೆಯಲ್ಲ. ಇದು ದಶಕಗಳ ಕಾಲ ಪರಸ್ಪರ ಅಸ್ತಿತ್ವವನ್ನೇ ಪ್ರಶ್ನಿಸಿಕೊಂಡಿದ್ದ ಇಬ್ಬರು ಕಡು ವೈರಿಗಳ ಕಥೆ.
ಶತ್ರುವಿನ ಶತ್ರು..?
ಮಹಮೂದ್ ಅಹ್ಮದಿನೆಜಾದ್ ಎಂಬ ಹೆಸರು ಕೇಳಿದಾಗ ಜಗತ್ತಿನ ಬಹುತೇಕರಿಗೆ ನೆನಪಾಗುವುದು ಅವರ ಅಧ್ಯಕ್ಷೀಯ ಅವಧಿಯ ಉಗ್ರ ಭಾಷಣಗಳು. 2005ರಿಂದ 2013ರವರೆಗೆ ಅವರು ಇರಾನ್ ಅಧ್ಯಕ್ಷರಾಗಿದ್ದಾಗ, ಇಸ್ರೇಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಇರಾನ್‌ನ ಅಣುಕಾರ್ಯಕ್ರಮಕ್ಕೂ ಅದೇ ವೇಳೆ ವೇಗ ಸಿಕ್ಕಿತ್ತು. ಪಾಶ್ಚಾತ್ಯ ರಾಷ್ಟ್ರಗಳು ಇರಾನ್ ಮೇಲೆ ಕಠಿಣ ನಿರ್ಬಂಧ ಹೇರಿದ್ದವು. ಅಂತಹ ನಾಯಕನಿಗೆ ಮತ್ತೆ ಇರಾನ್‌ನ ಚುಕ್ಕಾಣಿ ಕೊಡಲು ಇಸ್ರೇಲ್ ಮುಂದಾಗಿತ್ತು ಎನ್ನುವುದು ಈಗಿನ ಪ್ರಮುಖ ಚರ್ಚಾ ವಿಷಯ.
ಇದು ಗೊತ್ತಾಗಿದ್ದು ಹೇಗೆ?
ಈ ಚರ್ಚೆಗೆ ಕಾರಣವಾದದ್ದು ದಿ ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದ ಸುದೀರ್ಘ ತನಿಖಾ ವರದಿ. ಅದರ ಪ್ರಕಾರ, ಮೊಸಾದ್ ಹಲವು ವರ್ಷಗಳಿಂದ ಅಹ್ಮದಿನೆಜಾದ್ ಅವರೊಂದಿಗೆ ಸಂಪರ್ಕ ಬೆಳೆಸಿತ್ತು. ಹಂಗೇರಿ ಸೇರಿದಂತೆ ವಿವಿಧ ದೇಶಗಳಲ್ಲಿ ರಹಸ್ಯ ಭೇಟಿಗಳು ನಡೆದಿದ್ದವು. ಇರಾನ್‌ನಲ್ಲಿ ಆಡಳಿತ ಬದಲಾವಣೆಗೆ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾದರೆ, ಅಹ್ಮದಿನೆಜಾದ್ ಅವರನ್ನು ಮತ್ತೆ ಅಧಿಕಾರಕ್ಕೆ ತರುವ ಯೋಜನೆಯೂ ಅದರ ಭಾಗವಾಗಿತ್ತು ಎಂದು ವರದಿ ಹೇಳುತ್ತದೆ.
ನ್ಯೂಯಾರ್ಕ್ ಟೈಮ್ಸ್‌ನ ಈ ವರದಿಯು ಅಮೆರಿಕ ಮತ್ತು ಇರಾನ್ ಅನಾಮಧೇಯ ಅಧಿಕಾರಿಗಳು ನೀಡಿದ ಮಾಹಿತಿ ಆಧರಿಸಿ ಸಿದ್ದಪಡಿಸಲಾಗಿದೆ. ಈ ಆರೋಪಗಳ ಬಗ್ಗೆ ಇಸ್ರೇಲ್ ಸರ್ಕಾರ ಪ್ರತಿಕ್ರಿಯಿಸಿಲ್ಲ. ಅಹ್ಮದಿನೆಜಾದ್ ಅವರ ವಕ್ತಾರರೂ ಹೇಳಿಕೆ ನಿರಾಕರಿಸಿದ್ದಾರೆ. 'ದಿ ಗಾರ್ಡಿಯನ್', ಹಾಗೂ 'ಅಲ್ ಜಜೀರಾ' ಸೇರಿ ಪ್ರತಿಷ್ಠಿತ ಅಂತರರಾಷ್ಟ್ರೀಯ ಮಾಧ್ಯಮಗಳೂ ಕೂಡ ಈ ಉಲ್ಲೇಖವನ್ನು ಆಧರಿಸಿ ವರದಿ ಮಾಡಿವೆ.
ಅಡುಗೆ ಮನೆಗೆ ತಟ್ಟಲಿದೆ ಪ್ರಶಾಂತ ಸಾಗರದ ಬಿಸಿ: ಅಕ್ಕಿ, ಸಕ್ಕರೆ, ಎಣ್ಣೆ ದುಬಾರಿ!ಅಹ್ಮದಿನೆಜಾದ್ ಯಾರು?
2005ರಲ್ಲಿ ಮಹಮೂದ್ ಅಹ್ಮದಿನೆಜಾದ್ ಇರಾನ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗ, ಪಶ್ಚಿಮ ಏಷ್ಯಾ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಯಿತು. ಸಾಮಾನ್ಯ ಕುಟುಂಬದಿಂದ ಬಂದ ಅವರು, ತಮ್ಮನ್ನು 'ಜನಸಾಮಾನ್ಯರ ನಾಯಕ' ಎಂದು ಬಿಂಬಿಸಿಕೊಂಡಿದ್ದರು. ಆದರೆ ಅಧಿಕಾರಕ್ಕೆ ಬಂದ ಕೆಲವೇ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಅವರು ಬೇರೆ ಕಾರಣಕ್ಕೆ ಸುದ್ದಿಯಾದರು.
ಇಸ್ರೇಲ್ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದ ಅವರು, ಇರಾನ್‌ನ ಅಣುಕಾರ್ಯಕ್ರಮಕ್ಕೆ ವೇಗ ನೀಡಿದರು. ಅಮೆರಿಕದ ವಿರುದ್ಧ ಕಠಿಣ ನಿಲುವು ತಾಳಿದರು. ಹೋಲೋಕಾಸ್ಟ್ ಅನ್ನು ಪ್ರಶ್ನಿಸಿ ವಿವಾದಾತ್ಮಕ ಹೇಳಿಕೆಗಳನ್ನೂ ನೀಡಿದರು. ಈ ಎಲ್ಲ ಕಾರಣಗಳಿಂದ ಅವರು ಪಾಶ್ಚಾತ್ಯ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಇಸ್ರೇಲ್ ಕೂಡ ಅವರನ್ನು ಬೆದರಿಕೆ ಎಂದು ಪರಿಗಣಿಸಿತ್ತು. ಆದರೆ 2013ರಲ್ಲಿ ಅಧಿಕಾರದಿಂದ ಕೆಳಗಿಳಿದ ನಂತರ ಅವರ ರಾಜಕೀಯ ಬದುಕು ಅನಿರೀಕ್ಷಿತ ತಿರುವು ಪಡೆಯತೊಡಗಿತು.
ಅಧಿಕಾರ ಕಳೆದುಕೊಂಡ ನಂತರ ಆಗಿದ್ದೇನು?
2013ರಲ್ಲಿ ಅಧ್ಯಕ್ಷ ಸ್ಥಾನದಿಂದ ಹೊರಬಂದ ಬಳಿಕ ಅಹ್ಮದಿನೆಜಾದ್ ರಾಜಕೀಯದಿಂದ ದೂರವಾಗಲಿಲ್ಲ. ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸಿದರು. ಆದರೆ ಪ್ರತಿಬಾರಿಯೂ ಅವರಿಗೆ ನಿರಾಸೆಯೇ ಎದುರಾಯಿತು.
ಇರಾನ್‌ನ ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಗಾರ್ಡಿಯನ್ ಕೌನ್ಸಿಲ್ ಮೂರು ಬಾರಿ ಅವರ ಉಮೇದುವಾರಿಕೆಯನ್ನು ತಿರಸ್ಕರಿಸಿತು. ಇದರ ಪರಿಣಾಮವಾಗಿ ಅವರು ರಾಜಕೀಯವಾಗಿ ತೆರೆಮರೆಗೆ ಸರಿಯತೊಡಗಿದರು. ಅಲ್ಲಿಂದಲೇ ಅವರ ಮತ್ತು ಇರಾನ್ ಆಡಳಿತದ ನಡುವಿನ ಬಿರುಕು ದೊಡ್ಡದಾಯಿತು. ಆದಾದ ಬಳಿಕ ಇರಾನ್ ಆಡಳಿತದ ವಿರುದ್ಧ ಬಹಿರಂಗವಾಗಿ ಮಾತನಾಡತೊಡಗಿದರು. ಭ್ರಷ್ಟಾಚಾರ, ಅಧಿಕಾರದ ಕೇಂದ್ರೀಕರಣ ಮತ್ತು ಭದ್ರತಾ ಸಂಸ್ಥೆಗಳ ಪ್ರಭಾವವನ್ನು ಪ್ರಶ್ನಿಸತೊಡಗಿದರು. ಅಧಿಕಾರದಿಂದ ಕೆಳಗಿಳಿದಿದ್ದರೂ, ಗ್ರಾಮೀಣ ಮತ್ತು ಕಾರ್ಮಿಕ ವರ್ಗದ ಜನರಲ್ಲಿ ಅವರಿಗೆ ಬೆಂಬಲ ಇತ್ತು.
ಇದೇ ಇಸ್ರೇಲ್‌ನ ಗಮನ ಸೆಳೆಯಿತು ಎನ್ನುವುದು ನ್ಯೂಯಾರ್ಕ್ ಟೈಮ್ಸ್ ವರದಿ. ಇಸ್ರೇಲ್‌ನ ಗುಪ್ತಚರ ಸಂಸ್ಥೆಗಳು ಇದೇ ಬೆಳವಣಿಗೆಯನ್ನು ನಿಕಟವಾಗಿ ಗಮನಿಸುತ್ತಿದ್ದವು. ವಿಶೇಷವಾಗಿ, ಅಹ್ಮದಿನೆಜಾದ್ ಮತ್ತು ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಡುವಿನ ರಾಜಕೀಯ ಅಂತರ ಹೆಚ್ಚಾಗುತ್ತಿರುವುದನ್ನು ಅವರು ಗಮನಿಸಿದ್ದರು ಎಂದು ವರದಿ ಹೇಳುತ್ತದೆ.
ಹೊರ್ಮುಜ್ ವಿಚಾರದಲ್ಲಿ ಟ್ರಂಪ್ ಯೂ-ಟರ್ನ್: ಮತ್ತೆ ಆತಂಕದಲ್ಲಿ ಜಾಗತಿಕ ಉದ್ಯಮಮತ್ತೆ ಅಧಿಕಾರ ಬಯಸಿದ್ದರಾ ಅಹ್ಮದಿನೆಜಾದ್?
ಅಹ್ಮದಿನೆಜಾದ್ ತಮ್ಮ ಆಪ್ತರೊಂದಿಗೆ ಮಾತನಾಡುವಾಗ, ಇರಾನ್‌ನಲ್ಲಿರುವ ಈಗಿನ ವ್ಯವಸ್ಥೆಯ ಮೂಲಕ ಮತ್ತೆ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ. ಅಧಿಕಾರ ವ್ಯವಸ್ಥೆಯೇ ಬದಲಾಗಿದರೆ ಮಾತ್ರ ತಮಗೆ ಮತ್ತೊಮ್ಮೆ ಅವಕಾಶ ಸಿಗಬಹುದು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದರು ಎಂದು ವರದಿ ಹೇಳಿದೆ.
ಈ ಅವಧಿಯಲ್ಲಿ ಅವರಲ್ಲಿ ಹಲವು ಬದಲಾವಣೆಗಳು ಕಂಡವು. ಇಸ್ರೇಲ್ ವಿರುದ್ಧದ ಆಕ್ರಮಣಕಾರಿ ಭಾಷಣಗಳು ಕಡಿಮೆಯಾದವು. ನಾಗರಿಕರ ಸಮಸ್ಯೆಗಳನ್ನು ಆಲಿಸುವ ಸಭೆಗಳನ್ನು ನಡೆಸುತ್ತಿದ್ದರು. ಭ್ರಷ್ಟಾಚಾರವನ್ನು ಬಹಿರಂಗವಾಗಿ ಟೀಕಿಸುತ್ತಿದ್ದರು. ಇಂಗ್ಲಿಷ್ ಭಾಷೆಯಲ್ಲಿ ಹೆಚ್ಚು ಭಾಷಣ ಮಾಡತೊಡಗಿದರು. ವಿದೇಶಿ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸಲಾರಂಭಿಸಿದರು. ಇದು ರಾಜಕೀಯ ಪರಿವರ್ತನೆಯೇ, ಅಥವಾ ಮತ್ತೆ ಅಧಿಕಾರಕ್ಕೆ ಬರಲು ರೂಪಿಸಿದ ಹೊಸ ರಾಜಕೀಯ ತಂತ್ರವೇ ಎಂಬ ಪ್ರಶ್ನೆ ಇರಾನ್‌ನಲ್ಲಿಯೂ ಚರ್ಚೆಯಾಗಿತ್ತು. ಆದರೆ ಇಸ್ರೇಲ್ ಕಣ್ಣಿಗೆ ಇಂತಹ ವ್ಯಕ್ತಿ 'ಬಳಸಬಹುದಾದ ಸಂಪನ್ಮೂಲ'ದಂತೆ ಕಂಡಿತು.
ಬುಡಾಪೆಸ್ಟ್ ಆಹ್ವಾನದ ಹಿಂದಿನ ರಹಸ್ಯ
ಒಂದು ಕಾಲದಲ್ಲಿ ಇಸ್ರೇಲ್ ವಿರುದ್ಧ ಅತ್ಯಂತ ಕಟುವಾಗಿ ಮಾತನಾಡಿದ್ದ, ಇರಾನ್‌ನ ಮಾಜಿ ಅಧ್ಯಕ್ಷರು ಹವಾಮಾನ ಬದಲಾವಣೆ ಕುರಿತ ಸಮ್ಮೇಳನದಲ್ಲಿ ಭಾಗವಹಿಸುವುದು ಅಚ್ಚರಿ ಮೂಡಿಸಿತ್ತು. ಆ ಸಮ್ಮೇಳನದ ನಿಜವಾದ ಉದ್ದೇಶ ಶೈಕ್ಷಣಿಕ ಚರ್ಚೆಯಲ್ಲ. ಅಹ್ಮದಿನೆಜಾದ್ ಮತ್ತು ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್ ಅಧಿಕಾರಿಗಳ ನಡುವೆ ಬುಡಾಪೆಸ್ಟ್‌ನಲ್ಲಿ ರಹಸ್ಯ ಮಾತುಕತೆ ನಡೆಸಲು ವೇದಿಕೆ ಕಲ್ಪಿಸುವುದಾಗಿತ್ತು. ಆ ಸಮ್ಮೇಳನ ಅದಕ್ಕೆ ನೆಪ ಮಾತ್ರವಾಗಿತ್ತು.
ಭೂಮಿಗಿಂತ ಮೊದಲೇ ಬಾಹ್ಯಾಕಾಶದಲ್ಲಿ ಸಕ್ಕರೆ ಇತ್ತೇ? ಹೊಸ ಸಂಶೋಧನೆಯಲ್ಲಿ ಸುಳಿವುಹಂಗೇರಿಯೇ ಏಕೆ?
ಆ ಸಮಯದಲ್ಲಿ ಹಂಗೇರಿಯ ಪ್ರಧಾನಿ ವಿಕ್ಟರ್ ಓರ್ಬಾನ್ ಸರ್ಕಾರ ಮತ್ತು ಇಸ್ರೇಲ್ ನಡುವೆ ಆತ್ಮೀಯ ರಾಜತಾಂತ್ರಿಕ ಸಂಬಂಧಗಳಿದ್ದವು. ಯುರೋಪಿನ ಹಲವು ರಾಷ್ಟ್ರಗಳು ಇಸ್ರೇಲ್ ವಿರುದ್ಧ ನಿಲುವು ತಾಳಿದ್ದ ಸಂದರ್ಭದಲ್ಲೂ, ಹಂಗೇರಿ ಮಾತ್ರ ಬೆಂಜಮಿನ್ ನೆತನ್ಯಾಹು ಸರ್ಕಾರದೊಂದಿಗೆ ನಿಕಟ ಸಂಬಂಧ ಉಳಿಸಿಕೊಂಡಿತ್ತು. ನೆತನ್ಯಾಹು ಹಲವು ಬಾರಿ ಹಂಗೇರಿಗೆ ಭೇಟಿ ನೀಡಿದ್ದರು. ಹಂಗೇರಿ ನಾಯಕರೂ ಇಸ್ರೇಲ್‌ನೊಂದಿಗೆ ಭದ್ರತಾ ಮತ್ತು ರಾಜಕೀಯ ಸಹಕಾರವನ್ನು ಹೆಚ್ಚಿಸಿದ್ದರು. ಈ ಹಿನ್ನೆಲೆ ಬುಡಾಪೆಸ್ಟ್ ಅನ್ನು ಇಂತಹ ಸೂಕ್ಷ್ಮ ಭೇಟಿಗಳಿಗೆ ಅನುಕೂಲಕರ ಸ್ಥಳ ಎಂದು ವಿಶ್ಲೇಷಕರು ಹೇಳುತ್ತಾರೆ.
2025ರಲ್ಲಿ ಅಹ್ಮದಿನೆಜಾದ್ ಮತ್ತೊಮ್ಮೆ ಹಂಗೇರಿಗೆ ತೆರಳಿದರು. ಆ ವೇಳೆಗೆ ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚುತ್ತಿತ್ತು. ಟೈಮ್ಸ್ ವರದಿಯ ಪ್ರಕಾರ, ಆ ವೇಳೆಯೂ ಅವರು ಮೊಸಾದ್ ಅಧಿಕಾರಿಗಳನ್ನು ಮತ್ತೊಮ್ಮೆ ಭೇಟಿಯಾಗಿದ್ದರು.
ಭದ್ರತಾ ಸಿಬ್ಬಂದಿಗೆ ಸಿಕ್ಕ ಸುಳಿವು
ಅಹ್ಮದಿನೆಜಾದ್ ಇರಾನ್‌ನ ಮಾಜಿ ಅಧ್ಯಕ್ಷರಾಗಿದ್ದರಿಂದ, ಅವರು ವಿದೇಶ ಪ್ರವಾಸ ಕೈಗೊಂಡಾಗಲೆಲ್ಲ 'ಅನ್ಸಾರ್' ರಕ್ಷಣಾ ಘಟಕದ ಭದ್ರತಾ ಸಿಬ್ಬಂದಿ ಅವರೊಂದಿಗೆ ಇರುತ್ತಿದ್ದರು. ಮಾಜಿ ಹಾಗೂ ಹಾಲಿ ಹಿರಿಯ ಅಧಿಕಾರಿಗಳಿಗೆ ಭದ್ರತೆ ಒದಗಿಸುವ ಜವಾಬ್ದಾರಿ ಈ ಘಟಕದ್ದು.
ಆದರೆ ಬುಡಾಪೆಸ್ಟ್ ಪ್ರವಾಸದ ವೇಳೆ ಅನಿರೀಕ್ಷಿತ ಘಟನೆಯೊಂದು ನಡೆಯಿತು. ಎರಡೂ ಸಂದರ್ಭಗಳಲ್ಲಿ ಅಹ್ಮದಿನೆಜಾದ್ ತಮ್ಮ ಭದ್ರತಾ ಸಿಬ್ಬಂದಿಯಿಂದ ತಪ್ಪಿಸಿಕೊಂಡಿದ್ದರು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಹೇಳಿದೆ. ವಿಶ್ವವಿದ್ಯಾಲಯದ ಕೆಲವು ಪ್ರಾಧ್ಯಾಪಕರನ್ನು ಭೇಟಿ ಮಾಡಿದ್ದೆ ಎಂದು ಅವರು ಹೇಳಿದ್ದರು. ಭದ್ರತಾ ಸಿಬ್ಬಂದಿಗೆ ಅನುಮಾನ ಉಂಟಾಯಿತು. ಈ ಬೆಳವಣಿಗೆಯ ಮಾಹಿತಿ ಇರಾನ್‌ನ ಗುಪ್ತಚರ ಸಂಸ್ಥೆಗಳಿಗೂ ತಲುಪಿತು. ಆ ಬಳಿಕ ಅಹ್ಮದಿನೆಜಾದ್ ಅವರ ಚಟುವಟಿಕೆಗಳ ಮೇಲೆ ನಿಗಾ ಮತ್ತಷ್ಟು ಬಿಗಿಯಾಯಿತು.
ಹೊರ್ಮುಜ್‌ನಲ್ಲಿ ಶೇ 20 ಶುಲ್ಕ? ಜಾಗತಿಕ ವ್ಯಾಪಾರಕ್ಕೆ ಹೊಸ ಆರ್ಥಿಕ ಆಘಾತಅಂದು ಮಾತನಾಡಿದ್ದೇನು?
ಬುಡಾಪೆಸ್ಟ್ ಸಮ್ಮೇಳನದಲ್ಲಿ ಅಹ್ಮದಿನೆಜಾದ್ ಅವರ ಭಾಷಣವೂ ಗಮನ ಸೆಳೆಯಿತು. ಅಧ್ಯಕ್ಷರಾಗಿದ್ದಾ ಮಾಡುತ್ತಿದ್ದ ಭಾಷಣಗಳಿಗೆ ಹೋಲಿಸಿದರೆ ಈ ಬಾರಿ ಧಾಟಿಯಲ್ಲೂ, ವಿಷಯದಲ್ಲೂ ಗಮನಾರ್ಹ ಬದಲಾವಣೆಗಳಿದ್ದವು. ಇಂಗ್ಲಿಷ್‌ನಲ್ಲೇ ಮಾತನಾಡಿದರು. ಭಾಷಣ ಆರಂಭಿಸುವಾಗ ಉಲ್ಲೇಖಿಸುತ್ತಿದ್ದ ಕುರ್‌ಆನ್ ಸೂಕ್ತಗಳನ್ನೂ ಅಂದು ಪ್ರಸ್ತಾಪಿಸಲಿಲ್ಲ. ಬದಲಾಗುತ್ತಿರುವ ವಿಶ್ವ ವ್ಯವಸ್ಥೆ, ಮಾನವಕುಲದ ಸಾಮಾನ್ಯ ಭವಿಷ್ಯ ಮತ್ತು ಅಂತರರಾಷ್ಟ್ರೀಯ ಸಹಕಾರದ ಬಗ್ಗೆ ಮಾತನಾಡಿದರು.
ಒಂದು ಕಾಲದಲ್ಲಿ ಇಸ್ರೇಲ್ ಮತ್ತು ಪಾಶ್ಚಾತ್ಯ ರಾಷ್ಟ್ರಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದ ನಾಯಕನ ಭಾಷಣದಲ್ಲಿ ಕಂಡ ಈ ಬದಲಾವಣೆ ಅಲ್ಲಿದ್ದವರ ಗಮನ ಸೆಳೆಯಿತು ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಹೇಳುತ್ತದೆ.
ಮಾತುಕತೆಯ ಆಚೆಗೂ ಯೋಜನೆ ಇತ್ತೇ?
ವಿಶ್ವವಿದ್ಯಾಲಯದ ಸಮ್ಮೇಳನ… ರಹಸ್ಯ ಭೇಟಿಗಳು… ಭದ್ರತಾ ಸಿಬ್ಬಂದಿಯ ಅನುಮಾನ.. ಇವುಗಳು ಕಾಕತಾಳೀಯವಾಗಿ ಕಂಡರೂ, ಇವೆಲ್ಲವೂ ಹಲವು ವರ್ಷಗಳಿಂದ ನಡೆಯುತ್ತಿದ್ದ ಒಂದು ದೊಡ್ಡ ಕಾರ್ಯಾಚರಣೆಯ ಭಾಗವಾಗಿದ್ದವು ಎಂದು ವರದಿ ಹೇಳುತ್ತದೆ. ಇರಾನ್‌ನಲ್ಲಿ ರಾಜಕೀಯ ಬದಲಾವಣೆಗೆ ಅವಕಾಶ ಸಿಕ್ಕರೆ, ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯತಂತ್ರ ರೂಪಿಸಲಾಗಿತ್ತು. ಆ ಕಾರ್ಯತಂತ್ರದಲ್ಲಿ ಅಹ್ಮದಿನೆಜಾದ್ ಅವರಿಗೆ ಪ್ರಮುಖ ರಾಜಕೀಯ ಪಾತ್ರ ಕಲ್ಪಿಸುವ ಸಾಧ್ಯತೆಯನ್ನೂ ಪರಿಶೀಲಿಸಲಾಗಿತ್ತು ಎಂದು ವರದಿ ಹೇಳುತ್ತದೆ.
ಒಪ್ಪಂದದ ಭಾಷೆಯಲ್ಲೇ ಹೊಸ ಬಿಕ್ಕಟ್ಟು: ಹೊರ್ಮುಜ್ ಈಗ ಜಾಗತಿಕ ಪೈಪೋಟಿಯ ಅಖಾಡಅಹ್ಮದಿನೆಜಾದ್ ಯಾಕೆ?
ಅವರು ಎಂಟು ವರ್ಷ ಇರಾನ್ ಅಧ್ಯಕ್ಷರಾಗಿದ್ದರು. ಅಲ್ಲಿ ಅವರಿಗೆ ಜನ ಬೆಂಬಲವೂ ಇತ್ತು. ಆಡಳಿತದೊಂದಿಗೆ ಅವರ ಸಂಬಂಧ ಹದಗೆಟ್ಟಿದ್ದರೂ, ರಾಜಕೀಯವಾಗಿ ಅವರು ಸಂಪೂರ್ಣವಾಗಿ ಮರೆಯಾಗಿರಲಿಲ್ಲ. ಇದೇ ಕಾರಣದಿಂದ ಅವರು ಮೊಸಾದ್‌ನ ಗಮನ ಸೆಳೆದಿದ್ದರು ಎಂದು ವರದಿ ಹೇಳುತ್ತದೆ. ಇರಾನ್‌ನಲ್ಲಿ ಅನಿರೀಕ್ಷಿತ ರಾಜಕೀಯ ಬೆಳವಣಿಗೆ ನಡೆದರೆ, ಈಗಾಗಲೇ ದೇಶದೊಳಗೆ ಪರಿಚಿತನಾಗಿರುವ ವ್ಯಕ್ತಿಗೆ ಪ್ರಮುಖ ಪಾತ್ರ ನೀಡುವುದು ಹೆಚ್ಚು ಕಾರ್ಯಸಾಧು ಎನ್ನುವ ಲೆಕ್ಕಾಚಾರ ಮೊಸಾದ್‌ನದ್ದು. ಅದಕ್ಕಾಗಿಯೇ ಅಹ್ಮದಿನೆಜಾದ್ ಅವರೊಂದಿಗೆ ಹಲವು ವರ್ಷಗಳು ಸಂಪರ್ಕ ಕಾಯ್ದುಕೊಳ್ಳಲು ಪ್ರಯತ್ನಿಸಲಾಯಿತು ಎಂದು ವರದಿ ಹೇಳುತ್ತದೆ.
ಎಂಟು ವರ್ಷ ಅಧ್ಯಕ್ಷರಾಗಿದ್ದುದು, ಇರಾನ್ ಆಡಳಿತದ ನಡುವಿನ ಸಂಬಂಧ ಹದಗೆಟ್ಟಿರುವುದು ಹಾಗೂ ಮತ್ತೆ ಅಧಿಕಾರಕ್ಕೆ ಬರುವ ಆಸೆ ಅವರಲ್ಲಿ ಇದ್ದುದ್ದರಿಂದ ಅಹ್ಮದಿನೆಜಾದ್ ಅವರ ಚಟುವಟಿಕೆಗಳನ್ನು ಮೊಸಾದ್ ಗಮನಿಸುತ್ತಿತ್ತು ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಹೇಳುತ್ತದೆ.
ಇರಾನ್‌ನಲ್ಲಿ ಆಡಳಿತ ಬದಲಾವಣೆಗೆ ಯೋಜನೆ ಇತ್ತೇ?
ಒಬ್ಬ ಮಾಜಿ ಅಧ್ಯಕ್ಷನೊಂದಿಗೆ ರಹಸ್ಯ ಸಂಪರ್ಕ ಬೆಳೆಸುವುದು ಒಂದು ವಿಷಯ. ಆದರೆ ಆ ಸಂಪರ್ಕದ ಉದ್ದೇಶವೇನು?
ವರದಿಯ ಪ್ರಕಾರ, ಇದು ಕೇವಲ ಮಾಹಿತಿ ಸಂಗ್ರಹಿಸುವ ಕಾರ್ಯಾಚರಣೆಯಾಗಿರಲಿಲ್ಲ. ಇರಾನ್‌ನಲ್ಲಿ ಆಡಳಿತ ಬದಲಾವಣೆಗೆ ಅವಕಾಶ ಸಿಕ್ಕರೆ ಅದನ್ನು ಮಾಡಲೂ ಮುಂದಾಗಿತ್ತು. ಆ ಸಂದರ್ಭದಲ್ಲಿ ಮಹಮೂದ್ ಅಹ್ಮದಿನೆಜಾದ್ ಅವರಿಗೆ ಪ್ರಮುಖ ರಾಜಕೀಯ ಸ್ಥಾನ ನೀಡುವ ಸಾಧ್ಯತೆಯನ್ನೂ ಪರಿಗಣಿಸಲಾಗಿತ್ತು ಎಂದು ವರದಿ ಹೇಳುತ್ತದೆ.
ಉತ್ತರ ಇರಾಕ್‌ನಲ್ಲಿ ನೆಲೆಸಿದ್ದ ಇರಾನಿನ ಕುರ್ಡ್ ವಿರೋಧಿ ಪಡೆಗಳಿಗೆ ತರಬೇತಿ ಮತ್ತು ಶಸ್ತ್ರಾಸ್ತ್ರ ಒದಗಿಸುವ ಯೋಜನೆಯೂ ಅದರಲ್ಲಿ ಸೇರಿತ್ತು. ಇರಾನ್‌ನಲ್ಲಿ ರಾಜಕೀಯ ಅಸ್ಥಿರತೆ ಉಂಟಾದರೆ, ಈ ಪಡೆಗಳನ್ನು ಪಶ್ಚಿಮ ಇರಾನ್‌ಗೆ ಕಳುಹಿಸಿ ಕೆಲವು ಪ್ರದೇಶಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಯೋಚನೆಯೂ ಇತ್ತು ಎಂದು ವರದಿ ಹೇಳುತ್ತದೆ. ಇದೇ ವೇಳೆ, ಮಹಮೂದ್ ಅಹ್ಮದಿನೆಜಾದ್ ಅವರನ್ನು ಹೊಸ ರಾಜಕೀಯ ಮುಖವಾಗಿ ಮುಂದಿಡುವ ಸಾಧ್ಯತೆಯನ್ನೂ ಪರಿಶೀಲಿಸಲಾಗಿತ್ತು ಎನ್ನಲಾಗಿದೆ.
ಫಲಿಸದ ಒತ್ತಡ, ಉಳಿಯದ ಒಪ್ಪಂದ...ಇರಾನ್ ಎದುರು ಟ್ರಂಪ್ ಮುಂದಿನ ನಡೆ ಏನು?ಅಹ್ಮದಿನೆಜಾದ್ ಅವರಿಗೆ ಈ ಯೋಜನೆಯ ಸಂಪೂರ್ಣ ಮಾಹಿತಿ ಇತ್ತೇ? ಅವರು ಇದಕ್ಕೆ ಒಪ್ಪಿಗೆ ನೀಡಿದ್ದರೇ? ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ವರದಿಯಲ್ಲಿಲ್ಲ. ಆದರೆ, ಹಲವು ವರ್ಷಗಳು ಅವರೊಂದಿಗೆ ಸಂಪರ್ಕ ಕಾಯ್ದುಕೊಳ್ಳಲಾಗಿತ್ತು. ಅವರನ್ನು ಭವಿಷ್ಯದ ರಾಜಕೀಯ ಆಯ್ಕೆಯಾಗಿ ಪರಿಗಣಿಸಲಾಗಿತ್ತು ಎಂದು ವರದಿ ಹೇಳುತ್ತದೆ.
ಈ ಬಗ್ಗೆ ಖಾಸಗಿ ಟಿ.ವಿ. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಇಸ್ರೇಲ್ ಸೇನೆಯ ಮಾಜಿ ಗುಪ್ತಚರ ಮುಖ್ಯಸ್ಥ ತಮೀರ್ ಹೇಮನ್, 'ಇರಾನ್‌ಗೆ ಸಂಬಂಧಿಸಿದ ಕಾರ್ಯಾಚರಣೆಯಲ್ಲಿ ಅತ್ಯಂತ ವಿಶೇಷವಾದ ಸರಣಿ ಇತ್ತು' ಎಂದು ಹೇಳಿದ್ದಾರೆ. ಅಹ್ಮದಿನೆಜಾದ್ ಕೂಡ ಆ ಸರಣಿಯ ಭಾಗವಾಗಿದ್ದರು ಎಂದು ಅವರು ಹೇಳಿದ್ದರೂ, ಕಾರ್ಯಾಚರಣೆಯ ವಿವರಗಳನ್ನು ಬಹಿರಂಗಪಡಿಸಲಿಲ್ಲ.
ದಾಳಿಯ ವೇಳೆ
ಫೆಬ್ರುವರಿ 28ರಂದು ಅಹ್ಮದಿನೆಜಾದ್ ವಾಸಿಸುತ್ತಿದ್ದ ಸಂಕೀರ್ಣದ ಸಮೀಪ ಇಸ್ರೇಲ್ ವೈಮಾನಿಕ ದಾಳಿ ನಡೆಸಿತು. ಈ ದಾಳಿಯಲ್ಲಿ ಅವರ ಭದ್ರತಾ ಸಿಬ್ಬಂದಿ ಬಳಸುತ್ತಿದ್ದ ಕಟ್ಟಡ ಮತ್ತು ಶಸ್ತ್ರಸಜ್ಜಿತ ವಾಹನ ಗುರಿಯಾಗಿತ್ತು ಎಂದು ವರದಿ ಹೇಳುತ್ತದೆ. ಈ ದಾಳಿಯ ಉದ್ದೇಶದ ಬಗ್ಗೆ ಇಸ್ರೇಲ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ದಾಳಿಯ ಕೆಲವೇ ಕ್ಷಣಗಳ ಬಳಿಕ ಕಪ್ಪು ಬಣ್ಣದ ಪ್ಯುಜೋ ಕಾರೊಂದು ಅಲ್ಲಿಗೆ ಬಂತು. ಅಹ್ಮದಿನೆಜಾದ್ ಅದರಲ್ಲಿ ಕುಳಿತು ಅಲ್ಲಿಂದ ಹೊರಟರು. ಆ ಕಾರನ್ನು ಮೊಸಾದ್ ಕಾರ್ಯಕರ್ತರು ಚಲಾಯಿಸುತ್ತಿದ್ದರು. ಅವರು ಅಹ್ಮದಿನೆಜಾದ್ ಅವರನ್ನು ಇರಾನ್‌ನೊಳಗಿನ ರಹಸ್ಯ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು ಎನ್ನುವುದನ್ನು ವರದಿ ಉಲ್ಲೇಖಿಸಿದೆ.
ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾದ ಬಳಿಕ ಅಹ್ಮದಿನೆಜಾದ್ ಅಸಮಾಧಾನಗೊಂಡಿದ್ದರು. ಕಾರ್ಯಾಚರಣೆಯ ವಿಧಾನ ಮತ್ತು ಮುಂದಿನ ಯೋಜನೆಗಳ ಬಗ್ಗೆ ಅವರಿಗೆ ವಿಶ್ವಾಸ ಇರಲಿಲ್ಲ. ಬಳಿಕ ಅವರು ಆ ಸುರಕ್ಷಿತ ಸ್ಥಳವನ್ನು ತೊರೆದರು. ಅವರು ಅಲ್ಲಿಂದ ಹೇಗೆ ಹೊರಬಂದರು, ಅಥವಾ ನಂತರ ಏನಾಯಿತು ಎಂಬುದರ ಬಗ್ಗೆ ವರದಿಯಲ್ಲಿ ಸ್ಪಷ್ಟ ಮಾಹಿತಿ ಸಿಗುವುದಿಲ್ಲ.
ಈ ಘಟನೆಯ ಬಳಿಕ ಹಲವು ತಿಂಗಳು ಅಹ್ಮದಿನೆಜಾದ್ ಸಾರ್ವಜನಿಕವಾಗಿ ಕಾಣಿಸಲಿಲ್ಲ. ಅವರು ಎಲ್ಲಿದ್ದರು ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬರಲಿಲ್ಲ. ಜುಲೈ 6ರಂದು ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡರು.
ಖಮೇನಿ ಅಂತಿಮ ಯಾತ್ರೆ: ಯುದ್ಧದ ಪರಿಣಾಮ, ಸಾಮಾಜಿಕ ಬದುಕಿನ ವಿಭಿನ್ನ ಚಿತ್ರಣಗಳುಈಗ ಎಲ್ಲಿದ್ದಾರೆ?
ಅಹ್ಮದಿನೆಜಾದ್ ಈಗ ರೆವಲ್ಯೂಷನರಿ ಗಾರ್ಡ್‌ನ ಗುಪ್ತಚರ ವಿಭಾಗದ ನಿಗಾದಲ್ಲಿದ್ದು, ಗೃಹಬಂಧನದಲ್ಲಿದ್ದಾರೆ ಎಂದು ಇರಾನ್ ಅಧಿಕಾರಿಗಳನ್ನು ಉಲ್ಲೇಖಿಸಿದ ಪತ್ರಿಕೆ ವರದಿ ಮಾಡಿದೆ. ಆದರೆ ಈ ಮಾಹಿತಿಯನ್ನೂ ಇರಾನ್ ಸರ್ಕಾರ ಅಧಿಕೃತವಾಗಿ ಪ್ರಕಟಿಸಿಲ್ಲ. ಅಹ್ಮದಿನೆಜಾದ್ ಅವರ ಕಡೆಯಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಯಾರು ಏನು ಹೇಳಿದ್ದಾರೆ?
ದಿ ನ್ಯೂಯಾರ್ಕ್ ಟೈಮ್ಸ್ ವರದಿಯಲ್ಲಿ ಉಲ್ಲೇಖಿಸಿರುವ ಆರೋಪಗಳ ಬಗ್ಗೆ ಇಸ್ರೇಲ್ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮೊಸಾದ್ ಕೂಡ ಈ ಕುರಿತು ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಮಹಮೂದ್ ಅಹ್ಮದಿನೆಜಾದ್ ಅವರೂ ಈ ಆರೋಪಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿಲ್ಲ. ಅವರ ವಕ್ತಾರ ಅಲಿ ಅಕ್ಬರ್ ಜವಾನ್‌ಫೆಕ್ರ್ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಇರಾನ್ ಸರ್ಕಾರವೂ ಈ ವರದಿಯ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಆದರೆ ಅಹ್ಮದಿನೆಜಾದ್ ಅವರ ಚಟುವಟಿಕೆಗಳ ಬಗ್ಗೆ ರೆವಲ್ಯೂಷನರಿ ಗಾರ್ಡ್ ತನಿಖೆ ನಡೆಸುತ್ತಿದೆ ಎನ್ನಲಾಗಿದೆ. ಈ ಮಾಹಿತಿಯನ್ನು ಇರಾನ್ ಸರ್ಕಾರ ದೃಢಪಡಿಸಿಲ್ಲ.
ಉತ್ತರ ಸಿಗದ ಪ್ರಶ್ನೆಗಳು
ಮಹಮೂದ್ ಅಹ್ಮದಿನೆಜಾದ್ ನಿಜವಾಗಿಯೂ ಮೊಸಾದ್ ಜೊತೆ ಸಂಪರ್ಕದಲ್ಲಿದ್ದರಾ? ಇರಾನ್‌ನಲ್ಲಿ ಆಡಳಿತ ಬದಲಾವಣೆಗೆ ಸಂಬಂಧಿಸಿದ ಯೋಜನೆ ಎಲ್ಲಿವರಗೆ ತಲುಪಿತ್ತು? ಅಹ್ಮದಿನೆಜಾದ್ ಅವರಿಗೆ ಅದರ ಬಗ್ಗೆ ಎಷ್ಟು ಮಾಹಿತಿ ಇತ್ತು? ಈ ಪ್ರಶ್ನೆಗಳಿಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.
ಆದರೆ ಒಂದು ಸಂಗತಿ ಮಾತ್ರ ಸ್ಪಷ್ಟ. ಒಂದು ಕಾಲದಲ್ಲಿ ಇಸ್ರೇಲ್‌ನ ಕಡು ಶತ್ರು ಎಂದು ಗುರುತಿಸಿಕೊಂಡಿದ್ದ ನಾಯಕನ ಹೆಸರೇ, ವರ್ಷಗಳ ಬಳಿಕ ಅದೇ ದೇಶದ ರಹಸ್ಯ ಕಾರ್ಯಾಚರಣೆಯೊಂದಿಗೆ ತಳುಕು ಹಾಕಿಕೊಂಡಿದೆ ಎಂಬ ಆರೋಪವೇ ಪಶ್ಚಿಮ ಏಷ್ಯಾದ ರಾಜಕೀಯ ಇತಿಹಾಸದಲ್ಲಿನ ಅತ್ಯಂತ ಅಚ್ಚರಿಯ ಅಧ್ಯಾಯಗಳಲ್ಲಿ ಒಂದು.
ಈ ಆರೋಪಗಳು ಭವಿಷ್ಯದಲ್ಲಿ ಇನ್ನಷ್ಟು ದಾಖಲೆಗಳಿಂದ ದೃಢಪಡಿಸಲ್ಪಡುತ್ತವೆಯೇ, ಅಥವಾ ಹೊಸ ಮಾಹಿತಿಯಿಂದ ಸಂಪೂರ್ಣ ಬೇರೆ ಚಿತ್ರಣ ಹೊರಬರುತ್ತದೆಯೇ ಎಂಬುದನ್ನು ಕಾಲವೇ ಹೇಳಬೇಕು.
ರಾಜಮನೆತನದಿಂದ ಮಿಡ್‌ನೈಟ್ ಕಲ್ಚರ್‌ವರೆಗೆ.. 'ಹೈದರಾಬಾದಿ ಬಿರಿಯಾನಿ' ಘಮದ ಕಥೆ
